‘ನಮ್ಮಪ್ಪ ಸತ್ತ ಸುದ್ದಿ ತಡಾ ಆಗಿ ಮುಟ್ಟಿತ್ತು. ನಾ ಊರಿಗೆ ಹೋಗಿ ಮುಟ್ಟದರಾಗ ಎಲ್ಲಾ ಮುಗಿದಿತ್ತು. ಹೆಣದ ಜಳಕಾ ಮಾಡಿಸಿದ್ರು, ಧೋತರ ಬಿಚ್ಚಿ ಒಗೆದಿದ್ರು.

ಗೆಳೆಯ ಮೋಹನ ಕುರುಡಾಗಿ ತಮ್ಮಷ್ಟಕ್ಕೇ ತಾವೇ ಮಾತಾಡಿಸಿಕೊಳ್ಳುತ್ತಿರುವಂತೆ ಮಾತಾಡುತ್ತಿದ್ದರು. ಅವರು ನಿಂತ ನಿಲುವಿನಲ್ಲಿ ‘ಕವಿ’ ಯ ಗತ್ತು ಇರಲಿಲ್ಲ. ಮಾತಿನ ಇಳುವಿನಲ್ಲಿ ‘ದಲಿತ’ ನೆಂಬ ದೈನವಿರಲಿಲ್ಲ. ಇತ್ತೀಚಿಗೆ ಬೆಂಗಳೂರಿನಲ್ಲಿ ಅವರು ‘ದಲಿತ’ ಕವಿಗೋಷ್ಠಿ’ಯೊಂದರ ಮುಕ್ತಾಯ ಭಾಷಣ ಮಾಡುತ್ತಿದ್ದರು.

ಅಪ್ಪನ ಸಾವಿನ ಕತೆ ಸಾಗಿತ್ತು. ಮುಂದಿನ ಹಂತದಲ್ಲಿ ಮೋಹನರ ಮನೆ – ಮಂದಿಯೆಲ್ಲ ತಮ್ಮಲ್ಲಿ ಜೀತದಾಳಾಗಿ ದುಡಿಯುತ್ತಿದ್ದ ಆಳು ಮಗನೊಬ್ಬನನ್ನು ಕಂಬಕ್ಕೆ ಕಟ್ಟಿ ಹೊಡೆಯುತ್ತಿದ್ದರು. ಅವನು ಮಾಡಿದ ‘ಅಪರಾಧ’? ನ್ಯಾಯವಾಗಿ ಅಗಸನಿಗೆ ದಕ್ಕಬೇಕಾಗಿದ್ದ ಹೆಣದ ಮೇಲಿನ ಧೋತರವನ್ನು ಈ ಆಳುಮಗ ಹೊಡಕೊಂಡಿದ್ದ.

*

ಮೋಹನ: “ನಮ್ಮ ಜೀತಕ್ಕೆ ಇದ್ದ ಈ ಆಳುಮಗನ ಜಾತಿಗೂ, ನಮ್ಮ ಜಾತಿಗೂ ಕೇವಲ ಕೂದಲೆಳೆಯಷ್ಟು ಅಂತರ. ಆದರೂ ಇಂಥ ದೃಶ್ಯವೊಂದಕ್ಕೆ ನಾನು ಸಾಕ್ಷಿಯಾಗಿದ್ದೆ. ನಾವು ಇಂಥದನ್ನೇಕೆ ಬರೆಯಬಾರದು?

ಮೋಹನ ಹೇಳಿದ ಮಾತು ನನ್ನನ್ನು ಕಾಡುತ್ತಲೇ ಇದೆ, ಪಚ್ಚಳ್ಳಿ ಶ್ರೀನಿವಾಸ ಮತ್ತು ಸಂಗಡಿಗರು ಕೆ. ರಾಮಯ್ಯ ಬರೆದ ‘ಬರುತಿಹೆವು ನಾವು ಬರುತಿಹೆವು’ ಹಾಡು ಹೇಳುತ್ತಿದ್ದರು. ಅದು ಇಪ್ಪತ್ತೊಂದು ವರ್ಷಗಳ ಹಿಂದೆ ಬರೆದ ಹಾಡು. ಎಲ್ಲಾ ಬಡವರನ್ನು ಒಂದು ಮಾಡಿಕೊಂಡು, ಸಮತಾ ರಾಜ್ಯದ ಕನಸನ್ನು ಹೊತ್ತು ‘ಬರುತಲಿಹ ಬಂಡಾಯಗಾರರು ನಾವು; ದಲಿತರು ಬರುವರು ದಾರಿ ಬಿಡಿ, ದಾರಿ ಬಿಡಿ.’

ಕುಂತ ಕುಂತಲ್ಲೇ ನಾನು ಎರಡು ದಶಕದ ಹಾದಿಗುಂಟ ಹಿಂದೆ ಹಿಂದೆ ಹೋಗುತ್ತಿದ್ದೆ. ಯಾಕೆ ರಾಮಯ್ಯನವರು ಇಂಥ ಹಾಡುಗಳು, ನಮ್ಮ ಸಿದ್ಧಲಿಂಗಯ್ಯನ ಗಾಯನಗಳು ಈಗ ವಂದೇ ಮಾತರಂ, ಉದಯವಾಗಲಿ, ಜನಗಣಮನದಂಥ ದಾಸರ ಪದಗಳಂತೆ, ಪುರೋಹಿತರ ಮಂತ್ರಗಳಂತೆ ಕೇಳುತ್ತಿವೆ? ೨೧ ವರ್ಷಗಳಿಂದ ‘ಬರುತಲಿಹ’ ಬಂಡಾಯಗಾರರು ಇನ್ನೂ ಯಾಕೆ ಬರುತ್ತಲೇ ಇದ್ದಾರೆ? ಬ್ರಾಹ್ಮರೋ. ಮಹಾರಾಜರೊ, ಪಾಳೇಗಾರರೋ ಬರುವಾಗ ‘ದಾರಿ ಬಿಡಿ’ ಎನ್ನುವಂತೆ ಇವರೂ ನೆರೆದ ಜನಸ್ತೋಮವನ್ನು ‘ದಾರಿಬಿಡಿ’ಸುವ ಹುನ್ನಾರದಲ್ಲಿಯೇ ಇದ್ದಾರೆಯೇ? ಹೋರಾಟದ ಸಾಗರದತ್ತ ಧಾವಿಸುತ್ತಿರುವ ಸಾವಿರಾರು ನದಿಗಳ ಆರ್ಭಟಕ್ಕೆ ಬಂಗಲೆಗಳು ನಡುಗಿದವೆ? ಗುಡಿಸಲುಗಳು ಗುಡುಗಿದವೆ?

ಎಪ್ಪತ್ತರ ದಶಕದ ಎಲ್ಲ ಜನಪರ ಚಳುವಳಿಗಳು ಹುರಿಗೊಳ್ಳುತ್ತ ೧೯೨೯ರಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ರೂಪುಗೊಂಡು ಸನ್ನಿವೇಶ ದಲಿತರು, ಮಹಿಳೆಯರು, ಮುಸ್ಲಿಮರು ಮೊಟ್ಟಮೊದಲ ಸಲ ಅಗಾಧ ಸಂಖ್ಯೆಯಲ್ಲಿ. ಅಗಾಧ ರೀತಿಗಳಲ್ಲಿ ಮೂಕ ಧ್ವನಿಗಳಿಗೆ ಬಾಯಿಯಾದರು; ಇಡೀ ವ್ಯವಸ್ಥೆಯ ಬಗ್ಗೆ ಉಚ್ಚ ಜಾತಿಯವರು, ಮಧ್ಯಮ ಜಾತಿಯವರು ಸಿಡಿದು ನಿಂತ ಸ್ಫೋಟಕ ಕ್ಷಣವದು. ಅಲ್ಲಿಂದೀಚೆಗೆ ಒಂದೂವರೆ ದಶಕದಲ್ಲಿ ಅನೇಕ ಆಳ, ಬಿತ್ತರ, ಎತ್ತರಗಳಲ್ಲಿ ಬೆಳೆದು ನಿಂತಿದ್ದು ಬಂಡಾಯ ಸಾಹಿತ್ಯ.

ಈ ‘ಬಂಡಾಯ’ ಪರಿಕಲ್ಪನೆಯ ಝಳ ಎಷ್ಟು ಜೋರಾಗಿತ್ತೆಂದರೆ ಕೆಲವರು ಹಳಬರ ‘ಬಂಡಾಯ’ ಕೃತಿಗಳನ್ನು ರಚಿಸಿದರು; ಅಡಿಗರಂಥವರು ತಮ್ಮದೊಂದು ಪದ್ಯಕ್ಕೆ ‘ಬಂಡಾಯ’ ಎಂಬ ಚಾಲ್ತಿ ಶೀರ್ಷಿಕೆ ಕೊಟ್ಟರು: ರಾಮಚಂದ್ರಶರ್ಮರಂಥವರು ‘ಎಲ್ಲ ಕವಿಗಳೂ ಬಂಡಾಯಗಾರರೇ’ ಎಂಬ ಸಾರ್ವಕಾಲಿಕ ಉಕ್ತಿಯೊಂದನ್ನು ಉಗ್ಘಡಿಸಿ ಅದನ್ನು ತಮಗೂ ಅನ್ವಯಿಸಿಕೊಂಡರು: ‘ಡಂಬಾಯ’ ಎಂದು ಲೇಗಿ (ಅಂದರೆ ಗೇಲಿ) ಮಾಡುತ್ತಿದ್ದ ‘ಮಂಕೇಶ’ ರು (ಅಂದರೆ ಲಂಕೇಶರು) ಇತ್ತೀಚಿಗೆ ಬಂಡಾಯದ ‘ಅನಿವಾರ್ಯತೆ’ ಬಗ್ಗೆ ತಮ್ಮ ಫರ್ಮಾನು ಹೊರಡಿಸಿದ್ದಾರೆ.

ಬಿ.ಆರ್. ಲಕ್ಷ್ಮಣರಾಯುರಂಥ ನವ್ಯೋತ್ತರಕುಮಾರರು ತೆಲುಗಿನಲ್ಲಿ ಅನುವಾದಿಸಿದ ಸಂಕಲನವೊಂದರ ಮುನ್ನುಡಿಯಲ್ಲಿ ತಾವೇ ಬಂಡಾಯದ ವಾರುಸುದಾರರು (ಅಂದರೆ ಬಂಡಾಯಕ್ಕೆ ಹುಟ್ಟಿದವರು) ಎಂದು ಸಾಬೀತು ಮಾಡಲು ಪ್ರಯತ್ನಿಸಿದ್ದಾರಂತೆ!

ನವ್ಯದ ನಂತರದ – ಅಂದರೆ ೧೯೭೦ ನಂತರ – ಕನ್ನಡ ಸಾಹಿತ್ಯವನ್ನು ನಿರ್ದೇಶಿಸಿದ್ದು, ಈ ‘ಬಂಡಾಯ’ ಮನೋಧರ್ಮದ ಪರಿಕಲ್ಪನೆಯೇ, ಈ ಸಮಾನ ಮನೋಧರ್ಮ ವಿಶಾಲ ಚೌಕಟ್ಟಿನಲ್ಲಿಯೇ ದಲಿತರ, ಮಹಿಳೆಯರ, ಮುಸ್ಲಿಮರ ಸಾಹಿತ್ಯ ಕೃತಿಗಳ ‘ವೈಶಿಷ್ಟ್ಯ’ವನ್ನು ಕುರುತು ನಾವೆಲ್ಲ ಮಾತಾಡುತ್ತಿದ್ದೆವು. ಆದರೆ .. ಈಗ ಏನೋ ಗಡಿಬಿಡಿ ಆದಂತಿದೆ.

ವಿಮರ್ಶಾವಲಯದಲ್ಲಿ ಕೇವಲ ‘ಬಂಡಾಯ ಸಾಹಿತ್ಯ’ ಎಂಬ ಪದಪುಂಜ ಬಳಸದೆಯೇ ನಾವೆಲ್ಲ ‘ದಲಿತ – ಬಂಡಾಯ ಸಾಹಿತ್ಯ’ ಎಂಬ ಗೊಂದಲಕಾರಿಯಾದ ಪದಪುಂಜ ಬಳಸತೊಡಗಿದಾಗ, ಹೋದಲ್ಲಿ ಬಂದಲ್ಲೆಲ್ಲ ನನ್ನಂಥವರು ‘ಬಂಡಾಯ’ ಎಂಬುದು ಮನೋವೈಜ್ಞಾನಿಕ ಮತ್ತು ‘ದಲಿತ’ ಸಾಮಾಜಿಕ ಪರಿಕಲ್ಪನೆಗಳೆಂದೂ, ‘ದಲಿತ’ ಸಾಹಿತಿಗಳೆಲ್ಲ ಬಂಡಾಯ ಸಾಹಿತಿಗಳು; ಆದರೆ ಬಂಡಾಯ ಸಾಹಿತಿಗಳೆಲ್ಲ ದಲಿತ ಸಾಹಿತಿಗಳಲ್ಲ” ಎಂಬ ಬೆಡಗಿನ ವಚನದ ಮಾದರಿಯ ವಿವರಣೆ ಕೊಡಬೇಕಾಯಿತು. ಅರ್ಥಾತ್ ‘ದಲಿತ – ಬಂಡಾಯ ಸಾಹಿತ್ಯ’ ಎಂಬುದು ‘ಯಕ್ಷಗಾನ – ಜಾನಪದ ಅಕಾಡೆಮಿ’ ಇದ್ದ ಹಾಗೆ. ಯಕ್ಷಗಾನವೂ ಜಾನಪದವೇ: ಆದರೆ ಉಳಿದ ಆರ್ಡಿನರಿ ಜಾನಪದಗಳಿಗಿಂತ ಸ್ವಲ್ಪ ಹೆಚ್ಚಿನ (?) ಜಾನಪದ!.

ಕಾರವಾರದ ಬಳಿಯ ದೇವಗಾವ ಬೀಚಿನಲ್ಲಿ ಕೆಲ ದಿನಗಳ ಹಿಂದೆ ನಡೆದ ಒಂದು ‘ಸಂವಾದ’ ಗೋಷ್ಠಿಯಲ್ಲಿ ನನ್ನ ಕಿವಿಗೆ ಈ ಧಾಟಿಯ ವಾದಗಳು ಅಪ್ಪಳಿಸುತ್ತಿದ್ದವು. ‘ಮಕ್ಕಳ’ ಲೋಕ, ‘ಮುಸ್ಲಿಮ್ ಲೋಕ’ ಮತ್ತು ‘ದಲಿತ’ ಲೋಕಗಳು ಎಲ್ಲವೂ ಲೋಕಗಳೇ, ಎಲ್ಲರೂ ಪ್ರತ್ಯೇಕ; ಆದರೆ ನಾವು ಹೆಚ್ಚು ಪ್ರತ್ಯೇಕ – ಎಂಬ ಸಪ್ಪಳದ ಹಿಂದೆ ನನಗೆ ಕೇಳಿದ್ದು ಆರ್ವೆಲ್ಲನ ದನಿ; ಎಲ್ಲರೂ ಸಮಾನರು, ಆದರೆ ಕೆಲವರು ಹೆಚ್ಚು ಸಮಾನರು!.

ಒಂದು ಮಿನಿಟು ನನಗೆ ದಿಗಿಲಾಯಿತು, ಪ್ರತ್ಯೇಕತೆ, ಪ್ರತ್ಯೇಕತೆಯಿಂದಾಗಿ ಅನನ್ಯತೆ, ಅನನ್ಯತೆಯಿಂದಾಗಿ ಶ್ರೇಷ್ಠತೆ – ಇದೇ ಅಲ್ಲವೇ ನಾವು ಯಾವುದನ್ನು ‘ಜಾತಿ – ಶ್ರೇಣಿಕರಣ’ ವೆಂದು ಗುರುತಿಸಿ, ಅದನ್ನು ‘ನಿರ್ಮೂಲನ’ ಮಾಡಲು ಪ್ರತಿಜ್ಞೆ ಮಾಡಿ. ‘ಬರುತಲಿಹೆವು’ ಎಂದು ಘೋಷಣೆ ಹಾಕುತ್ತ, ‘ದಾರಿ ಬಿಡಿ’ ಎಂದು ಜಬರಿಸುತ್ತಿದ್ದುದು?

ಈಗ ನಮ್ಮ ಪಯಣ ಯಾವ ಕಡೆಗೆ? ಇತಿಹಾಸದ ‘ಚಲನೆ’ ಎಂಬುದು ಹಿಂದೆಯೋ ಮುಂದೆಯೋ? ಸಾಗರದ ‘ಸಂಗಮ’ಕ್ಕೆ ಧಾವಿಸುತ್ತಿದ್ದ ಸಾವಿರಾರು ನದಿಗಳ ಏಕದಂ ಟರ್ನ್ ಅಬೌಟ್ ಮಾಡಿ ತಮ್ಮ ‘ಉಗಮ’ ದ ಕಡೆಗೆ ತೆವಳಲು ಹಾತೊರೆಯುತ್ತಿವೆಯೇ?

*

ಈಗ ಅಲ್ಲಲ್ಲಿ ಕೇಳ ಬರುತ್ತಿರುವ ಮಾತು: ಬಂಡಾಯ ಬೇರೆ, ದಲಿತ ಬೇರೆ: ಬಂಡಾಯದ ನಂತರ ದಲಿತ ಬಂದಿದೆ: ದಲಿತ ಸಾಹಿತ್ಯ ಉಳಿದ ಸಾಹಿತ್ಯಗಳಿಗಿಂತ ಪ್ರತ್ಯೇಕ, ಅನನ್ಯ ಹಾಗೂ ಶ್ರೇಷ್ಠ… ಇಂಥ ವಾದಗಳ ಪರಿಣಾಮವಾಗಿಯೋ, ಅಥವಾ ಅವಕ್ಕೆ ಕಾರಣವಾಗಿಯೋ ‘ದಲಿತ’ ಎಂಬ ಪದವೂ ಕೂಡ ಕಾಲ ಕ್ರಮದಲ್ಲಿ, ಎಲ್ಲಾ ಜಾತಿ / ವರ್ಗಗಳ ಬಡವರು; ಉಚ್ಚ – ಮಧ್ಯಮ ಜಾತಿಗಳನ್ನು ಬಿಟ್ಟು ಉಳಿದ ಎಲ್ಲ ಜಾತಿಯವರು: ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು (ಎಸ್.ಸಿ. – ಎಸ್.ಟಿ) ಜನರು ಎಂಬ ಪಠ್ಯಾಂತರಗಳೊಂದಿಗೆ ಈಗ ಕೇವಲ ಅಸ್ಪೃಶ್ಯರು (ಅಂದರೆ ಎಸ್.ಸಿ) ಎಂಬ ಹಂತಕ್ಕೆ ತಲುಪಿದೆ. ವಿಶೇಷ ಘಟಕ ಯೋಜನೆಯಡಿಯಲ್ಲಿ ಅಕಾಡೆಮಿಯೊಂದು ‘ದಲಿತ’ ರಿಗಾಗಿ ಹಮ್ಮಿಕೊಂಡ ಕಮ್ಮಟವೊಂದರ ಶಿಬಿರಾರ್ಥಿಗಳ ಯಾದಿಯಲ್ಲಿ ಸೇರಿಕೊಂಡ ಒಂದು ಹೆಸರನ್ನು ಅದು ‘ಎಸ್. ಟಿ’ ಎಂಬ ಕಾರಣಕ್ಕಾಗಿ ಅನಂತರ ಹೊಡೆದು ಹಾಕಬೇಕಾಯಿತಂತೆ.

ಮೊನ್ನೆಯ ಕವಿಗೋಷ್ಠಿಯ ಉದ್ಘಾಟನೆ ಮಾಡಿದವರು ಮೋಹನ ನಾಗಮ್ಮನವರ ಧಾರವಾಡ ಕಡೆಯವರು. ಅವರು ‘ಎಸ್.ಸಿ. ಹೌದೋ ಅಲ್ಲವೋ ಅಂತ ನನ್ನನ್ನು ಒಬ್ಬರು ಕೇಳಿದರು. ನನಗೆ ಪಾನೀಯಗಳ ಹಾಗೇ ಈ ಜಾತಿ – ನಾಮಗಳು, ಸಾವಿರಾರು ಪಾನೀಯಗಳಲ್ಲಿ ನಾನು ಬೀರು ಮಾತ್ರ ಗುರುತಿಸಬಲ್ಲೆ – ಅದರ ಬಾಟಲಿಯ ಆಕಾರದಿಂದಾಗಿ. ಉಳಿದ ಎಲ್ಲವನ್ನು ಲೇಬಲ್ ನೋಡಿಯೇ ಹೇಳಬೇಕು. ಜಾತಿಗಳಲ್ಲಿ ‘ಬ್ರಾಹ್ಮಣ’ ಎಂದು ಮಾತ್ರ ಗುರುತಿಸಬಲ್ಲೆ – ಅವರ ಆಕಾರ, ವಿಕಾರಗಳಿಂದಾಗಿ ಉಳಿದುವೆಲ್ಲಾ ಭಯಂಕರ ಮಿಸಳ ಬಾಜಿ.

ಹೀಗಾಗಿ ಮೋಹನ ನಾಗಮ್ಮನವರ ‘ಜಾತಿ’ಯ ಬಗ್ಗೆ ನನಗೆ ವಿಶೇಷ ಮಾಹಿತಿ ಇರಲಿಲ್ಲ. ಅವರು ನಾನು ತಿಳಿದುಕೊಂಡ ಹಾಗೆ – (ಅಂದರೆ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಅಲ್ಲದ) – ‘ದಲಿತ’ ಎಂದೇ ನನ್ನ ಲೆಕ್ಕ. ಧಾರವಾಡದ ಕಡೆ ಕೆಲವರು ಅವರನ್ನು ‘ಕೆ.ಬಿ’ (ಅಂದರೆ ಕರಿ ಬ್ರಾಹ್ಮಣ) ಎಂದು ಕರೆಯುತ್ತಾರೆ – ಅವರ ಆಕಾರ ಆಚಾರಗಳ ಮಾನದಂಡದಿಂದ, ಇರಲಿ. ಕೊನೆಗೂ ನನ್ನನ್ನು ಪ್ರಶ್ನೆ ಕೇಳಿದವರು ಯಾವುದೋ ಮೂಲದಿಂದ ಅವರು ‘ಎಸ್.ಸಿ.’ ಅಂತ ಖಾತ್ರಿ ಮಾಡಿಕೊಂಡು ಮೇಲೆಯೇ ಸಮಾಧಾನದ ನಿಟ್ಟುಸಿರು ಬಿಟ್ಟರಂತೆ.

*

ಈ ದಲಿತ – ಎಸ್.ಸಿ. ಎಂಬ ಸಮೀಕರಣಕ್ಕೆ ನಮ್ಮ ಸರಕಾರದವರು ‘ವಿಶೇಷ ಘಟಕ ಯೋಜನೆ’ ಹೆಸರಿನಲ್ಲಿ ಅಪಾರ ಹಣವನ್ನು ನಮ್ಮ ಅಕಾಡೆಮಿಗಳಿಗೆ ಕೊಡುತ್ತಿರುವುದೂ ಕಾರಣವಾಗಿರಬಹುದು (ಇದರ ಬಗ್ಗೆ ದಲಿತ ಸಂಗಾತಿಗಳಲ್ಲಿ ಸಾಕಷ್ಟು ಅಸಮಾಧಾನವಿದೆ) ಆದರೆ ಈ ಬಗೆಯ ಪ್ರತ್ಯೇಕೀಕರಣದ ಗೆರೆಗಳನ್ನು ನಾನು ಕಂಡದ್ದು ಅನೇಕ ವರ್ಷಗಳ ಹಿಂದೆಯೇ ಮೊಟ್ಟಮೊದಲು ಡಾ.ಶಂಕರ ಮೊಕಾಶಿ – ಪುಣೇಕರರ ಭಾಷಣವೊಂದರಲ್ಲಿ ‘ಬಂಡಾಯ’ ಸಾಹಿತ್ಯ ಶೂದ್ರರದು. ‘ದಲಿತ’ ಸಾಹಿತ್ಯ ಪಂಚಮರದು, ಅಂದರೆ ಅಸ್ಪೃಶ್ಯರದು. ಅತ್ಯಂತ ಸೂಕ್ಷ್ಮವಾದ. ಆದರೆ ಜಗತ್ ಪ್ರಸಿದ್ಧವಾದ ಈ ಬ್ರಾಹ್ಮಣ ತಂತ್ರವನ್ನು ಯಶಸ್ವಿಯಾಗಿ ಮುಂದುವರೆಸುತ್ತಿರುವವರು ನವ್ಯ ಕಾವ್ಯದ ಏಕೈಕ ಪಳೆಯುಳಿಕೆಯಾಗಿರುವ ನಮ್ಮ ಜಾಣ – ಬ್ರಾಹ್ಮಣ ಬಿ.ಸಿ.ರಾಮಚಂದ್ರ ಶರ್ಮ ಎಂಬ ಕವಿ.

ಒಬ್ಬ ಆಲ್ ಇಂಡಿಯಾ ಗಿರಾಕಿಯಾಗಿರುವ ಈ ಮನುಷ್ಯ ತಾನು ಹೋದೆಲ್ಲೆಲ್ಲಾ ‘ಕಳೆದ ೨೫ ವರ್ಷಗಳಿಂದ ಕನ್ನಡ ಕಾವ್ಯ ಸ್ಥಗಿತವಾಗಿದೆ’ – ಎಂದು ತನ್ನ ಇಥಿಯೋಪಿಯನ್ ಇಂಗ್ಲೀಷ್ ಶೈಲಿಯಲ್ಲಿ ಸಾರುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ತನ್ನ ಕಾವ್ಯದ ಸ್ಥಗಿತತೆಯನ್ನೇ ಹೀಗೆ ಇಡೀ ಕನ್ನಡ ಕಾವ್ಯಕ್ಕೆ ಆರೋಪಿಸುವ ಈ ಮಹಾಶಯರ ಈ ನಮೂನೆಯ ಸಮಷ್ಟಿ ಪ್ರಜ್ಞೆಯನ್ನು ಯಾವ ಲಿಂಗಾವಾದರೂ ಮೆಚ್ಚಿ ಅಹದಹುದೆನ್ನಬೇಕಾಗಿದೆ. ದೇವಬಾಗದ ಕಾರ್ಯಕ್ರಮದಲ್ಲಿ ಅನೇಕ ಕವಿಗಳು ತಮ್ಮ ಉತ್ತಮ ಕವನಗಳನ್ನು ವಾಚಿಸಿ ಈ ಶರ್ಮಾರ ಕಿವಿಯ ಮೇಲೆ ಹಾಕಲು ಪ್ರಯತ್ನಿಸಿದರು. ಆದರೆ ನವ್ಯದ ಅನೇಕ ಮಹನೀಯರಂತೆ ಈ ಮಹನೀಯ ಕೂಡ ಕೇಳಿದರೆ ತನ್ನ ಕಾವ್ಯದ ಪ್ರತಿಧ್ವನಿಯನ್ನು ಮಾತ್ರ ಕೇಳಬೇಕು ಎಂಬ ಸಂವೇದನಾಹೀನ ಆಸಾಮಿ.

ಹಾಗೆ ನೋಡಿದರೆ, ಶರ್ಮರೊಬ್ಬರನ್ನು ಹೊರತುಪಡಿಸಿದರೆ, ಉಳಿದ ನವ್ಯ ಪುರಾತನರೆಲ್ಲ ಸಮಕಾಲೀನಕ್ಕೆ ಅತೀತರಾದವರೇ, ಅಡಿಗರಂತೂ ವೈಕುಂಠ ವಾಸಿಯಾಗಿದ್ದಾರೆ, ಅನಂತಮೂರ್ತಿಯಂತೂ ಪಾಜಕ ಕ್ಷೇತ್ರದಲ್ಲಿ ಮಧ್ವಾಚಾರ್ಯರ ಪಾದಪದ್ಮಂಗಳನ್ನು ಪತ್ತೆ ಹಚ್ಚಿ ಅವುಗಳನ್ನು ಪಾವಿತ್ಯ್ರವನ್ನು ರಕ್ಷಿಸಲು ಆಕಾಶದಿಂದ ಬೀದಿಗೇ ಇಳಿಯಲು ನಿರ್ಧರಿಸಿ ಹೆಲಿಪ್ಯಾಡಿಗಾಗಿ ಹುಡುಕಾಡುತ್ತಿದ್ದಾರೆ. ರೈತ ಚಳುವಳಿ, ಭಾಷಾ ಚಳುವಳಿ, ದಲಿತ ಚಳುವಳಿ, ಬಂಡಾಯ ಚಳುವಳಿಗಳನ್ನು ಹೀನಾಮಾನಾ ಖಂಡಿಸುತ್ತಾ. ತನ್ನನ್ನು ಪ್ರತ್ಯೇಕಿಸಿಕೊಳ್ಳುತ್ತಲೇ ಬಂದಿರುವ ಲಂಕೇಶರು ಅನಂತಮೂರ್ತಿ, ಸುಬ್ಬಣ್ಣ, ಡೀರಂ ನಾಗರಾಜ ಮುಂತಾದವರನ್ನು ಓಲೈಸುತ್ತಾ ಏನು ಪಡೆಯಬೇಕೋ ಅದನ್ನು ಪಡಕೊಂಡು, ಅವರನ್ನು ದೂರ ಮಾಡಿದ ಈ ಸಂದರ್ಭದಲ್ಲಿ ‘ವಾರಂಗನೆ’ ಯರೆಲ್ಲ ಒಟ್ಟಾಗಿ ರಾಮಚಂದ್ರದೇವ*[1] ಎಂಬ ಬಡಿಗಿಯಿಂದ ಈ ವೃದ್ದನನ್ನು ಬಡಿಯತೊಡಗಿದ್ದಾರೆ. ಇವನ ವೈರಿಗಳಿಗೆಲ್ಲಾ ಇದು ಸಂತೋಷದ ವಿಷಯವಾಗಿದ್ದರೂ ನವ್ಯದ ಅವಶೇಷಗಳಾದ ಬ್ರಾಹ್ಮಣ – ಶಕ್ತಿಗಳು ಚೆಲ್ಲಾಪಿಲ್ಲಿಯಾಗಿದ್ದ ತಮ್ಮ ತುಕಡಿಗಳನ್ನು ಮತ್ತೆ ಗೊಳೇ ಮಾಡಿಕೊಂಡು ಬ್ರಾಹ್ಮಣೇತರರ ಮೇಲೆ ಮಾಡುತ್ತಿರುವ ಧಾಳಿಯನ್ನು ನಾವೆಲ್ಲ ಎದುರಿಸಬೇಕಾಗಿದೆ. ಮತ್ತೆ ಮೋಹನ ಕುರುಡಗಿ ಮಾತಿಗೆ ಮರಳುತ್ತಿದ್ದೇವೆ. ಈ ಹದಿನೈದು – ಇಪ್ಪತ್ತು ವರ್ಷಗಳ ಕಾಲ ‘ನವ್ಯ’ರನ್ನೆ ಗುರಿಯಾಗಿರಿಸಿಕೊಂಡು ನಾವು ಸಂರಕ್ಷಣಾತ್ಮಕವಾಗಿ, ಒಮ್ಮೊಮ್ಮೆ ಆಕ್ರಮಣಕಾರಿಯಾಗಿ ಆಟ ಆಡಿದ್ದು ಇನ್ನು ಸಾಕು, ಅವು ರಿಪೇರಿಯಾಗುವ ಗಾಡಿಗಳಲ್ಲ: ಸೀದಾ ಗ್ಯಾರೇಜಿಗೆ ಹೊಡೆಯುಬೇಕಾದ ಗಾಡಿಗಳು ಅವರೆಲ್ಲ ಈಗ ತಮ್ಮ ತಮ್ಮಲ್ಲೇ ಯಾರು ಹೆಚ್ಚು ಶ್ರೇಷ್ಠ ಯಾರು ಕಡಿಮೆ ಶ್ರೇಷ್ಠ ಎಂದು ಶ್ರೇಷ್ಠತೆಯ ಪರ‍್ ಸೆಂಟೀಗಾಗಿ ಕಚ್ಚಾಡುತ್ತ, ಇತಿಹಾಸ ಟ್ರೇನಿನಲ್ಲಿ ಅಡ್ವಾನ್ಸ್ ಬುಕ್ಕಿಂಗ್‌ಗಾಗಿ ಒದ್ದಾಡುತ್ತಿರುವ ಪ್ರಾಣಿಗಳು. ಅವರ ಲೋಕವನ್ನು ಅವರ ಪಾಡಿಗೆ ಬಿಟ್ಟು ನಮ್ಮ ಲೋಕದ ಕಡೆಗೆ ಕಣ್ಣು ಬಿಟ್ಟು ಈಗ ನೋಡಬೇಕಾಗಿದೆ.

ಇಡೀ ಬಂಡಾಯ ಸಾಹಿತ್ಯ ತನ್ನೆಲ್ಲ ವೈವಿಧ್ಯ ಮತ್ತು ಸಮಗ್ರತೆಯೊಂದಿಗೆ ನಿಧಾನವಾಗಿ ತನ್ನದೇ ಲಯದಲ್ಲಿ, ಗತಿಯಲ್ಲಿ ಬೆಳೆಯುತ್ತಿದ್ದರೂ, ಈ ಸಾಹಿತ್ಯದ ಅತ್ಯಂತ ಕ್ರಿಯಾತ್ಮಕ ಅಭಿವ್ಯಕ್ತಿಯಾಗಿರುವ ದಲಿತ ಸಂಘರ್ಷ ಸಮಿತಿಯ ಇತ್ತೀಚಿನ ವಿದ್ಯಮಾನಗಳು ಆತಂಕಕಾರಿಯಾಗಿವೆ. ಮೊದಲ ಹಂತದ ಮುಂಚೂಣಿಯ ನಾಯಕರ ಆ ಮಟ್ಟದ ಮಾರ್ಗದರ್ಶನ ಈಗ ಕಾಣುತ್ತಿಲ್ಲ ರಾಜಕೀಯ ಪಕ್ಷಗಳ ಜೊತೆಗಿನ ಮುಸರಿ – ಗೆಳೆತನದಿಂದ ಸಂಘಟನೆ ಅಂತ:ಸ್ಸತ್ವವನ್ನು ಕಳೆದುಕೊಂಡಿದೆ ಬಿ.ಎಸ್.ಪಿ. ಸೇರಿರುವ ಬಿ.ಕೃಷ್ಣಪ್ಪ ಉತ್ತರಪ್ರದೇಶದಲ್ಲಿ ಮಾಯಾವತಿ ಬಿ.ಜೆ.ಪಿಯನ್ನು ಅಪ್ಪಿಕೊಂಡಾಗ ಅದನ್ನು ಸಮರ್ಥಿಸಲೇಬೇಕಾದ ಸಂಕಟ ಅನುಭವಿಸಲೇಬೇಕಾಯಿತು.

*

ಯಾರಿಗೆ ಬಂತು, ಎಲ್ಲಿಗೆ ಬಂತು-ಎಂದು ಕೇಳುತ್ತಲೇ ಊರುಕೇರಿಯಿಂದ ತಮ್ಮ ತೀರ್ಥಯಾತ್ರೆ ಆರಂಭಿಸಿದ ಸಿದ್ದಲಿಂಗಯ್ಯ. ವಿಧಾನಸೌಧದ ಹೆಬ್ಬಾಗಿಲಲ್ಲಿ ತಮ್ಮ ‘ಆತ್ಮ’ವನ್ನು ಬಿಟ್ಟು, ಒಳಗೆ ಒಬ್ಬರೇ ಹೋತಿ ‘ಚರಿತ್ರೆ’ ನಿರ್ಮಿಸತೊಡಗಿದ್ದಾರೆ. ದೇವನೂರು ಮಹದೇವರಂತೂ ಮಲೆ ಮಹದೇಶ್ವರನ ಬೆಟ್ಟ ಹತ್ತಿ ಕುಳಿತು ಬೆಟ್ಟವನ್ನ ಮುತ್ತಿದ ಮಂಜು-ಮೋಡಗಳ ಮೂಲಕ ಮುಗುಳು ನಗೆ ಚೆಲ್ಲುತ್ತಿದ್ದಾರೆ. ಪರಸ್ಪರ ತೆಗಳಿಕೆಯಿಂದಾಗಿ ದ.ಸಂ.ಸ. ಈಗ ಎರಡು ಹೋಳಾಗಿದೆ. ಅನೇಕ ದಲಿತ ಗೆಳೆಯರೇ ನೋವಿನಿಂದ ಹೇಳುವಂತೆ, ‘ದಲಿತ’ರಲ್ಲೂ (ಅಂದರೆ ಎಸ್.ಸಿ. ಯಲ್ಲೂ) ಈಗ ಎಡಗೈ-ಬಲಗೈ ಸುರುವಾಗಿದೆ. ಇನ್ನು ಮುಂದೆ ಈ ಕೈಗಳ ಬೆರಳುಗಳ ಮಧ್ಯೆಯೂ ಯುದ್ಧ ಜರುಗಬಹುದು. ಚಿಂತನಶೀಲರಾದ ದಲಿತ ವಿಚಾರವಂತರನ್ನು ಈಗ ಅನೇಕ ಪ್ರಶ್ನೆಗಳು ಕಾಡುತ್ತಿವೆ.

ದೇವಬಾಗ ಬೀಚಿನ ಗೋಷ್ಠಿಯಲ್ಲಿ ಈ ತಾಕಲಾಟದ ಒಂದು ಅಸ್ಪಷ್ಟ ಚಿತ್ರ ನನಗೆ ಗೋಚರವಾಯಿತು. ‘ದಲಿತ’ರೆಂದು ಸ್ವಾಭಿಮಾನದಿಂದ ಹೇಳಿಕೊಳ್ಳೋಣ, ನಮಗೂ ಒಂದು ಸಂಸ್ಕೃತಿ ಇದೆ, ಐಡೆಂಟಿಟಿ ಇದೆ. ಅದರ ಅನ್ವೇಷಣೆ ಮಾಡೋಣ. ನಮ್ಮ ಬೇರುಗಳಿಗೆ ನಾವು ಮರಳೋಣ.. ಇತ್ಯಾದಿ.

ಒಬ್ಬ ಸಂಗಾತಿಯಂತೂ, “ನಿಮ್ಮ ಆಧುನಿಕ ಮೌಲ್ಯಗಳಾದ ವೈಚಾರಿಕತೆ, ಡೆಮಾಕ್ರಸಿ, ಸೆಕ್ಯುಲರಿಸಂಗಳಿಗೆ ಧಿಕ್ಕಾರ, ನಾನು ನನ್ನ ಪೂರ್ವಜರ ಸಿದ್ಧಾಂತಗಳಿಗೆ, ನಂಬಿಕೆಗಳಿಗೆ, ಜೀವನ ಶೈಲಿಗೆ. ಅವರ ದೇವರುಗಳಿಗೆ ಮರಳಿ ಹೋಗುತ್ತೇನೆ.” ಅಂತ ಘೋಷಿಸಿದ. ಆ ಘೋಷಣೆಯ ಹಿಂದೆ ಆಕ್ರೋಶವಿರಲಿಲ್ಲ, ಆಳವಾದ ಚಿಂತನೆ ಇತ್ತು. ಅವನ ಮುಖದ ಮೇಲಿನ ಆತಂಕ ತಿಳಿಗೊಳದ ತಳದಂತೆ ಸ್ಪಷ್ಟವಾಗಿತ್ತು……”, ಆದರೆ ಮುಂದೆ, “ನನ್ನವರು ಕೊಡುವ ಮೇಕೆಬಲಿಯನ್ನೂ ಸಮರ್ಥಿಸಿಕೊಳ್ಳಬಲ್ಲೆ… ಅಂತ ಅವನು ಅಂದಾಗ, ನಾನು ಬಾಯಿ ಹಾಕಿ, “ಹಾಗಾದರೆ ಮುಂದೆ ನರಬಲಿಯನ್ನೂ ನೀವು ಸಮರ್ಥಿಸಬಹುದಲ್ಲ” ಅಂದಾಗ ಗೆಳೆಯ ಮೌನಿಯಾದ.

ಹೌದು, ನಮಗೆ ಪರಂಪರೆ ಇದೆ. ನಾವು ಬೇಡ ಬೇಡ ಎಂದರೂ ಅದು ನಮ್ಮ ವರ್ತಮಾನವನ್ನು, ಆ ಮೂಲಕ ಭವಿಷ್ಯವನ್ನು ರೂಪಿಸುತ್ತಲೇ ಇರುತ್ತದೆ. ಆದರೆ ಈ ‘ಭೂತ’ದ ಬಗ್ಗೆ ನಮ್ಮ ದೃಷ್ಟಿಕೋನ ಏನು? ಅದನ್ನು ಅನ್ವೇಷಣೆ ಮಾಡುತ್ತ ನಾವೂ ಹಿಂದಕ್ಕೆ ಹೋಗಿ ಭೂತವಾಗಬೇಕೆ? ಅಥವಾ ಅದರ ಜೀವಪರವಾದ ದ್ರವ್ಯವನ್ನು ಗುರುತಿಸಿ, ವಿಂಗಡಿಸಿ, ನಮ್ಮದನ್ನಾಗಿ ಮಾಡಿಕೊಳ್ಳುತ್ತಲೇ ವರ್ತಮಾನದ ನೆಲೆಯಿಂದ ಭವಿಷ್ಯದ ಕಡೆಗೆ ಚಲಿಸುತ್ತಿರಬೇಕೇ? ‘ಜಗತ್ತೊಂದು ಗ್ರಾಮ’ ಎನ್ನುವ ನಿಟ್ಟಿನಲ್ಲಿ ಈ ಶತಮಾನದ ಕೊನೆಯ ಅಂಚಿನ ವಿದ್ಯಾಮಾನಗಳು ಜರುಗುತ್ತಿರುವಾಗ ನಮ್ಮ ಕಣ್ಣಿನ ಗುರಿ ಮುಂದಿನ ಶತಮಾನವೋ ಹಿಂದಿನ ಶತಮಾನವೋ? ಕಲ್ಪನೆ ಮಾಡಿಕೊಳ್ಳೋಣ.

*

ನಮ್ಮ ವೈದಿಕರೂ ಮಾತು ಮಾತಿಗೆ ತಮ್ಮ ಭವ್ಯ, ದಿವ್ಯ ‘ಸನಾತನ’ ಪರಂಪರೆಯನ್ನು ವೈಭವೀಕರಿಸುತ್ತಾರೆ. ಎಲ್ಲವೂ ಎಲ್ಲವೂ ಸಾವಿರಾರು ವರ್ಷಗಳ ಹಿಂದೆಯೇ ತಮ್ಮ ವೇದಗಳಲ್ಲಿ ಇದ್ದವು ಅಂತ ವಾದಿಸುತ್ತಾರೆ. ಸಂಸ್ಕೃತವು ಎಲ್ಲ ಭಾಷೆಗಳ ಮೂಲ ಅನ್ನುತಾರೆ. ಇಂಡಿಯಾದ ಜಾತಿ ಶ್ರೇಣೀಕರಣದ ಇನ್ನೊಂದು ಧ್ರುವವಾಗಿರುವ ದಲಿತರೂ ಕೂಡ ಹೀಗೆಯೇ ತಮ್ಮ ಬೇರು ಹುಡುಕಿಕೊಂಡು ಹಿಂದಕ್ಕೆ ಪ್ರಯಾಣ ಮಾಡತೊಡಗಿದರೆ –

ಅಲ್ಲಿ ಕಾದಿರುತ್ತಾನೆ ‘ಮನು’ ಎಂಬ ಮಹರ್ಷಿ, ‘ಬರ್ರಿ ವತ್ಸರೇ’ – ಎಂದು ಸನ್ನೆ ಮಾಡುತ್ತಾರೆ. ಕೆಲವರು ಒಳಗೇ ಹೋಗುತ್ತಾರೆ. ಹಲವರು ಯಾವುದೋ ಗೆರೆಯ ಹೊರಗೆ ನಿಲ್ಲುತ್ತಾರೆ. ಮನು ಮಹರ್ಷಿ, ‘ನಿಮಗೆಲ್ಲ ಶೇಕಡಾ ನೂರು ಮೀಸಲಾತಿ’ ಎಂದು ಘೋಷಿಸುತ್ತಾನೆ. ಎಲ್ಲರೂ ಕೇಕೆ ಹಾಕುತ್ತಾರೆ.

ಹೌದು, ಬ್ರಾಹ್ಮಣರಿಗೆ ಹಂಡ್ರೆಡ್ ಪರ್‌ಸೆಂಟ್ ಮೀಸಲಾತಿ; ಅಕ್ಷರ ಜ್ಞಾನ, ಶಿಕ್ಷಣ, ವೇದಾಧ್ಯಾಯನ, ಸಾಹಿತ್ಯ, ಸಂಸ್ಕೃತಿಗಳಲ್ಲಿ. ದಲಿತರಿಗೂ ಹಂಡ್ರೆಡ್ ಪರ್‌ಸೆಂಟ್ ಮೀಸಲಾತಿ: ಮೇಲ್ಗಡೆಯ ಜಾತಿಯವರು ಆರಾಮಾಗಿ ಉಂಡು ತಿಂದು ಅರಗಿಸಿಕೊಂಡು ಹೇತಿದ್ದನ್ನು ಬುಟ್ಟಿ ತುಂಬಿಕೊಂಡು ತಲೆ ಮೇಲೆ ಹೊರಲಿಕ್ಕೆ.

ಬ್ರಾಹ್ಮಣರಿಗೇನೋ ಇದು ಅಪೇಕ್ಷಣೀಯ. ದಲಿತರಿಗೆ?

 

-೧೯೯೭

[1] * ನಮ್ಮ ಹರಿಹರ ಪ್ರಿಯ ಹೇಳುವಂತೆ ಈ ರಾಮಚಂದ್ರದೇವ ಎಂಬ ವಿಮರ್ಶಕನು ಅನಂತಮೂರ್ತಿಯ ಚೇಲಾತಿಚೇಲರಲ್ಲಿ ಅತಿ ಚೇಲ ಹಿಂದೊಮ್ಮೆ ಸಮತೀಂದ್ರ ನಾಡಿಗ ಕೊಟ್ಟ ಸುಳಿವು ಹಿಡಿದು ಈ ‘ ದೇವ ’ ನ ಸಣ್ಣ ಪ್ರಮಾಣದ ಕೃತಿ ಚೌರ್ಯವೊಂದನ್ನು ಉಲ್ಲೇಖಿಸಿ ನಾನು ‘ ಚಿಲ್ಲರೆ ಕಳ್ಳ ’ ಎಂದು ಬರೆದಾಗ ಇವನು ಮಾನಹಾನಿ ಆಯಿತೆಂದು ಹೇಳಿ ನನಗೆ ನೋಟೀಸು ಕಳಿಸಿದ್ದ. ನಾನು “ಹೌದಪ್ಪ ನೀನು ಚಿಲ್ಲರೆ ಕಳ್ಳನಲ್ಲ.” ಅಂತ ಹೇಳಿ ಸಮಾಧಾನ ಮಾಡಿದ್ದೆ.