ಯಾರಾದರೂ ಧಡಕ್ಕನೆ ಈ ಪ್ರಶ್ನೆ ಕೇಳಿದರೆ ನನಗಂತೂ ಅದೇ ವೇಗದಲ್ಲಿ ಉತ್ತರ ಕೊಡಲಿಕ್ಕೆ ಆಗುವುದಿಲ್ಲ. ಅಷ್ಟೇ ಅಲ್ಲ, ಪ್ರಶ್ನೆ ಕೇಳಿದವರ ಮಾನಸಿಕ ಸ್ಥಿತಿಗತಿಯ ಬಗ್ಗೆಯೇ ಸಂಶಯ ಬಂದರೂ ಬರಬಹುದು. ಆದರೆ ನಿಧಾನವಾಗಿ ಯೋಚಿಸಿದರೆ, ಯಾವುದು ಒಳ್ಳೆಯ ಕವನ? ಎಂಬುದು ಒಂದು ಒಳ್ಳೆಯ ಪ್ರಶ್ನೆ ಎಂದೇ ಅನಿಸುತ್ತದೆ. ಇಂಥದಕ್ಕೆ ಉತ್ತರವಾಗಿ, ಒಳ್ಳೆಯ ಕವನದ ಲಕ್ಷಣಗಳೂ ಇವು – ಒಂದು, ಎರಡು, ಮೂರು ಅಂತ – ಪಟ್ಟಿ ಮಾಡಿ, ‘ಇವು ಯಾವ ಕವನದಲ್ಲಿ ಇವೆಯೋ ಅದು ಒಳ್ಳೆಯ ಕವನ’ ಅಂತ ಫರಮಾನು ಹೊರಡಿಸುವ ಮೂರ್ಖತನಕ್ಕೆ ನಾನು ಕೈ ಹಾಕುವುದಿಲ್ಲ. ಯಾಕೆಂದರೆ ಅಂಥ ಪಟ್ಟಿ ಮಾಡುವುದು ಸಾಧ್ಯವೇ ಇಲ್ಲ. ಕಾವ್ಯದ ಒಂದು ಮುಖ್ಯ ಲಕ್ಷಣ ಅಂದರೆ ಅದು ಯಾವಾಗಲೂ ಇಂಥ ಲಕ್ಷ್ಮಣರೇಖೆಗಳನ್ನು ಉಲ್ಲಂಘಿಸುತ್ತಲೇ ಇರುತ್ತೆ. ಭೂತ, ಇತಿಹಾಸ, ಚರಿತ್ರೆ ಅನ್ನುವುದು ಕವಿಗೆ ಒಂದು ಅನುಕರಣೆ ಮಾಡಬೇಕಾದ ಮಾಡೆಲ್ ಆಗಿರದೆ, ಅದು ಮೀರಬಹುದಾದ ಒಂದು ಸಾಧ್ಯತೆ ಮಾತ್ರ ಆಗಿರುತ್ತದೆ; ಆಗಿರಬೇಕು, ಇರಲಿ.

ನನ್ನ ಮುಂದೆ ಒಂದು ಕವನ ಇದೆ. ಅದರ ಬಗ್ಗೆ ನನಗೇನೂ ಗೊತ್ತಿಲ್ಲ. ಇದು ಒಂದು ಸಾಧ್ಯತೆ. ಏನಾದರೂ ಅಭಿಪ್ರಾಯ ಅದರ ಬಗ್ಗೆ ಮೊದಲೇ ಇರಬಹುದು. ಇದು ಇನ್ನೊಂದು ಸಾಧ್ಯತೆ. ಏಕೆಂದರೆ ‘ಇದೊಂದು ಒಳ್ಳೆಯ ಕವನ ಐತಿ, ಓದಿ ನೋಡ್ರಿ ಚಂಪಾ ‘- ಅಂತ ಯಾರಾದರೂ ಶಿಫಾರಸು ಮಾಡಿರಬಹುದು ಅಥವಾ ಪ್ರಸಿದ್ದ ಕವಿಯೊಬ್ಬನ ‘ಕೆಟ್ಟ’ ಕವನವನ್ನು ಯಾರಾದರೂ ಓದಲು ಹೇಳಿರಬಹುದು ಬರೆದವನ ಬಗ್ಗೆ ವೈಯಕ್ತಿಕ ಪರಿಚಯ ಅಥವಾ ಸ್ನೇಹ ಅಥವಾ ದ್ವೇಷ ಇರಬಹುದು: ಇರಲಿಕ್ಕಿಲ್ಲ … ಸಾಮಾನ್ಯವಾಗಿ ಒಂದು ಕವನದಿಂದ ಅಗಾಧವಾಗಿ ನಾನು ಏನನ್ನೂ ನಿರೀಕ್ಷೆ (expect) ಮಾಡುವುದಿಲ್ಲ. Coleridge ಹೇಳುವ willing suspension of disbelief ಅನ್ನುತ್ತಾರಲ್ಲ. ಹಾಗೆ. ನನ್ನೆದುರಿಗಿನ ಕವನ ಅಕ್ಷರಗಳ ಒಂದು ಸಮೂಹ ಈ ಎಲ್ಲ ಅಕ್ಷರಗಳೂ ಆ ಭಾಷೆಯ ಶಬ್ದಕೋಶದೊಳಗೆ ಇದ್ದ ಅಕ್ಷರಗಳೇ ಆದರೆ ಅವೆಲ್ಲ ಬೇರೆ ಬೇರೆ patternಗಳಲ್ಲಿ (ವಿನ್ಯಾಸ) ರೂಪಗೊಂಡು ಒಂದು ಹೊಸ ಅನುಭವದ ಲೋಕಕ್ಕೆ ನನ್ನನು ಬಾ ಬಾ ಅಂತ ಕರೆಯುತ್ತವೆ. ಓದತೊಡಗುತ್ತೇನೆ. ಸಾಲು ಸಾಲುಗಳಗುಂಟಿ ಕಣ್ಣು. ಕಣ್ಣಿನೊಂದಿಗೆ ಚಿತ್ತ. ಹರಿಯುತ್ತದೆ. ಓದು ಮುಗಿಯುತ್ತದೆ.

ಈ ಓದು ಮುಗಿದ ನಂತರವೇ ಅದು ಒಳ್ಳೆಯ ಕವನವೋ ಕೆಟ್ಟ ಕವನವೋ ಅಂತ ಅನುಭವಕ್ಕೆ ಬರಲು ಸಾಧ್ಯ. ಒಂದು ಕವನ ನಿಜವಾಗಿಯೂ ನನಗೆ ಸೇರಿತೆಂದರೆ – (‘ಸೇರು’: ಬಹಳ ಧ್ವನಿಪೂರ್ಣ ಶಬ್ದ: ಕವನ ನನ್ನೊಳಗೆ ಸೇರಿತೋ, ನಾನು ಕವನದೊಳಗೆ ಸೇರಿದೆನೊ!) – ನಾನು ಕೂಡಲೇ ಮಾಡುವ ಕೆಲಸ: ಓಹ್ ಅಂತ ಆರಾಮವಾಗಿ ಕುಂತುವನು ಸ್ವಲ್ಪ ಸೆಟೆದು ಕುಂತು, ಚಾಳೀಸು ಕಣ್ಣಿಗೆ ಮತ್ತೊಮ್ಮೆ ಸರಿಯಾಗಿ ಹೊಂದಿಸಿಕೊಂಡು, ಮೌನವಾಗಿಯೋ ಅಟ್ಟಿಯಾಗಿಯೋ ಮತ್ತೊಮ್ಮೆ ಆ ಕವನ ಓದುವುದು, ಕವನದ ಈ arrest ಮಾಡುವ ಗುಣ. ಹಿಡಿದಿಡುವ ಗುಣ ಬಹಳ ಮುಖ್ಯ ಅಂತ ನಾನು ತಿಳಿದಿರುವೆ. ನನ್ನನ್ನು arrest ಮಾಡಿ, ಹೀಗೆ ನನ್ನ rest ಕಸಿದುಕೊಂಡ ಗುಣ ಯಾವುದು- ಇದರ ಹುಡುಕಾಟವೇ ಈ ಮರು ಓದಿನ ಉದ್ದೇಶ. ಅದು ಕವನದ ಯಾವುದಾದರೂ ಶಬ್ದವೋ ಲಯದ ತಿರುವೋ, ಅರ್ಥದ ಅನಿರೀಕ್ಷಿತ ಮುರಿತವೋ, ಪ್ರತಿಮೆಯ ಹೊಸತನವೋ, ನೆಲದ ಮರೆಯ ನಿಧಾನದಂತೆ ಹರಿಯುವ ಕವಿಯ ‘ಧ್ವನಿ’ಯೋ, ಅವನ ದರ್ಶನವೋ, ಇವೆಲ್ಲವುಗಳನ್ನು ಒಳಗೊಂಡೂ ಇವನ್ನು ಮೀರಿದ ಮತ್ತಾವುದೋ ಅಂಶವೋ, ಈ ಹುಡುಕಾಟ ಒಂದು ರೀತಿಯಲ್ಲಿ ಕೊನೆಯಿರದ ಹುಡುಕಾಟ, ಮೋನಾಲೀಸಾಳ ಮುಗುಳ ನಗೆಯಂತೆ ಕವನದ ಮೋಡಿ ಕೊನೆಯವರೆಗೂ ಮೋಡಿಯಾಗಿಯೇ ಉಳಿಯಬಹುದು.

ಇಂಥ ಅನೇಕ ಕವನಗಳು, ಕವನಗಳ ಸಾಲುಗಳ ಸಾಲುಗಳು, ನನ್ನನ್ನು ಯಾವಾಗಲೂ ಗುಂಗಾಗಿ ಕಾಡುತ್ತವೆ. ಪ್ರಜ್ಞೆಯ ಯಾವುದೋ ಪದರಿನಲ್ಲಿ ಅಡಗಿಕೊಂಡು ಒಮ್ಮೊಮ್ಮೆ ಹೇಳಿದ ಕೇಳಿದ ಪ್ರತ್ಯಕ್ಷವಾಗಿ ಎದುರಿಗೆ ಕಂಡ, ಕಾಣುತ್ತಿರುವ ಚಿತ್ರಕ್ಕೆ ಮತ್ತಾವುದೋ ಧ್ವನಿಯನ್ನು, ಆಯಾಮವನ್ನು ಒದಗಿಸುತ್ತವೆ.

ನಾನು ಏನು ಹೇಳಲು ಪ್ರಯತ್ನಿಸುತ್ತಿರುವ ಅಂತ ನಿಮಗೆ ಅರ್ಥವಾಗುತ್ತಿರಬೇಕು ನನಗೆ ಯಾವುದು ಸೇರಿದೆಯೋ ಅದು ಒಳ್ಳೆಯ ಕವನ ನನ್ನ ಪಾಲಿಗೆ. ಇದೇ ಅನುಭವ ಉಳಿದವರಿಗೂ ಆಗಲಿ ಎಂದು ನಾನೆಂದರೆ ನಾನೊಬ್ಬ ಮೂರ್ಖ ಇದು ಒಳ್ಳೆಯ ಕವನ, ಇದು ಶ್ರೇಷ್ಠ ಕವನ ಎಂದು ಅಕೆಡೆಮಿಗಳ ಮೂಲಕವೋ, ಆಸ್ಥಾನ ಪಂಡಿತರ ಮೂಲಕವೋ, ಸಮ್ಮೇಳನಗಳ ಮೂಲಕವೇ ಠರಾಯಿಸುವ ಪ್ರಯತ್ನಗಳೆಲ್ಲ ‘ಬಾಲಿಶ’; ಅಷ್ಟೆ ಅಲ್ಲ, ಅವು ಅನುಭವದ ಪ್ರಕ್ರಿಯ ನಿರಂತರ ಜೀವಂತಿಕೆಗೆ ಮಾಡುವ ಅಪಮಾನಗಳೆಂದೇ ನನ್ನ ಭಾವನೆ.

ಇನ್ನೊಂದು ಮಾತು ಹೇಳಲೇಬೇಕು. ಕವನದ ‘ಒಳ್ಳೆಯತನದ’ ಬಗ್ಗೆ ಮಾತನಾಡುವಾಗ, ಅದನ್ನು ಬರೆದ ‘ಕವಿ’ ಯನ್ನು ಚರ್ಚೆಯ ಹೊರಗೆ ಇಡುವುದೇ ಒಳ್ಳೆಯದು ಕೆಲವು ವಿಮರ್ಶಕರು ಎದುರಿಗಿದ್ದ ಕವನವನ್ನೇ ಮರೆತು ಕವಿಯ ಮಾನಸಿಕ ಪ್ರಕ್ರಿಯೆಯ ಬಗ್ಗೆ, ಕಾವ್ಯ ಸೃಷ್ಟಿ ಕ್ರಿಯೆಯ ಬಗ್ಗೆ ತಮ್ಮ ಪೂರ್ವ ನಿರ್ಧಾರಿತ ನಿರ್ಣಯಗಳನ್ನು ಸಾರುವ. ಓದುಗರ ಮೇಲೆ ಹೇರುವ, ಕೆಟ್ಟ ಚಾಳಿ ಬೆಳೆಸಿಕೊಂಡಿರುತ್ತಾರೆ. ಇವೆಲ್ಲ ಕಾವ್ಯಾನುಭವದಿಂದ ನಮ್ಮನ್ನು ವಂಚಿತರನ್ನಾಗಿ ಮಾಡಬಹುದು ಅಷ್ಟೆ. ಕವಿಯ ಮೂಲ ಅನುಭವ ಸ್ವಂತದ್ದಿರಬಹುದು, ಇರಲಿಕ್ಕಿಲ್ಲ ಅದು ಅವನ ತಕ್ಷಣದ ಪ್ರತಿಕ್ರಿಯೆಯಾಗಿರಬಹುದು. ಅನೇಕ ವರ್ಷಗಳ ಗುಂಗಿನ ಫಲವಿರಬಹುದು, ಅದು ಅವನ ಕನಸಿರಬಹುದು. ನೆನಪಿರಬಹುದು, ಹಳವಂಡವಿರಬಹುದು; ಕವನ ನಾಲ್ಕು ಸಾಲಿನದಿರಬಹುದು, ನಲವತ್ತು ಸಾಲಿನದಿರಬಹುದು … ಇವೆಲ್ಲ, ಒಂದು ನೆಲೆಯಲ್ಲಿ ಅಂದರೆ ಕಾವ್ಯದ ‘ಅನುಭವ’ದ ನೆಲೆಯಲ್ಲಿ ಅಪ್ರಸ್ತುತ, ಪ್ರಸ್ತುತ ಯಾವುದು ಅಂದರೆ, ಕವನ ಎದುರಿಗಿದೆ. ಅದು ಒಂದು ರೀತಿಯಲ್ಲಿ ‘ಅಪೂರ್ಣ’. ಅದು ಪೂರ್ಣವಾಗುವುದು ನನ್ನಲ್ಲಿ, ಅಂದರೆ ಓದುಗನಲ್ಲಿ. ಎಲ್ಲ ಓದುಗರಲ್ಲೂ ಅದು ಒಂದೇ ಆಳದಲ್ಲಿ. ಅಗಲದಲ್ಲಿ ಪೂರ್ಣವಾಗುವುದೆಂಬ ಗ್ಯಾರಂಟಿ ಇಲ್ಲ. ಈ ಕವನ ನನಗೆ ಏನಾದರೂ ಕೊಟ್ಟಿದ್ದರೆ ಅದು ಏನು? ಕವನ ಓದುವುದಕ್ಕಿಂತ ಮುಂಚೆ ಇದ್ದ ‘ನಾನು’, ಕವನ ಓದಿದ ನಂತರ ಆ ‘ನಾನು’ ಆಗಿಯೇ ಉಳಿದಿರುವೆನೋ, ಏನಾದರೂ ಬದಲಾಗಿರುವೆನೋ ಇವೆಲ್ಲ ನಾನು ನನ್ನೊಂದಿಗೇ ಮೆಲುಕಾಡಿಸಬೇಕಾದ ಅಂಶಗಳು.

ಈವರೆಗೆ ನಾನು ನಿಮಗೆ ಕೊಟ್ಟಿದ್ದು ಓದುಗನ point of view. ಓದುಗನ ನಿಲುವು. ಇನ್ನು ಒಬ್ಬ ‘ಕವಿ’ಯಾಗಿ ‘ಯಾವುದು ಒಳ್ಳೆಯ ಕವನ?’ ಅನ್ನುವ ಪ್ರಶ್ನೆಗೆ ಉತ್ತರ ಕೊಡಬಹುದೇ? ಎಂಬುದೂ ಒಂದು ಪ್ರಶ್ನೆಯೇ, ಆದರೆ ಇಲ್ಲಿ ಬಹಳ ರಿಸ್ಕ್ ಇದೆ. ಒಬ್ಬ ಕವಿಗೆ ಈ ಪ್ರಶ್ನೆ ಕೇಳಿದರೆ, ಅವನು ಅಥವಾ ಅವಳು, ಒಳ್ಳೆಯ ಕಾವ್ಯದ ಲಕ್ಷಣಗಳನ್ನು ಹೇಳಿ,” ಇವೆನ್ನೆಲ್ಲಾ ಹುಡುಕಲು ನೀವು ಬೇರೆಲ್ಲೂ ಹೋಗಬೇಕಾಗಿಲ್ಲ. ನನ್ನ ಕವನಗಳನ್ನೇ ಓದಿದರೆ ಸಾಕು. ನನ್ನ ಕಾವ್ಯ ಓದಿ, ಜೀವನ ಸಾರ್ಥಕಪಡಿಸಿಕೊಳ್ಳಿರಿ’ ಎಂದು ಹೇಳಬಹುದು. ಇಂಥ ಮಾತುಗಳನ್ನು ನಾನು ಕೆಲವು ವರಕವಿಗಳ ಬಾಯಿಯಿಂದಲೇ ಕೇಳಿದ್ದೇನೆ. ನಿಜ ಹೇಳಬೇಕೆಂದರೆ, ಇಂಥ ಪ್ರಶ್ನೆ ಕವಿಗಳನ್ನು ಕಾಡಿಸುವುದೇ ಇಲ್ಲ: ಕಾಡಿಸಬಾರದು. ನಾನು ‘ಕವಿ’ ಅಂತ ಕವಿಯಾಗಬೇಕು, ಮೇಜರ‍್ ಕವಿಯಾಗಬೇಕು; ಮಹಾ ಕವಿಯಾಗಬೇಕು; ವಿಶ್ವ ಕವಿಯಾಗಬೇಕು ಎಂದು ‘ಮಹತ್ವಾಕಾಂಕ್ಷೆ’ಯಿಂದ ಹೊರಟವರು ಅರ್ಧ ದಾರಿಗೇ ವಾಪಸು ಹೋಗುವ ಸಂಭವ ಹೆಚ್ಚು ತಾನು ಸೃಷ್ಟಿಸಿದ ಕೃತಿಯ ಅರ್ಥ ಕೂಡ. ಸಾಹಿತಿಗೆ ಗೊತ್ತಾಗಲಿಕ್ಕಿಲ್ಲ – ತನ್ನ ಮಕ್ಕಳೇ ತನ್ನ ತಂದೆಗೆ ‘ನಿಗೂಢ’ವಾದ ಹಾಗೆ. ಸ್ಯಾಮ್ಯುಯಲ್ ಬೆಕೆಟ್‌ನ Waiting for Godotದ ಉದಾಹರಣೆ ಇದೆ. ಈ ನಾಟಕದ Godot ಯಾರು, ಏನು ಅಂತ ತಲೆ ಕೆಡಿಸಿಕೊಂಡು ಸಾವಿರಗಟ್ಟಲೆ ಪುಟ ಬರೆದಿದ್ದಾರೆ ವಿಮರ್ಶಕರು. ಯಾರೋ ಬೆಕೆಟನನ್ನೇ ಕೇಳಿದರಂತೆ. “ಅದು ನನಗೆ ಗೊತ್ತಿದ್ದರೆ, ಅದನ್ನು ನಾಟಕದಲ್ಲಿ ಹೇಳುತ್ತಿದ್ದೆನಲ್ಲ!” ಎಂದನಂತೆ ಅವನು. ಇದು ಒಂದು ಕವನದ, ಒಂದು ಕಲಾಕೃತಿಯ ವೈಶಿಷ್ಟ್ಯ: ಅದರ ನಿಗೂಢ ಅಸ್ತಿತ್ವದ ಗುಟ್ಟು ಗುಟ್ಟು ಎಷ್ಟೇ ರಟ್ಟಾದರೂ ಗುಟ್ಟು ಗುಟ್ಟೇ ಅಲ್ಲವೇ? ಕವಿಗೆ ತನ್ನ ಅಭಿವ್ಯಕ್ತಿಯ ಬಗ್ಗೆ ಇರಬಹುದಾದ ಆತಂಕದ ಬಗ್ಗೆ ಸಂಶಯದ ಬಗ್ಗೆ, ಭಾಷೆಯ ಮಿತಿಯ ಬಗ್ಗೆ ನಾನೇ ಒಂದು ಕವನದಲ್ಲಿ ಬರೆದಿರುವೆ,

‘ನನ್ನ ಕವನಗಳಲ್ಲಿ ಹುಡುಕದಿರು ನನ್ನ’ – ಕವಿತೆಯ ಹೆಸರು.
ನಾನು ಬಿತ್ತಿದ್ದೆಷ್ಟೊ ನಾನು ಒಕ್ಕಿದ್ದೆಷ್ಟೊ
ಬಾಯಿ ಬಿಡಲಿಕ್ಕೆಂದು ನನಗೆ ಸಿಕ್ಕಿದ್ದೆಷ್ಟೊ
ಸಿಕ್ಕ ಈ ಇಷ್ಟರಲಿ ನಿನಗೆ ದಕ್ಕಿದ್ದೆಷ್ಟೊ
ಅದಕ್ಕೇ ಹೇಳುತ್ತೇನೆ ಕೇಳು ಚಿನ್ನ
ನನ್ನ ಕವನಗಳಲ್ಲಿ ಹುಡುಕದಿರು ನನ್ನ

ಬರೋಬರಿ, ಕವಿಗಳನ್ನು ಅವರವರ ಕವನಗಳಲ್ಲಿ ಹುಡುಕುವ ಪತ್ತೇದಾರಿ ಕೆಲಸ ಬಿಟ್ಟು, ಅವರನ್ನು ಅವರವರ ಪಾಡಿಗೆ ಬಿಟ್ಟು, ಅವರ ಪಾಡಿನ ‘ಹಾಡು’ಗಳ ಮೇಲಷ್ಟೇ ಗಮನವಿರಿಸಿದರೆ ಸಾಕು ನಾವು – ನಾವು ಅಂದರೆ ಓದುಗರು,

ನನ್ನನ್ನು ಅನೇಕ ವರ್ಷಗಳಿಂದ ಕಾಡುತ್ತಿರುವ, fascinate ಮಾಡಿರುವ ಒಂದು ಕವನ ಈಗ ಓದುವೆ. ಕವಿ ಸಿ.ಪಿ. ಕವಾಫಿ, ಅವನೊಬ್ಬ ಗ್ರೀಕ್ ಕವಿ. ಅವನು ಬರೆದ ಕವನದ ಶೀರ್ಷಿಕೆ The City. (ಇಂಗ್ಲೀಷ್ ಅನುವಾದದಲ್ಲಿ ಹೀಗಿದೆ)

You Said: I’ll go to another land, go to another sea,
find some other town better than this one.
Fated: condemned, is all that I’ve ever done
and my heart, like a dead body, is buried in a tomb.
How long must my mind remain within this gloom?
When I cast my eyes about me, look no matter where
I see the black ruins of my life, here
Where I’ve spent so many years wasted them,
destroyed them utterly.

You will no find new lands, not find another sea,
The city will follow you, you will wander down
these very streets. Age in this same quarters of the town
among the same houses finally turn grey
You’ll reach this city always. Don’t hope to get away;
for you there is no ship, no road any where.
As you’ve destroyed your life here.
in this small corner, so in the whole
world you’ve wrecked it utterly.
ಗುಂಗು ಹಿಡಿಸಿದ ಕವನಗಳನ್ನು – ಅವು ಬೇರೆ ಭಾಷೆಯವು ಆಗಿದ್ದರೆ – ಕನ್ನಡಕ್ಕಿಳಿಸುವುದು ನನ್ನ ಚಟ. ಈ ಭಾಷಾಂತರದಲ್ಲಿ ಸ್ವಲ್ಪ ರೂಪಾಂತರವೂ ಆಗುತ್ತದೆ. The City ಕವನದ ಕನ್ನಡ ಅನುವಾದ ಕೇಳೀರಿ.

ಶಹರ

ನೀನೇನೋ ಹೇಳಿದಿ:

‘ನಾ ಹೋಗಿಬಿಡುವೆ ಮತ್ತೊಂದು ನಾಡಿಗೆ, ಮತ್ತೊಂದು ಕಡಲಿಗೆ
ಇದಕ್ಕಿಂತ ಚಲೋ ಶಹರ ಹುಡುಕಿಕೊಂಡು
ನಾನಿಲ್ಲಿ ಕಡಿದದ್ದೇನು? ಉಗುಳಿಸಿಕೊಂಡದ್ದು, ಇದಿಗೆ ತುತ್ತಾದದ್ದು.
ಹುಗಿದು ಹೋಗಿದೆ, ಸತ್ತಂತೆ ಕುಣಿಯಲ್ಲಿ
ಇನ್ನೆಷ್ಟೊತ್ತು ತೇಕಲೀ ಕಾವಳದಲ್ಲಿ?
ಹೊರ ಹೊರಳಿ ನೋಡಿದಲ್ಲೆಲ್ಲ – ಬಾಳಿನ ಕರಿಯ
ಹಾಳ – ಮೊಳ ಇಲ್ಲಿ:
ನನ್ನ ಆಯಸ್ಸನ್ನು ಹಾಳುಗೆಡವಿರುವಲ್ಲಿ,
ಹಾಳು ಮಾಡಿರುವಲ್ಲಿ.
ನಿನ್ನ ಕಣ್ಗೆ ಬೀಳುವುದಿಲ್ಲ ಮತ್ತೊಂದು ನಾಡು;
ಕೈಗೆ ಹತ್ತುವುದಿಲ್ಲ ಮತ್ತೊಂದು ಕಡಲು,
ನಿನ್ನ ಬೆನ್ನಟ್ಟುವುದು ಈ ಶಹರ, ಈ ಓಣಿಗಳಲ್ಲೆ
ನೀನು ತಿರುಗಬೇಕು. ಈ ಚಾಳುಗಳಲ್ಲೆ ಜೀವ ತೆಯ್ಯಬೇಕು.
ಈ ಮನೆಗಳಲ್ಲೆ ತಲೆ ಹಣ್ಣಾಗಬೇಕು. ತಿರುತಿರುಗಿ
ತಲಪವುದು ನೀ ಈ ಶಹರವನ್ನೆ.
ಪರಾರಿಯಾಗುವ ಆಸೆ ಹಿಡಿಯದಿರು: ನಿನಗಾಗಿ
ಯಾವ ಹಡಗೂ ಇಲ್ಲ. ದಾರಿಯ ಇಲ್ಲ.
ಇಲ್ಲಿ. ಈ ಸೊಟ್ಟ ಮೂಲೆಯಲ್ಲಿ, ಬಾಳು ಕೆಡಿಸಿಕೊಂಡವ ನೀನು,
ನಿನ್ನ ಪಾಲಿಗೆ ಅದು ಎಲ್ಲಾ ಕಡೆಗೆ ಹಾಳು.
-೧೯೯೦