ಸಂತೆಯೊಳಗೊಂದು ಮನೆಯ ಮಾಡಿ…. ಎಂಬ ಮಾತಿದೆ. ಇಲ್ಲಿ ಶಬ್ದಕ್ಕೆ ‘ಅಂಜುವ’ ಪ್ರಸಂಗ ಬರುವುದು ಅಂಥ ‘ಮನೆ’ ಮಾಡಿದವರಿಗೆ. ಮನೆ ಮಾಡದಿದ್ದರೂ ಸಂತೆಯಲ್ಲಿ ಹಾಯ್ದು ಹೋಗುವ ಅನುಭವ ನಮಗಿದ್ದೇ ಇದೆ. ಉದ್ದಕ್ಕೂ ನೂರಾ ಎಂಟು ಮಂದಿಯ ತಾತ್ಕಾಲಿಕ ಸಂಪರ್ಕ. ಸಂತೆ ಮುಗಿಸಿ ಮನೆಗೆ ಬಂದ ಎಷ್ಟೋ ಕಾಲಾವಧಿಯ ನಂತರವೂ ಒಮ್ಮೊಮ್ಮೆ ಕೆಲವು ಮುಖ ನಮ್ಮನ್ನು ಕಾಡುತ್ತವೆ. ಓ….. ಆ ಮುಖ ಮತ್ತೊಮ್ಮೆ ಎದುರಾದರೆ.. ಎಂಬ ಹಂಬಲ ಗುಪ್ತವಾಗಿ ಸುಪ್ತವಾಗಿ ನಮ್ಮೊಳ್ಳಗೆ ಹರಿಯುತ್ತದೆ. ಇಂಥ ಹಂಬಲ ಅಕಸ್ಮಾತ್ತಾಗಿ ಹಣ್ಣಾಗಿ ಬಿಟ್ಟರೆ ಖುಶೀ!

ಸಂತೆಯ ಈ ಮೆಟಫರು ನನಗೆ ಹೊಳೆದದ್ದು. ಎಷ್ಟೋ ವರ್ಷಗಳ ಹಿಂದೆ ನಾನು ಓದಿ ಲಕ್ಕು ಹೊಡೆದಿದ್ದ, ಆದರೆ ನಿಂತು ನೋಡಲು ಪುರಸೊತ್ತು ಸಿಗದೆ ಹಾಗೇ ಅವಸರದಲ್ಲಿ ನನ್ನ ಕೈ ಚೀಲದಲ್ಲಿ ತುರುಕಿ ಇಟ್ಟುಕೊಂಡಿದ್ದ ಕವನಗಳನ್ನು ಹೊರಗೆ ಹಿರಿದು ಮತ್ತೆ ವಿರಾಮವಾಗಿ ಓದಿ ಆನಂದಿಸುವ ಪ್ರಸಂಗ ಒದಗಿದಾಗ.

ಅಂಥ ಒಂದೆರಡು ಕವನ ಇಲ್ಲಿವೆ. ಒಂದು, ಎಚ್. ಎಸ್. ವೆಂಕಟೇಶಮೂರ್ತಿ ಅವರದು; ಇನ್ನೊಂದು ವಿಷ್ಣು ನಾಯ್ಕ ಅವರದು, ಇಬ್ಬರಿಗೂ ಈ ಜೂನ್ – ಜುಲೈ ತಿಂಗಳಲ್ಲಿ ಅರವತ್ತು ತುಂಬುತ್ತಿವೆ. ನಮ್ಮ ಪರಂಪರೆಯಲ್ಲಿ ಇದೊಂದು ಘಟ್ಟ ಈ ಹಂತದಲ್ಲಿ ಗೆಳೆಯರು, ಒಡನಾಡಿಗಳು ಸೇರಿ ಅಭಿನಂದನ ಗ್ರಂಥ ಹೊರತರುವುದು ವಾಡಿಕೆ, ಇಂತ ಗ್ರಂಥಗಳಿಗೆ ಏನಾದರೂ ಬರೆಯಬೇಕು ಎಂಬ ಪ್ರಸಂಗ ಬಂದಾಗ ನಾನೆಂದುಕೊಳ್ಳುವುದು: ಏನಾದರೂ ಬರೆಯುವುದಕ್ಕಿಂತ, ಯಾಕೆ ಈ ಗೆಳೆಯರ ಕೃತಿಗಳನ್ನು ಮತ್ತೊಮ್ಮೆ ಓದಬಾರದು…..? ಕೊನೆಗೂ ಇಂತ ಕೃತಿಗಳ ಓದು, ಅನುಭವಗಳೇ ಅಲ್ಲವೇ ನನ್ನ ಅವರ ಬಾಂಧವ್ಯದ ಮೂಲ ಸೆಳೆತಗಳು? ಅವರ ವ್ಯಕ್ತಿತ್ವದ ಇತರ ಆಯಾಮಗಳು ಏನೇ ಇರಲಿ, ನನಗೆ ಮಾತ್ರ ಅವರು ಅನಾವರಣಗೊಳ್ಳುವುದು ಅವರ ಬರಹಗಳ ಮೂಲತವೇ.

ಇಂಥ ಎರಡು ಪದ್ಯಗಳು ನಿಮ್ಮೆದುರಿಗಿವೆ: ನಾನು ಕಂಡಂತೆ, ನನಗೆ ಕಂಡಷ್ಟು.

ಎಚ್. ಎಸ್. ವಿ ಅವರ ಸಾನೆಟ್: ಕಂಡದ್ದು

ರಾತ್ರಿ ಮಳೆ ಮಿಂಚು. ವಿದ್ಯುತ್ತು ಹೋಗಿದೆ. ನೀವು
ಬಂದಾಗ ಮನೆಗೆ ಏನೇನೂ ಕಾಣುತ್ತಿಲ್ಲ.
ಹೇಗೋ ಬಾಗಿಲು ತೆಗೆದು ಒಳಗೆ ಬರುವಿರಿ. ಒಂದು
ಕಡ್ಡಿ ಪೆಟ್ಟಗೆಗಾಗಿ ತಡವರಿಸುವಿರಿ, ಇಲ್ಲ.
ಸಿಗಲಿಲ್ಲ. ಸಿಡಿಮಿಡಿ. ಮನೆಯೊಡತಿ ಸಂಜೆಯೇ
ರಜ ಎಂದು ಮಗನೊಡನೆ ತಾಯಿಯೂರಿಗೆ. ನೀವು
ಚಡಪಡಿಸುವಿರಿ ಈಗ, ಅಡುಗೆ ಮನೆಯಲ್ಲಾಕೆ
ಕಿಟಕಿಯಲ್ಲಿಡುತ್ತಿದ್ದಳಲ್ಲವೇ ಹಣತೆಯನು?
ಹಣತೆ ಸಿಕ್ಕಿತು. ಅಲ್ಲೆ…. ಅಲ್ಲೆ.. ಕೆಳಗೆ ಹುಡುಕಿ.
ಇದ್ದೀತು ಕಡ್ಡಿ ಪೆಟ್ಟಿಗೆ. ಹೌದು ಅಲ್ಲೆ ಇದೆ.
ಈಗ ಕಡ್ಡಿಯ ಗೀರಿ ಮಣಿದೀಪ ಹೊತ್ತಿಸೆ.
ದೀಪವಷ್ಟೇ ಮೊದಲು ಕಾಣುವುದು. ಆಮೇಲೆ
ಕಾಣುವುವು: ಫ್ಲಾಸ್ಕು… ಬಿಸಿ ಅಡುಗೆ… ಕಾಸಿದ ಹಾಲು.
ಪ್ರೀತಿ…. ಕಳಕಳಿ… ಅಕ್ಕರಾಸ್ತೆ. .. ಕವಿತೆಯ ಸಾಲು.

ಪ್ರತಿಯೊಂದು ಕವನದಲ್ಲಿ ಒಂದು ‘ಮಾತಾಡುವ ಧ್ವನಿ’ (Speaking Voice) ಇರುತ್ತದೆ. ಯಾರೋ ಯಾರಿಗೋ ಏನೋ ಹೇಳುತ್ತಿರುತ್ತಾರೆ. ‘ಕಂಡದ್ದು’ ಕವನದಲ್ಲೂ ಇಂಥದೊಂದು ಧ್ವನಿ ಇದೆ. ಅದು ಹೇಳುವುದು: “ನೀವು ಬಂದಾಗ ಮನೆಗೆ ಏನೇನೊ ಕಾಣುತ್ತಿಲ್ಲ”

ಹೇಳುವ ಧ್ವನಿ ಕವಿಯದೇ ಅಂತ ತಿಳಿಯೋಣ. ಆದರೆ ಈ ಪಾತ್ರಕ್ಕೆ ವಿಶಿಷ್ಟ ವ್ಯಕ್ತಿತ್ವವಿಲ್ಲ. ಅದಕ್ಕೆ ಎಲ್ಲವನ್ನೂ ಕಾಣುವ ಒಂದು ಕಣ್ಣಿದೆ. ಆದರೆ ಅದರ ಲಕ್ಷ್ಯವಾಗಿರುವ ‘ನೀವು’ (ಯಾರಾದರೂ ಆಗಿರಬಹುದಾದರೂ) ಕ್ರಮೇಣ ಒಂದು ರೂಪ, ನಂತರ ಚಲನೆ ಪಡೆಯುವ ಪಾತ್ರ. ರಾತ್ರಿ ತಡವಾಗಿ ಮನೆಗೆ ಬಂದ ಗಂಡ, ಹೆಂಡತಿ ಮಗನನ್ನು ಕಟ್ಟಿಕೊಂಡು ತವರೂರಿಗೆ ಹೋಗಿದ್ದಾಳೆ. ಮಳೆ ಮಿಂಚಿನ ರಾತ್ರಿ, ಕರೆಂಟು ಹೋಗಿದೆ… ಹೀಗೆ ಸನ್ನಿವೇಶವೊಂದು ಕವನದ ಪ್ರಾರಂಭದಲ್ಲಿಯೇ ನಿರ್ಮಾಣವಾಗುತ್ತದೆ.

ಇಂಥದೊಂದು ಸಣ್ಣ ಹಾಗೂ ಸಾಮಾನ್ಯ ಅನುಭವ ಕೂಡ ಕ್ಷಿಪ್ರ ಕಾಲಾವಧಿಯಲ್ಲೇ ಹೇಗೆ ಮೈ ತಳೆದು ಅನಿರೀಕ್ಷಿತ ತಿರುವ ಪಡೆದುಕೊಳ್ಳಬಹುದು – ಎಂಬುದನ್ನು ಕವನದಲ್ಲಿ ಕಂಡರಿಸುವುದು ಹೇಗೆ ಎಂಬುದನ್ನು ಕಾಣಬೇಕಾದರೆ ಎಚ್‌.ಎಸ್.ವಿ ಅವರ ‘ಕಂಡದ್ದು’ ಕವನದ ಪದ ಪದದೊಂದಿಗೆ ನಾವು ಪಾದವಿಡಬೇಕು. ರಾತ್ರಿ ಮಳೆ. ಆಗಾಗ ಮಿಂಚು. ಈ ಮಿಂಚಿನಿಂದಾಗ ವಿದ್ಯುತ್ತು (ಕರೆಂಟು) ಹೋಗಿದೆ ಮುಗಿಲ – ಮಿಂಚೂ ವಿದ್ಯುತ್ತೇ. ಆದರಿಂದಾಗಿ ಇಹಲೋಕದ ಮಿಂಚು ಪಲಾಯನ ಹೇಳಿದೆ. ರಾತ್ರಿ ತಡವಾಗಿ ಬಂದ ಮನೆಯ ಯಜಮಾನ ಮಿಂಚಿನ ಬೆಳಕಿನಲ್ಲೇ ಮನೆಯ ಹಾದಿ ಕಂಡಿರಬೇಕು. ದಟ್ಟ ಕತ್ತಲೆ ಬಾಗಿಲು ಹೇಗೋ ತೆಗೆದದ್ದಾಯಿತು – ಡುಪ್ಲಿಕೇಟ್ ಕೀ ಬಳಸಿ.

ಕಡ್ಡಿಪೆಟ್ಟಿಗೆಗಾಗಿ ತಡವರಿಕೆ, ಸಿಡಿಮಿಡಿ ಪ್ರಾರಂಭ, ಮನೆಯೊಳಗೆ ಮನೆಯೊಡತಿ ಇದ್ದಾಳೊ ಇಲ್ಲವೋ… ಎಂಬ ಅನುಮಾನಕ್ಕೆ ಎಡೆ ಇಲ್ಲ. ಅವಳು ಇಲ್ಲವೇ ಇಲ್ಲ. (ಇಲ್ಲಿ ‘ತಡವರಿಸಿ’, ‘ಸಿಡಿಮಿಡಿ’, ಮನೆಯೊಡತಿ’ ಪದಗಳ ‘ಡ’- ಕಾರಗಳನ್ನು ಗಮನಿಸಿರಿ. ಕತ್ತಲಲ್ಲಿ ಬಡಪಾಯಿ ಅದಕ್ಕೆ ಇದಕ್ಕೆ ಕಾಲು ಬಡಿಸಿಕೊಳ್ಳುವ ಅನುಭವ. ಇದನ್ನೇ ಮುಂದುವರಿಸಿಕೊಂಡು ಹೋಗುವ ಇನ್ನೊಂದು ಶಬ್ದ: ‘ಚಡಪಡಿಸುವಿರ’)

ಈ ಚಡಪಡಿಕೆ ಮನೆಯೊಡತಿ ಇಲ್ಲದ್ದಕ್ಕೆ ಅಲ್ಲ. (ಅವಳು ಬಹುಶ: ರಜೆ ಬಂದಾಗೊಮ್ಮೆ ತವರು ಮನೆಗೆ ಹೋಗುತ್ತಿರಬೇಕು.) ಮಿಂಚೂ ಇಲ್ಲದ ಕರೆಂಟೂ ಇಲ್ಲದ ಈ ಮನೆಗೆ ಈಗ ಬೇಕು ಕಡ್ಡಿಪೆಟ್ಟಿಗೆ ಮತ್ತು ಹಣತೆ. ಅವುಗಳಿಗಾಗಿ ತಡಕಾಟ ಅಡುಗೆ ಮನೆಯ ಕಿಟಕಿಯಲ್ಲಿ ಹಣತೆ. ಅಲ್ಲೇ ಕೆಳಗಡೆ ಕಡ್ಡಿ ಪೆಟ್ಟಿಗೆ.

ಕವನದಲ್ಲಿ ಇದೊಂದು ಹಂತ ನಾಲ್ಕಾರು ಸಾಲುಗಳಲ್ಲಿ ಈ ಹುಡುಕಾಟವನ್ನು ಅಭಿನಯಿಸುವ ರೀತಿ ಗಮನಾರ್ಹ: ಕ್ಷಿಪ್ರ ಸೂಚನೆಗಳು: ಪದಗಳ ಪುನಾರಾವೃತ್ತಿ ಇತ್ಯಾದಿ.

………………… ಒಳಗೆ ಬರುವಿರಿ. ಬಂದು
……………………………ಇಲ್ಲ
ಸಿಗಲಿಲ್ಲ…………………………….
……………………………………
……………………………………
……………………….ಹಣತೆಯನ್ನು?
ಹಣತೆ ಸಿಕ್ಕಿತು. ಅಲ್ಲೇ …………. ಅಲ್ಲೇ……….
ಇದ್ದೀತು ………………………….ಅಲ್ಲೇ ಇದೆ.

ಈಗ ಕಡ್ಡಿಯ ಗೀರಬೇಕು – ಮುಗಿಲಲ್ಲಿ ಮಿಂಚು ಕೊರೆದ ಹಾಗೆ. ನಂತರ ಹಣತೆಯ ‘ಮಣಿದೀಪ’ ಹೊತ್ತಿಸಬೇಕು. (ಈ ‘ಮಣಿದೀಪ’ ಎಂಬ ಶಬ್ದದ ಧ್ವನಿಶಕ್ತಿ ಗಮನಿಸಿರಿ) “ಏನೇನೊ ಕಾಣುತ್ತಿಲ್ಲ” – ಎಂಬ, ಎರಡನೆಯ ಸಾಲಿನ ಕತ್ತಲೆಯ ವಾಸ್ತವ ಕರಗಿ ಹೋಗಿ ಈಗ ಬೆಳಕಿನ ಲೋಕವೇ ಅನಾವರಣಗೊಂಡಿದೆ. ಮಿಂಚು ಝಗ್ಗನೆ ಹೊಳೆದು ಎಲ್ಲವನ್ನು ಒಮ್ಮೆಗೇ ತೋರಿಸುವ ರೀತಿಯಲ್ಲಿ ಅಲ್ಲಿ ಅನಾವರಣವೆಂದರೆ ಅಕ್ಷರಶ: ಅನಾವರಣವೇ. ಮುಸುಕು ಮೆಲ್ಲಗೆ ಸರಿಸಿದಂತೆ. ಮೊದಲು ಕಾಣುವುದು: ಫ್ಲಾಸ್ಕು….. ಬಿಸಿ ಅಡಿಗೆ…. ಕಾಸಿದ ಹಾಲು. ತಾಯಿಯೂರಿಗೆ ಹೋಗುವ ಮೊದಲು ಮಡದಿ ಗಂಡನಿಗಾಗಿ ತಯಾರು ಮಾಡಿದ್ದ ಪದಾರ್ಥಗಳು. ಪ್ರತಿಯೊಂದು ಸೂಚಿಸುವುದು ಪ್ರೀತಿಯನ್ನು. ಕಳಕಳಿಯನ್ನು, ಅಕ್ಕರಾಸ್ತೆಯನ್ನು. ಇವೂ ಕೂಡ ‘ಕಾಣುವಂಥವೇ…’ ಇವೆಕ್ಕೆಲ್ಲ ಶಿಖರಪ್ರಾಯವಾದ ಪದಗಳು: ‘ಕವಿತೆಯ ಸಾಲು’. ಮನೆ – ಮಡದಿ – ಮಗ – ತಾನು: ಇಡೀ ಕುಟುಂಬವೇ ಒಂದು ಕವಿತೆ. ಅಲ್ಲಿ ಕಣ್ಣಿಗೆ ಕಂಡದ್ದೆಲ್ಲ ಕವಿತೆಯ ಸಾಲೇ.

ಇಷ್ಟೇ: ಕವಿತೆ ‘ಕಾಣಬೇಕಾದರೆ’ ಬರೀ ಮಿಂಚು, ಕರೆಂಟು ನೆಚ್ಚಿ ಕೂಡ್ರುವಂತಿಲ್ಲ. ಅವು ಇಲ್ಲದಿದ್ದಾಗ ತಡಕಾಡಬೇಕು – ಹಣತೆಗಾಗಿ,. ಕಡ್ಡಿಪೆಟ್ಟಿಗೆಗಾಗಿ

ಎಚ್.ಎಸ್.ವಿ ಅವರ ಈ ಸಾನೆಟ್ಟಿನ ವೈಶಿಷ್ಟ್ಯವೆಂದರೆ: ಸಾನೆಟ್ ಎಂಬ ವಿನ್ಯಾಸ (form) ಎಲ್ಲೂ ಒಡೆದು ಕಾಣುವುದಿಲ್ಲ. ಅದು ಇದ್ದೂ ಇಲ್ಲದಂತಿದೆ. (೧೪ ಸಾಲುಗಳಿವೆ. ಸ್ವರಾಂತ ಪ್ರಾಸಗಳಲ್ಲಿ ಒಂದು ನಿರ್ದಿಷ್ಟ ಕ್ರಮವಿದೆ: ಉ – ಅ -ಉ – ಅ: ಎ- ಉ -ಎ ಉ: ಇ -ಎ -ಇ -ಎ: ಉ – ಉ- ಹೀಗೆ ಸಾಲುಗಳ ಘಟಕಗಳಲ್ಲಿ ಶಿಸ್ತಿದೆ: ೪ + ೪ + ೪ + ೨)

“ಕನ್ನಡದಲ್ಲಿ ಐದು ಮಾತ್ರೆಯ ನಡೆ, ಗದ್ಯಶೈಲಿಗೆ ತೀರ ಸಮೀಪವಾದುದು. ಹಾಗಾಗಿ ನಮ್ಮಲ್ಲಿದ್ದ ಲಲಿತ ರಗಳೆಯನ್ನು, ಸಾಲಿನ ಕೊನೆಗೆ ನಿಲುಗಡೆ ಕೊಡದೆ. ಮುನ್ನಡೆಸಿ, ವಾಕ್ಯ ವಿನ್ಯಾಸವನ್ನು ಸಾಧಿಸಿದರೆ, ಸಾನೆಟ್ಟಿಗೆ, ಭಾವಗೀತೆಗಿಂತ ಭಿನ್ನವಾದ ಯುಕ್ತವೂ ಸಹಜವೂ ಆದ ನಡೆಯೊಂದನ್ನು ಕಲ್ಪಿಸಿದಂತಾಗುತ್ತದೆ” – ಇದು ಎಚ್.ಎಸ್.ವಿ ಒಂದಡೆ ಬರೆದದ್ದು ಇಂಥ ಸಾಧನೆಗೊಂದು ಉತ್ತಮ ಉದಾಹರಣೆ, ಅವರ ‘ಕಂಡದ್ದು’.

ವಿಷ್ಣು ನಾಯ್ಕರ ಅಜ್ಜನ ಶ್ರಾದ್ಧ

ನಮ್ಮ ದೇಶಕ್ಕೆ ಸ್ವಾತಂತ್ರ ಬಂದ ದಿನವೇ
ನಮ್ಮ ಹಿರಿಯಜ್ಜನೊಬ್ಬ
ಸತ್ತದಿನವೂ ಆಗಿರುವುದು
ಸ್ವಲ್ಪ ಗೊಂದಲಕ್ಕಿಟ್ಟುಕೊಂಡಿದೆ ನನಗೆ.
ಅಜ್ಜ ಬಹಳ ಬೇಕಾದವನಿದ್ದ.
‘ಸ್ವಾತಂತ್ಯ್ರ’ ‘ಸ್ವಾತಂತ್ಯ್ರ’ ಅನ್ನುತ್ತಿದ್ದ.
ಕನಸುಗಾರನಿದ್ದ
ಊರಿಗೊಂದು ದಾರಿಯೂ ಆಗಿದ್ದ!
ಅವನ ಮಾತೆಂದರೆ ನಮಗೋ,
ದೇವರ ಆಣೆ, – ಆಗಿತ್ತದು ಮೀರದ ಅಪ್ಪಣೆ.
ಅವನ ಬೆದರಿಕೆಗೂ ಬೆತ್ತಕೂ
ಹೆದರಿ ಸಾಯುತ್ತಿದ್ದೆವು. ಆಗಿದ್ದನವ –
ಚೈತನ್ಯದ ಮೂಲ, ಆನೆಯ ಬಲ!
ಅವ ಊರಿನ ಬೀಜವೀಗ ಹೆಮ್ಮರ!
ಆ ನೆರಳಿನಲ್ಲಿ ನಿಂತಾಗ, ಅಜ್ಜ ಮತ್ತು ಅವನ ಸರಿಕರು
ನೆನಪಾಗುತ್ತಾರೆ.
ನೆರಳೇ ಇಲ್ಲದ ಅಂದಿನ ಹೊಗೆ – ದಗೆಯ ದಿನಗಳೂ ಕಣ್ಣಿಗೆ ಕಟ್ಟುತ್ತವೆ.
ನೆರಳು ಕೊಡುವ ಹೆಮ್ಮರದ ಟೊಂಗೆಯತ್ತೀಗ
ಕೊಡಲಿ ಕಣ್ಣಿಟ್ಟವರ ‘ಹಿಡಿದುಕಡಿದುಬಿಡಲೇ?’
ಎಂಬಷ್ಟು ಸಿಟ್ಟು ಬರುತ್ತದೆ.
ಊರಿಂದ ಊರಿಗೆ ಮನೆಯಿಂದ ಮನೆಗೆ
ತಿರುಗಿ ತಿಂದುಂಡು ಬರುತ್ತಿದ್ದ ನನ್ನಜ್ಜ
ಅವರ ಬದುಕಿನ ಭಾಗವೇ ಆಗಿದ್ದ!
ಜಾತಿ – ಧರ್ಮ ಪಂಗಡ ಮೀರಿ ಬೆಳೆದಿದ್ದ, ನುಡಿದಂತೆ
ನಡೆದಿದ್ದ.
ಅದೇ ಆ ಆಗಸ್ಟ ಹದಿನೈದರ
ಸಂಭ್ರಮದಲ್ಲಿ ಮೈಮರೆತಿತ್ತು ದೇಶ ಅತ್ತ.
ಎದೆ ಸುಡುವ ವ್ಯಾದಿಯಿಂದ
ಸುಸ್ತಾಗಿ ಮಲಗಿದ್ದ ಅಜ್ಜ ಇತ್ತ.
ಹೀಗಾಗಿ ಅಜ್ಜನ ಶ್ರಾದ್ಧಕ್ಕೂ ಸ್ವಾತಂತ್ಯ್ರದ ಹಬ್ಬಕ್ಕೂ
ಫರಕ್ಕೆಂಬುದೇ ಉಳಿದಿಲ್ಲ ಈಗ ನಮ್ಮ ಕುಟುಂಬಕ್ಕೆ.

ಏಳು ನುಡಿಗಟ್ಟುಗಳಲ್ಲಿ ಹರಡಿಕೊಂಡ ಈ ರಚನೆಯಲ್ಲಿ ಒಟ್ಟು ೩೧ ಸಾಲುಗಳಿವೆ. ಮುಕ್ತ ಛಂದದ ಆಡುಮಾತಿನ ಧಾಟಿ. ಅನುಭವದ ಅನೇಕ ಸ್ತರಗಳನ್ನು ಸ್ಪರ್ಶಿಸುವ ಈ ಕವನದ್ದು ಜಂಗಮ ಸ್ವರೂಪ. ಅದರ ಚಲನೆ ಒಮ್ಮೆ ಹಿಂದಕ್ಕೆ, ಮತ್ತೊಮ್ಮೆ ಮುಂದಕ್ಕೆ ಆದರೆ ಪ್ರಾರಂಭದ ‘ಗೊಂದಲ’ದ ದಿಂದ ಒಂದು ನಿಶ್ಚಿತ ಅರ್ಥಕ್ಕೆ ಬಂದು ನಿಲ್ಲುವ ಅನುಭವ ಇಲ್ಲಿಯದು.

ಕುಟುಂಬದ ವಿನ್ಯಾಸದಲ್ಲಿ ‘ಅಜ್ಜ’ (ಅಥವಾ ‘ಅಜ್ಜಿ’) ಸಾಮಾನ್ಯವಾಗಿ ಭೂತ – ಕಾಲವನ್ನು, ಪರಂಪರೆಯನ್ನು ಸಂಕೇತಿಸುವ ಪದ, ಈ ಅಜ್ಜ ಒಳ್ಳೆಯ ಆದರ್ಶಗಳ, ಮೌಲ್ಯಗಳ ಸೂಚಿಯಾಗಿರಬಹುದು: ಅಥವಾ ಜಡತೆ, ಅರ್ಥಹೀನತೆಯ ರೂಪಕವಾಗಿರಬಹುದು. ಅದು ಅವರವರ ಗ್ರಹಿಕೆ, ಆದರೆ ಬಿಡಲಾರದ ಒಡನಾಟ ಸಂಬಂಧವಂತೂ ಇದ್ದದ್ದೇ.

ಕವನದ ಪ್ರಾರಂಭದಲ್ಲೇ ಒಂದು ‘ತಳಕು’ ಸೂಚಿತವಾಗಿದೆ: ‘ನಮ್ಮ ದೇಶ’ ಮತ್ತು ‘ನಮ್ಮ ಹಿರಿಯಜ್ಜ’, ಹೀಗಾಗಿ ಇಲ್ಲಿಯ ಮಾತಾಡುವ ಧ್ವನಿ’ ಒಂದೇ ವ್ಯಕ್ತಿಯ ಎರಡು ಪಾತ್ರಗಳದ್ದು. ಅವನು ಒಂದು ಕುಟುಂಬದ ಸದಸ್ಯ: ಹಾಗೆಯೇ ಒಂದು ದೇಶದ ನಾಗರಿಕ. ಯೋಗಾಯೋಗವೆಂದರೆ ಅವನ ದೇಶಕ್ಕೆ ಸ್ವಾತಂತ್ಯ್ರ ಬಂದ ದಿನವೇ ಅವನ ಕುಟುಂಬದ ಹಿರಿಯಜ್ಜ ಸತ್ತು ಹೋದ. ಹೀಗಾಗಿ ‘ಆಗಷ್ಟ ಹದಿನೈದು’ ಎಂಬುದು ಎರಡು ವೈರುಧ್ಯಗಳ ಒಂದು ಸಂಕೀರ್ಣ ರೂಪಕವಾಗಿ ಬಿಟ್ಟಿದೆ: ದೇಶದ ಹುಟ್ಟು – ಅಜ್ಜನ ಸಾವು: ದೇಶಕ್ಕೆ ಗುಲಾಮಗಿರಿಯಿಂದ ವಿಮೋಚನೆ, ಅಜ್ಜನಿಗೆ ಬದುಕಿನಿಂದ ವಿಮೋಚನೆ; ಸ್ವಾತಂತ್ಯ್ರದ ಸಂತೋಷ – ಶ್ರಾದ್ಧದ ಶೋಕ, ಇಂಥ ಮೇಲುನೋಟಕ್ಕೆ ಒಡೆದು ಕಾಣುವ ವೈರುಧ್ಯದಿಂದಾಗಿ ಕವಿಯಲ್ಲಿ ಈ ಹಂತದಲ್ಲಿ ಉಂಟಾಗಿರುವ ‘ಸ್ವಲ್ಪ ಗೊಂದಲ’ ನಮ್ಮೆಲ್ಲರ ಗೊಂದಲ ಕೂಡ. (ಕವಿಯ ಪ್ರಥಮ ಪುರುಷ ಏಕಚವನ ‘ನಾನು’ ಎಂಬುದು ಬರಬರುತ್ತ ಓದುಗರನ್ನು ಒಳಗೊಳ್ಳುತ್ತ ‘ನಾವು’ ಆಗುವುದು ಕುತೂಹಲಕಾರಿ, ವ್ಯಷ್ಟಿ ಅನುಭವ ಸಮಷ್ಟಿ ಅನುಭವವಾಗುವುದೇ ಯಾವುದೇ ಕಲಾಕೃತಿಯ ರಹಸ್ಯವಲ್ಲವೇ?)

ಎಲ್ಲರಂಥನವನಲ್ಲ ಈ ಅಜ್ಜ, ಎಲ್ಲರಿಗೂ ಬೇಕಾದವ, ಕನಸುಗಾರ, ಮಾರ್ಗದರ್ಶಕ. ಚೈತನ್ಯದ ಮೂಲ. ಅವನ ಬಲ ಆನೆಯ ಬಲ. ಅವನ ಬೆತ್ತಕ್ಕೆ, ಬೆದರಿಕೆಗೆ ಹೆದರಿ ಸಾಯುತ್ತಿದ್ದರು. ಅವನ ಮಾತೆಂದರೆ ಅದು ಅಪ್ಪಣೆ. ಒಟ್ಟಿನಲ್ಲಿ ಸಾಮಾಜಿಕ ಬದುಕಿನ ಸುಭದ್ರ ಕಾವಲುಗಾರ. (‘ಊರಿಗೊಂದು ದಾರಿಯೇ ಆಗಿದ್ದ’)… ಎಲ್ಲಕ್ಕೂ ಮುಖ್ಯವಾಗಿ ಅವನೊಬ್ಬ ‘ಸ್ವಾತಂತ್ಯ್ರ ಯೋಧ’ನೂ ಆಗಿದ್ದುದು ‘ನಮ್ಮ ದೇಶ’ ‘ನಮ್ಮ ಅಜ್ಜ’ ಈ ಸಂಬಂಧಕ್ಕೆ ಒಂದು ಸೂತ್ರ. ಅವನು ಬರೀ ಒಬ್ಬ ಮಾಮೂಲಿ ಅಜ್ಜನಾಗಿದ್ದರೆ ಈ ಕವನದಲ್ಲಿ ಅವನಿಗೆ ಪ್ರವೇಶವೇ ದೊರೆಯುತ್ತಿರಲಿಲ್ಲ – ಅವನು ಆಗಸ್ಟ ೧೫ ರಂದೇ ಸತ್ತಿದ್ದರೂ!.

ಕವನದ ಎರಡು ಮತ್ತು ಮೂರನೆಯ ಭಾಗದಲ್ಲಿ ‘ಸ್ವಾತಂತ್ಯ್ರ ಪೂರ್ವ’ದ ಕಾಲಘಟ್ಟ ಚಿತ್ರಿತವಾಗಿದ್ದರೆ, ನಂತರದ ನಾಲ್ಕನೆಯ ಭಾಗದಲ್ಲಿ ಕಾಣುವುದು ‘ಸ್ವಾತಂತ್ಯ್ರೋತ್ತರ’ ಘಟ್ಟದ ಚಿತ್ರ. ಈ ಸ್ಥಿತ್ಯಂತರಗಳನ್ನು ಜೋಡಿಸುವುದು ಮರದ ರೂಪಕ. ಈ ರೂಪಕವೇ ಕವನವನ್ನು ಮುನ್ನಡೆಸುತ್ತದೆ. ಬೀಜ ಹೆಮ್ಮರವಾಗಿದೆ. ಅದರ ನೆರಳಿನಲ್ಲಿ ಈಗ ನಿಂತಾಗ, ಒಂದಾನೊಂದು ಕಾಲದ ‘ನೆರಳೇ’ ಇಲ್ಲದ ದಿನಗಳೂ ನೆನಪಾಗುತ್ತವೆ. ಸ್ವಾತಂತ್ಯ್ರದ ಬೀಜವನ್ನು ಬಿತ್ತಿದ ಅಜ್ಜನಂಥ ಎಲ್ಲ ಹಿರಿಯರು ನೆನಪಾಗುತ್ತಾರೆ.

ನೆನಪು ಆಗುವುದು ಯಾರಿಗೆ?… ಸ್ವಾತಂತ್ಯ್ರ ಸಿಕ್ಕಿದ್ದು ೧೯೪೭ ರಲ್ಲಿ ಈ ಕವನ ರಚಿತವಾದದ್ದು ೧೯೯೩ ರಲ್ಲಿ. ಈ ನಾಲ್ಕೂವರೆ ದಶಕಗಳ ಅವಧಿಗೆ ಸಾಕ್ಷಿಯಾಗಿ ನಿಂತವನು ಈ ಕವಿ. ತನ್ನ ಸುತ್ತಲಿನ ವಿದ್ಯಮಾನಗಳನ್ನು ಬಿಡುಗಣ್ಣಿನಿಂದ ನೋಡುತ್ತ ನಿಂತ ಕವಿ (ಮರದ ಹಾಗೆ) ಒಂದು ರೂಪಕವಾಗಿದ್ದಾನೆ ಇಲ್ಲಿ. ನೆರಳು ಕೊಡುವ ಹೆಮ್ಮರದ ಟೊಂಗೆ ಕಡಿಯಲು ಕೊಡಲಿ ತಯಾರಾಗಿವೆ. (ಕೊಡಲಿಯ ಕಾವು ಕುಲಕ್ಕೆ ಮೂಲ – ಎಂಬ ಗಾದೆಯ ನೆನಪು ನಮಗೆ.) ಈ ಪರಶು- ಧರರನ್ನೇ ಹಿಡಿದು ಕಡಿದು ಬಿಡಲೇ?” ಎಂಬಷ್ಟು ಸಿಟ್ಟು ಬರುತ್ತದೆ” ಕವಿಗೆ.

ಹೀಗೆ ಬಂದ ಸಿಟ್ಟು .. ಮುಂದೇನು? ಅಲ್ಲಿಯೇ ಕರಗಿ ನಿಟ್ಟುಸಿರಾದೀತೇ? ಅಥವಾ ಸಿಟ್ಟು ರಟ್ಟೆಗಿಳಿದು ಏನಾದರೂ ‘ಕ್ರಿಯೆ’ ಸಂಭವಿಸೀತೆ? ನೋಡೋಣ.

ಮತ್ತೆ ಅಜ್ಜನ ನೆನಪಿನ ತೆಕ್ಕೆಗೆ ಕವಿ ಸರಿಯುತ್ತಾನೆ. ಎಲ್ಲರಿಗೂ ಬೇಕಾಗಿದ್ದ ಅಜ್ಜ ಎಲ್ಲರ ಬದುಕಿನ ಭಾಗವಾಗಿದ್ದ. ಸಮಾಜದ ಎಲ್ಲ ಅನಿಷ್ಟಗಳನ್ನು ಮೀರಿ ಬೆಳೆದಿದ್ದ ಪ್ರಾಮಾಣಿಕ ಅವನಾಗಿದ್ದ.

ಇಲ್ಲಿ ಮತ್ತೆ ನಾವು ಸುತ್ತು ಹಾಕಿ ಕವನದ ಮೊದಲ ಸಾಲುಗಳಿಗೆ ಬರುತ್ತೇವೆ ಅಲ್ಲಿ ಸೂಚ್ಯವಾಗಿ ಬಂದದ್ದು ಇಲ್ಲಿ ಸ್ಪುಟವಾಗಿದೆ: ವಾಚ್ಯವಾಗಿದೆ.

ಅದೇ ಆ ಆಗಸ್ಟ ಹದಿನೈದರ
ಸಂಭ್ರಮದಲ್ಲಿ ಮೈಮರೆತಿತ್ತು ದೇಶ ಅತ್ತ.
ಎದೆ ಸುಡುವ ಮಲಗಿದ್ದ ಅಜ್ಜ ಇತ್ತ.

ವ್ಯಕ್ತಿಗತವಾದುದು ಸಾರ್ವತ್ರಿಕವಾಗುವುದು ಕಲಾಕೃತಿಯಲ್ಲಿ ಸಹಜ ಮತ್ತು ಸಾಮಾನ್ಯ ಸಂಕೇತ, ರೂಪಕಗಳ ಧ್ವನಿಶಕ್ತಿ ಕೆಲಸ ಮಾಡುವುದೇ ಈ ನೆಲೆಯಲ್ಲಿ. ಕವನದ ಕೊನೆಯ ಹಂತದಲ್ಲಿ ಬರುವ ಈ ನಾಲ್ಕು ಸಾಲುಗಳು ನಮ್ಮ ಚಿತ್ತ ಭಿತ್ತಿಯ ಎದುರು ಸಹಜವಾಗಿಯೇ ನಮ್ಮ ಇಪ್ಪತ್ತನೆಯ ಶತಮಾನದ ‘ಅಜ್ಜ’ ನನ್ನು- ಗಾಂಧಿ ಮಹಾತ್ಮನನ್ನು – ಮೂಡಿಸುತ್ತವೆ. ಆಗಸ್ಟ ಹದಿನೈದರಂದು ದಿಲ್ಲಿಯ ಕೆಂಪುಕೋಟೆಯ ಮೇಲೆ ನಿಲುವಂಗಿಯ ಮೇಲೆ ಗುಲಾಬಿ ಧರಿಸಿದ ನೆಹರೂ ತ್ರಿವರ್ಣ

ಧ್ವಜ ಹಾರಿಸುವ ಕ್ಷಣದಲ್ಲಿ ನೌಖಾಲಿಯ ನಿರಾಶ್ರಿತರ ಶಿಬಿರಗಳಲ್ಲಿ ಕೆಂಗೆಟ್ಟ ಮುಖಗಳ ಕಣ್ಣೀರು ಒರೆಸುತ್ತ ಗಾಂಧಿ ತಿರುಗುತ್ತಿದ್ದರು; ಅವರ ‘ಎದೆ ಸುಡುವ ವ್ಯಾಧಿ’ ಏನೆಂಬುದು ದೇಶ ಬಾಂಧವರಿಗೆ ಗೊತ್ತು. ಮುಂದೆ ಐದೂವರೆ ತಿಂಗಳಲ್ಲೇ ಗಾಂಧೀ ಹತ್ಯೆಯಾಯಿತು.

ವಿಷ್ಣು ನಾಯ್ಕರ ಈ ಕವನಕ್ಕೆ ಒಂದು ಅಚ್ಚುಕಟ್ಟಾದ ಪ್ರಬಂಧದ ವಿನ್ಯಾಸವಿದೆ: ಪ್ರಾರಂಭ, ಬೆಳವಣಿಗೆ, ಅಂತ್ಯ. ಈ ಅಂತ್ಯವನ್ನು ಸೂಚಿಸುವ ಶಬ್ದ: ‘ಹೀಗಾಗಿ’ ಹೀಗಾಗಿ ಅಜ್ಜನ ಶ್ರಾದ್ಧಕ್ಕೂ ಸ್ವಾತಂತ್ಯ್ರದ ಹಬ್ಬಕ್ಕೂ ಫರಕ್ಕೆಂಬುದೇ ಉಳಿದಿಲ್ಲ ಈಗ ನಮ್ಮ ಕುಟುಂಬಕ್ಕೆ.

ಈ ಕುಟುಂಬ ಕೇವಲ ಕವಿಯದಲ್ಲ; ನಮ್ಮೆಲ್ಲರ ಕುಟುಂಬ. ನಾವೇ ಕುಟುಂಬ. ಒಂದು ದಾರುಣ ವ್ಯಂಗ್ಯವೂ ಇದೆ ಕೊನೆಯಲ್ಲಿ. ಸತ್ತ ದಿನ, ಪುಣ್ಯತಿಥಿ. ಶ್ರಾದ್ದ – ಈ ಪದಗಳೆಲ್ಲ ಸೂಚಿಸುವುದು ಒಂದು ಸಾಮಾಜಿಕ ವಿಧಿ (ರಿಚ್ಯುಆಲ್) ಯನ್ನು. ಈ ಆಚರಣೆ ಭಾವನಾರಹಿತ; ಯಾಂತ್ರಿಕ. ಬಹುಶ: ನಮ್ಮ ಆಗಸ್ಟ ಹದಿನೈದುಗಳು, ಜನವರಿ ಇಪ್ಪತ್ತಾರುಗಳು, ನವಂಬರ ಒಂದುಗಳು ಹೀಗೆ ಕೇವಲ ಆಚರಣೆಗಳಾಗಿ ಬಿಟ್ಟಿರಬಹುದೆ? ಈ ಕವಿಯ ಇಂಥ ಸಾಮಾಜಿಕ ನಿಲುವನ್ನು ಕೂಡ ನಾವು ಚರ್ಚಿಸಬಹುದು.

-೨೦೦೪