ಹನ್ನೆರಡನೆಯ ಶತಮಾನದ ಎರಡು – ಮೂರು ದಶಕಗಳ ಕಾಲ ಕನ್ನಡ ನಾಡು ಕಂಡ ಒಂದು ವಿಶಿಷ್ಟವಾದ ಚಳುವಳಿ: ಬಸವ ಚಳುವಳಿ. ಅದರ ಅಭಿವ್ಯಕ್ತಿಯಾಗಿ ಶಿವಶರಣರು ಬರೆದ ವಚನಗಳು ಮಾತ್ರ ನಮಗೆ ದಾಖಲೆಯಾಗಿ ದೊರೆತಿರುವುದರಿಂದ ಅದಕ್ಕೆ ‘ವಚನ ಚಳುವಳಿ’ ಎಂಬ ಹೆಸರನ್ನು ಕೆಲವರು ಕೊಟ್ಟರೂ. ಒಂದು ಸತ್ಯವನ್ನು ಮಾತ್ರ ನಾವು ಮರೆಯುವಂತಿಲ್ಲ: ಧಾರ್ಮಿಕ, ಸಾಮಾಜಿಕ ಆಯಾಮಗಳುಳ್ಳ ಆ ಚಳುವಳಿಯಲ್ಲಿ ಪಾಲುಗೊಂಡವರಿಗೆ ವಚನ ಸಾಹಿತ್ಯ ರಚನೆ ಒಂದು ಗುರಿಯಾಗಿರಲಿಲ್ಲ. ಚಳುವಳಿಯ ಒಂದು ಪರಿಣಾಮವಾಗಿ ವಚನಗಳು ಸೃಷ್ಟಿಯಾದವು. ಇಡೀ ಚಳುವಳಿಯುದ್ದಕ್ಕೂ ಬಸವ ಒಂದು ಕೇಂದ್ರ ಪ್ರಜ್ಞೆಯಾಗಿದ್ದರಿಂದ ಕಾಲಘಟ್ಟದ ವಿದ್ಯಮಾನಗಳನ್ನು ‘ಬಸವ ಚಳುವಳಿ’ ಎಂದು ಕರೆಯುವುದೇ ಸೂಕ್ತ.

ಅಂದಿನಿಂದ ಇಂದಿನವರೆಗೆ, ಎಂಟು ಶತಮಾನಗಳ ಕಾಲ, ‘ಬಸವ ಚಳುವಳಿ’ ಎಂಬುದು, ಸಮಾಜವನ್ನು ಚಲನಶೀಲವಾಗಿಡುವಲ್ಲಿ ಆಂದೋಲನಗಳು ಆಡುವ ಐತಿಹಾಸಿಕ ಪಾತ್ರದ ಬಗ್ಗೆ ಅಧ್ಯಯನ ಮಾಡುವವರಿಗೆ, ಆಳವಾದ ಆಸಕ್ತಿ ಮತ್ತು ಜಿಜ್ಞಾಸೆಯ ವಿಷಯವಾಗಿದೆ. ಸಾಹಿತ್ಯಿಕ ಕ್ಷೇತ್ರದ ಬಗ್ಗೆ ಹೇಳುವುದಾದರೆ, ಆಧುನಿಕ ಕನ್ನಡ ಸಾಹಿತ್ಯದ ನವೋದಯ ಮತ್ತು ನವ್ಯದ ಸಂದರ್ಭದಲ್ಲಿ ವಚನ ಸಾಹಿತ್ಯವನ್ನು ‘ಸಾಹಿತ್ಯ’ ವನ್ನಾಗಿ ಅಭ್ಯಸಿಸುವ ಬಗ್ಗೆ ಒತ್ತು ಇದ್ದರೆ, ಈಗ ಅಂದರೆ ದಲಿತ ಮತ್ತು ಬಂಡಾಯ ಸಾಹಿತ್ಯ ಚಳುವಳಿಯ ಸಂದರ್ಭದಲ್ಲಿ ವಿಶ್ಲೇಷಿಸುವ ಇಡೀ ಚಳುವಳಿಯ ಎಲ್ಲ ಮಗ್ಗಲುಗಳನ್ನು ಸಮಾಜ ವಿಜ್ಞಾನದ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಪ್ರಯತ್ನ ಪ್ರಾರಂಭವಾಗಿವೆ. ಇಂಥ ಅಧ್ಯಯನದ ಕಕ್ಷೆಯಲ್ಲಿ ಸಹಜವಾಗಿಯೇ ಆ ಚಳುವಳಿಯ ಕೇಂದ್ರ ವ್ಯಕ್ತಿಯ ವ್ಯಕ್ತಿತ್ವ ಮತ್ತು ಬದುಕು, ಅವನು ಪ್ರಚಲಿತಗೊಳಿಸಿದ ಪರಿಕಲ್ಪನೆಗಳ ಸ್ವರೂಪ, ಆ ಕಾಲದ ಸಾಮಾಜಿಕ ಪರಿಸ್ಥಿತಿಯ ಅನಿವಾರ್ಯವಾದ ಇತಿ-ಮಿತಿಗಳು ಬರುತ್ತವೆ. ಇವತ್ತಿನ ಕಾಲ ಬಿಂದುವಿನಲ್ಲಿ ನಿಂತ ಇತಿಹಾಸದ ವಿದ್ಯಮಾನವನ್ನು ನೋಡುವುದರಿಂದ ಭೂತ ಮತ್ತು ವರ್ತಮಾನದ ನಿರಂತರ ಸಂಬಂಧದ ಸ್ವರೂಪವೂ ನಿಚ್ಚಳವಾಗಬಹುದಾಗಿದೆ.

ಬೇರೆ ಭೇರೆ ವಯೋಮಾನದ, ಅನುಭವದ ಸಾಮಾಜಿಕ ಹಿನ್ನೆಲೆಯ ನೂರಾರು ಶರಣರು ಆ ಚಳುವಳಿಯಲ್ಲಿ ಪಾಲುಗೊಂಡಿದ್ದರೂ ಅವರೆಲ್ಲರಲ್ಲಿ ಒಡೆದು ಕಾಣುವ ವ್ಯಕ್ತಿತ್ವ ಬಸವಣ್ಣನದು. ಬ್ರಾಹ್ಮಣ ಕುಲದಲ್ಲಿ ಜನಿಸಿದರೂ ಅಸಮಾನತೆಯ ಮತ್ತು ಕೃತ್ರಿಮ ಶ್ರೇಷ್ಠತೆಯ ಸಂಕೇತವಾಗಿದ್ದ ಜನಿವಾರವನ್ನು ಹರಿದೊಗೆದು ಇಡೀ ವೈದಿಕ ಶಾಹಿಯ ವಿರುದ್ದ ಬಂಡಾಯ ಹೂಡಿದ ಬಸವಣ್ಣನ ವೈಶಿಷ್ಟ್ಯವಿರುವುದು. ಅವನ ಕ್ರಿಯೆ ಕೇವಲ ವೈಯಕ್ತಿಕ ಪ್ರತಿಭಟನೆಯಾಗಿ ಉಳಿಯದೆ, ಅದು ಅವನಿಂದ ಪ್ರಜ್ಞಾಪೂರ್ವಕವಾಗಿ ಮತ್ತು ಸಾಮೂಹಿಕವಾಗಿ ಸಂಯೋಜಿಸಲ್ಪಟ್ಟ ಸಮಷ್ಠಿ ಬಂಡಾಯವಾಗಿ ಮಾರ್ಪಟ್ಟಿದ್ದಲ್ಲಿ,. ಬಂಡಾಯಗಾರ ಬಸವಣ್ಣ ಒಬ್ಬ ಸೂಕ್ಷ್ಮ ಸಂವೇದನಾಶೀಲನಾದ ಪ್ರಜ್ಞಾವಂತ ವ್ಯಕ್ತಿಯೂ ಆಗಿದ್ದರಿಂದ ಅವನ ವಚನಗಳಲ್ಲಿ ಕಾಣುವ ಮಾನಸಿಕ ತೊಳಲಾಟ, ದ್ವಂದ್ವಗಳು ಅವನನ್ನು ಅವನ ಸಮಕಾಲೀನರಿಗಿಂತ ಹೆಚ್ಚು ಮಾನವೀಯ ಮತ್ತು ಆಪ್ತನೆನ್ನಿಸುವಂತೆ ಮಾಡುತ್ತವೆ. ಅಲ್ಲಮ, ಅಕ್ಕಮಹಾದೇವಿಯರಲ್ಲಿ ಕಾಣುವ ಅಮೂರ್ತತೆಯಾಗಲಿ, ದಾಸಿಮಯ್ಯ – ಚೌಡಯ್ಯ ಮುಂತಾದವರಲ್ಲಿ ಕಾಣುವ ಖಡಾಖಂಡಿತ ಖಚಿತತೆಯಾಗಲಿ ಬಸವಣ್ಣನಲ್ಲಿ ಕಡಿಮೆ. ಇದಕ್ಕೆ ಮುಖ್ಯ ಕಾರಣ, ಅವನು ಸದಾ ಪೂರ್ಣವಿರಾಮಗಳಿಂದ ಕೂಡಿದ ಸಿದ್ಧಾಂತಿಯಾಗದೆ, ಪ್ರಶ್ನಾರ್ಥಕ ಚಿಹ್ನೆಯಿಂದ ಅನ್ವೇಷಕನಾಗಿರುವುದು.

*

ಬುದ್ಧನ ನಂತರ ಮಹಾನ್ ಬಂಡಾಯಗಾರನಾದ ಬಸವಣ್ಣ ಪ್ರಾರಂಭಿಸಿದ ಈ ಚಳುವಳಿಯ ಗರ್ಭದಲ್ಲಿ ಇಡೀ ಹಿಂದೂ ಸಮಾಜವನ್ನೇ ಪಲ್ಲಟಗೊಳಿಸಬಲ್ಲ ಕ್ರಾಂತಿ ಬೀಜಗಳು ಅಡಗಿದ್ದರೂ ಕೂಡ ಆ ಬೀಜಗಳು ಮೊಳೆತು, ಭೂಮಿಯನ್ನು ಬಿರಿದು ಹೊರಬಂದು, ಸಸಿಯಾಗಿ ಗಿಡವಾಗಿ ಮರವಾಗಿ ಬೆಳೆದು ಆಕಾಶವನ್ನು ಆವರಿಸಿದವೆ?

– ಇದು ನಾವು ಕೇಳಬೇಕಾದ ಪ್ರಶ್ನೆ ಒಂದು ಚಳುವಳಿಯು ‘ಕ್ರಾಂತಿ’ ಮಾಡಿದಾಗ, ಆ ಕ್ರಾಂತಿಯಿಂದಾಗಿ ಇಡೀ ಸಮಾಜದ ಬದುಕಿನ ವಿನ್ಯಾಸವೇ ಬದಲಾಗುತ್ತದೆ; ನೋಡುವ ಕಣ್ಣು ಬದಲಾಗುತ್ತದೆ: ಮನೋಧರ್ಮ ಬದಲಾಗುತ್ತದೆ. ಆ ಕ್ರಾಂತಿಯನ್ನು ರೂಪಿಸಿದ ತತ್ವಗಳು ಪರಿಕಲ್ಪನೆಗಳು ಗಟ್ಟಿ ಪಿಂಡವಾಗಿದ್ದರೆ, ಅವು ಪೀಳಿಗೆಯಿಂದ ಪೀಳಿಗೆಗಳಿಗೆ ಕಾಲದ ಕುಲುವೆಯಲ್ಲಿ ಹದಗೊಂಡು, ಮತ್ತೆ ಮತ್ತೆ ಹೊಸ ನಾಯಕತ್ವವನ್ನು ಪಡೆದುಕೊಂಡು ಹೊಸ ಹೊಸ ರೂಪದಲ್ಲಿ ಆ ಕ್ರಾಂತಿಯನ್ನು ನಿರಂತರವಾಗಿ ಜೀವಂತವಾಗಿಡುತ್ತವೆ.

ಬಸವಣ್ಣನನ್ನು, “ಶ್ರೀ ಗುರು ಬಸವಲಿಂಗಾಯ ನಮ:” ಎಂದು ನಿಂತರೆ, ಕುಂತರೆ, ತೂಕಡಿಸಿದರೆ, ನಿದ್ದೆ ಮಾಡಿದರೆ ನೆನೆಯುವ ಇಂದಿನ ‘ಲಿಂಗಾಯತ’ ಸಮಾಜ ಏನಾಗಿದೆ? ಸುತ್ತಲೂ ಕಣ್ಣರಳಿಸಿ ವಾಸ್ತವವನ್ನು ಒಮ್ಮೆ ನೋಡಿದರೆ ಸಾಕು – ಮೂರ್ತಿ ಪೂಜೆಯನ್ನು ಧಿಕ್ಕರಿಸಿ, ಗುಡಿ ಗುಂಡಾರಗಳನ್ನು ನಿರಾಕರಿಸಿ ‘ದೇಹವೇ ದೇಗುಲ’ ಎಂದು ಸಾರಿದ ಬಸವಣ್ಣನೇ ಒಂದು ಕಲ್ಲಿನ ಮೂರ್ತಿಯಾಗಿ ಪೂಜಾರಿಗಳ ಉಪಜೀವನದ ಸಾಧನವಾಗಿಲ್ಲವೇ? ‘ಇವ ನಮ್ಮವ, ಇವ ನಮ್ಮವ’ ಎಂದು ಎಲ್ಲರನ್ನೂ ಅಪ್ಪಿಕೊಂಡ ಬಸವಣ್ಣನ ಲಿಂಗಾಯತ ಧರ್ಮದಲ್ಲಿ. ಹಿಂದೂ ಧರ್ಮದ ಎಲ್ಲಾ ಜಾತಿ – ಪಂಗಡ – ಉಪ ಪಂಗಡಗಳು, ಮೂಢ ನಂಬಿಕೆಗಳು ಮನೆ ಮಾಡಿಲ್ಲವೇ? ಹನ್ನೆರಡನೇ ಶತಮಾನದ ಬಸವಣ್ಣನ ಯಾವುದೇ ಮೂರ್ತಿಯಾಗಲಿ, ಚಿತ್ರವಾಗಲಿ ಲಭ್ಯವಿರದಿದ್ದರೂ, ಕೆಳದಿ ಅರಸು ಮನೆತನದ ಒಬ್ಬ ವ್ಯಕ್ತಿಯ ಚಿತ್ರವನ್ನೇ ಬಸವಣ್ಣ ಚಿತ್ರವೆಂದು – ಅವನನ್ನು ಅಶ್ವಾರೋಹಿಯನ್ನಾಗಿ, ಕಿರೀಟಧಾರಿಯನ್ನಾಗಿ ಮಾಡಿ – ತೋರಿಸುವ ಮಹಾಮೋಸ ಇಂದು ನಡೆದಿಲ್ಲವೇ?

ಇಂದು ನಮ್ಮ ಸುತ್ತಮುತ್ತ, ಇಬ್ಬರು ಹೆಂಡಿರನ್ನು ಮದುವೆಯಾಗಿ ತಾನೂ ಒಬ್ಬ ಬಸವಣ್ಣ ಎಂದು ಮೆರೆಯುವ ಭಂಡರಿದ್ದಾರೆ, ನ್ಯೂಜಪ್ರಿಂಟನ್ನು ಕಳ್ಳಪೇಟೆಯಲ್ಲಿ ಮಾರಾಟ ಮಾಡಿ ಇಡೀ ಪ್ರಪಂಚಕ್ಕೇ ನೀತಿ ಹೇಳುವ ಖದೀಮ ಪತ್ರಿಕಾ ಸಂಪಾದಕರಿದ್ದಾರೆ. ‘ಕಾಯಕವೇ ಕೈಲಾಸ’ ಎಂಬ ಬೋರ್ಡಿನ ಅಡಿಯಲ್ಲಿಯೇ ಕುಂತು ಸಮಾಜವನ್ನೇ ದೋಚುವ ವ್ಯಾಪಾರಿಗಳಿದ್ದಾರೆ. ಬಸವಣ್ಣವ ಬದುಕನ್ನೇ ಕತೆ – ಕಾದಂಬರಿ ಮಾಡಿ ಹೊಟ್ಟೆ ಹೊರೆದುಕೊಳ್ಳುವ ಮಠೋಪಜೀವಿ ಸಾಹಿತಿಗಳಿದ್ದಾರೆ. ಎಲ್ಲ ಅನ್ಯಾಯಗಳನ್ನೂ ಘಂಟಾ ಘೋಷವಾಗಿ ಖಂಡಿಸಿದರೂ, ತಮ್ಮಂಥವನೇ ಒಬ್ಬ ‘ಅತ್ಯಾಚಾರ’ ಎಸಗಿದಾಗ (ಉದಾ: ಕುದರಿಮೋತಿ ಸ್ವಾಮಿ) ಬಂಗಾರದ ಮೌನ ತಳೆಯುವ ಮಠಾಧಿಪತಿಗಳಿದ್ದಾರೆ: ‘ಎನಗಿಂತ ಕಿರಿಯರಿಲ್ಲ’ – ಎಂಬ ವಚನ ಹಾಡುತ್ತಲೇ ರತ್ನ ಖಚಿತ ಸಿಂಹಾಸನಗಳಲ್ಲಿ ಮೆರೆಯುವ ಕಾಂಟೆಸ್ಸಾ ‘ಜಗದ್ಗುರು’ ಗಳಿದ್ದಾರೆ. ಅತ್ಯಂತ ದೊಡ್ಡ ದುರಂತವೆಂದರೆ, ಬಸವಣ್ಣನ ಭಕ್ತರೆಂದು ಹೇಳಿಕೊಳ್ಳುವ ಅನೇಕ ಲಿಂಗಾಯತ ಗಣ್ಯರು ಇಂದು ಈ ದೇಶದ ಕೋಮುವಾದಿ ಪಕ್ಷವೊಂದರ ಬಾಲ ಬಡುಕರಾಗಿದ್ದಾರೆ ಬೆನ್ನು ಮೂಳೆಯಾಗಿದ್ದಾರೆ.

*

ಪಂಡಿತರ ಭಾಷೆಯಾದ ಸಂಸ್ಕೃತವನ್ನು ಧಿಕ್ಕರಿಸಿ ಈ ನಾಡಿನ ಜನಭಾಷೆಯಾದ ಕನ್ನಡವನ್ನೇ ವಚನಕಾರರು ಬಳಸಿಕೊಂಡದ್ದು ಕನ್ನಡ ಸಾಹಿತ್ಯದ ಮಟ್ಟಿಗೆ ಕ್ರಾಂತಿಕಾರಕ ಕ್ರಮವೇ, ಈ ಎಂಟು ನೂರು ವರ್ಷಗಳುದ್ದಕ್ಕೂ ಅದರ ಅರ್ಥಪೂರ್ಣ ಪರಿಣಾಮವನ್ನು ಕಾಣುತ್ತಲೇ ಬಂದಿದ್ದೇವೆ. ಈ ಬಗೆಯ ಸಾಹಿತ್ಯಿಕ ಪರಿಣಾಮ ಅತ್ಯಂತ ಸೂಕ್ಷ್ಮವೂ ಗುಪ್ತವೂ ಆಗಿರುತ್ತದೆ. ಕನ್ನಡ ಸಾಹಿತ್ಯಕ್ಕೆ ಇಂಥ ಜೀವದ್ರವ್ಯವನ್ನು ಕೊಟ್ಟ ಬಸವ ಚಳುವಳಿ, ಅದೇ ಪ್ರಮಾಣದ ಪ್ರಭಾವವನ್ನು ತಾನು ಗುರಿಯಾಗಿಸಿಕೊಂಡಿದ್ದ ಆದರ್ಶ ಸಮಾಜವನ್ನು ಕಟ್ಟುವಲ್ಲಿ ಯಾಕೆ ಸೋತಿರಬಹುದು? ರಂಗಭೂಮಿಯಿಂದ ಬಸವಣ್ಣ ನಿರ್ಗಮಿಸಿದ ಮೇಲೆ ಮತ್ತೆ ವೈದಿಕಶಾಹಿಯ ಮೌಲ್ಯಗಳು ವಿಜೃಂಭಿಸಿ, ‘ಲಿಂಗಾಯತ’ ಎಂಬುದು ಹಿಂದೂ ಧರ್ಮದ ಮತ್ತೂ ಒಂದು ಶಾಖೆಯೇನೋ ಎಂಬಂತೆ ಯಾಕೆ ಪರಿವರ್ತಿತವಾಯಿತು? ಬಸವ ಚಳುವಳಿಯನ್ನು ಸಮಕಾಲೀನ ಬ್ರಾಹ್ಮಣ ಮತ್ತು ಜೈನ ಶಕ್ತಿಗಳು ಕೊಂದು ಹಾಕಿದವು ಎಂಬುದು ಎಷ್ಟರ ಮಟ್ಟಿಗೆ ಸರಿ? ಪುರೋಹಿತಶಾಹಿ ಮೌಲ್ಯಗಳ ದಾಳಿಯನ್ನು ಬಸವ ಚಳುವಳಿ ಮೌಲ್ಯಗಳು ಎದುರಿಸಲು ಯಾಕೆ ಸಾಧ್ಯವಾಗಲಿಲ್ಲ?

ಇಂಥ ಪ್ರಶ್ನೆಗಳು ಎದುರಾದಾಗ ಬಸವ ಚಳುವಳಿಯ ಮೂಲ ಪರಿಕಲ್ಪನೆಗಳನ್ನು ಮತ್ತೊಮ್ಮೆ ಬೇರೆ ಬೇರೆ ಆಯಾಮಗಳಿಂದ ಪರೀಕ್ಷಿಸುವುದು ಒಳ್ಳೆಯದು ಒಂದು ಚಳುವಳಿಯ ಯಶಸ್ಸು ಅಥವಾ ಅಪಯಶಸ್ಸು ಅದರ ಸಿದ್ದಾಂತ (ಮೂಲ ಆಶಯಗಳು, ಸಾಧಿಸ ಬಯಸಿದ ಉದ್ದೇಶಗಳು ಮುಂ), ಸಂಘಟನೆ (ಉದ್ದೇಶಗಳ ಈಡೇರಿಕೆಗಾಗಿ ಜನಶಕ್ತಿಯ ಕ್ರೋಡೀಕರಣ) ಮತ್ತು ಸಂಘರ್ಷ (ನಿರ್ದಿಷ್ಟ ಸಂದರ್ಭಗಳಲ್ಲಿ ತುರ್ತಾಗಿ ಬಳಸುವ ಕಾರ್ಯತಂತ್ರ) – ಈ ಮೂರು ನೆಲೆಗಳ ಮೇಲೆ ಅವಲಂಬಿಸಿರುತ್ತದೆ. ಇವುಗಳಲ್ಲಿ ಯಾವ ಒಂದು ನೆಲೆಯಲ್ಲಿಯಾದರೂ ಬಿರುಕು ಕಂಡರೂ ಅದು ಇಡೀ ಚಳುವಳಿಯ ಹಿನ್ನಡೆ ಅಥವಾ ಸೋಲಿಗೆ ಕಾರಣವಾಗಬಹುದು.

‘ಕಾಯಕ’ ಎಂಬುದು ಬಸವ ಚಳುವಳಿಯ ಮೂಲತತ್ವ ಮನುಷ್ಯನ ವ್ಯಕ್ತಿತ್ವವನ್ನೇ ಹೋಳು ಮಾಡಿ, ‘ಬುದ್ಧಿಶಕ್ತಿ’ ಶ್ರೇಷ್ಠವೆಂದೊ ‘ದೈಹಿಕ ಶ್ರಮ’ ಕನಿಷ್ಠವೆಂದೂ ಪ್ರತಿಪಾದಿಸಿದ ವೈದಿಕ ಶಾಹಿಗೆ” ದುಡಿಯುವುದು ನಿಮ್ಮ ಕರ್ಮ: ತಿನ್ನುವುದು ನಮ್ಮ ಧರ್ಮ” ಎಂಬುದೇ ಮೂಲ ಮಂತ್ರವಾಗಿದ್ದಾಗ, ಕಾಯಕವೇ ಕೈಲಾಸವೆಂದು ಹೇಳಿ, ‘ಶ್ರಮ’ ಕ್ಕೆ ತಕ್ಕ ಗೌರವವನ್ನು ತಂದುಕೊಟ್ಟಿದ್ದು ಕಾಯಕ ತತ್ವದ ಮಹತ್ವ ಇಡೀ ಸಮಾಜದ ದುಡಿಮೆಯ ಫಲಾನುಭವಿಗಳಾದ ಪುರೋಹಿತರ ಬುಡಕ್ಕೆ ಬೆಂಕಿ ಹಚ್ಚಿದ ಪರಿಕಲ್ಪನೆ ಇದು.

ನಮ್ಮ ದೇಶದಲ್ಲಿ ವೃತ್ತಿಗಳೇ ಜಾತಿಗಳಾಗಿ ಮಾರ್ಪಟ್ಟು, ಜಾತಿಯ ತಾರತಮ್ಯ ವೃತ್ತಿಗಳಿಗೂ ತಗುಲಿ, ಅವುಗಳಲ್ಲಿಯೂ ಮೇಲು – ಕೀಳು ಎಂಬ ಭೇದ ಉಂಟಾಗಿ ಬಹುಸಂಖ್ಯಾತ ಶ್ರಮಜೀವಿ ವರ್ಗಗಳು ಕೀಳರಿಮೆಯಲ್ಲಿ ನರಳುತ್ತಿದ್ದಾಗ. ‘ಕಾಯಕ’ದ ಮೌಲ್ಯ ಆ ವರ್ಗಗಳಿಗೆಲ್ಲ ಅಪರೂಪದ ಸಮಾಧಾನವನ್ನೂ, ಆತ್ಮಸ್ಥೈರ್ಯವನ್ನೂ, ಸ್ವಾಭಿಮಾನವನ್ನೂ ತಂದು ಕೊಟ್ಟಿತು. ಇಡೀ ಮನೋಧರ್ಮವನ್ನೇ ಪಲ್ಲಟಗೊಳಿಸಿದ ಈ ಬೆಳವಣಿಗೆಯಿಂದಾಗಿ ಅವರವರಿಗೆ ಕಾಯಕಗಳೇ ಶ್ರೇಷ್ಠವಾದವು, ‘ನಾನು ಉಳಿದವರಿಗಿಂತ ಕಡಿಮೆಯಿಲ್ಲ.- ಎಂಬ ಆತ್ಮ ಪ್ರತ್ಯಯ ಬೆಳೆಯಿತು.

ಗಮನಿಸಬೇಕಾದ ಒಂದು ಮುಖ್ಯ ಅಂಶವೆಂದರೆ, ಕಾಯಕಗಳಲ್ಲಿ ‘ಸಮಾನತೆ’ ಎಂಬುದು ನಿರ್ಧಾರಿತವಾಗುವುದು ಕೇವಲ ಕಾಯಕಗಳ ಬಗ್ಗೆ ಕಾಯಕ ಜೀವಿಗಳು ತಳೆಯುವ ‘ಮನೋಧರ್ಮ’ ದಿಂದಲ್ಲ: ಆ ಕಾಯಕಗಳು ತರುವ ‘ಪ್ರತಿಫಲ’ದಿಂದ ಒಬ್ಬ ಮಡಿವಾಳನ ಒಂದು ತಾಸಿನ ಶ್ರಮಕ್ಕೂ ಒಬ್ಬ ಪಂಡಿತನ ಒಂದು ತಾಸಿನ ಶ್ರಮಕ್ಕೂ ಒಂದೇ ರೀತಿಯ ಪ್ರತಿಫಲವಿರುವುದಿಲ್ಲ. ಯಾರೇ ಆಗಲಿ ಯಾವ ಕಾಯಕವನ್ನಾದರೂ ಮಾಡಬಹುದಾದ ಸ್ವಾತಂತ್ಯ್ರ ಮತ್ತು ಅವಕಾಶವಿದ್ದಾಗ ಮಾತ್ರ ಇಡೀ ಸಮುದಾಯದ ಶಕ್ತಿಯ ಸದ್ವಿನಿಯೋಗವಾಗಿ ಆ ಸಮಾಜ ಸದಾ ಚಲನಶೀಲವಾಗಿರಬಲ್ಲದು. ನಮ್ಮ ದೇಶದಲ್ಲಿ ಚಲನಶೀಲವಾದ ವರ್ಗ (class) ಬರಬರುತ್ತ ಹೆಪ್ಪುಗಟ್ಟಿ, ಚಲನೆ ಕಳಕೊಂಡು, ಜಾತಿ (caste) ಯಾಗಿ ಮಾರ್ಪಟ್ಟಿದ್ದೇ ಒಂದು ಮಹಾದುರಂತವೆಂದು ಹೇಳುತ್ತೇವೆ ನಾವು. ಬಸವ ಚಳೂವಳಿಯ ಕಾಯಕ ತತ್ವವು ಒಂದು ನೆಲೆಯಲ್ಲಿ ‘ಶ್ರಮ’ಕ್ಕೆ ಕಾಯಕ ಸ್ವರೂಪವನ್ನಿತ್ತು ಆಧ್ಯಾತ್ಮಿಕ ನೆಲೆಯಲ್ಲಿ ಸಮಾನತೆಯನ್ನು ತರುವುದರ ಜೊತೆಗೇ, ಆ ‘ಶ್ರಮ’ವನ್ನು ಭೌತಿಕ ನೆಲೆಯಲ್ಲಿ (ಅಂದರೆ, ಅದರ ಪ್ರತಿಫಲದ ನೆಲೆಯಲ್ಲಿ) ನೋಡುವಲ್ಲಿ ಸೋತಿದ್ದರಿಂದಾಗಿ, ಮಡಿವಾಳ ಮಡಿವಾಳನಾಗಿಯೇ ಮುಂದುವರೆದ: ಬ್ರಾಹ್ಮಣ ಬ್ರಾಹ್ಮಣನಾಗಿಯೇ ಮುಂದುವರೆದ. ಇದರಿಂದಾಗಿ ಜಾತಿ – ಆಧಾರಿತ ಹಿಂದೂ ಧರ್ಮದ ಮೂಲ ವಿನ್ಯಾಸದಲ್ಲಿ ಯಾವ ಬದಲಾವಣೆಯೂ ಆಗದೆ, ಯಥಾಸ್ಥಿತಿ ಮುಂದುವರೆಯಿತು. ಹನ್ನೆರಡನೇ ಶತಮಾನದಲ್ಲಿ ಅತ್ಯುತ್ಸಾಹದಿಂದ ಲಿಂಗಧಾರಣೆ ಹೊಂದಿದ್ದ ಆವತ್ತಿನ ಅನೇಕ ಕೆಳವರ್ಗಗಳು ಇವತ್ತಿಗೂ ಅವೇ ಅವೇ ವೃತ್ತಿಯಲ್ಲಿ, ಅದೇ ಅದೇ ಸಾಮಾಜಿಕ ಕೀಳರಿಮೆಯಲ್ಲಿ ಮುಂದುವರೆದಿರುವುದು ನಾವು ಕಾಣುತ್ತಿರುವ ಸತ್ಯವೇ ಆಗಿದೆ. ಬಸವ ಚಳುವಳಿಯ ಮೂಲಾಧಾರವಾದ ‘ಕಾಯಕ’ ಪರಿಕಲ್ಪನೆಯ ಈ ಆಂತರಿಕ ದೌರ್ಬಲ್ಯದಿಂದಾಗಿಯೇ, ಬಸವೋತ್ತರ ಅವಧಿಯಲ್ಲಿ ಪುರೋಹಿತಶಾಹಿ ಮೌಲ್ಯಗಳು ಈ ಚಳುವಳಿಯನ್ನು ನುಂಗಿ ನೀರು ಕುಡಿಯಲು ಸಾಧ್ಯವಾದದ್ದು.

‘ನೀನು ಯಾರೇ ಆಗಿರು; ದುಡಿದು ತಿನ್ನು; ಹೆರವರ ದುಡಿತದ ಮೇಲೆ ಬದುಕಬೇಡ’ ಎಂದು ನಿರ್ದಾಕ್ಷಿಣ್ಯವಾಗಿ ಸಾರಿ, ಬಿಟ್ಟಿಯಾಗಿ ಬದುಕುತ್ತಿದ್ದ ಪುರೋಹಿತ ವರ್ಗದ ಹೊಟ್ಟೆಯ ಮೇಲೆ ಕಾಲು ಕೊಟ್ಟ ಬಸವತತ್ವ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ಸಂಗ್ರಹ’ ಪ್ರವೃತ್ತಿಯ ವಿರುದ್ದವೂ ನಿಲುವು ತಾಳಿ. “ನಿನಗೆ ಸಿಕ್ಕ ಪ್ರತಿಫಲದಲ್ಲಿ ನಿನಗೆಷ್ಟು ಬೇಕೋ ಅಷ್ಟನ್ನು ಮಾತ್ರ ಇಟ್ಟುಕೊಂಡು, ಮಿಕ್ಕದ್ದನ್ನು ಸಮಾಜಕ್ಕೆ ಕೊಡು” ಎಂದು ಹೇಳಿತು. ಮನುಷ್ಯನ ದುರಾಶೆ. ಅಹಂಕಾರ ಅದರಿಂದಾಗಿ, ಶೋಷಣೆ ಇತ್ಯಾದಿಗಳನ್ನು ನಿಗ್ರಹಿಸಿದ ಈ ತತ್ವ ಅಭಿನಂದನೀಯವೇ ಆದರೆ ಪ್ರತಿಯೊಬ್ಬ ಕಾಯಕಜೀವಿ ತನಗೆ ಹೆಚ್ಚುವರಿ ಅನ್ನಿಸಿದ ಹಣವನ್ನು ಸಮಾಜಕ್ಕೆ ಅರ್ಪಿಸಿದ ನಂತರ. ಅಪಾರವಾಗಿ ಸಂಗ್ರಹವಾದ ಆ ಹಣ ‘ದಾಸೋಹ’ಕ್ಕಾಗಿ ಖರ್ಚಾಗುತ್ತಿತ್ತು. ಇಡೀ ಸಮುದಾಯಕ್ಕೆ ಜ್ಞಾನದ ಬೆಳಕು ನೀಡುತ್ತ ಸದಾ ಸಂಚಾರಿಗಳಾಗಿರುತ್ತಿದ್ದ ಜಂಗಮ ವರ್ಗಕ್ಕೆ ಇಂಥದೊಂದು ದಾಸೋಹ ಅನಿವಾರ್ಯವಾಗಿತ್ತು. ಅದು ಅವರಿಗೆ ಸಮಾಜ ಸಲ್ಲಿಸಬೇಕಾದ ಋಣವಾಗಿತ್ತು.

ಆದರೆ ಗಟ್ಟಿಯಾಗಿ ಸ್ಥಾಪಿತಗೊಂಡ ಇಂಥ ಪದ್ಧತಿಯಿಂದಾಗಿ ಮುಂದೇನಾಯಿತು? ಚಳುವಳಿಯ ಕ್ರಿಯಾಶೀಲ ಘಟ್ಟ ಮುಗಿದ ನಂತರದ ಕಾಲಾವಧಿಯಲ್ಲಿ. ಈ ಜಂಗಮ ವರ್ಗ ಕೂಡ ತನ್ನ ಚಲನಶೀಲತೆಯನ್ನು ಕಳಕೊಂಡು, ಅದೂ ಒಂದು ‘ಜಾತಿ’ ಯಾಗಿಯೇ ಹೆಪ್ಪುಗಟ್ಟಿ, ತನ್ನ ಮೂಲ ಕಾಯಕವಾದ ಸಮಾಜ ಜಾಗೃತಿಯನ್ನೂ ಮರೆತು, ಕೇವಲ ಹೆರವರ ಪರಿಶ್ರಮದ ಮೇಲೆ ಬದುಕುವ ಮತ್ತೊಂದು ಪುರೋಹಿತಶಾಹಿಯಾಯಿತು: ಮಠಗಳನ್ನು ಸ್ಥಾಪಿಸಿ, ಆಸ್ತಿ ಪಾಸ್ತಿ ಮಾಡಿಕೊಂಡು ‘ಸ್ಥಾವರ’ವಾಯಿತು…… ಕರ್ನಾಟಕದ ಜಂಗಮರು ಈಗ ಯಾವ ಅಧೋಗತಿಗೆ ಇಳಿದಿರುವರೆಂದರೆ, ‘ಬೇಡಜಂಗಮ’ ಎಂಬ ಒಂದು ಯಾವುದೋ ಪರಿಶಿಷ್ಟ ವರ್ಗದ ಹೆಸರಿನಲ್ಲಿ ಖೊಟ್ಟಿ ಸರ್ಟಿಫಿಕೇಟು ಪಡೆದುಕೊಂಡು ಆ ವರ್ಗಕ್ಕೆ ಸಂವಿಧಾನವಿತ್ತ ಮೀಸಲಾತಿ ಅನುಕೂಲಗಳನ್ನು ಲಪಟಾಯಿಸಲು ಸಂಘಟಿತ ಪ್ರಯತ್ನ ಮಾಡುತ್ತಿದ್ದಾರೆ.

ಸೈದ್ಧಾಂತಿಕ ಪಾತಳಿಯಲ್ಲಿ ಹೀಗೆ ಮೂಲಭೂತವಾದ ಬಿರುಕು ಹೊಂದಿದ ಬಸವ ಚಳುವಳಿ ‘ಭವಿ’ ಮತ್ತು ‘ಭಕ್ತ’ ಎಂಬ ತಾರತಮ್ಯದಿಂದಾಗಿ ‘ಸಮಾನತೆ’ಯ ವಿಷಯದಲ್ಲೂ ದೋಷಪೂರ್ಣವಾಗಿತ್ತೆಂದು ತೋರುತ್ತದೆ. ಸಂಘಟನೆ ಕೂಡ ಅಷ್ಟು ಸಮರ್ಪಕವಾಗಿರದಿದ್ದರಿಂದ, ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಅದು ನಿಯಂತ್ರಣ ತಪ್ಪಿ ಉಗ್ರಗಾಮಿಗಳು ಕೈ ಮೇಲಾಗಿ ಗಟ್ಟಿಯಾಗಿ ಇದ್ದಿದ್ದರೆ ಶರಣರ ಸಮೂಹ ಶಕ್ತಿಗೆ ತಾತ್ಕಾಲಿಕ ಹಿನ್ನಡೆ ಉಂಟಾಗಿದ್ದರೂ ಅದು ಮತ್ತೆ ಭೂಗತ ರೀತಿಯ ಶಕ್ತಿ ಸಂಚಯ ಮಾಡಿಕೊಂಡು ಹೋರಾಟದ ಮತ್ತೊಂದು ಹಂತ ತಲುಪಬಹುದಿತ್ತು. ಆದರೆ ಇಂಥ ಉಲ್ಲೇಖ ಎಲ್ಲೂ ದಾಖಲಾಗಿಲ್ಲ.

ಕೋಲಾಹಲದ ಈ ಘಟದಲ್ಲಿ ಬಸವಣ್ಣನ ಪಾತ್ರವೇನು – ಎಂಬುದು ಎಲ್ಲೂ ಸ್ಪಷ್ಟವಾಗಿಲ್ಲ. ಕಲ್ಯಾಣವನ್ನು ತೊರೆದು ಹೋಗದೆ ಬಸವಣ್ಣ ಅಲ್ಲಿಯೇ ನೆಲೆ ನಿಂತಿದ್ದರೆ, ಚಳುವಳಿಗೊಂದು ನಾಯಕತ್ವದ ಭರವಸೆ ದೊರೆತು, ಅದು ಇನ್ನೂ ಗಟ್ಟಿಗೊಳ್ಳುವ ಸಾಧ್ಯತೆ ಇತ್ತು. ಬಸವಣ್ಣನ ಅಂತ್ಯ ಅಕಾಲಿಕವಾಗಿತ್ತು. ತೀರ ಚಿಕ್ಕ ವಯಸ್ಸಿನಲ್ಲಿಯೇ ಧೀರ ಚೇತನವೊಂದು ಕಣ್ಮರೆಯಾಯಿತು. ಈ ಅಂತ್ಯದ ಸ್ವರೂಪ ಅಸ್ಪಷ್ಟವಾಗಿಯೇ ಇದೆ. ಮನುಷ್ಯನಿಗೆ ಸಾವು ಬರುವುದು ಮುಪ್ಪು, ರೋಗ, ಅಪಘಾತಗಳಿಂದ; ಇವು ತಪ್ಪಿದರೆ ಆತ್ಮಹತ್ಯೆ ಅಥವಾ ಕೊಲೆಯಿಂದ. ಸೂಕ್ಷ್ಮ ಸಂವೇದನಾಶೀಲನಾದ ಬಸವಣ್ಣ. (೧೯೪೭ ಘಟ್ಟದ ನಮ್ಮ ಗಾಂಧೀಜಿಯಂತೆ) – ಭ್ರಮನಿರಸನ ಹೊಂದಿ ಆತ್ಮಹತ್ಯೆ ಮಾಡಿಕೊಂಡಿರಬಹುದೆ? ಅಂಥ ಹೇಡಿ ಅವನಲ್ಲ ಎಂಬುದಾದರೆ, ವೈರಿಗಳ ಸೈನ್ಯ ಅವನನ್ನು ಕೊಂದುಹಾಕಿರಬಹುದೆ?…. ಇವು ಸಹಜವಾಗಿ ಉದ್ಭವಿಸುವ ಪ್ರಶ್ನೆಗಳೇ. ಇತಿಹಾಸ ಅಸ್ಪಷ್ಟವಾಗಿದ್ದಾಗ ಇಂಥ ಪ್ರಶ್ನೆಗಳು ಸಹಜ. ಕೆಲವು ಭಾವುಕರು, ‘ಬಸವಣ್ಣ ಕುಂತಕುಂತಲ್ಲಿಯೇ ಸಹಜ ಸಮಾಧಿಯೋಗ ತಲುಪಿ ಲಿಂಗೈಕ್ಯವಾದನು ಎಂದು ನಂಬಿದ್ದರೆ, ಆ ನಂಬಿಗೆಯೂ ವಿನಾಕಾರಣವೆಂದು ಹೇಳಲು ಬರುವಂತಿಲ್ಲ ಬಸವಣ್ಣನ ಸಾವು ಹೇಗೆ ಸಂಭವಿಸಿತು ಎಂಬುದನ್ನು ಸಂಶೋಧಕರಿಗೆ ಬಿಟ್ಟುಕೊಟ್ಟು. ಬಸವಣ್ಣನ ಬದುಕು ಹೇಗಿತ್ತು ಎಂಬುದರ ಕಡೆಗೆ ಗಮನ ಹರಿಸುವುದು ಒಳ್ಳೆಯದು.

ಈ ದೇಶದಲ್ಲಿ ಸಾವಿರಾರು ವರ್ಷಗಳಿಂದ ಬೇರುಬಿಟ್ಟು ವೈದಿಕಶಾಹಿ ಫ್ಯಾಶಿಸ್ಟ ಶಕ್ತಿಯು ತನ್ನನ್ನು ಪ್ರಶ್ನಿಸಿದವರನ್ನು ನಾಶ ಮಾಡಲು ಸಾಧ್ಯವಿದ್ದಷ್ಟೂ ಪ್ರಯತ್ನಿಸುತ್ತದೆ. ಅದು ಸಾಧ್ಯವಾಗದಿದ್ದರೆ ಅವರನ್ನು ತನ್ನೊಳಗೆ ಜೀರ್ಣಿಸಿಕೊಂಡು ಬಿಡುತ್ತದೆ. ಬುದ್ಧನನ್ನು ವಿಷ್ಣುವಿನ ಅವತಾರವನ್ನಾಗಿ ಮಾಡಿದ್ದು ಇದೇ ಕಾರ್ಯತಂತ್ರದ ಒಂದು ಭಾಗವಾಗಿ, ಬಸವಣ್ಣನನ್ನು ಕೂಡ ಕಬಳಿಸಲು ಇದೇ ತಂತ್ರ ಅನುಸರಿಸಲಾಗುತ್ತಿದೆ. ವೈದಿಕಶಾಹಿಯ ಮತ್ತೊಂದು ರೂಪವಾದ ನಮ್ಮ ಪಂಚಾಚಾರ್ಯರು ಬಸವಣ್ಣನನ್ನು ತಮ್ಮ ಸಮಾನವಾಗಿ ಎಂದೂ ನೋಡಲು ಸಾಧ್ಯವಿಲ್ಲ. ಭಕ್ತರ ಹೆಗಲ ಮೇಲಿನ ಅಡ್ಡಪಲ್ಲಕ್ಕಿಗಳಲ್ಲಿ ಸಿಂಗರಿಸಿದ ಶವಗಳ ಹಾಗೆ ಅಟ್ಟಹಾಸದಿಂದ ಮೆರೆಯುವ ಈ ಡಾಂಭಿಕ ಮಠಾಧಿಪತಿಗಳು ಶತಮಾನಗಳುದ್ದಕ್ಕೂ ಪರಿ ಪರಿಯ ರೀತಿಯಲ್ಲಿ ‘ಬಸವನಿಂದೆ’ ಯನ್ನೇ ಕಾಯಕ ಮಾಡಿಕೊಂಡಿರುವುದು ಸಹಜ.

ಇಂಥ ಪ್ರತಿಗಾಮಿ ಶಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಬಸವ ಚಳುವಳಿಯನ್ನು ವಾಚಾಮಗೋಚರವಾಗಿ ಬೈಯುವುದಕ್ಕೂ, ಸಮಾಜವಾದಿ ತತ್ವದಲ್ಲಿ ನಂಬಿಕೆ ಇರುವವರು ಸೈದ್ಧಾಂತಿಕ ನೆಲೆಯಲ್ಲಿ ಬಸವ ಚಳುವಳಿಯನ್ನು ವಿಮರ್ಶಿಸುತ್ತ ತಮ್ಮ ತಮ್ಮ ಕಾಲಘಟ್ಟದ ಸಮಾನತಾ ಚಳಿವಳಿಗಳನ್ನು ಇತಿಹಾಸದ ಅರಿವಿನಲ್ಲಿ ಮುನ್ನಡೆಸಲು ಪ್ರಯತ್ನಿಸುವುದಕ್ಕೂ ಇರುವ ಮೂಲಭೂತ ಗುಣಾತ್ಮಕ ಅಂತರವನ್ನು ಪ್ರಾಜ್ಞರು ಗಮನಿಸಬೇಕು. ದಿನ ನಿತ್ಯದ ವ್ಯವಹಾರದಲ್ಲಿ ಬಸವ ತತ್ವಗಳನ್ನು ಉಲ್ಲಂಘಿಸುತ್ತಲೇ, ಬಸವಣ್ಣನನ್ನು ಭಕ್ತಿ ಭಂಡಾರಿಯನ್ನಾಗಿಯೋ ನಂದಿಯ ಅವತಾರವಾಗಿಯೋ ಮಹಾರಾಜನನ್ನಾಗಿಯೋ ತಲೆಯ ಮೇಲೆ ಹೊತ್ತುಕೊಂಡು ಮೆರೆಯುವವರೇ ಬಸವಣ್ಣನ ನಿಜವಾದ ಕೊಲೆಗಾರರು ಎಂಬ ವಸ್ತುನಿಷ್ಠ ಸತ್ಯವನ್ನು ನಾವಿಂದು ಅರಿಯಬೇಕಾಗಿದೆ.

-೧೯೯೪