೧೯೮೯ರ ಎರಡನೆಯ ದಿನ, ಹೊಸವರುಷ ಹೊಡಮರಳಿ ಇನ್ನೂ ನಲವತ್ತು ತಾಸು ಉರುಳಿರಲಿಲ್ಲ. ನಾನು ಹಿರಿಯೂರಿನ ಒಂದು ಹೋಟೆಲ ಮುಂಭಾಗದಲ್ಲಿ ನೆರಳಲ್ಲಿ ನಿಂತು ಕಣ್ಣೆದುರಿಗೆ ಒಂದು ದೃಶ್ಯವನ್ನೇ ನೋಡುತ್ತಿದ್ದೆ.

ಎದುರಿನ ಅಂಗಡಿ ಸಾಲಿನಲ್ಲಿ ಒಂದು ಅಂಗಡಿ ಮುಚ್ಚಿದೆ. ಅವತ್ತು ಸೂಟಿ ಇರಬೇಕು. ಧೂಳು ಅಡರಿದ ಒಂದು ಪಾವಟಣಿಗೆಯ ಮೇಲೆ ಒಬ್ಬ ಮಲಗಿದ್ದಾನೆ. ಮಟ ಮಟ ಮಧ್ಯಾಹ. ಅವನು ಉಟ್ಟಿದ್ದ ಕಿಮಟು ಧೂತರವೇ ಅವನ ಮೈ ಮುಚ್ಚಿದ ವಸನ, ಹೊಟ್ಟೆಗೆ ಮಂಡಿ ಒತ್ತಿಕೊಂಡು, ಬಲಗೈಯನ್ನೇ ತಲೆದಿಂಬಾಗಿ ಬಳಸಿಕೊಂಡು ಮಲಗಿದ ಅವನು ಆ ಮಣ್ಣಿನ ಜಗತ್ತಿನ ಒಂದು ಭಾಗವೇ ಆಗಿದ್ದಾನೆ. ಅವನು ಬಾಳೆಹಣ್ಣಿನ ಸಿಪ್ಪೆಯೊಂದನ್ನು ಒಗೆಯುತ್ತಾನೆ. ತಕ್ಷಣವೇ ಒಂದು ಹುಡುಗಿ.. ಅವಳೂ ಮಣ್ಣಿನ ಗೊಂಬೆಯೇ! – ಅರಬಡಿಸಿ ಬಂದು ಆ ಸಿಪ್ಪೆಯನ್ನು ಉಗುರಿನಿಂದ ಗೀರಿ ಗೀರಿ ಬಾಯಿಗಿಟ್ಟುಕೊಳ್ಳುತ್ತಾಳೆ. ಈ ಕಡೆ ಐದಾರು ಫೂಟು ದೂರದಲ್ಲಿ ಒಂದು ಅರಿವೆಯ ಗಂಟು. ಅಲ್ಲ ಮತ್ತೊಬ್ಬ ಹುಡುಗಿ – ಸ್ವಲ್ಪ ದೊಡ್ಡವಳು. ಅವಳು ಎದ್ದು ಸಾವರಿಸಿಕೊಂಡು ಈ ಕಡೆ ಬಂದಾಗ ಒಬ್ಬ ದೊಡ್ಡ ಹೆಣ್ಣುಮಗಳು ಒಂದು ಕೂಸನ್ನು ಎದೆಗವಚಿಕೊಂಡು ಅಂಗಾತ ಮಲಗಿದ್ದಾಳೆ. ಕೂಸು ಮೊಲೆ ಹೀರುತ್ತ ಆಟವಾಡುತ್ತಿದೆ. ದೊಡ್ಡ ಹುಡುಗಿ ಚಿಕ್ಕ ಕೂಸನ್ನು ಎತ್ತಿಕೊಂಡು ಮತ್ತೆ ಅರಿವೆ ಗಂಟಿನ ಹತ್ತಿರ ಹೋಗಿ ಅಂಗಾತಾಗಿ ಮಲಗಿ ಆ ಕೂಸನ್ನು ‘ಆನೆ’ ಆಡಿಸುತ್ತಾಳೆ. ಕಪ್ಪು ಬಣ್ಣದ ಕೂಸು ತನ್ನ ಕಡ್ಡಿ ಕೈಗಳಿಂದ ಆ ಹುಡುಗಿಯ ಮೋರೆ ಚೂಟುತ್ತ ಆಟ ಆಡುತ್ತಿದೆ. ತಾಯಿ ಹಾಗೆಯೇ ಅಂಗಾತ ಮಲಗಿದ್ದಾಳೆ. ತಂದೆ ಪಾವಟಣಿಗೆಯ ಮೇಲೆ ಮಂಡಿ ಮಡಿಚಿಕೊಂಡು ಹಾಗೆಯೇ ಬಿದ್ದಿದ್ದಾನೆ. ನಾನು ನಿಂತು ನೋಡುತ್ತಿದ್ದೆ

ನಾನೊಬ್ಬ ಬರಹಗಾರ ಕವಿ, ನಾಟಕಕಾರ, ಅಂತೂ ಒಬ್ಬ ಕಲಾವಿದ, ಕಲಾವಿದನಿಗೆ ಸೂಕ್ಷ್ಮ ಸಂವೇದನೆ ಇರುತ್ತದೆ ಅನ್ನುತ್ತಾರೆ. ಇತರರ ‘ವೇದನೆ’ಗಳನ್ನು ಅವನು ಅನುಭವಿಸಬಲ್ಲನೆಂದು ಹೇಳುತ್ತಾರೆ. ಅಷ್ಟೇ ಅಲ್ಲ. ಆ ಅನುಭವಕ್ಕೊಂದು ಆಕಾರ ಕೊಟ್ಟು, ಅದನ್ನು ಸ್ಥಿರೀಕರಿಸಿ, ‘ಕಲೆ’ಯನ್ನಾಗಿ ಮಾಡಿ ಕಾಲನ ನಿರಂತರ ಪ್ರವಾಹಕ್ಕೆ ಆಹ್ವಾನ ಕೊಡುತ್ತಾನೆಂದು ಹೇಳುತ್ತಾರೆ. ವೈಯಕ್ತಿಕವಾದುದನ್ನು ವಿಶ್ವದ ಅನುಭವವನ್ನಾಗಿ ಮಾಡುತ್ತಾನೆಂದು ಹೇಳುತ್ತಾರೆ.

ಅದೆಲ್ಲ ಬರೋಬರಿ ಅಥವಾ ಬರೋಬರಿಯೇ ಇರಬಹುದು.

*

ಆದರೆ ನನ್ನ ಕಣ್ಣೆದುರು ಇರುವ-ಅಂದರೆ ನಾನು ‘ಕಾಣುವ’ ಅಲ್ಲ; ‘ನನ್ನ ಎದುರು, ಈ ಕ್ಷಣದಲ್ಲಿ, ಇಲ್ಲಿ ‘ಇರುವ’ – ಈ ವಾಸ್ತವಕ್ಕೂ ನನಗೂ ಇರುವ ಸಂಬಂಧವೇನು? ನಾನು ಹೇಗೆ ಪ್ರತಿಕ್ರಿಯೆ ತೋರಲಿ? ‘ಪ್ರತಿಕ್ರಿಯೆ’ ಅಂದರೇನು?

ನಾನು ಅಲ್ಲಿ ತಾತ್ಕಾಲಿಕವಾಗಿ ನಿಂತದ್ದು ಬೆಂಗಳೂರು – ಪೂನಾ ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ಟಿಫಿನ್ಗೆಂದು. ಬಸ್ ಹೋಟೆಲ್ ಬಳಿ ನಿಂತಿತ್ತು. ಅದರ ಹಿಂದಿನ ದಿನ, ಜನೆವರಿ ಒಂದರಂದು, ನಾನು ನಮ್ಮ ರಾಜಧಾನಿಯಲ್ಲಿ ಯಾವುದೋ ಒಂದು ರಾಜಕೀಯ ವಾರಪತ್ರಿಕೆಯ ಬಿಡುಗಡೆ ಸಮಾರಂಭದಲ್ಲಿ ‘ಮುಖ್ಯ ಅತಿಥಿ’ಯಾಗಿ ಭಾಗವಹಿಸಿ ಈಗ ಧಾರವಾಡಕ್ಕೆ ಮರಳುತ್ತಿದ್ದೆ. ಕಾರ್ಯಕ್ರಮದಲ್ಲಿ ಸಚಿವರಿದ್ದರು. ಹಿರಿಯ ಸಾಹಿತಿಗಳಿದ್ದರು; ಪತ್ರಕರ್ತರಿದ್ದರು. ಜಗತ್ತಿನ ರಾಜಕೀಯದ ಬಗ್ಗೆ, ಕರ್ನಾಟಕದ ರಾಜಕೀಯದ ಬಗ್ಗೆ, ವರ್ಷದ – ತಿಂಗಳ – ವಾರದ ರಾಜಕೀಯದ ಬಗ್ಗೆ, ಅದನ್ನು ಅರ್ಥೈಸುವ ಬಗ್ಗೆ, ಸಾಮಾಜಿಕ ಬದಲಾವಣೆಯ ಬಗ್ಗೆ, ಬಂಡಾಯದ ಬಗ್ಗೆ, ಆ ಪತ್ರಿಕೆಯ ಸಂಪಾದಕನ ಸಜ್ಜನಿಕೆಯ ಬಗ್ಗೆ, ಚಾಣಾಕ್ಷ ಬುದ್ಧಿಯ ಬಗ್ಗೆ, ಹೀಗೆ ಎಲ್ಲದರ ಸಾವಿರಾರು ಶಬ್ದಗಳು ಗಾಳಿಯಲ್ಲಿ ತೇಲಿದ್ದವು. ಕೆಲವು ಇನ್ನೂ ನನ್ನ ಕಿವಿಯಲ್ಲಿ ಉಳಿದಿದ್ದವು.

ಹಿರಿಯೂರಿನ ಹೋಟೆಲಿನೆದುರು ನಿಂತಾಗ ಕಂಡ ಆ ಮಣ್ಣಿನ ಲೋಕದ ದೃಶ್ಯ ಸತ್ಯಜಿತ ರೇಯ ಫಿಲ್ಮಿನೊಳಗಿನ ಒಂದು ದೃಶ್ಯದಂತೆ ಕಂಡಿತು ಹೌದು, ಕಣ್ಣಿಗೆ ಹೊಡೆಯುವ ವಾಸ್ತವವನ್ನು ‘ಕಲೆ’ ಯನ್ನಾಗಿ ಪರಿವರ್ತಿಸಿ ಬಿಟ್ಟರೆ ಎಷ್ಟು ಅನುಕೂಲ ಅಲ್ಲವೇ? ಆ ಚೌಕಟ್ಟಿನಲ್ಲಿ ಆ ದೃಶ್ಯಕ್ಕೊಂದು ‘ಅರ್ಥ’ ಬರುತ್ತದೆ. ಇನ್ನೂ ಸ್ವಲ್ಪ ತಿಣುಕಿದರೆ ಅದರೊಳಗಿನಿಂದ ‘ಧ್ವನಿ’ ಯನ್ನೂ ಹೊರಡಿಸಬಹುದು. ಪಾವಟಣಿಗೆಯ ಮೇಲೆ ಕಿವುಚಿ ಮಲಗಿದ ಆ ಮನುಷ್ಯ ಇಡೀ ಮಾನವತೆಯ ದುರಂತದ ‘ಸಂಕೇತ’ ವಾಗಿ ತೋರಬಹುದು, ದಾರಿಯಲ್ಲಿ ಅಡ್ಡಾಡುವವರ ಪರಿವೆಯಿಲ್ಲದೆ ಕೂಸಿಗೆ ಮೊಲೆ ಕೊಡುತ್ತಿದ್ದ ಆ ತಾಯಿ ಸಹನೆಯ ಚಿರಂತನ ಪ್ರತೀಕವಾದ ಧರಿತ್ರೀಮಾತೆಯಾಗಿ ವಿಜೃಂಭಿಸಬಹುದು. ಆ ಕೂಸು ಚಿರಂತನ ದಾಹವಾಗಿ, ಅದರ ನಗೆ ಸೃಷ್ಟಿಕರ್ತನ ಚಿರಂತನ ಲೀಲೆಯಾಗಿ ಸಂಕೇತಗೊಳ್ಳಬಹುದು.

ಹೌದು, ಕಲ್ಪನೆಯ ಒಂದು ನಿಮಿಷದ ಚಮತ್ಕಾರ ಸಾಕು. ಈ ಸುಡುಸುಡುವ ವರ್ತಮಾನ, ಕಾಲಾತೀತವಾದ ಶೀತಲ ಕಲೆಯಾಗುತ್ತದೆ. ಅದಕ್ಕೂ ನನಗೂ ಯಾವ ಸಂಬಂಧವೂ ಉಳಿಯದಂತೆ ಒಂದು ‘ದೂರ’ ನಿರ್ಮಾಣವಾಗುತ್ತದೆ. ಆ ಮಕ್ಕಳ ಹಸಿವೆಯ ಬಗ್ಗೆ, ಅವರ ಹರಕು ಚಿಂದಿಯ ಬಗ್ಗೆ, ಅವರ ನಿಗೂಢ ಮೌನದ ಬಗ್ಗೆ, ಅವರ ಕಣ್ಣೀರು ನುಂಗಿದ ಕಣ್ಣುಗಳ ಆಳದ ಬಗ್ಗೆ – ಈ ‘ನಾನು’ ಎಂಬ ನನಗೆ, ಈ ಭರತಖಂಡದ ನಾಗರಿಕನಿಗೆ, ಈ ಬಂಡಾಯ ಸಾಹಿತಿಗೆ, ಕ್ರಾಂತಿ ಕ್ರಾಂತಿ ಅಂತ ಕನವರಿಸುವ ಈ ಕನಸುಗಾರನಿಗೆ….. ಯಾವ ಜವಾಬ್ದಾರಿಯೂ ಉಳಿಯುವುದಿಲ್ಲ. ಅವರಿಗೆ ನಾನು ಏನೂ ಅಲ್ಲ. ನಾನು ಅವರಿಗೆ ಏನೂ ಅಲ್ಲ .. ಅವರು ಉರುಳಾಡುತ್ತಿರುವ ನೆಲವೂ ನನ್ನ ಬೂಟಗಳ ಕೆಳಗಿರುವ ನೆಲವೂ ಒಂದೇ ಆಗಿದ್ದರೂ ಅವರು ಯಾವುದೋ ಅನಂತ ಲೋಕದ ಅನೂಹ್ಯರೂಪದ ಅತಿಥಿಯಾಗುತ್ತಾರೆ: ನಾನು ಅವರನ್ನು ಬರಮಾಡಿಕೊಳ್ಳುವ ಅತಿಥೇಯನಾಗುತ್ತೇನೆ.

*

ಬಸ್ಸು ಚಾಲೂ ಆಗಿ, ಮತ್ತೆ ಊರು ಕಡೆ ಮುಖ ಮಾಡಿ ಹೊರಟಾಗ, ಎದುರಿನಿಂದ ಆರ್ಭಟಿಸುತ್ತ ಎದೆಯ ಮೇಲೇರಿ ಬರುವ ರಾಷ್ಟ್ರೀಯ ಹೆದ್ದಾರಿ ಮತ್ತೆ ಕಾಲ ಕೆಳಗಿನಿಂದ ನುಸುಳಿ ಪರಾರಿಯಾಗುತ್ತಿದ್ದಾಗ… ನನ್ನ ಕಣ್ಣಿನ ಮುಂದೆ ಅದೇ ಅದೇ ಹಿರಿಯೂರಿನ ದೃಶ್ಯ, ಬಾಲ್ಯದ ಯಾವುದೋ ಮರೆಯಲಾಗದ ನೆನಪಿನಂತೆ, ಬೆಳಗಿನ ಜಾವ ಕಂಡ ಕನಸಿನ ತುಣುಕಿನಂತೆ, ಎತ್ತ ನಾಲಿಗೆ ಹೊರಳಿಸಿದರೂ ಅಟೆಯುವ ಹಲ್ಲಿನ ಸಂದಿಯಲ್ಲಿ ಸಿಕ್ಕ ರೊಟ್ಟಿಯ ಚೂರಿನಂತೆ. ಮತ್ತೆ ಮತ್ತೆ ಅದೇ ಅಸ್ಪಷ್ಟ ಪ್ರಶ್ನೆ: ಏನಪ್ಪಾ ಸಾಹಿತಿ, ಏನಪ್ಪಾ ಕ್ರಾಂತಿಕಾರಿ! ಏನೆನ್ನುತ್ತೀ ಇದಕ್ಕೆ?

ಬಂಡಾಯ ಸಾಹಿತ್ಯದ ವೇದಿಕೆಯಿಂದ ಧೋ ಧೋ ಎಂದು ಸುರಿಯುವ ಶಬ್ದಗಳ ಮಳೆ ನೆನಪಾಗಿ ನನಗೆ ಮೈ ತುಂಬ ಬೆವರಿಳಿಯುತ್ತದೆ. ಇಡೀ ಇತಿಹಾಸದ ಚೌಕಟ್ಟಿನಲ್ಲಿ ನಮ್ಮ ವರ್ತಮಾನವನ್ನು ಅರ್ಥೈಸಿಕೊಳ್ಳಲು ಹೆಣಗಾಡಿ ಭವಿಷ್ಯದ ನಕಾಶ ಬರೆಯುವ ಕೈ ಕೈಸಾಗದೆ ನಿಲ್ಲುತ್ತದೆ. ಅನ್ಯಾಯ, ಅತ್ಯಾಚಾರದ ವಿರುದ್ಧ ಹಾಕಿದ ಗಾಳಿ ಘೋಷಣೆಗಳು ಗೋಡೆಯ ಮೇಲಿನ ಅಕ್ಷರಗಳಾಗಿ, ಆ ಅಕ್ಷರದ ಕಿಂಡಿಯೊಳಗಿನಿಂದ ಯಾರೋ ಅಣಕಿಸಿದ ಹಾಗಾಗುತ್ತದೆ. ಮೈಲುಗಟ್ಟಲೆ ನಡೆದ ಮೌನ ಮೆರವಣಿಗೆಗಳು ಹಿರಿಯೂರಿನ ಆ ನಾಲ್ಕಾರು ಜೀವಿಗಳ ಮೌನದಲ್ಲಿ ಕರಗಿ ಹೋದಂತೆ ಭಾಸವಾಗುತ್ತದೆ. ಪತ್ರಿಕೆಗಳಿಗೆ ಬರೆದ ಲೇಖನಗಳು, ಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರಗಳು ಮುನಿಸಿಪಾಲಟಿಯ ಕಸದ ಡಬ್ಬಿನ ಬಾಳೆಹಣ್ಣಿವ ಸಿಪ್ಪೆಗಳಂತೆ ತೋರುತ್ತವೆ.

*

ನನಗೆ ಗೊತ್ತು:

ನನ್ನ ರೂಮಿನಲ್ಲಿ ಕುಳಿತು ಬರೆಯುವ ಈ ಅಕ್ಷರಗಳು ಕೂಡ ಏನೂ ಮಾಡುವಂತಿಲ್ಲ. ಇಷ್ಟೆ – ಈ ವೇದನೆ, ಈ ಹತಾಶೆ ಕೆಲವರ ವೇದನೆ, ಹತಾಶೆ ಆಗಬಹುದು. ಇಂಥ ಕಾವ್ಯಾತ್ಮಕ ಶೈಲಿಯಿಂದ ಕೆಲವರಿಗೆ ಕಾವ್ಯಾತ್ಮಕ ಸಂತೋಷ ದೊರಕಬಹುದು.

ಇಂಥ ಅನೇಕ ಅಕ್ಷರದ ಗುಂಪುಗಳನ್ನು ವಿಧಾನಸೌಧದ ಏರ್ ಕಂಡೀಶನ್ ಭವನದಲ್ಲಿ ಕುಳಿತು ತಯಾರಿಸಿ ಚಲಾವಣೆಗೆ ತಂದು, ನಾವು ಗುಡಿಸಲುಗಳನ್ನು ಗುಡುಗಿಸಬಹುದು: ಬಂಗಲೆಗಳನ್ನು ನಡುಗಿಸಬಹುದು.

ಹಿರಿಯೂರಿನ ಆ ‘ಜೀವಿ’ ಗಳಿಗೆ (‘ಜೀವಿ’ ಗಳು: ಏಕೆಂದರೆ ಹೆಸರು- ದಸೆ – ಕುಲ- ಗೋತ್ರಗಳಿರದ, ಇದ್ದರೂ ಉಪಯೋಗವಿರದ, ಕೇವಲ ‘ಜೀವ’ ಹಿಡಕೊಂಡಿರುವ ‘ಜೀವಿ’ಗಳು) ಈ ಅಕ್ಷರಗಳು ತಲುಪವಂತಾದೀತೆ? ಬಂಡೆಗಲ್ಲಾಗಿರುವ ಅವರ ಬದುಕಿನಲ್ಲಿ ಯಾವುದೋ ಕಿಡಿ ಹೊತ್ತಿಸಿ, ಸುರುಸುರು ಬತ್ತಿಯಾಗಿ ‘ಅರಿವಿನ ಸ್ಫೋಟ’ ವಾದೀತೆ? ಆ ಸ್ಫೋಟದ ಬೆಂಕಿಯ ಬೆಳಕಿನಲ್ಲಿ ಹೊಸ ಜಗತ್ತೊಂದು ಬೆಳಗೀತೆ? ಹಿರಿಯೂರಿನ ಆ ಪುಟ್ಟ ಮಣ್ಣಿನ ಲೋಕದ ಸಾದಾ ಸೀದಾ ಸವಾಲನ್ನು ನಮ್ಮ ಈ ಅಕ್ಷರಗಳು ಸ್ವೀಕರಿಸಬಲ್ಲವೇ?

ನಮ್ಮ ಅಕ್ಷರಗಳನ್ನು ನಾವು ಮತ್ತೊಮ್ಮೆ ಪರೀಕ್ಷೆಗೆ ಒಡ್ಡಬೇಕಾಗಿದೆ.

-೧೯೮೯