ಕನ್ನಡನಾಡು ಏಕೀಕರಣಗೊಂಡು ಐವತ್ತು ವರ್ಷ ತುಂಬಿದ ಚಿನ್ನದ ಹಬ್ಬದ ಹರ್ಷದ ಈ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು ಕನ್ನಡವನ್ನು ಕಟ್ಟಿದ ಹಿರಿಯರ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವ ಕನಸಿನ ಹೊನ್ನಾರುಮಾಲೆ ಇಲ್ಲಿ ರೂಪು ತಾಳಿದೆ. ಕೃಷಿಸಂಸ್ಕೃತಿಯನ್ನು ನೆಲದ ಸಂಸ್ಕೃತಿಯನ್ನಾಗಿ ಭಾವಿಸಿ ಪರಿಭಾವಿಸಿ ಕಟ್ಟಿ ಬೆಳೆಸಿದ ಕನ್ನಡನಾಡಿನಲ್ಲಿ ಕನ್ನಡಸಾಹಿತ್ಯ ಸಂಸ್ಕೃತಿಯ ಬೀಜವನ್ನು ಬಿತ್ತಿ ಚಿನ್ನದ ಬೆಳೆಗಳನ್ನು ಬೆಳೆದ ಹಿರಿಯ ಬೇಸಾಯಗಾರರ ಒಂದೊಂದು ಹೊಸ ಬೆಳೆಯನ್ನು ನಾಡಿಗೆ ಒಪ್ಪಿಸುವ ಧನ್ಯತಾ ಭಾವ ನಮ್ಮದು. ಹೀಗೆ ಹೊನ್ನಾರು ಚಿನ್ನದ ಬೆಳೆಯೂ ಹೌದು, ಕನ್ನಡದ ಚಿಣ್ಣರಿಗೆ ಹೊಸಬೆಳೆ ಬೆಳೆಯಲು ಪ್ರೇರಣೆಯೂ ಹೌದು.

ಕಳೆದ ಐವತ್ತು ವರ್ಷಗಳಿಂದ ಕನ್ನಡ ಸಾಹಿತ್ಯ ಸಂಸ್ಕೃತಿಯ ಮಣ್ಣಿನಲ್ಲಿ ತಮ್ಮ ಅನುಭವ ಮತ್ತು ಅಧ್ಯಯನದ ಮೂಲಕ ಉತ್ಸಾಹ ಪ್ರೀತಿ ಮತ್ತು ಪರಿಶ್ರಮಗಳಿಂದ ನಿರಂತರವಾಗಿ ಕನ್ನಡದ ಬಹುಬೆಳೆಗಳನ್ನು ಬೆಳೆಸಿಕೊಂಡು ಬಂದ ಹಿರಿಯರ ಹೊಸಬೆಳೆಯ ಹೊನ್ನಾರು ಮಾಲೆಯಲ್ಲಿ ಅನನ್ಯ ಫಲಗಳನ್ನು ಪಡೆಯಲಾಗಿದೆ. ಸಾಹಿತ್ಯ, ಬದುಕು, ಸಂಸ್ಕೃತಿ ಇವುಗಳ ಬಗ್ಗೆ ಐವತ್ತು ವರ್ಷಗಳ ಹಿಂದೆ ಇದ್ದ ಪರಿಕಲ್ಪನೆಗಳು ಇಂದು ಬದಲಾವಣೆಗೊಂಡಿವೆ. ಯಾವುದು ಸಾಹಿತ್ಯ, ಯಾವುದು ಸಾಹಿತ್ಯ ಅಲ್ಲ ಎನ್ನುವ ಚರ್ಚೆ ಕಾಲಕಾಲಕ್ಕೆ ನಡೆದು ಬೇರೆ ಬೇರೆ ಅರ್ಥಗಳನ್ನು ಶೋಧಿಸುತ್ತ ಈ ಹಂತವನ್ನು ತಲುಪಿದೆ. ಸಾಹಿತ್ಯ ಮತ್ತು ಸಂಸ್ಕೃತಿ, ಸಾಹಿತ್ಯ ಮತ್ತು ಬದುಕು ಎನ್ನುವ ಭಿನ್ನತೆಗಳು ಕಣ್ಮರೆಯಾಗಿ ಸಂಕೀರ್ಣ ಹಾಗೂ ವೈವಿಧ್ಯದ ವಿನ್ಯಾಸಗಳು ಕಾಣಿಸಿಕೊಂಡಿವೆ. ಸೃಜನಶೀಲ ಮತ್ತು ಸೃಜನೇತರ ಎನ್ನುವ ಪ್ರಭೇದಗಳು ಸಾಹಿತ್ಯ ಚರ್ಚೆಗಳಲ್ಲಿ ಹಿಂದಕ್ಕೆ ಸರಿದಿವೆ. ಸಾಹಿತ್ಯದ ಪಠ್ಯ ಮತ್ತು ಪರಿಸರ ಎನ್ನುವ ವರ್ಗೀಕರಣ ಅಪ್ರಸ್ತುತವಾಗಿದೆ. ಸಾಹಿತ್ಯಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಎನ್ನುವ ಪರಿಭಾಷೆಗಳು ಈಗ ಪ್ರತ್ಯೇಕ ಅಸ್ತಿತ್ವಗಳನ್ನು ಕಳೆದುಕೊಂಡು ಒಂದು ಇನ್ನೊಂದರೊಡನೆ ಮಿಳಿತವಾಗಿ ‘ಸಾಹಿತ್ಯ’ ಎನ್ನುವುದು ಸರ್ವ ವ್ಯಾಪಿಯಾಗಿದೆ ಮತ್ತು ಸರ್ವರಿಗೂ ಸಲ್ಲುವಂತದ್ದಾಗಿದೆ.

ಕನ್ನಡ ವಿಶ್ವವಿದ್ಯಾಲಯವು ಕಳೆದ ಹದಿನೈದು ವರ್ಷಗಳಿಂದ ‘ಸಾಹಿತ್ಯ’ದ ಪ್ರಕ್ರಿಯೆಯನ್ನು ಕುರಿತ ಚರ್ಚೆ ಹಾಗೂ ‘ಸಾಹಿತ್ಯ’ ಪರಿಕಲ್ಪನೆಯ ನಿರಂತರ ಕಟ್ಟುವಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಕನ್ನಡ ಭಾಷೆ, ಸಾಹಿತ್ಯ, ಭಾಷಾಂತರ, ಹಸ್ತಪ್ರತಿ, ದ್ರಾವಿಡ ಸಂಸ್ಕೃತಿ, ಮಹಿಳಾ ಅಧ್ಯಯನ, ಚರಿತ್ರೆ, ಪುರಾತತ್ವ, ಶಾಸನಶಾಸ್ತ್ರ, ಜಾನಪದ, ಬುಡಕಟ್ಟು, ಅಭಿವೃದ್ಧಿ, ಸಂಗೀತ, ಚಿತ್ರ, ಶಿಲ್ಪ: ಹೀಗೆ ಬಹು ಬಗೆಗಳಲ್ಲಿ ಬಹು ಅಧ್ಯಯನ ಶಿಸ್ತುಗಳಲ್ಲಿ ಕನ್ನಡ ವಿಶ್ವವಿದ್ಯಾಲಯವು ಕನ್ನಡ ಸಂಸ್ಕೃತಿ ಮತ್ತು ಕನ್ನಡ ನಾಡನ್ನು ಹೊಸತಾಗಿ ಶೋಧಿಸುತ್ತಾ ವಿವರಿಸುತ್ತಾ ರೂಪಿಸುತ್ತಾ ಬಂದಿದೆ. ೫೦ ವರ್ಷಗಳ ಏಕೀಕೃತ ಕನ್ನಡನಾಡಿನ ಶರೀರದಲ್ಲಿ ೧೫ ವರ್ಷಗಳ ಕನ್ನಡ ವಿಶ್ವವಿದ್ಯಾಲಯದ ಭಾವಬುದ್ಧಿಗಳು ಜೀವಧಾತುಗಳಾಗಿವೆ.

ಕರ್ನಾಟಕ ಸರಕಾರವು ಸುವರ್ಣ ಕರ್ನಾಟಕ ಆಚರಣೆಯ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಹೊನ್ನಾರುಮಾಲೆಯ ಪ್ರಕಟಣೆಯ ಯೋಜನೆಯನ್ನು ಸಂತೋಷದಿಂದ ಒಪ್ಪಿಕೊಂಡು ಕನ್ನಡ ಸಂಸ್ಕೃತಿಯ ಮಹತ್ವದ ಸಾಧನೆಯೊಂದನ್ನು ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನಕಾರ್ಯದರ್ಶಿಗಳೂ ಸಾಹಿತ್ಯ ಸಂಸ್ಕೃತಿ ಪ್ರಿಯರೂ ಆಗಿರುವ ಶ್ರೀ ಐ.ಎಂ. ವಿಠಲಮೂರ್ತಿ ಅವರು ಹೊನ್ನಾರುಮಾಲೆಯ ಯೋಜನೆಯನ್ನು ಮೆಚ್ಚಿಕೊಂಡು ಸರಕಾರದ ಅಂಗೀಕಾರವನ್ನು ದೊರಕಿಸಿಕೊಟ್ಟು ಚಿನ್ನದ ಕನಸನ್ನು ನನಸನ್ನಾಗಿಸಿದ್ದಾರೆ. ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರು ಈ ವಿಶಿಷ್ಟ ಯೋಜನೆಯನ್ನು ಅಂಗೀಕರಿಸಿ ತಮ್ಮ ಕನ್ನಡ ಸಂಸ್ಕೃತಿಯ ಕಾಳಜಿಯನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಸರಕಾರದ, ಕನ್ನಡ ಸಂಸ್ಕೃತಿ ಇಲಾಖೆಯ ಈ ಸಾಂಸ್ಕೃತಿಕ ಪ್ರೀತಿಯನ್ನು ಕನ್ನಡ ವಿಶ್ವವಿದ್ಯಾಲಯ ಅಕ್ಕರೆಯಿಂದ ಸ್ಮರಿಸುತ್ತದೆ.

ಆಧುನಿಕ ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತಮ್ಮದೇ ಆದ ಹಿರಿಮೆಯನ್ನು ಸಾಧಿಸಿರುವ ಡಾ|| ಚಂದ್ರಶೇಖರ ಪಾಟೀಲ ಅವರು ನಾಟಕ, ಕಾವ್ಯ, ವಿಡಂಬನೆ ಮತ್ತು ಪತ್ರಿಕಾ ಸಾಹಿತ್ಯದ ವಿಷಯಗಳಲ್ಲಿ ಅಪೂರ್ವತೆಯನ್ನು ಮೆರೆದ ಸಮಕಾಲೀನ ಸಾಂಸ್ಕೃತಿಕ ಹಿರಿಯರಲ್ಲಿ ಮುಖ್ಯರು. ಉತ್ತರ ಕರ್ನಾಟಕವನ್ನು ಸಾಂಸ್ಕೃತಿಕ ಕರ್ನಾಟಕವನ್ನಾಗಿ ರೂಪಿಸಿದ ವರ್ತಮಾನದ ಅಗ್ರಮಾನ್ಯರಲ್ಲಿ ಇವರು ನಮ್ಮೊಡನೆ ನೆಲೆಗೊಂಡಿದ್ದಾರೆ. ಕರ್ನಾಟಕದ ಹಲವು ಸಮಸ್ಯೆಗಳನ್ನು ಬಿಡಿಸುತ್ತ ಮುಂಚೂಣಿಯಲ್ಲಿರುವ ಚಂಪಾ ಕನ್ನಡ ಕನ್ನಡಿಗ ಕರ್ನಾಟಕ ಇವುಗಳ ಉಳಿವಿಗಾಗಿ ನೆಲೆನಿಂತವರು. ಅವರು ಬರೆದಿರುವ ನಿತ್ಯ ವರ್ತಮಾನದ ಲೇಖನಗಳು, ಅಪೂರ್ವ ಒಳನೋಟಗಳನ್ನು ಒಳಗೊಂಡಿವೆ. ಸಾಹಿತ್ಯ, ವಿಚಾರ ಮತ್ತು ವ್ಯಕ್ತಿ ಎಂಬ ಮೂರು ನೆಲೆಗಳಲ್ಲಿ ಚಲಿಸುತ್ತ ಸಾಹಿತ್ಯದ ಗ್ರಹಿಕೆಯನ್ನು ತಮ್ಮ ವೈಚಾರಿಕ ನೆಲೆಗಳಿಂದ ವಿಸ್ತರಿಸಿದ್ದಾರೆ. ಈ ಮೂರು ಬಗೆಯ ಲೇಖನಗಳಲ್ಲಿ ಇರುವ ವೈಚಾರಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿಂತನೆಗಳು ನಮ್ಮನ್ನು ಬೆರಗಿನತ್ತ ದೂಡುತ್ತವೆ. ಇವರ ವಿಮರ್ಶಾ ಬರಹಗಳಲ್ಲಿ ಕಾಣಿಸುವ ಆಳವಾದ ಶೋಧನೆ, ವೈಚಾರಿಕ ದೃಷ್ಟಿಕೋನಗಳು ನಿಜದ ನೆಲೆಯನ್ನು ವರ್ತಮಾನದಲ್ಲಿ ಕಾಣುವ ಹಂಬಲವನ್ನು ಹೊತ್ತಿವೆ. ಡಾ. ಚಂದ್ರಶೇಖರ ಪಾಟೀಲ ಅವರು ತಮ್ಮ ವಿಶಿಷ್ಟವಾದ ಬರಹದಿಂದ, ಶೈಲಿಯಿಂದ ಮತ್ತು ದೃಷ್ಟಿಕೋನಗಳಿಂದ ನಮ್ಮನ್ನು ವಿಸ್ಮಯಗೊಳಿಸುತ್ತಾರೆ. ಇವರ ಆಳವಾದ ಚಿಂತನ, ಸೂಕ್ಷ್ಮ ಅವಲೋಕನ ಮತ್ತು ವೈಚಾರಿಕ ಗುಣಗಳಿಂದ ಇಲ್ಲಿಯ ಬರಹಗಳು ಆಧುನಿಕ ಸಾಹಿತ್ಯದ ಸಂಸ್ಕೃತಿ ವಿಮರ್ಶಾಲೋಕಕ್ಕೆ ಹೊಸತಾದ ನೆಲೆ-ಬೆಲೆಯನ್ನು ಒದಗಿಸುತ್ತಿದ್ದಾರೆ. ಕನ್ನಡ ವೈಚಾರಿಕ ವಿಮರ್ಶಾಪ್ರಜ್ಞೆಯ ಪ್ರತಿನಿಧಿಯಾಗಿರುವ ಡಾ. ಚಂಪಾ ಅವರ ತಿಳಿವಳಿಕೆ, ಬದ್ಧತೆ ಮತ್ತು ಮಾನವೀಯ ಗುಣಗಳಿಗೆ ಗೌರವಪೂರ್ವಕವಾದ ನಮನಗಳು.

ಹೊನ್ನಾರುಮಾಲೆಯ ಪ್ರಕಟಣೆಗಳ ಕನಸಿನ ಬೀಜದಿಂದ ತೊಡಗಿ ನನಸಿನ ಫಲದವರೆಗೆ ನನ್ನೊಡನೆ ಸಹಕರಿಸಿದ ನಮ್ಮ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರನ್ನು ವಿಶೇಷವಾಗಿ ಸ್ಮರಿಸುತ್ತೇನೆ.

 

ಬಿ. . ವಿವೇಕ ರೈ
ಕುಲಪತಿ