ಬೇಸರವೇ ಇಲ್ಲ ಈ ನಿಸರ್ಗಕ್ಕೆ
ಸದಾ ಹೊಚ್ಚ ಹೊಸದಾಗಿ ಹೊಮ್ಮುವುದಕ್ಕೆ
ನಮ್ಮ ಮನೆಯಂಗಳದ ಗಿಡದಲ್ಲಿರುವ
ಹೂವುಗಳನ್ನೆ ತೆಗೆದುಕೊಳ್ಳೋಣ
ಬೇಕಾದರೆ ನಿದರ್ಶನಕ್ಕೆ.

ಒಂದೊಂದು ಹೂವಿಗೂ ಒಂದೊಂದು ಚಂದ
ಒಂದೊಂದಕ್ಕೂ ಬೇರೆ ಬೇರೆಯ ಬಂಧ
ಶಿಲ್ಪ, ಲಯ, ಛಂದೋ ವಿನ್ಯಾಸ
ಹಾಗೆಯೇ ಅಸಂಖ್ಯ ವಿಶೇಷ.

ಏನನ್ನೋ ನೋಡಲೆಂದು ಬಟ್ಟಲುಗಣ್ಣ
ಬಿಟ್ಟಂಥ ಹೂವು
ಯಾರನ್ನೋ ಮುತ್ತಿಡಲೆಂದು
ತುಟಿ ತೆರೆದು ನಿಂತು ಹೂವು
ಇದ್ದದ್ದ ಕಳಕೊಂಡು ಖಿನ್ನವಾದಂತೆ
ದಳ ಉದುರಿ ಸೊರಗಿದ ಹೂವು
ನೂರಾರು ಭಾವಗಳನ್ನು ಬಣ್ಣಿಸಿದಂತೆ
ಇದರ ಚೆಲುವು.

ಇಷ್ಟೊಂದು ಹೂವುಗಳನ್ನು ಕಂಡಾಗ, ಹಿಗ್ಗಿ
ಪುಟಿಯುತ್ತದೆ ಯಾಕೆ ನನ್ನ ಹೃದಯ
ಕತ್ತಲೊಳಗಿಂದ ಆದಂತೆ ಸೂರ್ಯೋದಯ ?

ಬೇಸರವೇ ಇಲ್ಲ ಈ ನಿಸರ್ಗಕ್ಕೆ
ಸದಾ ಹೊಚ್ಚ ಹೊಸದಾಗಿ ಹೊಮ್ಮುವುದಕ್ಕೆ
ಬೇಸರವೇ ಇಲ್ಲ ಈ ಮನಸ್ಸಿಗೆ
ಇವುಗಳ ಜತೆಗೆ ಬೆರೆಯುವುದಕ್ಕೆ
ಕೊನೆಯೇ ಇಲ್ಲ, ಈ ಮೂರ್ತ ಅಮೂರ್ತಗಳ
ಸಂಗಮದಿಂದ ಸ್ಫುರಿಸುವಾನಂದಕ್ಕೆ.