ನಾನು ಈಗ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಹಿರೇಕೆರೂರಿಗೆ ಬಂದು ಎರಡೂವರೆ ವರ್ಷಗಳಾದವು.

ಬೆಳಗಾವಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ನನ್ನ ವಯಸ್ಸು ಮೂವತ್ತೊಂಭತ್ತು. ಇನ್ನು ಹತ್ತೊಂಭತ್ತು ವರ್ಷ ಸರ್ವೀಸ್ ಇದೆ. ಆದರೆ ನನ್ನ ಮಾನಸಿಕ ತೊಂದರೆಯಿಂದಾಗಿ ದಿನ ನೂಕುವುದು ಕಷ್ಟವಾಗಿದೆ. ನನ್ನ ಮನಸ್ಸು ತುಂಬಾ ದುರ್ಬಲ. ಯಾರು ಏನು ಅಂದರೂ ಮನಸ್ಸಿಗೆ ತುಂಬ ತ್ರಾಸವಾಗುವುದು. ಆರ್ಥಿಕವಾಗಿಯಾಗಲಿ, ಕೌಟುಂಬಿಕವಾಗಿಯಾಗಲಿ ನನಗೆ ಯಾವುದೇ ತೊಂದರೆಯಿಲ್ಲ. ರಾತ್ರಿ ಸರಿಯಾಗಿ ನಿದ್ರೆ ಬರಲೊಲ್ಲದು ಎಂಬುದೊಂದೆ ನನ್ನ ಚಡಪಡಿಕೆ. ಇದರಿಂದಾಗಿ ನಿದ್ರೆ ಮತ್ತಷ್ಟು ದೂರ. ಬಹಳ ಜನ ಡಾಕ್ಟರರಿಗೆ ತೋರಿಸಿದ್ದೇನೆ. ನಿದ್ರೆ ಬರುವ ಔಷಧಿಗಳ ಸೇವನೆಯಾಯ್ತು. ಅವೆಲ್ಲವೂ ತಾತ್ಕಾಲಿಕ. ನನ್ನ ಮನಸ್ಸು ಯಾವಾಗಲೂ ದುಗುಡದಿಂದ ಕೂಡಿರುವುದು ಇದಕ್ಕೆ “ಹಿಪ್ನಾಟಿಸಂ” ಒಂದೇ ದಾರಿಯೆಂದು ಒಬ್ಬ ಡಾಕ್ಟರರು ಹೇಳಿದರು. ಅವರು ಅದಕ್ಕೆ ಪ್ರಯತ್ನಿಸಿದರು. ಆದರೆ ಸಫಲರಾಗಲಿಲ್ಲ. ಮನಸ್ಸನ್ನು ಕೊಟ್ಟರೆ ಮುಂದೆ ಗುಣವಾಗುವುದೆಂದು ಅವರು ಹೇಳಿದರು. ಆದರೆ ಹಿಪ್ನಾಟಿಸಂ ನನ್ನ ಮೇಲೆ ಪರಿಣಾಮ ಬೀರಲಿಲ್ಲ. ಬೈಲಹೊಂಗಲದಲ್ಲಿ ಒಬ್ಬ ಮಾನಸಿಕ ತಜ್ಞರಲ್ಲಿ ಎಂಟು ವರ್ಷಗಳ ಹಿಂದೆ ಇದೇ ಸಮಸ್ಯೆಗೆ ಸಂಪರ್ಕಿಸಿದ್ದೆ. ಆವಾಗ ಸ್ವಲ್ಪ ಚೇತರಿಸಿಕೊಂಡು ಇಲ್ಲಿಯವರೆಗೆ ಬಂದೆ. ಈಗ ಮತ್ತೆ ಸಮಸ್ಯೆ.

ನಿಮ್ಮ ಮನಸ್ಸು ತೀರಾ ದುರ್ಬಲವಾಗಿದೆ. ನಿಮ್ಮ ನಿದ್ರಾಹೀನತೆಯೇ ನಿಮ್ಮೆಲ್ಲಾ ದೌರ್ಬಲ್ಯಕ್ಕೆ ಕಾರಣ ಎಂದು ಸೂಚಿಸಿದ್ದೀರಿ. ನಿದ್ರೆ ಮನುಷ್ಯನ ದೈನಂದಿನ ಲಯಗತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ನಿಜ. ದಣಿದ ದೇಹಕ್ಕೆ, ಬೇಸತ್ತ ಮನಸ್ಸಿಗೆ ವಿಶ್ರಾಮ ವಿರಾಮವನ್ನು ಕೊಡತಕ್ಕಂತಹ ಸಿದ್ಧೌಷಧ ನಿದ್ದೆ. ಆದರೆ ಹೆಚ್ಚಿನ ಜನ ನಿದ್ರಾಹೀನರಾಗುವ ಕಾರಣ ಮನೋವ್ಯಾಧಿ ಶೇಕಡಾ ಐವತ್ತರಷ್ಟಾದರೆ ಮಿಕ್ಕ ಅರ್ಧ ವಾತಾವರಣದಿಂದ, ಅಲ್ಲದೆ ಹಿಂದಿನ ಯೋಚನೆಗಳು, ಇಂದಿನ ವ್ಯಸನಗಳು, ಭವಿಷ್ಯತ್ತಿನ ಚಿಂತನೆಯನ್ನು ಆಳವಾಗಿ ನಿಮ್ಮಲ್ಲಿ ವಿರಾಮವಿಲ್ಲದೆ ತೊಡಗಿಸಿಕೊಂಡಾಗ…. ಮಾತ್ರ ನಿದ್ರಾಹೀನವಾಗುತ್ತದೆ. ಅದರಲ್ಲೂ ಹಲವು ವಿಧ. ನಿದ್ರೆ ಮಾಡುವುದೇ ಅಸಾಧ್ಯವಾಗಬಹುದು. ಅಥವಾ ಚೆನ್ನಾಗಿ ಬಿದ್ದ ನಿದ್ರೆಯಿಂದ ಏಕಾಏಕಿ ಏಳು ಪ್ರಸಂಗಗಳಿರಬಹುದು. ಇಡೀರಾತ್ರಿ ಆಗಾಗ್ಗೆ ತೊಡಕು ತೊಂದರೆಗಳಿಂದಾಗಿ ಎಚ್ಚರವಾಗಬಹುದು. ಅರೆನಿದ್ದೆ ಮಂಪರಿನಿಂದ ಮರುದಿನ ಎದ್ದ ಮೇಲೂ ಚೆನ್ನಾಗಿ ನಿದ್ರೆ ಮಾಡಿದ್ದೇನೆ ಎನ್ನುವ ಸಮಾಧಾನವಿಲ್ಲದೆ ಅನ್ಯಮನಸ್ಕನಾಗಬಹುದು. ಇಲ್ಲವೇ ಇಡೀ ರಾತ್ರಿ ಭಯಾನಕ ಅಹಿತಕರವಾದ ಸ್ವಪ್ನಗಳು ಕಂಡು ಮರುದಿನ ಅಸಮಾಧಾನತೆಯನ್ನು ಅನುಭವಿಸುವ ಸಾಧ್ಯತೆಯುಂಟು. ಇದಕ್ಕೆಲ್ಲಾ ಸುಲಭ ಪರಿಹಾರಗಳೇನು?

೧. ನಿದ್ರೆಯ ಬಗ್ಗೆ ತುಂಬಾ ವಿಚಾರ ಮಾಡುವುದನ್ನು ಬಿಡಿ. ಅದು ಎಲ್ಲರಲ್ಲಿಯೂ ಸಹಜವಾಗಿ ಬಂದು ಹೋಗುವ ಒಂದು ಸ್ಥಿತಿ.

೨. ನಿದ್ರೆ ಮಾಡುವ ಮುನ್ನ ನಿಮ್ಮ ಮನಸ್ಸಿಗೆ ಸಮಾಧಾನ ನೀಡುವ ಚಟುವಟಿಕೆ ಮಾಡಿ. ಅದು ಒಂದು ಪುಸ್ತಕವನ್ನು ಓದುವುದೇ ಆಗಬಹುದು. ಸಂಗೀತ ಸುಧೆಯನ್ನು ಆಸ್ವಾದಿಸುವುದೇ ಆಗಬಹುದು. ಅಥವಾ ಕೇರಂ, ಚೆಸ್ ಮುಂತಾದ ಆಟಗಳನ್ನು ಆಡುವ ಹವ್ಯಾಸವನ್ನಿಟ್ಟುಕೊಳ್ಳಬಹುದು.

೩. ನಿಮ್ಮ ಆಫೀಸಿನ ಸಮಸ್ಯೆಯನ್ನು ಅಫೀಸಿನಲ್ಲಿಯೇ ಬಿಟ್ಟು ಬನ್ನಿ. ಸಂಸಾರ ತಾಪತ್ರಯಗಳನ್ನು ಸದಾ ಮನಸ್ಸಿನಲ್ಲಿಯೇ ಇಟ್ಟು, ಕೊರಗುವುದಕ್ಕಿಂತ ಸಂಬಂಧಪಟ್ಟವರೊಂದಿಗೆ ಚರ್ಚಿಸಿ. ಪರಿಹಾರ ಕಂಡುಹಿಡಿದುಕೊಳ್ಳಿ. ಊಟವಾದ ನಂತರವೋ, ಅದು ಅಸಾಧ್ಯವಾದರೆ ಊಟಕ್ಕೆ ಮೊದಲು, ವಾಕಿಂಗ್ ಹೋಗುವುದು ಉಚಿತ. ನೆನಪಿನಲ್ಲಿಡಿ, ಯಾವುದೇ ದೈಹಿಕ ಪರಿಶ್ರಮ ಅತಿಯಾದರೂ ಅಥವಾ ತೀರಾ ಕನಿಷ್ಠವಾದರೂ ಅದರಿಂದ ಉಪಯೋಗವಾಗಲಾರದು. ಆದ್ದರಿಂದ ನಿಮ್ಮ ವಾಕಿಂಗ್ ಮತ್ತು ವ್ಯಾಯಾಮ ನಿಯಮಿತ ದೇಹ ಪರಿಶ್ರಮದ ಅಭ್ಯಾಸವಾಗಲಿ.

೪. ಸಂಜೆಯ ಸಮಯದಲ್ಲಿ ಕೆಲವು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಮನೆ ಮುಂದೆ ತರಕಾರಿ ಬೆಳೆಸುವ, ಬ್ಯಾಡ್‌ಮಿಂಟನ್, ಕ್ರಿಕೆಟ್ ಆಡುವ ಅಥವಾ ದೇವರ ಭಜನೆ ಮಾಡುವ, ನಿಮ್ಮ ಅಭಿರುಚಿಗೆ ತಕ್ಕ ಹವ್ಯಾಸ ರೂಪಿಸಿಕೊಳ್ಳಿ.

೫.   ಯಾವುದಾದರೂ ಏಕಾಗ್ರತೆ, ಅಭ್ಯಾಸವನ್ನು ಕೇಂದ್ರೀಕರಿಸಿ ಮಾಡಿದಾಗ ಒಳಿತಾಗುವುದು, ಅದು ಏಕಾಗ್ರ ಚಿತ್ತತೆಯಿಂದ ಯಾವುದಾದರೂ ಗಣಿತದ ಅಭ್ಯಾಸವನ್ನು ಮಾಡುತ್ತಲೋ, ಮಳೆಯ ಸನ್ನಿವೇಶವನ್ನೋ ಪ್ರಶಾಂತ ಉದ್ಯಾನವನ ಅರಣ್ಯಧಾಮದಲ್ಲಿ ಸಂಚರಿಸುವ ಬಗ್ಗೆಯೋ ವಿಚಾರ ಮಾಡುತ್ತಲೇ ಹೋದಾಗ ಚೆನ್ನಾಗಿ ನಿದ್ರೆ ಬಂದೀತು.

೬. ನಿಮ್ಮ ನಿದ್ರಾಹೀನತೆ, ಖಿನ್ನತೆ ಆತಂಕದ ಕಾಯಿಲೆಯ ಮುನ್ಸೂಚಿಯೂ ಆಗಿರಬಹುದು. ಹಾಗಿದ್ದರೆ ಸಮೀಪದ ಮನೋವೈದ್ಯರನ್ನು ಕಾಣಿರಿ. ನಿದ್ರಾಹೀನತೆಗೆ ಹಿಪ್ನಾಟಿಸಂಗಿಂತ ಸಹಾಯಕ ಮನೋಚಿಕಿತ್ಸೆ ಹೆಚ್ಚು ಫಲಕಾರಿ.