ಯುಗ ಯುಗಗಳ ಯಾತನೆಯೇ
ಮೂರ್ತೀಭವಿಸಿದ ಮಗುವೇ,
ನಿನಗೆಲ್ಲಿದೆ ನೆಲೆ ತಲೆಯಿಡಲು
ಎಲ್ಲಿದೆ ತಬ್ಬಿಕೊಂಡು ಸಂತೈಸುವ ಮಡಿಲು ?

ದಾರಿಯುದ್ದಕೂ ಕುಲುಮೆ ಬೆಂಕಿಗಳ
ಸುತ್ತಿಗೆ-ಅಡಿಗಲ್ಲಿನ ಮಧ್ಯೆ
ಮುರಿದ ಸೇತುವೆಯ, ಮೊರೆವ ಹೊನಲುಗಳ
ಅಬ್ಬರಗಳ ದಡಗಳ ಮೇಲೆ

ಮುಚ್ಚಿದ ಬಾಗಿಲ ಹೊರಗೇ ಉರುಳುವ
ಕುರುಡುಚಕ್ರಗಳ ನಡುವೆ,
ಕರೆಯುವ ಕೊರಳಿಲ್ಲದ, ನಗೆ ಮೂಡದ
ಮುಖವಿಲ್ಲದ ಹುಬ್ಬುಗಂಟುಗಳ ಜತೆಗೆ,

ದೀಪಾವಳಿಗಳ ಹಣತೆಯ ಕೆಳಗಿನ
ಕತ್ತಲಿನೊಳಗೇ ತೂರಿ,
ಕಮರಿ ಹೋಗುವೀ ಮುದ್ದಿನ ಮಗುವೇ
ನಿನಗೆಲ್ಲಿದೆ ಹೊರದಾರಿ ?