ನಿನ್ನದೆ ನೆಲ ನಿನ್ನದೆ ಜಲ
ನಿನ್ನದೆ ಆಕಾಶ
ಕಿಂಚಿತ್ತೂ ಅನುಮಾನಕೆ
ಇಲ್ಲವೊ ಅವಕಾಶ.

ಈ ನದಿಗಳು ಶತಮಾನವು
ಬೆಳೆದ ಕನಸು ನಿನ್ನದೆ.
ಈ ಜನತೆಯು ಬೆವರು ಸುರಿಸಿ
ದುಡಿದ ನನಸು ನಿನ್ನದೆ.

ಗಡಿಯುದ್ದಕು ಸಿಡಿಗುಂಡಿಗೆ
ಒಡ್ಡಿದ ಎದೆ ನಿನ್ನದೆ.
ಹಿಮಾಲಯದ ಶಾಂತಿಯಲ್ಲಿ
ಎತ್ತಿದ ತಲೆ ನಿನ್ನದೆ.

ನೂರಾಸೆಯ ಹೆಗಲೇರಿಸಿ
ನಡೆದ ದಾರಿ ನಿನ್ನದೆ
ಬರುವ ದಿನದ ಭರವಸೆಗಳ
ಬೆಳೆವ ಹೊಣೆಯು ನಿನ್ನದೆ