ಎಲ್ಲವೂ ನಿನ್ನಿಚ್ಛೆಯಂತೆ ನಡೆದಿರಲು
ನೀನೆ ಭವಸಾಗರವ ದಾಟಿಸುವ ಹಡಗು.
ನಿನ್ನ ಇಚ್ಛೆಯ ನೀನು ಪೂರೈಸುತಿರಲು
ತಮ್ಮ ಗೈಮೆಯಿದೆಂದು ತಿಳಿವರೀ ಜನರು !

ಕೆಸರಿನಲಿ ಸಲಗವನು ಹಿಡಿಯುವಳು ನೀನು
ಹೆಳವನನು ಗಿರಿಯ ತುದಿಗೊಯ್ಯುವಳು ನೀನು
ಹಲವರಿಗೆ ಬ್ರಹ್ಮಪದವಿತ್ತು, ಹಲವರನು
ಭವಜಲಧಿ ಸುಳಿಯೊಳಗೆ ಎಸೆಯುವಳು ನೀನು !

ನೀನು ಚಾಲಕ ಶಕ್ತಿ, ನಾನೊಂದು ಯಂತ್ರ !
ನಾನೊಂದು ಬರಿಯ ಮನೆ, ನೀನದರ ಮಂತ್ರ !
ನಾನೊಂದು ರಥವಾಗೆ, ನೀನದರ ರಥಿಕ
ನೀ ನಡಸೆ ನಾ ನಡೆವೆ, ನಿನ್ನದೀ ಲೋಕ !