ಷೇಕ್ಸ್‌ಪಿಯರ್ ಕಾಲವಾದ ಬಹಳ ಕಾಲದ ಬಳಿಕ ಒಬ್ಬ ಕವಿ ಒಂದು ಕವಿತೆಯಲ್ಲಿ ‘ಷೇಕ್ಸ್‌ಪಿಯರ್, ನೀನು ಎಲ್ಲ ಕಾಲಕ್ಕೂ ಇರುವವನು’ ಎಂದು ಉದ್ಗರಿಸಿದ್ದಾನೆ. ಮತ್ತೊಬ್ಬ ಕವಿ, ‘ಷೇಕ್ಸ್‌ಪಿಯರ್, ನೀನು ಗೋರಿಯಿಲ್ಲದ ಸ್ಮಾರಕ’ ಎಂದಿದ್ದಾನೆ. ಜಗತ್ತಿನಲ್ಲಿ ಸರ್ವ ಕಾಲವೂ ಇರಬೇಕೆಂಬ ಏಕಮಾತ್ರ ಉದ್ದೇಶದಿಂದ ನಿರ್ಮಾಣಗೊಂಡ ಅಸಂಖ್ಯಾತ ವೈವಿಧ್ಯಮಯ ಕಲ್ಲು, ಲೋಹ, ಸಿಮೆಂಟಿನ ಸ್ಮಾರಕಗಳಿವೆ. ಭೂಮಿ ಎಷ್ಟು ಕಾಲ ಇರುತ್ತದೆ ಎಂದು ಯಾರೂ ಹೇಳಲಾರರು. ಭೂಮಿ ಆಯಸ್ಸು ಎಷ್ಟು ಎಂದು ಯಾವ ಜ್ಯೋತಿಷಿಯೂ ಹೇಳಲಾರ. ‘ಎಲ್ಲದಕ್ಕೂ ಅಂತ್ಯವೆನ್ನುವುದಿದೆ ಎಂಬುದು ವಿಶ್ವನಿಯಮ’ ಎಂದು ವೈಜ್ಞಾನಿಕವಾಗಿ ತರ್ಕಿಸಬಹುದು ಅಷ್ಟೆ.

ಆದರೆ, ನಮಗೆ ಪ್ರಿಯವಾದ ಈ ಭೂಮಿ ಯಾವ ಪರಿಯಲ್ಲಿ ಕೊನೆಗೊಳ್ಳ್ಳುವುದು ಎಂದು ವಿಜ್ಞಾನಿಗಳಿಂದ ಇನ್ನೂ ಹೇಳಲಾಗಿಲ್ಲ. ಒಂದು ವೇಳೆ ಖಚಿತವಾಗಿ ಹೇಳಿದರೂ ಯಾರೂ ಅದನ್ನು ನಂಬುವುದಿಲ್ಲ. ತನಗೇ ಸಾವಿಲ್ಲ ಎಂಬಂತೆ ಜೀವಿಸುತ್ತಿರುವ ಮನುಷ್ಯ ಭೂಮಿ ಇಂತಿಂಥ ದಿನ ಕೊನೆಗೊಳ್ಳುತ್ತದೆ ಎಂದರೆ ನಂಬಲು ಸಿದ್ಧನಿದ್ದಾನೆಯೆ? ಕನಿಷ್ಟ ತಾನು ಜೀವಿಸಿರುವ ವರೆಗೆ ಕೊನೆಯಾಗುವುದಿಲ್ಲ ಎನ್ನುವ ದೃಢವಿಶ್ವಾಸ ಅವನದು!  ಕನಿಷ್ಟ ಒಂದು ಸಾವಿರ ವರ್ಷ ಬದುಕಲು ಸಾಧ್ಯವಾದರೆ, ಅದರ ಕೊನೆಯಲ್ಲಿ ಸಾಯಲು ಸಿದ್ಧನಿರುತ್ತಾನೆಯೆ ಮನುಷ್ಯ? ಖಂಡಿತ ಇಲ್ಲ. ಯಾಕೆಂದರೆ, ಮನುಷ್ಯನಿಗೆ  ತನ್ನ ಬದುಕಿನ ಸಂದರ್ಭದಲ್ಲಿ ಕಾಣಿಸುವುದು ಇಂದಿನ ದಿನ, ಅರ್ಥಾತ್ ವರ್ತಮಾನ ಮಾತ್ರ. ಅವನು ಬಯಸುವುದು ವರ್ತಮಾನದ ಮುಂದುವರಿಕೆಯನ್ನು.

ನಾಳೆಗಾಗಿ ಸ್ಮಾರಕವನ್ನು ನಿರ್ಮಿಸುವುದರಲ್ಲಿ ಮನುಷ್ಯನಿಗೆ ಇವತ್ತು ಸಮಾಧಾನ ಸಿಗುತ್ತದೆ. ಷೇಕ್ಸ್‌ಪಿಯರ್ ಶತಮಾನಾನಂತರದ ಪ್ರೇಕ್ಷಕರಿಗಾಗಿ ನಾಟಕ ರಚಿಸಿದ್ದಲ್ಲ. ಅವನು ನಾಟಕ ರಚಿಸಿದ್ದು ಅಂದಿನ ಪ್ರೇಕ್ಷಕರಿಗಾಗಿ, ಅಂದಂದಿನ ಪ್ರದರ್ಶನಕ್ಕಾಗಿ. ಇದು ಎಲ್ಲ ಕಾಲಕ್ಕೂ ಸಲ್ಲುವಂಥದು ಎಂದು ಆ ದಿನ ನಿರ್ಧಾರವಾಗುವುದಿಲ್ಲ. ಅದನ್ನು ನಿರ್ಧರಿಸುವುದು ಕಾಲ. ಎಷ್ಟೋ ವಿಚಾರದಲ್ಲಿ ಬಹಳ ಕಾಲದ ಅನಂತರ.

ರಾಮಾಯಣ ಮತ್ತು ಮಹಾಭಾರತದ ಶಾಶ್ವತತೆಗೆ ಕಾರಣ ಕಥೆ. ರಾಮಾಯಣದಂತೆ ಸಾವಿರಾರು ಕಥೆಗಳು ಕೂಡ ಶಾಶ್ವತವಾಗಿ ಉಳಿದಿವೆ. ಜನಪದದಲ್ಲಿರುವ ಕಥೆಯನ್ನು ಕ್ರೋಡೀಕರಿಸಿ ಕಥಾ- ಕಾವ್ಯ ರೂಪದಲ್ಲಿ ಬರೆದಿಡುವ ಕೆಲಸವನ್ನು ವಾಲ್ಮೀಕಿ ಮತ್ತು ವ್ಯಾಸ ಮಾಡಿದ್ದು ಅಂದಿನ ಅವನ ಕಾಲಕ್ಕಾಗಿಯೇ. ರಾಮಾಯಣ ಕಥೆಯಂತಹ ಸಾವಿರಾರು ಕಥೆಗಳು ಪ್ರಪಂಚದಲ್ಲಿವೆ. ಆ ಕೆಲಸವನ್ನು ಗ್ರೀಸಿನಲ್ಲಿ ಹೋಮರ್ ಮಾಡಿದ್ದಾನೆ. ಷೇಕ್ಸ್‌ಪಿಯರಿಗೂ ನಾಟಕ ರಚನೆಗೆ ಸಿಕ್ಕಿದ್ದು ಅಂಥ ಕಥೆಗಳೇ. ಅಂಥ ಕಥೆಗಳು ಇವತ್ತು ಕೂಡ ಕಾವ್ಯರೂಪದಲ್ಲಿ, ನಾಟಕ ರೂಪದಲ್ಲಿ, ಕಾದಂಬರಿ ರೂಪದಲ್ಲಿ ಪುನರ್ನಿರ್ಮಾಣಗೊಳ್ಳುತ್ತಿರುತ್ತವೆ. ಇದರಿಂದ ನಾವು ಅಮೂರ್ತ ರೂಪದ ವಸ್ತು ಶಾಶ್ವತ, ಮೂರ್ತ ರೂಪದಲ್ಲಿರುವ ರೂಪ ಅಥವಾ ಆಕೃತಿ ಮನುಷ್ಯನ ಕೈಯಲ್ಲಿ ಹೊಸ- ಹೊಸ ರೂಪ ಪಡೆಯುವಂಥದು ಎಂದು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಷೇಕ್ಸ್‌ಪಿಯರೇ ಒಂದು ಸಾನೆಟಿನಲ್ಲಿ ‘ಲೋಹ, ಶಿಲೆ, ಮಣ್ಣು ಮತ್ತು ಸೀಮಾತೀತ ಸಾಗರದ ಮೇಲೂ ವಿಜೃಂಭಿಸುವುದು ನಶ್ವರತೆ. ಉಳಿಯವುದು ನನ್ನ ಕವಿತೆಯೊಳಗಿರುವ ಪ್ರೀತಿ’ ಎಂದು ಹೇಳಿದ್ದಾನೆ. ನನ್ನ ಕವಿತೆ ಉಳಿಯುತ್ತದೆ ಎಂದು ಅವನು ಹೇಳಿಲ್ಲ. ಆದರೂ ಅದು ಈ ತನಕ ಉಳಿದಿದೆ ಎನ್ನುವುದು ನಿಜ. ಉಳಿದಿರುವುದು ಅದು ಸಾನೆಟಾಗಿರುವ ಕಾರಣದಿಂದಲ್ಲ, ಅದರೊಳಗಿರುವ ವಸ್ತುವಿನಿಂದ. ”ನನ್ನ ಸಾಹಿತ್ಯ ಶಾಶ್ವತವಾದುದು, ಸಾರ್ವಕಾಲಿಕ ಮೌಲ್ಯವುಳ್ಳದ್ದು” ಎಂದು ಲೇಖಕನೊಬ್ಬ ಹೇಳಬಹುದೆ? ಹಾಗೆ ಹಿಂದಿನ ಕೆಲವು ಕನ್ನಡ ಕವಿಗಳು ಹೇಳಿಕೊಂಡದ್ದಿದೆ. ಆದರೆ, ಅದು ಬರೀ ರೆಟರಿಕ್. ಹಾಗೆ ಹೇಳಿದವರೂ ಕೂಡ ಎತ್ತಿಕೊಂಡದ್ದು ಎಂದಿಗೂ ಸಲ್ಲುವಂಥ ಆವಾಗಲೇ ಇದ್ದಂಥ ಕಥಾವಸ್ತುಗಳನ್ನೇ. ವಸ್ತು ಅವರ ಸೃಷ್ಟಿಯಾಗಿರಲಿಲ್ಲ. ಆಕೃತಿ ಮಾತ್ರ ಅವರ ಸೃಷ್ಟಿಯಾಗಿತ್ತು. ಅದೇ ಆವೆ ಮಣ್ಣು; ಮೂರ್ತಿ ಮಾತ್ರ ಹೊಸತು.

ಇಪ್ಪತ್ತನೇ ಶತಮಾನದ ಮಧ್ಯ ಕಾಲದ ವರೆಗೂ ಕನ್ನಡ ಸಾಹಿತ್ಯದಲ್ಲಿ ಸಮಕಾಲೀನ ವಸ್ತುವನ್ನು ತೆಗೆದುಕೊಂಡು ಬರೆಯುವ ಮನೋಧರ್ಮ ಇರಲಿಲ್ಲ. ಇದ್ದರೂ ಗಮನಿಸಿಕೊಳ್ಳುವಷ್ಟಿರಲಿಲ್ಲ. ಇಂಗ್ಲಿಷಿನಲ್ಲಿ ಸಮಕಾಲೀನ ವಸ್ತುವಿನ ಆಯ್ಕೆ ಷೇಕ್ಸ್‌ಪಿಯರ್ ಕಾಲದಿಂದಲೇ ಅರಂಭವಾಯಿತು. ಕಾದಂಬರಿ ಪ್ರಕಾರ ಆರಂಭಗೊಂಡ ನಂತರದ ಕಳೆದ ಇನ್ನೂರೈವತ್ತು ವರ್ಷಗಳಲ್ಲಿ ಬರಹ ಎನ್ನುವ ಕಾಯಕ ವರ್ತಮಾನದ ಕುರಿತೇ ಎಂದಾಯಿತು. ವಸ್ತುವಿಗಾಗಿ ಪುರಾಣಗಳನ್ನು ನೆಚ್ಚುವ, ಹಳೆಯ ಕಥೆಯನ್ನು ನವೀಕರಿಸುವ ಸಂಪ್ರದಾಯವಂತೂ ಮೊದಲೇ ಇರಲಿಲ್ಲ. ಅದ್ದರಿಂದ ‘ಕಾವ್ಯ ಕಾವ್ಯಕ್ಕಾಗಿಯಲ್ಲ. ಕಾವ್ಯ ಮನುಷ್ಯನಿಗಾಗಿ’ ಎಂಬ ಸಾಹಿತ್ಯ ಧೋರಣೆ ನೆಲೆನಿಂತುದು ಸ್ವಾಭಾವಿಕವೇ ಅಗಿತ್ತು.

ಸೃಜನಶೀಲತೆ ಮತ್ತು ಪ್ರಸ್ತುತ ವಸ್ತು

ಕನ್ನಡದಲ್ಲೇನಾಯಿತು? ಸಾಹಿತ್ಯವನ್ನು ಗಂಭೀರವಾಗಿ ತಗೆದುಕೊಂಡು ಬರೆಯುವವರಿಗೆ, ಅದು ಪ್ರತಿಶತ ಸೃಜನಶೀಲ ಕೆಲಸ ಎಂದು ಘೋಷಿಸಿಕೊಂಡವರಿಂದ ಅದರಂತೆ ನಡೆಯಲಾಗಲಿಲ್ಲ. ಅವರ ಶ್ರೇಷ್ಠತೆ ಮತ್ತು ಶಾಶ್ವತತೆಯ ವ್ಯಸನ ಮತ್ತೆ ಅವರನ್ನು ಪುರಾಣದ ಕಡೆಗೇ ನೂಕಿತು. ಕೆಲವರು ಇತಿಹಾಸ ಮತ್ತು ಜಾನಪದಕ್ಕೆ ಶರಣಾದರು. ಅಲ್ಲಿಯೂ ಪ್ರತಿಭಾವಂತರು ಒಳ್ಳೆಯ ಕೆಲಸ ಮಾಡಿದರೆನ್ನಬಹುದು.

ಆದರೆ, ಇದರಿಂದಾದ ಪ್ರತಿಗಾಮಿ ಬೆಳವಣಿಗೆಯೆಂದರೆ ಯಶಸ್ವೀ ಲೇಖಕನಾಗಲು ಅಂಥ ವಸ್ತುಗಳೇ ಒಳ್ಳೆಯದು ಎನ್ನುವ ಭಾವನೆ ಹೊಸ ಲೇಖಕರಲ್ಲಿ ಉಂಟಾದದ್ದು. “ನಾನು ಸೃಜನಶೀಲ ಲೇಖಕ. ನನ್ನ ಕಥೆಗೆ ಸಮಕಾಲೀನ ಸಮಾಜದ ಸಮಸ್ಯೆಗಳು ಬೇಕಾಗಿಲ್ಲ” ಎನ್ನುವ ಧೋರಣೆ. ಈ ಧೋರಣೆಯಿಂದ ಯಾವುದೇ ಸಾಮಾಜಿಕ ‘ಸಮಸ್ಯೆ’ ಇಲ್ಲದ ಕೌಟುಂಬಿಕ ಕಥೆಗಳನ್ನು ರಚಿಸುವುದು ಸೃಜನಶೀಲತೆ ಎಂಬ ನಂಬಿಕೆಯುಂಟಾಯಿತು. ಇದರಲ್ಲಿ ಲೇಖಕ ತನ್ನ ಭಾಷಾ ವೈಶಿಷ್ಟ್ಯ ಮತ್ತು ಭಾಷಾ ಪ್ರೌಢಿಮೆಯನ್ನು ಮೆರೆಯಬಹುದಾದರೂ ಕಥೆಯಿಂದ ಕಥೆಗೆ ಹೊಸತು ಎನ್ನುವುದು ಕಥಾವಸ್ತು ಮಾತ್ರ ಎಂದಾಯಿತು. ಲೇಖಕನಿಗೆ ಈ ಮಾಡೆಲನ್ನು ಕಾಪಾಡಿಕೊಂಡು ಬರಬೇಕಾದ್ದು ತನ್ನ ‘ಅನನ್ಯತೆ’ಗೆ ಅನಿವಾರ್ಯ ಎನಿಸಿದ್ದರಿಂದ ಹೊಸ ವಿಚಾರ, ಹೊಸ ಪ್ರಯೋಗ ಇಲ್ಲವಾಯಿತು.

ಇಪ್ಪತ್ತನೆಯ ಶತಮಾನದ ಕೊನೆಯಲ್ಲಿ, ತಣ್ಣಗಿದ್ದ ರಾಮಾಯಣವನ್ನು ಟಿವಿ ಸೀರಿಯಲ್ ಹೊಡೆದೆಬ್ಬಿಸಿ ದೇಶಾದ್ಯಂತ ರಾಮಯಣೋನ್ಮಾದವನ್ನೇ ಉಂಟುಮಾಡಿತು. ಸೀರಿಯಲಿನ ಪಾತ್ರಧಾರಿಗಳೂ ದೇವ- ದೇವಿಯರಾಗಿಬಿಟ್ಟರು! ಕಥೆಯ ಭೂತಕಾಲ ನಿಜದ ವರ್ತಮಾನಕಾಲವಾಗಿಬಿಟ್ಟಿತು! ಪ್ರತಿಭಾಲೇಖನಿಗಳಲ್ಲಿ ಕೂಡ ರಾಮಾಯಣ ಚೈತನ್ಯದ ಮಸಿ ತುಂಬಿಕೊಂಡು, ನಾಲ್ಕೈದು ಉತ್ತಮ ಕಾದಂಬರಿಯನ್ನು ಬರೆಯುವ ಸಾಮರ್ಥ್ಯವಿದ್ದವರ ಪ್ರತಿಭೆ ಕೂಡ ಪುರಾಣಮುಖಿಯಾಯಿತು. ಮತ್ತೆ ‘ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ’!

ವಾಲ್ಮೀಕಿ ವ್ಯಾಸ ಸಹ ತಾವು ರಚಿಸಿದ ಕೃತಿಗಳಲ್ಲಿ ತಾವೇ ಪಾತ್ರಗಳಾಗಿ ಸಮಕಾಲೀನತೆಗೆ ಸಾಕ್ಷಿಗಳಾಗಿ ಸಮಕಾಲೀನವಾದುದೇ ಸಾರ್ವಕಾಲಿಕವಾಗುವುದು ಎಂದು ತೋರಿಸಿಕೊಟ್ಟರು. ನಿಜ. ಹನ್ನೆರಡು- ಹದಿನಾಲ್ಕನೇ ಶತಮಾನದ ವೀರಶೈವ ಸಾಹಿತ್ಯವೂ ಅದಕ್ಕೆ ಸಾಕ್ಷಿಯಾಗಿದೆ. ಹತ್ತೊಂಬತ್ತನೇ ಶತಮಾನದಲ್ಲಿ ಸುಮಾರು ನೂರು ಲೇಖಕರಿಂದ ಸೃಷ್ಟಿಯಾದ ನೂರಾರು ಕೃತಿಗಳೂ ಅದಕ್ಕೆ ಸಾಕ್ಷಿಯಾಗಿವೆ. ಇಂಗ್ಲಿಷ್ ಸಾಹಿತ್ಯ, ಅದರಲ್ಲೂ ಕಾದಂಬರಿ ಪ್ರಕಾರದ ಕಡೆಗೆ ಜಗತ್ತಿನ ಗಮನವನ್ನು ಸೆಳೆದ ಮಹತ್ವದ ಕಾಲ ಅದು! ವೀರಶೈವ ಸಾಹಿತ್ಯವನ್ನು ಹೊರತುಪಡಿಸಿ, ಇಪ್ಪತ್ತನೇ ಶತಮಾನದ ವರೆಗಿನ ಕನ್ನಡ ಸಾಹಿತ್ಯ ಚರಿತ್ರೆಯ ಪುಟಗಳನ್ನು ತೆರೆದು ನೋಡಿದರೆ ಸಮಕಾಲೀನ ಚಿಂತನೆಗೆ ಎಷ್ಟು ಸಾಕ್ಷಿ ಸಿಗುತ್ತದೆ? ಬಹುಶಃ ಇಲ್ಲವೇ ಇಲ್ಲ!

ಲೇಖಕ ಬರೆಯಬೇಕಾದ್ದು ಮುಖ್ಯವಾಗಿ ತನ್ನ ಸುತ್ತ ಇರುವ ತನ್ನಂತಹ ಮನುಷ್ಯರ ಸುಖ- ದುಃಖಗಳ ಕುರಿತು. ಗದ್ಯದಲ್ಲಿಯೂ ಪದ್ಯದಲ್ಲಿಯೂ ಅದೇ ಮುಖ್ಯ. ಹಾಗೆ ಬರೆದೇ ಅಕ್ಕಮಹಾದೇವಿ, ಬಸವಣ್ಣ ಅಮರರಾದುದು. ಹಾಗೆ ಬರೆದೇ ಷೆಲ್ಲಿ, ಕೀಟ್ಸ್, ಮ್ಯಾಥ್ಯೂ ಅರ್ನಾಲ್ಡ್, ಬ್ರೌನಿಂಗ್, ಟೆನಿಸನ್, ಹಾರ್ಡಿ, ಡಿಕಿನ್ಸ್, ಎಲಿಯಟ್ ಮುಂತಾದವರೆಲ್ಲ ಸರ್ವಕಾಲೀನರಾದದ್ದು. ಯಾವ ಹೊತ್ತು ಬೇಕೆಂದರೂ ಪುಸ್ತಕದಂಗಡಿಯಲ್ಲಿ ಅವರ ಕೃತಿಗಳು ಸಿಗುತ್ತದೆಯೆಂದಾದರೆ ಮತ್ತು ಪುಸ್ತಕ ಬೇಕು ಎಂದು ಹೇಳುವವರಿದ್ದಾರೆಂದಾದರೆ ಸಾರ್ವಕಾಲೀನತೆಗೆ ಬೇರೇನು ಸಾಕ್ಷಿ ಬೇಕು?

ಸಮಕಾಲೀನತೆ ಮತ್ತು ಜನಮನ

ಸಮಕಾಲೀನ ಸಾಹಿತ್ಯ ಪ್ರಯೋಗಶಾಲೆಯಲ್ಲಿ ತಯಾರಾಗಲಾರದು. ಅದು ಹಿಂದಿನ ಕಾಲದಲ್ಲಿ ರಾಜನ ಆಸ್ಥಾನದಲ್ಲಿ ಬೆಳೆಯುತ್ತಿದ್ದ ಹಾಗೆ ಬೆಳೆಯದು. ಅದು ಬೆಳೆಯಬೇಕಾದ್ದು ಜನರ ನಡುವೆ. ಅದಕ್ಕೆ ಜನರ ಆದರ ಮತ್ತು ಪ್ರೋತ್ಸಾಹ ಅನಿವಾರ್ಯ. ಯಾಕೆಂದರೆ, ರಾಜನ ಆಸ್ಥಾನದಲ್ಲಿದ್ದ ಕವಿಯ ಬದುಕಿನ ಪರಿಸ್ಥಿತಿ ಬೇರೆ, ಇಂದಿನ ಸಮಾಜದಲ್ಲಿ ಬದುಕುವ ಕವಿಯ ಬದುಕಿನ ಪರಿಸ್ಥಿತಿ ಬೇರೆ. ಅಂದಿನ ಲೇಖಕ ಕಂಡದ್ದನ್ನು ಕಂಡ ಹಾಗೆ ಬರೆಯುತ್ತಿರಲಿಲ್ಲ. ತಲೆ ಉಳಿಸಿಕೊಳ್ಳಬೇಕೆಂದಿದ್ದರೆ ಹಾಗೆ ಬರೆಯಲು ಸಾಧ್ಯವೂ ಇರಲಿಲ್ಲ. ಕವಿಗಳೆಲ್ಲ ಪೌರಾಣಿಕ ಕಥಾವಸ್ತುವನ್ನು ಅಯ್ಕೆ ಮಾಡಿಕೊಳ್ಳಲು ಅದೂ ಒಂದು ಕಾರಣವಾಗಿರಬಹುದು. ಆಸ್ಥಾನದಲ್ಲಿ ಪಂಡಿತರ ಜೊತೆ ಕುಳಿತುಕೊಳ್ಳಬೇಕಾಗಿತ್ತಲ್ಲ! ಕಾಳಿದಾಸ ಮಹಾಕವಿಗೆ ಸಹ ತನ್ನದೇ ಅದ ಕಲ್ಪನಾ ಕಥೆಯಲ್ಲಿ  ಕೂಡ ದುಷ್ಯಂತ ಶಕುಂತಳೆಗೆ ಮಾಡಿದ ಅನ್ಯಾಯವನ್ನು ನೇರವಾಗಿ ಹೇಳಲಾಗಲಿಲ್ಲ. ಅದಕ್ಕಾಗಿ ಪುರಾಣದಲ್ಲಿ ‘ಸ್ಥಾಯೀ ವಸ್ತು’ವಾಗಿರುವ ದೂರ್ವಾಸನ ಕ್ರೋಧ ಮತ್ತು ಶಾಪವನ್ನು ಬಳಸಿಕೊಳ್ಳಬೇಕಾಯಿತು!

ಆ ಕಾಲದ ಸಮಾಜದಲ್ಲಿ ದೌರ್ಜನ್ಯ, ಭ್ರಷ್ಟಾಚಾರ, ಅನ್ಯಾಯ- ಅನೀತಿ, ಇರಲಿಲ್ಲ ಎನ್ನಲಿಕ್ಕಾದೀತೆ? ಕೃತಯುಗದಲ್ಲಿ, ರಾಮಾಯಣ ಕಾಲದಲ್ಲಿ ರಾವಣ ಸೀತೆಯನ್ನು ಅಪಹರಿಸಲಿಲ್ಲವೆ? ಅದಕ್ಕೂ ಹಿಂದೆ ಅವನು ಮಹೇಶ್ವರನ ಹೆಂಡತಿಯನ್ನೇ ಎತ್ತಿಕೊಂಡು ಹೋಗಲಿಲ್ಲವೆ? ದ್ವಾಪರದಲ್ಲಿ, ಕೌರವನ ಸಾಮ್ರಾಜ್ಯದಲ್ಲಂತೂ ಎಲ್ಲಾ ಬಗೆಯ ಅನೀತಿ ಅನಾಚಾರಗಳು ಯಥೇಚ್ಛವಾಗಿ ಇದ್ದುವು ಎಂದು ಮಹಾಭಾರತವೇ ಹೇಳುತ್ತದೆ. ಆದರೂ ವ್ಯಾಸನ ಹೊರತು ಯಾರೂ ಆ ಕುರಿತು ಯಾಕೆ ಬರೆಯಲಿಲ್ಲ? ವಾಲ್ಮೀಕಿಯ ನಂತರದ ಎರಡು ಶತಮಾನಗಳಲ್ಲಿದ್ದುದು ಅವನೊಬ್ಬನೇ ಪ್ರತಿಭಾವಂತನೆ? ಬರೆಯುವವರು ಬೇರೆ ಇರಲಿಲ್ಲವೆ? ಅಥವಾ ಇನ್ನೂರು ವರ್ಷಗಳಲ್ಲಿ ಹತ್ತಾರು ಮಂದಿ ಬರೆದಿರಿಸಿದ್ದನ್ನು ವ್ಯಾಸನೆಂಬ ಒಬ್ಬ ಲೇಖಕ ಸಂಪಾದಿಸಿ, ಗಣಪತಿಯೆಂಬ ಉಪಸಂಪಾದಕನ ಮೂಲಕ ಬರೆದಿರಿಸಿದನೆ? ಅಥವಾ ಮತ್ತೆ ಹಾಗೆ ಸಂಪಾದಿಸಿ ಕ್ರೋಡೀಕರಿಸಿ ಬರೆದವರೆಲ್ಲರನ್ನು ವ್ಯಾಸ ಎಂಬ ಅಭಿದಾನದಿಂದ ಗುರುತಿಸಲಾಯಿತೆ? ‘ವ್ಯಾಸ’ ಎಂದರೆ ‘ಸಂಪಾದಕ’ ಎಂದರ್ಥವಿದ್ದಿರಬಹುದೆ? ಕೃಷ್ಣನೆಂಬ ಐತಿಹ್ಯ ಪುರುಷ (ಲಿಜೆಂಡರಿ ಫಿಗರ್)ನನ್ನು ದೇವರಾಗಿಸಿದ್ದು ಮತ್ತು ಭಗವದ್ಗೀತೆಯನ್ನು ಅವನ ನಾಲಿಗೆಯಿಂದ ಹೊರಟಂತೆ ಚಿತ್ರಿಸಿದ್ದು, ಈ ಸಂಪಾದಕನ ಕೆಲಸವೇ ಅಲ್ಲವೆ? ಹಾಗೆ ಮಾಡಲು ವ್ಯಾಸನ ಮೇಲೆ ಏನಾದರೂ ಧಾರ್ಮಿಕ ರಾಜಸತ್ತಾತ್ಮಕ ಒತ್ತಡ ಇದ್ದಿರಬಹುದೆ? ಏನಿದ್ದರೂ ದ್ವಾಪರ ಯುಗದ ಆ ಕತೆಯ ಫೈನಲ್ ಪ್ರೂಫ್ ತಯಾರಾದದ್ದು ಮತ್ತು ಅದರ ಕೊನೆಯ ‘ಸಂಪಾದನೆ’ ನಡೆದದ್ದು ದ್ವಾಪರ ಯುಗದಲ್ಲಿ ಅಲ್ಲ, ಅನಂತರದ ಯಾವನೋ ಒಬ್ಬ ಆಳರಸನ ಕಾಲದಲ್ಲಿ ಎಂದು ತರ್ಕಿಸಬಹುದು.

ಅದೇನೇ ಇರಲಿ. ಇವತ್ತು ಪ್ರಜಾಪ್ರಭುತ್ವ ಎಲ್ಲಿದೆಯೋ ಅಲ್ಲಿ ಸಾಹಿತ್ಯಕ್ಕೆ ಅಂಥ ಸಂಪಾದಕ ಬೇಡ. ಅವನು ಯಾರ ಒತ್ತಡಕ್ಕೂ ಒಳಗಾಗಬೇಕಾಗಿಲ್ಲ. ಯಾರನ್ನೂ ಓಲೈಸಬೇಕಾಗಿಲ್ಲ. ಅವನಿಗೆ ಬೇಕಾದ್ದು ಧೈರ್ಯ ಮತ್ತು ಸಮಕಾಲೀನ ಸಮಾಜಪ್ರಜ್ಞೆ. ವಸ್ತುವಿಗಂತೂ ಪುರಾಣ ಬೇಕಾಗಿಲ್ಲ. ಹೊಸ- ಹೊಸ ವಸ್ತುಗಳಿವೆ. ಆದರೂ ಸಾಹಿತ್ಯ ಯಾಕೆ ಕುಂಟುತ್ತಿದೆ? ಕಾರಣ ಸ್ಪಷ್ಟವಿದೆ. ಜನಮನ ಸಾಹಿತ್ಯಕ್ಕೆ ಸ್ಪಂದಿಸುತ್ತಿಲ್ಲ. ಸ್ಪಂದಿಸಬೇಕು ಎಂದು ಜನಮನಕ್ಕೆ ಗೊತ್ತಿದ್ದರೂ ಸ್ಪಂದಿಸುತ್ತಿಲ್ಲ. ಹಸಿವಿದ್ದರೂ ತಿನ್ನುವುದಿಲ್ಲ ಎಂದು ಹಠ ಮಾಡುವ ಮಗುವಿನ ಹಾಗೆ. ತನಗಾಗುತ್ತಿರುವುದು ಹಸಿವು ಎಂದು ಮಗುವಿಗೆ ತಿಳಿಯದಿರುವ ಸಂದರ್ಭಗಳಿವೆ. ಅಷ್ಟೇ ಅಲ್ಲ ತನಗೇನು ಬೇಕು ಎಂದು ಕೂಡ ಮಗುವಿಗೆ ತಿಳಿಯುವುದಿಲ್ಲ. ಎಲ್ಲವನ್ನೂ ಮಗು ತಿರಸ್ಕರಿಸುತ್ತದೆ! ಉಪವಾಸದಿಂದ ಬಳಲುತ್ತದೆ. ತಾಯಿ ವೈದ್ಯರ ಬಳಿ ಹೋಗುತ್ತಾಳೆ. ವೈದ್ಯರು ‘ಅಪಿಟೈಸರ್’ ಬರೆದುಕೊಡುತ್ತಾರೆ. ತಾಯಿ ಬಲವಂತ ಮಾಡದಿದ್ದರೆ ಮಗು ಅದನ್ನು ಸಹ ಕುಡಿಯುವುದಿಲ್ಲ!  ಸಾಹಿತ್ಯದ ವಿಚಾರದಲ್ಲಿ ಈಗ ಆಗಿರುವುದು ಬಹು ಮಟ್ಟಿಗೆ ಹಾಗೆ.

ಜನಮನವನ್ನು ಪ್ರಜ್ಞಾಶೀಲವಾಗಿರಿಸುವುದು ಸಾಹಿತ್ಯ. ಸಮಾಜದಲ್ಲಿ ವಿಚಾರಶೀಲತೆಯನ್ನು ಎಚ್ಚರದಲ್ಲಿಡುವುದು ಸಾಹಿತ್ಯ. ಮಾನವ ಸಮುದಾಯದ ಆತ್ಮವನ್ನು ಸಾಂಸ್ಕೃತಿಕವಾಗಿ ಸುಖವಾಗಿಡಬೇಕಾದ್ದು ಮತ್ತು  ಜ್ಞಾನದ ಹಸಿವನ್ನು ಕಾಪಾಡಬೇಕಾದ್ದು ಸಾಹಿತ್ಯ. ಇದೆಲ್ಲ ತಿಳಿದಿದ್ದರೂ ಯಾವ್ಯಾವುದಕ್ಕೆಲ್ಲ ತೆರೆದುಕೊಳ್ಳುವ ಜನಮನ ಸಾಹಿತ್ಯಕ್ಕೆ ಯಾಕೆ ಸ್ಪಂದಿಸುತ್ತಿಲ್ಲ? ನಮಗೀಗ ಉತ್ತರ ಬೇಕಾಗಿರುವುದು ಈ ಪ್ರಶ್ನೆಗೆ. ನೆಲದ ಭಾಷೆ ಉಳಿಯುವುದು ಬಡಜನರ ನಾಲಿಗೆಯಲ್ಲಿ; ಸಾಹಿತ್ಯದ ಮೂಲಕ  ಭಾಷೆ ಅಲ್ಲಿ ಉಳಿಯಬೇಕು. ಸಾಮಾಜಿಕ ಪರಿವರ್ತನೆ ಸಾಧ್ಯವಾಗುವುದು ಮಧ್ಯಮವರ್ಗೀಯರ ಇಚ್ಛಾಶಕ್ತಿಯಲ್ಲಿ. ಸಾಹಿತ್ಯದ ಮೂಲಕ ಅಲ್ಲಿ ವಿಚಾರಶಕ್ತಿ ಬೆಳೆಯಬೇಕು.