ಓ ! ನಿನ್ನ ಕಣ್ಣಿನಲ್ಲಿ ಏನಿದೆಯೋ ಕಾಣೆನೆ !
ನನ್ನ ಕುರಿತ ಕನಸೊ ಕಥೆಯೊ
ತೋಡಲಾರದಂಥ ವ್ಯಥೆಯೊ
ಏನಿರುವುದೊ ಕಾಣೆನೆ !
ನೋಡಿ ನೋಡಿ ಕಾಣದಾದೆ
ಮುಳುಗಿ ಮುಳುಗಿ ತಳ ಕಾಣದೆ
ಮತ್ತೆ ಮೇಲೆ ಬಂದು ದಡದ
ಹಸುರ ಮೇಲೆ ನಿಡುಸುಯ್ಯುವೆ
ನಿನ್ನ ಕಣ್ಣಿನಾಳದಲ್ಲಿ ಏನಿರುವುದೊ ತಿಳಿಯದೆ.

ಮಿರು ಮಿರುಗುವ ನಿನ್ನ ಈ ಕಣ್ಣ ಕಡಲಿನೊಳಗಡೆ
ಏನಿರುವುದೊ ಕಾಣೆನೆ.
ದೂರ ದೂರ ಸಾಗಿದಂತೆ
ಯಾವ ಕಾಡು ಯಾವ ಮೇಡು
ಯಾವ ಗುಡ್ಡ ಯಾವ ಬೆಟ್ಟ
ಯಾವ ಕನಸಿನೊಂದು ದ್ವೀಪ
ಯಾವ ಸುಪ್ತ ಜ್ವಾಲಾಮುಖಿ
ಯಾವ ಒಂದು ನಂದನ
ಅಥವಾ ಬೃಂದಾವನ
ಏನಿರುವುದೊ ಕಾಣೆನೆ !
ತೆರೆ ಮಿರುಗುವ ನಿನ್ನ ಈ ಕಣ್ಣ ನೀಲಿಯೊಳಗಡೆ
ಏನಿದೆಯೋ ಕಾಣೆನೆ.

ನಿನ್ನ ಕಣ್ಣದೊಂದು ಕರೆ
ಸಾಹಸಕ್ಕೆ ಪಯಣಕೆ
ನಿನ್ನ ಕಣ್ಣದೊಂದು ಸೆರೆ
ಸುತ್ತ ಹರಿವ ಮನಸಿಗೆ
ಇರಬಹುದೋ ಇದು ಬಂದರು
ಕಂಬನಿಗಳ ದೋಣಿಗೆ
ಇದು ದಾರಿಯೊ ಏನೊ ಕಾಣೆ
ಹಳೆನೆನಪಿನ ಹಡಗಿಗೆ
ಏನಿದೆಯೋ ಏನಿದೆಯೋ
ಈ ಅಭೇದ್ಯ ಹೊಳಪಿನಲೆಗಳಾಚೆಗೆ
ಏನಿದೆಯೋ ತಿಳಿನೀಲಿಯ
ಇದರ ತಳಾತಳದಲಿ
ಅಯ್ಯೊ, ನಿನ್ನ ಕಣ್ಣಿನಲ್ಲಿ
ಏನಿದೆಯೋ ಕಾಣೆನೆ.

ಒಲವೊ ಹಗೆಯೊ ಭಯ ಶಂಕೆಯೊ
ಸೃಷ್ಟಿ ಪೂರ್ವ ಲಯ ಬೆಂಕಿಯೊ
ಏನಿರುವುದೊ ಕಾಣೆನೆ.
ಸೋತು ಸೋತು ಸುಮ್ಮನಾಗಿ
ರೆಪ್ಪೆ ಹಸುರ ದಡದ ಮೇಲೆ
ಬಂದು ಮಲಗಿ ನೋಡುತಿರುವೆ
ಈ ಕಡಲಿನ ಕೇಂದ್ರದಲ್ಲಿ
ಮಿಂಚು ಪ್ರಭೆಯ ಬೆಳಕಿನಲ್ಲಿ
ಮಿರು ಮಿರುಗುವ ದ್ವೀಪವ,
ಹೊಳಪ ಚಾಚಿ ಸದಾ ಕರೆವ
ಈ ಅಭೇದ್ಯ ಚೋದ್ಯವ.