ನಿನ್ನ ನಗು,
ಮುಂಜಾನೆ ಆಕಾಶಕ್ಕೆ ರಂಗೋಲಿ ಬರೆಯುವುದು
ಬಿಸಿಲ ಕೋಲಾಗಿಳಿದು, ಕಗ್ಗಾಡುಗಳ ಮಧ್ಯೆ
ಮಲಗಿದ ಕೊಳದ ತೆರೆಯ ಮೇಲಾಡುವುದು ;
ಮೊಗ್ಗಿನ ಕಣ್ಣ ತೆರೆದು, ಮರ ಮರದ ತೊಟ್ಟಿಲಲಿ
ಮಲಗಿದ ಹಕ್ಕಿಗೊರಳನು ತಟ್ಟಿ, ಬೆಟ್ಟದ ಮುಡಿಗೆ
ಬಂಗಾರವಾಗುವುದು.

ನಿನ್ನ ನಗು,
ಮಗು ತೆರೆದ ಹಾಲುಗಣ್ಣಿನ ತುಂಬ ಆಶ್ಚರ್ಯಗಳ
ಬಿತ್ತಿ ಬೆಳೆಯುವುದು ; ಕೆಚ್ಚಲ ಗುಮ್ಮಿ ಹಾಲ್ಕುಡಿವ
ಕರುಗಳ ಮೈಗೆ ಉತ್ಸಾಹವಾಗುವುದು ; ಹೊಳೆ-ಹಳ್ಳ
ಗಳ ನೀರಿನ ಗುಂಟ ಜುಳುಜುಳು ಹರಿದು ಕಡಲಲ್ಲಿ
ದಡಕ್ಕೆ ಅಪ್ಪಳಿಸುವುದು ; ತೆಂಗು ತೀರದ ತುಂಬ
ಗರಿ ಬಿಚ್ಚಿ ಆಡುವುದು.

ನಿನ್ನ ನಗು,
ಹೆಣ್ಣ ಕೆನ್ನೆಯ ತುಂಬ ಸೂಜಿಗಲ್ಲಾಗುವುದು,
ಗಂಡಿನೆದೆಯಲ್ಲಿ ಕಾಮನ ಬಿಲ್ಲ ನೆಯ್ಯುವುದು
ಮುದುಕರ ಸಂಜೆ ಮುಖದಲ್ಲಿ ಮೋಡಗಳ ನೆರಳ
ಹಾಸುವುದು; ಸ್ಮಶಾನದಲಿ ಉರಿವ ಚಿತೆಗಳ ಮೇಲೆ
ಜೋಕಾಲಿಯಾಡುವುದು.

ನಿನ್ನ ನಗು,
ಸಂಜೆ ಬಾನಿನ ತುಂಬ ನೆನಪುಗಳ ಬರೆಯುವುದು,
ಮನೆ ಮನೆಯ ಮಬ್ಬಿನಲಿ ದೀಪವಾಗುರಿಯುವುದು.
ಕತ್ತಲಿನ ಕಡಲಲ್ಲಿ ನಕ್ಷತ್ರಗಳ ಬಲೆ ಬೀಸಿ
ಸದ್ದಿರದೆ ಕಾಯುವುದು.