ಜಯ ಜಯ ಜಯ ಪರಬ್ರಹ್ಮ
ನೀನಪಾರ ಮೇಣಗಮ್ಯ
ಪರಾತ್ಪರನೆ ಸಾರಭೂತನೇ.
ಸತ್ಯದ ಹೊಂಬೆಳಗು ನೀನು
ಪ್ರೇಮರಸದ ಬುಗ್ಗೆ ನೀನು
ಶುಭಮಂಗಳ ರೂಪನೇ.

ನಾನಾ ರಸ ಗಂಭೀರಭಾವ-
ಪೂರ್ಣವಾದ ವಿಶ್ವಕವನ
ಶೋಭಿಸುತಿದೆ ನಿತ್ಯವೂ !
ಮಹಾಕವಿ ನೀನಾದಿ ಶಕ್ತಿ,
ನಿನ್ನ ಬಗೆಯ ಛಂದದಲ್ಲಿ
ರವಿ ಶಶಿಗಳು ಮೂಡಿ ಚಲಿಸಿ
ಮುಳುಗುತಿಹವು ನಿನ್ನಲಿ !
ಕನಕ ರುಚಿಯ ತಾರೆಗಳಲಿ
ನಿನ್ನ ಮಹಿಮೆಯನ್ನು ಬರೆವೆ
ನೀಲಾಂಬರ ಪಟದಲಿ !

ಷಡ್‌ಋತುಗಳ ಸಂವತ್ಸರ
ಜಯಗಾಥೆಯ ಮೊಳಗಿಸುತ್ತ
ನಿನ್ನ ಸುತ್ತ ನಲಿದಿವೆ.
ಹೂವುಗಳಲಿ ನಿನ್ನ ಕಾಂತಿ
ಸಲಿಲಗಳಲಿ ನಿನ್ನ ಶಾಂತಿ
ಘನ ರವದಲಿ ನಿನ್ನ ನಿಯತಿ
ಜಗಕೆಲ್ಲವು ಮೊಳಗಿದೆ !

ನಿನ್ನ ಸತ್ವ ಅತಿ ಅಗಾಧ
ಅದನು ತಿಳಿವನೆಂತು ಮೂಢ
ಕೋಟಿ ಸೂರ್ಯ ಕೋಟಿ ಚಂದ್ರ
ಯುಗ ಯುಗಗಳ ಮೊದಲಿನಿಂದ
ನಿನ್ನಸೀಮ ಪದತಲದಲಿ
ಬೆರಗಾಗುತ ಬಾಗಿವೆ.
ಈ ಮಹಿಮೆಯ ಕಂಡ ಜನದ
ಕಂಗಳೆಲ್ಲ ಆನಂದದ
ಕಂಬನಿಯನು ಕರೆದಿವೆ !

ದೇವ ದೇವ ನಮಿತ ಪ್ರಭೂ,
ಭಕ್ತಿಯ ಕೊಡು ; ಪ್ರೇಮವ ಕೊಡು,
ಅರಿವನು ಕೊಡು : ಶಾಂತಿಯ ಕೊಡು,
ಇದೊ ಪ್ರಣಾಮ ಓ ವಿಭೂ !