1.  ಭೂಗ್ರಹದ ಮೇಲೆ ನಾಲ್ಕು ಮಹಾಸಾಗರಗಳಿದ್ದು ಅವುಗಳಲ್ಲಿ ಪೆಸಿಫಿಕ್ ಮಹಾಸಾಗರವು ಅತ್ಯಂತ ವಿಶಾಲವಾಗಿದೆ. ಇದರ ವಿಸ್ತೀರ್ಣ 64ಮಿಲಿಯನ್ ಚದರ ಮೈಲಿಯಷ್ಟು. ಹೆಸರಿನ ಅರ್ಥ ಶಾಂತ ಸಾಗರವೆಂದಾದರೂ ಕೆಲವು ಬಾರಿ ಇದು ಭೋರ್ಗರೆಯುತ್ತದೆ. ಹವಾಮಾನದ ವೈಪರೀತ್ಯಗಳನ್ನು ಉಂಟು ಮಾಡುವುದರಲ್ಲಿ ಇದರದ್ದು ಸಿಂಹಪಾಲು. ಅಟ್ಲಾಂಟಿಕ್ ಮಹಾಸಾಗರದ ವಿಸ್ತೀರ್ಣ ಸುಮಾರು 40ಮಿಲಿಯನ್ ಚದರ ಕಿಮೀ ಇದ್ದು, ಇದು ಅಮೆರಿಕ, ಆಫ್ರಿಕ ಮತ್ತು ಯುರೊಪ್ ಖಂಡಗಳ ನಡುವಿನ ಸಂಪರ್ಕಸೇತುವೆ.  ಆದ್ದರಿಂದ ಇಲ್ಲಿ ಸದಾಕಾಲ ಹಡಗುಗಳು ಓಡಾಡುತ್ತಿರುತ್ತವೆ. ಹಿಂದೂ ಮಹಾಸಾಗರವು ಏಷ್ಯ, ಆಫ್ರಿಕಾ ಮತ್ತು ಆಸ್ಟ್ರೇಲಿಯಗಳ ನಡುವೆಯಿದೆ. ಸುಮಾರು 35ಮಿಲಿಯನ್ ಚದರ ಕಿಮೀ ಇದರ ವಿಸ್ತೀರ್ಣ. ಇನ್ನು ಅತ್ಯಂತ ಚಿಕ್ಕ ಮಹಾಸಾಗರ ಆರ್ಕ್ಟಿಕ್, ಕೇವಲ 8ಮಿಲಿಯನ್ ಚದರ ಕಿಮೀ ಇದರ ವಿಸ್ತೀರ್ಣ ಮತ್ತು ಇದರ ಹೆಚ್ಚಿನ ಭಾಗವು ಹಿಮಾಚ್ಛಾದಿತವಾಗಿದೆ.

2.  ಹವಳದ ಬಂಡೆಗಳು ವಿಶಾಲವಾಗಿ ಬೆಳೆಯುತ್ತವೆ. ಆಳವಲ್ಲದ, ಸೂರ್ಯ ಪ್ರಕಾಶ ಪ್ರವೇಶಿಸಬಲ್ಲ ಉಷ್ಣವಲಯದ ಪ್ರದೇಶಗಳಲ್ಲಿ ಮಾತ್ರ ಇವು ಬೆಳೆಯುತ್ತವೆ. ಇವನ್ನು ಸಾಗರದ ಉಷ್ಣವಲಯದ ಮಳೆಯ ಕಾಡು (Tropical Rain Forest)ಎಂದು ಕರೆಯುತ್ತಾರೆ.  ಅತ್ಯಂತ ವೈವಿಧ್ಯಮಯ ಜಲೀಯ ಸಸ್ಯ ಮತ್ತು ಪ್ರಾಣಿಗಳು ಇವುಗಳಲ್ಲಿ ವಾಸಿಸುತ್ತವೆ.  ಹವಳದ ಬಂಡೆಗಳನ್ನು ನಿರ್ಮಿಸುವ ಜೀವಿಗಳು ಪೊಲಿಪ್ (Polyp)ಎಂಬ ಹೆಸರಿನ ಅತಿ ಚಿಕ್ಕ ಕುಟುಕು ಕಣವಂತಗಳು. ನಮ್ಮ ಎಲುಬುಗಳ ರಚನಾ ವಿಧಾನದಲ್ಲಿಯೇ ಈ ಹವಳದ ಬಂಡೆಗಳು ನಿರ್ಮಾಣವಾಗುತ್ತಿದ್ದುದನ್ನು ಕಂಡುಕೊಂಡು ವಿಜ್ಞಾನಿಗಳು ಮಾನವನ ಎಲುಬು ಕಸಿ ಮಾಡಲು ಹವಳದ ಅಸ್ತಿಪಂಜರವನ್ನು ಬಳಸಬಹುದೆನ್ನುವುದನ್ನು ಆವಿಷ್ಕರಿಸಿದ್ದಾರೆ.

3.  ವಿಶ್ವದ ಯಾವತ್ತೂ ಜೀವಿಗಳಲ್ಲಿ ಪ್ರತಿಶತ 94ರಷ್ಟು ನೀರಿನಲ್ಲಿವೆ. ಭೂಮಿಯ ಮೇಲೆ ತುಂಬಿತುಳುಕುವಂತೆ ಕಾಣುವ ಒಟ್ಟು ಜೀವಿಗಳು ಈ ಗ್ರಹದ ಜೀವಿಗಳ ಕೇವಲ ಪ್ರತಿಶತ 6ರಷ್ಟು ಮಾತ್ರ !

4.  ಭೂಗ್ರಹದ ಪ್ರತಿಶತ 70ರಷ್ಟು ಪ್ರದೇಶ ಜಲಾವೃತವಾಗಿದೆ. ಈ ಸಾಗರಗಳ ಸರಾಸರಿ ಆಳ 3780ಮೀ. ಬೆಳಕು ಕೇವಲ 100ಮೀ. ಆಳಕ್ಕೆ ಮಾತ್ರ ಪ್ರವೇಶಿಸುತ್ತದೆ. ಎಂದರೆ ನಮ್ಮ ಗ್ರಹದ ಹೆಚ್ಚಿನ ಭಾಗ ಕತ್ತಲೆಯಲ್ಲಿ ಮುಳುಗಿದೆ ಎಂದಾಯಿತು!

5.  ಆಳ ಸಾಗರವು ಭೂಮಿಯ ಮೇಲಿನ ಅತ್ಯಂತ ದೊಡ್ಡದಾದ ಸಂಗ್ರಹಾಲಯ. ವಿಶ್ವದ ಎಲ್ಲ ಸಂಗ್ರಹಾಲಯಗಳಲ್ಲಿ ಒಟ್ಟುಗೂಡಿ ಇರುವ ಸಂಗ್ರಹಕ್ಕಿಂತ ಅತಿ ಹೆಚ್ಚು ಇತಿಹಾಸದ ಅವಶೇಷಗಳು ಸಾಗರದಾಳದಲ್ಲಿವೆ.

6.  ನಾವು ಇಲ್ಲಿಯವರೆಗೆ ಭೂ ಸಾಗರಗಳ ಕೇವಲ ಪ್ರತಿಶತ 5ರಷ್ಟನ್ನು ಮಾತ್ರ ಶೋಧಿಸಿದ್ದೇವಷ್ಟೆ. ವಾಸ್ತವವಾಗಿ ನಮ್ಮಲ್ಲಿ ನಮ್ಮ ಸಾಗರ ತಳ ವಿನ್ಯಾಸಕ್ಕಿಂತ ಉತ್ತಮವಾದ ಮಂಗಳ ಗ್ರಹದ ನಕಾಶೆಗಳನ್ನು ರಚಿಸಿದ್ದೇವೆೊ!

7.  ವಿಶ್ವದ ಅತ್ಯಂತ ಉದ್ದನೆಯ ಪರ್ವತ, ಗುಡ್ಡಗಳ ಸಾಲು ಸಾಗರದಾಳದಲ್ಲಿವೆ. 56000ಕಿಮೀಗೂ ನಿಡಿದಾದ ಇದಕ್ಕೆ ಮಧ್ಯಸಾಗರ ಪರ್ವತ ಶ್ರೇಣಿ ಎಂದು ಹೆಸರು. ಇಲ್ಲಿ ಶಿಖರಗಳು ಹಿಮಾಲಯಕ್ಕಿಂತ ಎತ್ತರವಾಗಿದ್ದು ಈ ಪರ್ವತ ಶ್ರೇಣಿ ವಿಶ್ವದ ಪ್ರತಿಶತ 23ರಷ್ಟು ಪ್ರದೇಶವನ್ನು ಆಕ್ರಮಿಸಿದೆ.

8.  ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಎಡ್ವಿನ್ ಆಲ್ಡ್ರಿನ್ ಚಂದ್ರನ ಮೇಲೆ ಕಾಲಿರಿಸಿದ ನಾಲ್ಕು ವರ್ಷಗಳ ನಂತರ ಮೊಟ್ಟ ಮೊದಲ ಬಾರಿ 7ಸದಸ್ಯರ ಫ್ರೆಂಚ್-ಅಮೆರಿಕನ್ ತಂಡ ಆರ್ಕಿಮೀಡ್ (Archimede)ಎಂಬ ಮುಳುಗು ಯಂತ್ರದಲ್ಲಿ 2700ಮೀ. ಆಳದ ಮಧ್ಯ ಸಾಗರ ಪರ್ವತ ಶ್ರೇಣಿಯನ್ನು ಪ್ರವೇಶಿಸಿದರು. ಅಂದರೆ ಸಾಗರದಾಳ ಸಂಶೋಧನೆ ಬಹಳ ಕಷ್ಟದ ಕೆಲಸ.

9.  ಭೂಮಿಯ ಮೇಲೆ ಹಲವು ವಿಚಿತ್ರಗಳಾದ ಬಿಸಿ ನೀರಿನ ಚಿಲುಮೆ, ಸಲ್ಫರ್‌ಯುಕ್ತ ನೀರಿನ ಚಿಲುಮೆ, ಜ್ವಾಲಾಮುಖಿಗಳ ಬಗ್ಗೆ ನಾವು ಕೇಳಿದ್ದೇವೆ. ಇದೇ ರೀತಿ ಸಾಗರದಾಳದಲ್ಲೂ ಅಪಾರ ಪ್ರಮಾಣದಲ್ಲಿ ಗಂಧಕಾಮ್ಲ (ಸಲ್ಫ್ಯೂರಿಕ್ ಆಮ್ಲ), ಚಿಮ್ಮಿಸುವ, ಅತಿ ಹೆಚ್ಚಿನ ಸಾಂದ್ರತೆಯ ಉಪ್ಪು ನೀರು ಚಿಮ್ಮಿಸುವ, ಸಿಹಿ ನೀರು ಹೊರಚೆಲ್ಲುವ ಚಿಲುಮೆ ಮತ್ತು ಮಿಥೇನ್ ಹಾಗೂ ರಾಡಿಯನ್ನುಗುಳುವ ಜ್ವಾಲಾಮುಖಿಗಳಿವೆ.

10. ಭೂಮಿಯ ಮೇಲಿನ ಪ್ರತಿಬಿಂಬ ನೀರಿನಲ್ಲಿ ತಲೆ ಕೆಳಗಾಗಿ ಕಾಣುವಂತೆ ಸಾಗರದಲ್ಲಿ ಅನೇಕ ವಿಚಿತ್ರಗಳು ಕಾಣುತ್ತವೆ. ನೀರಿನಾಳದಲ್ಲಿ ತಲೆಕೆಳಗಾಗಿ ಧುಮುಕುವ ಜಲಪಾತ, ಸರೋವರಗಳು ಇಂತಹ ವಿಚಿತ್ರಗಳು.

11. ಸಾಗರದ ಅಪಾರ ಜೀವಿಗಳು ಕಣ್ಣಿಗೆ ಕಾಣುವುದಿಲ್ಲ. ಒಂದು ಮಿ.ಲೀ ನೀರನ್ನು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿದರೆ ನಿಮಗೆ ಅದರಲ್ಲಿ ಸುಮಾರು ಒಂದು ಮಿಲಿಯ ಬ್ಯಾಕ್ಟೀರಿಯಾ ಅಲ್ಲದೆ 10ಮಿಲಿಯ ಸೂಕ್ಷ್ಮಜೀವಿಗಳು ಕಂಡುಬರುತ್ತವೆ. ಆದರೆ ನೀವು ಇವುಗಳಿಂದಾಗಬಹುದಾದ ಅಪಾಯದ ಬಗ್ಗೆ ಚಿಂತಿಸಬೇಕಾಗಿಲ್ಲ. ಸಾಗರಸ್ನಾನ ಮಾಡುವ ಇಲ್ಲವೇ ಸಾಗರದಲ್ಲಿ ಮೀನುಗಾರಿಕೆ ಇತ್ಯಾದಿ ಚಟುವಟಿಕೆಗಳಲ್ಲಿರುವ ಎಲ್ಲರೂ ಪ್ರತಿದಿನ ಅಲ್ಪ ಸ್ವಲ್ಪ ನೀರನ್ನು ಕುಡಿಯುತ್ತಾರೆ. ಇವುಗಳಿಂದ ಆರೋಗ್ಯಕ್ಕೆ ಯಾವುದೇ ತೆರನಾದ ಹಾನಿ ಇಲ್ಲ.

12. ಆಳ ಸಮುದ್ರದಲ್ಲಿ ಅಪಾರ ಪ್ರಮಾಣದ ಒತ್ತಡವಿದ್ದು ಈ ಒತ್ತಡಕ್ಕೆ ಟೈಟಾನಿಕ್‌ನಂತಹ ವಿಶಾಲ ಹಡಗು ಕೂಡಾ ಪುಡಿ ಪುಡಿಯಾಗಬಲ್ಲದು. ಏಕೆಂದರೆ ಇಂಥ ಆಳ ಸಮುದ್ರದಲ್ಲಿನ ಒತ್ತಡ ಬಹಳ ಹೆಚ್ಚು. ಇಲ್ಲಿ ಮಾನವನು ಮುಳುಗಿ ವೀಕ್ಷಣೆ ಮಾಡುವುದು ಕಷ್ಟಸಾಧ್ಯ.  ಆದರೆ ಇಂಥ ಆಳದಲ್ಲೂ ಏಡಿಗಳು, ವಿವಿಧ ತೆರನಾದ ಮೀನುಗಳು, ಆಕ್ಟೋಪಸ್ ಮುಂತಾದ ಜೀವಿಗಳು ವಿವಿಧ ಮಾರ್ಪಾಡುಗಳೊಂದಿಗೆ ಜೀವಿಸುತ್ತಿವೆ.

13. ಸಾಗರ ಜೀವಿಗಳಲ್ಲಿ ಕೆಲವನ್ನು ಅತಿ ಕ್ರೂರ ಪ್ರಾಣಿಗಳೆಂದು ಚಿತ್ರಿಸಲಾಗಿದೆ.  ಅವುಗಳಲ್ಲೊಂದು ಶಾರ್ಕ್ ಮೀನು. ಸುಮಾರು 380ಜೀವಿಜಾತಿಗಳಿರುವ ಈ ಮೀನಿನಲ್ಲಿ ಕೇವಲ 3ತಳಿಗಳು, ಗ್ರೇಟ್ ವೈಟ್ ಶಾರ್ಕ್ (Great Whtie shark), ಟೈಗರ್ ಶಾರ್ಕ್ (Tiger shark) ಮತ್ತು ಬುಲ್ ಶಾರ್ಕ್ (Bull shark)ಮಾತ್ರ ಮೇಲಿಂದ ಮೇಲೆ ಮನುಷ್ಯರ ಮೇಲೆ ಆಕ್ರಮಣ ಮಾಡಿದ ದಾಖಲೆಗಳಿವೆ. ವರ್ಷದಲ್ಲಿ 50ರಿಂದ 70ಜನರ ಮೇಲೆ ಶಾರ್ಕ್‌ಗಳ ಆಕ್ರಮಣ ನಡೆಯುತ್ತಿದೆ. ಇದರಲ್ಲಿ ಹೆಚ್ಚೆಂದರೆ 8ರಿಂದ 10ಜನ ಸಾವನ್ನಪ್ಪಿರಬಹುದು.  ಹಾವು ಕಡಿದು ಇಲ್ಲವೆ ಆನೆ ತುಳಿದು ಸಾವನ್ನಪ್ಪುವ ಜನರ ಲೆಕ್ಕ ಇದಕ್ಕಿಂತ ಬಹಳ ಹೆಚ್ಚು. ವರ್ಷವೊಂದಕ್ಕೆ ನಾವು 20ರಿಂದ 100ಮಿಲಿಯನ್ ಶಾರ್ಕ್‌ಗಳನ್ನು ಕೊಲ್ಲುತ್ತೇವೆ.  ಹಾಗಿದ್ದರೆ ಯಾರು ಹೆಚ್ಚು ಅಪಾಯಕಾರಿ ?

14. ಭೂಮಿಯ ಒಟ್ಟು ವಾಸಯೋಗ್ಯ ಪ್ರದೇಶಗಳಲ್ಲಿ 99ಪ್ರತಿಶತ ಸಾಗರದಲ್ಲಿದೆ. ಆದರೆ ಕೇವಲ ಪ್ರತಿಶತ 10ಕ್ಕಿಂತ ಕಡಿಮೆ ಪ್ರದೇಶವನ್ನು ಮಾತ್ರ ಇಲ್ಲಿಯವರೆಗೆ ಶೋಧಿಸಲಾಗಿದೆ.

15. ಭೂಮಿಯ ಮೇಲಿನ ಅತ್ಯಂತ ಆಳವಾದ ಪ್ರದೇಶವನ್ನು ಚಾಲೆಂಜರ್ ಪಾಯಿಂಟ್ (Challenger Point) ಎಂದು ಕರೆಯಲಾಗುತ್ತದೆ. ಇದು ಪಶ್ಚಿಮ ಪೆಸಿಫಿಕ್ ಮಹಾಸಾಗರದ ಮರಿಯಾನ ಕಂದಕದಲ್ಲಿದೆ (Mariana Trench). ಇಲ್ಲಿನ ಆಳ 11,034ಮೀಟರ್ ಆಗಿದ್ದು ಹಿಮಾಲಯ ಪರ್ವತವನ್ನು ಈ ಕಂದಕದಲ್ಲಿ ಇಳಿಬಿಟ್ಟರೆ ಇನ್ನೂ ಸುಮಾರು ಒಂದು 1.5 ಕಿಮೀಗಿಂತ ಹೆಚ್ಚು ಆಳದ ನೀರಿರುತ್ತದೆ.

16.     ಸಾಗರ ಮಟ್ಟವು ಕಳೆದ 100ವರ್ಷಗಳಲ್ಲಿ 10ರಿಂದ 25ಸೆಂ.ಮೀ. ಹೆಚ್ಚಾಗಿದೆ. ಈ ಏರಿಕೆ ಪ್ರಮಾಣ ವಿಜ್ಞಾನಿಗಳ ಪ್ರಕಾರ ನಿರಂತರ ಹೆಚ್ಚುತ್ತಿದೆ. ಇದಕ್ಕೆ ಮಾನವನ ಅನೇಕ ಪರಿಸರ ವಿರೋಧಿ ಚಟುವಟಿಕೆಗಳೇ ಕಾರಣ. ಒಂದು ವೇಳೆ ಈ ಚಟುವಟಿಕೆಗಳನ್ನು ನಿಯಂತ್ರಿಸಿದರೂ ಈ ಏರುವಿಕೆ ಪ್ರಮಾಣ ಸದ್ಯದಲ್ಲಿ ಕಡಿಮೆಯಾಗಲು ಸಾಧ್ಯವಿಲ್ಲ. ಏಕೆಂದರೆ ಸಾಗರವು ಬದಲಾವಣೆಗೆ ಪ್ರತಿಕ್ರಿಯಿಸುವುದು ಯಾವಾಗಲೂ ನಿಧಾನ. ಒಂದು ವೇಳೆ ಭೂಮಿಯ ಮೇಲಿರುವ ಎಲ್ಲ ಹಿಮವು ಭೂತಾಪಮಾನದಿಂದ ಕರಗಿದರೆ ಸಮುದ್ರ ಮಟ್ಟವು ಸುಮಾರು 66ಮೀ ಹೆಚ್ಚಲಿದೆ. ಸುಮಾರು 10,000ವರ್ಷಗಳ ಹಿಂದೆ ಸಮುದ್ರ ಮಟ್ಟವು ಈಗಿರುವುದಕ್ಕಿಂತ 110ಮೀ ಕೆಳಗಿದ್ದಿತು !