1.   ಸುಮಾರು 1000 ಕಿಮೀ ಎತ್ತರದಲ್ಲಿ ಕೃತಕ ಉಪಗ್ರಹವೊಂದು ಭೂಮಿಗೆ ಪ್ರದಕ್ಷಿಣೆ ಹಾಕುತ್ತದೆ. ಆ ಎತ್ತರದಲ್ಲಿ 7.411 ಮೀ/ಸೆ2 ಅಂದ ಮೇಲೆ ಆ ಉಪಗ್ರಹದಲ್ಲಿ ವಾಸಿಸುವರು ತೂಕರಹಿತ ಸ್ಥಿತಿ ಅನುಭವಿಸಲು ಸಾಧ್ಯವೇ?

2.   ಪ್ರಪಾತದ ಅಂಚಿನಲ್ಲಿ ನಿಂತವನೊಬ್ಬ ‘m’ ಆರಂಭಿಕ ವೇಗದಿಂದ ಒಂದು ಚೆಂಡನ್ನು ಮೇಲಕ್ಕೂ ಇನ್ನೊಂದು ಚೆಂಡನ್ನು ಕೆಳಕ್ಕೂ ಎಸೆಯುತ್ತಾನೆ. ಯಾವ ಚೆಂಡು ಪ್ರಪಾತದ ತಳವನ್ನು ಹೆಚ್ಚು ವೇಗದೊಡನೆ ತಲುಪುತ್ತದೆ?

3.   ಗ್ರಹದಲ್ಲಿ ಕೆಳಕ್ಕೆ ಬೀಳಲು ಬಿಟ್ಟ ಚೆಂಡು 4 ಸೆಕೆಂಡುಗಳಲ್ಲಿ 48 ಮೀ ಬೀಳುತ್ತದೆ. ಆ ಗ್ರಹದಲ್ಲಿ ವೇಗೋತ್ಕರ್ಷ ಎಷ್ಟಿರುತ್ತದೆ? ಆ ಗ್ರಹದಲ್ಲಿ 10 ಕಿಲೋಗ್ರಾಮ್ ರಾಶಿಯುಳ್ಳ ವಸ್ತುವಿನ ತೂಕ ಎಷ್ಟಿರುತ್ತದೆ?

4.   ಮೇಣವನ್ನು ಕರಗಿಸಿ ತಣಿಯಲು ಬಿಟ್ಟಾಗ ಮಧ್ಯಭಾಗದಲ್ಲಿ ಕುಳಿ ಬಿದ್ದಿರುವುದು ಕಂಡು ಬರುತ್ತದೆ. ಕಾರಣವೇನು?

5.   ಸತ್ಯಬಿಂಬ ಮಾತ್ರ ಪರದೆಯ ಮೇಲೆ ಮೂಡುತ್ತದೆ, ಓದು ಮಸೂರ ಮತ್ತು ಸಂಯುಕ್ತ ಸೂಕ್ಷ್ಮ ದರ್ಶಕಗಳ ಬಿಂಬಗಳು ಮಿಥ್ಯವಾದರೂ ಅವುಗಳು ನಮ್ಮ ಅಕ್ಷಿಪಟಲದ ಮೇಲೆ ಮೂಡುವುದಾದರೂ ಹೇಗೆ?

6.   ಗಾಜಿನ ಚಪ್ಪಡಿಯಲ್ಲಿ ಹಾದು ಹೋಗುವ ಬೆಳಕು ವಿಭಜಿಸದೇಕೆ?

7.   ಹಸಿಕಟ್ಟಿಗೆ ಸರಿಯಾಗಿ ಉರಿಯದೇ ಹೊಗೆ ಬರಲು ಕಾರಣವೇನು?

8.   ಒದ್ದೆ ಮಾಡಿದ ಪ್ಲಾಸ್ಟಿಕ್ ವಿದ್ಯುತ್‌ವಾಹಕವಲ್ಲ ಆದರೆ ಒದ್ದೆ ಮಾಡಿದ ಮರ ವಿದ್ಯುತ್ ವಾಹಕವಾಗುತ್ತದೆ. ಏಕೆ?

9.   1 ಎಚ್.ಪಿ. ಸಾಮರ್ಥ್ಯವಿರುವ ಪಂಪ್ 100ಮೀ ಆಳದಿಂದ 1 ಗಂಟೆಯಲ್ಲಿ ಮೇಲೆತ್ತುವ ನೀರಿನ ರಾಶಿ ಎಷ್ಟು?

10. ಎರಡು ಕಾಮನಬಿಲ್ಲುಗಳು ಯಾವ ಸಂದರ್ಭದಲ್ಲಿ ಮೂಡುತ್ತವೆ? ಅವುಗಳಲ್ಲಿ ಬಣ್ಣಗಳ ಕ್ರಮ ವಿರುದ್ಧವಾಗಿರುತ್ತದೆ ಏಕೆ?

11. ತಾಮ್ರದ ಸಲ್ಫೇಟನ್ನು ಕಾಯಿಸಿ ಪಡೆದ ಬಿಳಿಪುಡಿಯನ್ನು ಗಾಳಿಗೊಡ್ಡಿದಾಗ ತಂತಾನೇ ನೀಲಿಯಾಗುವುದು ಏಕೆ?

12.  ಉಸುಕಿನಲ್ಲಿ ಒಗೆದ ಚೆಂಡು ಪುಟಿಯುವುದಿಲ್ಲ ಮತ್ತು ಕೆಸರನ್ನು ಗೋಡೆಗೆ ಎಸೆದಾಗ ಹಿಂದಕ್ಕೆ ಪುಟಿಯುವುದಿಲ್ಲ ಏಕೆ?

 

ಉತ್ತರಗಳು

1.   ಉಪಗ್ರಹದಲ್ಲಿ ವಾಸಿಸುವವನ ತೂಕ w =mg. ಇಲ್ಲಿ w = ತೂಕ, m = ವ್ಯಕ್ತಿಯ ರಾಶಿ, g = ಗುರುತ್ವ ಉತ್ಕರ್ಷ. ತೂಕ ಅಂದರೆ ವ್ಯಕ್ತಿಯ ಮೇಲೆ ಭೂಮಿಯು ಪ್ರಯೋಗಿಸುವ ಬಲ. ಆದರೆ ‘ತೂಕರಹಿತ ಸ್ಥಿತಿ’ ಅಥವಾ ‘ತೂಕ ಸ್ಥಿತಿ’ ಎಂಬುದು ಕೇವಲ ತೂಕವನ್ನು ಅವಲಂಬಿಸಿಲ್ಲ! ದೇಹವನ್ನು ಆಧರಿಸಿರುವ ತಲ (ನೆಲ ಅಥವಾ ಉಪಗ್ರಹದ ಒಳಮೈ)ದ ಮೇಲೆ ತೂಕವು ಬಿದ್ದಾಗ ದೇಹದ ಮೇಲೆ ಪ್ರಯೋಗವಾಗುವ ವಿರುದ್ಧ ಬಲ(ಪ್ರತಿಕ್ರಿಯೆ)ವನ್ನು ಅವಲಂಬಿಸಿ ನಾವು ಅನುಭವಿಸುವ ತೂಕವಿರುತ್ತದೆ. ಉದಾಹರಣೆಗೆ ಒಬ್ಬ ಮುಳುಗುವಾಗ ಜಿಗಿಯುವ ಬೋರ್ಡಿನಿಂದ ನೀರನ್ನು ತಲಪುವ ತನಕ (ವಾಯುವಿನ ಘರ್ಷಣೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿದ್ದರೆ) ಅವನ ಮೇಲೆ ಪ್ರಯೋಗವಾಗುವ ಬಲ ನಗಣ್ಯವಷ್ಟೆ?  ಆಗ ಅವನು ಅನುಭವಿಸುವ ತೂಕವೂ ಸೊನ್ನೆ. ಉಪಗ್ರಹವು ಸುತ್ತು ಬರುವುದೆಂದರೆ ಸದಾ ಬೀಳುತ್ತಿರುವ ಸ್ಥಿತಿ. ಉಪಗ್ರಹದೊಂದಿಗೆ ಅದರೊಳಗೆ ಇರುವವರದ್ದೂ ಬೀಳುತ್ತಿರುವ ಸ್ಥಿತಿ. ಉಪಗ್ರಹದ ಒಳಮೈ ಅದರ ಮೇಲೆ ಯಾವುದೇ ಪ್ರತಿಕ್ರಿಯೆಯನ್ನು ತೋರದಿದ್ದರೆ ಅವರು ಯಾವ ತೂಕವನ್ನೂ ಅನುಭವಿಸುವುದಿಲ್ಲ. ಅಂದರೆ ‘ತೂಕರಹಿತ ಸ್ಥಿತಿ’ ಯನ್ನು ಅನುಭವಿಸುತ್ತಾರೆ. ಲಿಫ್ಟ್‌ನಲ್ಲಿ ಕೆಳಗಿನಿಂದ ಮೇಲೆ ಸಾಗಲು ಪ್ರಾರಂಭವಾಗುವ ಕ್ಷಣ ಅದರೊಳಗಿದ್ದವರ ತೂಕ ಹೆಚ್ಚಿದಂತೆ ಅನುಭವವಾಗಬಹುದು. ಲಿಫ್ಟಿನ ತಲ ಒಳಗಿರುವವರ  ಕಾಲನ್ನು ಹೆಚ್ಚು ಒತ್ತುವುದರಿಂದ (ಅಥವಾ ಅಧಿಕ ಪ್ರತಿಕ್ರಿಯೆಯನ್ನು ಪ್ರಯೋಗಿಸುವುದರಿಂದ) ಹೀಗಾಗುತ್ತದೆ. ಹಾಗೆಯೇ ಲಿಫ್ಟಿನಲ್ಲಿ ಕೆಳಗೆ ಹೋಗುವ ಕ್ಷಣ ಒಳಗಿರುವವರ ತೂಕ ಕಡಿಮೆಯಾದ ಅನುಭವವಾಗಬಹುದು. ಕೆಳಗೆ ಚಲಿಸುವ ಲಿಫ್ಟು ಆ ಕ್ಷಣ ಒಳಗಿರುವವರ ಕಾಲುಗಳನ್ನು ಕಡಿಮೆ ಒತ್ತುವುದರಿಂದ (ಅಂದರೆ ಕಡಿಮೆ ಪ್ರತಿಕ್ರಿಯೆ ಪ್ರಯೋಗಿಸುವುದರಿಂದ) ಹೀಗಾಗುತ್ತದೆ. ಉಪಗ್ರಹದಲ್ಲಿ ತೂಕವನ್ನು ಅನುಭವಿಸಬೇಕಾದರೆ ಒಳಗಿರುವವರನ್ನು ಒತ್ತುವಂತೆ ಮಾಡುವ ತಂತ್ರಗಳನ್ನು ಅನುಸರಿಸಬೇಕು.

2.   ಎರಡೂ ಚೆಂಡುಗಳು ಪ್ರಪಾತವನ್ನು ಒಂದೇ ವೇಗದಲ್ಲಿ ತಲುಪುತ್ತವೆ. ಮೇಲಕ್ಕೆ ‘u’ ಆರಂಭಿಕ ವೇಗದಿಂದ ಎಸೆದ ಚೆಂಡು, ಎಸೆದಲ್ಲಿಂದ ‘h’ ಎತ್ತರದವರೆಗೆ ಸಾಗಿ,  ಸೊನ್ನೆ ವೇಗದ ಸ್ಥಿತಿಗೆ ಬರುತ್ತದೆ. ಆ ಕ್ಷಣದಿಂದ ಕೆಳಗೆ ಬೀಳಲು ತೊಡಗಿ ಎಸೆದ ಮಟ್ಟಕ್ಕೆ ಬರುವಾಗ ಮತ್ತೆ ಕೆಳಗೆ ಸಾಗುವ ‘u’ ವೇಗವನ್ನು ಪಡೆಯುತ್ತದೆ. (u2 = 2 gh.ಇಲ್ಲಿ g= ಗುರುತ್ವ ಉತ್ಕರ್ಷ) ಎಸೆದಲ್ಲಿಂದ ಪ್ರಪಾತದ ತಳ ‘s’ ಆಳದಲ್ಲಿದ್ದರೆ ತಳವನ್ನು ತಲಪುವಾಗ v12 = u2 + 2gs ಎಂಬ ಸಮೀಕರಣಕ್ಕೆ ಅನುಗುಣವಾಗಿ v1 ವೇಗವನ್ನು ಪಡೆಯುತ್ತದೆ. ಕೆಳ ಬದಿಗೆ u ವೇಗದಿಂದ ಎಸೆದ ಚೆಂಡು ಕೂಡ v22 = u2 + 2 gs ಸಮೀಕರಣಕ್ಕೆ ಅನುಗುಣವಾಗಿ v1 ವೇಗವನ್ನು ಪಡೆಯುತ್ತದೆ. ಕೆಳ ಬದಿಗೆ u ವೇಗದಿಂದ ಎಸೆದ ಚೆಂಡು ಕೂಡ v22 = m2 + 2gs ಸಮೀಕರಣಕ್ಕೆ ಅನುಗುಣವಾಗಿ v2 ವೇಗವನ್ನು ಪಡೆಯುತ್ತದೆ. ಎರಡೂ ಸಮೀಕರಣಗಳನ್ನು ಹೋಲಿಸಿದರೆ v1=v2 ಎಂಬುದು ಸ್ಪಷ್ಟವಾಗುತ್ತದೆ.

3.   ಚೆಂಡು ಸಾಗುವ ದೂರ s = 48 ಮೀಟರ್. ಹೀಗೆ ಬೀಳಲು ಅದಕ್ಕೆ ಬೇಕಾದ ಅವಧಿ t=4 ಸೆಕೆಂಡು. ಗುರುತ್ವ ಉತ್ಕರ್ಷ (ವೇಗೋತ್ಕರ್ಷ) g ಎಂದಾದರೆ ಈ ಪರಿಣಾಮಗಳನ್ನು ಸಂಬಂಧಿಸುವ ಸಮೀಕರಣ  s = ½gt2 (ಬೀಳಬಿಡುವ ಆರಂಭಿಕ ವೇಗ ಸೊನ್ನೆ).  48 = ½g×16. ಅಂದರೆ g = (48×2)/16 = 6 ಮೀ/ಸೆ2. ವಸ್ತುವಿನ ತೂಕ = mg = 10 × 6 ನ್ಯೂಟನ್ = 60 ನ್ಯೂಟನ್. ಒಂದು ಕಿಲೊಗ್ರಾಮ್ ತೂಕ (1 ಕಿ.ಗ್ರಾ. ವೇಟ್) = 9.8 ನ್ಯೂಟನ್ ಎಂದು ತೆಗೆದುಕೊಂಡರೆ ವಸ್ತುವಿನ ತೂಕ 60/9.8 = 6.12 ಕಿಲೋಗ್ರಾಮ್ ತೂಕ.

4.   ಬತ್ತಿಯಿರುವುದು ಮಧ್ಯಭಾಗದಲ್ಲಿ. ಜ್ವಾಲೆ ಇರುವುದೂ ಮಧ್ಯಭಾಗದಲ್ಲಿ. ಆದ್ದರಿಂದ ದ್ರವವಾಗುವ ಹಾಗೂ ದಹನವಾಗುವ ಪ್ರತಿಕ್ರಿಯೆ ಹೆಚ್ಚು ನಡೆಯುವುದೂ ಮಧ್ಯಭಾಗದಲ್ಲಿ. ಮಧ್ಯಭಾಗದಲ್ಲಿ ಪರಿಧಿ ಭಾಗಕ್ಕಿಂತ ಮೇಣ ಹೆಚ್ಚು ವ್ಯಯವಾಗುವುದರಿಂದ ಅಲ್ಲಿ ಕುಳಿ ಬೀಳುತ್ತದೆ.

5.   ಸತ್ಯವಾಗಲಿ, ಮಿಥ್ಯವಾಗಲಿ ಬೆಳಕಿನ ಕಿರಣಗಳು ಅಕ್ಷಿಪಟಲದ ಮೇಲೆ ಬೀಳದಿದ್ದರೆ ಬಿಂಬ ಕಾಣಿಸದು. ಓದು ಮಸೂರ (ಭೂತಕನ್ನಡಿ)ವನ್ನೇ ತೆಗೆದುಕೊಳ್ಳಿ. ವಕ್ರೀಕರಣದ ಅನಂತರ ಅಪಸರಣಕ್ಕೆ ಒಳಗಾಗುವ ಕಿರಣಗಳು ಕಣ್ಣನ್ನು ಸೇರಿದರೆ ಮಾತ್ರವೇ ಅವು ಮಸೂರದ ಹಿಂದಿನ ಯಾವುದೋ ಒಂದು ನೆಲೆಯಿಂದ ಬಂದಂತೆ ಕಾಣಿಸುತ್ತವೆ. ವಾಸ್ತವವಾಗಿ ಅವು ಅಂಥ ನೆಲೆಯಿಂದ ಬರುವುದಿಲ್ಲ. ಆದ್ದರಿಂದ ಪರದೆಯಲ್ಲಿ ಅವನ್ನು ಮೂಡಿಸಲು ಆಗುವುದಿಲ್ಲ. ಒಂದು ಸ್ಥಾನದಿಂದ ಬಂದಂತೆ ಕಾಣಿಸುವುದಕ್ಕೆ ಕಾರಣ – ಆ ಕಿರಣಗಳ ದಾರಿಗಳನ್ನು ಹಿಂದಕ್ಕೆ ವಿಸ್ತರಿಸಿದರೆ ಅವು ಒಂದೇ ಸ್ಥಾನದಲ್ಲಿ ಛೇದಿಸಿದಂತೆ ‘ಕಾಣುತ್ತವೆ’. ಸಮತಲ ಕನ್ನಡಿಯಲ್ಲಿ ಕಾಣುವ ಬಿಂಬಗಳು ಕಾಣುವುದೂ ಇದೇ ತರಹದಲ್ಲಿ.

6.   ಗಾಜಿನ ಚಪ್ಪಡಿಯ ಎದುರು ಮುಖಗಳು ಸಮಾಂತರವಾಗಿವೆ. ಆದ್ದರಿಂದ ಅದರ ಒಂದು ಮುಖದಲ್ಲಿ ನಡೆಯುವ ವಕ್ರೀಕರಣಕ್ಕೆ ವಿರುದ್ಧವಾಗಿ ಮತ್ತು ಸಮನಾಗಿ ವಿರುದ್ಧ ಮುಖದಲ್ಲಿ ವಕ್ರೀಕರಣವಾಗುವುದರಿಂದ ವರ್ಣವಿಭಜನೆ ನಡೆಯುವುದಿಲ್ಲ.

7.   ಹಸಿಕಟ್ಟಿಗೆ ಸರಿಯಾಗಿ ಉರಿಯದಿರಲು ಅದರಲ್ಲಿರುವ ತೇವಾಂಶ ಕಾರಣ. ಕಟ್ಟಿಗೆಯನ್ನು ಜ್ವಲನ ಬಿಂದುವಿಗೆ ಏರಿಸಲು ತೇವಾಂಶ ಬಿಡುವುದಿಲ್ಲ. ಹೀಗೆ ಅಪೂರ್ಣ ದಹನ ಉಂಟಾಗುವುದರಿಂದ ಉರಿಯದ ಕಟ್ಟಿಗೆ ಕಣಗಳು ಹೊಗೆಯಾಗಿ ಹೊರಬರುತ್ತವೆೆ.

8.   ಪ್ಲಾಸ್ಟಿಕ್ಕು ಒದ್ದೆ ಮಾಡಿದರೂ ಅದರ ಹೊರಮೈ ಮಾತ್ರ ಒದ್ದೆಯಾಗುತ್ತದೆ. ಆದ್ದರಿಂದ ವಿದ್ಯುತ್ ಪ್ರವಾಹವನ್ನು ನಿರ್ಬಂಧಿಸುವ ಅವಾಹಕವಾದ ಭಾಗ ಹಾಗೇ ಇರುತ್ತದೆ. ಒದ್ದೆ ಮಾಡಿದ ಮರ (ಕಟ್ಟಿಗೆ) ದ ಇಡೀ ಒಡಲು ಒದ್ದೆಯಾಗುವ ಸಂಭವ ಹೆಚ್ಚು. ಅಂದರೆ ವಿದ್ಯುತ್ ವಹನಕ್ಕೆ ಅನುಕೂಲವಾದ ನೀರು (ಇದು ಲವಣ ರಹಿತ ನೀರು ಎನ್ನುವಂತಿಲ್ಲ) ಮರದ ಇಡೀ ಕಾಯದಲ್ಲಿರುತ್ತದೆ. ಆದ್ದರಿಂದ ಮರ ವಿದ್ಯುತ್ ವಾಹಕವಾಗುತ್ತದೆ.

9.   100 ಮೀಟರ್ ಸರಾಸರಿ ಆಳದಿಂದ ಪಂಪು ನೀರೆತ್ತುತ್ತದೆ ಎಂದು ಭಾವಿಸೋಣ. ಒಂದು ಎಚ್.ಪಿ. (1 ಅಶ್ವ ಸಾಮರ್ಥ್ಯ) ಸಾಮರ್ಥ್ಯವು ಎಂ.ಕೆ.ಎಸ್.(ಮೀಟರ್, ಕಿಲೋಗ್ರಾಮ್, ಸೆಕೆಂಡ್) ಪದ್ಧತಿಯಲ್ಲಿ 3 ಅಂಕಿಗಳಲ್ಲಿ 746 ವ್ಯಾಟ್‌ಗಳಿಗೆ ಸಮ ಎಂದು ಭಾವಿಸೋಣ. (ನಾಲ್ಕು ಅಂಕಿಗಳಿಗೆ ಸರಿಯಾಗಿ ಬರೆದರೆ ಇದು 745.7 ವ್ಯಾಟ್ ಆಗುತ್ತದೆ.) ಗುರುತ್ವ ಉತ್ಕರ್ಷವನ್ನು 9.8 ಮೀಟರ್/ಸೆಕೆಂಡ್2 ಎಂದಿಟ್ಟುಕೊಳ್ಳೋಣ. ಒಂದು ಗಂಟೆಯಲ್ಲಿ ಎತ್ತಲಾಗುವ ನೀರಿನ ರಾಶಿ m ಎಂದಾದರೆ ಒಂದು ಗಂಟೆಯಲ್ಲಿ ಆದ ಕೆಲಸ

= m×g×h = m×9.8×h = m×9.8×100

= 980m ಜೂಲ್ (1)

ಒಂದು ಅಶ್ವ ಸಾಮರ್ಥ್ಯ ದರದಲ್ಲಿ 1 ಗಂಟೆಯಲ್ಲಿ ಆದ ಕೆಲಸ

= 746 × 1 × 60 × 60         ಜೂಲ್-(2)

(1 ಗಂಟೆ = 60 × 60 ಸೆಕೆಂಡ್)

(1) ಮತ್ತು (2) ಗಳನ್ನು ಹೋಲಿಸಿದಾಗ

m= 746 × 60 × 60
980

= 2740 ಕಿಲೊಗ್ರಾಮ್ (ನಾಲ್ಕು ಅಂಕಿಗಳಿಗೆ ಸರಿಯಾಗಿ)

10.  ಮಳೆಹನಿಯೊಳಗೆ ಸೂರ್ಯಕಿರಣದ ಒಂದು ಪ್ರತಿಫಲನದ ಬಳಿಕ ಹೊರಬರುವ ಬೆಳಕಿನ ಕಿರಣಗಳು ಮೊದಲ ಕಾಮನ ಬಿಲ್ಲಿಗೂ ಎರಡು ಪ್ರತಿಫಲನಗಳ ಬಳಿಕ ಹೊರಬರುವ ಬೆಳಕಿನ ಕಿರಣಗಳು ಎರಡನೇ ಕಾಮನಬಿಲ್ಲಿಗೂ ಕಾರಣವಾಗುತ್ತವೆ.

ಪ್ರತಿಯೊಂದು ಪ್ರತಿಫಲನದೊಂದಿಗೆ ವಕ್ರೀಕರಣವೂ ನಡೆಯುತ್ತದೆ. ಇದರಿಂದ ಪ್ರತಿಫಲನಗಳ ಸಂಖ್ಯೆ ಹೆಚ್ಚಾದಂತೆ ಕಾಮನಬಿಲ್ಲಿಗೆ ಕಾರಣವಾಗುವ ಬೆಳಕಿನ ಕಿರಣಗಳ ತೀವ್ರತೆ ಕಡಿಮೆಯಾಗುತ್ತದೆ. ಎರಡನೇ ಕಾಮನಬಿಲ್ಲು ಒಂದನೇ ಕಾಮನಬಿಲ್ಲಿನಷ್ಟು ಉಜ್ವಲವಾಗಿ ಕಾಣಿಸದಿರಲು ಇದೇ ಕಾರಣ. ಮಳೆ ಹನಿಗಳ ಗಾತ್ರವೂ ವಕ್ರೀಕರಣ – ಪ್ರತಿಫಲನಗಳ ಮೇಲೆ ಪರಿಣಾಮ ಬೀರುತ್ತದೆ. ಯುಕ್ತ ಗಾತ್ರವಿದ್ದರೆ ಮಾತ್ರ ಎರಡು ಬಾರಿ ಪ್ರತಿಫಲನಗೊಂಡ ಬೆಳಕಿನ ಕಿರಣಗಳು ನಾವು ಕಾಣಬಲ್ಲ ಎರಡನೇ ಕಾಮನಬಿಲ್ಲನ್ನು ಮೂಡಿಸಬಲ್ಲವು.

ವಕ್ರೀಕರಣದೊಂದಿಗೆ ವರ್ಣವಿಭಜನೆ ಯಾಗುತ್ತದೆ. ನೇರಳೆ -ಕೆಂಪುಗಳು ರಶ್ಮಿಯ ಎರಡು ಅಂಚುಗಳಲ್ಲಿರುವುವು. ಒಂದು ಪ್ರತಿಫಲನದೊಂದಿಗೆ ಮೇಲೆ-ಕೆಳಗಿರುವ ಕಿರಣಗಳು ಕೆಳಗೆ-ಮೇಲಾಗುವುವು. ಎರಡನೇ ಕಾಮನಬಿಲ್ಲು ಮಳೆಹನಿಯೊಳಗೆ ಎರಡು ಪ್ರತಿಫಲನಗಳಿಂದ ಉಂಟಾಗುವ ಕಾರಣ ಒಂದನೇ ಮತ್ತು ಎರಡನೇ ಕಾಮನಬಿಲ್ಲಿನ ಬಣ್ಣಗಳ ಅನುಕ್ರಮವು ಬದಲಾಗುವುದು (ಚಿತ್ರನೋಡಿ).

11.  ತಾಮ್ರದ ಸಲ್ಫೇಟನ್ನು ಕಾಯಿಸಿದಾಗ ಅದರಲ್ಲಿರುವ ನೀರಿನ ಅಂಶ ಹೋಗಿ ಬಿಳಿಪುಡಿಯಾಗಿ ತೋರುತ್ತದೆ. ಇದನ್ನು ಗಾಳಿಗೊಡ್ಡಿದಾಗ ಗಾಳಿಯಲ್ಲಿರುವ ತೇವವನ್ನು ತಾಮ್ರದ ಸಲ್ಫೇಟ್ (ಬಿಳಿಪುಡಿ) ಮರಳಿ ಹೀರುತ್ತದೆ. ಇದು ಜಲಪೂರಿತ ತಾಮ್ರದ ಸಲ್ಫೇಟ್. ಇದರ ಬಣ್ಣ ನೀಲಿ.

12.  ಉಸುಕು ಮತ್ತು ಚೆಂಡುಗಳೊಳಗೆ ಹಾಗೂ ಕೆಸರು ಮತ್ತು ಗೋಡೆಗಳೊಳಗೆ ನಡೆಯುವುದು ಸ್ಥಿತಿ ಸ್ಥಾಪಕತ್ವಹೀನ ಅಥವಾ ಪುಟಿತತೆ ರಹಿತ ಡಿಕ್ಕಿ. ಇದರಲ್ಲಿ ಚಲನ ಶಕ್ತಿಯ ಒಟ್ಟು ಮೌಲ್ಯ ಸ್ಥಿರವಾಗಿ ಉಳಿಯುವುದಿಲ್ಲ. ಶಕ್ತಿಯ ಬೇರೆ ರೂಪಗಳಾಗಿ ಚಲನಶಕ್ತಿಯು ಪರಿವರ್ತನೆಯಾಗುತ್ತದೆ. ಇದಕ್ಕೆ ಕಾರಣ ಉಸುಕಿನ (ಹಾಗೂ ಕೆಸರಿನ) ಸಂರಚನೆ. ಚಲನಶಕ್ತಿಯ ನಷ್ಟ ಹೆಚ್ಚಾದಂತೆ ಡಿಕ್ಕಿಯು ಹೆಚ್ಚು ಪುಟಿತತೆ ರಹಿತವಾಗಿರುತ್ತದೆ. ಚಲನಶಕ್ತಿಯು ಸಂರಕ್ಷಿಸಲ್ಪಟ್ಟಾಗ ಪುಟಿತ ಡಿಕ್ಕಿಯಾಗುವುದು.