(1) ಈ ಮೀನುಗಳ ವೈಶಿಷ್ಟ್ಯವೇನು?

(2) ಈ ಷಾರ್ಕ್‌ನಿಂದ ದೂರವಿರಿ! ದೊಡ್ಡ, ಬಿಳಿಯ ಷಾರ್ಕ್ (ಗ್ರೇಟ್ ವೈಟ್ ಷಾರ್ಕ್) – ಎಂದು ಇದರ ಹೆಸರು. ಇದರ ಬಗೆಗೆ ಏನು ತಿಳಿದಿದೆ?

(3) ಇದು ಜಕಣ ಹಕ್ಕಿ, ಉಷ್ಣ ವಲಯದಲ್ಲಿ ಕಂಡುಬರುತ್ತದೆ. ಚಿತ್ರದಲ್ಲಿರುವಂತೆ ಮುಳುಗದೆ ಇದು ಹೀಗೆ ನಡೆಯುವುದು ಹೇಗೆ?

(4) ‘ಸೂಲ’ ಬಳಗಕ್ಕೆ ಸೇರಿದ ಈ ಹಕ್ಕಿಯ ವೈಶಿಷ್ಟ್ಯವೇನು?

(5) ಇದು ಆರ್ಕ್‌ಟಿಕ್ ಹಿಮವಲಯದ ಚಿಟ್ಟೆ. ಹೆಸರು ‘ಆರ್ಕ್‌ಟಿಕ್ ಕ್ಲೌಡೆಡ್ ಎಲ್ಲೋ ಬಟರ್ ಫ್ಲೈ’ – ಈ ಹಳದಿ ಚಿಟ್ಟೆ ಅಲ್ಲಿ ಹೇಗೆ ಬದುಕುತ್ತದೆ.

(6) ಇದೊಂದು ಪರಿಚಿತ ಚಿತ್ರ. ವಿವರಣೆ ಕೊಡಿ.

(7) ಒಂಟೆ ಮರಳುಗಾಡಿನ ಪ್ರಾಣಿ. ಇದರ ಕೆಲವು ವಿಶೇಷ ಸಂಗತಿಗಳೇನು?

(8) ಇದೊಂದು ಬಗೆಯ ಮರಕುಟಿಗ ಹಕ್ಕಿ. ಇದು ಇಲ್ಲಿ ಗೂಡು ಮಾಡಿರುವ ಸಸ್ಯ ಯಾವುದು, ಗುರುತಿಸಿ?

ಚಿತ್ರಪಾಠದ ಉತ್ತರ

(1) ಇವು ಹಾರುಮೀನುಗಳು. ತಮ್ಮ ವೈರಿಜೀವಿಯಿಂದ ತಪ್ಪಿಸಿಕೊಳ್ಳಲು ಇವು ನೀರಿನಿಂದ ಮೇಲಕ್ಕೆ ಗಾಳಿಗೆ ಜಿಗಿಯುತ್ತವೆ. ತನಗೆ ಬೇಕಾದ ವೇಗವನ್ನು ಸಂಚಯಿಸಿಕೊಂಡು ಹಾರುವ ಈ ಮೀನು, ಎದೆ ಭಾಗದ ಈಜು ರೆಕ್ಕೆಗಳನ್ನು ಹಕ್ಕಿಯ ರೆಕ್ಕೆಯಂತೆ ಹರಡಿಕೊಂಡು 2 ಮೀ ಎತ್ತರದಲ್ಲಿ 100 ಮೀ ದೂರ ಹಾರಬಲ್ಲದು.

(2) ದೊಡ್ಡ ಬಿಳಿಯ ಷಾರ್ಕಿನ ಮತ್ತೊಂದು ಹೆಸರು ‘ಬಿಳಿಯ ಸಾವು’ –  ಅಷ್ಟು ಭಯಂಕರ ಈ ಪ್ರಾಣಿ. ಬಹುಶಃ ಷಾರ್ಕ್‌ಗಳಿಂದ ಮನುಷ್ಯನ ಮೇಲೆ ಆಗಿರುವ ಆಕ್ರಮಣಗಳಲ್ಲಿ ಇದರದೇ ಹೆಚ್ಚು ಪಾಲು. 7ಮೀ. ಉದ್ದ ಬೆಳೆಯುವ ಈ ಷಾರ್ಕ್‌ಗಳ ದವಡೆಗಳು ಅತಿ ಬಲಯುತ, ಒಂದೇ ಬಾರಿಗೆ ನಮ್ಮ ತೋಳನ್ನೋ ಕಾಲನ್ನೋ ತುಂಡರಿಸಬಲ್ಲದು. ಷಾರ್ಕ್‌ಗಳ ಹಲ್ಲುಗಳು ಗರಗಸದಂತೆ ಇರುತ್ತವೆ.

(3) ಜಲಸಸ್ಯವಾದ ಲಿಲೀ ಗಿಡಗಳ ಎಲೆಗಳ ಮೇಲೆ ಜಕಣ ಕುಕ್ಕುಟ ನಡೆಯಲ್ಲಿ ಚಲಿಸುತ್ತದೆ. ಕೊಳ, ಸರೋವರಗಳಲ್ಲಿ ಇವುಗಳ ಜೀವನ. ಅಲ್ಲಿನ ಕೀಟಗಳೇ ಇವುಗಳ ಆಹಾರ. ಕೀಟಗಳನ್ನು ಹಿಡಿಯಲು ಅವು ಲಿಲಿ ಎಲೆಗಳ ಮೇಲೆ ನಡೆಯುತ್ತವೆ. ಅವುಗಳ ಉದ್ದನಾದ ಕಾಲುಗಳು ಹಕ್ಕಿಯ ತೂಕವನ್ನು ಹರಡಿದಂತೆ ಮಾಡುವುದರಿಂದ ಅವು ಎಲೆಯ ಮೇಲೆ ಕಾಲಿಟ್ಟಾಗ ಎಲೆಯು ಬಾಗುವುದಿಲ್ಲ ಅಥವಾ ಮುಳುಗುವುದಿಲ್ಲ.

(4) ಇದು ಗ್ಯಾನೆಟ್ (gannet) ಹಕ್ಕಿ. ಜಾಲಪಾದದ ಕಡಲಹಕ್ಕಿಯಾದ ಗ್ಯಾನೆಟ್ ಜಲಚರಗಳನ್ನು ಹಿಡಿಯಲು ಡೈವ್ ಮಾಡುತ್ತದೆ. ಸುಮಾರು 10 ಸೆಕೆಂಡ್‌ಗಳ ಕಾಲ ಅದು ನೀರಿನೊಳಗೆ ಇರಬಲ್ಲದು. 10 ೊಮೀ. ಆಳಕ್ಕೆ ಡೈವ್ ಮಾಡುತ್ತದೆ. ಆದರೆ ಇವು ಕೆಲವೂಮ್ಮೆ ಬೆಸ್ತರ ಬಲೆಗೆ ಸಿಲುಕಿಕೊಂಡು ಜೀವ ಕಳೆದುಕೊಳ್ಳುತ್ತವೆ.

(5) ಹೌದು ಇದು ಸೋಜಿಗವೇ ಸರಿ. ನಾಜೂಕಾದ ಈ ಜೀವಿಗಳು ಆರ್ಕ್‌ಟಿಕ್‌ನಂತಹ ಹಿಮಾವೃತ ಪ್ರದೇಶದಲ್ಲಿ ಬದುಕಲು ಕೆಲವು ಚಿಟ್ಟೆಗಳಿಗೆ ಇರುವ ರೋಮಭರಿತ ದೇಹ ಕಾರಣ. ಇದು ಅವುಗಳನ್ನು ಬೆಚ್ಚಗೆ ಇಟ್ಟಿರುತ್ತದೆ. ಕೆಲವಕ್ಕೆ ಕಡುಪು ಬಣ್ಣವಿದೆ. ಹೀಗೆ ಸೂರ್ಯ ಶಾಖವನ್ನು ಹೀರಿಕೊಳ್ಳುತ್ತವೆಯೆನ್ನುವುದು ಮತ್ತೊಂದು ವಿವರಣೆ. ಆರ್ಕ್‌ಟಿಕ್ ಕ್ಲೌಡೆಡ್ ಎಲ್ಲೊ ಬಟರ್ ಫ್ಲೈ ಚಿಟ್ಟೆಯ ‘ರಕ್ತ’ ಅಥವಾ ದೇಹ ದ್ರವಕ್ಕೆ ಒಂದು ಬಗೆಯ ವಿಶೇಷ ಗುಣವಿದೆ, ಇದರಿಂದ ಚಿಟ್ಟೆ ಹಿಮದ ಧಕ್ಕೆಗೆ ಒಳಗಾಗುವುದಿಲ್ಲ.

(6) ನಮ್ಮಲ್ಲಿ ಹಾಲಕ್ಕಿಗಳು ಹಾರುವುದು ಹೀಗೆ. ಚಿತ್ರದಲ್ಲಿರುವುದು ಹಿಮವಲಯದ ಬಾತುಗಳು ಹೀಗೆ V ಆಕಾರದಲ್ಲಿ ಹಾರಿಕೊಂಡು ಹೋಗುತ್ತವೆ. ಇದು ಪ್ರತಿ ಹಕ್ಕಿ ತನ್ನ ಶಕ್ತಿಯನ್ನು ಮಿತಗೊಳಿಸುವ ವಿಧಾನವಂತೆ. ತನ್ನ ಮುಂದಿರುವ ಹಕ್ಕಿಯ ಹಾರುವಿಕೆ ಇದಕ್ಕೆ ನೆರವಾಗುತ್ತದೆ.

(7) ಇವು ಬಲಿಷ್ಠವಾದ ಪ್ರಾಣಿಗಳು. ಅನೇಕ ಸಾವಿರಾರು ವರ್ಷಗಳ ಹಿಂದೆಯೇ ಸಾಕುಪ್ರಾಣಿಗಳಾದವು. ‘ಮರಳುಗಾಡಿನ ಹಡಗು’ ಇದಕ್ಕೆ ಸಲ್ಲುವ ಪರ್ಯಾಯ ಹೆಸರು. ನೀರಿನಲ್ಲಿ ಹೋಗುವ ದೋಣಿ ಮೇಲಕ್ಕೆ, ಕೆಳಕ್ಕೆ ಸಮುದ್ರದಲ್ಲಿ ಸಾಗುವಂತೆ ಇದರ ಮೇಲಿನ ಸವಾರಿ. ಅರೇಬಿಯಾ ಒಂಟೆಗೆ ಒಂದೇ ಡುಬ್ಬ. ಬ್ಯಾಕ್ಟ್ರಿಯಾ ಒಂಟೆಗೆ ಎರಡು ಡುಬ್ಬಗಳು. ಈ ಡುಬ್ಬಗಳಲ್ಲಿ ಕೊಬ್ಬು ಸಂಚಯವಾಗಿದ್ದು, ಒಂಟೆ ಉಪವಾಸದಿಂದ ಸಾಯದಂತೆ ಕಾಪಾಡುತ್ತದೆ. ಕಣ್ಣಿನ ರೆಪ್ಪೆ ಉದ್ದ ಹಾಗೂ ಮೂಗಿನ ತುದಿಗೆ ‘ಮುಚ್ಚಳ’ ದಂತೆ ತೊಗಲು. ಇದರಿಂದ ಮರಳು ತಡೆಯಲ್ಪಡುತ್ತದೆ. ಒಂಟೆ ಮುಂಗೋಪಕ್ಕೆ ಹೆಸರುವಾಸಿಯಂತೆ. ಇದ್ದಕ್ಕಿದಂತೆ ಕಚ್ಚುತ್ತದೆ, ಒದೆಯುತ್ತದೆಯಂತೆ.

(8) ಇದು ‘ಗೀಲ’ ಮರಕುಟಿಗ ಹಕ್ಕಿ. ಅಮೆರಿಕದ ಮರಳುಗಾಡಿನ ಜೀವಿ. ಅಲ್ಲಿನ ಪ್ರಮುಖ ಸಸ್ಯ ಕಳ್ಳಿ. ಸಗುವಾರೊ ಎಂಬ ಎತ್ತರಕ್ಕೆ ಬೆಳೆಯುವ ಕಳ್ಳಿಮರ. ಮರಕುಟಿಗ ತನ್ನ ಬಲವಾದ, ಹರಿತ ಕೊಕ್ಕಿನಿಂದ ಕಳ್ಳಿ ಗಿಡವನ್ನು ಕೊರೆಯುತ್ತದೆ. ಅಲ್ಲಿನ ರಸವೆಲ್ಲ ಒಣಗಿದ ಮೇಲೆ ಈ ಹಕ್ಕಿ ಅದರೊಳಗೆ ತಣ್ಣಗೆ ವಾಸಿಸುತ್ತದೆ. ಇದು ಬಿಟ್ಟು ಹೋದ ಗೂಡಿನಲ್ಲಿ ಅಲ್ಲಿನ ಗೂಬೆಗಳು ವಾಸಿಸುವದೂ ಇದೆ.