ಮಲೆನಾಡಿನ ಅಡಿಕೆ ತೋಟಿಗರು ‘ಸೋಗೆ ಅಟ್ಲು’ ಕಟ್ಟುತ್ತಾರೆ. ಮರದಿಂದ ಬಿದ್ದ ಅಡಿಕೆ ಸೋಗೆಗಳನ್ನು  ಒಪ್ಪವಾಗಿ ಒಂದೆಡೆ ನಿತ್ಯ ಪೇರಿಸಿಡುವ ಸ್ಥಳ ಇದು. ಸೋಗೆ ಕೆಳಬಾಗದಂತೆ, ಅಡಿಕೆ ಹಾಳೆಗಳು ಒಣಗಿ ಮುದುಡದಂತೆ  ಶೇಖರಿಸುವ ಕೆಲಸ ಚಳಿಗಾಲ, ಬೇಸಿಗೆಗಳಲ್ಲಿ ನಿತ್ಯ ನಡೆಯುತ್ತದೆ. ಮನೆ ಹೊದಿಕೆಗೆ ಸೋಗೆ, ಅಡಿಕೆ ಕೊಳೆರೋಗ ನಿಯಂತ್ರಣಕ್ಕೆ ಕೊಟ್ಟೆ ಕಟುವದಕ್ಕೆ ಮಟ್ಟಾಳೆಗಳು ಬೇಕು, ಇದನ್ನು ಬಳಕೆ ಯೋಗ್ಯವಾಗಿ ಸಂಗ್ರಹಿಸುವ ಕೆಲಸ ಮುಖ್ಯ. ಮುಂಜಾನೆ  ೪-೫ ಗಂಟೆಗೆ ಎದ್ದು  ಸೋಗೆ ಎತ್ತುವದು  ಗಂಡಸರ ಕೆಲಸ, ಶಾಲೆಗೆ ಹೋಗುವ ಗಂಡು ಮಕ್ಕಳಿಗೂ ಆಗಾಗ ತರಬೇತಿ. ಬೆಳಗು ಹರಿಯುವದರೊಳಗೆ ಕೆಲಸ  ಮುಗಿಯಬೇಕು. ಹೆಗಲ ಮೇಲೆ ಸೋಗೆ ಹಾಕಿಕೊಂಡು ಅಡಿಕೆ ತೋಟದಲ್ಲಿ ಎಳೆಯುತ್ತ  ಅಟ್ಲಿನ ಬಳಿಗೆ ಒಯ್ದು ಒಂದರ ಮೇಲೊಂದರಂತೆ ಚೆಂದಾಗಿ ಇಡುವ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ. ಮಳೆಗಾಲಕ್ಕೆ ಮುನ್ನ ಸೋಗೆ ಕಡಿದು ಮನೆ ಹೊದಿಕೆ ಮಾಡುವದು, ತೋಟದಲ್ಲಿ ಉಳಿದ ಹಾಳೆಗಳನ್ನು ಚೆಂದದ ಹೊರೆಗಳಾಗಿ ಸರಿದು ಅಡಿಕೆ ಕೊಟ್ಟೆ ಕಟ್ಟುವದಕ್ಕೆ, ಉರುವಲಿಗೆ  ಮನೆಗೆ ತರವದು  ಲಾಗಾಯ್ತಿನ ಕೆಲಸ. ಸೋಗೆ ಎತ್ತುವ, ಅಟ್ಲಿನಲ್ಲಿ ಸರಿಯುವ, ಹೊರೆ ಕಟ್ಟುವ ಪ್ರತಿ ಹಂತದಲ್ಲಿ  ಕಲಾ ನೈಪುಣ್ಯ ವಿಶೇಷ, ಶಿಸ್ತಿಗೆ  ಇನ್ನಿಲ್ಲದ ಮಹತ್ವ.

ಕೆಲಸದ ಶಿಸ್ತು ಕೃಷಿ ತಲ್ಲೀನತೆಯ ಜೀವಂತ ಸಾಕ್ಷಿ. ಒಂದು ತಪಸ್ಸಿನಂತೆ ಮುನ್ನೆಡೆಸಿದ ಕೈಂಕರ್ಯದಲ್ಲಿ ಎಕತಾನತೆಗಿಂತ  ರಚನಾತ್ಮಕ ದಾರಿಗೆ ಹೆಚ್ಚಿನ ಒತ್ತು. ಕೃಷಿ ಕೆಲಸ ನಿರ್ವಹಣೆಯಲ್ಲಿ ಇಂತಹ ಶ್ರದ್ದೆಗಳನ್ನು ಹತ್ತು ಹಲವು ಕೆಲಸಗಳಲ್ಲಿ ಇಂದಿಗೂ ಕೆಲವೆಡೆ ಕಾಣಬಹುದು. ಮಳೆಗಾಲದ ಉರುವಲು ದಾಸ್ತಾನು ಮಾಡುವಾಗ ಬಚ್ಚಲು ಮನೆಯಲ್ಲಿ  ಇವನ್ನು ಸಂಗ್ರಹಿಸುವ  ವಿಧಾನ ನೋಡಬೇಕು. ಸುಟ್ಟು ಬೂದಿಯಾಗುವ ಕಟ್ಟಿಗೆಯನ್ನು  ಇಡುವದಕ್ಕೂ ಕ್ರಮ ಅನುಸರಿಸಿದ ರೀತಿಯಲ್ಲಿ ಕಲೆ ಗುರುತಿಸಬಹುದು!  ಭತ್ತದ ಹುಲ್ಲನ್ನು ಬಣವೆ ಹಾಕುವದು, ಮೇವಿಗಾಗಿ ಸಂಗ್ರಹಿಸುವುದರಿಂದ ಹಿಡಿದು ದೊಡ್ಡಿ ಹಸುಗಳಿಗೆ ಅವನ್ನು ಹಾಕುವಾಗ ಒಂದು ಗರಿ ಬಿದ್ದು ಹಾಳಾಗದಂತೆ ಎಚ್ಚರವಹಿಸುವಲ್ಲಿ ಪರಿಶ್ರಮದ ಹೆಜ್ಜೆ ಗುರುತಿಸಬಹುದು. ಮುಂಗಾರಿಗೆ ಮುನ್ನ ಭತ್ತದ ಬೀಜ ಬಿತ್ತನೆಗೆ ತಯಾರಿ, ಅಗೆಸಸಿ ಮಾಡುವ ಗದ್ದೆಯಲ್ಲಿ ಕಳೆ ಹುಲ್ಲಿನ ಬುಡ ಹೆಕ್ಕುವ ಕೆಲಸ, ಜಡ್ಡು ಹೆಕ್ಕುವ, ಹೆಂಡೆ ಒಡೆಯುವ ಇಲ್ಲಿನ  ಕೆಲಸದಲ್ಲಿ  ಪರಿಶ್ರಮದ ಲೆಕ್ಕ ಹಾಕಿದರೆ ಕೃಷಿ  ಕಷ್ಟ. ಎಷ್ಟು ದಿನ ಇಂತಹ ಕೆಲಸಕ್ಕೆ ಸಮಯ ವಿನಿಯೋಗಿಸಬೇಕು ಎಂಬುದಕ್ಕಿಂತ ಯಾವ ಕೆಲಸ ಹೇಗೆ ಮಾಡಬೇಕು ಎಂಬುದು ಮುಖ್ಯ. ಕೃಷಿ ನಿರ್ವಸಿದ ನಮ್ಮ ಹಿರಿಯರಿಗೆ ಕೆಲಸ ಮಾಡಿ ಮುಗಿಸುವದಕ್ಕಿಂತ  ಶ್ರದ್ದೆಯಿಂದ ಸರಿಯಾಗಿ ಮಾಡಬೇಕು. ತಲೆಮಾರು ಇವರಿಗೆ ಕೃಷಿ ಕೆಲಸ ಕಲಿಸಿದ ರೀತಿ ಇದು. ಹಾಗಿದ್ದರೇನೇ ಸಮಾದಾನ.

 

ಕಾಂಕ್ರೀಟ್ ಮನೆಗಳು ಹಳ್ಳಿಗೆ ಪ್ರವೇಶಿಸದಿದ್ದ  ಕಾಲಕ್ಕೆ ಕಾಡಿನ ಅಣಲೆಕಾಯಿ ಮಸಿಯಿಂದ ನೆಲ ಸಾರಿಸುವ ವಿದ್ಯೆ  ಮಹಿಳೆಯರ ಕಲಾ ಶಕ್ತಿಗೆ ನಿದರ್ಶನ. ಮಣ್ಣು ಹದಗೊಳಿಸಿ ನೆಲ ರೂಪಿಸುವದರಿಂದ ಆರಂಭಿಸಿ ಗೆದ್ದಲು ಗೂಡಿನ ಮಣ್ಣುಲೇಪಿಸಿ ನಯಗೊಳಿಸುತ್ತ ಅಂತಿಮ ಸ್ಪರ್ಶ ನೀಡುವಲ್ಲಿ ಪರಂಪರೆಯ ಜ್ಞಾನದ ಪ್ರಭಾವವಿದೆ. ಕರಾವಳಿಯಲ್ಲಿ  ಬೇಸಿಗೆ ಬೆಳೆಯನ್ನು  ಜಾನುವಾರುಗಳಿಂದ ನಿಯಂತ್ರಿಸಲು ಕುಮಟಾದ ಹಂದಿಗೋಣ-ಹಳದಿಪುರ ಸುತ್ತಮುತ್ತ ಮರಳಿನ ಗೋಡೆ ಕಟ್ಟುತ್ತಾರೆ. ಗದ್ದೆಯ ಮರಳು ಮಣ್ಣನ್ನು ಗುದ್ದಲಿ ಸಹಾಯದಿಂದ ೪-೫ ಅಡಿ ಎತ್ತರದ ಗೋಡೆ ಕಟ್ಟುವಲ್ಲಿ ಅಪಾರ ಶ್ರಮವಿದೆ. ಆಕರ್ಷಕವಾಗಿ ಕಾಣುವ ಮರಳಿನ ಗೋಡೆಯ ಹಿಂದೆ ಅನಾಮಿಕ ಶ್ರಮಿಕರ ಮಹಾಯಜ್ಞವಿದೆ. ಹೆದ್ದಾರಿಯಲ್ಲಿ ಅಡ್ಡಾಡುತ್ತ  ಗದ್ದೆ ಬಯಲಿನ ಗೋಡೆ ನೋಡುವ ನಮಗೆ ಹೊರಮೈಯ ಚೆಂದವಷ್ಟೇ ಗೋಚರಿಸುತ್ತದೆ. ನಿರ್ಮಾಣದ ಹಿಂದಿನ ಯತ್ನ ಗಮನಿಸಿದರೆ ಗರಡಿಯಲ್ಲಿ ಪಳಗಿದವರ ಹೆಜ್ಜೆಗಳು ಕಾಣುತ್ತವೆ. ಬೇಲಿಗೆ ಗಂಟು ಹಾಕುವಲ್ಲಿ, ಅಡಿಕೆ ಒಣಗಿಸುವಲ್ಲಿ, ಕರಡದ ಕಟ್ಟು ಕಟ್ಟುವಲ್ಲಿ, ಮುಡೆ ಕಟ್ಟುವದು, ಮೀನು ಒಣಗಿಸುವದು, ಈರುಳ್ಳಿ ಚೆಂಡು ಕಟ್ಟುವದೂ ಸೇರಿದಂತೆ ಪ್ರತಿ ಹಂತದಲ್ಲಿ  ಕೆಲಸದಲ್ಲಿ ಶಿಸ್ತಿಗೆ ವಿಶೇಷ ಮಾನ್ಯತೆ!

ರಾಜದೂತ್ ಬೈಕ್‌ನಲ್ಲಿ ೨೫-೩೦ ಬಾಳೆಗೊನೆ ಹೇರಿಕೊಂಡು ಶಿರಸಿ ಸಂತೆಗೆ ಒಯ್ಯುವ ವ್ಯಕ್ತಿಯೊಬ್ಬನನ್ನು ಹಲವು ವರ್ಷಗಳಿಂದ ನೋಡುತ್ತಿದ್ದೇನೆ. ಅವರನ್ನು ನಿಲ್ಲಿಸಿ ಒಂದು ಬೈಕ್‌ನಲ್ಲಿ ಇಷ್ಟು ಚೆನ್ನಾಗಿ ಹೇಗೆ ಗೊನೆ ಕಟ್ಟುತ್ತೀರಿ? ಎಂದು ಕೇಳಬೇಕು ಎಂದು ಯೋಚಿಸುತ್ತೇನೆ. ಆದರೆ ಬೈಕ್ ಎದುರಾದಾಗೆಲ್ಲ ಅವರು ಬಾಳೆಗೊನೆ ಹೇರಿದ ಶಿಸ್ತು, ದೈತ್ಯ ಕಸರತ್ತು ನೋಡಿ ಮರುಳಾಗಿ ನಿಲ್ಲುತ್ತೇನೆ!. ಇಲ್ಲಿ ಬಾಳೆಗೊನೆ ಸಾಗಿಸುವದು ಒಂದು ಸಾಮಾನ್ಯ ಕೆಲಸವಾಗಿ ಕಂಡರೂ  ಅದನ್ನು  ನಿರ್ವಹಿಸಿದ ರೀತಿ ಅಚ್ಚರಿ ಹುಟ್ಟಿಸುತ್ತದೆ. ಕೆಲಸ ಯಾವುದೇ ಇರಲಿ ಅದನ್ನು  ಕಾಳಜಿಯಿಂದ ಮಾಡಿದಾಗ ಅಲ್ಲಿ ನಮ್ಮತನ ಕಾಣುತ್ತದೆ. ಪರಿಣಾಮಕಾರಿಯಾಗಿ ಹೇಗೆ ಮಾಡಬಹುದು ಎಂಬ ದಾರಿ ಗೋಚರಿಸುತ್ತದೆ. ಪರಿಶ್ರಮದ ಮಧ್ಯೆ  ಕೆಲಸದ ಚೆಂದ ನೆಮ್ಮದಿ ನೀಡುತ್ತದೆ.

ಈಗ ನಮ್ಮೊಳಗೆ, ನಮ್ಮ ಸುತ್ತಮುತ್ತ  ಇಂತಹ ಕೆಲಸಗಳಲ್ಲಿ ಎಷ್ಟು ಶಿಸ್ತು ಉಳಿದಿದೆ? ಗಮನಿಸಬೇಕು. ಹತ್ತು ಹಲವು ಸಮಸ್ಯೆಗಳ ಮಧ್ಯೆ ಕೆಲಸ ನಿರ್ವಹಿಸುವಲ್ಲಿ  ಹೇಗಾದರೂ ಕೆಲಸ ಮುಗಿದರೆ ಸೈ ಎಂಬ ಹಂತಕ್ಕೆ ನಾವು ಬಂದಿದ್ದೇವೆ. ಹೀಗಾಗಿ ನೇಗಿಲ ಸಾಲಿನಲ್ಲಿ, ಗದ್ದೆ ಬದುವಿನಲ್ಲಿ, ಕಬ್ಬಿನ ಗದ್ದೆಯಲ್ಲಿ, ಅಡಿಕೆ ತೋಟದಲ್ಲಿ ಕಾಣುತ್ತಿದ್ದ ನೈಪುಣ್ಯದ ನೋಟಗಳು ಈಗ  ಎಕ್‌ದಂ ನಾಪತ್ತೆಯಾಗಿ ಅಸಡಾಬಸಡಾ ಚಿತ್ರಗಳು ಕಾಣುತ್ತಿವೆ. ಈಗ ಯಂತ್ರಗಳು ಒದಗಿ ನಮಗೆ ಬುಲ್ಡೋಜರ್ ಶಕ್ತಿ ಬಂದಿರಬಹುದು, ನಾಲ್ಕೇ ನಾಲ್ಕು ದಿನಕ್ಕೆ ಗುಡ್ಡಗಳನ್ನು ಸಮತಟ್ಟಾಗಿಸುವ ತಾಕತ್ತು  ದೊರಕಿರಬಹುದು. ಆದರೆ ಇಲ್ಲೆಲ್ಲಿಯೂ ಹಳೆಯ ಶಿಸ್ತು, ಚೆಂದ ಕಾಣುವದಿಲ್ಲ. ೧೦೦ ಅಡಿ ಕೊಳವೆ ಬಾವಿ ಕೊರೆಯಲು ೧೯೫೦ರಲ್ಲಿ  ೨-೩ ತಿಂಗಳು ಬೇಕಿತ್ತು, ಈಗ ಕೆಲವು ತಾಸುಗಳಲ್ಲಿ ಕೆಲಸ ನಡೆಯುತ್ತದೆ. ತಿಂಗಳು ನೇಗಿಲು ಉಳುಮೆ ಮಾಡುತ್ತಿದ್ದುದನ್ನು ಈಗ ಟ್ರ್ಯಾಕ್ಟರ್ ಕೆಲವು ದಿನಗಳಲ್ಲಿ ಪುರೈಸುತ್ತಿದೆ. ವೇಗ ನಮ್ಮ ಕೆಲಸಗಳನ್ನು  ಆವರಿಸಿದೆ.  ಎಲ್ಲ ಕೆಲಸ ಬೇಗ ಮುಗಿಸುವದು ಎಲ್ಲರ ಅನಿವಾರ್ಯವಾಗಿದೆ. ಕೃಷಿ ಕೆಲಸ ಮುಗಿದ ಬಳಿಕ  ಒಂದಿಷ್ಟು ಸಮಯ ಉಳಿದಿದೆ. ಇವನ್ನು  ಟಿವಿ,  ಸಿನೆಮಾ, ಪ್ರವಾಸ, ಮನೋರಂಜನೆಗಳು ಕಸಿದುಕೊಂಡಿವೆ. ಕೃಷಿಗಿಂತ ಕೃಷಿಯೇತರ ಚಟುವಟಿಕೆಗಳಲ್ಲಿ  ಸಮಯ ಕಳೆದಿದ್ದೇವೆ. ಖುಷಿಗಾಗಿ, ಶಿಸ್ತಿಗಾಗಿ ಕೃಷಿ  ಕಲಿಸಿದ ಕಲಾತ್ಮಕ ಮಾರ್ಗಗಳು ಕ್ರಮೇಣ ಕಣ್ಮರೆಯಾಗುತ್ತಿವೆ. ಕೆಲಸದ ಮಾದರಿಗಳು ಕಣ್ಣೆದುರೇ ಮರೆತು ಹೋಗುತ್ತಿವೆ.