ಕೃಷಿ ವಿಶ್ವವಿದ್ಯಾನಿಲಯದಲ್ಲಿ ೧೯೭೦ ರಲ್ಲಿ ಪ್ರಾರಂಭವಾಗಿರುವ ಕನ್ನಡ ಅಧ್ಯಯನ ವಿಭಾಗ, ಕನ್ನಡದಲ್ಲಿ ಕೃಷಿ ವಿಜ್ಞಾನ ಸಾಹಿತ್ಯ ಪ್ರಕಟಣೆಯ ಹೊಣೆಗಾರಿಕೆಯನ್ನು ಹೊತ್ತಿದ್ದು ಈಗಾಗಲೇ ೨೪೦ ಕ್ಕೂ ಮಿಗಿಲಾಗಿ ಕೃಷಿ ವಿಜ್ಞಾನದ ವಿವಿಧ ವಿಷಯಗಳಲ್ಲಿ ಪಠ್ಯ ಹಾಗೂ ಪರಾಮರ್ಶನ ಗ್ರಂಥಗಳನ್ನು ಪ್ರಕಟಿಸಿದೆ. ಶಿಕ್ಷಣ ಮಾಧ್ಯಮ ಪ್ರಾದೇಶಿಕ ಭಾಷೆಗಳಲ್ಲಿ ಬರಬೇಕೆಂದ ೧೯೮೪ರ ಸಂಸತ್ತಿನ ತೀರ್ಮಾನದಂತೆ, ಕನ್ನಡವನ್ನು ಕೃಷಿ ಮಾಧ್ಯಮವಾಗುವಂತೆ ಮಾಡುವ ಪ್ರಥಮ ಹೆಜ್ಜೆಯಾಗಿ ಕರಷಿ ವಿಜ್ಞಾನದ ವಿವಿಧ ವಿಷಯಗಳಲ್ಲಿ ಕನ್ನಡ ಪುಸ್ತಕಗಳ ಪ್ರಕಟಣಾ ಕಾರ್ಯ ನಡೆದಿದೆ. ಪಠ್ಯ ವಿಷಯವಾಗಿ ಅಲ್ಲದೆ ಈ ಪುಸ್ತಕಗಳ ಕೃಷಿ ವಿಜ್ಞಾನ ಪ್ರಸರಣೆಯ ಮಾಧ್ಯಮವೂ ಆಗಿವೆ. ವಿದ್ಯಾರ್ಥಿಗಳಿಗೆ, ರೈತರಿಗೆ, ಬೋಧಕರಿಗೆ ಹಾಗೂ ವಿಜ್ಞಾನಿಗಳಿಗೆ ಇವು ಅರಿವಿನ ಕೈಪಿಡಿಗಳು.

ಪಠ್ಯಪುಸ್ತಕ ಪ್ರಕಟಣಾ ಕಾರ್ಯದ ಜೊತೆಯಲ್ಲಿಯೇ ಕನ್ನಡದಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ, ಲೇಖಕರಿಗೆ ಹಾಗೂ ಸಂಶೋಧಕರಿಗೆ ಅನುವಾಗಲೆಂದು ಸಂಶೋಧನಾ ಕಾರ್ಯಕ್ರಮದ ಅಂಗವಾಗಿ ಕೃಷಿ ವಿಜ್ಞಾನದ ವಿವಿಧ ವಿಷಯಗಳಲ್ಲಿ ಪಾರಿಭಾಷಿಕ ಶಬ್ದಕೋಶಗನ್ನು ಪ್ರಕಟಿಸಲಾಗಿದೆ. ಅಲ್ಲದೆ ಕೃಷಿ ವಿಜ್ಞಾನ ಲೇಖಕರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಪ್ರತಿ ವರ್ಷ ಆಯ್ದ ವಿಷಯಗಳಲ್ಲಿ ಪುಸ್ತಕ ರಚನಾ ಸ್ಪರ್ಧೆಯನ್ನು ನಡೆಸಿ ಅತ್ಯುತ್ತಮ ಪುಸ್ತಕಗಳಿಗೆ ಬಹುಮಾನಗಳನ್ನು ನೀಡಲಾಗುತ್ತಿದೆ.

ಇಂದು ಹೆಚ್ಚು ಶಿಕ್ಷಕರು, ವಿಜ್ಞಾನಿಗಳು ಹಾಗೂ ಲೇಖಕರು ತಮ್ಮ ತಜ್ಞತೆಯ ವಿಷಯದಲ್ಲಿ ಕನ್ನಡ ಕೃತಿಗಳನ್ನು ರಚಿಸಿ ಕೃಷಿ ವಿಜ್ಞಾನದ ಆಧುನಿಕ ಆವಿಷ್ಕಾರ, ತಂತ್ರಜ್ಞಾನ ಹಾಗೂ ಆಲೋಚನೆಗಳನ್ನು ಕನ್ನಡ ನಾಡಿನ ಪ್ರತಿ ಮೂಲೆ ಮೂಲೆಗೂ ತಲುಪಿಸಲು ಸಹಕರಿಸಬೇಕಾಗಿದೆ. ಕರ್ನಾಟಕದಲ್ಲಿ ಕೃಷಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಪ್ರತಿಯೊಬ್ಬರೂ ರೈತನ ಆಡುಭಾಷೆಯಾದ ಕನ್ನಡದಲ್ಲೇ ವ್ಯವಹರಿಸಬೇಕಾಗುತ್ತದೆ. ಈ ದೃಷ್ಟಿಯಿಂದ ನಮ್ಮ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಕಟಣೆಗಳಿಗೆ ಮಹತ್ತರವಾದ ಸ್ಥಾನ ನೀಡಲಾಗಿದೆ.

ಕೃಷಿ ಜ್ಞಾನ ಭಂಡಾರ ಮಾಲಿಕೆಯಲ್ಲಿ ಪ್ರಸ್ತುತ ಪ್ರಕಟವಾಗುತ್ತಿರುವ ನಿಮ್ಮ ಕೈತೋಟ ಪುಸ್ತಕ ಎಲ್ಲ ರೈತರು, ವಿಜ್ಞಾನಿಗಳು ಹಾಗೂ ವಿಸ್ತರಣಾ ಕಾರ್ಯಕರ್ತರಿಗೆ ಉಪಯುಕ್ತವಾಗುವುದೆಂದು ಆಶಿಸಲಾಗಿದೆ.

ಡಾ|| ಎ.ಎಂ. ಕೃಷ್ಣಪ್ಪ
ಕುಲಪತಿಗಳು
ಕೃಷಿ ವಿಶ್ವವಿದ್ಯಾನಿಲಯ,
ಗಾಂಧಿ ಕೃಷಿ ವಿಜ್ಞಾನ ಕೇಂದ್ರ,
ಬೆಂಗಳೂರು – ೫೬೦೦೦೬೫