’ಕೃಷಿ ಜ್ಞಾನ ಭಂಡಾರ’ ರೈತರ ಜನಮನವನ್ನು ತಲುಪುವ ಉನ್ನತವಾದ ಉದ್ದೇಶದಿಂದ ಪ್ರಾರಂಭವಾದ ಒಂದು ಅಪೂರ್ವ ಜ್ಞಾನವಾಹಿನಿ. ’ಕೃಷಿತೋ ನಾಸ್ತಿ ದುರ್ಭಿಕ್ಷಂ’ ಇದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಲಾಂಛನದ ಹೊನ್ನುಡಿ. ಕೃಷಿ ವಿಜ್ಞಾನ ಪ್ರಗತಿಯಾದಂತೆ ನಾಡಿನಲ್ಲಿ ಸುಭಿಕ್ಷತೆ ನೆಲೆಯಾಗುತ್ತದೆ. ರೈತ ಸಂಸ್ಕೃತಿ ಬೆಳೆದಂತೆಲ್ಲಾ ಕೃಷಿ ಜ್ಞಾನ ಭಂಡಾರವು ತುಂಬಿ ಹರಿಯುತ್ತದೆ. ಇದರಲ್ಲಿ ಕೃಷಿ ವಿಜ್ಞಾನಿಗಳ, ಚಿಂತಕರ ಪಾತ್ರ ಪಾರ. ವಿಶ್ವಗಾಮಿನಿಯಾದ ವಿಚಾರ. ಚಿಂತನೆಗಳು, ಮಾನವನ ಮುನ್ನಡೆಯ ದ್ಯೋತಕ. ಇದಕ್ಕೆ ಪೂರಕವಾದ ವೈಜ್ಞಾನಿಕ ಕಿರುಪುಸ್ತಕಗಳನ್ನು ಸರಳ, ಸುಂದರ, ವಿಚಾರಪೂರ್ಣ ಶೈಲಿಯಲ್ಲಿ ರೈತರಿಗೆ ಒದಗಿಸಿಕೊಡುವ ವಿಶಿಷ್ಟ ಕಾರ್ಯವನ್ನು ಕೃಷಿ ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ವಿಭಾಗದಲ್ಲಿ ಕೈಗೊಳ್ಳಲಾಗಿದೆ.

ನಮ್ಮ ದೇಶದಲ್ಲಿ ಏರುತ್ತಿರುವ ಜನಸಂಖ್ಯೆ, ದುಬಾರಿ ಬೆಲೆ ಮುಂತಾದ ಹಲವು ಕಾರಣಗಳಿಂದ ಸಾಮಾನ್ಯ ಜನತೆಗೆ ಪೌಷ್ಟಿಕ ಆಹಾರ ಹಾಗೂ ಆರೋಗ್ಯಕರ ಬೆಳವಣಿಗೆಗೆ ಅವಶ್ಯವಾದ ಹಣ್ಣು-ತರಕಾರಿಗಳು ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತಿಲ್ಲ. ಈ ಕೊರತೆಯನ್ನು ನೀಗಿಸಿಕೊಳ್ಳಲು ಹಳ್ಳಿಗಾಡು ಮತ್ತು ಪಟ್ಟಣ ಪ್ರದೇಶಗಳಲ್ಲಿ ಅವಕಾಶವಿರುವುದು ತಮ್ಮ ಮನೆಯ ಹಿತ್ತಲಿನಲ್ಲಿ ಕೈತೋಟ ಮಾಡಿ ತಾಜಾ ಹಣ್ಣು-ತರಕಾರಿಗಳನ್ನು ತಾವೇ ಬೆಳೆದು ಉಪಯೋಗಿಸಬಹುದಾಗಿದೆ. ಇದರಿಂದ  ಮನೆಯವರಿಗೆ ಪೌಷ್ಟಿಕ ಆಹಾರ ದೊರೆಯುವುದರೊಂದಿಗೆ ಬಿಡುವಿನ ಸಮಯ ಸದುಪಯೋಗವಾಗುತ್ತದೆ.

ಈ ಪುಸ್ತಕವು ಕೃಷಿ ಜ್ಞಾನ ಭಂಡಾರ ಮಾಲಿಕೆಯಲ್ಲಿ ನಾಲ್ಕನೆಯ ಪ್ರಕಟಣೆ. ವೃತ್ತಿಪರ ಶಿಕ್ಷಣದಲ್ಲಿ ಉಪನ್ಯಾಸಕರಾಗಿರುವ ಶ್ರೀ ಬಸವರಾಜ .ಎಸ್. ಮಟ್ಟಿಮನಿಯವರು ಈ ಪುಸ್ತಕವನ್ನು ರಚಿಸಿದ್ದಾರೆ. ಕೈತೋಟದ ಬಗ್ಗೆ ಅತ್ಯಂತ ಉಪಯುಕ್ತ ಮಾಹಿತಿಯನ್ನು ೧೦ ಅಧ್ಯಾಯಗಳಲ್ಲಿ ಕೊಡಲಾಗಿದೆ. ಕೈತೋಟದ ಸಾಮಾನ್ಯ ಪರಿಚಯ, ಸಸ್ಯಾಭಿವೃದ್ಧಿಕ್ರಮ, ಕೈತೋಟದ ನಕ್ಷೆ ಮತ್ತು ಬೆಳೆಗಳು, ಗೊಬ್ಬರಗಳ ಪೂರೈಕೆ, ಸಸ್ಯ ಸಂರಕ್ಷಣೆ, ಕೊಯ್ಲೋತ್ತರ ತಾಂತ್ರಿಕತೆ ಮೊದಲಾದ ಅಧ್ಯಾಯಗಳಲ್ಲಿ ಲೇಖಕರು ಮಂಡಿಸಿರುವ  ವಿಚಾರಗಳು ಸರಳ ಹಾಗೂ ಅನುಭವಪೂರ್ಣವಾಗಿವೆ. ಈ ಪುಸ್ತಕವು ವೃತ್ತಿಪರ ಶಿಕ್ಷಣದಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು, ರೈತರು, ವಿಸ್ತರಣಾ ಕಾರ್ಯಕರ್ತರು ಹಾಗೂ ಇತರ ಆಸಕ್ತರಿಗೆ ಹೆಚ್ಚು ಉಪಯುಕ್ತವಾಗುವುದೆಂದು ಆಶಿಸಲಾಗಿದೆ.

ಡಾ|| ಬಿ.ಎಸ್. ಸಿದ್ದರಾಮಯ್ಯ
ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಮತ್ತು
ಕನ್ನಡ ಅಭಿವೃದ್ಧಿ ಸಮಿತಿ ಕಾರ್ಯದರ್ಶಿಗಳು
ಕನ್ನಡ ಅಧ್ಯಯನ ವಿಭಾಗ
ಕೃಷಿ ವಿಶ್ವವಿದ್ಯಾನಿಲಯ
ಹೆಬ್ಬಾಳ
ಬೆಂಗಳೂರು – ೨೪