ನಿರಂತರವಾಗಿ ತೊರೆಮೊರೆವ ಹಚ್ಚ ಹಸುರಿನ
ಕಣಿವೆ. ಗುಡುಗು ಮಿಂಚುಗಳ ಗದ್ದಲವಿರದ
ಶ್ರಾವಣದ ಬೆಳ್ಮೋಡಗಳ ಹಾಯಾಗಿ ಹರಡಿ-
ಕೊಂಡಾಕಾಶ. ಚೆಂಬೆಳಕು ತುಳುಕುವಂಗಳದ

ಮರಗಿಡಬಳ್ಳಿ ಹೂ ಹಕ್ಕಿ ನಾಯಿಗಳ ಜತೆಗೆ
ಮಾತನಾಡುತ್ತಲೇ, ಸುತ್ತಣ ಜಗತ್ತಿಗೆದೆ
ತೆರೆದು ಮೌನದನುಸಂಧಾನ. ಮೃದು ವಚನ
ಮೂಲೋಕವನೆ ಗೆಲ್ಲುವುದೆಂಬ ನಂಬಿಕೆ-

ಯನ್ನು ನಿಕಷಕ್ಕೊಡ್ಡಿ, ಈ ಪಂಚತಂತ್ರ ಪ್ರ-
ಪಂಚದಬ್ಬರದ ನಡುವೆಯೂ ತೂಕ
ತಪ್ಪದ ನಿಲುವು. ಅಲ್ಲಿಂದ ಇಲ್ಲಿಂದ ಎಲ್ಲಿಂದಲೋ
ಬಂದ ಬೆಳಕುಗಳನ್ನು ಪ್ರಸನ್ನತೆಯ ಪಾಕ-

ದಲ್ಲಿ ಹರಳುಗೊಳಿಸುತ್ತ, ಸಾನೆಟ್ಟುಗಳ ಗುಡಿ
ಕಟ್ಟಿ, ಒಳಗೊಂದು ಪ್ರೀತಿಯ ಹಣತೆ
ಹಚ್ಚಿಡುವ ಕಲೆಗಾರಿಕೆಗೆ ಲೋಕವೆ ಬೆರಗು !
ಬೇರೆ ಬಣ್ಣನೆ ಬೇಕೆ? ನಿಮ್ಮ ಹಾಗೇ ನಿಮ್ಮ ಕವಿತೆ.

(* ಗೆಳೆಯ ಚೆನ್ನವೀರ ಕಣವಿಯವರ ೭೦ನೆ ವರ್ಷದ ಹುಟ್ಟು ಹಬ್ಬದ ನೆನಪಿಗೆ)