ಹೇಳುತ್ತೇನೆ ಕೇಳು ಗೆಳೆಯಾ: ನನಗೆ ತಿಳಿದಂತೆ
ಗೆಲುವಿನ ಮೇಲೆ ಗೆಲುವು ಒಳ್ಳೆಯದಲ್ಲ,
ಒಂದು ಸಲವೂ ಸೋಲದ ಹಾಗೆ ಗೆಲ್ಲುತ್ತ ನಡೆ-
ಯುವುದಕ್ಕಿಂತ ಅಪಾಯಕಾರಿಯಾದದ್ದು

ಮತ್ತೊಂದಿಲ್ಲ. ನೋಡಿದ್ದೇನೆ ಸೋಲು ಗೆಲುವು
ಗಳ ತೆರೆಯೇರಿಳಿದು ನೆಲೆಗೆ ನಿಂತವರನ್ನು,
ನಿನ್ನಂತೆ ಗೆಲ್ಲ್ಲುತ್ತಲೇ ಹೋದವರು ಕೆರಳಿಸಿದ
ಅಸೂಯೆಯನ್ನು, ಸೃಷ್ಟಿಸಿದ ಶತ್ರುಗಳನ್ನು.

ಈ ಗೆಲುವಿನಹಂಕಾರವನ್ನು ಚುಚ್ಚಿ ಚೈತನ್ಯ-
ವನ್ನು ಪಳಗಿಸುವುದಕ್ಕೆ ಬೇಕು ಏನಾ-
ದರೂ ಒಂದು ಆಘಾತ. ನೀನಾಗಿಯೇ ಅದನ್ನು
ತಂದುಕೊಳ್ಳುವುದು ಈ ಕ್ಷಣದ ಅಗತ್ಯ.

ನಿನಗೆ ಪ್ರಿಯವಾದ ಯಾವುದರ ಅಗಲಿಕೆಯಿಂದ
ದುಃಖವಾಗುತ್ತದೋ ಮನಸ್ಸಿಗೆ, ವಿಸರ್ಜಿಸು
ಅದನ್ನು. ಸದ್ಯಕ್ಕೆ ನಾ ಸೂಚಿಸುವ ದಾರಿ ಇದೊಂದೆ
ದಾಟುವುದಕ್ಕೆ ಈ ಹೊತ್ತಿನಪಾಯವನ್ನು.

ಪ್ರಿಯ ಮಿತ್ರ ಬರೆದ ಪತ್ರವನ್ನೋದಿ ದೊರೆ ಪಾಲಿ
ಕ್ರತಿಗನ್ನಿಸಿತು, ಇದು ಸರಿಯಾದ ಮಾತು.
ತನಗತ್ಯಂತ ಪ್ರಿಯವಾದ ವಸ್ತು ಯಾವುದು ಎಂದು
ಹಗಲೂ ರಾತ್ರಿ ಯೋಚಿಸಿದ ಒಬ್ಬನೇ ಕೂತು.


ಮರುದಿವಸ ಹಡಗನ್ನೇರಿ ತನ್ನ ಪರಿವಾರ ಸ-
ಮೇತ ವಿಹಾರ ಹೊರಟನು ದೂರ ದೂರಕ್ಕೆ.
ನಡುಗಡಲಲ್ಲಿ ಹಠಾತ್ತನೆ ಎಲ್ಲರೂ ಕಂಡಂತೆ
ಕಳಚಿ ಎಸೆದನು ತನ್ನ ಮುದ್ರೆಯುಂಗುರವನ್ನು

ನೀರಿನಾಳಕ್ಕೆ! ಏನಾಯ್ತು ಪ್ರಭುಗಳಿಗೆ? ವಿಜ-
ಯೋನ್ಮತ್ತ ಚಿತ್ತಭ್ರಮೆಯೋ ಏನೊ ಎಂದು
ಮೂಕವಿಸ್ಮಿತವಾಯ್ತು ರಾಜ ಪರಿವಾರ. ಅಂತೂ
ದುಃಸ್ವಪ್ನದಂತೆ ಕೊನೆಗೊಂಡಿತ್ತು ನೌಕಾವಿಹಾರ.

ಎಸೆದದ್ದೆ ತಡ ಮುದ್ರ್ರೆಯುಂಗುರವನ್ನು, ಬಂದು
ಕವಿದುಕೊಂಡಿತ್ತು ಪ್ರಿಯವಸ್ತು ವಿರಹದ
ಶೋಕ ಹೃದಯವನ್ನು, ಒಂದೇ ಸಮನೆ ಮೂರುದಿನ
ಹಿಡಿದಲ್ಲಾಡಿಸಿತು ದೊರೆಯ ಅಂತರಾಳವನ್ನು.              


ಕೆಲವು ದಿನಗಳ ಬಳಿಕ ಚಿತ್ತ ಸ್ವಸ್ಥ ಸ್ಥಿತಿಗೆ
ಮರಳಿದ ವೇಳೆ ಬೆಸ್ತನೊಬ್ಬನು ಬಂದು
ಬಿನ್ನವಿಸಿದನು ಹೀಗೆ: ‘ಬಲು ಅಪರೂಪವಾದ
ವಸ್ತುವೊಂದನ್ನು ತಂದಿದ್ದೇನೆ ಒಪ್ಪಿಸಲು

ಮ್ಮ ಸನ್ನಿಧಿಗೆ. ಪಂಚವರ್ಣದ ಮೀನು, ಹೇಗೆ
ಬಿತ್ತೋ ಕಾಣೆ ನನ್ನ ಬಲೆಯೊಳಗೆ, ದೊರೆ
ಮೆಚ್ಚಿ ಮನ್ನಣೆ ಮಾಡಿ ಕಳಿಸಿ ಕೊಟ್ಟನದನ್ನು
ಸಂಜೆಯೂಟಕ್ಕೆಂದು ಅಡುಗೆ ಮನೆಗೆ.

ಸ್ವಲ್ಪ ಹೊತ್ತಿನ ಮೇಲೆ ಕೇಳಿಸಿತು ಅರಮನೆಯ
ಅಡುಗೆ ಮನೆಯಿಂದ ಸಂಭ್ರಮಾಶ್ಚರ್ಯಗಳ
ಉದ್ಗಾರ. ಹಿರಿಯ ಬಾಣಸಿಗನೊಂದು ತಟ್ಟೆಯೊ-
ಳಗಿಟ್ಟು ತಂದಿದ್ದಾನೆ ಕೊಯ್ದ ಮೀನಿನ

ಹೊಟ್ಟೆಯೊಳಗಿದ್ದ ಥಳಥಳ ಹೊಳೆವ ನವರತ್ನ-
ದುಂಗುರ! ದಿಗ್‌ಭ್ರಮೆಗೊಂಡ ದೊರೆ: ನಾನೆ
ನಾನೆ ಎಸೆದದ್ದು ನಡುಗಡಲಲ್ಲಿ ಈ ಉಂಗುರ-
ವನ್ನು, ಮತ್ತೆ ಬಂದಿತು ಹೇಗೆ ಹುಡುಕಿ ನನ್ನನ್ನು!

ಏನು ಹೇಳುವುದು ಇದಕ್ಕೆ? ಬಿಟ್ಟೆನೆಂದರು
ಬಿಡದ ಸೋಜಿಗಕ್ಕೆ. ಅರ್ಥ ಉಂಟೇ ಇಲ್ಲಿ
ವ್ಯಕ್ತಿ ಸಂಕಲ್ಪಕ್ಕೆ, ನಿಯತಿಯೊಂದೇ ಹೀಗೆ
ಜಗದಗಲಕ್ಕು ಹರಡಿ ಕೂತಿರುವಾಗ ತನ್ನ ರೆಕ್ಕೆ!

ಕ್ರಿಸ್ತಪೂರ್ವ ಐದನೆ ಶತಮಾನದಲ್ಲಿದ್ದ ಗ್ರೀಕ್ ಪ್ರಥಮ ಇತಿಹಾಸಕಾರನಾದ ಹೆರೊದೊತನ ‘ಸಮರಕತೆಗಳು’ (ಅನುವಾದ: ಡಾ. ಎಚ್.ವಿ. ರಂಗಾಚಾರ್) ಕೃತಿಯೊಳಗಿನ ಒಂದು ಪ್ರಸಂಗ