ಜನನ ೧೫ ಜೂನ್ ೧೯೨೪ ದಕ್ಷಿಣ ಕನ್ನಡ ಜಿಲ್ಲೆಯ ಕುಳಕುಂದಲ್ಲಿ. ಇವರ ಮೂಲ ಕೆಸರು ಶಿವರಾಯ, ನಿರಂಜನ ಎನ್ನುವುದು ಇವರ ಕಾವ್ಯನಾಮ. ಪ್ರೌಡಶಾಲೆಯಲ್ಲಿಯೇ ಬರಣಿಗೆಯಲ್ಲಿ ಆಸಕ್ತಿ ತೋರಿಸಿದ ಇವರು ೧೫ ಕಥೆಗಳನ್ನು ಬರೆದು ಪ್ರಕಟಿಸಿದ್ದರು. ‘ರಾಷ್ಟ್ರಬಂಧು ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಪತ್ರಿಕಾರಂಗ ಪ್ರವೇಶ ಪಡೆದ ಇವರು ೧೯೪೫ ರಲ್ಲಿ ಬೆಂಗಳೂರಿಗೆ ಬಂದು ಪ್ರಜಾಮತ, ಪತ್ರಿಕೆಯಲ್ಲಿ ಸಹ ಸಂಪಾದಕತ್ವ ವಹಿಸಿದರು. ನಂತರ ಅನೇಕ ಪತ್ರಿಕಾಲಯಗಳಲ್ಲಿ ಕಾರ್ಯ ನಿರ್ವಹಿಸಿದರು.

ಎಡ ಪಂಥೀಯ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಂಡ ಇವರಿಗೆ ಕಂಯೂನಿಸಂ ಕ್ರಾಂತಿಕಾರೀ ನಿಲುವಿನಲ್ಲಿ ಆಗಾದ ಒಲವಿತ್ತು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿರಚನೆ ಮಾಡಿದ್ದಾರೆ. ಕರ್ನಾಟಕದ ಅಂಕಣ ಬರಹಗಾರರಲ್ಲಿ ನಿರಂಜನರಿಗೆ ಉನ್ನತ ಸ್ಥಾನವಿದೆ. ಐವತ್ತನೆಯ ದಶಕದಲ್ಲಿ ಸಾಧನ ಸಂಚಯ ದ ಮೂಲಕ ನಿರಂಜನರ ಅಂಕಣಬರಹಗಳು ಆರಂಭವಾದವು.

೬೦ ನೇ ದಶಕದಲ್ಲಿ ಹೊಸ ಹೊಸ ಆಯಾಮ ಪಡೆದು ಪುಷ್ಠಿಗೊಂಡವು. ಬೇವುಬೆಲ್ಲ ಎಂಬ ಶೀರ್ಷಿಕೆಯಿಂದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಗೆ ಬರೆದ ೧೯೬೨-೬೬ ರ ಅವದಿಯ ೨೦೫ ಲೇಖನಗಳ ಸಂಕಲನವೇ ‘ಅಂಕಣ. ನಿರಂಜನರ ಕಥೆ ಕಾದಂಬರಿಗಳಲ್ಲಿ ಶ್ರಮ ಜೀವಿಗಳ ಪರವಾದ ಸಾಮಾಜಿಕ ಕಳಕಳಿ ಕಂಡು ಬರುತ್ತದೆ. ನಾಸ್ತಿಕ ಕೊಟ್ಟ ದೇವರು- ನಿರಂಜನರ ಪ್ರಮುಖ ಕಥಾಸಂಕಲನ. ಇದೇ ಹೆಸರಿನ ಕಥೆಯ ನಾಯಕ ಸೀತಾಪತಿ ಒಬ್ಬ ಕಲಾವಿದ. ದೇವರು, ಧರ್ಮ, ಮೊದಲಾದವು ಹೀಗೆ ಶೋಷಕ ವರ್ಗದವರ ಕೈಗೆ ಸಿಕ್ಕಿ ಬಡವರ ಶೋಷಣೆಯ ಸಾಧನಗಳಾಗಿವೆ, ಎಂದು ಪ್ರತಿಪಾದಿಸುವುದು ಕಥೆಯ ಆಶಯ. ನಿರುಪದ್ರವಿಯಾದ ಕಲಾವಿದನೂ ಕೂಡ ತನಗರಿವಿಲ್ಲದಂತೆಯೇ ಶೋಷಕರ ಕೈಬಲಪಡಿಸುತ್ತಾನೆ ಎಂಬುದು ಇಲ್ಲಿನ ವಸ್ತು. ನಿರಂಜನರು ಇದುವರೆವಿಗೂ ೨೫ ರಷ್ಟು ಕಾದಂಬರಿಗಳನ್ನು ಬರೆದಿದ್ದಾರೆ. ಅವರ ಪ್ರಮುಖ ಕಾದಂಬರಿಗಳು- ವಿಮೋಚನೆ, ಬನಶಂಕರಿ, ರಂಗಮ್ಮನ ವಠಾರ, ಅಭಯ, ನಂದಗೋಕುಲ- ಇವು ಸಾಮಾಜಿಕ ಕಾದಂಬರಿಗಳಾದರೆ, ಕಲ್ಯಾಣಸ್ವಾಮಿ ಹಾಗೂ ಅಪರಂಪರಾ, ಇತಿಹಾಸ ಪ್ರಜ್ಞೆ, ಯುದ್ಧಕೃತಿಗಳು. ಚಿರಸ್ಮರಣೆ, ಮತ್ತು ಮೃತ್ಯುಂಜಯ ಗಳಲ್ಲಿ ಬಂಡಾಯ ಅಥವಾ ಕ್ರಾಂತಿ ತತ್ವ ಅಡಗಿದೆ. ಶ್ರಮಜೀವಿಗಳು ನಡೆಸುತ್ತ ಬಂದಿರುವ ವರ್ಗಸಮರದ ಸುದೀರ್ಘ ಇತಿಹಾಸದ ಇಂದು ರೋಮಾಂಚಕಾರೀ ಅಧ್ಯಾಯದಂತಿರುವ ಕೈಯ್ಯೂರು ರೈತರ ಸಂಘಟನೆ ಚಿರಸ್ಮರಣೆ ಕಾದಂಬರಿಗೆ ಪ್ರೇರಣೆ.

ಸಂಗಮ ಸ್ನಾನ, ಆಹ್ವಾನ, ಸಾಮ್ರಾಜ್ಞಿ, ನಾವೂ ಮನುಷ್ಯರು, ಇವರ ನಾಟಕಗಳು ಐದುನಿಮಿಷ ಸಾಧನಾ, ಪುಷ್ಪಹಾರ, ಅಂಕಣ, ಪ್ರಮುಖ ಅಂಕಣಬರಹಗಳು ಸಹಕಾರೀ ಪ್ರಕಾಶನದ ಜ್ಞಾನಗಂಗೋತ್ರಿ ಸಂಪುಟಗಳು, ಜನತಾಸಾಹಿತ್ಯ ಮಾಲೆ ಇವರ ಪ್ರಮುಖ ಸಂಪಾದನೆಯ ಕೃತಿಗಳು. ಸಮತಾವಾದ, ತಾಯಿ, ಜನತೆಯ ನಡುವೆ, ನನ್ನ ವಿಶ್ವವಿದ್ಯಾಲಯ, ಅದಃಪತನ, ಮದುವಣಗಿತ್ತಿ, ಪ್ರಮುಖ ಅನುವಾದಗಳು.

ಚಿರಸ್ಮರಣೆಗೆ ಸೋವಿಯತ್‌ಲ್ಯಾಂಡ್‌ನೆಹರೂ ಪ್ರಶಸ್ತಿ, ೧೯೭೫ ರ ರಾಜ್ಯೋತ್ಸವ ಪ್ರಶಸ್ತಿ, ೧೯೭೮ ರ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ೧೯೮೫ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ ಸದಸ್ಯತ್ವ ಮಾನ್ಯತೆ ಇವರಿಗೆ ಸಂದ ಪ್ರಮುಖ ಗೌರವಗಳು.