ನೂರೆಂಟು ಆಸೆಗಳು, ಹತ್ತಾರು ಮಹಾತ್ವಾಕಾಂಕ್ಷೆಗಳು, ಹಲವಾರು ನಿರೀಕ್ಷೆಗಳು ಹರೆಯದವರ ಮನಸ್ಸಿನಲ್ಲಿ ನರ್ತಿಸುತ್ತಿರುತ್ತವೆ. ಕಣ್ಣುಗಳು ನೋಡಿದ್ದೆಲ್ಲಾ ಬೇಕು, ಕಿವಿ ಕೇಳಿದ್ದನ್ನೆಲ್ಲಾ ಪಡೆಯಬೇಕು. ಶರೀರ ಅಪೇಕ್ಷೆಪಡುವುದನ್ನೆಲ್ಲಾ ಅನುಭವಿಸಬೇಕು. ಜೊತೆಗೆ ಇತರರಿಂದ ಪ್ರೀತಿ ಬೇಕು ವಿಶ್ವಾಸ ಬೇಕು. ಸಮಾಜದಲ್ಲಿ ಸ್ಥಾನಮಾನ ಬೇಕು. ಪ್ರಶಸ್ತಿ ಪುರಸ್ಕಾರ ಬೇಕು. ಈ ಎಲ್ಲ ಆಸೆ, ಆಕಾಂಕ್ಷೆ ಅಗತ್ಯಗಳನ್ನು ಅಬ್ರಹಾಂ ಮಾಸ್ಲೋ ಎನ್ನುವ ಮನೋವಿಜ್ಞಾನಿ ಹೀಗೆ ಪಟ್ಟಿ ಮಾಡಿದ್ದಾನೆ.

ಉನ್ನತ ಮಟ್ಟದ ಅಗತ್ಯಗಳು: Metaneeds

 • ಆತ್ಮ ಸಾಕ್ಷಾತ್ಕಾರ
 • ಜ್ಞಾನ ಮತ್ತು ಸೌಂದರ್ಯ ಪ್ರಜ್ಞೆಗಳು

ಕೊರತೆಯ ಅಗತ್ಯಗಳು (Deficiency needs)

 • ಕೀರ್ತಿ ಸ್ಥಾನಮಾನ
 • ಪ್ರೀತಿ ವಿಶ್ವಾಸ
 • ಸುರಕ್ಷತೆ

ಆಹಾರ ಸೇವನೆ, ನಿದ್ರೆ, ಲೈಂಗಿಕ ಬಯಕೆ, ಖುಷಿ, ಸುಖಪಡುವ ಅಗತ್ಯತೆಯಂತಹ ಪ್ರಾಥಮಿಕ ದೈಹಿಕ ಬೇಡಿಕೆಗಳು.

ಕೆಳಗಿನ ನಾಲ್ಕು ಅಗತ್ಯಗಳು- ದೈಹಿಕ ಬೇಡಿಕೆಗಳು, ಸುರಕ್ಷತೆ, ಪ್ರೀತಿವಿಶ್ವಾಸ ಮತ್ತು ಕೀರ್ತಿ ಸ್ಥಾನಮಾನದ ಅಗತ್ಯಗಳು ಎಷ್ಟಿದ್ದರೂ ನಮಗೆ ಸಾಲದು. ಇನ್ನಷ್ಟು ಬೇಕು ಎನಿಸುವಂತಹವು. ಬೇಡಿಕೆಗೆ ಮಿತಿಯೇ ಇರುವುದಿಲ್ಲ. ಆದ್ದರಿಂದಲೇ ಈ ನಾಲ್ಕು ಅಗತ್ಯಗಳನ್ನು ಆತ deficiency needs ಎನ್ನುತ್ತಾನೆ! ಹರೆಯದವರಿಗಂತೂ ಈ ನಾಲ್ಕೂ ಅಗತ್ಯಗಳು ಎಷ್ಟು ಪೂರೈಕೆಯಾದರೂ ಸಾಲದು. ಬೇಕು, ಇನ್ನಷ್ಟು ಬೇಕು, ಬೇರೆಯವರಿಗಿಂತ ಹೆಚ್ಚು ಸಿಗಲಿ, ಚೆನ್ನಾಗಿರುವುದೇ ಸಿಗಲಿ, ಇತರರು ಮತ್ಸರ ಪಡುವಷ್ಟು ನಮಗೆ ಸಿಗಲಿ ಎಂದು ಹಾರೈಸುತ್ತಿರುತ್ತಾರೆ. ಸಿಗದಿದ್ದಾಗ ನಿರಾಶರಾಗುತ್ತಾರೆ. ಅತೃಪ್ತರಾಗಿ, ಅಸಮಾಧಾನಕ್ಕೆ ಒಳಗಾಗುತ್ತಾರೆ. ತಂದು ಕೊಡದ್ದಕ್ಕೆ, ತೃಪ್ತಿಯಾಗುವಷ್ಟು ಪೂರೈಕೆ ಮಾಡದ್ದಕ್ಕೆ ಪಾಲಕರನ್ನು, ಪೋಷಕರನ್ನು ದೂರುತ್ತಾರೆ. ಅವರ ಮೇಲೆ ಸಿಟ್ಟಾಗುತ್ತಾರೆ.

ಹರೆಯದವರಿಗೆ: ವಿವಿಧ ಬಗೆಯ, ರುಚಿರುಚಿಯಾದ ತಿಂಡಿ, ಆಹಾರ ಪದಾರ್ಥಗಳನ್ನು ಸೇವಿಸುವ ಆಸೆ. ಮನೆಯ ಹೊರಗಡೆ, ಹೋಟೆಲ್, ಉಪಾಹಾರ ಗೃಹಗಳು, ತಿಂಡಿ ಅಂಗಡಿಗಳು, ಐಸ್‌ಕ್ರೀಮ್ ಪಾರ್ಲರ್‌ಗಳು, ಚಾಟ್‌ಗಳು, ಪಾನೀಯಗಳನ್ನು ಮಾರುವ ಅಡ್ಡೆಗಳಿಗೆ ಹೋಗಿ, ಮನಸೋ ಇಚ್ಚೆ ತಿನ್ನುವ ಚಪಲ!

 • ಆಧುನಿಕ ಉಡುಗೆ ತೊಡುಗೆಗಳನ್ನು ಧರಿಸುವ ಆಸೆ.
 • ಬೈಕ್, ಮೊಬೈಲ್ ಇತ್ಯಾದಿ ಉಪಕರಣಗಳನ್ನು ಖರೀದಿಸುವ ಬಯಕೆ.
 • ವಿವಿಧ ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುವ ಆಸೆ.
 • ಊರು ಸುತ್ತುವ, ದೇಶ ತಿರುಗುವ, ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಬಯಕೆ.
 • ಅತಿ ಗಣ್ಯ ವ್ಯಕ್ತಿಗಳನ್ನು, ತಮ್ಮ ನೆಚ್ಚಿನ ಹೀರೋ, ಹೀರೋಯಿನ್‌ಗಳನ್ನು ಕಂಡು ಮಾತನಾಡುವ ಆಸೆ.
 • ಸಭೆ ಸಮಾರಂಭಗಳಲ್ಲಿ ಕೇಂದ್ರ ಬಿಂದುವಾಗಿ ಕಾಣಿಸಿಕೊಳ್ಳುವ ಆಸೆ ಹೀಗೆ ಈ ಆಸೆ, ಬಯಕೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
 • ಸಾಕಷ್ಟು ಹರೆಯದವರಿಗೆ, ಈ ಆಸೆ, ಬಯಕೆಗಳು ಪೂರೈಕೆಯಾಗುವುದೇ ಇಲ್ಲ. ಅವರ ಕನಸುಗಳೆಲ್ಲ ಕನಸುಗಳಾಗಿಯೇ ಉಳಿಯುತ್ತವೆ. ಅದಕ್ಕೆ ಕಾರಣಗಳು ನೂರೆಂಟು.

೧. ಬಡತನ: ಸಂಪನ್ಮೂಲ ಬಹಳ ಕಡಿಮೆ ಇರುವುದು.

೨. ತಂದೆತಾಯಿಗಳು ಮನೆಯ ಇತರರು ಮಕ್ಕಳ ಈ ಆಸೆ/ಬಯಕೆಗಳಿಗೆ ಸ್ಪಂದಿಸದಿರುವುದು, ಅವೆಲ್ಲ ಏಕೆ ಬೇಕು ಉದಾಸೀನ ಧೋರಣೆಯನ್ನು ಹೊಂದಿರುವುದು.

೩. ತಂದೆ-ತಾಯಿಗಳು ಶೈಕ್ಷಣಿಕ ಸಾಧನೆಗೆ ಮಾತ್ರ ಮಹತ್ವ, ಕೊಟ್ಟು ಉಳಿದ ಶೈಕ್ಷಣೇತರ ಚಟುವಟಿಕೆಗಳು ಅನಗತ್ಯ ಅಥವಾ ವ್ಯರ್ಥ ಎಂಬ ಧೋರಣೆಯನ್ನು ಹೊಂದಿರುವುದು.

೪. ಆಸೆ ಬಯಕೆಗಳನ್ನು ಪೂರೈಸಿಕೊಳ್ಳುವುದರಿಂದ, ಹರೆಯದವರು ಅವುಗಳನ್ನು ಪಡೆದು ಸಂತೋಷಪಡುವುದನ್ನೇ ಚಟಮಾಡಿಕೊಳ್ಳುತ್ತಾರೆ. ಶಿಸ್ತನ್ನು ಪಾಲಿಸಲಾಗದೇ ಸ್ವಚ್ಚಂದತೆಯತ್ತ ವಾಲುತ್ತಾರೆ ಎಂದು ಮನೆಯವರು, ಶಿಕ್ಷಕರು ಭಾವಿಸುವುದು.

ಕೆಲವು ಕಾರಣಗಳು

‘ಕಳೆದ ಮೂರು ದಿನಗಳಿಂದ ಮಾತಿಲ್ಲ, ಕಣ್ಣುಬಿಟ್ಟು ನೋಡುತ್ತಾನೆ. ಆದರೆ ಪ್ರಚೋದನೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಅವನ ಅಮ್ಮ ಪಕ್ಕದಲ್ಲಿ ಕುಳಿತು ‘ಎಲ್ಲಿ ರವಿ ಬಾಯಿ ತೆಗೆ, ನನ್ನ ಕಂದ, ಸ್ವಲ್ಪ ಊಟಮಾಡು, ಬೆಳಗಿನಿಂದ ಏನೂ ತಿಂದಿಲ್ಲವಲ್ಲೋ, ಜಾಣ ಸ್ವಲ್ಪ ತಿನ್ನಪ್ಪ ಎಂದರೆ, ಬಾಯಿ ಬಿಡುತ್ತಾನೆ, ಆಹಾರವನ್ನು ನುಂಗುತ್ತಾನೆ ಅಗಿಯುವುದಿಲ್ಲ. ಪ್ರತಿ ಮೂರು ಗಂಟೆಗಳಿಗೊಮ್ಮೆ ಎಬ್ಬಿಸಿ ಮೂತ್ರ ಮಾಡಿಸಿ ಎಂದಿದ್ದಾರೆ ನಮ್ಮ ಫ್ಯಾಮಿಲಿ ಡಾಕ್ಟರು, ಹಾಗೇ ಮಾಡುತ್ತಿದ್ದೇವೆ. ಅದೃಷ್ಟದಿಂದ ಒಮ್ಮೆಯೂ ಅವನು ಹಾಸಿಗೆ ಬಟ್ಟೆಯಲ್ಲಿ ಮೂತ್ರ ಮಾಡಿಕೊಂಡಿಲ್ಲ. ದಿನವಿಡೀ ಮಲಗಿರುತ್ತಾನೆ. ಸ್ವಲ್ಪ ಹೊತ್ತು ಕಣ್ಣು ಬಿಟ್ಟಿರುತ್ತಾನೆ, ಸ್ವಲ್ಪ ಹೊತ್ತು ಕಣ್ಣು ಮುಚ್ಚಿರುತ್ತಾನೆ. ಮೂರು ದಿನಗಳ ಹಿಂದೆ ಶಾಲೆಯಿಂದ ಬರುವಾಗ ಬಿದ್ದನಂತೆ, ಅಲ್ಲಿಂದ ಹೀಗೇ ಇದ್ದಾನೆ ಎಂದರು ರವಿಯ ತಂದೆ ಚಂದ್ರಪ್ಪ.

‘ಎಷ್ಟನೇ ಕ್ಲಾಸಿನಲ್ಲಿ ಓದುತ್ತಿದ್ದಾನೆ, ಓದಿನಲ್ಲಿ ಹೇಗೆ? ಇವನ ಸ್ವಭಾವ ಎಂಥದ್ದು ಎಂದು ವೈದ್ಯರು ಪ್ರಶ್ನೇ ಕೇಳಿದರು.

“ ಈ ಸಲ ಹತ್ತನೇ ತರಗತಿಗೆ ಬಂದಿದ್ದಾನೆ. ಆವರೇಜ್ ಸ್ಟೂಡೆಂಟ್ ಸರ್, ಸ್ವಲ್ಪ ನಾಚಿಕೆ ಸ್ವಭಾವ. ಆಸೆ ಹೆಚ್ಚು, ಆಗಾಗ ಹಠ ಮಾಡುತ್ತಾನೆ. ಬೇಡ ಎಂದು ಗದರಿದರೆ ಸುಮ್ಮನಾಗುತ್ತಾನೆ. ನನ್ನನ್ನು ಕಂಡರೆ ಹೆದರುತ್ತಾನೆ. ಇವನ ಅಮ್ಮ ಇವನಿಗೆ ಹೆದರುತ್ತಾಳೆ ಎಂದರು ಚಂದ್ರಪ್ಪ.

“ ಇತ್ತೀಚೆಗೆ ರವಿ ಏನಾದರೂ ಕೇಳಿದ್ದು, ನೀವು ಇಲ್ಲ ಎಂದದ್ದು ಆಗಿದೆಯೇ ರವಿಯನ್ನು ಪರೀಕ್ಷಿಸುತ್ತಾ ಡಾಕ್ಟರು ಪ್ರಶ್ನೆ ಮಾಡಿದರು.

“ಹೋದ ವಾರ ಬಂದು, ಶಾಲೆಯಿಂದ ಶಿವನಸಮುದ್ರಕ್ಕೆ ಟೂರ್ ಪ್ರೋಗ್ರಾಂ ಹಾಕಿದ್ದಾರೆ, ಪ್ರತಿಯೊಬ್ಬರಿಗೂ ನೂರು ರೂಪಾಯಿ ಅಂತೆ, ಹೋಗಲೇ ಎಂದ. ನಾನು ಮೊದಲು ಆಯಿತು. ಹೋಗಿಬರಿವಂತೆ ಅಂದೆ, ಆಮೇಲೆ ರವಿಯ ಅಜ್ಜಿಗೆ ಇದ್ದಕ್ಕಿದ್ದಂತೆ ಮೈಗೆ ಹುಷಾರು ತಪ್ಪಿತು. ಇನ್ನೂ ಚೇತರಿಸಿಕೊಂಡಿಲ್ಲ. ಮನೆಗೆ ಡಾಕ್ಟರು ಬಂದಿದ್ದರು. ಮೂರು ದಿನದ ಹಿಂದೆ ನಡೆದದ್ದು ನೋಡಿ, ನಾನು ಅಜ್ಜಿ ಪಕ್ಕದಲ್ಲಿದ್ದೆ. ಡಾಕ್ಟರೂ ಇದ್ದರು. ಹೀಗೇ ಇದ್ದರೆ, ಅಜ್ಜೀನ ಆಸ್ಪತ್ರೆಗೆ ಸೇರಿಸಬೇಕಾಗುತ್ತೆ ಅಂತಿದ್ದರು. ನಮಗೆಲ್ಲ ತುಸು ಗಾಬರೀನೆ ಆಗಿತ್ತು. ಆಗ ರವಿ ಬಂದು, ‘ಅಪ್ಪಾ ನನಗೆ ನೂರು ರೂಪಾಯಿ ಕೊಡು, ಟೂರ್ ಪ್ರೋಗ್ರಾಂಗೆ ಈ ದಿನವೇ ಹಣ ಕೊಡಬೇಕು, ತಡ ಆದರೆ ಸೀಟ್ ಇರಲ್ಲವಂತೆ ಅಂದ. ನಾನು ಸ್ವಲ್ಪ ರೇಗಿದೆ. ‘ಅಜ್ಜಿಗೆ ಮೈ ಹುಷಾರಿಲ್ಲ ಅಂತ ನಾವೆಲ್ಲ ಚಿಂತೆ ಮಾಡ್ತಿದ್ದರೆ ನಿನಗೆ ಟೂರ್ ಹೋಗೋ ಚಿಂತೆ, ನಾಳೆ ಕೊಡ್ತೀನಂತ ಹೇಳು ಎಂದು ಗದರಿದೆ. ಆ ಮಧ್ಯಾಹ್ನ ಸೀಟ್‌ಗಳೆಲ್ಲ ಭರ್ತಿ ಆಗಿವೆ, ಯಾರು ಇನ್ನೂ ದುಡ್ಡು ಕೊಟ್ಟಿಲ್ಲ, ಅವರಿಗೆ ಸೀಟಿಲ್ಲ ಎಂದು ಕ್ಲಾಸ್ ಟೀಚರ್ ಹೇಳಿದರಂತೆ, ರವಿ ಅದನ್ನು ಕೇಳಿಸಿಕೊಂಡು ಅಳೋಕೆ ಶುರು ಮಾಡಿದನಂತೆ. ಮನೆಗೆ ವಾಪಸ್ ಬರಬೇಕಾದರೆ, ದಾರೀಲಿ ಬಿದ್ದ ಅಂತ ಹೇಳಿ, ಅವನ ಜೊತೆ ಹುಡುಗರು ಬಂದು ಹೇಳಿದರು. ನಾವು ಹೋಗಿ ನೋಡಿದೆವು, ಇವನನ್ನು ಮರದ ಕೆಳಗೆ ಕೂರಿಸಿದ್ದರು. ಮಾತಿಲ್ಲ, ಕತೆ ಇಲ್ಲ, ಆಸ್ಪತ್ರೆಗೆ ಕರೆದೊಯ್ದೆವು. ಡಾಕ್ಟರು ಪರೀಕ್ಷೆ ಮಾಡಿ ‘ಇವನಿಗೆ ಶಾಕ್ ಆಗಿದೆ, ನಮ್ಮಲ್ಲಿ ಟ್ರೀಟ್‌ಮೆಂಟ್ ಕೊಡೋದು ಕಷ್ಟ, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಿರಿ ಅಂದರು. ನಾವು ಏನಕ್ಕೋ ಹೆದರಿಕೆಯಿಂದ ಹೀಗೆ ಆಗಿರಬೇಕು ಅಂತ, ಯಂತ್ರ, ಮಂತ್ರ ಮಾಡಿಸಿದೆವು, ಒಂದು ದಿನವಾದರೂ ಇವನ ಜ್ಞಾನ ಸರಿಹೋಗಲಿಲ್ಲ, ನಿಮ್ಮಲ್ಲಿಗೆ ಬಂದೆವು ಎಂದರು ಚಂದ್ರಪ್ಪ.

ವಿವರವಾದ ಪರೀಕ್ಷೆಯಿಂದ ತಿಳಿದು ಬಂದದ್ದು ರವಿಗೆ ಯಾವುದೇ ದೈಹಿಕ ಕಾಯಿಲೆ ಇರಲಿಲ್ಲ. ನರ ಮಂಡಲ, ಸ್ನಾಯುಗಳ ಪ್ರತಿಕ್ರಿಯೆ ಎಲ್ಲ ಸರಿಯಾಗೇ ಇದ್ದವು. ಆ…ಊ…ಎಂದು ಶಬ್ದ ಮಾಡುತ್ತಿದ್ದ, ಕೆಮ್ಮುತ್ತಿದ್ದ, ಆದರೆ ಧ್ವನಿ.. ಮಾತುಗಳು ಹೊರಡುತ್ತಿರಲಿಲ್ಲ. ನಿನಗೇನು ಕಷ್ಟ,ತಗೋ ಈ ಪೇಪರು, ಪೆನ್ನು ಬರಿ ಎಂದಾಗ, ಎರಡು ಸಾಲು ಬರೆದ. ‘ಟೂರ್‌ಗೆ ದುಡ್ಡು ಕೊಡುತ್ತೇನೆ ಎಂದು ಹೇಳಿ, ಅಪ್ಪ ಆಮೇಲೆ ಅಪ್ಪ ಕೊಡದೆ ಮೋಸ ಮಾಡಿದ್ದಾರೆ, ನನಗೆ ಬೇಸರವಾಗಿದೆ ಎಂದು ಬರೆದ. ರವಿ ‘ಉನ್ಮಾದದ ಮೂಕತನ (HYSTERICAL MUTISM)ಕ್ಕೆ ಒಳಗಾಗಿದ್ದ.

* * *

‘ಬೆಳಿಗ್ಗೆ ಎಂಟು ಗಂಟೆಯಾದರೂ, ಎದ್ದು ಬರದೇ ರೂಮಿನಲ್ಲಿ ಏನು ಮಾಡುತ್ತಿದ್ದಾಳೆ ಎಂದು ಸುಕನ್ಯಾಳ ಅಮ್ಮ, ಅವಳು ಮಲಗಿದ್ದ ರೂಮಿಗೆ ಹೋಗಿ ನೋಡುತ್ತಾಳೆ. ಸುಕನ್ಯಾ ಇನ್ನೂ ಮಲಗೇ ಇದ್ದಾಳೆ. ಮುಟ್ಟಿ, ತಟ್ಟಿ ಏಳೇ, ಸಾಲದೇನೇ ಹೊತ್ತು. ಈ ದಿನ ಶಾಲೆಗೆ ಹೋಗುವ ಮನಸ್ಸಿಲ್ಲವೇನೇ ಎಂದರೆ ಏನೂ ಪ್ರಕ್ರಿಯೆ ಇಲ್ಲ. ಕಣ್ಣು ಮುಚ್ಚಿವೆ, ಮುಖದಲ್ಲಿ ಯಾವ ಭಾವನೆಯೂ ಇಲ್ಲ. ಸುಕನ್ಯಾಳ ಅಮ್ಮನಿಗೆ ಗಾಬರಿಯಾಯಿತು. ‘ಏನೂ ಅಂದ್ರೆ ಸುಕನ್ಯಾ ಏಕೋ ಮಾತಾಡ್ತಿಲ್ಲ. ಜ್ಞಾನ ಇರುವ ಹಾಗೇ ಕಾಣೋದಿಲ್ಲ ಬಂದ್ ನೋಡಿ ಎಂದು ಕೂಗು ಹಾಕಿದರು. ವೆರಾಂಡಾದಲ್ಲಿ ಪೇಪರ್ ಓದುವುದರಲ್ಲಿ ಮಗ್ನರಾಗಿದ್ದ ಶಿವಪ್ಪ ದಡಬಡನೆ ಎದ್ದು ಬಂದರು. ಅವರು ಅಲ್ಲಾಡಿಸಿ, ತಟ್ಟಿ ಎಬ್ಬಿಸಿದರೂ, ಸುಕನ್ಯಾ ಕಣ್ಣು ತೆರೆಯಲಿಲ್ಲ. ಆಗ ಅವರ ಗಮನ ಪಕ್ಕದಲ್ಲಿದ್ದ ಸ್ಟೂಲ್ ಮೇಲೆ ಹೋಯಿತು. ಸುಕನ್ಯಾ ಅಜ್ಜಿ ಸೇವಿಸುವ ಬಿಪಿ ಮಾತ್ರೆಯ ಶೀಷೆಯಿದೆ. ಖಾಲಿ ಆಗಿದೆ. ಪಕ್ಕದಲ್ಲಿ ಒಂದು ಚೀಟಿ. ಥಟ್ಟನೆ ಆ ಚೀಟಿಯನ್ನು ತೆಗೆದು ನೋಡಿದರು. ‘ಪ್ರೀತಿಯ ಅಪ್ಪ, ಅಮ್ಮ ನಿಮಗೆ ವಿದಾಯ. ನಾನು ಎಷ್ಟು ಬೇಡಿಕೊಂಡರೂ ನೀವು ನನಗೆ ಮೊಬೈಲ್ ಕೊಡಿಸಲಿಲ್ಲ. ನನ್ನ ಎಲ್ಲ ಸ್ನೇಹಿತರ ಬಳಿ ಮೊಬೈಲ್ ಇದೆ. ಆ ಜಂಬಗಾತಿ ನಳಿನಿ, ನಿನ್ನೆ ತುಂಬಾ ಅವಮಾನ ಮಾಡಿದಳು. ನಿನ್ನ ಅಪ್ಪ ಅಮ್ಮ ಎಂತಹ ಬಿಕನಾಸಿಗಳೇ, ಇಬ್ಬರೂ ಸಂಪಾದಿಸ್ತಾ ಇದ್ದಾರೆ. ನಿನಗೆ ಮೊಬೈಲ್ ತೆಗೆದು ಕೊಡಲು ಅವರಿಗೆ ಇಷ್ಟವಿಲ್ಲ ಅಥವಾ ಅವರಿಗೆ ನಿನ್ನ ಮೇಲೆ ನಂಬಿಕೆ ಇಲ್ಲ. ಇಂತಹ ತಂದೆ-ತಾಯಿಗಳು ಯಾರಿಗೂ ಬೇಡ. ಯು ಶುಡ್ ಹೇಟ್ ದೆಮ್ ಅಂದಳು ನನಗೆ ಬಹಳ ಬೇಸರವಾಯಿತು. ಮೊಬೈಲ್ ಕೇಳಿ ನಿಮಗೆ ಮತ್ತೆ ತೊಂದರೆ ಕೊಡಲು ನನಗಿಷ್ಟವಿಲ್ಲ. ನಾನು ಸಾಯುತ್ತಿದ್ದೇನೆ. ನನಗಾಗಿ ಮರುಗಬೇಡಿ ಇಂತೀ ಸುಕನ್ಯಾ. ತತ್‌ಕ್ಷಣ ಅವಳನ್ನು ಆಸ್ಪತ್ರೆಗೆ ಸೇರಿಸಿ, ಹೊಟ್ಟೆಯನ್ನು ತೊಳಸಿ, ಚಿಕಿತ್ಸೆ ಕೊಡಿಸಿದರು ಸುಕನ್ಯಾ ಚೇತರಿಸಿಕೊಂಡಳು.

***

‘ನೋಡಿ ಸರ್, ಬ್ಲೇಡ್‌ನಿಂದ ಕೈಗಳನ್ನು ಕೊಯ್ದುಕೊಂಡಿದ್ದಾನೆ. ಎಷ್ಟೊಂದು ರಕ್ತ ಸುರಿದುಹೋಯಿತು. ಡಾಕ್ಟರಲ್ಲಿಗೆ ಹೋಗಿ, ಆರು ಹೊಲಿಗೆ ಹಾಕಿಸಬೇಕಾಯಿತು. ನೀವೇ ಕೇಳಿ ಸರ್, ಈ ರೀತಿ ಮಾಡಿ ನಮ್ಮ ಹೊಟ್ಟೆ ಉರಿಸಬಹುದೇ? ಎಂದರು ಗೀತಾಮೂರ್ತಿ.

‘ಏನಪ್ಪಾ, ಏನಾಯಿತು, ಇಷ್ಟೊಂದು ಸಿಟ್ಟು ಯಾರ ಮೇಲೆ? ಮನೋವೈದ್ಯರು ಪ್ರಶ್ನಿಸಿದರು.

‘ನನ್ನ ತಂದೆ ತಾಯಿ ತುಂಬಾ ಪಕ್ಷಪಾತ ಮಾಡ್ತಾರೆ ಸರ್, ಇವರಿಗೆ ದೊಡ್ಡ ಮಗ, ಮಗಳನ್ನು ಕಂಡರೆ ಅಪಾರ ಪ್ರೀತಿ. ನನ್ನ ಕಂಡ್ರೆ ಅಷ್ಟಕಷ್ಟೆ. ನಾನು ಕಪ್ಪಗಿರೋದು ಒಂದು ಕಾರಣ, ಜೊತೆಗೆ ನನಗೆ ಆಸ್ತಮಾ ಇದೆ. ವೈದ್ಯರ ಫೀಸು, ಔಷಧಿಗಳಿಗೆ ಅಂತ ತುಂಬಾ ಖರ್ಚು ಬರುತ್ತಂತೆ. ನಾನು ಕಪ್ಪಗಿರೋದು, ನನಗೆ ಆಸ್ತಮಾ ಇರೋದು ನನ್ನ ತಪ್ಪೇ ನೀವೇ ಹೇಳಿ ಸರ್. ನನ್ನ ಅಣ್ಣ, ನನ್ನ ಅಕ್ಕನಿಗೆ ಎಲ್ಲಲ್ಲದ ಮರ‍್ಯಾದೆ, ಅವರು ಕೇಳಿದ್ದನ್ನೆಲ್ಲಾ ತಂದು ಕೊಡ್ತಾರೆ. ನಾನು ಕೇಳಿದರೆ ದುಡ್ಡಿಲ್ಲ ಅಂತಾರೆ. ನನಗೂ ಒಂದು ಕ್ಯಾಲ್‌ಕುಲೇಟರ್ ತಂದು ಕೊಡಿ ಎಂದು ಎಷ್ಟು ದಿವಸದಿಂದ ಕೇಳ್ತಾ ಇದ್ದೀನಿ. ತಂದು ಕೊಟ್ಟಿಲ್ಲ. ಮೊನ್ನೆ ನನ್ನ ಅಣ್ಣನಿಗೆ ಬ್ಯಾಂಕಿನಿಂದ ಸಾಲ ಮಾಡಿ ಕಂಪ್ಯೂಟರ್ ಕೊಡ್ಸಿದ್ದಾರೆ. ನನ್ನ ಅಕ್ಕನಿಗೆ ಈಗಾಗಲೇ ಮೂರು ಜೊತೆ ಓಲೆಗಳಿವೆ. ಅವಳಿಗೆ ಹೊಸಡಿಸೈನ್‌ನ ಓಲೆ ತಂದು ಕೊಟ್ಟಿದ್ದಾರೆ. ಅಣ್ಣ, ಅಕ್ಕ ಲೇಟಾಗಿ ಬಂದರೆ, ಅವರಿಗಾಗಿ ಕಾದಿದ್ದು ಊಟ ಬಡಿಸ್ತಾರೆ. ನಾನು ಲೇಟಾಗಿ ಬಂದರೆ, ನೀನೇ ಬಡಿಸ್ಕೊಂಡು ಊಟ ಮಾಡೋ ಅಂತ ಹೇಳ್ತಾರೆ. ಸಿಟ್ಟು ಬರೋಲ್ವೇ, ಬೇಸರ, ದುಃಖ ಆಗೋಲ್ವೇ, ನಾನಿರಬಾರದು, ಸತ್ತು ಹೋದರೆ, ಇವರಿಗೆಲ್ಲ ನೆಮ್ಮದಿ ಅಂತ ಅನಿಸ್ತು. ಅದಕ್ಕೆ ಬ್ಲೇಡಿನಿಂದ ಕೈ ಕುಯ್ದುಕೊಂಡೆ ಎಂದ ಸುದರ್ಶನ.

‘ನನಗೆ ವಿದ್ಯೆ ಸರಿಯಾಗಿ ಹತ್ತಲಿಲ್ಲ ಸರ್, ಗಣಿತ ಮತ್ತು ಇಂಗ್ಲಿಷ್ ಎರಡೂ ಕಬ್ಬಿಣದ ಕಡಲೆಯಾಗಿದ್ದವು. ಈ ಸ್ಥಿತಿಯನ್ನು ಈಗ ನೀವು ಡಿಸ್‌ಲೆಕ್ಸಿಯಾ ಎನ್ನುತ್ತೀರಿ. ಮಿದುಳಿನ ನ್ಯೂನತೆಯೇ ಇದಕ್ಕೆ ಕಾರಣ. ಡಿಸ್‌ಲೆಕ್ಸಿಯಾ. ಮಕ್ಕಳಿಗೆ ಹೆಚ್ಚು ಒತ್ತಡ ಹಾಕಬಾರದು. ನಿಧಾನವಾಗಿ ಎಷ್ಟು ಸಾಧ್ಯವೋ ಅಷ್ಟು ಕಲಿಸಬೇಕು. ನಿರ್ದಿಷ್ಟ ಕಲಿಕೆ ತೊಂದರೆ ಇರುವ ವಿಷಯ ಬಿಟ್ಟು, ಬೇರೆ ಉದ್ಯೋಗ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಡಬೇಕು ಎಂದು ಪತ್ರಿಕೆಯಲ್ಲಿ ನೀವು ಬರೆದದ್ದನ್ನು ನಾನು ಓದಿದ್ದೇನೆ. ಆದರೆ ಈ ವಿಚಾರ ನನ್ನ ಅಪ್ಪ, ಅಮ್ಮನಿಗಾಗಲೇ, ನಾನು ಓದಿದ ಶಾಲೆಯ ಟೀಚರ್‌ಗಳಿಗಾಗಲೀ ಗೊತ್ತಿಲ್ಲ. ‘ದಡ್ಡ, ದಂಡಪಿಂಡ, ಸೋಂಭೇರಿ ಎಂದು ನನ್ನನ್ನು ಬಯ್ಯುತ್ತಾ, ಕೈಗಳ ಗಿಣ್ಣಿನ ಮೇಲೆ ಹೊಡೆಯುವುದು. ಪ್ರತಿದಿನ ಬೆಂಚಿನ ಮೇಲೆ ನಿಲ್ಲಿಸುವುದು, ಅಪಮಾನ ಮಾಡುವುದು, ಹೆಚ್ಚೆಚ್ಚು ಹೋಂವರ್ಕ್ ಮಾಡು ಎಂದು ಪೀಡಿಸುವುದು, ನನ್ನ ಜೀವನವನ್ನು ನರಕ ಮಾಡಿಬಿಟ್ಟರು. ನಾನೊಂದು ಹುಡುಗಿಯನ್ನು ಪ್ರೀತಿಸಿದೆ. ನೋಡಲು ಅಂತಹ ರೂಪವತಿ ಏನಲ್ಲ, ಚೆನ್ನಾಗಿ ಹಾಡುತ್ತಿದ್ದಳು. ಒಳ್ಳೆಯ ಕಂಠ. ಎಲ್ಲಾ ಸ್ಕೂಲ್‌ಫಂಕ್ಷನ್‌ಗಳಲ್ಲಿ ಅವಳದೇ ಪ್ರಾರ್ಥನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ. ನನ್ನನ್ನು ಮದುವೆಯಾಗುತ್ತೀಯಾ ಅಂತ ಕೇಳಿದೆ. ಅವಳು ಜೋರಾಗಿ ನಕ್ಕುಬಿಟ್ಟಳು. ‘ನಿನ್ನಂತಹ ಪೆದ್ದನನ್ನು ಯಾರು ಮದುವೆಮಾಡಿಕೊಳ್ಳುತ್ತಾರೆ ಹೋಗೋ ಎಂದು ಬಿಟ್ಟಳು. ಬಹಳ ಬೇಸರ, ನಿರಾಶೆಯಾಯಿತು. ಶಾಲೆ ಬಿಟ್ಟೆ, ಮನೆ ಬಿಟ್ಟೆ, ಯಾವುದೋ ಊರಿಗೆ ಹೋಗುವುದು, ಹೋಟೆಲ್ಲೋ, ಗ್ಯಾರೇಜೋ, ಪೆಟ್ರೋಲ್ ಬಂಕೋ, ಯಾವುದೇ ಅಂಗಡಿಯಲ್ಲಿ ಸಿಕ್ಕಿದ ಕೆಲಸ ಮಾಡಿದೆ. ಮನೆ ಬಿಟ್ಟು ಮೂರು ವರ್ಷ ಆಯ್ತು ಸರ್. ಹೋಗಬೇಕು ಅಂತ ಅನ್ಸೋಲ್ಲ. ಅಂತಹ ಪ್ರೀತಿ, ವಿಶ್ವಾಸ ನನ್ನ ಮತ್ತು ನನ್ನ ತಂದೆ, ತಾಯಿ ನಡುವೆ ಬೆಳೀಲೂ ಇಲ್ಲ. ನನ್ನಂತೆ ಮನೆಬಿಟ್ಟ ಹುಡುಗರ ಜೊತೆ ಸೇರಿ ಬೀಡಿ, ಸಿಗರೇಟ್ ಸೇದಿದೆ. ಬೀರ್, ಬ್ರಾಂದಿ ಕುಡಿದೆ. ಗಾಂಜಾ ಸೇದಿದೆ. ಅಭ್ಯಾಸವಾಯ್ತು, ಚಟವಾಯ್ತು, ಈಗ ನಿಮ್ಮಲ್ಲಿಗೆ ಬಂದಿದ್ದೇನೆ. ಈಗ ಚಟ ಬಿಡಿಸಿ, ನನ್ನನ್ನು ಹೊಸ ಮನುಷ್ಯನನ್ನಾಗಿ ಮಾಡಿ ಎಂದ ಜಗದೀಶನ ವಯಸ್ಸು ಕೇವಲ ೧೭ ವರ್ಷ. ೧೪ನೇ ವರ್ಷ ವಯಸ್ಸಿಗೇ ಮನೆ ಬಿಟ್ಟು c/o ಫುಟ್‌ಪಾತ್ ಆದವನು, ನಿರಾಶೆಯ ಸುಳಿಗೆ ಸಿಕ್ಕಿ, ಕೊಚ್ಚಿ ಹೋದವನು.

ಬೆಳೆಯುವ ಮಕ್ಕಳಿಗೆ ‘ಆಸೆ, ನಿರಾಶೆಗಳ ಬಗ್ಗೆ ತಿಳುವಳಿಕೆ ಹೇಳಬೇಕು. ಆಸೆ ಸಹಜ ಸ್ವಾಭಾವಿಕ. ಆದರೆ ನಿರಾಶೆಯಾದಾಗ ಏನು ಮಾಡಬೇಕು. ಏನು ಮಾಡಬಾರದು, ನಿರಾಶೆಯ ಪ್ರತಿಫಲವಾಗಿ ಬರುವ ದುಃಖ, ಕೋಪಗಳನ್ನು ಹೇಗೆ ನಿಭಾಯಿಸಬೇಕೆನ್ನುವುದನ್ನು ಹೇಳಿಕೊಡಬೇಕು. ಒಂದೆಡೆ ನಿರಾಶೆಯಾದಾಗ ಮತ್ತೊಂದೆಡೆ ಅದರ ಪರಿಹಾರಾರ್ಥ ಎಂಬಂತೆ, ಮತ್ತೇನನ್ನು ಸಾಧಿಸಿ, ಸಂತೋಷಪಡಬಹುದೆಂಬ ವಿಚಾರಗಳನ್ನು ಅವರ ಮುಂದಿಡಬೇಕು.

ತಂದೆ-ತಾಯಿಗಳು, ಕುಟುಂಬ, ಆರ್ಥಿಕ ಸ್ಥಿತಿ, ಸಂಪನ್ಮೂಲಗಳು ಅವಕಾಶ, ಅನುಕೂಲತೆಗಳ ಇತಿಮಿತಿಯೊಳಗೆ ತಮ್ಮ ಆಸೆ, ಆಕಾಂಕ್ಷೆಗಳನ್ನು ಮಿತಿಗೊಳಿಸಲು ಬೆಳೆಯುವ ಮಕ್ಕಳಿಗೆ ತರಬೇತಿ ನೀಡಬೇಕು. ಪಕ್ಕದ ಮನೆಯವರು, ಇತರರಿಗೆ ದೊರಕಿದ ವಸ್ತು, ವಿಶೇಷಗಳನ್ನು, ಸ್ಥಾನಮಾನಗಳನ್ನು ಕಂಡು ಮಗು, ‘ಅವು ತನಗೂ ಸಿಗಬಾರದೇ ಎಂದು ಆಸೆಪಟ್ಟಾಗ, ಆ ಆಸೆ ಎಷ್ಟರಮಟ್ಟಿಗೆ ಕಾರ್ಯಸಾಧು. ಅದು ಪೂರೈಕೆಯಾಗಬಹುದೇ, ಆ ವಸ್ತುವಿಲ್ಲದೆ ಇರಲು ಸಾಧ್ಯವಿಲ್ಲವೇ ಅಥವಾ ಅವುಗಳನ್ನು ಪಡೆಯಲು, ಸಮಯ ಬೇಕೇ ಎಂದು ವಿವೇಚಿಸಲು ಕಲಿಸಬೇಕು. ಸರಳವಾಗಿ, ತೃಪ್ತರಾಗಿ ಬದುಕಲು ತರಬೇತಿ ನೀಡಬೇಕು. ಲಭ್ಯವಿದ್ದುದರಲ್ಲಿ ಸಂತೋಡಪಡುವ ಸ್ವಭಾವವನ್ನು ಬೆಳೆಸಿಕೊಳ್ಳಲು ನೆರವು ನೀಡಬೇಕು.