ಪ್ರವೇಶ

ಇತಿಹಾಸದಲ್ಲಿ ರಾಜಮನೆತನದ ಹಾಗೂ ಉನ್ನತ ವರ್ಗದ ಮಹಿಳೆಯರನ್ನು ಬಿಟ್ಟರೆ, ಸಾಮಾನ್ಯ ವರ್ಗಗಳ ಮಹಿಳೆಯರ ರಾಜಕೀಯ ಸ್ಥಾನಮಾನಗಳನ್ನು ಗುರುತಿಸುವುದು ಕಷ್ಟ. ಕರ್ನಾಟಕದಲ್ಲಿ ರಾಜಕೀಯ ಪ್ರಕ್ರಿಯೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹಾಗೂ ಪ್ರಮುಖ ಪಾತ್ರವನ್ನು ಕುರಿತು ತಿಳಿಯುವಲ್ಲಿ ಶಾಸನಗಳು ಪ್ರಮುಖ ಆಧಾರಗಳಾಗಿವೆ.

ಬ್ರಿಟೀಷರ ಆಳ್ವಿಕೆಯ ಅವಧಿಯಲ್ಲಿ ಮಹಿಳೆಯರ ರಾಜಕೀಯ ಪಾತ್ರವನ್ನು ಬಹಳ ಶ್ರಮದಿಂದ ಗುರುತಿಸಬೇಕಾಗುತ್ತದೆ. ಹೆಚ್ಚಿನ ಆಂದೋಲನ, ಹೋರಾಟಗಳು ಸಾಮಾಜಿಕ ಸ್ಥಾನಮಾನ ಪಡೆಯುವಿಕೆಗೆ ಸಂಬಂಧಿಸಿರುವುದರಿಂದ, ಆಕೆಯ ರಾಜಕೀಯ ಪಾತ್ರವನ್ನಷ್ಟೇ ಪ್ರತ್ಯೇಕವಾಗಿ ಗುರುತಿಸುವುದು ಕಷ್ಟವಾಗುತ್ತದೆ. ರಾಷ್ಟ್ರೀಯ ಚಳುವಳಿಯ ರಾಜಕೀಯ ಹೋರಾಟದ ಮುಖ್ಯವಾಹಿನಿ(Main Stream)ಯಲ್ಲಿ ಭಾಗವಹಿಸಿದ ಹೆಚ್ಚಿನ ಮಹಿಳೆಯರು ಮೇಲ್ವರ್ಗದಿಂದ ಬಂದವರೆಂಬುದನ್ನು ಮರೆಯಲಾಗದು.

ರಾಜಕೀಯ ಕ್ಷೇತ್ರವು ಪುರುಷರ ಪ್ರಬಲ ಕೋಟೆಯಾಗಿ ಕಂಡುಬರುತ್ತಿದೆ. ಮಹಿಳೆ ಪುರುಷರಿಗಿಂತ ಬಲಹೀನಳು ಎಂಬ ಜೈವಿಕ ಅಂಶವನ್ನು ಆಧಾರವಾಗಿಟ್ಟುಕೊಂಡು ಮಹಿಳೆಯನ್ನು ಅಧಿಕಾರ ರಾಜಕಾರಣದಿಂದ ದೂರವಿಡಲಾಗುತ್ತಿದೆ. ಪುರುಷ ಅಭ್ಯರ್ಥಿಗಳೇ ಅಧಿಕ ಸಂಖ್ಯೆಯಲ್ಲಿರುವುದು ಕಂಡುಬಂದಿದೆ. ಆಯ್ಕೆಯಾದ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ತುಂಬಾ ಕಡಿಮೆ. ಎಲ್ಲಾ ಹಂತದ ಚುನಾವಣೆಗಳಲ್ಲಿ ಇದು ವ್ಯಕ್ತವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಿಳಾ ಸದಸ್ಯೆಯರ ಕುರಿತ ಲಿಂಗಭೇದ, ಪೂರ್ವಗ್ರಹ ದೃಷ್ಟಿ ಇನ್ನೂ ಬದಲಾಗಿಲ್ಲ. ಪ್ರಸ್ತುತ ಆಡಳಿತರೂಢ ಬಿಜೆಪಿ ರಾಜ್ಯ ಸರ್ಕಾರವನ್ನು ಉದಾಹರಣೆಯಾಗಿ ಕೊಡಬಹುದೆನಿಸುತ್ತದೆ. ಸಚಿವ ಸಂಪುಟದಲ್ಲಿ ಏಕೈಕ ಮಹಿಳೆಯಾಗಿ ಶೋಭ ಕರಂದ್ಲಾಜೆ ಅವರು ಗ್ರಾಮೀಣ ರಾಜಕೀಯ ಮತ್ತು ಪಂಚಾಯತ್‌ರಾಜ್ ಸಚಿವೆಯಾಗಿ ಸ್ಥಾನ ಪಡೆದಿದ್ದರು. ರಾಜಕೀಯ ಪರಿಸ್ಥಿತಿ ಮತ್ತು ಒತ್ತಡದ ಕೈಗೂಸಾಗಿ ಆಕೆಯು ಸಚಿವ ಸಂಪುಟದಲ್ಲಿ ಸ್ಥಾನ ಕಳೆದುಕೊಂಡರು. ಸ್ವಲ್ಪ ಕಾಲ ಮಹಿಳೆಯ ಪ್ರಾತಿನಿಧ್ಯವಿಲ್ಲದೆ ಸರ್ಕಾರ ಆಡಳಿತ ನಡೆಸಿತು. ಪುನಃ ಇಂಧನ ಖಾತೆಯ ಸಚಿವೆಯಾಗಿ ಶೋಭಾ ಅವರು ಅಧಿಕಾರಕ್ಕೆ ಬಂದರು. ರಾಜಕೀಯದ ಇಂತಹ ಸಂದರ್ಭವನ್ನು ಬಹಳ ಸೂಕ್ಷ್ಮವಾಗಿ ಅವಲೋಕಿಸ ಬೇಕಾಗುತ್ತದೆ.

ಒಂದು ಹಂತದವರೆಗೆ ರಾಜಕೀಯ ಪಕ್ಷಗಳಿಗೆ ಮಹಿಳಾ ಸದಸ್ಯೆಯರ ರಾಜಕೀಯ ಭಾಗವಹಿಸುವಿಕೆಯು ಅಗತ್ಯವಾಗಿರುತ್ತದೆ. ಆದರೆ ಸಚಿವ ಸಂಪುಟದಲ್ಲಿ ಅಥವಾ ಮಹತ್ವದ ಸ್ಥಾನ, ಅಧಿಕಾರ, ಜವಾಬ್ದಾರಿ ನಿರ್ವಹಿಸುವ ಸಂದರ್ಭದಲ್ಲಿ ಪುರುಷ ಪ್ರಧಾನತೆಯು ಜಾಣ ಮರೆವಿನ ತಂತ್ರ ಅನುಸರಿಸುತ್ತದೆ. ವಿಚಿತ್ರವಾದ “ಈಗೋ” ಸೆಳೆತಕ್ಕೆ ಒಳಗಾಗುತ್ತದೆ. ಸ್ವತಂತ್ರ ಭಾರತದ ಸುಮಾರು ಅರವತ್ಮೂರು ವರ್ಷಗಳಲ್ಲಿ ಇಂದಿರಾಗಾಂಧಿ, ಸೋನಿಯಾ ಗಾಂಧಿಯವರಂಥ ಪ್ರತಿಷ್ಠಿತ ಕುಟುಂಬದ ಮಹಿಳೆಯರಲ್ಲದೆ ಸುಷ್ಮಸ್ವರಾಜ್, ಉಮಾಭಾರತಿ, ವಿಜಯರಾಜೇ ಸಿಂಧಿಯಾ, ಮಮತಾ ಬ್ಯಾನರ್ಜಿ, ಜೆ. ಜಯಲಲಿತ, ಮೋಟಮ್ಮ, ಶೋಭಾ ಕರಂದ್ಲಾಜೆ, ಅನಿತ ಕುಮಾರಸ್ವಾಮಿ, ಜೆ. ಶಾಂತ, ರಾಬ್ಡಿದೇವಿಯವರಂತಹ ವಿವಿಧ ಹಂತದ ರಾಜಕೀಯ ನಾಯಕಿಯರನ್ನು ಕಂಡಿದ್ದೇವೆ. ಇಲ್ಲಿ ಹೆಚ್ಚಿನವರು ರಾಜಕೀಯ ಕ್ಷೇತ್ರದೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಒಡನಾಟವಿದ್ದವರ ಕುಟುಂಬದವರೆಂಬುದು ಗಮನಾರ್ಹ. ಪೂಲನ್ ದೇವಿಯಂಥ ತೀರ ಹಿಂದುಳಿದ ವರ್ಗದ ಡಕಾಯಿತ ಮಹಿಳೆಯೂ ಕೂಡ ರಾಜಕೀಯ ನಾಯಕರ ಅವಕಾಶವಾದಿ ಸ್ವಭಾವದ ಕೂಸಾಗಿ ರಾಜಕೀಯರಂಗ ಪ್ರವೇಶಿಸಿದ್ದು ಕುತೂಹಲಕರವಾದದ್ದು. ಆದರೆ ಇವರ ಹೆಸರುಗಳನ್ನು ಮುಂದೆ ಮಾಡಿ ಮಹಿಳೆ ರಾಜಕೀಯ ಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಮುನ್ನಡೆಯನ್ನು ಪಡೆದಿದ್ದಾಳೆ ಎನ್ನುವುದು ಪರಿಪೂರ್ಣತೆ ಎನಿಸುವುದಿಲ್ಲ. ಮಹಿಳೆ ಮತ್ತು ರಾಜಕೀಯ ಎನ್ನುವುದು ಅಥವಾ ನಿರ್ಣಯ ಪ್ರಕ್ರಿಯೆಗಳಲ್ಲಿ ಭಾಗವಹಿಸುವುದು ಮಹಿಳೆಯ ಜೀವನದ ಒಂದು ಅಮೂಲಾಗ್ರ ಬದಲಾವಣೆ ಎಂದು ಸಮಾಜವು ಗ್ರಹಿಸಿಲ್ಲ. ಬದಲಾದ ಪುರುಷ ಪ್ರಧಾನ ಆಧುನಿಕತೆಗೆ ತಕ್ಕಂತೆ ಮಹಿಳೆಯನ್ನು ಪರಿವರ್ತಿಸಿಕೊಂಡು ಉಪಯುಕ್ತವಾಗಿ ಬಳಸಿಕೊಳ್ಳಬಹುದಾದ ಸಾಧನವಾಗಿ ಪರಿಭಾವಿಸಲಾಗಿದೆ.

ಭಾರತ ಸಂವಿಧಾನದ ಪ್ರಸ್ತಾವನೆಯಲ್ಲಿಯೇ ಸಮಾನ ಸ್ವಾತಂತ್ರ್ಯ ಹಾಗೂ ಸಮಾನ ಅವಕಾಶಗಳು ಸಹಬಾಳ್ವೆಯ ಅಂಶಗಳನ್ನು ನಿಹಿತಗೊಳಿಸಲಾಗಿದೆ. ಮೂಲಭೂತ ಹಕ್ಕುಗಳು ಎಲ್ಲ ಭಾರತೀಯ ಪೌರರಿಗೂ ದಕ್ಕಬೇಕೆಂಬುದು ಸಂವಿಧಾನದ ಬಹುಮುಖ್ಯ ಅಪೇಕ್ಷೆ.

ಪಾರಂಪರಿಕವಾಗಿ ಸ್ತ್ರೀಯನ್ನು ಚರಾಸ್ತಿಯನ್ನಾಗಿ, ಗುಲಾಮಳನ್ನಾಗಿ, ಭೋಗ ವಸ್ತುವನ್ನಾಗಿ ಪರಿಗಣಿಸಿದ ಸಂಗತಿಗಳು ಭಾರತ ಸ್ವಾತಂತ್ರ್ಯದ ನಂತರ ಅದೂ ಸಂವಿಧಾನ ರೂಪುಗೊಂಡ ನಂತರ ಮಹತ್ತರವಾದ ಪಲ್ಲಟಗಳಿಗೆ ಒಳಗಾದವು. ಪುರುಷಾಧಿಕಾರದ ಪ್ರಧಾನ ಆಲೋಚನೆಗಳೇ ಸಂವಿಧಾನದಲ್ಲಿದ್ದರೂ ಮಹಿಳಾ ಪ್ರಧಾನವಾದ ಕೆಲವು ಅನುಚ್ಛೇದಗಳು ಸೇರ್ಪಡೆಯ ಸಡಿಲತೆಗಳು ಮಹಿಳಾ ಪ್ರಾತಿನಿಧ್ಯವನ್ನು ಎತ್ತಿ ಹಿಡಿಯುವಲ್ಲಿ ನೆರವಾದವು ಎಂಬುದು ಗಮನಾರ್ಹ ಅಂಶ. ಸಂವಿಧಾನದಲ್ಲಿನ ೩-೬, ೧೦, ೨೦, ೨೧, ೨೨, ೨೩, ೨೪, ೨೫, ೨೯(೧)(೨), ೩೮(೨), ೩೯(ಎ), ೪೨, ೪೪, ೪೫, ೫೧ ಮೊದಲಾದ ಅನುಚ್ಛೇದಗಳು ಬಹುಮುಖ್ಯವಾಗಿ ಸಂವಿಧಾನ ರಚನೆಯ ಮೊದಲ ಹಂತದಲ್ಲಿ ಲಭ್ಯವಿರದಿದ್ದ ಮಹಿಳಾ ಸದಸ್ಯೆಯರ ಅನೇಕ ನಾಗರಿಕ ಹಕ್ಕುಗಳನ್ನು ದತ್ತ ಮಾಡಿಕೊಟ್ಟವು.

ಸ್ತ್ರೀ-ಪುರುಷರ ಸಾಮಾಜಿಕ ಸಮಾನತೆಯ ನೆಲೆಗಳನ್ನು ಸಂವಿಧಾನದಲ್ಲಿ ಅಂತರ್ಗತಗೊಳಿಸುವ ಮೂಲಕ ಮಹಿಳಾ ಸದಸ್ಯೆಯರಿಗೆ ಒಂದು ಹೊಸ ದಿಗಂತವನ್ನು ತೆರೆದಿಡಲಾಯಿತು. ಜೊತೆಗೆ ಸಂವಿಧಾನವು ಮೂರು ಮುಖ್ಯ ತೀರ್ಮಾನಗಳನ್ನು ಕೈಗೊಂಡಿತು. ಒಂದು, ಲಿಂಗಾಧಾರಿತವಾದ ತಾರತಮ್ಯತೆಗಳ ನಿಷೇಧ. ಎರಡು, ಮಹಿಳಾ ಸದಸ್ಯೆಯರ ಜೈವಿಕ, ಮಾನಸಿಕ ಹಾಗೂ ಸಾಮಾಜಿಕ ಪರಿಸ್ಥಿತಿಯನ್ನು ಅನುಲಕ್ಷಿಸಿ ಅವರಿಗೆ ರಾಜ್ಯವು ವಿಶೇಷ ಕಾಳಜಿಯನ್ನು ವಹಿಸುವಂತಹ ಉಪಬಂಧಗಳನ್ನು ರಚಿಸಲು ಅಧಿಕಾರ ನೀಡುವುದು. ಮೂರು, ಮಹಿಳೆಯರಿಗಾಗಿಯೇ ನಿರ್ದಿಷ್ಟ ನಿರ್ದೇಶನಗಳನ್ನು ನೀಡುವ ನಿರ್ದೇಶಕ ತತ್ವಗಳನ್ನು ಸಂರಚಿಸುವುದು. ಹೀಗೆ ಸ್ತ್ರೀ-ಪುರುಷರನ್ನು ಸಮಾನ ಪಾತಳಿಯಲ್ಲಿ ಗ್ರಹಿಸುವ ತಿಳುವಳಿಕೆಗಳೇ ಮಾನವ ನಾಗರಿಕತೆಯ ನಿಜವಾದ ಪ್ರಗತಿಯ ಮಜಲುಗಳು. ಆದರೂ ಚರಿತ್ರೆಯ ಬೇರೆ ಬೇರೆ ಹಂತದಲ್ಲಿ ಮಹಿಳೆ ಅಸ್ತಿತ್ವ ರಹಿತಳಾಗಿ ಅಶುಭದ ಸಂಕೇತವಾಗಿ ವ್ಯಾಖ್ಯಾನಕ್ಕೊಳಗಾಗುತ್ತಲೇ ಬಂದಿರುವುದು ಕಂಡುಬರುತ್ತದೆ.

ವಿಶೇಷವಾಗಿ ಮಹಿಳಾ ಸದಸ್ಯೆಯರಿಗೆ ಭಾರತೀಯ ಸಂವಿಧಾನವು ನೀಡಿದ ಕೊಡುಗೆ ವಿಶಿಷ್ಟವಾದದ್ದು. ೧೪ ರಿಂದ ೧೮ನೇ ವಿಧಿಯ ಪ್ರಕಾರ ನೀಡಿದ ಸಮಾನತೆಯ ಹಕ್ಕು ೨೩ ಮತ್ತು ೨೪ನೆಯ ವಿಧಿಗಳ ಪ್ರಕಾರದ ಶೋಷಣೆಯ ವಿರುದ್ಧದ ಹಕ್ಕು, ಅನುಚ್ಛೇದ ೩೯(ಎ)(ಡಿ) ಮತ್ತು (ಇ) ಹಾಗೂ ೪೨ರ ಪ್ರಕಾರ ನಿರ್ದೇಶನ ತತ್ವಗಳು ಅನುಚ್ಛೇದ ೫೧(ಎ)(ಇ)ರ ಮೂಲಭೂತ ಕರ್ತವ್ಯಗಳು ಅನುಚ್ಛೇದ ೩೨೫ ಮತ್ತು ೩೨೬ರ ಅನ್ವಯ ನೀಡಿದ ಮತದಾನದ ಹಕ್ಕುಗಳು ಮಹಿಳಾ ಪ್ರಗತಿ ವಿಚಾರದಲ್ಲಿ ಸಂವಿಧಾನವು ದತ್ತಗೊಳಿಸಿದ ಬಹುಮುಖ್ಯ ಸಂಗತಿಗಳು. ಸಂವಿಧಾನದ ಗುಣಾತ್ಮಕ ವಿಚಾರವೆಂದರೆ ಮಹಿಳಾ ಸಮಾನತೆಯನ್ನು ಕೇವಲ ಒಮ್ಮುಖವಾಗಿಸದೆ ಇಮ್ಮಖವಾಗಿಸಿರುವುದು. ಹಕ್ಕುಗಳೊಂದಿಗೆ ಅವುಗಳ ದುರುಪಯೋಗವಾಗದಂತೆ ರಕ್ಷಣೆಯನ್ನೂ ಒದಗಿಸಲಾಗಿದೆ. ಮಹಿಳೆ ಎನ್ನುವ ಕಾರಣಕ್ಕೆ ಅವಳನ್ನು ಕೀಳೀಕರಣ ಗೊಳಿಸದಂತೆ ನಿರ್ಬಂಧಿತ ಅನುಚ್ಛೇದಗಳನ್ನೂ ಸೇರಿಸಲಾಗಿದೆ. ಅಲ್ಲದೆ ಮತ, ಮೂಲವಂಶ, ಜಾತಿ, ಲಿಂಗ, ಜನ್ಮಸ್ಥಳದ ಆಧಾರದ ಮೇಲೆ ನಡೆಯುವ ಅಸಮಾನತೆಗಳನ್ನು ನಿಷೇಧಿಸಲಾಗಿದೆ. ಭಾರತ ಸಂವಿಧಾನವು ಸ್ತ್ರೀಯರಿಗೆ ನೀಡಿದ ಮೂಲಭೂತ ಹಕ್ಕುಗಳಲ್ಲಿ ಸಮಾನತೆ ಹಕ್ಕು ಬಹುಮುಖ್ಯವಾದದ್ದು. ಇದರ ಜೊತೆಗೆ ಮಹಿಳೆಯ ವಿಶೇಷ ರಕ್ಷಣೆಯ ದೃಷ್ಟಿಯಿಂದ ಮಹಿಳೆ ಮತ್ತು ಮಕ್ಕಳಿಗಾಗಿ ನಿರ್ದಿಷ್ಟ ಉಪಬಂಧಗಳನ್ನು ಜಾರಿಮಾಡಲು ರಾಜ್ಯಗಳಿಗೆ ಅಧಿಕಾರ ನೀಡಲಾಗಿದೆ. ಇಂತಹ ಜವಾಬ್ದಾರಿಗಳಲ್ಲಿ ಬಹುಮುಖ್ಯವಾದವುಗಳೆಂದರೆ ಸ್ತ್ರೀ ಪುರುಷರಿಬ್ಬರಿಗೂ ಸಮಾನ ಜೀವನಾವಶ್ಯಕ ಅನುಕೂಲಗಳು, ಸಮಾನವೇತನ, ಸಮಾನ ಕೆಲಸ. ರಾಜ್ಯದಲ್ಲಿ ಮಹಿಳೆಗೆ ಶೇ. ೩೦ರಷ್ಟು ಉದ್ಯೋಗಗಳಲ್ಲಿ ಮೀಸಲಾತಿ ಕೊಡಲಾಗಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ಕೊಡಲಾಗಿದೆ.

ಸ್ತ್ರೀಪರವಾಗಿ ಕಾನೂನು ರಚಿಸಲು ಸಂವಿಧಾನದಲ್ಲಿ ೧೫(೩)ರ ಅನುಚ್ಛೇದ ಪ್ರಕಾರ ಅನೇಕ ಉಪಯುಕ್ತ ಶಾಸನಬದ್ಧ ಅಧಿಕಾರಗಳನ್ನು ಕಾಯ್ದಿರಿಸಲಾಗಿದೆ. ಪುರಸಭೆಗೆ ನಡೆಯುವ ಚುನಾವಣೆಗಳಲ್ಲಿ ಮಹಿಳಾ ಸದಸ್ಯೆಯರಿಗೆ ಮೀಸಲಾತಿ ಸೌಲಭ್ಯದ ಅನಿವಾರ್ಯತೆಯನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಹಾಗೇ ಸರ್ಕಾರಿ ನೇಮಕಾತಿಗಳಲ್ಲಿ ಶಾಸನಸಭೆ ಮತ್ತು ಸಂಸತ್ತುಗಳಲ್ಲಿ ಮಹಿಳಾ ಮೀಸಲಾತಿಯು ಈ ಅನುಚ್ಛೇದದ ಅಡಿಯಲ್ಲಿ ನೀಡಲಾದ ವಿಶೇಷ ಸವಲತ್ತಾಗಿದೆ. ಯಾವ ಸಂದರ್ಭದಲ್ಲಿ ಪುರುಷರನ್ನು ಜಾಮೀನಿನ ಮೇಲೆ ಕಾರಾಗೃಹದಿಂದ ಬಿಡುಗಡೆಗೊಳಿಸುವುದಿಲ್ಲವೋ ಅದೇ ಸಂದರ್ಭದಲ್ಲಿ ಸ್ತ್ರೀಯರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸುವುದನ್ನು ಕಾನೂನು ಕಲ್ಪಿಸಿಕೊಟ್ಟಿದೆ. ಸ್ತ್ರೀ-ಪುರುಷರಲ್ಲಿ ಸಮಾನತೆಯನ್ನು ಕಲ್ಪಿಸುವಲ್ಲಿ ಸಂವಿಧಾನ ಇಟ್ಟ ಈ ಹೆಜ್ಜೆ ಪ್ರಗತಿಪರವಾದದ್ದು. ನಮ್ಮ ಸಂವಿಧಾನ ಹಾಗೂ ಕಾನೂನುಗಳು ಮಹಿಳಾ ಸಮಾನತೆಯನ್ನು ಎತ್ತಿ ಹಿಡಿದರೂ ಎಲ್ಲೂ ಅವಳನ್ನು ಸ್ವತಂತ್ರ ಮನೋಭಾವದ ವ್ಯಕ್ತಿಯನ್ನಾಗಿ ಒಪ್ಪಿಕೊಂಡಿದ್ದು ಕಂಡುಬರುವುದಿಲ್ಲ.

ಸ್ತ್ರೀ-ಪುರುಷರನ್ನು ಭೇದವಾಗಿ ನೋಡುವ ಇಂಥ ಅನೇಕ ಉಪಬಂಧಗಳು ನಮ್ಮ ಕಾನೂನುಗಳಲ್ಲಿ ಸಾಮಾಜಿಕ ಮನೋಭೂಮಿಕೆಯಲ್ಲಿ ಬೇರು ಬಿಟ್ಟಿವೆ. ಈಗಾಗಲೇ ಮಂಡಿತವಾಗಿರುವ ರಾಜ್ಯಶಾಸನ ಸಭೆ ಮತ್ತು ಲೋಕಸಭೆಯ ಶೇ. ೩೩.೩೩ರ ಮಹಿಳಾ ಮೀಸಲಾತಿ ಮಸೂದೆ ಪುರುಷಾಧಿಕಾರದ ಹಾಗೂ ರಾಜಕೀಯ ದೊಂಬರಾಟದ ಸೆಳವಿಗೆ ಸಿಕ್ಕು ತತ್ತರಿಸುತ್ತಿದೆ. ಪುರುಷ ಪ್ರಧಾನ ಸಮಾಜ ವ್ಯವಸ್ಥೆಯನ್ನು ಪ್ರತಿಬಿಂಬಿಸುವ ಕಾನೂನುಗಳ ಆಧಾರದ ಮೇಲೆ ನಡೆಯುವ ತೀರ್ಪುಗಳೂ ಸಹ ಆ ಸಮಾಜದ ಹಾಗೂ ಪ್ರತಿ ನ್ಯಾಯಾಧೀಶರ, ಆಳುವ ಸರಕಾರಗಳ ದೃಷ್ಟಿಕೋನಗಳಿಂದ ಅಂತಿಮಗೊಳ್ಳುತ್ತಿರುತ್ತವೆ. ಮಹಿಳೆ-ಪುರುಷರಿಗೆ ಏಕರೂಪ ಸಮಾನತೆ ಸಿಗಬೇಕೆಂದರೆ ಕಾನೂನು ನಿರೂಪಕರಿಂದ ಹಿಡಿದು ಅನುಷ್ಠಾನ ಕರ್ತೃಗಳವರೆಗೂ ಪ್ರಗತಿಪರವಾದ ಮನೋಧರ್ಮವನ್ನು ಬೆಳೆಸಿಕೊಳ್ಳುವುದು ಜರೂರಾಗಿದೆ.

ವಿಕೇಂದ್ರೀಕರಣ ವ್ಯವಸ್ಥೆ ಮತ್ತು ಮಹಿಳಾ ಪ್ರಾತಿನಿಧ್ಯ

ಗ್ರಾಮೀಣ ಪರಿಸರದಲ್ಲಿರುವ ಮಹಿಳಾ ಸದಸ್ಯೆಯರಲ್ಲಿ ಹೆಚ್ಚಿನವರು ಕೃಷಿ, ಕೂಲಿ, ಅಸಂಘಟಿತವಲಯದ ದುಡಿಮೆಯ ಮೇಲೆ ಅವಲಂಬಿತರಾಗಿರುತ್ತಾರೆ. ಗೃಹಕೃತ್ಯಗಳಿಂದ ಬಸವಳಿದ ಅವರು ಪ್ರಾಥಮಿಕ ಸೌಲಭ್ಯಗಳಿಂದಲೂ ದೂರವಾದವರು. ಕೃಷಿ ಕ್ಷೇತ್ರದಲ್ಲಿ ಶೇಕಡ ಐವತ್ತರಷ್ಟು ಮಂದಿ ಹೆಂಗಸರೇ ಮೈ ಮುರಿದು ದುಡಿಯುತ್ತಾರೆ. ಇದರಿಂದಾಗಿ ಸಂವಿಧಾನದಲ್ಲಿ ನಿಹಿತವಾಗಿರುವ ಸಾಮಾಜಿಕ, ಆರ್ಥಿಕ, ರಾಜಕೀಯ ಹಕ್ಕುಗಳು ಸರ್ವಸಮಾನತೆ ಎನ್ನುವ ಪದಗಳು ಇವರಿಗೆ ಹೋಲಿಸಿದಾಗ ಎಷ್ಟೊಂದು ಕಳಪೆಯೆನಿಸುತ್ತವೆ. ಇಂದು ಬರೀ ಘೋಷಣೆ ಹಾಗೂ ವೈಭವಯುತ ಮಟ್ಟದಲ್ಲಿ ಮಹಿಳಾ ಸಶಕ್ತೀಕರಣ ವರ್ಷ ಮುಗಿದು ಹೋಯಿತೆಂದು ಅನಿಸುತ್ತದೆ. ಇದುವರೆಗೂ ರಾಜ್ಯಭಾರ ಮಾಡುತ್ತ ಬಂದಿರುವ ಸರ್ಕಾರ ಮತ್ತು ಅದರ ಅಭಿವೃದ್ಧಿ ಯೋಜನೆಗಳು ಮಹಿಳೆಯನ್ನು ಅನುಕಂಪದ ಹಿನ್ನೆಲೆಯಲ್ಲಿ ಫಲಾನುಭವಿಗಳಂತೆ ಗುರುತಿಸಿಕೊಂಡಿವೆ. ಕೇವಲ ಅಸಮಾನತೆ ನಿವಾರಣೆ ಅಥವಾ ಅನುಕಂಪದ ನೆಲೆಗಳಲ್ಲಿ ನಿಲ್ಲುವುದಕ್ಕಿಂತ ಮುಖ್ಯವಾಗಿ ಮಹಿಳೆಗೆ ಸಾಮಾಜಿಕ ನ್ಯಾಯಬದ್ಧತೆಯನ್ನು ಕಲ್ಪಿಸಿಕೊಡಬೇಕಾದ ತುರ್ತು ಇದೆ. ಅವಳನ್ನು ಸಮಾಜ ಮತ್ತು ಸಂಸ್ಕೃತಿ ನಿರ್ಮಾಣದಲ್ಲಿ ಸಶಕ್ತವಾಗಿ ತೊಡಗಿಸಿಕೊಂಡು ಸ್ವತಂತ್ರ ವ್ಯಕ್ತಿಯನ್ನಾಗಿಸಬೇಕಾಗಿದೆ. ಅಂಕಿ ಅಂಶಗಳ ಆಧಾರದಲ್ಲಿ ಶೇಕಡವಾರು ಮೀಸಲಾತಿ ನೀಡಿದರೆ ಸಾಲದು.

ನಮ್ಮ ದೇಶದ ಮಹಿಳಾ ಸದಸ್ಯೆಯರು ಒಂದೇ ವರ್ಗಕ್ಕೆ ಸೇರಿದವರಲ್ಲ. ಅವರವರ ವರ್ಗ, ಸಮೂಹ, ಜಾತಿಯ ಹಿನ್ನೆಲೆಯಲ್ಲಿ ಅಭಿವೃದ್ಧಿ ಪಥದಲ್ಲಿ, ಅವರು ಎದುರಿಸುವ ಸಮಸ್ಯೆಗಳು ರೂಪದಲ್ಲೂ ಪ್ರಮಾಣದಲ್ಲೂ ಭಿನ್ನವಾಗಿದ್ದಾರೆ. ಇಡೀ ಪುರುಷವರ್ಗದ ದೃಷ್ಟಿಯಲ್ಲಿ ಮಹಿಳಾ ಸದಸ್ಯೆಯರ ಶೋಷಣೆ ಒಂದು ರೀತಿಯದಾದರೆ ಅವರವರ ಜಾತಿ ಶ್ರೇಣಿ, ಪಾತಳಿಯಲ್ಲಿ ಶೋಷಣೆಯ ಭಿನ್ನ ಭಿನ್ನವಾಗಿ ಇನ್ನೊಂದು ರೀತಿಯದಾಗಿರುತ್ತದೆ.

ಸರ್ಕಾರದ ದೃಷ್ಟಿಯಲ್ಲಿ ಮಹಿಳೆ ಬರೀ ಒಂದು ಓಟ್ ಬ್ಯಾಂಕ್ ಮಾತ್ರ. ಆ ಹಿನ್ನೆಲೆಯಲ್ಲಿಯೇ ಅವಳ ಕುರಿತ ಅಭಿವೃದ್ಧಿಪರ ಚಿಂತನೆಗಳು ಹುರಿಗೊಳ್ಳುತ್ತಿರುತ್ತವೆ. ಮಹಿಳಾ ಆಯೋಗ, ಮಹಿಳಾ ರಾಜಕೀಯ ಪ್ರಾತಿನಿಧ್ಯ, ನಿಗಮ-ಮಂಡಳಿಗಳ ನೇಮಕಾತಿ ಇವೆಲ್ಲ ರಾಜಕೀಯ ಅಧಿಕಾರದ ಹಂಚುವಿಕೆಯ ವಿವಿಧ ವಶೀಲಿ-ಪ್ರಭಾವಗಳ ಸ್ವಾರ್ಥಪರ ಚಟುವಟಿಕೆಗಳ ವ್ಯವಹಾರಗಳಾಗಿವೆಯೇ ಹೊರತು, ಮಹಿಳಾ ಸದಸ್ಯೆಯರ ಅಧಿಕೃತ ವ್ಯಕ್ತಿತ್ವದ ಬಗ್ಗೆ ನಿಜವಾದ ಕಾಳಜಿ ವಹಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಂಗನೆಯ ಕೈಗೆ ಅಧಿಕಾರ ವೆನ್ನುವುದು ಬರೀ ಘೋಷಣೆ ಮಟ್ಟದಲ್ಲಿ ಮಾತ್ರ ಉಳಿದಿದೆ ಎಂದೆನಿಸುತ್ತದೆ.

ಅಧ್ಯಯನದ ಉದ್ದೇಶ

ಗ್ರಾಮೀಣ ಪ್ರದೇಶದಲ್ಲಿನ ಊಳಿಗಮಾನ್ಯ ವ್ಯವಸ್ಥೆಗಳು, ಅಧಿಕಾರಯುತ ರಾಜಕೀಯ ಹಿತಾಸಕ್ತಿಗಳು, ಅಧಿಕಾರಿಗಳು ವಿಕೇಂದ್ರೀಕರಣದ ಹೆಸರಿನಲ್ಲಿ ಗ್ರಾಮಪಂಚಾಯತಿಯ ಮಹಿಳಾ ಸದಸ್ಯೆಯರನ್ನು ನಿಕೃಷ್ಟವಾಗಿ ಕಾಣುವಂತಾಗಿದೆ. ಹೆಂಡತಿಯ ಹೆಸರಿನಲ್ಲಿ ಗಂಡ ಅಧಿಕಾರ ನಡೆಸುವ ಉದಾಹರಣೆಗಳನ್ನು ದಿನನಿತ್ಯ ಕಾಣುತ್ತೇವೆ. ಒಂದು ಗ್ರಾಮ ಪಂಚಾಯತಿಯ ಅಧ್ಯಕ್ಷೆಯಾಗಿದ್ದ ಹೆಂಗಸು ಬರೀ ಹೆಬ್ಬಟ್ಟಿಗೆ ಸೀಮಿತವಾಗಿ ದಿನನಿತ್ಯ ಹೊಲಮನೆಯಲ್ಲಿ ಕೃಷಿಕಾರ್ಮಿಕಳಾಗಿ ದಿನ ಸಾಗಿಸುವುದನ್ನು ಕಾಣುತ್ತೇವೆ. ಇಂತಹ ಹಲವು ಸಂಗತಿಗಳನ್ನು ನನ್ನ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಸ್ವತಃ ಕಂಡಿದ್ದೇನೆ. ಸಂವಿಧಾನದ ೭೩ನೇ ತಿದ್ದುಪಡಿಯು ಸ್ಥಳೀಯ ಆಡಳಿತದ ೩ ಹಂತಗಳಲ್ಲಿ ಶೇ. ೩೩.೩೩ರಷ್ಟು ಮೀಸಲಾತಿಯು ಗ್ರಾಮೀಣ ಮಹಿಳೆಯರನ್ನು ಅಡಿಗೆ ಮನೆಯಿಂದ ಪಂಚಾಯತ್‌ವರೆಗೆ ಹೋಗುವ ಹಾಗೆ ಮಾಡಿದೆ. ಇದರಿಂದ ತಳಮಟ್ಟದ ರಾಜಕೀಯದಲ್ಲಿ ಮಹಿಳೆಯು ಭಾಗವಹಿಸುವ ಅವಕಾಶವನ್ನು ಪಡೆಯುವಂತಾಗಿದ್ದಾಳೆ. ಮಹಿಳೆಯು ರಾಜಕೀಯದ ಮುಖ್ಯವಾಹಿನಿಯಲ್ಲಿ ಪಾಲ್ಗೊಳ್ಳಬೇಕು. ರಾಜಕೀಯದ ಅರಿವು ಹೊಂದಬೇಕು. ನೀತಿ ರೂಪಿಸುವಲ್ಲಿ, ನಿರ್ಣಯ ತೆಗೆದುಕೊಳ್ಳುವಲ್ಲಿ ಪಾಲುದಾರಳಾಗಬೇಕು ಎಂಬ ಹಿನ್ನೆಲೆಯಲ್ಲಿ ಗ್ರಾಮೀಣ ರಾಜಕೀಯದಲ್ಲಿ ಮಹಿಳಾ ಸದಸ್ಯೆಯರ ಭಾಗವಹಿಸುವಿಕೆಯ ಅಧ್ಯಯನ ಮಾಡಲು ನಾನು ಇಚ್ಛಿಸಿದ್ದೇನೆ. ಸಾಹಿತ್ಯಕವಾಗಿ, ಸಾಮಾಜಿಕವಾಗಿ ಮಹಿಳೆಯನ್ನು ಗುರುತಿಸುವ ಅಧ್ಯಯನಗಳು ನಡೆಯುತ್ತಿವೆ.

ಸಮಾಜ ವಿಜ್ಞಾನದ ಹಿನ್ನೆಲೆಯಲ್ಲಿ ರಾಜಕೀಯ ಶಿಸ್ತಿನಲ್ಲಿ ಮಹಿಳೆಯ ಪಾತ್ರ, ರಾಜಕೀಯದಲ್ಲಿ ಮಹಿಳೆಯ ಭಾಗವಹಿಸುವಿಕೆ ಕುರಿತಂತೆ ನಡೆದ ಅಧ್ಯಯನಗಳು ಕಡಿಮೆ. ಸ್ಥಳೀಯ ಸಂಸ್ಥೆಗಳ ಹಿನ್ನೆಲೆಯಲ್ಲಿ ಮಹಿಳೆಯ ರಾಜಕೀಯ ಭಾಗವಹಿಸುವಿಕೆಯೊಂದಿಗೆ ನಿರ್ಣಯ ಪ್ರಕ್ರಿಯೆಯಲ್ಲಿ ಚುನಾಯಿತ ಮಹಿಳಾ ಸದಸ್ಯೆಯರ ಪಾತ್ರವನ್ನು ಇಲ್ಲಿ ಚರ್ಚಿಸಲು ಪ್ರಯತ್ನಿಸಲಾಗಿದೆ.

ಸಮಗ್ರ ಗ್ರಾಮೀಣಾಭಿವೃದ್ಧಿ, ದುರ್ಬಲ ವರ್ಗದವರ ಹಾಗೂ ಮಹಿಳಾ ಸದಸ್ಯೆಯರ ಸಶಕ್ತೀಕರಣ ಇವು ವಿಕೇಂದ್ರೀಕರಣದ ಬಹುಮುಖ್ಯ ಉದ್ದೇಶ. ಈ ಉದ್ದೇಶ ಎಷ್ಟರ ಮಟ್ಟಿಗೆ ಇಂದು ಪ್ರಚಲಿತವಿರುವ ಗ್ರಾಮಪಂಚಾಯತಿ ವ್ಯವಸ್ಥೆಯಲ್ಲಿ ಆಚರಣೆಗೆ ಬಂದಿದೆ? ಮಹಿಳಾ ಸದಸ್ಯೆಯರು ಎಷ್ಟರ ಮಟ್ಟಿಗೆ ಸ್ವಯಂ ಪ್ರೇರಣೆಯಿಂದ ಈ ವ್ಯವಸ್ಥೆಯಲ್ಲಿ ಪಾಲುದಾರರಾಗಿದ್ದಾರೆ? ಚುನಾಯಿತ ಮಹಿಳೆಗೆ ತನ್ನ ಹಕ್ಕುಬಾಧ್ಯತೆಗಳ ಬಗ್ಗೆ ಇರುವ ತಿಳುವಳಿಕೆ ಯಾವ ರೀತಿಯದು? ರಾಜಕೀಯದಲ್ಲಿ ಮಹಿಳೆ ಭಾಗವಹಿಸುವಿಕೆ, ಭಾಗವಹಿಸುವ ಪ್ರಕ್ರಿಯೆಗಳೂ; ರಾಜಕೀಯ ಭಾಗವಹಿಸುವಿಕೆಯ ಹಿಂದಿನ ಮನೋಧರ್ಮಗಳೇನು? ಹೀಗೆ ಭಾಗವಹಿಸುವವರ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕವಾದ ಹಿನ್ನೆಲೆಗಳೇನು? ಎನ್ನುವ ಹಲವು ಪ್ರಶ್ನೆಗಳ ಮೂಲಕ ನಿರ್ಣಯ ಕೈಗೊಳ್ಳುವುದರಲ್ಲಿ ಮಹಿಳಾ ಸದಸ್ಯೆಯರ ಪಾತ್ರವನ್ನು ಗುರುತಿಸುವುದು ಅಧ್ಯಯನ ಬಹುಮುಖ್ಯ ಉದ್ದೇಶವಾಗಿದೆ.

ಪ್ರಸ್ತುತ ಅಧ್ಯಯನವು ಬಳ್ಳಾರಿ ಜಿಲ್ಲೆಯ ಹೊಸಪೇಟೆ ಮತ್ತು ಸಂಡೂರು ತಾಲ್ಲೂಕಿನ ಗ್ರಾಮ ಪಂಚಾಯ್ತಿಗಳಿಗೆ ಸೀಮಿತಗೊಂಡಿದೆ. ಭೌಗೋಳಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ವಿವಿಧ ವೈವಿಧ್ಯತೆ ಹಾಗೂ ವೈರುಧ್ಯತೆಗಳನ್ನು ಒಳಗೊಂಡಿರುವ ಹೊಸಪೇಟೆ ಮತ್ತು ಸಂಡೂರು ತಾಲ್ಲೂಕುಗಳ ಒಟ್ಟು ಗ್ರಾಮ ಪಂಚಾಯಿತಿಯ ಚುನಾಯಿತ ಮಹಿಳಾ ಸದಸ್ಯರು ಅಧ್ಯಯನದ ಕೇಂದ್ರಬಿಂದುವಾಗಿದ್ದಾರೆ. ಕ್ಷೇತ್ರಕಾರ್ಯದ ಮೂಲಕ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ.

ಚುನಾಯಿತ ಮಹಿಳೆಯರು ಮತ್ತು ಚುನಾಯಿತರಲ್ಲದ ಮಹಿಳೆಯರು ರಾಜಕೀಯ ಭಾಗವಹಿಸುವಿಕೆಯಲ್ಲಿ, ನೀತಿ ನಿರ್ಣಯ ಕೈಗೊಳ್ಳುವುದರಲ್ಲಿ ಪಾತ್ರವಹಿಸುವುದರಲ್ಲಿ ವ್ಯತ್ಯಾಸಗಳನ್ನು ಗುರುತಿಸಬಹುದು. ಚುನಾಯಿತರಲ್ಲದ ಮಹಿಳೆಯರು ಮತ ಚಲಾವಣೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಬಹುದು. ಹೆಚ್ಚೆಂದರೆ ಕೆಳವರ್ಗದ, ಅಸಂಘಟಿತ ವಲಯದ, ಬಡತನದಲ್ಲಿರುವ ಮಹಿಳೆಯರು ಆರ್ಥಿಕ ಲಾಭಕ್ಕಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಬಹುದು. ಆದರೆ ಚುನಾಯಿತ ಮಹಿಳೆಯರು ಪಕ್ಷದ ಸದಸ್ಯತ್ವ ಹೊಂದಿರುತ್ತಾರೆ. ಪಕ್ಷದ ಮೂಲಕ ಪ್ರಚಾರ ಮಾಡುತ್ತಾರೆ. ಭಾಷಣ ಮಾಡಬಹುದು. ಸಭೆ ನಡೆಸಬಹುದು. ಪಕ್ಷದ ಸಭೆಗಳಲ್ಲಿ ಪಾಲ್ಗೊಳ್ಳಬಹುದು. ಮುಖ್ಯವಾಗಿ ರಾಜಕೀಯ ನಿರ್ಣಯ, ನೀತಿ ನಿರೂಪಣೆಯಲ್ಲಿ ಭಾಗವಹಿಸಬಹುದು. ಉದಾ: ಲೋಕಸಭೆಯಲ್ಲಿ ಶೇ. ೩೩ರ ಮೀಸಲಾತಿ ಮಸೂದೆ ಜಾರಿಯಾಗುವಲ್ಲಿ ಮಹತ್ವ ಪಾತ್ರ ವಹಿಸಬಹುದಾಗಿದೆ. ಹೀಗೆ ಅನೇಕ ವಿಧಗಳಲ್ಲಿ ರಾಜಕೀಯದಲ್ಲಿ ಭಾಗವಹಿಸಲು ಅವಕಾಶಗಳು ಚುನಾಯಿತ ಮಹಿಳೆಯರಿಗಿರುತ್ತವೆ. ಆದುದರಿಂದ ಚುನಾಯಿತ ಮಹಿಳಾ ಸದಸ್ಯೆಯರನ್ನು ಇಲ್ಲಿ ಅಧ್ಯಯನಿಸಲಾಗಿದೆ.

ಮಹಿಳೆ ಭಾಗವಹಿಸುವಿಕೆ

ಇಲ್ಲಿ ಬಹುಮುಖ್ಯವಾಗಿ ಏಳುವ ಪ್ರಶ್ನೆ ಎಂದರೆ ರಾಜಕೀಯದಲ್ಲಿ ಮಹಿಳೆಯ ಭಾಗವಹಿಸುವಿಕೆ ಎಂದರೇನು? ಎಂಬುದು. ಹಾಗೆ ಈ ಭಾಗವಹಿಸುವ ಪ್ರಕ್ರಿಯೆಗಳು ಎಷ್ಟು ರೀತಿಯವು? ಹೀಗೆ ಭಾಗವಹಿಸುವವರ ಸಾಮಾಜಿಕ, ರಾಜಕೀಯ, ಆರ್ಥಿಕವಾದ ಹಿನ್ನೆಲೆಗಳು ಎಂಥವು? ಭಾಗವಹಿಸುವಿಕೆಯ ಹಿಂದಿನ ಮನೋಧರ್ಮವೇನು? ಇತ್ಯಾದಿ ಪ್ರಶ್ನೆಗಳಿಗೆ ಮುಖಾಮುಖಿಯಾದಾಗ ಹಲವಾರು ಸೂಕ್ಷ್ಮ ಸಂಗತಿಗಳನ್ನು ನಾವು ಅರಿಯಬಹುದಾಗಿದೆ.

ಮಹಿಳೆಯು ರಾಜಕೀಯವಾದಂತ, ಸಾಮಾಜಿಕವಾದಂತ ಮುಖ್ಯವಾಹಿನಿಯಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂಬುದರಲ್ಲಿ ಎರಡು ಮಾತಿಲ್ಲ. ಬದಲಾದ ಬದುಕಿನ ಕ್ರಮಗಳಿಗೆ ಇದು ಅಗತ್ಯ ಕೂಡ ಆಗಿದೆ. ಭಾಗವಹಿಸುವ ಸ್ವರೂಪ ಎಂಥದ್ದಾಗಿರಬೇಕು? ಇದುವರೆಗಿನ ಹಲವಾರು ಪ್ರಗತಿಯ ಮಾದರಿಗಳನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಿದರೆ ಅವುಗಳ ಹಿಂದಿನ ಸಾಂಸ್ಕೃತಿಕ ರಾಜಕಾರಣ ಅರಿವಿಗೆ ಬರುತ್ತವೆ. ಅಂದರೆ ಮಹಿಳೆಯನ್ನು ಸರಕಿನಂತೆ ಬಳಸುವ ಕ್ರಮಗಳು ಪ್ರಗತಿಯ ಮಾನದಂಡಗಳಾಗಿರುವುದು. ಗಂಡ ಸತ್ತ ಮೇಲೆ ಹೆಂಡತಿಗೆ ಇಷ್ಟವಿರಲಿ ಇಲ್ಲದಿರಲಿ ಅವಳನ್ನು ಓಟ್‌ಬ್ಯಾಂಕ್‌ರಾಜಕೀಯಕ್ಕೆ ತಂದು ಗಂಡ ಪ್ರತಿನಿಧಿಸಿದ ಕ್ಷೇತ್ರದಿಂದ ಅನುಕಂಪದ ಅಲೆಯಲ್ಲಿ ಗೆಲ್ಲಿಸುವುದು. ಹೀಗೆ ಗೆದ್ದ ವ್ಯಕ್ತಿಗೆ ಯಾವುದೋ ಒಂದು ಸ್ಥಾನಮಾನ ನೀಡಿ (ನೀಡದೆಯೂ) ಕೈ ತೊಳೆದುಕೊಳ್ಳುವುದು. ಇದೂ ಅಲ್ಲದೆ ಪಕ್ಷದ ಬೆಳವಣಿಗೆ, ಮೀಸಲಾತಿಯ ಅನಿವಾರ್ಯತೆ, ಪುರುಷ ಪ್ರಧಾನ ಸ್ವಾರ್ಥತೆ ಕೂಡ ಹೆಣ್ಣನ್ನು ಹೀಗೆ ಹರಕೆಯ ಕುರಿಯನ್ನಾಗಿ ಬಳಸಿಕೊಳ್ಳುವುದು ಇದೆ. ಇಲ್ಲೆಲ್ಲ ಮಹಿಳೆಯ ರಾಜಕೀಯ ಹಾಜರಾತಿ ಮಾತ್ರ ಮುಖ್ಯವಾಗಿರುತ್ತವೆ.

ರಾಜಕೀಯ ಭಾಗವಹಿಸುವಿಕೆಯ ವ್ಯಾಖ್ಯಾನ

ಯಾವುದೇ ರಾಜಕೀಯ ಪಕ್ಷಗಳ ಸದಸ್ಯತ್ವ ಹೊಂದುವುದು, ಪಕ್ಷದ ಬೆಳವಣಿಗೆ, ಸಂಘಟನೆಯಲ್ಲಿ ತೊಡುಗುವುದು, ಹೊಸಪಕ್ಷ ಕಟ್ಟುವುದು, ಚುನಾವಣೆಯಲ್ಲಿ ಸ್ಪರ್ಧಿಸುವುದು, ನಾಮಪತ್ರ ಸಲ್ಲಿಸುವುದು, ಪಕ್ಷದ ಪರವಾಗಿ ಚುನಾವಣಾ ಪ್ರಚಾರ ನಡೆಸುವುದು, ಮತ ಚಲಾಯಿಸುವುದು, ಚುನಾವಣೆ ಬಗ್ಗೆ ಮಾಹಿತಿ ಪಡೆಯುವುದು, ಚರ್ಚಿಸುವುದು, ರಾಜಕೀಯ ಪಕ್ಷಗಳ ಸಭೆಗಳಿಗೆ ಹಾಜರಾಗುವುದು, ಸಭೆ ನಡೆಸುವುದು, ರಾಜಕೀಯ ಪಕ್ಷಗಳಿಗೆ ಆರ್ಥಿಕವಂತಿಕೆ ನೀಡುವುದು, ರಾಜಕೀಯ ಒತ್ತಡ ಗುಂಪುಗಳ ಸದಸ್ಯತ್ವ ಹೊಂದುವುದು, ಶಾಸಕರು ಅಥವಾ ರಾಜಕೀಯ ಮುಖಂಡರೊಡನೆ ರಾಜಕೀಯ ಸಂಪರ್ಕ ಹೊಂದುವುದು ಅಲ್ಲದೆ ಪಕ್ಷದ ಮೂಲಕ ಪ್ರದರ್ಶನ ಮತ್ತು ಮುಷ್ಕರ ನಡೆಸುವುದು, ಕರಪತ್ರ ಹಂಚುವುದು, ಲೇಖನ ಬರೆಯುವುದು, ಭಾಷಣ ಮಾಡುವುದು, ರಾಜಕೀಯ ಪಕ್ಷದ ವಕ್ತಾರರಾಗಿ ಕಾರ್ಯ ನಿರ್ವಹಿಸುವುದು, ರಾಜಕೀಯ ನೀತಿ ನಿರ್ಣಯಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸುವುದು. ಉದಾ: ಶಾಸನಸಭೆಯಲ್ಲಿ ಶೇ. ೩೩.೩೩ ಈ ಮಹಿಳಾ ಮೀಸಲಾತಿ ಮಸೂದೆ ಜಾರಿ ಕುರಿತು, ರಾಜಕೀಯ ಹಗರಣಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸುವುದು ಇತ್ಯಾದಿ. ಇವೆಲ್ಲವು ವ್ಯಕ್ತಿಯ ರಾಜಕೀಯ ಭಾಗವಹಿಸುವಿಕೆಯನ್ನು ನಿರ್ಧರಿಸುವ ಸಂಗತಿಗಳಾಗಿವೆ.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ರಾಜಕೀಯ ಭಾಗವಹಿಸುವಿಕೆಯು ಮೂರು ಹಂತಗಳನ್ನು ಒಳಗೊಂಡಿದೆ. ಅವುಗಳೆಂದರೆ

೧. ಅತಿಯಾದ ಕ್ರಿಯಾಶೀಲ ಮಟ್ಟ(very Active Level)
೨. ಪ್ರಾಸಂಗಿಕ ಕ್ರಿಯಾಶೀಲ ಮಟ್ಟ(Occasionally Active)
೩. ಕ್ರಿಯಾಶೂನ್ಯ ಮಟ್ಟ(Inactive Level)

ಈ ಹಿನ್ನೆಲೆಯಲ್ಲಿ ಚುನಾಯಿತ ಮಹಿಳಾ ಸದಸ್ಯೆಯರ ರಾಜಕೀಯ ಭಾಗವಹಿಸುವಿಕೆಯು ಯಾವ ಮಟ್ಟದಲ್ಲಿದೆ ಎನ್ನುವುದನ್ನು ಅಧ್ಯಯನ ಮಾಡುವ ಮೂಲಕ ನೀತಿ ನಿರೂಪಣ ಪ್ರಕ್ರಿಯೆಯಲ್ಲಿ ಚುನಾಯಿತ ಮಹಿಳಾ ಸದಸ್ಯೆಯರ ಪಾತ್ರವನ್ನು ಅಧ್ಯಯನ ಮಾಡಲಾಗಿದೆ.

ಮಹಿಳಾ ಸಬಲೀಕರಣದ ಬಹುಮುಖ್ಯ ಗುಣವೆಂದರೆ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆ. ಲಿಂಗತಾರತಮ್ಯವಾದಿ ಧೋರಣೆಯ ಸಮಾಜ ವ್ಯವಸ್ಥೆಯಲ್ಲಿ ಇವರೆಡು ಸಂಗತಿಗಳು ತನ್ನಿಂದ ತಾನೇ ಸುಲಭವಾಗಿ ಸಿಗುವಂಥವಲ್ಲ. ಪರಿವರ್ತನಮುಖಿ ಆಧುನಿಕ ಸಂದರ್ಭ ಇಂದು ಸಾಂಪ್ರದಾಯಿಕ ಸಮಾಜ ವ್ಯವಸ್ಥೆಯಲ್ಲಿ ಹಲವು ರೀತಿಯ ಬದಲಾವಣೆಗಳನ್ನು ತರುತ್ತಿದೆ. ವಿಶೇಷವಾಗಿ ಮಹಿಳಾ ಸದಸ್ಯೆಯರ ಸಶಕ್ತೀಕರಣ, ಸ್ವಾವಲಂಬನೆ, ಆ ಮೂಲಕ ಅವರ ರಾಜಕೀಯ ಭಾಗವಹಿಸುವಿಕೆ, ನಿರ್ಣಯ ಪ್ರಕ್ರಿಯೆಯಲ್ಲಿ ಮಹಿಳಾ ಸದಸ್ಯೆಯರ ತೊಡಗುವಿಕೆ ಮುಂತಾದ ಸಂಗತಿಗಳಿಗೆ ಇಂದು ಹೆಚ್ಚಿನ ಆದ್ಯತೆ ಸಿಗುತ್ತಿದೆ. ಸಾಮಾಜಿಕವಾಗಿ ಆರ್ಥಿಕವಾಗಿ ಮಹಿಳೆಯನ್ನು ಸಬಲಳನ್ನಾಗಿಸಲು ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ.

ಬಹುಮುಖ್ಯವಾಗಿ ಕುಟುಂಬ, ಪುರುಷಾಧಿಕಾರ, ಚುನಾವಣಾ ಪ್ರಕ್ರಿಯೆ, ಮೂಢನಂಬಿಕೆ, ಅನಕ್ಷರತೆ, ಆರ್ಥಿಕ ಸಂಗತಿಗಳು, ಸಮೂಹ ಮಾಧ್ಯಮಗಳು, ಜಾತಿವರ್ಗ, ಅಧಿಕಾರಶಾಹಿ ನೆಲೆ, ಮೂಲಭೂತ ಸೌಲಭ್ಯ, ರಾಜಕೀಯ ಭಾಗವಹಿಸುವಿಕೆ, ಶಿಕ್ಷಣ, ಚುನಾಯಿತ ಮಹಿಳಾ ಸದಸ್ಯೆಯರ ತವರು ಮನೆಯ ರಾಜಕೀಯ ಹಿನ್ನೆಲೆ, ಪತಿಯ ಉದ್ಯೋಗ ಹೀಗೆ ಹಲವು ಆಯಾಮಗಳಲ್ಲಿ ಚುನಾಯಿತ ಮಹಿಳೆಯ ವ್ಯಕ್ತಿತ್ವವನ್ನು ಬಿಡಿಸಬಹುದಾಗಿದೆ. ಈ ಮೂಲಕ ನಿರ್ಣಯ ಕೈಗೊಳ್ಳುವಿಕೆಯಲ್ಲಿ ಚುನಾಯಿತ ಮಹಿಳಾ ಸದಸ್ಯೆಯರ ಪಾತ್ರವನ್ನು ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ.

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಪ್ರತಿಯೊಂದನ್ನು ಗಂಡಿನ ಅವಶ್ಯಕತೆಗೆ ತಕ್ಕಂತೆಯೇ ವಿವೇಚಿಸಲಾಗುತ್ತದೆ. ಹೀಗಾಗಿ ಮಹಿಳೆಗೆ ಸಾರ್ವತ್ರಿಕ ಬದುಕು ಒತ್ತಟ್ಟಿಗಿರಲಿ ಖಾಸಗೀ ಬದುಕೇ ಇರುವುದಿಲ್ಲ. ಚಾಕರಿಯೇ ಅವಳ ಉದ್ಯೋಗವಾಗಿರುತ್ತದೆ.

ಆದರೆ ಬದಲಾದ ಸಾಂಸ್ಕೃತಿಕ ಸಂದರ್ಭದಲ್ಲಿ ಮಹಿಳೆಗೆ ಹಲವು ರೀತಿಯ ಅವಕಾಶಗಳು ದಕ್ಕುತ್ತಿವೆ. ಶೇ. ೩೩.೩೩ರಷ್ಟು ರಾಜಕೀಯ ಮೀಸಲಾತಿಯಿಂದಾಗಿಯೇ ಗ್ರಾಮಪಂಚಾಯತಿಗಳಲ್ಲಿ ಹಿಂದೆಂದೂ ಕಾಣದಷ್ಟು ಮಹಿಳಾ ಪ್ರಾತಿನಿಧ್ಯ ಸಾಧ್ಯವಾಗಿದೆ. ಈ ಸಾಧ್ಯತೆ ಅವರಿಗೆ ಸ್ಥಾನಮಾನಗಳನ್ನು ದಕ್ಕಿಸಿಕೊಟ್ಟಿದೆ. ಇಂದು ಗ್ರಾಮಪಂಚಾಯತಿ ಸದಸ್ಯೆಯರಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಅಧಿಕಾರದ ಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಚಿತ್ರವೆಂದರೆ ಅವರ ಪ್ರತಿನಿಧಿತ್ವ ಮತ್ತು ವರಮಾನಗಳು ಅಪ್ರಧಾನವಾಗಿ, ಸ್ಥಾನಮಾನದಲ್ಲಿ ನಗಣ್ಯರಾಗಿ ಇರುವುದು ಕಾಣಬರುತ್ತಿದೆ. ಮಹಿಳೆಯ ವ್ಯಕ್ತಿತ್ವದ ಈ ಅಪಮೌಲೀಕರಣಕ್ಕೆ ಅಧಿಕಾರಶಾಹಿ, ಪುರುಷಾಧಿಕಾರ, ಸಾಮಾಜಿಕ ಅಸಮಾನತೆ, ಸಂಪ್ರದಾಯಗಳು ಕಾರಣವಾದರೂ ಇದನ್ನು ಮೀರಿದ ಹಲವು ಸಂಗತಿಗಳಿವೆ ಎಂಬುದನ್ನು ಕ್ಷೇತ್ರಕಾರ್ಯದಿಂದ ತಿಳಿಯಲಾಗಿದೆ.