ರಾಜಕೀಯ ಸಾಮಾಜೀಕರಣ (Political Socialisation)

ರಾಜಕೀಯ ಭಾಗವಹಿಸುವಿಕೆಯು ರಾಜಕೀಯ ಸಾಮಾಜೀಕರಣ ಒಂದು ಫಲಿತವಾಗಿದೆ. ಆರ್.ಬಾಲ್ ಅವರು ಹೇಳುವಂತೆ ‘ರಾಜಕೀಯ ಪದ್ಧತಿಯ ಬಗ್ಗೆ ನಂಬಿಕೆಗಳನ್ನು, ಅನಿಸಿಕೆಗಳನ್ನು ಸ್ಥಾಪಿಸಿ ಬಳಸಿ ಕೊಳ್ಳುವುದೇ ರಾಜಕೀಯ ಸಾಮಾಜೀಕರಣ’

[1]

Political Socialisation is the Procces of the transmission of the country’s political culture from one generation to the next. This is learned but not conscious. It is picked up unconsciously during the course of social Interactions. It is a natural process that goes on throughout life. the most important characteristic of political socialisation is the fact that through it political values are communicated from generation to ganeration. this helps in maintaining the Political system. ರಾಜಕೀಯ ಸಾಮಾಜೀಕರಣದ ಕುರಿತು ಫ್ರಾನ್ಸಿಸ್ ಜಿ ಕ್ಯಾಸ್ಟ್‌ಲೆಸ್, ಸ್ವೀಫನ್ ಎಲ್. ವಾಸ್ ಬೈ, ಇರ್‌ವಿನ್ ಎಲ್ ಚೈಲ್ಡ್, ರಾಬರ್ಟ್‌ಸೈಗಲ್, ಮಿಚೆಲ್ ರಶ್, ಅಲ್ ತೂಫ್ ರೈಟ್ ಅವರು ವ್ಯಾಖ್ಯಾನಗಳನ್ನು ನೀಡಿದ್ದಾರೆ.[2]

ಒಟ್ಟಿನಲ್ಲಿ ಗ್ರಹಿಸುವುದಾದರೆ ‘ರಾಜಕೀಯ ಮೌಲ್ಯಗಳನ್ನು, ಧೋರಣೆಗಳನ್ನು, ನಂಬಿಕೆಗಳನ್ನು ಅಭಿರುಚಿ, ನಿಷ್ಠೆ, ಭಾವನೆಗಳನ್ನು ವ್ಯಕ್ತಿಗಳಲ್ಲಿ ರೂಪಿಸಿ, ಅವುಗಳನ್ನು ಪರಂಪರೆಯ ರೂಪದಲ್ಲಿ ಮುಂದಿನ ಪೀಳಿಗೆಗೆ ರವಾನಿಸುವ ಒಂದು ವಿಧಾನವೇ ರಾಜಕೀಯ ಸಾಮಾಜೀಕರಣವಾಗಿದೆ’. ರಾಜಕೀಯ ಸಾಮಾಜೀಕರಣವೆಂಬುದು ಪ್ರತ್ಯಕ್ಷವಾಗಿ ಪರೋಕ್ಷವಾಗಿ ವ್ಯಕ್ತಿಯ ಜೀವನದ ಅವಧಿಯ ಉದ್ದಕ್ಕೂ ಆತನನ್ನು ವಿವಿಧ ರೀತಿಯಲ್ಲಿ ಪ್ರಭಾವಿಸುತ್ತಿರುತ್ತದೆ. ಬಹುಮುಖ್ಯವಾಗಿ ಕುಟುಂಬ, ಶೈಕ್ಷಣಿಕ ಸಂಸ್ಥೆಗಳು, ಒತ್ತಡ ಗುಂಪುಗಳು, ಹಿತಾಸಕ್ತಿ ಗುಂಪುಗಳು, ಸಂವಹನ ಮಾಧ್ಯಮಗಳು, ಆನುಷಂಗಿಕ ಗುಂಪುಗಳು (ರಾಜಕೀಯ ಪಕ್ಷಗಳು ಅಥವಾ ರಾಜಕೀಯ ಯುವ ಸಂಘಟನೆಗಳು) ರಾಜಕೀಯ ಪಕ್ಷಗಳು ಮತ್ತು ಚಿಹ್ನೆಗಳು, ಸಾಮಾಜಿಕ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ಇವು ರಾಜಕೀಯ ಸಾಮಾಜೀಕರಣದ ಪ್ರಕ್ರಿಯೆಯಲ್ಲಿ ಪರಿಣಾಮಕಾರಿ ಪಾತ್ರವಹಿಸುವ ನಿಯೋಗಗಳಾಗಿವೆ.

ಈ ಪ್ರತಿಯೊಂದು ನಿಯೋಗಗಳು ರಾಜಕೀಯ, ಸಾಮಾಜಿಕ ಮತ್ತು ಆಡಳಿತಾತ್ಮಕ ಅಭಿಪ್ರಾಯ ರೂಪಿಸುವಲ್ಲಿ ಅಂತರ್‌ಸಂಬಂಧವನ್ನು ಹೊಂದಿವೆ. ಉದಾ: ರಾಜಕೀಯ ಪಕ್ಷಗಳು ನಿರ್ದಿಷ್ಟ ಆಡಳಿತ ಧೋರಣೆಯನ್ನು ರೂಪಿಸಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತವೆ. ಆ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸುತ್ತವೆ. ಇಂತಹ ಅಭಿವೃದ್ಧಿ ಕಾರ್ಯಗಳನ್ನು ಪತ್ರಿಕೆಗಳು ರೇಡಿಯೋ, ದೂರದರ್ಶನದಂತಹ ಮಾಧ್ಯಮಗಳು ಸಾರ್ವಜನಿಕರಿಗೆ ತಲುಪಿಸುವಲ್ಲಿ, ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹೀಗೆ ಪರಸ್ಪರ ಒಟ್ಟಾಭಿಪ್ರಾಯವನ್ನು ರೂಪಿಸುವುದರ ಮೂಲಕ ಪರಿಣಾಮಾತ್ಮಕವಾಗಿ ರಾಜಕೀಯ ಸಾಮಾಜೀಕರಣದಲ್ಲಿ ಪಾಲ್ಗೊಳ್ಳುತ್ತವೆ. ಆ ಮೂಲಕ ವ್ಯಕ್ತಿಯ ರಾಜಕೀಯ ಭಾಗವಹಿಸುವಿಕೆಗೆ ಉತ್ತಮ ಪ್ರೇರಣೆಗಳನ್ನು ತಿಳುವಳಿಕೆಗಳನ್ನು ಇವು ನೀಡುತ್ತವೆ.

ರಾಜಕೀಯ ಸಾಮಾಜೀಕರಣದ ನಿಯೋಗದಲ್ಲಿ ಒಂದಾದ ಕುಟುಂಬವು ಮಹಿಳೆಯು ರಾಜಕೀಯ ಭಾಗವಹಿಸುವಿಕೆಯ ವಿಷಯದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಕುಟುಂಬದಲ್ಲಿ ಗಂಡನ ಇಚ್ಛೆಯಂತೆ ಸ್ಪರ್ಧಿಸಿರುವ ಮಹಿಳೆಯರನ್ನು ಅಂಕಿ ಅಂಶಗಳ ಮೂಲಕ ಗಮನಿಸಲಾಗಿದೆ. ಹಾಗೇ ಇಡೀ ಕುಟುಂಬದ ಸಮ್ಮತಿ, ಪ್ರೋತ್ಸಾಹ ಪಡೆದು ಮತ್ತು ವಿರೋಧಗಳನ್ನು ಎದುರಿಸಿ, ಸ್ಪರ್ಧಿಸಲು ಚುನಾವಣೆಗೆ ನಿಂತು ಆಯ್ಕೆಯಾದ ಚುನಾಯಿತ ಮಹಿಳಾ ಸದಸ್ಯೆಯರ ಅಂಕಿ ಅಂಶಗಳನ್ನು ಕೋಷ್ಟಕ ೦೧ರ ಮೂಲಕ ತಿಳಿಯಬಹುದು. ಈ ಅಂಕಿ ಅಂಶಗಳು ೨೦೦೨-೦೩ರ ಸಾಲಿನಲ್ಲಿ ಹೊಸಪೇಟೆ ಹಾಗೂ ಸಂಡೂರು ಗ್ರಾಮಪಂಚಾಯತಿಗಳಿಗೆ ಹೋಗಿ ಚುನಾಯಿತ ಮಹಿಳಾ ಪ್ರತಿನಿಧಿಗಳನ್ನು ಭೇಟಿ ಮಾಡಿ ಪಡೆದ ಮಾಹಿತಿಗಳಾಗಿವೆ.

ಕೋಷ್ಟಕ : ಮಹಿಳಾ ಭಾಗವಹಿಸುವಿಕೆ ಮತ್ತು ಕುಟುಂಬ

ಕ್ರ. ಸಂ. ವಿವರ ಹೊಸಪೇಟೆ ತಾಲ್ಲೂಕು ಗ್ರಾಮಪಂಚಾಯತಿಗಳು ಸಂಡೂರು ತಾಲ್ಲೂಕು ಗ್ರಾಮಪಂಚಾಯತಿಗಳು
ಸಂಖ್ಯೆ ಶೇಕಡ ಸಂಖ್ಯೆ ಶೇಕಡ
ಕುಟುಂಬದ ಸಮ್ಮತಿ ಪ್ರೋತ್ಸಾಹ ೧೦೯ ೭೮.೯೮ ೧೪೧ ೯೩.೩೭
ಕುಟುಂಬದ ವಿರೋಧ ೨೯ ೨೧ ೧೦ ೬.೬೨
ಒಟ್ಟು ೧೨೮ ೧೦೦ ೧೫೧ ೧೦೦

ಹೊಸಪೇಟೆ ತಾಲ್ಲೂಕು ಗ್ರಾಮಪಂಚಾಯತಿಗಳಲ್ಲಿ ಕುಟುಂಬದ ಸಮ್ಮತಿ ಹಾಗೂ ಪ್ರೋತ್ಸಾಹ ಪಡೆದು ರಾಜಕೀಯದಲ್ಲಿ ಪಾಲ್ಗೊಂಡಿರುವ ಚುನಾಯಿತ ಮಹಿಳಾ ಸದಸ್ಯೆಯರ ಸಂಖ್ಯೆ ೧೦೯ ಆಗಿದ್ದು, ಶೇ. ೭೮.೯೮ರಷ್ಟಿದೆ. ಹಾಗೆಯೇ ಕುಟುಂಬದ ವಿರೋಧದಿಂದ ಪಾಲ್ಗೊಂಡು ಮಹಿಳಾ ಸದಸ್ಯೆಯರ ಸಂಖ್ಯೆ ೨೯ ಇದ್ದು, ಶೇ. ೨೧ರಷ್ಟಿದೆ.

ಸಂಡೂರು ತಾಲ್ಲೂಕು ಗ್ರಾಮಪಂಚಾಯತಿಗಳಲ್ಲಿ ಕುಟುಂಬದ ಸಮ್ಮತಿ ಮತ್ತು ಪ್ರೋತ್ಸಾಹದೊಂದಿಗೆ ರಾಜಕೀಯದಲ್ಲಿ ಪಾಲ್ಗೊಂಡಿರುವ ಚುನಾಯಿತ ಮಹಿಳಾ ಸದಸ್ಯೆಯರ ಸಂಖ್ಯೆ ೧೪೧ ಆಗಿದ್ದು, ಶೇ. ೯೩.೩೭ರಷ್ಟಿದೆ. ಕುಟುಂಬದ ವಿರೋಧದಿಂದ ಪಾಲ್ಗೊಂಡ ಮಹಿಳಾ ಸದಸ್ಯೆಯರ ಸಂಖ್ಯೆ ೧೦ ಇದ್ದು, ಶೇ. ೬.೬೨ ರಷ್ಟಿದೆ. ಕೋಷ್ಟಕದ ಅಂಕಿ ಸಂಖ್ಯೆಗಳನ್ನು ಗಮನಿಸಿದಾಗ ಹೊಸಪೇಟೆ ತಾಲ್ಲೂಕಿನ ಗ್ರಾಮಪಂಚಾಯತಿಗಳಿಗಿಂತ, ಸಂಡೂರು ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಚುನಾವಣೆಯ ಸ್ಪರ್ಧೆಗೆ ಕುಟುಂಬದ ಸಮ್ಮತಿ ಶೇ. ೧೪.೩೯ರಷ್ಟು ಹೆಚ್ಚಿನ ಪ್ರಮಾಣದಲ್ಲಿರುವುದು ದೃಢವಾಗುತ್ತದೆ. ಕುಟುಂಬದ ವಿರೋಧ ಇದ್ದವರು ಸಂಡೂರಿಗಿಂತ ಹೊಸಪೇಟೆ ತಾಲ್ಲೂಕಿನ ಗ್ರಾಮಪಂಚಾಯತಿಗಳಲ್ಲಿ ಶೇ. ೧೮.೩೮ರಷ್ಟಿರುವುದು ಕಂಡು ಬರುತ್ತದೆ.

ಚುನಾಯಿತ ಮಹಿಳಾ ಸದಸ್ಯೆಯರ ಮೇಲೆ ಕುಟುಂಬದ ಪ್ರಭಾವವನ್ನು ಮತ್ತೊಂದು ರೀತಿಯಲ್ಲೂ ಗಮನಿಸಬಹುದು. ಚುನಾಯಿತ ಮಹಿಳಾ ಸದಸ್ಯೆಯರ ಎಷ್ಟು ಕುಟುಂಬಗಳಿಗೆ ರಾಜಕೀಯ ಹಿನ್ನೆಲೆ ಇದೆ? ಕುಟುಂಬದಲ್ಲಿ ಮುಖ್ಯವಾಗಿ ಗಂಡನಿಗೆ ರಾಜಕೀಯದಲ್ಲಿ ಆಸಕ್ತಿ ಇದ್ದು ಸ್ಪರ್ಧಿಸಿದ ಮಹಿಳಾ ಸದಸ್ಯೆಯರ ಸಂಖ್ಯೆಯನ್ನೂ ಯಾವ ಹಿನ್ನೆಲೆಯೂ ಇಲ್ಲದೆ ಸ್ಪರ್ಧಿಸಿದ ಮಹಿಳಾ ಸದಸ್ಯೆಯರ ಸಂಖ್ಯೆಯನ್ನು ಕ್ಷೇತ್ರಕಾರ್ಯದಿಂದ ಕಂಡುಕೊಳ್ಳಲಾಗಿದೆ. ರಾಜಕೀಯದೊಂದಿಗೆ ಒಡನಾಟವಿದ್ದು, ರಾಜಕೀಯ ಮುಖಂಡರೊಂದಿಗೆ ಸಂಪರ್ಕ ಇರುವುದು ಹಾಗೂ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಅನುಭವ ಇದ್ದವರ ಅಂಕಿ ಸಂಖ್ಯೆಯನ್ನು ಈ ಕೆಳಗಿನಂತೆ ಸಂಗ್ರಹಿಸಲಾಗಿದೆ.

ಕೋಷ್ಟಕ : ಚುನಾಯಿತ ಮಹಿಳಾ ಸದಸ್ಯೆಯರ ಕುಟುಂಬದ ರಾಜಕೀಯ ಹಿನ್ನೆಲೆ

ಕ್ರ. ಸಂ. ವಿವರ ಹೊಸಪೇಟೆ ತಾಲ್ಲೂಕು ಗ್ರಾಮಪಂಚಾಯತಿಗಳು ಸಂಡೂರು ತಾಲ್ಲೂಕು ಗ್ರಾಮಪಂಚಾಯತಿಗಳು
ಸಂಖ್ಯೆ ಶೇಕಡ ಸಂಖ್ಯೆ ಶೇಕಡ
ರಾಜಕೀಯದೊಂದಿಗೆ ಒಡನಾಟವಿದೆ ೨೧ ೧೫.೨೧ ೫೨ ೩೪.೪೩
ರಾಜಕೀಯದಲ್ಲಿ ಆಸಕ್ತಿಯಿದೆ ೩೧ ೨೨.೪೬ ೪೯ ೩೨.೪೫
ಯಾವುದೂ ಇಲ್ಲ ೮೬ ೬೨.೩೧ ೫೦ ೩೩.೧೧
ಒಟ್ಟು ೧೩೮ ೧೦೦ ೧೫೧ ೧೦೦

ಹೊಸಪೇಟೆ ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಕುಟುಂಬಕ್ಕೆ ರಾಜಕೀಯ ಹಿನ್ನೆಲೆ ಇರುವ ಚುನಾಯಿತ ಮಹಿಳಾ ಸದಸ್ಯೆಯರಸಂಖ್ಯೆ ೨೧ ಇದ್ದು, ಶೇ. ೧೫.೨೧ರಷ್ಟಿದೆ. ಕುಟುಂಬದಲ್ಲಿ ರಾಜಕೀಯ ಆಸಕ್ತಿಯಿರುವ ಚುನಾಯಿತ ಮಹಿಳಾ ಸದಸ್ಯೆಯರ ಸಂಖ್ಯೆ ೩೧ ಆಗಿದ್ದು, ಶೇ. ೨೨.೪೬ರಷ್ಟಿದೆ. ಈ ಯಾವ ಹಿನ್ನೆಲೆಯೂ ಇಲ್ಲದಿರುವ ಕುಟುಂಬಗಳಿಂದ ಆರಿಸಿ ಬಂದಿರುವ ಮಹಿಳಾ ಸದಸ್ಯೆಯರ ಸಂಖ್ಯೆ ೮೬ ಆಗಿದ್ದು, ಶೇ. ೬೨.೩೧ ರಷ್ಟಿದೆ.

ಸಂಡೂರು ತಾಲ್ಲೂಕಿನ ಗ್ರಾಮಪಂಚಾಯತಿಗಳಲ್ಲಿ ಕುಟುಂಬದಲ್ಲಿ ರಾಜಕೀಯ ಹಿನ್ನೆಲೆ ಇರುವ ಚುನಾಯಿತ ಮಹಿಳಾ ಸದಸ್ಯೆಯರ ಸಂಖ್ಯೆ ೫೨ ಆಗಿದ್ದು, ಶೇ. ೩೪.೪೩ರಷ್ಟಿದೆ. ಕುಟುಂಬದಲ್ಲಿ ರಾಜಕೀಯ ಆಸಕ್ತಿಯಿರುವ ಚುನಾಯಿತ ಮಹಿಳಾ ಸದಸ್ಯೆಯರ ಸಂಖ್ಯೆ ೪೯ ಇದ್ದು, ಶೇ. ೩೨.೪೫ರಷ್ಟಿದೆ. ಯಾವ ಹಿನ್ನೆಲೆಯೂ ಇಲ್ಲದಿರುವ ಕುಟುಂಬಗಳಿಂದ ಆಯ್ಕೆಯಾಗಿರುವ ಚುನಾಯಿತ ಮಹಿಳಾ ಸದಸ್ಯೆಯರ ಸಂಖ್ಯೆ ೫೦ ಆಗಿದ್ದು, ಶೇ. ೩೩.೧೧ ರಷ್ಟಿದೆ.

ಮೇಲಿನ ಅಂಕಿ ಅಂಶಗಳು ಚುನಾಯಿತ ಮಹಿಳಾ ಸದಸ್ಯೆಯರ ಮೇಲೆ ರಾಜಕೀಯ ಸಾಮಾಜೀಕರಣದ ಪ್ರಬಲ ಮಾಧ್ಯಮವಾದ ಕುಟುಂಬದ ಪ್ರಭಾವವನ್ನು ಗ್ರಹಿಕೆಗೆ ತರುತ್ತದೆ. ಕುಟುಂಬದ ಪ್ರಭಾವವು ಎಲ್ಲ ನಿಟ್ಟಿನಲ್ಲಿ ಹೊಸಪೇಟೆಯ ಚುನಾಯಿತ ಸದಸ್ಯೆಯರಿಂತ ಸಂಡೂರು ತಾಲ್ಲೂಕು ಗ್ರಾಮಪಂಚಾಯತಿಯ ಚುನಾಯಿತ ಮಹಿಳಾ ಸದಸ್ಯೆಯರ ಮೇಲೆ ಹೆಚ್ಚಾಗಿರುವುದು ಕಂಡುಬರುತ್ತದೆ. ಈ ಸಂಗತಿಯೂ ಚುನಾಯಿತ ಮಹಿಳಾ ಸದಸ್ಯೆಯರ ಭಾಗವಹಿಸುವಿಕೆಯ ಮೇಲೆ ಪ್ರಭಾವ ಬೀರಿರುವುದು ಕಂಡುಬರುತ್ತದೆ.

ರಾಜಕೀಯದಲ್ಲಿ ಮಹಿಳಾ ಭಾಗವಹಿಸುವಿಕೆ ಮತ್ತು ಶೈಕ್ಷಣಿಕ ಸಂಸ್ಥೆಗಳು

ಹೊಸಪೇಟೆ ಮತ್ತು ಸಂಡೂರು ತಾಲ್ಲೂಕು ಗ್ರಾಮಪಂಚಾಯತಿಗಳಿಂದ ಆಯ್ಕೆಯಾಗಿರುವ ಚುನಾಯಿತ ಮಹಿಳಾ ಸದಸ್ಯೆಯರ ಮೇಲೆ ಶಿಕ್ಷಣ ಸಂಸ್ಥೆಗಳ ಪ್ರಭಾವ ಆ ಮೂಲಕ ರಾಜಕೀಯ ಸಾಮಾಜೀಕರಣ ಉಂಟಾಗಿದೆಯೇ ಎಂದು ತಿಳಿಯಲು, ರಾಜಕೀಯ ಪಾಲ್ಗೊಳ್ಳುವಿಕೆಯ ಪ್ರಮಾಣವನ್ನು ಕೆಳಗಿನಂತೆ ಕೋಷ್ಟಕದಲ್ಲಿ ನೋಡಬಹುದಾಗಿದೆ.

ಕೋಷ್ಟಕ : ಸಾಕ್ಷರತೆಯ ಪ್ರಮಾಣ

ಕ್ರ. ಸಂ. ವಿವರ ಹೊಸಪೇಟೆ ತಾಲ್ಲೂಕು ಗ್ರಾಮಪಂಚಾಯತಿಗಳು ಸಂಡೂರು ತಾಲ್ಲೂಕು ಗ್ರಾಮಪಂಚಾಯತಿಗಳು
ಸಂಖ್ಯೆ ಶೇಕಡ ಸಂಖ್ಯೆ ಶೇಕಡ
ಪ್ರಾಥಮಿಕ (೧-೪) ೧೭ ೧೨.೩೧ ೩೫ ೨೩.೧೭
ಮಾಧ್ಯಮಿಕ (೫-೭) ೧೫ ೧೦.೮೬ ೨೧ ೧೩.೯೦
ಪ್ರೌಢ (೮-೧೦) ೧೦ ೭.೨೪ ೨೪ ೧೫.೮೯
ಪದವಿಪೂರ್ವ ೦.೭೨ ೧.೯೮
ಪದವಿ ೨.೬೪
ಸ್ನಾತಕೋತ್ತರ
ಅನಕ್ಷರಸ್ಥರು ೯೫ ೬೮.೮೪ ೫೨ ೩೪.೪೩
ಅಕ್ಷರಸ್ಥರು ೧೨ ೭.೯೪
  ಒಟ್ಟು ೧೩೮ ೧೦೦ ೧೫೧ ೧೦೦

ಹೊಸಪೇಟೆ ತಾಲ್ಲೂಕಿನಲ್ಲಿ ಚುನಾಯಿತ ಮಹಿಳಾ ಸದಸ್ಯೆಯರ ಸಾಕ್ಷರತೆಯ ಪ್ರಮಾಣ ಪ್ರಾಥಮಿಕದಿಂದ ಪ್ರೌಢ ಹಂತದವರೆಗೆ ಸಂಖ್ಯೆ ೪೨ ಇದ್ದು, ಶೇ. ೩೦.೪೩ ಇದ್ದರೆ, ಪದವಿ ಪೂರ್ವದಿಂದ ಪದವಿಯವರೆಗಿನ ಚುನಾಯಿತ ಮಹಿಳಾ ಸದಸ್ಯೆಯರ ಸಂಖ್ಯೆ ೧ ಆಗಿದ್ದು, ಶೇ. ೦.೭೨ ಆಗಿದೆ. ಅನಕ್ಷರಸ್ಥ ಚುನಾಯಿತ ಮಹಿಳಾ ಸದಸ್ಯೆಯರ ಸಂಖ್ಯೆ ೯೫ ಇದ್ದು, ಶೇ. ೬೮.೮೪ ಆಗಿದೆ.

ಸಂಡೂರು ತಾಲ್ಲೂಕನ್ನು ಗಮನಿಸಿದಾಗ ಪ್ರಾಥಮಿಕದಿಂದ ಪ್ರೌಢಹಂತದವರೆಗೆ ಶಿಕ್ಷಣ ಪಡೆದ ಚುನಾಯಿತ ಮಹಿಳಾ ಸದಸ್ಯೆಯರ ಸಂಖ್ಯೆ ೮೦ ಆಗಿದ್ದು, ಶೇ. ೫೨.೯೮ ರಷ್ಟಿದೆ. ಪದವಿಪೂರ್ವದಿಂದ ಪದವಿ ಹಂತದವರೆಗೆ ಕಲಿತ ಚುನಾಯಿತ ಮಹಿಳಾ ಸದಸ್ಯೆಯರ ಸಂಖ್ಯೆ ೭ ಇದ್ದು, ಶೇ. ೪.೬೩ರಷ್ಟಿದೆ. ಅನಕ್ಷರಸ್ಥ ಚುನಾಯಿತ ಮಹಿಳಾ ಸದಸ್ಯೆಯರ ಸಂಖ್ಯೆ ೫೨ ಆಗಿದ್ದು, ಶೇ. ೩೪.೪೩ ರಷ್ಟಿದೆ. ಅಕ್ಷರಸ್ಥ ಚುನಾಯಿತ ಮಹಿಳಾ ಸದಸ್ಯೆಯರ ಸಂಖ್ಯೆ ೧೨ ಇದ್ದು, ಶೇ. ೭.೯೪ರಷ್ಟಿರುವುದು ಕಂಡುಬರುತ್ತದೆ. ಇಲ್ಲಿ ಅಕ್ಷರಸ್ಥರೆಂದರೆ ಅವರು ಸಹಿ ಮಾಡಲು ಮಾತ್ರ ಕಲಿತಂಥಹವರು. ಅಂತಹ ಸದಸ್ಯೆಯರೇ ಈ ಕುರಿತು ಹೇಳಿಕೊಂಡಿರುವುದನ್ನು ಗಮನಿಸಬಹುದಾಗಿದೆ. ಎರಡೂ ತಾಲ್ಲೂಕು ಗ್ರಾಮಪಂಚಾಯತಿಗಳಲ್ಲಿ ಸ್ನಾತಕೋತ್ತರದವರೆಗೆ ಓದಿರುವ ಮಹಿಳಾ ಸದಸ್ಯೆಯರ ಸಂಖ್ಯೆ ಶೂನ್ಯವಾಗಿರುವುದು ಕಂಡುಬಂದಿದೆ.

ಅಂಕಿ ಸಂಖ್ಯೆಗಳನ್ನು ಗಮನಿಸಿದಾಗ ಪ್ರಾಥಮಿಕದಿಂದ ಪ್ರೌಢ ಹಂತದವರೆಗೆ, ಪದವಿಪೂರ್ವದಿಂದ ಪದವಿವರೆಗೆ ಕಲಿತ ಚುನಾಯಿತ ಮಹಿಳಾ ಸದಸ್ಯೆಯರ ಹೊಸಪೇಟೆಗಿಂತ ಸಂಡೂರು ತಾಲ್ಲೂಕು ಗ್ರಾಮಪಂಚಾಯತಿಗಳಲ್ಲಿ ಕ್ರಮವಾಗಿ ಶೇ. ೨೨.೫೫ ರಷ್ಟು ಮತ್ತು ಶೇ. ೩.೯೧ ರಷ್ಟು ಹೆಚ್ಚಿನ ಪ್ರಮಾಣದಲ್ಲಿರುವುದು ತಿಳಿದುಬರುತ್ತದೆ. ಅನಕ್ಷರಸ್ಥ ಚುನಾಯಿತ ಮಹಿಳಾ ಸದಸ್ಯೆಯರು ಹೊಸಪೇಟೆ ತಾಲ್ಲೂಕಿನಲ್ಲಿ ಶೇ. ೩೪.೪೧ರಷ್ಟು ಹೆಚ್ಚಾಗಿರುವುದು ತಿಳಿಯುತ್ತದೆ.

ಇದನ್ನು ಗಮನಿಸಿದಾಗ ಹೊಸಪೇಟೆ ತಾಲ್ಲೂಕು ಗ್ರಾಮಪಂಚಾಯತಿಗಳ ಚುನಾಯಿತ ಮಹಿಳೆಯರಲ್ಲಿ ಪದವಿ ಶಿಕ್ಷಣ ಮಟ್ಟ ಅತಿ ಕಡಿಮೆ ಇದೆ. ಸಂಡೂರು ತಾಲ್ಲೂಕಿನಲ್ಲಿ ಈ ಪ್ರಮಾಣ ನಿರಾಶದಾಯಕವಾಗಿ ಕಂಡುಬರುವುದಿಲ್ಲ. ಇಲ್ಲಿನ ಶಿಕ್ಷಣ ಸಂಸ್ಥೆಗಳೊಂದಿಗಿನ ಒಡನಾಟದಲ್ಲಿ ತಿಳುವಳಿಕೆಯ ವಿಸ್ತಾರದಲ್ಲಿ ಚುನಾಯಿತ ಮಹಿಳಾ ಸದಸ್ಯೆಯರು ಒಲವಿರಿಸಿ ಕೊಂಡಿರುವುದು ಕಾಣಿಸುತ್ತದೆ. ಹೊಸಪೇಟೆ ಪರಿಸರದಲ್ಲಿ ಆಯ್ಕೆಯಾದ ಮಹಿಳೆಯರಲ್ಲಿ ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರೇ ಹೆಚ್ಚಾಗಿರುವುದು ಈ ಶೈಕ್ಷಣಿಕ ಭಾಗವಹಿಸುವಿಕೆಯ ಮೇಲೆ ಪ್ರಭಾವ ಬೀರಿದ್ದು ಕಂಡುಬರುತ್ತದೆ.

ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶದಿಂದ ಮಹಿಳಾ ಸದಸ್ಯೆಯರು ವಂಚಿತರಾಗಿರಲು ಅತ್ಯಂತ ಮುಖ್ಯವಾದ ಕಾರಣ ಅವರು ಅನಕ್ಷರಸ್ಥರಾಗಿರುವುದು ಎಂದು ವಿಶ್ವಸಂಸ್ಥೆಯ ಡೆವಲಪ್‌ಮೆಂಟ್ ಅಸಿಸ್ಟೆನ್ಸ್‌ಫ್ರೇಮ್ ವರ್ಕ್ ಯುಎನ್‌ಡಿಎಎಫ್ ತಯಾರಿಸಿರುವ ವರದಿಯು ಹೇಳಿದೆ.[3] ಇದರಿಂದ ಚುನಾಯಿತ ಮಹಿಳಾ ಸದಸ್ಯೆಯರಿಗೆ ಶಿಕ್ಷಣ ಎಷ್ಟು ಮಹತ್ವವಾಗಿದೆ ಎಂಬುದು ಮನವರಿಕೆಯಾಗಿದೆ.

ಈ ಹಿನ್ನೆಲೆಯಲ್ಲಿ ಗಮನಿಸಿದಾಗ, ಸಂಡೂರು ತಾಲ್ಲೂಕಿನ ಗ್ರಾಮಪಂಚಾಯತಿ ಚುನಾಯಿತ ಮಹಿಳಾ ಸದಸ್ಯೆಯರ ಮೇಲೆ ರಾಜಕೀಯ ಸಾಮಾಜೀಕರಣ ಪ್ರಕ್ರಿಯೆಯು ಶಿಕ್ಷಣ ಸಂಸ್ಥೆಗಳ ಮೂಲಕ ಪ್ರಭಾವಿತವಾಗಿರುವುದು ಗೋಚರಿಸುತ್ತದೆ. ಈ ಸಂಗತಿ ಮಹಿಳಾ ಸದಸ್ಯೆಯರ ರಾಜಕೀಯ ಭಾಗವಹಿಸುವಿಕೆಯ ಮೇಲೂ ಗುಣಾತ್ಮಕ ಪ್ರಭಾವ ಬೀರಿರುವುದು ಕಂಡು ಬರುತ್ತದೆ. ಹೊಸಪೇಟೆ ತಾಲ್ಲೂಕಿನ ಗ್ರಾಮಪಂಚಾಯತಿಗಳಲ್ಲಿ ರಾಜಕೀಯ ಸಾಮಾಜೀಕರಣದ ಪ್ರಭಾವ ಮತ್ತು ರಾಜಕೀಯ ಭಾಗವಹಿಸುವಿಕೆಯು ಕನಿಷ್ಟ ಮಟ್ಟ ದಲ್ಲಿರುವುದು ವ್ಯಕ್ತವಾಗುತ್ತದೆ. ಇದರಿಂದ ಹೊಸಪೇಟೆಯ ಚುನಾಯಿತ ಮಹಿಳಾ ಸದಸ್ಯೆಯರಲ್ಲಿ ರಾಜಕೀಯ ಧಾರಣ ಶಕ್ತಿಯು ಕಡಿಮೆ ಮಟ್ಟದಲ್ಲಿರುವುದು ವ್ಯಕ್ತವಾಗುತ್ತವೆ.

ರಾಜಕೀಯ ಸಾಮಾಜೀಕರಣಕ್ಕೆ ಸಂಬಂಧಿಸಿದಂತೆ ಒತ್ತಡ ಗುಂಪುಗಳು, ಹಿತಾಸಕ್ತಿ ಗುಂಪುಗಳು, ಕಾರ್ಮಿಕ ಸಂಘಟನೆಗಳು, ರೈತಸಂಘಗಳಂತಹ ಗುಂಪುಗಳು ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳುವಲ್ಲಿ ಪ್ರಮುಖ ಸಾಧನಗಳಾಗಿವೆ. ಆದರೆ ಆಯ್ಕೆಯಾದ ಹೆಚ್ಚಿನ ಮಹಿಳಾ ಸದಸ್ಯೆಯರನ್ನು ಗಮನಿಸಿದಾಗ ಈ ತರದ ಗುಂಪುಗಳ ಪ್ರಣಾಳಿಕೆಗೆ ಪ್ರಭಾವಿತರಾದಂತೆ ಕಾಣಿಸುವುದಿಲ್ಲ. ಕಾರಣ ಚುನಾಯಿತ ಮಹಿಳಾ ಸದಸ್ಯೆಯರು ಹೊಲ, ಮನೆ, ಲಾಲನೆ, ಪಾಲನೆ, ಪೋಷಣೆ ಮೊದಲಾದ ಕೌಟುಂಬಿಕ ಚೌಕಟ್ಟಿಗೆ ಸೀಮಿತವಾಗಿರುತ್ತಾರೆ. ಹೀಗಾಗಿ ಸಾರ್ವಜನಿಕ ಬದುಕಿನ ಬಗ್ಗೆ ಅಥವಾ ತಾನು ಆಯ್ಕೆಯಾದ ಸಂಗತಿಯ ಬಗ್ಗೆ ಅಂತಹ ಆಸಕ್ತಿ ಇಟ್ಟುಕೊಂಡಿರುವುದು ಕಂಡುಬರುವುದಿಲ್ಲ. ಇಂತಹ ಗುಂಪುಗಳ ಬಗ್ಗೆ ಮಹಿಳಾ ಸದಸ್ಯೆಯರಿಗೆ ಅಷ್ಟಾಗಿ ತಿಳುವಳಿಕೆ ಇಲ್ಲದಿರುವುದು ಕಂಡುಬರುತ್ತದೆ.

ಆದರೆ ಕುತೂಹಲ ಮೂಡಿಸುವ ಸಂಗತಿಗಳೆಂದರೆ ಚುನಾಯಿತ ಮಹಿಳೆಯರಲ್ಲಿ ರಾಷ್ಟ್ರೀಯ ಪಕ್ಷಗಳು ಮತ್ತು ಸ್ಥಳೀಯ ಪಕ್ಷಗಳ ಕುರಿತು ಕನಿಷ್ಟ ತಿಳುವಳಿಕೆ ಇರುವುದು. ಅಷ್ಟೇ ಅಲ್ಲದೆ ಹೆಸರಾಂತ ರಾಜಕೀಯ ನಾಯಕರು ಮತ್ತು ಪಕ್ಷಗಳ ಚಿಹ್ನೆಗಳ ಕುರಿತು ತಿಳುವಳಿಕೆಗಳನ್ನು ಇವರಲ್ಲಿ ಕಾಣುತ್ತೇವೆ. ಇದಕ್ಕೆ ಬಹಳಷ್ಟು ಮಹಿಳಾ ಸದಸ್ಯೆಯರು ಪ್ರಮುಖ ರಾಜಕೀಯ ಪಕ್ಷಗಳ ಮತ್ತು ಪ್ರಾದೇಶಿಕ ಅಭ್ಯರ್ಥಿಗಳಾಗಿ ಕಣಕ್ಕಿಳಿದು ಗೆಲುವು ಪಡೆದಿರುವುದು ಒಳ್ಳೆಯ ಉದಾಹರಣೆ. ಇದನ್ನು ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಸ್ವತಃ ಕಂಡುಕೊಳ್ಳಲಾಗಿದೆ. ಹಾಗೆ ನೋಡಿದರೆ ಗ್ರಾಮಪಂಚಾಯತಿ ವ್ಯವಸ್ಥೆಯಲ್ಲಿ ಪಕ್ಷಾತೀತ ರಾಜಕೀಯ ಪದ್ಧತಿ ಇರಬೇಕೆನ್ನುವುದು ನಿಯಮ.[4] ಆದರೆ ಸದ್ಯದ ಸ್ಥಿತಿಯಲ್ಲಿ ಇದಕ್ಕೆ ವ್ಯತಿರಿಕ್ತವಾದ ಸಂದರ್ಭಗಳನ್ನು ನಾವು ಕಾಣುತ್ತೇವೆ. ಕೆಲವು ಗ್ರಾಮ ಪಂಚಾಯತಿಗಳಂತೂ ಆಯಾ ರಾಜಕೀಯ ಪಕ್ಷದ ಅಖಾಡಾಗಳಂತೆ ಕಂಡುಬರುತ್ತವೆ. ಇನ್ನು ಒಂದು ಹೆಜ್ಜೆ ಮುಂದುವರಿದು ನೋಡಿದಾಗ ರಾಜ್ಯದಲ್ಲಿರುವ ಆಡಳಿತ ಪಕ್ಷವು ತನ್ನ ವಿರೋಧಿ ಬಣಗಳು ಅಸ್ತಿತ್ವದಲ್ಲಿರುವ ಗ್ರಾಮ ಪಂಚಾಯತಿಗಳಿಗೆ ಆರ್ಥಿಕಾಭಿವೃದ್ಧಿ ಮತ್ತು ಆಡಳಿತಾತ್ಮಕ ಕೆಲಸಗಳಲ್ಲಿ ನೀರಸ ಬೆಂಬಲವನ್ನು ಕೊಡುತ್ತಿರುವುದು. ಕ್ಷೇತ್ರಕಾರ್ಯ ಸಂದರ್ಭದಲ್ಲಿ ಆಯಾ ಪಕ್ಷದ ಚುನಾಯಿತ ಸದಸ್ಯರು ಇಂತಹ ಆರೋಪಗಳನ್ನು ಮಾಡಿದ್ದನ್ನು ಗಮನಿಸಲಾಗಿದೆ. ಮಲಪನಗುಡಿ ಗ್ರಾಮಪಂಚಾಯತಿಯಲ್ಲಿ ಆಡಳಿತರೂಢ ಪಕ್ಷದ ಪರವಾದ ವ್ಯವಸ್ಥೆ ಇರುವುದರಿಂದ ಎಂ.ಎಲ್.ಎ. ಮತ್ತು ಎಂ.ಪಿ. ನಿಧಿಗಳಿಂದ ಅನುದಾನ ಪಡೆದು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿದ್ದು, ಇದಕ್ಕೆ ಜೀವಂತ ಉದಾಹರಣೆ.

ಭಾಗವಹಿಸುವಿಕೆ ಮತ್ತು ಕರ್ತವ್ಯ ಪ್ರಜ್ಞೆ

ಗ್ರಾಮಪಂಚಾಯತಿಗಳು ಸ್ಥಳೀಯಾಡಳಿತದ ತಳಮಟ್ಟದ ಪ್ರಾತಿನಿಧಿಕ ಸಂಸ್ಥೆಗಳಾಗಿವೆ. ಗ್ರಾಮದ ಎಲ್ಲ ಜಾತಿ ವರ್ಗಗಳಿಗೂ ಅಲ್ಲಿ ಪ್ರಾತಿನಿಧ್ಯ ದೊರಕುವಂತೆ ಮಾಡಲಾಗಿದೆ. ಮಹಿಳಾ ಸದಸ್ಯೆಯರಿಗೆ ಮತ್ತು ಅಂಚಿನಲ್ಲಿರುವ ವಂಚಿತ ಜಾತಿವರ್ಗಗಳಿಗೆ ಪ್ರಾತಿನಿಧ್ಯವನ್ನು ಸಂವಿಧಾನಾತ್ಮಕವಾಗಿ ನಿಗದಿಪಡಿಸಲಾಗಿದೆ. ವಿಕೇಂದ್ರೀಕರಣವು ಇದಕ್ಕೆ ಅತ್ಯಂತ ಪೂರಕವಾದ ವಾತಾವರಣವನ್ನು ಕಲ್ಪಿಸಿಕೊಟ್ಟಿದೆ. ಗ್ರಾಮೀಣ ರಾಜಕೀಯದಲ್ಲಿ ರಾಜಕೀಯ ಭಾಗವಹಿಸುವಿಕೆಯ ವಿವಿಧ ಸಾಧ್ಯತೆಗಳನ್ನು ಗುರುತಿಸಲಾಗಿದೆ. ಚುನಾಯಿತ ಮಹಿಳಾ ಸದಸ್ಯೆಯರ ಕರ್ತವ್ಯ ಪ್ರಜ್ಞೆ ಆ ಮೂಲಕ ನಿರ್ಣಯ ಪ್ರಕ್ರಿಯೆಯಲ್ಲಿ ಮಹಿಳೆಯ ಭಾಗವಹಿಸುವ ನೆಲೆಗಳನ್ನು ಕುರಿತು ವಿವೇಚಿಸಲಾಗಿದೆ.

ನಮ್ಮ ಒಕ್ಕೂಟ ವ್ಯವಸ್ಥೆಯು ಐದು ಸ್ತರದ ಸರ್ಕಾರಗಳನ್ನು ಹೊಂದಿದೆ. ಇದರಲ್ಲಿ ತಳಮಟ್ಟದ ರಾಜಕೀಯದ ದೃಷ್ಟಿಯಿಂದ ಗ್ರಾಮಪಂಚಾಯತ್ ಬಹಳ ಮುಖ್ಯವಾದದ್ದು. ಗ್ರಾಮಮಟ್ಟದಲ್ಲಿ ಗ್ರಾಮಸಭೆಯು ಶಾಸಕಾಂಗವಾಗಿದ್ದರೆ, ಗ್ರಾಮಪಂಚಾಯತ್ ಕಾರ್ಯಾಂಗವಾಗಿದೆ. ನ್ಯಾಯ ಪಂಚಾಯತಿಯು ಗ್ರಾಮದ ಮಾದರಿ ನ್ಯಾಯಾಂಗವಾಗಿರುತ್ತದೆ. ಹೀಗಾಗಿ ನ್ಯಾಯಪಂಚಾಯತ್ ಮತ್ತು ಗ್ರಾಮಸಭೆಯು ಗ್ರಾಮಪಂಚಾಯತಿಯ ಬಹುಮುಖ್ಯ ಕ್ರಿಯಾಶೀಲ ಘಟಕಗಳು. ಗ್ರಾಮ ಸಮುದಾಯದ ಮತ್ತು ಗ್ರಾಮಸಭೆಯು ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳ ಅಭಿವೃದ್ಧಿಗೆ ಕೊಂಡಿಯಂತಿದ್ದು, ಇದು ತಳಮಟ್ಟದ ಪ್ರಜಾಪ್ರಭುತ್ವ ವ್ಯವಸ್ಥೆಗೆ ದಾರಿಮಾಡಿ ಕೊಡುತ್ತದೆ. ಗ್ರಾಮಪಂಚಾಯತಿಯ ವ್ಯವಸ್ಥೆಯ ಜೀವಾಳವೇ ಗ್ರಾಮಸಭೆ ಆಗಿರುತ್ತದೆ. ಇಂತಹ ವ್ಯವಸ್ಥೆಯನ್ನು ಒಳಗೊಂಡ ಗ್ರಾಮಪಂಚಾಯತಿಗಳು ಸ್ಥಳೀಯ ಜನ ಸಮುದಾಯಗಳ ಪ್ರತಿನಿಧಿ ಸಂಸ್ಥೆಗಳಾಗಿದ್ದು ಜನರಿಗೆ ಸ್ಥಳೀಯ ಪ್ರಜಾಪ್ರಭುತ್ವ ಪ್ರಕ್ರಿಯೆಯ ವಿಸ್ತರಣೆಯನ್ನು ಒದಗಿಸುತ್ತವೆ. ಗ್ರಾಮಪಂಚಾಯತಿ ಅಧೀನದಲ್ಲಿನ ಗ್ರಾಮಗಳ ಎಲ್ಲ ವಯಸ್ಕ ಮತದಾದರರೂ ಸೇರಿ ವಿಚಾರಣೆ ನಡೆಸುವ, ಯೋಜನೆಗಳನ್ನು ರೂಪಿಸುವ, ಅನುಷ್ಠಾನಗೊಳಿಸುವ ಸಾಧ್ಯತೆಗಳನ್ನು ಈ ವ್ಯವಸ್ಥೆ ಒಳಗೊಂಡಿರುತ್ತದೆ. ಗ್ರಾಮಪಂಚಾಯತಿ ಪ್ರಾತಿನಿಧಿಕ ಸಂಸ್ಥೆಯಾಗಿರುವುದರಿಂದ ಇಲ್ಲಿ ಚುನಾಯಿತ ಪ್ರತಿನಿಧಿಗಳೇ ಪ್ರಧಾನವಾಗಿರುತ್ತಾರೆ. ಇವರಿಗೆ ಗ್ರಾಮಪಂಚಾಯತಿಯ ವ್ಯವಸ್ಥೆಯ ಬಗ್ಗೆ ಪರಿಪೂರ್ಣವಾದ ತಿಳುವಳಿಕೆ ಇದ್ದರೆ ಮಾತ್ರ ಗುಣಾತ್ಮಕವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ.

ಚುನಾಯಿತ ಮಹಿಳಾ ಸದಸ್ಯೆಯರು

ಆಯ್ಕೆ ಮಾಡಿಕೊಂಡ ಎರಡೂ ತಾಲ್ಲೂಕಿನ ಗ್ರಾಮಪಂಚಾಯತಿಗಳಿಂದ ಆಯ್ಕೆಯಾದ ಒಟ್ಟು ಚುನಾಯಿತ ಮಹಿಳಾ ಸದಸ್ಯೆಯರ ಸಂಖ್ಯೆ ೨೮೯. ಆಯ್ಕೆಯಾಗಿರುವ ಮಹಿಳೆಯರಲ್ಲಿ ಒಟ್ಟು ಮಹಿಳಾ ಅಧ್ಯಕ್ಷೆಯರು ೨೧, ಉಪಾಧ್ಯಕ್ಷೆಯರು ೨೧. ಆಯ್ಕೆಯಾಗಿರುವ ಮಹಿಳಾ ಸದಸ್ಯೆಯರಲ್ಲಿ ಹೆಚ್ಚಿನವರು ಕೆಳವರ್ಗದಿಂದ ಬಂದವರಾಗಿದ್ದಾರೆ. ಹೀಗಾಗಿ ಗ್ರಾಮಪಂಚಾಯತಿ ವ್ಯವಸ್ಥೆಯ ಬಗೆಗೆ ಮತ್ತು ಅವರ ಕರ್ತವ್ಯಗಳ ಬಗ್ಗೆ ಅವರಿಗಿರುವ ತಿಳುವಳಿಕೆಯನ್ನು ತಿಳಿದುಕೊಳ್ಳುವುದು ಬಹುಮುಖ್ಯ ಸಂಗತಿಯಾಗಿದೆ.

ಇಲ್ಲಿರುವ ಮೂಲಭೂತ ಪ್ರಶ್ನೆಯೆಂದರೆ ಬಹಳಷ್ಟು ಮಹಿಳಾ ಸದಸ್ಯೆಯರಿಗೆ ಗ್ರಾಮ ಪಂಚಾಯತಿಯ ವ್ಯವಸ್ಥೆಯ ಬಗೆಗೆ ಪ್ರಾಥಮಿಕ ತಿಳುವಳಿಕೆ ಇಲ್ಲದಿರುವುದು ಸಂದರ್ಶನದಿಂದ ತಿಳಿದುಬರುತ್ತದೆ.

ಈ ಕರ್ತವ್ಯಗಳ ಬಗ್ಗೆ ಚುನಾಯಿತ ಮಹಿಳಾ ಸದಸ್ಯೆಯರಿಗೆ ಪರಿಪೂರ್ಣವಾದ ತಿಳುವಳಿಕೆ ಇದ್ದಂತಿಲ್ಲ. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಹೆಚ್ಚಿನ ಮಹಿಳಾ ಸದಸ್ಯೆಯರು ತಮ್ಮ ವಾರ್ಡುಗಳಲ್ಲಿ ಬಂಡೆ ಹಾಕಿಸಿರುವುದು, ಚರಂಡಿ ನಿರ್ಮಿಸುವುದು, ಭಾಗ್ಯಜ್ಯೋತಿ ಯೋಜನೆ ಯಡಿಯಲ್ಲಿ ದೀಪದ ವ್ಯವಸ್ಥೆ, ಜವಾಹರ್ ರೋಜಗಾರ್ ಯೋಜನೆಯಲ್ಲಿ ಮನೆಯ ನಿರ್ಮಾಣ, ಇಂತಹ ಸಂಗತಿಗಳ ಬಗೆಗೆ ಹೇಳುತ್ತಾರೆ. ಆದರೆ ಈ ಯಾವ ಕಾಮಗಾರಿಗಳಲ್ಲಿ ಮಹಿಳಾ ಸದಸ್ಯೆಯರ ತೊಡಗುವಿಕೆಗಿಂತ ಪುರುಷಶಾಹಿ ಮತ್ತು ಅಧಿಕಾರಶಾಹಿ ವ್ಯವಸ್ಥೆಯೇ ಮೇಲುಗೈ ಸಾಧಿಸಿರುವುದು ಕಂಡುಬರುತ್ತದೆ. ಕಾಮಗಾರಿಗಳಲ್ಲಿ ತೊಡಗದೇ ಕೇವಲ ಸಹಿ ಮಾಡಿದ ಸದಸ್ಯೆಯರೂ ಇದ್ದಾರೆ. ಉದಾ: ನಾಗೇನಹಳ್ಳಿ ಗ್ರಾಮಪಂಚಾಯತಿಯ ಮಹಿಳಾ ಉಪಾಧ್ಯಕ್ಷೆಯು “ನಾನು ‘ರುಜು’ವಿಗೆ ಮಾತ್ರ ಸೀಮಿತೆ. ಎಲ್ಲವು ಪತಿಯದೆ. ನನಗೇನೂ ಗೊತ್ತಿಲ್ಲ” ಎಂದು ತಿಳಿಸಿದ್ದಾರೆ. ಗಾದಿಗನೂರು ಗ್ರಾಮಪಂಚಾಯತಿಯ ಅಧ್ಯಕ್ಷೆಯ ಎಲ್ಲಾ ಕೆಲಸ ಕಾರ್ಯಗಳನ್ನು ಪುರುಷ ಉಪಾಧ್ಯಕ್ಷರೇ ನೋಡಿಕೊಳ್ಳುತ್ತಾರೆ. ಮತ್ತೊಬ್ಬ ಮಹಿಳಾ ಸದಸ್ಯೆಗೆ ಹೊಲ ಗದ್ದೆ ಬಿಟ್ಟರೆ ಮತ್ತೇನೂ ಗೊತ್ತಿಲ್ಲ. ಇಂತಹ ಅನೇಕ ಉದಾಹರಣೆಗಳು ಕ್ಷೇತ್ರಕಾರ್ಯಗಳಲ್ಲಿ ದೊರೆತಿವೆ. ಈ ಮಾಹಿತಿಗಳಿಂದ ನಿರ್ಣಯ ಪ್ರಕ್ರಿಯೆಯಲ್ಲಿ ಚುನಾಯಿತ ಮಹಿಳಾ ಸದಸ್ಯೆಯರ ಭಾಗವಹಿಸುವಿಕೆಯು ನಿರಾಶಾದಾಯಕವಾಗಿದೆ.

ಫಲಾನುಭವಿಗಳ ಆಯ್ಕೆಯನ್ನು ಆಯಾ ಕ್ಷೇತ್ರದ ಸದಸ್ಯೆಯರು ಮಾಡಬೇಕಾಗಿರುವುದು ನಿಯಮ, ವಿಚಿತ್ರವೆಂದರೆ ಈ ಆಯ್ಕೆಯನ್ನು ಮೇಲಾಧಿಕಾರಿಗಳೇ ಮಾಡುವ ಮತ್ತು ಚುನಾಯಿತ ಮಹಿಳಾ ಸದಸ್ಯೆಯ ಇಂತಹ ಆಯ್ಕೆಗಳನ್ನು ತಿರಸ್ಕರಿಸುವ ಸಂಗತಿಗಳನ್ನು ಕ್ಷೇತ್ರಕಾರ್ಯದಲ್ಲಿ ಕಾಣಲಾಯಿತು. ಇತ್ತ ಆಯ್ಕೆಯಾದ ಕ್ಷೇತ್ರದ ಮತದಾರರು ತಮ್ಮ ಯಾವ ಸಮಸ್ಯೆಗಳೂ ಮಹಿಳಾ ಸದಸ್ಯೆಯಿಂದ ಪರಿಹಾರವಾಗದಿರುವುದನ್ನು ಕಂಡು ತಲೆಗೊಬ್ಬರಂತೆ ಅವಾಚ್ಯವಾಗಿ ಬಯ್ಯುತ್ತಾರೆಂದು ರಾಮಸಾಗರದ ಮಹಿಳಾ ಸದಸ್ಯೆ ಒಬ್ಬರು ನೊಂದುಕೊಂಡು ಹೇಳಿದ ಮಾತುಗಳು ತುಂಬಾ ವಿಚಾರಾರ್ಹ. ಕರ್ತವ್ಯಗಳ ಬಗ್ಗೆ ತಿಳುವಳಿಕೆ ಹೊಂದಿರುವ ಮಹಿಳಾ ಸಮಸ್ಯೆಯರದು ಒಂದು ರೀತಿಯ ಸಮಸ್ಯೆಯಾದರೆ ತಿಳುವಳಿಕೆ ಹೊಂದಿರದ ಮಹಿಳಾ ಸದಸ್ಯೆಯರದು ಮತ್ತೊಂದು ರೀತಿಯ ಸಮಸ್ಯೆ ಇದೆ.

ಇದೇ ರೀತಿ ಗ್ರಾಮ ಪಂಚಾಯತಿಗೆ ಬರುವ ಅನುದಾನ, ಗ್ರಾಮಪಂಚಾಯತಿಗೆ ಅನುದಾನ ಇಲ್ಲದಿರುವಾಗ ಸಿಗುವ ಆದಾಯದ ಇತರ ಸಂಪನ್ಮೂಲಗಳು, ಗ್ರಾಮ ಪಂಚಾಯತಿಗೆ ಸ್ವಂತ ಕಟ್ಟಡವಿದೆಯೇ ಇಲ್ಲವೇ ಎಂಬುದರ ಕುರಿತು, ಗ್ರಾಮಪಂಚಾಯತಿ ಕಛೇರಿಗೆ ವೃತ್ತಪತ್ರಿಕೆಗಳು ಬರುತ್ತವೆ ಅಥವಾ ಇಲ್ಲ ಎನ್ನುವ ಬಗ್ಗೆ, ಗ್ರಾಮಪಂಚಾಯತಿಯಲ್ಲಿ ತಮ್ಮ ಅಧಿಕಾರಾವಧಿಯ ಕುರಿತು, ಗ್ರಾಮಸಭೆಯಲ್ಲಿ ಮಂಡಿತವಾಗುವ ವಿಷಯಗಳ ಕುರಿತು, ಅಧ್ಯಕ್ಷೆಯರ ಕಾರ್ಯ ವ್ಯಾಪ್ತಿಯ ಬಗ್ಗೆ, ಅವರ ಆಯ್ಕೆಯ ಪ್ರಕ್ರಿಯೆಯ ಬಗ್ಗೆ, ವಾರ್ಷಿಕ ಬಜೆಟ್ ಹಾಗೂ ಅದು ಒಳಗೊಳ್ಳುವ ವಿಷಯಗಳು. ಈ ಎಲ್ಲ ಸಂಗತಿಗಳ ಕುರಿತು ಹೆಚ್ಚಿನ ಸದಸ್ಯೆಯರಲ್ಲಿ ತಿಳುವಳಿಕೆಯ ಕೊರತೆ ಕಂಡುಬರುತ್ತದೆ.

ಚುನಾಯಿತ ಮಹಿಳೆಯು ತನ್ನ ಆಡಳಿತಾತ್ಮಕ ಮತ್ತು ಅಭಿವೃದ್ಧಿಪರ ಚಟುವಟಿಕೆಗಳಲ್ಲಿ ಪುರುಷರ ಸಹಕಾರವನ್ನು ಬಯಸುವುದನ್ನು ನಾವು ಕಾಣುತ್ತೇವೆ. ಗ್ರಾಮಪಂಚಾಯತಿ ಸಭೆಗಳಲ್ಲಿ ಭಾಗವಹಿಸಬೇಕಾದ ಸಂದರ್ಭದಲ್ಲಿ ಪತಿ, ಮಗ, ಮಾವ, ಮೈದುನ, ಅಣ್ಣ, ತಮ್ಮ ಅಥವಾ ಪುರುಷ ಸದಸ್ಯರ ಮೇಲೆ ಅವಲಂಬಿತರಾಗಿರುವುದನ್ನು ಕ್ಷೇತ್ರ ಕಾರ್ಯದಿಂದ ಕಂಡುಕೊಳ್ಳಲಾಗಿದೆ.

[1] ಹಾಲಪ್ಪ ಎನ್., ರಾಜ್ಯಶಾಸ್ತ್ರ, ೧೯೯೭; ಪು.೧೪೯

[2] Sharma R.N., Shrma R.K., Political Sociology, 1997; P.13,220,221

[3] ಉದಯವಾಣಿ ದಿನಪತ್ರಿಕೆ, ದಿನಾಂಕ ೧೫.೫.೨೦೦೨

[4] ಕರ್ನಾಟಕ ಪಂಚಾಯತ್‌ರಾಜ್ ಅಧಿನಿಯಮ, ೧೯೯೩; ೨೦೦೨