ಅಧ್ಯಕ್ಷೆಯರು ಮತ್ತು ಉಪಾಧ್ಯಕ್ಷೆಯರು

ಗ್ರಾಮಪಂಚಾಯತ್ ವ್ಯವಸ್ಥೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನ ತುಂಬ ಮಹತ್ವದ್ದು. ಚುನಾಯಿತ ಸದಸ್ಯರು ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆಯರನ್ನು ಆರಿಸುತ್ತಾರೆ. ಆಡಳಿತಾರೂಢ ಸರ್ಕಾರವು ಆಯ್ಕೆಯ ಪ್ರಕ್ರಿಯೆಗೆ ತಕ್ಕಂತಹ ನಿರ್ದೇಶನವನ್ನು ನೀಡುತ್ತದೆ.

ರಾಜ್ಯದಲ್ಲಿರುವ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಒಟ್ಟು ಸಂಖ್ಯೆಯ ಶೇ. ೧೫ಕ್ಕಿಂತ ಕಡಿಮೆ ಇರದ, ಅನುಸೂಚಿತ ಮತ್ತು ಪಂಗಡಗಳಿಗಾಗಿ, ಶೇ. ೩ಕ್ಕಿಂತ ಕಡಿಮೆ ಇರದ, ಹಿಂದುಳಿದ ವರ್ಗಗಳಿಗಾಗಿ ಸರಿಸುಮಾರು ಮೂರನೆ ಒಂದರಷ್ಟು ಸಂಖ್ಯೆಯ ಅಧ್ಯಕ್ಷರ, ಉಪಾಧ್ಯಕ್ಷರ ಹುದ್ದೆಗಳನ್ನು ಮೀಸಲಿಡಲಾಗುತ್ತದೆ. ರಾಜ್ಯದಲ್ಲಿರುವ ಒಟ್ಟು ಗ್ರಾಮಪಂಚಾಯತಿಗಳ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳ ಒಟ್ಟು ಸಂಖ್ಯೆಯಲ್ಲಿ ಪ್ರತಿಯೊಂದು ಪ್ರವರ್ಗಕ್ಕೂ ಮೀಸಲಿಟ್ಟಿರುವ ಮತ್ತು ಮೀಸಲಿಟ್ಟಿರದ ಹುದ್ದೆಗಳಲ್ಲಿ ಮೂರನೆ ಒಂದರಷ್ಟಕ್ಕೆ ಕಡಿಮೆ ಇಲ್ಲದಷ್ಟು ಹುದ್ದೆಗಳನ್ನು ಮಹಿಳೆಯರಿಗಾಗಿ ಮೀಸಲಿಡಲಾಗಿದೆ. ಈ ಹಿನ್ನೆಲೆಯಲ್ಲಿ ಉಪಪ್ರಕರಣದಲ್ಲಿ ಮೀಸಲಿಟ್ಟ ಹುದ್ದೆಗಳನ್ನು ಸರದಿ ಪ್ರಕಾರ ವಿವಿಧ ಗ್ರಾಮಪಂಚಾಯತಿಗಳಿಗೆ ಹಂಚುವ ವ್ಯವಸ್ಥೆಯನ್ನು ಪಂಚಾಯತ್ ರಾಜ್ ಅಧಿನಿಯಮದಲ್ಲಿ ಅಡಕಗೊಳಿಸಲಾಗಿದೆ.[1]

ಗ್ರಾಮಪಂಚಾಯತಿ ವ್ಯವಸ್ಥೆಯು ೩೦೨ನೇ ಪ್ರಕರಣದಡಿ ಪುನಾರಚನೆಯಾದಾಗ ಸಂಬಂಧಿಸಿದ ಸರ್ಕಾರಿ ಅಧಿಕಾರಿಯು ಕೂಡಲೇ ಗ್ರಾಮಪಂಚಾಯತಿಯ ಸಭೆ ಕರೆದು ತನ್ನ ಅಧ್ಯಕ್ಷತೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡುತ್ತಾನೆ. ಆದರೆ ಈ ಅಧಿಕಾರಿಗೆ ಮತಚಲಾವಣೆಯ ಹಕ್ಕು ಇರುವುದಿಲ್ಲ. ಗ್ರಾಮ ಪಂಚಾಯತಿಯ ಶಾಸನದಲ್ಲಿ ಹೀಗಿದ್ದರೆ ವಾಸ್ತವವಾಗಿ ನಡೆಯುವ ಸಂಗತಿಗಳು ಬೇರೆಯೇ ಆಗಿರುತ್ತವೆ.

ಅಧ್ಯಕ್ಷೆಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಪ್ರತಿಷ್ಠಿತ ಶಕ್ತಿಗಳು ತನಗೆ ಅನುಕೂಲಕರವಾದ ವ್ಯಕ್ತಿಯನ್ನು ಆರಿಸುವಲ್ಲಿ ಹೆಚ್ಚು ಮುತುವರ್ಜಿಯನ್ನು ವಹಿಸುತ್ತವೆ. ಇಂತಹ ಸಂದರ್ಭದಲ್ಲಿ ಆಯ್ಕೆಗೆ ಅರ್ಹತೆ ಇರುವ ವ್ಯಕ್ತಿಯನ್ನು ಆಯ್ಕೆಯ ಪ್ರಕ್ರಿಯೆ ಯಿಂದ ದೂರವಿಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಯ ಅಪಹರಣದಂತಹ ಗೂಂಡಾ ವರ್ತನೆಗಳು ನಡೆದಿವೆ. ಕೆಲವು ಸಲ ಆಯ್ಕೆಯ ಪ್ರಕ್ರಿಯೆಯಲ್ಲಿ ಬಹುಮತ ಹೊಂದಿರುವ ಪಕ್ಷದ ಸದಸ್ಯರು ಅಲ್ಪಮತ ಹೊಂದಿರುವ ಪಕ್ಷದ ಸದಸ್ಯರನ್ನು ಆಹ್ವಾನಿಸದಿರುವುದು ಕಂಡುಬರುತ್ತದೆ. ಇಂತಹ ಘಟನೆಗಳು ನಡೆದಿರುವ ಬಗ್ಗೆ ರಾಮಸಾಗರ ಮತ್ತು ದೇವಸಮುದ್ರ ಗ್ರಾಮಪಂಚಾಯತಿಗಳಲ್ಲಿ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ತಿಳಿದುಕೊಳ್ಳಲಾಯಿತು. ಈ ಘಟನೆಗಳು ತಳಮಟ್ಟದಲ್ಲಿ ಮಾತ್ರ ಅಲ್ಲ, ರಾಜ್ಯ, ರಾಷ್ಟ್ರಮಟ್ಟದಲ್ಲೂ ಕಂಡುಬರುತ್ತವೆ. ಸಂಡೂರು ತಾಲ್ಲೂಕಿನ ಕೆಲವು ಗ್ರಾಮಪಂಚಾಯತಿಗಳಲ್ಲಿ ಆಮಿಷಗಳನ್ನೊಡ್ಡುವ ಮೂಲಕ ಚುನಾಯಿತ ಮಹಿಳಾ ಸದಸ್ಯೆಯರನ್ನು ಮನವೊಲಿಸುವ ಮೂಲಕ ಸ್ಪರ್ಧೆಯಿಂದ ಹಿಂದೆ ಸರಿಸುವ ಮತ್ತು ಬೆಂಬಲ ಪಡೆಯುವ ಕಸರತ್ತುಗಳನ್ನು ಕಾಣಲಾಗಿದೆ. ಉದಾಹರಣೆಗೆ ಸಂಡೂರಿನ ಕಾಳಿಂಗೇರಿ ಗ್ರಾಮಪಂಚಾಯತಿಯಲ್ಲಿ ಮಹಿಳಾ ಸದಸ್ಯೆ ಒಬ್ಬರಿಗೆ ಹಣದ (ರೂ.೨೫,೦೦೦) ಆಮಿಷ ಒಡ್ಡಿ, ಸ್ಪರ್ಧೆಯಿಂದ ಪಕ್ಕಕ್ಕೆ ಸರಿಸಿ ಮತ್ತೋರ್ವ ಚುನಾಯಿತ ಮಹಿಳಾ ಸದಸ್ಯೆಯನ್ನು ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾದ ವಿಷಯದ ಬಗ್ಗೆ ಕ್ಷೇತ್ರಕಾರ್ಯದಲ್ಲಿ ಕಂಡುಕೊಳ್ಳಲಾಯಿತು.

ಇಂತಹ ಹಂಚಿಕೆಗಳನ್ನು ಸಾಮಾನ್ಯವಾಗಿ ಜಾತಿ ರಾಜಕೀಯ ಹೆಚ್ಚಾಗಿರುವ ಗ್ರಾಮ ಪಂಚಾಯತಿಗಳಲ್ಲಿ ಕಾಣುತ್ತೇವೆ. ಉದಾ: ರಾಮಸಾಗರದ ಪರಿಶಿಷ್ಟ ಜಾತಿಯ ಮಹಿಳಾ ಸದಸ್ಯೆಯರೊಬ್ಬರಿಗೆ ನ್ಯಾಯವಾಗಿ ಅನುಸೂಚಿತ ಜಾತಿ ಸೌಲಭ್ಯದಲ್ಲಿ ಸೇರಬೇಕಾದ ಅಧ್ಯಕ್ಷೆಯ ಪದವಿಯನ್ನು ಸ್ಥಾಪಿತ ಹಿತಾಸಕ್ತಿಗಳು ತಪ್ಪಿಸಿವೆ. ಆಕೆಯನ್ನು ಮೈಸೂರಿನ ಪ್ರೇಕ್ಷಣೀಯ ಸ್ಥಳಗಳಿಗೆ ಕಳುಹಿಸಿ ಆಯ್ಕೆ ಪ್ರಕ್ರಿಯೆಯಿಂದ ಆಕೆಯನ್ನು ಉದ್ದೇಶಿತವಾಗಿ ದೂರ ಇಡಲಾಗಿತ್ತು. ಆಕೆ ಈ ಕುರಿತು ಪ್ರಶ್ನೆ ಮಾಡಿದಾಗ ಮುಂದಿನ ಅವಧಿಯಲ್ಲಿ ನಿನಗೆ ಅಧ್ಯಕ್ಷೆಯ ಪದವಿ ನೀಡುತ್ತೇವೆಂದು ಸಮಾಜಾಯಿಸಿದ್ದು, ಇಂದಿಗೂ ಆ ಸದಸ್ಯೆ ನಾನು ಅಧ್ಯಕ್ಷಳಾಗಿಯೇ ತೀರುತ್ತೇನೆ. ಎಂಬ ಹಂಬಲ ಇಟ್ಟುಕೊಂಡು ಬದುಕುತ್ತಿರುವ ಸಂಗತಿಗಳು ತುಂಬಾ ಚರ್ಚಾರ್ಹವಾದಂತಹವು ಆಗಿವೆ.

ಗ್ರಾಮಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳ ರಾಜಕೀಯ ಭಾಗವಹಿಸುವಿಕೆ ಮತ್ತು ನಿರ್ಣಯ ಪ್ರಕ್ರಿಯೆಗಳನ್ನು ಗಮನಿಸಿದಾಗ ಕೆಲವೊಂದು ಮಹತ್ವದ ಸಂಗತಿಗಳು ಅರಿವಿಗೆ ಬರುತ್ತವೆ. ಚುನಾಯಿತ ಪ್ರತಿನಿಧಿಗಳು ಗ್ರಾಮ ಪಂಚಾಯತಿಯ ಸಭೆಗಳಲ್ಲಿ ಹೆಚ್ಚು ಆಸಕ್ತಿ ವಹಿಸಿ ಮಾತನಾಡುವ ವಿಷಯಗಳೆಂದರೆ ಕುಡಿಯುವ ನೀರು, ಶೌಚಾಲಯ, ಆರೋಗ್ಯಕ್ಕೆ ಸಂಬಂಧ ಪಟ್ಟಂತ ಸಂಗತಿಗಳೇ ಪ್ರಧಾನವಾಗಿರುತ್ತವೆ. ಕಾರಣ ಲಿಂಗಸಂಬಂಧಿ ನೆಲೆಯಲ್ಲಿ ಈ ವಿಷಯಗಳು ಮಹಿಳೆಗೆ ಮೀಸಲು ಎನ್ನುವಂತೆ ಪ್ರತಿಷ್ಠಾಪಿತಗೊಂಡಿವೆ. ರಾಜಕೀಯ ನೆಲೆಗಿಂತ ಕೌಟುಂಬಿಕ ನೆಲೆಗೇ ಚುನಾಯಿತ ಮಹಿಳಾ ಸದಸ್ಯೆಯರ ಹೆಚ್ಚಿನ ಆದ್ಯತೆ ಇರುವುದರಿಂದ, ಈ ವಿಷಯಗಳ ಬಿಸಿ ಆಕೆಗೆ ಬೇಗ ತಟ್ಟುತ್ತದೆ. ವಿಶೇಷವಾಗಿ ಕುಡಿಯುವ ನೀರು, ಶೌಚಾಲಯ ದಂತಹ ಮೂಲಭೂತ ಸೌಕರ್ಯಗಳು ಮಹಿಳೆಯನ್ನು ಬಾಧಿಸಿದಂತೆ, ಪುರುಷರನ್ನು ಬಾಧಿಸಲಾರವು. ಹೀಗಾಗಿ ಗ್ರಾಮಪಂಚಾಯತಿಯ ಸಭೆಯಲ್ಲಿ ಈ ಕುರಿತಾದ ವಿಷಯಗಳ ಚರ್ಚೆಯಲ್ಲಿ ಚುನಾಯಿತ ಮಹಿಳೆಯು ಭಾಗವಹಿಸುತ್ತಾಳೆ. ಬಹಳಷ್ಟು ಗ್ರಾಮ ಪಂಚಾಯತಿಗಳಲ್ಲಿ ಮಹಿಳಾ ಸದಸ್ಯೆಯರು ತಮ್ಮ ಕ್ಷೇತ್ರದ ಸಮಸ್ಯೆಗಳ, ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲು ಹಿಂದೇಟು ಹಾಕುವುದು ಕಂಡುಬಂದಿತು. ಒಂದು ವೇಳೆ ಚರ್ಚೆಯಲ್ಲಿ ಭಾಗವಹಿಸಲು ಪ್ರಯತ್ನಿಸಬೇಕೆನ್ನುವಷ್ಟರಲ್ಲಿ ಕೆಲವು ಸ್ಥಾಪಿತ ಹಿತಾಸಕ್ತಿಗಳು ಮಹಿಳೆಯರನ್ನು ನಿಯಂತ್ರಿಸುವ ಸಂಗತಿಗಳು ಕಂಡುಬಂದವು.

ಈ ಮಧ್ಯೆಯೂ ತಮ್ಮ ಗ್ರಾಮಗಳ ಅಭಿವೃದ್ಧಿಯ ಬಗ್ಗೆ ವಿಶೇಷ ಕಾಳಜಿಯುಳ್ಳ, ಉತ್ಸಾಹ ಭರಿತ ಬೆರಳೆಣಿಕೆಯಷ್ಟು ಅಧ್ಯಕ್ಷೆಯರು ಎರಡು ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಇರುವುದು ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಕಂಡುಬಂದಿತು.

ಸಂಡೂರು ಮತ್ತು ಹೊಸಪೇಟೆ ತಾಲ್ಲೂಕಿನ ಗ್ರಾಮಪಂಚಾಯತಿಗಳಿಂದ ಆಯ್ಕೆಯಾದ ೨೧ ಅಧ್ಯಕ್ಷೆಯರು ಮತ್ತು ಉಪಾಧ್ಯಕ್ಷೆಯರಲ್ಲಿ ಈ ತರದ ಅರಿವಿರುವವರ ಸಂಖ್ಯೆ ೬ ಇದ್ದು, ಶೇ. ೨೮.೫೭ ರಷ್ಟು ಮಾತ್ರ. ಇನ್ನುಳಿದ ೧೫ ಅಧ್ಯಕ್ಷೆಯರಲ್ಲಿ ಅಂದರೆ ಶೇ. ೭೧.೪೫ರಷ್ಟು ಅಧ್ಯಕ್ಷೆಯರಲ್ಲಿ ಈ ಬಗ್ಗೆ ಖಚಿತವಾದ ಅರಿವಿಲ್ಲದಿರುವುದು ಕಂಡುಬರುತ್ತದೆ. ಇದರಲ್ಲಿ ಕೆಲವರಿಗಂತೂ ಫಲಾನುಭವಿಗಳ ಆಯ್ಕೆ ಯಾಕೆ ಹೇಗೆ ಎಲ್ಲಿ ನಡೆಯುತ್ತದೆ ಎಂಬುದರ ಕುರಿತು ಸರಿಯಾದ ತಿಳುವಳಿಕೆ ಇಲ್ಲ. ಆದರೆ ಆಶ್ರಯ ಮನೆ, ಭಾಗ್ಯಜ್ಯೋತಿ ಇಂತಹ ಸರ್ಕಾರಿ ಯೋಜನೆಗಳು ಅಧ್ಯಕ್ಷಳಾದ ಮಹಿಳೆಗೆ ಮತ್ತು ಸಂಬಂಧಿಕರಿಗೆ ಹೇಗೋ ತಲುಪಿರುತ್ತವೆ. ಕಾರ್ಯದರ್ಶಿ, ಕೆಲವು ಪುರುಷ ಸದಸ್ಯರು, ಪ್ರಮುಖ ವರ್ಗಗಳ ಲಾಬಿಯ ಮೂಗಿನ ನೇರಕ್ಕೆ ಫಲಾನುಭವಿಗಳ ಆಯ್ಕೆ ನಿರ್ಧಾರವಾಗುತ್ತದೆ. ಇಲ್ಲಿ ಅಧ್ಯಕ್ಷೆ ಉತ್ಸವ ಮೂರ್ತಿಯಾಗಿರುವುದು ಗಮನಾರ್ಹ. ಹೆಚ್ಚೆಂದರೆ ತನ್ನವರನ್ನೆಲ್ಲ ಫಲಾನುಭವಿಯಾಗಿ ಆರಿಸಬಹುದು. ಇದು ಮಹಿಳಾ ಅಧ್ಯಕ್ಷೆಯ ಸಾಧನೆ. ಅಲ್ಲದೆ ಅಡ್ಜಸ್ಟ್‌ಮೆಂಟ್‌ನ ಒಂದು ಮುಖ. ಇಂತಹ ಸಂದರ್ಭದಲ್ಲಿ ಅಸಮಾನತೆ ಪ್ರಧಾನವಾಗಿರುವ ಸಾಂಪ್ರದಾಯಿಕ ಬದುಕಲ್ಲಿ ಅಧ್ಯಕ್ಷೆಯು ಯಾವ ರೀತಿಯಾದ ನಿರ್ಣಯ ಕೈಗೊಳ್ಳುವಿಕೆಯಲ್ಲಿ ಪಾತ್ರ ವಹಿಸಲು ಸಾಧ್ಯ? ಇಂತಹ ಮಹಿಳೆಯ ಬದುಕಿನ ಬಹುಭಾಗ ತನ್ನ ಮೂಲಭೂತ ಅವಶ್ಯಕತೆಗಳನ್ನು ರೂಢಿಸಿಕೊಳ್ಳುವುದಕ್ಕೆ ವ್ಯಯವಾಗುತ್ತದೆ. ತನ್ನನ್ನು ಉಪೇಕ್ಷೆಗೆ ಈಡು ಮಾಡಿರುವ ಸಂಗತಿಗಳ ಕುರಿತು ಆಕೆಗೆ ಅರಿವೇ ಇರುವುದಿಲ್ಲ. ಕಾನೂನು ಮಹಿಳೆಗೆ ಪ್ರಾತಿನಿಧ್ಯ ಒದಗಿಸಿದ್ದರೂ ಸ್ಥಳೀಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿಸರ ಅವರ ಪ್ರಾತಿನಿಧ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಯಾವ ರೀತಿ ವರ್ತಿಸುತ್ತದೆ ಎಂಬುದನ್ನು ಮೇಲಿನ ಸಂಗತಿಗಳು ಸ್ಪಷ್ಟಪಡಿಸುತ್ತವೆ. ಹೀಗಾಗಿ ಅಧಿಕಾರ ಮತ್ತು ನಿರ್ಣಯ ಪ್ರಕ್ರಿಯೆ(Power and Decision Making)ಯಲ್ಲಿ ಚುನಾಯಿತ ಮಹಿಳಾ ಅಧ್ಯಕ್ಷರ ಪಾತ್ರ ಕ್ಷೀಣವಾಗಿ ಕಾಣುತ್ತದೆ ಎಂಬುದನ್ನು ಮನಗಾಣ ಬಹುದಾಗಿದೆ.

ಈಗಿನ ಗ್ರಾಮಪಂಚಾಯತಿ ವ್ಯವಸ್ಥೆಯಲ್ಲಿ ಮಹಿಳೆ ತನ್ನ ಪಾತ್ರವನ್ನು ನಿರ್ವಹಿಸಲು ಶಕ್ತಳಾದರೂ ಪುರುಷ ಕೇಂದ್ರಿತ ಸ್ಥಾಪಿತ ಹಿತಾಸಕ್ತಿಗಳು ಆಕೆಗೆ ಕೆಲವೊಮ್ಮೆ ತಡೆ ಒಡ್ಡಬಹುದು. ಮಹಿಳೆಯು ಆಡಳಿತ ನಡೆಸಲು ನಿರ್ಣಯ ತೆಗೆದುಕೊಳ್ಳಲು ಅಸಮರ್ಥಳು, ಆಕೆಗೆ ಏನು ತಿಳಿಯದು ಎಂಬ ಪರಂಪರಾಗತ ಧೋರಣೆಯಲ್ಲಿ ಮಹಿಳೆಯರನ್ನು ಪುರುಷಶಾಹಿಯು ಮೂಲೆಗುಂಪು ಮಾಡಿರುವ ಉದಾಹರಣೆಗಳು ಸಾಕಷ್ಟಿವೆ.

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಕೌಟುಂಬಿಕ ಆಗು ಹೋಗುಗಳಲ್ಲಿ ಸ್ತ್ರೀಯು ಸಂಪೂರ್ಣವಾಗಿ ಭಾಗವಹಿಸುವ, ನಿರ್ಣಯ ತೆಗೆದುಕೊಳ್ಳುವ ಸ್ವಾತಂತ್ರ್ಯವಿಲ್ಲದ ಸ್ಥಿತಿಯನ್ನು ಗಮನಿಸುತ್ತೇವೆ. ಅಧ್ಯಕ್ಷೆಯಾಗಿ ಆಯ್ಕೆಯಾದ ಮಹಿಳಾ ಸದಸ್ಯೆಯರು ಇದಕ್ಕೆ ಹೊರತಲ್ಲ ಎಂಬುದನ್ನು ಗಮನಿಸಬೇಕು. ಮಹಿಳಾ ಸಶಕ್ತೀಕರಣ, ಸಬಲೀಕರಣ, ಮೀಸಲಾತಿಯಂತಹ ಅವಕಾಶಗಳಿದ್ದರೂ ಮಹಿಳೆ ನಿರ್ಣಾಯಕ ಹಂತಗಳಲ್ಲಿ ಭಾಗವಹಿಸಿರುವುದನ್ನು ನಾವು ಕಾಣುತ್ತಿಲ್ಲ. ಹೊಸಪೇಟೆ ತಾಲ್ಲೂಕು ಗ್ರಾಮಪಂಚಾಯತಿಯ (ಶೇ. ೫೪) ಮತ್ತು ಸಂಡೂರು ತಾಲ್ಲೂಕು ಗ್ರಾಮಪಂಚಾಯತಿಯ ೭ ಮಹಿಳಾ ಅಧ್ಯಕ್ಷರು (ಶೇ. ೭೦) ಪತಿಯೊಂದಿಗೆ ಕೌಟುಂಬಿಕ ಜೀವನದಲ್ಲಿ ಸರಿಸಮಾನರಾಗಿ ಬಾಳ್ವೆ ನಡೆಸಿದರೂ ಅಂತಿಮ ತೀರ್ಮಾನ ಗಂಡಂದಿರದ್ದೆ ಆಗಿರುವುದನ್ನು ನಾವು ಗಮನಿಸಬಹುದು. ಇದೇ ಪರಿಸ್ಥಿತಿಯನ್ನು ಗ್ರಾಮ ಪಂಚಾಯತಿ ಸಂದರ್ಭದಲ್ಲೂ ಕಾಣುತ್ತೇವೆ. ಆದಾಗ್ಯೂ ಸಮಾಧಾನಕರ ಸಂಗತಿಯೆಂದರೆ ಚುನಾಯಿತ ಮಹಿಳಾ ಸದಸ್ಯೆಯರು ಚರ್ಚೆಯಲ್ಲಿ ಭಾಗವಹಿಸುವಷ್ಟು ಮಾನಸಿಕ ಬಲವನ್ನು ಹೊಂದಿದ್ದಾರೆ ಎಂಬುದು. ಮಹಿಳಾ ಅಧ್ಯಕ್ಷೆಯರು ನಿರ್ಣಯ ಕೈಗೊಳ್ಳುವುದರಲ್ಲಿ ಹಿಂದುಳಿದಿರುವುದಲ್ಲದೆ ಚರ್ಚೆ ಮತ್ತು ಭಾಗವಹಿಸುವಿಕೆ ಎರಡೂ ಸಂಗತಿಗಳಲ್ಲಿ ಹಿಂದುಳಿದಿರುವುದು ಕಂಡುಬರುತ್ತದೆ. ಪುರುಷಶಾಹಿ ವ್ಯವಸ್ಥೆಯೇ ಇಂತಹವರ ಅಧಿಕಾರವನ್ನು ಮಹಿಳೆಯರ ಪರವಾಗಿ ಚಲಾಯಿಸುವುದು ಕಂಡುಬರುತ್ತದೆ. ಉದಾಹರಣೆಗೆ ಇತ್ತೀಚೆಗೆ ಮಧುಗಿರಿ ಪುರಸಭೆಯ ೧೫ನೇ ವಾರ್ಡಿನಲ್ಲಿ ನಡೆದ ಒಂದು ಘಟನೆ ತುಂಬ ಮಹತ್ವದ್ದೆನಿಸುತ್ತದೆ. ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಕೆಟ್ಟು ಹೋದ ಕೊಳವೆ ಬಾವಿಯ ಪಂಪ್ ಸೆಟ್ ಅನ್ನು ಪಕ್ಕದ ವಾರ್ಡಿನ ಸದಸ್ಯರು ದುರಸ್ತಿಗೊಳಿಸುವ ಕಾರ್ಯಕ್ಕೆ ಮುಂದಾದಾಗ ೧೫ನೇ ವಾರ್ಡಿನ ಮಹಿಳಾ ಸದಸ್ಯೆಯ ಪತಿ ತನ್ನ ಅನುಮತಿ ಇಲ್ಲದೆ ಯಾರು ಮಾಡಲು ಹೇಳಿದ್ದು?” ಎಂದು ನೌಕರರ ಮೇಲೆ ಕೂಗಾಡಿ ಕೆಲಸ ನಿಲ್ಲಿಸಿದರು. ನಂತರ ಅಧ್ಯಕ್ಷರಿಗೆ “ಆ ವಾರ್ಡಿನ ಮಹಿಳಾ ಸದಸ್ಯೆಯ ಅನುಮತಿ ಪಡೆಯದೇ ನೀವು ಕೆಲಸ ಕೈಗೊಂಡದ್ದು ಸರಿಯಲ್ಲ, ಮಹಿಳಾ ಸದಸ್ಯೆಯು ಅನುಮತಿ ಕೊಡುವವರೆಗೂ ಸದರಿ ಕೆಲಸವನ್ನು ಸ್ಥಗಿತಗೊಳಿಸಬೇಕು” ಎಂದು ತಾನೇ ಪತ್ನಿಯ ಪರವಾಗಿ, ಸಹಿ ಮಾಡಿದ ಪತ್ರವನ್ನು ನೀಡಿಬಿಟ್ಟನು. ಇದರಿಂದ ಕುಪಿತಗೊಂಡ ನಾಗರೀಕರು ಮಹಿಳಾ ಸದಸ್ಯೆಯನ್ನು ಕೇಳಿದಾಗ ‘ಈ ಪತ್ರ ನಾನು ಕೊಟ್ಟಿಲ್ಲ ಈ ಸಹಿ ಕೂಡ ನನ್ನದಲ್ಲ’ ಎಂದು ಬಿಟ್ಟರು.[2] ಇಲ್ಲಿ ಬಹುಮುಖ್ಯವಾಗಿ ಎದ್ದು ಕಾಣುವುದು ಪತ್ನಿಯ ಅಧಿಕಾರದಲ್ಲಿ ಪತಿಯ ಕಾರುಬಾರು. ಇದೇ ಪರಿಸ್ಥಿತಿಯನ್ನು ನಾವು ಹಲವಾರು ಗ್ರಾಮಪಂಚಾಯತಿ ಮಹಿಳಾ ಅಧ್ಯಕ್ಷೆಯರು ಮತ್ತು ಮಹಿಳಾ ಸದಸ್ಯೆಯರ ಸಂದರ್ಭದಲ್ಲಿ ಕಾಣುತ್ತೇವೆ.

ನೊಬೆಲ್ ಪ್ರಶಸ್ತಿ ವಿಜೇತ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಅಮರ್ತ್ಯಸೆನ್‌ರ ಧಾರಣಶಕ್ತಿ (Capability) ಪರಭಾವನೆಯನ್ನು ಚುನಾಯಿತ ಮಹಿಳೆಯರಿಗೂ ಅನ್ವಯಿಸಬಹುದಾಗಿದೆ. ‘ಬದುಕನ್ನು ಉತ್ತಮಪಡಿಸಿಕೊಳ್ಳಲು ಒಬ್ಬ ವ್ಯಕ್ತಿಗಿರುವ ಸಾಮರ್ಥ್ಯ ಅಥವಾ ಸ್ವಾತಂತ್ರ್ಯವೇ ಧಾರಣಶಕ್ತಿ’. ಬದುಕನ್ನು ಉತ್ತಮಪಡಿಸಿಕೊಳ್ಳಲು ಸಾಧನಗಳು ಬೇಕು. ಈ ಸಾಧನಗಳಿಂದ ಬದುಕನ್ನು ಉತ್ತಮಪಡಿಸಿಕೊಳ್ಳಲು ಅಗತ್ಯವಾದ ಸಾಮರ್ಥ್ಯ ಮತ್ತು ಸ್ವಾತಂತ್ರ್ಯ ತುಂಬಾ ಮುಖ್ಯ ಎಂದು ಹೇಳಿದ್ದಾರೆ. ಪ್ರವಾಹದೋಪಾದಿಯಲ್ಲಿ ಹರಿಯುತ್ತಿರುವ ಪ್ರಯೋಜನ ಹಾಗೂ ಅನುಕೂಲಗಳನ್ನು ಮೈಗೂಡಿಸಿಕೊಳ್ಳಬಲ್ಲ ಸಾಮರ್ಥ್ಯವನ್ನೇ ಧಾರಣಶಕ್ತಿ ಎಂದು ನಿರ್ವಚಿಸಬಹುದಾಗಿದೆ.

ಇಲ್ಲಿ ಚುನಾಯಿತ ಮಹಿಳೆಯರಲ್ಲಿ ರಾಜಕೀಯ ಧಾರಣಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರ, ಸಂವಿಧಾನ, ಕಾನೂನುಗಳು ಮಹಿಳಾ ಸದಸ್ಯೆಯರಿಗೆ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸುವಿಕೆಗೆ ಬೇಕಾದ ಅನುಕೂಲ ಸವಲತ್ತುಗಳನ್ನು ಒದಗಿಸಿಕೊಟ್ಟಿದೆ. ಆದರೆ ಅದನ್ನು ಮೈಗೂಡಿಸಿಕೊಳ್ಳಬಲ್ಲಂತ ಸಾಮರ್ಥ್ಯ ಹಾಗೂ ಧಾರಣಶಕ್ತಿ ಚುನಾಯಿತ ಮಹಿಳಾ ಸದಸ್ಯೆಯರಿಗಿಲ್ಲ ದಿರುವುದನ್ನು ಗುರುತಿಸಬಹುದು.

ಧಾರಣಶಕ್ತಿಯನ್ನು ನಿರ್ಧರಿಸುವ ಅನೇಕ ಅಂಶಗಳಲ್ಲಿ ಸಾಕ್ಷರತೆಯ ಪ್ರಮಾಣವು ಒಂದಾಗಿದೆ. ಅದರಲ್ಲೂ ಮುಖ್ಯವಾಗಿ ಮಹಿಳೆಯ ಸಾಕ್ಷರತೆ ಪ್ರಮುಖವಾಗಿದೆ. ಇಲ್ಲಿ ಅಧ್ಯಯನಕ್ಕೊಳಗಾಗಿರುವ ಚುನಾಯಿತ ಮಹಿಳಾ ಸದಸ್ಯೆಯರು ಸಾಕ್ಷರರಾಗಿಲ್ಲದಿರುವುದೂ ಇವರ ರಾಜಕೀಯ ಧಾರಣಾಶಕ್ತಿಯ ಕುಸಿತಕ್ಕೆ ಕಾರಣವಾಗಿದೆ. ಈ ಮೂಲಕ ಮಹಿಳೆಯು ಒಟ್ಟಾರೆ ರಾಜಕೀಯ ಮುಖ್ಯವಾಹಿನಿಯಿಂದ ದೂರ ಉಳಿಯಲು ಕಾರಣವಾಗಿದೆ ಎಂಬುದು ಪ್ರಮುಖ ಸಂಗತಿ.

ಆಯ್ಕೆಯಾಗಿರುವ ಬಹಳಷ್ಟು ಮಹಿಳಾ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆಯರಿಗೆ ತಮ್ಮ ಸ್ಥಾನದ ಮಹತ್ವ ಇನ್ನು ತಿಳಿದಿಲ್ಲ. ಈ ನಿಟ್ಟಿನಲ್ಲಿ ಅವರು ಇನ್ನು ಸಶಕ್ತರಾಗಿಲ್ಲ. ಇದಕ್ಕೆ ಕಾಳಿಂಗೇರಿ, ತೋರಣಗಲ್ಲು, ಬಂಡ್ರಿ, ಮಲಪನಗುಡಿ, ದೇವಲಾಪುರ, ಗಾದಿಗನೂರು, ಮೆಟ್ರಿ, ಸೀತಾರಾಮ ತಾಂಡ, ನಾಗೇನಹಳ್ಳಿ, ಬೈಲುವದ್ದಿಗೇರಿ ಇನ್ನು ಮೊದಲಾದ ಗ್ರಾಮ ಪಂಚಾಯತಿ ಅಧ್ಯಕ್ಷೆ, ಉಪಾಧ್ಯಕ್ಷೆಯರಿಗೆ ತಮ್ಮ ಪಾರಂಪರಿಕ ಚಿಪ್ಪಿನಿಂದ ಹೊರಗೆ ಬರಲು ಇನ್ನೂ ಸಾಧ್ಯವಾಗಿಲ್ಲ. ಪುರುಷರೇ ಇವರ ಪರವಾಗಿ ಅಧಿಕಾರವನ್ನು ಚಲಾಯಿಸುವುದನ್ನು ಕಾಣಲಾಗಿದೆ. ಈ ಪರಿಸ್ಥಿತಿ ಕರ್ನಾಟಕದ ಇತರ ಜಿಲ್ಲೆಗಳಲ್ಲೂ ಕಂಡುಬರುತ್ತದೆ. ಉದಾ: ಚಿಕ್ಕಮಂಗಳೂರು ಜಿಲ್ಲೆಯ ಗ್ರಾಮಪಂಚಾಯತಿ ಒಂದರಲ್ಲಿ ಮಹಿಳಾ ಅಧ್ಯಕ್ಷೆ ಪಕ್ಕದ ಊರಿನಿಂದ ಕಚೇರಿಗೆ ಬರುವ ತನ್ನ ಕಾರ್ಯದರ್ಶಿಯ ಕೈ ಚೀಲವನ್ನು ಹೊತ್ತು ತಂದು ಸಂಜೆ ಪುನಃ ಒಯ್ಯುವ ಕೆಲಸ ಮಾಡುತ್ತಿದ್ದರು. ತನ್ನ ಅಧಿಕಾರದ ಬಗ್ಗೆ ತನಗೇ ಅರಿವಿರದ ಆಕೆಯಿಂದ ಕಾರ್ಯದರ್ಶಿಯು ಚಪ್ರಾಸಿಯಂತೆ ಕೆಲಸ ಮಾಡಿಸಿಕೊಳ್ಳುತ್ತಿದ್ದ. ಈ ವಿಷಯ ತಿಳಿದ ಆ ಜಿಲ್ಲಾ ಪರಿಷತ್‌ನ ಮಹಿಳಾ ಉಪಾಧ್ಯಕ್ಷೆಯು ಆ ಕಾರ್ಯದರ್ಶಿಯನ್ನು ಕರೆದು ಛೀಮಾರಿ ಹಾಕಿ, ಆ ಮಹಿಳಾ ಅಧ್ಯಕ್ಷೆಗೆ ಆಕೆಯ ಸ್ಥಾನಮಾನದ ಬಗ್ಗೆ ತಿಳಿಸಿ ಹೇಳಿದರು. ನಂತರ ಗ್ರಾಮ ಪಂಚಾಯತಿಯ ಸದರಿ ಮಹಿಳಾ ಅಧ್ಯಕ್ಷೆಯು ಮುಂದೆ ಅಂತಹ ಶೋಷಣೆಗೆ ಒಳಗಾಗದಂತೆ ಎಚ್ಚರಿಕೆ ವಹಿಸಿದರು.[3] ಇಂತಹ ಎಚ್ಚರಿಕೆ ಮತ್ತು ತಿಳುವಳಿಕೆ ಕೊಡುವ ಅಗತ್ಯಗಳು ಸಂಡೂರು ಮತ್ತು ಹೊಸಪೇಟೆ ತಾಲ್ಲೂಕಿನ ಗ್ರಾಮಪಂಚಾಯತಿಗಳ ಮಹಿಳಾ ಅಧ್ಯಕ್ಷೆಯರು ಮತ್ತು ಉಪಾಧ್ಯಕ್ಷೆಯರಿಗೆ ಅಗತ್ಯವಿದೆ. ಇಂತಹ ತಿಳುವಳಿಕೆಯೊಂದಿಗೆ ರಾಜಕೀಯ ತರಬೇತಿಯೂ ದೊರೆತರೆ ಇವರು ಖಂಡಿತವಾಗಿಯೂ ತಮ್ಮ ಸ್ಥಾನಕ್ಕೆ ನ್ಯಾಯ ದೊರಕಿಸಿ ಕೊಡಬಲ್ಲರು.

ಕೌಟುಂಬಿಕವಾಗಿ, ಸಾಮಾಜಿಕವಾಗಿ ಮಹಿಳೆಯರನ್ನು ನಿಯಂತ್ರಿಸುವ ಅಪಮೌಲೀಕರಿಸುವ ಬಗೆಗಳು ಒಂದು ರೀತಿಯಾದರೆ, ಪ್ರಭುತ್ವ ಮತ್ತು ಅದರ ಅಂಗಗಳಾದ ಅಧಿಕಾರಶಾಹಿ ಶಕ್ತಿಗಳು ಮಹಿಳೆಯರನ್ನು ಇನ್ನೊಂದು ರೀತಿಯಲ್ಲಿ ನಿಯಂತ್ರಿಸುತ್ತವೆ. ಈ ಪ್ರವೃತ್ತಿಗೆ ಅಧಿಕಾರದ ಜೊತೆಗೆ ಸಾಮಾಜಿಕ ಮತ್ತು ಸಾಂಸ್ಕೃತಿಕವಾದಂತಹ ಆಕೃತಿಗಳು ಮಹಿಳಾ ಶೋಷಣೆಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸಿಕೊಡುತ್ತವೆ. ಸಮಾಜದಲ್ಲಿ ಅಭಿವೃದ್ಧಿಪರ ಕಾರ್ಯಗಳನ್ನು ಹೊಸ ರೀತಿಯ ಸೌಕರ್ಯಗಳನ್ನು ಒದಗಿಸುವಾಗ ಪ್ರಭುತ್ವವು ಕ್ರಾಂತಿಕಾರಕವಾಗಿ ವರ್ತಿಸದೆ, ಅಧಿಕಾರಶಾಹಿ ಮತ್ತು ಪ್ರತಿಷ್ಟಿತ ಶಕ್ತಿಗಳ ಮುಲಾಜಿನಲ್ಲಿ ಇಂಥ ಕೆಲಸಗಳಿಗೆ ಕೈ ಹಾಕುತ್ತದೆ. ಈ ಪ್ರಭಾವೀ ಶಕ್ತಿಗಳು ದುರ್ಬಲ ಮಹಿಳಾ ಸದಸ್ಯೆಯರ ಸಶಕ್ತೀಕರಣಕ್ಕೆ ಮಾರಕವಾಗಿರುವುದೇ ಹೆಚ್ಚು.

ಬಹಳಷ್ಟು ಕಾರ್ಯದರ್ಶಿಗಳು ನಿರಂಕುಶಮತಿಗಳು, ಚುನಾಯಿತ ಪ್ರತಿನಿಧಿಗಳಿಗೆ ಏನೂ ಗೊತ್ತಿಲ್ಲ, ಎಲ್ಲ ನಾನೇ ತಿಳಿಸಿಕೊಡುವುದು, ನಾನೇ ಮಾಡುವುದು ಎನ್ನುವ ಅಹಂಕಾರದ ಮಾತುಗಳನ್ನು ಆಡಿರುವುದು ಕ್ಷೇತ್ರಕಾರ್ಯದಲ್ಲಿ ತಿಳಿದಿದೆ. ಚುನಾಯಿತ ಸದಸ್ಯೆಯರಿಗೆ ಸರಿಯಾದ ಮಾಹಿತಿ ನೀಡಿ ಸರ್ಕಾರದಿಂದ ಜಾರಿಗೊಂಡ ಕಾರ್ಯಕ್ರಮಗಳನ್ನು ಪ್ರತಿನಿಧಿಗಳ ಮೂಲಕ ಜನರಿಗೆ ತಲುಪಿಸುವುದು ಅವರ ಜವಾಬ್ದಾರಿಯಾಗಿದೆ. ಕಾನೂನಿನಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಪರಮೋಚ್ಛ ಅಧಿಕಾರಗಳಿದ್ದರೂ, ಅದನ್ನು ಅವರಿಗೆ ನೀಡಲು ಇಂತಹ ಅಧಿಕಾರಶಾಹಿ ಶಕ್ತಿಗಳು ಮನಸ್ಸು ಮಾಡುವುದಿಲ್ಲ. ದೇವರು ವರ ಕೊಟ್ಟರೂ ಪೂಜಾರಿ ವರ ಕೊಡುವುದಿಲ್ಲ ಎಂಬ ಮಾತು ಇಲ್ಲಿ ಅನ್ವಯವಾಗುತ್ತದೆ. ಎಲ್ಲವನ್ನು ತನ್ನ ಮೂಲಕವೇ ನಡೆಸುವ ಜಾಯಮಾನವು ಬಹಳಷ್ಟು ಕಾರ್ಯದರ್ಶಿಗಳಲ್ಲಿ ಕಂಡುಬಂದಿತು. ಇನ್ನೂ ಕೆಲವರು ತುಂಬಾ ಅನುನಯದಿಂದ ಚುನಾಯಿತ ಪ್ರತಿನಿಧಿಗಳೊಂದಿಗೆ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗವಹಿಸಿರುವುದು ಮಹತ್ವದ ವಿಚಾರ.

ಗ್ರಾಮ ಸಭೆಗಳು ನಡೆಯುವ ಮತ್ತು ಚರ್ಚೆಗೆ ಬರುವ ವಿಷಯಗಳ ಕುರಿತು ಸರಿಯಾದ ಮಾಹಿತಿ ನಮಗೆ ಇರುವುದಿಲ್ಲ. ಎಲ್ಲವನ್ನೂ ಕಾರ್ಯದರ್ಶಿಯೇ ಮಾಡುತ್ತಾನೆ. ಆತ ಬಂದಾಗ ಸಭೇ, ಇಲ್ಲದಿದ್ದಾಗ ಇಲ್ಲ. ಸಭೆ ಇದ್ದಾಗ ಆತ ಹೇಳಿದಂತೆಯೇ ಎಲ್ಲವೂ ನಡೆಯಬೇಕು. ‘ದೊಡ್ಡ ದೊಡ್ಡವರ ಸಂಗಾಟ ಬೇರೆ ಇರತಾನ’ ಎಂದು ಸಂಡೂರು ತಾಲ್ಲೂಕು ಗ್ರಾಮ ಪಂಚಾಯತಿಯ ಮಹಿಳಾ ಸದಸ್ಯೆಯೊಬ್ಬರು ಹೇಳುವ ಮಾತು ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಮತ್ತೊಂದು ಗ್ರಾಮಪಂಚಾಯತಿಗೆ ಹೋದಾಗ ‘ನಮ್ಮ ಪಂಚಾಯತಿಗೆ ಹೊಸ ಕಾರ್ಯದರ್ಶಿ ಬಂದಿದ್ದಾನೆ. ಮೊದಲಿದ್ದ ಕಾರ್ಯದರ್ಶಿ ನಮಗೆ ಯಾವ ರೀತಿಯಲ್ಲೂ ಸಹಕಾರ ಕೊಡುತ್ತಿರಲಿಲ್ಲ. ಕಿರಿಕಿರಿ ಮಾಡುತ್ತಿದ್ದ, ಸರ್ಕಾರದಿಂದ ಬಂದ ಯೋಜನೆಗಳ ವಿಷಯದ ಪತ್ರಗಳನ್ನು ನಮ್ಮಿಂದ ಮುಚ್ಚಿಟ್ಟು ಆಟವಾಡಿಸುತ್ತಿದ್ದ’ ಎಂದು ಮಹಿಳಾ ಸದಸ್ಯೆಯರು ತಿಳಿಸಿದ್ದಾರೆ.[4] ಅದಲ್ಲದೆ ಕಾಮಗಾರಿಗಳನ್ನು ಮಾಡಿ ಮುಗಿಸಿದ ನಂತರ ಅದನ್ನು ಬಿಲ್ಲು ಮಾಡಿ ಹಣ ಪಾವತಿಸಲು ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಬ್ಬರೂ ಸೇರಿ ಮಹಿಳಾ ಸದಸ್ಯೆಯರನ್ನು ಸತಾಯಿಸುವುದನ್ನು ಕೆಲವು ಮಹಿಳಾ ಸದಸ್ಯೆಯರು ಬೇಸರದಿಂದ ತಿಳಿಸಿದರು.[5] ಮಹಿಳಾ ಸದಸ್ಯೆಯರ ಆಜ್ಞಾನ ಇವರಿಗೆ ವರದಾನವಾಗಿದೆಯಷ್ಟೆ.

ವಿಕೇಂದ್ರೀಕರಣದ ಉದ್ದೇಶ ಅಧಿಕಾರ ಒಂದು ಕಡೆ ಕೇಂದ್ರೀಕೃತವಾಗಿರಬಾರದು ಎಂದು. ಆದರೆ ಗ್ರಾಮಪಂಚಾಯತಿಗಳಲ್ಲಿರುವ ಅಧಿಕಾರಶಾಹಿಯು ಅಧಿಕಾರದ ವಿಕೇಂದ್ರೀಕರಣಕ್ಕೆ ತಡೆಗೋಡೆಯಾಗಿ ಪರಿಣಮಿಸಿರುವುದನ್ನು ಇಲ್ಲಿ ಕಾಣಬಹುದು. ನಿರಕ್ಷರಿಗಳಾದ ತಿಳುವಳಿಕೆ ಇಲ್ಲದ ಮಹಿಳಾ ಸದಸ್ಯೆಯರನ್ನು ಮತ್ತಷ್ಟು ಅಜ್ಞಾನದ ಕೂಪಕ್ಕೆ ತಳ್ಳುವ ಪರಿಸರವನ್ನು ಅಧಿಕಾರಿಶಾಹಿ ಸೃಷ್ಟಿಸುತ್ತದೆ. ಸರ್ಕಾರ ಈ ರೀತಿಯ ದುರುಪಯೋಗವನ್ನು ಗಮನಿಸಬೇಕಾಗುತ್ತದೆ.

ಅನಕ್ಷರಸ್ಥರು, ಪ.ಜಾ, ಪ.ಪಂ.ದವರು, ಹಿಂದುಳಿದವರು ಹೆಚ್ಚಾಗಿರುವ ಗ್ರಾಮ ಪಂಚಾಯತಿಗಳಲ್ಲಿ ಸೂಕ್ತ ಮಾರ್ಗದರ್ಶನದ ಮನಸ್ಸುಳ್ಳ, ಪ್ರಾಮಾಣಿಕ ಕಾಳಜಿಯುಳ್ಳ ಅಧಿಕಾರಿಗಳ ಅನಿವಾರ್ಯತೆ ಇಂದು ಇದೆ. ಪಂಚಾಯತ್‌ರಾಜ್ ಸಂಸ್ಥೆಗಳ ಉನ್ನತ ಅಧಿಕಾರಿಗಳು(ಐಎಎಸ್ ಅಧಿಕಾರಿಗಳು) ಚುನಾಯಿತ ಪ್ರತಿನಿಧಿಗಳ ಮೇಲ್ವಿಚಾರಣೆಯಲ್ಲಿ ಕೆಲಸಗಳನ್ನು ನಿರ್ವಹಿಸಬೇಕು. ಅವರು ಪಂಚಾಯತ್‌ರಾಜ್ ಸಂಸ್ಥೆಗಳು ತೆಗೆದುಕೊಳ್ಳುವ ನಿರ್ಣಯ ತೀರ್ಮಾನಗಳನ್ನು ಜಾರಿಗೊಳಿಸುವ ಕಾರ್ಯದಲ್ಲಿ ಉಪಕರಣಗಳಾಗಿರಬೇಕೆ ವಿನಃ ಅವರೇ ನಿರಂಕುಶಾಧಿಕಾರಿಗಳಾಗಬಾರದು. ಅಧಿಕಾರವು ಮೇಲಿನ ಸ್ತರದಿಂದ ಕೆಳಸ್ತರದ ಸರ್ಕಾರಗಳಿಗೆ ವರ್ಗಾವಣೆಯಾದರೆ ಸಾಲದು. ಅದು ಅಧಿಕಾರಶಾಹಿಯಿಂದ ಜನಶಕ್ತಿಗೆ ಪರಿಣಾಮಕಾರಿಯಾಗಿ ವರ್ಗಾವಣೆಯಾಗಬೇಕು.[6] ಮೇಲಿನ ಮಾತುಗಳು ಇಡೀ ಪಂಚಾಯತಿ ವ್ಯವಸ್ಥೆಗೆ ಪೂರಕವಾಗಿದ್ದರೂ, ಅದನ್ನು ಚುನಾಯಿತ ಮಹಿಳಾ ಸದಸ್ಯೆಯರ ವಿಷಯದಲ್ಲೂ ಅನ್ವಯಿಸಬಹುದಾಗಿದೆ.

ಯಾವುದೇ ರಾಜಕೀಯ ಪಕ್ಷದ ಆಡಳಿತಾರೂಢ ಸರ್ಕಾರವು ಸ್ಥಳೀಯ ಸಂಸ್ಥೆಗಳಿಗೆ, ಚುನಾಯಿತ ಸದಸ್ಯರಿಗೆ ಪರಮಾಧಿಕಾರಗಳನ್ನು ನೀಡಲು ಮುಂದಾಗುವುದಿಲ್ಲ. ಇದು ವಿಕೇಂದ್ರೀಕರಣದ ವಿಷಯದಲ್ಲೂ ಸ್ಪಷ್ಟವಾಗುತ್ತದೆ. ಶೇ. ೩೩.೩೩ರಷ್ಟು ಮೀಸಲಾತಿಯನ್ನು ಶಾಸನಾತ್ಮಕವಾಗಿ ನೀಡದೆ, ತಾತ್ವಿಕವಾಗಿ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಪ್ರಭುತ್ವವು ಸ್ಥಳೀಯ ಸಂಸ್ಥೆಗಳಿಗೆ ನೀಡಿದೆ. ಅದರೆ ಅವು ಗುಣಾತ್ಮಕವಾಗಿ ಅನುಷ್ಠಾನ ಗೊಳ್ಳಲು ಬೇಕಾದ ಸಂಪನ್ಮೂಲಗಳನ್ನು ವಾತಾವರಣವನ್ನು ಸಜ್ಜುಗೊಳಿಸಿರುವುದಿಲ್ಲ. ಸ್ವಾಯತ್ತತೆ, ಸ್ವಾತಂತ್ರ್ಯ ಇರುವುದಿಲ್ಲ. ಹೀಗಾಗಿ ಅಧಿಕಾರಶಾಹಿ ವ್ಯವಸ್ಥೆ ಇದರಿಂದ ಬಲಿತು, ಜನ ಪ್ರತಿನಿಧಿಗಳನ್ನು ಕೀಳಾಗಿ ಕಾಣುವ ಮತ್ತು ತಮ್ಮ ಆಟದ ಬೊಂಬೆ ಗಳನ್ನಾಗಿಸಿಕೊಂಡಿರುವ ಸಂದರ್ಭಗಳೇ ಹೆಚ್ಚು. ತಮಗೆ ಸಿಕ್ಕ ಅಧಿಕಾರದ ರುಚಿಯನ್ನು ಜನ ಪ್ರತಿನಿಧಿಗಳೊಂದಿಗೆ ಹಂಚಿಕೊಳ್ಳಲು ಇವರು ಸಿದ್ಧರಿಲ್ಲ. ಆಳುವವರನ್ನೇ ಆಳುವ ಅಧಿಕಾರಿಗಳ ಈ ಮನೋಧರ್ಮದಿಂದಾಗಿ ಜನಪ್ರತಿನಿಧಿಗಳಿಗೂ ಇವರಿಗೂ ಒಳ್ಳೆಯ ಸಂಬಂಧ ಉಳಿದಿಲ್ಲವೆಂಬುದು ಕ್ಷೇತ್ರಕಾರ್ಯದಿಂದ ತಿಳಿದುಬಂದಿದೆ.

ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ಸಿಕ್ಕಿದೆ. ಅದು ಬಂಗಾರದ ಸೂಜಿಯಂತಾಗಿದೆ. ಇತ್ತ ಉಪಯೋಗಕ್ಕೂ ಬಾರದ, ಅತ್ತ ಉಪಯೋಗಿಸಲೂ ಗೊತ್ತಿಲ್ಲದ ಸ್ಥಿತಿ ಅವರದ್ದಾಗಿದೆ. ಇಂತಹ ಸ್ಥಿತಿಯನ್ನು ಅಧಿಕಾರಿಗಳು ಬಹು ಚೆನ್ನಾಗಿ ಬಳಸಿಕೊಂಡು ಬೆಳೆಯುತ್ತಿರುವುದು ಕಂಡುಬರುತ್ತಿದೆ. ಮಹಿಳಾ ಅಭ್ಯರ್ಥಿಗಳಿಗಿಲ್ಲದ ರಾಜಕೀಯ ತರಬೇತಿ, ಶಿಕ್ಷಣದ ಕೊರತೆ, ಪುರುಷಶಾಹಿ ಹಿಡಿತಗಳು ಅಧಿಕಾರವಿದ್ದರೂ ಅದನ್ನು ಉಪಯೋಗಿಸಲಾರದಂತಹ ಅಸಹಾಯಕತೆಯನ್ನು ತಂದೊಡ್ಡಿದೆ. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಭಾಗವಹಿಸುವ, ಯೋಜನೆಗಳನ್ನು ರೂಪಿಸುವ ಸಾಮರ್ಥ್ಯದ ತರಬೇತಿಯನ್ನು ಮಹಿಳಾ ಸದಸ್ಯೆಯರಿಗೆ ಒದಗಿಸುವುದು ಅವಶ್ಯಕವಾಗಿದೆ. ಲಿಂಗಭೇದದಂತಹ ತಾರತಮ್ಯಗಳು, ಲಿಂಗಾಧಾರಿತ ಶ್ರಮವಿಭಜನೆಯ ಮಾನದಂಡಗಳು ಚುನಾಯಿತ ಮಹಿಳೆಯರನ್ನು ಮುಖ್ಯವಾಹಿನಿಯಿಂದ ಸರಿಸಿ, ಹಿಂದುಳಿಯಲು ಬಹುಮುಖ್ಯ ಕಾರಣಗಳಾಗಿವೆ. ಈ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬದಲಾವಣೆಗಳಾದರೂ ಪರಾಂಪರಗತ ‘ಗೃಹಿಣಿ ಭಾವನೆ’ ಎನ್ನುವುದು ಆಕೆಯನ್ನು ಬಿಟ್ಟು ಹೋಗಿಲ್ಲ. ಇಂತಹ ಮಾದರಿಯನ್ನು ಗಟ್ಟಿಗೊಳಿಸುವ ಸಾಮಾಜಿಕ ಪ್ರಕ್ರಿಯೆಯನ್ನು ಸಮಾಜವು ಜೀವಂತವಾಗಿಟ್ಟಿರುತ್ತದೆ. ಇದಕ್ಕೆ ಇಂದು ಆಯ್ಕೆಯಾದ ಮಹಿಳಾ ಸದಸ್ಯೆಯರೇ ಸಾಕ್ಷಿ. ಪದವಿ ದೊಡ್ಡದಾಗಿದ್ದರೂ, ಚುನಾಯಿತ ಮಹಿಳಾ ಸದಸ್ಯೆಯರಲ್ಲಿ ಅದರಲ್ಲೂ ಕೆಳ ವರ್ಗದ ಮಹಿಳಾ ಸದಸ್ಯೆಯರಲ್ಲಿ ಪಾರಂಪರಿಕವಾದ ಹಿಂಜರಿಕೆಯ ಪ್ರವೃತ್ತಿ, ಕೀಳರಿಮೆ, ಹೆದರಿಕೆ, ನಾಚಿಕೆ, ಪರಾವಲಂಬನೆ, ಪುರುಷಾಧೀನ ಸ್ಥಿತಿಗಳನ್ನು ಕಾಣಬಹುದಾಗಿದೆ. ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತ ಮಹಿಳಾ ಅಧ್ಯಕ್ಷೆಯು ಮುದುರಿ ಹಿಡಿಯಾಗಿ ಹೋಗಿರುತ್ತಾಳೆ. ಆಕೆಯ ಅಸ್ತಿತ್ವಕ್ಕಿಂತ ಕುರ್ಚಿಯ ಅಸ್ತಿತ್ವವೇ ಅಲ್ಲಿ ಎದ್ದುಕಾಣುತ್ತಿರುತ್ತದೆ.

ಚುನಾಯಿತ ಮಹಿಳಾ ಸದಸ್ಯೆಯರ ರಾಜಕೀಯ ಭಾಗವಹಿಸುವಿಕೆಯ ಮೇಲೆ ಪ್ರಭಾವ ಬೀರುವ ರಾಜಕೀಯ ಸಾಮಾಜೀಕರಣದ ವಿವಿಧ ನಿಯೋಗಗಳ ಹಿನ್ನೆಲೆಯಲ್ಲಿ ಮಹಿಳಾ ಸದಸ್ಯೆಯರ ಖಾಸಗಿ ಬದುಕನ್ನು ಅವರ ಅಂತರಂಗದ ವಿವಿಧ ತರಂಗಗಳನ್ನು ಇಲ್ಲಿ ಅಧ್ಯಯನಿಸಲು ಪ್ರಯತ್ನಿಸಲಾಗಿದೆ. ಇದರಿಂದ ಚುನಾಯಿತ ಮಹಿಳಾ ಸದಸ್ಯೆಯರನ್ನು ಬಹುಮುಖಿ ಸಂವೇದನೆಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಿಕೊಳ್ಳಲು ಅನುಕೂಲವಾಗಿದೆ. ಪ್ರತಿಯೊಬ್ಬ ಮಹಿಳಾ ಸದಸ್ಯೆಯ ಅಂತರಂಗದೊಂದಿಗಿನ ಆಪ್ತ ಸಮಾಲೋಚನೆಯು ಈ ಮಾದರಿಯ ಅಧ್ಯಯನಕ್ಕೆ ಹಲವಾರು ವಿಸ್ತಾರಗಳನ್ನು, ಸೂಕ್ಷ್ಮ ಒಳನೋಟಗಳನ್ನು ಮತ್ತು ನಿಖರತೆಯನ್ನು ತಂದುಕೊಟ್ಟಿದೆ.

ವಿಕೇಂದ್ರೀಕರಣದ ಪರಿಣಾಮಕಾರಿ ಆಚರಣೆಗೆ ಮಹಿಳಾ ಸಶಕ್ತೀಕರಣವು ತುಂಬಾ ಮಹತ್ವದ್ದು. ಸಶಕ್ತೀಕರಣದ ಬಹು ಮುಖ್ಯ ಗುಣವೆಂದರೆ ಸ್ವಾತಂತ್ರ್ಯ. ಮನವಾರ್ತೆಯ ಜವಾಬ್ದಾರಿಗಳಿಗೇ ಮೀಸಲಾಗಿರುವ ಮಹಿಳೆಗೆ ಸಾರ್ವಜನಿಕ ಬದುಕೇ ಇಲ್ಲವೆನ್ನುವಂತಹ ವಾತಾವರಣವಿದೆ. ಮಹಿಳಾ ಸದಸ್ಯೆಯರ ಜಗತ್ತು ಕೇವಲ ಖಾಸಗಿಯಾದದ್ದು ಮತ್ತು ಕುಟುಂಬ ಸಂಬಂಧಿಯಾದುದು ಎಂಬ ಲಿಂಗತಾರತಮ್ಯವಾದಿ ಧೋರಣೆಯು ಸಮಾಜದಲ್ಲಿ ಬೇರೂರಿದೆ. ಇದಕ್ಕೆ ಪೂರಕವೆನ್ನುವಂತೆ ನಮ್ಮ ಸಮಾಜದ ಮಹಿಳಾ ಸದಸ್ಯೆಯರು ಗೃಹಿಣಿ, ಸೊಸೆ, ತಾಯಿ ಎನ್ನಿಸಿಕೊಳ್ಳುವುದೇ ನಮ್ಮ ಬದುಕಿನ ಪರಮೋಚ್ಛ ಧ್ಯೇಯವೆಂದು ಭಾವಿಸಿ ಹಾಗೆ ನಡೆದುಕೊಳ್ಳುತ್ತಾರೆ. ಭಾರತೀಯ ಸಮಾಜದ ಬಹುಮುಖ್ಯ ಶಕ್ತಿಯೆಂದರೆ ಪಿತೃಪ್ರಧಾನ ಯಜಮಾನ ಪದ್ಧತಿ. ಪಿತೃಪ್ರಧಾನ ಯಜಮಾನ ಪದ್ಧತಿಯ ಮುಖ್ಯಸಂಸ್ಥೆ ಕುಟುಂಬ. ಅದರ ಮುಖ್ಯಸ್ಥ ಪುರುಷ. ಮಹಿಳೆಗೆ ವಿದ್ಯೆ, ಜ್ಞಾನ, ಗೌರವ ಏನೊಂದೂ ಸಿಗಬೇಕಾದರೆ ಅವನ ಅನುಮತಿ ಬೇಕು. ಇಂತಹ ಬೆಳವಣಿಗೆ ಅವಳಲ್ಲಿ ದಾಸ್ಯತೆಯನ್ನು ಹುಟ್ಟು ಹಾಕಿತು. ತಾನು ಯಾತಕ್ಕೂ ಬೇಡವಾದವಳು. ಸೇವೆಯೊಂದೇ ನನ್ನ ಭಾಗ್ಯ ಎನ್ನುವ ನಂಬಿಕೆಯನ್ನು ಬೆಳೆಸಿತು. ವಿಚಾರದಲ್ಲಾಗಲಿ, ಕ್ರಿಯೆಯಲ್ಲಾಗಲಿ ಮಹಿಳೆ ಸ್ವತಂತ್ರ ಮನೋಭಾವ ತೋರದಂತಹ ಪರಿಸ್ಥಿತಿಯನ್ನು ನಿರ್ಮಿಸಿತು.

ಮಧ್ಯಮವರ್ಗದ ಮಹಿಳೆ ಸುಶಿಕ್ಷಿತಳಾಗಿದ್ದು, ಆಧುನಿಕ ಉಡುಗೆ ತೊಡುಗೆ, ಸಮಾಜದಲ್ಲಿ ಉತ್ತಮ ಸ್ಥಾನ ಹೊಂದಿದ್ದು ಹಿಂಜರಿಕೆಯ ಪ್ರವೃತ್ತಿಯಿಂದ, ಪರಂಪರಾಗತವಾಗಿ ಬಂದಿರುವ ಮಾನಸಿಕ ದಾಸ್ಯದಿಂದ ಹೊರ ಬರಲು ಪ್ರಯತ್ನ ನಡೆಸಿರುವಾಗ, ಗ್ರಾಮೀಣ ಪರಿಸರದಲ್ಲಿ ಸಮಾಜದ ಶ್ರೇಣಿಯಲ್ಲಿ ಅತ್ಯಂತ ಕೆಳಮಟ್ಟದಲ್ಲಿದ್ದು, ಬಡತನದ ರೇಖೆಗಿಂತ ಕೆಳಗಿರುವ, ಜಾತಿ, ಬಡತನದ ಕೀಳಿರಿಮೆಯನ್ನು ಅನುಭವಿಸುತ್ತಿರುವ ಗ್ರಾಮಪಂಚಾಯತಿಯ ಹೆಚ್ಚಿನ ಮಹಿಳಾ ಸದಸ್ಯೆಯರು ತಮ್ಮ ಅಧಿಕಾರವನ್ನು ಹೇಗೆ ಚಲಾಯಿಸುವರು ಎಂಬ ಅನುಮಾನ ಸಹಜವಾಗಿ ಬರುತ್ತದೆ. ಹೊಸಪೇಟೆ ಮತ್ತು ಸಂಡೂರು ತಾಲ್ಲೂಕು ಗ್ರಾಮಪಂಚಾಯತಿಯ ಅನೇಕ ಸದಸ್ಯೆಯರಿಗೆ ಗ್ರಾಮಪಂಚಾಯತಿ, ರಚನೆ ಅದರ ಅಧಿಕಾರ, ವ್ಯಾಪ್ತಿ, ಉದ್ದೇಶ, ವಿಕೇಂದ್ರೀಕರಣ, ಜನಪ್ರತಿನಿಧಿಗಳ ಆಯ್ಕೆ, ಅವರ ಅಧಿಕಾರ, ವ್ಯಾಪ್ತಿ ಇಂತಹ ವಿಷಯಗಳು ಗೊತ್ತೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಗ್ರಾಮ ಪಂಚಾಯತಿ ಮೂಲಕ ಚುನಾವಣೆಯಲ್ಲಿ ಆರಿಸಿ ಬಂದು ಸಂಖ್ಯೆಯ ಮೂಲಕ ರಾಜಕೀಯದಲ್ಲಿ ಭಾಗವಹಿಸಿರಬಹುದು. ರಾಜಕೀಯ ನೀತಿ, ನಿರೂಪಣೆ, ನಿರ್ಣಯ ಕೈಗೊಳ್ಳುವಿಕೆಯಲ್ಲಿ ಇಂತಹ ಮಹಿಳೆಯರು ಕ್ರಿಯಾಶೀಲರಾಗಿ ಪಾಲ್ಗೊಳ್ಳುವುದು ಕಷ್ಟದಾಯಕವಾಗಿರುತ್ತದೆ.

ಅಮರ್ತ್ಯಸೇನ್‌ರ ಧಾರಣಶಕ್ತಿಯ ಹಾಗೂ ರಾಜಕೀಯ ಸಾಮಾಜೀಕರಣದ ನಿಯೋಗಗಳ ಹಿನ್ನೆಲೆಯಲ್ಲಿ ಚುನಾಯಿತ ಮಹಿಳೆಯರು ಸಂಖ್ಯಾತ್ಮಕವಾಗಿ ರಾಜಕೀಯದಲ್ಲಿ ಪಾಲ್ಗೊಂಡರೂ, ರಾಜಕೀಯ ನೀತಿ ನಿರೂಪಣೆ ಹಾಗೂ ನಿರ್ಣಯ ಕೈಗೊಳ್ಳುವಂತಹ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವುದು ಕ್ರಿಯಾಶೂನ್ಯ(Inactive level) ಮಟ್ಟದಲ್ಲಿರುವುದು ಗೋಚರವಾಗುತ್ತಿದೆ. ಪ್ರಾಸಂಗಿಕ ಕ್ರಿಯಾಶೀಲ (Occasionally active level) ಮಟ್ಟದಲ್ಲಿ ಪಾಲ್ಗೊಳ್ಳುವುದು ಗೋಚರಿಸಿದಂತೆ ಕಂಡುಬಂದರೂ ಕ್ಷೇತ್ರಕಾರ್ಯದ ಅಧ್ಯಯನದ ಫಲಿತಗಳಿಂದ ಕ್ರಿಯಾಶೂನ್ಯ ಮಟ್ಟದ ಪಾಲ್ಗೊಳ್ಳುವಿಕೆಯ ತೀರ್ಮಾನಕ್ಕೆ ಬರಬೇಕಾಗಿರುವುದು ವಿಷಾದ ಎನಿಸುತ್ತದೆ. ಆದರೆ ಆಯ್ಕೆಯಾಗಿರುವ ಮಹಿಳಾ ಸದಸ್ಯೆಯರು ದುರ್ಬಲರಲ್ಲ. ಅವರಿಗೆ ಮೊದಲು ಸಾಮಾಜಿಕವಾದಂತಹ ಧಾರಣಶಕ್ತಿಯ ಅಗತ್ಯವಿದೆ. ಈ ಮೂಲಕ ಆರ್ಥಿಕವಾಗಿ ಸಶಕ್ತಳಾದರೆ ರಾಜಕೀಯ ಧಾರಣಶಕ್ತಿ ಪಡೆಯಲು ಸಾಧ್ಯವಾಗುತ್ತದೆ. ರಾಜಕೀಯ ತರಬೇತಿಯನ್ನು ನೀಡಿದರೆ ಆತ್ಮವಿಶ್ವಾಸದಿಂದ ಸದಸ್ಯೆಯಾಗಿ, ಉಪಾಧ್ಯಕ್ಷೆ, ಅಧ್ಯಕ್ಷೆಯಾಗಿ ಗ್ರಾಮವನ್ನು ಪ್ರಗತಿಪಥದಲ್ಲಿ ಮುನ್ನಡೆಸುವುದರಲ್ಲಿ ಅನುಮಾನಗಳೇ ಇರುವುದಿಲ್ಲ.

ವಿಭಿನ್ನ ಸಾಮಾಜಿಕ, ಆರ್ಥಿಕ, ಲಿಂಗಾಧಾರಿತ ಸ್ತರಗಳನ್ನು ಹೊಂದಿರುವ ನಮ್ಮ ಸಮಾಜದಲ್ಲಿ ಏಕರೀತಿಯ ಅಭಿವೃದ್ಧಿ ಅಥವಾ ಆಚರಣೆ ಸಾಧುವಲ್ಲ. ಇಂದು ನಿರ್ಮಾಣವಾಗುತ್ತಿರುವ ತಾಂತ್ರಿಕ ಕೌಶಲ್ಯಗಳು, ಅದರಿಂದ ಉಂಟಾದ ಔದ್ಯೋಗಿಕರಣಗಳು, ವಿಕೇಂದ್ರೀಕರಣ, ಮುಂತಾದ ಸಂಗತಿಗಳು ಸಾಮಾಜಿಕ ರಚನೆಯಲ್ಲಿ ಅದರ ಆಡಳಿತಾತ್ಮಕ, ಕೌಟುಂಬಿಕ, ಆರ್ಥಿಕವಾದಂತಹ ಸ್ವರೂಪಗಳಲ್ಲಿಯೂ ತೀವ್ರತರದ ಪರಿವರ್ತನೆಗಳನ್ನು ಸಾಧ್ಯವಾಗಿಸುತ್ತಿದೆ. ಇವು ತಳಮಟ್ಟದ ಸಾಮಾಜಿಕ ಪರಿಚಲನೆಗೆ, ಸಾಂಪ್ರದಾಯಿಕವಾದ ಯಜಮಾನಿಕೆಯ ಬದಲಾವಣೆಗೆ ಬಹುಮುಖ್ಯ ಸಂಗತಿಗಳಾಗಿವೆ. ಇಂದಿನ ಜಾಗತೀಕರಣದ ಫಲಿತಗಳು ಕೂಡ ಹಲವಾರು ರೀತಿಯ ಮಿಸುಕಾಟಗಳನ್ನು ಸಮಾಜದ ಸಂರಚನೆಯಲ್ಲಿ ಹುಟ್ಟು ಹಾಕಿವೆ. ಇಂತಹ ಸಂಗತಿಗಳು ತೀವ್ರತರದಲ್ಲಿ ಗ್ರಾಮ ಸಮಾಜಗಳನ್ನು ನಗರಗಳತ್ತ ವಲಸೆ ಹೋಗುವಂತೆ ಅಥವಾ ನಗರೀಕರಣದ ಭ್ರಮೆಗಳನ್ನು ಮೈಗೂಡಿಸಿ ಕೊಳ್ಳುವಂತೆ ಗ್ರಾಮ ಸಮಾಜಗಳನ್ನು ಪ್ರೇರೇಪಿಸುತ್ತಿವೆ. ಇಂತಹ ಪರಿವರ್ತನೆಗಳು ಆಧುನಿಕ ಕುಟುಂಬ ರಚನೆ, ಗಾತ್ರ, ಯಜಮಾನಿಕೆ, ಆರ್ಥಿಕ ವ್ಯವಹಾರ, ಸಾಮಾಜಿಕ ಸ್ಥಾನಮಾನ, ಮಹಿಳೆಯರಿಗಿರುವ ಸ್ಥಾನಮಾನ, ವಿವಾಹ ಪದ್ಧತಿ, ಮಹಿಳಾ ರಾಜಕೀಯ ಭಾಗಿತ್ವ ಮತ್ತು ನಿರ್ಣಯ ಪ್ರಕ್ರಿಯೆಗಳ ಮೇಲೆ ಪರಿಣಾಮಕಾರಿಯಾದ ಪ್ರಭಾವವನ್ನು ಬೀರುತ್ತಿವೆ. ಈ ಎಲ್ಲ ಅರಿವಿನ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಮತ್ತು ಸಂಡೂರು ತಾಲ್ಲೂಕಿನ ಗ್ರಾಮಪಂಚಾಯತಿಗಳಲ್ಲಿ ಮಹಿಳೆಯ ಭಾಗವಹಿಸುವಿಕೆಯ ಮೂಲಕ ನೀತಿ ನಿರೂಪಣೆ, ತೀರ್ಮಾನ ಕೈಗೊಳ್ಳುವಿಕೆಯಲ್ಲಿ ಚುನಾಯಿತ ಮಹಿಳಾ ಸದಸ್ಯೆಯರ ಪಾತ್ರವನ್ನು ಅಧ್ಯಯನಿಸಲು ಪ್ರಯತ್ನಿಸಲಾಗಿದೆ.

[1] ಕರ್ನಾಟಕ ಪಂಚಾಯತ್‌ರಾಜ್ ಅಧಿನಿಯಮ, ೧೯೯೩; ೨೦೦೨

[2] ಪ್ರಜಾವಾಣಿ ದಿನಪತ್ರಿಕೆ, ದಿನಾಂಕ ೨೩.೩.೨೦೦೨

[3] ಮಂಜುಳಾ ಆರ್.ಕೆ., ‘ನಾಯಕತ್ವದ ಹೊಸ್ತಿಲಲ್ಲಿ ಮಹಿಳೆ’, ಪ್ರಜಾವಾಣಿ ಸಾಪ್ತಾಹಿಕ ಪುರವಣಿ, ಪು.೮, ದಿನಾಂಕ ೫.೩.೨೦೦೨

[4] ರಾಮಸಾಗರ ಗ್ರಾಮಪಂಚಾಯತಿ ಸದಸ್ಯೆಯರು

[5] ಹಂಪಿ ಮತ್ತು ಮೆಟ್ರಿ ಗ್ರಾಮಪಂಚಾಯತಿ ಸದಸ್ಯೆಯರು

[6] ಚಂದ್ರಶೇಖರ ಟಿ.ಆರ್.ಸಂ ವಿಕೇಂದ್ರಿಕರಣ ತತ್ವ ಮತ್ತು ಆಚರಣೆ, ೨೦೦೦; ಪು.೨೬