ಕಂಡಿಲ್ಲವೇ ನೀವು ?
ನಮ್ಮ ಸುತ್ತಲು ಸದಾ ಐದು ಮಂದಿಯ ಪಹರೆ –
ಹೋದಲ್ಲಿ, ಬಂದಲ್ಲಿ, ನಿಂತಲ್ಲಿ, ಕುಳಿತಲ್ಲಿ
ನಮ್ಮ ಮೇಲೇ ಇವರ ಹಸಿದ ಕಣ್ಣು !

ಹುಟ್ಟಿ ಕಣ್ ಬಿಟ್ಟಂದು ಮೈಗೆ ತೊಟ್ಟಿಲಿನಿತ್ತು
ತಾಯ ಕೊರಳಲಿ ಕುಳಿತು ಹಾಡಿದವರು.
ನೆಲದ ಹಸುರೊಳು ಮುಗಿಲ ಮಳೆಹನಿಯ ದಾರದಲಿ
ಹೂ ಕಸೂತಿಯ ಹೆಣೆದು ಹಾಸಿದವರು,
ಬೆಳಗಾಗ ಬಾಗಿಲಲಿ ತುಂಬು ಕೆಚ್ಚಲ ಕರೆದು
ತುಟಿಗೆ ಕೊಟ್ಟವರು,
ಹೆಜ್ಜೆ ಹೆಜ್ಜೆಗು ನಿಂತು ಕೈಹಿಡಿದು ಮೇಲೆತ್ತಿ
ಚಂದುಮಾಮನ ಕನಸ ಬಿತ್ತಿದವರು.
*     *     *

ನಾನು ನಂಬಿದೆನಿವರ : ಬಣ್ಣದಲಿ ಬೆರಗಿನಲಿ
ಬೆರೆದರಿವರು.
ಮರ ಮರದ ತುಂಬ ಹಕ್ಕಿಯ ಲಾಲಿ, ತಳಿರಿನ ಜೋಲಿ ;
ಹೂವಿನ ಹೋಳಿ-ಬುಗ್ಗೆ ಬುಗ್ಗೆ !
ಕಂಡ ಕಂಡೆಡೆಯಲ್ಲಿ ಕೈಚಾಚಿ ನುಗ್ಗಿದೆನು
ಇವರ ಜೊತೆಗೆ
ನೂರು ಕೊಂಬೆಗೆ ನೆಗೆದು, ಗುಡ್ಡ ಬೆಟ್ಟವನೇರಿ
ಮೋಡವಾಗಲೆದು,
ದೂರ ಕಡಲಿಗೆ ಬೆದರಿ, ಸುಳಿದು ಸುತ್ತಿ,
ಕಡೆಗೆ ಕಾಮನಬಿಲ್ಲ್ಲ ಜಾರುಗುಪ್ಪೆಯನಾಡಿ
ಬಂಡೆ ಬಂಡೆಯ ಬುಡಕೆ ಬಂದು ನಿಂತೆ,
ಹೆಗಲ ಮೇಲೇರಿತ್ತು ದೊಡ್ಡ ಕಂತೆ.

ನಸುನಕ್ಕರೈದು ಜನ-
ತಂತುಕೃತಿಯಂಥ ನಗು, ನವುರು ನವುರು.
ಗೋಡೆಯ ಮೇಲೆ ಹಲ್ಲಿಯ ನೆರಳು
ನೆರಳಲ್ಲ, ಗಡಿಗೆ ಕಣ್ಣಿನ ಸರಳು ಸೆಳೆದಿತ್ತು ದೂರ ಹಾರುವ ನೊಣವ
ಅಂಟು ನಾಲಗೆ ಚಾಚಿ !
ಮನೆಯಂಗಳದಿ ಆಗ ತಾನೇ ಅರಳಿ ಮುದ್ದಾದ ಮಲ್ಲಿಗೆಗೆ
ಬಾಯಿ ಹಾಕಿತ್ತೊಂದು ಕಪ್ಪು ಕೋಣ
ಮುದಿಯ ಮರ ಲಟಕಟಿಸಿ ಉರುಳಿತ್ತು
ಸೆಳೆದಿತ್ತು ಬಿರುಗಾಳಿಯುರುಳು,
ಅಲ್ಲೆಲ್ಲ ಕಾಣಿಸಿತು ಇವರ ನೆರಳು !
*     *     *

ಬಾಡಿಗೆಯ ಮನೆಯಿಂದ ಬಾಡಿಗೆಯ ಮನೆಗೆ ನಡೆದಿರುವೆ,
ಇರುವ ಮನೆಯನು ಮೊದಲು ಸರಿಮಾಡಿಕೋ.
ಕಸ ಗುಡಿಸು ; ದೀಪವ ಹಚ್ಚು ; ಈ ಐವರನು ನಂಬದಿರು
ಆದಷ್ಟು ದೂರವಿರಿಸು –

ಬಿಡಲಿಲ್ಲ ಇವರೆನ್ನ,
ಸದಾ ಜೊತೆಗೂಡಿ, ನನ್ನೊಡನೆ ಜಗ್ಗುವುದೆ ಕೆಲಸ
ದೂರ ಹಾರುವ ಪಟವ ಮತ್ತೆ ಮತ್ತೆ !
ರೇಗಿತು ನನಗೆ-
ಎಳೆಯಂದು ಸಾಕುತಾಯಾದವರು.

ಹರೆಯದಲಿ ಜೊತೆಗೂಡಿ ನಿಂದವರು,
ಒಳಮನೆಯ ಆಡಳಿತದಲಿ ಆಪ್ತರಾದವರಿವರು,
ಸರ್ವದಾ ಬೆನ್ನ ಬಿಡದಂತೆ ನೆರಳಾಗಿ ಸುಳಿವವರು,
ಇವರ ಮೇಲೇ ನಾನು ಹೂಡಬೇಕೇ ಯುದ್ಧ
ಹಿಡಿಯಬೇಕೇ ಇನ್ನು ಬಿಲ್ಲುಬಾಣ ?
‘ಕ್ಷುದ್ರಂ ಹೃದಯಂ ದೌರ್ಬಲ್ಯಂ
ತ್ಯಕ್ತೋತ್ತಿಷ್ಠ ಪರಂತಪ’
ನಾನೇನು ಪಾರ್ಥನೆ ? ಆದರೂ ಕಾದಿದೆನು ಹಗಲು ಇರುಳು.
ಚುಚ್ಚಿದವು ಹತ್ತಾರು ಕೆಂಪು ಸರಳು.

ಅಲ್ಲಿಂದೀಚೆ, ನಾನು ನಾನೇ ಆದೆ ; ನಿಂತೆ.
ಬೆಳ್ಗೊಳದ ಗೊಮ್ಮಟನ ನಗೆಯ ಬೆಳದಿಂಗಳಡಿ ಕಣ್ಣ ತೆರೆದು-
ಇವರೆಲ್ಲ ನಮ್ಮವರೆ, ನಿಜ, ನಾನೊ ಆಗಂತಕನು
ತೀರ್ಥಯಾತ್ರಿ,
ಇವರ ಛತ್ರದೊಳಿದ್ದು, ತೆರುವುದನು ತೆತ್ತು ನಡೆಯುವೆನು
ಒಂದು ರಾತ್ರಿ.
ಹಿಡಿಯಲಾರದು ನನ್ನ ಇವರಾವ ಸೂತ್ರವೂ,
ನಾನು ನಿರ್ಲಿಪ್ತ ;
ಬೆಂಕಿಯು ಸುಡದು ; ನೀರು ನೆನಸದು ; ಮಣ್ಣು ಮೆತ್ತದು ;
ಗಾಳಿ ಹಾರಿಸದು, ಪಂಚಭೂತದ ಸಂಚು ತಟ್ಟದು ಇನ್ನು
ನಾ ಸ್ಥಿತಪ್ರಜ್ಞ.

ನಿರ್ಧಾರವನು ಕೇಳಿ ನಸುನಕ್ಕರೈವರೂ-
‘ಪಗೆಗೆ ಪಗೆ, ಕೆಳೆಗೆ ಕೆಳೆ,’ ನಾವು.
ಹಾರೈಸುವೆವು, ನೀನಾಗು ಬುದ್ಧ ;
ನಿನ್ನ ಸೇವೆಗೆ ನಾವು ಎಂದಿಗೂ ಸಿದ್ಧ.