ಮಂಗಳೂರಿನ ಹಿರಿಯ ನೃತ್ಯ ವಿದ್ವಾಂಸರಾದ ಶ್ರೀ ಯು. ಎಸ್. ಕೃಷ್ಣರಾವ್ ಅವರ ಪುತ್ರಿ ಶ್ರೀಮತಿ ನಿರ್ಮಲಾ ಮಂಜುನಾಥ್ ನೃತ್ಯದಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ತಮ್ಮ ತಂದೆಯವರಿಂದಲೇ ಪಡೆದುಕೊಂಡರು. ನಂತರ ಶೊರನೂರ್ ರಾಜರತ್ನಂ ಪಿಳ್ಳೈ ಅವರಲ್ಲಿ ಭರತನಾಟ್ಯದಲ್ಲಿ ಹೆಚ್ಚಿನ ಶಿಕ್ಷಣ ಮತ್ತು ಶ್ರೀ ರಾಜನ್ ಅಯ್ಯರ್ ಅವರಲ್ಲಿ ಕಥಕ್ಕಳಿಯಲ್ಲಿ ತರಬೇತಿ ಪಡೆದರು. ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲೂ ಶ್ರೀಮತಿ ನಿರ್ಮಲಾ ಪರಿಶ್ರಮವನ್ನು ಹೊಂದಿದ್ದಾರೆ.

ತಮ್ಮ ನಾಲ್ಕರ ವಯಸ್ಸಿನಲ್ಲೇ ನೃತ್ಯ ಕಾರ್ಯಕ್ರಮ ನೀಡಲು ಆರಂಭಿಸಿದ ಶ್ರೀಮತಿ ನಿರ್ಮಲಾ ಅವರು, ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ತಮ್ಮ ನಿರ್ಮಲಾ ನೃತ್ಯ ನಿಕೇತನ ಸಂಸ್ಥೆಯ ಮೂಲಕ ನೂರಾರು ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದಾರೆ. ತಮ್ಮ ನೃತ್ಯ ಶಾಲೆಯಲ್ಲಿ ನೃತ್ಯದ ಜೊತೆಗೆ ಯೋಗ, ಸಂಗೀತ ಮುಂತಾದ ವಿಭಾಗಗಳಲ್ಲೂ ನುರಿತ ಶಿಕ್ಷಕರಿಂದ ತರಬೇತಿಗೆ ವ್ಯವಸ್ಥೆ ಮಾಡಿದ್ದಾರೆ. ದೇಶ ವಿದೇಶಗಳಲ್ಲಿ ಇವರ ಶಾಲೆಯ ನೃತ್ಯ ಕಾರ್ಯಕ್ರಮಗಳು ಜನಮನ್ನಣೆ ಪಡೆದಿವೆ. ಕಳೆದ ಐದು ವರ್ಷಗಳಿಂದ ಬೆಂಗಳೂರಿನ ಶ್ರೀ ತರಳಬಾಳು ಕಲಾ ಕೇಂದ್ರ ಮತ್ತು ಕೇಂದ್ರೀಯ ವಿದ್ಯಾಲಯಗಳಲ್ಲಿ ಹಾಗೂ ಕೆಂಗೇರಿಯ ಜ್ಞಾನಭೋದಿನಿಗಳಲ್ಲಿ ನೃತ್ಯ ಶಿಕ್ಷಕಿ ಮತ್ತು ನೃತ್ಯ ಸಂಯೋಜಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ನೃತ್ಯ ಮತ್ತು ಸಂಗೀತಕ್ಕೆ ಸಂಬಂಧಪಟ್ಟ ಹಲವಾರು ಸಂಘ ಸಂಸ್ಥೆಗಳ ಒಡನಾಟವಿರಿಸಿಕೊಂಡು ತಮ್ಮ ಸೇವೆಯನ್ನು ವಿಸ್ತರಿಸಿಕೊಂಡಿದ್ದಾರೆ.

ಶ್ರೀಮತಿ ನಿರ್ಮಲಾ ಮಂಜುನಾಥ್ ಅವರ ನೃತ್ಯ ಕ್ಷೇತ್ರದ ಸೇವೆಯನ್ನು ಗುರುತಿಸಿ ಬೆಂಗಳೂರು ದಕ್ಷಿಣ ಕನ್ನಡಿಗರ ಸಂಘ ’ನಾಟ್ಯ ಕಲಾ ಪ್ರಪೂರ್ಣೆ’ ಮತ್ತು ಯಶವಂತಪುರದ ಶ್ರೀ ಗಾಯತ್ರೀ ದೇವಾಲಯ ’ನಾಟ್ಯ ಕಲಾ ಶಾರದೆ’ ಬಿರುದುಗಳನ್ನು ನೀಡಿ ಗೌರವಿಸಿದೆ. ಶ್ರೀಮತಿ ನಿರ್ಮಲಾ ಮಂಜುನಾಥ್ ಅವರ ಕಲಾಸಾಧನೆಯನ್ನು ಗುರುತಿಸಿ ತನ್ನ ೨೦೦೭-೦೮ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಗೌರವಿಸಿದೆ.