ಆಧುನಿಕ ಸಂಕಥನಗಳಲ್ಲಿ ನಿರ್ವಸಾಹತೀಕರಣ ಎನ್ನುವುದು ಬಹುವಾಗಿ ಬಳಕೆಯಾಗುತ್ತಿರುವ ಪದ. ಅದರಲ್ಲೂ ಮುಖ್ಯವಾಗಿ ವಸಾಹತೋತ್ತರ ಚಿಂತನೆಗಳಲ್ಲಿ ಅದನ್ನು ಪಾರಿಭಾಷಿಕ ಪದವಾಗಿ ಬಳಸಲಾಗುತ್ತದೆ. ವಾಸ್ತವವಾಗಿ ನಿರ್ವಸಾಹತೀಕರಣ ಎನ್ನುವ ಪದ ಎರಡು ರೀತಿಯಲ್ಲಿ ಬಳಕೆಯಾಗುತ್ತಲಿದೆ. ಅದರ ಚಾರಿತ್ರಿಕ ಅರ್ಥ ವ್ಯಾಪ್ತಿಯಲ್ಲಿ ವಸಾಹತು ಆಕ್ರಮಣವನ್ನು ಒಳಗೊಂಡು ಅದರಿಂದ ಬಿಡುಗಡೆಯನ್ನು ಹೊಂದುವ ಪ್ರಕ್ರಿಯೆಗೆ ನಿರ್ವಸಾಹತೀಕರಣ ಎಂದು ಗ್ರಹಿಸಲಾಗುವುದು ಒಂದು ರೀತಿಯಾದರೆ, ಇನ್ನೊಂದು, ಅದನ್ನು ಆಧುನಿಕ ಪರಿಭಾಷೆಯಾಗಿ ಬಳಸಿದಾಗ ವಿಶಾಲಾರ್ಥದಲ್ಲಿ ಭಾಷೆ, ಸಂಸ್ಕೃತಿ, ಶಿಕ್ಷಣ, ಸಾಹಿತ್ಯ, ರಾಜಕೀಯ, ಆರ್ಥಿಕ ವಲಯಗಳಿಗೆ ಅನ್ವಯಿಸುವಂತೆ ಯಾಜಮಾನ್ಯ ಧೋರಣೆಗಳನ್ನು ಎದುರಿಸುವುದು ಮತ್ತು ಪರ್ಯಾಯ ನೆಲೆಗಳನ್ನು ಕಂಡುಕೊಳ್ಳುವುದು ಎನ್ನುವ ಮೀಮಾಂಸಾತ್ಮಕ ದೃಷ್ಟಿಯಲ್ಲಿಯೂ ಬಳಸಲಾಗುತ್ತದೆ. ನಿರ್ವಸಾಹತೀಕರಣ ಹೀಗೆ ಎಲ್ಲಾ ಬಗೆಯ ಮಾನವಿಕಗಳನ್ನು ಒಳಗೊಳ್ಳುವ ಗುಣ ಹೊಂದಿರುವುದರಿಂದ ಅದನ್ನು ಒಂದು ಕ್ಷೇತ್ರಕ್ಕೆ ಸೀಮಿತಗೊಳಿಸಿ ಮಾತನಾಡುವುದು ಕಷ್ಟ. ಇದೊಂದು ಚಾರಿತ್ರಿಕ ಪ್ರಕ್ರಿಯೆ ಯಾಗಿರುವಂತೆಯೇ ಸಾಮಾಜಿಕ, ಸಾಂಸ್ಕೃತಿಕ, ಮಾನಸಿಕ ಪ್ರಕ್ರಿಯೆಗಳೂ ಆಗಿದೆ ಎನ್ನುವುದನ್ನು ಮರೆಯಲಾ‌ಗದು. ಒಂದೊಂದು ಪಾತಳಿಯಲ್ಲಿಟ್ಟು ನೋಡುವಾಗ ನಿರ್ವಸಾಹತೀಕರಣದ ಅರ್ಥಗಳು ವಿಭಿನ್ನವಾದ ವ್ಯಾಖ್ಯಾನಗಳನ್ನು ಪಡೆದುಕೊಳ್ಳುತ್ತವೆ.

ನಿರ್ವಸಾಹತೀಕರಣವೆನ್ನುವ ಪದ ಈಗ ಒಂದು ವಿಮರ್ಶಾತ್ಮಕ ನುಡಿಗಟ್ಟಾಗಿದೆ. ದಾಸ್ಯದಿಂದ ಮುಕ್ತಗೊಳ್ಳುವುದೆಂಬ ಪ್ರಾಥಮಿಕ ಅರ್ಥದಿಂದ ಹಿಡಿದು ಅನೇಕ ಯಾಜಮಾನ್ಯ ಪ್ರಭಾವಗಳಿಂದ ಬಿಡಿಸಿಕೊಳ್ಳುವ ಪ್ರಕ್ರಿಯೆಯನ್ನೂ ಸಹ ನಿರ್ವಸಾಹತೀಕರಣ ಎಂದು ಗುರುತಿಸಲಾಗುತ್ತಿದೆ. ನಿರ್ವಸಾಹತೀಕರಣ ಎನ್ನುವುದು ಮೊದಲು ಯಜಮಾನಿಕೆಯನ್ನು ಗುರುತಿಸಿಕೊಳ್ಳುವುದಾಗಿರುತ್ತದೆ. ಎರಡನೆಯ ಹಂತದಲ್ಲಿ ಅದರಿಂದ ಬಿಡುಗಡೆಯನ್ನು ಪಡೆಯುವತ್ತ ಕ್ರಿಯಾಶೀಲವಾಗಿರು ವಂತದ್ದಾಗಿರುತ್ತದೆ. ಹಾಗೆಂದೇ ಗುರುತಿಸಿಕೊಳ್ಳುವಿಕೆ ಮತ್ತು ಬಿಡುಗಡೆಯನ್ನು ಹೊಂದುವುದು ಎರಡೂ ನಿರ್ವಸಾಹತೀಕರಣದ ಪ್ರಕ್ರಿಯೆಗಳೇ ಆಗಿವೆ.

ನಿರ್ವಸಾಹತೀಕರಣವನ್ನು ಗುರುತಿಸುವ ಬಗೆ ಹೇಗೆ? ವಸಾಹತು ಆಕ್ರಮಣಗಳನ್ನೇ ತೆಗೆದುಕೊಂಡರೆ ಅವು ದೈಹಿಕವಾಗಿಯೂ ಸಂಭವಿಸುವಂತದ್ದು, ಮಾನಸಿಕವಾಗಿಯೂ ಆಗುವಂತದ್ದು. ಯಾವುದನ್ನು ಪ್ರಮಾಣ ಎಂದು ತೆಗೆದುಕೊಳ್ಳಬೇಕು? ಜೊತೆಗೆ ಬಿಡುಗಡೆಯ ಪ್ರಶ್ನೆ ಎನ್ನುವುದು ಯಾವಾಗಲೂ ಜಟಿಲವಾದ ಪ್ರಶ್ನೆಯೇ ಆಗಿರುತ್ತದೆ. ಬಿಡುಗಡೆಯು ದೈಹಿಕವಾದದ್ದೇ ಅಥವಾ ಮಾನಸಿಕವೇ? ವಸಾಹತೋತ್ತರ ಕಾಲದಲ್ಲಿ ವಸಾಹತುಶಾಹಿ ಉಳಿಸಿಹೋದ ಅನುಭವಗಳ ನೆನಪು ಆಳವಾಗಿ ಬೇರೂರಿರುವುದರಿಂದ ಅದನ್ನು ತೊಡೆದು ಹಾಕುವುದು ಸುಲಭವಲ್ಲ. ಅಲ್ಲದೆ, ಸಾಮಾಜಿಕ ಸಂರಚನೆಗಳಲ್ಲಿ ವಸಾಹತುಶಾಹಿಯ ಪ್ರಭಾವ ದಟ್ಟವಾಗಿಯೇ ಇರುತ್ತದೆ. ಅವುಗಳನ್ನು ಕಳಚಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಹುಟ್ಟುತ್ತದೆ. ಆನಂತರದಲ್ಲಿ ಹೊಸ ಸಂರಚನೆಗಳನ್ನು ರೂಪಿಸಿಕೊಳ್ಳುವ ಸಂದರ್ಭದಲ್ಲಿ ಆ ಪ್ರಕ್ರಿಯೆಗೆ ಆಕರಗಳೇನು ಎಂಬ ಪ್ರಶ್ನೆ ಹುಟ್ಟುತ್ತದೆ. ಆದ್ದರಿಂದ ನಿರ್ವಸಾಹತೀಕರಣ ಒಂದು ಸಂಕೀರ್ಣವಾದ ಪ್ರಕ್ರಿಯೆ.

ನಿರ್ವಸಾಹತೀಕರಣದ ಪ್ರಕ್ರಿಯೆಯು ಒಂದು ಹಂತದಲ್ಲಿ ಸಂಭವಿಸುವಂತದ್ದಲ್ಲ. ಅದಕ್ಕೆ ಹಲವಾರು ಹಂತಗಳಿವೆ. ವಸಾಹತು ಆಕ್ರಮಣದ ಹಿನ್ನೆಲೆಯಲ್ಲಿ ಹುಟ್ಟಿದ ಈ ಪದಕ್ಕೆ ಸಹಜವಾಗಿಯೇ ಒಂದು ಚಾರಿತ್ರಿಕ(ಡಯಾಕ್ರಾನಿಕ್) ದಾಟು‌ಗಳಿವೆ. ಅನೇಕ ದೇಶಕಾಲಗಳಲ್ಲಿ ವಸಾಹತುಶಾಹಿಯ ಆಗಮನ ಮತ್ತು ಅದರ ನಿರ್ಗಮನ ನಡೆಯುವುದರಿಂದ ಒಂದೊಂದು ದೇಶದ ನಿರ್ವಸಾಹತೀಕರಣದ ಕಾಲಘಟ್ಟ ವಿಭಿನ್ನವಾಗಿರುತ್ತದೆ ಮತ್ತು ವಸಾಹತುಶಾಹಿಯನ್ನು ಒಂದೊಂದು ದೇಶ ಗ್ರಹಿಸುವುದು ಕೂಡ ವಿಭಿನ್ನವಾಗಿರುತ್ತದೆ. ಆದರೆ ಇಂದು ಅಭ್ಯಾಸದ ಅನುಕೂಲಕ್ಕಾಗಿ ವಸಾಹತು ಅಡಳಿತಕ್ಕೆ ಒಳಪಟ್ಟ ದೇಶಗಳನ್ನು ಒಂದು ಸಾಲಿನಲ್ಲಿಟ್ಟು ನೋಡಲಾಗುತ್ತಿದೆ. ವಸಾಹತುಶಾಹಿಯ ಪಾತ್ರದಲ್ಲಿ ಸಾಮಾನ್ಯವಾಗಿ ಯೂರೋಪಿನ ದೇಶಗಳೇ ಇರುವುದರಿಂದ ವಸಾಹತು ರಾಷ್ಟ್ರಗಳೆಂದರೆ ಬಿಳಿಯರ ಆಳ್ವಿಕೆ ಮತ್ತು ಅವುಗಳಿಗೆ ಅಧೀನಕ್ಕೆ ಒಳಪಟ್ಟ ದೇಶಗಳು ತೃತೀಯ ರಾಷ್ಟ್ರಗಳೆಂದೂ ಗುರುತಿಸಲಾಗುತ್ತದೆ. ಅಥವಾ ಬಿಳಿಯರು ಮತ್ತು ಕರಿಯರು ಎಂದು ಜನಾಂಗೀಯ ರೂಪದಲ್ಲಿ ಗುರುತಿಸಲಾಗುತ್ತದೆ. ಆದರೆ ವಸಾಹತುಶಾಹಿ ಆಡಳಿತಕ್ಕೆ ಒಳಪಟ್ಟವರು ಏಕರೂಪವಾದ ಗುಂಪುಗಳಲ್ಲಿ. ಹಾಗಾಗಿ ಅವುಗಳ ನಿರ್ವಸಾಹತೀಕರಣದ ನೆಲೆಗಳು ಕೂಡ ಬಹು‌ತ್ವದಿಂದ ಕೂಡಿರುತ್ತವೆ. ಅಂದರೆ ಬಹುಸ್ತರದಲ್ಲಿ ನಡೆಯುವ ಪ್ರಕ್ರಿಯೆಯಾಗಿ ನಿರ್ವಸಾಹತೀಕರಣವನ್ನು ಗ್ರಹಿಸಬೇಕಾಗಿದೆ ಎನ್ನುವುದನ್ನು ಈ ಅಧ್ಯಯನದಲ್ಲಿ ಮರೆಯುವಂತಿಲ್ಲ.

ವಸಾಹತು ಆಡಳಿತಕ್ಕೆ ಒಳಪಟ್ಟ ದೇಶಗಳಲ್ಲಿ ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡುತ್ತಿರುವಾಗಲೇ ದೇಶಿಯ ಸಮಾಜಗಳಲ್ಲಿದ್ದ ಯಜಮಾನಿಕೆಯ ಸ್ವರೂಪಗಳನ್ನು ಗುರುತಿಸಿಕೊಳ್ಳುವ ಪ್ರಕ್ರಿಯೆಯೂ ಸಮಾನವಾಗಿ ನಡೆಯತೊಡಗಿತು. ಇವನ್ನು ಕೂಡ ನಿರ್ವಸಾಹತೀಕರಣದ ಪ್ರಕ್ರಿಯೆಗಳಾಗಿಯೇ ಗುರುತಿಸಬಹುದು. ವಿಶಾಲಾರ್ಥದಲ್ಲಿ ಎಲ್ಲ ದೇಶ, ಭಾಷೆಗಳ ಸಬಾಲ್ಟ್ರನ್ ಪ್ರಜೆಗಳನ್ನೊಳಗೊಂಡಂತೆ ವಿಮೋಚನೆ ಎನ್ನುವುದನ್ನು ವಿಶದೀಕರಿಸಿಕೊಳ್ಳಲಾಗುತ್ತದೆ. ಜಗತ್ತಿನಾದ್ಯಂತ ಅನೇಕ ಭೇದಗಳು, ತರತಮಗಳಿದ್ದು ಅವುಗಳ ವಿಮೋಚನೆಯನ್ನು ಇಂದು ನಿರ್ವಸಾಹತೀಕರಣದ ನೆಲೆಯಲ್ಲಿಯೇ ಗುರುತಿಸಲಾಗುತ್ತದೆ ಎನ್ನುವುದನ್ನು ಗಮನಿಸಬೇಕು. ಆದ್ದರಿಂದ ನಿರ್ವಸಾಹತೀಕರಣವನ್ನು ಯೂರೋಪು ಮುಂತಾದ ದೇಶಗಳಿಂದ ಉಂಟಾದ ವಸಾಹತು ಆಕ್ರಮಣ ದೇಶಗಳಲ್ಲಿ ಗುರುತಿಸುವುದು ಮತ್ತು ಯೂರೋಪು ಕೇಂದ್ರಗಳನ್ನು ಒಡೆಯುವುದು ಒಂದು ನೆಲೆಯಾದರೆ, ಇನ್ನೊಂದು ಸಬಾಲ್ಟ್ರನ್ ಪರಿಕಲ್ಪನೆಯಲ್ಲಿ ವ್ಯಾಪಕವಾಗಿ ಬಿಡುಗಡೆಯನ್ನು ಆಶಿಸುವುದು ಎಂದಾಗುತ್ತದೆ. ಇದು ಒಂದರ್ಥದಲ್ಲಿ ಮಾರ್ಕ್ಸವಾದದ ಮಾತೃಕೆಯಂತೆಯೇ ಕಾಣುವ ವಿಮೋಚನೆಯ ಮಾರ್ಗ ಎನ್ನಬಹುದು. ಪ್ರಸ್ತುತ ಪುಸ್ತಿಕೆಯಲ್ಲಿ ಇಲ್ಲಿ ಹೇಳಿದ ಎರಡನ್ನೂ ಚರ್ಚಿಸುವ ಪ್ರಯತ್ನ ಮಾಡಲಾಗಿದೆ.

ಯೂರೋಪು ಕೇಂದ್ರವೂ ಓರಿಯೆಂಟಲ್ ಗ್ರಹಿಕೆಯೂ

ಎಡ್ವರ್ಡ ಸೈದ್ ಓರಿಯೆಂಟಲ್ ಚರ್ಚೆಯನ್ನು ಆರಂಭಿಸಿದವನು. ಅಧಿಕಾರವು ಮಾಹಿತಿ ಕಲೆಹಾಕುವಿಕೆ, ಮಾಹಿತಿಯನ್ನು ಕ್ರಮಬದ್ಧವಾಗಿ ಜೋಡಿಸುವಿಕೆಯೇ ಮೊದಲಾದ ಅನೇಕ ಜ್ಞಾನ ವ್ಯವಸ್ಥೆಗಳಿಂದ ತನ್ನ ಪ್ರಭುತ್ವವನ್ನು ಊರ್ಜಿತ ಗೊಳಿಸಿಕೊಳ್ಳುತ್ತದೆ ಎಂಬ ಫೋಕೊನ ಕಲ್ಪನೆಯನ್ನು ಸೈದ್ ತನ್ನ ವಾದದಲ್ಲಿ ಪ್ರಸ್ತುತಪಡಿಸುತ್ತಾನೆ. ಸೈದ್‌ನ ಪ್ರಕಾರ ದೇಶಿಯನಾದವನು ಹೋರಾಟದ ತಂತ್ರ ಮತ್ತು ತನ್ನದಾದ ಭಾಷೆಗಳನ್ನೇ ಕಳೆದುಕೊಳ್ಳುತ್ತಾನೆ. ಇದರಿಂದ ಪ್ರತಿಭಟನೆಯ ದಾರಿಗಳೂ ಮುಚ್ಚಿಕೊಂಡಂತಾಗುತ್ತದೆ. ಪುನರ‍್ಕಟ್ಟುವಿಕೆ ಎನ್ನುವುದು ಸೈದನ ಪ್ರಕಾರ ಸಾಧ್ಯವೇ ಇಲ್ಲ. ಏಕೆಂದರೆ ಆ ಕಟ್ಟುವಿಕೆ ಏನೆಂದರೂ ಮೊದಲಿನಂತಾಗಲು ಸಾಧ್ಯವಿಲ್ಲ. ಕಟ್ಟುವಿಕೆಯ ನಡುವೆ ವಸಾಹತುಶಾಹಿ ಭೌತಿಕ ಜಗತ್ತನ್ನೂ ದೇಶಿ ಸಂಸ್ಕೃತಿಯನ್ನು ಸಾಕಷ್ಟು ಬದಲಾಯಿಸಿರುತ್ತದೆ ಎನ್ನುವುದು ಸೈದನ ವಾದ.

ಸೈದ್‌ನ ಸಿದ್ಧಾಂತಕ್ಕೆ ಒದಗಿಬಂದ ಫುಕೋನ ಅಧಿಕಾರ ಮೀಮಾಂಸೆ ಜ್ಞಾನವೆಂಬ ಅಮೂರ್ತ ಸ್ವರೂಪವನ್ನು ಭಾಷೆಯ ಮೂಲಕ ಹೇಗೆ ಒಂದು ಮಧ್ಯಸ್ಥಿಕೆ ಅಧಿಕಾರವನ್ನು ಸ್ಥಾಪಿಸುತ್ತದೆ ಎಂಬುದನ್ನು ನಿರೂಪಿಸುತ್ತದೆ. ಸೈದನ ಪ್ರಕಾರ ಜ್ಞಾನವನ್ನು ಅಕಾರಣವಾಗಿ ಯಾರೋ ಬಳಸಿಕೊಳ್ಳುವುದಿಲ್ಲ. ಅದನ್ನು ಯೂರೋಪಿನ ಅಧಿಕಾರ ಕೇಂದ್ರಗಳು ಬಳಸಿಕೊಳ್ಳುತ್ತವೆ. ಅಧಿಕಾರದ ದಾಳ ಬಳಸಿ ಒಂದು ತತ್ವವನ್ನು ಅವು ಕಟ್ಟುತ್ತವೆ. ಓರಿಯೆಂಟಲ್ ಎನ್ನುವ ಗ್ರಹಿಕೆ ಆಗಲೇ ಹುಟ್ಟಿಕೊಂಡಿದ್ದು ಎನ್ನುತ್ತಾನೆ ಸೈದ್. ಹೀಗೆ ರೂಪುಗೊಂಡ ಜ್ಞಾನಗಳು ಒಂದು ಕೇಂದ್ರವನ್ನು ನಿರ್ಮಿಸುತ್ತವೆ. ಆ ಯೂರೋಪು ಕೇಂದ್ರವನ್ನು ಒಡೆದು ಕಟ್ಟಿಕೊಳ್ಳುವ ಕೆಲಸ ಸಂಕೀರ್ಣವಾದದ್ದು. ಏಕೆಂದರೆ ಯೂರೋಪು ತನ್ನ ಅಧಿಕಾರಾವಧಿಯಲ್ಲಿ ಇಡೀ ದೇಶಿ ಸಮುದಾಯವನ್ನು ತನ್ನಂತೆ ಅರ್ಥೈಸಿ ಬದಲಾಯಿಸಿಕೊಂಡು ಒಂದು ತಾತ್ವಿಕತೆಯನ್ನು ರೂಪುಗೊಳಿಸಿಕೊಂಡು ಬಿಟ್ಟಿರುತ್ತದೆ. ಇದನ್ನು ಅಳಿಸಿ ಹಾಕುವಾಗ ಸಂರಚನೆಗಳ ಮಾದರಿ ಯಾವುದೆಂದು ಅರಿಯುವುದೇ ದೊಡ್ಡ ತೊಡಕಿನ ಕೆಲಸ ಎನ್ನುತ್ತಾನೆ ಸೈದ್. ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರ ಹಕ್ಕಿ ಪದ್ಯಗಳಲ್ಲಿ ಪುಟ್ಟ ಹಕ್ಕಿ ಹಾವಿನ ಹೊಟ್ಟೆ ಸೇರಿದ ಹಕ್ಕಿ ಮೊಟ್ಟೆ ಪುಟ್ಟ ಹಕ್ಕಿಯಾಗುತ್ತೆ ಅಂತ ಕುಣಿದಾಡುತ್ತದೆ. ಅದಕ್ಕೆ ಅಮ್ಮ ಹಕ್ಕಿ ‘ಹಾವಿನ ಹೊಟ್ಟೆ ಸೇರಿದ ಮೇಲೆ ಹೇಳೋದಿನ್ನೇನು ಹಾವಿನ ಮೊಟ್ಟೆ ಆಗ್ಬಿಡುತ್ತೆ ಹಕ್ಕಿಮೊಟ್ಟೇನೂ’ ಅಂತ ವಿಷಾದದಿಂದ ಹೇಳುತ್ತೆ. ಅದು ಸಾಮ್ರಾಜ್ಯಶಾಹಿ ಸಂರಚನೆಗಳನ್ನು ಬದಲಾಯಿಸುವ ರೂಪಕವೂ ಆಗಿದೆ.

ಸೈದ್‌ನ ಸಿದ್ಧಾಂತದಲ್ಲಿ ಪಾಲು ಪಡೆದಿರುವ ಇನ್ನೊಂದು ಸಿದ್ಧಾಂತ ಗ್ರಾಮ್ಷಿಯದು. ಅವನ ಸಬಾಲ್ಟ್ರನ್ ಕಲ್ಪನೆಯಲ್ಲಿ ಅಡಕವಾಗಿರುವ ಯಾಜಮಾನ್ಯದ ಪರಿಕಲ್ಪನೆಯು ಸಾಂಸ್ಕೃತಿಕವಾದ/ಸೈದ್ಧಾಂತಿಕವಾದ ಅಮೂರ್ತ ಸಂಗತಿಗಳ ಮೇಲೂ ತನ್ನ ಪ್ರಭಾವವನ್ನು ಸಾಧಿಸಿ ಹಿಡಿತದಲ್ಲಿಟ್ಟುಕೊಂಡಿರುತ್ತದೆ. ಹೀಗಾ‌ಗಿ ಒಂದು ಸಮುದಾಯ/ರಾಷ್ಟ್ರ/ವರ್ಗಗಳು ಇನ್ನೊಂದರ ಮೇಲೆ ಬೇರೆ ಬೇರೆ ನೆಲೆಗಳಲ್ಲಿ ಹಿಡಿತ ಸಾಧಿಸಬಹುದು ಎಂದು ಗ್ರಾಮ್ಷಿ ತೋರಿಸಿಕೊಟ್ಟ. ಯೂರೋಪಿನ ಕೇಂದ್ರವನ್ನು ಪರಿಗಣಿಸುವಾಗ ಈ ಅವ್ಯಕ್ತ ಮಾದರಿಯ ಹಿಡಿತ ಸಾಧ್ಯವಾಗಿದೆ ಎಂಬುದು ಸೈದನ ಅಭಿಪ್ರಾಯ. ಇದರಿಂದ ಭೌತಿಕವಾಗಿ ಗ್ರಹಿಸಲ್ಪಡುತ್ತಿದ್ದ ಅಧಿಕಾರದ ಸ್ವರೂಪವನ್ನು ಮಾನಸಿಕ ವಲಯಕ್ಕೊ, ಅಮೂರ್ತ ವಲಯಕ್ಕೂ ವಿಸ್ತರಿಸಿ ನೋಡುವಂತಾಯ್ತು. ಈ ಕಾರಣದಿಂದ ನಿರ್ವಸಾಹತೀಕರಣದ ಪ್ರಕ್ರಿಯೆ ಮತ್ತಷ್ಟು ಜಟಿಲವಾಯಿತು. ಭೌತಿಕ ಬಿಡುಗಡೆಯು ಮನುಷ್ಯನನ್ನು/ಒಂದು ಸಮುದಾಯವನ್ನು ದಾಸ್ಯದಿಂದ ಬಿಡಿಸಿದಂತಾಗಲಿಲ್ಲ. ಅದರ ನಂತರದಲ್ಲಿ ಉಳಿದ ಸಂರಚನೆಗಳನ್ನು ಅಳಿಸಿ ಹಾ‌ಕುವುದು ಕಷ್ಟ.

ಸೈದ್ ಹೇಳುವ ವಿಸ್ಮೃತಿಗಳ ಕಥನ ಸಂಸ್ಕೃತಿಗಳ ಮರು ಹುಡುಕಾಟದ ಕಥನವಾಗಿದೆ. ದೇಸಿ ಎನ್ನುವುದು ವಿಸ್ಮೃತಿಗೆ ಒಳಗಾದ ಸಂಗತಿಯಾಗಿದ್ದು ಅದನ್ನು ಪುನಾ ಚೇತನಗೊಳಿಸಿಕೊಳ್ಳಬೇಕು ಎಂದು ಪ್ರಯತ್ನ ಪಡುವುದು ನಿರ್ವಸಾಹತೀಕರಣದ ಭಾಗವಾಗಿದೆ. ಆದರೆ ಅದು ರಮ್ಯವಾದ ಅಭಿಯಾನವಾಗಿ ಬಿಡಬಹುದು. ಅದನ್ನು ಸೈದ್ಧಾಂತಿಕವಾಗಿ ರೂಪಿಸಿಕೊಳ್ಳಬಹುದೇ ವಿನಾ ಪೂರ್ಣ ಹಳೆಯ ಸ್ವರೂಪದಲ್ಲಿ ಅಲ್ಲ. ಅಲ್ಲದೆ ದೇಶಿಯತೆಯ ಯಾವ ಅಂಶವನ್ನು ಮೇಲೆತ್ತಿಕೊಳ್ಳಲಾಗುತ್ತದೆ ಎನ್ನುವುದು ಬಹಳ ಮುಖ್ಯ. ಆದ್ದರಿಂದ ದೇಸಿಯತೆಯ ‌ಹುಡುಕಾಟ ಯಾವಾಗಲೂ ಸಂಕೀರ್ಣವಾದುದಾಗಿರುತ್ತದೆ.

ರಾಷ್ಟ್ರಿಯತೆ ಎಂಬ ನಿರ್ವಸಾಹತೀಕರಣದ ಕಥನಗಳು

ವಸಾಹತುಶಾಹಿ ಆಡಳಿತಕ್ಕೆ ಒಳಪಟ್ಟ ದೇಶದ ಕಾಲವನ್ನು ವಸಾಹತುಪೂರ್ವ, ವಸಾಹತುಕಾಲ ಮತ್ತು ವಸಾಹತೋತ್ತರ ಕಾಲ ಎಂದು ಗುರುತಿಸಲಾಗುತ್ತದೆ. (ಈಗ ಇವಲ್ಲದೆ ನವವಸಾಹತುಶಾಹಿಕಾಲ ಎಂಬ ಕಾಲವನ್ನೂ ಗುರುತಿಸಲಾಗುತ್ತಿದೆ). ಈ ಚಾರಿತ್ರಿಕ ಗತಿಯಲ್ಲಿ ನಿರ್ವಸಾಹತೀಕರಣದ ಪ್ರಕ್ರಿಯೆ ಜಾಗ ಪಡೆದುಕೊಳ್ಳುತ್ತದೆ. ಸ್ವಾತಂತ್ರ್ಯಕ್ಕಾ‌ಗಿ ನಡೆಸುವ ಚಳವಳಿಯ ಕಾಲ ತಾಯ್ನಾಡಿನ ಕಲ್ಪನೆಯ ಕಾಲ. ಅದು ಮೊದಲ ಘಟ್ಟದ್ದು. ಸ್ವದೇಶಿ ಜಾಗೃತಿ ಎರಡನೆಯ ಹಂತದ್ದು. ವಿಸ್ಮೃತಿಗೆ ಒಳಗಾಗಿರುವ ನೆಲದ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವುದು ಈ ಹಂತದ್ದು. ಸ್ವಾತಂತ್ರ್ಯದ ನಂತರ ವಸಾಹತು ಪ್ರಭಾವಕ್ಕೊಳಗಾದ ಭಾಷೆ, ಶಿಕ್ಷಣ, ರಾಜಕೀಯ ಮುಂತಾದ ಸಂರಚನೆಗಳನ್ನು ಪುನಾರಚಿಸಿಕೊಳ್ಳುವುದು.

ವಸಾಹತುಶಾಹಿ ಆಡಳಿತಕ್ಕೆ ಒಳಪಟ್ಟ ದೇಶಗಳು ತಮ್ಮ ರಾಷ್ಟ್ರೀಯತೆಯನ್ನು ಗುರುತಿಸಿಕೊಳ್ಳಲು ಯತ್ನಿಸಿದವು. ಇದಕ್ಕೆ ವಸಾಹತುಶಾಹಿಯೇ ಪರೋಕ್ಷವಾಗಿ ಕಾರಣ. ಈ ಪ್ರದೇಶಗಳು ನಿರ್ದಿಷ್ಟ ಚಹರೆಯಿಂದ ತಮ್ಮನ್ನು ತಾವು ಗುರುತಿಸಿಕೊಳ್ಳಲೆತ್ನಿಸಿದವು. ವಸಾಹತುಶಾಹಿಯು ತಮ್ಮ ಗುರುತುಗಳನ್ನೆಲ್ಲ ಅಳಿಸಿಹಾಕುತ್ತಿರುವ ಸಂದರ್ಭವನ್ನು ಅವು ಈ ಬಗೆಯಲ್ಲಿ ಗ್ರಹಿಸಿದವು. ಇದೊಂದು ಕಲ್ಪಿತ ಸಮುದಾಯವನ್ನು ರೂಪಿಸಲು ನಡೆಸಿದ ಯತ್ನ. ಇಲ್ಲಿ ಭಾವನಾತ್ಮಕ ಸಂಬಂಧದ ವಿಕಾಸ ನೆಲ, ಜಲಗಳ ಬಗ್ಗೆ ವ್ಯಾಮೋಹ ಹುಟ್ಟಿಸುತ್ತದೆ. ಜೊತೆಗೆ ತಮ್ಮ ಸಮಾಜಗಳನ್ನು ಪುನಾ ಕಟ್ಟುವ ಬಗ್ಗೆ ಒಂದು ಚಿಂತನಾಕ್ರಮವನ್ನು ರೂಪಿಸುತ್ತವೆ. ವಸಾಹತುಶಾಹಿ ಸಂರಚನೆಗಳು ಇರುವ ಸಮಾಜಗಳಲ್ಲಿ ತಮ್ಮತನವನ್ನು ಹೇಗೆ ಕಂಡುಕೊಳ್ಳಬೇಕೆಂಬುದು ಇಲ್ಲಿನ ಸವಾಲಾಗಿರುತ್ತದೆ. ಆದರೆ ಈ ಹಂತದಲ್ಲಿ ಅವುಗಳ ಪ್ರತಿಕ್ರಿಯೆ ಮಾತ್ರ ಒಮ್ಮುಖವಾಗಿರುವುದಿಲ್ಲ. ವಸಾಹತು ದೇಶಗಳಲ್ಲಿನ ಜನರ ಪ್ರತಿಕ್ರಿಯೆ ಒಂದೇ ತೆರನಾಗಿರುವುದಿಲ್ಲ. ಅವರು ವಸಾಹತುಶಾಹಿ ಆಡಳಿತದೊಡನೆಯೇ ಶಾಮೀಲಾಗಿ ಆ ಮೂಲಕ ವಿಮೋಚನೆಯನ್ನು ಕಾಣಬಯಸುತ್ತಿರಬಹುದು; ಅಥವಾ ಅದಕ್ಕೆ ವಿರೋಧವಾಗಿ ದೇಸಿ ಸಂಸ್ಕೃತಿಗಳ ಕೋಶದತ್ತ ಆಶಾವಾದಿಯಾಗಿ ನೋಡಬಹುದು. ಅಥವಾ ಇದ್ಯಾವುದೂ ಅಲ್ಲದೆ, ಮೂರನೆಯ ಮಾರ್ಗವೊಂದನ್ನು ಹಿಡಿದು ಉಗ್ರ ಪ್ರತಿಭಟನೆಯಲ್ಲಿ ಕ್ರಾಂತಿಕಾರಕ ಹೆಜ್ಜೆಗಳನ್ನು ಹಾಕುತ್ತಾ ಇರುವ ಸಂರಚನೆಗಳನ್ನೆಲ್ಲಾ ನಾಶಗೊಳಿಸಿ ಆನಂತರ ಹೊಸದನ್ನು ಕಟ್ಟುವ ದಾರಿಯನ್ನು ಹಿಡಿಯಬಹುದು. ಇವೆಲ್ಲವೂ ನಿರ್ವಸಾಹತೀಕರಣದ ಪ್ರಕ್ರಿಯೆಗಳೇ ಆಗಿವೆ.

ಇಲ್ಲಿ ಭಾರತ ಮತ್ತು ಆಫ್ರಿಕಾದ ಉದಾಹರಣೆಗಳ ಮೂಲಕ ವಸಾಹತುಶಾಹಿ ಹೋರಾಟ ಹೇಗೆ ನಿರ್ವಸಾಹತೀಕರಣದ ಸಿದ್ಧಾಂತಗಳನ್ನು ರೂಪಿಸಿವೆ ಎಂದು ಪ್ರಾತಿನಿಧಿಕವಾಗಿ ನೋಡಬಹುದು.

ನಿರ್ವಸಾಹತೀಕರಣದ ನೆಲೆಗಳು ಭಾರತೀಯ ಸಂದರ್ಭದಲ್ಲಿ

ಬ್ರಿಟಿಷ್ ವಸಾಹತುವಾಗಿದ್ದ ಭಾರತಕ್ಕೆ ತನ್ನದೇ ಆದ ನಿರ್ವಸಾಹತೀಕರಣದ ಚರಿತ್ರೆ ಇದೆ. ಬ್ರಿಟಿಷರ ವಿರುದ್ಧ ಹೋರಾಟ ಮಾಡುವ ವಸಾಹತುಶಾಹಿ ವಿರೋಧಿ ಚಳವಳಿಗಳು ನಿರ್ವಸಾಹತೀಕರಣದ ಚರ್ಚೆಗಳನ್ನೂ ಹುಟ್ಟು ಹಾಕಿತು. ರಾಜಾರಾಂ ಮೋಹನ್ ರಾಯ್ ಅವರಿಂದ ಆರಂಭವಾದ ಇಂಗ್ಲಿಷ್ ಶಿಕ್ಷಣದ ಚರ್ಚೆ ನಿರ್ವಸಾಹತೀಕರಣದ ಪ್ರತಿಕ್ರಿಯೆಗೆ ಚಾಲನೆ ಸಿಕ್ಕಂತಾಯ್ತು. ವೈಜ್ಞಾನಿಕ ಶಿಕ್ಷಣ ಪಡೆಯುವ ಸಲುವಾಗಿ ಇಂಗ್ಲಿಷ್ ಶಿಕ್ಷಣ ಪದ್ಧತಿಗಾಗಿ ಆಗ್ರಹಿಸಿದ್ದು ಮತ್ತು ದೇಶಿಯ ಸಮಾಜದಲ್ಲಿ ಅವರಿಗೆ ಮೂಢನಂಬಿಕೆಗಳೆಂದು ಕಂಡ ಸಂಗತಿಗಳ ವಿರುದ್ಧ ಹೋರಾಟ ಮಾಡಿದ್ದು ರಾಮಮೋಹನರಾಯ್. ಆಧುನಿಕ ಸಮಾಜದ ಮೂಲಕ ಭಾರತೀಯ ಸಮಾಜದ ವಿಮೋಚನೆ ಸಾಧ್ಯ ಎನ್ನುವ ರಾಮ್ ಮೋಹನ್ ರಾಯ್ ಅವರ ನೆಲೆಯೇ ಮುಂದೆ ನೆಹರೂ, ದಾದಾಭಾಯಿಯಂತವರಿಗೆ ಮೂಲವಾಗುತ್ತದೆ. ಆಧುನಿಕತೆಯ ಮೂಲಕ ಭಾರತ ವಿಮೋಚನೆ ಸಾಧ್ಯ ಎಂಬ ವಾದ ಸದಾ ಚರ್ಚೆಗೆ ಒಳಪಟ್ಟಿದ್ದ ಸಂಗತಿಯೇ ಆಗಿದೆ.

ಗಾಂಧಿ ಬರುವ ಮೊದಲು ಇದ್ದ ಉಗ್ರವಾದಿಗಳು ಕ್ರಾಂತಿಕಾರಕ ಸ್ಫೋಟವೇ ವಸಾಹತುಶಾಹಿಯನ್ನು ಓಡಿಸುವ ಉಪಾಯ ಎಂದು ತಿಳಿದುಕೊಂಡಿದ್ದರು. ಅವರ ಮಾರ್ಗವು ಹಿಂಸಾತ್ಮಕವಾದುದಾಗಿತ್ತು.

ಗಾಂಧಿಯ ಕ್ರಮವೇ ಬೇರೆ. ಅವರು ರಾಮಮೋಹನ್ ರಾಯ್ ಅವರ ಯೂರೋಪು ಕೇಂದ್ರಿತ ವಿಮೋಚನಾ ಸಿದ್ಧಾಂತವನ್ನು ತಿರಸ್ಕರಿಸಿದರು. ಆಧುನಿಕತೆ ಭಾರತದ ವಿಮೋಚನೆಯಲ್ಲ; ಯೂರೋಪಿನ ರೋಗವನ್ನು ನಾವು ತಂದು ಕೊಂಡಂತೆ ಎಂದರು. ಗಾಂಧಿ ಪರಂಪರೆಯನ್ನು ‘ಸುಂದರ ಮರ’ಕ್ಕೆ ಹೋಲಿಸುತ್ತಾರೆ. ನೀವು ಮರದ ಬೇರುಗಳನ್ನು ನಾಶಗೊಳಿಸಿದರೆ ಇಡೀ ಮರ ನಾಶವಾಗುತ್ತದೆ ಎನ್ನುತ್ತಾರವರು. ಸಾಂಪ್ರದಾಯಿಕ ಜ್ಞಾನಗಳನ್ನು ಪುನಶ್ಚೇತನಗೊಳಿಸಿಕೊಳ್ಳುವುದರ ಮೂಲಕ ನಮ್ಮದೇ ಆದ ಸ್ವಯಂಪೂರ್ಣತೆಯನ್ನು ಹೊಂದಲು ಸಾಧ್ಯವಿದೆ ಎಂಬುದು ಗಾಂಧಿಯ ನಂಬಿಕೆ. ಸ್ವದೇಶಿ ಎನ್ನುವುದು ಗಾಂಧಿಯ ಮೂಲಮಂತ್ರವಾಗಿದೆ.

ಆಫ್ರಿಕಾದ ಮಾದರಿ

ಆಫ್ರಿಕಾದ ದೇಶಗಳೆಲ್ಲ ವಸಾಹತುಶಾಹಿ ಅನುಭವಗಳಿಂದ ಕಂಗೆಟ್ಟಿವೆ. ಭಾರತ ಮತ್ತು ಇತರ ಏಷ್ಯಾ ದೇಶಗಳಿಗಿಂತಲೂ ಅವುಗಳ ಸ್ಥಿತಿ ಅಸ್ತವ್ಯಸ್ತವಾಗಿದೆ. ಆದ್ದರಿಂದ ಇಲ್ಲಿ ಅದನ್ನೇ ಉದಾಹರಣೆಯನ್ನಾಗಿ ಎತ್ತಿಕೊಳ್ಳಲಾಗಿದೆ. ಬಿಳಿಯರು ಆಫ್ರಿಕಾದ ನಾಡುಗಳಿಗೆ ದಾಂಗುಡಿಯಿಟ್ಟು ಕರಿಯರನ್ನು ಹಿಡಿತಕ್ಕೆ ತೆಗೆದುಕೊಂಡಿದ್ದು ಒಂದು ಚಾರಿತ್ರಿಕ ಸಂಗತಿ. ಅದು ಕರಿಯರ ಜೀವನಗಳನ್ನೇ ಬದಲಾಯಿಸಿತು. ಅಂದಿನಿಂದ ಇಂದಿನವರೆಗು ಆಫ್ರಿಕಾದ ಜನತೆ ಬಿಡುಗಡೆಗಾಗಿ ಅನೇಕ ಆಂದೋಲನಗಳನ್ನು ನಡೆಸುತ್ತಾ ಬಂದಿದ್ದಾರೆ. ಅವರ ಹೋರಾಟಗಳೆಲ್ಲ ಯೂರೋಪು ಕೇಂದ್ರಿತವಾಗಿವೆ. ವಾಲ್ಟರ್ ರೋಡ್ನಿ ಎನ್ನುವ ಆಫ್ರಿಕಾದ ಬರಹಗಾರ ‘ಹೌ ಯೂರೋಪ್ ಅಂಡರ್ ಡೆವಲಪ್ಡ್ ಆಫ್ರಿಕಾ’ ಎನ್ನುವ ಹೆಸರನ್ನಿಟ್ಟುಕೊಂಡೇ ಒಂದು ಪುಸ್ತಕ ಬರೆದಿದ್ದಾನೆ. ಆಫ್ರಿಕಾದ ಚಿಂತಕರ ಪ್ರಕಾರ ಯೂರೋಪಿನ ಧರ್ಮ ಮತ್ತು ಬಂಡವಾಳಶಾಹಿ ಆಫ್ರಿಕಾದ ಸ್ವಂತಿಕೆಯನ್ನೇ ಕಿತ್ತುಕೊಂಡಿವೆ. ಸತತ ರಾಜಕೀಯ ಸಂಘರ್ಷಗಳಿಂದ ಉಂಟಾಗಿರುವ ಅರಾಜಕತೆ ಮಿಲಿಟರಿಯನ್ನು ಬೆಳೆಸಿದೆ. ಆಫ್ರಿಕಾದ ರಾಜಕೀಯವನ್ನು ಯಾವುದೋ ಯೂರೋಪಿನ ದೇಶಗಳಲ್ಲಿ ನಿರ್ಧರಿಸಲಾಗುತ್ತದೆ ಎಂಬ ಅಳಲು ಆಫ್ರಿಕನ್ನರಿಗೆ ಇದೆ.

ವಸಾಹತುಶಾಹಿ ರೂಪಿಸಿದ ಏಕಸಂಸ್ಕೃತಿಯ ವಿರುದ್ಧ ಹೋರಾಡಬೇಕನ್ನುವುದು ಒಂದು ರಾಷ್ಟ್ರೀಯ ಅರಿವಾಗಿದೆ.

ನಿರ್ವಸಾಹತೀಕರಣ ಎನ್ನುವುದು ಬರುವುದಾದರೆ ಅದು ಆಫ್ರಿಕಾದ ಹೊರಗಿನಿಂದ ಬರಬೇಕಿಲ್ಲ, ಅದು ನಮ್ಮೊಳಗಿನಿಂದಲೇ ಬರುವಂತದ್ದು ಎನ್ನುವುದು ಆಫ್ರಿಕಾದ ಇಂದಿನ ಚಿಂತಕರ ಅಭಿಪ್ರಾಯ. ಆದ್ದರಿಂದ ಸೃಜನಶೀಲ ಲೇಖಕರು ಮತ್ತು ಚಿಂತಕರು ಜಿಗುಟಿನಿಂದ ತಮ್ಮ ಆಫ್ರಿಕಾದ ಅಸ್ಮಿತೆಯನ್ನು ಕಾಯ್ದುಕೊಳ್ಳುವತ್ತ ಗಮನ ಹರಿಸಿದ್ದಾರೆ.

ಆಫ್ರಿಕಾದ ನಿರ್ವಸಾಹತೀಕರಣಕ್ಕೆ ಜನಾಂಗೀಯವಾದ ಒಂದು ಆಯಾಮ ವಿರುವುದರಿಂದ ಅದಕ್ಕೆ ಸಾರ್ವತ್ರಿಕತೆ ಇದೆ. ೧೯೦೦ರ ನಂತರ ಆಫ್ರಿಕಾ ನಿರ್ವಸಾಹತೀಕರಣಕ್ಕೆ ಚಾಲನೆ ಸಿಕ್ಕು ಅದನ್ನು ಅಖಿಲ ಆಫ್ರಿಕನ್ ಚಳವಳಿ ಎಂಬ ಸಾಮಾನ್ಯ ಲೇಬಲ್ಲಿನಡಿ ಗುರುತಿಸಲಾಗುತ್ತಿದೆ. ಅದನ್ನು ‘ಕಪ್ಪು ಅಟ್ಲಾಂಟಿಕ್’ ಪರಿಕಲ್ಪನೆ ಎನ್ನಲಾಗುತ್ತದೆ. ನಿರ್ವಸಾಹತೀಕರಣಕ್ಕೆ ಯತ್ನಿಸುವವರನ್ನು ಒಂದು ಪ್ರಾದೇಶಿಕ ಚೌಕಟ್ಟಿನಲ್ಲಿಟ್ಟು ನೋಡುವುದು ಸಾಮಾನ್ಯವಾದ ಸಂಗತಿಯಾದರೂ ಆಫ್ರಿಕಾದ ವಿಷಯದಲ್ಲಿ ಅದು ಬೇರೆಯೇ ಆಗುತ್ತದೆ. ಏಕೆಂದರೆ ಇದರಲ್ಲಿ ಸಾಮಾನ್ಯವಾದ ವಿಷಯಗಳೆಂದರೆ ಜನಾಂಗೀಯವಾದದಿಂದ ವಿಮೋಚನೆ, ಆಫ್ರಿಕಾದ ಹಕ್ಕು ಆಫ್ರಿಕಾದವರಿಗೇ ಸಿಗಬೇಕು ಎನ್ನುವ ವಾದ ಇತ್ಯಾದಿ ಸಂಗತಿಗಳು ಸೇರಿರು‌ತ್ತವೆ. ಆಫ್ರಿಕಾದ ಮ್ಯಾಪಿನೊಳಗೆ ಯೂರೋಪು, ಕೆರಿಬಿಯನ್, ಲ್ಯಾಟಿನ್ ಅಮೆರಿಕಾ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ನೀಗ್ರೋಗಳೆಲ್ಲಾ ಆಫ್ರಿಕಾದ ಅಸ್ತಿತ್ವವನ್ನು ಸಮಾನವಾಗಿ ಹಂಚಿಕೊಂಡಿರುತ್ತಾರೆ. ಪಾಲ್ ಗಿಲೊರೈ ‌ಅವರ ಪ್ರಕಾರ ಕಪ್ಪು ಅಟ್ಲಾಂಟಿಕ್  ಕಲ್ಪನೆ ಒಂದು ಅಂತರ್ ಸಾಂಸ್ಕೃತಿಕ ಮತ್ತು ಅಂತಾರಾಷ್ಟ್ರೀಯವಾದುದು. ಇದನ್ನು ಕೆಲವರು ಆಫ್ರಿಕನ್ ಕಾಂಗ್ರೆಸ್ ಎಂದೂ ಕರೆಯುವುದುಂಟು. ಎಡ್ವರ್ಡ ವಿಲ್ ಮಾಟ್ ಬೈಡೆನ್(ಕೆರಿಬಿಯನ್), ಜೇಮ್ಸ್ ಆಫ್ರಿಕಾನಸ್ ಹಾರ್ಟನ್ (ಸಿಯೆರಾ ಲಿಯೊನ್) ಎಂಬ ಇಬ್ಬರು ಆಫ್ರಿಕನ್ ಚಿಂತಕರು ಜನಾಂಗೀಯ ಸಮಾನತಿಗೆ ಆಗ್ರಹಿಸುತ್ತಾರೆ. ಆದರೆ ಇವರು ಹತ್ತೊಂಬತ್ತನೆಯ ಶತಮಾನದ ಜನಾಂಗೀಯ ವಾದವನ್ನು ತಿರಸ್ಕರಿಸಬೇಕೆನ್ನುತ್ತಾರೆ. ಹುಸಿಮಾನವತಾವಾದವನ್ನು ಅವರು ಎಚ್ಚರಿಕೆಯಿಂದ ಪರಿಶೀಲಿಸಬೇಕೆನ್ನುತ್ತಾರೆ. ಏಕೆಂದರೆ ಮಾನವತಾವಾದದಲ್ಲಿ ಅಸಮಾನತೆ ಮತ್ತು ಉಪ-ಮಾನವತೆಗಳೆಲ್ಲಾ ಅಡಕವಾಗಿರುತ್ತವೆ.

ನಿರ್ವಸಾಹತೀಕರಣದಲ್ಲೇ ಗುರುತಿಸಲ್ಪಡುವ ಮೊದಲ ಸಾಲಿನ ಚಿಂತಕರೂ ಕ್ರಿಯಾತ್ಮಕವಾದ ವ್ಯಕ್ತಿತ್ವವುಳ್ಳವರೂ ಆದ ವ್ಯಕ್ತಿಗಳೆಂದರೆ ಡಬ್ಲ್ಯೂ.ಇ.ಬಿ.ಡ್ಯೂಬಾಯಿಸ್ ಮತ್ತು ಫ್ಯಾನನ್. ಅದರಲ್ಲಿ ಫ್ಯಾನನ್ ಮಾರ್ಕ್ಸಿಸ್ಟ್ ವಿಚಾರದ ಆಧಾರದಲ್ಲಿ ಜನಾಂಗೀಯ ವಾದದ ಪ್ರಶ್ನೆಗಳನ್ನು ಎತ್ತುತ್ತಾನೆ. ಅವನಲ್ಲಿ ಕಪ್ಪು ಬಿಳುಪು ಒಂದು ಡಯಲೆಕ್ಟ್ರಿಕಲ್ ಸ್ವರೂಪದ ಸಂಕೇತಿಗಳಾಗಿ ಮಾರ್ಪಡುವುದನ್ನು ಕಾಣಬಹುದು. ಇನ್ನೊಬ್ಬ ಆಫ್ರಿಕನ್ ಚಿಂತಕರಾದ ಸಿ.ಎಲ್.ಆರ್. ಜೇಮ್ಸ್ ಮಾರ್ಕ್ಸ ಚಿಂತಕರೇ ಆದರೂ ಸಾಮ್ರಾಜ್ಯಶಾಹಿ ದಬ್ಬಾಳಿಕೆ, ಜನಾಂಗೀಯ ದಬ್ಬಾಳಿಕೆ, ಪಾಶ್ಚಾತ್ಯ ಸಂಸ್ಕೃತಿಗಳ ಯಜಮಾನಿಕೆ, ವರ್ಗತಾರತಮ್ಯಗಳ ಆಯಾಮಗಳನ್ನೂ ತಮ್ಮ ಚಿಂತನೆಯಲ್ಲಿ ಪ್ರತಿಪಾದಿಸಿದರು. ಹೀಗೆಂದೇ ಆಫ್ರಿಕನ್ ಚಿಂತಕರಲ್ಲಿ ಮಾರ್ಕ್ಸವಾದೀ ಚಿಂತನೆಗಳು ವಿಭಿನ್ನ ಆಯಾಮಗಳನ್ನು ಪಡೆದುಕೊಳ್ಳುತ್ತವೆ ಎನ್ನಬಹುದು.

ನಿರ್ವಸಾಹತೀಕರಣದಲ್ಲಿ ಆಫ್ರಿಕಾದ ಸೂಕ್ಷ್ಮ ಮನಸ್ಕರಿಗೆ ಚರಿತ್ರೆ ಒಂದು ಸಮಸ್ಯೆ. ಅದನ್ನು ಹೇಗೆ ಸ್ವೀಕರಿಸಬೇಕು? ಚರಿತ್ತೆಯನ್ನು ಮರೆಯಬಾರದು ಎಂದು ಹೇಳುವ ಚಿಂತಕರು ಒಂದೆಡೆ ಇದ್ದಾರೆ. ಇವರ ಪ್ರಕಾರ ನಿರ್ವಸಾಹತೀಕರಣ ಎನ್ನುವುದು ಚರಿತ್ರೆಯ ನೋವಿನ ನೆನಪುಗಳಿವೆಯಲ್ಲಾ ಅವನ್ನಿಟ್ಟುಕೊಂಡೇ ಮುಂದಿನ ಭವಿಷ್ಯ ರೂಪಿಸಿಕೊಳ್ಳಬೇಕು. ಸಿ.ಎಲ್.ಆರ್. ಜೇಮ್ಸ್ ತರದ ಚಿಂತಕರು ಈ ರೀತಿಯನ್ನು ಬೆಂಬಲಿಸುತ್ತಾರೆ. ಆದರೆ ವಾಲ್‌ಕಾಟ್ ಮತ್ತು ಹ್ಯಾರಿಸ್ ಮುಂತಾದ ಲೇಖಕರಿಗೆ ಚರಿತ್ರೆ ತಿರಸ್ಕರಿಸಬೇಕಾದ ಸಂಗತಿ. ಅದನ್ನು ತ್ಯಜಿಸಬೇಕು, ತ್ಯಜಿಸಿ ಒಂದು ಅಚಾರಿತ್ರಿಕವಾದ ವಲಯಕ್ಕೆ ಹೋಗಬೇಕು. ಎನ್ನುವುದೇ ಈ ಲೇಖಕರ ಅಭಿಪ್ರಾಯ. ಇದು ಸಾಧ್ಯವಾಗುವುದಾದರೂ ಹೇಗೆ? ಬಹುಮಟ್ಟಿಗೆ ಇದು ಮಿಥ್‌ಗಳಿಂದ ಸಾಧ್ಯವಾಗುತ್ತದೆ ಎನ್ನುತ್ತಾರಿವರು. ಆದ್ದರಿಂದ ತಮ್ಮ ಕೃತಿಗಳಲ್ಲಿ ಹೆಚ್ಚು ಹೆಚ್ಚು ಮಿಥೀಕರಣದ ಪ್ರಕ್ರಿಯೆಗೆ ತೊಡಗಿಕೊಳ್ಳುವತ್ತ ಆಸಕ್ತಿ ತೋರುತ್ತಾರೆ. ಗೂಗಿ ಕೂಡ ಒಂದು ಹಂತದಲ್ಲಿ ನಿರ್ವಸಾಹತೀಕರಣದ ಬೇರುಗಳು ಮಿಥಿಕಗಳಲ್ಲಿವೆ ಎಂಬ ತಾತ್ವಿಕ ನಿಲುವಿಗೆ ಬರುತ್ತಾನೆ. ಚಿನುವಾ ಅಚಿಬೆ, ಸೊಯಿಂಕಾ ಮುಂತಾದ ಲೇಖಕರು ತಮ್ಮ ಬರಹಗಳಲ್ಲಿ ಆಫ್ರಿಕಾದ ಪುರಾಣಗಳಿಗೆ ಮರಳುವುದನ್ನು ನೋಡಿದರೆ ಇದು ಆಫ್ರಿಕನ್ನರಿಗೆ ತಮ್ಮ ಬೇರುಗಳಿಗೆ ಮರಳುವ ಬಗೆಯನ್ನು ತೆರೆದಿಟ್ಟ ನಿರ್ವಸಾಹತೀಕರಣದ ಹಾದಿಗಳೇ ಎನ್ನಿಸುತ್ತದೆ. ಸದ್ಯ ಆಫ್ರಿಕನ್ ಲೇಖರಕರಂತೂ ಮಿಥಿಕಗಳನ್ನು ಸಂಸ್ಕೃತಿ ಕೋಶಗಳೆಂದೇ ಪರಿಗಣಿಸಿದ್ದಾರೆ.