ಶಿಕ್ಷಣದ ನಿರ್ವಸಾಹತೀಕರಣ

ಶಿಕ್ಷಣ ಎಂದೊಡನೆ ವಸಾಹತುಶಾಹಿ ಶಿಕ್ಷಣ ಎಂಬ ಕಲ್ಪನೆ ಬರುತ್ತದೆ. ಶಿಕ್ಷಣದ ವಸಾಹತೀಕರಣದೊಂದಿಗೆ ಅವರ ನಿರ್ವಸಾಹತೀಕರಣದ ಚಿಂತನೆಗಳೂ ಆರಂಭವಾದವು. ಇಂಗ್ಲಿಷ್ ಶಿಕ್ಷಣ ಬರುವುದಕ್ಕೆ ಮೊದಲು ಇದ್ದ ದೇಶೀ ವಿದ್ಯಾಭ್ಯಾಸಗಳು ಆಯಾಯ ಮತ ಧರ್ಮಗಳ ಚೌಕಟ್ಟಿನಲ್ಲಿ ಕಲಿಸುವ ಮಾದರಿಯದಾಗಿತ್ತು. ರಾಜಾರಾಂ ಮೋಹನ್ ರಾಯ್ ಇಂಗ್ಲಿಷ್ ಶಿಕ್ಷಣವನ್ನು ಪಡೆಯುವ ಉದ್ದೇಶವೇ ದೇಶೀ ಧಾರ್ಮಿಕ ಶಿಕ್ಷಣ ಪದ್ಧತಿಗಳಿಂದ ಹೊರತಾದ ಲೌಕಿಕ ಶಿಕ್ಷಣವಾಗಿತ್ತು. ವಸಾಹತುಶಾಹಿಯ ಎಲ್ಲಾ ದರ್ಪಧೋರಣೆಗಳನ್ನು ಸಹಿಸಿಕೊಂಡೇ ಇಂಗ್ಲಿಷ್ ವಿದ್ಯಾಭ್ಯಾಸ ಪಡೆಯಬೇಕೆನ್ನುವುದು ಆಧುನಿಕತೆಯ ಮೂಲಕ ದೇಶೀ ಮೂಢನಂಬಿಕೆಗಳಿಂದ ನಿರ್ವಸಾಹತೀಕರಣಗೊಳ್ಳಬೇಕಾದ ಕ್ರೆಯೆ ಎಂಬುದು ರಾಮ್ ಮೋಹನ್ ರಾಯ್ ಅವರ ನಿರ್ವಸಾಹತೀಕರಣದ ಕಲ್ಪನೆಯಾಗಿತ್ತು. ಆದರೆ ಆನಂತರ ಬಂದ ಗಾಂಧಿ ರಾಜಾರಾಮಮೋಹನ್‌ರಾಯ್ ಅವರ ಆಯ್ಕೆಯನ್ನು ಒಪ್ಪುವುದೇ ಇಲ್ಲ. ಮಧ್ಯಕಾಲೀನ ಭಾರತದ ಸಂತರಿಗೆ ಹೋಲಿಸಿದರೆ ರಾಯ್ ಒಬ್ಬ ಪಿಗ್ಮಿ ಎಂದು ಬಿಡುತ್ತಾರೆ ಗಾಂಧಿ. ಲೌಕಿಕ ಪ್ರಯೋಜನಕ್ಕಾಗಿ ಪಡೆಯುವ ಶಿಕ್ಷಣ ನಮ್ಮನ್ನು ನಿರ್ವಸಾಹತೀಕರಣಗೊಳಿಸುವ ಬದಲು ಪಾಶ್ಚಾತ್ಯ ನಾಗರುಕತೆಗೆ, ಅದರ ವ್ಯಸನಗಳಿಗೆ ಗುರಿ ಮಾಡುತ್ತದೆ ಎನ್ನುತ್ತಾರೆ ಗಾಂಧಿ. ಪರ್ಯಾಯ ಶಿಕ್ಷಣ ಎಂದರೆ ಕರಕುಶಲವನ್ನು ಬೆಳೆಸುವುದರ ಜೊತೆಗೆ ಆತ್ಮವನ್ನೂ ಬೆಳೆಸುವುದು ಎನ್ನುವುದು ಅವರ ನಂಬಿಕೆಯಾಗಿತ್ತು. ಗ್ರಾಮೀಣ ಆರ್ಥಿಕತೆಗಳನ್ನು ಪುನರುಜ್ಜೀವಗೊಳಿಸುವ ಕರಕುಶಲತೆಯು ಜೀವನೋಪಾಯಕ್ಕೆ ಸರಳ ಮಾರ್ಗೋಪಾಯವಾಗಿದೆ ಎಂದು ಗಾಂಧಿ ಹೇಳಿದ್ದನ್ನು ನಿರ್ವಸಾಹತೀಕರಣದ ಮಾರ್ಗವಾಗಿ ಆಧುನಿಕ ಭಾರತ ಎಂದೂ ಬಳಸಲೇ ಇಲ್ಲ. ಅದು ಸಾಂಕೇತಿಕವಾಗಿಯೇ ಇದೆ.

ಗಾಂಧಿ ಮಾದರಿ ಎಂದರೆ ಅದೊಂದು ಬಗೆಯ ಅನೌಪಚಾರಿಕ ಶಿಕ್ಷಣ. ಆದರೆ ಜೀವನದ ಬಗೆಗನ ಒಂದು ಸಾಮಾನ್ಯ ತಿಳವಳಿಕೆ ಕೂಡ ಆಗಿದೆ. ಸ್ವಯಂಪೂರ್ಣತೆ ಎನ್ನುವುದು ಸೇವೆಯಿಂದ ಬರಬೇಕಾದ ಗುಣ. ಗಾಂಧಿ ತಮ್ಮ ನಿರ್ವಸಾಹತೀಕರಣಕ್ಕೆ ಬಳಸಿದ್ದು ಹೆಣ್ಣು ಮಾದರಿಗಳನ್ನು. ಅಂದರೆ ಮನೆಗೆಲಸ, ಸೇವೆ ಇತ್ಯಾದಿಗಳನ್ನು ಅವರು ಮೂಲಶಿಕ್ಷಣ ಎಂದು ತಿಳಿಯುತ್ತಾರೆ.

ಆಧುನಿಕತೆಗೆ ಒಡ್ಡಿಕೊಂಡ ಭಾರತ ದ್ವಂದ್ವಗಳಲ್ಲಿ ತನ್ನ ನಿಲುವುಗಳನ್ನು ಕಂಡುಕೊಳ್ಳತೊಡಗಿತು. ಹಾಗಾಗಿ ಇಂಗ್ಲಿಷ್ ಶಿಕ್ಷಣ ಎನ್ನುವುದಕ್ಕೆ ಹಳ್ಳಿಶಿಕ್ಷಣ ಎನ್ನುವ ದ್ವಂ‌ದ್ವ ಉಂಟಾಗುತ್ತಾದೆ. ಜ್ಞಾನವೆನ್ನುವುದು ನಗರ ಕೇಂದ್ರಿತವಾದ, ಆಧುನಿಕ ಸಮಾಜದಲ್ಲಿ ಪಾಲು ಪಡೆಯುವ ಶಿಕ್ಷಣ ಎನ್ನುವಾಗ ಉಳಿದ ಮಾದರಿಗಳು ಕೀಳಾಗುವುದು ಸಹಜ. ಆಧುನಿಕ ಶಿಕ್ಷಣವು ತನ್ನ ವ್ಯಾಪ್ತಿಗೆ ಎಲ್ಲರನ್ನು ತೆಗೆದುಕೊಳ್ಳುವ ಆಮಿಷವೊಡ್ಡುತ್ತದೆ. ಅದರಲ್ಲಿ ಆಯ್ಕೆ ಇರುವುದರಿಂದ ಹಲವಾರು ಜನ ಹೊರಗೇ ಉಳಿಯುತ್ತಾರೆ. ಅವರು ಸಮಾಜದಲ್ಲಿ ಅಪ್ರಯೋಜಕರಾಗುತ್ತಾರೆ. ಇದರಿಂದ ಬಿಡುಗಡೆ ಪಡೆಯುವುದು ಹೇಗೆ? ಕೆಲವು ಪರ್ಯಾಯಗಳು ನಮ್ಮಲ್ಲೇ ಇವೆ. ಶಿಕ್ಷಣ ಎನ್ನುವುದು ಆಧುನಿಕೋತ್ತರ ಜಗತ್ತಿನಲ್ಲಿಯೂ ಯಜಮಾನಿಕೆಯ ಕೇಂದ್ರವಾಗಿದೆ ಎಂದು ಗುಸ್ತವೋನಂತಹ ಇಂದಿನ ಚಿಂತಕರು ಹೇಳುತ್ತಾರೆ. ಅವನ ಪ್ರಕಾರ ಅಲ್ಪಸಂಖ್ಯಾತ ವರ್ಗ ಫಲಾನುಭವಿಯಾಗುವ, ಬಹುಸಂಖ್ಯಾತರು ಆ ವ್ಯವಸ್ಥೆಗೆ ಹಣ ಸುರಿಯುವ ವ್ಯವಸ್ಥೆ ಬಂಡವಾಳಶಾಹಿ ಸ್ವರೂಪದ್ದು. ಆದ್ದರಿಂದಲೇ ಇದನ್ನರಿತ ಹಲವಾರು ಜನ ಆಧುನಿಕ ಶಿಕ್ಷಣಕ್ಕೆ ಗುಡ್ ಬೈ ಹೇಳುತ್ತಿದ್ದಾರೆ ಎನ್ನುತ್ತಾನವನು. ಹಾಗಾದರೆ ಈ ರೀತಿ ಮರಳುವುದು ಏನನ್ನು ಸೂಚಿಸುತ್ತಿದೆ? ಬಂಡವಾಳಶಾಹಿ ವ್ಯವಸ್ಥೆಯನ್ನು ಮುರಿದುಕೊಳ್ಳುವ ಮೂಲಕ ಒಂದು ನಿರ್ವಸಾಹತೀಕರಣದ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆಯೇ? ಬಹುಶಃ ಹೌದು ಎನ್ನಿಸುತ್ತದೆ.

ಇನ್ನು ಪಠ್ಯಕ್ರಮಗಳು ಮತ್ತು ಕಲಿಸುವ ಭಾಷೆಗಳ ಬಗ್ಗೆ ಸಾಕಷ್ಟು ದೊಡ್ಡ ಚರ್ಚೆಗಳೇ ನಡೆದಿವೆ. ಪಠ್ಯಕ್ರಮಗಳನ್ನು ಆಯ್ದುಕೊಳ್ಳುವ ವಿಧಾನ ಮತ್ತು ಅದನ್ನು ಆರಿಸುವವರು ಯಾಜಮಾನ್ಯ ಧೋರಣೆಗಳಿಂದ ಮುಕ್ತರಾಗಿರುವುದು ಅಪರೂಪ. ಅಂತಹ ಅಯ್ಕೆಗಳಲ್ಲಿ ಯಜಮಾನಿಕೆಯ ಪಠ್ಯ ಮತ್ತು ಭಾಷೆಗಳೇ ಮೇಲುಗೈಯಾಗಿರುತ್ತವೆ. ಇದನ್ನು ತೊಡೆದು ಕೊಳ್ಳುವುದು ನಿಜಕ್ಕು ಕಷ್ಟದ ಕೆಲಸ. ಆದರೆ ನಿರ್ವಸಾಹತೀಕರಣದ ಪ್ರಕ್ರಿಯೆಯೇ ಹಾಗೆ. ಅದು ಮೊದಲು ಯಜಮಾನಿಕೆಯನ್ನು ಗುರುತಿಸಿಕೊಳ್ಳಬೇಕು; ಆನಂತರ ಅದನ್ನು ಬಿಡಿಸಿಕೊಳ್ಳುವತ್ತ ನಡೆಯಬೇಕು. ಭಾಷೆಯ ನಿರ್ವಸಾಹತೀಕರಣದ ಬಗ್ಗೆ ಮುಂದೆ ಸುದೀರ್ಘವಾಗಿ ಚರ್ಚಿಸಲಾಗಿದೆ.

ಭಾಷೆಯಿಂದ ಬಿಡುಗಡೆ

ಷೇಕ್ಸಪಿಯರನ ಕ್ಯಾಲಿಬನ್ ‘ನೀನು ನನಗೆ ಭಾಷೆ ಕಲಿಸಿದ್ದೀಯಾ. ನಾನು ನಿನ್ನನ್ನು ಅದರಲ್ಲೇ ಬಯ್ಯುತ್ತೇನೆ’ ಎನ್ನುತ್ತಾನೆ ಪ್ರಾಸ್ಪರೊಗೆ. ಇದು ಭಾಷಾ ನಿರ್ವಸಾಹತೀಕರಣದ ಸಂಕಷ್ಟ. ವಸಾಹತುಕಾರನ ಭಾಷೆ ಬಳಸದಿದ್ದರೆ ಸಂವಹನದ ಕಷ್ಟ. ಬಳಸಿದರೆ ಅವನ ಸಂಸ್ಕೃತಿಯನ್ನು ಅನುಸರಿಸಬೇಕಾದ ಇಬ್ಬಂದಿತನ. ಈ ಸಂದಿಗ್ಧವೇ ನಿರ್ವಸಾಹತೀಕರಣದ ಹುಡುಕಾಟಗಳಿಗೆ ಕಾರಣವಾಗಿದೆ.

ಭಾಷೆಯ ವಿಮೋನೆ ನಿರ್ವಸಾಹತೀಕರಣದ ಬಹುಮುಖ್ಯ ಪ್ರಕ್ರಿಯೆ ಎಂದು ಭಾವಿಸಲಾಗಿದೆ. ಭಾಷೆಯ ವಿಮೋಚನೆಯೆಂದರೆ ಇಲ್ಲಿ ಯಾಜಮಾನ್ಯ ಭಾಷೆಯ ಆಳ್ವಿಕೆ ಮತ್ತು ಅದರ ಪ್ರಭಾವಗಳಿಂದ ತಪ್ಪಿಸಿಕೊಳ್ಳುವುದು ಎನ್ನಬಹುದು. ಇಲ್ಲಿ ಸ್ಥೂಲವಾಗಿ ಎರಡು ನೆಲೆಗಳನ್ನು ಗುರುತಿಸಬಹುದು. ಒಂದು, ಚಾರಿತ್ರಿಕವಾಗಿ ದಾಖಲಾದ ವಸಾಹತೀಕರಣದ ಅಂಗಭಾಗವಾಗಿ ಬಂದ ಆಡಳಿತ ಭಾಷೆಯಿಂದ ಉಂಟಾದ ಪರಿಣಾಮಗಳಿಂದ ಮುಕ್ತವಾಗುವುದು; ಇನ್ನೊಂದು, ಯಾಜಮಾನ್ಯ ಸ್ವರೂಪದಲ್ಲಿರುವ ಭಾಷೆಯನ್ನು, ಮುಖಾಮುಖಿಯಾಗಿಸಿಕೊಂಸು ಅದರಿಂದ ವಿಮೋಚನೆಗೆ ಆಶಿಸುವುದು (ಅಂದರೆ, ಸ್ತ್ರೀಯರಿಗೆ ತಮ್ಮದೇ ಆದ ಭಾಷೆಯಿಲ್ಲ ಎನ್ನುವ ವಾದ; ದಲಿತರ ಮತ್ತು ಅಲ್ಪಸಂಖ್ಯಾತರ ಭಾಷೆಗಳು ಮುಖ್ಯವಾಹಿನಿ ಎನ್ನಿಸಿಕೊಳ್ಳುವ ಭಾಷೆಯ ಜೊತೆ ಯಾವ ರೀತಿ ಸಂಬಂಧ ಹೊಂದಬೇಕೆನ್ನುವ ತಾಕಲಾಟಗಳೂ ಇತ್ಯಾದಿ). ಈ ಎರಡೂ ಅಂಶಗಳಲ್ಲಿ ಮೊದಲು ಯಾಜಮಾನ್ಯ ಭಾಷೆಯನ್ನು ಗುರುತಿಸಿಕೊಳ್ಳುವ ಕ್ರಿಯೆ ಇದ್ದರೆ ಅದರ ಮುಂದಿನ ಹಂತದಲ್ಲಿ ಅದರಿಂದ ಬಿಡುಗಡೆ ಪಡೆಯುವ ಪರ್ಯಾಯ ಸಾಧ್ಯತೆಗಳತ್ತ ಗಮನ ಹರೆಸುತ್ತದೆ. ಹಾಗಾಗಿ ನಿರ್ವಸಾಹತೀಕರಣದ ಪ್ರಕ್ರಿಯೆಯಲ್ಲಿ ಈ ಎರಡೂ ಪ್ರಕ್ರಿಯೆಗಳೂ ಮುಖ್ಯವಾದುವೇ.

ವಸಾಹತು ಆಳ್ವಿಕೆಗಳಿಗೆ ಒಳಪಟ್ಟ ದೇಶಗಳಲ್ಲಿ ವಸಾಹತುಕಾರನ ಭಾಷೆಯೇ ಪ್ರಮಾಣವಾಗಿರುತ್ತದೆ. ಅದು ಆಡಳಿತ ಭಾಷೆಯೂ ಆಗಿರುವುದರಿಂದ ಎಲ್ಲ ರೀತಿಯಿಂದಲೂ ಸಮಾಜದ ಅಂಗಭಾಗಗಳಾದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ವಲಯಗಳನ್ನು ಹಿಡಿತದಲ್ಲಿಟ್ಟುಕೊಂಡಿರುತ್ತದೆ. ವಸಾಹತುಕಾರನ ಸಂಸ್ಕೃತಿ ಮತ್ತು ಅವನ ಆಳುವ ಮನೋಭಾವಗಳೆರಡನ್ನೂ ಧರಿಸಿದ ಯಾಜಮಾನ್ಯ ಭಾಷೆಯು ಸ್ಥಳೀಯ ಭಾಷೆಯ ಎದುರು ನಿಲ್ಲುವಂತದ್ದು. ಅದನ್ನು ಸ್ಥಳೀಯ ಭಾಷಿಕರು ಸ್ವೀಕರಿಸುವ ವಿಧಾನ ಎರಡು ತೆರನಾಗಿರುತ್ತದೆ: ಒಂದು ಆರಾಧನಾ ಮನೋಭಾವದಿಂದ ಆಳುವ ವರ್ಗದ ಭಾಷೆಯನ್ನು ಅನುಕರಿಸುವುದು; ಇನ್ನೊಂದು, ಪ್ರತಿರೋಧದ ನೆಲೆಯಲ್ಲಿ ಸ್ಥಳೀಯ ಭಾಷೆಯಲ್ಲಿ ಸಂವಹನ ಸಾಧಿಸಿಕೊಳ್ಳಲೆತ್ನಿಸುವುದು. ಫ್ಯಾನನ್ ಕೂಡ ಭಾಷೆಯ ಬಗ್ಗೆ ಬರೆಯುತ್ತ ಭಾಷೆ ಒಬ್ಬ ವ್ಯಕ್ತಿಗೆ ಪ್ರಪಂಚವನ್ನೇ ತೆರೆದುತೋರುವ ಕೀಲಿಕೈ ಇದ್ದಂತೆ ಎನ್ನುತ್ತಾನೆ. ಮೊಟ್ಟ ಮೊದಲ ಬಾರಿಗೆ ಫ್ಯಾನನ್ ಭಾಷೆಯ ಅಧಿಕಾರಗಳ ಬಗ್ಗೆ ಮಾತನಾಡುತ್ತಾನೆ. ಭಾಷೆ ಎನ್ನುವುದು ಒಬ್ಬ ಮನುಷ್ಯನಿಗೆ ಅಪಾರವಾದ ಅಧಿಕಾರವನ್ನು ಕೊಡುತ್ತದೆ ಎನ್ನುತ್ತಾನೆ.

ಇಂಗ್ಲಿಷ್ ಭಾಷೆ ವಸಾಹತು ಭಾಷೆಯಾಗಿದ್ದು ತನ್ನ ಆಳ್ವಿಕೆಯಲ್ಲಿದ್ದ ಅನೇಕ ದೇಶಗಳಲ್ಲಿ ಬಳಕೆಯಾಗುತ್ತ ಬಂದಿದೆ. ಅಷ್ಟೇ ಅಲ್ಲ, ಸ್ಥಳೀಯ ಭಾಷೆಗಳಿಗೆ ಸವಾಲನ್ನು ಒಡ್ಡುತ್ತಲೇ ಪ್ರತಿಷ್ಟಿತ ಭಾಷೆಯಾಗಿ ಮಾರ್ಪಟ್ಟ ಇಂಗ್ಲಿಷನ್ನು ಹೇಗೆ ಎದುರಿಸಬೇಕೆಂದು ವಸಾಹತೀಕರಣಕ್ಕೆ ಒಳಗಾದ ದೇಶಗಳ ಚಿಂತಕರು ಚಿಂತಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ಚರ್ಚಿಸಬೇಕಾದದ್ದು ಆಫ್ರಿಕಾದ ಪ್ರತಿಕ್ರಿಯೆಯನ್ನು. ಆಫ್ರಿಕಾ ಒಂದು ಕಗ್ಗತ್ತಲೆಯ ಖಂಡ ಎನ್ನುವ ಕಲ್ಪನೆಯೊಂದಿಗೆ ಪ್ರವೇಶಿಸಿದ ಯೂರೋಪಿನ ವಸಾಹತುಶಾಹಿ ಅದರ ಸಾಂಸ್ಕೃತಿಕ ಕೋಶವನ್ನು ಭಾಷೆ ಮತ್ತು ಮತಾಂತರಗಳ ಮೂಲಕ ಕಬಳಿಸುತ್ತಾ ಹೋಯಿತು. ಇದರಿಂದ ಸ್ಥಳೀಯ ಆಡು ಭಾಷೆಗಳು ಮಾಯವಾಗತೊಡಗಿದವು. ಅಲ್ಲಿ ವಸಾಹತುಶಾಹಿ ಆಡಳಿತಕ್ಕೆ ಒಳಪಟ್ಟ ಮೊದಲ ತಲೆಮಾರಿನಿಂದ ಎರಡನೆಯ ತಲೆಮಾರಿಗೆ ಬರುತ್ತಿದ್ದಂತೆ ಇಂಗ್ಲಿಷ್ ವ್ಯಾಪಕವಾಗತೊಡಗಿತು. ಆಫ್ರಿಕಾದ ಜನ ನೋಡು ನೋಡುತ್ತಿದ್ದಂತೆಯೇ ತಮ್ಮ ಭಾಷೆ, ಧರ್ಮ ಎರಡನ್ನೂ ಕಳೆದುಕೊಂಡರು. ಆದರೆ ಈ ವಿಷಯ ಕೈಗೆತ್ತಿಕೊಂಡಿದ್ದು ಇಪ್ಪತ್ತನೆಯ ಶತಮಾನದ ಆಫ್ರಿಕಾದ ಬರಹಗಾರರು. ವಸಾಹತುಶಾಹಿ ಪ್ರಭುತ್ವಗಳು ಜಗತ್ತಿನಾದ್ಯಂತ ಕಳಚಿ ಬೀಳುತ್ತಿರುವಂತೆ ಇದರ ಅರಿವು ಇನ್ನೂ ಜಾಗೃತವಾಗತೊಡಗಿತು. ಚಿನುವಾ ಅಚಿಬೆ ತನ್ನ ಕಥನಗಳಲ್ಲಿ ವಸಾಹತುಶಾಹಿಯಿಂದಾದ ಸಾಂಸ್ಕೃತಿಕ ಹಾನಿಗಳನ್ನು ಕುರಿತು ಬರೆಯತೊಡಗಿದೆ. ಅವನಿಗೆ ತನ್ನ ಭಾಷೆ ತಾವು ಕಳೆದುಕೊಂಡ ಅಮೂಲ್ಯವಾದ ಸತ್ವ ಎಂಬುದು ತಿಳಿಯಿತು. ಭಾಷೆಯೆಂದರೆ ಒಂದು ಸಂಸ್ಕೃತಿಯ ಸಂಕೇತ ಸುರುಳಿ ಎಂಬುದನ್ನು ಅರಿಯಲು ಅಚಿಬೆ ಸೇರಿದಂತೆ ಸೊಯಿಂಕಾ ಮುಂತಾದ ಬರಹಗಾರರು ತಮ್ಮ ಕಥನಗಳಲ್ಲಿ/ನಾಡಕಗಳಲ್ಲಿ ವೆಸ್ಮೃತಿಗೆ ಸರಿದಂತಿದ್ದ ಆಫ್ರಿಕಾ ಪುರಾಣಗಳನ್ನು ಬಳಸಿಕೊಳ್ಳ ತೊಡಗಿದರು. ಇದು ನಿರ್ವಸಾಹತೀಕರಣದ ಪ್ರಕ್ರಿಯೆ.

ಇಂಗ್ಲಿಷನ್ನು ಅನಿವಾರ್ಯವಾಗಿ ಬಳಸಬೇಕಾದ ಆಫ್ರಿಕಾದ ಬರಹಗಾರರು ಹೊರಳುದಾರಿಯ ಕಷ್ಟಗಳನ್ನು ಅನುಭವಿಸುತ್ತಲೇ ಬಂದಿದ್ದಾರೆ. ಭಾರತೀಯ ಭಾಷೆಗಳಿಗೆ ಇರುವ ಇಂಗ್ಲಿಷ್ ಆಯ್ಕೆ ಎರಡನೆಯ ಭಾಷೆಯಾಗಿ. ಆದರೆ ಆಫ್ರಿಕಾದ ಜನರಿಗೆ ಇಂಗ್ಲಿಷ್ (ಅಥವಾ ಫ್ರೆಂಚ್) ಬಿಟ್ಟರೆ ಮಾರ್ಗವಿಲ್ಲ. ಅಂತಲ್ಲಿ ಅವರು ಹೇಗೆ ತಮ್ಮ ದಾರಿ ಹುಡುಕಿಕೊಳ್ಳಬೇಕು? ಈ ಪ್ರಶ್ನೆ ಅವರಿಗೆ ಜೀವನ್ಮರಣದ ಪ್ರಶ್ನೆಯಾಗಿದೆ. ಒಂದು ಸಂಸ್ಕೃತಿಯ ವಿಸ್ಮೃತಿಯನ್ನು ಹೇಗೆ ಪುನಾ ಶೋಧಿಸಬೇಕು ಎಂಬುದು ಅವರ ಮುಂದಿನ ಪ್ರಶ್ನೆಯಾಗಿದೆ.

ಆಫ್ರಿಕಾದ ಬರಹಗಾರರಲ್ಲಿ ನಿರ್ವಸಾಹತೀಕರಣದ ಬಗ್ಗೆ ತೀವ್ರವಾಗಿ ಚರ್ಚಿಸಿದವನೆಂದರೆ ಗೂಗಿ ವಾ ಥಿಯಾಂಗೊ. ಗೂಗಿ ನಿರ್ವಸಾಹತೀಕರಣದ ಬಗ್ಗೆ ದೊಡ್ಡ ಸಮರವನ್ನೇ ಸಾರುತ್ತಾನೆ. ಗೂಗಿಗೆ ನಿರ್ವಸಾಹತೀಕರಣವೆನ್ನುವುದು ಜೀವನ್ಮರಣದ ಪ್ರಶ್ನೆಯಾಗಿದೆ. ಜೈಲಿನಲ್ಲಿದ್ದಾಗ ಅವನು ತನಗೆ ಕೊಡುತ್ತಿದ್ದ ಟಾಯ್ಲೆಟ್ ಪೇಪರಿನಲ್ಲಿ ಆಫ್ರಿಕಾದ ಭಾಷೆಯಲ್ಲಿ ಬರೆದ. ಇದರಿಂದ ಅವನಿಗೆ ತನ್ನ ಭಾಷೆಯ ಬಗ್ಗೆ ಗೌರವ ಮತ್ತು ತನ್ನ ಆತ್ಮ ಸ್ವಾತಂತ್ರ್ಯದ ಅರ್ಥ ಹೊಳೆಯ ತೊಡಗಿತಂತೆ. ಹೀಗೆಂದು ತನ್ನ ಸಂದರ್ಶನಗಳಲ್ಲಿ ಆತ ಹೇಳಿಕೊಂಡಿದ್ದಾನೆ. ಅವನ ಪ್ರಕಾರ ಗುಂಡು ದೇಹವನ್ನು ಸೀಳಿದರೆ ಭಾಷೆ ಆತ್ಮವನ್ನೇ ಸೀಳುವ ಶಕ್ತಿಯುಳ್ಳದ್ದು. ಅವನ ‘ಡಿಕಾಲೊನೈಸಿಂಗ್ ದಿ ಮೈಂಡ್’ ಎನ್ನುವ ಕೃತಿ ನಿರ್ವಸಾಹತೀಕರಣದ ಬಗ್ಗೆ ಪ್ರಾತಿನಿಧಿಕವಾದ ಚಿಂತನೆಗಳನ್ನು ಮಂಡಿಸುತ್ತದೆ.

ಗೂಗಿ ಉಲ್ಲೇಖಿಸುವ ಎಜಾಕಿಲ್ ಮೆಫಲೆಲೆ ಹೇಳುವಂತೆ, ಇಂಗ್ಲಿಷ್ ಮತ್ತು ಫ್ರೆಂಚ್ ರಾಷ್ಟ್ರೀಯ ವೇದಿಕೆಯಲ್ಲಿ ಬಿಳಿಯರನ್ನು ವಿರೋಧಿಸಲು ಇರುವ ಸಾಮಾನ್ಯ ಭಾಷೆಗಳು. ಇವು ನಿಜಕ್ಕೂ ಒಗ್ಗೂಡಿಸುವ ತಂತುಗಳಾಗಿವೆ ಎನ್ನುತ್ತಾನೆ (.ಪು.೭). ೧೯೬೪ರಲ್ಲಿ ಚಿನುವಾ ಅಚಿಬೆ ಮಾಡಿದ ಭಾಷಣವನ್ನೂ ಸಹ ಗೂಗಿ ಉಲ್ಲೇಖಿಸುತ್ತಾನೆ: ಮನುಷ್ಯ ಬೇರೆಯವರ ಸಲುವಾಗಿ ತನ್ನ ತಾಯ್ನುಡಿಯನ್ನು ಬಿಟ್ಟುಕೊಡುವುದು ನ್ಯಾಯವೇ? ಇದೊಂದು ಭಯಂಕರ ವಿಶ್ವಾಸದ್ರೋಹದಂತೆ ಕಾಣುತ್ತದೆ. ಹಾಗೆಯೇ ಒಂದು ಅಪರಾಧಿ ಪ್ರಜ್ಞೆಯನ್ನು ಸಹ ಹುಟ್ಟು ಹಾಕುತ್ತದೆ. ಇಷ್ಟಾದರೂ ನನಗೆ ಆಯ್ಕೆಗಳಿಲ್ಲಿ. ನನಗೆ ಸಿಕ್ಕಿರುವ ಭಾಷೆಯನ್ನು ನಾನು ಉಪಯೋಗಿಸಲೇ ಬೇಕು“. (ಪು.೭). ಇಂತಹ ಮಾತುಗಳಲ್ಲಿ ಗೂಗಿಗೆ ಸಮಾಧಾನವಿಲ್ಲ. ಅವನಿಗೆ ಇದೊಂದು ವಿಮೋಚನೆಯೆಂಬಂತೆ ಕಾಣುವುದಿಲ್ಲ. ವಸಾಹತು ಭಾಷೆಗಳಿಗೆ ಒಂದು ಮಾರ್ಜಿನ್ ಕೊಡುವುದರಿಂದ ಸೋಂಕು ಸಂಪೂರ್ಣ ಹೋಗುವುದಿಲ್ಲ. ಇಲ್ಲಿ ಗೂಗಿಗೆ ಕಾಣುವುದು ಒಂದೇ ಆಯ್ಕೆ. ಅದು ಆಫ್ರಿಕಾದ ಬರಹಗಾರ ತನ್ನ ಭಾಷೆಯಲ್ಲಿಯೇ ಬರೆಯಬೇಕು, ಇದನ್ನು ಬಿಟ್ಟು ಬೇರೆ ವಿಧಿಯಿಲ್ಲ. ವಿಮೋಚನೆಯ ದಾರಿ ಕತ್ತಿಯಲುಗಿನದು. ಅದರೆ ಅದನ್ನು ಕ್ರಮಿಸಲೇ ಬೇಕು ಎಂಬ ನಿಲುವು ಅವನದು. ಆದರೆ ಇಲ್ಲೊಂದು ಸಾಧ್ಯತೆಯನ್ನು ಅವನು ಗುರುತಿಸುತ್ತಾನೆ. ಭಾಷಾಂತರದಿಂದ ಆಫ್ರಿಕಾದ ಸಂಸ್ಕೃತಿಯನ್ನು ಯೂರೋಪಿಯನ್ ಭಾಷೆಗಳಿಗೆ ಸೇರಿಸಲು ಸಾಧ್ಯವಿದೆ. ಭಾಷೆ ಎನ್ನುವುದು ಗೂಗಿಗೆ ಒಂದು ಸಾಂಸ್ಕೃತಿಕ ಹಾಸಿನಂತೆ. ಹಾಗಾಗಿ ಯೂರೋಪಿನಿಂದ ಪಡೆಯುವುದಕ್ಕಿಂತಲೂ ಆಫ್ರಿಕಾದ ಕಡೆಯಿಂದಲೇ ಯೂರೋಪಿಗೆ ಹೋಗಬೇಕಾದ ಪ್ರತಿಚಲನೆಯನ್ನು ಅವನು ನಿರೀಕ್ಷಿಸುತ್ತಾನೆ. ಇನ್ನು ಮುಂದೆ ತನ್ನ ತಾಯ್ನುಡಿಯಾದ ಗಿಕುಯು ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡುವ ಸಂಕಲ್ಪ ಮಾಡುತ್ತಾನೆ. ಅವು ಇಂಗ್ಲಿಷ್/ಫ್ರೆಂಚ್‌ಗಳಿಗೆ ನಂತರ ಭಾಷಾಂತರವಾಗುವ ಮುಕ್ತ ಅವಕಾಶಗಳಿದೆ ಎನ್ನುತ್ತಾನೆ ಗೂಗಿ. ಇಲ್ಲ ಭಾಷೆಗಳಿಗೂ ದ್ವಂದ್ವ ಸ್ಥಿತಿ ಇರುತ್ತಾನೆ. ಒಂದು ಸಂಪರ್ಕಕ್ಕಾಗಿ ಬಳಸುವ ಅದರ ಸಾಧ್ಯತೆ; ಇನ್ನೊಂದು, ಸಂಸ್ಕೃತಿಯ ವಾಹಕ ಗುಣ. ಈ ಎರಡನೆಯ ಗುಣು ಭಾಷೆಯನ್ನು ಚರಿತ್ರೆಗೆ ಕಲ್ಪಿಸುತ್ತದೆ. ಒಂದು ಸಮುದಾಯದ ವಿಕಾಸದ ಗತಿ ಅದರಲ್ಲಿ ಕಾಣುವಂತದ್ದಾಗಿರಬೇಕು.

ಇಂಗ್ಲಿಷ್ ಅನ್ನು ತಮ್ಮ ಭಾಷೆಯಾಗಿಸಿಕೊಳ್ಳುವ ಭಾರತೀಯ ಮತ್ತು ಆಫ್ರಿಕಾದ ಬರಹಗಾರರೂ ಇದ್ದಾರೆ. ಇವರಿಗೆ ತಮ್ಮ ದೇಶೀಯ ಭಾಷೆಯಂತೆ ಇಂಗ್ಲಿಷ್ ಕೂಡ ಒಂದು ಅಭಿವ್ಯಕ್ತಿಯ ಭಾಷೆಯಾಗಿದೆ. ಇವರು ಹೇಳುವುದು ಇಂಗ್ಲಿಷೆಂದರೆ ವಸಾಹತುಕಾರನ ಭಾಷೆಯಲ್ಲ. ಅದನ್ನು ಪಡೆದುಕೊಂಡವರು ಬಳಸಿ ತಮ್ಮದ್ದನ್ನಾಗಿ ಮಾಡಿಕೊಂಡ ಭಾಷೆ. ಅದನ್ನು ಬಳಸುವುದರಲ್ಲಿ ಯಾವ ದೋಷವೂ ಇಲ್ಲ ಎಂಬ ಭಾವನೆ ಇವರದು. ಆರ್.ಕೆ. ನಾರಾಯಣ್, ರಾಜಾರಾವ್ ಭಾಷೆ ಇಂಗ್ಲಿಷೆಂದು ಮಾತ್ರ ಹೇಳಲು ಸಾಧ್ಯವೇ? ಅದರಲ್ಲಿ ಪ್ರಾದೇಶಿಕತೆಯ ಸೊಗಡಿಲ್ಲವೇ? ಎಂಬ ಪ್ರಶ್ನೆಗಳೂ ಇವೆ. ಇದೇ ಸಮಯದಲ್ಲಿ ಚಿನುವಾ ಅಚಿಬೆ ಹೇಳುವಂತೆ ‘ಇಂಗ್ಲಿಷ್ ಭಾಷೆ ನನ್ನ ಆಫ್ರಿಕಾ ಅನುಭವದ ಭಾರವನ್ನು ಹೊರಬಲ್ಲುದು. ಆದರೆ ಅದು ಹೊಸ ಇಂಗ್ಲಿಷ್ ಭಾಷೆಯಾಗಿರುತ್ತದೆ; ಹಳೆ ತಲೆಮಾರಿನ ಜೊತೆಗೆ ಒಂದು ಸಶಕ್ತ ಸಂಬಂಧ ಏರ್ಪಡಿಸಿಕೊಳ್ಳುತ್ತಲೇ ಬದಲಾವಣೆಗೆ ಸಜ್ಜಾಗುತ್ತರುವ ಆಫ್ರಿಕಾದ ಪರಿಸರವನ್ನು ಹಿಡಿಯಬಲ್ಲ ಇಂಗ್ಲಿಷ್ ಆಗಿರುತ್ತದೆ’ (ಪು.೮)

ಭಾರತದಲ್ಲಿ ಭಾಷೆಯ ನಿರ್ವಸಾಹತೀಕರಣ ಇನ್ನೊಂದು ಬಗೆಯದು. ಭಾರತ ವಸಾಹತುಶಾಹಿ ಕಾಲಕ್ಕೂ ಮೊದಲೇ ಹಲವು ಭಾಷೆಗಳ ದೇಶವಾಗಿತ್ತು. ಇಂಗ್ಲಿಷ್ ಭಾಷೆಯ ಪರಿಣಾಮ ಭಾರತೀಯ ಭಾಷೆಗಳ ಮೇಲೆ ಆದರೂ ಅವು ಇಂಗ್ಲಿಷನ್ನು ಅರಗಿಸಿಕೊಂಡು ಬೆಳೆದು ಬಂದಿವೆ. ಆದರೆ ಇಂಗ್ಲಿಷ್ ಅನ್ನುವುದು ಸಾಂಸ್ಕೃತಿಕ ಪ್ರತಿನಿಧಿಯಾಗಿ ಬಳಸಲ್ಪಟ್ಟಾಗ ಸ್ಥಳೀಯ ಭಾಷೆ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು. ಆ ಮೂಲಕ ಸ್ಥಳೀಯವಾದ ಸಂಸ್ಕೃತೆಯ ಮೇಲೆ ಇಂಗ್ಲಿಷ್ ಯಜಮಾನಿಕೆಯನ್ನು ಸ್ಥಾಪಿಸತೊಡಗಿತು. ಅದರಿಂದ ಉಂಟಾದ ಪರಿಣಾಮಗಳು ಎರಡು ತೆರನಾದ್ದು: ಒಂದು, ಸಾಂಸ್ಕೃತಿಕ ಕೋಶಗಳು ಹೊಸ ಭಾಷೆಯ ಪ್ರವೇಶದಿಂದ ಪಲ್ಲಟಗೊಳ್ಳುವ ಲಕ್ಷಣ ಕಾಣಿಸಿತು; ಇನ್ನೊಂದು, ಸಮಾಜದಲ್ಲಿ ಒಂದು ಪ್ರತಿಷ್ಟಿತ ವರ್ಗ ರೂಪುಗೊಳ್ಳತೊಡಗಿತು. ಅದರ ಆಳವಾದ ಚರ್ಚೆಗೆ ಇಲ್ಲಿ ಜಾಗವಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ ಇಂಗ್ಲಿಷ್ ಭಾಷಾ ಮಾಧ್ಯವದಿಂದ ತರತಮಗಳು ಸೃಷ್ಟಿಯಾದವು. ಇಂಗ್ಲಿಷ್ ಭಾಷೆಯ ಬಳಕೆ ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ದೊರಕಿಸಿಡುವುದೆಂಬ ನಂಬಿಕೆ ಬಲಗೊಳ್ಳತೊಡಗಿತು.

ಇದಲ್ಲದೆ ಮೂರನೆಯ ಕಾರಣವೂ ಇದೆ. ಅದೆಂದರೆ, ಇಂಗ್ಲಿಷ್ ಭಾಷೆ ಭಾರತದಲ್ಲಿ ಹುಟ್ಟಿದ್ದೇ ಇಂಗ್ಲಿಷ್ ಆಡಳಿತಶಾಹಿಯಲ್ಲಿ ನೆರವಾಗುವ ದೇಶಿಯ ಇಂಗ್ಲಿಷ್ ಶಿಕ್ಷಿತರನ್ನು ಸೃಷ್ಟಿಸುವುದಕ್ಕಾಗಿ. ಇಂಗ್ಲಿಷ್ ಶಿಕ್ಷಣ ಅಪಾರ ಪ್ರಮಾಣದಲ್ಲಿ ಉದ್ಯೋಗ ಅವಕಾಶಗಳನ್ನು ತೆರೆಯಿತು. ಈ ಲೌಕಿಕ ಪ್ರಯೋಜನಗಳು ಇಂಗ್ಲಿಷ್ ಕಲಿಕೆಯತ್ತ ದೇಶೀಯರು ತಿರುಗಲು ಸಹಾಯ ಮಾಡಿದವು. ಈ ಸಾಮಾಜಿಕ ಉನ್ನತೀಕರಣ ಇಂಗ್ಲಿಷ್ ಭಾಷೆಯಿಂದ ಲಭಿಸುತ್ತದೆ ಎನ್ನುವ ನಂಬಿಕೆಯೊಂದು ವಸಾಹತೋತ್ತರ ಕಾಲದಲ್ಲಿಯೂ ಸರ್ವವ್ಯಾಪಿಯಾಗಿ ಬೆಳೆದಿದೆ. ಹಾಗಾಗಿ ಸ್ಥಳೀಯ ಭಾಷೆ/ಮಾತೃ ಭಾಷೆಯನ್ನು ಎರಡನೆಯ ಆದ್ಯತೆಯಾಗಿಟ್ಟುಕೊಂಡು ಬಹುತೇಕ ಭಾರತೀಯ ಸಮಾಜ ಇಂಗ್ಲಿಷನ್ನು ಅನ್ನ ನೀಡುವ ಭಾಷೆಯಾಗಿ ಗ್ರಹಿಸುತ್ತಲಿದೆ. ಇಂಗ್ಲಿಷ್‌ನಿಂದ ಒಂದು ಪ್ರತಿಷ್ಟಿತ ವರ್ಗ ಸೃಷ್ಟಿಯಾಗಿದ್ದು ಅದು ತನ್ನ ಹಿತಾಸಕ್ತಿಯ ಸಲುವಾಗಿ ಇಂಗ್ಲಿಷನ್ನು ಅವಲಂಬಿಸಿದೆ.

ಭಾಷೆಯ ಬಗ್ಗೆ ಬರೆಯುವಾಗ ಗಾಂಧಿ ಎಲ್ಲರಿಗೂ ತಮ್ಮ ಮಾತೃಭಾಷೆಯೇ ವ್ಯವಹಾರಕ್ಕೆ ಉತ್ತಮ ಎನ್ನುತ್ತಾರೆ. ಅದಕ್ಕಾಗಿ ಅವರು ಆದಷ್ಟೂ ಗುಜರಾತಿನಲ್ಲೇ ವ್ಯವಹರಿಸ ಬಯಸುತ್ತಾರೆ. ಇಂಗ್ಲಿಷ್ ಅನ್ನು ಯಜಮಾನಿಕೆಯ ಭಾಷೆಯಾಗಿ ಬಳಸುವ ಅವಕಾಶ ಸರ್ವಥಾ ಕೂಡದು ಇನ್ನುತ್ತಾರೆ ಗಾಂಧಿ. ಆದರೆ ಭಾರತದಲ್ಲಿ ಒಂದು ಸಂಪರ್ಕ ಭಾಷೆಯ ಅವಶ್ಯಕತೆಯಿದೆ ಇನ್ನುವುದು ಅವರ ಅಭಿಪ್ರಾಯವಾಗಿತ್ತು. ಭಾಷೆಯ ಯಜಮಾನಿಕೆಯ ಬಗ್ಗೆ ಮುಂದೆ ಬಂದ ಲೋಹಿಯಾ ಖಂಡಿಸುತ್ತಾರೆ. ಇಂಗ್ಲಿಷ್ ಎನ್ನುವುದು ಸಾಮಾನ್ಯರಲ್ಲಿ ಕೀಳರಿಮೆ ಉಂಟು ಮಾಡುವ ಭಾಷೆಯಾಗಿದೆ ಇನ್ನುತ್ತಾರೆ ಲೋಹಿಯಾ ಇಂಗ್ಲಿಷನ್ನು ಒಂದು ಯಾಜಮಾನ್ಯ ಭಾಷೆಯಾಗಿ ನೋಡುತ್ತಾರೆ. ‘ಇಂಗ್ಲಿಷ್ ಭಾಷೆಯು ಭಾರತಕ್ಕೆ ಅಪಾಯ ಮಾಡುತ್ತಿರುವುದಕ್ಕೆ, ಅದು ವಿದೇಶಿ ಭಾಷೆ ಎನ್ನುವುದಕ್ಕಿಂತ ಹೆಚ್ಚಾಗಿ ಭಾರತದ ಸಂದರ್ಭದಲ್ಲಿ ಅದು ಯಜಮಾನಿಕೆಯ ಭಾಷೆಯಾಗಿರುವುದೇ ಪ್ರಮುಖ ಕಾರಣ. ಜನಸಂಖ್ಯೆಯ ಶೇಕಡಾ ಒಂದರಷ್ಟು ಮಾತ್ರ ಇರುವ ಅಲ್ಪಸಂಖ್ಯಾತ ವರ್ಗವು ಲಾಭ ಹಾಗೂ ಅಧಿಕಾರ ಗಿಟ್ಟಿಸಲು ಬೇಕಾಗುವಷ್ಟು ನೈಪುಣ್ಯವನ್ನು ಈ ಭಾಷೆಯಲ್ಲಿ ಪಡೆಯಬಲ್ಲುದು’ (ಪು.೨೩೯-ರಾಮಮನೋಹರಲೋಹಿಯಾ ಚಿಂತನೆ, ಹಂಪಿ.ವಿ.ವಿ). ಲೋಹಿಯಾ ಪ್ರಬಲವಾಗಿ ವಿರೋಧಿಸುವುದು ಇಂಗ್ಲಿಷನ್ನು ಕಲಿಯುವುದಕ್ಕಲ್ಲ. ಅವರ ಪ್ರಕಾರ ನಾವು ಇಂಗ್ಲಿಷನ್ನು ‌ಗ್ರಹಿಕೆಯ ಭಾಷೆಯಾಗಿ ಬಳಸುವುದರೊಂದಿಗೆ ಅಭಿವ್ಯಕ್ತಿ ಮಾಧ್ಯಮವನ್ನಾಗಿಯೂ ಮಾಡಿಕೊಂಡಿರುವುದು ಮೂಲ ದೋಷಕ್ಕೆ ಕಾರಣ. ಅದರಲ್ಲೂ ಬಹುಭಾಷೀಯ ಭಾರತೀಯ ಸಮಾಜದಲ್ಲಿ ಹಲವು ಭಾಷೆಗಳ ಕಲಿಕೆ ಸಾಧ್ಯವಿದೆ. ಅವುಗಳಲ್ಲಿ ಇಂಗ್ಲಿಷೂ ಒಂದು ಭಾಷೆಯಾಗಿ ಬರಬಹುದೇ ವಿನಾ ಬೇರೆ ಇಲ್ಲಾ ಭಾಷೆಗಳ ಬದಲಾಗಿ ಅಲ್ಲ. ಹೇರಿಕೆಯೆನ್ನುವುದನ್ನು ಲೋಹಿಯಾ ಕಟುವಾಗಿ ವಿರೋಧಿಸುತ್ತಾರೆ. ಯಜಮಾನಿಕೆ ನಡೆಸುವ ಯಾವುದೇ ಭಾಷೆಯನ್ನು ವೆರೋಧಿಸುವುದು ಆರೋಗ್ಯಕರ ಎನ್ನುತ್ತಾರೆ ಅವರು. ಹೀಗಾಗಿ ಬರಿಯ ಇಂಗ್ಲಿಷ್ ಒಂದೇ ಅಲ್ಲ. ತಮಿಳು, ಕನ್ನಡ ಮುಂತಾದ ಪ್ರಾದೇಶಿಕ ಭಾಷೆಗಳನ್ನಾಡುವ ಜಾಗದಲ್ಲಿ ಹಿಂದಿ ಹೇರಿಕೆ ಕೂಡ ಯಾಜಮಾನ್ಯ ಧೋರಣೆಯ ಸಂಕೇತವೇ ಆಗಿದೆ.

ಅಭಿವ್ಯಕ್ತಿ ಮಾಧ್ಯಮ ಇಂಗ್ಲಿಷ್ ಆದ ಕೂಡಲೇ ಪ್ರತಿಭೆ ಸಿದ್ಧಿಯಾಗುವುದಲ್ಲ. ಲೋಹಿಯಾ ಪ್ರಕಾರ, ‘ಚೀಣಾ ಇಲ್ಲವೆ ರುಮೇನಿಯಾ ಸಾಧಿಸಿರುವ ಪ್ರಗತಿಗೆ ಆ ದೇಶಗಳ ಉತ್ತಮ ಆರ್ಥಿಕ ವ್ಯವಸ್ಥೆ ಇಷ್ಟರ ಮಟ್ಟಿಗೆ ಕಾರಣವಾಗಿದೇಯೋ ಅಷ್ಟೇ ಆ ದೇಶಗಳು ತಮ್ಮ ಜನತೆಯ ಭಾಷೆಯ ಮೂಲಕ ಕಾರ್ಯ ನಿರ್ವಹಿಸಿದ್ದೂ ಕಾರಣವಾಗಿದೆ. ಕರಿಯರ ದೇಶಗಳಲ್ಲಿ-ಅದರಲ್ಲೂ ವಿಶೇಷವಾಗಿ ಭಾರತೀಯರ ವಿಚಾರಧಾರೆಯಲ್ಲಿ ಮನಸ್ಸು ಮತ್ತು ಉದರವನ್ನು ಪ್ರತ್ಯೇಕಿಸಿರುವುದು ನಮ್ಮ ಕಾಲದ ದುರಂತಗಳಲ್ಲೊಂದು. ಯಾವುದೇ ದೇಶದ ಮನಸ್ಸಿಗೆ ಚಿಕಿತ್ಸೆ ನೀಡದೆಯೇ ಹಸಿವು ಅಥವಾ ಅರ್ಥ ವ್ಯವಸ್ಥೆಯನ್ನು ಸರಿಪಡಿಸಲಾಗದು’ (ಪು೨೮೧).

ಭಾರತದಲ್ಲಿ ಇಂಗ್ಲಿಷನ್ನು ಹೊಸ ಪರಿಭಾಷೆಯಲ್ಲಿ ಯಾಜಮಾನ್ಯ ಭಾಷೆ ಎಂದು ಕರೆಯುತ್ತಿದ್ದೇವೆ. ಆದರೆ, ಪ್ರಾದೇಶಿಕ ಭಾಷೆಗಳ ಮೇಲೆ ಸಂಸ್ಕೃತ ಈ ಹಿಂದೆ ಅಧಿಕಾರ ಸ್ಥಾಪಿಸಿತ್ತು. ಇದರಿಂದಲೂ ಬಿಡುಗಡೆಯಾಗಿ ತಮ್ಮ ಭಾಷೆಯನ್ನು ಬಳಸುವ ಬಗ್ಗೆ ಅನೇಕ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಕನ್ನಡದ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಸಂಸ್ಕೃತವನ್ನು ಹೇಗೆ ಸ್ವೀಕರಿಸಬೇಕು ಅಥವಾ ಅದನ್ನು ಸಂಪೂರ್ಣ ಬಿಟ್ಟುಬಿಡಬೇಕೊ ಎನ್ನುವ ಬಗ್ಗೆ ಸಾಹಿತ್ಯದಲ್ಲಿ ಸುಳಿವು ಸಿಗುತ್ತದೆ. ಇದೇ ಚರ್ಚೆ ದೊಡ್ಡ ಪ್ರಮಾಣದಲ್ಲಿ ಇಂಗ್ಲಿಷ್‌ಗೆ ಸ್ಥಳಾಂತರಗೊಂಡಿದೆ.

ಕನ್ನಡದ ಸಂದರ್ಭ

ಕನ್ನಡದ ಸಂದರ್ಭದಲ್ಲಿ ಭಾಷಾ ನಿರ್ವಸಾಹತೀಕರಣಕ್ಕೆ ಒಂದು ಇತಿಹಾಸವೇ ಇದೆ. ಸಂಸ್ಕೃತವನ್ನು ಯಾವ ಪ್ರಮಾಣದಲ್ಲಿ ಬಳಸಬೇಕು ಎನ್ನುವುದಕ್ಕೆ ಕವಿರಾಜಮಾರ್ಗಕಾರನಿಂದ ಹಿಡಿದು ಅನೇಕರು ಚರ್ಚಿಸುತ್ತಾ ಬಂದಿದ್ದಾರೆ. ಅದರಲ್ಲಿ ಆಂಡಯ್ಯನ ಕನ್ನಡದ ಮೇಲಿನ ವೀರನಿಷ್ಠೆಯು ಜನಪ್ರಿಯವಾಗಿದೆ. ಕನ್ನಡದ ಭಾಷಾ ಸ್ವೀಕರಣ ಮತ್ತು ನಿರಾಕರಣ ಕ್ರಿಯೆಗಳು ಒಂದಿಲ್ಲೊಂದು ತರ ಭಾಷೆಯ ಮೀಮಾಂಸೆಯನ್ನು ಬೆಳೆಸಲು ಯತ್ನಿಸಿವೆ ಎನ್ನಬಹುದು. ಇಲ್ಲಿನ ಸೀಮಿತ ಸ್ಥಳಾವಕಾಶದಿಂದ ಅದನ್ನೆಲ್ಲ ವಿಸ್ತೃತವಾಗಿ ಚರ್ಚಿಸಲು ಸಾಧ್ಯವಿಲ್ಲ. ಭಾಷೆಯ ನಿರ್ವಸಾಹತೀಕರಣಕ್ಕೆ ಸಂಬಂಧಿಸಿದಂತ ಆಧುನಿಕ ಕನ್ನಡದಲ್ಲಿ ನಡೆದಿರುವ ಕೆಲವು ಪ್ರಮುಖ ವಿಚಾರಗಳನ್ನು ನೋಡುವ ಪ್ರಯತ್ನ ಮಾಡಲಾಗಿದೆ.

ಕುವೆಂಪು ಪ್ರತಿಪಾದಿಸಿದ ಮಾರ್ಗ

ಕುವೆಂಪು ಕನ್ನಡದ ವಿಮೋಚನೆಯನ್ನು ಕುರಿತು ಚಿಂತಿಸಿದವರು. ಕುವೆಂಪು ಜೀವನದಲ್ಲಿ ತಿರುವು ನೀಡಿದ್ದು ಅವರೇ ವಿವರಿಸುವ ಒಂದು ಘಟನೆ. ಅದು ಅವರ ಕಾವ್ಯದ ಮಾಧ್ಯಮ ಕುರಿತಾದದ್ದು. ಕುವೆಂಪು ಮೊದಲು ಕನ್ನಡದಲ್ಲಿ ಕವಿತೆ ಬರೆಯುತ್ತಿರಲಿಲ್ಲ. ಅವರು ತಮ್ಮ ಕವಿತೆಗಳನ್ನು ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದರಂತೆ. ಅವನ್ನು ಮೈಸೂರಿಗೆ ಬಂದಿದ್ದ ಐರಿಷ್ ಕವಿ ಕಸಿನ್ಸ್ ಅವರಿಗೆ ತೋರಿಸಬೇಕೆಂದು ಹೋದರೆ ಕಸಿನ್ಸ್ ಅವರು ನಿಮ್ಮ ಭಾಷೆಯಲ್ಲಿ ಸಾಹಿತ್ಯ ರಚನೆ ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದಾಗಿನ ಸಂದರ್ಭ ಬಹುಶಃ ಕುವೆಂಪು ಕನ್ನಡದ ನಿರ್ವಸಾಹತೀಕರಣಕ್ಕೆ ತಿರುಗುವ ನಿರ್ಣಾಯಕ ಸಂದರ್ಭವಾಗಿತ್ತು ಎನ್ನಬಹುದು. ಕುವೆಂಪು ಆನಂತರದಿಂದ ಕನ್ನಡದ ಬಗ್ಗೆ ಒಲವು ತಳೆಯಲು ಆರಂಭಿಸಿದರು.

ಕುವೆಂಪು ಕನ್ನಡದ ಬಗೆಗೆ ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಅವರ ಪದ್ಯ ಮತ್ತು ಗದ್ಯಗಳೆರಡರಲ್ಲೂ ನೋಡಬಹುದು. ಕಾವ್ಯದಲ್ಲಿ ಕುವೆಂಪು ಇಂಗ್ಲಿಷ್ ಬಗ್ಗೆ ವ್ಯಕ್ತಪಡಿಸುವ ಆಕ್ರೋಶವು ಅವರ ಗದ್ಯದಲ್ಲಿ ‌ವ್ಯಕ್ತವಾಗಿಲ್ಲ. ಇದು ಗಮನಿಸಬೇಕಾದ ಅಂಶವಾಗಿದೆ.

ಕುವೆಂಪು ಅವರ ಭಾಷಾ ವಿಮೋಚನಾ ಭಾವವನ್ನು ವ್ಯಕ್ತಪಡಿಸುವ ‘ಪ್ರಾರ್ಥಿಸಿ ಓ ಮಕ್ಕಳಿರಾ’ ಕವಿತೆ ಇಂಗ್ಲಿಷ್‌ನಿಂದ ಬಿಡುಗಡೆಯನ್ನು ಬೇಡುತ್ತದೆ:

ಪಾರುಮಾಡೆಮ್ಮನೀ ಇಂಗ್ಲಿಷಿನಿಂದ
ಪೂತನಿಯ ಅಸುವನೀಂಟಿ ಕೊಂದ ಗೋವಿಂದ
ತಾಯಿ ಮೊಲೆಯಂದದಲಿ ತೋರ್ಪವಳ ಕಬ್ಬಿಣದ
ಹೇರದೆಯ ಕೆಚ್ಚಲನು ಬಾಯ್ಗಿಟ್ಟು, ತುಟಿಹರಿದು
ರಕ್ತ ಸೋರುವ ನಮ್ಮನೊಲಿದು ಕಾಪಾಡಯ್ಯಾ
ಭಾರತೀಯ ಮಕ್ಕಳನು ರಕ್ಷಿಸಯ್ಯಾ

ಈ ಪದ್ಯದಲ್ಲಿ ಕವಿ ಕುವೆಂಪು ತೆಗೆದುಕೊಳ್ಳುವ ಪೂತನಿಯ ಹೋಲಿಕೆ ಪರಭಾಷೆಯ ತೋರುಗಾಣಿಕೆಯ ತಾಯ್ತನವನ್ನು ಹೇಳುತ್ತಲಿದೆ. ಹಾಗೂ ಅದು ಹಾಲೂಡುವುದಿಲ್ಲ, ಪುಷ್ಟಿಗೊಳಿಸುವುದಿಲ್ಲ ಎಂಬ ಅಂಶವನ್ನೂ ಹೇಳುತ್ತಲಿದೆ. ಕನ್ನಡದ ಪಾಲಿಗೆ ಇಂಗ್ಲಿಷ್ ಪೂತನಿಯ ಅವತಾರ ಎಂದು ಹೇಳುವ ಈ ಪದ್ಯದಲ್ಲಿ ಪ್ರಾರ್ಥನೆ ಮಾತ್ರ ಇದೆ, ಪರಿಹಾರವಲ್ಲ. ಆದರೆ ಕುವೆಂಪು ಅವರ ‘ಸ್ವರ್ಗದ್ವಾರದಿ ಯಕ್ಷಪ್ರಶ್ನೆ’ ಕವಿತೆ ಅದನ್ನು ಯಾಕೆ ಭಾಷೆ ವಿಮೋಚನೆಯಾಗಬೇಕು ಎಂಬುದಕ್ಕೆ ಉತ್ತರ ಕೊಡುವಂತಿದೆ:

ಕೈಮರದ ಬೋರ್ಡಿನಲಿ ಇತ್ತು ನರಕಕ್ಕೆ ದಾರಿ!
ನನ್ನ ಕನ್ನಡ ಮಮತೆ ಬಂತು ಉಕ್ಕಿ
ಕಡೆಗಾದರೂ ಅರ್ಥವಾಗುವುದೊಂದು ದಾರಿ ಸಿಕ್ಕಿ
ಅರ್ಥವಾಗದ ಸಗ್ಗ ಎನಿತಿದ್ದರೇನು?
ಅರ್ಥವಾದರೆ ಸಾಕು, ನರಕವೂ ಜೇನು!
ನುಗ್ಗಿದೆನು ದಾರಿಯಲಿ ನಾನು

ಭಾಷಾ ವಿಮೋಚನೆಗೆ ಕುವೆಂಪು ಅವರಲ್ಲಿ ಇನ್ನೂ ಒಂದು ಕಾರಣವಿದೆ. ಭಾಷೆ ಹೇರಿಕೆಯಾಗಿ ಬಂದಾಗ ಅದನ್ನು ಕುವೆಂಪು ನಿರಾಕರಿಸಬೇಕೆನ್ನುತ್ತಾರೆ. ಯಜಮಾನ ಸಂಸ್ಕೃತಿಯ ದ್ಯೋತಕವಾಗಿ ಹೇರಲಾಗುವ ಭಾಷೆಯನ್ನು ನಿರಾಕರಿಸಬೇಕು ಎನ್ನುವುದೇ ಕುವೆಂಪು ಅವರ ಅಭಿಪ್ರಾಯ:

ಬಲಾತ್ಕಾರಕಾಗಿ ಮಾತ್ರವೆ ಹೊರತು ರೋಷ
ಭಾಷೆಗಾಗಿಯೆ ನಮ್ಮ ದ್ವೇಷವೇನಿಲ್ಲ
ತೆಗೆಯಿರಿ ಬಲಾತ್ಕಾರದಂಶವನು ಆರಿಸಲಿ
ಸರ್ವರೂ ಇಂಗ್ಲಿಷನೆ, ಚಿಂತೆ ಇನಿತಿಲ್ಲ! (ಸಾಕು ಬಲಾತ್ಕಾರ)

ಕುವೆಂಪು ಸ್ವಾತಂತ್ರ್ಯೋತ್ತರ ಕಾಲದ ಭಾಷಾವಾರು ಸಂರಚನೆಗಳು ನಿರ್ಮಾಣವಾಗುವ ಹಂತದಿಂದ ಭಾಷಾಮಾಧ್ಯಮಗಳ ಚರ್ಚೆಯ ತನಕ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭಾಷಾ ನಿರ್ವಸಾಹತೀಕರಣವು ಸ್ವಾತಂತ್ರ್ಯದ ಜೊತೆಜೊತೆಗೇ ಸಿದ್ದಿಸಿಕೊಳ್ಳಬೇಕಾದದ್ದು ಎನ್ನುವುದನ್ನು ಅವರು ಪ್ರತಿಪಾದಿಸುತ್ತಾರೆ. ಅವರಿಗೆ ಭಾಷಾ ಮಾಧ್ಯಮದ ದೃಷ್ಟಿಯಿಂದ ಇಂಗ್ಲಿಷ್ ಭಾಷೆಯು ವಸಾಹತುಶಾಹಿಯ ಪಳೆಯುಳಿಕೆಯಂತೆ ಕಾಣುತ್ತದೆ. ಆದರೆ ಅವರ ಗದ್ಯದಲ್ಲಿ ಇಂಗ್ಲಿಷ್ ಬಗ್ಗೆ ಅಷ್ಟೇನು ಕಠಿಣರಾಗುವುದಿಲ್ಲ. ಅಲ್ಲಿ ಅವರು ಸೂಚಿಸುವುದು ಇಂಗ್ಲಿಷ್‌ನ ಹದವಾದ ಬಳಕೆಯಿಂದ ಪಡೆದುಕೊಳ್ಳಬೇಕಾದ ಸಾಧ್ಯತೆಗಳನ್ನು. ಅಂದರೆ ಇಂಗ್ಲಿಷಿನ ಗ್ರಹಿಕೆಗಳಿಂದಾಗುವ ಪ್ರಯೋಜನಗಳನ್ನು ಕನ್ನಡ ಮಾಧ್ಯಮದ ಮೂಲಕ ಪಡೆದುಕೊಳ್ಳುವ ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳಬೇಕು ಎನ್ನುವುದು. ‘ಇಂಗ್ಲಿಷ್ ಬೇಡವೇ ಬೇಡ ಎಂದು ಹೇಳುವವರು ಮತ್ತು ದೇಶಭಾಷೆಗಳೇ ಬೇಡ ಇಂಗ್ಲಿಷಿನಲ್ಲಿರಲಿ ಎಂದು ಹೇಳುವವರು ಈ ಎರಡೂ ತೀವ್ರ ಭಾವನೆಗಳನ್ನು ದೂರಮಾಡಿ, ಯಾವ ಮಾರ್ಗವನ್ನು ಕೈಕೊಂಡರೆ ನಮ್ಮ ದೇಶಕ್ಕೆ ಕ್ಷೇಮವೋ ಆ ಮಾರ್ಗವನ್ನು ನಿಶ್ಚಯಿಸಬೇಕು’ ಎಂಬುದು ಅವರ ಅಭಿಪ್ರಯ.(ಪು.೧೨೫, ಸಮಗ್ರ ಗದ್ಯ). ಆದರೆ ಕುವೆಂಪು ಅವರಿಗೆ ಸಂಸ್ಕೃತ ಅನ್ಯವಲ್ಲ. ಅದರ ಮೂಲಕ ನಿರ್ವಸಾಹತೀಕರಣ ಸಾಧಿಸಬಹುದೆಂಬ ಅಶಯ ಅವರಲ್ಲಿ ಕಾಣುತ್ತದೆ