ಯು.ಆರ್. ಅನಂತಮೂರ್ತಿ

೧೯೬೫ರಲ್ಲಿ ಅನಂತಮೂರ್ತಿ ಎತ್ತಿದ ಬ್ರಾಹ್ಮಣ ಶೂದ್ರ ಪ್ರಶ್ನೆ ಕನ್ನಡ ಭಾಷೆ ಮತ್ತು ಸಂಸ್ಕೃತಿಗಳ ವಲಯದಲ್ಲಿ ಸಂಚಲನವನ್ನುಂಟು ಮಾಡಿತು. ಬ್ರಾಹ್ಮಣ ಮತ್ತು ಶೂದ್ರ ಕಲ್ಪನೆಯನ್ನು ಅವರು ಭಾಷೆಗೆ ಅನ್ವಯಿಸುತ್ತಾ ಇಂಗ್ಲಿಷ್ ಬ್ರಾಹ್ಮಣನಾಗಿದ್ದರೆ, ಕನ್ನಡ ಶೂದ್ರವಾಗಿದೆ ಎಂದು ಹೇಳುತ್ತಾರೆ. ಇದಕ್ಕೆ ಅನಂತಮೂರ್ತಿ ಊಹಿಸುವ ಕಾರಣಗಳು ಇಂಗ್ಲಿಷ್ ಶಿಕ್ಷಣದಿಂದ ಸೀಳುಗೊಂಡಿರುವ ಆಧುನಿಕ ಭಾರತೀಯನ ವ್ಯಕ್ತಿತ್ವಗಳು. ಬುದ್ಧಿ ಮತ್ತು ಭಾವಗಳು ಒಡೆದುಕೊಂಡ ವ್ಯಕ್ತಿತ್ವಗಳು ಇಂಗ್ಲಿಷನ್ನೂ ಕನ್ನಡವನ್ನೂ ಬೇರೆ ಬೇರೆಯಾಗಿ ಗ್ರಹಿಸುತ್ತಿರುವುದೇ ನಮ್ಮ ದುಃಸ್ಥಿತಿಗೆ ಕಾರಣ ಎನ್ನುತ್ತಾರವರು. ‘ನಮ್ಮ ಬೌದ್ಧಿಕ ವ್ಯಾಪಾರಗಳೆಲ್ಲ ನಿಘಂಟಿನಿಂದ ಕಲಿತ ಕೃತಕ ಇಂಗ್ಲಿಷಿನ ಮುಖಾಂತರ; ಗೃಹಕೃತ್ಯದ ನಿತ್ಯವಿಧೀ, ಚಾಡಿ, ತರಳೆ, ಆಪ್ತ ಮಾತುಕತೆ, ಹರಟೆ ಸೊರಗಿದ ಕನ್ನಡದಲ್ಲಿ-ನಮ್ಮ ಪರಿಸ್ಥಿತಿ ಇದು. ಇದರ ಪರಿಣಾಮ ದ್ವಿಭಾಷಾ ಸಂಪತ್ತಲ್ಲ, ಭಾಷಾದಾರಿದ್ರ್ಯ; ಬುದ್ಧಿಲೋಕ ಮತ್ತು ಭಾವಲೋಕಗಳ ನಡುವೆ ಗೋಡೆಯೊಂದನ್ನು ಕಟ್ಟಿಕೊಂಡು ಒಂದರಿಂದ ಇನ್ನೊಂದನ್ನು ಪುಷ್ಟಿಸಿಕೊಳ್ಳದ ಛಿದ್ರ ವ್ಯಕ್ತಿತ್ವ’ (ಪು.೩೨, ಪ್ರಜ್ಞೆ-ಪರಿಸರ). ಪ್ರಜ್ಞೆ ಮತ್ತು ಅಭಿವ್ಯಕ್ತಿಗಳೆರಡೂ ತಾಳೆಯಾಗದ ಸ್ಥಿತಿ ನಮ್ಮನ್ನು ಅಂತರ್ ಪಿಶಾಚಿಗಳಾಗಿ ಮಾಡಿದೆ. ನೀರದ್ ಚೌಧರಿಯಂತಹ ಭಾರತೀಯರ ವಿಕೃತಿಗೆ ಬೇರೆ ಕಾರಣಗಳು ಹೊಳೆಯಬಹುದು. ಆದರೆ ಅದು ಸಂಗತವಾಗುವ ಮಾರ್ಗವಲ್ಲ. ಅನಂತಮೂರ್ತಿಯವರ ಪ್ರಕಾರ ‘ಗ್ರಹಿಸಲು ನಾವು ಮೂಲದ ಕೃತಿಗೆ, ಅಂದರೆ ಇಂಗ್ಲಿಷಿನಲ್ಲಿರುವ ಕೃತಿಗೆ ಹೋಗಬೇಕು. ಅದರೆ ಅಭಿವ್ಯಕ್ತಿಗೆ ಮಾತ್ರ ನಮ್ಮ ಭಾಷೆಯನ್ನೇ ಉಪಯೋಗಿಸಬೇಕು. ಅಲ್ಲದೆ ಇಂಗ್ಲಿಷ್ ಮಾತ್ರವಲ್ಲದೆ ಉಳಿದ ಯೂರೋಪಿಯನ್ ಭಾಷೆಗಳನ್ನೂ ಇಚ್ಛೆಪಟ್ಟವರು ಕಲಿಯುವುದು ಸಾಧ್ಯವಿರಬೇಕು.’ (ಪು.೩೭)

ಭಾಷೆ ಇರುವ ಸಮುದಾಯಗಳು ತಮ್ಮ ಭಾಷೆಯಲ್ಲಿ ಅಭಿವ್ಯಕ್ತಿಸುವುದರಿಂದ ತಮ್ಮ ಜಾನಪದೀಯ ಅಂಶಗಳನ್ನು ಉಳಿಸಿಕೊಳ್ಳಲು ಸಾಧ್ಯವಿದೆ. ಅನಂತಮೂರ್ತಿಯವರ ಇಂಗ್ಲಿಷ್ ಬ್ರಾಹ್ಮಣ, ಕನ್ನಡ ಶೂದ್ರ ಲೇಖನದಲ್ಲೇ ವೆಸ್ಟ್ ಇಂಡಿಯನ್ ಲೇಖಕ ಸಿ.ಎಲ್.ಆರ್. ಜೇಮ್ಸ್ ಭಾಷೆ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳಿವೆ. ಜೇಮ್ಸ್ ಅವರ ಪ್ರಕಾರ ಇಂಗ್ಲಿಷ್ ಸ್ವಂತ ಭಾಷೆ ಇರುವ ವೆಸ್ಟ್ ಇಂಡಿಯನ್ನರಿಗೆ ಪ್ರಗತಿಗೆ ಹಾದಿ ಸುಗಮವಾಗಿದೆ. ಆದರೆ ‘ನಿಮ್ಮ ಭಾಷೆಗಳಿಂದಾಗಿ ನಿಮ್ಮದೇ ಆದ ಒಂದು ಸಂಸ್ಕೃತಿಯಿದೆ. ಆದರೆ ನಮ್ಮದೇ ಆದೊಂದು ಭಾಷೆಯಿಲ್ಲದಿರುವುದರಿಂದ ನಮಗೊಂದು ಪ್ರತ್ಯೇಕ ವ್ಯಕ್ತಿತ್ವವೇ ಇಲ್ಲ’ (ಪು.೩೬). ಇದೇ ಅಭಿಪ್ರಾಯವನ್ನು ಚಿನುವಾ ಅಚಿಬೆ ಭಾರತದ ಲೇಖಕರಿಗೆ ನೀಡಿದ ಸಂದರ್ಶನದಲ್ಲಿ ಹೇಳಿದಾರೆ.

ಶಂಕರಭಟ್ಟರ ನುಡಿಚಿಂತನೆ ಎಂಬ ನಿರ್ವಸಾಹತೀಕರಣದ ದಾರಿ

ಶಂಕರಭಟ್ಟರ ಕನ್ನಡ ಭಾಷೆಯ ಕುರಿತ ಚಿಂತನೆ ಸಾಮಯಿಕಾಗಿದೆ. ಇಂದಿನ ನಿರ್ವಸಾಹತೀಕರಣದ ತುರ್ತುಗಳನ್ನು ಅದು ಬಗೆಹರಿಸಲು ಯತ್ನಿಸುತ್ತಿದೆ. ಆದ್ದರಿಂದಲೇ ಈ ಹೊತ್ತಿನಲ್ಲಿ ಅವರ ಚಿಂತನೆ ಮುಖ್ಯವಾದ ನಿರ್ವಸಾಹತೀಕರಣದ ಆಕರವಾಗಿದೆ.

ಶಂಕರಭಟ್ಟರ ಭಾಷಾಚಿಂತನೆಯಲ್ಲಿ ಕನ್ನಡವನ್ನು ಅನೇಕ ಯಾಜಮಾನ್ಯ ಅಂಶಗಳು ತುಂಬಿರುವ ಭಾಷೆಯಾಗಿ ಗ್ರಹಿಸುತ್ತಾರೆ. ಆದ್ದರಿಂದ ಆ ಯಾಜಮಾನ್ಯ ಅಂಶಗಳು ಕಳಚುವಿಕೆ ಅನಿವಾರ್ಯ ಮತ್ತು ಆರೋಗ್ಯಪೂರ್ಣ ಕ್ರಿಯೆ ಎನ್ನುತ್ತಾರವರು. ಅವರ ಪ್ರಕಾರ ಕನ್ನಡಕ್ಕೆ ಇನ್ನೂ ಸಂಸ್ಕೃತದ ಹಿಡಿತವೇ ಹೆಚ್ಚಾಗಿದೆ. ಇಂಗ್ಲಿಷ್ ಪದಗಳನ್ನು ಸೇರಿಸಿಕೊಳ್ಳುವಾಗ ಕನ್ನಡದಲ್ಲಿ ಸಂಸ್ಕೃತದ ಪದಗಳ ಮೂಲಕ ಸೇರಿಸಿಕೊಂಡು ಅದನ್ನೇ ಶುದ್ಧ ಕನ್ನಡ ಪದಗಳೆಂದು ಬಿಂಬಿಸಲಾಗುತ್ತಿದೆ. ಶುದ್ಧಕನ್ನಡ ಎಂದರೆ ಸಂಸ್ಕೃತಮಯವಾದ ಕನ್ನಡ ಎಂದಾಗಿದೆ. ಅದನ್ನು ತಪ್ಪಿಸುವುದೇ ಇಂದಿನ ಅಗತ್ಯವಾದ ಕ್ರಿಯೆಯಾಗಿದೆ ಎನ್ನುತ್ತಾರೆ ಭಟ್ಟರು. ಏಕೆಂದರೆ ಯಾವುದನ್ನು ಶುದ್ಧ ಕನ್ನಡ ಎಂದು ಕರೆಯಲಾಗುತ್ತದೆಯೋ ಅದು ಜನಸಾಮಾನ್ಯರ ವ್ಯಾಪ್ತಿಯಿಂದ ದೂರ ಇರುವಂತಹ ಕನ್ನಡ. ಭಟ್ಟರ ಮಾತುಗಳನ್ನೇ ನೋಡುವುದಾದರೆ, ಈ ಹೇರಿಕೆಯ ಚರಿತ್ರೆಯನ್ನು ತೆಗೆದು ಹಾಕೋಣ. ಸಂಸ್ಕೃತದ ಹೇರಿಕೆಯೂ ಒಂದು ರೀತಿ ಅಸ್ಪೃಶ್ಯತೆಯ ತರ. ಅದರಿಂದ ಏನು ಪ್ರಯೋಜನ….? ಒಂದು ಸಮಾಜ ಬೆಳೆಯಬೇಕು ಎನ್ನುವುದಾದರೆ ಅದರಲ್ಲಿ ಬದುಕುವ ಎಲ್ಲರೂ ಬೆಳೆಯಬೇಕು, ಯಾವುದೊ ಒಂದು ಕಮ್ಯುನಿಟಿ ಮಾತ್ರ ಉದ್ಧಾರ ಆಗುವುದಲ್ಲ. ಮಹಾಪ್ರಾಣಗಳನ್ನು ಕಡಿಮೆ ಮಾಡಿದರೆ ಸಮಾಜದ ಎಲ್ಲ ಮಕ್ಕಳಿಗೆ ಕನ್ನಡ ಕಲಿಯುವುದು ಸುಲಭವಾಗುತ್ತೆ. (ಪು೪೧, ಮಯೂರ, ೨೦೧೦).

ಶಂಕರಭಟ್ಟರು ಪ್ರತಿಪಾದಿಸುವ ಕನ್ನಡ ಜನಸಾಮಾನ್ಯರ ಆಡುಭಾಷೆಯಲ್ಲಿ ಸುಲಭವಾಗಿ ಬಳಕೆಯಾಗುವ ಕನ್ನಡ. ಈ ಭಾಷೆ ಬರಹಕ್ಕೆ ಬಂದೊಡನೆ ಮಡಿವಂತಿಕೆಗೆ ಸಿಲುಕಿ ಬಿಡುತ್ತದೆ. ಅದು ಇಂಗ್ಲಿಷಿನದಲ್ಲ, ಸಂಸ್ಕೃತದ್ದು. ಮಹಾಪ್ರಾಣಗಳ ಬಳಕೆಯಿಂದಲೂ ಅಷ್ಟೆ. ಅದು ಅನಿವಾರ್ಯವೆಂಬಂತೆ ಭಾವನೆ ಮೂಡಿಸಿ ಶಿಷ್ಟತೆಯನ್ನು ಸ್ಥಾಪಿಸುವುದರಿಂದ ಕನ್ನಡ ಭಾಷೆ ಜನರಿಂದ ದೂರದೂರಕ್ಕೆ ಹೋ‌ಗುತ್ತಿರುತ್ತದೆ. ಸರಿಯಾಗಿ ಉಚ್ಚಾರ ಮಾಡಲು ಬರದ ಜನರು ಕೀಳರಿಮೆಯಿಂದ ತಮ್ಮ ಭಾಷೆಯ ಬಳಕೆಯನ್ನು ಆಕಷ್ಟು ಹಿಂಜರಿಕೆಯಿಂದ ಮಾಡತೊಡಗುತ್ತಾರೆ. ಶಂಕರಭಟ್ಟರ ಪ್ರಕಾರ ಇದೊಂದು ಸಂಸ್ಕೃತಿಯ ಪ್ರಶ್ನೆಯಾಗುತ್ತದೆ. ಅದು ಶ್ರೇಷ್ಠ ಮತ್ತು ಕನಿಷ್ಠ ಎಂಬ ಕಲ್ಪನೆ ಹುಟ್ಟುಹಾಕುವುದರೊಂದಿಗೆ ಸಂಸ್ಕೃತಿಯನ್ನು ಕೆಲವೇ ಜನ ಗುತ್ತಿಗೆ ತೆಗೆದುಕೊಳ್ಳುವಂತೆ ಮಾಡುತ್ತದೆ ಎನ್ನುತ್ತಾರೆ ಭಟ್ಟರು.

ಹಾಗೆಯೇ ನಾವು ಬರಹಕ್ಕೆ ಬಳಸುತ್ತಿರುವ ಭಾಷೆಯೂ ಒಂದು ಶಿಷ್ಟತೆಗೆ ಸಿಕ್ಕಿ ಜನಸಾಮಾನ್ಯರ ಭಾಷೆಯಿಂದ ದೂರ ಉಳಿಯುತ್ತದೆ. ಶಂಕರಭಟ್ಟರ ಮಾತೆನಲ್ಲಿ ಹೇಳುವುದಾದರೆ, ‘ನಾವು ಬಳಸುತ್ತಿರುವ ಕನ್ನಡ ಬರಹದ ಸ್ವರೂಪವೂ ಕೆಳವರ್ಗದ ಜನರನ್ನು ಬರಹದ ಕಲಿಕೆಯಿಂದ ದೂರ ಉಳಿಯುವಂತೆ ಮಾಡುತ್ತಿದೆ…. ಅವರು ಮಾತಿನಲ್ಲಿ ಬಳಸುವ ವಾಕ್ಯಗಳಿಗೂ ಕನ್ನಡದ ಬರಹಗಳಲ್ಲಿ ಬಳಕೆಯಾಗುತ್ತಿರುವ ವಾಕ್ಯಗಳಿಗೂ ನಡುವಿರುವ ಅಂತರ ಹೆಚ್ಚುತ್ತಾ ಹೋಗುತ್ತಿದೆ’ (ಪು.೧೨೩, ಕನ್ನಡ ನುಡಿಯ ಬಗೆಗಿನ ಚಿಂತನೆ). ಅಲ್ಲಿಯೇ ಮುಂದುವರೆದು ಹೇಳುತ್ತಾರೆ, “ಅಸ್ಪೃಶ್ಯತೆಯಂತಹ ಸಾಮಾಜಿಕ ಅನಿಷ್ಟಗಳನ್ನು ತಡೆದುಹಾಕಬೇಕಿದ್ದಲ್ಲಿ ಮತ್ತು ಕೆಳವರ್ಗದವರು ಕೆಳಗೆಯೇ ಉಳಿಯದೆ ಮೇಲೆ ಬರಬೇಕಿದ್ದಲ್ಲಿ ಎಲ್ಲರೂ ಬರಹವನ್ನು ಬಳಸುವಂತಾಗುವುದು ಅತ್ಯವಶ್ಯ. ಈ ರೀತಿ ಎಲ್ಲರೂ ಮುಂದೆ ಬಂದಾಗ ಮಾತ್ರ ನಮ್ಮ ರಾಜ್ಯ ಅಭಿವೃದ್ಧಿ ಹೊಂದಿದ ರಾಜ್ಯವೆಂದೆನಿಸಬಲ್ಲುದು”.(ಪು.೧೩೦).

ಸ್ತ್ರೀಯರ ಭಾಷಾನಿರ್ವಸಾಹತೀಕರಣ

ಸ್ತ್ರೀವಾದ ಎಲ್ಲ ಮಾನವಿಕಗಳನ್ನು ಸ್ಪರ್ಶಿಸಿ ಹೋಗುವ ಗುಣವುಳ್ಳದ್ದಾದ್ದರಿಂದ ಭಾಷೆಯನ್ನು ಹಾಯದೇ ಮುಂದೆ ಹೋಗಲು ಸಾಧ್ಯವೇ ಇಲ್ಲ. ಸ್ತ್ರೀವಾದದ ಆರಂಭದಲ್ಲೇ ಪಾಶ್ಚಾತ್ಯ ಸ್ತ್ರೀವಾದಿ ಚಿಂತಕಿಯರು ಇರುವ, ಬಳಕೆಯ ಭಾಷೆಯ ಬಗ್ಗೆ ತಮ್ಮ ಅನುಮಾನ, ಅಸಂತೋಷವನ್ನು ವ್ಯಕ್ತಪಡಿಸಿದ್ದರು. ಗಂಡಸು ಕೇಂದ್ರಿತವಾದ ಭಾಷೆ ಇಡೀ ಭಾಷಿಕ ಸಮುದಾಯವನ್ನು ಗಂಡಸೆಂದೇ ಭಾವಿಸಿ ನಿಯಮಗಳನ್ನು ರೂಢಿಸುತ್ತದೆ, ಪದಗಳನ್ನು ಅಗತ್ಯಕ್ಕೆ ತಕ್ಕಂತೆ ಟಂಕಿಸುತ್ತದೆ. ಆದ್ದರಿಂದ ಭಾಷೆಯಲ್ಲಿ ‘ಮನುಷ್ಯ’ನಿದ್ದಾನೆಯೇ ಹೊರತು ‘ಮಾನುಷಿ’ಯರಿಲ್ಲ ಎಂಬುದು ಸ್ತ್ರೀವಾದಿ ಪರಿಕಲ್ಪನೆ.

ಹಾಗಾದರೆ ಈ ಭಾಷೆಯನ್ನು ಇದ್ದಂತೆಯೇ ಬಳಸಬೇಕೆ? ಅಥವಾ ಪುನಾ ಕಟ್ಟಿಕೊಳ್ಳಬೇಕೆ? ಎಂಬುದು ಪ್ರಶ್ನೆ. ಭಾಷೆಯನ್ನು ಹಾಗೆಯೇ ಬಳಸಿದರೇ ಅದರಲ್ಲಿ ‌ವ್ಯಕ್ತವಾಗುವ ಅರ್ಥಗಳಿಗೇ ಬದ್ಧವಾಗಿರಬೇಕಾಗುತ್ತದೆ. ಅದನ್ನು ಮೀರಿ ಹೊರಬಂದರೆ ಹೊಸ ಪರಿಭಾಷೆಗಳನ್ನು ರೂಪಿಸುವ ತೊಡಕು ಮತ್ತು ಅದನ್ನು ಚಾಲನೆಗೆ ತರುವ ಕಷ್ಟ ಎಚ್.ಎಸ್. ಶ್ರೀಮತಿ ಅವರು ಗುರುತಿಸುವಂತೆ, ‘ತೀವ್ರವಾದಿ ನೆಲೆಯಲ್ಲಿ ಭಾಷೆಯ ಬಗ್ಗೆ ಚಿಂತನೆಗಳನ್ನು ರೂಪಿಸುವ ಕಾರ್ಯಯೋಜನೆಯನ್ನು ಹೊಂದಿದ್ದಾರೆ. ಇದೊಂದು ರೀತಿ ಸಂಕೀರ್ಣವಾದ ಪ್ರಕ್ರಿಯೆ.. .. ಆ ದಿಕ್ಕಿನಲ್ಲಿ ಪ್ರಯತ್ನಗಳು ನಡೆದಿದ್ದು ‘ಲಾಡಾನ್’ ಎಂಬ ಪ್ರತಿಭಾಷೆಯನ್ನು ರೂಪಿಸಲಾಗಿದೆ. ಕಲ್ಪಿತ ಸಮುದಾಯಗಳು ಎದುರಿಸುವ ಎಲ್ಲ ಇಕ್ಕಟ್ಟುಗಳೂ ಲಾಡಾನ್‌ಗೆ ಇದೆ. ಇದು ಯಾವ ಹೆಂಗಸಿಗೂ ಮೊದಲ ಭಾಷೆಯಾಗಲಾರದು’(ಪು.೩೦).

ಸಾಮಾಜಿಕ ನೆಲೆಗಳನ್ನು ಶೋಧಿಸಿಕೊಳ್ಳುವ ಹೊತ್ತಿನಲ್ಲಿ ಭಾಷೆಯ ನಿರ್ವಸಾಹತೀಕರಣ ಅದಕ್ಕೆ ಬಹಳ ಮುಖ್ಯವಾಗುತ್ತದೆ. ಸ್ತ್ರೀಕಥನಗಳು ಮತ್ತು ಅವರ ಬರಹಗಳನ್ನು ನೋಡುವ ಹೊತ್ತಿನಲ್ಲಿ ಮಾತು ಮೌನಗಳ ಏರಿಳಿತಗಳ ಸಂಯೋಜನೆ ಕಾಣುತ್ತದೆ. ಅದು ಸಂರಚನೆಯಲ್ಲಿ ಹೆಣ್ಣು ತನ್ನ ಭಾಷೆಯನ್ನು ಮೀರುವ ಯತ್ನಗಳೆಂಬಂತೆಯೇ ಕಾಣುತ್ತದೆ. ಅತಿ ಮಾತನಾಡುವ ವೈದೇಹಿಯವರ ಅಕ್ಕುಲೋಕದ ಕಣ್ಣಿಗೆ ‘ಪಿರ್ಕಿ’ಯಾದರೂ ಅದರಲ್ಲಿ ಸ್ವಾತಂತ್ರ್ಯದ ಅಂಶವಿದೆ. ಹೆಣ್ಣಿನ ವಾಚಾಳಿತನದಂತೆಯೇ ಮೌನವೂ ಒಂದು ಅಭಿವ್ಯಕ್ತಿಯ ರೂಪವಾಗಿದೆ. ಮೀಮಾಂಸೆಯ ದೃಷ್ಟಿಯಿಂದ ಇನ್ನೂ ಈ ಜಾಗಗಳನ್ನು ಶೋಧಿಸಬೇಕಾದ ಅಗತ್ಯ ಇದೆ ಎನ್ನಲಾಗುತ್ತದೆ.

ದಲಿತರ ಭಾಷೆ

ಇತ್ತೀಚಿನ ಅಧ್ಯಯನಗಳು ಹೇಳುವಂತೆ ದಲಿತರಿಗೆ ತಮ್ಮದೇ ಆದ ಭಾಷಿಕ ಚಹರೆಗಳಿವೆ. ದಲಿತರ ಭಾಷೆಗೆ ಎಲ್ಲಾ ಭಾಷೆಗಳಿಗಿರುವಂತೆ ಸಾಂಸ್ಕೃತಿಕ ವಾಹಕ ಗುಣವೂ ಇರುತ್ತದೆ. ಆದರೆ ದಲಿತ ಸಂಸ್ಕೃತಿ ಎಂದರೆ ಅದರಲ್ಲಿ ದಮನಿತ ಚರಿತ್ರೆಗಳ ಸ್ಮೃತಿಗಳೂ ಅಡಗಿರುತ್ತವೆ. ಸಾಮಾನ್ಯವಾಗಿ ದಲಿತ ಸಮುದಾಯಗಳು ಯಜಮಾನ ಸಂಸ್ಕೃತಿಯ ನೆರಳಲ್ಲಿ ಬದುಕಿದವು. ‘ಸಂಬೋಳಿ’ ಸಂಸ್ಕೃತಿಯ ನೆನಪುಗಳನ್ನು ಇಂದಿನ ತಲೆಮಾರಿನ ದಲಿತ ಜನಾಂಗವು ತೊಡೆದುಕೊಳ್ಳಲು ಬಯಸುತ್ತದೆ. ಆದ್ದರಿಂದ ದಲಿತ ಭಾಷಿಕ ಚಹರೆಗಳನ್ನು ಉಳಿಸಿಕೊಳ್ಳುವುದೆಂದರೆ ಅವರಿಗೆ ಹಿಂಸೆಯ ನೆನಪು. ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಇರುವ ವ್ಯತ್ಯಾಸಗಳಲ್ಲಿ ಅವರಿಬ್ಬರ ಇಂಗ್ಲಿಷ್ ಸಂಸ್ಕೃತಿ ಮತ್ತು ಭಾಷೆಗಳ ಮೇಲಿನ ದೃಷ್ಟಿಕೋನಗಳೂ ಒಂದಾಗಿವೆ. ಗಾಂಧಿಗೆ ಇಂಗ್ಲಿಷ್ ಸಂಸ್ಕೃತಿ ಅಸಹನೀಯ ಮತ್ತು ಅಪವಿತ್ರ ಎನ್ನಿಸಿತ್ತು. ಆದರೆ ಅಂಬೇಡ್ಕರ್ ಅವರಿಗೆ ಹಾಗನ್ನಿಸಲಿಲ್ಲ. ಸೂಟು, ಟೈ ಧರಿಸುವುದು ಗಾಂಧಿಗೆ ಕೃತಕ ಅನುಕರಣೆಯಂತೆ ಕಂಡರೆ, ಅಂಬೇಡ್ಕರ್‌ಗೆ ಅದು ಮುಜುಗರ ತರುವ ಬದಲಾಗುವ ಹೊಸ ತಲೆಮಾರಿನ ದಲಿತನ ಸ್ವಾಭಿಮಾನವನ್ನು ಎತ್ತಿ ಹಿಡಿಯುವ ದ್ಯೋತಕವಾಗಿತ್ತು. ಇಂಗ್ಲಿಷ್ ಮತ್ತು ಅದು ತರುವ ಆಧುನಿಕತೆ ದಲಿತರನ್ನು ಮೇಲುಜಾತಿಯವರ ಜೊತೆಗೆ ಕೂರಿಸಬಲ್ಲುದು ಎಂದು ಅಂಬೇಡ್ಕರ್ ನಂಬಿದ್ದರು. ಆದ್ದರಿಂದ ಆಗಿನಿಂದಲೂ ಹೊಸ ತಲೆಮಾರಿನ ದಲಿತರು ಪರ್ಯಾಯ ಚಿಂತನೆಗಳ ರೂಪದಲ್ಲಿ ಇಂಗ್ಲಿಷನ್ನು ಬಳಸುವುದು ಸೂಕ್ತ ಎಂದು ಭಾವಿಸುತ್ತಾರೆ. ಇಂಗ್ಲಿಷ್ ಭಾಷೆ ಹೊಸ ಉದ್ಯೋಗಗಳನ್ನು ಕೊಡುವ ಮೂಲಕ ದಲಿತರು ಈ ಹಿಂದೆ ನಿಯೋಜಿತರಾಗಿದ್ದ ಕೊಳಕು ಶುದ್ಧಿಯ ಕೆಲಸಗಳಿಂದ ದೂರ ಉಳಿಯಬಹುದಾಗಿದೆ ಎಂಬುದು ಬಹುಪಾಲು ದಲಿತರ ಅಭಿಪ್ರಾಯ. ಹಾಗೆಂದೇ ಅವರು ತಮಗೆ ಅನ್ನ ನೀಡುವ ಜೊತೆಗೆ ಗೌರವದ ಸ್ಥಾನಮಾನ ಕೊಡುವ ಉದ್ಯೋಗಕ್ಕೆ ಇಂಗ್ಲಿಷ್ ಭಾಷೆ ಅತ್ಯಗತ್ಯ ಎಂದು ಭಾವಿಸುತ್ತಲಿದ್ದಾರೆ. ಅಲ್ಲಿಯೇ ಮುಂದುವರೆದು ಹೇಳುವುದಾದರೆ ಇಂದಿನ ಹೊಸ ಬಂಡವಾಳಶಾಹಿ ಜಗತ್ತಿನಲ್ಲಿ ಇಂಗ್ಲಿಷನ್ನು ವಿಮೋಚನೆಯ ಭಾಷೆಯಾಗಿ ‌ಗ್ರಹಿಸುವವರ ಸಂಖ್ಯೆ ಹೆಚ್ಚಾಗುತ್ತಲಿದೆ.

ದೇಶಿಯ ಭಾಷೆಗಳು ತಮ್ಮ ಪಾರಂಪರಿಕ ಸತ್ವದಲ್ಲಿ ದಲಿತ ವಿರೋಧಿ ನಿಲುವುಗಳನ್ನೇ ಪ್ರತಿಪಾದಿಸುತ್ತಲಿವೆ ಎಂಬುದು ಇದರ ಇನ್ನೊಂದು ವ್ಯಾಖ್ಯಾನ. ಆದ್ದರಿಂದ ದಲಿತ ಚಿಂತಕರಲ್ಲಿ ಪ್ರಮುಖರಾದ ಕಾಂಚಾ ಇಲಯ್ಯ ಪ್ರಾದೇಶಿಕ ಭಾಷೆಗಳನ್ನು ತಿರಸ್ಕರಿಸಿ ಎಂದು ಬಹಿರಂಗವಾಗಿ ಕರೆಕೊಡುತ್ತಾರೆ. ದೇಶಭಾಷೆಗಳನ್ನು ತೊರೆದು ಇಂಗ್ಲಿಷನ್ನು ಒಪ್ಪಿಕೊಳ್ಳಿ ಎಂದು ದಲಿತರಿಗೆ ಹೇಳುತ್ತಾರೆ.

ಕನ್ನಡದಲ್ಲಿ ಬಂದ ದಲಿತ/ಬಂಡಾಯ ಚಳವಳಿಗಳು ಇಂಗ್ಲಿಷ್ ಕಲಿಕೆಯನ್ನು ಸ್ವಾಗತಿಸುತ್ತವೆ. ಅಂದು ಶೂದ್ರರಾದ ಕುವೆಂಪು ಮೂರನೇ ತರಗತಿಯಿಂದ ಇಂಗ್ಲಿಷ್ ಕಲಿಕೆ ಶುರು ಮಾಡುವರೆಂಬ ಅಮಂಗಳ ವಾರ್ತೆಯನ್ನು ಕೇಳಿ ೧೯೬೨ರಲ್ಲಿ ‘ಪ್ರಾರ್ಥಿಸಿ ಓ ಮಕ್ಕಳಿರಾ’ ಎಂದು ಪದ್ಯ ಬರೆದರು. ಕುವೆಂಪು ನಿರ್ವಸಾಹತೀಕರಣಕ್ಕೆ ಸಂಸ್ಕೃತವನ್ನು ನಂಬಿದ್ದರು. ಸಂಸ್ಕೃತ ಜ್ಞಾನ ಮತ್ತು ಅದರ ಬಳಕೆಯಿಂದ ಕನ್ನಡದಲ್ಲಿ ಸತ್ವ ತುಂಬುತ್ತದೆ. ಅದರ ಜೊತೆಗೆ ಸಂಸ್ಕೃತದಿಂದ ಕನ್ನಡದ ವಿಕಾಸವಾಗುತ್ತದೆ ಎಂಬುದು ಕುವೆಂಪು ಅವರ ನಂಬುಗೆ. ಆದರೆ ಇಂದಿನ ಶೂದ್ರ ತಲೆಮಾರು ಇಂಗ್ಲಿಷನ್ನು ತಮ್ಮ ವಿಮೋಚನೆಯ ದಾರಿಯನ್ನಾಗಿ ಭಾವಿಸಿರುವುದು ಒಂದು ಚಾರಿತ್ರಿಕ ಪಲ್ಲಟವನ್ನೇ ಸೂಚಿಸುತ್ತಲಿದೆ.

ಏಕೆ ಕನ್ನಡದಲ್ಲಿ ಇಂಗ್ಲಿಷನ್ನು ಅನ್ಯವೆಂದು ಸ್ವೀಕರಿಸುವ ಮನೋಭಾವ ಉಂಟಾಯಿತು ಎಂಬುದಕ್ಕೆ ಕೆ.ವಿ.ನಾರಾಯಣ ಅವರು ಕೊಡುವ ವಿಶ್ಲೇಷಣೆ ಹೀಗಿದೆ. ‘ಇಂಗ್ಲಿಷ್ ಪರಂಪರೆಗೆ ಧಕ್ಕೆ ತರುತ್ತದೆ ಎಂಬ ಭಯ ಮೂಡಿದ್ದು ಇಡೀ ಕನ್ನಡ ಸಂಸ್ಕೃತಿಗಲ್ಲ. ಅದರೊಳಗೆ ಇರುವ ಯಜಮಾನಿಕೆಯ ಕೇಂದ್ರವಾಗಿ ಮಾತ್ರ ಈ ಅಪಾಯ ತೋರತೊಡಗಿತ್ತು. ತಮ್ಮ ಅಧಿಕಾರವನ್ನು ಪ್ರಶ್ನಿಸುವ ನೆಲೆಗಳನ್ನು ಸಹಜವಾಗಿಯೇ ಅವರು ನಿರಾಕರಿಸಿದ್ದಾರೆ. ದಲಿತ ಬಂಡಾಯ ಚಳವಳಿಗಳು ಈ ಅಧಿಕಾರ ಕೇಂದ್ರಗಳ ಭಯವನ್ನು ಸರಿಯಾಗಿಯೇ ಗ್ರಹಿಸಿದೆ. ಆದ್ದರಿಂದ ಯಾವುದು ಯಜಮಾನ ಸಂಸ್ಕೃತಿಯು ಯಜಮಾನರಿಗೆ ಅಪಾಯಕಾರಿ ಎಂದು ತೋರುತ್ತದೋ ಅದೇ ಕೆಳಸ್ತರದ ಜನರಿಗೆ ಬಿಡುಗಡೆಯ ದಾರಿಯಾಗಿ ಕಾಣತೊಡಗುತ್ತದೆ. ಆದ್ದರಿಂದ ಇಂದು ದಲಿತರು ಇಂದು ಇಂಗ್ಲಿಷ್ ಮಾಧ್ಯಮದ ಪರವಾಗಿಯೇ ಇದ್ದಾರೆ. ಸ್ಥಳೀಯ ಭಾಷೆಯಲ್ಲಿ ತಾನಿನ್ನೂ ‘ದಲಿತ’ರಾಗಿಯೇ ಉಳಿಯುವ ಭಯ ಇದೆ. ಸಹಜವಾಗಿಯೇ ಕನ್ನಡ ಅಥವಾ ಬೇರೆ ದೇಶ ಭಾಷೆಗಳ ಕಲ್ಪಿತ ಸಮುದಾಯದ ಅಂಗಭಾಗಗಳೆಂಬಂತೆ ಗಣಿಸಿದ್ದು ದಲಿತರು. (ಪು೧೩೭). ‘ಕಾಂಚಾ ಇಲಯ್ಯ ಹೇಳುವಂತೆ ಈ ಇಕ್ಕಟ್ಟಿನಿಂದ ಹೊರಬರಲು ಇಂಗ್ಲಿಷ್ ಒಂದು ಅವಕಾಶವನ್ನು ನೀಡುತ್ತದೆ. ಈ ಎರಡು ಕಾರಣಗಳು ಮುಖ್ಯವಾಗುತ್ತವೆ. ಒಂದು: ಪ್ರಾದೇಶಿಕ ಭಾಷೆಯ ಹಕ್ಕುದಾರಿಕೆಯಿಂದ ಹಂಗಿನಿಂದ ಹೊರಬರಬೇಕೆನ್ನುವ ಇಚ್ಛೆ. ಎರಡು: ಅಖಿಲ ಭಾರತ ನೆಲೆಯಲ್ಲಿ ಸಂಪರ್ಕ ಜಾಲ ರೂಪಿಸಲು ಇಂಗ್ಲಿಷ್ ಒಂದು ಅಗತ್ಯ ಹೊರದಾರಿ ಎಂಬ ತಿಳಿವಳಿಕೆ. ಇವೆರೆಡೂ ಸೇರಿ ಇಂಗ್ಲಿಷ್ ಪರವಾದ ವಾದವೊಂದು ಈಗ ಮುಂಚೂಣಿಗೆ ಬಂದು ನಿಂತಿದೆ’(ಪು.೧೩೮).

ಬಹುಭಾಷಿಕ ಸಂದರ್ಭ

ಬಹುಭಾಷಿಕ ಸಂಪರ್ಕದ ಸಂದರ್ಭ(ಹೆಟ್ರೊಗ್ಲಾಸಿಯಾ) ಮತ್ತು ದ್ವಿಭಾಷಿಕ ಸಂಪರ್ಕದ ಸಂದರ್ಭ(ಡೈಗ್ಲಾಸಿಯಾ)ಗಳಲ್ಲಿ ಯಾವ ಭಾಷೆ ಇನ್ನೊಂದು ಭಾಷೆಯ ಮೇಲೆ ಸವಾರಿ ನಡೆಸುತ್ತದೆ ಎಂದು ಹೇಳುವುದು ಕಷ್ಟ. ಅದರಲ್ಲೂ ಅನೇಕ ಉಪಭಾಷೆಗಳಿರುವ ಭಾಷೆಗಳಲ್ಲಿ ಡೈಗ್ಲಾಸಿಯಾ ಲಕ್ಷಣ ಅಧಿಕವಾಗಿರುತ್ತದೆ. ಅಲ್ಲಿ ಒಂದು ಭಾಷೆ ಮೇಲ್ದರ್ಜೆಯಾದಾದರೆ ಇನ್ನೊಂದು ಕೆಳದರ್ಜೆಯದಾಗಿ ಗುರುತಿಸಲ್ಪಟ್ಟಿರುತ್ತದೆ. (ಹೆಚ್ಚಿನ ಮಾಹಿತಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ಭಾಷಾ ವಿಶ್ವಕೋಶ ನೋಡಿ). ಈ ಭಾಷೆಗಳ ಸಂಬಂಧದಲ್ಲಿ ನಿರ್ವಸಾಹತೀಕರಣದ ನಿರ್ವಹಣೆ ಯಾವ ರೀತಿಯದು? ಪ್ರತಿ ಭಾಷೆಯೂ ರಾಷ್ಟ್ರೀಯತೆಯನ್ನು ಗುರುತಿಸಿಕೊಳ್ಳಲಾರಂಭಿಸಿದಾಗ ತಮ್ಮ ಅಸ್ಮಿತೆಯ ಚಹರೆಗಳನ್ನು ಮುಂದಿಡುತ್ತಾ ತಮ್ಮ ಹಕ್ಕೊತ್ತಾಯವನ್ನು ಮಂಡಿಸುತ್ತವೆ. ಕನ್ನಡದ ಸಂದರ್ಭದಲ್ಲೇ ತುಳು, ಕೊಂಕಣಿ, ಕೊಡವ ಭಾಷೆಗಳು ಉಪಭಾಷೆಗಳಾಗಿ ಅಸ್ತಿತ್ವದಲ್ಲಿವೆ. ಕನ್ನಡದ ರಾಷ್ಟ್ರೀಯತೆಯಡಿಯಲ್ಲಿ ಇವನ್ನು ಗುರುತಿಸುವಾಗ ಎದುರಾಳಿಯಾಗಿ ಯಜಮಾನಿಕ ನಡೆಸುವ ಭಾಷೆ ಸಾಮಾನ್ಯವಾಗಿ ಇಂಗ್ಲಿಷ್ ಅಥವಾ ಸಂಸ್ಕೃತಿಗಳಾಗಿರುತ್ತವೆ. ಆದರೆ ಉಪಭಾಷಿಕರು ತಮ್ಮ ರಾಷ್ಟ್ರೀಯತೆಯನ್ನು ಮಂಡಿಸುವಾಗ ಕನ್ನಡವನ್ನು ಯಾಜಮಾನ್ಯ ಭಾಷೆಯಾಗಿ ನೋಡುತ್ತಾರೆ. ಅದರಿಂದ ಬಿಡುಗಡೆಗೊಳ್ಳಲು ಯತ್ನಿಸುತ್ತಾರೆ. ಹಾಗೆಯೇ ಮುಸ್ಲಿಂ ಮುಂತಾದವರ ಭಾಷೆ ತನ್ನ ಸುತ್ತಲಿನ ಸಂದರ್ಭದಲ್ಲಿ ಭಾಷಿಕ ಯಜಮಾನಿಕೆಯ ತೊಳಲಾಟದಲ್ಲಿಯೇ ಇರುತ್ತವೆ. ಉದಾಹರಣೆಗೆ ಕನ್ನಡದ ಮುಸ್ಲಿಂ ಸಮುದಾಯಕ್ಕೆ ಸೇರಿದ ಮನೆಮಾತು ಉರ್ದು ಆಗಿರುವ ಮುಸ್ಲಿಮನೆಗೆ ಕನ್ನಡ ಹೊರಗಿನ ಭಾಷೆ. ಸಾಮಾಜಿಕ ಒತ್ತಡಗಳು ಅವನನ್ನು ಕನ್ನಡ ಬಳಸಲೇಬೇಕೆಂಬ ಒತ್ತಡ ಹೇರುತ್ತಿರುತ್ತದೆ. ಇದರಿಂದ ಭಾಷೆಯ ಬಗೆಗೆ ಒಂದು ರೀತಿಯ ಪ್ರತಿರೋಧವೇ ಹುಟ್ಟಬಹುದು. ಮುಖ್ಯವಾಹಿನಿ ಎಂಬ ಪಾತ್ರ ನಿರ್ಮಾಣ ಯಾವಾಗಲೂ ತೊಡಕಿನದು. ಅದರ ಧ್ರುವಗಳು ಯಾವುವು ಎಂದು ಗೊತ್ತುಪಡಿಸುವುದು ಕಷ್ಟ. ಹೀಗಾಗಿ ಭಾಷಿಕ ನೆಲೆಯಲ್ಲಿ ನಿರ್ವಸಾಹತೀಕರಣ ಎನ್ನುವುದು ಯಾವಾಗಲೂ ಸಾಪೇಕ್ಷವಾಗಿ ಇರುತ್ತದೆ ಎಂದು ಭಾಷಾಶಾಸ್ತ್ರಜ್ಞರು ಊಹಿಸುತ್ತಾರೆ.

ದೇವರ ವಿಮೋಚನೆ

ತಂತಮ್ಮ ಭಾಷೆಯಲ್ಲಿಯೇ ದೇವರನ್ನು ಕಾಣಬೇಕೆನ್ನುವುದು ಒಂದು ವಿಮೋಚನೆಯ ಕಲ್ಪನೆ. ಅದರಲ್ಲಿಯೂ ಇಪ್ಪತ್ತನೆಯ ಶತಮಾನದಲ್ಲಿ ಮತಾಂತರಗೊಂಡ ಜನರು ಮೂಲಸಮುದಾಯಗಳಿಗಿಂತ ಭಿನ್ನವಾಗಿ ಅವರದೇ ಆದ ಒಂದು ಸಮುದಾಯಗಳಾಗುತ್ತಿದ್ದಾರೆ. ಅವರು ಈಗ ತಮ್ಮ ದೇವರ ಹುಡುಕಾಟವನ್ನು ಯಾವ ಭಾಷೆಯಲ್ಲಿ ಮಾಡಬೇಕು? ಅನ್ಯ ದೇವರ ಜೊತೆ ಅನ್ಯ ಭಾಷೆಯನ್ನೂ ಎದುರಿಸಬೇಕಾದ ಸನ್ನಿವೇಶದಲ್ಲಿ ಅವರ ಪ್ರತಿಕ್ರಿಯೆಗಳು ಹೇಗಿರುತ್ತವೆ? ಇದು ಇಂದಿನ ವಸಾಹತೋತ್ತರ ಕಾಲದ ಸವಾಲಾಗಿದೆ. ಕನ್ನಡದ ಕವಿ ಎಚ್.ಎಸ್.ಶಿವಪ್ರಕಾಶರು ಬರೆಯುತ್ತಾರೆ; ‘ತಾಯ್ ನುಡಿಯ ಅನಂತಕೋಟಿ ದೇವತೆಗಳೇ, ಪ್ರಾರ್ಥಿಸಿಕೊಳ್ಳಿ ನಿಮ್ಮ ನಿಮ್ಮ ತಾಯ್ನುಡಿಯಲ್ಲಿ ನಮ್ಮನ್ನು ನಾವು ನಿಮ್ಮನ್ನು ಬಿಡುಗಡೆ ಮಾಡುವಂತೆ’ (ಗಾಣದ ಸುತ್ತುಗಳು).

ಸ್ವಲ್ಪಕಾಲದ ಹಿಂದೆ ಕ್ರೈಸ್ತರು ಕನ್ನಡದಲ್ಲಿ ಪೂಜೆ ಮಾಡಬೇಕೆಂದು ಆಗ್ರಹ ಎದ್ದಿತ್ತು. ಬೈಬಲ್ ಅನ್ನು ಕನ್ನಡದಲ್ಲಿ ಪಠಿಸುವ ಮೂಲಕ ಪುರೋಹಿತಶಾಹಿ ಮತ್ತು ಮತಾಂತರದ ಯಜಮಾನಿಕೆಗಳನ್ನು ಮುರಿದುಕೊಳ್ಳುವ ಯತ್ನದಂತೆ ಇ‌ದು ಕಂಡಿದೆ. ಹಿರೇಮಗಳೂರಿನ ಕಣ್ಣನ್ ರಾಮನಿಗೆ ಕನ್ನಡದಲ್ಲೇ ಪೂಜೆ ಸಲ್ಲಿಸುವುದರ ಮೂಲದ ಸಂಸ್ಕೃತದ ಯಜಮಾನಿಕೆಯನ್ನು ಕಳಚಲು ಯತ್ನಿಸಿದ್ದಾರೆ. ಅವರು ಇದನ್ನು ಭಾವ ಸಂತೃಪ್ತಿಗೆ ದಾರಿ ಎನ್ನುತ್ತಾರೆ. ಆದರೆ ಸಂಸ್ಕೃತ ಅಭ್ಯಾಸವಾದ ಕಿವಿಗಳಿಗೆ ಕನ್ನಡದ ಪೂಜೆ ಅಷ್ಟೇನೂ ಪಾವಿತ್ರ್ಯ ಹುಟ್ಟಿಸುವುದಿಲ್ಲವೋ ಏನೋ ಹಾಗಾಗಿ ಕಣ್ಣನ್ ಒಬ್ಬರೇ ಈ ಪ್ರಯೋಗದಲ್ಲಿ ಕೇಳಿಬರುವ ಹೆಸರು.

ಕೊನೆಯಲ್ಲಿ

ನಿರ್ವಸಾಹತೀಕರಣವೆನ್ನುವುದು ಒಂದು ನಿರಂತರ ಪ್ರಕ್ರಿಯೆ. ಟ್ರಾಟ್‌ಸ್ಕಿ ಹೇಳುವಂತೆ ಒಂದು ನಿರಂತರ ಕ್ರಾಂತಿ ಆಗುತ್ತಲೇ ಇರಬೇಕು ಎಂಬಂತೆ ನಿರ್ವಸಾಹತೀಕರಣವೂ ಒಂದು ಸತತ ಕ್ರಾಂತಿಯ ಪ್ರಕ್ರಿಯೆ, ಅದನ್ನು ಎಲ್ಲಾ ಕ್ಷೇತ್ರಗಳಲ್ಲಿಯೂ ಅದು ಸಂಭವಿಸುತ್ತಲೇ ಇರಬೇಕಾದ ಕ್ರಿಯೆ. ಪರ್ಯಾಯ ಸೃಷ್ಟಿಯನ್ನು ಮಾಡಿಕೊಳ್ಳುವುದು ಪ್ರತಿ ಸಮಾಜದ ಚಲನಶೀಲತೆಯೂ ಹೌದು.

ನಿರ್ವಸಾಹತೀಕರಣದ ಪ್ರಕ್ರಿಯೆಗಳು ಹಲವಾರು ಬಗೆ. ಅದರಲ್ಲಿ ಒಂದು ಎನ್ನುವ ಮಾದರಿಗಳಿಲ್ಲ. ಹೀಗಾಗಿ ಅದನ್ನು ಬಹುತ್ವದ ಹಾದಿ ಎನ್ನಬಹುದು. ನಿರ್ವಸಾಹತೀಕರಣ ಪ್ರಕ್ರಿಯೆಯೇ ಒಂದನ್ನು ಒಡೆದು ಹಲವನ್ನು ನೋಡುವುದು ಎನ್ನಬಹುದೇನೊ. ಕುವೆಂಪು ಅವರ ಕವಿತೆ ‘ಕರಿಸಿದ್ಧ’ದಲ್ಲಿ ಬರುವ ಸಾಲುಗಳನ್ನು ನೋಡಿ:

ಇಳೆಗೆಲ್ಲ ವಾಲ್ಮೀಕಿಯೊಬ್ಬನೆ / ಕವಿ ಎಂಬುದೂ ತಪ್ಪು.. ..
ಒಂದೊಂದು / ಹಳ್ಳಿಯಲಿ ಒಬ್ಬೊಬ್ಬ ಜಸವಂತನಾಗದಿಹ
ವಾಲ್ಮೀಕಿ ನೆಲೆಸಿಹನು. ರಾಮಾಯಣಗಳಂತೂ
ಲೆಕ್ಕಕ್ಕೆ ಮಿತಿಯಿಲ್ಲ.. ..

ಪಲ್ಲಟಗಳು ಸಹ ಪಲ್ಲಟಗಳಾಗುತ್ತಿರಬೇಕು. ನಿರಂತರವಾಗಿ ಕೇಂದ್ರಗಳು ಅಂಚಿಗೆ ಬಂದು ಅಂಚುಗಳು ಕೇಂದ್ರದಲ್ಲಿ ಬರಬೇಕು. ‘ಇಲ್ಲಿ ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ’ ಎ‌ನ್ನುವುದೇ ನಿರ್ವಸಾಹತೀಕರಣದ ಮೂಲ ಆಶಯ. ಯಾವುದಾದರೊಂದು ಪ್ರಾಮುಖ್ಯತೆ ಪಡೆದುಕೊಂಡರೆ ಅದು ಕೇಂದ್ರವನ್ನು ಸ್ಥಾಪಿಸಿಕೊಂಡಂತೆ. ಈ ಸಮಾನತಾ ತತ್ವಗಳು ಎಲ್ಲಿರಬಹುದು? ಆದಿವಾಸಿಗಳಲ್ಲಿ, ಕೃಷಿಕ ಸಮಾಜಗಳಲ್ಲಿ, ಸ್ತ್ರೀಸಮಾಜಗಳಲ್ಲಿ…. ಹಾಗೆಂದು ಚಿಂತಕರು ಹುಡುಕಾಡುತ್ತಲೇ ಇದ್ದಾರೆ. ಪ್ರಾದೇಶಿಕ ಸಂಸ್ಕೃತಿಗಳು ಜೀವಿತವಾಗುವ ಸಂಸ್ಕೃತಿಯನ್ನು ನಿರ್ವಸಾಹತೀಕರಣ ಸ್ವಲ್ಪಮಟ್ಟಿಗೆ ಬೆಂಬಲಿಸುತ್ತದೆ ಎಂದು ಹೇಳಬಹುದೇನೊ.

ಪ್ರೊ. ಮಕರಂದ ಪರಾಂಜಪೆ ಅವರು ನಿರ್ವಸಾಹತೀಕರಣದ ಬಗ್ಗೆ ಆಡಿದ ಮಾತುಗಳೊಂದಿಗೆ ಈ ಪುಟ್ಟ ನಿಬಂಧವನ್ನು ಮುಗಿಸಬಹುದೇನೊ. ಪರಾಂಜಪೆ ಅವರ ಪ್ರಕಾರ ನಿವಾಸಾಹತೀಕರಣವೆನ್ನುವುದು ಹಲವು ಹಂತಗಳಲ್ಲಿ ನಡೆಯುವಂತದ್ದು. ಅವೆಂದರೆ;

ಅ) ಸಾಂಪ್ರದಾಯಿಕ ಜ್ಞಾನಶಿಸ್ತುಗಳಾದ ಸಾಹಿತ್ಯ, ಕಲೆ, ಸೌಂದರ್ಯಶಾಸ್ತ್ರ ಮತ್ತು ತತ್ವಶಾಸ್ತ್ರಗಳ ಪುನಶ್ಚೇತನ ಮತ್ತು ಪುನರುಜ್ಜೀವನ ಆ) ಮನಃಸ್ಥಿತಿಯನ್ನು ಬದಲಾಯಿಸುವುದು (ಅಂದರೆ ಇಲ್ಲಿ ಯಾರ ಮನಃಸ್ಥಿತಿ ಎಂಬ ಪ್ರಶ್ನೆ ಬರುತ್ತದೆ. ಆಳುವವರದೋ ಅಥವಾ ಆಳಿಸಿಕೊಳ್ಳುವವರದೋ ಎಂಬ ಪ್ರಶ್ನೆಗೆ ಯಾರು ಸಂಸ್ಕೃತಿ ನಿರ್ಮಾತೃಗಳಾಗಿರುತ್ತಾರೋ ಅವರದು ಎನ್ನುತ್ತಾರೆ ಪರಾಂಜಪೆ). ಇ) ನಿರ್ವಸಾಹತೀಕರಣಗಳ ಕ್ರಮಗಳ ಅನ್ವೇಷಣೆ ಮತ್ತು ಅವುಗಳ ಚಾರಿತ್ರಿಕ ಅಧ್ಯಯನ ಈ) ಪರಸ್ಪರರನ್ನು ಅರಿತುಕೊಳ್ಳುವುದು, ಅಂದರೆ, ಸಮಾನ ದುಃಖಿಗಳು ಪರಸ್ಪರ ಕಲೆತು ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದರ ಮೂಲಕ ಒಂದು ಸೇತುವನ್ನು ನಿರ್ಮಿಸುವುದು. ಉ) ಆಧುನಿಕೋತ್ತರವಾದ ನಿರುಕರಿಸುವ ಕಥವಗಳನ್ನು ಮತ್ತೆ ಚಾಲನೆಗೆ ತರಬೇಕು. ಕಥನಗಳಲ್ಲಿ ಸಾಮಾನ್ಯರ ಬದುಕಿನ ರೂಪಕಗಳು ಬಳಕೆಯಾಗುತ್ತಿರುತ್ತವೆ. ಅವು ಕಥನದ ಮೂಲಕ ವಾಪಾಸು ಬರಬೇಕು ಎನ್ನುತ್ತಾರೆ ಪರಾಂಜಪೆ. ಈ ಸಾಮನ್ಯತಾ ತತ್ವವೇ ನಿರ್ವಸಾಹತೀಕರಣದ ಸತ್ವ.