ಬಚ್ಚಿಟ್ಟುಕೊಂಡು ಬದುಕುವುದು ನನಗಿಷ್ಟವಿಲ್ಲ ;
ಹಾಗಂತ ಎಲ್ಲವನ್ನೂ ಬಿಚ್ಚಿ ಹರಾಜಿಗಿಡುತ್ತೇನೆಂದು
ಇದರರ್ಥವಲ್ಲ.

ಬಹು ದೊಡ್ಡ ಮಾತನಾಡುತ್ತ
ದಿನದಿನದ ಸರಳ ಸಾಧಾರಣದ ಬದುಕಿ-
ಗವಮಾನ ಮಾಡುವವರನ್ನು ಕಂಡರೆ
ನನಗೆ ಆಗುವುದಿಲ್ಲ.

ತೂಗಾಡುವ ಕಿರೀಟಗಳಿಗೆ ತಕ್ಕಂತೆ
ತಲೆಯ ಆಕಾರಗಳನ್ನು ಬದಲಾಯಿಸುತ್ತ
ಪರದಾಡುವುದು ನನಗೆ ಅಭ್ಯಾಸವಿಲ್ಲ.
ಹೇಗೋ ನನ್ನ ಪಾಡಿಗೆ ನಾನು ಬದುಕುತ್ತೇನೆ ;
ಇದ್ದಷ್ಟು ನೆಲವ ಉತ್ತು ಬಿತ್ತಿ ನೀರೆರೆದು
ಮಲಗಿರುವ ಬೀಜಗಳ ಕಣ್ಣು ತೆರೆಸುತ್ತೇನೆ.
ನಾಳೆ ಈ ಸಸಿಗಳೆಲ್ಲ ವಟವೃಕ್ಷವಾಗಿ
ಸಾವಿರ ಜನಕ್ಕೆ ನೆರಳಾದಾವೆಂಬ ಮಹದಾಸೆ ಇರದಿದ್ದರೂ
ಒಂದೆರಡಾದರೂ ಬೀಜವಾಗುವಂಥ ಹಣ್ಣು
ಬಿಟ್ಟಾವೆಂದು ನಂಬಿ ಕಾಯುತ್ತೇನೆ.