1976ರಲ್ಲಿ ನಾನು ಅಂತಿಮ ಎಂ.ಎ. ವ್ಯಾಸಂಗ ಮಾಡುತ್ತಿದ್ದೆ. ಕರ್ನಾಟಕ ಜಾನಪದ ಪರಿಷತ್ತು ಹೊರಡಿಸುತ್ತಿದ್ದ ಜಾನಪದ-2 ಪತ್ರಿಕೆ ಸಂಪುಟ-1, ಸಂಚಿಕೆ 2ರಲ್ಲಿ ಪ್ರಕಟವಾದ ಡಾ|| ಜಿ.ವರದ ರಾಜರಾವ್ ಅವರ “ಜನಪದ ಸಾಹಿತ್ಯದಲ್ಲಿ ಕೊರವಂಜಿ ಪಾತ್ರ ಕಲ್ಪನೆ” ಎಂಬ ಲೇಖನ ನನ್ನ ಗಮನ ಸೆಳೆಯಿತು. ಅಂದಿನಿಂದಲೂ ಕೊರಮ ಬುಡಕಟ್ಟಿನ ಬಗೆಗೆ ಅಧ್ಯಯನ ಮಾಡಬೇಕೆಂಬ ಕುತೂಹಲ ಕೆರಳಿತು. ಇದಕ್ಕೆ ಕಾರಣ ನಾನು ಇದೇ ಬುಡಕಟ್ಟಿಗೆ ಸೇರಿದವನೆಂಬ ಸ್ವಾಭಿಮಾನವೂ ಕಾರಣವಾಗಿರಬೇಕು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನನ್ನ ವ್ಯಾಸಂಗ ಮುಗಿದ ಮೇಲೆ, ನನಗೆ ಸಮಯ ಸಿಕ್ಕಾಗಲೆಲ್ಲ, ನೆಂಟರಿಷ್ಟರ ಊರಿಗೆ ಹೋದಾಗಲೆಲ್ಲ ನಮ್ಮ ಬುಡಕಟ್ಟಿನ ಆಚಾರ-ವಿಚಾರ, ನಂಬಿಕೆ, ನಡವಳಿಕೆಗಳ ಬಗೆಗೆ ಕೇಳಿ ಗುರುತು ಹಾಕಿಕೊಳ್ಳುತ್ತಿದ್ದೆ. ಒಂದೆರಡು ವರ್ಷದಲ್ಲಿ ಸುಮಾರು ನೂರಾರು ಪುಟಗಳ ಮಾಹಿತಿಯೂ ಸಂಗ್ರಹವಾಯಿತು.

ಕುಮಟಾದ ಡಾ|| ಏ.ವಿ. ಬಾಳಿಗಾ ಕಲೆ ಮತ್ತು ವಿಜ್ಞಾನ ಮಹಾವಿದ್ಯಾಲಯಕ್ಕೆ ನಾನು ಅಧ್ಯಾಪಕನಾಗಿ ಬಂದ ಮೇಲೆ ಒಮ್ಮೆ ಕ.ವಿ.ವಿ.ಅಧ್ಯಯನ ಪೀಠದ ನಿರ್ದೇಶಕರಾಗಿದ್ದ ಮಾನ್ಯರಾದ ಡಾ|| ಎಂ.ಎಂ. ಕಲಬುರ್ಗಿಯವರನ್ನು ಈ ಬಗೆಗೆ ಕೇಳಿಕೊಂಡಾಗ ಅವರು “ನನ್ನಲ್ಲಿ ಈಗಾಗಲೇ ವಿದ್ಯಾರ್ಥಿಗಳು ಪಿಎಚ್‌ಡಿಗಾಗಿ ದಾಖಲಿಸಿಕೊಂಡಿದ್ದಾರೆ. ನೀವು ಡಾ|| ಎಸ್.ಎಂ. ವೃಷಭೇಂದ್ರ ಸ್ವಾಮಿಯವರನ್ನು ಕೇಳಿರಿ” ಎಂದು ಮಾರ್ಗದರ್ಶನ ಮಾಡಿದರು. ನಾನು ಪೂಜ್ಯ ಗುರುಗಳಾದ ಡಾ|| ಎಂ.ಎಸ್.ವೃಷಭೇಂದ್ರ ಸ್ವಾಮಿಯವರನ್ನು ಕಂಡು ಸಂಗ್ರಹಿಸಿರುವ ಮಾಹಿತಿಯನ್ನು ತೋರಿಸಿದೆ. ಅದು ಕೇವಲ ವಿವರಣೆ ಅಥವಾ ವಿಷಯ ಸಂಗ್ರಹ ಮಾತ್ರ ಆಗಿತ್ತು. ಅದಕ್ಕೆ ಸಂಶೋಧನೆಯ ರೂಪ ಮತ್ತು ಚೌಕಟ್ಟನ್ನು ನೀಡಲು ದಯವಿಟ್ಟು ಒಪ್ಪಿದರು. ಸಂಶೋಧನೆಯಲ್ಲಿ ನನ್ನದೇ ಜನಾಂಗದ ವಿಷಯವನ್ನು ಭಾವಪರವಶನಾಗಿ ಬರೆಯದಂತೆ ಸಮತೋಲನ ದೃಷ್ಟಿಯನ್ನು ನೀಡಿ ನನಗೆ ತುಂಬಾ ಉಪಕಾರ ಮಾಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಸಂಪರ್ಕವಿಲ್ಲದ ನನ್ನನ್ನು ಅತಿ ಆತ್ಮೀಯತೆ ಮತ್ತು ವಿದ್ಯಾರ್ಥಿಗಿಂತಲೂ ಹೆಚ್ಚಾಗಿ ಮಿತ್ರನಂತೆ ಕಂಡು ತಮ್ಮ ಅಮೂಲ್ಯವಾದ ಸಮಯವನ್ನು ನನಗಾಗಿ ವ್ಯಯ ಮಾಡಿದ್ದಾರೆ. ಗ್ರಾಮೀಣ ಜೀವನದ ದಟ್ಟ ಅನುಭವ, ಕೊರಮ ಜನಾಂಗದ ನಿಕಟ ಸಂಪರ್ಕ ಹಾಗೂ ಕೆಳವರ್ಗದ ಜನರ ಬಗೆಗೆ ವಿಶೇಷ ಕಾಳಜಿ ಇರುವ ಇವರು ನನ್ನ ಈ ಅಧ್ಯಯನಕ್ಕೆ ಅಮೂಲ್ಯವಾದ ಮಾರ್ಗದರ್ಶನ ಮಾಡಿದ್ದಾರೆ.

ಪ್ರಾರಂಭದ ಎರಡು-ಮೂರು ವರ್ಷಗಳಲ್ಲಿ ಉಂಟಾದ ನನ್ನ ಅನಾರೋಗ್ಯ, ಕುಮಟಾದಿಂದ ಧಾರವಾಡಕ್ಕಿರುವ ಅಂತರ ನನ್ನ ಅಧ್ಯಯನಕ್ಕೆ ಅಡ್ಡಿಯಾದವು. ಆದರೂ ನನ್ನ ಪೂಜ್ಯ ಗುರುಗಳ ಮಾರ್ಗದರ್ಶನ, ವಿಚಾರವಿನಿಮಯ ಸೂಕ್ತ ಸಲಹೆಗಳು, ಅದೆಲ್ಲಕ್ಕಿಂತ ಹೆಚ್ಚಾಗಿ ತೋರಿದ ಪ್ರೀತಿ, ನನ್ನ ಅಧ್ಯಯನಕ್ಕೆ ಕೈದೀವಿಗೆಗಳಾದವು. ಮಾತೋ ಶ್ರೀಯವರಾದ ಪ್ರೊ. ಶ್ರೀಮತಿ ಲಲಿತಾಂ ವೃಷಭೇಂದ್ರ ಸ್ವಾಮಿಯವರು ನಾನು ಹೋದಾಗಲೆಲ್ಲಾ ನನ್ನ ಬರವಣಿಗೆಯ ಬಗೆಗೆ ಕೇಳಿ, ಸೂಕ್ತವಾದ ಸಲಹೆ ಸೂಚನೆಗಳನ್ನು ಕೊಟ್ಟು, ಅಧ್ಯಯನಕ್ಕೆ ಬೇಕಾದ ಶಕ್ತಿ ತುಂಬಿದರು. ಇವರಿಬ್ಬರ ಉಪಕಾರಕ್ಕೆ ನನ್ನ ಅನಂತ ಪ್ರಣಾಮಗಳು.

ನನ್ನ ಅಧ್ಯಯನಕ್ಕೆ ಬೇಕಾದ ಎಲ್ಲ ಮಾಹಿತಿಯನ್ನು ಪ್ರೀತಿಯಿಂದ ಒದಗಿಸಿದ ನನ್ನ ಬುಡಕಟ್ಟು ಜನರ ಸಹಕಾರ ಅಪೂರ್ವವಾದುದ್ದು. ಹಚ್ಚೆಯ ಚಿತ್ರಗಳನ್ನು, ಹಾಡುಗಳನ್ನು ಅಲ್ಲದೆ ಬದುಕಿನ ಪ್ರತಿಯೊಂದು ಸಂದರ್ಭಗಳನ್ನು ವಿವರಿಸಿ ಉಪಕರಿಸಿದ್ದಾರೆ. ಸ್ವತಃ ನನ್ನ ತಂದೆ ಅಂಕೇನಹಳ್ಳಿ ಪಾಪಯ್ಯ 84-85 ವರ್ಷ ವಯಸ್ಸಾದವರಾದರೂ ಮತ್ತೊಮ್ಮೆ ಒದಗಿಸಿದ್ದಾರೆ. ಕೊರವಂಜಿಯಾಗಿ ಜೀವನ ಸಾಗಿಸಿ ನನ್ನನ್ನು ಮಗುವಿದ್ದಾಗ ಸೊಂಟಕ್ಕೆ ಕಟ್ಟಿಕೊಂಡು ವೃತ್ತಿನಿರತರಾಗಿ ಕಷ್ಟಪಟ್ಟು ಜೀವನ ನಿರ್ವಹಿಸಿದ ನನ್ನ ತಾಯಿ ಶ್ರೀಮತಿ ಸಾವಿತ್ರಮ್ಮ ಸ್ವತಃ ಹಚ್ಚೆಯ ಚಿತ್ರಗಳನ್ನು, ಹಾಡುಗಳನ್ನು ಒದಗಿಸುವುದರ ಜೊತೆಗೆ ನನ್ನ ಸಂದೇಹಗಳನ್ನು ನಿವಾರಣೆ ಮಾಡಿ, ಮಾಹಿತಿ ನೀಡಿ ಆಶೀರ್ವದಿಸಿದ್ದಾರೆ. ಇವರಿಗೆ ನಾನು ನಮಿಸದೆ ಇರಲಾರೆ. ಇಲ್ಲದೆ ಇವರ ಭಾವಚಿತ್ರಗಳನ್ನು ಪ್ರಬಂಧಗಳಲ್ಲಿ ಬಳಸಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ. ಹಿರೇಬಿದರೆಯ ರಂಗಮ್ಮ ಇವರ ಮಕ್ಕಳಾದ ದೊಡ್ಡಮನೆ ಗೌರಮ್ಮ, ಲಕ್ಷ್ಮಮ್ಮ, ಬ್ಯಾಡರ ಹಳ್ಳಿಯ ಲಕ್ಷ್ಮಮ್ಮ, ಸಾಕಮ್ಮ, ಸೋರಲಮಾವಿನ ಓದೋ ಹನುಮಯ್ಯ ಇವರಾದಿಯಾಗಿ ಮಾಹಿತಿ ನೀಡಿದ (ಪಟ್ಟಿಯಲ್ಲಿರುವ) ಎಲ್ಲರೂ ಸಹಕರಿಸಿದ್ದಾರೆ.

ನಾನು ಪಿ.ಎಚ್‌.ಡಿ.ಗೆ ನೊಂದಾಯಿಸಿದ ಮೇಲೆ ವಿಷಯ ತಿಳಿದ ನಮ್ಮ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎಸ್‌.ಆರ್. ನಾರಾಯಣರಾವ್ ಅವರು ಪ್ರೀತಿಯಿಂದ ಉತ್ತೇಜನ ನೀಡುತ್ತಾ ನಿನ್ನಿಂದ ಪಿ.ಎಚ್‌.ಡಿ. ಮಾಡಿಸಿಯೇ ತೀರುತ್ತೇನೆ ಎಂದು ಹೇಳಿ ಮೇಲಿಂದ ಮೇಲೆ ವಿಚಾರಿಸುತ್ತಾ ಉತ್ತಮ ಸಲಹೆ ಸೂಚನೆಗಳನ್ನಷ್ಟೇ ಅಲ್ಲದೆ ಪುಸ್ತಕಗಳನ್ನು ದೊರಕಿಸಿಕೊಟ್ಟು, ಸಹಾಯ ಮಾಡಿದ್ದಾರೆ. ಅಂತೆಯೇ ಗ್ರಂಥಪಾಲಕರಾದ ಎ.ಎಸ್. ಶ್ಯಾನಭಾಗ ಮತ್ತು ಗ್ರಂಥಾಲಯದ ಇತರ ಸಿಬ್ಬಂದಿ ನನಗೆ ಪುಸ್ತಕಗಳನ್ನು ಸಕಾಲಕ್ಕೆ ಹುಡುಕಿಕೊಟ್ಟು ಸಹಕರಿಸಿದ್ದಾರೆ.

ಅಧ್ಯಾಪಕ ಮಿತ್ರರಾದ ಡಾ|| ಜಿ.ಆರ್. ಗಾಂವಕರ್ ಅವರು ಮಹತ್ವದ ಪುಸ್ತಕವೊಂದನ್ನು ತರಿಸಿಕೊಟ್ಟು ಉಪಕರಿಸಿದ್ದಾರೆ. ಮತ್ತು ಅನೇಕ ರೀತಿ ಅಧ್ಯಯನದ ಸಂದರ್ಭದಲ್ಲಿ ಸಹಕರಿಸಿದ ಪ್ರೊ. ಪಿ.ಬಿ.ಸರ್‌ಮೊಕದ್ದಂ ಇವರೆಲ್ಲರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ನನ್ನ ಅಧ್ಯಯನದ ಸಂದರ್ಭದಲ್ಲಿ ಉಪಕಾರ ಮಾಡಿದ ಶ್ರೀ ಎ.ಬಿ.ಹಿರೇಮಠ-ಪ್ರಾಚಾರ್ಯರು, ಕಾ-ರಾ-ಬೆಲ್ಲದ ಮಹಾವಿದ್ಯಾಲಯ, ಮುಂಡರಗಿ ಇವರಿಗೂ ನನ್ನ ಸಹೋದರರಾದ ಬಿ.ಪಿ. ನಂಜಪ್ಪ ಮತ್ತು ಕೃಷ್ಣಯ್ಯ ಇವರು ಶ್ರಮಿಸಿದ್ದಾರೆ. ನನಗೆ ಹೀಗೆ ನೆರವಾದ ಅವರಿಗೆಲ್ಲ ನಾನು ಋಣಿ.

ನನ್ನ ಪ್ರಬಂಧವನ್ನು ಬೆರಳಚ್ಚುಗೊಳಿಸಿದ್ದಷ್ಟೇ ಅಲ್ಲದೆ ಅದರ ಸಿದ್ಧತೆಯ ಸಂಪೂರ್ಣ ಜವಾಬ್ದಾರಿ ಹೊತ್ತು ಈ ರೂಪದಲ್ಲಿ ಹೊರಬರಲು ಶ್ರಮಿಸಿದ ಕರ್ನಾಟಕ ವಿಶ್ವವಿದ್ಯಾಲಯದ ಶ್ರೀ ಬಸವರಾಜ ಚ. ಕಕರೆಡ್ಡಿಯವರ ಉಪಕಾರ ಮರೆಯಲಾರೆ. ಹಚ್ಚೆ ಚಿತ್ರಗಳನ್ನು ಬರೆದು ಉಪಕರಿಸಿದ ನನ್ನ ವಿದ್ಯಾರ್ಥಿ ಮಿತ್ರರಾದ ದಯಾನಂದ ಭಂಡಾರಿ, ಇನ್ನೂ ಅನೇಕ ರೀತಿಯಲ್ಲಿ ಸಹಕರಿಸಿದ ಶ್ರೀ. ಎಸ್‌.ಆರ್.ಹೆಗಡೆ, ಶ್ರೀ ಎಂ.ಜಿ.ಹೆಗಡೆ ಮತ್ತು ಡಿ.ಪಿ. ಶರ್ಮ ಇವರನ್ನು ಇಲ್ಲಿ ಮರೆಯಲಾರೆ.

ನನ್ನ ಹೆಂಡತಿ ಶ್ರೀಮತಿ ಕೆ.ಸಿ.ಸಿದ್ದಮ್ಮ ನೌಕರಿಯಲ್ಲಿದ್ದರೂ ಮನೆಯ ಒಳಗಿನ ಮತ್ತು ಹೊರಗಿನ ಜವಾಬ್ದಾರಿ ಹೊತ್ತು ನನ್ನ ಬರವಣಿಗೆಗೆ ಅನುವು ಮಾಡಿ ಸಹಕರಿಸಿದ್ದಾರೆ. ನನ್ನ ಮಕ್ಕಳಾದ ಬಿ.ಆರ್.ಶುಭ, ಬಿ.ಆರ್. ಸುಷ್ಮಾ, ಬಿ.ಆರ್.ಸುಮ ಇವರು ಬರವಣಿಗೆಯ ಬೇಸರವನ್ನು ನೀಗಿ, ಮನಸ್ಸಿಗೆ ಮುದ ತುಂಬಿ ಚೈತನ್ಯ ಕೊಟ್ಟಿದ್ದಾರೆ. ಇವರನ್ನು ಈ ಸಂದರ್ಭದಲ್ಲಿ ಸ್ಮರಿಸದೆ ಇರಲಾರೆ.

ಅಲೆಮಾರಿ ಜನಾಂಗದಲ್ಲಿ ಹುಟ್ಟಿ ಬೆಳೆದ ನಾನು ನನ್ನ ಜನಾಂಗದ ಸಾಂಸ್ಕೃತಿಕ ಅಧ್ಯಯನವನ್ನು ಮಾಡುವಂಥ ಒಂದು ವಿಶೇಷ ಸುಯೋಗ ದೊರೆತು, ನನ್ನ ಮಾರ್ಗದರ್ಶಕರು ತೋರಿದ ಹೆಜ್ಜೆ ಗುರುತುಗಳನ್ನೂ ಹಿಡಿದು ಮುನ್ನಡೆದು ಈ ಅಧ್ಯಯನವನ್ನು ಈ ಒಂದು ಹಂತಕ್ಕೆ ತಂದು ನಿಲ್ಲಿಸುವ ಪುಣ್ಯ ನನ್ನದಾಯಿತು.

ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳು ಮತ್ತು ಕುಲಸಚಿವರು ಈ ಕೃತಿ ಪ್ರಕಟಣೆಗೆ ಒಪ್ಪಿಗೆ ನೀಡಿ ಉಪಕರಿಸಿದ್ದಾರೆ. ಇವರಿಗೂ ನಾನು ಋಣಿಯಾಗಿದ್ದೇನೆ. ಗ್ರಾಮೀಣ ಸಂಸ್ಕೃತಿ, ಜನಪದ ಸಾಹಿತ್ಯ ಹಾಗೂ ಬುಡಕಟ್ಟು ಜನಾಂಗಗಳ ಬಗೆಗೆ ಪ್ರೀತ್ಯಾದರಗಳನ್ನು ತೋರಿಸುತ್ತಿರುವ ಆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಹನೀಯರು ನನ್ನ ಈ ಶ್ರಮವನ್ನು ಮೆಚ್ಚಿ ಸೂಕ್ತ ಮಾರ್ಗದರ್ಶನ ನೀಡುವರೆಂದು ನಂಬಿದ್ದೇನೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಹಿಂದಿನ ಅಧ್ಯಕ್ಷರಾದ ಇಂದು ಕನ್ನಡ ಪ್ರಾಧಿಕಾರದ ಮುಖ್ಯಸ್ಥರಾದ ಡಾ|| ಬರಗೂರು ರಾಮಚಂದ್ರಪ್ಪ ಇವರು ಕೊರಮ ಬುಡಕಟ್ಟಿನ ಉಪಸಂಸ್ಕೃತಿಯ ಬಗೆಗೆ ನನ್ನಿಂದ ವಿಶೇಷ ಪುಸ್ತಕವನ್ನು ಬರೆಸಲು ಕೇಳಿ ಪ್ರೋತ್ಸಾಹಿಸಿದ್ದಾರೆ. ಅವರಿಗೂ ನಾನು ಋಣಿಯಾಗಿದ್ದೇನೆ. ನನ್ನ ವಿದ್ಯಾಗುರುಗಳಾದ ಡಾ|| ಸಿ.ಪಿ.ಕೆ. ಅವರು ನನ್ನ ಸಂಶೋಧನೆಗೆ ಪ್ರೇರಣೆ – ಪ್ರೋತ್ಸಾಹ ನೀಡಿದ್ದಾರೆ. ಅವರಿಗೂ ನಾನು ಉಪಕೃತನಾಗಿರುವೆ. ಇಲ್ಲಿನ ಹಚ್ಚೆಯ ಚಿತ್ರಗಳನ್ನು ಕೊರಮ ಸಂಸ್ಕೃತಿಗೆ ಸಂಬಂಧಿಸಿದ ಭಾವಚಿತ್ರಗಳನ್ನು ನನ್ನ ಕ್ಷೇತ್ರ ಕಾರ್ಯದಿಂದ ಸಂಗ್ರಹಿಸಿದ್ದೇನೆ. ಪ್ರಸಿದ್ಧ ಗ್ರಂಥಗಳಲ್ಲಿರುವ ಕೆಲವು ಚಿತ್ರಗಳನ್ನೂ ನಾನು ಇಲ್ಲಿ ಬಳಸಿಕೊಂಡಿದ್ದೇನೆ. ಸಂಬಂಧಿಸಿದವರೆಲ್ಲರಿಗೂ ನನ್ನ ಕೃತಜ್ಞತೆಗಳು.

ಈ ಕೃತಿ ಪ್ರಕಟಣೆಗೆ ಹಿರಿಯ ಕವಿ ಬಿ.ಎ. ಸನದಿ ಅವರು ಮತ್ತು ಡಾ|| ಹರಿಲಾಲ್ ಪವಾರ್, ಪ್ರಭಾರ ನಿರ್ದೇಶಕರು, ಪ್ರಸಾರಾಂಗ ಕ.ವಿ.ವಿ. ಇವರು ಪ್ರೋತ್ಸಾಹಿಸಿದ್ದಾರೆ. ಇವರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಬಿ.ಪಿ. ರಾಮಯ್ಯ

ಎ.ವಿ. ಬಾಳಿಗಾ
ಕಲಾ ಮತ್ತು ವಿಜ್ಞಾನ ಕಾಲೇಜು, ಕುಮಟಾ (ಉ.ಕ.)