ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗವು ಏರ್ಪಡಿಸಿದ ೪೧೨ನೆಯ ವ್ಯಾಸಂಗ ವಿಸ್ತರಣ ಉಪನ್ಯಾಸ ಶಿಬಿರವು ವಿಜಾಪುರ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಹಾಲಿಂಗಪುರದ ಶ್ರೀ ಚನ್ನಗಿರೀಶ್ವರ ಪ್ರಾಸಾದಿಕ ಕಲಾ ಹಾಗೂ ದುಂ.ದಾ.ಶಿ. ವಾಣಿಜ್ಯ ಮಹಾವಿದ್ಯಾಲಯದ ಆಶ್ರಯದಲ್ಲಿ ದಿನಾಂಕ ೨೯ ಮತ್ತು ೩೦ನೆಯ ಸೆಪ್ಟೆಂಬರ, ೧೯೯೫ ರಂದು ಜರುಗಿತು. ಪ್ರಸ್ತುತ ಶಿಬಿರದಲ್ಲಿ ನೀಡಿದ ಉಪನ್ಯಾಸವೇ ಈ ಕಿರು ಪುಸ್ತಿಕೆ.

ನೂರಾರು ಜಾತಿಗಳ ಈ ನಾಡಿಲ್ಲಿ ಒಂದೊಂದು ಜಾತಿಗೆ ಒಂದೊಂದು ವೈಶಿಷ್ಟ್ಯ. ಅಲೆಮಾರಿಗಳಾದ ಡಕ್ಕಲಿಗರಿಗೆ “ಹೊಗೆ ಇಲ್ಲದ ಊಟ ಮಾಡುವರು” ಎಂಬ ಬಿರುದು. ಇವರಲ್ಲೂ ಹಲವು ಗೋತ್ರಗಳು, ಹಲವು ಆಚಾರಗಳು ಉಂಟು. ಕಟ್ಟಿಗೆಯ ನವಿಲನ್ನು ಕುಣಿಸಿ ಮನರಂಜನೆ ನೀಡುವ ಇವರು ದಾನ ನೀಡದವರ ಮನೆಯ ಮುಂದೆ ಚಂಡಾಳ ಗೊಂಬಿಯನ್ನು ಕಟ್ಟಿ ಬೆದರಿಸುವುದೂ ಉಂಟು. ಕಾಲಬದಲಾದಂತೆ ಉದರಂಭರಣಕ್ಕಾಗಿ ಹತ್ತಾರು ಉಪಕಸಬುಗಳನ್ನು ಈ ಜನ ಅವಲಂಬಿಸಿಕೊಂಡಿದ್ದರು.

ಕರ್ನಾಟಕದ ಭೌಗೋಳಿಕ ಪಾತಳಿಗಳಲ್ಲಿ ನೆಲೆಸಿಕೊಂಡಿರುವ ಅಲೆಮಾರಿ ಡಕ್ಕಲಿಗರನ್ನು ಸಂದರ್ಶಿಸಿ ದತ್ತ-ಸಂಗ್ರಹಣೆ ಮಾಡಿದ ಅವರ ಬದುಕಿನ ನೋವು ನಲಿವುಗಳನ್ನು ಪ್ರತ್ಯಕ್ಷ ಕಂಡು ಬೆರಗಾಗಿರುವೆವೆ. ಈ ಕಿರು ಪುಸ್ತಿಕೆಯಲ್ಲಿ ಅವರ ಬದುಕಿನ ಸಂಕ್ಷಿಪ್ತ ಚಿತ್ರಣ ಕೊಡಲು ಪ್ರಯತ್ನಿಸಿರುವೆ.

ನನಗೆ ಉಪನ್ಯಾಸ ನೀಡಲು ಸದವಕಾಶ ಕಲ್ಪಿಸಿಕೊಟ್ಟ ಪ್ರಸಾರಾಂಗದ ನಿರ್ದೇಶಕರಾದ ಪ್ರೊ.ಎಚ್‌.ವಿ. ನಾಗೇಶ ಅವರಿಗೆ ನನ್ನ ಹೃತ್ಪೂರ್ವಕ ವಂದನೆಗಳು. ಪುಸ್ತಿಕೆ ಬರೆಯುವಾಗ ಪ್ರೋತ್ಸಾಹಿಸಿದ ಡಾ. ಚೆನ್ನಣ್ಣ ವಾಲೀಕಾರ ಮತ್ತು ಡಾ. ಅರವಿಂದ ಮಾಲಗತ್ತಿ ಅವರಿಗೆ ಕೃತಜ್ಞತೆಗಳು. ತಮ್ಮ ಸಂಸ್ಕೃತಿಯ ಸಾರವನ್ನು ಧಾರೆಯೆರೆದ ಡಕ್ಕಲಿಗೆ ಜನಪದ ವಕ್ತೃಗಳಿಗೆ ಸ್ಮರಿಸದಿರಲಾರೆ. ಪುಸ್ತಿಕೆ ಬರೆಯುವ ಸಂದರ್ಭದಲ್ಲಿ ಆಗಾಗ ಚಹಾ ಒದಿಗಿಸಿದ ನನ್ನ ಶ್ರೀಮತಿ ಪ್ರೊ. ನಿಶಾ, ಸಹೋದರಿ ಶಶಿಕಲಾ ಇವರ ಉಪಕಾರವನ್ನು ಸ್ಮರಿಸುವೆ. ಪುಸ್ತಿಕೆಯ ಕರಡನ್ನು ಅಚ್ಚುಕಟ್ಟಾಗಿ ತಿದ್ದಿಕೊಟ್ಟ ಶ್ರೀಮತಿ ಲಲಿತಾ ಗವಳೆ ಹಾಗೂ ಶ್ರೀ ವಿ.ಜಿ. ಉರಣಕರ ಇವರಿತೆ ಅಭಿನಂದನೆಗಳು.

ಈ ಪುಸ್ತಿಕೆಯ ಮುದ್ರಣ ಕೆಲಸದಲ್ಲಿ ಸಹಕರಿಸಿದ ವಿಶ್ವವಿದ್ಯಾಲಯದ ಪ್ರಸಾರಾಂಗ ಮತ್ತು ಮುದ್ರಣಾಲಯದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಯವರಿಗೆ ನಾನು ಋಣಿ.

ಹರಿಲಾಲ್ ಪವಾರ
ಪ್ರಸಾರಾಂಗ
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ     
೪, ನವ್ಹಂಬರ ೧೯೯೭