ಬಿದ್ದುದೇನೆನ್ನುತ್ತ ಹಿಂದಿರುಗಿ ನೋಡಿದೆ,
ನೋಡಿದರೆ ಅಲ್ಲಿತ್ತೊಂದು ಉದುರಿದೆಲೆ,
ಬಿದ್ದ ಆ ಬಕುಲ ವೃಕ್ಷದ ಪತ್ರ, ನಡುಗುತ್ತ,
ನನ್ನ ತಡೆಯುತ್ತ, ಬಿರಿದ ಬಲಗಾಲ ಹಿಮ್ಮಡಿಯ ನಡುವೆ
ಮಯ್ಯನೊಡ್ಡುತ್ತ, ಪ್ರೀತಿಯಿಂದಾಲಂಗಿಸುವ ಹಾಗೆ
ತೋರಿತು ನನಗೆ.

ಉದುರಿದೆಲೆಯಂತೆಯೇ ನಿರ್ವಸಿತನಾದ ನನ್ನಿಂದ
ಬೇಕಾದುದೇನಿದಕೆ ? ಹೇಳುತಿದೆ ಏನನ್ನು ?
ಆದರೂ ಅದರ ನಿಶ್ಶಬ್ದ ಕರೆಯ ಸೆಳೆತಕ್ಕೆ ಒಳಗಾಗಿ
ನಿಂತೆ ನಿಶ್ಚಲನಾಗಿ.

ನಾನು,
ನಿರ್ಗತಿಕನಾದ ಈ ನಾನು,
ಗೋರಿಗಳ ಮೇಲೆ ಕವಿವ ಕತ್ತಲ ಕಡೆಗೆ,
ಅಥವಾ ಸತ್ತಂತಿರುವ ಬಾನಿನ ಕಡೆಗೆ,
ಆಕಾಶದಲ್ಲಿ ಹಿಂಜಿದಂತಿರುವ ಉಣ್ಣೆ ಮುಗಿಲಿನ ಕಡೆಗೆ,
ನಿಸ್ತೇಜವಾಗಿ ಚದುರಿರುವ ಚಿಕ್ಕೆಗಳ ಕಡೆಗೆ,
ಸುಟ್ಟುರಿದು ತಣ್ಣಗಾಗುತ್ತಿರುವ ಚಿತೆಯ
ಬೆಂಕಿಯ ಕಡೆಗೆ,
ದಿಗ್ಮೂಢನಾಗಿ ನೋಡುವುದಷ್ಟೆ
ನಾನು ಮಾಡುವ ಕೆಲಸ.

ಈಗ ಈ ಬಕುಲ ವೃಕ್ಷದ ಪತ್ರ
ಕಂಬನಿದುಂಬಿ ನೋಡಿತು ಒಮ್ಮೆ
ಅದುವರೆಗು ತಾನಿದ್ದ ಮರದ ಕೊಂಬೆಯ ಕಡೆಗೆ.
ಎಲ್ಲ ಕಳಕೊಂಡಂತೆ
ನಿಶ್ಶಬ್ದ ನಿಟ್ಟುಸಿರಲ್ಲಿ, ಹೀಗೆ ಹೇಳುವ ಹಾಗೆ
ತೋರಿತು ನನಗೆ :

ನಾನುರಿದು ಬಿದ್ದುದಕ್ಕೆ
ಈ ಮರದ ಮನಸ್ಸು ಒಂದಿಷ್ಟಾದರೂ ಮರುಗುವಂತೆ
ತೋರುವುದಿಲ್ಲ ಯಾತಕ್ಕೆ ?
ತುರುಗಿದೆಲೆಗಳ ಜತೆಗೆ ಹಾಡುವ ಗಾಳಿ ಕೊಂಚವೂ
ನಿಟ್ಟುಸಿರಿಡುವುದಿಲ್ಲ ಯಾತಕ್ಕೆ?
ಬದಲಾಗಿ, ಹೇಗೆ ದಬ್ಬುತ್ತಲಿದೆ ಈ ನಿಷ್ಕರುಣ ಗಾಳಿ
ನನ್ನನ್ನು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ?
ಈ ದರಿದ್ರ ಮರ, ನನಗೂ ಅದಕ್ಕೂ ಒಮ್ಮೆ
ಸಂಬಂಧವಿತ್ತೆಂಬುದನ್ನೂ ಗುರುತಿಸದಷ್ಟು
ನಿರ್ಭಾವವಾಗಿದೆ.
ನನ್ನೆಲ್ಲ ಅಂಗಲಾಚುಗಳನ್ನು ಕಡೆಗಣಿಸಿ
ನಗುತ್ತಲಿದೆ ಅಲೆವ ಗಾಳಿಯ ಜತೆಗೆ.

ಇರುಳು ಕೊನೆಗೊಂಡಾಗ
ಮತ್ತೆ ಬೆಳಗಾದಾಗ
ಯಾರು ಗುರುತಿಸುತ್ತಾರೆ ಹೇಳಿ,
ನಿನ್ನೆ ದಿನ ನಾನೊಂದು
ಎಲೆಯಾಗಿ ಬಕುಲ ವೃಕ್ಷದ ಕೊಂಬೆಯ ಮೇಲೆ
ತೂಗಿದ್ದೆನೆಂದು ?

ನಾ ಬಲ್ಲೆ, ಯಾರ ನೆನಪುಗಳಲ್ಲು ನಾನು ಉಳಿಯುವುದಿಲ್ಲ.
ನನ್ನ ನೋವುಗಳೆಲ್ಲ, ಮತ್ತೆ ದುಃಖಗಳೆಲ್ಲ
ಎಲ್ಲಿಯೂ ದಾಖಲಾಗುವುದಿಲ್ಲ.
ಹೀಗೆಯೇ ಇರುಳಿನ ಮೇಲೆ ಇರುಳು
ಹೊರಳಿ ಹೋದಂತೆ, ಕಡೆಗೆ ನಿಶ್ಶೇಷವಾಗಿ
ಏನೊಂದೂ ಉಳಿಯುವುದಿಲ್ಲ.
ಮತ್ತೆ ಈ ದುಃಖತಪ್ತ ಹೃದಯವು ಕೂಡ
ತನಗೊಂದು ಹೃದಯವಿತ್ತೆಂಬುದನ್ನೂ
ಮರೆಯುತ್ತದೆ.
ಹಳೆಯ ನೆನಪೆಲ್ಲದಕ್ಕೂ ತಿಲಾಂಜಲಿ ಕೊಡುತ್ತದೆ.
ಹೀಗಿರುವಾಗ,

ನಾನುದುರಿ ಬಿದ್ದ ಈ ಮರವನ್ನು ಹಳಿದು ಏನುಪಯೋಗ?
ದುಃಖಗಳನ್ನು ಶಪಿಸಿ ಏನುಪಯೋಗ?
ನನ್ನ ಸಂಸ್ಕಾರಗಳ ರಕ್ತ
ಒಡೆದ ಹಿಮ್ಮಡಿಯಿಂದ ಸೋರುತ್ತ
ಹಸಿದ ದಾರಿಗಳ ಧೂಳಿನಲ್ಲಿಂಗುತ್ತದೆ.

ನನ್ನ ವೇದನೆಗಳನ್ನು, ದುಃಖಗಳನ್ನು,
ಸುಖ-ಸಂತೋಷಗಳನ್ನು
ಯಾರೂ ಗುರುತಿಸುವುದಿಲ್ಲ.
ನಾ ಪಟ್ಟುದೆಲ್ಲವೂ ರಕ್ತಗತವಾಗುತ್ತ
ಕೊನೆಯಿರದ ದಾರಿಗಳ ಮೇಲೆ ಸೋರುತ್ತದೆ,
ಇದಕ್ಕೆ ಹೆದರಿ ದಾರಿಯನ್ನೇ ಬಿಟ್ಟು ನಡೆಯಬಹುದೇ
ನಾನು ?
ಬಿಟ್ಟರೂ, ಪಯಣಕ್ಕೆ ಅಷ್ಟೆ ಕೊನೆ ಏನು ?
ನಡೆದೆನೋ ಬಿಟ್ಟೆನೋ ಕೇಳುವರು ಯಾರು ?

ಪರಿಸ್ಥಿತಿ ಹೀಗಿರುವಾಗ ,
ಬಿಟ್ಟುಬಿಡು ನನ್ನ ಪಾಡಿಗೆ ನನ್ನ;
ನನಗೇಕೆ ಜೋತು ಬೀಳುವೆ ಹೇಳು
ಕೊಂಬೆ ಕಳಚಿದ ನೀನು ?
ಹಸುರು ನೆರಳಿನ ಹಂಗು ತೊರೆದವ ನಿನಗೆ
ಮತ್ತೆಂಥ ಬಯಕೆ?

ಮೂಡಣದಲ್ಲಿ ಬೆಳಕು ಒಡಮೂಡುತ್ತಿದ್ದರೂ,
ಅಗೋ ನೋಡು ಹೇಗೆ ದಟ್ಟೈಸುತಿದೆ ಕತ್ತಲು !
ಆದರೂ ಅದರ ಅರಿವಿಲ್ಲ ಯಾರಿಗೂ.
ಎಲ್ಲರೂ ಈಜುತಿದ್ದಾರೆ ಈ ಮಹಾಪ್ರವಾಹದಲ್ಲಿ
ಭಯಾನಕ ಶ್ಮಶಾನಗಳ ನಡುವೆ
ಬಣ್ಣಗಳಿಗೆ ತೆಕ್ಕೆ ಬೀಳುತ್ತ.

ನೀನು ಬದುಕಿದ ಹೊತ್ತು
ನಿನ್ನ ಮೈತುಂಬ ಉತ್ಸಾಹಪೂರ್ಣ ಯೌವನವಿತ್ತು,
ಅಷ್ಟೆ ಸಾಕಾಗಿತ್ತು ನಿನ್ನ ಕನಸಿಗೆ
ಪ್ರೀತಿಯೇ ಇರದ ಈ ಜಗತ್ತಿನೊಳಗೆ.

(ಮೂಲ : ಒರಿಯಾ ಭಾಷೆಯ ಕವನ; ಕವಿ : ಶ್ರೀ ದೀಪಕ್ ಮಿಶ್ರಾ)