ದಾಸನ್ ಅವರ ಹುಡುಕಾಟದಲ್ಲಿ

ದಾಸನ್ ಸಾಲೊಮನ್ ಅವರ ಹೆಸರನ್ನು ಮೊದಲ ಬಾರಿ ಕೇಳಿದ್ದು ಸಂಡೂರು ಭೂ ಹೋರಾಟ ಪುಸ್ತಕ ಬರೆಯುವ ಸಂದರ್ಭದಲ್ಲಿ . ಆಗ  ಸಂಡೂರು ಭೂ ಹೋರಾಟದ ಬಗೆಗಿನ ಮಾಹಿತಿಯನ್ನು ಹುಡುಕಿಕೊಂಡು ಬೆಂಗಳೂರಿನ ಪತ್ರಗಾರ ಇಲಾಖೆಗೆ ಹೋಗಿದ್ದೆ. ಅಲ್ಲಿ ಯಜಮಾನ ಶಾಂತರುದ್ರಪ್ಪ ಅವರ ವೈಯಕ್ತಿಕ ಸಂಗ್ರಹದ ಮಾಹಿತಿಯನ್ನು ತಿರುವಿ ಹಾಕುವಾಗ ಸಾಲೊಮನ್ ಹೆಸರು ಅಲ್ಲಲ್ಲಿ ಉಲ್ಲೇಖವಾಗಿತ್ತು. ಆ ನಂತರ ಅವರ ಬಗ್ಗೆ ಕುತೂಹಲ ಹೆಚ್ಚಿತು. ಸಂಡೂರು ಹೋರಾಟದ ಸಂದರ್ಭದಲ್ಲಿ ತುಂಬಾ ಸಕ್ರಿಯವಾಗಿ ಭಾಗವಹಿಸಿ ಹೋರಾಟದ ಯಶಸ್ಸಿಗೆ ಕಾರಣವಾದವರಲ್ಲಿ ಸಾಲೊಮನ್ ಪ್ರಮುಖರು ಎಂದು ತಿಳಿಯಿತು.

ಆ ನಂತರ ಸಾಲೊಮನ್ ಅವರ ಹುಡುಕಾಟವನ್ನು ಮತ್ತೂ ಮುಂದುವರೆಸಿದೆ. ಅವರ ಮನೆ ಬಳ್ಳಾರಿಯ ಗ್ಲಾಸ್ ಬಜಾರಿನಲ್ಲಿತ್ತು ಎನ್ನುವ ಮಾಹಿತಿಯ ಎಳೆ ಹಿಡಿದು ಹುಡುಕ ಹೊರಟಾಗ, ಅವರ ಮಗ ಚಂದ್ರನ್ ಸಾಲೊಮನ್ ಸಿಕ್ಕರು. ಮೂರಂತಸ್ತಿನ  ಮೇಲಿನ ಮನೆಯಲ್ಲಿ, ಸಾಲೊಮನ್ ಅವರು ಕೋಟು ಕನ್ನಡಕ ಹಾಕಿದ ದೊಡ್ಡ ಛಾಯಚಿತ್ರವೊಂದು ಕಂಡಿತು. ಆ ಮುಖದಲ್ಲಿ ವಿಪರೀತ ದಣಿವಿರುವಂತೆಯೂ, ಮತ್ತೊಮ್ಮೆ ನೋಡಿದರೆ ಎಂಥದೋ ತೇಜಸ್ಸಿರುವಂತೆಯೂ ಕಂಡರು.  ಬಹುಶಃ ಆ ತನಕ ಸಾಲೊಮನ್ ಅವರ ಚಿತ್ರವೊಂದು ನನ್ನ ಕಣ್ಣಮುಂದೆ ಬಂದಿರಲಿಲ್ಲ.

ಅವರ ಮಗ ಚಂದ್ರನ್ ನಿಧಾನಕ್ಕೆ ದಾಸನ್ ನೆನಪುಗಳನ್ನು ಮೆಲಕು ಹಾಕತೊಡಗಿದರು. ಅಪ್ಪನ ನೆನಪುಗಳನ್ನು ಚಂದ್ರನ್ ಅಷ್ಟಾಗಿ ಉಳಿಸಿಕೊಂಡಂತಿರಲಿಲ್ಲ. ನೆನಪುಗಳು ಅಷ್ಟು ನಿಚ್ಚಳವಾಗಿಲ್ಲ ಅನ್ನಿಸತೊಡಗಿತು. ನಂತರ ನಾನು ಭೇಟಿಯಾದದ್ದು ಹೆಚ್.ಕೆ ಶಾಂತಾ ಎನ್ನುವ ಸಾಲೊಮನ್ ಅವರ ಆಪ್ತ ಸಹಾಯಕಿಯನ್ನು. ಅವರಿಗೆ ಈಗ ಸರಿಸುಮಾರು ಎಪ್ಪತ್ತು ವರ್ಷದ ಆಸುಪಾಸು. ಬಳ್ಳಾರಿಯ ತಾಲೂಕು ಕಛೇರಿಯ ಎದುರು ಅರ್ಜಿ ಬರೆಯುತ್ತಾ, ದಿನದ ದುಡಿಮೆ ಮಾಡುತ್ತಿದ್ದ ಈ ಅಜ್ಜಿಯ ಬಳಿ ಸಾಲೊಮನ್ ಹೆಸರು ಹೇಳಿದಾಕ್ಷಣ ಮಿಂಚಿನ ಸಂಚಾರವಾದಂತಾಗಿ, ಆಕೆಯ ಕಣ್ಣುಗಳು ಒದ್ದೆಯಾದವು.

ಸಾಲೊಮನ್ ಅವರ ಬಗೆಗಿನ ನೆನಪಿನ ನಿಧಿ ಈ ಅಜ್ಜಿ ಅನ್ನಿಸತೊಡಗಿತು. ಕೋಟೆಯ ಬಳಿ ಇರುವ ಅವರ ಮನೆಯಲ್ಲಿ ಮಾತನಾಡಿಸುತ್ತಾ ಹೋದಂತೆ ದಾಸನ್ ಅವರ ಬದುಕಿನ ಮಗ್ಗಲುಗಳು ಒಂದೊಂದಾಗಿ ಬಿಚ್ಚಿಕೊಳ್ಳತೊಡಗಿದವು. ಸಾಲೊಮನ್ ಅವರ ಸ್ನೇಹಿತರಾದ ಕೆ. ರಾಮದಾಸ್ ಅವರು( ಸುಪ್ರೀಂ ಕೋರ್ಟ ಲಾಯರ್ ಆಗಿದ್ದರಂತೆ, ಈಗ ಅವರು ಇಲ್ಲ) ‘ಡೊಮೆಸ್ಟಿಕ್ ಎನ್‌ಕ್ವಯಿರೀಸ್’ ಎನ್ನುವ ಪುಸ್ತಕ ಬರೆದು ಅದನ್ನು ದಾಸನ್ ಅವರಿಗೆ ಅರ್ಪಿಸಿದ್ದಾರೆ. ಆ ಕೃತಿಯಲ್ಲಿ ದಾಸನ್ ಬಗ್ಗೆ ಬರೆದಿದ್ದರು ಎನ್ನುವ ಮಾಹಿತಿ ಇದೆ. ಆದರೆ ಆ  ಕೃತಿ ಈಗ ಅಲಭ್ಯ. ಹೀಗೆ ಸಾಲೊಮನ್ ಅವರ ನೆನಪಿನ ಪೆಟ್ಟಿಗೆಗೆ ಬೀಗ ಹಾಕಿಕೊಂಡಿದ್ದವರನ್ನೆಲ್ಲಾ ಮಾತನಾಡಿಸುತ್ತಾ ಹೋದಂತೆ ಅವರ ವ್ಯಕ್ತಿತ್ವದ ಚಿತ್ರಗಳು ಒಂದೊಂದಾಗಿ ನಿಚ್ಚಳವಾಗತೊಡಗಿದವು.

ಬಾಲ್ಯ ಮತ್ತು ಬದುಕು

ದಾಸನ್ ಅವರ ಪೂರ್ಣ ಹೆಸರು ಆಂಥೋನಿ ಕ್ಲೆಮೆಂಟ್ ಜೇಸುದಾಸನ್ ಸಾಲೊಮನ್. ಈತ ಶ್ರೀಮತಿ ಮತ್ತು ಶ್ರೀ ಸಾಲೊಮನ್ ಅವರ ಮಗನಾಗಿ ೧೯೧೫ ರ ಜುಲೈ ೬ ರಂದು ಜನಿಸಿದರು. ಬಳ್ಳಾರಿಯ ವಾರ್ಡ್ಲಾ ಸ್ಕೂಲಿನಲ್ಲಿ ಪ್ರತಿಭಾವಂತ ವಿಧ್ಯಾರ್ಥಿಯಾಗಿ ಬೆಳೆದರು. ಕಾಲೇಜು ಶಿಕ್ಷಣ ಸರಕಾರಿ ಕಲಾ ಕಾಲೇಜ್ ಅನಂತಪುರದಲ್ಲಿ ಮುಗಿಯಿತು. ಓದುವುದರಲ್ಲಿಯೂ, ಕ್ರೀಡೆಯಲ್ಲಿಯೂ ದಾಸನ್ ಪ್ರಖರ ಪ್ರತಿಭೆಯನ್ನು ಹೊಂದಿದ್ದರು. ಹಾಗಾಗಿ ಬಾಲ್ಯದಲ್ಲಿ ಎಲ್ಲರ ಗಮನಸೆಳೆದರು. ಆದರೆ ಇವರ ಪ್ರಖರ ಬುದ್ದಿವಂತಿಕೆಯನ್ನು ಜನರ ನೋವು, ಅಸಮಾನತೆಗಳು ಸೆಳೆದವು. ಹಾಗಾಗಿ ಓದನ್ನು ಮುಂದುವರಿಸದೆ ಜನರ ಪರವಾಗಿ ದುಡಿಯುವ ಕೆಲಸದಲ್ಲಿ ಮುಳುಗಿದರು. ಬಹುಶಃ ಅವರ ಬಾಲ್ಯವು ಸ್ವತಂತ್ರ್ಯ ಚಳವಳಿಯ ಪ್ರಭಾವಕ್ಕೆ ತೀವ್ರವಾಗಿ ಸ್ಪಂದಿಸಿದಂತೆ ಕಾಣುತ್ತದೆ. ಹಾಗಾಗಿ ಅವರಿಗೆ ಓದು ಬರಹ ಎನ್ನುವುದಕ್ಕಿಂತ ಜನರ ಜತೆ ಬೆರೆಯುವುದು ಜನರ ಕಷ್ಟಗಳಿಗೆ ಸ್ಪಂದಿಸುವುದೇ ಮುಖ್ಯ ಎನ್ನುವಂತಾಗಿತ್ತು.

ದಾಸನ್ ಅವರದು ತುಂಬು ಸಂಸಾರ. ಒಬ್ಬ ಗಂಡುಮಗ, ಐದು ಜನ ಹೆಣ್ಣುಮಕ್ಕಳಿದ್ದರು. ದಾಸನ್ ಕುಟುಂಬದ ಬಗೆಗಿನ ಕಾಳಜಿಗಿಂತ ಸಮಾಜದ ಮೇಲಿನ ಕಾಳಜಿಯೇ ಹೆಚ್ಚಾಗಿ ಮನೆಯವರು ಇವರನ್ನು ಕಡೆಗಣಿಸಿದರು ಎಂದು ಶಾಂತಮ್ಮ ಹೇಳುತ್ತಾರೆ. ಅವರ ಮಗ ಚಂದ್ರನ್ ಅವರ ಮಾತಲ್ಲಿಯೂ ಈ ಭಾವ ಇತ್ತಾದರೂ ಅದನ್ನವರು ಸ್ಪಷ್ಟವಾಗಿ ಕಾಣಿಸಲಿಲ್ಲ. ಇವರು ರೆವೆನ್ಯು ಇನ್ಸ್‌ಪೆಕ್ಟರ್ (ಆರ್.ಐ) ಆಗಿ ಸರ್ಕಾರಿ ಸೇವೆಗೆ ಸೇರಿದರು. ಆದರೆ ಈ ಹುದ್ದೆಯಲ್ಲಿ ಹೆಚ್ಚು ಕಾಲ ಮುಂದುವರೆಯಲಿಲ್ಲ. ಅಥವಾ ಅವರು ನಂಬಿದ ಸಿದ್ದಾಂತ ಮತ್ತು ಹೋರಾಟದ ಬದುಕಿಗೆ ಈ ಹುದ್ದೆ ಸಹಕರಿಸಲಿಲ್ಲ ಎಂದು ಕಾಣುತ್ತದೆ. ೧೯೫೫ ರಲ್ಲಿ ಅವರು ಆರ್. ಐ ಹುದ್ದೆಗೆ ರಾಜಿನಾಮೆ ನೀಡಿದರು. ಅಲ್ಲಿಂದ ತುಂಬು ಸಂಸಾರದ ಜವಾಬ್ದಾರಿಯನ್ನು ದಾಸನ್ ಅವರ ಹೆಂಡತಿ ನಿಭಾಯಿಸಿದರು.

ಸ್ವಾತಂತ್ರ್ಯ ಚಳವಳಿ

ದಾಸನ್ ವಿದ್ಯಾರ್ಥಿ ದೆಸೆಯಲ್ಲಿಯೇ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು. ಅವರ ಇಪ್ಪತ್ತನೇ ವಯಸ್ಸಿನಲ್ಲಿ ಭಾರತದಲ್ಲಿ ಗಾಂಧೀಜಿಯವರ ನಾಯಕತ್ವದ ಸ್ವಾತಂತ್ರ್ಯ ಚಳವಳಿ ತುಂಬಾ ತೀವ್ರವಾಗಿತ್ತು. ಅವರ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಮುಂತಾದವು ಬಿಸಿರಕ್ತದ ಯುವಕರನ್ನು ತೀವ್ರವಾಗಿ ಆಕರ್ಷಿಸಿದವು. ಇದು ಸಹಜವಾಗಿ ದಾಸನ್ ಅವರನ್ನು ಪ್ರಭಾವಿಸಿರಲಿಕ್ಕೆ  ಸಾಧ್ಯವಿದೆ. ಆ ಕಾಲದಲ್ಲಿ ದಾಸನ್ ಪಿಕೆಟಿಂಗ್ ಮುಂತಾರ ಬ್ರಿಟೀಶ್ ವಿರೋಧಿ ಚಳವಳಿಯಲ್ಲಿ ಭಾಗವಹಿಸಿದ ಕಾರಣಕ್ಕೆ ಆಂಗ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು.

ಬಳ್ಳಾರಿ ಜಿಲ್ಲೆಯಲ್ಲಿ ಸ್ವತಂತ್ರ್ಯ ಹೋರಾಟವನ್ನು ತೀವ್ರಗೊಳಿಸಿದವರಲ್ಲಿ ದಾಸನ್ ಕೂಡಾ ಒಬ್ಬರು. ೧೯೪೨ ರ ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ದಾಸನ್ ಪೋಲೀಸರ ಹೊಡೆತದಿಂದ ತೀವ್ರವಾಗಿ ಗಾಯಗೊಂಡ ಬಗ್ಗೆ ಯಜಮಾನ ಶಾಂತರುದ್ರಪ್ಪ ಅವರು ಬರೆಯುತ್ತಾರೆ. ಒಂದಕ್ಕಿಂತ ಹೆಚ್ಚು ಬಾರಿ ದಾಸನ್ ಬ್ರಿಟೀಶ್‌ರಿಂದ ಬಂದಿತರಾಗಿ ಜೈಲು ವಾಸವನ್ನು ಅನುಭವಿಸಿದರು. ನೀಲಂ ಸಂಜೀವರೆಡ್ಡಿ ಇವರೊಂದಿಗೆ ಜೈಲು ವಾಸದಲ್ಲಿ ಜತೆಗಿದ್ದರು. ಇಲ್ಲಿಂದಲೇ ಸಾಲೊಮನ್ ಅವರ ಹೋರಾಟದ ಬದುಕು ಆರಂಭವಾದಂತೆ ಕಾಣುತ್ತದೆ.

ಭೂ ಹೋರಾಟ

ದಾಸನ್ ಅವರು ಮೂಲತಃ ಸಮಾಜವಾದಿ ಆಶಯಗಳಿಂದ ಪ್ರಭಾವಿತರಾದವರು. ಹಾಗಾಗಿ ಭಾರತದಲ್ಲಿ ೧೯೩೪ ರ ನಂತರ ಸಮಾಜವಾದಿ ಪಕ್ಷ ರೂಪಿಸುತ್ತಿದ್ದ ರೈತ ಹೋರಾಟಗಳು ಸಹಜವಾಗಿ ಸಮಾಜವಾದಿ ಆಶಯಗಳಿರುವ ಸಂಗಾತಿಗಳನ್ನು ಗಮನ ಸೆಳೆಯುತ್ತಿತ್ತು. ಮತ್ತು ಭೂ ಹೋರಾಟವನ್ನು ರೂಪಿಸುವಂತೆ ಪ್ರೇರೇಪಿಸುತ್ತಿತ್ತು. ದಾಸನ್ ಅವರು ಕಾಗೋಡು ರೈತ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ಎಂದು ಗೋಪಾಲಗೌಡರೊಂದಿಗೆ ನಡೆಸಿದ ಪತ್ರ ವ್ಯವಹಾರದಲ್ಲಿ ತಿಳಿಯುತ್ತದೆ. ಕಾಗೋಡಿನ ರೈತ ಹೋರಾಟವನ್ನು ಸಮಾಜವಾದಿ ರೈತ ಹೋರಾಟವನ್ನಾಗಿ ರೂಪಿಸುವಲ್ಲಿ ದಾಸನ್ ಪಾತ್ರವೂ ಇತ್ತು.

೧೯೭೩ ರಲ್ಲಿ ನಡೆದ ಸಂಡೂರು ಭೂ ಹೋರಾಟವನ್ನು ರೂಪಿಸಿದ ಮೊದಲಿಗರಲ್ಲಿ ದಾಸನ್ ಕೂಡ ಪ್ರಮುಖರು. ಸೋಷಲಿಸ್ಟರು ಸೊಂಡೂರಿನಲ್ಲಿ ಚಳವಳಿ ಮಾಡುವುದಾಗಿ ನಿರ್ಧರಿಸಿದಾಗ, ಅದರ ರೂಪುರೇಷೆಗೆ ಹೊಸಪೇಟೆಯಲ್ಲಿ ಜನವರಿ ೩೦, ೧೯೭೩ರಲ್ಲಿ ಒಂದು ಸಭೆ ನಡೆಯಿತು. ಈ ಸಭೆಯ ನಿರ್ಣಯದಲ್ಲಿ ಸೊಂಡೂರಿನ ಮಾಜಿ ರಾಜರು ಮತ್ತು ಎಂ.ವೈ.ಘೋರ್ಪಡೆಯವರು ರೈತರ ಜಮೀನನ್ನು ತಮ್ಮ ವಶದಲ್ಲೇ ಇಟ್ಟುಕೊಂಡಿರುವುದನ್ನು ಪ್ರತಿಭಟಿಸಿ ಆ ಜಮೀನಿನ ವಿಮೋಚನೆಗಾಗಿ “ಸೊಂಡೂರು ಸಂಗ್ರಾಮ ಸಿದ್ಧತಾ ಸಮಿತಿ”ಯನ್ನು ರಚಿಸಿದರು. ಅದರಲ್ಲಿ ಕೆ.ಜಿ.ಮಹೇಶ್ವರಪ್ಪ, ಎಸ್. ವೆಂಕಟರಾಂ, ದಾಸನ್ ಸಾಲೋಮನ್, ಎಂ.ವೈ.ಆರ್ ಪರಮೇಶ್ವರಪ್ಪ, ಎಸ್.ಎಸ್.ಕುಮುಟ ಮತ್ತು ಕೋಣಂದೂರು ಲಿಂಗಪ್ಪ ಇವರುಗಳನ್ನು ಸಮಿತಿಯ ಸದಸ್ಯರುಗಳನ್ನಾಗಿ ನಿರ್ಣಯಿಸಲಾಯಿತು. ಈ ಸಭೆಯಲ್ಲಿ ಸ್ಥಳೀಯ ಕಾಂಗ್ರೆಸಿಗರನ್ನು ಪಕ್ಷ ಖಂಡಿಸಿತು. ಇದೇ ಸಭೆಯಲ್ಲಿ ಹೂವಿನಹಡಗಲಿಯಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಸಮಾವೇಶ ಮಾಡಲು ನಿರ್ಧರಿಸಲಾಯಿತು.

ದಾಸನ್ ಅವರು ಸಂಡೂರು ಭೂ ಹೋರಾಟದಲ್ಲಿ ತುಂಬಾ ಸಕ್ರಿಯವಾಗಿ ಭಾಗವಹಿಸಿದರು. ಜಾರ್ಜ ಫರ್ನಾಂಡೀಸ್ ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರಿಂದಾಗಿ, ಇಡೀ ಸಂಡೂರು ಹೋರಾಟದ ಮಾಹಿತಿಯನ್ನು ಜಾರ್ಜ ಅವರಿಗೆ ತಿಳಿಸುತ್ತಾ ಅದರ ರೂಪುರೇಷೆಗಳ ಬಗ್ಗೆ ಚರ್ಚಿಸುತ್ತಿದ್ದರು. ಕಾನೂನಿನ ವಿಷಯದಲ್ಲಿ ಇವರು ಆಳವಾದ ಜ್ಞಾನವನ್ನು ಹೊಂದಿದ್ದರಿಂದಾಗಿ ಹೋರಾಟಕ್ಕೆ ಬೇಕಾದ ಕಾನೂನಿನ ಚೌಕಟ್ಟನ್ನು ತುಂಬಾ ಜಾಣ್ಮೆಯಿಂದ ನಿರ್ವಹಿಸಿದರು. ಹೀಗಾಗಿ ದಾಸನ್ ಅವರು ಸಂಡೂರು ಭೂ ಹೋರಾಟದ ಯಶಸ್ಸಿನಲ್ಲಿಯೂ ಪ್ರಮುಖ ಪಾತ್ರ ವಹಿಸಿದರು. ಆದರೆ ಈ ಹೋರಾಟ ಯಶಸ್ಸಿನಲ್ಲಿ ಇವರ ಪಾತ್ರವನ್ನು ಅಷ್ಟಾಗಿ ಮೇಲ್ ಸ್ತರಕ್ಕೆ ತರದೆ ಗೌಣಗೊಳಿಸಲಾಯಿತು.

ಕಾರ್ಮಿಕ ನಾಯಕ

ದಾಸನ್ ಅವರು ನಿಜಾರ್ಥದಲ್ಲಿ ಕರ್ನಾಟಕದ ಬಹುದೊಡ್ಡ ಕಾರ್ಮಿಕ ನಾಯಕ. ಎಪ್ಪತ್ತರ ದಶಕದಲ್ಲಿ ಕರ್ನಾಟಕ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಕೆ.ಜಿ ಮಹೇಶ್ವರಪ್ಪ ಸಾಲೊಮನ್ ಅವರ ಬಗ್ಗೆ ಹೇಳುವ ಮಾತು ಹೀಗಿದೆ: ‘ ಒಳ್ಳೇ ಲೇಬರ್ ಲೀಡರ್ ಅವ್ರು. ಅಂಡ್ ಕಮುನಿಟಿ ಡಿಸ್ ಅಡ್ವಂಟೇಜ್ ಇರ್ತದೆ. ಬಿಕಾಸ್ ಹಿ ವಾಸ್ ಎ ಕ್ರಿಶ್ಚಿಯನ್. ಬಟ್ ಹಿ ವಾಸ್ ಎ ವೆರಿಗುಡ್ ಲೀಡರ್. ಅವ್ರು ಭಾಳಾ  ವರ್ಷ ಟ್ರೇಡ್ ಯೂನಿಯನ್ನಿನ್ಯಾಗ ಇದ್ರು. ಹಿಂದ್ ಮಜ್ದೂರ್ ಪಂಚಾಯ್ತ್‌ಗೆ ಅಧ್ಯಕ್ಷರಾಗಿದ್ರು.  ಬಳ್ಳಾರಿಯಲ್ಲಿ ಭಾಳಾ ಹೋರಾಟ ಮಾಡ್ಯಾರ ಅವ್ರು. ಒಳ್ಳೇ ಲೀಡ್ರು. ನಮ್ ಸ್ಟೇಟ್‌ನ ಟಾಪ್‌ಮೋಷ್ಟ ಟ್ರೇಡ್ ಯೂನಿಯನ್ ಲೀಡರ್ ಅವರು.’ ಎನ್ನುತ್ತಾರೆ. ಈ ಮಾತು ದಾಸನ್ ಅವರ ವ್ಯಕ್ತಿತ್ವ ಮತ್ತು ಹೋರಾಟದ ಬದುಕಿಗೆ ಕನ್ನಡಿ ಹಿಡಿಯುತ್ತದೆ. ಈಗಲೂ ಬಳ್ಳಾರಿಯ ಹಿರಿಯ ಕಾರ್ಮಿಕರನ್ನು ಬೇಟಿಯಾದರೆ, ಅವರು ಕಾರ್ಮಿಕರ ದೇವರು ಎನ್ನುತ್ತಾ ಅವರೊಳಗೆ ಮಿಂಚಿನ ಸಂಚಾರವಾದಂತೆ ಭಾವುಕರಾಗುತ್ತಾರೆ.

ಕರ್ನಾಟಕದಲ್ಲಿ ಕಾರ್ಮಿಕ ಚಳವಳಿಗೆ ದೊಡ್ಡ ಪರಂಪರೆ ಇದೆ. ಸಮಾಜವಾದಿ ಪಕ್ಷ ಕಾರ್ಮಿಕ ಚಳವಳಿಯನ್ನು ರೂಪಿಸುವುದು ಬಹಳ ಮುಖ್ಯ ಎಂದು ಭಾವಿಸಿತ್ತು. ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಜಾರ್ಜ ಫರ್ನಾಂಡೀಸ್ ಅವರು ಸಮಾಜವಾದಿ ಪಕ್ಷದ ಸಂಗಾತಿಗಳಿಗೆ ಕಾರ್ಮಿಕ ಹೋರಾಟವನ್ನು ರೂಪಿಸಲು ಕರೆ ಕೊಟ್ಟರು. ಈ ಕರೆಯಿಂದಾಗಿ ಕೆಲವು ಸಮಾಜವಾದಿ ಪಕ್ಷದ ಸಂಗಾತಿಗಳು ಕಾರ್ಮಿಕ ಹೋರಾಟವನ್ನು ರೂಪಿಸುವಲ್ಲಿ ಹೆಚ್ಚು ತೊಡಗಿಸಿಕೊಂಡರು. ಕರ್ನಾಟಕದಲ್ಲಿಯೂ ಇದು ತೀವ್ರವಾಗಿ ಬೆಳೆಯಿತು.

ದಾಸನ್ ಲೋಹಿಯಾ ಪ್ರಣೀತ  ಸಮಾಜವಾದದಲ್ಲಿ ಹೆಚ್ಚು ನಂಬಿಕೆಯನ್ನು ಇಟ್ಟಿದ್ದರು. ಸಮಾಜವಾದಿ ಸಿದ್ದಾಂತದ ನಿಜವಾದ ಜೀವಂತಿಕೆ ಇರುವುದು ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ನಡೆಸುವ ಹೋರಾಟಗಳಲ್ಲಿ ಎನ್ನುವುದನ್ನು ದಾಸನ್ ಬಲವಾಗಿ ನಂಬಿದ್ದರು. ಹಾಗಾಗಿ ಅವರು ಬಳ್ಳಾರಿಯಲ್ಲಿ ಹತ್ತಕ್ಕೂ ಹೆಚ್ಚು ಕಾರ್ಮಿಕ ಯೂನಿಯನ್‌ಗಳನ್ನು ಸ್ಥಾಪಿಸಿದ್ದರು. ಅದರಲ್ಲಿ ಮುಖ್ಯವಾಗಿ ಹಮಾಲಿಗಳ ಸಂಘ, ಸಕ್ಕರೆ ಕಾರ್ಖಾನೆ ಕಾರ್ಮಿಕರ ಸಂಘ, ಮೈನ್ಸ ಕಾರ್ಮಿಕರ ಸಂಘ, ಪುರಸಭಾ ಕಾರ್ಮಿಕರ ಸಂಘ, ಬೀಡಿ ಕಾರ್ಮಿಕರು, ಆಟೋಮೊಬೈಲ್

ಕಾರ್ಮಿಕರು, ವಿದ್ಯುತ್ ಇಲಾಖೆಯ ಕಾರ್ಮಿಕರ ಸಂಘ ಹೀಗೆ ಅಸಂಘಟಿಕ ಕಾರ್ಮಿಕರಲ್ಲಿ ಸಂಘಟಿತ ಮನೋಭಾವವನ್ನು ಬೆಳೆಸುವಲ್ಲಿ ಬಳ್ಳಾರಿ ಭಾಗದಲ್ಲಿ ದಾಸನ್ ಅವರು ವಹಿಸಿದ ಪಾತ್ರ ದೊಡ್ಡದು. ಈಗಲೂ ಹಿರಿಯ ಕಾರ್ಮಿಕರನ್ನು ಬೇಟಿಯಾಗಿ ಮಾತನಾಡಿಸಿದರೆ ಅವರು ಕಾರ್ಮಿಕರ ದೇವ್ರು ಅಂತೆಲ್ಲಾ ಹೇಳುತ್ತಾರೆ.

ದಾಸನ್ ಅವರು ಸಕ್ಕರೆ ಕಾರ್ಮಿಕರ ಸಂಘಟನೆ ಮಾಡುವಲ್ಲಿ, ಮತ್ತು ಸಕ್ಕರೆ ಕಾರ್ಮಿಕರ ಪರವಾದ ಹೋರಾಟ ರೂಪಿಸುವಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದರು. ದಾಸನ್ ಅಖಿಲ ಭಾರತ ಸಕ್ಕರೆ ಕಾರ್ಮಿಕರ ಫೆಡರೇಷನ್ನಿನ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. ಕರ್ನಾಟಕ ರಾಜ್ಯ ಸಕ್ಕರೆ ಕಾರ್ಖಾನೆ ಸಂಘಗಳ ಒಕ್ಕೂಟಕ್ಕೆ ರಾಜ್ಯಾಧ್ಯಕ್ಷರಾಗಿದ್ದರು. ಹಿಂದ್ ಮಜ್ದೂರ್ ಪಂಚಾಯ್ತ್‌ಗೆ ಅಧ್ಯಕ್ಷರಾಗಿದ್ದರು. ದಾಸನ್ ಅವರಿಗೆ ಕಾರ್ಮಿಕ ಮಂತ್ರಿಯಾಗಲು ಕಾಂಗ್ರೇಸ್ ಪಕ್ಷದಿಂದ ಆಹ್ವಾನ ಬಂದಿತ್ತಂತೆ. ಆದರೆ ಅವರು ಅದನ್ನು ನಿರಾಕರಿಸಿದ್ದಾಗಿ ತಿಳಿಯುತ್ತದೆ. ಇದರ ಖಚಿತ ಮಾಹಿತಿಯು ಸದ್ಯಕ್ಕೆ ಅಲಭ್ಯ.

ಶಾಂತಮ್ಮ ಹೇಳುವಂತೆ ಬಳ್ಳಾರಿಯಲ್ಲಿದ್ದ ಜನತಾ ಪಕ್ಷದ ಕಚೇರಿ ಯಾವಾಗಲೂ ಕಾರ್ಮಿಕರಿಂದ ಗಿಜುಗುಡುತ್ತಿತ್ತಂತೆ, ಹಾಗಾಗಿ ಜನತಾ ಪಕ್ಷದ ಕಾರ್ಯಕರ್ತರು ಇದೇನು ಪಕ್ಷದ ಕಛೇರಿಯೋ ಅಥವಾ ಕಾರ್ಮಿಕರ ಕಛೇರಿಯೋ ಎಂದು ಹಂಗಿಸುತ್ತಿದ್ದರಂತೆ. ಹಾಗಾಗಿ ಜನತಾ ಪಕ್ಷದ ಚರ್ಚೆ ಸಂವಾದಗಳು ರಾಯಲ್ ಹೋಟೆಲಿನಲ್ಲಿ ನಡೆಯುತ್ತಿದ್ದವಂತೆ. ಅಂದರೆ ಪಕ್ಷದ ಕಚೇರಿ ನಿಜಾರ್ಥದಲ್ಲಿ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸುವ ತಾಣವಾಯಿತು. ಅದು ಪಕ್ಷದ ಕಾರ್ಯಕರ್ತರಿಗೆ ಮುಳುವಾಯಿತು. ಇದನ್ನು ನೋಡಿದರೆ ಸಮಾಜವಾದಿ ಪಕ್ಷದ ಕಾರ್ಯಕರ್ತರಲ್ಲಿಯೂ ಪಕ್ಷದ ಸಾಮಾಜಿಕ ನಿಷ್ಠೆ ಕಡಿಮೆಯಾಗುತ್ತಿರುವುದು ಕಂಡುಬರುತ್ತದೆ.

ದಾಸನ್ ಅವರ ಕಾರ್ಮಿಕ ಹೋರಾಟ ತುಂಬಾ ಕಾನೂನು ರೀತ್ಯವಾಗಿರುತ್ತಿತ್ತು. ಹಾಗಾಗಿ ಈ ಭಾಗದ ಪ್ಯಾಕ್ಟರಿ ಮಾಲಿಕರು ದಾಸನ್ ಅವರನ್ನು ತುಂಬಾ ಪ್ರೀತಿ ಗೌರವದಿಂದ ಕಾಣುತ್ತಿದ್ದರು. ಯಾವುದೇ ಸಂಗತಿಯಿದ್ದರೂ ಮಾಲಿಕರುಗಳಿಗೆ ಸಾಲೊಮನ್ ನೋಟಿಸ್ ಕಳಿಸುತ್ತಿದ್ದರು. ಆ ನೋಟಿಸ್ ನೋಡಿದಾಕ್ಷಣ ಅವರು ದಿಡೀರನೆ ಆ ಕೇಸು ಮುಂದುವರೆಸದಂತೆ, ಅವರ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿ ಸಾಲೊಮನ್ ಅವರ ಕಛೇರಿಗೆ ದಾವಿಸುತ್ತಿದ್ದರು. ಸಾಲೊಮನ್ ಕಾರ್ಮಿಕರ ಬಹಿರಂಗ ಸಭೆಗಳಲ್ಲಿ ತುಂಬಾ ಮೆದುವಾಗಿ ಮಾತನಾಡುತ್ತಿದ್ದರು. ಅವರ ವ್ಯಕ್ತಿತ್ವವನ್ನು ನೋಡಿದರೆ, ಅಥವಾ ಶಾಂತಮ್ಮ ಅವರ ಬಗ್ಗೆ ಹೇಳುವುದನ್ನು ಕೇಳಿದರೆ ಅವರು ಮಾತಿಗಿಂತ ಕೃತಿಗೆ ಹೆಚ್ಚು ಒತ್ತು ಕೊಡುತ್ತಿದ್ದರು. ಹೆಚ್ಚು ಮಾತನಾಡುತ್ತಿದ್ದ ಎಂ.ಪಿ ಪ್ರಕಾಶ್ ಮುಂತಾದವರು ಶಕ್ತಿ ರಾಜಕಾರಣದಲ್ಲಿ ಲಾಭ ಪಡೆಯುತ್ತಾ, ರಾಜಿಯಾಗುತ್ತಾ ಹೋದರು, ಮಾತನಾಡದ ಸಾಲೊಮನ್ ಶಕ್ತಿ ರಾಜಕಾರಣದಿಂದ ಹಿಂದೆ ಉಳಿದರು. ಅಥವಾ ಅವರದು ಹಾಗೆ ರಾಜಿ ಮಾಡಿಕೊಂಡು ತಮ್ಮ ತತ್ವಸಿದ್ಧಾಂತಗಳಿಗೆ ವಿಮುಖವಾಗುವ ವ್ಯಕ್ತಿತ್ವವಾಗಿರಲಿಲ್ಲ. ದಾಸನ್ ಅವರು ಎಂ.ಪಿ ಪ್ರಕಾಶ್ ಅವರ ನಡೆ ಮತ್ತು ಅವರ ರಾಜಕೀಯ ನಿಲುವುಗಳನ್ನು ಇಷ್ಟಪಡುತ್ತಿರಲಿಲ್ಲವಂತೆ, ಕೆಲವೊಮ್ಮೆ ಕಟುವಾಗಿ ವಿರೋಧಿಸುತ್ತಿದ್ದರಂತೆ, ಹಾಗಾಗಿ ಎಂ.ಪಿ.ಪಿ ಸಮಾಜವಾದಿ ಪಕ್ಷದ ಕಛೇರಿಗೆ ಬರುವುದನ್ನು ಕಡಿಮೆ ಮಾಡಿದರು ಎಂದು ಶಾಂತಮ್ಮ ಹೇಳುತ್ತಾರೆ.

ಬಳ್ಳಾರಿ ಗಾಂಧಿ

ಬಳ್ಳಾರಿಯಲ್ಲಿ ಗಾಂಧಿವಾದಿಗಳ ದೊಡ್ಡ ಪಡೆ ಇತ್ತು. ಮಹಾಬಳೇಶ್ವರಪ್ಪ, ರಂಜಾನ್ ಸಾಬ್, ಮಳೆಬೆನ್ನೂರು, ಯಜಮಾನ ಶಾಂತರುದ್ರಪ್ಪ ಮೊದಲಾದವರು. ಈ ಸಾಲಿಗೆ ಸೇರುವ ಮತ್ತೊಂದು ಹೆಸರು ದಾಸನ್ ಅವರದು. ಅವರನ್ನು ಬಳ್ಳಾರಿಯ ಗಾಂಧಿ ಎಂದು ಕರೆಯುತ್ತಿದ್ದರು. ಅದು ಅವರಿಗೆ ಅನ್ವರ್ಥವೂ ಆಗಿತ್ತು. ಕಾರಣ ಅವರು ಗಾಂಧಿಯಂತೆಯೇ ಸರಳಜೀವಿ. ಎಂದೂ ಅವರು ಹಣ ಅಧಿಕಾರಕ್ಕಾಗಿ ಆಸೆಪಡಲಿಲ್ಲ. ಅವರು ಗಾಂಧಿಯ ತತ್ವವನ್ನು ಬದುಕಿದವರು. ದಾಸನ್ ಅವರ ಸಹಾಯಕಿಯಾಗಿದ್ದ ಶಾಂತ ಅವರು ಹೇಳುವಂತೆ, ಅವರು ಮತ್ತೆ ಮತ್ತೆ ಗಾಂಧಿಯ ತತ್ವಗಳ ಬಗ್ಗೆ ಮಾತನಾಡುತ್ತಿದ್ದರಂತೆ; ಗಾಂಧಿಯ ಕೃತಿಗಳನ್ನು ಓದುತ್ತಿದ್ದರಂತೆ. ಕಾರ್ಮಿಕ ಹೋರಾಟವನ್ನು ರೂಪಿಸುವಾಗಲೂ ಮುಖ್ಯವಾಗಿ ಗಾಂಧೀಜಿಯವರ ಅಸಹಕಾರ ಚಳವಳಿಯ ತಾತ್ವಿಕತೆಯನ್ನು ಪಾಲಿಸುತ್ತಿದ್ದರಂತೆ.

ದಾಸನ್ ಎಲ್ಲವನ್ನೂ ಕಾನೂನು ರೀತ್ಯವಾಗಿಯೇ ಬಗೆಹರಿಸಿಕೊಳ್ಳಬೇಕೆಂಬ ನಿಲುವಿನಲ್ಲಿ ಅಚಲ ವಿಶ್ವಾಸ ಹೊಂದಿದ್ದರು. ಬಳ್ಳಾರಿಗೆ ಗಾಂಧಿ ಬಂದಾಗ ಅವರೊಂದಿಗೆ ಒಡನಾಡಿದ್ದರು. ಬಳ್ಳಾರಿಯ ಜನ ದಾಸೆನ್ ಅವರನ್ನು ಗಾಂಧಿ ಎಂದು ಕರೆದದ್ದಕ್ಕೋ ಏನೋ ಅವರು ತಮ್ಮ ಕೊನೆಯುಸಿರೆಳೆದದ್ದೂ ಸಹ ಗಾಂಧಿ ಹುಟ್ಟಿದ ದಿನ, ಅಂದರೆ ಅಕ್ಟೋಬರ್ ೨, ೧೯೯೫. ಆಗ ದಾಸನ್ ಅವರು ಎಂಬತ್ತು ವರ್ಷದ ಸುಧೀರ್ಘ ಹೋರಾಟದ ಬದುಕಿನಿಂದ ವಿರಾಮ ಪಡೆದಿದ್ದರು. ಇಂತಹ ಹೋರಾಟಗಾರನನ್ನು ಬಳ್ಳಾರಿಯ ಜನ ಆತನ ಹುಟ್ಟಿದ ದಿನವನ್ನಾಗಲಿ, ಸಾವಿನ ದಿನವನ್ನಾಗಲಿ ನೆನಪಿಸಿಕೊಂಡ್ಡದ್ದಕ್ಕೆ ಪುರಾವೆಗಳಿಲ್ಲ.

ಮನೆ ಮರೆತ ದಾಸನ್

ಈ ಬರಹದ ಮೊದಲಿಗೇ ಹೇಳಿದೆ, ದಾಸನ್ ಅವರ ಮಗ ಚಂದ್ರನ್ ಅವರಲ್ಲಿ ಅಪ್ಪನ ಬಗೆಗಿನ ನೆನಪುಗಳು ಗಾಢವಾಗಿಲ್ಲ. ತುಂಬಾ ತೆಳುವಾಗಿವೆ. ಇದನ್ನು ನೋಡಿದರೆ, ದಾಸನ್ ಮನೆಯೊಂದಿಗೆ ಗಾಢ ಸಂಬಂಧವನ್ನು ಇಟ್ಟುಕೊಂಡಿರಲಿಲ್ಲ ಅನ್ನಿಸುತ್ತದೆ. ಶಾಂತಮ್ಮ ಹೇಳುವಂತೆ, ದಾಸನ್ ಅವರ ಮಡದಿ ಅವರನ್ನು ನಿರಾಸಕ್ತಿಯಿಂದ ನೋಡುತ್ತಿದ್ದರು. ಅದು ಸಹಜವಾಗಿರಬಹುದು. ಕಾರಣ ಮನೆ ನಿರ್ವಹಿಸಬೇಕಾದ ದಾಸನ್ ಹೋರಾಟದ ಗುಂಗಿನಲ್ಲಿ ಮುಳುಗಿದ್ದರು. ಅವರ ಹೋರಾಟದ ಹಾದಿ ಇರುವ ಹಣವನ್ನು ಕರ್ಚುಮಾಡಿಕೊಳ್ಳುವಂತದ್ದೇ ವಿನಃ ಗಳಿಸುವಂತದ್ದಾಗಿರಲಿಲ್ಲ. ಹೀಗೆ ಕಾರ್ಮಿಕರನ್ನು ಮನೆಯ ಮಕ್ಕಳಿಗಿಂತ ಹೆಚ್ಚು ಪ್ರೀತಿಸುವ ಅವರ ಕಾಳಜಿಯಲ್ಲೇ ಸಾಮಾಜಿಕ ಬದ್ದತೆಯೊಂದು ಕಾಣುತ್ತದೆ. ಆದರೆ ಅದೇ ಹೊತ್ತಿಗೆ ದಾಸನ್ ಮಕ್ಕಳಿಗೆ ಒಳ್ಳೆಯ ತಂದೆಯಾಗುವ, ಹೆಂಡತಿಗೆ ಒಳ್ಳೆಯ ಗಂಡನಾಗುವ ಅವಕಾಶದಿಂದ ವಂಚಿತರಾದಂತೆ ಕಾಣುತ್ತದೆ.

ಹಳೆ ಕೋಟು, ಬಡಕಲು ದೇಹ

ದಾಸನ್ ಅವರು ಸದಾ ಅವರ ಮದುವೆಯ ಕೋಟನ್ನು ಹಾಕುತ್ತಿದ್ದರು. ಆ ಮೂಲಕ ಮದುವೆಯ ನೆನಪನ್ನು ಹಸಿರಾಗಿಟ್ಟಿದ್ದರು. ಅದು ಕೊಳೆಯಾಗಿ,  ಒಮ್ಮೆಮ್ಮೆ ರಟ್ಟಿನ ಹಾಗಾದರೂ ಅದನ್ನವರು ಬಿಡುತ್ತಿರಲಿಲ್ಲವಂತೆ. ಈಗಲೂ ನಮಗೆ ಸಿಗುವ ಅವರ ಫೋಟೋ ಕೋಟುಹಾಕಿಕೊಂಡ ಭಂಗಿಯದು. ದಿನವಿಡೀ ವಕೀಲಿ ವೃತ್ತಿಯಂತೆ ಕಾನೂನು, ಕಟ್ಲೆಯಲ್ಲಿ ಮುಳುಗಿ ಹೋಗುತ್ತಿದ್ದರಿಂದ ವಕೀಲಿ ವೃತ್ತಿಯ ಸಂಕೇತವಾಗಿಯೂ ಈ ಕೋಟನ್ನು ಅವರು ಬಳಸುತ್ತಿದ್ದಂತೆ ಕಾಣುತ್ತದೆ. ಆ ಕೋಟಿನ ಜತೆ ಎಂಥದೋ ಮೋಹವನ್ನು ಬೆಳೆಸಿಕೊಂಡಿದ್ದರು. ಬೆಳಗ್ಗೆ ಕಚೇರಿಗೆ ಬಂದರೆ, ಕೋಟು  ಹಾಕಿಕೊಂಡೇ ಬರುತ್ತಿದ್ದರು. ಬಂದವರು ಗೋಡೆಗೆ ನೇತುಹಾಕುತ್ತಿದ್ದರು. ಆಗ ಅವರ ಬಡಕಲು ದೇಹ ಕಾಣಿಸಿಕೊಳ್ಳುತ್ತಿತ್ತು. ಹೊರಗೆ ಹೊರಟರೆಂದರೆ ಕೋಟು ಮೈಮೇಲೇರುತ್ತಿತ್ತು. ಸಂಡೂರು ಭೂ ಹೋರಾಟದಲ್ಲಿ ಅವರು ಭಾಗಿಯಾಗಿರುವ ಪೋಟೋ ನೋಡಿದರೆ, ಅವರದು ತೀರಾ ಸಣಕಲುದೇಹ. ಈ ಸಣಕಲು ದೇಹಕ್ಕೆ ಕೋಟು ಹೊಂದಿಕೆಯಾಗುತ್ತಿರಲಿಲ್ಲವಾದರೂ ಅವರಿಗೇ ಕೋಟು ಪ್ರಿಯವಾಗಿತ್ತು.

ನೇರ ನಿಷ್ಠುರ ವ್ಯಕ್ತಿತ್ವ

ದಾಸನ್ ಅವರು ತುಂಬಾ ನೇರ ಮತ್ತು ನಿಷ್ಠುರಿ ವ್ಯಕ್ತಿಯಾಗಿದ್ದರು. ಅವರು ನಂಬಿದ್ದ ಸಮಾಜವಾದಿ ಸಿದ್ದಾಂತಗಳಿಗೆ ಎಂದೂ ವಿಮುಖರಾಗಲಿಲ್ಲ. ಹಾಗಾಗಿ ಅವರು ಜೀವಿತದ ಕೊನೆಯತನಕವೂ ಹಣದ ಕೊರತೆಯಲ್ಲೇ ಬದುಕಿದರು. ಅವರ ಹೆಂಡತಿ ಆಸ್ಪತ್ರೆಯೊಂದರಲ್ಲಿ ದಾದಿಯಾಗಿ ಮನೆ ನಿರ್ವಹಿಸುತ್ತಿದ್ದರು. ಸದಾ ತತ್ವ ಸಿದ್ದಾಂತಗಳಿಗೆ ಬದ್ದವಾಗಿರುವ ಬದುಕಿನ ಕ್ರಮವನ್ನವರು ರೂಢಿಸಿಕೊಂಡಿದ್ದರು. ಕಾರ್ಮಿಕರು ಕಚೇರಿಗೆ ಬಂದಾಗ, ಕೆಲವರು ಟೀ ಕುಡಿಯಾಕ ಒಂದತ್ತ್ರುಪಾಯಿ ಕೊಡ್ರಿ ಎಂದಾಗ, ದಾಸನ್ ತಮ್ಮ ಕೋಟಿನಲ್ಲಿ ತಡಕಾಡಿ ಹಣ ಇಲ್ಲದ್ದನ್ನು ನೋಡಿ, ಮುಖ ಸಪ್ಪಗೆ ಮಾಡಿಕೊಂಡು, ತಮ್ಮ ಕಚೇರಿಗೆ ಬಂದ ಯಾರಾದರೂ  ವಕೀಲಿ ಸ್ನೇಹಿತರ ಹತ್ತಿರ ಹಣ ಕೊಡಿಸುತ್ತಿದ್ದರಂತೆ.  ಇದನ್ನು ನೋಡಿ ಕಾರ್ಖಾನೆ ಮಾಲಿಕರು ಯಾರಾದರೂ ಹಣದ ಆಮಿಷ ತೋರಿಸಿದರೆ ಕೆಂಡಾಮಂಡಲವಾಗುತ್ತಿದ್ದರಂತೆ. ಇದು ದಾಸನ್ ಅವರ ವ್ಯಕ್ತಿತ್ವದ ವೈರುಧ್ಯ.

ದಾಸನ್ ಅವರು ನೇರ ನಿಷ್ಟುರ ವ್ಯಕ್ತಿಯಾಗಿದ್ದಂತೆ, ಅವರು ತುಂಬು ಅಂತಕಃರಣದ ವ್ಯಕ್ತಿಯೂ ಆಗಿದ್ದರು. ಸಹಾಯ ಬೇಡಿಬಂದ ಯಾರನ್ನೂ ನಿರಾಸೆಗೊಳಿಸದೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಶಾಂತಮ್ಮ ಅಸಹಾಯಕ ಹುಡುಗಿಯಾಗಿ ಅಚಾನಕ್ ದಾಸನ್ ಅವರ ಕಚೇರಿ ಪ್ರವೇಶಿಸಿದಾಗ, ಆ ಹುಡುಗಿಯನ್ನು ಪ್ರೀತಿಯಿಂದ ಮಾತನಾಡಿಸಿ, ಮನೆಯ ಕಷ್ಟದ ಪರಿಸ್ಥಿತಿ ಕೇಳಿ, ಅವಳಿಗೆ ಹೊಟ್ಟೆತುಂಬಾ ಊಟ ಹಾಕಿ, ನಿನಗೆ ಹಸಿವಾದಾಗಲೆಲ್ಲಾ ನಮ್ಮ ಕಛೇರಿಗೆ ಬಾ ಎಂದರಂತೆ. ನಂತರ ಆ ಹುಡುಗಿಯನ್ನು ತಮ್ಮ ಕಛೇರಿಯಲ್ಲಿ ಸಹಾಯಕ್ಕೆ ಇಟ್ಟುಕೊಂಡು ವೇತನ ನೀಡುತ್ತಿದ್ದರು. ಕಾರ್ಮಿಕರನ್ನೂ ಸಹ ತುಂಬಾ ಪ್ರೀತಿಯಿಂದ ಕಾಣುವ ಗುಣ ದಾಸನ್ ಅವರದಾಗಿತ್ತು.

ದಾಸನ್ ನೆನಪಿನ ಟ್ರಸ್ಟ್

ದಾಸನ್ ತೀರಿದ ನಂತರ, ಅವರನ್ನು ನಂಬಿದ್ದ ಕಾರ್ಮಿಕರು ಅವರ ಮಗ ಚಂದ್ರನ್ ಅವರಲ್ಲಿಗೆ ಬಂದು ನೀವು ನಮ್ಮ ಪರವಾದ ಹೋರಾಟದ ನಾಯಕತ್ವವನ್ನು ವಹಿಸಿಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಹಾಗಾಗಿ ಚಂದ್ರನ್ ಅವರು ಮೊದಲು ಕೆಲವು ಕಾಲ ಕಾರ್ಮಿಕರ ಪರವಾಗಿ ಕೆಲಸ ಮಾಡಿದ್ದಾರೆ. ನಂತರ ನಿರಂತರವಾಗಿ ಇದನ್ನು ನಿಭಾಯಿಸಲಿಕ್ಕಾಗದೆ, ಕಾಲಾನಂತರದಲ್ಲಿ ಕಾರ್ಮಿಕರ ಸಂಪರ್ಕವನ್ನು ಕಡಿದುಕೊಂಡಿದ್ದಾರೆ. ದಾಸನ್ ಅವರ ನೆನಪು ಈಗ ಬಳ್ಳಾರಿಯ ಸಮೀಪದ ಸಿರಿವಾರದ ಬಳಿ ಇರುವ ‘ದಾಸನ್ ಸಾಲೊಮನ್ ಮೆಮೋರಿಯಲ್ ಲೆಪ್ರೆಸಿ ಅಂಡ್ ಮೆಡಿಕಲ್ ಫೌಂಡೇಷನ್’ ರೂಪದಲ್ಲಿ ಮುಂದುವರೆಯುತ್ತಿದೆ. ಇದನ್ನು  ದಾಸನ್ ಅವರ ಮಗ ಚಂದ್ರನ್ ಸಾಲೊಮನ್ ಅವರು ನಡೆಸುತ್ತಿದ್ದಾರೆ. ಇಲ್ಲಿ ಅನಾಥ ಮಕ್ಕಳಿಗೆ ಶಾಲೆ ಮತ್ತು ಹಾಸ್ಟೆಲ್ ಸೌಲಭ್ಯವನ್ನು ಒದಗಿಸಲಾಗಿದೆ. ಹಾಗೆಯೇ ಬಡಜನರಿಗೆ ಉಚಿತವಾಗಿ ವೈದ್ಯಕೀಯ ತಪಾಸಣೆಯನ್ನೂ ಮಾಡಲಾಗುತ್ತಿದೆ. ಇದು ಖಾಸಗಿ ಸಂಸ್ಥೆಗಳಿಂದ ಹಣದ ನೆರವನ್ನು ಪಡೆಯುತ್ತಿದೆ.

ಮುಖ್ಯವಾಗಿ ದಾಸನ್ ಅವರು ನಂಬಿದ್ದ ತಾತ್ವಿಕತೆಗೆ ಈ ಫೌಂಡೇಷನ್ ತಾಳೆಯಾಗುತ್ತಿಲ್ಲ. ಅವರು ಸಮಾಜಿಕ ಕಳಕಳೆ, ಸೇವೆ ಮತ್ತು ಹೋರಾಟಕ್ಕೆ ಹಣ ರೂಪದ ಪ್ರತಿಫಲವನ್ನು ಎಂದೂ ನಿರೀಕ್ಷಿಸಿರಲಿಲ್ಲ. ಹಾಗಾಗಿಯೇ ಅವರೊಬ್ಬ ನಿಷ್ಠಾವಂತ ಹೋರಾಟಗಾರರಾಗಿ ನಮಗೆ ಮುಖ್ಯವಾಗುತ್ತಾರೆ. ಆದರೆ ದಾಸನ್ ನೆನಪಿನ ಫೌಂಡೇಷನ್ ಸಮಾಜ ಸೇವೆಯನ್ನೂ ಲಾಭಕಾರಿಯನ್ನಾಗಿಸಿಕೊಂಡಂತೆ ಕಾಣುತ್ತದೆ.

ಕರ್ನಾಟಕದ ಸಮಾಜವಾದಿ ಚರಿತ್ರೆಯಲ್ಲಿ ದಾಸನ್ ಅವರು ತುಂಬಾ ನಿಷ್ಠಾವಂತ ಕಾರ್ಯಕರ್ತರಾಗಿ ಕಾಣುತ್ತಾರೆ. ಅವರ ಜೀವನದ ವಿವರಗಳನ್ನು ಹುಡುಕುತ್ತಾ ಹೊರಟರೆ, ಸಮಾಜವಾದದ ಹೆಸರಲ್ಲಿ ಈಗಿರುವ ಹಲವು ಸಂಗತಿಗಳ ಪುನರ್ ವ್ಯಾಖ್ಯಾನ ಸಾಧ್ಯವಾಗುತ್ತದೆ. ಅಂತೆಯೇ ಸಮಾಜವಾದಿ ಸೋಗಿನ ವ್ಯಕ್ತಿತ್ವಗಳ ನಿಜ ಬಣ್ಣ ಬಯಲಾಗುತ್ತದೆ. ಹಾಗಾಗಿ ಸಾಲೊಮನ್ ಅವರ ಬಗ್ಗೆ ಇನ್ನೂ ಆಳವಾದ ಅಧ್ಯಯನ ಮತ್ತು ದಾಖಲಾತಿ ಸಾಧ್ಯವಾಗಬೇಕಿದೆ. 

—-
ಮಾಹಿತಿ
ನೀಡಿದವರು:
ಹೆಚ್.ಕೆ. ಶಾಂತ, ಕೋಟೆ ಬಳ್ಳಾರಿ.
ರವಿ ಬೆಳೆಗೆರೆ, ಬೆಂಗಳೂರು.
ಚಂದ್ರನ್ ಸಾಲೊಮನ್, ಬಳ್ಳಾರಿ.

ಆಕರ ಗ್ರಂಥಗಳು:

೧) ಪೀರ್ ಬಾಷಾ.ಬಿ, ೨೦೦೮, ಸಮಾಜವಾದಿ ಸಂದರ್ಶನ ಸಂಪುಟ-೧, ಕನ್ನಡ ವಿಶ್ವವಿದ್ಯಾಲಯ, ಹಂಪಿ

೨) ಅರುಣ್ ಜೋಳದಕೂಡ್ಲಿಗಿ, ೨೦೦೮, ಸೊಂಡೂರು ಭೂ ಹೋರಾಟ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೩) ಕೆ. ಆರ್. ಕಮಲೇಶ್ (ಸಂ), ೨೦೦೩, ಕರ್ನಾಟಕ ರಾಜಕೀಯ ಚಿಂತನೆ (ಎಸ್.ನಿಜಲಿಂಗಪ್ಪ ಅವರ ಸಂಸ್ಮರಣ ಗ್ರಂಥ) ಎಸ್.ನಿಜಲಿಂಗಪ್ಪ ರಾಷ್ಟ್ರೀಯ ಪ್ರತಿಷ್ಠಾನ, ಬೆಂಗಳೂರು

೪) ರಹಮತ್ ತರೀಕೆರೆ, ೨೦೦೫, ಲೋಕವಿರೋಧಿಗಳ ಜತೆಯಲ್ಲಿ,  ಕನ್ನಡ ಸಂಘ, ಕ್ರೈಸ್ಟ್  ಕಾಲೇಜ್‌ ಬೆಂಗಳೂರು