ಕನ್ನಡ ಸಾಹಿತ್ಯ ಮತ್ತು ಸಂಶೋಧನ ಕ್ಷೇತ್ರದಲ್ಲಿ ಕರಾವಳಿ ಕರ್ನಾಟಕಕ್ಕೆ – ಅದರಲ್ಲೂ ಮುಖ್ಯವಾಗಿ ದಕ್ಷಿಣ ಕನ್ನಡಕ್ಕೆ ವಿಶಿಷ್ಟ  ಸ್ಥಾನವಿದೆ. ಸಾಹಿತ್ಯ-ಸಂಶೋಧನೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ‘ದಕ್ಷಿಣ ಕನ್ನಡ’ ಎಂದಾಗ ಇಂದಿನ ಉಡುಪಿ, ದಕ್ಷಿಣ ಕನ್ನಡ ಈ ಎರಡು ಜಿಲ್ಲೆಗಳನ್ನು ಪಯಸ್ವಿನೀ ನದಿಯಿಂದುತ್ತರದ ಕಾಸರಗೋಡಿನ ಪ್ರದೇಶವನ್ನು ಸೇರಿಸಿಕೊಂಡೇ ಹೇಳುವುದಾಗಿದೆ. ಈ ಪ್ರದೇಶದಲ್ಲಿ ಕ್ರಿ.ಶ. 19ನೆಯ ಶತಮಾನದಲ್ಲಿ ಸಾಕಷ್ಟು ಸಂಸ್ಕೃತ ವಿದ್ವಾಂಸರಿದ್ದಿರಬೇಕು. ಆದರೆ ಆ ಕಾಲದ ಕನ್ನಡದ ವಿದ್ವಾಂಸ ಪರಂಪರೆ ಹೇಗಿತ್ತೆಂಬುದರ ಕುರಿತು ಪೂರ್ತಿಯಾಗಿ ಕಲ್ಪಿಸಿಕೊಳ್ಳಲಾಗುತ್ತಿಲ್ಲ. ಕ್ರಿ.ಶ. ಹತ್ತೊಂಬತ್ತನೆಯ ಶತಮಾನವು ಇಪ್ಪತ್ತನೆಯ ಶತಮಾನಕ್ಕೆ ದಾಟುವ ಹಂತದಲ್ಲಿದ್ದ ಹಿರಿಯ ಕನ್ನಡ ವಿದ್ವಾಂಸ, ಕವಿ – ನಂದಳಿಕೆ ಲಕ್ಷ್ಮೀನಾರಾಯಣಯ್ಯ ಅಥವಾ ಮುದ್ದಣ. ಆದರೆ ಕರಾವಳಿ ಕರ್ನಾಟಕದ ಮುಖ್ಯ ಕೇಂದ್ರವಾದ ಮಂಗಳೂರಿನಲ್ಲಿ ಕನ್ನಡದ ಕುರಿತಾಗಿ ಜಾಗೃತಿಯನ್ನೂ ಪ್ರೀತಿಯನ್ನೂ ಮೂಡಿಸಿದವರಲ್ಲಿ ಪಂಜೆ ಮಂಗೇಶರಾಯರು, ಮುಳಿಯ ತಿಮ್ಮಪ್ಪಯ್ಯ ನವರು ಪ್ರಮುಖರು. ವಿದ್ಯಾದಿಕಾರಿಗಳೂ, ಕವಿಗಳೂ, ಪಠ್ಯಪುಸ್ತಕ ರಚಕರೂ, ಮಕ್ಕಳ ಸಾಹಿತಿಗಳೂ ಆಗಿ ಪ್ರಸಿದ್ಧರಾದ ಪಂಜೆಯವರು ಕನ್ನಡದಲ್ಲಿ ಹೆಚ್ಚಿನ ಪರಿಣತಿ, ಆಸಕ್ತಿಗಳಿದ್ದ ಪಂಡಿತರೇ ಆಗಿದ್ದರು. ಆದರೆ ‘ಪಂಡಿತ’ರೆಂಬ ಬಿರುದು ಬಂದುದು ಮತ್ತು ಕರಾವಳಿಯಲ್ಲಿ ಪಂಡಿತ ಪರಂಪರೆಯೊಂದನ್ನು ಹುಟ್ಟುಹಾಕಿದವರೆಂಬ ಹೆಸರು ಬಂದುದು ಪಂಡಿತ ಮುಳಿಯ ತಿಮ್ಮಪ್ಪಯ್ಯನವರಿಗೆ. ಹೀಗೆ ಆಧುನಿಕ ಕಾಲದಲ್ಲಿ ಮುಳಿಯ ತಿಮ್ಮಪ್ಪಯ್ಯನವರ ಪಂಡಿತ ಪರಂಪರೆಯಲ್ಲಿ ಪರಿಗಣಿತರಾಗುವವರು ಪ್ರೊ. ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು.

ದಕ್ಷಿಣ ಕನ್ನಡದ ಪಂಡಿತ ಪರಂಪರೆಯಲ್ಲಿ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರದು ಬಹು ಅಮೂಲ್ಯವಾದ ಸ್ಥಾನ. ಪಂಡಿತ ಮುಳಿಯ ತಿಮ್ಮಪ್ಪಯ್ಯ, ಕುಕ್ಕಿಲಕೃಷ್ಣ ಭಟ್ಟ, ಸೇಡಿಯಾಪು ಕೃಷ್ಣಭಟ್ಟ ಮುಂತಾದವರ ಸಾಲಿನಲ್ಲಿ ಸರಿದೊರೆಯಾಗಿ ನಿಲ್ಲಬಲ್ಲ ಹೆಸರು ಅವರದು. ಮೈಸೂರು ಕರ್ನಾಟಕದಲ್ಲಿ ಡಿ.ಎಲ್. ನರಸಿಂಹಾಚಾರ್ಯರು ಹೇಗೋ ಹಾಗೆ ಕರಾವಳಿ ಕರ್ನಾಟಕದಲ್ಲಿ ತೆಕ್ಕುಂಜದವರು. ಕನ್ನಡ ಭಾಷಾ ಮರ್ಯಾದೆಯನ್ನು ಕಾಪಾಡುವಲ್ಲಿ ಅವರ ಪಾತ್ರ ತುಂಬಾ ಮಹತ್ತರವಾದದು. ಪಂಡಿತವರೇಣ್ಯ ಮುಳಿಯ ತಿಮ್ಮಪ್ಪಯ್ಯನವರ ಗರಡಿಯಲ್ಲಿ ಪಳಗಿ ಸೇಡಿಯಾಪು ಕೃಷ್ಣಭಟ್ಟರಂತಹ ವಿದ್ವಾಂಸರ ಸಾಹಚರ್ಯದಲ್ಲಿ ಮೆರೆದ ಪ್ರಾಚಾರ್ಯ ತೆಕ್ಕುಂಜದವರು ಕನ್ನಡವನ್ನು ಕಟ್ಟಿ ಬೆಳೆಸಿದವರು. ತಲಸ್ಪರ್ಶಿಯಾದ ವಿಶ್ಲೇಷಣ ವಿಧಾನಗಳಿಂದ, ನಿಷ್ಪಕ್ಷಪಾತವಾದ ಖಚಿತ ಅಭಿಪ್ರಾಯಗಳಿಂದ ಸಮುದಾಯವನ್ನು ಮುನ್ನಡೆಸಿದವರು. ಅನೇಕ ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರೀತಿಯನ್ನು ಬಿತ್ತಿ, ಶಬ್ದಾರ್ಥ ವಿಹಾರದ ಹೊಸ ದಾರಿಯಲ್ಲಿ ಸಾಗಿ ಪಂಡಿತರೆಂದರೆ ಹೀಗಿರಬೇಕು ಎಂಬುದನ್ನು ತೋರಿಸಿಕೊಟ್ಟವರು.

‘ತೆಕ್ಕುಂಜ’ ಎಂಬುದು ಗೋಪಾಲಕೃಷ್ಣ ಭಟ್ಟರ ಮನೆಯ ಹೆಸರು. ಈಗಿನ ಬಂಟವಾಳ ತಾಲೂಕಿನ ಅಮ್ಮೆಂಬಳ ಮಾಗಣೆಯ ಕುರ್ನಾಡು ಗ್ರಾಮದಲ್ಲಿರುವ ಗುರಿಕಾರ ತನದ ಮನೆಯದು. ತಂದೆ ಶಂಕರಭಟ್ಟರು ಸಂಸ್ಕೃತ ಅಧ್ಯಾಪಕರು ಹಾಗೂ ಆಯುರ್ವೇದ ಪಂಡಿತರು. ಎಳೆಯ ಮಕ್ಕಳ ಚಿಕಿತ್ಸೆ ಮತ್ತು ಬಾಣಂತಿಯರ ಚಿಕಿತ್ಸೆಯಲ್ಲಿ ಅವರು ಸಿದ್ಧಹಸ್ತರೆಂದು ಖ್ಯಾತರಾಗಿದ್ದರು. ತಮ್ಮ ಮನೆಯಲ್ಲೇ ಔಷಧಗಳನ್ನು ತಯಾರಿಸಿ ಅನೇಕರಿಗೆ ಧರ್ಮಾರ್ಥ ಚಿಕಿತ್ಸೆ ನೀಡಿ ಜನಾನುರಾಗಿಯಾಗಿದ್ದರು. ಇವರು ದೇವೀ ಭಕ್ತರಾಗಿದ್ದು ಅನೇಕ ದೇವೀ ಪರವಾದ ಕೃತಿಗಳನ್ನು ರಚಿಸಿದ್ದರೆಂದು ತಿಳಿದು ಬರುತ್ತದೆ. ಇವರ ಸುಪುತ್ರರಾಗಿ ಫೆಬ್ರವರಿ 1916ರಲ್ಲಿ ಜನಿಸಿದ ಗೋಪಾಲಕೃಷ್ಣ ಭಟ್ಟರಿಗೆ ಎಳವೆಯಲ್ಲಿ ತಂದೆಯವರೇ ಗುರುಗಳಾಗಿದ್ದರು. ಅಮ್ಮೆಂಬಳ ಶಂಕರನಾರಾಯಣ ನಾವಡರು ಸಹಪಾಠಿಗಳಾಗಿದ್ದರು. ರಘುವಂಶ, ಕುಮಾರಸಂಭವ, ಕಿರಾತಾರ್ಜುನೀಯ, ನೈಷಧಗಳೆಂಬ ಸಂಸ್ಕೃತದ ಪಂಚಮಹಾಕಾವ್ಯಗಳನ್ನು, ದಶಕುಮಾರ ಚರಿತ, ಚಂಪೂರಾಮಾಯಣ, ಪ್ರತಾಪರುದ್ರೀಯ ಮುಂತಾದ ಕಾವ್ಯಗಳನ್ನು ತಂದೆಯವರಿಂದಲೇ ಪಾಠ ಹೇಳಿಸಿಕೊಂಡ ತೆಕ್ಕುಂಜದವರು ಸಂಸ್ಕೃತ ಸಂಭಾಷಣೆ ನಡೆಸುವ ಚಾತುರ್ಯವನ್ನು ಪಡೆದಿದ್ದರು. ಅಮ್ಮೆಂಬಳ ಸೋಮನಾಥ ಸಂಸ್ಕೃತ ಪಾಠಶಾಲೆಯಲ್ಲಿ ಕನ್ನಡ, ಸಂಸ್ಕೃತ, ಇಂಗ್ಲಿಷ್, ಗಣಿತ ಮುಂತಾದ ಅಭ್ಯಾಸ ನಡೆಸಿ 1932ರಲ್ಲಿ ಮದರಾಸು ಸರಕಾರದ ಸಂಸ್ಕೃತ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅನಂತರ ಮಂಗಳೂರಿನ ಕೆನರಾ ಪ್ರೌಢಶಾಲೆಯಲ್ಲಿ 1935ರಲ್ಲಿ SSLCಯನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿ ಉತ್ತೀರ್ಣರಾದರು. ಆಗ ಎಂ.ಎನ್. ಕಾಮತರು ತೆಕ್ಕುಂಜದವರಿಗೆ ಭೂಗೋಳದ ಅಧ್ಯಾಪಕರಾಗಿದ್ದರಂತೆ. ಕಾಮತರು ಸ್ವತಃ ನಾಟಕಗಾರರಾಗಿದ್ದರಿಂದ ಶಾಲಾ ವಾರ್ಷಿಕೋತ್ಸವಗಳಲ್ಲಿ ಅವರ ನಿರ್ದೇಶನದಲ್ಲಿ ವರ್ಷಕ್ಕೆ ಒಂದರಂತೆ ನಾಟಕಗಳು ರಂಗವೇರುತ್ತಿದ್ದವು. ಹಾಸ್ಯದ ಅಮ್ಮೆಂಬಳ ರಮಾನಂದ ಚೂರ್ಯ, ಕತೆಗಾರ ರಮಾನಂದ ಘಾಟೆ, ಕಮ್ಯೂನಿಸ್ಟ್ ಧುರೀಣ ಎನ್.ಕೆ. ಉಪಾಧ್ಯಾಯ ಮುಂತಾದವರು ತೆಕ್ಕುಂಜದವರ ಪ್ರೌಢಶಾಲಾ ಸಹಪಾಠಿಗಳಾಗಿದ್ದರು. 1935-1937ರ ಅವಧಿಯಲ್ಲಿ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಓದುತ್ತಿದ್ದಾಗ ಅಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಮುಳಿಯ ತಿಮ್ಮಪ್ಪಯ್ಯನವರ ಪ್ರಭಾವಕ್ಕೆ ಒಳಗಾದರು. ತೆಕ್ಕುಂಜದವರ ದೊಡ್ಡಮ್ಮನ ಮಗಳನ್ನು ಮುಳಿಯ ತಿಮ್ಮಪ್ಪಯ್ಯನವರ ತಮ್ಮನೇ ವಿವಾಹವಾದುದರಿಂದ, ಮುಂದೆ ಕಾಲೇಜು ವಿದ್ಯಾಭ್ಯಾಸ ಕಾಲದಲ್ಲಿ ಗೋಪಾಲಕೃಷ್ಣ ಭಟ್ಟರು ಮುಳಿಯದವರ ಮನೆಯಲ್ಲೇ ವಾಸವಾಗಿದ್ದರು. ಹೀಗೆ ತಿಮ್ಮಪ್ಪಯ್ಯನವರ ಒಡನಾಟದ ಭಾಗ್ಯ ತೆಕ್ಕುಂಜದವರ ಜೀವನದ ಮೇಲೆ ಗಾಢವಾದ ಪರಿಣಾಮ ಬೀರಿತು.

ಗೋಪಾಲಕೃಷ್ಣ ಭಟ್ಟರು 1937ರ ಬಳಿಕ ನಾಲ್ಕೆದು ವರ್ಷ ತೆಕ್ಕುಂಜದಲ್ಲೇ ಇದ್ದು ತಂದೆಯವರ ಸಂಸ್ಕೃತ ಶಾಲೆಯಲ್ಲಿ ಶಿಕ್ಷಕರಾಗಿ ದುಡಿದರು. ಇದೇ ಕಾಲಘಟ್ಟದಲ್ಲಿ ಖಾಸಗಿಯಾಗಿ ಓದಿ ಕನ್ನಡ ವಿದ್ವತ್ ಪದವಿಯನ್ನು ಪಡೆದರು. ಮದರಾಸು ವಿಶ್ವವಿದ್ಯಾನಿಲಯದಲ್ಲಿ ಬಿ.ಒಎಲ್. ಪದವಿಯನ್ನು ಗಳಿಸಿದರು. ಇದೇ ಮುಂದಿನ ದಿನಗಳಲ್ಲಿ ಕನ್ನಡ ಎಂ.ಎ. ಎಂದು ಪರಿವರ್ತನೆ ಹೊಂದಿತು. 1942ರಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ ಸೇರಿಕೊಂಡರು. ಅನಂತರ 1946ರಲ್ಲಿ ಅಲೋಶಿಯಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನೇಮಕಗೊಂಡು ಮುಂದೆ ಮೂವತ್ತು ವರ್ಷಗಳ ಕಾಲ ಕನ್ನಡವನ್ನು ಬೋದಿಸಿದರು. ಕನ್ನಡ ವಿಭಾಗ ಮುಖ್ಯಸ್ಥರಾಗಿ ದುಡಿದು 1976ರಲ್ಲಿ ನಿವೃತ್ತಿಗೊಂಡ ಬಳಿಕವೂ ವಿವಿಧ ವಿಶ್ವವಿದ್ಯಾನಿಲಯಗಳ ಪರೀಕ್ಷಾ ಮಂಡಲಿಗಳಲ್ಲಿ ವಿವಿಧ ನೆಲೆಗಳಲ್ಲಿ ಸೇವೆ ಸಲ್ಲಿಸಿದರು. ಮಂಗಳಗಂಗೋತ್ರಿಯಲ್ಲಿ ಯುಜಿಸಿ ಸಂಶೋಧಕ ಪ್ರಾಧ್ಯಾಪಕರಾಗಿ ಅವರು ಕೆಲಕಾಲ ಸೇವೆ ಸಲ್ಲಿಸಿದರು.

ಶ್ರೀರಾಮ ಭಕ್ತರಾಗಿದ್ದು ಶ್ರೀಯುತರು ಶ್ರೀರಾಮನವಮಿಯ ಶುಭದಿನವಾದ 25 ಮಾರ್ಚ್ 1980ರಲ್ಲಿ ವಿದಿವಶರಾದರು. ತೆಕ್ಕುಂಜದವರಿಗೆ 1942ರಲ್ಲಿ ರತ್ನ ಎಂಬ ವಧುವಿನೊಡನೆ ವಿವಾಹವಾಯಿತು. ಆಕೆ ಕೂಡಾ ಕನ್ನಡ ಜಾಣೆ. ಕೇಳಿದ ಭಾಷಣಗಳು, ನೋಡಿದ ಆಟ-ಕೂಟಗಳು, ಓದಿದ ಪುಸ್ತಕಗಳು ಯಾವುದೇ ಇರಲಿ; ಆ ಕುರಿತು ವಸ್ತುನಿಷ್ಠವಾದ ವಿಮರ್ಶೆಯನ್ನು ಮಾಡಬಲ್ಲ ಸದ್‌ಗೃಹಿಣಿ. ಪ್ರೊ| ಎಸ್.ವಿ. ಪರಮೇಶ್ವರ ಭಟ್ಟರು ಈ ದಂಪತಿಯನ್ನು ‘ಆಧುನಿಕ ಮುದ್ದಣ ಮನೋರಮೆಯರು’ ಎಂದು ಕರೆದಿದ್ದಾರೆ.

ಗುಣ ಸ್ವಭಾವ

ಮಂಗಳೂರಿನ ಸೈಂಟ್ ಅಲೋಶಿಯಸ್ ಪ್ರೌಢಶಾಲೆಯಲ್ಲಿ ತೆಕ್ಕುಂಜದವರು ಕನ್ನಡ ಪಂಡಿತರಾಗಿ ಬರುವುದಕ್ಕಿಂತ ಮೊದಲೇ ಅಲ್ಲಿ ಅದೇ ವೃತ್ತಿಯಲ್ಲಿದ್ದ ಸೇಡಿಯಾಪು ಕೃಷ್ಣಭಟ್ಟರು ತೆಕ್ಕುಂಜ ಗೋಪಾಲಕೃಷ್ಣ ಭಟ್ಟರ ಬಗ್ಗೆ ಹೀಗೆ ಬರೆದಿದ್ದಾರೆ –

‘‘ಮುಖಮುದ್ರೆಯಲ್ಲಾಗಲಿ ಮಾತು ರೀತಿಗಳಲ್ಲಾಗಲಿ ಆಕರ್ಷಕವಾದುದೇನೂ ಇಲ್ಲದಿದ್ದವರು ತೆಕ್ಕುಂಜದವರು. ಅಂಥವರೊಡನೆ ‘ನಿರ್ಹೇತುಕವಾದ  ಸ್ನೇಹ’ ಎಂಬುದು ಯಾರಿಗಾದರೂ ಬೇಗನೆ ಹುಟ್ಟುವುದಿಲ್ಲ. ಹುಟ್ಟಿದ ಮೇಲೂ ಬೇಗನೆ ಬೆಳೆಯುವುದಿಲ್ಲ. ಈ ಲೋಕಾನುಭವಕ್ಕೆ ನಮ್ಮೊಳಗಿನ ಸ್ನೇಹವೂ ಅಪವಾದವೆನಿಸಲಿಲ್ಲ. ಆದರೆ ಅವರ ಸಮೀಪೋಪಸ್ಥಿತಿ ನನಗೆ ನಾಲ್ಕಾರು ವರ್ಷ ಲಬಿಸಿದುದರ ಫಲವಾಗಿ – ಹೊರನೋಟಕ್ಕೆ ‘ಒರಟು’ ಎಂದೆನಿಸಿದ್ದ ವ್ಯಕ್ತಿತ್ವದೊಳಗೆ ಅಡಗಿದ್ದ ಅಂತರಂಗದ ನಿರ್ಮಲ ಬಿಂಬವು, ಕೆಸರೊಳಗಿಂದ ಕಮಲವರಳಿದಂತೆ; ನನ್ನ ಕಣ್ಣಮುಂದೆ ಅನಾವೃತವಾಯಿತು. ಆಗ – ‘‘ನಾರಿಕೇಲಫಲಾಕಾರಾಃ ಸಜ್ಜನಾಃ ಸಂತಿಭೂತಲೇ’’ ಎಂಬ ಸುಭಾಷಿತವು ಯಾರಿಗಾದರೂ ಪೂರ್ಣವಾಗಿ ಅನ್ವಯಿಸುವುದಿದ್ದರೆ ಅದು ತೆಕ್ಕುಂಜದವರಿಗೆ – ಎಂದು ನನಗೆ ಮನವರಿಕೆಯಾಯಿತು. ಪಾರದರ್ಶಕ ಎನ್ನಬೇಕಾದ ಅವರ ಅನಾಚ್ಛಾದಿತ ಮನೋವೃತ್ತಿ ಹಾಗೂ ವರ್ತನೆ; ತಾವು ನಂಬಿಕೊಂಡು ಬಂದುದರಲ್ಲಿ ಮತ್ತು ತಾವು ನಂಬಿದವರಲ್ಲಿ ಸೂಜಿಯ ಮೊನೆಯಷ್ಟಾದರೂ ಸಂಶಯಕ್ಕೆ ಎಡೆಗೊಡದ ದೃಢವಿಶ್ವಾಸ, ಮಾಡಲೊಪ್ಪಿ ಕೈಕೊಂಡ ಕೆಲಸದಲ್ಲಿ – ಇದು ತನ್ನದು, ಇದು ಪರರದು ಎಂಬ ಭಾವ ಭೇದದ ಸಂಪೂರ್ಣ ಅಭಾವ – ಇವು ನನ್ನ ಹೃದಯವನ್ನು ವಶೀಕರಿಸಿದ ಅವರ ಗುಣ ವಿಶೇಷಗಳಲ್ಲಿ ಪ್ರಧಾನವಾದವುಗಳು.’’

ಹೊರನೋಟಕ್ಕೆ ತೆಕ್ಕುಂಜದವರು ಬಿರುನಡೆಯ ಮನುಷ್ಯನಂತೆ ಕಂಡುಬಂದರೂ ಅಂತರಂಗ ಹೂವಿನಂತೆ. ಅವರ ಮುಖವನ್ನು ನೋಡಿದವರು ಎಷ್ಟೋ ಜನ ತೆಕ್ಕುಂಜದವರಿಗೆ ‘ಅಹಂಕಾರಿ’ ಎಂಬ ಬಿರುದು ಕೊಟ್ಟಿದ್ದುಂಟು. ಆದರೆ ಅದು ಕೇವಲ ಅವಸರದ ನಿರ್ಣಯವೆಂಬುದು ಅನಂತರ ಅರಿವಿಗೆ ಬರುತ್ತಿತ್ತು. ತರಗತಿಯಲ್ಲಿ ಪಾಠ ಮಾಡುವಾಗಲೂ ವಿದ್ಯಾರ್ಥಿಗಳ ಒಂದಿನಿತೂ ಅಶ್ರದ್ಧೆಯನ್ನು ಅವರು ಸಹಿಸುತ್ತಿರಲಿಲ್ಲ. ಮುಖ ಸಿಂಡರಿಸಿ ಕಣ್ಣು ಕೆಕ್ಕರಿಸಿ ನೋಡಿದ ತತ್‌ಕ್ಷಣ ಇಡೀ ತರಗತಿಯೇ ಸ್ತಬ್ಧವಾಗಿ ಬಿಡುತ್ತಿತ್ತು. ಅನವಶ್ಯಕ, ಅಸಾಂದರ್ಬಿಕ ಪ್ರಶ್ನೆಗಳನ್ನು ಯಾವ ವಿದ್ಯಾರ್ಥಿಯಾದರೂ ಕೇಳಿದರೆ, ಅದನ್ನು ಆ ಕ್ಷಣದಲ್ಲೇ ಹೊಸಕಿ ಹಾಕುವುದು ತೆಕ್ಕುಂಜದವರ ರೀತಿ. ಆದರೆ ಅವರ ಭಾವರಹಿತ ಮುಖ ಎಂದಿಗೂ ಅವರ ಮನಸ್ಸಿನ ಕನ್ನಡಿಯಲ್ಲ. ಬಿರುನಡೆ-ನುಡಿ ಎಂದಿಗೂ ಅವರ ಹೃದಯವಂತಿಕೆಯ ಮಾನದಂಡವಲ್ಲ.

ತೆಕ್ಕುಂಜದವರದು ಶುಷ್ಕ ಪಾಂಡಿತ್ಯ, ರಂಧ್ರಾನ್ವೇಷಣೆ ಬುದ್ಧಿ ಎಂದು ಕೆಲವರು ಆಗ್ರಹಿಸಿದ್ದುಂಟು. ಅಶುದ್ಧ ಪ್ರಯೋಗಗಳನ್ನು ಅವರು ಖಂಡಿಸುತ್ತಿದ್ದ ರೀತಿಯೇ ಇದಕ್ಕೆ ಮೂಲಕಾರಣ. ಇದನ್ನು ‘ದೋಷೋದ್ಘಾಟನ ದೃಷ್ಟಿ’ ಎಂದು ಹೇಳುವುದಕ್ಕಿಂತಲೂ ‘ಭಾಷೋದ್ಘಾಟನ ಬುದ್ಧಿ’ ಎಂದು ಭಾವಿಸಬೇಕು. ನಾವು ಮಾತನಾಡುವ ಭಾಷೆ ಶುದ್ಧವಾಗಿರ ಬೇಕೆಂಬ ಕಳಕಳಿಯೇ ಇಲ್ಲಿ ಮುಖ್ಯ. ಅವರು ಖಂಡಿತವಾಗಿ ಕಠೋರ ಹೃದಯದವರಲ್ಲ. ಹಿರಿಯರಲ್ಲಿ ಗೌರವ, ಸಮಾನರಲ್ಲಿ ಸ್ನೇಹ, ಕಿರಿಯರಲ್ಲಿ ವಾತ್ಸಲ್ಯ ಅವರ ಸಹಜ ಸ್ವಭಾವವೇ ಆಗಿತ್ತು.

ತೆಕ್ಕುಂಜದವರ ಮಾತಿನ ಶೈಲಿಯೇ ವಿಶಿಷ್ಟ. ಅಪರಿಚಿತರಾದವರಿಗೆ ಕೆಲವೊಮ್ಮೆ ಅರ್ಥವಾಗದೇ ಹೋಗುವಂತಹ ಗುಣಸ್ವಭಾವ ಅವರದು. ಒಮ್ಮೆ ತೆಕ್ಕುಂಜದವರು ಕಾರ್ಕಳಕ್ಕೆ ಹೋಗುವ ದಾರಿಯಲ್ಲಿ ಮೂಡುಬಿದಿರೆಯ ಸ್ನೇಹಿತರ ಮನೆಗೆ ದಿಡೀರ್ ಬಂದರು. ಮನೆಗೆ ಬಂದವರೇ -‘‘ಸ್ವಾಮಿ, ಮಲಗಿದವರನ್ನು ನೋಡಿಕೊಂಡು ಬರೋಣ, ಬರುತ್ತೀರಾ?’’ ಎಂದು ಪ್ರಶ್ನಿಸಿದರು. ಸಹಜವಾಗಿಯೇ ಅವರು ಯಾರೋ ಆತ್ಮೀಯರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆಂದು ತಬ್ಬಿಬ್ಬಾದರು. ಆದರೆ ಕೊನೆಗೆ ಅದು ನಿರ್ಮಾಣ ಹಂತದಲ್ಲಿದ್ದ ಗೊಮ್ಮಟೇಶ್ವರ ವಿಗ್ರಹವೆಂದು ತಿಳಿದಾಗ ಅವರು ಸುಸ್ತಾದರು! ಇದು ತೆಕ್ಕುಂಜದವರ ಮಾತಿನ ರೀತಿ.

ಒಮ್ಮೆ ತೆಕ್ಕುಂಜದವರ ಆಪ್ತಮಿತ್ರರೊಬ್ಬರು -‘‘ಭಟ್ಟರೆ, ನೀವು ನನ್ನೊಂದಿಗೆ ವ್ಯಾಪಾರಿ ವೃತ್ತಿಗೆ ಬನ್ನಿ. ನೀವು ಬಂಡವಾಳವನ್ನೇನೂ ಹಾಕಬೇಕಾಗಿಲ್ಲ. ಲಾಭಾಂಶ ನಿಮಗೆ ಕೊಡುತ್ತೇನೆ’’ ಎಂದು ವಿನಂತಿ ಮಾಡಿದರು. ಆದರೆ ತೆಕ್ಕುಂಜ -‘‘ಇಲ್ಲ; ವಿಬಿನ್ನ ಮನೋಭಾವದ ವಿವಿಧ ವಿದ್ಯಾರ್ಥಿಗಳೊಂದಿಗೆ ಒಡನಾಡುವ ಭಾಗ್ಯವಿರುವ ಶಿಕ್ಷಕ ವೃತ್ತಿಯನ್ನು ಬಿಟ್ಟು ವ್ಯಾಪಾರಕ್ಕೆ ಎಂದಿಗೂ ಬರಲಾರೆ’’ ಎಂದು ನೇರವಾಗಿ ಹೇಳಿಬಿಟ್ಟರು. ಅವರ ಮಾತಿನ ಶೈಲಿಯೇ ಅಂತಹುದು. ಪೆಟ್ಟೊಂದು, ತುಂಡೆರಡು!

ಅವರ ಯೋಚನಾಲಹರಿ ಕೂಡಾ ಕೆಲವೊಮ್ಮೆ ವಿಚಿತ್ರ ಎಂದು ತೋರುತ್ತದೆ. ಶಿಕ್ಷಕರಾದವರು ಅನ್ವೇಷಣ ಬುದ್ಧಿಯನ್ನು ಬೆಳೆಸಿಕೊಂಡು ಸೃಷ್ಟಿಶೀಲವಾಗಿ ಆಲೋಚಿಸುವಂತಾಗಬೇಕೆಂಬುದು ಅವರ ಹಿತನುಡಿ. ಸ್ವತಃ ಅವರು ಹಾಗೆಯೇ ಆಲೋಚನೆ ಮಾಡುತ್ತಿದ್ದವರು. ತಮ್ಮಂತೆಯೇ ಅಧ್ಯಾಪಕ ವರ್ಗದವರೆಲ್ಲಾ ಇರಬೇಕು ಎಂಬುದು ಅವರ ಹಂಬಲವಾಗಿತ್ತು. ಅವರ ವಿಶಿಷ್ಟ ಆಲೋಚನಾ ಲಹರಿಗೆ ಒಂದು ಉದಾಹರಣೆ ನೀಡಬಹುದು. – ತ್ರೇತಾಯುಗದಲ್ಲಿ ಹದಿನಾಲ್ಕು ವರ್ಷ ಶ್ರೀರಾಮಚಂದ್ರ ವನವಾಸಕ್ಕೆ ಹೋದನು. ದ್ವಾಪರಯುಗದಲ್ಲಿ ಪಾಂಡವರು ಹದಿಮೂರು ವರ್ಷಗಳ ಕಾಲ ವನವಾಸ – ಅಜ್ಞಾತ ವಾಸದಲ್ಲಿ ಪರಿತಪಿಸಿದರು. ಪ್ರಾಯಃ ಕೃತಯುಗದಲ್ಲಿ ಅದು ಹದಿನೈದು ವರ್ಷದ ಅವಧಿಯದ್ದಾಗಿರಬಹುದು. ಕಲಿಯುಗದಲ್ಲಿ ಈ ಹಿನ್ನೆಲೆಯಲ್ಲಿಯೇ ಅನುಭೋಗದ ಹಕ್ಕು ಮುಂತಾದವುಗಳು ಹನ್ನೆರಡು ವರ್ಷಕ್ಕೆ ಸೀಮಿತಗೊಂಡಿರಬೇಕು! ಇದು ತೆಕ್ಕುಂಜದವರ ಸ್ವೋಪಜ್ಞ ಚಿಂತನೆಯ ಮೂಸೆಯಲ್ಲಿ ಮೂಡಿದ ಅದ್ಭುತ ಲೆಕ್ಕಾಚಾರ!

ಇನ್ನೊಂದು ಕಡೆ ಅವರು ಹೇಳಿದ ಪರಶುರಾಮನ ಕಥೆ ಕೂಡಾ ಇಂತಹ ಸೃಷ್ಟಿಶೀಲ ಚಿಂತನೆಯ ಫಲವೇ. ಪರಶುರಾಮನು ಇಪ್ಪತ್ತೊಂದು ಬಾರಿ ಕ್ಷತ್ರಿಯ ಸಂಹಾರವನ್ನು ಮಾಡುತ್ತಾ ಭೂಪ್ರದಕ್ಷಿಣೆ ಮಾಡಿದನೆಂಬ ಕಥೆಯನ್ನು ಎಲ್ಲರೂ ಕೇಳಿದವರೇ. ಆದರೆ ಅದಕ್ಕೆ ತೆಕ್ಕುಂಜ ಹೊಸದೊಂದು ಆಯಾಮವನ್ನು ಸೇರಿಸಿದ್ದಾರೆ. ಇಪ್ಪತ್ತೊಂದು ವರ್ಷ ತುಂಬಿದ ಕ್ಷತ್ರಿಯರನ್ನು ಮಾತ್ರ ಪರಶುರಾಮ ಯುದ್ಧಕ್ಕೆ ಆಹ್ವಾನಿಸಿ ಅವರನ್ನು ಕೊಲ್ಲುತ್ತಿದ್ದ. ಆದರೆ ಇಪ್ಪತ್ತರ ಹರೆಯಕ್ಕಿಂತ ಕಿರಿಯರ ವಿರುದ್ಧ ಅವನು ಯುದ್ಧ ಮಾಡುತ್ತಿರಲಿಲ್ಲ. ಒಂದು ವರ್ಷದ ಬಳಿಕ ಮತ್ತೊಮ್ಮೆ ಬಂದು ಅವರನ್ನು ಕೊಲ್ಲುತ್ತಿದ್ದಿರಬಹುದು. ಹೀಗೆ ಇಪ್ಪತ್ತೊಂದು ವರ್ಷಗಳ ಕಾಲ ನಿರಂತರ ಹೋರಾಟವಾದಾಗ, ಅವನ ಪ್ರತಿಜ್ಞಾ ಕಾಲದಲ್ಲಿ ಹುಟ್ಟಿದ ಎಲ್ಲ ಕ್ಷತ್ರಿಯ ಶಿಶುಗಳೂ ಸತ್ತು ಹೋಗುತ್ತಿದ್ದರು. ಇದು ತೆಕ್ಕುಂಜದವರ ವಿಚಾರ ಸರಣಿ!

ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು ಉತ್ತಮ ಭಾಷಣಕಾರರು. ಹಾಸ್ಯಮಯವಾದ ಶೈಲಿಯಲ್ಲಿ ಇಂಪಾದ ಕಂಠದಲ್ಲಿ, ಅಲ್ಲಲ್ಲಿ ಕಾವ್ಯೋದಾಹರಣೆಗಳ ಮೂಲಕ ಅವರು ಉಪನ್ಯಾಸಕ್ಕೆ ನಿಂತರೆಂದರೆ ಸಭೆಯೆಲ್ಲ ನಿಶ್ಶಬ್ದ. ಸಾಹಿತ್ಯಸಂಪತ್ತಿನಿಂದ ತುಂಬಿದ ಅವರ ವಾಗ್‌ಧಾರೆಯನ್ನು ಕೇಳುತ್ತಿದ್ದರೆ ಸಮಯ ಕಳೆದುದೇ ಗೊತ್ತಾಗುತ್ತಿರಲಿಲ್ಲ. ಒಂದರ್ಥದಲ್ಲಿ ನೋಡಿದರೆ ಅವರೊಬ್ಬ ‘‘ಪುರುಷ ಸರಸ್ವತಿ’’. ಹಾವಭಾವಸಹಿತವಾದ ಅವರ ನಿರೂಪಣೆ ಎಲ್ಲರನ್ನೂ ತಮ್ಮೆಡೆಗೆ ಸೆಳೆಯುಂತಿರುತ್ತಿತ್ತು.

ಒಮ್ಮೆ ತೆಕ್ಕುಂಜದವರೊಡನೆ ಮಾತಾಡುತ್ತಾ ಒಬ್ಬರು ‘ರಾಜ್ಯ ಸರಕಾರವು ಸಾಹಿತಿಗಳಿಗೆ ನೀಡುತ್ತಿರುವ ಮಾಸಾಶನ ಗೌರವ ನಿಮಗೂ ಸಿಗಬೇಕಾಗಿತ್ತು’ ಎಂದು ಹೇಳಿದರಂತೆ! ಆಗ ತತ್‌ಕ್ಷಣ ತೆಕ್ಕುಂಜದವರು – ‘ನನಗೇಕಯ್ಯ ಅದು? ಸೇಡಿಯಾಪು ಅವರಿಗೆ, ಅಳಿಕೆ ರಾಮಯ್ಯ ರೈಗಳಿಗೆ, ಅಗರಿ ಶ್ರೀನಿವಾಸ ಭಾಗವತರಿಗೆ ಸಿಕ್ಕರೆ ಸಂತೋಷ’ ಎಂದರಂತೆ! ಇದು ತೆಕ್ಕುಂಜದವರ ಅಂತರಂಗದ ಸಹಜ ರೀತಿ. ಹಿರಿಯರ ಬಗೆಗೆ, ಅರ್ಹರ ಬಗೆಗೆ, ವಿದ್ವಾಂಸರ ಬಗೆಗೆ ಅವರಿಗೆ ನಿಜವಾದ ಗೌರವವಿತ್ತು.

ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು ಮಂಗಳೂರು ಕನ್ನಡ ಸಂಘದ ಅಧ್ಯಕ್ಷರು. ಅದರ ಮೂಲಕ ಅನೇಕ ಅರ್ಥಪೂರ್ಣ ಕಲಾಪಗಳನ್ನು ನಡೆಸಿ ಸಮಾಜದಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಯ ಸಂವರ್ಧನೆಗಾಗಿ ಶ್ರಮಿಸಿದರು. ವಿಶೇಷವಾಗಿ ಅವರು ನಡೆಸಿದ ಕನ್ನಡದ ಹಿರಿಯರ ಸಂಸ್ಮರಣಾ ಕಾರ್ಯಕ್ರಮಗಳು ಈ ದಿಸೆಯಲ್ಲಿ ವಿಶಿಷ್ಟವಾದವುಗಳು. ಗುರು ಗಳಾಗಿದ್ದ ಮುಳಿಯ ತಿಮ್ಮಪ್ಪಯ್ಯನವರ ಸ್ಮರಣಾರ್ಥ ‘ಶ್ರದ್ಧಾಂಜಲಿ’ ಎಂಬ ಸಂಪುಟ ವೊಂದನ್ನು ಅವರು ಏಕಾಂಗಿಯಾಗಿ ಪ್ರಕಟಿಸಿದ್ದರು (1956-57). ಸೈಂಟ್ ಅಲೋಶಿಯಸ್ ಕಾಲೇಜಿನ ಕರ್ನಾಟಕ ಸಂಘದ ಮೂಲಕ ‘‘ಒಸಗೆ’’ ಎಂಬ ಸೇಡಿಯಾಪು ಅಭಿನಂದನ ಗ್ರಂಥವನ್ನು ಹೊರತರುವಲ್ಲಿ ಅವರು ತೋರಿದ ಉತ್ಸಾಹ ಮುಖ್ಯ (1959). ತೆಕ್ಕುಂಜದವರಿಗೆ ಮುಳಿಯದವರ ಮೇಲಿದ್ದಷ್ಟೇ ಗುರುಭಕ್ತಿ ಸೇಡಿಯಾಪು ಅವರ ಮೇಲೂ ಇತ್ತು ಎಂಬುದಕ್ಕೆ ಇದು ಸಾಕ್ಷಿ. (ಈ ಕಾರ್ಯದಲ್ಲಿ ಸೇಡಿಯಾಪು ಶಿಷ್ಯ ಪ್ರೊ. ಎಂ. ರಾಮಚಂದ್ರ ಅವರು ತೆಕ್ಕುಂಜದವರಿಗೆ ಸಹಾಯಕರಾಗಿ ದುಡಿದಿದ್ದರು.) ಆದರೆ ಒಸಗೆಯ ಕೆಲವೇ ಪ್ರತಿಗಳು ಮಾರಾಟವಾಗಿ ಉಳಿದದ್ದೆಲ್ಲ ಮುದ್ರಣಾಲಯದ ಮೂಲೆಯಲ್ಲಿ ರಾಶಿಬಿದ್ದಾಗ ಅವರಿಗಾದ ನೋವು ಹೇಳತೀರದು. ಆಗ ಮುದ್ರಣ ವೆಚ್ಚದ ಬಾಕಿ ಹಣವನ್ನು ತಾವೇ ಕೈಯಿಂದ ಹಾಕಿ, ಪುಸ್ತಕದ ಕಟ್ಟುಗಳನ್ನು ತಮ್ಮ ಮನೆಗೊಯ್ದು ಗುರುಭಕ್ತಿಯನ್ನು ತೋರಿದ ಅವರ ಅಂತರಂಗ ಪ್ರೀತಿ ದೊಡ್ಡದು. ತೆಕ್ಕುಂಜದವರ ಸಂಸ್ಮರಣಾರ್ಥ ಮಂಗಳೂರಿನ ಕನ್ನಡ ಸಂಘವು ‘ವರ್ಣಮಾಲೆ’ ಎಂಬ ನೆನಪಿನ ಸಂಪುಟವನ್ನು 1986ರಲ್ಲಿ ಹೊರತಂದು ಧನ್ಯತೆಯನ್ನು ಪಡೆದಿದೆ. ಇದರಲ್ಲಿ ಸೇಡಿಯಾಪು ಕೃಷ್ಣಭಟ್ಟ, ಎಸ್.ವಿ. ಪರಮೇಶ್ವರ ಭಟ್ಟ, ಅಮ್ಮೆಂಬಳ ಶಂಕರನಾರಾಯಣ ನಾವಡ, ಕಯ್ಯರ ಕಿಞ್ಞಣ್ಣ ರೈ ಮುಂತಾದ ಹಿರಿಯರು ತೆಕ್ಕುಂಜದವರ ಕುರಿತು ಬರೆದ ಲೇಖನಗಳಿವೆ. ಅವರ ಸ್ಮರಣೆಗಾಗಿ ಒಂದು ವರ್ಷಕಾಲ ಏರ್ಪಡಿಸಿದ ಉಪನ್ಯಾಸಗಳೂ ಸಂಕಲನಗೊಂಡಿವೆ.

ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳ ಮೇಲೂ ತೆಕ್ಕುಂಜದವರಿಗೆ ಅತೀವವಾದ ಗೌರವ. ಪೊಳಲಿ ಶಾಸ್ತ್ರಿಗಳ ಸ್ಮರಣ ಸಂಚಿಕೆ ‘ಯಕ್ಷಗಾನ ಮಕರಂದ’ದ ಪ್ರಕಟನೆಯಲ್ಲೂ ತೆಕ್ಕುಂಜದವರ ಪರಿಶ್ರಮವಿದೆ (1980). ಅತ್ಯಮೂಲ್ಯ ಆಕರ ಗ್ರಂಥವಾಗಿ ಅದು ಬೆಳಕು ಕಾಣಬೇಕೆಂದು ಅವರು ಹಂಬಲಿಸಿದ್ದರು. ಆದರೆ ಅದು ತೆಕ್ಕುಂಜದವರ ನೆನಪಿಗೂ ಅರ್ಪಣೆಯಾಗಿ ಬೆಳಕು ಕಂಡಿದ್ದು ವಿದಿಯ ವಿಪರ್ಯಾಸವೆನ್ನದೆ ನಿರ್ವಾಹವಿಲ್ಲ.

ಅಮ್ಮೆಂಬಳ ಊರಿನಲ್ಲಿ ವಾಸವಾಗಿದ್ದ ಕಾಲದಲ್ಲಿ ಶಂಕರನಾರಾಯಣ ನಾವಡರ ಜೊತೆಯಲ್ಲಿ ‘ಕನ್ನಡ ಸೇವಾಸಂಘ’ವೊಂದನ್ನು ಸ್ಥಾಪಿಸಿದ್ದರು. ಆಗ ಆ ಹಳ್ಳಿಗೆ ಜಯ ಕರ್ನಾಟಕ, ತ್ರಿವೇಣಿ, ಬಡವರಬಂಧು ಮೊದಲಾದ ಮಾಸಪತ್ರಿಕೆಗಳೂ, ರಾಷ್ಟ್ರಬಂಧು, ಸ್ವದೇಶಾಬಿಮಾನಿ, ಕಂಠೀರವ, ನವಯುಗ, ಅಂತರಂಗ ಮೊದಲಾದ ವಾರಪತ್ರಿಕೆಗಳೂ, ಮನೋಹರ ಗ್ರಂಥಮಾಲೆ, ಲಲಿತಸಾಹಿತ್ಯಮಾಲೆ ಮೊದಲಾದ ನಿಯತಕಾಲಿಕೆಗಳೂ ಬರುತ್ತಿದ್ದವು. ಈ ಸಂಘದಿಂದಲೇ ಪಂಡಿತ ಮುಳಿಯ ತಿಮ್ಮಪ್ಪಯ್ಯನವರ ‘ನವನೀತ ರಾಮಾಯಣ’ದ ಪ್ರಥಮ ಭಾಗವು ಪ್ರಕಟವಾಯಿತು. ರಮಾನಂದ ಘಾಟೆಯವರೊಂದಿಗೆ ಸೇರಿಕೊಂಡು ತೆಕ್ಕುಂಜದವರು ‘ಮನೋರಂಜನ ಪ್ರಕಾಶನ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದುಂಟು. ಈ ಪ್ರಕಾಶನದ ಮೂಲಕ ‘‘ಅಳು-ನಗು’’ ಎಂಬ ಕಥಾಸಂಕಲನವನ್ನು ಪ್ರಕಟಿಸಿದ್ದರು. ‘ಸುಧಾ’ ಎಂಬ ಕೈಬರಹ ಮಾಸಪತ್ರಿಕೆಯನ್ನು ಅವರು ನಡೆಸಿದ್ದುಂಟು.

ಯಕ್ಷಗಾನದಲ್ಲಿ ಅರ್ಥ

ತೆಕ್ಕುಂಜದವರು ತಾಳಮದ್ದಳೆಗಳಲ್ಲಿ ಅರ್ಥ ಹೇಳುವ ಹವ್ಯಾಸವನ್ನು ಇರಿಸಿ ಕೊಂಡಿದ್ದರು. ಕೃಷ್ಣಸಂಧಾನದ ಕೃಷ್ಣ, ಕೌರವ, ಅಂಗದಸಂಧಾನದ ಅಂಗದ, ಪ್ರಹಸ್ತ, ಬೀಷ್ಮಾರ್ಜುನ ಕಾಳಗದ ಬೀಷ್ಮ, ಕೃಷ್ಣ ಮುಂತಾದವು ಅವರು ಮೆಚ್ಚಿದ ಪಾತ್ರಗಳು. ಅಮ್ಮೆಂಬಳದ ಶಾಲೆಯಲ್ಲಿ ಅವರು ಶಿಕ್ಷಕರಾಗಿದ್ದಾಗ ಸುತ್ತುಮುತ್ತಲಿನ ಅರ್ಥಧಾರಿಗಳನ್ನು ಕರೆಸಿ ತಾಳಮದ್ದಳೆಗಳನ್ನೂ ಅಭ್ಯಾಸ ಕೂಟಗಳನ್ನೂ ನಡೆಸುತ್ತಿದ್ದರು. ಕುಬಣೂರು ಮಿತ್ರಮಂಡಳಿಯ ತಾಳಮದ್ದಳೆಗಳಲ್ಲಿ ನಾರಾಯಣ ಕಿಲ್ಲೆ, ಪೊಳಲಿ ಶಂಕರನಾರಾಯಣ ಶಾಸ್ತ್ರಿ, ಮಲ್ಪೆ ಶಂಕರನಾರಾಯಣ ಸಾಮಗ, ಎಫ್.ಎಚ್. ಒಡೆಯರ್ ಮುಂತಾದ ಪ್ರಸಿದ್ಧ ಕಲಾವಿದರ ಅರ್ಥಗಾರಿಕೆಯನ್ನು ಆಸ್ವಾದಿಸುವುದೆಂದರೆ ಅವರಿಗೆ ಎಲ್ಲಿಲ್ಲದ ಹಿಗ್ಗು. ಒಮ್ಮೆ ಫರಂಗಿಪೇಟೆಯ ಶ್ರೀರಾಮ ಹಾಯರ್ ಎಲಿಮೆಂಟರಿ ಶಾಲೆಯಲ್ಲಿ ನಡೆದ ಒಂದು ದೊಡ್ಡ ತಾಳಮದ್ದಳೆ ಕೂಟದಲ್ಲಿ ಎಫ್.ಎಚ್. ಒಡೆಯರ್ ಅವರ ಎದುರಿಗೆ ತೆಕ್ಕುಂಜದವರು ಅರ್ಜುನನ ಅರ್ಥವನ್ನು ಹೇಳಿದ್ದರೆಂಬುದನ್ನು ಪ್ರೊ| ಎಸ್.ವಿ. ಪರಮೇಶ್ವರ ಭಟ್ಟರು ಒಂದು ಕಡೆ ನೆನಪಿಸಿಕೊಂಡಿದ್ದಾರೆ.

ತೆಕ್ಕುಂಜದವರ ಅರ್ಥಗಾರಿಕೆ ವಿಚಾರ ಪ್ರಚೋದಕವಾದ ಗಂಬೀರಗತಿಯಲ್ಲಿ ಸಾಗುವಂತಹುದಾಗಿತ್ತು. ಶಾಸ್ತ್ರಾಧಾರಗಳಿಂದ ಉಪನಿಷತ್ ವಚನಗಳಿಂದ ಕೂಡಿದ ತತ್ತ ್ವ ಪ್ರತಿಪಾದನೆಯ ಧಾಟಿ ಅವರದು. ತರ್ಕದ ಮಿಂಚು ಮಿನುಗುತ್ತಿದ್ದರೂ ಮೂಲಪದ್ಯದ ಚೌಕಟ್ಟಿನೊಳಗೆ ವಿಹರಿಸುವ ರಸಾನುಭವವನ್ನುಂಟು ಮಾಡುವ ಅರ್ಥಗಾರಿಕೆಗೆ ಅವರು ಹೆಸರಾಗಿದ್ದರು. ರಸಶ್ರದ್ಧೆ ಕಡಿಮೆಯಾಗುತ್ತಾ ವಿರಸ-ಸ್ಪರ್ಧೆ ವಿಜೃಂಬಿಸುತ್ತಿದ್ದಂತೆ ಅವರು ತಾಳಮದ್ದಳೆಯಿಂದ ದೂರವಾಗುತ್ತಾ ನಡೆದರು.

ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳ ಶೈಲಿಯನ್ನು ಅನುಸರಿಸುವ ಅರ್ಥಗಾರಿಕೆಯ ಕ್ರಮ ಅವರದು. ಪೊಳಲಿ ಶಾಸ್ತ್ರಿಗಳೊಂದಿಗೆ ಪೌರಾಣಿಕ ವಿಚಾರಗಳ ಚಿಂತನ ಮಂಥನಗಳನ್ನು ನಡೆಸುತ್ತಾ ಇದ್ದವರಾದುದರಿಂದ ಯಕ್ಷಗಾನಕ್ಕೆ ಅವರನ್ನೇ ಗುರುವೆಂದು ಸ್ವೀಕರಿಸಿದ್ದರು. ಪೊಳಲಿ ಶಾಸ್ತ್ರಿಗಳ ಸಂಸ್ಮರಣೆ ಮಾಡಿ ಸಂಸ್ಮರಣ ಗ್ರಂಥವೊಂದನ್ನು ಸಿದ್ಧಪಡಿಸಿ ಅವರ ನೆನಪಿಗೆ ಸಮರ್ಪಿಸುವ ಸಿದ್ಧತೆ ನಡೆಯುತ್ತಿದ್ದಾಗಲೇ ಆ ಸಮಿತಿಯ ಸಕ್ರಿಯ ಪದಾದಿಕಾರಿಗಳಾಗಿದ್ದ ತೆಕ್ಕುಂಜೆಯವರು ನಮ್ಮನ್ನಗಲಿದುದು ವಿದಿಯ ವಿಕಟತೆಯೇ ಸರಿ. ಅರ್ಕುಳ ಸುಬ್ರಾಯ ಆಚಾರ್ಯ, ನಾರಾಯಣ ಕಿಲ್ಲೆ, ಬಲಿಪ ಭಾಗವತರು ಮುಂತಾದವರ ಮೇಲೆ ಅಪಾರವಾದ ಗೌರವವನ್ನು ಹೊಂದಿದ್ದರು.

ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರಕಟಗೊಂಡಿರುವ ‘ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ’ಯ ಆರನೆಯ ಸಂಪುಟದಲ್ಲಿ (ಕ್ರಿ.ಶ. 1850 – 1920) ‘ಈ ಕಾಲದ ಯಕ್ಷಗಾನ ಕೃತಿಗಳು’ ಎಂಬ ಒಂದು ದೀರ್ಘ ಲೇಖನವನ್ನು ಪ್ರೊ. ತೆಕ್ಕುಂಜದವರು ಬರೆದಿದ್ದಾರೆ. ಈ ಲೇಖನವು 19ನೆಯ ಶತಮಾನದ ಯಕ್ಷಗಾನ ಸಾಹಿತ್ಯ ಚರಿತ್ರೆಯ ಬಗೆಗೆ ಅವರ ಮುಖ್ಯ ಕೊಡುಗೆಯಾಗಿದೆ. ಈ ಲೇಖನಕ್ಕೆ ಪೂರಕವಾಗಿ 373 ಯಕ್ಷಗಾನ ಪ್ರಸಂಗಗಳ ಪಟ್ಟಿ ಮತ್ತು 31 ಮಂದಿ ಪ್ರಸಂಗಕರ್ತರ ವಿವರಗಳನ್ನು ಅನುಬಂಧಗಳಾಗಿ ನೀಡಲಾಗಿದೆ. ಯಕ್ಷಗಾನ ಸಾಹಿತ್ಯದ ಕುರಿತಾದ ಅವರ ಆಸಕ್ತಿಯನ್ನು ಇಲ್ಲಿ ನಾವು ಗುರುತಿಸಬಹುದಾಗಿದೆ.

ತೆಕ್ಕುಂಜದವರು ನಾಟಕಕಾರರಾಗಿಯೂ ಕಲಾಸೇವೆ ನಡೆಸಿದವರು. ಡಾ| ಶಿವರಾಮ ಕಾರಂತರ ‘ಗರ್ಭಗುಡಿ’, ‘ಏಕಾಕ್ಷಿ’ಗಳಲ್ಲೂ, ಶ್ರೀರಂಗರ ನಾಟಕದ ಬ್ರಹ್ಮಪ್ಪನಂತಹ ಪಾತ್ರಗಳಲ್ಲೂ ಅವರು ರಂಗದ ಮೇಲೆ ನಟಿಸಿದ್ದುಂಟು. ಇನ್ನು ಕೆಲವು ನಾಟಕಗಳಿಗೆ ನಿರ್ದೇಶಕರಾಗಿ ತೆರೆಯಮರೆಯಲ್ಲೂ ದುಡಿದದ್ದುಂಟು.

ಸಾಹಿತ್ಯ ಸೇವೆ

ತೆಕ್ಕುಂಜದವರ ಮೊದಲ ಕವನ ‘ಮುರಲಿ’ 1934ರ ಜನವರಿಯಲ್ಲಿ ಕಾರ್ಕಳದ ‘ಕಲಾಚಂದ್ರ’ ಮಾಸಪತ್ರಿಕೆಯಲ್ಲಿ ಪ್ರಕಟವಾಯಿತು. ಅದರ ಮೊದಲ ಸಾಲುಗಳು ಹೀಗಿವೆ-

ಹಾಡೆಲವೊ ಹಾಡೆಲವೊ ವಿಶ್ರಮಿಸದೆ
ನಿನ್ನ ಗಾನವ ಕೇಳಬೇಕೆಂದು ಬಂದಿಹೆವು
ಮುರಲಿ ಮರೆಯಾಗದಿರು ನಮ್ಮ ಕಂಡು||

ಇದನ್ನು ಬರೆದಾಗ ತೆಕ್ಕುಂಜದವರಿಗೆ ಹದಿನೆಂಟರ ಹರೆಯ. ‘ಗೋಪಬಾಲ’ ಎಂಬ ಕಾವ್ಯನಾಮದಲ್ಲಿ ಇವರು ಮಂಗಳೂರಿನ ರಾಷ್ಟ್ರಬಂಧು ಪತ್ರಿಕೆಯ ಸಾಹಿತ್ಯ ಸಂಚಿಕೆಯಲ್ಲಿ ಅನಂತರ ಬರೆಯತೊಡಗಿದರು. ‘ಪ್ರತೀಕಾರ’ ಎಂಬ ಸತ್ಯಕಥೆಯೊಂದು ‘‘ಸ್ವದೇಶಾಬಿಮಾನಿ’’ ಸಾಹಿತ್ಯ ಸಂಚಿಕೆಯಲ್ಲಿ ಪ್ರಕಟವಾಯಿತು. ‘ರಾಷ್ಟ್ರಬಂಧು’ವಿನಲ್ಲಿ ಪ್ರಕಟವಾದ ‘‘ಮಗಳ ಮದುವೆ’’ ಎಂಬ ಕಥೆಗೆ ಅಖಿಲ ಕರ್ನಾಟಕ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಲಬಿಸಿತು. ‘ತ್ರಿವೇಣಿ’ ಎಂಬ ಮಾಸಪತ್ರಿಕೆಯಲ್ಲಿ ಅನಂತದೂರದಲ್ಲಿ, ಕಾಳರಾಹು, ನಾಡೋಜಪಂಪ, ಜೀವನ ಸಂಗ್ರಾಮ, ರಾಗ, ತಪಸ್ವಿ ಎಂಬ ಆರು ಕವನಗಳೂ, ‘ಕವಿಪತ್ನಿ’ ಎಂಬ ಕಥೆಯೂ, ‘‘ಕೈಗಡಿಯಾರ’’ ಎಂಬ ವಿನೋದ ಲೇಖನವೂ ಪ್ರಕಟವಾಯಿತು.

ಆ ಕಾಲದಲ್ಲಿ ಮಂಗಳೂರಿನಲ್ಲಿ ‘ಮಿತ್ರಮಂಡಳಿ’ ಎಂಬ ಸಾಹಿತ್ಯ ಸಂಸ್ಥೆಯೊಂದು ಕ್ರಿಯಾಶೀಲವಾಗಿತ್ತು. ಎಂ.ಎನ್. ಕಾಮತರು, ಕಡೆಂಗೋಡ್ಲು ಶಂಕರಭಟ್ಟರು, ಪಂಜೆ ಮಂಗೇಶರಾಯರು, ಪೇಜಾವರ ಸದಾಶಿವರಾಯರು ಅದರ ಮುಂಚೂಣಿಯಲ್ಲಿದ್ದರು.

ತೆಕ್ಕುಂಜದವರು ಸಾಹಿತ್ಯ ರಚನೆಯನ್ನು ವ್ರತವಾಗಿ ಸ್ವೀಕರಿಸಿದರು. ಹಲವಾರು ಕಥೆ ಕವಿತೆಗಳನ್ನು ಅವರು ಬರೆದು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟಿಸಿದರು. ಆದರೆ ಅವಾವುವೂ ಸಂಗ್ರಹ ರೂಪದಲ್ಲಿ ಮತ್ತೆ ಹೊರಬರಲಿಲ್ಲ. ಅವರ ಆಸಕ್ತಿಯೂ ನಿಧಾನವಾಗಿ ಭಾಷೆ, ವ್ಯಾಕರಣಗಳಂತಹ ಗಂಬೀರ ವಿಷಯಗಳ ಕಡೆಗೆ ಹರಿದುದರಿಂದಲೋ ಏನೋ, ಅವರು ಕವಿಯಾಗಿ, ಕಥೆಗಾರರಾಗಿ ಹೆಸರು ಮಾಡಲಿಲ್ಲ.

ತೆಕ್ಕುಂಜದವರ ವಾಙ್ಮಯ ವಿಸ್ತಾರವಾಗಿದ್ದು ಪ್ರಕಟವಾದ ಕೃತಿಗಳು ಕೆಲವು ಮಾತ್ರ. ಮೊದಲನೆಯದು ‘‘ವೀರವಿಲಸಿತ’’ ಎಂಬ ಖಂಡ ಕಾವ್ಯ. ಎರಡನೆಯದು ‘‘ಮಧುರಂಜಿನಿ’’ ಎಂಬ ಶೃಂಗಾರ ಮುಕ್ತಕಗಳ ಗುಚ್ಛ. ‘‘ಕನ್ನಡ ಸಮಾಸಗಳು’’ ಶಬ್ದ ಮಣಿದರ್ಪಣದ ಸಮಾಸ ಪ್ರಕರಣವನ್ನು ಆಧರಿಸಿ ರಚಿಸಿದ ಕೃತಿ ಮೂರನೆಯದು. ನಾಲ್ಕನೆಯದು ‘ಮುಳಿಯ ತಿಮ್ಮಪ್ಪಯ್ಯ’ ಎಂಬ ವ್ಯಕ್ತಿ ಚಿತ್ರ. ಇದನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಐದನೆಯದಾಗಿ ‘ಶ್ರೀರಾಮಾಶ್ವಮೇಧದ ವ್ಯಾಖ್ಯಾನ’ ಮತ್ತು ಹೊಸಗನ್ನಡ ಭಾಷಾಂತರ ಕೃತಿ. ಇದಕ್ಕೆ ತೀನಂಶ್ರೀ ಸ್ಮಾರಕ ಬಹುಮಾನವೂ, ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರವೂ ಪ್ರಾಪ್ತವಾಗಿದೆ.

‘‘ವೀರವಿಲಸಿತ’’(1950) ರಾಮಾಯಣದ ಉತ್ತರಕಾಂಡದ ವಸ್ತುವನ್ನೊಳಗೊಂಡ ಖಂಡಕಾವ್ಯ. ಪಿರಿಯಕ್ಕರ ಛಂದಸ್ಸಿನ ಮೂವತ್ತಾರು ಪದ್ಯಗಳಲ್ಲಿ ಈ ಕಾವ್ಯ ಭಾವಾಬಿವ್ಯಂಜಕ ವಾಗಿ ಸಾಗುತ್ತದೆ. ಲಕ್ಷ ್ಮಣನ ಪುತ್ರನಾದ ಚಂದ್ರಕೇತು ಲವ-ಕುಶರನ್ನು ಕಂಡಾಗ ಭ್ರಾತೃಭಾವಕ್ಕೆ ಸಿಲುಕಿ ಪರಿತಪಿಸುವ ರಸಾರ್ದ್ರತೆ ಕವಿಯ ಸ್ವೋಪಜತೆಗೆ ಸಾಕ್ಷಿಯಾಗುತ್ತದೆ. ಈ ಕುರಿತು ಡಾ| ಸೀ. ಹೊಸಬೆಟ್ಟು ಹೇಳುವ ಮಾತುಗಳು ಮನನೀಯ-

‘‘ರಾಮಾಶ್ವಮೇಧದ ಕುದುರೆ ಹೇಗೆ ನಡೆಯುತ್ತಾ ಸಾಗಿದಂತೆ ಕವಿಯ ಪದಗತಿಯೂ ನಾಗಾಲೋಟದಿಂದ ಮುನ್ನಡೆಯುತ್ತದೆ. ಮುಂದೆ ಸಂಜೆವೆಳಗಿನ ಹೊಂಬಣ್ಣಕ್ಕೆ ಅರಳುವ ಮಕ್ಕಳ ಬೈಗುಮಲ್ಲಿಗೆ, ಮೊಗ್ಗು ತಾವರೆ ಮುಗುಳಿನ ಕಾಡು, ಬಾನಲಿ ಬಾವಲಿಯಾದ ಭಾನು, ಹೂದಲೆಯನು ಬಗ್ಗಿಪಾರಡಿ, ಹಕ್ಕಿಗಳೂದುವ ಕಾಳಗದ ಕಹಳೆಗಳಂತಹ ಸುಂದರ ರೂಪಕಗಳು ಇಲ್ಲಿ ಸಾಲುಗಟ್ಟಿ ನಿಲ್ಲುತ್ತದೆ. ಕಾಳಿದಾಸನನ್ನು ನೆನಪಿಸುವ ‘‘ಸಜ್ಜನರ ಚಿತ್ತ ಸಂದೇಹ ಪದದಲ್ಲಿ ಸಿದ್ಧಾಂತದೆದೆ ಹೊಲವೆನ್ನುವುದು’’ – ಮೈತ್ರಿಸಾಪ್ತದಿನ – ಇಂತಹ ನುಡಿಗಳು ಕವಿಯ ಬಹುಶ್ರುತತೆಯನ್ನು ಮನದಟ್ಟು ವೂಡಿಸುತ್ತದೆ. ‘ವೀರವಿಲಸಿತ’ದ ಗತಿಯಲ್ಲಿನ ತೀವ್ರತೆ, ಪದಗುಂಫನಗಳು ಸಹೃದಯರನ್ನು ಸಂತೋಷಗೊಳಿಸುವಲ್ಲಿ – ಇದು ಕವಿಯ ಮೊದಲ ಕೃತಿ ಎಂಬ ಚೊಚ್ಚಲತನ ಆತಂಕವನ್ನುಂಟುಮಾಡುವುದಿಲ್ಲ. ಶ್ರೀ ಸೇಡಿಯಾಪು ಅವರ ಪುಣ್ಯಲಹರಿಯ ಧಾಟಿಯನ್ನು ಇದು ನೆನಪಿಗೆ ತರುವುದೇನೋ ಸ್ವಾಭಾವಿಕ.’’

‘‘ವೀರವಿಲಸಿತ’’ (1970) ಗಾಂಭೀರ್ಯದಿಂದ ಸಾಗಿದ ಪ್ರೌಢ ಕಾವ್ಯವಾದರೆ, ‘‘ಮಧುರಂಜನಿ’’ ಸುಕೋಮಲ ಚಮತ್ಕೃತಿಗಳಿಂದ ಕಂಗೊಳಿಸುತ್ತಿದೆ. ಡಾ| ಸೀ. ಹೊಸಬೆಟ್ಟು ಹೇಳುವಂತೆ – ‘‘ಇಲ್ಲಿ ಕವಿಗಿಂತಲೂ ಹೆಚ್ಚು ಶಬ್ದಲಲನೆಯ ಮೇಲೆ ಕಚಗುಳಿಯಾಡುವ ಪಂಡಿತರು ಕಾಣಿಸಿಕೊಳ್ಳುತ್ತಾರೆ. ವಿಕೃತ ಕಾಮದ ಶೃಂಗಾರಾಭಾಸದ ಚಿತ್ರಗಳೇ ಇಲ್ಲಿನ ವಸ್ತು ಸಂಪತ್ತು! ವ್ಯಂಗ್ಯ ನೀತಿ ಬೋಧೆಗಳು ಮಧುರಂಜನಿಯ ಪರಮೋದ್ದೇಶ ಎನ್ನಬಹುದು. ಆದರೆ ಬಾಗಿಲು ಮುಚ್ಚಿದ ಕೋಣೆಂುೊಳಗೆ ಒಂಟಿಯಾಗಿ ಓದಿಕೊಳ್ಳಬೇಕಾದ ಕೃತಿ ಇದು. ಒಂದು ದೃಷ್ಟಿಯಿಂದ ಅವರ್ಣನೀಯವಾದುದು ಇಲ್ಲಿನ ಅನುಭವ. ಈ ಕಾರಣದಿಂದಲೇ ಇದು ಒಂದು ವಿಶಿಷ್ಟ ರಚನೆ. ಕವಿಯು ಕಂಡ, ಕೇಳಿದ – ಕಲ್ಪಿಸಿದ ಕೌಟುಂಬಿಕ (ಲೈಂಗಿಕ ಸಂಬಂಧಗಳ) ರಹಸ್ಯಗಳು ಮುಕ್ತಕಗಳ ಮೂಲಕ ಮುಕ್ತದ್ವಾರ ಪಡೆದು ಬೀದಿ ಗಿಳಿದಿರುವುದನ್ನು ಕಂಡರೆ – ಕಾವ್ಯದ ಪ್ರಪಂಚದಲ್ಲಿ ಹೆಡೆಯಾಡಿಸುತ್ತಿರುವ ನವ್ಯ ಪ್ರಜ್ಞೆ ಕೇವಲ ಆಧುನಿಕರ ಸೊತ್ತಲ್ಲ ಎನ್ನುವುದಕ್ಕೆ ಪ್ರಾ| ತೆಕ್ಕುಂಜದವರು ದಾಖಲೆ ಒದಗಿಸಿದ್ದಾರೆ ಎನ್ನಬೇಕು!’’

‘‘ಕನ್ನಡ ಸಮಾಸಗಳು’’ ಎಂಬ ಕೃತಿಯಲ್ಲಿ ಸಮಾಸಗಳ ತಪ್ಪು ಪ್ರಯೋಗಗಳನ್ನು ತಿದ್ದುವ ಭಾಷಾ ಪ್ರೀತಿ ಇದೆ. ಪರಿಭಾಷೆಗಳು, ಸಮಾಸಗಳು ಮತ್ತು ಸಮಾಸಕಾರ್ಯಗಳು ಎಂಬ ಮೂರು ಅಧ್ಯಾಯಗಳಲ್ಲಿ ಕೇಶಿರಾಜನ ಆಶಯವನ್ನು ಹೊತ್ತ ವಿನೀತ ಪ್ರಜ್ಞೆ ಕೆಲಸ ಮಾಡಿದೆ. ಪಂಚಮಿ ವಿಭಕ್ತಿ ಮತ್ತು ತೃತೀಯ ವಿಭಕ್ತಿಗಳ ಬಳಕೆಯಲ್ಲಿರುವ ಸಂದೇಹಗಳ ನಿವಾರಣೆ, ವಿಗ್ರಹವಾಕ್ಯಗಳ ರಚನೆ, ತದ್ದಿತ ಪದ – ಸಮಸ್ತಪದ ಜಿಜ್ಞಾಸೆ, ಗಮಕ ಸಮಾಸದ ಅವಶ್ಯಕತೆ ಮುಂತಾದ ಪ್ರೌಢ ವ್ಯಾಕರಣ ವಿಚಾರಗಳ ವಿಶ್ಲೇಷಣೆಯಿದೆ.

ಪದ ಮತ್ತು ಶಬ್ದಗಳೆರಡರ ವ್ಯತ್ಯಾಸವನ್ನು ಹೇಳುವಲ್ಲಿ ಪ್ರಾ| ತೆಕ್ಕುಂಜದವರ ಪಾಂಡಿತ್ಯದ ಮಿಂಚು ಕಂಡುಬರುತ್ತದೆ :- ‘‘ಮರಗೊಂಬು ಎಂಬಲ್ಲಿ ಮರ ಮತ್ತು ಕೊಂಬು ಎಂಬೆರಡು ಪದಗಳಿವೆ ಎನ್ನಬೇಕೇ ಹೊರತು ಆ ಎರಡು ಶಬ್ದಗಳಿವೆ ಎನ್ನುವಂತಿಲ್ಲ. ಮರ ಎಂಬ ಸ್ವರೂಪವು ಅದು ಬರಿಯ ಪ್ರಕೃತಿ ಅಥವಾ ಶಬ್ದ ಎಂಬಂತೆ ಕಾಣಬಹುದಾದರೂ ಮರದ ಎಂಬ ಷಷ್ಠಿ ವಿಭಕ್ತಿಯನ್ನು ಕಳೆದುಕೊಂಡು ‘ಮರಗೊಂಬು’ ಎಂಬುದರಲ್ಲಿರುವುದ ರಿಂದ ಅಲ್ಲಿರುವ ಮರ ಎಂಬುದನ್ನು ಪದ ಎಂದೇ ಹೇಳಬೇಕು. ಸ್ವತಂತ್ರವಾಗಿ ಮರ ಎಂದಿದ್ದಾರೆ. ಅದು ಶಬ್ದ ಸಮಾಸದಲ್ಲಿ ಸೇರಿಕೊಂಡಿರುವಾಗ ತನ್ನ ವಿಭಕ್ತಿಯನ್ನು ಕಳೆದುಕೊಂಡು ಕಾಣಿಸುವುದರ ಕಾರಣ ಅದು ಪದ.’’

ತೆಕ್ಕುಂಜದವರು ತಮ್ಮ ಗುರುಗಳಾದ ಪಂ| ಮುಳಿಯದವರ ಜೀವನ ಮತ್ತು ಸಾಹಿತ್ಯ ಕೃತಿಗಳ ತಲಸ್ಪರ್ಶಿಯಾದ  ಅಧ್ಯಯನದಿಂದ ರಚಿಸಿದ ಮಹತ್ವದ ಕೃತಿಯೇ ‘ಮುಳಿಯ ತಿಮ್ಮಪ್ಪಯ್ಯ’ (1972) ರಂ.ಶ್ರೀ. ಮುಗಳಿಯಂತಹ ಹಿರಿಯರೂ ಈ ಕೃತಿಯ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ.

ನವಭಾರತ ಪತ್ರಿಕೆಯ ಶ್ರೀ ಕುಡ್ವರು ತೆಕ್ಕುಂಜ ಗೋಪಾಲಕೃಷ್ಣ ಭಟ್ಟರ ಸಹಪಾಠಿ. ನವಭಾರತದ ವಾರದ ಪುರವಣಿಯಲ್ಲಿ ಬಾಲಕರಿಗಾಗಿ ತೆಕ್ಕುಂಜ ‘ವಿಕ್ರಮ ಸಿಂಹಾಸನ’ ಎಂಬ ಧಾರಾವಾಹಿಯನ್ನು ಬರೆದರು. ಇದು ಸಂಸ್ಕೃತದ ವಿಕ್ರಮಾರ್ಕ ಚರಿತೆಯ ಆಧಾರದಿಂದ ಬರೆದ ಕಥಾಮಾಲಿಕೆ. ಹಾಗೆಯೇ ನವಭಾರತದಲ್ಲಿ ‘ಕನ್ನಡ ಕವಿರತ್ನಗಳು’ ಎಂಬ ಶೀರ್ಷಿಕೆಯಲ್ಲಿ ಪಂಪ, ರನ್ನ, ಬಸವಣ್ಣ, ಲಕ್ಷ್ಮೀಶ, ಕುಮಾರವ್ಯಾಸ, ಮುದ್ದಣ ಮುಂತಾದ ಕವಿವರೇಣ್ಯರ ಕುರಿತು ಪರಿಚಯಾತ್ಮಕ ಲೇಖನಗಳನ್ನು ಬರೆದರು.
ಶ್ರೀ ವಿ.ಬಿ. ಹೊಸಮನೆಯವರ ‘ಕಲಾದರ್ಶನ’ದಲ್ಲಿ ಭಾಷಾಭ್ಯಾಸ ಎಂಬ ಶೀರ್ಷಿಕೆಯಲ್ಲಿ ಪದಪ್ರಯೋಗಗಳ ಕುರಿತು ಲೇಖನವನ್ನು ಬರೆದರು. ಪ್ರಚಲಿತವಾಗಿರುವ ಭಾಷಾಪ್ರಯೋಗಗಳನ್ನು ಸರಿಯಾಗಿ ವಿಮರ್ಶಿಸಿ ಈ ಲೇಖನಗಳನ್ನು ಬರೆಯಲಾಗಿದ್ದು ಅವು ಅಖಿಲ ಕರ್ನಾಟಕದ ಭಾಷಾಸಕ್ತರ ಗಮನಕ್ಕೆ ಬಂದಿಲ್ಲ. ಏಕೆಂದರೆ ಈ ಪತ್ರಿಕೆ ಕರಾವಳಿ ಕರ್ನಾಟಕದಲ್ಲಿ ಮಾತ್ರ ಪ್ರಸಾರದಲ್ಲಿದ್ದ ಪತ್ರಿಕೆ. ಪೂರ್ವೋಕ್ತ ನವಭಾರತ ಪತ್ರಿಕೆ ಬಹಳ ವರ್ಷಗಳ ಹಿಂದೆಯೇ ನಿಂತುಹೋಗಿದ್ದು ಪ್ರಸ್ತುತ ತೆಕ್ಕುಂಜದವರು ಆ ಪತ್ರಿಕೆಯಲ್ಲಿ ಪ್ರಕಟಿಸಿದ ಲೇಖನಗಳು ಇಂದು ದೊರಕುವಂತಿಲ್ಲ.

‘‘ಗಿರಿಜಾಕಲ್ಯಾಣ’’ದಲ್ಲಿ ಹರಿಹರ ಕವಿಯು ಮಾಡಿಕೊಂಡ ಸೃಜನಶೀಲ ಮಾರ್ಪಾಟುಗಳು, ‘ಯಶೋಧರ ಚರಿತೆ’ ಕಾವ್ಯಕ್ಕೆ ಬರೆದ ವಿಸ್ತಾರವಾದ ಉಪೋದ್ಘಾತ, ಹವೀಕರ ಆಡುನುಡಿಯ ವೈಶಿಷ್ಟ್ಯಗಳು, ದಕ್ಷಿಣಕನ್ನಡದ ಸಂಶೋಧನೆ ಮತ್ತು ವಿಮರ್ಶೆ, ಇಪ್ಪತ್ತನೆಯ ಶತಮಾನದ ಕನ್ನಡ ಪದ್ಯ ಸಾಹಿತ್ಯ, ಅಹಲ್ಯೆಯ ಒಂದು ಚಿತ್ರ, ಯಕ್ಷಗಾನ ಪರ ಕೆಲವು ದಂತಕಥೆಗಳು, ತುಳುವಿನ ವರ್ಣಮಾಲೆ, ಕನ್ನಡ ಕಾವ್ಯಗಳಲ್ಲಿ ಗಣೇಶ, ಮುದ್ದಣನ ಭರತವಾಕ್ಯ, ಕೆಲವು ಷಟ್ಪದಿಗಳು – ಮುಂತಾದ ಅನೇಕ ಲೇಖನಗಳು ಹತ್ತಾರು ಪತ್ರಿಕೆಗಳಲ್ಲಿ ಬೆಳಕು ಕಂಡಿದ್ದು ಅವುಗಳು ತೆಕ್ಕುಂಜದವರ ವಾಙ್ಮಯ ವಿಸ್ತಾರಕ್ಕೆ ನಿದರ್ಶನಗಳಾಗಿವೆ. ಇವುಗಳಲ್ಲಿ ‘ತುಳುವಿನ ವರ್ಣಮಾಲೆ’ ಎಂಬ ಲೇಖನ ಇತ್ತೀಚೆಗೆ ಹಂಪಿಯ ಕನ್ನಡ ವಿ.ವಿ. ಪ್ರಕಟಿಸಿದ ‘ತುಳು ಸಾಹಿತ್ಯ ಚರಿತ್ರೆ’ಯಲ್ಲಿ ಸೇರ್ಪಡೆಗೊಂಡಿದೆ.

‘ಸುದರ್ಶನ’ವೆಂಬ ಗ್ರಂಥದಲ್ಲಿ ಪ್ರಕಟವಾದ ‘ದಕ್ಷಿಣಕನ್ನಡದ ಸಾಹಿತ್ಯ ಪರಂಪರೆ’ ಎಂಬ ಲೇಖನ ತುಂಬಾ ಮೌಲಿಕವಾದುದು. ‘ಕನ್ನಡಮೆನಿಪ್ಪಾ ನಾಡು’ ಉತ್ತರ ಮತ್ತು ದಕ್ಷಿಣವೆಂದು ಬಿನ್ನವಾದುದು ಕ್ರಿ.ಶ. 1862ರಲ್ಲಿ ಇಂಗ್ಲಿಷರ ಆಳ್ವಿಕೆಯಲ್ಲಿ ಎಂಬುದನ್ನು ಹೇಳಿ, ಅನಂತರದ ಸಾಹಿತ್ಯವನ್ನು ದಕ್ಷಿಣಕನ್ನಡದ ಸಾಹಿತ್ಯವೆಂದು ವಿವರಿಸುವ ಅವರ ತರ್ಕಶಕ್ತಿ ಗಮನಾರ್ಹವಾದುದು. ಜೀವಂಧರ ಷಟ್ಪದಿಯಲ್ಲಿ ಬೈಂದೂರನ್ನೂ ತುಳುನಾಡೆಂದೇ ಕರೆಯಲಾಗಿರುವುದನ್ನು ಅವರು ಉಲ್ಲೇಖಿಸಿ ಗಡಿಗೆರೆಯ ವ್ಯಾಪ್ತಿ ಅತ್ತಿತ್ತ ಹೆಚ್ಚು ಕಡಿಮೆಯಾಗಿ ಕಂಡುಬಂದರೆ ವಿಚಾರವಂತರು ಮನ್ನಿಸಬೇಕೆಂದು ಹೇಳಿ ವಿಷಯ ಪ್ರವೇಶಿಸುವ ತೆಕ್ಕುಂಜ ಶೈಲಿ ಅನನ್ಯವಾದುದು. ‘ಶೃಂಗಾರ ರಸ’ವನ್ನು ಬರೆದ ಸೋಮರಾಜ (1222), ‘ಜ್ಞಾನ ಚಂದ್ರಾಭ್ಯುದಯ’ದ ಕಲ್ಯಾಣಕೀರ್ತಿ (1439), ‘ಜೀವಂಧರ ಷಟ್ಪದಿ’ಯ ಕೋಟೇಶ್ವರ ಕವಿ (15ನೆಯ ಶತಮಾನ), ‘ರಸರತ್ನಾಕರ’ದ ಸಾಳ್ವ ಕವಿ (1550), ಭರತೇಶ ವೈಭವದ ರತ್ನಾಕರವರ್ಣಿ, ಯಕ್ಷಗಾನ ಕವಿ ಪಾರ್ತಿಸುಬ್ಬ, ಕನ್ನಡಂ ಕತ್ತುರಿಯಲ್ತೆ ಎಂದ ಮುದ್ದಣ ಮುಂತಾದ ಕವಿವರೇಣ್ಯರ ಮಹತ್ತ್ವವನ್ನು ಈ ಲೇಖನದಲ್ಲಿ ವಿಷದ ಪಡಿಸಲಾಗಿದೆ. ಅನಂತರದ ದಕ್ಷಿಣಕನ್ನಡದ ಸಾಹಿತ್ಯ ನಿರ್ಮಾಪಕರ ಕುರಿತಾಗಿ ಅವರಿಗಿದ್ದ ಅಭಿಪ್ರಾಯವನ್ನು ಈ ಕೆಳಗಿನ ಸಾಲುಗಳು ಸ್ಪಷ್ಟಪಡಿಸುತ್ತವೆ –

‘ಹೊಸಗಾಳಿ ಬೀಸಿದಾಗ ಅದಕ್ಕೆ ತಕ್ಕಂತೆ ಇಲ್ಲಿನ ಕನ್ನಡಿಗರು ಮಾರ್ಪಟ್ಟರು. ಅದರಲ್ಲಿ ದಕ್ಷಿಣಕನ್ನಡದವರು ಕೆಲಕೆಲವು ವಿಷಯಗಳಲ್ಲಿ ಕನಿಷ್ಠಿಕಾದಿಷ್ಠಿತರಾಗಿದ್ದಾರೆಂಬುದು ಗಮನಾರ್ಹ. ಪ್ರಾಸವನ್ನು ಬಿಟ್ಟು ಪದ್ಯಗಳನ್ನು ಬರೆಯುವುದರಲ್ಲಿ ರಾಷ್ಟ್ರಕವಿ ಗೋವಿಂದ ಪೈಗಳು, ಸಣ್ಣ ಕತೆಗಳನ್ನು ಬರೆಯುವುದರಲ್ಲಿ ಪಂಜೆ ಮಂಗೇಶರಾಯರು, ಆಂಡಯ್ಯನಂತೆ ಅಚ್ಚಗನ್ನಡದಲ್ಲಿ ಕಾವ್ಯ ರಚನೆ ಮಾಡುವುದರಲ್ಲಿ ಮುಳಿಯ ತಿಮ್ಮಪ್ಪಯ್ಯನವರು, ತದ್ಭವಗಳನ್ನೂ ಬಳಸದೆ ‘ದೇಸಿ’ ಕತೆಯನ್ನು ದೇಸಿ ನುಡಿಯಲ್ಲಿ ರಚಿಸುವುದರಲ್ಲಿ ಕೊಳಂಬೆ ಪುಟ್ಟಣ್ಣ ಗೌಡರು, ಆಂಗ್ಲ ಕವಿತೆಗಳನ್ನು ಭಾಷಾಂತರಿಸಿ ಕೊಡುವುದರಲ್ಲಿ ಹಟ್ಟಿಯಂಗಡಿ ನಾರಾಯಣ ರಾಯರು, ಸಾಮಾಜಿಕ ಕಾದಂಬರಿಯನ್ನು ಬರೆಯುವಲ್ಲಿ ಬೋಳಾರ ಬಾಬುರಾಯರು, ಚಂಪೂ ಕೃತಿಯನ್ನು ಪುನರುಜ್ಜೀವಿಸುವಲ್ಲಿ ಟಿ. ಕೇಶವ ಭಟ್ಟರು, ಪಿರಿಯಕ್ಕರದ ಛಂದಸ್ಸಿನಲ್ಲಿ ಒಂದು ಖಂಡ ಕಾವ್ಯವನ್ನು ರಚಿಸುವುದರಲ್ಲಿ ಸೇಡಿಯಾಪು ಕೃಷ್ಣಭಟ್ಟರು, ನವ್ಯ ಕಾವ್ಯದಲ್ಲಿ ಮೊಗೇರಿ ಗೋಪಾಲಕೃಷ್ಣ ಅಡಿಗರು….. ಹೀಗೆ ಇನ್ನೂ ಕೆಲವರು ಕೆಲಕೆಲ ಸಾಹಿತ್ಯ ರೂಪಗಳ ಪ್ರಕಟಣೆಯಲ್ಲಿ ಮೊತ್ತಮೊದಲಿಗರೆನ್ನಿಸಿದ್ದಾರೆ. ಈ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ. ಈ ರೀತಿ ದಕ್ಷಿಣಕನ್ನಡ ಜಿಲ್ಲೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗೆಯ್ದ ಗೆಂು್ಮೆು ಏನೂ ಕಡಿಮೆಯಲ್ಲ; ಪಡೆದ ಪಯಿರೂ ಜಳ್ಳಲ್ಲ.  ಮುಂದೆ ಏನು ಬರುವುದೋ ಈಗ ಹೇಳಸಲ್ಲ!’

1979ರಲ್ಲಿ ಧರ್ಮಸ್ಥಳದಲ್ಲಿ ನಡೆದ 51ನೆಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ಭಾಷಾಬಾಂಧವ್ಯ ಗೋಷ್ಠಿ’ಯಲ್ಲಿ ತೆಕ್ಕುಂಜದವರು ‘ದಕ್ಷಿಣಕನ್ನಡ ಜಿಲ್ಲೆಯ ಕನ್ನಡ’ ಎಂಬ ಉಪನ್ಯಾಸವನ್ನು ನೀಡಿದ್ದು, ‘‘ನವನೀತ’’ ಎಂಬ ಗ್ರಂಥದಲ್ಲಿ ಅದರ ವಿಸ್ತತರೂಪ ಮುದ್ರಣಗೊಂಡಿದೆ. ತುಳು, ಮಲೆಯಾಳ, ಕೊಂಕಣಿ ಭಾಷೆಗಳ ಪ್ರಭಾವ ಹೇಗೆ ದಕ್ಷಿಣಕನ್ನಡಿಗರ ಭಾಷೆಯ ಮೇಲೆ ಉಂಟಾಗಿದೆ ಎಂಬುದರ ಕುರಿತು ಅವರು ಅಲ್ಲಿ ವಿಸ್ತಾರವಾದ ಚರ್ಚೆಯನ್ನು ಮಾಡಿದ್ದಾರೆ. ಆ ಲೇಖನದ ಉದ್ದಕ್ಕೂ ಅವರು ಚರ್ಚಿಸಿದ ಸಂಗತಿಗಳು ಭಾಷಾವಿಜ್ಞಾನದ ಹಿನ್ನೆಲೆಯಲ್ಲಿ ಬಹುಮುಖ್ಯವಾದವುಗಳೆಂದು ಹೇಳಬಹುದು. ಲೇಖನವನ್ನು ಪರಿಸಮಾಪ್ತಿಗೊಳಿಸುತ್ತಾ ಅವರು ಹೇಳಿದ ಮಾತುಗಳು ಭಾಷಾಶುದ್ಧಿಯ ಬಗ್ಗೆ ತೆಕ್ಕುಂಜದವರ ಮನೋಗತವನ್ನು ಬಹುಪರಿಣಾಮಕಾರಿಯಾಗಿ ಹೇಳುತ್ತವೆ :

‘‘ಸಂಖ್ಯಾವಾಚಕಗಳನ್ನು ಮೂರು ನೂರು, ಹತ್ತೊಂಬತ್ನೂರು ಎನ್ನುವುದು ದಕ್ಷಿಣಕನ್ನಡದಲ್ಲಿಲ್ಲ. ಹಾಗೆಯೇ ಊಟಾ ಮಾಡು, ನೂರಾಹತ್ತು, ಎಂದು ಮುಂತಾಗಿಯೂ, ಬೊಂಬಾಯಿನಲ್ಲಿ, ಧಾರವಾಡಿನಲ್ಲಿ, ಮನೇನಲ್ಲಿ ಎಂದು ಮುಂತಾಗಿಯೂ ಸಹಜವಾಗಿ ಹೇಳುವುದಿಲ್ಲ; ಬರೆಯುವುದಿಲ್ಲ. ‘ಏಳಿದರೆ ಕೋಪಾ ಮಾಡ್ತಿ’ ಎಂದೋ, ‘ಜನತೆ ಹಾರಿಸಿದರೆ ಮಂತ್ರಿಯಾಗಬಹುದು’ ಎಂದೋ ದಕ್ಷಿಣಕನ್ನಡದವರಲ್ಲಿಲ್ಲ. ಬೇರೆ ಪ್ರದೇಶಗಳಿಂದ ಇಲ್ಲಿಗೆ ಬಂದು ನೆಲಸಿದವರಿಂದ ಇಂತಹ ರೂಪಾಂತರಗಳು ಬರುತ್ತವೆಯೋ ಏನೋ! ಇದೂ ಅಲ್ಲದೆ ಈಗೀಗ ಸಾಹಿತ್ಯದಲ್ಲಿ ವಾಸ್ತವಿಕತೆ ಇರಬೇಕು ಎಂಬೊಂದು ಕಾರಣವನ್ನು ಮುಂದೆ ಮಾಡಿ ಪ್ರಾದೇಶಿಕ ಭಾಷೆಗಳಲ್ಲಿ ಸಂವಾದಗಳನ್ನು ಕತೆ-ಕಾದಂಬರಿ-ನಾಟಕಗಳಲ್ಲಿ ತುರುಕುವುದ ರಿಂದಲೂ, ಆಂಗ್ಲ ಭಾಷೆಯ ಕೆಲಕೆಲವು ಶಬ್ದಗಳಿಗೆ ಸರಿಯಾದ ಕನ್ನಡ ಶಬ್ದಗಳಿಲ್ಲವೆಂಬ ಕಾರಣವನ್ನು ಮುಂದೆ ಮಾಡಿ ಕವನಗಳಲ್ಲಿಯೂ ವಿಮರ್ಶೆಗಳಲ್ಲಿಯೂ ಸ್ವಚ್ಛಂದವಾಗಿ ಅವುಗಳನ್ನು ಬಳಸುವುದರಿಂದಲೂ ದಕ್ಷಿಣಕನ್ನಡದ ಕನ್ನಡದಲ್ಲಿ ಹಿಂದಿದ್ದ ಶುದ್ಧತೆ ಇಂದು ಮಾಯವಾಗುತ್ತದೆಯೋ ಎಂದು ನನಗೆ ತೋರುತ್ತದೆ. ಉಳಿದವರಿಗೆ ಅದೇ ಸತ್ವಯುಕ್ತವಾದ ಭಾಷೆ ಎಂದು ಕಂಡರೆ ನನ್ನ ಅಭಿಪ್ರಾಯ ನನಗೆ, ಅವರ ಅಭಿಪ್ರಾಯ ಅವರಿಗೆ ಎಂದಷ್ಟೇ ಹೇಳಿ ವಿರಮಿಸುತ್ತೇನೆ.’’

ಇದು ತೆಕ್ಕುಂಜದವರ ನೇರವಾದ ಮಾತುಗಳಿಗೆ ಉದಾಹರಣೆ. ಆದರೆ ಅದರ ಹಿನ್ನೆಲೆಯಲ್ಲಿ ಅವರಿಗಿದ್ದ ಕಳಕಳಿ ಪ್ರಶ್ನಾತೀತವಾದುದು. ಕಾರ್ಕಳದಲ್ಲಿ ನಡೆದ ದ.ಕ. ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನದ ಸ್ಮ ೃತಿ ಸಂಪುಟ ‘‘ಬಾಸಿಗ’’ದಲ್ಲಿ ‘‘ಸಂಶೋಧನೆ ಮತ್ತು ವಿಮರ್ಶೆ’’ ಎಂಬ ಅವರ ಇನ್ನೊಂದು ಲೇಖನ ತೆಕ್ಕುಂಜದವರ ವಿಸ್ತಾರವಾದ ಓದಿಗೆ ಸಾಕ್ಷಿ. ಮುದ್ದಣ ಕವಿಯು ಮಂಗಳೂರಿನ ಸುವಾಸಿನಿ ಎಂಬ ಪತ್ರಿಕೆಯಲ್ಲಿ ಬರೆದ ‘ಜೋಗುಳ’ ಎಂಬ ಲೇಖನ, ತುಳುನಾಡಿನ ಪ್ರಾಚೀನ ಇತಿಹಾಸದ ಕುರಿತು ಗಣಪತಿ ರಾವ್, ಐಗಳ್, ಮಂಜೇಶ್ವರ ಗೋವಿಂದ ಪೈ, ಡಾ| ಪಿ. ಗುರುರಾಜ ಭಟ್, ಡಾ. ಕೆ.ವಿ. ರಮೇಶ್,
ಕೆ. ವೆಂಕಟರಾಯಾಚಾರ್ಯ ಮುಂತಾದವರ ಶೋಧನೆಗಳು, ಮುಳಿಯ ತಿಮ್ಮಪ್ಪಯ್ಯನವರು ಪಂಪ ಮತ್ತು ಪಾರ್ತಿಸುಬ್ಬನ ಕುರಿತಾಗಿ ಹೇಳಿದ ಹೊಸ ವಿಚಾರಗಳು, ಸೇಡಿಯಾಪು ಕೃಷ್ಣಭಟ್ಟರು ಭಾಷೆ ಮತ್ತು ಛಂದಸ್ಸಿನ ಕುರಿತು ಕೈಗೊಂಡ ಅಧ್ಯಯನಗಳು ಹೀಗೆ ಅನೇಕ ವಿಚಾರಗಳ ತಲಸ್ಪರ್ಶಿಯಾದ ಚಿಂತನ ಮಂಥನಗಳು ಇಲ್ಲಿ ಮೂಡಿಬಂದಿವೆ. ಈ ರೀತಿಯ ಸಂಶೋಧನ ವಿಚಾರಗಳ ಕುರಿತು ಅಭಿಮಾನ ಪೂರ್ವಕವಾಗಿ ಬರೆಯುತ್ತಲೇ ತೆಕ್ಕುಂಜದವರು ದಕ್ಷಿಣಕನ್ನಡಿಗರ ವಿಮರ್ಶಾ ಪ್ರವೃತ್ತಿಯನ್ನು ಎತ್ತಿಹಿಡಿದಿದ್ದಾರೆ. ರತ್ನಾಕರವರ್ಣಿಯು ಹೇಳಿದ ‘ಸಕಲ ಲಕ್ಷಣಕ್ಕಾಗಿ ಬಿರುಸು ಮಾಡಿದರೆ ಪುಸ್ತಕದ ಬದನೆಕಾಯಹುದು’ ಎಂಬ ಮಾತು, ಮುದ್ದಣ ಮತ್ತು ಮನೋರಮೆಯರ ಸಲ್ಲಾಪದಲ್ಲಿ ಮೂಡಿದ ಕಾವ್ಯ ವಿಮರ್ಶನ ತತ್ತ್ವಗಳು, ಗೋವಿಂದ ಪೈಗಳ ಕವಿ ಮತ್ತು ವಿಮರ್ಶಕ ಎಂಬ ಕವನ ಹೀಗೆ ಕವಿಗಳು ಹೇಳಿದ ಮಾತುಗಳು ಕಾವ್ಯಮೀಮಾಂಸೆಯ ತಳಹದಿಗಳೆಂಬುದನ್ನು ಅವರು ಗ್ರಹಿಸುತ್ತಾರೆ. ಕನ್ನಡ ಸಾರಸ್ವತ ಲೋಕದಲ್ಲಿ ಚಿಗುರುತ್ತಿರುವ ಪ್ರಾಯೋಗಿಕ ವಿಮರ್ಶೆಯ ಕುರಿತೂ ಅವರು ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ.

‘ಪಂಜೆಯವರ ಸಂಶೋಧನ ಸಾಹಿತ್ಯ’ ಎಂಬ ಲೇಖನವೊಂದರಲ್ಲಿ ತೆಕ್ಕುಂಜದವರ ವಸ್ತುನಿಷ್ಠವಾದ ವಿವೇಚನೆಯಿದೆ : ಪಂಜೆ ಮಂಗೇಶರಾಯರು ಬರೆದ ಮೂಡಬಿದಿರೆಯ ಹೊಸ ಬಸದಿಯ ಶಿಲಾ ಶಾಸನಗಳು, ಬಿಳಿಗಿಯ ಕೆಲವು ಶಾಸನಗಳು, ಪದಾರ್ಥವೇನು? ಮತ್ತು ಸ್ಥಳನಾಮಗಳೆಂಬ ನಾಲ್ಕು ಲೇಖನಗಳ ಕುರಿತು ಬರೆಯುತ್ತಾ ತೆಕ್ಕುಂಜದವರು ಪಂಜೆಯವರ ಸಂಶೋಧನ ಮುಖವನ್ನು ತೋರಿಸಿಕೊಟ್ಟಿದ್ದಾರೆ : ಹೊಸ ಬಸದಿಗೆ ‘ಸೆಟ್ಟಿಬಸದಿ’ ಎಂಬ ಹೆಸರು ಬಂದ ವಿಚಾರ, ಸಾಳ್ವ ಶಬ್ದದ ಮೂಲ ‘ಚೆಲುವ’ವಾಗಿರ ಬೇಕೆಂಬ ಊಹೆ; ಭೈರವ ಎಂಬ ಜೈನ ಹೆಸರಿನ ಮೂಲರೂಪ ‘ಬಯ್ಯರಸು’ ಎಂದಿರಬೇಕೆಂಬ ಜಿಜ್ಞಾಸೆ ಮುಂತಾದವುಗಳನ್ನು ಎತ್ತಿ ತೋರಿಸಿದ್ದಾರೆ. ತೆಕ್ಕುಂಜದವರ ತೀರ್ಥರೂಪರಾದ ಶ್ರೀ ತೆಕ್ಕುಂಜ ಶಂಕರಭಟ್ಟ ಸ್ಮಾರಕ ಗ್ರಂಥ ಗುರುದಕ್ಷಿಣೆಯಲ್ಲಿ ತಮ್ಮ ತಂದೆಯವರ ಕುರಿತು ಬರೆದ ಸತ್ವಸಿದ್ಧಿ ಎಂಬ ಲೇಖನವೂ ಗಮನಾರ್ಹವಾದುದು. ತೆಕ್ಕುಂಜ ಮನೆತನದ ಬಗೆಗೂ ಇಲ್ಲಿ ಮಾಹಿತಿಗಳು ದೊರೆಯುತ್ತವೆ. (ಈ ಗ್ರಂಥದಲ್ಲಿ ದೊರೆತ ತೆಕ್ಕುಂಜದವರ ವಂಶವೃಕ್ಷವನ್ನು ಈ ಪುಸ್ತಕದಲ್ಲಿ  ನೀಡಲಾಗಿದೆ.)

ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯವರು ಪ್ರಕಟಿಸಿದ ‘ಕನ್ನಡ ಛಂದಸ್ಸಿನ ಚರಿತ್ರೆ’ಯ ಮೊದಲನೆಯ ಸಂಪುಟದಲ್ಲಿ ಪ್ರೊ. ತೆಕ್ಕುಂಜೆಯವರು ಬರೆದ ದೀರ್ಘವಾದ ಸಮೀಕ್ಷಾತ್ಮಕ ಲೇಖನವಿದೆ. ‘ಕನ್ನಡ ಸಾಹಿತ್ಯದಲ್ಲಿ ಸಮ, ಅರ್ಧ ಸಮ ವೃತ್ತಗಳು: ಲಕ್ಷಣ, ಪ್ರಯೋಗ, ಪ್ರಾಚುರ್ಯ’ ಎಂಬ ಈ ಲೇಖನವು ಅವರ ಛಂದೋಗ್ರಂಥಗಳ ಅಧ್ಯಯನದ ವಿಸ್ತಾರವನ್ನು ತಿಳಿಸಿ ಹೇಳುವಂತಹದು. ವ್ಯಾಕರಣವಿರಲಿ, ಭಾಷಾವಿಜ್ಞಾನವಿರಲಿ, ಛಂದಸ್ಸಿರಲಿ – ಶಾಸ್ತ್ರಗಳು. ಪ್ರೊ. ತೆಕ್ಕುಂಜದವರ ಮುಖ್ಯವಾದ ಒಲವು ಶಾಸ್ತ್ರ ವಿಚಾರಗಳ ಬಗೆಗೇ ಇತ್ತೆಂಬುದನ್ನು ನಾನು ಸ್ಪಷ್ಪವಾಗಿ ಗಮನಿಸುವಂತಿದೆ.

ಟಿಪ್ಪಣಿ ಸಾರಸಮೇತ ಶ್ರೀ ರಾಮಾಶ್ವಮೇಧಂ (1972)

ತೆಕ್ಕುಂಜದವರ ವೈದುಷ್ಯಕ್ಕೆ ಕಿರೀಟ ಪ್ರಾಯವಾದುದೆಂದರೆ ಮುದ್ದಣ ಕವಿ ರಚಿಸಿದ ಶ್ರೀ ರಾಮಾಶ್ವಮೇಧಕ್ಕೆ ಇವರು ಬರೆದ ಟಿಪ್ಪಣಿ. ಶಬ್ದಾರ್ಥನಿರ್ವಚನ ನಿಪುಣರಾಗಿದ್ದ ತೆಕ್ಕುಂಜದವರನ್ನು ಮುದ್ದಣನ ಕವಿತ್ವಕ್ಕಿಂತಲೂ ಹೆಚ್ಚಾಗಿ ಅವನ ಶಬ್ದ ಸಂಪತ್ತು ಆಕರ್ಷಿಸಿರಬೇಕೆಂಬ ಮಾತಿನಲ್ಲಿ ಸತ್ಯವಿದೆ. ಮಹಾಕವಿ ಕಾಳಿದಾಸನ ಕಾವ್ಯಸ್ವಾರಸ್ಯವನ್ನು ಸವಿಯಬೇಕಾದರೆ ಮಲ್ಲಿನಾಥನ ವ್ಯಾಖ್ಯೆ ಹೇಗೆ ಸಹಕಾರಿಯೋ ಹಾಗೆ ತೆಕ್ಕುಂಜದವರ ಟಿಪ್ಪಣಿ ಇಲ್ಲದಿರುತ್ತಿದ್ದರೆ ಮುದ್ದಣ ಕವಿಯ ಕಾವ್ಯಾರ್ಥ ಚಿಂತನ ಕನ್ನಡಿಗರಿಗೆ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ತೆಕ್ಕುಂಜದವರನ್ನು ‘ಮುದ್ದಣನಿಗೆ ದೊರೆತ ಮಲ್ಲಿನಾಥ’ ಎಂದೇ ಕನ್ನಡ ಕಾವ್ಯಲೋಕ ಗುರುತಿಸಿದೆ. ಶ್ರೀ ರಾಮಾಶ್ವಮೇಧದ ವಿವಿಧ ಪಾಠಾಂತರಗಳ ಬಗೆಗೆ ಆಮೂಲಾಗ್ರ ವಿವೇಚನೆ ನಡೆಸಿ ಶುದ್ಧ ಪಾಠ ನಿರ್ಣಯ ಮಾಡಿದ ಗ್ರಂಥ ಸಂಪಾದನ ವೈದುಷ್ಯ, ಮುದ್ದಣನು ಬಳಸಿದ ವಿವಿಧ ನುಡಿಗಟ್ಟುಗಳ ಅರ್ಥಸ್ವಾರಸ್ಯವನ್ನು ತಿಳಿಸಿದ ವಿಮರ್ಶ ಕೌಶಲ ಮತ್ತು ಮುದ್ದಣ ಪದಪ್ರಯೋಗದ ಹಿನ್ನಲೆಯಲ್ಲಿ ಕನ್ನಡದ ಕೆಲವು ಪ್ರಯೋಗಗಳ ಅಸಾಧುತ್ವವನ್ನು ಅನಾವರಣಗೈದ ಭಾಷಾ ಚಿಕಿತ್ಸಕ ದೃಷ್ಟಿ – ಈ ಮೂರು ಪ್ರತಿಭಾ ವಿಶೇಷಗಳು ತೆಕ್ಕುಂಜದವರಲ್ಲಿ ಮುಪ್ಪುರಿಗೊಂಡಿವೆ ಎಂದು ಹೆಮ್ಮೆಯಿಂದ ಹೇಳಬಹುದು.

ಮುದ್ದಣನು ಬಳಸಿದ ಅನೇಕ ದೇಶೀ ಶಬ್ದಗಳಿಗೆ ಸೂಕ್ತವಾದ ಅರ್ಥವನ್ನು ಗ್ರಹಿಸುವಲ್ಲಿ ಕನ್ನಡದ ವಿಮರ್ಶಕರು ಎಡವಿದಾಗ ತೆಕ್ಕುಂಜದವರ ನಿರ್ಣಯ ಅವರನ್ನು ಕೈಹಿಡಿದು ನಡೆಸಿತು. ‘‘ಕೊಡನ ಮರಿ’’ ಎಂಬುದು ಘಟಸರ್ಪ ಎಂಬುದರ ಅನುವಾದ ವೆಂದು ತೆಕ್ಕುಂಜದವರು ಹೇಳಿದರು. ಕಾವ್ಯಾಲಯ ಪ್ರತಿಯ ಮೊದಲನೆಯ ಮುದ್ರಣದಲ್ಲಿ ಅರ್ಥಕೋಶದಲ್ಲಿ ಅದಕ್ಕೆ ‘ಜೇನಿನ ಮರಿ’ ಎಂಬರ್ಥವನ್ನು ನೀಡಲಾಗಿದೆ. ಅಶುದ್ಧಪಾಠ ದಿಂದ ಅರ್ಥಗ್ರಹಣಕ್ಕೆ ಎಷ್ಟು ತೊಂದರೆಯಾಗುತ್ತದೆ ಎಂಬುದು ಇದರಿಂದ ತಿಳಿಯುತ್ತದೆ. ಹೀಗೆಯೇ ಮರ್ಬಿಗ (ತಾಮಸಿಗ), ಅಣಿಗಟ್ಟು (ಸಿದ್ಧತೆ), ಆರವ (ವರುಣ), ಎತ್ತು (ತಲುಪು), ಸುಂಟಿಗೆ (ಹೃದಯ ಮಾಂಸ) ಮುಂತಾದ ಅನೇಕ ಶಬ್ದಗಳಿಗೆ ತೆಕ್ಕುಂಜದವರ ಪರಿಶ್ರಮದಿಂದ ನಿಜಾರ್ಥ ಪ್ರಾಪ್ತಿಯಾಗಿದೆ. ತುಳು ಭಾಷಾ ಪರಿಸರದ ಹಲವಾರು ಶಬ್ದಗಳನ್ನು ಮುದ್ದಣನು ಬಳಸಿರಬಹುದಾದ ಸಾಧ್ಯತೆ ಇರುವುದರಿಂದ ಅವುಗಳಿಗೆ ಆ ಪ್ರಾದೇಶಿಕ ಹಿನ್ನಲೆಯ ಅರ್ಥವನ್ನು ಶೋದಿಸಿರುವುದು ತೆಕ್ಕುಂಜದವರ ಹಿರಿಮೆ. ಕಳಿಕೆ (ಕಳ್ಳಿಗೆ-ಕಡಿಗೆ), ಬಕ್ಕೆಹಲಸು (ತುಳುವವಲ್ಲದ ಹಲಸು), ಕಪ್ಪುರವಾಳೆ (ಗಾಳಿಬಾರೆ), ಕುರುಂಬುಲ್ (ಕಳೆಹುಲ್ಲು), ಪೊಲಿ (ಧಾನ್ಯ ಸಮೃದ್ಧಿ), ಸೊಯ (ಎಚ್ಚರ), ಕೆಲೆ (ಸೊಕ್ಕಿನಿಂದ ಕೂಗು), ಮಯ್ (ಕಾಡಿಗೆ) ಮುಂತಾದ ಶಬ್ದಾರ್ಥ ನಿರ್ಣಯದಲ್ಲಿ ತುಳುಭಾಷೆಯ ಪ್ರಯೋಗಗಳನ್ನು ಆಧರಿಸಿದುದು ಸ್ಪಷ್ಟವಾಗಿ ಕಂಡುಬರುತ್ತದೆ.

ಸುಬಾಹುವಿನ ಮಗನಾದ ದಮನನಿಗೂ, ಭರತನ ಮಗನಾದ ಪುಷ್ಕಲನಿಗೂ ರಣರಂಗದಲ್ಲಿ ನಡೆಯುವ ಸಂವಾದ ಸ್ವಾರಸ್ಯದಿಂದ ಕೂಡಿದೆ – ‘ನೀ ಪಡೆಯನಲ್ತೊಡೆಯಂ ಮುರಿವಯ್; ಭಟನಲ್ತು ಭಟ್ಟಂ, ಕೊಂಡುದು ಬಿಲ್ಲಲ್ತು ಪುಲ್ಲುಂ, ಬಂದುದು ಕಾಳೆಗದ ಮನೆಗಲ್ತು ಮಾಳೆಯದ ಮನೆಗೆ’ ಇದು ಯಕ್ಷಗಾನದಲ್ಲಿಯ ಯುದ್ಧ ದೃಶ್ಯದಲ್ಲಿ ಇಬ್ಬರು ವೀರರು ನಡೆಸುವ ವಾಗ್ಯುದ್ಧವೇ ಆಗಿದೆ. ಕಾವ್ಯಾಲಯ ಪ್ರತಿಯಲ್ಲಿ ‘ಪಡೆಯೆನಲ್ ತೊಡೆಯಂ ಮುರಿವಯ್’ ಎಂಬ ಅಪಪಾಠವನ್ನು ಅಂಗೀಕರಿಸಲಾಗಿದೆ. ಇದನ್ನು ‘ಪಡೆಯನಲ್ತು, ಒಡೆಯಂ ಮುರಿವಯ್’ ಎಂದು ಅರ್ಥವಿಸಬೇಕೆಂದು ತೆಕ್ಕುಂಜದವರ ಸೂಚನೆ. ಒಡೆಯನ್ನು ಮುರಿಯುವವನು ಭಟನಲ್ಲ, ಭಟ್ಟನೆಂದೂ, ಹಿಡಿದುಕೊಂಡಿದ್ದು ಬಿಲ್ಲಲ್ಲ, ದರ್ಭೆಯ ಹುಲ್ಲೆಂದೂ, ಬಂದುದು ಕಾಳಗದ ಮೊನೆಗಲ್ಲ, ಮಹಾಲಯದ ಮನೆಗೆಂದೂ ಹೇಳಿದಾಗ ಸ್ವಾರಸ್ಯವನ್ನು ಸವಿಯಬಹುದಾಗಿದೆ.

‘ಮೆರೆರ್ದೆ’ಯ ಅರ್ಥವಿವಕ್ಷೆಯಲ್ಲಿರುವ ಪೌರಾಣಿಕ ಜ್ಞಾನ, ‘ಕೊಂಡ’ ಎಂಬ ಶಿವ ಪ್ರಮಥ ಗಣಕ್ಕೆ ಶೃಂಗಿ ಎಂದರ್ಥವೆನ್ನುವ ಅರ್ಥಾನ್ವೇಷಣೆ, ಇತ್ತೀಚಿನ ಕನ್ನಡದಲ್ಲಿ ಕಂಡುಬರುವ ಅಡಿಕೆ, ಎರಡನೇ, ಇರ್ವಗೆ, ತುತ್ತತುದಿ, ನಾಯಕಿ ಮುಂತಾದ ಶಬ್ದಗಳಲ್ಲಿಯ ಅಸಾಧುತ್ವ ಇತ್ಯಾದಿಗಳು ತೆಕ್ಕುಂಜದವರ ಪಾಂಡಿತ್ಯದರ್ಶನಕ್ಕೆ ಸಾಕ್ಷಿ. ಮುದ್ದಣ ಕೃತಿಯಲ್ಲಿ ವಿಮರ್ಶಕರಿಗೆ ವ್ಯಕ್ತವಾಗದ ಅನೇಕ ಧ್ವನಿ ಅಲಂಕಾರ ವಿಶೇಷಗಳನ್ನು ತೆಕ್ಕುಂಜದವರು ಎತ್ತಿತೋರಿಸಿದ್ದಾರೆ. ಪದ್ಯಗಂದಿಯಾದ ಗದ್ಯಗರ್ಭದೊಳಗೆ ಅಡಗಿ ಕುಳಿತ ಅನೇಕ ಕಂದ ಪದ್ಯಗಳನ್ನು ಹುಡುಕಿ ತೆಗೆದಿರುವುದೂ ಅವರ ಸಂಶೋಧನಶಕ್ತಿಗೆ ನಿದರ್ಶನ. ಶ್ರೀರಾಮಾಶ್ವಮೇಧದ ಕೊನೆಯ ಆಶ್ವಾಸದ ಮೊದಲಲ್ಲಿ ಮನೋರಮೆಯನ್ನು ಸಂಬೋದಿಸುವ ರೀತಿಗೆ ತೆಕ್ಕುಂಜದವರ ಭಾಷ್ಯ ಗಮನಾರ್ಹವಾದುದು.

ರಾಮಾಬಿರಾಮೆ! ಸುಗ್ರೀವೆ! ನೀಲಕುಂತಳೆ! ಕುಮುದನಯನೆ! ಪದ್ಮಗಂದಿ! ಕೇಸರಿ ಮಧ್ಯೆ! ಅಂಗದ ವಿರಾಜಿತೆ!

ಸಂಬೋಧನೆಯಲ್ಲಿ ರಾಮನ ಹೆಸರೂ, ರಾಮನಕಡೆಯ ಕಪಿವೀರರ ಹೆಸರುಗಳೂ ಸೇರಿಕೊಂಡಿವೆ. ರಾಮಾಯಣದ ಕಥೆಯಾದುದರಿಂದ ಈ ಮಾತು ಬಂದಿದೆಯೆನ್ನ ಬಹುದಾದರೂ ಮನೋರಮೆಯನ್ನು ಹಾಸ್ಯ ಮಾಡುವುದಕ್ಕಾಗಿ ಈ ರೀತಿ ಪ್ರಯೋಗಿಸಿದ್ದಾ ನೆಂದು ತೋರುತ್ತದೆ. ಹಿಂದೆ ಹನ್ನೊಂದನೆಯ ಆಶ್ವಾಸದಲ್ಲಿ ಮನೋರಮೆಯನ್ನು ರತಿಂಯೆಂದು ಆರೋಪಿಸಿ ವರ್ಣಿಸಿದಲ್ಲಿ ‘‘ಮಲೆನಾಡಿಗನೊಂದು ಭಂಗಿಯ ಮೊಗಂ’’ ಎಂದಿದ್ದಾನಷ್ಟೆ. ಆ ಮಾತನ್ನು ಸಮರ್ಥಿಸುವುದಕ್ಕಾಗಿಯೇ ಎಂಬಂತೆ ಇಲ್ಲಿ ಆಕೆಯ ವರ್ಣನೆಯಲ್ಲಿ ಕಪಿಗಳ ಹೆಸರನ್ನೇ ಹೆಚ್ಚಾಗಿ ತಂದಿದ್ದಾನೆ. ಹಿಂದೆ ಮನೋರಮೆ ಮುದ್ದಣನನ್ನು ‘‘ಅಂತಪ್ಪ ದೇವರೊಲ್ಮೆವಡೆದ ಮಲೆನಾಡ ಪೆಣ್ಗಳ್ ಕಣ್ಗೆ ಚೆಲ್ವೆಯರಾದರಕ್ಕುಂ’’ ಎಂದು ಆಕ್ಷೇಪಿಸಿದಂತೆ, ಇಲ್ಲಿ ಆಕ್ಷೇಪಿಸುವುದಕ್ಕೆ ಹೊಳೆಯಲಿಲ್ಲವೇ ಅಥವಾ ಮಾತನ್ನು ಗಮನಿಸಲಿಲ್ಲವೇ – ಹೇಳುವಂತಿಲ್ಲ.

ಹೀಗೆ ಶ್ರೀ ರಾಮಾಶ್ವಮೇಧಕ್ಕೆ ತೆಕ್ಕುಂಜದವರು ಬಹುಮುಖವಾದ ವ್ಯಾಖ್ಯಾನವನ್ನು ನೀಡಿ ಅದನ್ನು ಸಾರಸ್ವತ ಲೋಕಕ್ಕೆ ಉಣಬಡಿಸಿದ್ದಾರೆ. ಮುದ್ದಣನ ಶ್ರೀ ರಾಮಾಶ್ವಮೇಧದ ಯಜ್ಞಾಶ್ವ ತೆಕ್ಕುಂಜದವರ ಬೆಂಗಾವಲಿನಲ್ಲಿ ಸುರಕ್ಷಿತವಾಗಿದೆ. ಮುದ್ದಣ ಕಾವ್ಯವನ್ನು ಹೊಸ ದೃಷ್ಟಿಯಿಂದ ಆಸ್ವಾದಿಸುವುದಕ್ಕೆ ತೆಕ್ಕುಂಜದವರ ಭಾಷ್ಯ ನೆರವಾಗಿದೆ. 2006ರಲ್ಲಿ ಟಿಪ್ಪಣಿ ಸಾರಸಮೇತವಾದ ‘‘ಶ್ರೀ ರಾಮಾಶ್ವಮೇಧಂ’’ ಮುದ್ದಣ ಪ್ರಕಾಶನ, ಮಂಗಳೂರು ಇವರಿಂದ ಪುನರ್ ಮುದ್ರಣಗೊಂಡಿದೆ.

ಧರೆಯರಿಯೆ ಜೀವರಾಶಿಗೆ
ಪಿರಿಯಂ ನರನಾದಮಾದನಾತ್ಮಂ ತನ್ನೊಳ್‌|
ದೊರೆಕೊಂಡಿರ್ಪಿನಮಂತದು
ಪರಿನಿರ್ಮಲಮಾಗೆ ಪೆರ್ಮೆಯಿರ್ಮೆಯ್ವಡೆಗುಂ||

‘‘ಲೋಕವು ತಿಳಿಯುವಂತೆ ಎಲ್ಲ ಜೀವಿಗಳಲ್ಲಿ ಮನುಷ್ಯನು ತನ್ನಲ್ಲಿ ವಿವೇಚನಾಶಕ್ತಿ (ಆತ್ಮಂ) ಇರುವುದರಿಂದ ಶ್ರೇಷ್ಠನೆನ್ನಿಸಿದ್ದಾನೆ; ಆ ಬುದ್ಧಿ (ವಿವೇಚನಾ ಶಕ್ತಿ) ಅತ್ಯಂತ ನಿರ್ಮಲವಾಗಿದ್ದಲ್ಲಿ ಅವನ ಮಹತ್ತ್ವವು ಇಮ್ಮಡಿಯಾಗುತ್ತದೆ.’’

ಇಲ್ಲಿ ‘ಆತ್ಮ’ ಎಂಬ ಶಬ್ದಕ್ಕೆ ಸಮರ್ಪಕವಾದ ಅರ್ಥವನ್ನು ಹೇಳಿದ ಕೀರ್ತಿ ತೆಕ್ಕುಂಜದವರಿಗೆ ಸಲ್ಲುತ್ತದೆ. ಈ ಶಬ್ದಕ್ಕೆ Soul ಎಂಬ ಅರ್ಥವು ಸರಿ ಹೊಂದುವುದಿಲ್ಲ ವೆಂಬುದು ಅವರ ಕಾಣ್ಕೆ. ಆತ್ಮವು ಎಲ್ಲ ಜೀವರಾಶಿಗಳಿಗೂ ಇರುವುದರಿಂದ ತೆಕ್ಕುಂಜದವರು ಅದಕ್ಕೆ ‘ವಿವೇಚನಾಶಕ್ತಿ’ ಎಂಬ ಅರ್ಥವನ್ನು ಹೇಳಿದ್ದಾರೆ. ಇತರ ಜೀವರಾಶಿಗಳಿಂದ ಮನುಷ್ಯನು ಶ್ರೇಷ್ಠನಾಗಿರುವುದರಿಂದ ಈ ಅರ್ಥ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಸೇಡಿಯಾಪು ಕೃಷ್ಣಭಟ್ಟರಂತಹ ವಿದ್ವಾಂಸರೂ ಈ ವಿನೂತನ ಅರ್ಥ ಶೋಧಕ್ಕಾಗಿ ಮೆಚ್ಚುಗೆಯ ಮಾತನ್ನಾಡಿದ್ದಾರೆ.

ಟಿಪ್ಪಣಿ ಸಾರ ಸಮೇತ ಮುದ್ದಣನ ರಾಮಾಶ್ವಮೇಧದ ಸಂಬಂಧದಲ್ಲಿ ಒಂದಿಷ್ಟು ಸೇವೆ ಮಾಡುವ ಸದವಕಾಶ ಪ್ರಸ್ತುತ ಲೇಖಕನಿಗೂ ಲಬಿಸಿರುತ್ತದೆ. ನಾನು ಮುದ್ದಣನ ಜನ್ಮಸ್ಥಾನವಾದ ನಂದಳಿಕೆಯವನಾದುದರಿಂದ ನನಗೆ ಸಹಜವಾಗಿ ಮುದ್ದಣನ ಮೇಲೆ ಗೌರವ. ಕವಿ ಮುದ್ದಣನ ಹೆಸರಿನಲ್ಲಿ ನಾವು ಹಲವರು ಸೇರಿಕೊಂಡು ಹಲವು ರೀತಿಗಳ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದುಂಟು. ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು ಶ್ರೀರಾಮಾಶ್ವಮೇಧಕ್ಕೆ ವ್ಯಾಖ್ಯಾನ ಬರೆದು ಮುದ್ದಣನ ಸೇವೆ ಮಾಡಿದವರು. ಈ ಕೃತಿ ಪ್ರಕಟಗೊಂಡುದು 1972ರಲ್ಲಿ. ಪ್ರತಿಗಳು ಮುಗಿದುಹೋಗಿ ಬಹಳ ವರ್ಷಗಳಿಂದ ಆ ಗ್ರಂಥವು ಅಧ್ಯಯನಕ್ಕೆ ಅಲಭ್ಯವಾಗಿತ್ತು. ಅವಶ್ಯವಿದ್ದಲ್ಲಿ ಆ ಟಿಪ್ಪಣಿಗಳಿಗೆ ಹೊಸ ವಿಷಯಗಳನ್ನೂ, ಹೆಚ್ಚುವರಿ ಮಾಹಿತಿಗಳನ್ನೂ ಸೇರಿಸಿ ಆ ಪ್ರತಿಯನ್ನು ಸಂಪಾದಿಸಿಕೊಡುವಂತೆ ನಾನು ಪ್ರಸ್ತುತ ಕನ್ನಡ ವಿದ್ವಾಂಸರೊಳಗೆ ಗುರುತಿಸಲ್ಪಟ್ಟಿರುವ ಪ್ರೊ. ಪಾದೇಕಲ್ಲು ವಿಷ್ಣು ಭಟ್ಟರನ್ನು ಕೇಳಿಕೊಂಡೆ. ಅವರು ಆ ಪ್ರಕಾರ ಅದನ್ನು ಸಿದ್ಧಪಡಿಸಿ ಮುದ್ರಣದ ಕರಡಚ್ಚು ಗಳನ್ನು ತಿದ್ದಿ ವ್ಯವಸ್ಥೆ ಮಾಡಿದರು. ಕೃತಿಯನ್ನು ನನ್ನ ನೇತೃತ್ವದ ‘ಮುದ್ದಣ ಪ್ರಕಾಶನ’ದಿಂದ ಹೊರತಂದೆ. ಈ ಕೃತಿಯ ಬಿಡುಗಡೆಯು 2006ರಲ್ಲಿ ಅಮೇರಿಕದಲ್ಲಿ ನಡೆದ ‘ಅಕ್ಕ’ ಕನ್ನಡಿಗರ ಸಮ್ಮೇಳನದಲ್ಲಿ ನಡೆಯಿತು. ಇದರಿಂದಾಗಿ ಮುದ್ದಣನ ಹೆಸರಿನೊಂದಿಗೆ ಪ್ರೊ. ತೆಕ್ಕುಂಜ ಗೋಪಾಲಕೃಷ್ಣ ಭಟ್ಟರ ಹೆಸರೂ ಅಲ್ಲಿ ಪ್ರಸಿದ್ಧಿ ಪಡೆಯುವಂತಾಯಿತು. ಆ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ನನಗೂ ದೊರೆತುದು ನನ್ನ ಭಾಗ್ಯವಿಶೇಷವಾಗಿದೆ. ಇದು ಮುದ್ದಣ ಮತ್ತು ತೆಕ್ಕುಂಜ ಅವರು ನನಗೆ ನೀಡಿದ ಆಶೀರ್ವಾದ ಬಲದಿಂದ ಆಯಿತೆಂದು ನಾನು ಭಾವಿಸುತ್ತೇನೆ.

ಕೇಶಿರಾಜ ದರ್ಪಣ (1999)

ಕೇಶಿರಾಜನ ಶಬ್ದಮಣಿದರ್ಪಣದ ನಿರಂತರ ಅಧ್ಯಯನವನ್ನು ಒಂದು ವ್ರತವನ್ನಾಗಿ ತೆಕ್ಕುಂಜದವರು ಸ್ವೀಕರಿಸಿದ್ದರು. ಅದಕ್ಕೊಂದು ವಿಸ್ತಾರವಾದ ಭಾಷ್ಯವನ್ನು ಬರೆಯುವ ಕಾಯಕವನ್ನು ತಮ್ಮ ಜೀವನದ ಸಂಧ್ಯೆಯವರೆಗೂ ಮುಂದುವರಿಸಿಕೊಂಡು ಬಂದಿದ್ದರು. ಹಸ್ತಪ್ರತಿಯಲ್ಲಿ 684 ಪುಟಗಳಷ್ಟು ವಿಸ್ತಾರವಾಗಿರುವ ಈ ವ್ಯಾಖ್ಯಾನ ಗ್ರಂಥ ಅವರು ಗತಿಸಿ ಹೋಗಿ ಮೂರು ದಶಕಗಳು ಉರುಳಿದ ಮೇಲೆ ಪ್ರಕಟಗೊಂಡಿತು. ಶಬ್ದಮಣಿದರ್ಪಣಕ್ಕೆ ಹಲವರು ವ್ಯಾಖ್ಯಾನ ವಿವರಣೆಗಳನ್ನು ಬರೆದಿದ್ದರೂ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರ ವ್ಯಾಖ್ಯಾನಕ್ಕೆ ಅದರದೇ ಆದ ಸ್ಥಾನವಿದೆ. ತೆಕ್ಕುಂಜದವರು ಹಳಗನ್ನಡ ಭಾಷೆ-ವ್ಯಾಕರಣ ಇತ್ಯಾದಿಗಳ ಕುರಿತು ಆಳವಾಗಿ ಚಿಂತಿಸಿದ ಪರಿಯೇನೆಂಬುದು ಅವರ ಈ ವ್ಯಾಖ್ಯಾನ ಗ್ರಂಥದಿಂದ ತಿಳಿಯುತ್ತದೆ. ಈ ಕೃತಿಯನ್ನು ಅವರು ಸುಮಾರು 1977-80ರ ಅವಧಿಯಲ್ಲಿ ಬರೆದರು. ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಿಂದ ನಿವೃತ್ತರಾದ ನಂತರ ಅವರು ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವಾಗಿದ್ದ ಮಂಗಳಗಂಗೋತ್ರಿಯಲ್ಲಿ ಯು.ಜಿ.ಸಿ. ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಅವಧಿಯಲ್ಲಿ ಅವರು ಈ ವ್ಯಾಖ್ಯಾನ ರಚನೆಯನ್ನು ಮುಖ್ಯ ಕಾರ್ಯವಾಗಿಸಿಕೊಂಡರು.

ತೆಕ್ಕುಂಜ ಗೋಪಾಲಕೃಷ್ಣ ಭಟ್ಟರಿಗೆ ‘ಹವೀಕ ಕನ್ನಡ’ ಮನೆಮಾತಾಗಿತ್ತು. ಪರಿಸರದ ಭಾಷೆಯಾದುದರಿಂದ ತುಳು ತಿಳಿದಿತ್ತು. ಸಂಸ್ಕೃತವು ಅಧ್ಯಯನದಿಂದ ಅವಗತವಾಗಿತ್ತು. ಕಾಲೇಜಿನ ಕಾರಣದಿಂದ ಹಿಂದಿಯ ಪರಿಚಯವಿತ್ತು. ಮಲಯಾಳದ ಸಾಮಾನ್ಯ ಪರಿಚಯ ವಿತ್ತು. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಪ್ರೊ. ಕೃಷ್ಣಮೂರ್ತಿಯಂತಹವರ ಸಾಮೀಪ್ಯ ದಿಂದಾಗಿ ತಮಿಳಿನ ಪರಿಚಯವಾಗಿತ್ತು. ವಾಸಿಸುತ್ತಿದ್ದುದೂ ಕೆಲಸ ಮಾಡುತ್ತಿದ್ದುದೂ ಸಾಕಷ್ಟು ಸಂಖ್ಯೆಯ ಕೊಂಕಣಿಯವರಿರುತ್ತಿದ್ದ ಪರಿಸರದಲ್ಲಾದುದರಿಂದ ಅದೂ ತಿಳಿದಿತ್ತು. ಹೀಗೆ ಬಹುಭಾಷಾಬಿಜ್ಞತೆ ಇದ್ದುದರಿಂದ ಹಳಗನ್ನಡದ ವ್ಯಾಕರಣದ ವ್ಯಾಖ್ಯಾನ ರಚನೆ ಅವರಿಂದ ಸಾಧ್ಯವಾಯಿತು.

ಈ ವ್ಯಾಖ್ಯಾನವನ್ನು ಬರೆಯುವಾಗ ಪ್ರೊ. ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು  ಸೇಡಿಯಾಪು ಕೃಷ್ಣ ಭಟ್ಟರೊಂದಿಗೆ ಆಗಾಗ ಚರ್ಚಿಸುತ್ತಿದ್ದರು. ಸೇಡಿಯಾಪು ಅವರು ಆಗ ಮಣಿಪಾಲದಲ್ಲಿ ನೆಲೆಸಿದ್ದರು. ಅವರಿಗೆ ಪತ್ರ ಬರೆದು ತೆಕ್ಕುಂಜದವರು ಸಂದೇಹಗಳನ್ನು ಪರಿಹಾರ ಮಾಡಿಕೊಳ್ಳುತ್ತಿದ್ದರು.

ಈ ವಾಖ್ಯಾನ ರಚನೆಯನ್ನು ಮಾಡುತ್ತಿದ್ದಾಗ ತೆಕ್ಕುಂಜದವರು ತಮ್ಮ ಆತ್ಮೀಯ ರೊಬ್ಬರಿಗೆ ಬರೆದ ಪತ್ರದಲ್ಲಿ ಹೀಗಿದೆ :

‘‘ಶಬ್ದಮಣಿದರ್ಪಣದ ಬಹ್ವಂಶ ಮುಗಿದ ಲೆಕ್ಕವೇ. ಆದರೆ ಉಳಿದ ಅಂಶವನ್ನು ಬರೆಯಲು ಇನ್ನೂ ಸ್ವಲ್ಪ ಕಾಲಾವಕಾಶ ಬೇಕು. ಶುದ್ಧಪ್ರತಿ ಮಾಡಿ ಟೈಪ್ ಮಾಡಿಸಲು ಮತ್ತು ಸ್ವಲ್ಪ ಸಮಯ ಬೇಕು. ಆ ಪ್ರತಿ ತಯಾರಾದ ಮೇಲೆ ಅದನ್ನು ಬೇಗನೇ ವಿಶ್ವವಿದ್ಯಾನಿಲಯ ದವರು ಅಚ್ಚು ಹಾಕಿಸುತ್ತಾರೋ ಎಂದು ನೋಡಬೇಕು. ಅವರಿಗೆ ಬೇಗನೇ ಮಾಡಿಸಲು ಅವರಿಂದ ಅನುಮತಿ ಕೇಳಬೇಕಾದೀತು. ಇದೆಲ್ಲ ಭವಿಷ್ಯತ್ತಿಗೆ ಸೇರಿದುದು. ಆದರೆ ಶಬ್ದಮಣಿದರ್ಪಣದಲ್ಲಿ ಬೇರೆಯವರು ಇದುವರೆಗೆ ಹೇಳದ ಕೆಲವು ವಿಷಯಗಳನ್ನಾದರೂ ನಾನು ಹೇಳಿದ್ದೇನೆ ಎಂಬ ಸಮಾಧಾನ ನನಗಿದೆ. ನಾನು ಬಯಸಿದಂತೆ ಯು.ಜಿ.ಸಿ. ನನಗೆ ಇನ್ನೂ ಎರಡು ವರ್ಷ ಅವಧಿ ಮುಂದುವರಿಸಿದರೆ ನನ್ನ ಕೆಲಸ ಸಮರ್ಪಕವಾಗಿ ನಡೆಯಬಹುದು. ಇಲ್ಲವಾದರೆ ಅವಸರದಿಂದ ಮುಗಿಸಬೇಕಾದೀತು. ಈ ಮಧ್ಯದಲ್ಲಿ ನನಗೆ ಬರುವ ಸಂದೇಹಗಳನ್ನು ನಿವಾರಿಸಿಕೊಳ್ಳಲು ನಾನು ಶ್ರೀ ಸೇಡಿಯಾಪು ಕೃಷ್ಣ ಭಟ್ಟರ ನೆರವನ್ನು ಪಡೆಯಬೇಕಾಗುತ್ತದೆ. ಆಗಾಗ ಅಲ್ಲಿಗೆ ಹೋಗಿ ಬರೋಣ ಎಂದರೆ ಆರೋಗ್ಯಸ್ಥಿತಿ ಸಮಪರ್ಕವಾಗಿಲ್ಲದಿದ್ದರೆ ಅವರಿಗೆ ಕಷ್ಟವಾಗುತ್ತದೆ. ನಾನೂ ಆಗಾಗ ಅನಾರೋಗ್ಯ ಪೀಡಿತನಾಗುತ್ತಿದ್ದೇನೆ…’’

ಮೇಲಿನ ಪತ್ರದಲ್ಲಿ ಹೇಳಲಾದಂತೆ ಮುಂದೆ ಒಂದೆರಡು ವರ್ಷಗಳ ಕಾಲ ಅವರು ಯು.ಜಿ.ಸಿ. ಪ್ರಾಧ್ಯಾಪಕರಾಗಿ ಮುಂದುವರಿಯುತ್ತಿದ್ದರೆ ಎಲ್ಲವೂ ಸುಸೂತ್ರವಾಗಿ ಸಾಗುತ್ತಿತ್ತು. ಆದರೆ ವಿದಿಯ ಇಚ್ಛೆ ಬೇರೆಯಿತ್ತು. ಅಪಭ್ರಂಶ ಪ್ರಕರಣದಲ್ಲಿ ಶಬ್ದಮಣಿದರ್ಪಣದ 20ನೆಯ ಸೂತ್ರದವರೆಗೆ ವ್ಯಾಖ್ಯಾನ ಮಾಡಿ ಪೂರ್ಣವಾದಾಗ ಪ್ರೊ. ತೆಕ್ಕುಂಜದವರು ಅನಿರೀಕ್ಷಿತವಾಗಿ ಅಗಲಿಹೋದರು.

ಪ್ರೊ. ತೆಕ್ಕುಂಜದವರು ನಮ್ಮನ್ನಗಲುವ ಹೊತ್ತಿಗೆ ‘ಯಕ್ಷಗಾನ ವಾಚಸ್ಪತಿ’ ಬಿರುದಾಂಕಿತವಾದ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳ ಸಂಸ್ಮರಣೆಯ ಒಂದು ದೊಡ್ಡ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿತ್ತು. ಪ್ರೊ. ತೆಕ್ಕುಂಜದವರು ಆ ಸಮಿತಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಶಾಸ್ತ್ರಿ ಸಂಸ್ಮರಣ ಗ್ರಂಥ ಸಿದ್ಧವಾಗುತ್ತಿತ್ತು. ಸಣ್ಣ ಶಸ್ತ್ರಚಿಕಿತ್ಸೆಗಾಗಿ ಚಿಕಿತ್ಸಾಲಯಕ್ಕೆ ಹೋದ ತೆಕ್ಕುಂಜದವರು ಅಲ್ಲಿಂದ ಹಿಂದೆ ಬರಲಿಲ್ಲ.

ಅವರ ಮರಣಾನಂತರ ಶಬ್ದಮಣಿ ದರ್ಪಣದ ಉಳಿದ ಭಾಗಕ್ಕೆ ಪ್ರೊ. ಎಂ. ರಾಜಗೋಪಾಲಾಚಾರ್ಯರಿಂದ ವಿವರಣೆ ಬರೆಯಿಸಿ ಪೂರ್ಣ ಗ್ರಂಥವನ್ನು ಪ್ರಕಟಿಸಲು ಉದ್ದೇಶಿಸಲಾಗಿತ್ತು. ಪ್ರೊ. ಆಚಾರ್ಯರು ಬರೆದುಕೊಟ್ಟರು. ಆದರೆ ಕಾರಣಾಂತರಗಳಿಂದ ಈ ಗ್ರಂಥದ ಮುದ್ರಣ ಕಾರ್ಯ ಹಿಂದೆ ಬಿದ್ದು ಹಸ್ತಪ್ರತಿಯೇ ಕಳೆದುಹೋಗಿದೆಂಯೆಂಬ ಹಂತಕ್ಕೆ ಬಂತು. ಕೊನೆಗೂ ಹಸ್ತಪ್ರತಿ ದೊರೆತು ಪಾದೇಕಲ್ಲು ವಿಷ್ಣು ಭಟ್ಟರ ಸಂಪಾದಕತ್ವದಲ್ಲಿ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರವು 1999ರಲ್ಲಿ ಈ ಕೃತಿಯನ್ನು ಪ್ರಕಟಿಸಿತು.

ಶಬ್ದಮಣಿ ದರ್ಪಣವಲ್ಲದೆ ಸಂಸ್ಕೃತ ವ್ಯಾಕರಣ ಗ್ರಂಥಗಳು ಮತ್ತು ಸಂಸ್ಕೃತದಲ್ಲಿ ಸೂತ್ರರೂಪದಲ್ಲಿರುವ ಕನ್ನಡ ವ್ಯಾಕರಣ ಗ್ರಂಥಗಳಾದ ಭಾಷಾ ಭಾಷಣ ಶಬ್ದಾನುಶಾಸನಗಳ ಆಳವಾದ ಅಭ್ಯಾಸ ಪ್ರೊ. ತೆಕ್ಕುಂಜದವರಿಗೆ ಇರುವುದು ತಿಳಿದುಬರುತ್ತದೆ. ಅವರೇ ಈ ಗ್ರಂಥವನ್ನು ಪುನಃ ಪರಿಷ್ಕರಿಸಿ ಶುದ್ಧ ಪ್ರತಿ ಮಾಡುತ್ತಿದ್ದಲ್ಲಿ ಆ ಸಂದರ್ಭದಲ್ಲಿ ಹಲವು ವಿಷಯಗಳು ಸೇರ್ಪಡೆಗೊಂಡು ಈ ಕೃತಿ ಇನ್ನಷ್ಟು ದೊಡ್ಡದಾಗುತ್ತಿತ್ತೆಂಬುದರಲ್ಲಿ ಸಂದೇಹ ವಿಲ್ಲ. ಏನೇ ಆದರೂ ಈ ಕೃತಿ ಮುದ್ರಿತವಾಗಿ ಹೊರಬಂದುದು ಕನ್ನಡ ವಿದ್ವತ್ಲೋಕಕ್ಕೆ ದೊಡ್ಡ ಉಪಕಾರವಾಗಿ ಪರಿಣಿಸಿದೆಂಯೆಂಬುದರಲ್ಲಿ ಸಂದೇಹವಿಲ್ಲ.

ನವನೀತ

ಪ್ರೊ. ತೆಕ್ಕುಂಜದವರ ಲೇಖನಗಳಲ್ಲಿ ಕೆಲವನ್ನು ಒಟ್ಟಾಗಿಸಿ ಸಂಕಲನ ರೂಪದಲ್ಲಿ ಸಿದ್ಧಪಡಿಸಿದ ಗ್ರಂಥವಿದು. ಇದೂ ಅವರ ಮರಣಾನಂತರ ಪ್ರಕಟವಾದಂತಹದಾಗಿದೆ. ಅ. ಬಾಲಕೃಷ್ಣ ಶೆಟ್ಟಿ ಪೊಳಲಿ ಅವರು ತೆಕ್ಕುಂಜದವರ ಶಿಷ್ಯರು; ಅಭಿಮಾನಿಗಳು ಮತ್ತು ಮಂಗಳೂರಿನಲ್ಲಿ ಅವರೊಡನೆ ಕನ್ನಡದ ಚಟುವಟಿಕೆಗಳಲ್ಲಿ ಭಾಗವಹಿಸಿದವರು. ಅ.ಬಾ. ಶೆಟ್ಟಿಯವರ ಪ್ರಯತ್ನದಿಂದ ‘ನವನೀತ’ ಎಂಬ ಕೃತಿ ಪ್ರಕಟಿತವಾಯಿತು. ತೆಕ್ಕುಂಜದವರ ನಾಲ್ಕು ಮುಖ್ಯ ಲೇಖನಗಳು ಇದರಲ್ಲಿ ಸೇರಿವೆ. 1. ದ.ಕ. ಜಿಲ್ಲೆಯ ಕನ್ನಡ 2. ಮಂಗಳೂರು ಹವೀಕರ ಆಡುನುಡಿ 3. ತುಳುವಿನ ವರ್ಣಮಾಲೆ 4. ಸ್ವಪ್ನ (ವಾಸವದತ್ತ) – ಈ ನಾಲ್ಕು ಲೇಖನಗಳನ್ನು ಸೇರಿಸಿ ಹೈದರಾಬಾದಿನಲ್ಲಿ ತೆಕ್ಕುಂಜ ಅಭಿಮಾನಿ ಬಳಗವೊಂದನ್ನು ರಚಿಸಿಕೊಂಡು ಅ.ಬಾ. ಶೆಟ್ಟಿಯವರು ಕೃತಿರೂಪದಲ್ಲಿ ಪ್ರಕಟಿಸಿದರು. ಇದು ಒಂದು ಸಾಹಸವೇ ಸರಿ.

ಕನ್ನಡ ನವರತ್ನಗಳು

ಪ್ರೊ. ತೆಕ್ಕುಂಜದವರು ‘ನವಭಾರತ’ ಪತ್ರಿಕೆಯಲ್ಲಿ ಕನ್ನಡದ ಹಳೆಯ ಕವಿಗಳ ಪರಿಚಯ ರೂಪದಲ್ಲಿ ಲೇಖನಗಳನ್ನು ಬರೆಯುತ್ತಿದ್ದರೆಂದು ಈ ಹಿಂದೆ ಉಲ್ಲೇಖಿಸಿದೆ. ಅವುಗಳನ್ನು ಒಟ್ಟು ಸೇರಿಸಿ ಪುಸ್ತಕ ರೂಪದಲ್ಲಿ ಹೊರತರಲು ಯತ್ನಿಸಿದವರೂ ಅ.ಬಾ. ಶೆಟ್ಟಿಯವರೇ. ಈ ಕೃತಿಯು ಧರ್ಮಸ್ಥಳ ಮಂಜುನಾಥೇಶ್ವರ ಪುಸ್ತಕ ಮಾಲೆಯಲ್ಲಿ ಪ್ರಕಟಗೊಂಡುದಲ್ಲದೆ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಗಳಿಗೆ ಪಠ್ಯಪುಸ್ತಕವಾಗಿಯೂ ನಿಯಮಿಸಲ್ಪಟ್ಟಿತೆಂಬುದು ಗಮನಾರ್ಹ ವಿಷಯವಾಗಿದೆ.

ಯಶೋಧರ ಚರಿತೆ ಹೊಸಗನ್ನಡ ಅನುವಾದ

ಕನ್ನಡ ಸಾಹಿತ್ಯ ಪರಿಷತ್ತಿಗೆ ಶ್ರೀ ಜಿ. ನಾರಾಯಣ ಅವರು ಅಧ್ಯಕ್ಷರಾಗಿದ್ದಾಗ ಹಳಗನ್ನಡ ಕಾವ್ಯಗಳನ್ನು ಹೊಸಗನ್ನಡ ಅನುವಾದ ರೂಪವಾಗಿ ಪ್ರಕಟಿಸುವ ಯೋಜನೆಯನ್ನು ಪ್ರಾರಂಬಿಸಲಾಯಿತು (1976). ಜನ್ನನ ಯಶೋಧರ ಚರಿತೆಯನ್ನು ಹೊಸಗನ್ನಡಕ್ಕೆ ಅನುವಾದಿಸುವ ಹೊಣೆಯನ್ನು ಪ್ರೊ. ತೆಕ್ಕುಂಜದವರಿಗೆ ವಹಿಸಲಾಯಿತು. ಈ ಕಾವ್ಯವು ಗಾತ್ರದಲ್ಲಿ ಕಿರಿದಾದುದಾದರೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಕೃತಿ ಎಂದೆನಿಸಿದೆ. ಅದರ ಹೊಸಗನ್ನಡ ಅನುವಾದವನ್ನು ತೆಕ್ಕುಂಜದವರು ಬಹಳ ಸೊಗಸಾಗಿಯೇ ನಿರ್ವಹಿಸಿದ್ದಾರೆ. ಅದಕ್ಕೊಂದು ಒಳ್ಳೆಯ ಉಪೋದ್ಘಾತವನ್ನೂ ಬರೆದಿದ್ದಾರೆ. ಈ ಕೃತಿಯನ್ನು ಸೇರಿಸಿ ಎರಡು ಹಳಗನ್ನಡ ಕೃತಿಗಳನ್ನು ತೆಕ್ಕುಂಜದವರು ಹೊಸಗನ್ನಡಕ್ಕೆ ಅನುವಾದ ಮಾಡಿದಂತಾಯಿತು. ಶ್ರೀ ರಾಮಾಶ್ವಮೇಧ ಪೂರ್ತಿಯಾಗಿ ಗದ್ಯಕೃತಿಯಾದರೆ ಯಶೋಧರ ಚರಿತೆಯು ಪದ್ಯಕೃತಿ.

ಶಬ್ದಬ್ರಹ್ಮ ಮುದ್ದಣನ ಸಾಹಿತ್ಯ ಸೃಷ್ಟಿ, ವೈಯಾಕರಣ ಕೇಶಿರಾಜನ ಭಾಷಾ ವೈಜ್ಞಾನಿಕ ದೃಷ್ಟಿಗಳೆರಡನ್ನು ಚಿರಂತನಗೊಳಿಸಿದ ಪ್ರತಿಭೆ ಪಾಂಡಿತ್ಯಗಳ ರಸಪಾಕ ಸಿದ್ಧಿ ಪುರುಷ ತೆಕ್ಕುಂಜ. ಭಾಷಾ ಪ್ರಯೋಗದಲ್ಲಿ ದೋಷ ಕಂಡುಬಂದಾಗ ಖಂಡತುಂಡವಾಗಿ ಖಂಡಿಸುತ್ತಾ ಭಾಷಾ ಶುದ್ಧಿಯ ಕಡೆಗೆ ಬೆರಳೆತ್ತಿ ತೋರಿಸುತ್ತಾ ಬಂದವರು ತೆಕ್ಕುಂಜ. ಆ ಕುರಿತು ಅವರ ಅಭಿಪ್ರಾಯವನ್ನು ಅವರದೇ ಮಾತುಗಳಲ್ಲಿ ಹೀಗೆ ಸಂಗ್ರಹಿಸಬಹುದು.

‘‘ಭಾಷೆಯಲ್ಲಿ ಮಡಿವಂತಿಕೆ ಬೇಡ’’ ಎನ್ನುವವರು ಕೆಲವರು. ಮಡಿವಂತಿಕೆ ಇರಿಸಿಕೊಂಡೂ ಉತ್ತಮ ಕೃತಿಯನ್ನು ಉಳಿದವರಿಗಿಂತ ಮಿಗಿಲಾಗುವಂತೆ ರಚಿಸಿದರೆ ಮೂಗು ಮುರಿಯುವುದೇಕೆ? ಈ ಮಡಿವಂತಿಕೆಯಿರಿಸಿಕೊಳ್ಳದವರು ಚೆನ್ನಾಗಿ ಅಭ್ಯಾಸ ಮಾಡುತ್ತಾರೆ. ಅದಕ್ಕಾಗಿ ಶ್ರಮವಹಿಸುತ್ತಾರೆ. ಆದ್ದರಿಂದ ಒಳ್ಳೆಯದನ್ನು ಸಾದಿಸುತ್ತಾರೆ ಎಂಬುದನ್ನು ಕಾಣದವರು ಮಡಿವಂತಿಕೆಯನ್ನು ದೂರುತ್ತಾರೆ. ಬರಿಯ ಮಡಿವಂತಿಕೆ ಮಾತ್ರವಿದ್ದು, ಉಳಿದ ಸಾಹಿತ್ಯ ಗುಣ ಯಾವುದೂ ಇಲ್ಲದಿದ್ದರೆ ಅದು ನಿಂದ್ಯವೆಂಬುದು ಸುಳ್ಳಲ್ಲ.

ಒಮ್ಮೆ ತೆಕ್ಕುಂಜದವರು ಪ್ರಿಯಶಿಷ್ಯ ಎಂ. ರಾಮಚಂದ್ರ ಮತ್ತು ಪ್ರೊ| ಅಮೃತ ಸೋಮೇಶ್ವರರು ಒಟ್ಟಿಗೆ ಮಾತುಕತೆಯಾಡುತ್ತಿದ್ದಾಗ ‘ಸೋತು ಸುಣ್ಣವಾಗು’ ಎಂಬ ನುಡಿಗಟ್ಟಿನ ಪ್ರಸ್ತಾವನೆ ಬಂದಿತಂತೆ. ಆಗ ತೆಕ್ಕುಂಜದವರು ಮುದ್ದಣನ ಪ್ರಯೋಗ ಉದಾಹರಿಸಿ ‘ಸುಣ್ಣ’ ಎಂದರೆ ಕಟ್ಟಡಗಳಲ್ಲಿ ಪಕ್ಕಾಸುಗಳಿಗೆ ಆಧಾರವಾಗಿರುವ ಅಡ್ಡತೊಲೆ ಎಂದರ್ಥ ಎಂದು ಹೇಳಿದರಂತೆ. ಕಟ್ಟಡದ ಮಾಡಿನ ಎಲ್ಲಾ ಭಾರವು ಅದರ ಮೇಲೆ ಬೀಳುವುದರಿಂದ ಸುಣ್ಣದ ಪಾಡು ನಾನಾ ಬಗೆಯ ಸಂಕಟಗಳಿಗೆ ಈಡಾದವನ ಬಾಳು ಎಂದು ವಿವರಣೆ ನೀಡಿದರಂತೆ. ಇದರ ಅರ್ಥವನ್ನು ತನಗೆ ತಿಳಿಸಿದವರು ತುದಿಯಡ್ಕ ವಿಷ್ಣ ್ವಯ್ಯನವರು ಎಂದೂ ಹೇಳಿದರಂತೆ. ಇದು ತೆಕ್ಕುಂಜದವರ ಶಬ್ದಾರ್ಥ ಅನ್ವೇಷಣ ಪ್ರೀತಿಗೆ ನಿದರ್ಶನ.

ಒಮ್ಮೆ ಪ್ರೊ| ಎಸ್.ವಿ. ಪರಮೇಶ್ವರ ಭಟ್ಟರನ್ನು ಕುರಿತು ‘ಪೂರ್ಣಕುಂಭ’ವೆಂಬ ಸಂಭಾವನ ಗ್ರಂಥವೊಂದು ಸಿದ್ಧವಾಗುತ್ತಿತ್ತು. ಅದರ ಸಂಪಾದಕರು ‘‘ಸರಸ ಮಾತುಗಾರ ಪ್ರೊ| ಭಟ್ಟರು’’ ಎಂಬ ಲೇಖನವೊಂದನ್ನು ಬರೆಯಲು ಎನ್.ಕೆ. ಚೆನ್ನಕೇಶವ ಎಂಬವರಿಗೆ ಪತ್ರ ಬರೆದಿದ್ದರು. ಅದರಂತೆ ಅವರು ಲೇಖನವನ್ನು ಬರೆದು ಪರಿಶೀಲನೆಗಾಗಿ ತೆಕ್ಕುಂಜದವರಿಗೆ ತೋರಿಸಿದರಂತೆ. ಆಗ ಅದನ್ನು ನೋಡಿದ ತೆಕ್ಕುಂಜದವರು ‘‘ಲೇಖನದ ಶಿರೋನಾಮೆಯೇ ಸರಿಯಿಲ್ಲ’’ ಎಂದು ಉದ್ಗರಿಸಿದರಂತೆ. ಅಲ್ಲಿಯ ಅರಿಸಮಾಸ ತೆಕ್ಕುಂಜದವರಿಗೆ ಹಿಡಿಸಲಿಲ್ಲ. ‘‘ಸರಸ’’ವೆಂಬುದು ಸಂಸ್ಕೃತ ಪದವಾದ್ದರಿಂದ ಅದಕ್ಕೆ ಸೇರಿಕೊಳ್ಳುವ ಶಬ್ದವೂ ಸಂಸ್ಕೃತವೇ ಆಗಿರಬೇಕೆಂಬುದು ಅವರ ಅಭಿಪ್ರಾಯ. ಹಾಗಾಗಿ ಅವರೇ ‘‘ಸರಸ ಸಂಭಾಷಣಕಾರ’’ ಎಂದು ಪ್ರಬಂಧ ಶೀರ್ಷಿಕೆಯನ್ನು  ತಿದ್ದಿದರಂತೆ. ಹವ್ಯಕವೆಂಬ ಸಂಸ್ಕೃತೀಕರಣವನ್ನು ಒಪ್ಪದ ಅವರು ‘‘ಹವೀಕ’’ ಎಂಬುದನ್ನೇ ಸರಿ ಎಂದು ಸಮರ್ಥಿಸಿದ್ದರು.

ತೆಕ್ಕುಂಜದವರು ಒಮ್ಮೆ ‘‘ಸತೀರ್ಥ್ಯ’’ ಶಬ್ದದ ಅರ್ಥವೇನು ಎಂದು ಕೇಳಿದಾಗ ‘‘ಸಹಪಾಠಿ’’ ಎಂಬ ಉತ್ತರ ಬಂತು. ಅದಕ್ಕೆ ಅವರು – ‘‘ಸಹಪಾಠಿಗಳೆಲ್ಲ ಸತೀರ್ಥ್ಯರೇ ಆಗುತ್ತಾರೆ, ಆದರೆ ಸರ್ತೀರ್ಥ್ಯರೆಲ್ಲಾ ಸಹಪಾಠಿಗಳೇ ಆಗಿರಬೇಕೆಂದಿಲ್ಲ’’ ಎಂದು ಅಪ್ಪಣೆ ಕೊಡಿಸಿದರು. ಅರ್ಥಾತ್ ಒಬ್ಬ ಗುರುವಿನ ಶಿಷ್ಯತ್ವವನ್ನು ವಹಿಸಿದವರೆಲ್ಲಾ ಸತೀರ್ಥ್ಯರು ಎಂದೆನಿಸುತ್ತಾರೆ. ಆದರೆ ಅವರೆಲ್ಲಾ ಒಂದೇ ತರಗತಿಯಲ್ಲಿ ಒಟ್ಟಿಗೆ ಓದಿರಬೇಕಾಗಿಲ್ಲ. ಇದು ತೆಕ್ಕುಂಜದವರು ಶಬ್ದಾರ್ಥಗಳ ಆಳಕ್ಕೆ ಇಳಿದು ಆನಂದಿಸುತ್ತಿದ್ದ ರೀತಿ.

ಸದಾ ಭಾಷೆ, ವ್ಯಾಕರಣ, ಛಂದಸ್ಸುಗಳ ವಿಷಯವನ್ನೇ ಧ್ಯಾನಿಸುತ್ತಾ ಇದ್ದ ತೆಕ್ಕುಂಜ ಈಗ ನಮ್ಮೊಡನಿಲ್ಲ. ಆದರೆ ಅವರ ಭಾಷಾ ಕೈಂಕರ್ಯದ ಆದರ್ಶ ನಮ್ಮ ಕಣ್ಣ ಮುಂದಿದೆ. ಮುದ್ದಣನ ಶ್ರೀರಾಮಾಶ್ವಮೇಧ ಇರುವಷ್ಟು ಕಾಲ ತೆಕ್ಕುಂಜದವರ ಟಿಪ್ಪಣಿಯು ಇರುತ್ತದೆ. ಆದರೆ ವರ್ತಮಾನ ಯುಗದಲ್ಲಿ ಭಾಷಾ ಶುದ್ಧಿಯ ಕುರಿತು ಅವರು ತೋರಿದ ದಾರಿಯಲ್ಲಿ ಕನ್ನಡಿಗರ ಕೈಹಿಡಿದು ಮುಂದೆ ಕರೆದೊಯ್ಯಲು ತೆಕ್ಕುಂಜರಂತಹ ವಿದ್ವಾಂಸರು ಬೇಕಾಗಿದೆಯೇನೋ ಎಂದನಿಸುತ್ತಿದೆ. ಕನ್ನಡದ ಪಂಡಿತ ಪರಂಪರೆ ಸೊರಗಿದ ಹೊತ್ತಿನಲ್ಲಿ ಅದಕ್ಕಾಗಿ ಕನ್ನಡದ ನೆಲ ಮತ್ತೆ ಮತ್ತೊಬ್ಬ ತೆಕ್ಕುಂಜನಿಗಾಗಿ ಕಾದು ನಿಂತಿದೆ.

ಶ್ರೀ ತೆಕ್ಕುಂಜ ಅವರದು ನಿರ್ಬಿಡೆಯ ವ್ಯಕ್ತಿತ್ವ. ಪ್ರಚಾರಕ್ಕಾಗಿ, ಪ್ರಸಿದ್ಧಿಗಾಗಿ ರಾಜಿ ಮಾಡಿಕೊಳ್ಳದ ಗುರೂಜಿ ಆಗಿದ್ದವರು. ಅವರ ಅಂಥ ನಿಲುವುಗಳಿಗೆ ಕೆಲವು ಸಾಕ್ಷಿಗಳನ್ನು ಇಲ್ಲಿ ಒದಗಿಸಬಹುದು :

*    ವಿಮರ್ಶೆ ಮತ್ತು ಸಂಶೋಧನೆ ಎಂಬ ವಿಷಯವಾಗಿ ಊದು ಶಂಖ ಊದಿ ಬಿಡುತ್ತೇನೆ. ಕಿವಿಯನ್ನೋ ಅದರ ಮುಖಾಂತರ ಮನಸ್ಸನ್ನೋ ಕೊಟ್ಟರೆ ಸಂತೋಷ. ಕೊಡದಿದ್ದರೆ ಬಂದ ದಾರಿಗೆ ಸುಂಕವಿಲ್ಲವೆಂದು ಹಿಂದಕ್ಕೆ ತೆರಳುತ್ತೇನೆ.

*    ಇಷ್ಟು ಹೇಳಿ, ಬಿಟ್ಟು ಹೋಗಿರಬಹುದಾದಕ್ಕೆ ಪರಡದೆ, ಹೇಳಬಹುದಾದುದಕ್ಕೆ ಕೊರಳುದ್ದ ಮಾಡದೆ ವಿರಮಿಸುತ್ತೇನೆ.

*    ನನ್ನ ಜಾತಕದಲ್ಲಿ ಇದೆ – ನನ್ನ ಮುಖ ಕಂಡರೆ ಇತರರಲ್ಲಿ ಸ್ನೇಹಭಾವ ಕುದುರದೆ ಒಮ್ಮೆಗೇ ಜುಗುಪ್ಸೆಯುಂಟಾಗುತ್ತದಂತೆ. ಇದು ಹಲವು ಸಲ ನನ್ನ ಸ್ವಂತ ಅನುಭವಕ್ಕೂ ಬಂದಿದೆ.

*    ಶಿಕ್ಷಕ ವೃತ್ತಿಯನ್ನು ಬಿಟ್ಟು ವ್ಯಾಪಾರಕ್ಕೆ ಎಂದಿಗೂ ಬರಲಾರೆ.

*    ಭಾಷೆ ಶುದ್ಧವಾಗಿರಬೇಕು, ಅರ್ಥ ನಿರ್ದುಷ್ಟವಾಗಿರಬೇಕು. ನಮ್ಮ ವಾಙ್ಮಯ ಹೂ ಹಣ್ಣುಗಳ ತೋಟದಂತೆ ಹುಲುಸಾಗಿರಬೇಕೇ ವಿನಾ ಬಿದಿರು ಮಳೆ, ಸೀಗೆ ಮುಳ್ಳುಗಳ ಗೊಂಡಾರಣ್ಯ ಆಗಬಾರದು.

*    ದಕ್ಷಿಣಕನ್ನಡದ ಕನ್ನಡದಲ್ಲಿ ಹಿಂದಿದ್ದ ಶುದ್ಧತೆ ಇಂದು ಮಾಯವಾಗುತ್ತಿದೆಯೋ ಎಂದು ನನಗೆ ತೋರುತ್ತದೆ. ಉಳಿದವರಿಗೆ ಅದೇ ಸತ್ವಯುಕ್ತವಾದ ಭಾಷೆ ಎಂದು ಕಂಡರೆ ನನ್ನ ಅಭಿಪ್ರಾಯ ನನಗೆ, ಅವರ ಅಭಿಪ್ರಾಯ ಅವರಿಗೆ.

ತೆಕ್ಕುಂಜ ಅವರನ್ನು ಯಾರೂ ಇಡಿಯಾಗಿ ಕಟ್ಟಿಕೊಡಲಾರರು. ಅಷ್ಟೊಂದು ಘನ ಪಾಂಡಿತ್ಯ, ಸತ್ತ ್ವ, ನಿಯತ್ತು ಅವರದ್ದಾಗಿತ್ತು. ಅದಕ್ಕೇ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ‘ನಾನು ಕಂಡಷ್ಟು ತೆಕ್ಕುಂಜ’ ಎಂದು ತನ್ನ ಮಿತಿಯನ್ನು ಧ್ವನಿಸಿಯೇ ಮುಂದುವರಿಯುತ್ತಾರೆ. ಅವರು ನೆನಪಿಸಿಕೊಳ್ಳುತ್ತಾರೆ :

‘‘ಸಂತ ಅಲೋಸಿಯಸ್ ಕಾಲೇಜಿನ ಪ್ರಾಚಾರ್ಯರಾಗಿ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರದ್ದು ನನಗೆ ಬಹಳ ಹಿಂದಿನಿಂದ ತಿಳಿದಿತ್ತು. ಸೀಮಿತ ಸಂಪರ್ಕವೂ ಇತ್ತು. ಅಲ್ಲದೆ ಸೇಡಿಯಾಪು ಕೃಷ್ಣ ಭಟ್ಟರು ನನ್ನ ಮೇಲಿಟ್ಟಿದ್ದ ವಿಶ್ವಾಸ ಮತ್ತು ಪ್ರೀತಿಗಳಿಂದ ತೆಕ್ಕುಂಜದವರೂ ನನ್ನನ್ನು ಆಗಾಗ ಅಲ್ಲಿ ಇಲ್ಲಿ ಕಂಡಾಗ ವಿಶ್ವಾಸದಿಂದಲೇ ವ್ಯವಹರಿಸುತ್ತಿದ್ದರು. ಆದರೆ ಆ ಸಂಪರ್ಕ ಸಂಬಂಧಗಳು ತೀರಾ ಹತ್ತಿರದ್ದೇನೂ ಆಗಿರಲಿಲ್ಲ.

ನಾವು ತೀರಾ ಹತ್ತಿರಕ್ಕೆ ಬಂದುದು ಒಬ್ಬರನ್ನೊಬ್ಬರು ಅರ್ಥವಿಸಿಕೊಂಡುದು ಒಂದು ಸಂಘರ್ಷದ ಮುಂದಿನ ದಿನಗಳಲ್ಲಿ. ನಾಗೇಗೌಡರು ಜಿಲ್ಲಾದಿಕಾರಿಗಳಾಗಿ ಮಂಗಳೂರಲ್ಲಿ ಇದ್ದ ದಿನಗಳವು. ಆಗ ಒಮ್ಮೆ ಮಂಗಳೂರಲ್ಲಿ ಅಖಿಲ ಕರ್ನಾಟಕ ಮಕ್ಕಳ ಸಮ್ಮೇಳನ ನಡೆಯಿತು. ಅದರ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ನಾಗೇಗೌಡರು ಜಿಲ್ಲಾದಿಕಾರಿಯ ನೆಲೆಯಲ್ಲಿ ಇದ್ದರು. ಆ ಸಭೆಗೆ ಗೌಡರು ಸ್ವಾಗತ ಭಾಷಣವನ್ನು ಒಂದು ಗೀತದ ಮೂಲಕ ಮಾಡಿದರು. ಮಂಗಳೂರಲ್ಲಿ ಇದ್ದುದು ಒಂದೇ ಒಂದು ದಿನಪತ್ರಿಕೆ, ಅದು ನವಭಾರತ. ಮಕ್ಕಳ ಸಮ್ಮೇಳನ ಕೊನೆಗೊಂಡ ಒಂದೆರಡು ದಿನಗಳಲ್ಲಿ ನವಭಾರತ ಪತ್ರಿಕೆಯಲ್ಲಿ ನಾಗೇಗೌಡರ ಸ್ವಾಗತ ಗೀತೆಯ ಶಬ್ದವನ್ನು ಖಂಡಿಸಿ, ಅದು ದಕ್ಷಿಣ ಕನ್ನಡಿಗರನ್ನು ಅವಹೇಳನ ಮಾಡುತ್ತದೆ ಎಂದು ಅರ್ಥ ಬರುವಂತೆ ಗೀತೆಯನ್ನು ತಿರುಚಿ – ಸುದೀರ್ಘ ಲೇಖನ ಒಂದು ಬಂತು. ‘ಹದ್ದಿನ ಕಣ್ಣು’ ಆ ಲೇಖನದ ಶಿರೋನಾಮೆ. ಅದನ್ನು ಬರೆದವರು ಸಂತ ಅಲೋಸಿಯಸ್ ಕಾಲೇಜಿನ ಪ್ರಾಚಾರ್ಯರಾದ ವಿದ್ವಾಂಸ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು.

ಇದಕ್ಕೂ ಒಂದು ಕಾರಣವಿತ್ತು. ಆಗ ನವಭಾರತದ ಸಂಪಾದಕರೂ, ಒಡೆಯರೂ ಆಗಿದ್ದವರು ದಿವಂಗತ ಸಂಜೀವ ಕುಡ್ವರು. ಅವರು ಸಿ.ಪಿ.ಸಿ. ಎಂಬ ಹಲವಾರು ಬಸ್ಸುಗಳನ್ನು ಹೊಂದಿದ್ದ ಸಾರಿಗೆ ಸಂಸ್ಥೆಯ ಒಡೆಯರೂ ಹೌದು. ಅವರ ಒಂದು ಹಾದಿಯ ಬಸ್ಸಿನ ರಹದಾರಿ ಪರವಾನಿಗೆಯನ್ನು ಸಾರಿಗೆ ಇಲಾಖೆಯ ಜಿಲ್ಲೆಯ ಮುಖ್ಯ ಅಧಿಕಾರಿಗಳಾಗಿ ನಿರಾಕರಿಸಿದ್ದರು. ಸಕಾರಣವಾಗಿ ಈ ನೋವು ಕಾವು ಕುಡ್ವರಿಗೆ ಇತ್ತು. ಸಂಜೀವ ಕುಡ್ವರೂ ತೆಕ್ಕುಂಜೆಯವರೂ ಸಹಪಾಠಿಗಳು. ‘ಆ’ ಕಾರಣದಿಂದ ‘ಈ’ ಸಂಪರ್ಕದ ಮೂಲಕ ನಾಗೇಗೌಡರ ಕವನದ ವಿಮರ್ಶೆ ನಡೆದಿತ್ತು. ಈ ವಿಮರ್ಶೆ ಬಂದುದರಿಂದ ಮೂಲ ಪದ್ಯವನ್ನು ಓದದ ನೂರಾರು ಜನರಿಂದ ನಾಗೇಗೌಡರ ಮೇಲೆ ಪತ್ರಿಕೆಯಲ್ಲಿ – ನವಭಾರತ ಪತ್ರಿಕೆಯಲ್ಲಿ ಕಟುವಾದ ಟೀಕೆಗಳು ಬಂದವು.

ಇಷ್ಟು ಟೀಕೆಗಳು ಬಂದ ಮೇಲೆ ಮೂಲ ಪದ್ಯವನ್ನು ಓದಬೇಕೆಂಬ ಹಂಬಲ ನನಗಾಯಿತು. ನಾನು ಆ ಪದ್ಯವನ್ನು ಕೂಲಂಕಷವಾಗಿ ಓದಿದೆ. ಆಗ ನನಗೆ ಆ ಪದ್ಯದ ಕುರಿತು ಬಂದ ಟೀಕೆಗಳಿಗೆ ಅರ್ಥವೇ ಇಲ್ಲ ಎಂಬ ಸತ್ಯದ ಅರಿವಾಯಿತು. ಮಾತ್ರವಲ್ಲ ಈ ಜಿಲ್ಲೆಯ ಜನರ ಕುರಿತಾದ ಗೌಡರಿಗೆ ಎಷ್ಟು ಪ್ರೀತಿ ಗೌರವಗಳಿವೆ ಎಂಬುದು ಆ ಪದ್ಯದ ಮೂಲಕವೇ ತಿಳಿಯಿತು.

ಒಬ್ಬ ಪ್ರಾಮಾಣಿಕ, ಜಿಲ್ಲೆಯ ಕುರಿತು ಗೌರವವುಳ್ಳ ಸಾಹಿತ್ಯಾಸಕ್ತ ಅಧಿಕಾರಿಗೆ ಅನ್ಯಾಯವಾಗುತ್ತಿರುವುದನ್ನು ಕಂಡು ನನಗೆ ತುಂಬಾ ನೋವಾಯಿತು. ಆಗ ನಾನು ಆ ಗೀತವನ್ನು ಉದ್ದಕ್ಕೂ ಸರಿಯಾದ ರೀತಿಯಲ್ಲಿ ಅರ್ಥವಿಸಿ, ಅದರಲ್ಲಿ ನಮ್ಮ ಜಿಲ್ಲೆಯ ಕುರಿತಾಗಿ ಗೌಡರಿಗೆ ಇದ್ದ ಪ್ರೀತಿ ಗೌರವಗಳನ್ನು ಅವರು ಅಲ್ಲಿ ಅಭಿವ್ಯಕ್ತಿಗೊಳಿಸಿರುವ ಬಗೆಯನ್ನು ಸುದೀರ್ಘವಾಗಿ ಬರೆದು ನವಭಾರತಕ್ಕೆ ಕಳುಹಿಸಿದೆ. ಅವರು ಅದನ್ನು ಪ್ರಕಟಿಸಲಿಲ್ಲ. ಆಗ ನಾನೇ ಆ ಸುದೀರ್ಘ ವಿಮರ್ಶೆಯನ್ನು ‘ನಾಗೇಗೌಡರ ಸ್ವಾಗತಗೀತೆ’ ಎಂಬ ಶಿರೋನಾಮೆಯಲ್ಲಿ ಅಚ್ಚಿಸಿ ಪ್ರಕಟಿಸಿದೆ. ಒಂದು ಸಾವಿರ ಪ್ರತಿಗಳು ಒಂದೇ ವಾರದಲ್ಲಿ ಮಾರಾಟವಾಯಿತು. ಮತ್ತೆ ಎರಡು ಸಾವಿರ ಪ್ರತಿಗಳನ್ನು ಮುದ್ರಿಸಿ ಜಿಲ್ಲೆಯ ಮೂಲೆ ಮೂಲೆಗೆ ಮುಟ್ಟಿಸಿದೆ. ಜೊತೆಗೆ ಸರಕಾರದ ಅಧಿಕಾರಿಗಳು, ಎಂ.ಎಲ್.ಎ., ಮಂತ್ರಿಗಳು, ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಟ್ಟೆ.

ಅದನ್ನು ಓದಿದ ಜನ ಪದ್ಯದ ನಿಜವಾದ ಅರ್ಥವನ್ನು ತಿಳಿದು ನಾಗೇಗೌಡರನ್ನು ಕೊಂಡಾಡಹತ್ತಿದರು. ಆದರೆ ಈ ಲೇಖನ ನನ್ನ ಮತ್ತು ತೆಕ್ಕುಂಜದವರ ನಡುವೆ ವಿರಸದ ಗೋಡೆಯನ್ನು ಎಬ್ಬಿಸಿತು. ಅವರು ಆಗ ನನ್ನ ಕುರಿತಾಗಿ ನಮ್ಮಿಬ್ಬರ ಗುರುಗಳಾಗಿದ್ದ ಸೇಡಿಯಾಪುರವರಲ್ಲೂ ಬೇಸರ ವ್ಯಕ್ತಪಡಿಸಿದರಂತೆ.

ಆಗ ನಾನು ಯೋಚಿಸಿದ್ದೆ. ‘‘ಇನ್ನು ನನ್ನ ತೆಕ್ಕುಂಜದವರ ಸಂಬಂಧ ಎಂದೂ ಒಂದಾಗದು; ಜೊತೆಯಾಗಲಾರದು’’ ಎಂದು. ಐದಾರು ತಿಂಗಳ ನಂತರ ತೆಕ್ಕುಂಜದವರು ಒಂದು ಸಾಹಿತ್ಯ ಸಮಾರಂಭದಲ್ಲಿ ನನಗೆದುರಾಗಿ ಸಿಕ್ಕಿದರು. ಆಶ್ಚರ್ಯದ ಮಾತು ಎಂದರೆ ಆ ಸಂದರ್ಭದಲ್ಲಿ ಅವರು ಮುಖ ಸಿಂಡರಿಸಲಿಲ್ಲ. ಮುಖ ತಿರುಗಿಸಿಕೊಂಡು ಹೋಗಲಿಲ್ಲ. ಆತ್ಮೀಯತೆಯಿಂದ ಹಿಂದಿನಂತೆ ನಗು ನಗುತ್ತ ಕೈಮುಗಿದರು. ನನಗೆ ಪರಮಾಶ್ಚರ್ಯ. ಆಗ ನನಗೆ ಅನಿಸಿತು ‘‘ಸಜ್ಜನರ, ನಿಜವಾದ ವಿದ್ವಾಂಸರ ವಾದ ವಿವಾದಗಳು ವಿಷಯಾಧರಿತವಾಗಿರುತ್ತವೆ ಹೊರತು ವ್ಯಕ್ತಿಗತವಾಗಿರುವುದಿಲ್ಲ’’ ಎಂದು.

ಆ ಬಳಿಕ ನಾವು ಹಿಂದಿಗಿಂತಲೂ ಹೆಚ್ಚು ನಿಕಟವರ್ತಿಗಳಾದೆವು. ಎಷ್ಟೋ ಸಾಹಿತ್ಯಿಕ ವಿಚಾರಗಳನ್ನು ತಿಳಿದುಕೊಳ್ಳಲು ನಾನು ಕರಂಗಲಪಾಡಿಯಲ್ಲಿದ್ದ ಅವರ ಮನೆಗೆ ಹೋಗುತ್ತಿದ್ದೆ. ಹೋದಾಗಲೆಲ್ಲ ಕಾಪಿ ಕುಡಿದು ಬಹಳ ಹೊತ್ತು ಮಾತುಕತೆಯಲ್ಲಿ ಕಳೆಯುತ್ತಿದ್ದೆವು.

ಅದೇ ಸಂದರ್ಭದಲ್ಲಿ ಅವರು ಮುದ್ದಣನ ರಾಮಾಶ್ವಮೇಧದ ಕುರಿತು ವಿವರವಾಗಿ, ಅರ್ಥ ವಿಂಗಡನೆ ಮಾಡುತ್ತಾ, ತಿಳಿ ಕನ್ನಡದಲ್ಲಿ ಬರೆದು ಅದಕ್ಕೆ ಮರುಹುಟ್ಟು ಕೊಡುತ್ತಿದ್ದರು. ನನ್ನ ಆಸಕ್ತಿಗಾಗಿ ಈ ಕುರಿತು ನಾವು ಎಷ್ಟೋ ಸಲ ಚರ್ಚಿಸಿದ್ದುಂಟು. ಅವರು ಘನ ಪಂಡಿತರು. ಜೊತೆಗೆ ರಸಿಕರು ಕೂಡಾ. ಆ ದಿನಗಳಲ್ಲಿ ನನಗೆ ಅವರನ್ನು ಭೇಟಿಯಾದಾಗಲೆಲ್ಲ ಕನ್ನಡದ ನುಡಿಗಟ್ಟೊಂದು ನೆನಪಾಗುತ್ತಿತ್ತು. ‘ಸೆಗಣಿಯವನೊಡನೆ ಸರಸಕ್ಕಿಂತ ಗಂಧದವನೊಡನೆ ಗುದ್ದಾಟ ಲೇಸು’.

ತೆಕ್ಕುಂಜ ಅವರು ದಕ್ಷಿಣ ಕನ್ನಡ ಜಿಲ್ಲೆಯ ಸಹೃದಯಿ, ಉದಾರ ಚಿಂತನೆಯ ಪಂಡಿತ ಪರಂಪರೆಯ ಗಟ್ಟಿಯಾದ ಒಂದು ಕೊಂಡಿ. ಅವರ ಪಾಂಡಿತ್ಯ, ಅವರ ಕೊಡುಗೆ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರವಾದುದು.’’

ಎಂ. ರಾಮಚಂದ್ರ ಕಾರ್ಕಳ ಅವರಿಗೆ ತೆಕ್ಕುಂಜ ಅವರು ‘ಶ್ರೀಗುರು’. ಅಂಥ ಗುರುವರ್ಯನ ಕುರಿತ ಶ್ರದ್ಧಾಂಜಲಿ ಈ ಬರೆಹ. ಇದರ ಭಕ್ತಿ, ಶಕ್ತಿ ದೊಡ್ಡದು.

‘‘ಜೀವನದ ಗತಿಯೇ ವಿಚಿತ್ರವಾದದ್ದು. ಶ್ರೀ ಜಿ.ಪಿ. ರಾಜರತ್ನಂ ವರ್ಷಾಂತಿಕ ಸಂಸ್ಮರಣ ಅದೇ ತಾನೇ ಮುಗಿದಿತ್ತು. ಅಷ್ಟರಲ್ಲೇ ಸುದ್ದಿ ಬಂತು. ‘ಪ್ರೊ. ಮರಿಯಪ್ಪ ಭಟ್ಟರ ನಿಧನ!’ ಆ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಸಿಡಿಲು ಹತ್ತಿರದಲ್ಲೇ ಹೊಡೆಯಿತು : ‘ತೆಕ್ಕುಂಜದವರು ತೀರಿಕೊಂಡರು!’ – ಎಣಿಸಿಕೊಂಡರೆ ಇದೇನು ಎಚ್ಚರವೋ ಕನಸೋ ಎಂಬ ಭ್ರಮೆಯಾಗುತ್ತದೆ. ತೆಕ್ಕುಂಜದವರು ತೀರಿಕೊಂಡದ್ದು (1980) ಮಾರ್ಚ್ 25ರಂದು. ಹಿಂದಣ ದಿನ ಅವರನ್ನು ಆಸ್ಪತ್ರೆಯಲ್ಲಿ ಕಂಡಿದ್ದೆ, ಮುಕ್ಕಾಲು ತಾಸು ಅವರೊಂದಿಗಿದ್ದೆ. ಮಡದಿ, ಅತ್ತೆ, ತಮ್ಮಂದಿರ ಹೆಮ್ಮಕ್ಕಳೂ, ಇನ್ನೊಬ್ಬ ಗಂಡಸೂ ಅಲ್ಲಿದ್ದರು. ನನಗೆ ಅಪರಿಚಿತ ಮುಖ. ಶ್ರೀಮತಿ ರತ್ನಮ್ಮ ಹೇಳಿದರು – ‘‘ಇದು ನನ್ನ ತಮ್ಮ. ಬೆಂಗಳೂರು ಕೆ.ಇ.ಬಿ.ಯಲ್ಲಿ ಇಂಜಿನಿಯರ್.’’ ತೆಕ್ಕುಂಜದವರು ದನಿಗೂಡಿಸಿದರು – ‘‘ಇವ ನನ್ನ ವಿದ್ಯಾರ್ಥಿ – ರಾಮಚಂದ್ರ. ಕಾರ್ಕಳ ಕಾಲೇಜಿನಲ್ಲಿ ಲೆಕ್ಚರರ್’’. ಅವರು ಕೇಳಿದರು – ‘‘ಯಾವ ಸಬ್ಜೆಕ್ಟು?’’ ತೆಕ್ಕುಂಜದವರು ನಡುವೆಯೇ ಬಾಯಿ ಹಾಕಿದರು – ‘‘ಹೇಳಿಲ್ಲವೇ? ನನ್ನ ವಿದ್ಯಾರ್ಥಿ ಅಂತ…!’’ ಅಲ್ಲಿಂದ ಹೊರಡುತ್ತಾ ಹೇಳಿದೆ : ‘‘ಆಪರೇಶನ್ ಆದ ಮೇಲೆ ಬರುತ್ತೇನೆ’’. ಅದಕ್ಕೆ ತೆಕ್ಕುಂಜ, ಕೂಡಲೇ ಬೇಡ, ಮಾತಾಡಿದರೆ ಆಯಾಸವಾದೀತು. ಹತ್ತು ದಿನ ಬಿಟ್ಟು ಬಾ. ಎಲ್ಲಕ್ಕಿಂತ ಮುಖ್ಯ – ನನ್ನ ಕಷ್ಟ ಯಾರೂ ನೋಡಬಾರದು. ನನಗೂ ಬೇರೆಯವರ ಕಷ್ಟ ನೋಡುವುದಕ್ಕೆ ಆಗುವುದಿಲ್ಲ!’’

ರ್ಚ್ 25ರಂದು ಬೆಳಿಗ್ಗೆ ಹಿರಿಯಡ್ಕಕ್ಕೆ ಹೋಗಿ ಗೆಳೆಯ ಪೊಳಲಿಯವರನ್ನು ಕಂಡಿದ್ದೆ. ಮಾತುಕತೆಯಲ್ಲಿ ತೆಕ್ಕುಂಜದವರ ಪ್ರಸ್ತಾವವೂ ಬಂತು. ಆಸ್ಪತ್ರೆಯಲ್ಲೂ ನಮ್ಮ  ‘ಮುದ್ದಣ – ಮನೋರಮೆ’ಯರು ಹೇಗಿದ್ದಾರೆ ಎಂಬುದನ್ನು ಹೇಳಿ ಕೇಳಿ ನಕ್ಕಿದ್ದೂ ಆಯಿತು. ಆ ನಗುವಿನ ಹಿಂದೆ ಕಣ್ಣೀರು ಎಲ್ಲೋ ಹೊಂಚು ಹಾಕುತ್ತಿದ್ದುದು ಆ ಹೊತ್ತು ನಮ್ಮಿಬ್ಬರಿಗೆ ತಿಳಿಯಲಿಲ್ಲ. ಸಂಜೆ ಪೊಳಲಿಯವರೇ ಕಾರ್ಕಳಕ್ಕೆ ಫೋನ್ ಮಾಡಿದರು : ‘ತೆಕ್ಕುಂಜದವರು ತೀರಿಕೊಂಡ್ರು!’

– ಹಿರಿಯಡ್ಕದ ಪೊಳಲಿ, ಕಾರ್ಕಳದ ನಾನು, ಮೂಡಬಿದರೆಯ ಚೆನ್ನಕೇಶವ ಒಟ್ಟಾಗಿ ಮಂಗಳೂರಿಗೆ ಧಾವಿಸಿದೆವು. ರಾತ್ರಿ ಗಂಟೆ 7-15. ತೆಕ್ಕುಂಜದವರ ಪಾರ್ಥಿವ ಶರೀರ ಚಟ್ಟದ ಮೇಲಿತ್ತು. ಪೊಳಲಿಯವರು ಗೋಳೋ ಎಂದು ಅತ್ತು ಬಿಟ್ಟರು. ಹೆಚ್ಚು ತಡವಿಲ್ಲದೆ ಕಳೇಬರವನ್ನು ಬೋಳೂರಿನ ರುದ್ರಭೂಮಿಗೆ ಸಾಗಿಸಿದ್ದಾಯಿತು, ಅಗ್ನಿಸ್ಪರ್ಶವೂ ಆಯಿತು. ಒಣ ಕಟ್ಟಿಗೆಯೊಂದಿಗೆ ಒಂದು ಚಂದನದ ಕೊರಡೂ ಸುಟ್ಟು ಬೂದಿಯಾಗುತ್ತಿರುವುದನ್ನು ನೋಡಿದೆವು. ಕಣ್ಣಲ್ಲಿ ಹೊಗೆಯನ್ನು, ಎದೆಯಲ್ಲಿ ಬೆಂಕಿಯನ್ನು ತುಂಬಿಕೊಂಡು ಹಿಂದಿರುಗಿದೆವು… ತೆಕ್ಕುಂಜದವರ ಕಷ್ಟವನ್ನು ನಾವು ಯಾರೂ ಕಾಣಲೇ ಇಲ್ಲ. ಅವರೂ ಹೇಳಿಕೊಳ್ಳಲಿಲ್ಲ. ಹಾಗೆಯೇ ನಡೆದುಬಿಟ್ಟರು. ಮಾರ್ಚ್ 20ರಂದು ಅವರು ನನಗೊಂದು ಕಾರ್ಡು ಬರೆದಿದ್ದರು. ಅದರಲ್ಲಿ ಹೀಗಿತ್ತು :

‘‘… 22-3-80ರಂದು ಬೆಳಗ್ಗೆ ಕಂಕನಾಡಿ ಆಸ್ಪತ್ರೆ ಸೇರುತ್ತೇನೆ. ಅಲ್ಲಿ ಮೂರು ದಿನಗಳ ಪೂರ್ವಭಾವಿ ಚಿಕಿತ್ಸೆ ನಡೆದು 25ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು. ಅನಂತರ ಎಷ್ಟು ಅವಧಿ ಅಲ್ಲಿರಬೇಕೋ, ಮನೆಗೆ ಬಂದು ಎಷ್ಟು ಕಾಲ ವಿಶ್ರಾಂತಿ ಪಡೆಯಬೇಕೋ ತಿಳಿಯದು. ಹಾಗಾಗಿ ಮುಖದರ್ಶನವೂ ಪತ್ರ ವ್ಯವಹಾರವೂ ದೂರವಾಗಬಹುದು. ಭಗದವನುಗ್ರಹದಿಂದ ಬೇಗನೇ ವಾಸಿಯಾಗಲೂಬಹುದು. ಆಗ ಪುನಃ ಎಲ್ಲ ವ್ಯವಹಾರ ಮುಂದುವರಿಸೋಣ…’’

ತೆಕ್ಕುಂಜದವರು ತಮ್ಮ ನಿತ್ಯ ಪಾರಾಯಣ ಗ್ರಂಥವಾದ ರಾಮಾಯಣವನ್ನು ಆಸ್ಪತ್ರೆಗೂ ಕೊಂಡುಹೋಗಿದ್ದರು. ರೋಗದ ಭಯಾನಕತೆಯನ್ನೂ, ಚಿಕಿತ್ಸೆಯ ಗಂಭೀರತೆಯನ್ನೂ ಅವರು ಮೊದಲೇ ಮನಗಂಡಿದ್ದರು. ರಾಮ ನಾಮವೇ ತಾರಕವೆಂದು ನಂಬಿ ತುಟಿ ಬಿಗಿದಿದ್ದರು. ಆದರೂ ಭವಿಷ್ಯದ ಬಗ್ಗೆ ಅವರು ಸಂದೇಹಗ್ರಸ್ತರೇ ಆಗಿದ್ದರು ಎಂಬುದಕ್ಕೆ ಮೇಲಿನ ಕಾರ್ಡು ನಿದರ್ಶನ. ತೆಕ್ಕುಂಜದವರು ಅಲ್ಲಿಂದ ಮನೆಗೆ ಬರಲಿಲ್ಲ. ಬೇರೆಲ್ಲಿಗೋ ಹೊರಟೇ ಹೋದರು. ತಮ್ಮ ಕಷ್ಟವನ್ನು ಬೇರೆ ಯಾರೂ ನೋಡಬಾರದು ಎಂಬ ಅವರ ಆಶಯವೇನೋ ಒಂದು ಅರ್ಥದಲ್ಲಿ ಫಲಿಸಿತು! ಆದರೆ ನನ್ನಂತಹ ಸಾಮಾನ್ಯನನ್ನು ನಿರಾಶೆ ಮುತ್ತಿಕೊಂಡಿತು. ಬದುಕು ಎಂದರೆ ಹೀಗೇಯೇ? ಬದುಕು ಎಂದರೆ ಇಷ್ಟೇಯೇ…?

* * *

ನನ್ನ ಜೀವನದಲ್ಲಿ ಒಂದು ಸ್ಮರಣೀಯ ಘಟ್ಟ ಎಲೋಸಿಯಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ. ನಾನು ಕಾಲೇಜು ಸೇರಿದ್ದು 1956ರಲ್ಲಿ. ನನ್ನ ಪುಣ್ಯ – ಬಹುಕಾಲ ಅಧ್ಯಾಪನ ದೂರವಾಗಿದ್ದ  ಸೇಡಿಯಾಪು ಕೃಷ್ಣ ಭಟ್ಟರು ಆ ವರ್ಷ ನಾನಿದ್ದ ತರಗತಿಗೆ ಕನ್ನಡ ಬೋಧಕರಾಗಿ ಬಂದರು. ವರ್ಷಾಂತ್ಯದಲ್ಲಿ ಅನಾರೋಗ್ಯ ನಿಮಿತ್ತವಾಗಿ, ಅವಧಿಗೆ ಮೊದಲೇ ಸ್ವಯಂ ನಿವೃತ್ತರೂ ಆದರು. ಆ ಮೇಲಿನ ಮೂರು ವರ್ಷವೂ ತೆಕ್ಕುಂಜದವರ ಅಧ್ಯಾಪನ ಸೌಲಭ್ಯ. ಕಾಲೇಜ್ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ ನನಗೆ ಅವರ ನಿಕಟ ಸಾಹಚರ್ಯ. ವಾರದ ಮೂರೋ ನಾಲ್ಕೋ ತಾಸಿನಲ್ಲಿ ಬೆಳೆಯಲಾಗದ ವಾತ್ಸಲ್ಯ-ಗೌರವಗಳು ತರಗತಿಯ ಹೊರಗೆ ಬೆಳೆದುವು. ಅವರ ವೈದುಷ್ಯ, ಪ್ರವಚನಪಟುತ್ವಗಳ ಬಗೆಗೆ ನಾನು ಹೆಚ್ಚು ಬರೆಯಬೇಕಿಲ್ಲ. ಅವೆಲ್ಲ ಈಗಾಗಲೇ ಲೋಕಪ್ರಸಿದ್ಧ. ರಸಸ್ಪಂದಿಯೂ ಬುದ್ಧಿಗ್ರಾಹ್ಯವೂ ಆಗುವಂತೆ ಪಾಠ ಹೇಳುವುದರೊಂದಿಗೆ ತರಗತಿಯನ್ನು ಅವರು ನಿರ್ವಹಿಸುತ್ತಿದ್ದ ರೀತಿಯೂ ಅಸಾಧಾರಣ. ಸುಮಾರು 100 – 120 ಮಂದಿ ಇರುತ್ತಿದ್ದ ಆ ದೊಡ್ಡ ತರಗತಿಗಳಲ್ಲಿ ಕೆಲವರಿಗೆ – ಏಕೆ – ಹಲವರಿಗೆ ಕನ್ನಡ ಎಂದರೆ ಅಶ್ರದ್ಧೆ, ಲಘುಭಾವ. ಪ್ರವಚನದ ನಡುವೆ ಅವಕಾಶವಾದರೆ ಸಾಕು, ತಮ್ಮ ಬಾಲ ಬಿಚ್ಚುತ್ತಿದ್ದರು. ಪ್ರಾಚೀನ ಕಾವ್ಯ-ನಾಟಕಗಳ ಶೃಂಗಾರ ಸನ್ನಿವೇಶಗಳು ಬರುವುದೇ ತಡ, ತುಟಿ ಮೀರುವ ನಗು, ಕೇಕೆ. ಅಂತಹ ಹೊತ್ತಿನಲ್ಲಿ ತೆಕ್ಕುಂಜದವರು ಅಟ್ಟಣೆ (Platform)ಯಲ್ಲಿ  ಒಂದು ಭಂಗಿಯಲ್ಲಿ ನಿಂತು ಮುಖ ಸಿಂಡರಿಸಿ, ಕಣ್ಣು ಕೆಕ್ಕರಿಸಿ ನೋಡುವುದೇ ಸರಿ – ಕೋಣೆಗೆ ಕೋಣೆಯೇ ಗಪ್ ಚಿಪ್! ಅನವಶ್ಯಕ, ಅಸಾಂದರ್ಬಿಕ ಪ್ರಶ್ನೆಗಳನ್ನು ಯಾರಾದರೂ ಎತ್ತಿದರೆ ಅವನ್ನು ಅಲ್ಲಿಯೇ ಹೊಸಕಿ ಬಿಡುವುದು ಅವರ ರೀತಿ. ಹೊರನೋಟಕ್ಕೆ ಅವರದು ಬಿರುನಡೆ, ಒರಟು ನುಡಿ. ಆ ಕುರಿತು ಇಷ್ಟು ಮಾತ್ರ ಹೇಳಬಲ್ಲೆ. ತೆಕ್ಕುಂಜದವರ ಭಾವರಹಿತ ಮುಖ ಎಂದಿಗೂ ಅವರ ಮನಸ್ಸಿನ ಕನ್ನಡಿಯಲ್ಲ. ಬಿರುನಡೆ-ನುಡಿ ಎಂದಿಗೂ ಅವರ ಹೃದಯವಂತಿಕೆಯ ಮಾನದಂಡವಲ್ಲ. ಆ ಮುಖವನ್ನು ನೋಡಿ, ಮಾತನ್ನು ಕೇಳಿ ‘ನಯಗಾರಿಕೆ ಇಲ್ಲದ ಅಹಂಕಾರಿ ತೆಕ್ಕುಂಜ’ ಎಂದು ದಿಡೀರ್ ನಿರ್ಣಯ ಮಾಡಿಕೊಂಡವರಿದ್ದಾರೆ. ಅಂತಹವರಿಗೆ ಭೂಗರ್ಭದಲ್ಲಿ ಎಂತಹ ಸ್ವರ್ಣ ನಿಕ್ಷೇಪ, ಕಲ್ಲ ಸೆರೆಯಲ್ಲಿ ಎಂತಹ ತಿಳಿನೀರು, ತೆಂಗಿನ ಕರಟದ ಒಳಗೆ ಎಂತಹ ಅಮೃತರಸ ಅಡಗಿದೆ ಎಂಬುದೂ ತಿಳಿಯಲಾರದು.

ತೆಕ್ಕುಂಜದವರದು ನೀರಸ ಪಾಂಡಿತ್ಯ, ದೋಷೈಕ ದೃಷ್ಟಿ ಎಂದವರೂ ಇದ್ದಾರೆ. ಅಂತಹವರ ವಾದಕ್ಕೆ ಆಧಾರವೆಂದರೆ ತೆಕ್ಕುಂಜದವರು ವ್ಯಾಕರಣ ದೋಷಗಳನ್ನೋ ಅಶುದ್ಧ ಪ್ರಯೋಗಗಳನ್ನೋ ಗುರುತಿಸಿ ಹೇಳುತ್ತಿದ್ದ ರೀತಿ. ಅವರು ಏನನ್ನಾದರೂ ಓದುವಾಗ ಜೊತೆಯಲ್ಲಿ ಒಂದು ಸೀಸದ ಕಡ್ಡಿ ಇದ್ದೇ ಇರುತ್ತಿತ್ತು. ತಪ್ಪುಗಳ ಬೆನ್ನು ಹಿಡಿದು, ಸೀಸದ ಕಡ್ಡಿಯಿಂದ ಚುಚ್ಚಿ ಕೆಡಹುತ್ತಿದ್ದರು. ಎಷ್ಟೋ ಪದ ಪ್ರಯೋಗಗಳ ಬಗೆಗೆ ಅವರು ಪತ್ರಿಕೆಗಳಲ್ಲಿ ಆಗಾಗ ಬರೆದದ್ದೂ ಅಲ್ಲಲ್ಲಿ  ಉಪನ್ಯಾಸ ಮಾಡಿದ್ದೂ ಉಂಟು. ಅಷ್ಟರಿಂದ ಅವರನ್ನು ದೋಷೈಕ ದೃಕ್ ಎನ್ನಲಾಗದು. ‘‘ಭಾಷೆ ಶುದ್ಧವಾಗಿರಬೇಕು, ಅರ್ಥ ನಿರ್ದುಷ್ಟವಾಗಿರಬೇಕು. ಭಾಷೆಯ ಸಾರ್ವಕಾಲಿಕ ರೂಪಕ್ಕೆ ಇದು ತೀರ ಅವಶ್ಯ. ನಮ್ಮ ವಾಙ್ಮಯ ಹೂ-ಹಣ್ಣುಗಳ ತೋಟದಂತೆ ಹುಲುಸಾಗಿರಬೇಕೇ ವಿನಾ ಬಿದಿರುಮೆಳೆ, ಸೀಗೆಮುಳ್ಳುಗಳ ಗೊಂಡಾರಣ್ಯ ಆಗಬಾರದು’’ ಎಂಬ ನಂಬಿಕೆ ಅವರದಾಗಿತ್ತು. ತೆಕ್ಕುಂಜದವರು ಕಂಡದ್ದಕ್ಕೆಲ್ಲ ಬಾಯಿ ಹಾಕಿ ನುಂಗಿ ಬಿಡುವ ಆಡಿನ ಜಾತಿಯಲ್ಲ. ರುಚಿಯಾದದ್ದನ್ನೇ ಹುಡುಕಿ ಮೆಲ್ಲುವ ಆನೆಯ ರೀತಿ. ಅದನ್ನೇ ಮೆಚ್ಚಿ ಕಟ್ಟಿಕೊಂಡವರೊಂದಿಗೆ ನನ್ನ ವಾದವಿಲ್ಲ. ‘ಲೋಕೋ ಬಿನ್ನ ರುಚಿಃ’

ತೆಕ್ಕುಂಜದವರು ಸ್ವಕೇಂದ್ರಬಿಂದುವಾದ ಅಹಂಕಾರಿ ಖಂಡಿತ ಅಲ್ಲ. ಅವರಿಗೆ ನಿಜವಾದ ಹಿರಿಯರಲ್ಲಿ ಆದರ, ಸಮಾನರಲ್ಲಿ ಸ್ನೇಹ, ಕಿರಿಯರಲ್ಲಿ ವಾತ್ಸಲ್ಯ ಧಾರಾಳ ಎಂಬುದನ್ನು ಈ ಇಪ್ಪತ್ತೈದು ವರ್ಷಗಳಲ್ಲಿ ಕಂಡಿದ್ದೇನೆ. ಅವರ ಗುರು-ಮಿತ್ರ-ಶಿಷ್ಯ ವರ್ಗ ತುಂಬ ದೊಡ್ಡದು. ಕೀರ್ತಿಶೇಷ ಮುಳಿಯ ತಿಮ್ಮಪ್ಪಯ್ಯ, ಗೋವಿಂದ ಪೈ, ಪೊಳಲಿ ಶಂಕರನಾರಾಯಣ ಶಾಸ್ತ್ರಿ, ಶ್ರೀ ಸೇಡಿಯಾಪು ಕೃಷ್ಣ ಭಟ್ಟ ಇವರೆಲ್ಲರನ್ನು ಅವರು ಗುರು ಸ್ಥಾನದಲ್ಲಿರಿಸಿ ಭಕ್ತಿ ವಿನಯಗಳನ್ನು ತೋರಿದ್ದಾರೆ. ಮುಳಿಯದವರಿಗಾಗಿ ‘ಶ್ರದ್ಧಾಂಜಲಿ’ ಎಂಬ ಸ್ಮಾರಕ ಸಂಪುಟವನ್ನು ಏಕಾಂಗವಾಗಿ ಪ್ರಕಟಿಸುವ ಸಾಹಸವನ್ನು ಮಾಡಿದ್ದರು. ಕನ್ನಡದ ಎಂತೆಂತಹ ‘ಸಿಂಹ’ಗಳ ಮುಂದೆಯೂ ‘ಕೈಪೊಡೆ’ಯನ್ನು ನಿರ್ಭಯವಾಗಿ ಬಿಸುಡಬಲ್ಲ ತೆಕ್ಕುಂಜದವರು ಸೇಡಿಯಾಪು ಎಂದರೆ ತಲೆ ಬಾಗುತ್ತಿದ್ದರು. ಅವರ ನುಡಿ ತೆಕ್ಕುಂಜದವರಿಗೆ ‘ಟಾಠಡಾಢಣ’. ಕಾಲವಶರಾಗುವ ವರೆಗೂ ಅವರು ಸೇಡಿಯಾಪು ಇದ್ದಲ್ಲಿಗೆ ಹೋಗಿ, ಅಥವಾ ಅವರಿಗೆ ಪತ್ರಗಳನ್ನು ಬರೆದು, ಸಂದೇಹ ನಿರಸನ ಮಾಡಿಕೊಳ್ಳುತ್ತಿದ್ದರು. ಎಲೋಸಿಯಸ್ ಕಾಲೇಜಿನ ‘ಕರ್ನಾಟಕ ಸಂಘ’ದ ಮೂಲಕ ನಮ್ಮಿಬ್ಬರ ಸಹ ಸಂಪಾದಕತ್ವದಲ್ಲಿ ಪ್ರಕಟವಾದ (1959) ಸೇಡಿಯಾಪು ಅಭಿನಂದನ ಗ್ರಂಥ ‘ಒಸಗೆ’ಯ ಪ್ರತಿಗಳಲ್ಲಿ ಕೆಲವೇ ಮಾರಾಟವಾಗಿ ಉಳಿದವೆಲ್ಲ ಅಚ್ಚು ಕೂಟದ ಮೂಲೆಯಲ್ಲಿ ಬಿದ್ದುಕೊಂಡಿದ್ದಾಗ ಅಚ್ಚಿನ ವೆಚ್ಚದಲ್ಲಿ ಬಾಕಿಯಾದದ್ದನ್ನೆಲ್ಲ ತಾವೇ ತೆತ್ತು ಪುಸ್ತಕದ ಕಟ್ಟುಗಳನ್ನು ತರಿಸಿ ಮನೆಯಲ್ಲಿ ಇರಿಸಿಕೊಂಡವರು, ತೆಕ್ಕುಂಜ! ಅವರ ‘ವೃದ್ಧ ಸೇವಾನುರಾಗ’ ಈ ರೀತಿಯದು.

ಉತ್ತಮ ಅಧ್ಯಾಪಕನಾಗುವ ಆಸೆ ಉಳ್ಳವನು ಬದುಕಿನ ಉದ್ದಕ್ಕೂ ವಿಧೇಯ ವಿದ್ಯಾರ್ಥಿಯಾಗಿರುವುದೂ ಅನಿವಾರ್ಯ. ಅಹಂಕಾರಿಯಿಂದ ಅದಾಗದು. ತೆಕ್ಕುಂಜದವರು ಅಂತಹ ವಿದ್ಯಾರ್ಥಿ, ಜ್ಞಾನಪಿಪಾಸು. ತಾನು ಕಲಿಯಬೇಕಾದದ್ದು, ತಿದ್ದಿಕೊಳ್ಳಬೇಕಾದದ್ದು ಎಷ್ಟೋ ಇದೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ನಾನು ಈ ಮೊದಲು ಹೇಳಿದ ಹಿರಿಯರ ಮಾತಿರಲಿ, ಸಮಾನರಿಂದ, ಕಿರಿಯರಿಂದ – ವಿದ್ಯಾರ್ಥಿಗಳಿಂದಲೂ ಅವರು ಕಲಿಯಲು ಸಿದ್ಧರಾಗಿದ್ದರು. ಪುತ್ತೂರಿನ ಒಂದು ಸಾಹಿತ್ಯ ಸಭೆಯನ್ನು ಮುಗಿಸಿ ನಾವು ಜೊತೆಯಾಗಿ ಹಿಂದಿರುಗುತ್ತಿದ್ದೆವು. ಅಮೃತ ಸೋಮೇಶ್ವರರೂ ಒಟ್ಟಿಗಿದ್ದರು. ಮಾತುಕತೆಯಲ್ಲಿ ‘ಸೋತು ಸುಣ್ಣವಾಗು’ ಎಂಬ ನುಡಿಗಟ್ಟಿನ ಪ್ರಸ್ತಾವ ಬಂತು. ತೆಕ್ಕಂಜದವರು ‘ಸೋತು ಸುಣ್ಣವಾಗು’ ಎಂಬುದಕ್ಕೆ ನಾವು ತಿಳಿದುಕೊಂಡ ಅರ್ಥವಲ್ಲ. ಮುದ್ದಣನೇ ‘ಸೋತು ಸುಣ್ಣದೊಳಾದಂ’ ಎಂದು ಪ್ರಯೋಗಿಸಿದ್ದಾನೆ. ಸುಣ್ಣವೆಂದರೆ ರೂಡಿಯಲ್ಲಿರುವ ‘ಚುಣ್ಣ’ – ಎಂದರೆ ಕಟ್ಟಡಗಳ ಪಕ್ಕಾಸುಗಳಿಗೆಲ್ಲ ಆಧಾರವಾಗಿರುವ ಅಡ್ಡ ತೊಲೆ. ಎಲ್ಲ ಹೊರೆಯೇ ಅದರ ಮೇಲೆ ಬೀಳುತ್ತದೆ. ನಾನಾ ಬಗೆಯ ಕಷ್ಟ – ನಷ್ಟ ಹೊಂದುವವನ ಪಾಡು ಆ ಸುಣ್ಣದ ಹಾಗೆ. ಇದು ವ್ಯಂಗ್ಯಾರ್ಥ. ಇದನ್ನು ನನಗೆ ತಿಳಿಸಿದವರು ತುದಿಯಡ್ಕ ವಿಷ್ಣಯ್ಯ ಎಂದರು! ಈ ಶಬ್ದಾರ್ಥದ ಬಗೆಗೆ ಅಭಿಪ್ರಾಯ ವ್ಯತ್ಯಾಸವಿರಬಹುದು. ಆದರೆ ತೆಕ್ಕುಂಜದವರ ಜ್ಞಾನದಾಹ ಯಾವ ಬಗೆಯದು ಎಂಬುದಕ್ಕೆ ಈ ಅನ್ವೇಷಣ ಪ್ರೀತಿಯೇ ಒಂದು ನಿದರ್ಶನ.

ಶೈವ ಪುರಾಣಗಳಲ್ಲಿ ‘ಗುಪ್ತ ಭಕ್ತ’ಈ ವರ್ಣನೆ ಇದೆ. ತೆಕ್ಕುಂಜದವರದು ಈ ರೀತಿಯ ಗುಪ್ತ ಪ್ರೀತಿ, ವಿಶ್ವಾಸ, ಗೌರವ. ಅದು ನೆಲದ ಅಡಿಯಲ್ಲಿ ಹರಿಯುವ ಗಂಗೆಯ ಹಾಗೆ. ಎಲೋಸಿಯಸ್ ಕಾಲೇಜಿನ ‘ಕರ್ನಾಟಕ ಸಂಘ’ದಲ್ಲಿ ಒಂದಾನೊಂದು ಕಾರ್ಯಕ್ರಮದ ಯೋಜನೆಯಾಗಿತ್ತು. ಕಾಲೇಜಿನ ಅಧ್ಯಾಪಕ ಕೊಠಡಿಯ ಹತ್ತಿರ ನಿಂತು ಅವರೊಂದಿಗೆ ಅದರ ಕುರಿತು ಚರ್ಚಿಸುತ್ತಿದ್ದೆ. ಆ ಕಾರ್ಯಕ್ರಮ ನಾವು ಯೋಚಿಸಿಕೊಂಡಂತೆ ನಡೆಯಲಾರದು ಎಂದು ಅವರು ತಿಳಿಸಿದಾಗ ನನಗಾದ ನಿರಾಶೆ ಅಷ್ಟಿಷ್ಟಲ್ಲ. ನನಗೆ ಕಣ್ಣು ಕತ್ತಲೆ ಬಂದು ತಲೆ ಸುತ್ತಿತು. ಮುಂದೆ ಎಚ್ಚರಗೊಂಡಾಗ ಒಳಗೆ ಕುರ್ಚಿಯಲ್ಲಿ ಕೂತಿದ್ದೆ. ತೆಕ್ಕುಂಜದವರು ಕಣ್ಣು ಮುಖಗಳಿಗೆ ನೀರು ತಳಿದು ಉಪಚರಿಸುತ್ತಿದ್ದರು. ‘ಇಷ್ಟಕ್ಕೆಲ್ಲ ಹೀಗಾದರೆ ಹೇಗಯ್ಯ?’ ಎಂದು ಸಂತೈಸಿದರು.

ನನ್ನ ಬರವಣಿಗೆಗಳೇನಾದರೂ ಇದ್ದಲ್ಲಿ ಒಂದೋ ಸೇಡಿಯಾಪು ಇಲ್ಲವೇ ತೆಕ್ಕುಂಜದವರಿಗೆ ಓದಿ ಹೇಳಿ ಅವರ ಒಪ್ಪಿಗೆ ಪಡೆಯದೆ ಈವರೆಗೆ ನಾನು ಪ್ರಕಟಿಸಿದ್ದಿಲ್ಲ. ಯಾವುದೋ ಒಂದು ಪತ್ರಿಕೆಯ ವಿಶೇಷಾಂಕಕ್ಕಾಗಿ ಕೀ.ಶೇ. ಪೊಳಲಿ ಶಾಸ್ತ್ರಿಯವರನ್ನು ಕುರಿತು ಒಂದು ಸಣ್ಣ ವ್ಯಕ್ತಿಚಿತ್ರ ಬರೆದಿದ್ದೆ. ಅದನ್ನು ಶಾಸ್ತ್ರಿಯವರ ಆತ್ಮೀಯ ತೆಕ್ಕುಂಜದವರಿಗೆ ತೋರಿಸಿದೆ. ಅವರು ಓದಿದರು, ಒಪ್ಪಿದರು. ಅಷ್ಟೇ ಅಲ್ಲ – ‘‘ಆ ಪತ್ರಿಕೆಗೆ ಬೇಡವೋ ಇದು, ಇಲ್ಲಿ ಕೊಡು. ಶಾಸ್ತ್ರಿ ಸ್ಮಾರಕ ಗ್ರಂಥ ಪ್ರಕಟವಾಗುತ್ತದೆ. ಅದರಲ್ಲಿ ಸೇರಬೇಕಾದ್ದು ಇದು’’ ಎಂದರು! ಹಾಗೆಯೇ ಆಯಿತು, ಲೇಖನ ‘ಯಕ್ಷಗಾನ ಮಕರಂದ’ದಲ್ಲಿ ಸೇರಿಕೊಂಡಿತು. ಇದು ತೆಕ್ಕುಂಜದವರ ರಸದೃಷ್ಟಿ, ಗುಣ ಪಕ್ಷಪಾತ. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ನನ್ನನ್ನು ಬಹುವಚನದಿಂದ ಕರೆಯುತ್ತಿದ್ದರು. ಆಮೇಲೆ ಏಕವಚನದಿಂದ ಕರೆಸಿಕೊಳ್ಳುವಷ್ಟು ಹತ್ತಿರವಾದೆ. ರಾಜ್ಯ ಸರಕಾರವು ನಾಡಿನ ಕೆಲವು ಸಾಹಿತಿಗಳಿಗೂ ಕಲಾಕಾರರಿಗೂ ಮಾಸಾಶನಗಳನ್ನು ಕೊಡಮಾಡಿದಾಗ, ಒಬ್ಬರು ತೆಕ್ಕುಂಜದವರ ಹತ್ತಿರವೇ ‘ಇದು ನಿಮಗೂ ಸಿಗಬೇಕಿತ್ತು’ ಎಂದರು. ಅದಕ್ಕೆ ಅವರು ತಟಕ್ಕನೆ ಹೇಳಿದರು ‘ನನಗೇಕಯ್ಯ ಅದು? ಸೇಡಿಯಾಪು ಅವರಿಗೆ, ಅಳಿಕೆ ರಾಮಯ್ಯ ರೈಗಳಿಗೆ, ಅಗರಿ ಶ್ರೀನಿವಾಸ ಭಾಗವತರಿಗೆ ಸಿಕ್ಕರೆ ಸಂತೋಷ’. – ಇದು ತೆಕ್ಕುಂಜದವರ ರೀತಿ. ‘ಮಾತಿನ ಜೆಡೆ ಹೆಣೆಯುವ ಸೈರಂದ್ರಿತನ’ ಅವರದ್ದಲ್ಲ. ಎಲ್ಲವೂ ‘ಸಾಫ್‌ಸೀದಾ’.

* * *

ತೆಕ್ಕುಂಜದವರಿಗೆ ಲೇಖನಿ ಒಂದು ಮಂತ್ರದಂಡವಾಗಲಿಲ್ಲ. ಬ್ರಹ್ಮದಂಡವಾಯಿತು. ಅನಿವಾರ್ಯ, ಅವಶ್ಯ ಎಂದೆನಿಸಿದಾಗ ಮಾತ್ರ ಅದನ್ನು ಪ್ರಯೋಗಿಸಿದರು. ಅವರಲ್ಲಿ ಚಿಂತನ ಬೋಧನಗಳೇ ಹೆಚ್ಚು. ಲೇಖನ ಕಡಮೆ. ‘ಓದು ಬರೆಹದ ಶತ್ರು’ ಎಂಬ ಮಾತಿದೆ. ಓದು… ಓದು.. ತಮ್ಮ ಕೈಗೆ ಏನೇನು ಬಂತೋ ಅದೆಲ್ಲವನ್ನೂ ಬಿಡದೆ ಓದುತ್ತಿದ್ದರು. ಕಾಳನ್ನು ಕೂಡಿಡುವುದು, ಕಳೆಯನ್ನು ಕಿತ್ತು ಬಿಸುಡುವುದು ಅವರ ಕ್ರಮವಾಗಿತ್ತು. ಹಾಗೆ ಅವರು ವಾಚನಪ್ರೇಮಿಯಾದರೂ, ಈ ನಾಲ್ಕಾರು ದಶಕಗಳಲ್ಲಿ ಅವರು ಬರೆದದ್ದು ಸತ್ವದೃಷ್ಟಿಯಿಂದ ಅಲ್ಪವೇನೂ ಅಲ್ಲ. ಗುರುಸದೃಶರೆಂದು ತಾವು ನಂಬಿದ್ದ ಸೇಡಿಯಾಪು ಅವರ ‘ಪುಣ್ಯಲಹರಿ’ಯಿಂದ ಪ್ರಚೋದಿತರಾಗಿ ಪಿರಿಯಕ್ಕರದಲ್ಲಿ ರಚಿಸಿದ ‘ವೀರವಿಲಸಿತ’ವೆಂಬ ಖಂಡಕಾವ್ಯ ಸಾಂಗತ್ಯದಲ್ಲಿ ಹೊಸೆದಿರುವ ‘ಮಧುರಂಜನೀ’ ಎಂಬ ಶೃಂಗಾರ ಕಾವ್ಯಗಳಲ್ಲಿ ಅವರ ಕವಿತ್ವದ ಒಂದು ಮುಖವಾದರೆ ‘ಕನ್ನಡ ಸಮಾಸಗಳು’ ಅವರ ಉದ್ದಂಡ ಪಾಂಡಿತ್ಯಕ್ಕೆ ಉದಾಹರಣೆ. ತಮಗೆ ಅಚ್ಚುಮೆಚ್ಚಿನ ‘ಶ್ರೀ ರಾಮಾಶ್ವಮೇಧ’ದ ಸಾರ ಸಂಗ್ರಹಿಸಿ, ಟಿಪ್ಪಣಿ ಬರೆದು, ಮುದ್ದಣನ ಜನ್ನಗುದುರೆಗೆ ಮತ್ತೊಮ್ಮೆ ನಾಡಿನಲ್ಲೆಲ್ಲ ಜೈತ್ರಯಾತ್ರೆ ಮಾಡಿಸಿದರು. ತಾವೂ ಕಪ್ಪ ಕಾಣಿಕೆಗಳನ್ನು ಗೆದ್ದರು. ನಿಧನ ಪೂರ್ವದ ನಾಲ್ಕಾರು ವರ್ಷಗಳಲ್ಲಿ ತೆಕ್ಕುಂಜದವರು ಕೇಶಿರಾಜನ ‘ಶಬ್ದಮಣಿ ದರ್ಪಣ’ಕ್ಕೆ ವಿಸ್ತತ ವ್ಯಾಖ್ಯಾನ ಬರೆಯುವುದರಲ್ಲಿ ನಿರತರಾಗಿದ್ದರು. ಆದರೆ ಕಾಲರಾಯ ಅವರನ್ನು ಕರಕೊಂಡು ಬಿಟ್ಟ. ಅರೆಯಾಗಿರುವುದನ್ನು ಇಡಿಗೊಳಿಸುವುದಕ್ಕೆ ಇನ್ನೊಬ್ಬ ತೆಕ್ಕುಂಜದವರೇ ಬರಬೇಕು. ಅದು ಅಂತಿಂತಹವರಿಗೆ ಸಗ್ಗುವ ಕೆಲಸವಲ್ಲ. ಇನ್ನು, ವಿವಿಧ ಪತ್ರಿಕೆಗಳಲ್ಲೋ, ಗ್ರಂಥಗಳಲ್ಲೋ ಚೆದರಿರುವ ಲೇಖನಗಳನ್ನು ಸಂಗ್ರಹಿಸಿದರೆ ಅವೆಲ್ಲ ಕನ್ನಡದ ಕಣಜದಲ್ಲಿ ಹೊನ್ನಿನ ಕಾಳುಗಳು ಎನಿಸಬಲ್ಲವು. ಒಂದೊಂದರಲ್ಲೂ ತೆಕ್ಕುಂಜದವರ ಪಾಂಡಿತ್ಯ, ರಸಿಕತೆ, ಸ್ವೋಪಜ್ಞತೆಗಳು ಎದ್ದು ಕಾಣುತ್ತವೆ.

* * *

ಮಂಗಳೂರಿಗೆ ಹೋದಾಗ, ಅಲ್ಲಿಯ ಕೆಲಸಗಳೆಲ್ಲ ಪೂರೈಸಿದ ಮೇಲೆ, ತಪ್ಪದೆ ನಾನು ಕಂಡು ಮಾತಾಡಿಸುತ್ತಿದ್ದವರೆಂದರೆ ಗುರುವರ್ಯ ತೆಕ್ಕುಂಜ. ಅವರ ಮನೆಯ ಜಗಲಿಯ ಕಟ್ಟೆಯಲ್ಲಿ ನಾನು, ಎದುರು ಕುರ್ಚಿಯಲ್ಲಿ ಅವರು, ಸ್ವಲ್ಪ ದೂರದ ಬೆಂಚಿನಲ್ಲಿ ಶ್ರೀಮತಿ ರತ್ನಮ್ಮ ಹೀಗೆ ಮುಮ್ಮುಖವಾಗಿ ಏನೇನೋ ಮಾತುಕತೆ. ಅಂತಹ ತೆಕ್ಕುಂಜದವರು ಈಗ ಎಲ್ಲ ಎಂದರೆ ಮನಸ್ಸು ಒಪ್ಪುವುದಿಲ್ಲ. ಅವರು ನಿಧನರಾದ ಮರುದಿನ ಸಾಯಂಕಾಲ ಮಂಗಳೂರಿನ ಎಸ್.ಸಿ.ಸಿ. ಬ್ಯಾಂಕಿನಲ್ಲಿ ಒಂದು ಸಂತಾಪ ಸಭೆ ನಡೆದಿತ್ತು. ನೂರಾರು ಜನ ಸೇರಿದ್ದರು. ನಾನೂ ಮಾತಾಡಲು ಹೊರಟು ಗಂಟಲು ಬಿಗಿದು ಸುಮ್ಮನಾಗಿದ್ದೆ. ಸಭೆಯನ್ನು ಮುಗಿಸಿ ರಾತ್ರಿಯ ಊಟ ತೀರಿಸಿ ರಸ್ತೆಯಲ್ಲಿ ತಿರುಗಾಡುತ್ತಿದ್ದರೆ ‘ಇನ್ನೂ ಹೊತ್ತಿದೆಯಲ್ಲಾ, ಏನು ಮೋಡೋಣ? ತೆಕ್ಕುಂಜದವರಲ್ಲಿಗೆ ಹೋಗೋಣವೇ?’ ಎಂದುಕೊಂಡೆ. ಇನ್ನೊಂದು ಕ್ಷಣ ‘ಇದೇನು ಭ್ರಮೆ! ಈಗ ತಾನೇ ಅವರಿಗೆ ನನ್ನ ಶ್ರದ್ಧಾಂಜಲಿ ಅರ್ಪಿಸಿದ್ದೇನಲ್ಲಾ’ ಎಂದು ತಡೆದುಕೊಂಡೆ! – ಎರಡೂವರೆ ದಶಕಗಳ ಆ ಭಾಗ್ಯ ಇನ್ನೆಲ್ಲಿ?

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |

ಚಕ್ಷುರುನ್ಮೀಲಿತಂ ಏನ ತಸ್ಮೆ  ಶ್ರೀ ಗುರವೇ ನಮಃ ||

ಡಾ. ಅಮೃತ ಸೋಮೇಶ್ವರರಿಗೆ ತೆಕ್ಕುಂಜದವರು ಆದರಣೀಯ ಪ್ರಾಧ್ಯಾಪಕರು. ತನ್ನ ವಿದ್ಯಾಗುರುವಿನ ಬೋಧನ ರೀತಿ, ಸಾಹಿತ್ಯ ಮೋಡಿಯನ್ನು ಅವರು ಹೀಗೆ ಬಣ್ಣಿಸುತ್ತಾರೆ :

‘‘1954-58ರ ಅವಧಿಯಲ್ಲಿ ಸಂತ ಎಲೋಶಿಯಸ್ ಕಾಲೇಜಿನಲ್ಲಿ ನಾನು ಪ್ರೊ. ತೆಕ್ಕುಂಜ ಗೋಪಾಲಕೃಷ್ಣ ಭಟ್ಟರ ಕನ್ನಡ ವಿದ್ಯಾರ್ಥಿಯಾಗಿದ್ದೆ. ಅವರ ಅಗಾಧ ಪಾಂಡಿತ್ಯ, ಗಂಬೀರ ನಿಲುವು, ಆಕರ್ಷಕ ಪಾಠಕ್ರಮ – ಇವು ವಿದ್ಯಾರ್ಥಿಗಳನ್ನು ವಿಶೇಷವಾಗಿ ಸೆಳೆದಿದ್ದವು. ಇಂಟರ್‌ಮೀಡಿಯೆಟ್ ತರಗತಿಗೆ ನಮಗೆ ಪಠ್ಯವಾಗಿದ್ದ ಕನ್ನಡ ಪುಸ್ತಕಗಳಲ್ಲಿ ಸೇಡಿಯಾಪು ಕೃಷ್ಣ ಭಟ್ಟರ ‘ಶ್ವಮೇಧ’ ಅಥವಾ ‘ನಾಯನಡತೆ’ ಎಂಬ ಕಿರುಕಾವ್ಯವೂ ಒಂದಾಗಿತ್ತು. ಅದನ್ನು ತೆಕ್ಕುಂಜದವರು ಪಾಠ ಮಾಡಿದ ರೀತಿಯೇ ಅನಾದೃಶವಾಗಿತ್ತು. ಕಾವ್ಯವನ್ನು ರಸಾತ್ಮಕವಾಗಿ ಅವರು ವಾಚಿಸುವ ಕ್ರಮ ಮಾರ್ಮಿಕವಾಗಿತ್ತು. ವಿವರಣೆ ಉಚಿತವೂ ಖಚಿತವೂ ಆಗಿರುತ್ತಿತ್ತು. ನಾಯಿಯ ದುರಂತದ ಆ ಕತೆಯ ಕರುಣರಸ ಕರುಳು ಹಿಂಡುವಂತಿತ್ತು. ಅಂದಿನ ಆ ಕಾವ್ಯಾಸ್ವಾದದ ಅನುಭವ ಎಂದೂ ಮರೆಯಲಾರದ್ದು.

ಮುಂದೆ ಪದವಿ ತರಗತಿಯಲ್ಲಿ ಮುದ್ದಣ ಕವಿಯ ‘ಶ್ರೀ ರಾಮಾಶ್ವಮೇಧ’ ಎಂಬ ಹಳಗನ್ನಡ ಗದ್ಯಕಾವ್ಯ ಪಾಠ ನಮಗೆಲ್ಲ ಒಂದು ರಸಲೋಕ ಸಂಚಾರವಾಗಿತ್ತು. ಆ ಕಾವ್ಯದ ಜೀವಾಳವಾದ ಮುದ್ದಣ – ಮನೋರಮೆಯರ ಸಂವಾದಗಳಲ್ಲಿ ಅಭಿವ್ಯಕ್ತಗೊಂಡ ಅಪೂರ್ವ ಜೀವನ ರಸಿಕತೆಯನ್ನು ಒಬ್ಬ ಸಹೃದಯ ವಿಮರ್ಶಕನಾಗಿ ತೆರೆದಿಡುತ್ತಿದ್ದರು. ಕೆಲವೊಮ್ಮೆ ಗುರುಗಳು ತೀರಾ ಕಟು ವಿಮರ್ಶಕರಾಗಿ ಬಿಡುತ್ತಿದ್ದರು. ಯುಕ್ತಾಯುಕ್ತತೆಗೆ ಗಮನ ನೀಡದ ಬರವಣಿಗೆಗಳನ್ನು ಖಂಡಿಸುತ್ತಿದ್ದರು. ಹಿರಿಯ ಭಾಷಾ ಪಂಡಿತರಾಗಿದ್ದ ಅವರು ವ್ಯಾಕರಣದೋಷಗಳನ್ನು ಕ್ಷಮಿಸುತ್ತಿರಲಿಲ್ಲ. ಅವರ ಅಧ್ಯಯನದ ಹರಹು ವಿಸ್ತಾರವಾಗಿತ್ತು. ಹಳಗನ್ನಡ, ನಡುಗನ್ನಡ ಕಾವ್ಯಗಳನ್ನೂ, ಶಬ್ದಮಣಿ ದರ್ಪಣಾದಿ ಶಾಸ್ತ್ರ ಗ್ರಂಥಗಳನ್ನೂ ಕೂಲಂಕಷವಾಗಿ ಅಧ್ಯಯನ ಮಾಡಿದ್ದ ಅವರ ಸಾಹಿತ್ಯ ಸಂಬಂಧಿ ಹಾಗೂ ಸಂಸ್ಕೃತಿಪರ ಚಿಂತನಗಳು ಚಿಕಿತ್ಸಕ ದೃಷ್ಟಿಯಿಂದ ಕೂಡಿದ್ದವು.

ತೆಕ್ಕುಂಜದವರು ಒಂದು ಪದ್ಯವನ್ನೋ ವಿಚಾರವನ್ನೋ ವಿವರಿಸಿದ ಬಳಿಕ ಅಲ್ಲಿ ಸಾಮಾನ್ಯವಾಗಿ ಸಂದೇಹಗಳು ಉಳಿಯುತ್ತಿದ್ದಿಲ್ಲ. ಆದರೂ ತರಗತಿಯಲ್ಲಿ ಅವರಲ್ಲಿ ಪ್ರಶ್ನೆ ಕೇಳಬಹುದಾಗಿತ್ತು. ಉದ್ದೇಶಪೂರ್ವಕವಾದ ಅಧಿಕಪ್ರಸಂಗಿತನವನ್ನು ಮಾತ್ರ ಅವರು ಸಹಿಸುತ್ತಿದ್ದಿಲ್ಲ. ಅಂಥವರ ಮುಖದ ನೀರಿಳಿಸಿಬಿಡುತ್ತಿದ್ದರು. ಹಾಗಾಗಿ ಯಾವ ತುಂಟ ಹುಡುಗನೂ ಅವರ ತರಗತಿಯಲ್ಲಿ ಬಾಲ ಬಿಚ್ಚಲು ಯತ್ನಿಸುತ್ತಿದ್ದಿಲ್ಲ.

ಆ ಕಾಲದಲ್ಲಿ ತೆಕ್ಕುಂಜದವರಿಗಿಂತ ಹಿರಿಯರಾದ ಸೇಡಿಯಾಪು ಕೃಷ್ಣ ಭಟ್ಟರೂ ಕನ್ನಡ ವಿಭಾಗದಲ್ಲಿದ್ದರು. ಅವರ ಮೇಲೆ ಅತೀವ ಗೌರವ ಇದ್ದ ತೆಕ್ಕುಂಜದವರು, ‘‘ಕನ್ನಡ ವಿಭಾಗಕ್ಕೆ ನಿಯಮ ಪ್ರಕಾರ ನಾನು ಮುಖ್ಯಸ್ಥನಾದರೂ ನನಗೆ ನಿಜವಾಗಿಯೂ ‘ಹೆಡ್’ ಸೇಡಿಯಾಪು!’’ ಎಂದು ಹೇಳುವುದಿತ್ತು. ಇದು ಅವರ ವಿದ್ವತ್‌ವಿನಯವನ್ನೂ ಪ್ರಾಜ್ಞ ಗೌರವವನ್ನೂ ಸೂಚಿಸುತ್ತದೆ. ಈ ಗುರುದ್ವಯರ ಮನೆಗಳಿಗೆ ನಾನು ಆಗಾಗ ಹೋಗಿ ಸಾಹಿತ್ಯ ಸಂಬಂಧವಾದ ತುಸು ಹೆಚ್ಚಿನ ವಿಚಾರಗಳನ್ನು ತಿಳಿಯಲು ಎಳಸುತ್ತಿದ್ದೆ. ನನ್ನಂಥ ಕೆಲವರನ್ನು ಅವರಿಬ್ಬರೂ ಅತ್ಯಂತ ವಾತ್ಸಲ್ಯದಿಂದ ನಡೆಸಿಕೊಂಡು ಯುಕ್ತ ಮಾರ್ಗದರ್ಶನ ನೀಡುತ್ತಿದ್ದುದನ್ನು ಮರೆಯಲಾರೆ. ತೆಕ್ಕುಂಜದವರ ಮನೆಯಲ್ಲಿ ಅವರ ಹಾಗೂ ಅವರ ಪತ್ನಿ ರತ್ನಮ್ಮನವರ ಸಂವಾದ, ವಾಗ್ವಾದಗಳು ತುಂಬ ಸ್ವಾರಸ್ಯವಾಗಿರುತ್ತಿದ್ದವು. ಮುದ್ದಣ – ಮನೋರಮೆಯರ ಸಂಭಾಷಣೆಯನ್ನು ನೆನಪಿಸುತ್ತಿದ್ದವು.

ತೆಕ್ಕುಂಜದವರ ಕೃತಿಗಳ ಸಂಖ್ಯೆ ಕಡಿಮೆ. ಆದರೆ ಮೌಲ್ಯದಲ್ಲಿ ಹಿರಿದಾಗಿವೆ. ಅದರಲ್ಲೂ ಅವರ ‘ಶಬ್ದಮಣಿ ದರ್ಪಣ ವ್ಯಾಖ್ಯಾನ’ ಹಾಗೂ ‘ಟಿಪ್ಪಣಿ ಸಾರಸಮೇತ ಶ್ರೀ ರಾಮಾಶ್ವಮೇಧ’ – ಇವೆರಡು ಅವರ ವಿದ್ವತ್ತಿನ ಯಮಳ ಕಳಶಗಳಾಗಿವೆ. ಅವರ ಕಾವ್ಯಕೃತಿಗಳಾದ ‘ವೀರ ವಿಲಸಿತ’ ಮತ್ತು ‘ಮಧುರಂಜನೀ’ ಇವು ಕಾವ್ಯಜ್ಞರ ಮನಸ್ಸನ್ನು ಅಷ್ಟಾಗಿ ಸೂರೆಗೊಳ್ಳಲಿಲ್ಲ. ಇವರ ಇತರ ವಿಮರ್ಶಾ ಕೃತಿಗಳೂ ವಿದ್ವತ್ ಲೇಖನಗಳೂ ಸಾಹಿತ್ಯ ವಿದ್ಯಾರ್ಥಿಗಳಿಗೂ ವಿದ್ವಾಂಸರಿಗೂ ಸಾಕಷ್ಟು ಉಪಯುಕ್ತವಾಗಿವೆ.

ಮಂಗಳೂರು ಕನ್ನಡ ಸಂಘದ ಅಧ್ಯಕ್ಷರಾಗಿ ಅನೇಕ ವರ್ಷ ಅವರು ಕಿರಿಯರಿಗೆ ಮಾರ್ಗದರ್ಶನ ಮಾಡಿದ್ದರು. ಹೊರತೋರಿಕೆಗೆ ಗಂಬೀರವಾಗಿ ಕಾಣಿಸಿದರೂ ಹೃದಯ ಮಾರ್ದವವುಳ್ಳ ಸ್ನೇಹಶೀಲತೆ ಅವರದಾಗಿತ್ತು.’’

‘ಕನ್ನಡದ ಮಲ್ಲಿನಾಥ’ – ಶ್ರೀ ತೆಕ್ಕುಂಜ ಎಂದು ಕೊಂಡಾಡುವ ಡಾ| ಕಬ್ಬಿನಾಲೆ ವಸಂತ ಭಾರದ್ವಾಜ ಅವರು ತೆಕ್ಕುಂಜದವರ ನೆಲೆ-ಬೆಲೆಯನ್ನು ಹೀಗೆ ಕಂಡರಸಿದ್ದಾರೆ:

‘‘ಮುದ್ದಣನ ಶ್ರೀ ರಾಮಾಶ್ವಮೇಧವು ಮೈಸೂರಿನ ಕಾವ್ಯಾಲಯದಿಂದ ಪ್ರಕಟವಾದಾಗ, ಅದರ ಕೆಲವು ಪದಪ್ರಯೋಗಗಳು ಸಾಮಾನ್ಯ ಓದುಗರಿಗೆ ‘ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತೆಯೇ’ ಆಯಿತು. ಕಾರಣ ಮುದ್ದಣನದು ಕೋಶಗಳನ್ನೂ ಮೀರಿದ ಶಬ್ದ ಪ್ರತಿಭೆ. ಹಾಗಾಗಿ ಅವನ ಅಪೂರ್ವ ಪದಪ್ರಯೋಗ ಕೌಶಲವನ್ನು ಗ್ರಹಿಸುವುದು ಕಷ್ಟವಾಯಿತು. ಕನ್ನಡದ ಪ್ರಾಚೀನ ಶಬ್ದರೂಪಗಳೊಂದಿಗೆ ಕರಾವಳಿ ತೀರದ ಪ್ರಾದೇಶಿಕ ಪದಗಳ ಬಳಕೆ ಹಾಗೂ ವಿನೂತನ ಪದಸೃಷ್ಟಿಯ ಕಾರಣದಿಂದ ಅವುಗಳ ಅರ್ಥಾನುಸಂಧಾನ ಅವಶ್ಯವಾಗಿತ್ತು. ಆ ಸಂದರ್ಭದಲ್ಲಿ ಮುದ್ದಣನ ಅಂತರಂಗವನ್ನು ಸರಿಯಾಗಿ ಅರ್ಥ ಮಾಡಿಕೊಂಡ ಶ್ರೀ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು ಶ್ರೀ ರಾಮಾಶ್ವಮೇಧಕ್ಕೆ ಟಿಪ್ಪಣಿಯನ್ನೂ, ಹೊಸಗನ್ನಡದಲ್ಲಿ ಸಾರವನ್ನೂ ಬರೆದರು. ಇದರಿಂದ ಅರ್ಥಸಂದಿಗ್ಧತೆಗಳು ದೂರವಾಗಿ ಮುದ್ದಣನ ಕಾವ್ಯಕ್ಕೆ ಸಹೃದಯರ ಆದರಾಬಿಮಾನಗಳು ದೊರೆಯುವಂತಾದವು. ‘ಕೊಡನ ಮರಿ’, ‘ಆರಾಟ’, ‘ಮುಕ್ಕುರುಕ್ಕು’, ‘ಸುಂಟಿಗೆ’, ‘ಎತ್ತು’, ‘ಅಡೆ’, ‘ಅಣಿಗಟ್ಟು’, ‘ಮಯಿ’, ‘ಪೊಲಿ’ – ಮುಂತಾದ ಅನೇಕ ಶಬ್ದಗಳಿಗೆ ಸಮಂಜಸವಾದ ಅರ್ಥವನ್ನು ಅನಾವರಣ ಮಾಡಿದ್ದು ಶ್ರೀ ತೆಕ್ಕುಂಜದವರ ಹಿರಿಮೆ. ಅದು ಕನ್ನಡ ಸಾರಸ್ವತ ಲೋಕದ ಸಾರ್ವಕಾಲಿಕ ಸಿದ್ಧಿ.

ಇನ್ನು ಮುದ್ದಣನೇ ಸ್ವಯಂ ಸೃಷ್ಟಿಸಿದ ಕೆಲವು ಪದಗಳನ್ನು ಅರ್ಥೈಸುವಲ್ಲಿಯೂ ಶ್ರೀ ತೆಕ್ಕುಂಜದವರ ತಪಸ್ಸು ವಿಶೇಷವಾದುದು. ‘ಗರವಟ’ವೆಂಬುದನ್ನು ಗ್ರಹಶಾಂತಿ ಎಂದು ಭಾವಿಸಿದ್ದ ಸಂದರ್ಭದಲ್ಲಿ ಅದನ್ನು ‘ಗಾರ್ಹಪತ್ಯ’ದ ತದ್ಭವವೆಂದು ಹೇಳಿ ಯಜ್ಞಕಾರ್ಯದ ಹಿನ್ನೆಲೆಯನ್ನು ಸೂಚಿಸಿದ್ದು ಮಹತ್ತರ ಸಂಶೋಧನೆಯೇ ಹೌದು. ಇನ್ನು ‘ಗಾಡವ’ ಎಂಬ ಪ್ರಯೋಗಕ್ಕೆ ‘ಕಾಡುಜನ’ವೆಂಬ ಅರ್ಥವನ್ನು ಅಲ್ಲಗಳೆದು, ಅದು ‘ಗಾರ್ದಭ’ ಎಂಬುದರ ತದ್ಭವವೆಂದು ಹೇಳಿದ್ದು ಅತ್ಯಂತ ಸಮಂಜಸವಾದುದು.

ಶ್ರೀ ತೆಕ್ಕುಂಜದವರ ಶಬ್ದಾರ್ಥವಿಹಾರ ಕೇವಲ ‘ಸ್ವಾಂತಸುಖಾಯ’ವಾಗಿರದೆ ಕಾವ್ಯಾನಂದವನ್ನು ಇತರರಿಗೆ ಉಂಟುಮಾಡುವುದರಲ್ಲಿಯೂ ಸಹಕಾರಿಯಾಗಿದೆ ಎಂಬುದನ್ನು ಮರೆಯಬಾರದು. ಮುದ್ದಣ ಮಹಾಕವಿಯ ಕಾವ್ಯವನ್ನು ಸಮರ್ಥವಾಗಿ ವ್ಯಾಖ್ಯಾನಿಸಿದ ಈ ‘ಮಲ್ಲಿನಾಥ’ನನ್ನು ಕನ್ನಡಿಗರು ಎಂದೂ ಮರೆಯುವಂತಿಲ್ಲ. ಮುದ್ದಣನ ಹೆಸರಿರುವಷ್ಟು ಕಾಲ ಶ್ರೀ ತೆಕ್ಕುಂಜದವರ ಹೆಸರೂ ಉಳಿಯುತ್ತದೆ ಎನ್ನಲು ಯಾವ ಸಂದೇಹವೂ ಇಲ್ಲ.

ತೆಕ್ಕುಂಜ ಗೋಪಾಲಕೃಷ್ಣ ಭಟ್ಟರ ಕುರಿತು ಡಾ. ವಾಮನ ನಂದಾವರ ಅವರೂ ಸಂತೋಷದಿಂದ ಬರೆಯುತ್ತಾರೆ, ಅಪೂರ್ವ ಘಟನೆಗಳನ್ನು ಮುಂದಿಡುತ್ತಾರೆ :

‘‘ನಾನು ಕುರ್ನಾಡಿನ ಬೋರ್ಡು ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರನ್ನು ಮೊದಲು ನೋಡಿದ ನೆನಪು. 1964-65ರ ಕಾಲವದು. ಅವರು ನಮ್ಮ ಹೈಸ್ಕೂಲಿನಲ್ಲಿ ನಡೆದಿದ್ದ ವಿಶೇಷ ಶಿಬಿರ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಬಂದಿದ್ದಿರಬೇಕು. ನಮ್ಮ ಕನ್ನಡ ಪಂಡಿತರಾಗಿದ್ದ ಡಿ. ಮೋನಪ್ಪ ಅವರು ಅಂದಿನ ಸಭಾ ಕಾರ್ಯಕ್ರಮಕ್ಕೆ ಅವರನ್ನು ಸ್ವಾಗತಿಸಿ ಪರಿಚಯಿಸಿದ್ದರು. ಅದು ಮುಗಿದ ಬಳಿಕ ಅಲ್ಲೊಂದು ತಾಳಮದ್ದಲೆ ಕೂಟದಲ್ಲೂ ಅವರ ಅರ್ಥಗಾರಿಕೆಯನ್ನು ನಾನು ಕೇಳಿದ್ದೆ.

ಮುಂದೆ ನಾನು ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿಗೆ ಪಿಯುಸಿ ಓದಲು ಸೇರಿಕೊಂಡಾಗ ನಮ್ಮ ತರಗತಿಗೆ ಕನ್ನಡ ಪ್ರಾಧ್ಯಾಪಕರಾಗಿ ಅವರು ಬಂದುದನ್ನು ಕಂಡು ಅತ್ಯಂತ ಸಂತೋಷವಾಗಿತ್ತು ನನಗೆ.

ತರಗತಿಯ ಬೆಲ್ ಹೊಡೆದು ಪಾಠಾರಂಭಕ್ಕೆ ಮೊದಲೇ ಅವರು ಹೊರಗಡೆ ವರಾಂಡದಲ್ಲಿ ನಿಂತಿರುತ್ತಿದ್ದರು. ತರಗತಿಗೆ ಪ್ರವೇಶಿಸುವಾಗ ಅವರಲ್ಲಿ ಶಿಸ್ತು, ಗತ್ತು ಇರುತ್ತಿತ್ತು. ಬಂದು ತರಗತಿಯನ್ನೊಮ್ಮೆ ಗಂಬೀರವಾಗಿ ಗಮನಿಸಿ ಮುಗುಳ್ನಕ್ಕು ಮಾತಿಗೆ ತೊಡಗುತ್ತಿದ್ದರು. ತೋರ, ಗಟ್ಟಿ ಮುಟ್ಟಿನ ದೇಹ, ಎಲ್ಲಕ್ಕೂ ಮುಖ್ಯವಾಗಿ ಪಂಡಿತರ ಕಳೆ ಎದ್ದು ತೋರುತ್ತಿತ್ತು. ಕಚ್ಚೆ ಪಂಚೆ ಪೈರಾನು ಪೋಷಾಕು ಇನ್ನಷ್ಟು ಕಳೆ ಕೊಡುತ್ತಿತ್ತು.

ಮೊದಲ ತರಗತಿಯಲ್ಲೇ ಕನ್ನಡ ಭಾಷೆಯ ಬಗೆಗೆ ಒಲವು ಮೂಡಿಸುವ ರೀತಿಯಲ್ಲಿ ಅವರ ಉಪನ್ಯಾಸವಿತ್ತು. ಅದೇ ದಿನ ಅವರು ಕನ್ನಡದಲ್ಲಿ ಏನುಂಟು ಎನ್ನುವುದಕ್ಕೆ ಒಂಬತ್ತು ಆಕರ ಗ್ರಂಥಗಳನ್ನು ಹೇಳಿದ್ದು ನನಗೆ ಚೆನ್ನಾಗಿ ನೆನಪಿದೆ. ಗದುಗು ಭಾರತ, ಲಕ್ಷ್ಮೀಶ ಕವಿಯ ಜೈಮಿನಿ ಭಾರತ, ತೊರವೆ ರಾಮಾಯಣ, ಕೇಶೀರಾಜನ ಶಬ್ದಮಣಿ ದರ್ಪಣ…. ಮೊದಲಾದುವು. ತಮ್ಮ ಬೋಧನೆಯಲ್ಲಿ ವ್ಯಾಕರಣ, ಛಂದಸ್ಸು ಬಗೆಗೆ ಹೆಚ್ಚು ಒತ್ತು ನೀಡುತ್ತಿದ್ದರು.

ತುಸು ವ್ಯಂಗ್ಯ, ಕುಚೋದ್ಯ, ಗಂಬೀರ, ಸರಸ ಗತಿಯ ಮಾತುಕತೆಯಲ್ಲಿ ಕರಾರುವಕ್ಕಾಗಿ ಹೇಳಬೇಕಾದ್ದನ್ನು ಅಧಾರ ಸಹಿತ ಮಂಡಿಸುತ್ತಿದ್ದರು. ಕರಾವಳಿಯಲ್ಲಿ ಮುಖ್ಯವಾಗಿ ಮಂಗಳೂರು ಪರಿಸರದ ಕನ್ನಡ ಭಾಷಾ ಪ್ರಯೋಗವಾಗಿ ಕೆಲವರು ದ್ವಿತೀಯ ವಿಭಕ್ತಿಯ ಬದಲು ಚತುರ್ಥ ವಿಭಕ್ತಿ ಹಚ್ಚಿ ಮಾತನಾಡುವುದನ್ನು ಉದಾಹರಿಸುತ್ತಿದ್ದರು. ಅವಳನ್ನು ಕರೆ, ರಾಮನನ್ನು ಕರೆ ಎನ್ನಬೇಕಾದಲ್ಲಿ ಅವಳಿಗೆ ಕರೆ, ರಾಮನಿಗೆ ಕರೆ ಎಂಬ ಪ್ರಯೋಗಗಳು ಇಲ್ಲಿವೆ. ಇದಕ್ಕೆ ಏನು ಕಾರಣ ಎನ್ನುವುದನ್ನು ಸೋದಾಹರಣವಾಗಿ ವಿವರಿಸುತ್ತಿದ್ದರು. ಇಲ್ಲಿನ ಕನ್ನಡದ ಮೇಲೆ ಕೊಂಕಣಿ ಭಾಷಾ ಪ್ರಭಾವವನ್ನು ಅವರು ಗಮನಿಸಿಕೊಂಡವರು. ಕೊಂಕಣಿಯಲ್ಲಿ ದ್ವಿತೀಯ ವಿಭಕ್ತಿಯಿಲ್ಲ. ಉದಾ : ತಕ ಆ ಪೈ (ಅವನಿಗೆ ಕರೆ) ಎಂದೇ ರೂಡಿ. ಅದು ಕಾನ್ವೆಂಟ್ ಕನ್ನಡ ಎನ್ನುತ್ತಿದ್ದರು. ಅನೇಕ ಬಾರಿ ತೆಕ್ಕುಂಜದವರು ಮುಖ್ಯ ವಿಷಯ (ಹೂರಣ) ಗಮನಿಸುವ ಬದಲು ಬರವಣಿಗೆಯ ಭಾಷಾಪ್ರಯೋಗದ ಛಂದಸ್ಸು, ವ್ಯಾಕರಣ ಕಡೆಗೇ ಹೆಚ್ಚು ಆಸ್ಥೆ ತೋರಿಸುತ್ತಿದ್ದರು.

ಒಂದು ಬಾರಿ ನಾನು ಬರೆದಿದ್ದ ಕವಿತೆಯೊಂದನ್ನು ತಿದ್ದುವುದಕ್ಕಾಗಿ ಅವರಿಗೆ ನೀಡಿದ್ದೆ. ಒಂದು ವಾರದ ಬಳಿಕ ತರಗತಿಯಲ್ಲಿ ಆ ಕವಿತೆಯ ಬಗ್ಗೆ ಏನನ್ನೂ ಹೇಳದೆ ‘ಸ್ವಲ್ಪ ಛಂದಸ್ಸು ಕಲಿಯಬೇಕು’ ಎಂದು ನೇರವಾಗಿ ಹೇಳಿದ್ದುಂಟು.

ಇನ್ನೊಮ್ಮೆ ಟಾಗೋರು ಉದ್ಯಾನದಲ್ಲಿ ನಡೆದಿದ್ದ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲ್ಲಿ ನಾನು ಮಂಡಿಸಿದ್ದ ಪ್ರಬಂಧವನ್ನು ಆರಂಭದಿಂದಲೂ ಕೊನೆಯವರೆಗೆ ಗಂಬೀರವಾಗಿ ಆಲಿಸಿ ಮುಕ್ತಾಯ ಸಂದರ್ಭದಲ್ಲಿ ಅವರೇ ನನ್ನ ಬಳಿ ಬಂದು ತುಸು ಕಟುವಾಗಿ ನೋಡಿ ಇನ್ನು ಮುಂದೆ ‘ವೈವಿಧ್ಯತೆ’ ಪದ ಬಳಸಬೇಡಿ ಎಂದು ಹೇಳಿ ಮುಂದೆ ನಡೆದರು.

ನಾವೆಲ್ಲ ಕೆಲವರು ರೈಲು ಮೂಲಕ ಹಳ್ಳಿಗಳಿಂದ ಬಂದು ಬಾವಟೆಗುಡ್ಡ ಏರಿ ಕಾಲೇಜಿಗೆ ಬರುತ್ತಿದ್ದವರು. ಕೆಲವೊಮ್ಮೆ ರೈಲು ತಡ ಆದರೆ ನಮ್ಮಲ್ಲಿ ಅನೇಕರಿಗೆ ಮೊದಲ ಅವಧಿ ಪಾಠ ತಪ್ಪಿ ಹೋಗುತ್ತಿತ್ತು. ನನಗಂತೂ ತೆಕ್ಕುಂಜದವರ ಕನ್ನಡ ಪಾಠ ತಪ್ಪಿಸಿಕೊಳ್ಳುವುದೆಂದರೆ ತುಂಬ ಬೇಸರವಾಗುತ್ತಿತ್ತು. ಒಂದು ಬಾರಿ ಹಾಗೆಯೇ ಆಯಿತು. ತಡವಾಗಿ ಬಂದಾಗ ಪ್ರಾಂಶುಪಾಲರ ಚೀಟಿ ಇಲ್ಲದೆ ತರಗತಿಗೆ ಹೋಗುವ ಹಾಗಿರಲಿಲ್ಲ. ಹಾಗಿದ್ದರೂ ಅಂದೇಕೋ ಪ್ರಿನ್ಸಿಪಾಲ್ ಚೀಟಿ ಕೊಡಲಿಲ್ಲ. ಸ್ವಲ್ಪ ಜಾಸ್ತಿಯೇ ವಿಳಂಬ ಆಗುತ್ತಿತ್ತು. ಎಂದರೆ ತೆಕ್ಕುಂಜದಂತಹವರು ಅದಕ್ಕೂ ಒಂದು ನಿಯಮ ಮಾಡಿದ್ದಿರಬೇಕು. ಅಂದು ಪ್ರಿನ್ಸಿಪಾಲ್ ಫಾ. ಎಲ್.ಎಫ್. ರಸ್ಕಿಯಾ ಹೇಳಿದ್ದೆಂದರೆ, ‘‘ಇಲ್ಲ ತುಂಬ ವಿಳಂಬವಾಗಿದೆ. ನೀನು ಲೈಬ್ರೆರಿಯಲ್ಲಿ ಕುಳಿತು ಏನಾದರೂ ಓದುತ್ತಿರು. ತರಗತಿಗೆ ಹೋಗಲು ಚೀಟಿ ಕೊಡುವುದಿಲ್ಲ.’’ ನನಗಂತೂ ತುಂಬಾ ನೋವಾಯಿತು. ವಿದಿಯಿಲ್ಲದೆ ಲೈಬ್ರೆರಿ ಕೊಠಡಿಯಲ್ಲಿ ಕುಳಿತು ಮೇಲೆ ನೋಡತೊಡಗಿದೆ. ಎಂದರೆ ಮೇಲ್ಮಹಡಿಯಲ್ಲಿ ಅಲ್ಲೇ ಮೇಲೆ ಕನ್ನಡ ಪಾಠ ನಡೆಯುತ್ತಿತ್ತು. ಅಂದು ನಡೆಯುತ್ತಿದ್ದುದು ದಾಸರು ಹಾಡು ‘ತಾಳುವಿಕೆಗಿಂತ ತಪವು ಇಲ್ಲ…’ ನನ್ನ ಮನಸ್ಸು ಪೂರ್ತಿ ಅಲ್ಲೇ ಇತ್ತು.

ಅಲೋಶಿಯಸ್ ಕಾಲೇಜು ಶತಮಾನೋತ್ಸವ ಆಚರಣೆಯ ಸಂದರ್ಭ ಕವಿ ಗೋಪಾಲಕೃಷ್ಣ ಅಡಿಗರ ಅಧ್ಯಕ್ಷತೆಯಲ್ಲಿ ಒಂದು ದಿನದ ಕಾವ್ಯಗೋಷ್ಠಿ ಸಮ್ಮೇಳನ ತೆಕ್ಕುಂಜದವರ ಸಂಯೋಜನೆಯಲ್ಲಿ ನಡೆದಿತ್ತು. ಆಗ ನಾನು ಅಲ್ಲಿನ ಹಳೇ ವಿದ್ಯಾರ್ಥಿ. ಆ ಸಮ್ಮೇಳನದಲ್ಲಿ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ಹಳೇವಿದ್ಯಾರ್ಥಿ ನೆಪದಲ್ಲಿ ನನಗೂ ಅವಕಾಶ ಸಿಕ್ಕಿತ್ತು.

ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕನ್ನಡ ಸಂಘವಿತ್ತು. ಅದರ ಆಶ್ರಯದಲ್ಲಿ ತೆಕ್ಕುಂಜದಂತಹವರು ನಾಡಿನ ಹಿರಿಯ ಸಾಹಿತಿ, ವಿದ್ವಾಂಸರುಗಳನ್ನು ಆಮಂತ್ರಿಸಿ ಕಾರ್ಯಕ್ರಮಗಳನ್ನು ಸಂಯೋಜಿಸುತ್ತಿದ್ದರು. ಅದೇ ರೀತಿ ಎರಡು ದಶಕಗಳ ಕಾಲ ಮಂಗಳೂರು ಕನ್ನಡ ಸಂಘದ ಅಧ್ಯಕ್ಷರೂ ಆಗಿದ್ದ ತೆಕ್ಕುಂಜದವರು ‘ಬೀಚಿ’ಯವರಂತಹ ಸಾಹಿತಿಗಳನ್ನು ಮಂಗಳೂರಿಗೆ ಕರೆಸಿಕೊಳ್ಳುತ್ತಿದ್ದರು. ‘ತಿಮ್ಮನ ತಲೆ’ಯಂತಹ ಪುಸ್ತಕಗಳನ್ನು ಅದಾಗಲೇ ನಾನು ಓದಿಕೊಂಡಿದ್ದೆ. ಆದರೆ ಆ ವ್ಯಕ್ತಿಯನ್ನು ಹತ್ತಿರದಿಂದ ನೋಡುವ ಸಂದರ್ಭ ಕನ್ನಡ ಸಂಘದ ಮೂಲಕ ಒದಗಿಬರುತ್ತಿದ್ದುವು.’’

ಶ್ರೀಮತಿ ಚಂದ್ರಕಲಾ ನಂದಾವರರಿಗೂ ತೆಕ್ಕುಂಜದವರು ವಿದ್ಯಾಗುರುಗಳೇ. ಅವರ ಲೇಖನಿಯೂ ತೆಕ್ಕುಂಜದವರನ್ನು ಗೌರವಾದರಗಳಿಂದ ಹೀಗೆ ಕಟ್ಟಿಕೊಡುತ್ತದೆ:

‘‘ಪ್ರೊ. ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು ನಾನು ಅವರ ಶಿಷ್ಯೆಯಾಗುವ ಮೊದಲೇ ಪರಿಚಿತರು. ನನ್ನ ತೀರ್ಥರೂಪರಿಂದಾಗಿ ಮಂಗಳೂರಿನ ಯೆಯ್ಯಡಿ ಎಂಬಲ್ಲಿ ಸುಮಾರು 4 ದಶಕಕ್ಕೂ ಮೀರಿ ನಡೆಯುತ್ತಿದ್ದ ಬೇರೆ ಬೇರೆ ಪುರಾಣ ಪ್ರವಚನಗಳ ಸಮಾರೋಪ ಸಮಾರಂಭಗಳಲ್ಲಿ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು ಪ್ರಧಾನ ಅತಿಥಿಗಳಾಗಿ ಭಾಗವಹಿಸುತ್ತಿದ್ದರು. ಸಂತ ಅಲೋಸಿಯಸ್ ಕಾಲೇಜಿನ ಕನ್ನಡ ಸಂಘದ ಕಾರ್ಯಕ್ರಮಗಳಲ್ಲಿ ಪ್ರತಿವರ್ಷವೂ ಶ್ರೀ ಪೊಳಲಿ ಶಂಕರ ನಾರಾಯಣ ಶಾಸ್ತ್ರಿಗಳು ಮತ್ತು ನನ್ನ ತೀರ್ಥರೂಪರಾದ ಕೊಂಡಾಣ ವಾಮನರು ಜೊತೆಯಾಗಿ ನಡೆಸುವ ಪುರಾಣ ವಾಚನ ಕಾರ್ಯಕ್ರಮ ಇದ್ದೇ ಇರುತ್ತಿತ್ತು. ಇಂತಹ ಸಂದರ್ಭಗಳಲ್ಲಿ ಅವರನ್ನು ಆಹ್ವಾನಿಸಲು ನಮ್ಮ ಮನೆಗೆ ಬಂದುದೂ ನೆನಪು.

ಮಂಗಳೂರಿನ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀ ಅ. ಬಾಲಕೃಷ್ಣ ಶೆಟ್ಟಿ ಪೊಳಲಿ, ಶ್ರೀ ಎ.ಎಸ್.ಎನ್. ಹೆಬ್ಬಾರ್, ಶ್ರೀ ಸಂತೋಷ್‌ಕುಮಾರ್ ಗುಲ್ವಾಡಿ, ಶ್ರೀ ಕೃಷ್ಣ ಭಟ್, ಶ್ರೀ ವೀರಪ್ಪ ಮೊಯಿಲಿ ಮೊದಲಾದವರ ಉತ್ಸಾಹದಿಂದ ಹುಟ್ಟಿಕೊಂಡ ‘ಮಂಗಳೂರು ಕನ್ನಡ ಸಂಘ’ದ ಸ್ಥಾಪಕ ಅಧ್ಯಕ್ಷರಾಗುವ ಯೋಗ ಸಂತ ಅಲೋಸಿಯಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರದಾಯಿತು. 1961ರಲ್ಲಿ ಸ್ಥಾಪನೆಯಾದ ಈ ಸಂಘದ ಕಾರ್ಯಕ್ರಮಗಳಲ್ಲಿ ಸತತವಾಗಿ ಕೇಳುಗಳಾಗಿ ಭಾಗವಹಿಸಿದ ಹೆಮ್ಮೆ ನನ್ನದು. ತನ್ನ ಜೀವಿತದ ಕೊನೆಯವರೆಗೂ ಅಧ್ಯಕ್ಷರಾಗಿ ಕನ್ನಡ ಸಂಘದ ಚುಕ್ಕಾಣಿ ಹಿಡಿದು ನಡೆಸಿದ ಕೀರ್ತಿ ಅವರದು. ನಾನು ಕಾರ್ಯದರ್ಶಿಯಾದುದು ಅವರ ನಿಧನದ ಬಳಿಕ ರೂಪಿತಗೊಂಡ ಕಾರ್ಯಕಾರಿ ಸಮಿತಿಯಲ್ಲಿ. ಶ್ರೀ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರ ನಿಧನ ತೀರಾ ಆಕಸ್ಮಿಕವಾಗಿತ್ತು ನಮಗೆಲ್ಲ.

1967ರಿಂದ 1969ರ ವರೆಗೆ ನಾನು ಅವರ ಶಿಷ್ಯೆಯಾದುದು ಒಂದು ವಿಶಿಷ್ಟ ಸನ್ನಿವೇಶ ನನ್ನ ಪಾಲಿಗೆ. ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಮಂಗಳೂರಿಗೆ ಒದಗಿ ಬಂದುದು ಅನೇಕ ವಿಷಯಗಳಲ್ಲಿ ಸ್ನಾತಕೋತ್ತರ ವಿಭಾಗ ತೆರೆದುದು ನಮ್ಮ ಜಿಲ್ಲೆಯ ಅನೇಕ ವಿದ್ಯಾರ್ಥಿಗಳ ಪಾಲಿಗೆ ಸ್ಮರಣೀಯ ಘಟನೆ. ಕನ್ನಡ ಸ್ನಾತಕೋತ್ತರ ವಿಭಾಗದೊಂದಿಗೆ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟರ ಆಸಕ್ತಿಯಿಂದ ಮಂಗಳೂರಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಎಂಬ ಎರಡು ವರ್ಷಗಳ ಸಂಧ್ಯಾ ತರಗತಿಗಳು ಪ್ರಾರಂಭವಾದುವು. ನಾನು ಆ ತರಗತಿಗಳಿಗೆ ಸೇರಿಕೊಂಡಾಗ ನಮಗೆ ಕೇಶಿರಾಜನ ‘ಶಬ್ದಮಣಿದರ್ಪಣಂ’ ಎಂಬ ಗ್ರಂಥದ ಪಾಠ ಶ್ರೀ ತೆಕ್ಕುಂಜೆಯವರದ್ದು. ಇದು ಕನ್ನಡ ಭಾಷಾ ವ್ಯಾಕರಣ ಸಂಬಂಧಿಯಾದುದು. ನಾನು ಅದುವರೆಗೆ ಸಂಸ್ಕೃತ ಭಾಷೆಯನ್ನು ಪಠ್ಯವಾಗಿ ಓದಿದವಳು. ಕನ್ನಡ ಪಂಡಿತರ ಮಗಳಾದರೂ ನನ್ನ ಕನ್ನಡ ವ್ಯಾಕರಣದ ಜ್ಞಾನ ಶೂನ್ಯ. ಈ ತರಗತಿಯ ಮೊದಲ test doseನಂತಹ ಪರೀಕ್ಷೆಯಲ್ಲಿ ಸಿಕ್ಕಿದ ಅಂಕಗಳು ತೀರ ಹತಾಶದಾಯಕವಾಗಿ ಕನ್ನಡ ಇಷ್ಟೊಂದು ಕಷ್ಟ ಮಾತ್ರವಲ್ಲ ಕಬ್ಬಿಣದ ಕಡಲೆ ಎಂಬಂತಾಯ್ತು. ಜೊತೆಗೆ ಹಳಗನ್ನಡ ಎಂದರೆ ಕನ್ನಡವಾದರೂ ಅದು ಯಾವುದೋ ಕಾಲದ ದೇಶದ ಭಾಷೆಯಂತೆ ಭಾಸವಾಯ್ತು. ಆದರೆ ತೆಕ್ಕುಂಜೆಯವರ ಪಾಠ ಎಂದರೆ ವ್ಯಾಕರಣ ಎನ್ನುವ ನೀರಸ ಪಾಠವೂ ಸರಸವಾದುದಷ್ಟೇ ಅಲ್ಲ. ಕನ್ನಡ ಭಾಷೆಯ ಎಲ್ಲಾ ಮಗ್ಗಲುಗಳ ಪೂರ್ತಿ ಪರಿಚಯ ಮಾಡಿಕೊಟ್ಟಿತು. ಮಾತ್ರವಲ್ಲ ವ್ಯಾಕರಣ ಎಂದರೆ ನನಗೆ ಪ್ರಿಯವಾದ ವಿಷಯವಾಯ್ತು. ನಾನು ಉಪನ್ಯಾಸಕಳಾದ ಪ್ರಾರಂಭದಲ್ಲಿ ಮಾಡಬೇಕಾಗಿದ್ದ ವ್ಯಾಕರಣ ಪಾಠಕ್ಕೆ ಯಾವುದೇ ತಯಾರಿ ಇಲ್ಲದೆ ಅತ್ಯುತ್ತಮ ಪಾಠ ಮಾಡುವುದು ಸಾಧ್ಯವಾಯಿತು. ನನ್ನ ಎರಡು ವರ್ಷಗಳ ಕೊನೆಯ ಡಿಪ್ಲೊಮಾ ಪರೀಕ್ಷೆಯಲ್ಲಿ ವ್ಯಾಕರಣದಲ್ಲಿ ಪಡೆದ ಅತ್ಯಂತ ಹೆಚ್ಚಿನ ಅಂಕಗಳು ರಾಜ್ಯದಲ್ಲೇ ನನಗೆ ಮೂರನೆಯ ರ್ಯಾಂಕನ್ನು ತಂದುಕೊಟ್ಟಿತು. ಜೊತೆಗೆ ಹಳಗನ್ನಡ ಕಾವ್ಯಗಳನ್ನು ಚೆನ್ನಾಗಿ ಓದಲು, ಅರ್ಥೈಸಲು ಸಾಧ್ಯವಾಯಿತು.

ತೆಕ್ಕುಂಜರು ವ್ಯಾಕರಣಪ್ರಿಯರು. ಹಳಗನ್ನಡ ಕಾವ್ಯಪ್ರಿಯರು. ಅವರ ಪಾಠ ಕನ್ನಡದ ಪಾಠಕ್ಕೆ ಒಂದು ಮಾದರಿ ಪಾಠ ಎಂದರೆ ತಪ್ಪಲ್ಲ. ಅತ್ಯಂತ ಸ್ಪಷ್ಟವಾದ ಉಚ್ಚರಣೆ, ಶಬ್ದ ಪರಿಚಯ, ಭಾಷಾ ಪರಿಶುದ್ಧತೆಗೆ ಕೊಡುತ್ತಿದ್ದ ಗೌರವ, ಭಾಷಾಪ್ರಯೋಗದಲ್ಲಿ ಔಚಿತ್ಯಪ್ರಜ್ಞೆಯನ್ನು ಕಲ್ಪಿಸಿಕೊಟ್ಟ ರೀತಿ ಇವೆಲ್ಲವೂ ಅನನ್ಯ.

ಸಮಾಸ ಪಾಠ ಮಾಡುವ ಸಂದರ್ಭದಲ್ಲಿ ಕನ್ನಡಕ್ಕೇ ವಿಶಿಷ್ಟವಾದ ಗಮಕ ಸಮಾಸದ ಬಗೆಗೆ ತಿಳಿಸಿದಷ್ಟು ಸಾಲದು. ಅವುಗಳಿಗೆ ನೀಡುವ ಉದಾಹರಣೆಗಳು ಅವರದ್ದೇ ಆದ ಶೋಧನೆಯ ಸಮರ್ಥನೆಗಳು. ಈ ಬಗ್ಗೆ ಮುಂದೆ ಲೇಖನವನ್ನೂ ಬರೆದಿದ್ದಾರೆ.

ದ.ಕ. ಜಿಲ್ಲೆಯ ಕನ್ನಡ ಪಂಡಿತ ಪರಂಪರೆಯ ದಿಗ್ಗಜರಾದ ಮುಳಿಯ ತಿಮ್ಮಪ್ಪಯ್ಯ, ಸೇಡಿಯಾಪು ಕೃಷ್ಣ ಭಟ್ಟರ ಸಾಲಿಗೆ ಸೇರಿದ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರ ಶಿಷ್ಯಳು ನಾನು ಎನ್ನುವುದು ನಿಜಕ್ಕೂ ಹೆಮ್ಮೆಯ, ಸಂತೋಷದ ವಿಷಯ.

ಮುದ್ದಣ ತೆಕ್ಕುಂಜ ಗೋಪಾಲಕೃಷ್ಣರಿಗೆ ಬಹುಪ್ರಿಯನಾದ ಕವಿ. ಅವನ ಶ್ರೀ ರಾಮೇಶ್ವಮೇಧಂ ಕೃತಿಯನ್ನು ಟಿಪ್ಪಣಿ ಸಹಿತ ಹೊಸಗನ್ನಡಕ್ಕೆ ಅನುವಾದಿಸಿ ಪ್ರಕಟಿಸುವ ಹಿನ್ನೆಲೆಯಲ್ಲಿ ಅವರ ಹಸ್ತಾಕ್ಷರದ ಹಸ್ತಪ್ರತಿಯನ್ನು ಅಚ್ಚಿನ ಮನೆಗೆ ಕಳುಹಿಸಲು ಶುದ್ಧ ಪ್ರತಿ ತಯಾರಿಸುವ ಒಂದು ಸಣ್ಣ ಕೈಂಕರ್ಯ ಮಾಡುವ ಸಂದರ್ಭ ನನಗೆ ದೊರಕಿತ್ತು.

ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು ತನ್ನ ಹೆಸರಿಗೆ ಅನ್ವರ್ಥವಾಗುವಂತೆ ಮನೆಯಲ್ಲಿ ಗೋಪಾಲಕರೇ ಆಗಿದ್ದರು. ಹಾಗೆಯೇ ಮುದ್ದಣ – ಮನೋರಮೆಯರಂತೆ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು ಮತ್ತು ಅವರ ಶ್ರೀಮತಿ ರತ್ನಾರವರು ಇದ್ದುದು. ಅವರ ಸರಸ ಮಾತುಗಾರಿಕೆಯನ್ನು ಕೇಳುವ ಅವಕಾಶವೂ ನನಗೆ ದೊರಕಿತ್ತು. ಅನುರೂಪಳಾದ ಸತಿ ರತ್ನಮ್ನನವರಿಗೆ ತೆಕ್ಕುಂಜ ಭಟ್ಟರ ಶಿಷ್ಯರೆಲ್ಲರೂ ಆತ್ಮೀಯರೇ. ಶಿಷ್ಯರಿಗೆಲ್ಲ ಅವರು ಗುರುಪತ್ನಿ. ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು ತನ್ನ ಹಿರಿವಯಸ್ಸಿನಲ್ಲಿ ಕಾರು ಕೊಂಡುಕೊಂಡದ್ದು ಬಹುಶಃ ಕನ್ನಡ ಅಧ್ಯಾಪಕರಾಗಿ (ಅಥವಾ ಪ್ರಾಧ್ಯಾಪಕರು) ಅವರೇ ಮೊದಲಿಗರು ಎನ್ನುವುದು ಅಂದಿನ ಲೋಕಾಬಿರಾಮದಲ್ಲಿ ಬರುತ್ತಿದ್ದ ಸಂತಸದ ವಿಷಯ. ಜೊತೆಗೆ ಅವರೇ ಕಾರಿನ ಚಾಲಕರಾಗಿ ಕಾರಿನಲ್ಲೇ ಕಾಲೇಜಿಗೆ ಹೋಗುತ್ತಿದ್ದುದು ಕಾಲೇಜಿನ ಎಳೆಯ ವಿದ್ಯಾರ್ಥಿಗಳಿಗೆ ಆಶ್ಚರ್ಯದ ವಿಷಯವೇ ಆಗಿತ್ತು. ಕನ್ನಡದ ಪಂಡಿತರಾಗಿಯೂ ಸಂತ ಅಲೋಸಿಯಸ್ ನಂತಹ ಕಾಲೇಜಿನಲ್ಲಿ up to date ಆಗಿದ್ದು ಎಲ್ಲರಿಂದಲೂ ಗೌರವ ಪಡೆಯುತ್ತಿದ್ದುದು ಅಲ್ಲದೆ ಎಲ್ಲಾ ವಿದ್ಯಾರ್ಥಿಗಳು ಭಯಪಡುತ್ತಿದ್ದುದೂ ನಿಜ.’’

ಪಾದೇಕಲ್ಲು ವಿಷ್ಣುಭಟ್ಟರು ತೆಕ್ಕುಂಜದವರಿಗೆ ಪರೋಕ್ಷ ಶಿಷ್ಯ. ಇಂಥವರ ದೃಷ್ಟಿಯಲ್ಲಿ ಪ್ರೊ. ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು ಹೇಗೆ? ಏನು? ಅವರನ್ನೇ ಮಾತನಾಡಿಸಿದಾಗ ಅವರು ಒಪ್ಪಿಕೊಂಡದ್ದು ಹೀಗೆ :

‘‘ಪ್ರೊ. ತೆಕ್ಕುಂಜ ಗೋಪಾಲಕೃಷ್ಣ ಭಟ್ಟರ ನೇರ ಶಿಷ್ಯನಾಗುವ ಅವಕಾಶ ನನಗೆ ದೊರೆತಿಲ್ಲ. ಅವರ ಗ್ರಂಥಗಳನ್ನೋದುವ ಮೂಲಕ ಶಿಷ್ಯನಾಗಿದ್ದೆನು. ಆದುದರಿಂದ ನಾನು ಅವರ ಪರೋಕ್ಷ ಶಿಷ್ಯ. ಅವರ ಶಿಷ್ಯರ ಶಿಷ್ಯನಾದುದರಿಂದ ಪ್ರಶಿಷ್ಯನೆಂದೂ ಹೇಳಬಹುದು. ಅವರ ಮನೆಗೆ ಹೋಗಿ ಅವರನ್ನು ನಾನು ಭೇಟಿ ಮಾಡಿದ್ದುದು ಒಂದೇ ಬಾರಿ. ನಾನು ಎಂ.ಎ. ವಿದ್ಯಾರ್ಥಿಯಾಗಿದ್ದಾಗ 1977ರಲ್ಲಿ ಎಂದು ನೆನಪು – ಅವರನ್ನು ಕಂಡು ಮಾತನಾಡುವ ಉದ್ದೇಶದಿಂದಲೇ ಅವರಲ್ಲಿಗೆ ಹೋಗಿದ್ದೆ; ಭೇಟಿ ಮಾಡಿ ಮಾತಾಡಿ ಬಂದಿದ್ದೆ. ಒಂದೆರಡು ಗಂಟೆಗಳ ಕಾಲ ಅಲ್ಲಿದ್ದೆ.

ಆಗಲೇ ಅವರು ಶಬ್ದಮಣಿ ದರ್ಪಣಕ್ಕೆ ವ್ಯಾಖ್ಯಾನ ಬರೆಯಬೇಕೆಂದು ಸಂಕಲ್ಪಿಸಿದ್ದರು. ವ್ಯಾಕರಣ ಕ್ಷೇತ್ರದಲ್ಲಿ ಸೇಡಿಯಾಪು ಕೃಷ್ಣ ಭಟ್ಟರ ಅನಂತರದ ಹೆಸರಾಗಿದ್ದ ತೆಕ್ಕುಂಜದವರ ಹೆಸರು ಬಹುವಾಗಿ ಕೇಳಿಬರುತ್ತಿತ್ತು. ಹಲವು ಲೇಖನಗಳನ್ನದೆ ‘ಕನ್ನಡ ಸಮಾಸಗಳು’ ಎಂಬ ಉತ್ತಮ ಕೃತಿಯೊಂದನ್ನು ಅವರು ಆಗಲೇ ಪ್ರಕಟಿಸಿದ್ದರು. ಕನ್ನಡ ಸಂದಿಗಳ ಬಗೆಗೆ ಕೃತಿಯೊಂದನ್ನು ಬರೆದುಕೊಡಲು ಪ್ರಕಾಶಕರು ಕೇಳಿಕೊಂಡಿದ್ದರಂತೆ. ಆದರೆ ಸಮಾಸಗಳ ಬಗೆಗಿನ ಕೃತಿ ಹೆಚ್ಚು ಅವಶ್ಯ ಎಂಬ ಕಾರಣದಿಂದ ತೆಕ್ಕುಂಜದವರು ಈ ಕೃತಿಯನ್ನು ಸಿದ್ಧ ಮಾಡಿದರು. ಈ ಕೃತಿ ವಿದ್ವಾಂಸರಿಗೂ ವಿದ್ಯಾರ್ಥಿಗಳಿಗೂ ಕೂಡಿಯೇ ಉಪಯುಕ್ತವಾದುದಾಗಿತ್ತು. ಆದರೂ ವ್ಯಾಕರಣಕ್ಷೇತ್ರದಲ್ಲಿ ಸಮಗ್ರವಾಗಿ ತಾವು ಮಾಡಿದ ಚಿಂತನೆಗಳನ್ನು ಗ್ರಂಥರೂಪದಲ್ಲಿ ಪ್ರಕಟ ಮಾಡಬೇಕೆಂಬುದು ಅವರ ಇಚ್ಛೆಯಾಗಿತ್ತು.

ಈ ಉದ್ದೇಶದಿಂದಲೇ ಸಂಸ್ಕೃತ ವ್ಯಾಕರಣ ಗ್ರಂಥಗಳನ್ನೂ ಹಳಗನ್ನಡ ವ್ಯಾಕರಣ ಗ್ರಂಥಗಳಾದ ಭಾಷಾಭೂಷಣ ಶಬ್ದಾನುಶಾಸನಗಳನ್ನೂ ಅವರು ಆಳವಾಗಿ ಅಧ್ಯಯನ ಮಾಡಿದ್ದರು. ನಾನು ಅವರಲ್ಲಿಗೆ ಹೋದ ದಿನ ಅವರ ಮೇಜಿನ ಮೇಲೆ ಕುಂಡಲಗಿರಿಯಾಚಾರ್ಯರ ‘ಕರ್ಣಾಟಕ ಶಬ್ದಾನುಶಾಸನ ಪ್ರಕಾಶಿಕೆ’ ವಿರಾಜಿಸುತ್ತಿತ್ತು. ಆ ಸಮಯದಲ್ಲಿ ಅವರು ಅದನ್ನು ಅಭ್ಯಾಸ ಮಾಡುತ್ತಿದ್ದರು. ಇನ್ನೊಂದು ಪುಸ್ತಕವನ್ನು ಅವರು ತೋರಿಸಿದರು. ಅದು ಅವರೇ ರಟ್ಟು ಹಾಕಿಸಿದ ಶಬ್ದಮಣಿ ದರ್ಪಣ. ಮುದ್ರಿತ ಶಬ್ದಮಣಿ ದರ್ಪಣದ ಎಲ್ಲ ಹಾಳೆಗಳನ್ನೂ ಕಿತ್ತು ಕ್ರಮವಾಗಿ ಪ್ರತಿಯೊಂದು ಹಾಳೆಯ ಮುಂದೆ ಖಾಲಿ ಹಾಳೆಯೊಂದನ್ನು ಸೇರಿಸಿ ಅವರು ರಟ್ಟು ಕಟ್ಟಿಸಿದ್ದರು. ಶಬ್ದಮಣಿ ದರ್ಪಣದ ಪ್ರತಿಯೊಂದು ಪುಟದಲ್ಲಿಯೂ ಹೇಳಬೇಕಾದ ವಿಷಯಗಳಿದ್ದು ಅವನ್ನು ಗುರುತಿಸಿ ಟಿಪ್ಪಣಿ ಮಾಡಿಕೊಳ್ಳಲು ಅವರು ಈ ವ್ಯವಸ್ಥೆಯನ್ನು ಮಾಡಿದ್ದಾಗಿಯೂ ಹೇಳಿದರು.

ನಾನು ಸಾಹಿತ್ಯಾಸಕ್ತನೆಂಬುದನ್ನು ತಿಳಿದು ಅವರು ಸಂತೋಷಪಟ್ಟಿದ್ದಲ್ಲದೆ ಯೋಗಕ್ಷೇಮ ರೂಪವಾಗಿ ಹಲವು ಹಿತವಾದಗಳನ್ನು ಹೇಳಿದರು. ಹೊಸ ಕಾಲದಲ್ಲಿ ಆಡುಮಾತಿನಲ್ಲಿಯೂ ಬರವಣಿಗೆಯಲ್ಲೂ ಬರುವ ಭಾಷಾದೋಷಗಳನ್ನು ಎತ್ತಿ ಹೇಳಿ ಕೆಲವನ್ನು ವಿಕಾರವಾಗಿ ಮುಖಭಾವ ಸಹಿತ ಉಚ್ಚರಿಸಿ ವಿಮರ್ಶಿಸಿದ್ದು ನನಗೆ ಇಂದೂ ನೆನಪಿದೆ. ನಾನು ಹೊರಡುವಾಗ ಸೇಡಿಯಾಪು ಅಭಿನಂದನ ಗ್ರಂಥ ‘ಒಸಗೆ’ಯನ್ನು ತೆಕ್ಕುಂಜ ಶಂಕರ ಭಟ್ಟ ಸ್ಮಾರಕ ಗ್ರಂಥ ‘ಗುರುದಕ್ಷಿಣೆ’ಯನ್ನೂ ನನಗಿತ್ತರು.

ಆ ನಂತರ ಪುತ್ತೂರಿನ ಟೌನ್‌ಬ್ಯಾಂಕ್ ಮಳಿಗೆಯಲ್ಲಿ ಮುದ್ದಣನ ಕುರಿತಾದ ಒಂದು ಉಪನ್ಯಾಸಕ್ಕೆ ಅವರು ಬಂದಿದ್ದರು. ಅಲ್ಲಿ ಅವರನ್ನು ಕಂಡಿದ್ದೆ. ಅಂದು ಪುತ್ತೂರು ಪೇಟೆಗಳಲ್ಲಿ ಒಂದೆಡೆ ಮುಂದೆ ಚಲಿಸದೆ ಸ್ಥಗಿತವಾದ ಅವರ ಕಾರನ್ನು ದೂಡುವಲ್ಲಿಯೂ ನಾನು ಕೈ ಜೋಡಿಸಿದ್ದೆ. (ಆ ಉಪನ್ಯಾಸಕ್ಕೆ ಅವರು ಅವರದೇ ಕಾರಿನಲ್ಲಿ ಅವರೇ ಚಾಲಕರಾಗಿದ್ದು ಕೊಂಡು ಬಂದಿದ್ದರು.) ಬೇರೆ ಕೆಲವು ಕಡೆ ಸಭೆ ಸಮಾರಂಭಗಳಲ್ಲಿ ಕಂಡುದೂ ಇದೆ. ಅದಕ್ಕಿಂತ ಹೆಚ್ಚು ಅವರ ಸಂಪರ್ಕ ನನಗಾಗಲಿಲ್ಲ.

ಎರಡು ಗ್ರಂಥಗಳ ಸಂದರ್ಭದಲ್ಲಿ ಪ್ರೊ. ತೆಕ್ಕುಂಜದವರ ಸಮೀಪಕ್ಕೆ ಬರುವ ಅವಕಾಶ ನನಗೆ ದೊರಕಿದುದು ನನ್ನ ಜೀವನದ ಉತ್ತಮ ಅವಕಾಶಗಳೆಂದು ನಾನು ಭಾವಿಸುತ್ತೇನೆ. ಈ ಎರಡು ಗ್ರಂಥಗಳಲ್ಲಿ ಮೊದಲನೆಯದು ಪ್ರೊ. ತೆಕ್ಕುಂಜದವರ ‘ಕೇಶಿರಾಜ ದರ್ಪಣ’. ಕೇಶಿರಾಜನ ಶಬ್ದಮಣಿದರ್ಪಣಕ್ಕೆ ಅವರು ವ್ಯಾಖ್ಯಾನ ಬರೆದುದು ಅವರ ಸಂಪರ್ಕದಲ್ಲಿದ್ದ ಹಲವರಿಗೆ ತಿಳಿದಿತ್ತು. ಆದರೆ ಅವರು ತೀರಿಕೊಳ್ಳುವಾಗ ಅದು ಪೂರ್ಣ ಗೊಂಡಿರಲಿಲ್ಲ. ಸ್ವಲ್ಪ ಭಾಗ ವ್ಯಾಖ್ಯಾನಕ್ಕೆ ಬಾಕಿಯಾಗಿತ್ತು. ಅವರ ಮರಣಾನಂತರ ಆ ಕೃತಿಯನ್ನು ಪ್ರಕಟಿಸುವ ಪ್ರಯತ್ನ ನಡೆಯಿತು. ಅವರ ಮನೆಯ ಸಮೀಪದಲ್ಲಿಯೇ (ಮಂಗಳೂರಿನೊಳಗಿನ ಕರಂಗಲಪಾಡಿ) ವಾಸವಾಗಿದ್ದ ಮತ್ತು ಅವರ ಆಪ್ತ ವರ್ಗಕ್ಕೆ ಸೇರಿದ್ದ ಮುಳಿಯ (ತಿಮ್ಮಪ್ಪಯ್ಯನವರ ಮಗ) ಮಹಾಬಲ ಭಟ್ಟರು ಮತ್ತಿತರರು ಈ ಬಗೆಗೆ ಕ್ರಮ ಕೈಗೊಂಡಿದ್ದರು. ಆ ಕ್ರಮದ ಅಂಗವಾಗಿಯೇ ಕೃತಿಯ ಕೊನೆಯ ಉಳಿಕೆ ಭಾಗಕ್ಕೆ ಪ್ರೊ. ಎಂ. ರಾಜಗೋಪಾಲಾಚಾರ್ಯರಿಂದ ವ್ಯಾಖ್ಯಾನ ಬರೆಸಲಾಯಿತು. ಆದರೆ ಅನಂತರ ಪ್ರಕಟಣೆಯ ಕೆಲಸ ನೆನೆಗುದಿಗೆ ಬಿತ್ತು. ಈ ಸಂದರ್ಭದಲ್ಲಿ ಸಮಾರಂಭವೊಂದರಲ್ಲಿ  ಮುಳಿಯ ಮಹಾಬಲ ಭಟ್ಟರು ಕಾಣಸಿಕ್ಕಿದರು. ಆಗ ನಾನು ತೆಕ್ಕುಂಜದವರ ಶಬ್ದಮಣಿ ದರ್ಪಣ ವ್ಯಾಖ್ಯಾನದ ಕುರಿತು ಅವರಲ್ಲಿ ಕೇಳಿದೆ. ಅವರಿಂದ ಸಮರ್ಪಕ ಉತ್ತರ ಬರಲಿಲ್ಲ. ಕೆಲಸ ಹಿಂದೆ ಬಿದ್ದುದನ್ನು ಒಪ್ಪಿಕೊಂಡರು.

1998ರಲ್ಲಿ ದಿ. ಅ.ಬಾ. ಶೆಟ್ಟಿಯವರ ಪ್ರೇರಣೆಯೇ ಕಾರಣವಾಗಿ ಪ್ರೊ. ತೆಕ್ಕುಂಜ ದವರ ಶಬ್ದಮಣಿ ದರ್ಪಣ ವ್ಯಾಖ್ಯಾನವನ್ನು ಪ್ರಕಟಿಸುವ ಯೋಜನೆಯನ್ನು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಕೈಗೆತ್ತಿಕೊಂಡು ಅದನ್ನು ಸಂಪಾದಿಸಿಕೊಡಲು ನನಗೆ ಹೊಣೆ ವಹಿಸಿದಾಗ ಈ ವ್ಯಾಖ್ಯಾನದ ಹಸ್ತಪ್ರತಿಯನ್ನು ಹುಡುಕಬೇಕಾಯಿತು. ದಿ. ಮುಳಿಯ ಮಹಾಬಲ ಭಟ್ಟರಲ್ಲಿ ಅದರ ಅರ್ಧಾಂಶ ಹಸ್ತಪ್ರತಿ ಮತ್ತು ಪ್ರೊ. ಎನ್.ಕೆ. ಚೆನ್ನಕೇಶವರು ಪ್ರತಿ ತೆಗೆದ ಅದೇ ಆರ್ಧಾಂಶ ಪ್ರತಿ ದೊರಕಿತು. ಉಳಿದ ಹಸ್ತಪ್ರತಿ ಏನಾಯಿತೆಂಬುದರ ಹೊಲಬು ಮುಳಿಯದವರಿಗೂ ಹತ್ತಲಿಲ್ಲ. ಹಲವು ದಿನಗಳ ಕಾಲ ಹುಡುಕಾಟದ ಅನಂತರ ಆ ಅರ್ಧಾಂಶ ಹಸ್ತಪ್ರತಿ ಶ್ರೀಮತಿ ಚಂದ್ರಕಲಾ ನಂದಾವರ ಅವರಲ್ಲಿ ದೊರೆತು ಪೂರ್ತಿ ಗ್ರಂಥ ಉಪಲಬ್ಧವಾಯಿತು. ಅನಂತರ ಅದನ್ನು ಪ್ರಕಟಣೆಗೆ ಸಿದ್ಧಪಡಿಸಲಾಯಿತು. ಗ್ರಂಥದ ಕರಡಚ್ಚು ಗಳನ್ನು ಮೂರು ಬಾರಿ ಪರಿಶೀಲಿಸಿ ಅವಶ್ಯವಿದ್ದಲ್ಲಿ ಪರಾಮರ್ಶನ ಸಂಖ್ಯೆಗಳನ್ನು ಸೂಕ್ತ ಸಂಖ್ಯೆ ಗಳನ್ನು ಸರಿಪಡಿಸಿ ಅನುಬಂಧದಲ್ಲಿ ಸೂಕ್ತ ಪದ್ಯಗಳ ಸೂಚಿ, ಉದ್ಧ ೃತ ಸಂಸ್ಕೃತ ವಾಕ್ಯಸೂಚಿ, ಉದ್ಧ ೃತ ಗ್ರಂಥಸೂಚಿ, ಉದ್ಧ ೃತ ಲೇಖಕರ ನಾಮಸೂಚಿ, ವಿಶೇಷ ಶಬ್ದಗಳ ಸೂಚಿ ಮತ್ತು ಶಬ್ದಮಣಿ ದರ್ಪಣದ ಪರಿಷ್ಕರಣಗಳ ಸೂಚಿ ಇವುಗಳನ್ನು ಸಂಯೋಜಿಸಿ ಪುಸ್ತಕಕ್ಕೆ ಒಂದು ಉಪಯುಕ್ತ ರೂಪವನ್ನು ತರುವ ಸಂಪಾದಕೀಯ ಕಾರ್ಯವನ್ನು ನಾನು ನಿರ್ವಹಿಸಿದೆ.

ಹೀಗೆ ತೆಕ್ಕುಂಜದವರ ಅಪ್ರಕಟಿತ ಗ್ರಂಥವೊಂದರ ಪ್ರಕಾಶನಕ್ಕೆ ನನ್ನ ಕೈಂಕರ್ಯವನ್ನು ಸಲ್ಲಿಸುವ ಅವಕಾಶ ನನಗೊದಗಿತು. ಈ ಗ್ರಂಥ 1999ರಲ್ಲಿ ಪ್ರಕಟಗೊಂಡಿತು.

ಪ್ರೊ. ತೆಕ್ಕುಂಜದವರು ಈ ವ್ಯಾಖ್ಯಾನವನ್ನು ಸಿದ್ಧಪಡಿಸುವಲ್ಲಿ 91 ಗ್ರಂಥಗಳನ್ನು ಉದ್ಧರಿಸಿರುವುದು ಸೂಚಿಯಿಂದ ತಿಳಿಯುತ್ತದೆ. 76 ಮಂದಿ ಪ್ರಾಚೀನ, ಆಧುನಿಕ ವಿದ್ವಾಂಸರ ಹೆಸರುಗಳನ್ನು ಅಲ್ಲಲ್ಲಿ ಉದ್ಧರಿಸಿದ್ದಾರೆ. ವ್ಯಾಖ್ಯಾನದಲ್ಲಿ ಕಿಟ್ಟೆಲ್ಲರ ಕನ್ನಡ ಇಂಗ್ಲಿಷ್ ಕೋಶವನ್ನು 30 ಕಡೆಗಳಲ್ಲಿಯೂ ಆಪ್ಟೆಯವರ ಸಂಸ್ಕೃತ ಇಂಗ್ಲಿಷ್ ಕೋಶವನ್ನು 9 ಕಡೆಗಳಲ್ಲಿಯೂ ಪಂಪಭಾರತವನ್ನು 21 ಬಾರಿಯೂ ಕವಿರಾಜ ಮಾರ್ಗವನ್ನು 11 ಕಡೆಗಳಲ್ಲಿಯೂ ಶಬ್ದಾನುಶಾಸನ ಪ್ರಕಾಶಿಕೆಯನ್ನು 6 ಕಡೆಗಳಲ್ಲಿಯೂ ಸೇಡಿಯಾಪು ಕೃಷ್ಣ ಭಟ್ಟರ ಕನ್ನಡ ವರ್ಣಗಳು ಕೃತಿಯನ್ನು 22 ಕಡೆಗಳಲ್ಲಿಯೂ ಉದ್ಧರಿಸಿದ್ದಾರೆ. ಸೇಡಿಯಾಪು ಕೃಷ್ಣ ಭಟ್ಟರ ಹೆಸರು 25 ಬಾರಿಯೂ, ಕಿಟ್ಟೆಲ್ ಅವರ ಹೆಸರು 7 ಬಾರಿಯೂ ಡಿ.ಎಲ್. ನರಸಿಂಹಾಚಾರ್ಯರ ಹೆಸರು 6 ಬಾರಿಯೂ, ನಾಗವರ್ಮನ ಹೆಸರು 10 ಬಾರಿಯೂ, ಭಟ್ಟಾಕಳಂಕನ ಹೆಸರು 14 ಬಾರಿಯೂ, ಪ್ರಾ.ಗೋ. ಕುಲಕರ್ಣಿಯವರ ಹೆಸರು 4 ಬಾರಿಯೂ ಉಲ್ಲೇಖಗೊಂಡಿರುತ್ತದೆ. ತಮಿಳಿನ ಉಲ್ಲೇಖ 14 ಬಾರಿಯೂ, ತುಳುವಿನ ಉಲ್ಲೇಖ 28 ಬಾರಿಯೂ, ತೆಲುಗಿನ ಉಲ್ಲೇಖ 10 ಬಾರಿಯೂ ಇಂಗ್ಲಿಷಿನ ಉಲ್ಲೇಖ 12 ಬಾರಿಯೂ, ಹಿಂದಿಯ ಉಲ್ಲೇಖ 3 ಬಾರಿಯೂ ಬಂದಿರುತ್ತದೆ. ಈ ವಿವರಗಳನ್ನು ನೀಡಿದ್ದು ಪ್ರೊ. ತೆಕ್ಕುಂಜದವರ ಅಧ್ಯಯನ ವಿಸ್ತಾರವನ್ನು ತೋರಿಸುವುದಕ್ಕಾಗಿ ಮಾತ್ರ. ಪ್ರೊ. ತೆಕ್ಕುಂಜದವರ ಶಬ್ದಮಣಿ ದರ್ಪಣ ವ್ಯಾಖ್ಯಾನದ ಹಿಂದೆ ಒಂದು ಪ್ರಬಲ ಬೌದ್ಧಿಕ ಶಕ್ತಿಯಾಗಿ ಸೇಡಿಯಾಪು ಅವರಿದ್ದರು ಎಂಬುದು ತೆಕ್ಕುಂಜದವರೇ ಬೇರೆಡೆ ಹೇಳಿದ ಮಾತುಗಳಿಂದಲೂ ಇಲ್ಲಿಯ ಉದ್ದರಣ ಆಧಾರಸೂಚಿಗಳಿಂದಲೂ ಸ್ಪಷ್ಟವಾಗುತ್ತದೆ.

ನನಗೆ ದೊರೆತ ಇನ್ನೊಂದು ಗ್ರಂಥ ‘ಟಿಪ್ಪಣಿಸಾರ ಸಮೇತ ಶ್ರೀರಾಮಾಶ್ವಮೇಧ’. ಮುದ್ದಣನ ಶ್ರೀ ರಾಮಾಶ್ವಮೇಧವನ್ನು ಅವಶ್ಯವುಳ್ಳ ಎಲ್ಲ ಟಿಪ್ಪಣಿಗಳನ್ನು ಮತ್ತು ಹೊಸಗನ್ನಡ ಅನುವಾದವನ್ನು ಸೇರಿಸಿ ಪ್ರೊ. ತೆಕ್ಕುಂಜದವರು 1972ರಲ್ಲಿ ಪ್ರಕಟಿಸಿದ್ದರು. ಇದು ಅವರ ನಿವೃತ್ತಿಗಿಂತ ಮೊದಲೇ ಪ್ರಕಟಗೊಂಡ ಗ್ರಂಥ. ಕೆಲವು ವರ್ಷಗಳ ಶ್ರಮ ಇದರಲ್ಲಿದೆಂಯೆಂಬುದರಲ್ಲಿ ಸಂದೇಹವಿಲ್ಲ. ಇತ್ತೀಚೆಗೆ ಕಳೆದ ಹಲವು ವರ್ಷಗಳಿಂದ ಈ ಕೃತಿ ಅನುಪಲಬ್ಧವಾದುದರಿಂದ ಇದರ ಪುನರ್ಮುದ್ರಣವನ್ನು ಮಾಡುವ ಆಲೋಚನೆಯನ್ನು ಮಾಡಿದವರು ಮುದ್ದಣನ ಪರಮಭಕ್ತರಾದ ಶ್ರೀ ನಂದಳಿಕೆ ಬಾಲಚಂದ್ರ ರಾಯರು. ಪ್ರೊ. ತೆಕ್ಕುಂಜದವರಿಗೆ ಮುದ್ದಣನ ಹಸ್ತಲಿಖಿತ ಮೂಲಪ್ರತಿ ಲಭ್ಯವಿರಲಿಲ್ಲ. ಆದರೂ ಅನೇಕ ಅಪಪಾಠಗಳನ್ನು ಅವರು ತಿದ್ದಿ ಸಂಪಾದಿಸಿದ್ದರು; ಹಲವು ಉಹಾಪಾಠಗಳನ್ನು ಸೂಚಿಸಿದ್ದರು. ಆದರೆ ಪ್ರೊ. ಜಿ. ವೆಂಕಟಸುಬ್ಬಯ್ಯನವರು ‘ಮುದ್ದಣ ಭಂಡಾರ’ವನ್ನು (ಎರಡು ಸಂಪುಟಗಳಲ್ಲಿ ಮುದ್ದಣನ ಕೃತಿಗಳು – ಪ್ರ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, 1987) ಪ್ರಕಟಿಸುವಾಗ ಶ್ರೀರಾಮಾಶ್ವಮೇಧ ಕವಿಲಿಖಿತ ಪ್ರತಿಯನ್ನು ನೋಡಿದ್ದರು. ಆ ಪಾಠಗಳನ್ನು ನೀಡಿದ್ದರು. ಪುನರ್ಮುದ್ರಣದ ಸಂದರ್ಭದಲ್ಲಿ ಈ ಪಾಠ ಗಳನ್ನು ಟಿಪ್ಪಣಿಗೆ ಅಳವಡಿಸುವ ಕೆಲಸವಿತ್ತು. ಬೇರೆ ಕೆಲವು ಮಾಹಿತಿಗಳನ್ನು ಅವಶ್ಯವಿದ್ದಲ್ಲಿ ನೀಡುವುದಿತ್ತು. ಅನುಬಂಧಗಳಲ್ಲಿ ಸೂಚಿ ಸಿದ್ಧಪಡಿಸುವುದಿತ್ತು. ಇಂತಹ ಕೆಲಸಗಳೊಂದಿಗೆ ಈ ಗ್ರಂಥದ ಸಂಪಾದಕನಾಗುವ ಅವಕಾಶ ನನಗೆ ಲಬಿಸಿತು. 2005-06ರಲ್ಲಿ ಈ ಗ್ರಂಥದ ಒಂದು ವಿಸ್ತತ ಅಧ್ಯಯನದ ಅವಕಾಶ ನನಗೆ ಈ ರೀತಿಯಲ್ಲಿ ದೊರಕಿತು.

ಪ್ರೊ. ತೆಕ್ಕುಂಜದವರ ಕನ್ನಡ ಭಾಷಾ ಸೇವೆ ನಮಗೆ ಮುಖ್ಯವಾಗಿ ಗ್ರಂಥರೂಪದಲ್ಲಿ ದೊರಕುವುದು ಈ ಎರಡು ಗ್ರಂಥಗಳಲ್ಲಿ. ಅವರ ಬರಹಗಳೆಲ್ಲ ಬೇರೆ ಬೇರೆ ಪತ್ರಿಕೆಗಳಲ್ಲಿ ಹರಿದುಹೋಗಿವೆ. ಪುಸ್ತಕರೂಪದಲ್ಲಿ ಬಂದುವು ಕೆಲವೇ. ಅವು ಒಟ್ಟಾಗಿ ಸಂಪುಟ ರೂಪದಲ್ಲಿ ಹೊರಬರಬೇಕಿದೆ. ಅದಕ್ಕಾಗಿ ಒಂದಷ್ಟು ಅಧ್ಯಯನ ಕ್ರಮ ವಿನಿಯೋಗವಾಗಬೇಕಿದೆ. ಆಗ ಕನ್ನಡದ ಜನತೆಗೆ ಅವರ ಭಾಷಾಸೇವೆಯ ಪೂರ್ಣ ಪರಿಚಯವಾಗಬಹುದು.’’

ತೆಕ್ಕುಂಜ ಸಾಹಿತ್ಯದ ಮಾದರಿಗಳು

‘ಬಾಸಿಗ’ದಲ್ಲಿನ ‘ಸಂಶೋಧನೆ ಮತ್ತು ವಿಮರ್ಶೆ’

‘ಸ್ವರ್ಣಕಮಲ’ (ಅರ್ಕುಳ ಸುಬ್ರಾಯಾಚಾರ್ಯ ಸಂಸ್ಮರಣ ಗ್ರಂಥ)

– ಯಕ್ಷಗಾನದ ದ್ರೋಣಾಚಾರ್ಯ ಅರ್ಕುಳ ಸುಬ್ರಾಯಾಚಾರ್ಯ

ರಂಗಸ್ಥಳ (ಪೊಳಲಿ ಶಾಸ್ತ್ರಿ ಸ್ಮಾರಕ ಗ್ರಂಥ) – ಯಕ್ಷಗಾನದ ಹೊರಗೊಳಗು

ಶ್ರದ್ಧಾಂಜಲಿ (ಮುಳಿಯ ತಿಮ್ಮಪ್ಪಯ್ಯನವರ ಸ್ಮರಣಗ್ರಂಥ) ಮುಳಿಯ ತಿಮ್ಮಪ್ಪಯ್ಯನವರು

‘ಸುದರ್ಶನ’ (ಟಿ. ಮಾಧವ ಪೈ ಅಭಿನಂದನ ಗ್ರಂಥ), ದಕ್ಷಿಣ ಕನ್ನಡದ ಸಾಹಿತ್ಯ ಪರಂಪರೆ

‘ನವನೀತ’ (ತೆಕ್ಕುಂಜ ಅಭಿಮಾನಿ ಬಳಗ) 1. ದ.ಕ. ಜಿಲ್ಲೆಯ ಕನ್ನಡ 2. ಮಂಗಳೂರು ಹವೀಕರ ಆಡುನುಡಿ 3. ತುಳುವಿನ ವರ್ಣಮಾಲೆ 4. ಸ್ವಪ್ನ (ವಾಸವದತ್ತ)

ದೀರಕವಿ ಮುದ್ದಣ (ಜಿ.ಪಿ. ರಾಜರತ್ನಂ ಸ್ಮಾರಕಮಾಲೆ)

ರತ್ನಮಂಜೂಷ (ಸಾಹಿತ್ಯ ಸಮ್ಮೇಳನ, ಧರ್ಮಸ್ಥಳ) ಷಷ್ಠೀಗತ ವಿಭಕ್ತಿ

ಗುರುದಕ್ಷಿಣೆ (ತೆಕ್ಕುಂಜ ಶಂಕರ ಭಟ್ಟ ಸ್ಮಾರಕ ಗ್ರಂಥ) ಸತ್ವಸಿದ್ಧಿ

ತೆಂಕಣಗಾಳಿ (ಪಂಜೆ ಶತಮಾನೋತ್ಸವ ಸಂಚಿಕೆ) ಪಂಜೆಯವರ ಸಂಶೋಧನ ಸಾಹಿತ್ಯ ಮಂಗಳಾವಲೋಕನ (ಸಂ. ಎಸ್.ವಿ.ಪಿ.), ಸಪ್ತಮೀ ವಿಭಕ್ತಿ

ಪ್ರಬುದ್ಧ ಕರ್ನಾಟಕ ಪಂಪನ ನಡೆನುಡಿ

ತೆಕ್ಕುಂಜದವರ ಕುರಿತು – ಅಭಿನವ ಮುದ್ದಣ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು

ಪೊಳಲಿ ಬಾಲಕೃಷ್ಣ ಶೆಟ್ಟಿ – ‘ಗೌರವದ ಗರಿಗಳು’

ತೆಕ್ಕುಂಜ ನೆನಪು

ವ್ಯಾಖ್ಯಾನ ಮಾದರಿ : 1. ಶ್ರೀರಾಮಾಶ್ವಮೇಧ 2. ಶಬ್ದಮಣಿ ದರ್ಪಣ

ಜೀವನ, ಕೃತಿ ಪರಿಚಯ : ಮುಳಿಯ ತಿಮ್ಮಪ್ಪಯ್ಯ, ಸಾಂಗತ್ಯ ಕವಿಗಳು, ಪೂರ್ಣಕುಂಭ, ವರ್ಣಮಾಲೆಯಲ್ಲಿ ಮನೋರಮಾ ಭಟ್ಟರ ಲೇಖನ

ಅನುಬಂಧ 2

ಪ್ರವಾಹದ ವಿರುದ್ಧದ ಈಜು : ‘ಮಧುರಂಜನೀ’

ವಿ.ಗ. ನಾಯಕ

‘ಮಧುರಂಜನೀ’ ಹೆಸರನ್ನು ಕೇಳಿದವರು ಕಡಿಮೆ ಮಂದಿ ಇದ್ದಾರು. ಅದನ್ನು ಕಣ್ಣಾರೆ ಕಂಡವರು ಇನ್ನೂ ಕಡಿಮೆ ಮಂದಿ ಇರಬಹುದು.. 1970ರಲ್ಲಿ ತೆಕ್ಕುಂಜ ಗೋಪಾಲಕೃಷ್ಣ ಭಟ್ ಅವರು ಪ್ರಕಟಿಸಿದ ಕೃತಿ ಇದು. ಇದನ್ನು ‘ಶೃಂಗಾರ ಪ್ರಧಾನ’ವಾದ ಎನ್ನಬೇಕೇ ಅಥವಾ ‘ಕಾಮ ಕೇಂದ್ರಿತ’ವಾದ ಎನ್ನಬೇಕೇ ಎಂಬುದು ತಲೆ ತಿನ್ನುವ ಸಂಗತಿ. ಸಂಕಲನದಲ್ಲಿ ಒಟ್ಟೂ ಮುನ್ನೂರಾ ಒಂದು ರಚನೆಗಳಿವೆ. ಎಲ್ಲವೂ ಸಾಂಗತ್ಯ ರೂಪದಲ್ಲಿವೆ. ಆದರೆ ಪ್ರತಿಯೊಂದೂ ಸ್ವತಂತ್ರವಾಗಿದೆ.

ವಿಷಯಾಸಕ್ತಿ ಅತ್ಯಂತ ಸಹಜವಾದ ಪ್ರಕ್ರಿಯೆ. ಅದು ಪ್ರಾಣಿಗಳ, ವ್ಯಕ್ತಿಗಳ ಜೀವನೋತ್ಸಾಹಕ್ಕೆ ಅತ್ಯಂತ ಪೂರಕವಾದದ್ದು. ಯಾರಾದರೂ ಕಂಗೆಡುವುದು, ಕೆಡುವುದು, ರೋಮಾಂಚನಗೊಳ್ಳುವುದು, ಶೋದಿಸುವುದು, ಸಾದಿಸುವುದು, ಮನುಷ್ಯರಾಗಿರುವುದು ಆಪ್ತರಾದವರ ಸಾಹಚರ್ಯದಿಂದ, ಪ್ರೇರಣೆಯಿಂದ, ಒಲವಿನಿಂದ.

ಗಂಡಿಗೆ ಹೆಣ್ಣು; ಹೆಣ್ಣಿಗೆ ಗಂಡು ಒಂದು ಸೆಳೆತ; ಬಲವಾದ ಆಕರ್ಷಣೆ; ತೀವ್ರವಾದ ಕುತೂಹಲ. ಇಲ್ಲಿ ವಿವಾಹಿತರಿಗೂ, ಅವಿವಾಹಿತರಿಗೂ ಒಂದೊಂದು ಮಟ್ಟದಲ್ಲಿ ಆಸಕ್ತಿ, ಮೋಹ. ಕೆಲವರು ಮುಲಾಜಿಲ್ಲದೇ, ಮುಚ್ಚುಮರೆಯಿಲ್ಲದೇ ರತಿ ಮನ್ಮಥರನ್ನು; ಕ್ರೀಡೆಗಳನ್ನು ಬಿಡಿಸಿ, ಬಿಡಿಸಿ, ಬಡಿಸಿ, ಬಡಿಸಿ ತೃಪ್ತರಾಗುವವರಾದರೆ, ಮತ್ತೆ ಕೆಲವರು ಪ್ರತಿಷ್ಠೆಯ ಬಿಗುಮಾನದಿಂದ ಪರಮಾಪ್ತ ವಲಯದಲ್ಲಿ ಮಾತ್ರ ಅದನ್ನೇ ಮಾಡುತ್ತಾರೆ! ದಿಟದಲ್ಲಿ ಹೀಗೆಲ್ಲ ತೆರೆದುಕೊಳ್ಳುವುದೇ ‘ನಿಜವಾಗುವಿಕೆ’; ‘ಭಾರ ಕಳಕೊಳ್ಳುವಿಕೆ’. ಈ ರೀತಿ, ಚೇತೋಹಾರಿಯಾದ ಬದುಕಿಗೆ ಅವಶ್ಯಕವಾದ ಟಾನಿಕ್. ಇಷ್ಟಾಗಿಯೂ ಬಹಿರಂಗದಲ್ಲಿ ಅಂಥ ಮಾತುಕತೆಗೆ ‘ಅಶ್ಲೀಲತೆ’ಯ ಆರೋಪ ಹೊರಿಸಲ್ಪಡುವುದು ವೈಪರೀತ್ಯ. ಇದು ಆತ್ಮ ವಂಚನೆ. ಅರ್ಜುನ ಸಂನ್ಯಾಸಿತನ! ಪ್ರಕೃತ ‘ಮಧುರಂಜನೀ’ ಅಂಥ ಮುಖವಾಡಗಳನ್ನು ಕಿತ್ತೆಸೆದು ರಂಜಿಸುವ, ಹಂಗಿಸುವ, ಭಂಗಿಸುವ ದೀರ ಪ್ರಯೋಗವಾಗಿದೆ. ಇದು ಪ್ರವಾಹದ ವಿರುದ್ಧದ ಈಜೇ ಆಗಿದೆ. ಅರ್ಥಾತ್ ಮನುಷ್ಯನ ಲೈಂಗಿಕ ಆಟಗಳನ್ನು, ಕಾಟಗಳನ್ನು ರಟ್ಟು ಮಾಡಿರುವುದೇ ಇಲ್ಲಿನ ವೈಶಿಷ್ಟ್ಯ, ಸಾಹಸ! ಇದೇ ಕಾರಣಕ್ಕಾಗಿಯೇ ಇದಕ್ಕೆ ಅಸ್ಪೃಶ್ಯತೆಯ ಶಾಪ; ತಾಪ. ಓದಿ, ಒಳಗೊಳಗೆ ಖುಷಿ ಪಟ್ಟವರೇ, ಸಾರ್ವಜನಿಕವಾಗಿ ಒಪ್ಪಿಕೊಂಡಲ್ಲಿ ‘ಕಾಮುಕರೋ, ಹಲ್ಕಟ್ಟೋ’ ಎಂಬಿತ್ಯಾದಿ ಆರೋಪಗಳಿಗೆ ಗುರಿಯಾದೇವೆಂಬ ಭಯದಿಂದಾಗಿ ಮುಖ ಕಿವುಚಿಕೊಂಡಂತೆ ನಟಿಸಿರುವುದೇ ಹೆಚ್ಚು. ಹೀಗಾಗಿ ‘ಮಧುರಂಜನೀ’ ಸುದ್ದಿ ಮಾಡಲೇ ಇಲ್ಲ. ನಾನು ತಿಳಿದಂತೆ ಇದುವರೆಗೂ ಇದರ ಕುರಿತು ಸಮೀಕ್ಷೆ, ವಿಮರ್ಶೆ, ಗೋಷ್ಠಿ ಏನೊಂದೂ ನಡೆದೇ ಇಲ್ಲ.

‘ಬೆಳಕಿನ ಬೀಜ’ ಪಾಂಡೇಶ್ವರರು ತಮ್ಮ ಸಂಪಾದಕತ್ವದ ‘ನಾಗರಿಕ’ದಲ್ಲಿ ವಿಮರ್ಶಿಸುವುದಕ್ಕಾಗಿ ಈ ಕೃತಿಯನ್ನು ನನಗೆ ಒಪ್ಪಿಸಿದರು : ನನ್ನ ವಿಮರ್ಶೆ 25.2.1971ರ ‘ನಾಗರಿಕ’ದಲ್ಲಿ ಪ್ರಕಟವಾದುದು ತನ್ಮಧ್ಯೆಯೂ ಸಂಕಲನಕ್ಕೆ ಸಂದಿರುವ ಸಮ್ಮಾನ ಎಂದು ನಾನು ಭಾವಿಸುತ್ತೇನೆ.

ದುರ್ದೈವವಶಾತ್ ‘ಮಧುರಂಜನೀ’ ನನ್ನ ಬಳಿ ಉಳಿದುಕೊಳ್ಳಲಿಲ್ಲ. ಅದನ್ನು ಓದಲೆಂದು ಕೊಂಡುಹೋದವರು ಇದುವರೆಗೂ ಹಿಂತಿರುಗಿಸುವ ಕೃಪೆ ಮಾಡಲಿಲ್ಲ. ಈ ಸಂದರ್ಭದಲ್ಲಿ ಅದನ್ನು ಒಮ್ಮೆ ಅವಲೋಕಿಸಬೇಕೆಂದು ಅಲ್ಲಿ ಇಲ್ಲಿ ಹುಡುಕಾಡಿದರೂ, ನೋಡ ಸಿಗಲಿಲ್ಲ. ತೆಕ್ಕುಂಜೆಯವರು ಬಹಳ ಕಡಿಮೆ ಪ್ರತಿ ಅಚ್ಚು ಹಾಕಿಸಿದ್ದು ಹೀಗಾಗಲು ಕಾರಣವೇ? ಅಥವಾ ಕೊಂಡವರು ಅಶ್ಲೀಲ ಕೃತಿಯೊಂದು ಸಂಗ್ರಹದಲ್ಲಿರುವುದು ಮಾನಕ್ಕೆ ಕುಂದು ಎಂಬ ಆತಂಕದ ಪರಿಣಾಮವಾಗಿ ಓದಿ, ತತ್‌ಕ್ಷಣವೇ ಯಾರ್ಯಾರಿಗೋ ದಾಟಿಸಿದ್ದರ ಪರಿಣಾಮವೇ? ಇಲ್ಲವೇ, ಹಿಂತಿರುಗಿಸುವೆನೆಂದು ಒಯ್ದವರು ಕೈಕೊಟ್ಟದ್ದರ ಫಲಿತಾಂಶವೇ ಇದು? ಅಂತೂ ‘ಮಧುರಂಜನೀ’ ‘ಅಲಭ್ಯ’ ‘ಅಮಾನ್ಯ’?! ಕೃತಿಯಾಗಿದೆ.

ಹೀಗಾಗಿ ನನ್ನ ಆಗಿನ ವಿಮರ್ಶೆಯೋ, ಅವಲೋಕನವೋ ಏನೇ ಅನ್ನಿ – ಅದನ್ನೇ ಇಲ್ಲಿ ದಾಖಲಿಸುವ ಮೂಲಕ ಅದರ ಚಿತ್ರವನ್ನು ಒಂದು ಮಿತಿಯಲ್ಲಿ ಒದಗಿಸುವ ಉದ್ದೇಶ ಸದ್ಯದ್ದಾಗಿದೆ. ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ನೋಟದಲ್ಲಿ ನಾನು ಋಣಾತ್ಮಕ ಅಂಶಗಳತ್ತ ಬೆಟ್ಟು ಮಾಡಲಿಲ್ಲವೆಂಬುದು ಇಲ್ಲಿ ಸಾಬೀತಾಗುತ್ತದೆ. ಹೀಗೆಂದರೆ ಅದು ನನ್ನ ಶಕ್ತಿಯ ಮಿತಿಯೇ ಆಗಿರಬಹುದು. ನನ್ನ ಬರೆವಣಿಗೆಯ ಆಯ್ದ ಕೆಲವು ಭಾಗ ಹೀಗಿದೆ :

…. ಶ್ರೀಮಾನ್ ತೆಕ್ಕುಂಜ ಭಟ್ಟರದು ಸ್ವತಂತ್ರವಾದ ದಿಟ್ಟ ಪ್ರತಿಭೆ. ತಮ್ಮದೇ ಆದ ಅನುಪಮ ವಾಗ್ವಿಲಾಸದೊಂದಿಗೆ, ಧ್ವನಿಗಮ್ಯತೆ – ರಮ್ಯತೆಯೊಂದಿಗೆ ಅವರು ಕಾಮ ವಿರೂಪತೆಯ ಪದರು ಪದರುಗಳನ್ನು ಸೂಕ್ಷ್ಮವಾಗಿ ಬಿಡಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆ. ತಾವು ‘ಓದಿ, ಕೇಳಿ, ಕಲ್ಪಿಸಿದ’ ಘಟನೆಗಳನ್ನೆಲ್ಲ ಇಲ್ಲಿ ಅವರು ಉಚಿತವಾಗಿ ಎರಕ ಹೊಯ್ದಿದ್ದಾರೆ :

‘ಮನೆಗಾರು ಬಂದರದೇಕೆಂ’ದು ಕುರುಡತ್ತೆ
ಕೇಳಲ್ಕೆ ಸೊಸೆಂಯೆಂದಳಾತ
‘ಸಮಗಾರ; ಹರಿದಿಹ ಚರ್ಮವ ಹೊಲಿಯಲು
ಬಂದಿಹ; ಸಲಿಸಿಹ ಮಾತ’

ಒಂದು ಅನೈತಿಕ ವ್ಯವಹಾರವನ್ನು ಸೂಚ್ಯವಾಗಿ ಇಲ್ಲಿಡಲಾಗಿದೆ. ಮುಕ್ತಕದ ಆಶಯ ಕೆಲವರಿಗೆ ‘ಅಸಹ್ಯ’ವೆನ್ನಿಸಬಹುದೆಂಬುದೂ ಕವಿಗೆ ಗೊತ್ತಿಲ್ಲದಿಲ್ಲ. ಅದಕ್ಕಾಗಿಯೇ ಕವಿ ಪುನಃ ಪ್ರಶ್ನೆ ಎಸೆಯುತ್ತಾರೆ :

‘ವಾಚಕರಿಂದಸಹ್ಯತೆಗೊಂಡರೆ
ಮುಂದೇಕೆ ವರ್ತಿಪರಿಂತು?’

ಕೆಲವೊಂದು ಹೃದ್ಯವಾದ ಶೃಂಗಾರ ಪದಗಳು, ಸತಿ-ಪತಿಯರ ಸರಸವಾದ ಪ್ರೇಮಾಲಾಪಗಳು; ತಹತಹದ ಕೂಡಾಟಗಳು. ಅವುಗಳ ಸೊಗಸು ಅನನ್ಯ!

ಕೆಲವು ರಂಜನೀಯ ಪದಗಳು; ಶೃಂಗಾರ ರಸಭರಿತವಾದವು! ಹರೆಯದೆದೆಗಳ ವಿಬಿನ್ನ ಲಕ್ಷಣಗಳನ್ನು, ಭಾವಗಳನ್ನು ಮೋಹಕವಾಗಿ ಮೂಡಿಸುವ ಮುಕ್ತಕಗಳು ಇನ್ನೂ ಕೆಲವು. ಉದಾ :

ತೋಟದ ತೆಂಗಿನ ಕಾಯನೊಯ್ಯುವಳೆಂದು
ಸಂದೆಗದಿಂದೊಬ್ಬ ತಡೆದು
ಮೇಲುದ ಕಂಚುಕ ಕಳೆಯಿಸಲಚ್ಚರಿ
ಗೊಂಡನು ಕುಚಕುಂಭ ಕಂಡು||

ಇನ್ನೊಂದರಲ್ಲಿ ವಿಕೃತ ಕಾಮದ ಒಂದು ಚಿತ್ರಣವಿದೆ. ಅದಕ್ಕೆ ಅಲ್ಲಿಯೇ ಮದ್ದೂ ಸೂಚಿಸಲಾಗಿದೆ :

ವಾಗ ನಗ್ನ ವಿಗ್ರಹವನಿಣುಕುವೆನೆಂದು
ಅಟ್ಟವನೇರಿ ಮಯ್ದುನನು
ಕಾದಿರಲವಳೊಲೆಗೊಟ್ಟಲು ಕಸಕಡ್ಡಿ
ಹೊಗೆ ಬಂದು ಕಣ್ಣು ಮುಚ್ಚಿದನು||

ಐರನಿ, ಕಟಕಿ, ಲೇವಡಿ ಇತ್ಯಾದಿ ಮೊನಚುಗಳನ್ನು ಅಲ್ಲಲ್ಲಿ ಪ್ರಖರವಾಗಿ, ಖಾರವಾಗಿ ಕವಿ ದುಡಿಸಿಕೊಳ್ಳುವಲ್ಲಿ ಸಫಲವಾಗಿರುವುದರ ಹಿಂದಿನ ಪರಿಶ್ರಮ, ಚಿಂತನೆ, ಪ್ರತಿಭಾಶಕ್ತಿ ಅಸಾಮಾನ್ಯವಾದದ್ದು ಆಗಿದೆ.

ನಿಸ್ಸಂದೇಹವಾಗಿ, ‘ಮಧುರಂಜನೀ’ ಒಂದು ಮುಖ್ಯ ಕಾವ್ಯಕೃತಿ. ಸಮಕಾಲೀನವೂ, ಸಾರ್ವಕಾಲೀನವೂ ಆದ ಸತ್ಯಗಳನ್ನು ನಿಸ್ಸಂಕೋಚದಿಂದ, ನಿರ್ಬೀತಿಯಿಂದ ನಿರೂಪಿಸಿದ ಶ್ರೇಯಸ್ಸು ಈ ಕೃತಿಯದು :

ಗರ್ಭನಿರೋಧಕ ಶಸ್ತ್ರ ಚಿಕಿತ್ಸೆಯ
ಮಾಡಿಸಿಕೊಂಡಿದ್ದ ತಾಯಿ
ಸಂಗ ವೈವಿಧ್ಯವನುಂಡಳು ನಿರ್ಬೀತಿ
ಯಿಂದಾಂತಳಾತ್ಮ  ಸಂತೃಪ್ತಿ ||

‘ಕಾಮ ಕುರುಡು’ ಅಂತೆ. ಹಾಗೆಂದರೂ ಕವಿ ನಿರಾಶಾವಾದಿಗಳಲ್ಲ. ಅವರ ಉದ್ದೇಶ, ಹಾರೈಕೆ, ನಂಬಿಕೆ ಇದೆ, ಇಷ್ಟೇ :

ಬಹುವಿಧ ಸಂಸ್ಕಾರದಿಂದ ಸಂಯಮದಿಂದ
ಬುದ್ಧಿಯ ಬಲದಿಂದ ಹೆಣ್ಣು
ಗಂಡೆಲ್ಲ ಪಶುವೃತ್ತಿಗಿಳಿಯದೆ ಬಾಳ್ದರೆ
ಜೀವನವಪ್ಪುದು ಹೊನ್ನು ||

ಇನ್ನಾದರೂ ಈ ಕೃತಿ ಹತ್ತು ಜನರ ಗಮನಕ್ಕೆ ಬೀಳಲಿ. ಕೃತಿಯ ಸತ್ತ್ವಕ್ಕೆ, ಸತ್ಯಕ್ಕೆ ನ್ಯಾಯ ಸಿಗಲಿ.

ಕರಿಕೆಯ ಕುಡಿ : 2009