ಹಿತ್ತಿಲಿನಲ್ಲಿ ಬೆಳೆಯಬಹುದಾದ ಸುಂದರ ಹೂವಿನ ಗಿಡಗಳಲ್ಲಿ ಒಂದಾದ ಅಪರೂಪದ ಸಸ್ಯ ಈ ಹೈಡ್ರೆಂಜಿಯ. ಈ ಗಿಡವನ್ನು ನೈಸರ್ಗಿಕ ‘ಪಿ.ಹೆಚ್’ ಪರೀಕ್ಷಕ ಎಂದು ಕರೆಯ ಬಹುದು. ಕಾರಣ ಮಣ್ಣು ಆಮ್ಲೀಯ (ಅಸಿಡಿಕ್)ವಾಗಿದ್ದರೆ ಹೂವು ನೀಲಿ ಬಣ್ಣದ್ದಿರುತ್ತದೆ. ಮಣ್ಣು ಕ್ಷಾರೀಯ(ಆಲ್ಕಲೈನ್)ವಾಗಿದ್ದರೆ ಹೂವು ಗುಲಾಬಿ ಬಣ್ಣ ಅಥವ ತಿಳಿ ನೇರಳೆ ಬಣ್ಣದ್ದಾಗಿರುತ್ತದೆ. ಈ ಹೂವಿನ ಬಣ್ಣವನ್ನು ಅನುಸರಿಸಿ ಮಣ್ಣಿನ ಗುಣಧರ್ಮ ತಿಳಿಯುವುದಾದರೆ ಎಷ್ಟು ಒಳ್ಳೆಯದು ಅಲ್ಲವೇ? ಈ ದಿಸೆಯಲ್ಲಿ ಆಸಕ್ತ ವಿಜ್ಞಾನಿಗಳು ತನ್ನ ಅಲಂಕಾರಿಕ ಹೂವಿನಿಂದಾಗಿ ಈ ಸಸ್ಯ ಹೆಸರುವಾಸಿಯಾಗಿದೆ. ಹಿತ್ತಿಲಿನ ಶೋಭೆಯನ್ನೂ ಹೆಚ್ಚಿಸುತ್ತದೆ. ಹೂ ಗುಚ್ಛ ಹೊರಟಾಗ ಬಣ್ಣ ಹಸಿರಾಗಿರುತ್ತದೆ. ಮಣ್ಣಿನ ಗುಣಧರ್ಮಕ್ಕೆ ಅನುಗುಣವಾಗಿ ಹೂವು ಅರಳುವ ವೇಳೆಗೆ ಗುಲಾಬಿ ಅಥವ ನೀಲಿ ಬಣ್ಣ ಹೊಂದುತ್ತದೆ. ಸಾಧಾರಣ  ಒಂದು ತಿಂಗಳು ಗಿಡದಲ್ಲಿರುವ ಪುಟ್ಟ ಪುಟ್ಟ ಹೂಗಳ ಈ ಗೊಂಚಲು ನೋಡುಗರ ಗಮನ ಸೆಳೆಯದೆ ಇರದು. ಈ ಒಂದು ತಿಂಗಳಲ್ಲಿ ಈ ಹೂ ಗೊಂಚಲಿನ ಬಣ್ಣದಲ್ಲಾಗುವ ಬದಲಾವಣೆ ಗಮನಾರ್ಹ. ದಟ್ಟವಾಗಿದ್ದ ಬಣ್ಣ ಮಾಸಲಾಗಿ, ನಂತರ ಪುನ: ಹಸಿರು ಬಣ್ಣಕ್ಕೆ ತಿರುಗುವ ಪ್ರಕ್ರಿಯೆ ಎಲ್ಲರನ್ನೂ ಚಕಿತ ಗೊಳಿಸುವಂತಹುದು.

ಬಣ್ಣ ಬದಲಿಸುತ್ತಿರುವ ಹೈಡ್ರೆಂಜಿಯ

ಹಲವು ರಾಷ್ಟ್ರಗಳಲ್ಲಿ ಬೆಳೆಯುವ ಈ ಹೂವಿನಲ್ಲಿ ಹಲವು ಪ್ರಬೇಧಗಳಿವೆ. ವೈಜ್ಞಾನಿಕವಾಗಿ ಈ ಹೂವಿಗೆ ಹೈಡ್ರೆಂಜಿಯ ಮೈಕ್ರೋಫಿಲ್ಲ ಎಂಬ ಹೆಸರು. ಈ ಹೂವಿಗೆ ಫ್ರೆಂಚ್ ಹೈಡ್ರೆಂಜಿಯ, ಬಿಗ್ ಲೀಫ್, ಸ್ನೋ ಬಾಲ್, ಜಪಾನೀಸ್ ಹೈಡ್ರೆಂಜಿಯ ಎಂಬ ಹಲವಾರು ಹೆಸರುಗಳಿವೆ. ಜಪಾನಿನಲ್ಲಿ ಇದನ್ನು ಹೈಡ್ರೆಂಜಿಯ ಮೈಕ್ರೋಫೆಲ ಎಂಬ ಹೆಸರಿನಿಂದ ಗುರುತಿಸುತ್ತಾರೆ.

ದಟ್ಟ ಹಸುರಿನ ದೊಡ್ಡ ಎಲೆಗಳು ಈ ಗಿಡಕ್ಕೆ ಮೆರಗು ನೀಡುತ್ತದೆ. ತುದಿಯಲ್ಲಿ ಬಿಢುವ ದುಂಡನೆಯ ಚೆಂಡಿನಾಕಾರದ ಹೂಗುಚ್ಛ ಕತ್ತರಿಸಿ ಇಟ್ಟರೂ ತಿಂಗಳುಗಳ ಕಾಲ ಹೂದಾನಿಯಲ್ಲಿ  ಹೊಸದಾಗಿಯೇ ಇರುತ್ತದೆ. ಹಾಗಾಗಿ ಈ ಕಟ್ ಫ್ಲವರ್ ಗಳಿಗೆ ಬೇಡಿಕೆ ಇದೆ.

ಕಾಂಡದ ತುಂಡುಗಳಿಂದ ಸಸ್ಯಾಭಿವೃದ್ಧಿ ಮಾಡ ಬಹುದು. ಮರಳಿನಲ್ಲಿ ಅಥವ ಕಾಯರ್ ಪೀಟ್ ನಲ್ಲಿ ರೂಟಿಂಗ್ ಮೀಡಿಯ ಉಪಯೋಗಿಸಿ ನಾಟಿ ಮಾಡಿದರೆ ಬಹು ಬೇಗ ಬೇರು ಬಿಟ್ಟು ನಾಟಿಗೆ ಯೋಗ್ಯವಾಗುತ್ತದೆ. ಹೆಚ್ಚು ಸಾವಯವ ಗೊಬ್ಬರ ಸ್ವಲ್ಪ ಮರಳು ಇದ್ದು ಚೆನ್ನಾಗಿ ನೀರು ಬಸಿದು ಹೋಗುವಂತಹ ಜಾಗದಲ್ಲಿ ಗಿಡ ನಾಟಿ ಮಾಡಬಹುದು. ದೊಡ್ಡ ಗಿಡದ ಪಕ್ಕದಲ್ಲಿ ಬರುವ ಸಣ್ಣ ಸಸಿಗಳಿಂದಲೂ ಹೊಸ ಗಿಡ ಮಾಡಿಕೊಳ್ಳ ಬಹುದು.

ತೋಟದ ಸೊಬಗು ಈ ಹೂವಿನಿಂದ

ನಾಟಿ ಮಾಡಿದ ೪-೮ ವಾರಗಳೊಳಗೆ ಗಿಡ ಚೆನ್ನಾಗಿ ಹೊಂದಿಕೊಳ್ಳುತ್ತದೆ, ಗಿಡ ದೃಢವಾಗಿ ನಿಂತ ಮೇಲೆ ಆಗಿಂದ್ದಾಗ್ಯೆ ದ್ರವ ಗೊಬ್ಬರ ಕೊಡುವುದರಿಂದ ಗಿಡ ಚೆನ್ನಾಗಿ ಬೆಳೆಯುತ್ತದೆ. ನೆರಳು ಮತ್ತು ಸ್ವಲ್ಪ ಬಿಸಿಲು ಬೀಳುವ ಜಾಗ ಈ ಗಿಡದ ಬೆಳವಣಿಗೆಗೆ ಸೂಕ್ತ. ಗಿಡ ಹೆಚ್ಚು ಬಿಸಿಲು ತಡೆಯುವುದಿಲ್ಲ.

ಹೂವು ಅರಳಿ ತಿಂಗಳಾದ ನಂತರ ಬಣ್ಣ ಮಾಸಲಾಗಿ ಪುನ: ತನ್ನ ಶೈಶವಾವಸ್ಥೆಯ ಹಸಿರು ಬಣ್ಣಕ್ಕೆ  ತಿರುಗುತ್ತದೆ.  ಇದು  ಗಿಡವನ್ನು ಸವರಲು ಸುಸಮಯ. ಹೆಚ್ಚು ಎಲೆಗಳು ಬಂದು ಗಿಡ ಚೆನ್ನಾಗಿ ಬೆಳೆಯಲು ಅವಕಾಶ ಮಾಡಿ ಕೊಡ ಬೇಕು. ತಡವಾಗಿ ಅಂದರೆ ಮಳೆಗಾಲದಲ್ಲಿ ಪ್ರೂನ್ ಮಾಡುವದರಿಂದ ಹೂವುಗಳ ಸಂಖ್ಯೆ ಕಮ್ಮಿಯಾಗುತ್ತದೆ.

ಚೈತ್ರಮಾಸದಿಂದ ಅಂದರೆ ಮಾರ್ಚ್-ಏಪ್ರಿಲ್ ನಿಂದ ಹೂವು ಬಿಡಲು ಪ್ರಾರಂಭಿಸುತ್ತದೆ. ಮಳೆ ಶುರುವಾಗುವ ವರೆಗೂ ಹೂಗಳನ್ನು ನಿರೀಕ್ಷಿಸ ಬಹುದು. ಕೆಲವು ಪ್ರಬೇಧಗಳಲ್ಲಿ ಮಳೆಗಾಲದಲ್ಲಿ ಹೂ ಬಂದರೂ ನಮ್ಮಲ್ಲಿನ ಗಿಡಗಳು ಹೂ ಬಿಡಲಾರವು. ನೆಲದಲ್ಲಿ ಇರುವ ಗಿಡಗಳಲ್ಲಿ ಹತ್ತಾರು ಹೂ ಗೊಂಚಲುಗಳು ಬಂದು ಸೊಗಸಾಗಿ ಕಾಣುತ್ತದೆ. ಕುಂಡಗಳಲ್ಲಿ ಬೆಳೆದಾಗ ಹೂಗಳ ಸಂಖ್ಯೆ ಕಮ್ಮಿಯಾಗುತ್ತದೆ.

ನೀಲಿ ಸುಂದರಿ

ಒಂದು ಕಾಲದಲ್ಲಿ ಇದು ಶ್ರೀಮಂತರ ಗಿಡವೆಂದೇ ಪ್ರಸಿದ್ಧಿ ಪಡೆದಿತ್ತು. ಕಾರಣ ಈ ಗಿಡಕ್ಕಿದ್ದ ಬೇಡಿಕೆ, ಧಾರಣೆ ಜನ ಸಾಮಾನ್ಯರಿಗೆ ಎಟುಕುವಂತಿರಲಿಲ್ಲ.  ಆದರೆ ಇಂದು ಬೆಲೆ ಜಾಸ್ತಿಯಾದರೂ,  ಇದು ಎಲ್ಲ ಪ್ರಮುಖ  ನರ್ಸರಿಗಳಲ್ಲೂ ದೊರೆಯುತ್ತದೆ. ಒಂದು ಗಿಡ ಹಾಕಿಕೊಂಡರೆ ಇದು ಬೆಳೆಯುವ ಪರಿ ಮಾನಸಿಕ ನೆಮ್ಮದಿ ತರುವುದಲ್ಲದೆ, ಧನ ಸಂಪಾದನೆಯ ಮಾರ್ಗವನ್ನೂ ತೆರೆಯ ಬಲ್ಲದು.   ನಾಲ್ಕಾರು ಹೊಸ ಗಿಡಗಳನ್ನು ಮಾಡಿ ಮಾರಾಟ ಮಾಡ ಬಹುದು. ಆದಾಯಕ್ಕೊಂದು ದಾರಿ ಮಾಡಿಕೊಳ್ಳ ಬಹುದು.

ಚಿತ್ರಗಳು: ಎಆರ್‌ಎಸ್ ಶರ್ಮ