ಕಪ್ಪು ಚರ್ಮ, ಉಣ್ಣೆ ಕೂದಲು, ಅಗಲ ಮೂಗು, ಎತ್ತರ ಶರೀರ ಇತ್ಯಾದಿ ಲಕ್ಷಣಗಳಿಂದ ಕೂಡಿದ ನೀಗ್ರೋ ಜನರೇ ಆಫ್ರಿಕದ ಹೆಚ್ಚಿನ ಪ್ರದೇಶಗಳ ನಿವಾಸಿಗಳು ಹಾಗೂ ಬಹುಸಂಖ್ಯಾಕರು. ಸ್ವಲ್ಪ ಕುಳ್ಳಗಿರುವ ಮತ್ತು ಅರಶಿನ ಕಂದು ಬಣ್ಣದ ಚರ್ಮವುಳ್ಳ ಬುಷ್‌ಮನ್ ಮತ್ತು ಹೋಟ್ಟನ್‌ಟೋಟ್‌ಜನಾಂಗವನ್ನು ಆಫ್ರಿಕದ ದಕ್ಷಿಣ ಭಾಗದಲ್ಲಿಯೂ, ಅವರಿಗಿಂತಲೂ ಕುಳ್ಳಗಿರುವ ಅಗಲ ತಲೆಯ ಪಿಗ್ಮಿಗಳನ್ನು ಮಧ್ಯ ಆಫ್ರಿಕದಲ್ಲಿಯೂ ಕಾಣಬಹುದು. ಅಲ್ಲದೆ ಮಧ್ಯ ಏಷಿಯಾ ಮತ್ತು ಯುರೋಪಿನ ಜನಾಂಗಗಳ ಸಂಪರ್ಕದಿಂದ ತಿಳಿಬಣ್ಣ ಹಾಗೂ ತೆಳು ಚರ್ಮ ಪಡೆದ ಹೆಮಿಟಿಕ್ ಜನಾಂಗ ಪೂರ್ವ ಆಫ್ರಿಕದಲ್ಲಿ ವ್ಯಾಪಿಸಿದೆ.

ಮೇಲೆ ಹೇಳಿದ ಮೊದಲನೆಯ ವರ್ಗಕ್ಕೆ ಸೇರಿದ ನೀಗ್ರೋ ಜನಾಂಗ ಇತರ ಸಂಸ್ಕೃತಿಯ ಪ್ರಭಾವಕ್ಕೆ ಹೆಚ್ಚಾಗಿ ಗುರಿಯಾಗದೆ ತನ್ನದೇ ಆದ ವೈಶಿಷ್ಟ್ಯಗಳನ್ನು ಅನಾದಿಕಾಲದಿಂದಲೇ ಉಳಿಸಿಕೊಂಡು ಬಂದಿದೆ. ಪಶ್ಚಿಮ ಆಫ್ರಿಕದಲ್ಲಿ ದಟ್ಟವಾಗಿ ವ್ಯಾಪಿಸಿರುವ ಈ ಜನಾಂಗ ಆದಿ ಮಾನವ ಪ್ರಕೃತಿಯ ಬಗ್ಗೆ, ಆಕಾಶ, ಸೂರ್ಯ, ಚಂದ್ರ, ನಕ್ಷತ್ರ, ಮೋಡ, ಬಿರುಗಾಳಿ, ಮಳೆಗಳ ಬಗ್ಗೆ ಯಾವ ರೀತಿಯ ನಂಬಿಕೆಗಳನ್ನು ಬೆಳೆಸಿಕೊಂಡು ಬಂದಿದ್ದಾನೆ ಎನ್ನುವ ತಿಳುವಳಿಕೆಗೆ ತನ್ನದೇ ಆದ ಕಾಣಿಕೆಗಳನ್ನು ಕೊಟ್ಟಿದೆ.

ಆಗಾಧವಾದ ಆಕಾಶ, ನಿಯಮಬದ್ಧವಾಗಿ ಉದಯಿಸುವ, ಚಲಿಸುವ ಹಾಗೂ ಶಾಖ ತಂಪು-ಇಂಪುಗಳನ್ನು ಬೀರುವ ಸೂರ‍್ಯಚಂದ್ರ ನಕ್ಷತ್ರಗಳು, ತನ್ನ ಹಿಡಿತಕ್ಕೆ ಸಿಕ್ಕಿದ ಮಳೆ ಮೋಡಗಳು, ಕಲ್ಪನೆಗೆ ಎಟುಕದ ಕಾಮನಬಿಲ್ಲು ಬಿರುಗಾಳಿಗಳು ಇವೆಲ್ಲ ಮಾನವ ಚಿಂತನಶೀಲನಾಗಲಿಕ್ಕೆ ತೊಡಗಿದ ಕಾಲದಿಂದಲೂ ಆತನ ಕಲ್ಪನೆ ಗರಿಗೆದರಿ ಹಾರುವಂತೆ ಮಾಡಿದೆ. ಆ ಅಲೌಕಿಕ ಶಕ್ತಿಗಳಲ್ಲಿ ದೈವತ್ವನ್ನೂ ಕಲ್ಪಿಸುವಂತೆ ಮಾಡಿದೆ. ಜಗತ್ತಿನ ಸಕಲ ವಿದ್ಯಮಾನಗಳನ್ನೂ ನಿಯಂತ್ರಿಸುತ್ತಿರುವ ಪರಮಾತ್ಮನ ಮನೆ ಆಕಾಶದಲ್ಲಿದೆ. ಅಂತರಿಕ್ಷ ಹಾಗೂ ವಾಯುಮಂಡಲದಲ್ಲಿರುವ ಈ ಶಕ್ತಿಗಳೆಲ್ಲವೂ ಆತನ ಉಪದೇವತೆಗಳಾಗಿವೆ, ಇವೇ ಮೊದಲಾದ ಹಲವಾರು ನಂಬಿಕೆಗಳಿಗೆ ಇಂಬುಕೊಟ್ಟಿವೆ.

ಆಫ್ರಿಕದ ಜನಪದ ಪುರಾಣಗಳು ಆಕಾಶದಲ್ಲಿ ಹಾಗೂ ಭೂಮಿಯಲ್ಲಿನ ಪ್ರಾಕೃತಿಕ ಶಕ್ತಿಗಳು, ವಸ್ತುಗಳು ಅಥವಾ ಪ್ರಾಣಿಗಳು ಹೇಗೆ ಅಸ್ತಿತ್ವಕ್ಕೆ ಬಂದವು ಎಂದು ಹೇಳುತ್ತವೆ. ಅವುಗಳನ್ನು ಪ್ರಾಕೃತಿಕ ಶಕ್ತಿಗಳ ದಿವ್ಯ ಚರಿತ್ರೆಗಳು ಎಂದು ಕರೆಯಬಹುದು. ಜಗತ್ತಿನ ಉತ್ಪತ್ತಿ, ಅತಿಮಾನುಷ ಶಕ್ತಿಗಳ ಹುಟ್ಟು ಮತ್ತು ಪ್ರತಾಪ, ದೇವತೆಗಳ ಮತ್ತು ಪಿತೃಗಳ ಚರಿತ್ರೆ, ಅವುಗಳೊಳಗಿನ ಪರಸ್ಪರ  ಸಂಬಂಧ ಮುಂತಾದ ಮಾಹಿತಿಗಳು ಈ ಜನಪದ ಪುರಾಣಗಳಿಂದ ಹಾಗೂ ಕತೆಗಳಿಂದ ತಿಳಿಯುತ್ತವೆ. ಅವು ಜೀವನ ಸತ್ಯಗಳನ್ನು ತಿಳಿಸುವ, ಅನಂತ ಶಕ್ತಿಯ ಮೇಲೆ ಮಾನವ ಬೆಳೆಸಿಕೊಂಡು ಬಂದ ವಿಶ್ವಾಸ ನಂಬಿಕೆಗಳನ್ನು ಪ್ರತಿಪಾದಿಸುವ ದಾಖಲೆಗಳಾಗಿವೆ. ಮಾನವನ ಆಶೋತ್ತರಗಳು, ಭಯನಂಬಿಕೆಗಳು, ಸುಖಶಾಂತಿಗಳು ಹೇಗೆ ಆ ಅನಂತ ಶಕ್ತಿಯಿಂದ ನಿಯಂತ್ರಿತವಾಗಿವೆ ಎಂಬುದನ್ನು ನಾವು ತಿಳಿಯಲು ಸಹಾಯಕವಾಗುತ್ತವೆ.

ಆಫ್ರಿಕದ ನಿವಾಸಿಗಳ ದೈವ ಕಲ್ಪನೆಯನ್ನು ಒಂದು ತ್ರಿಕೋಣದ ಮೂಲಕ ಚಿತ್ರಿಸಬಹುದು. ಆ ತ್ರಿಕೋಣದ ತುದಿಯಲ್ಲಿರುವವನೇ ಸರ್ವಶಕ್ತನೂ ಸರ್ವಾಂತರ್ಯಾಮಿಯಾ ಆದ ಪರಮಾತ್ಮ. ದೈವಾಂಶಸಂಭೂತವಾದ ಪ್ರಾಕೃತಿಕ ಶಕ್ತಿಗಳನ್ನು ಆ ತ್ರಿಕೋಣದ ಒಂದು ಬಾಹುವಿನಲ್ಲಿಯೂ ಮರಣ ಹೊಂದಿ ದೈವತ್ವವನ್ನು ಪಡೆದ ಪಿತೃದೇವತೆಗಳನ್ನು ಇನ್ನೊಂದು ಬಾಹುವಿನಲ್ಲಿಯೂ ಕಲ್ಪಿಸಿಕೊಳ್ಳಬಹುದು. ತಳದಲ್ಲಿ ಭೂಮಾತೆ ಅಥವಾ ಮಾತೃದೇವತೆ ಇದ್ದಾಳೆ ಎನ್ನಬಹುದು.

ಸರ್ವಶಕ್ತನಾದ ಪರಮಾತ್ಮ ಸ್ವರ್ಗದಲ್ಲಿದ್ದಾನೆ. ಆ ಸ್ವರ್ಗವಿರುವುದು ಆಕಾಶದಲ್ಲಿ. ಆದರೆ ಆತನಿಗೆ ಪ್ರತ್ಯಕ್ಷ ಪೂಜೆಯಿಲ್ಲ. ಆತನ ಅನುಯಾಯಿಗಳಾದ ಪ್ರಾಕೃತಿಕ ಶಕ್ತಿಗಳು, ಪಿತೃದೇವತೆಗಳು ಹಾಗೂ ಭೂಮಾತೆಯ ಮೂಲಕ ಆತನನ್ನು ಆರಾಧಿಸಬೇಕು. ಆತ ಜಗತ್ತಿನ ನಿಯಂತ್ರಣಕಾರ್ಯದಲ್ಲಿ, ಸೃಷ್ಟಿಕಾರ್ಯದಲ್ಲಿ ಮಗ್ನನಾಗಿದ್ದಾನೆ. ಆತ ಮಳೆಗೆ, ಗಾಳಿಗೆ ಅಧಿಪತಿ, ಮಾನವನ ಜೀವನಕ್ಕೆ ಆಧಾರವೇ ಮಳೆ. ಸಕಾಲಕ್ಕೆ ಆತ ಮಳೆ, ಮಿಂಚು ಸಿಡಿಲುಗಳನ್ನು ಸೃಷ್ಟಿಸುತ್ತಾನೆ. ಅಲ್ಲಿನವರ ಭಾಷೆಯಲ್ಲಿ ’ದೇವರು ಬಿಸಿ ಯಾಗಿದ್ದಾನೆ’ (ಸೆಖೆಯನ್ನು ಕಳುಹಿಸಿದ್ದಾನೆ) ’ದೇವರು ಹರಿಯುತ್ತಿದ್ದಾನೆ ಅತವಾ ಸುರಿಯುತ್ತಿದ್ದಾನೆ’(ಮಳೆಯ ರೂಪದಿಂದ) ಇತ್ಯಾದಿ ನುಡಿಗಟ್ಟುಗಳನ್ನು ಗಮನಿಸಬಹುದು. ಗುಡುಗಿನ ರೂಪದಲ್ಲಿ ಭಾರೀ ದೊಡ್ಡ ನಗರಾಇಯನ್ನು ಬಾರಿಸುವವನೂ ಅವನೇ. ಮಳೆ ನಿಂತು ಆಕಾಶ ತಿಳಿಯಾದಾಗ ’ದೇವರು ಸ್ವಚ್ಛವಾಗಿದ್ದಾನೆ’ ಎನ್ನುವ ಮಾತನ್ನೂ ಅವರ ಭಾಷೆಯಲ್ಲಿ ಕಾಣಬಹುದು. ಕಾಮನ ಬಿಲ್ಲು ಅವರ ಪಾಲಿಗೆ ’ದೇವರ ಬಿಲ್ಲು’ ಅದನ್ನು ಹಿಡಿದುಕೊಂಡು ಪರಮಾತ್ಮ ಬೇಟೆಗೆ ಹೋಗುತ್ತಾನೆ ಎಂದು ತಿಳಿಯಪಡಿಸುವ ಕತೆಗಳೂ ಅಲ್ಲಿ ಪ್ರಚಾರದಲ್ಲಿವೆ. ದೇವರು ನಮ್ಮ ಮೇಲಿನ ಆಕಾಶವನ್ನೆಲ್ಲ ವ್ಯಾಪಿಸಿದ್ದಾನೆ ಎಂದು ಅವರ ನಂಬಿಕೆ. ’ಮಳೆ ಕೊಡುವವ’ ’ಬಿಸಿಲು ಕೊಡುವವ’ ’ಋತುಗಳ ಜನಕ’ ’ಮೇಘದಂತೆ ಘರ್ಜಿಸುವವ’ ’ದಿಗಂತವೇ ತಲೆಗೆ ಮುಂಡಾಸು ಆಗಿರುವವ’ ಮುಂತಾದ ವಿಶೇಷಗಳಿಂದ ಪರಮಾತ್ಮ ಕರೆಯಲ್ಪಡುತ್ತಾನೆ. ಪೂರ್ವ ಆಫ್ರಿಕದಲ್ಲಿ ಆ ಪರಮಾತ್ಮನನ್ನು ಮುಲುಂಗು ಎಂಬ ನಾಮದಿಂದಲೂ, ಮಧ್ಯ ಆಫ್ರಿಕದಲ್ಲಿ ಲಿಸಾ ಅಥವಾ ಲೆಸ ಎಂಬ ಹೆಸರಿನಿಂದಲೂ ಪಶ್ಚಿಮ ಆಫ್ರಿಕದಲ್ಲಿ ’ನ್ಯಮೆ’ ’ನ್ಯಂಬೆ’ ಎಂಬ ಹೆಸರಿನಿಂದಲೂ ಸಂಬೋಧಿಸುತ್ತಾರೆ.

ಆಕಾಶದಲ್ಲಿರುವ ಅಲೌಕಿಕ ಶಕ್ತಿಗಳು ಪರಮಾತ್ಮನಿಂದ ಸೃಷ್ಟಿಸಿದವೂ ಹೌದು, ನಿಯಂತ್ರಿಸಲ್ಪಟ್ಟವೂ ಹೌದು. ಕೆಲವೊಮ್ಮೆ ಆ ಶಕ್ತಿ ಅಥವಾ ವಸ್ತುಗಳ ಮೂಲಕ ಆತ ಅವತಾರ ತಾಳುತ್ತಾನೆ, ತನ್ನ ಲೀಲೆಗಳನ್ನು ಜಗತ್ತಿಗೆ ತೋರಿಸುತ್ತಾನೆ ಮತ್ತು ಜನರಿಗೆ ಪಾಠಕಲಿಸುತ್ತಾನೆ. ಪರಮಾತ್ಮ ಸೂರ್ಯದೇವರ ಅವತಾರದಲ್ಲಿ ಬಂದು ಚಂದ್ರ ದೇವತೆಯನ್ನು ಪ್ರೇಮಿಸುತ್ತಾನೆ. ಗ್ರಹಣಕಾಲದಲ್ಲಿ ಈ ಪ್ರಿಯ ಪ್ರೇಯಸಿಯರು ಒಟ್ಟುಗೂಡುತ್ತಾರೆ. ಗ್ರಹಣವಾದಾಗ ಈಗಲೂ ಲಿಸಾ ಮತ್ತು ಮವು (ಸೂರ್ಯ ಚಂದ್ರ) ಇವರು ರತಿಕ್ರೀಡೆಯಲ್ಲಿ ತೊಡಗಿದರು ಎಂದು ಜನರಲ್ಲಿ ನಂಬಿಕೆಯಿದೆ. ಈ ಸಮಾಗಮದಿಂದ ಇತರ ದೇವತೆಗಳು ಹುಟ್ಟುತ್ತಾರೆ. ಭೂಮಿ ಬಿರುಗಾಳಿ, ಕಬ್ಬಿಣ ಇವೆಲ್ಲ ಆ ಸಮಾಗಮದಿಂದ ಹುಟ್ಟಿದವುಗಳು. ಅವರಿಗೆಲ್ಲ ಪರಮಾತ್ಮ ಕರ್ತವ್ಯಗಳನ್ನು ಹಂಚಿಕೊಡುತ್ತಾನೆ. ಭೂ ದೇವತೆದ್ವಯಗಳು ಭೂಮಿಯನ್ನು ಆಳುತ್ತಾರೆ. ಬಿರುಗಾಳಿ ದೇವತೆದ್ವಯಗಳು ಆಕಾಶದಲ್ಲಿ ಮಿಂಚು ಸಿಡಿಲುಗಳನ್ನು ನಿಯಂತ್ರಿಸುತ್ತಾರೆ. ಸಮುದ್ರ ದೇವತೆದ್ವಯಗಳು ನೀರು ನದಿ ಮಳೆಗಳ ವ್ಯವಸ್ಥೆ ನೀಡಿಕೊಳ್ಳುತ್ತಾರೆ. ಹೀಗೆ ಎಲ್ಲ ಪ್ರಾಕೃತಿಕ ಶಕ್ತಿಗಳನ್ನೂ ಸೃಷ್ಟಿಸಿ ಅವುಗಳ ಅಂತರ್ಯಾಮಿಯಾದ ದಿವ್ಯ ಚೇತನಗಳಿಗೆ ಜಗತ್ತಿನ ರಕ್ಷಣೆಯ ಹೊಣೆಗಾರಿಕೆ ಹಂಚಿಕೊಡುತ್ತಾನೆ. ಮನುಷ್ಯ ಆ ಚೇತನಗಳನ್ನು ಪೂಜಿಸಿ ಅವುಗಳ ಕರ್ತವ್ಯ ನಿರ್ವಹಣೆಗೆ ಸಹಾಯ ಮಾಡಬೇಕು.

ಚಂದ್ರನ ವೃದ್ಧಿ-ಹ್ರಾಸ ಜೀವನದ ಏರುಪೇರುಗಳ ಸಂಕೇತ. ಹುಟ್ಟು ಸಾವುಗಳ ದ್ಯೋತಕ. ಚಂದ್ರ ಹೇನನ್ನು ಕರೆದು ಸಾವಿಗಾಗಿ ಪರಿತಪಿಸುತ್ತಿರುವ ಮಾನವ ಕುಲಕ್ಕೆ ಸಂದೇಶ ನೀಡಬೇಕು. ತಾನು ವೃದ್ಧಿ-ಹ್ರಾಸಕ್ಕೊಳಗಾಗುವಂತೆ ಮನುಷ್ಯರೂ ಸತ್ತು ಪುನಃ ಜೀವನ ಪಡೆಯುತ್ತಾರೆ ಎಂದು ಸಾರಿ ಹೇಳಬೇಕು ಎನ್ನುತ್ತಾರೆ. ಹೇನು ಮನುಷ್ಯನೆಡೆಗೆ ಬರುತ್ತಿದ್ದಾಗ ಮೊಲವನ್ನು ಕಂಡಿತು. ಅಧಿಕಪ್ರಸಂಗಿಯಾದ ಮೊಲ ತಾನೇ ಮನುಷ್ಯರಿಗೆ ಈ ಸಂದೇಶ ಮುಟ್ಟಿಸುತ್ತೇನೆ ಎಂದಿತು. ಅದು ಮನುಷ್ಯರೆಡೆಗೆ ಓಡಿ ಬಂದು ಚಂದ್ರ  ಕ್ಷೀಣಿಸಿದ ಹಾಗೆ ನೀವೂ ಕ್ಷೀಣಿಸಿ ಸಾಯುತ್ತೀರಿ ಎಂದು ಚಂದ್ರ ಹೇಳಿದ ಎಂದಿತು. ತನ್ನ ಸಂದೇಶವನ್ನು ಹೀಗೆ ತಪ್ಪಾಗಿ ತಿಳಿಸಿದ್ದಕ್ಕಾಗಿ ಚಂದ್ರ ಮೊಲದ ಬಾಯಿಗೆ ಗುದ್ದಿದನಂತೆ. ಅದರಿಂದಾಗಿಯೇ ಮೊಲದ ಬಾಯಿ ಒಡೆದು ಅಗಲವಾಯಿತಂತೆ.

ಸೂರ್ಯ ಚಂದ್ರರ ಮದುವೆಯಿಂದ ನಕ್ಷತ್ರಗಳು ಹುಟ್ಟಿದವು. ಆದರೆ ಸ್ವಲ್ಪ ಕಾಲ ಕಳೆದ ಮೇಲೆ ಸೂರ್ಯನಿಂದ ಬೇಸತ್ತ ಚಂದ್ರದೇವತೆ ಇನ್ನೊಬ್ಬ ಗಂಡೆಸಿನೊಡನೆ ಸರಸವಾಡುತ್ತಾಳೆ. ಇದರ ಪರಿಣಾಮವಾಗಿ ಸೂರ್ಯ ಚಂದ್ರರ ಮಧ್ಯೆ ವಿರಸವುಂಟಾಗಿ ವಿವಹಾವಿಚ್ಛೇದನ ನಡೆಯಿತು. ಕೆಲವು ನಕ್ಷತ್ರಗಳು ಸೂರ್ಯನ ಕಡೆಗೆ ಸೇರಿದರೆ ಕೆಲವು ಚಂದ್ರದೇವತೆಯ ಬಳಿ ಉಳಿದುವು. ಚಂದ್ರ ಕೆಲವೊಮ್ಮೆ ಸೂರ್ಯನ ಪ್ರದೇಶಕ್ಕೆ ಕಾಲಿರಿಸಿದಾಗ ಸೂರ್ಯನ ಕಡೆಗಿರುವ ನಕ್ಷತ್ರಗಳು ಚಂದ್ರನ ಕಡೆಯ ನಕ್ಷತ್ರಗಳೊಂದಿಗೆ ಜಗಳವಾಗುತ್ತದೆ. ಆಗ ಬಿರುಗಾಳಿಯೇಳುತ್ತದೆ, ಗುಡುಗು ಮಿಂಚು ಕಾಣಿಸಿಕೊಳ್ಳುತ್ತದೆ. ಚಂದ್ರ ಆಗ ಕಾಮನ ಬಿಲ್ಲಿನ ಪತಾಕೆ ತೋರಿಸುವುದರಿಂದ ಜಗಳ ನಿಲ್ಲುತ್ತದೆ. ಕೆಲವೊಮ್ಮೆ ಚಂದ್ರ ಸೂರ್ಯನ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿದಾಗ ಸೂರ್ಯ ಅವಳನ್ನು ನುಂಗಿ ಹಾಕುವುದೂ ಉಂಟು. ಆಗ ಗ್ರಹಣವಾಗುತ್ತದೆ ಎಂದು ಕೆಲವು ಜನಾಂಗದ ನಂಬಿಕೆ. ಜನರು ಆಗ ನಗಾರೆ ಬಾರಿಸಿ ಸೂರ್ಯನನ್ನು ಹೆದರಿಸಿ ವಿನಂತಿಸಿ ಚಂದ್ರನನ್ನು ಬಿಟ್ಟುಬಿಡುವಂತೆ ಮಾಡುತ್ತಾರೆ. ಇಂತಹ ಅಸಂಖ್ಯ ಕತೆಗಳು ಆಫ್ರಿಕದ ಜನಪದರ ಬಾಯಿಯಲ್ಲಿವೆ.

ದೇವರ ಅವಾಸಸ್ಥಾನವಾದ ಆಕಾಶ ಸರ್ವ ಸಂಪತ್ತುಗಳ ಮೂಲ. ಜಗತ್ತಿನಲ್ಲಿರುವ ಸಂಪತ್ತುಗಳೆಲ್ಲ ಅಲ್ಲಿಂದಲೇ ಬಂದವುಗಳು. ಭೂಮಿಯಲ್ಲಿ ಮೊದಲು ಬೆಂಕಿ ಇರಲಿಲ್ಲ. ಆಕಾಶದಿಂದ ಅದನ್ನು ಇಲ್ಲಿಗೆ ತಂದದ್ದು ಒಂದು ಸಂಚಿಕಾರ ಹುಳ. ನೀಲಿ ರೆಕ್ಕೆಯ, ಹಳದಿ ಮೈಬಣ್ಣದ, ಬಣ್ಣದ ಪಟ್ಟಿಗಳಿಂದ ಶೋಭಿಸುವ ಕಾಲುಗಳ್ಳುಳ್ಳ ಈ ಹುಳ ಗೋಡೆಗಳೆಡೆಯಲ್ಲಿ ಪರದೆಗಳಲ್ಲಿ, ಕೋಲುಗಳಲ್ಲಿ, ಒಲೆಯ ಬಳಿ ಮುಂತಾದ ಕಡೆಗಳಲ್ಲಿ ಗೂಡು ಕಟ್ಟಿ ಮೊಟ್ಟೆಯಿಡುತ್ತದೆ. ಅದು ಹೆಚ್ಚಾಗಿ ಒಲೆಯ ಬಳಿಯಲ್ಲಿ ಇರುವುದರಿಂದಲೋ ಏನೋ ಬೆಂಕಿಯನ್ನು ಆಕಾಶಲೋಕದಿಂದ ಇದೇ ಎಂಬ ನಂಬಿಕೆ ಬೆಳೆದುಬಂದಿದೆ. ಭೂಮಿಯಲ್ಲಿ ಮೊದಲು ಅಗ್ನಿ ಇರಲಿಲ್ಲ. ಬೆಚ್ಚಗಿರಲಿಕ್ತೆ ಏನು ಮಾಡುವುದು ಎಂದು ಯೋಚಿಸುತ್ತಿದ್ದಾಗ ಸಂಚಿಕಾರ ಹುಳ, ಗಿಡುಗ ಮತ್ತು ಹದ್ದು ನಾವು ಆಕಾಶಕ್ಕೆ ಹೋಗಿ ತರುತ್ತೇವೆ ಎಂದು ಹೊರಟವು. ಗಿಡುಗ ಮತ್ತು ಹದ್ದು ಆಕಾಶಕ್ಕೆ ಹಾರುವಲ್ಲಿ ಯಶಸ್ವಿಯಾಗಲಿಲ್ಲ.  ಸಂಚಿಕಾರ ಹುಳ ಮಾತ್ರ ಆಕಾಶ ತಲುಪಿತು. ಪರಮಾತ್ಮನಿಗೆ ಈ ಚಿಕ್ಕ ಹುಳದ ಸಾಹಸ ನೋಡಿ ಸಂತೋಷವಾಯಿತು. ಒಲೆಯ ಹತ್ತಿರ ಗೂಡು ಕಟ್ಟಿ ಮೊಟ್ಟೆಯಿಟ್ಟು ಬಾ ಎಂದು ಕಳುಹಿಸಿದ. ಆಗ ಮೊಟ್ಟೆ ಒಡೆದು ಹಲವಾರು ಹುಳುಗಳು ಹೊರಬಂದವು. ಪರಮಾತ್ಮ ಇದರಿಂದ ತೃಪ್ತನಾಗಿ ಬೆಂಕಿ ಕೊಟ್ಟು ಅವುಗಳನ್ನು ಭೂಲೋಕಕ್ಕೆ ಕಳುಹಿಸಿದ. ಹೀಗೆ ಮಾನವರು ತಮ್ಮ ಭೌತಿಕ ಸಂಸ್ಕೃತಿಯ ಬೆಳವಣಿಗೆಗೆ ಬೇಕಾದ ಸಾಧನಗಳನ್ನು ಹೇಗೆ ಆಕಾಶದಿಂದ ಪಡೆದರು ಎನ್ನುವ ಹಲವಾರು ಕತೆಗಳು ಆಫ್ರಿಕದಲ್ಲಿ ಪ್ರಚಾರದಲ್ಲಿವೆ.

ಆಕಾಶ ಲೋಕದ ಯಜಮಾನನಾದ ಪರಮಾತ್ಮನೊಡನೆ ಜೀವಿಗಳು ತಮ್ಮ ದುಗುಡಗಳನ್ನು ತೋಡಿಕೊಳ್ಳುತ್ತಾರೆ. ಒಬ್ಬಳು ಅನಾಥೆ ತನ್ನ ಗಂಡನನ್ನು ಮಕ್ಕಳನ್ನು ಕಳೆದುಕೊಂಡವಳು ದುಃಖಿಸುತ್ತಾ ಪರಮಾತ್ಮನನ್ನು ಕಾಣಲಿಕ್ಕೆಂದು ಹೊರಡುತ್ತಾಳೆ. ಆತನನ್ನು ಕೇಳಿ ತನ್ನ ಮಕ್ಕಳನ್ನು ಹಿಂತಿರುಗಿಸುವಂತೆ ವಿನಂತಿಸಬೇಕೆಂದು ನಿಶ್ಚಯಿಸುತ್ತಾಳೆ. ಮರಗಳನ್ನು ಕಡಿದು ಒಂದಕ್ಕೊಂದು ಜೋಡಿಸಿ ಏಣಿಯಂತೆ ಮಾಡಿ ಮೇಲಕ್ಕೆ ಹೋಗುತ್ತಾಳೆ. ಒಂದಷ್ಟು ಮೇಲೆ ಏರಿ, ಕೆಳಗೆ ಬೀಳುತ್ತಾಳೆ. ಆದರೂ ಸಾಹಸ ಮಾಡಿ ಮತ್ತೂ ಮತ್ತೂ ಏರುತ್ತಾಳೆ. ದಾರಿಯಲ್ಲಿ ಕಂಡ ಕಂಡ ದೈವಗಳೊಡನೆ ಪರಮಾತ್ಮನ ಮನೆಗೆ ದಾರಿ ಕೇಳುತ್ತಾಳೆ. ಆಕೆಯ ದುಃಖವನ್ನು ಕೇಳಿ ಅವರು ಇದು ಎಲ್ಲರ ಮನೆಯ ದುಃಖ, ಅದಕ್ಕಾಗಿ ನೀನು ಯಾಕೆ ಪರಿತಪಿಸುತ್ತಿದ್ದೇಯೆ ಎಂದು ಮೂದಲಿಸುತ್ತಾರೆ. ಆದರೂ ಆಕೆ ಕೇಳಿಲ್ಲ. ಆಕಾಶ ಮತ್ತು ಭೂಮಿ ಸೇರುವಲ್ಲಿಯವರೆಗೆ ಹೋಗುತ್ತಾಳೆ. ದೇವರು ಅಲ್ಲಿ ಪ್ರತ್ಯಕ್ಷವಾದಾಗ ತನ್ನ ಗಂಡನನ್ನೂ ಮಕ್ಕಳನ್ನೂ ಕೊಡಬೇಕು ಎನ್ನುತ್ತಾಳೆ. ಪರಮಾತ್ಮ ತನ್ನ ಹಿಂದಕ್ಕೆ ನೋಡು ಎನ್ನುತ್ತಾನೆ. ಅಲ್ಲಿ ಅವಳ ಗಂಡನೂ ಮಕ್ಕಳೂ ದೇವತೆಗಳಂತೆ ಪ್ರಕಾಶಮಾನರಾಗಿ ನಿಂತದ್ದನ್ನು ನೋಡುತ್ತಾಳೆ. ಇಷ್ಟು ಒಳ್ಳೆಯ ಗತಿಯನ್ನು ಪಡೆದವರಾಗಿದ್ದಾರೆ ಅವರು ಇಲ್ಲಿಯೇ ಇರಲಿ ನಾನು ಭೂಲೋಕಕ್ಕೆ ಹೋಗಿ ಅವರನ್ನು ದೇವತೆಗಳಂತೆ ಪೂಜಿಸುತ್ತೇನೆ ಎಂದು ಸಮಾಧಾನಪಟ್ಟುಕೊಂಡು ಭೂಮಿಗೆ ತಿರುಗಿ ಬರುತ್ತಾಳೆ. ಸತ್ತವರನ್ನು ದೇವತೆಗಳೆಂದು ನಂಬಿ ಪೂಜಿಸುವ ಸಂಪ್ರದಾಯವನ್ನು ಪ್ರಾರಂಭಿಸುತ್ತಾಳೆ.

ಪ್ರಕೃತಿ ಮತ್ತು ಅದರ ಶಕ್ತಿಗಳು ಪರಮಾತ್ಮನಿಂದ ಸೃಷ್ಟಿಯಾಗಿ ದೈವಾಂಶವನ್ನು ಪಡೆದವುಗಳಾಗಿ ತಮ್ಮ ಪಾಲಿನ ಕರ್ತವ್ಯಗಳನ್ನು ನಿರ್ವಹಿಸುತ್ತಿವೆ. ಆದರೂ ಅವುಗಳಲ್ಲಿ ಮಾನವಸಹಜವಾದ ಗುಣಗಳೂ ಇವೆ. ದಾಯಾದಿಮತ್ಸರ, ಹೊಟ್ಟಿಕಿಚ್ಚು ಇತ್ಯಾದಿಗಳನ್ನು ಕಾಣಬಹುದು. ಸಾಮಾನ್ಯವಾಗಿ ನಾವು ಪುರಾಣಕತೆಗಳಲ್ಲಿ ಕಾಣುವಂತಹ ಘಟನೆಗಳಣ್ನೂ ಮನೋಭಾವಗಳನ್ನೂ ಇಲ್ಲಿಯೂ ಕಾಣಬಹುದು. ಪರಮಾತ್ಮನ ಮಕ್ಕಳಾದ ಭೂಮಿತಾಯಿ ಮತ್ತು ಬಿರುಗಾಳಿ ಇವುಗಳಲ್ಲಿ ಒಮ್ಮೆ ಜಗಳವಾಯಿತಂತೆ. ಭೂಮಿ ಅಕ್ಕ, ಬಿರುಗಾಳಿ ತಮ್ಮ. ಭೂಮಿ ಪರಮಾತ್ಮನ ಮೊದಲ ಸೃಷ್ಟಿ, ಬಿರುಗಾಳಿ ತಮ್ಮ, ಭೂಮಿ ಪರಮಾತ್ಮನ ಮೊದಲ ಸೃಷ್ಟಿ, ಬಿರುಗಾಳಿ ಆ ಮೇಲಿನ ಸೃಷ್ಟಿ. ಅವರಲ್ಲಿ ಜಗಳವಾಗಿ ಭೂಮಿ ದೇವರ ಆಸ್ತಿಯನ್ನೆಲ್ಲ ತೆಗೆದು ಕೊಂಡು ಕೆಳಗೆ ಬಂದಳು. ಕೋಪಗೊಂಡ ಬಿರುಗಾಳಿ ಮಳೆಯನ್ನು ತಡೆಹಿಡಿಯಿತು. ಭೂಮಿಯ ಮೇಲಣ ಜನರು ನೀರಿಲ್ಲದೆ ಬಾಯಾರಿಕೆಯಿಂದ ಸಾಯತೊಡಗಿದರು. ಭೂಮಿ ಸ್ವರ್ಗದಿಂದ ಕೆಳಗೆ ಬಂದಾಗ ಬೆಂಕಿ ಮತ್ತು ನೀರನ್ನು ಬಿಟ್ಟು ಬಂದಿದ್ದಳು. ಆದ್ದರಿಂದ ಆಕೆಗೆ ಏನೂ ಮಾಡಲಿಕ್ಕಾಗಲಿಲ್ಲ. ದೈವದ ನುಡಿಗಟ್ಟು ಕೇಳಿದಾಗ ಅದು ಬಿರುಗಾಳಿಯ ಕೋಪವೆಂದು ತಿಳಿಯಿತು. ಅದಕ್ಕಾಗಿ ಬಿರುಗಾಳಿಯೊಡನೆ ಸಂಧಾನ ನಡೆಸಲಾಯಿತು. ಭೂಮಿ ಸ್ವರ್ಗದಲ್ಲಿ ಬೆಂಕಿ ಮತ್ತು ನೀರನ್ನು ಬಿಟ್ಟು ಬಂದುದರಿಂದ ಅವುಗಳನ್ನು ನಿಯಂತ್ರಿಸಿ ತನಗೆ ಬೇಕಾದುದನ್ನು ಪಡೆಯಬಹುದಾಗಿತ್ತು. ಕೊನೆಗೆ ಭೂಮಿ ಪ್ರಾರ್ಥನೆ ಮಾಡಿ ಬಿರುಗಾಳಿಯನ್ನು ಸಂತೈಸಿದಳು. ಬಿರುಗಾಳಿ ಪ್ರಸನ್ನವಾಗಿ ಮಳೆಯನ್ನು ಬಿಡುಗಡೆ ಮಾಡಿತು. ಬಿರುಗಾಳಿ ಆರೋಗ್ಯದ ಅಧಿದೇವತೆಯೂ ಹೌದು. ನೀತಿಪಾಲಕ ದೇವತೆಯೂ ಹೌದು. ಅವನ ಹೆಸರಿನಲ್ಲಿ ಜನರು ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ. ಮಾತಿಗೆ ತಪ್ಪಿದರೆ ಆತ ಶಿಕ್ಷೆ ಕೊಡುತ್ತಾನೆ. ನೀತಿ ಮಾರ್ಗದಲ್ಲಿ ನಡೆದರೆ ಗಾಳಿ ಮಳೆ ತರಿಸಿ ಜಗತ್ತಿಗೆ ಉಪಕಾರ ಮಾಡುತ್ತಾನೆ. ಇಂತಹ ಹಲವಾರು ಕತೆಗಳು ನೀಗ್ರೋ ಜನಾಂಗದಲ್ಲಿ ಪ್ರಚಾರದಲ್ಲಿವೆ.

ಆಕಾಶ ಮೊದಲು ನಿಮ್ಮಿಂದ ದೂರವಿರಲಿಲ್ಲ. ಅದು ದೇವರ ವಾಸಸ್ಥಾನವಲ್ಲವೇ? ಜಗತ್ತಿನ ರಕ್ಷಣೆಗಾಗಿ ದೇವರು ಭೂಲೋಕಕ್ಕೆ ಹತ್ತಿರವೇ ಇದ್ದೆ. ಭೂಮಿಯಿಂದ ಸುಮಾರು ೬ ಅಡಿ ಎತ್ತರದಲ್ಲಿಯೇ ಆಕಾಶವಿತ್ತು. ಅದರಲ್ಲಿ ಪರಮಾತ್ಮ ವಾಸವಾಗಿದ್ದು ಜನರ ಕಷ್ಟ ಕಾರ್ಪಣ್ಯಗಳನ್ನು ವಿಚಾರಿಸುತ್ತಿದ್ದ. ಜನರು ಬೇಕಾದಾಗ ಅವನನ್ನು ಸಂದರ್ಶಿಸಿ ಸಹಾಯ ಬೇಡಬಹುದಾಗಿತ್ತು. ಕೈಗೆಟಕುವಷ್ಟು ದೂರದಲ್ಲಿ ದೇವನಿದ್ದರೆ ಅದರ ದುರುಪಯೋಗ ಮಾಡಿಕೊಳ್ಳುವವರು ಹೆಚ್ಚಾಗುವುದಿಲ್ಲವೇ? ಜನರು ಆತನಿಗೆ ತೊಂದರೆ ಕೊಲಿಕ್ಕೆ ಪ್ರಾರಂಭಿಸಿದರು. ದೇವರೆಂದರೆ ಜನರಿಗೆ ತಾತ್ಸಾರಭಾವನೆ ಮೂಡತೊಡಗಿತು. ಏನು ಕಷ್ಟ ಬಂದರೂ ಭಗವಂತನನ್ನು ಕೇಳಿ ಪರಿಹಾರ ಕಂಡ. ಕೊಳ್ಳಬಹುದು ಎಂಬ ಭಾವನೆ ಬೆಳೆಯತೊಡಗಿತು. ಜನರು ಕರ್ತವ್ಯ ವಿಮುಖರಾದರು. ದೇವರು ಜನರಿಗೆ ಆಯಾ ದಿನಕ್ಕೆ ಬೇಕಾದಷ್ಟು ಮಾತ್ರ ಧಾನ್ಯ ಅಳತೆ ಮಾಡಿಕೊಡುತ್ತಿದ್ದರು. ತಮಗೆ ಬೇಕಾದಷ್ಟು ಮಾತ್ರ ಕೇಳಬೇಕು, ಬೇಕಾದಷ್ಟು ಮಾತ್ರ ಬೆಳೆಸಬೇಕು ಎಂಬ ನಿಯಮವಿತ್ತು. ಲೋಭಿಯಾದ ಮಾನವ ತನಗೆ ಬೇಕಾದ್ದಕ್ಕಿಂತ ಹೆಚ್ಚಿಗೆ ಕೇಲಿ ಸಂಗ್ರಹ ಮಾಡತೊಡಗಿದ. ಹೆಂಗಸರು ಪಲ್ಯಕ್ಕೆ ತರಕಾರಿ ಸಾಲದಿದ್ದಾಗ ಕೈ ಮೇಲೆ ಚಾಚಿ ಆಕಾಶ ತುಂಡನ್ನು ಹರಿದು ಅದರ ಮೇಲಿನ ತರಕಾರಿಯನ್ನು ಕದಿಯತೊಡಗಿದರು, ಮಕ್ಕಳು ಊಟ ಮಾಡಿದ ಎಂಜಲು ಕೈಯನ್ನು ಆಕಾಶಕ್ಕೆ ಒರಸಿದರು. ಕುರೂಪಿಯಾದ ಮಕ್ಕಳು ಹುಟ್ಟಿದಾಗ ಆಕಾಶವನ್ನು ಕುಟ್ಟಿ ದೇವರನ್ನು ದೂಷಿಸತೊಡಗಿದರು. ಒಮ್ಮೆ ಒಬ್ಬಳು ಹೆಂಗಸು ಭತ್ತ ಕುಟ್ಟುವಾಗ ಒನಕೆ ಮೇಲೆಕ್ಕೆತ್ತಿ ಆಕಾಶಕ್ಕೆ ತಾಗಿಸತೊಡಗಿದಳು. ಅದು ದೇವರಿಗೆ ತಗಲಿತು. ಈ ಮನುಷ್ಯರಿಗೆ ಮಿತಿಮೀರಿ ಸಹಾಯ ಮಾಡಬಾರದು ಎಂದು ಕೋಪಗೊಂಡು ಭಗವಂತ ಆಕಾಶವನ್ನು ಮೇಲಕ್ಕೆತ್ತಿದ. ಮನುಷ್ಯರಾರೂ ಸುಲಭದಿಂದ ತನ್ನಲ್ಲಿಗೆ ಬರಲಿಕ್ಕೆ ಸಾಧ್ಯವಾಗದ ಹಾಗೆ ಮಾಡಿದ. ಹೀಗೆ ಆಕಾಶ ಮೇಲಕ್ಕೆ ಹೋದುದರಿಂದ ಮನುಷ್ಯರಾರೂ ತಮ್ಮ ಚಿಕ್ಕಪುಟ್ಟ ಸಮಸ್ಯೆಗಳಿಂದ ಭಗವಂತನಿಗೆ ಕಿರುಕುಳಕೊಡುವಂತಿಲ್ಲ. ಅವುಗಳನ್ನೆಲ್ಲ ನಮ್ಮಲಿಯೇ ಸರಿಮಾಡಬೇಕು. ನೀತಿನ್ಯಾಯದ ಮಾರ್ಗದಲ್ಲಿ ನಡೆಯಬೇಕು. ಅಂತಹ ವಿಶೇಷವಾದ ಸಮಸ್ಯೆಗಳು ಬಂದಾಗ ಮಾತ್ರ ಭಗವಂತನನ್ನು ಕೂಗಿ ಕರೆಯಬೇಕು ಎನ್ನುತ್ತಾರೆ ನೀಗ್ರೋ ಜನರು.

ಹೀಗೆ ಆಕಾಶ ಮತ್ತು ಆಕಾಶದ ಶಕ್ತಿಗಳು ಮಾನವ ಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತಿವೆ. ಆ ಶಕ್ತಿಗಳಿಗೆ ತಲೆಬಾಗಿ ಪೂಜಿಸಿ ಅವುಗಳೊಂದಿಗೆ ಸಾಮರಸ್ಯದಿಂದ ಬಾಳ ಬೇಕೆಂಬುದೇ ಅಲ್ಲಿನ ಜನಪದ ಪುರಾಣಗಳ ಸಂದೇಶ. ಈ ನಂಬಿಕೆಯ ನೆಲೆಯಲ್ಲಿ ಅವರ ಸಂಪ್ರದಾಯ, ಆರಾಧನಾಕ್ರಮ ಮುಂತಾದವುಗಳು ಬೆಳೆದುಬಂದಿವೆ.