ಸೋಮದೇವಸೂರಿಯ ನೀತಿವಾಕ್ಯಾಮೃತವು ಕೌಟಿಲ್ಯನ ಅರ್ಥಶಾಸ್ತ್ರವನ್ನು ಹೆಚ್ಚಾಗಿ ಅನುಸರಿಸಿ ಬರೆದ ಗ್ರಂಥ ಅವನು ಸಂಸ್ಕೃತದಲ್ಲಿ ಈ ಗ್ರಂಥವನ್ನು ಕ್ರಿ.ಶ. ೧೦ನೆಯ ಶತಮಾನದ ಕೊನೆಯ ಭಾಗದಲ್ಲಿ ಬರೆದನು. ಇದಕ್ಕೆ ಇಟಾಲಿಯನ್, ಇಂಗ್ಲೀಷ್, ಸಂಸ್ಕೃತ, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಅನುವಾದಗಳನ್ನು ಇಲ್ಲವೆ ಟೀಕೆಗಳು ಪ್ರಕಟವಾಗಿವೆ. ಕ್ರಿ.ಶ. ೧೨೦೦ರ ಸುಮಾರಿನಲ್ಲಿ ನೇಮಿನಾಥನೆಂಬ ಜೈನಕವಿಯು ಕನ್ನಡದಲ್ಲಿ ಟೀಕೆಯನ್ನು ಬರೆದನು. ಈ ಟೀಕೆಯ ಹಸ್ತಪ್ರತಿಗಳು ಮೂಡಬಿದಿರೆ ಮತ್ತು ಕಾರ್ಕಳಗಳಲ್ಲಿಯ ಜೈನ ಗ್ರಂಥಭಂಡಾರಗಳಲ್ಲಿರುವುದನ್ನು ಈ ಹಿಂದೆ ಕೊಲ್ಲಾಪುರದ ರಾಜಾರಾಮ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಪ್ರಸಿದ್ಧ ಕನ್ನಡ ವಿದ್ವಾಂಸ ದಿವಂಗತ ಪ್ರೊ. ಕೆ.ಜಿ. ಕುಂದಣಗಾರರು ನನಗೆ ಹೇಳಿದ್ದರು. ಅವರು ತಮ್ಮ ಅಭ್ಯಾಸಕ್ಕಾಗಿ ಮೂಡಬಿದಿರೆಯಲ್ಲಿರುವ ಹಸ್ತಪ್ರತಿಯ ಭಾವಾನುವಾದವನ್ನು ಬರೆದು ಇಟ್ಟುಕೊಂಡಿದ್ದರು. ಅದನ್ನು ನನಗೆ ಓದುವುದಕ್ಕೆ ಕೊಟ್ಟರು. ಓದಿ ಅದರ ಸ್ವಾರಸ್ಯವನ್ನು ಮತ್ತು ಉಪಯುಕ್ತತೆಯನ್ನು ನಾನು ಮನಗಂಡೆನು. ಈ ಅಪ್ರಕಟಿತ ಟೀಕೆಯನ್ನು ಪ್ರಕಟಿಸುವ ಮನಸ್ಸಾಯಿತು. ಕಾರ್ಕಳಕ್ಕೆ ಹೋಗಿ ಅಲ್ಲಿಯ ಜೈನ ಯತಿಗಳ ಕೃಪೆಯಿಂದ ಈ ಗ್ರಂಥದ ಹಸ್ತಪ್ರತಿಯನ್ನು ನೋಡಿದೆ. ಆದರೆ ಅದನ್ನು ಪ್ರತಿ ಮಾಡಿ ಕೊಡುವ ಸೌಕರ್ಯ ಅಲ್ಲಿರಲಿಲ್ಲ. ಈ ಸೌಕರ್ಯವು ಮೂಡಬಿದಿರೆಯಲ್ಲಿದೆಯೆಂದು ತಿಳಿಯಿತು. ನನ್ನ ವಿದ್ಯಾರ್ಥಿಯಾಗಿದ್ದು ಮುಂದೆ ಮೂಲ್ಕಿಯ ವಿಜಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಡಾ.ಕೆ.ಜಿ. ವಸಂತಮಾಧವರನ್ನು ಈ ವಿಷಯದಲ್ಲಿ ಸಹಾಯ ಮಾಡಬೇಕೆಂದು ಕೇಳಿಕೊಂಡೆ. ಅವರು ಮೂಡಬಿದಿರೆಗೆ ಹೋಗಿ ಅಲ್ಲಿ ಉಪಾಧ್ಯಾಯರಾಗಿದ್ದ ಪಂಡಿತ ದೇವಕುಮಾರ ಜೈನ ಶಾಸ್ತ್ರಿಗಳನ್ನು ಸಂಪರ್ಕಿಸಿ ಪ್ರತಿ ಮಾಡುವ ಕೆಲಸವನ್ನು ಅವರಿಗೆ ಒಪ್ಪಿಸಿದರು. ಪಂಡಿತರು ಈ ಹಸ್ತಪ್ರತಿಯನ್ನು ಅತ್ಯಂತ ಸುಂದರವಾಗಿ ಪ್ರತಿ ಮಾಡಿ ೨೮.೦೬.೧೯೮೧ ರಂದು ನನಗೆ ಕಳಿಸಿಕೊಟ್ಟರು. ಅನೇಕ ಕಾರಣಗಳಿಂದ ಈ ಪ್ರತಿಯ ಕಡೆಗೆ ಗಮನ ಹರಿಸಲು ನನಗೆ ಆಗಲಿಲ್ಲ. ೧೯೯೭ ಜೂನ್ ತಿಂಗಳಲ್ಲಿ ಗಮನ ಕೊಡಲು ಸಾಧ್ಯವಾಯಿತು.

ನನ್ನ ಸ್ನೇಹಿತರಾದ ಪ್ರೊ.ಬಿ.ರಾಮಸ್ವಾಮಿ (ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು), ಡಾ. ಶ್ರೀನಿವಾಸ ರಿತ್ತಿ (ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕರು) ಮತ್ತು ನಾನು ಸೇರಿ ನೇಮಿನಾಥನ ಕನ್ನಡ ಟೀಕೆಯ ಸಂಪಾದನೆಯನ್ನು ಮಾಡಬೇಕೆಂದು ನಿರ್ಧರಿಸಿ ಕಾರ್ಯಪ್ರವೃತ್ತರಾದೆವು.

ನೇಮಿನಾಥನ ಕನ್ನಡ ಟೀಕೆಯ ಓಲೆಯ ಪ್ರತಿಯನ್ನು ಕೊಡಮಾಡಿದವರು ಶ್ರೀಮತಿ ರಮಾರಾಣಿ ಶೋಧ ಸಂಸ್ಥಾನ, ಶ್ರೀ ಜೈನ ಮಠ ಮೂಡಬಿದಿರೆಯ ಸ್ಥಾನಾಪನ್ನ ಮಹಾಸ್ವಾಮಿಗಳಾದ ಶ್ರವಣಬೆಳಗೊಳ ಶ್ರೀಮಠದ ಪೀಠಾಧಿಪತಿಗಳಾದ ಸ್ವಸ್ತ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಇವರಿಗೆ ನಮ್ಮ ಕೃತಜ್ಞತಾಪೂರ್ವಕವಾದ ಪ್ರಣಾಮಗಳನ್ನು ಅರ್ಪಿಸುತ್ತೇವೆ. ಹಸ್ತಪ್ರತಿಯನ್ನಿತ್ತು ಸಹಕರಿಸಿದವರು ಶ್ರೀ ಎನ್. ರವಿರಾಜಶೆಟ್ಟಿ ಬಿ.ಎ, ಬಿ.ಟಿ, ಮೂಡಬಿದಿರೆ ಮತ್ತು ಶ್ರೀ ಉದಯಕುಮಾರರು. ಮಾನ್ಯರಿಬ್ಬರಿಗೂ ನಾವು ಆಭಾರಿಯಾಗಿದ್ದೇವೆ. ಮೇಲೆ ಹೇಳಿದ ಹಾಗೆ ತಾಳೆಯೋಲೆಯ ಮೂಲಗ್ರಂಥವನ್ನು ಸುಂದರವಾಗಿ ಪ್ರತಿ ಮಾಡಿಕೊಟ್ಟು ಪ್ರತಿಗಳ ಬಗ್ಗೆ ಮಾಹಿತಿಯನ್ನು ಒದಗಿಸಿದ ಪಂಡಿತ ಶ್ರೀ ಬಿ.ದೇವಕುಮಾರ ಜೈನ ಶಾಸ್ತ್ರಿ (ರಾಜ್ಯ ಪ್ರಶಸ್ತಿ ವಿಜೇತ) ಇವರಿಗೆ ನಮ್ಮ ಅನಂತಾನಂತ ವಂದನೆಗಳು.

ಸಂಪಾದನೆಯ ಕೆಲಸಕ್ಕೆ ಅವಶ್ಯವಾದ, ಆದರೆ ನಮಗೆ ಅಲಭ್ಯವಾದ ಪುಸ್ತಕಗಳನ್ನು ದೊರಕಿಸಿಕೊಟ್ಟವರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಡಾ. ಎಸ್‌.ಕೆ. ಸವಣೂರರು ವಾರಣಾಸಿಯ ಚೌಖಂಬಾ ಸಂಸ್ಥೆಯವರು ಪ್ರಕಟಿಸಿದ ಹಿಂದೀ ಟೀಕೆಯುಳ್ಳ ನೀತಿ ವಾಕ್ಯಾಮೃತವನ್ನು ಮತ್ತು ಡಾ. ಶ್ರೀಮತಿ ಹೇಮಾವತಿ ಮತ್ತು ಡಾ. ಜಗದೀಶ್ವರರಾವ ಇವರು ಮಾಣಿಕಲಾಲ್ ಜೈನರು ಪ್ರಕಟಿಸಿದ ನೀತಿವಾಕ್ಯಾಮೃತವನ್ನು ಮತ್ತು ಶ್ರೀ ಗರ್ಗೆಶ್ವರೀ ವೆಂಕಟಸುಬ್ಬಯ್ಯನವರು ಜಯಪುರದಲ್ಲಿ ಪ್ರಕಟವಾದ ನೀತಿವಾಕ್ಯಾಮೃತವನ್ನು ಕೊಟ್ಟು ಉಪಕರಿಸಿದರು. ಡಾ.ಹಂಪ ನಾಗರಾಜಯ್ಯನವರು, ಪಂಡಿತಕೆ, ಭುಜಬಲ ಶಾಸ್ತ್ರಿಗಳ ‘ನೀತಿವಾಕ್ಯಾಮೃತ ಔರ ಕನ್ನಡ ಕವಿ ನೇಮಿನಾಥ’ ಎಂಬ ಹಿಂದೀ ಲೇಖನವನ್ನು ಬಹಳ ಶ್ರಮವಹಿಸಿ ದೊರಕಿಸಿಕೊಟ್ಟರು. ಇವರೆಲ್ಲರಿಗೂ ನಮ್ಮ ಧನ್ಯವಾದಗಳು.

ನಮ್ಮ ಸಂಪಾದನೆಯ ಕೆಲಸ ನಡೆಯುತ್ತಿರುವಾಗ ಈ ಪುಸ್ತಕವನ್ನು ಯಾರು ಪ್ರಕಟಿಸಬಲ್ಲರೆನ್ನುವ ಪ್ರಶ್ನೆ ಎದುರಾಯಿತು. ನನ್ನ ಸ್ನೇಹಿತರಾದ ಡಾ. ಎಂ. ಚಿಂದಾನಂದಮೂರ್ತಿಯವರಿಗೆ ನಮ್ಮ ಸಮಸ್ಯೆಯನ್ನು ತಿಳಿಸಿದೆನು. ಸುದೈವದಿಂದ ಅದೇ ವೇಳೆಗೆ ಡಾ. ಎಂ.ಎಂ. ಕಲಬುರ್ಗಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಅಧಿಕಾರವನ್ನು ವಹಿಸಿಕೊಂಡಿದ್ದರು. ಡಾ.ಚಿದಾನಂದ ಮೂರ್ತಿಯವರು ಡಾ. ಕಲಬುರ್ಗಿಯವರಿಗೆ ನಮ್ಮ ಸಮಸ್ಯೆಯನ್ನು ತಿಳಿಸಿದರು. ಅವರು ತಕ್ಷಣ ಈ ಗ್ರಂಥದ ಪ್ರಕಟಣೆಗೆ ಒಪ್ಪಿಕೊಂಡದ್ದಲ್ಲದೆ, ಆದಷ್ಟು ಬೇಗನೆ ಸಂಪಾದನೆಯ ಕೆಲಸ ಮುಗಿಸಬೇಕೆಂದು ಮೇಲಿಂದ ಮೇಲೆ ಒತ್ತಾಯಿಸುತ್ತ ಬಂದರು. ಅವರ ಪ್ರೋತ್ಸಾಹದಿಂದ ಸಂಪಾದನೆಯ ಕೆಲಸವು ತ್ವರಿತವಾಗಿ ಮುಗಿಯಿತು. ಪ್ರಕಟಣೆಯ ಗುರುತರ ಜವಾಬ್ದಾರಿಯನ್ನು ವಹಿಸಿದ ಡಾ. ಕಲಬುರ್ಗಿಯವರನ್ನು ನಾವು ಮರೆಯುವ ಹಾಗಿಲ್ಲ. ಅವರಿಗೂ ಮತ್ತು ಡಾ. ಚಿದಾನಂದಮೂರ್ತಿಯವರಿಗೂ ನಾವು ಚಿರಋಣಿಯಾಗಿದ್ದೇನೆ.

ಒಂದು ಕೃತಿಯ ಸಂಪಾದನೆಗೆ ಬೇರೆ ಬೇರೆ ಪ್ರತಿಗಳು ಲಭ್ಯವಿದ್ದರೆ ಪಾಠಾಂತರಗಳು ಗ್ರಂಥವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತಿದ್ದವು ಆದರೆ ನಮಗೆ ಕನ್ನಡ ಟೀಕೆಯ ಒಂದೇ ಪ್ರತಿ ಸಿಕ್ಕಿದ್ದರಿಂದ ಪಾಠಾಂತರದ ಪ್ರಶ್ನೆಯೇ ಇಲ್ಲ. ಈ ಟೀಕೆಯ ಮೂಲಗ್ರಂಥವಾದ ನೀತಿವಾಕ್ಯಾಮೃತದ ಅನೇಕ ಪಾಠಗಳಿವೆ. ನಮಗೆ ಲಭ್ಯವಾದ ೩-೪ ಗ್ರಂಥಗಳಲ್ಲಿಯ ಪಾಠಾಂತರಗಳನ್ನು ಅಡಿಟಿಪ್ಪಣಿಗಳಲ್ಲಿ ಕೊಟ್ಟಿದ್ದೇನೆ.

ಕ್ಲಿಷ್ಟಕರವಾದ ಅಕ್ಷರ ಜೋಡಣೆಯ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಶ್ರೀ ಆರ್.ಕೆ. ಹೆಗಡೆಯವರು ನಮ್ಮ ಅಭಿನಂದನೆಗೆ ಪಾತ್ರರಾಗಿದ್ದಾರೆ. ಈ ಗ್ರಂಥವನ್ನು ಸಕಾಲದಲ್ಲಿ ಮತ್ತು ಸಮರ್ಪಕವಾಗಿ ಮುದ್ರಿಸಿ ಕೊಟ್ಟ ಧಾರವಾಡದ ಮನೋಹರ ಮುದ್ರಣಾಲಯದ ಶ್ರೀ ರವಿ ಆಕಳವಾಡಿ ಬಂಧುಗಳಿಗೆ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ.

ಜಿ.ಎಸ್. ದೀಕ್ಷಿತ
ನಿವೃತ್ತ ಇತಿಹಾಸ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ
ಧಾರವಾಡ
ಅಕ್ಟೋಬರ, ೨೫, ೨೦೦೦