೧. ಸೋಮದೇವಸೂರಿ ಮತ್ತು ಅವನ ನೀತಿವಾಕ್ಯಾಮೃತ

ನೀತಿವಾಕ್ಯಾಮೃತವು ಸೂತ್ರಪ್ರಾಯವಾದ ವಾಕ್ಯಗಳಲ್ಲಿ ರಚಿತವಾಗಿರುವ ಸಂಸ್ಕೃತ ರಾಜನೀತಿಶಾಸ್ತ್ರ ಗ್ರಂಥ. ಗ್ರಂಥದಲ್ಲಿ ಅದರ ರಚನೆಯ ಕಾಲವನ್ನು ತಿಳಿಸಿಲ್ಲ. ಗ್ರಂಥಾಂತ್ಯದ ಪ್ರಶಸ್ತಿ ವಾಕ್ಯದಲ್ಲಿ ಗ್ರಂಥಕರ್ತೃ ಸೋಮದೇವಸೂರಿಯು ರಚಿಸಿರುವುದಾಗಿ ಹೇಳಿರುವ ಕೃತಿಗಳಲ್ಲಿ ‘ಯಶೋಧರಮಹಾರಾಜಚರಿತ’ವೂ ಸೇರಿದೆ. ಇದು ‘ಯಶಸ್ತಿಲಕ’ ಎಂಬ ಸುಪ್ರಸಿದ್ಧವಾದ ಸಂಸ್ಕೃತ ಚಂಪೂ ಕಾವ್ಯ. ಈ ಕಾವ್ಯವನ್ನು ಶಕ ಸಂವತ್ಸರ ೮೮೧, ಸಿದ್ಧಾರ್ಥ ಸಂವತ್ಸರದಲ್ಲಿ ಎಂದರೆ ಕ್ರಿ.ಶ. ೯೬೦ರಲ್ಲಿ ರಾಷ್ಟ್ರಕೂಟ ಚಕ್ರವರ್ತಿ ಮೂರನೆಯ ಕೃಷ್ಣರಾಜನ ಸಾಮಂತ ಚೂಡಾಮಣಿ, ಎರಡನೆಯ ಅರಿಕೇಸರಿಯ ಮಗ ವಾಗರಾಜನ ಕಾಲದಲ್ಲಿ ಗಂಗಧಾರಾ ಎಂಬಲ್ಲಿ ರಚಿಸಿದ್ದೆಂದು ‘ಯಶಸ್ತಿಲಕ’ ದ ಗ್ರಂಥಾಂತ್ಯ ಪ್ರಶಸ್ತಿ ಗದ್ಯದಿಂದ ತಿಳಿದುಬರುತ್ತದೆ.[1] ‘ಗಂಗಾಧಾರಾ’ ಎಂಬುದು ಈಗಿನ ಆಂಧ್ರ ಪ್ರದೇಶದ ಕರೀಮನಗರ ಜಿಲ್ಲೆಯಲ್ಲಿಯ ‘ಗಂಗಾಧರಂ’. ಇಲ್ಲಿ ದೊರೆತ ಆದಿಕವಿ ಪಂಪ ಮಹಾಕವಿಯ ತಮ್ಮ ಜಿನವಲ್ಲಭನು ಬರೆಸಿದ ಶಾಸನವು ಪ್ರಕಟಗೊಂಡಿದೆ.[2] ವಾಗರಾಜನಿಗೆ ‘ವದ್ಯಗ’, ‘ಬದ್ದೆಗ’ ಎಂಬ ಹೆಸರುಗಳಿದ್ದಂತೆ ತಿಳಿದುಬರುತ್ತದೆ. ಈತನು ‘ಲೇಂಬುಲಪಾಟಕ’ (ಈಗಿನ ವೇಮುಲವಾಡ) ಎಂಬಲ್ಲಿ ‘ಶುಭಧಾಮ’ ಎಂಬ ಜಿನಾಲಯವನ್ನು ಕಟ್ಟಿಸಿದ್ದನು. ಆ ಜಿನಾಲಯದ ‘ಖಂಡಸ್ಫುಟಿತ ನವಸುಧಾಕರ್ಮ ಬಲಿನಿವೇದ್ಯರ್ಥ’ ವಾಗಿ ಶಕ ಸಂವತ್ಸರ ೮೮೮ (ಕ್ರಿ.ಶ. ೯೬೭) ರಲ್ಲಿ ವದ್ಯಗನ (ಬದ್ದೆಗನ) ಮಗ ನಾಲ್ಕನೆಯ ಅರಿಕೇಸರಿಯು ಸೋಮದೇವಸೂರಿಗೆ ‘ವನಿಕಟಪುೞು’ ಎಂಬ ಗ್ರಾಮವನ್ನು ದತ್ತಿಯಾಗಿ ಕೊಟ್ಟಿದ್ದನು.[3]ಸೋಮದೇವಸೂರಿಯು ಕ್ರಿ.ಶ. ೯೮೩ ರಲ್ಲಿ ಕೊಪ್ಪಳದಲ್ಲಿ ನಿಧನ ಹೊಂದಿದನು.[4]ಈ ವಿವರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನೀತಿವಾಕ್ಯಾಮೃತವು ಯಶಸ್ತಿಲಕ ಚಂಪೂ ಕಾವ್ಯದ ರಚನಾ ನಂತರ ಸು. ಕ್ರಿ.ಶ. ೯೬೫ರಲ್ಲಿ ಗಂಗಧಾರಾ ಎಂಬಲ್ಲಿ ರಚಿತವಾಗಿರಬಹುದೆಂದು ಹೇಳಬಹುದಾಗಿದೆ.

ಸೋಮದೇವಸೂರಿಯು ಶ್ರೇಷ್ಠ ರಾಜನೀತಿಜ್ಞನಾಗಿದ್ದನೆಂಬುದು ನೀತಿವಾಕ್ಯಾಮೃತದಿಂದ ಮಾತ್ರವಲ್ಲದೆ ಆತನ ಯಶಸ್ತಿಲಕ ಚಂಪೂ ಕಾವ್ಯದಲ್ಲಿ ಪ್ರಾಸಂಗಿಕವಾಗಿ ವಿಸ್ತಾರವಾಗಿ ನಿರೂಪಿತವಾಗಿರುವ ರಾಜನೀತಿ ಪ್ರಕ್ರಿಯೆಗಳಿಂದಲೂ ತಿಳಿಯಬಹುದಾಗಿದೆ. ಮಾಣಿಕಚಂದ್ರ ದಿಗಂಬರ ಜೈನ ಗ್ರಂಥಮಾಲೆಯ ಪ್ರತಿಯಲ್ಲಿ ಬಹುಶಃ ವೈದಿಕ (ಸನಾತನ) ಮತೀಯನಾದ, ಅಜ್ಞಾತ ಸಂಸ್ಕೃತ ಪಂಡಿತನೊಬ್ಬನ ಟೀಕೆಯಿದೆ. ಇದರಲ್ಲಿ ಅತ್ರಿ, ಗರ್ಗ, ಗೌತಮ, ಪರಾಶರ, ಭಾರದ್ವಾಜ, ಮನು, ಯಾಜ್ಞವಲ್ಕ್ಯ, ವಶಿಷ್ಟ ಇವರುಗಳೇ ಮೊದಲಾದ ಧರ್ಮಶಾಸ್ತಕಾರರ, ಹಲವು ಮಂದಿ ಋಷಿ ಮುನಿಗಳ, ಗುರು, ಶುಕ್ರ, ಕಾಮಂದಕಾದಿ ನೀತಿಶಾಸ್ರ್ರಕಾರರ ಗ್ರಂಥಗಳಿಂದ ನೀತಿವಾಕ್ಯಾಮೃತದ ವಾಕ್ಯಗಳಿಗೆ ಸಂವಾದಿಗಳಾದ ಸಾವಿರಾರು ಉದ್ಧರಣೆಗಳಿವೆ. ಇದರಿಂದಾಗಿ ಸೋಮದೇವಸೂರಿಗೆ ಜೈನೇತರ ಧರ್ಮಶಾಸ್ತ್ರಗಳ ಮತ್ತು ನೀತಿಶಾಸ್ತ್ರಗಳ ಪರಿಚಯವಿತ್ತೆಂದೂ ಅವುಗಳಿಂದ ವಿಷಯ ಸಂಗ್ರಹ ಮಾಡಿಕೊಂಡಿರುವನೆಂದೂ ಹೇಳಬಹುದಾಗಿದೆ. ನೀತಿವಾಕ್ಯಾಮೃತದಲ್ಲಿ ಜೈನ ಧರ್ಮದ ಛಾಯೆ ಅಷ್ಟಾಗಿ ಕಂಡುಬರದಿರುವುದನ್ನೂ ಗಮನಿಸಬಹುದು.

‘ನೀತಿಶಾಸ್ತ್ರಾಮೃತಮ್ ಶ್ರೀಮಾನರ್ಥಶಾಸ್ತ್ರ ಮಹೋದಧೇಃ | ಯ ಉದ್ದಧ್ರೇ ನಮಸ್ತಸ್ಮೈ ವಿಷ್ಣುಗುಪ್ತಾಯ ವೇಧಸೇ’[5] ಎಂಬ ಕಾಮಂದಕ ನೀತಿಸಾರದ ನೀತಿಶಾಸ್ತ್ರಾಮೃತಮ್ ಎಂಬುದರ ಪ್ರತಿರೂಪವು ನೀತಿವಾಕ್ಯಾಮೃತಮ್ ಎನ್ನುವಂತಿದೆ. ಕಾಮಂದಕನಂತೆ ಸೋಮದೇವನೂ ತನ್ನ ಕೃತಿ ರಚನೆಯಲ್ಲಿ ಕೌಟಿಲ್ಯನ (ವಿಷ್ಣುಗುಪ್ತನ) ಅರ್ಥಶಾಸ್ತ್ರದಿಂದ ನೆರವನ್ನು ಪಡೆದಿದ್ದಾನೆ. ನೀತಿವಾಕ್ಯಾಮೃತದ ಪ್ರಕರಣಗಳ ಶೀರ್ಷಿಕೆಯಾದ ‘ಸಮುದ್ದೇಶ’ ಎಂಬುದೂ ಅರ್ಥಶಾಸ್ತ್ರದಿಂದಲೇ ಬಂದದ್ದು.[6] ಯಥಾವತ್ತಾಗಿ ಸೇರ್ಪಡೆಯಾಗಿವೆ. ಸುಪ್ರಸಿದ್ಧ ಜೈನಾಚಾರ್ಯನಾಗಿದ್ದ ಸೋಮದೇವಸೂರಿಯು ಸನಾತನ ಧರ್ಮಗ್ರಂಥಗಳಿಂದಲೂ, ಅರ್ಥಶಾಸ್ತ್ರ, ನೀತಿಶಾಸ್ತ್ರ ಗ್ರಂಥಗಳಿಂದಲೂ ವಿಷಯ ಸಂಗ್ರಹ ಮಾಡಿ ರಾಜಕಾರ್ಯ ನಿರತರಾಗಿದ್ದವರಿಗೆ ಅತ್ಯಂತ ಉಪಯುಕ್ತವಾದ ಮತಾತೀತವಾದ ರಾಜನೀತಿಶಾಸ್ತ್ರ ಗ್ರಂಥವನ್ನು ರಚಿಸಿರುವುದು ಗಮನಾರ್ಹವಾದ ವಿಷಯ.

ಕಾಮಂದಕ ನೀತಿಸಾರವು ಪದ್ಯ ಗ್ರಂಥ. ನೀತಿವಾಕ್ಯಾಮೃತವು ಬಾರ್ಹಸ್ಪತ್ಯ ನೀತಿಸೂತ್ರಗಳಂತೆ ಸೂತ್ರಪ್ರಾಯವಾದ ವಾಕ್ಯಗಳಲ್ಲಿ, ಅವುಗಳಿಗಿಂತಲೂ ವಿಸ್ತಾರವಾದ ವಿಷಯ ಗರ್ಭಿತವಾದ, ನೀತಿಶಾಸ್ತ್ರ ಗ್ರಂಥ; ಸಾಮಾನ್ಯ ನೀತಿ, ವ್ಯವಹಾರ ನೀತಿ ಮತ್ತು ರಾಜನೀತಿಯ ವಿವಿಧ ಸ್ತರಗಳನ್ನೊಳಗೊಂಡ ರಾಜನೀತಿಶಾಸ್ತ್ರ ಗ್ರಂಥ, “Somadeva… can outright be considered to be a commentator on Kautilya” ಎನ್ನುವ ವಿಂಟರ್ನಿಟ್ಸ್‌ಅವರ ಅಭಿಪ್ರಾಯವು[7] ಸರಿಯಲ್ಲವೆಂದು ತೋರುತ್ತದೆ. ನೀತಿವಾಕ್ಯಾಮೃತವು ಕೌಟಿಲ್ಯನ ಅರ್ಥಶಾಸ್ತ್ರದ ವ್ಯಾಖ್ಯಾನವೂ ಅಲ್ಲ, ಅದರ ಸಂಗ್ರಹ ರೂಪವು ಅಲ್ಲ;ಅವನ ಕಾಲದಲ್ಲಿ ಪ್ರಚಲಿತವಾಗಿದ್ದ ರಾಜನೀತಿಶಾಸ್ತ್ರ ಗ್ರಂಥಗಳ ಆಧಾರದ ಮೇಲೆ, ಸಮಕಾಲೀನ ರಾಜಕೀಯ ಪರಿಸ್ಥಿತಿಗಳನ್ನು ಆಧರಿಸಿ ರಚಿಸಿದ ಸ್ವತಂತ್ರವಾದ ಒಂದು ರಾಜನೀತಿ ಗ್ರಂಥ. ಕೌಟಿಲ್ಯನ ಅರ್ಥಶಾಸ್ತ್ರಾಧ್ಯಯನಕ್ಕೆ ಪ್ರವೇಶಿಕೆಯಂತಿರುವ ರಚನೆ. ಈ ಗ್ರಂಥದಲ್ಲಿ ನೀತಿರೂಪಣೆಯ ಮೂರು ರೀತಿಗಳಲ್ಲಿದೆ. ಮೊದಲನೆಯದಾಗಿ ಕರ್ತವ್ಯಗಳು ಹೇಗಿರಬೇಕು. ಹೇಗಿರಕೂಡದು ಎಂದು ವಿಧಿಸುವ ‘ಪ್ರಭುಸಮ್ಮಿತ’ ವಾದ ವಿಧಿನಿಯಮಗಳು, ಎರಡನೆಯದಾಗಿ, ಹೇಗಿದ್ದರೆ ಸರಿ, ಹೇಗಿಲ್ಲದಿದ್ದರೆ ಸರಿಯಲ್ಲ ಎಂಬ ಸಲಹೆಗಳನ್ನೊಳಗೊಂಡ ‘ಮಿತ್ರಸಮ್ಮಿತ’ ವಾದ ನಿರೂಪಣೆಗಳು ಮತ್ತು ಮೂರನೆಯದಾಗಿ, ಹೇಗಿದ್ದರೆ ಚೆನ್ನು ರಚನೆಗಳು. ಈ ರೀತಿಯ ವೈವಿಧ್ಯಮಯವಾದ ನಿರೂಪಣೆಯಿಂದಾಗಿ ನೀತಿವಾಕ್ಯಾಮೃತವು ಶಾಸ್ತ್ರ ಗ್ರಂಥವಾದರೂ ಕಾವ್ಯಮಯವಾಗಿ ಹೃದಯಂಗಮವಾಗಿದೆ. ಈ ಕೃತಿಯ ಸೂತ್ರ ಶೈಲಿಯಲ್ಲಿ ಕ್ಲಿಷ್ಟತೆಯಿಲ್ಲ. ಶಾಸ್ತ್ರಗ್ರಂಥದ ಬಂಧವಿದೆ. ಶೈಲಿಯು ಸರಳವಾಗಿದೆ, ಮೃದುವಾಗಿದೆ. ಅಲ್ಲಲ್ಲಿ ಅರ್ಥಗರ್ಭಿತವಾದ ಗಾದೆಯ ಮಾತುಗಳಂತಿರುವ ಸುಭಾಷಿತಗಳಿವೆ. ಸಂದರ್ಭೋಚಿತವಾದ ಸೂಚಿಕೆಗಳೂ ಇವೆ.

ನೀತಿವಾಕ್ಯಾಮೃತವು ರಚನೆಯಾದ ನಂತರ ಬಹುಬೇಗ ರಾಜಕೀಯ ಧುರೀಣರ ಗಮನವನ್ನು ಸೆಳೆದು ಮೆಚ್ಚುಗೆಯನ್ನೂ ಪಡೆಯಿತೆಂದು ತೋರುತ್ತದೆ. ಕಲ್ಯಾಣ ಚಾಲುಕ್ಯರಾಜ, ಮೂರನೆಯ ಜಯಸಿಂಹನ (ಕ್ರಿ.ಶ. ೧೦೧೫-೪೨) ಸಂಧಿವಿಗ್ರಹಿಯಾಗಿದ್ದ[8] ದುರ್ಗಸಿಂಹನು ಕ್ರಿ.ಶ. ೧೦೩೧ರಲ್ಲಿ ರಚಿಸಿದ ಕರ್ಣಾಟಕ ಪಂಚತಂತ್ರದಲ್ಲಿ ನೀತಿವಾಕ್ಯಾಮೃತದ ಕೆಲವು ಸೂತ್ರಗಳನ್ನು ನಾಮನಿದೃಶಸಹಿತವೂ, ನಾಮನಿರ್ದೇಶವಿಲ್ಲದೆಯೂ ಸೂಚಿಸಿದ್ದಾನೆ. ದುರ್ಗಸಿಂಹನ ಪಂಚತಂತ್ರವು ವಸುಭಾಗಭಟ್ಟನ ಪಂಚತಂತ್ರದ ಕನ್ನಡ ರೂಪ.[9] ರಾಜನೀತಿಯ ಪ್ರಯೋಗ ರೂಪವಾಗಿರುವ ವಸುಭಾಗಭಟ್ಟನ ಪಂಚತಂತ್ರವು ಸೋಮದೇವಸೂರಿಯ ಕಾಲದಲ್ಲಿ ರಾಜನೀತಿಜ್ಞರ ಮೆಚ್ಚುಗೆಯ ಕೃತಿಯಾಗಿದ್ದಿರಬೇಕು. ಆ ಪಂಚತಂತ್ರದ ನಾಲ್ಕು ಕಥೆಗಳು ನೀತಿವಾಕ್ಯಾಮೃತದ ಕೆಲವು ವಾಕ್ಯಗಳಲ್ಲಿ ಉದಾಹೃತವಾಗಿವೆ.[10]

೨. ನೀತಿವಾಕ್ಯಾಮೃತದ ಸ್ಥೂಲ ಪರಿಚಯ

ನೀತಿವಾಕ್ಯಾಮೃತದ ವಾಕ್ಯಗಳ, ಮುಂದೆ ಕೊಟ್ಟಿರುವ, ಭಾವಾನುವಾದದ ಪರಿಶೀಲನೆಯಿಂದ ಈ ಗ್ರಂಥದ ವೈಶಿಷ್ಟ್ಯ ಮತ್ತು ವ್ಯಾಪ್ತಿಯ ಪರಿಚಯವಾಗಬಹುದಾದರೂ ಇಲ್ಲಿ ಇದರ ಸ್ಥೂಲ ಪರಿಚಯ ಮಾಡಿಕೊಡುವ ಪ್ರಯತ್ನವನ್ನು ಮಾಡಬಯಸುತ್ತೇವೆ.

ಜೈನ ವಿದ್ವಾಂಸನಾದ ಸೋಮದೇವಸೂರಿಯು ‘ಅಥ ಧರ್ಮಾರ್ಥಕಾಮ ಫಲಾಯ ರಾಜ್ಯಾಯ ನಮಃ’ (೧-೧) ಎಂದು ನೀತಿವಾಕ್ಯಾಮೃತವನ್ನು ಪ್ರಾರಂಭಿಸುತ್ತಾನೆ. ಪ್ರಜೆಗಳ ಧರ್ಮ, ಅರ್ಥ, ಕಾಮಗಳ ಫಲವು ರಾಜ್ಯ. ರಾಜ್ಯದಿಂದಲೇ ಧರ್ಮ, ಅರ್ಥ, ಕಾಮಗಳು ರಾಜ್ಯದ ಪ್ರಜೆಗಳಿಗೆ ಲಭಿಸುವುದು ಎನ್ನುವುದು ಗ್ರಂಥಕರ್ತನ ಅಭಿಪ್ರಾಯ. ಈ ಗ್ರಂಥದ ಮೊದಲ ಮೂರು ಸಮುದ್ದೇಶಗಳಲ್ಲಿ ಧರ್ಮ, ಅರ್ಥ, ಕಾಮ ಎಂಬ ತ್ರಿವರ್ಗದ ನಿರೂಪಣೆಯಿದೆ. ಇಹಪರ ಸೌಖ್ಯ ಸಿದ್ಧಿಗೆ ಕಾರಣೀಭೂತವಾದದ್ದು ಧರ್ಮ (೧-೨); ತನ್ನಂತೆ ಇತರರ ಹಿತಚಿಂತನೆಯೇ ಧರ್ಮವನ್ನು ಗಳಿಸುವ ಮಾರ್ಗ (೧-೩);ಯಾವುದರಿಂದ ಇಷ್ಟವಾದದ್ದನ್ನು ಪಡೆಯಬಹುದೋ ಅದು ಅರ್ಥ (೨-೧); ಸ್ವಾಭಿಮಾನದಿಂದ ಕೂಡಿದ ಆನಂದದಿಂದ ಸರ್ವೇಂದ್ರಿಯತೃಪ್ತಿ ಯಾವುದರಿಂದಾಗುವುದೋ ಅದು ಕಾಮ (೩-೧);ತ್ರಿವರ್ಗದಲ್ಲಿ ಕಾಮಕ್ಕಿಂತ ಅರ್ಥವೂ ಅರ್ಥಕ್ಕಿಂತ ಧರ್ಮವೂ ಮುಖ್ಯವಾದವು. (೩-೧೩);ಧರ್ಮಕ್ಕೂ ಅರ್ಥಕ್ಕೂ ವಿಘಾತವುಂಟಾಗದಂತೆ ಕಾಮವನ್ನು ಸೇವಿಸಬೇಕು (೩-೧೨) ಎನ್ನುವುದು ಸೋಮದೇವಸೂರಿ ವಿಧಿಸುವ ನೀತಿಯ ತಹಳದಿ.

ಅನ್ವೀಕ್ಷಿಕೀ, ತ್ರಯೀ, ವಾರ್ತಾ, ದಂಡನೀತಿ ಇವು ನಾಲ್ಕೂ ರಾಜವಿದ್ಯೆಗಳು (೫-೪೯); ಕೌಟಿಲ್ಯನಂತೆ ಸೋಮದೇವನೂ ಅನ್ವೀಕ್ಷಿಕಿಯಲ್ಲಿ ಸಾಂಖ್ಯ ಮತ್ತು ಯೋಗಗಳೊಂದಿಗೆ ಲೋಕಾಯುತ್ವ ಮತವನ್ನೂ ಸೇರಿಸಿರುವುದು ಗಮನಾರ್ಹ (೫-೩೩); ಇಹಲೋಕದ ವ್ಯವಹಾರಗಳಿಗೆ ಲೋಕಾಯತವು ಅತ್ಯವಶ್ಯ (೬-೩೩); ಲೋಕಾಯತವನ್ನರಿತ ರಾಜನು ಶತ್ರುಬಾಧೆಯನ್ನು ತೊಲಗಿಸಿ ದೇಶವನ್ನು ರಕ್ಷಿಸಲು ಸಮರ್ಥನಾಗುತ್ತಾನೆ. (೬-೩೪); ನಾಲ್ಕು ವೇದಗಳು, ಆರು ವೇದಾಂಗಗಳು, ಇತಿಹಾಸ ಪುರಾಣಗಳು, ನ್ಯಾಯ, ಮೀಮಾಂಸಾ, ಧರ್ಮಶಾಸ್ತ್ರಗಳು, ಇವು ಹದಿನಾಲ್ಕು ವಿದ್ಯಾಸ್ಥಾನಗಳು ತ್ರಯೀ ಎನ್ನಿಸಿಕೊಳ್ಳುತ್ತವೆ. (೭-೧); ಧರ್ಮಶಾಸ್ತ್ರಗಳೂ ಸ್ಮೃತಿಗಳೂ ವೇದಾರ್ಥ ಸಂಗ್ರಹ ರೂಪಗಳಾಗಿದ್ದರಿಂದ ವೇದಗಳೇ (೭-೪); ತ್ರಯಿಯಿಂದಲೇ ವರ್ಣಾಶ್ರಮಾಚಾರಗಳೂ, ಧರ್ಮಾಧರ್ಮವ್ಯವಸ್ಥೆಯೂ ಸಾಧ್ಯ (೭-೨) ಎಂದು ಜೈನಸೂರಿ ಸೋಮದೇವನು ಹೇಳಿರುವುದು ಗಮನಾರ್ಹ. ಮೂರನೆಯ ರಾಜವಿದ್ಯೆಯಾದ ವಾರ್ತೆಯಲ್ಲಿ ಕೃಷಿ ಪಶುಪಾಲನ, ವಾಣಿಜ್ಯಗಳು ಸೇರಿವೆ (೮-೧);ವಾರ್ತಾ ಸಮೃದ್ಧಿಯಿಂದ ಎಲ್ಲವೂ ಸಮೃದ್ಧ (೮-೨) ಎಂದು ವಾರ್ತೆಯ ಕಡೆಗೆ ಗಮನವನ್ನು ಸೆಳೆಯುತ್ತಾನೆ. ಸೋಮದೇವರ ದೃಷ್ಟಿಯಲ್ಲಿ ದಂಡವು ಚಿಕಿತ್ಸಾಶಾಸ್ತ್ರದಂತೆ ಮುಖ್ಯವಾಗಿ ಶಸ್ತ್ರ ಚಿಕಿತ್ಸೆಯಂತೆ ಸಮಾಜದ ದೋಷಗಳನ್ನು ತೊಲಗಿಸಿ ಪರಿಶುದ್ಧಿಗೊಳಿಸುವುದಕ್ಕೆ ಅತ್ಯವಶ್ಯ (೯-೧). ಆದರೆ ತನ್ನ ಪ್ರಯೋಜನಕ್ಕಾಗಿ ನಿರ್ದೋಷಿಗಳನ್ನು ಶಿಕ್ಷಿಸಿ ದಂಡವನ್ನು ಸೆಳೆಯುವ ರಾಜನೂ, ಧನ ಸಂಪಾದನೆಗಾಗಿ ಇಲ್ಲದ ರೋಗವನ್ನು ಇದೆಯೆಂದು ಹೇಳಿ ಚಿಕಿತ್ಸೆಯನ್ನು ವಿಧಿಸಿ ಹಣವನ್ನು ಸೆಳೆಯುವ ವೈದ್ಯನೂ ಸಮಾನವಾಗಿ ನಿಂದ್ಯರು (೯-೪).

ಮಂತ್ರಿ, ಪುರೋಹಿತ, ಸೇನಾಪತಿ, ದೂತ, ಚಾರ ಇವರು ರಾಜಕಾರ್ಯ ನಿರ್ವಾಹಕರು, ಪುರೋಹಿತನು ನಿತ್ಯ ನೈಮಿತ್ತಿಕ ಕರ್ಮಗಳನ್ನು ಮಾಡಿಸುವ ಈಗಿನ ಕಾಲದ ಜೋಯಿಸನಲ್ಲ. ಅವನು ಉತ್ತಮ ಕುಲ, ಶೀಲವುಳ್ಳವನಾಗಿ, ಷಡಂಗ ಸಹಿತ ವೇದ, ಜ್ಯೋತಿಷ್ಯ, ಶಕುನಶಾಸ್ತ್ರ, ದಂಡನೀತಿ, ಮಂತ್ರಶಾಸ್ತ್ರಗಳನ್ನು ಬಲ್ಲವನಾಗಿದ್ದನು. (೧೧-೧). ಅವನು ರಾಜಗುರು. ರಾಜನಿಗೆ ಮಂತ್ರಿ ಪುರೋಹಿತರು ಮಾತಾಪಿತೃಗಳಿದ್ದಂತೆ (೧೧-೨). ದೂತರು ರಾಜನ ಪ್ರತಿನಿಧೀಗಳಾಗಿ ದೂರದ ರಾಜಕಾರ್ಯಗಳನ್ನು ನಿರ್ವಹಿಸುವ ಮಂತ್ರಿಗಳು (೧೩-೧). ಚಾರರು, ಗೂಢಚಾರರು ರಾಜನಿಗೆ ಕಣ್ಣುಗಳಿದ್ದಂತೆ (೧೪-೧). ಸ್ವಾಮಿ ಅಮಾತ್ಯ, ಜನಪದ, ದುರ್ಗ, ಕೋಶ, ಬಲ, ಮಿತ್ರ ಇವು ರಾಜ್ಯದ ಸಪ್ತಾಂಗಗಳು (೧೭ ರಿಂದ ೨೩ರ ವರೆಗಿನ ಏಳು ಸಮುದ್ದೇಶಗಳಲ್ಲಿ ಈ ಸಪ್ತಾಂಗಕ್ಕೆ ಸಂಬಂಧಿಸಿದ ವಿವರಗಳಿವೆ.)

ರಾಜನಿಂದಲೇ ರಾಜ್ಯವಾದ್ದರಿಂದ ರಾಜನಿಗೆ ತನ್ನವರಿಂದಲೂ ಶತ್ರುಗಳಿಂದಲೂ ಯಾವ ರೀತಿಯ ವಿಪತ್ತೂ ಸಂಭವಿಸದಂತೆ ರಕ್ಷಿಸಿಕೊಳ್ಳಬೇಕು (೨೪-೭). ರಾಜರಿಗೆ ಹಲವು ಮಂದಿ ಭಾರ್ಯೆಯರಿರುತ್ತಿದ್ದುದು ಸರ್ವವಿದಿತ. ಇದರ ಮೇಲೆ ಇತರರ ಸಹಯೋಗ ಅವರಿಗೆ ಇರುತ್ತಿತ್ತೆಂದು ತೋರುತ್ತದೆ. ಇದನ್ನು ತಿಳಿದಿದ್ದ ಜೈನಾಚಾರ್ಯ ಸೋಮದೇವ ಸೂರಿಯು ರಾಜರಕ್ಷೆಯ ಸಂದರ್ಭದಲ್ಲಿ ಸ್ತ್ರೀಯರ ಬಗೆಗೆ ರಾಜರಕ್ಷಾ ಸಮುದ್ದೇಶದ ೧೧, ೧೨, ೧೪, ೧೫, ೨೩, ೨೭, ೩೫, ೩೬, ೩೮, (ಸ್ತ್ರೀಯರ ದುಷ್ಕೃತ್ಯಗಳ ಉದಾಹರಣೆಗಳು, ೩೯ ರಿಂದ ೪೩) ಮತ್ತು ೪೪ ರಿಂದ ೪೯ರ ವರೆಗೆ ಹಲವು ವಾಕ್ಯಗಳಲ್ಲಿ ನಿರೂಪಿಸಿರುವ ಅಭಿಪ್ರಾಯಗಳು ಇಂದಿನ ನಮಗೆ ಸಮಂಜಸವಲ್ಲವೆಂದು ತೋರುವದು ಸಹಜ. ಸೋಮದೇವನಲ್ಲಿ ಈ ರೀತಿಯ ಅಭಿಪ್ರಾಯವುಂಟಾಗುವುದಕ್ಕೆ ಆಗಿನ ಶ್ರೀಮಂತರ ಸ್ತ್ರೀಲಂಪಟತ್ವ, ಆತನ ಗಮನಕ್ಕೆ ಬಂದ ಸ್ತ್ರೀಯರ ಕೆಲವು ದುರ್ವರ್ತನೆಗಳು ಅಲ್ಲದೆ ಯಶಸ್ತಿಲಕದಲ್ಲಿ ತಾನೇ ಚಿತ್ರಿಸಿದ್ದ ರಾಣಿ ಅಮೃತಮತಿಯ ದುಶ್ಯೀಲ, ದುರ್ವರ್ತನೆ ಇವುಗಳ ಪ್ರಭಾವವೂ ಇರಬಹುದು. ಸೋಮದೇವಸೂರಿಯ ಈ ರೀತಿಯ ಅಭಿಪ್ರಾಯಗಳನ್ನು ಈಗ ನಾವು ಪ್ರತಿಭಟಿಸುವ ಕಾರಣವಿಲ್ಲ. ಅವು ಬಹುತೇಕ ಅಂದಿನ ಶ್ರೀಮಂತ ಸಮಾಜದಲ್ಲಿ ಪ್ರಚಲಿತವಾಗಿದ್ದ ಬಹುಪತ್ನಿತ್ವ ಪರಿಸ್ಥಿತಿಯ ಪ್ರತಿಬಿಂಬ ಮತ್ತು ರಾಜರ ಅಂತಃಪುರಗಳ ಐತಿಹ್ಯಗಳ ಪ್ರಭಾವವಿರಬಹುದೆಂದು ಭಾವಿಸಿ ಅವನ್ನು ಕೈಬಿಡಬಹುದು. ಇಲ್ಲವೇ ಉಚಿತವೆಂದು ತೋರಿದಷ್ಟನ್ನು ಅಂಗೀಕರಿಸಬಹುದು. ಸಾಮಾನ್ಯರ ವಿಚಾರದಲ್ಲಿ ಗೃಹವೆಂದರೆ ಗೃಹಿಣಿ, ಗೋಡೆಗಳು ಮತ್ತು ಚಾವಣಿಗಳಿಂದಾದ ಮನೆಯಲ್ಲ (೩೧-೩೨) ಎಂಬ ಹೇಳಿಕೆ ಅಭಿನಂದಾರ್ಹ. ೨೪ ನೆಯ ಸಮುದ್ದೇಶದ ೫೫ ರಿಂದ ೬೧ ನೆಯ ವಾಕ್ಯಗಳಲ್ಲಿ ವಿವರಗೊಂಡಿರುವ ವೇಶ್ಯೆಯರನ್ನು ಕುರಿತ ಅಭಿಪ್ರಾಯಗಳು ಅಂದಿಗೂ ಇಂದಿಗೂ ಅನ್ವಯಿಸಬಹುದಾದವೇ ಅಲ್ಲವೆ ?

ಸ್ಮೃತಿಗಳ ಪ್ರಕಾರ ಹೆಣ್ಣಿನ ವಿವಾಹ ಯೋಗ್ಯ ವಯಸ್ಸು ೮ ರಿಂದ ೧೦ ವರ್ಷಗಳೆಂದು ಧರ್ಮಶಾಸ್ತ್ರಗಳಲ್ಲಿ ನಿಗದಿತವಾಗಿದ್ದರೂ ಸೋಮದೇವನು ೧೨ ವರ್ಷ ವಯಸ್ಸಿನ ಹೆಣ್ಣು ೧೬ ವರ್ಷ ವಯಸ್ಸಿನ ಗಂಡು ವ್ಯವಹಾರಪ್ರಾಪ್ತ ವಯಸ್ಕರು (೩೧-೧) ಎಂದರೆ ಅವರು ವಿವಾಹವಾಗಬಹುದಾದ ವಯಸ್ಸಿನವರು ಎಂದು ಹೇಳಿ ವಿವಾಹದ ವಯಸ್ಸನ್ನು ಮುಂದೂಡಿದ್ದಾನೆ. ನಾವೀಗ ಹತ್ತು ಶತಮಾನಗಳ ನಂತರ ೧೮ ಮತ್ತು ೨೧ ಎಂದು ಸ್ಥಿರಪಡಿಸಿಕೊಂಡಿದ್ದೇವಲ್ಲವೆ? ಶಾಸ್ತ್ರ ಹಾಗೂ ಲೌಕಿಕ ಅಚಾರನುಸಾರವಾಗಿ ವಧೂವರರ ಅಗ್ನಿ, ದ್ವಿಜ, ದೇವತಾ ಸಾಕ್ಷಿಕವಾದ ಪಾಣಿಗ್ರಹಣವು ವಿವಾಹ (೩೧-೩). ವಿವಾಹಿತಳಾಗಬೇಕಾದ ಕನ್ಯೆಯ ದೋಷಗಳನ್ನು ಪಟ್ಟಿ ಮಾಡಿ (೩೧-೧೪) ಅಂಥವಳನ್ನು ಮದುವೆಯಾಗಬಾರದೆಂದು ಹೇಳುವ ನೀತಿವಿದನು ವರನ ದೋಷಗಳ ಪಟ್ಟಿ ಮಾಡಿಲ್ಲ. ಎಂಟು ವಿಧವಾದ ವಿವಾಹಗಳಲ್ಲಿ ಬ್ರಾಹ್ಮ, ಪ್ರಾಜಾಪತ್ಯ, ಆರ್ಷ, ದೈವ ಈ ನಾಲ್ಕು ಧರ್ಮ್ಯವಿವಾಹಗಳು (೩೧-೪ ರಿಂದ ೮) ಗಾಂಧರ್ವ, ಅಸುರ, ರಾಕ್ಷಸ, ಪೈಶಾಚ ಈ ನಾಲ್ಕೂ ಅಧರ್ಮ್ಯ ವಿವಾಹಗಳಾದರೂ ಅಪವಾದವಿಲ್ಲದೆ ವಧೂವರರು ಪರಸ್ಪರ ಸಂಭಾವ್ಯತೆಯಿಂದ ಕೂಡಿದ್ದರೆ ಧರ್ಮ ವಿರುದ್ಧವಲ್ಲ (೩೧-೯ ರಿಂದ ೧೩) ಎಂದು ಹೇಳಿ ಔದಾರ್ಯವನ್ನು ತೋರಿದ್ದಾನೆ. ಅದರಂತೆಯೇ, ಕೆಲವೊಂದು ಪ್ರಸಂಗಗಳಲ್ಲಿ ಪುನರ್ವಿವಾಹಕ್ಕೆ ಆಸ್ದದವಿದೆಯೆಂದು ಹೇಳುವುದೂ ಗಮನಾರ್ಹವೇ, ವಿಕೃತನಾದ ಗಂಡನೊಡನೆ ಮದುವೆಯಾದ ಹೆಂಗಸಿಗೆ ಪುನರ್ವಿವಾಹ ಮಾಡಿಕೊಳ್ಳಲು ಅಧಿಕಾರವಿದೆಯೆಂದು ಸ್ಮೃತಿಕಾರರು ಹೇಳುತ್ತಾರೆಂದು ಸೋಮದೇವಸೂರಿಯು ಸ್ಪಷ್ಟಪಡಿಸಿದ್ದಾನೆ. (೩೧-೨೮). ಗಂಡನಿಗೆ ಹೆಂಡತಿ ಸಂಕೋಲೆಯಿಲ್ಲದ ಬಂಧನ (೨೭-೧) ಎಂಬದು ಸೋಮದೇವಸೂರಿಯ ಅಭಿಪ್ರಾಯ. ಮಾತಾ ಪಿತೃಗಳು, ಹೆಂಡತಿ, ಅಪ್ರಾಪ್ತ ವ್ಯವಹಾರ ವಯಸ್ಕರಾದ ಮಕ್ಕಳು ರಕ್ಷಿಸಲ್ಪಡಬೇಕಾದವರು (೨೭-೨) ಎಂಬುದನ್ನು ಒಪ್ಪಲೇಬೇಕು. ದೈವಕೃಪೆಯೂ ಪುರುಷಪ್ರಯತ್ನವೂ ಸೇರಿ ಲೋಕಯಾತ್ರೆ ಸಾಗುತ್ತದೆ. (೨೯-೬). ಆಯುಷ್ಯವಿದ್ದೂ ಔಷಧೋಪಚಾರ ನಡೆದರೆ ರೋಗಿ ಬದುಕುವಂತೆ (೨೯-೧೪) ದೈವ, ಪುರುಷಕಾರಗಳೂ ಸೇರಿದರೇನೇ ಇಷ್ಟಕಾರ್ಯಸಿದ್ಧಿ ಎಂಬುದು ನಿತ್ಯ ಸತ್ಯ.

ಕೊನೆಯ ಪ್ರಕೀರ್ಣ ಸಮುದ್ದೇಶದಲ್ಲಿ ಹಲವು ವಿಷಯಗಳನ್ನು ಕುರಿತ ಅರ್ಥಗರ್ಭಿತವಾದ ವಿವರಗಳಿವೆ. ಉದಾಹರಣೆಗೆ ಇಲ್ಲಿ ವಿಧಿಸಿರುವ ಸಂಧಿವಿಗ್ರಹಿಯ ಗುಣಗಳು (೩೨-೩) ಇಂದಿಗೂ ವಿದೇಶ ವ್ಯವಹಾರಗಳ ಮಂತ್ರಿಗಳಿಗೆ, ಕಾರ್ಯದರ್ಶಿಗಳಿಗೆ ಇರಲೇಬೇಕಾದ ಅರ್ಹತೆಗಳಲ್ಲವೆ ? ಈ ಸಮುದ್ದೇಶದಲ್ಲಿರುವ ಕಾವ್ಯ, ತೀಗ, ವಾದ್ಯ, ನೃತ್ಯ ಈ ಲಲಿತಕಲೆಗಳನ್ನು ಕುರಿತ ಸಂಕ್ಷಿಪ್ತವಾದರೂ ವಿಚಾರಗರ್ಭಿತವಾದ ವಿವರಗಳು (೩೨-೬, ೧೧, ೧೨) ಮನನೀಯವಾಗಿವೆ.

೩. ನೇಮಿನಾಥನ ಕಾಲ, ದೇಶ ಮತ್ತು ವೃತ್ತಿ

ಟೀಕಾಕಾರ ನೇಮಿನಾಥನು ತನ್ನ ಟೀಕೆಯ ಕೊನೆಯ ಪ್ರಶಸ್ತಿ ಗದ್ಯದಲ್ಲಿಯೂ ಅನಂತರದ ಕೆಲವು ಪದ್ಯಗಳಲ್ಲಿಯೂ ತನ್ನ ಬಗೆಗೂ ತನ್ನ ಗುರು ಹಿರಿಯರ ಬಗ್ಗೆಯೂ ಒದಗಿಸಿರುವ ವಿವರಗಳಿಂದ ಆತನ ಕಾಲ, ಸ್ಥಳ ಮತ್ತು ವೃತ್ತಿಯ ಬಗ್ಗೆ ಹಲವು ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಗ್ರಂಥಾಂತ್ಯದ ಪ್ರಶಸ್ತಿ ಗದ್ಯದ ಪ್ರಕಾರ ನೇಮಿನಾಥನ ಗುರುವು ವೀರನಂದಿ ಸೈದ್ಧಾಂತಿಕ ಮತ್ತು ಆತನ ಗುರುವು ಮೇಘಚಂದ್ರ ತ್ರೈವಿದ್ಯ. ಗುರು ವೀರನಂದಿಯಿಂದ ಕವಿತಾ ಶಕ್ತಿಯನ್ನು ಪಡೆದಂತೆಯೂ ಆತನ ಆಜ್ಞಾನುಸಾರವಾಗಿ ಈ ವೃತ್ತಿಯನ್ನು ರಚಿಸಿದಂತೆಯೂ ನೇಮಿನಾಥನು ಹೇಳಿರುತ್ತಾನೆ.[11] ಮೇಘಚಂದ್ರತ್ರೈವಿದ್ಯನು “ಯಶೋನಿಧಿ ಪಂಪನ ಸುತಂಗೆ ತಿಳಿದಂತೆ” ಪೂಜ್ಯಪಾದ ಕೃತ ‘ಸಮಾಧಿ ಶತಕ’ಕ್ಕೆ ಕನ್ನಡ ಟೀಕೆಯನ್ನು ಕ್ರಿ. ೧೧೪೮ರಲ್ಲಿ ಬರೆದನು.[12] ಈ ಪಂಪನು ಅಭಿನವ ಪಂಪ ಎಂದು ಪ್ರಖ್ಯಾತನಾದ ನಾಗಚಂದ್ರನೆಂಬುದು ವಿದ್ವಾಂಸರ ಅಭಿಪ್ರಾಯ. ಮೇಘಚಂದ್ರ ತ್ರೈವಿದ್ಯನ ಶಿಷ್ಯನಾದ ವೀರನಂದಿ ಸೈದ್ಧಾಂತಿಕನು ಸ್ವಕೃತ ಆಚಾರಸಾರಕ್ಕೆ ಕ್ರಿ. ಶ. ೧೧೫೩ರಲ್ಲಿ ಕನ್ನಡ ವ್ಯಾಖ್ಯಾನವನ್ನು ಬರೆದನು.[13] ವೀರನಂದಿಯ ಮತ್ತೊಬ್ಬ ಶಿಷ್ಯನಾದ ಅಗ್ಗಳನು ‘ಚಂದ್ರಪ್ರಭಪುರಾಣ’ ವನ್ನು ಕ್ರಿ.ಶ. ೧೧೮೯ರಲ್ಲಿ ಬರೆದನು.[14] ಅವನ ಸಧರ್ಮಿ ಟೀಕಾಕಾರ ನೇಮಿನಾಥನು ತನ್ನ ಟೀಕೆಯ ಪ್ರಶಸ್ತಿ ಗದ್ಯಾನಂತರದ ೧೫ನೆಯ ಪದ್ಯದಲ್ಲಿ ಶ್ರೀರಾಮಚಂದ್ರಮುನಿ ಎಂಬಾತನನ್ನು ‘ಶ್ರೀರಾಮಚಂದ್ರಮುನಿಚಂದ್ರ ಮಹಂ ನಮಾಮಿ’ ಎಂದೂ “ತಪೋಜ್ವಲಾಗ್ನಿಹುತ ದರ್ಪಕ ದರ್ಪವಿಶೇಷ ರಾಮಚಂದ್ರನವ್ರತಿಗಳ್” ಎಂದೂ ವಿಶೇಷ ಗೌರವ ಪೂರ್ವಕವಾಗಿ ಸ್ತುತಿಸಿರುವುದರಿಂದ ತಿಳಿಯಬಹುದು. ಈ ರಾಮಚಂದ್ರಮುನಿ ಹಳೇಬೀಡಿನ ಒಂದು ಶಾಸನದ ಪ್ರಕಾರ[15] ಹಳೇಬೀಡು ಮತ್ತು ಅದರ ಪರಿಸರದಲ್ಲಿಯ ಬಸದಿಗಳಿಗೆ ಕ್ರಿ. ಶ. ೧೧೯೬ ರಲ್ಲಿ ಆಚಾರ್ಯನಾಗಿದ್ದನು. ಮಹಾಕವಿ ಜನ್ನನು ಅನಂತನಾಥಪುರಾಣದಲ್ಲಿ (ಕ್ರಿ. ೧೨೩೦) ಈ ರಾಮಚಂದ್ರಮುನಿಯನ್ನು ವಿಶೇಷವಾಗಿ ಸ್ತುತಿಸಿದ್ದಾನೆ. ಆದ್ದರಿಂದ ರಾಮಚಂದ್ರಮುನಿ ಹನ್ನೆರಡನೆಯ ಶತಾಬ್ದದ ಅಂತ್ಯ ಭಾಗದಲ್ಲಿಯೂ, ಹದಿಮೂರನೆಯ ಶತಾಬ್ದದ ಆದಿ ಭಾಗದಲ್ಲಿಯೂ ಹಳೇಬೀಡಿನಲ್ಲಿ ಪ್ರಭಾವಶಾಲಿಯಾಗಿದ್ದಂತೆ ಕಂಡುಬರುತ್ತದೆ. ಈತನನ್ನು ಸ್ತುತಿಸಿರುವ ನೇಮಿನಾಥನು ಆತನ ಸಮಕಾಲೀನನಾಗಿದ್ದು ನೀತಿವಾಕ್ಯಮೃತದ ವೃತ್ತಿಯನ್ನು ಸುಮಾರು ಕ್ರಿ.ಶ. ೧೨೦೦ರಲ್ಲಿ ಬರೆದಿರಬಹುದಾಗಿದೆ. ಈ ಕನ್ನಡ ವೃತ್ತಿಯಲ್ಲಿ ಶಕಟರೇಫ(ಅರಿ) ದ ಪ್ರಯೋಗವು ಸರಿಯಾಗಿದೆಯಾದರೂ ರಳ (ೞ) ದ ಪ್ರಯೋಗವು ಎಲ್ಲಿಯೂ ಇಲ್ಲ. ರಳ (ೞ) ವಿರಬೇಕಾದೆಡೆಗಳಲೆಲ್ಲ ‘ಳ’ ಕಾರದ ಪ್ರಯೋಗವೇ ಇದೆ. ವ್ಯಂಜನಾಂತವಾಗಿರಬೇಕಾದ ಶಬ್ದಗಳು ಆ ಕಾಲದ ಶಾಸನಗಳಲ್ಲಿ ಕಂಡು ಬರುವಂತೆ ಸ್ವರಾಂತವಾಗಿವೆ. ಇದು ಲಿಪಿಕಾರನ ಪ್ರಮಾದದಿಂದಲೇ ಆದದ್ದು ಎನ್ನುವಂತಿಲ್ಲ. ಟೀಕಾಕಾರನ ಪ್ರಯೋಗವೇ ಇರಬಹುದು. ಈ ಕಾರಣದಿಂದಲೂ ನೇಮಿನಾಥನು ತನ್ನ ಟೀಕೆಯನ್ನು ಸುಮಾರು ೧೨೦೦ರ ಪರಿಸರದಲ್ಲಿ ಬರೆದಿರಬಹುದಾಗಿದೆ.

ಗ್ರಂಥಾಂತ್ಯ ಪ್ರಶಸ್ತಿಗದ್ಯದಲ್ಲಿ “ಪೂರ್ವದಲ್ಲಿ ಸಂದಿವಿಗ್ರಹೀ ಪದವೀಸನಾಥ ಶ್ರೀ ನೇಮಿನಾಥ ವಿರಚಿತ ನೀತಿವಾಕ್ಯಾಮೃತ ವೃತ್ತಿ” ಎಂದಿರುವುದರಿಂದ ಅವನು ಸಂಧಿವಿಗ್ರಹಿಯ ಪದವಿಯಲ್ಲಿದ್ದು ಆ ಪದವಿಯಿಂದ ನಿವೃತ್ತನಾದ ಮೇಲೆ ಈ ವೃತ್ತಿಯನ್ನು ಬರೆದಂತೆ ತಿಳಿದು ಬರುತ್ತದೆ. ಪ್ರಶಸ್ತಿ ಗದ್ಯಾನಂತರದ ಎರಡನೆಯ ಪದ್ಯದಲ್ಲಿ “ಕೋಡನ ಪೂರ್ವದ ವಳ್ಳಿಯ ರೂಢಿಗೆ ನಿಲೆಯಾದ ಸಂಧಿವಿಗ್ರಹಿನಾಮಂ ಕೊಡೆ ಜನಂ ಪೊಗಳ್ವಂತಿರೆ ಮಾಡಿದನೀ ವೃತ್ತಿ ನಿಲ್ಕೆ ನೆಲನುಳ್ಳಿನೆಗಂ” ಎಂದು ಹೇಳಿರುವುದರಿಂದ ಇವನು ಕೋಡನಪೂರ್ವದನಳ್ಳಿಯವನೆಂದೂ ಇವನಿಗೆ ‘ಸಂಧಿ ವಿಗ್ರಹಿ’ ಎನ್ನುವ ಹೆಸರು ಜನರಲ್ಲಿ ರೂಢಿಯಾಗಿ ನೆಲೆಯಾಗಿತ್ತೆಂದೂ, ಈ ವೃತ್ತಿಯನ್ನು ಜನರು ಹೊಗಳುತ್ತಿದ್ದರೆಂದೂ ಹೇಳಿಕೊಂಡಿರುವಂತಿದೆ. ಮೊದಲನೆಯ ಪದ್ಯದಲ್ಲಿ “ಮತಿಹೀನರುಮರಿವಂತಿರೆ” ವೃತ್ತಿಯನ್ನು ರಚಿಸಿದುದಾಗಿ ವೃತ್ತಿಕಾರನು ಹೇಳಿಕೊಂಡಿರುವನಾದರೂ ಈ ವೃತ್ತಿಯ ಇಂದಿನ ಸಾಮಾನ್ಯ ಓದುಗನಿಗೆ ಸುಲಭಗ್ರಾಹ್ಯವಾಗಿಲ್ಲ ಈ ಗ್ರಂಥದಲ್ಲಿ ಈಗ ಸೇರ್ಪಡೆಯಾಗಿರುವ ಹೊಸಗನ್ನಡ ಭಾವಾನುವಾದವು ಈ ಕೊರತೆಯನ್ನು ನಿವಾರಿಸಬಹುದಾಗಿದೆ.

ಕೋಡನಪೂರ್ವದವಳ್ಳಿ ಎಲ್ಲಿದೆ ? ಟೀಕಾಕಾರ ನೇಮಿನಾಥನು ಯಾರ ಆಸ್ಥಾನದಲ್ಲಿ ಸಂಧಿಗ್ರಹಿಯಾಗಿದ್ದನು? ಮತ್ತು ಯಾವಾಗ ಸಂಧಿ ವಿಗ್ರಹಿಯಾಗಿದ್ದನು? ಎಂಬ ಈ ಮೂರು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ‘ಕೋಡ’ ಮತ್ತು ‘ಪಳ್ಳಿ’ ಎಂಬ ಎರಡು ಪದಗಳು ಸೇರಿ ‘ಕೋಡವಳ್ಳಿ’ ಆಗಿದೆ. ಹಾಗೆ ಸೇರಿದಾಗ ‘ಪ’ ಕಾರಕ್ಕೆ ‘ವ’ ಕಾರವು ಆದೇಶವಾಗಿ ಬಂದಿದೆ. ಸಂಸ್ಕೃತ ಪದ್ಯದಲ್ಲಿ ಹೆಸರನ್ನು ಹೇಳುವಾಗ ಕೆಲವೆಡೆಗಳಲ್ಲಿ ಛಂದಸ್ಸಿನ ಅನುಕೂಲಕ್ಕಾಗಿ ಊರಿನ ಹೆಸರಿನ ಎರಡು ಭಾಗಗಳ ಮಧ್ಯೆ ‘ಪೂರ್ವ’ ಎಂಬ ಮಾತನ್ನು ಮೊದಲನೆಯದು ಎಂಬ ಅರ್ಥದಲ್ಲಿ ಸೇರಿಸಿರುವುದು ಕಂಡು ಬರುತ್ತದೆ. ಉದಾಹರಣೆಗೆ ಶ್ರೀರಂಗ ಪಟ್ಟಣವನ್ನು ‘ಶ್ರೀರಂಗ ಪೂರ್ವ ಪಟ್ಟಣ’ ಎಂದು ಶಾಸನವೊಂದರಲ್ಲಿ ಬರೆಯಲಾಗಿದೆ.[16] ಅದೇ ರೀತಿ ಇಲ್ಲಿ ‘ಕೋಡವಳ್ಳಿ’ ಎನ್ನುವಲ್ಲಿ ‘ಕೋಡ’ ಮತ್ತು ‘ವಳ್ಳಿ’ ಪದಗಳ ಮಧ್ಯದಲ್ಲಿ ‘ಪೂರ್ವ’ ಪದವಾಗಿ ‘ಉಳ್ಳ’ ಎಂಬ ಅರ್ಥದಲ್ಲಿ ‘ಪೂರ್ವದ’ ಪದಗಳ ಮಧ್ಯದಲ್ಲಿ ‘ಪೂರ್ವ’ ಪದವಾಗಿ ‘ಉಳ್ಳ’ ಎಂಬ ಅರ್ಥದಲ್ಲಿ ‘ಪೂರ್ವದ’ ಎಂಬ ಪದವನ್ನು ಸೇರಿಸಿರುವುದು ಕಂಡು ಬರುತ್ತದೆ. ನಪುಂಸಕಲಿಂಗದ ಆ ಕಾರಾಂತ ನಾಮಪದಗಳಿಗೆ ಷಷ್ಠೀ ವಿಭಕ್ತಿ ಪ್ರತ್ಯಯವಾದ ‘ಅ’ ಸೇರುವಾಗ’ದ’ ಎಂಬ ಅಕ್ಷರಕ್ಕೆ ಬದಲಾಗಿ ‘ನ’ ಅಕ್ಷರವು ಆಗಮವಾಗುವುದು ಹಳಗನ್ನಡದಲ್ಲಿ ಉಂಟು. ಆ ಪ್ರಕಾರವಾಗಿ ಕೋಡ + ಆ = ಕೋಡನ ಎಂದಾಗಿದೆ. ‘ಕೋಡನ’ ಎಂಬ ಪದವು ಪೂರ್ವ ಪದವಾಗಿ ಉಳ್ಳ ಪಳ್ಳಿ (ವಳ್ಳಿ) ಎನ್ನುವಲ್ಲಿ ‘ಪೂರ್ವದ’ ಎಂಬ ಮಾತು ಸೇರಿ ‘ಕೋಡನ ಪೂರ್ವದವಳ್ಳಿ’ ಯಾಗಿದೆ. ಈ ಕೋಡವಳ್ಳಿಯು ಎಲ್ಲಿದೆಂಬುದನ್ನು ಈಗ ನಿರ್ಧರಿಸಬೇಕಾಗಿದೆ.

ಶಿಲಾಹಾರ ಗಂಡರಾದಿತ್ಯನು ಕ್ರಿ.ಶ. ೧೧೨೬ರ ಕೊಲ್ಲಾಪುರದ ತಾಮ್ರ ಶಾಸನದಲ್ಲಿ ದಾನವಾಗಿ ಕೊಟ್ಟ ಕೊಂನಿಜವಾಡ ಎಂಬ ಗ್ರಾಮವು ಕೋಡವಳ್ಳಿ ಕಂಪಣ. ಮಿರಿಂಜೆ ದೇಶದಲ್ಲಿತ್ತೆಂದು ಹೇಳಿದೆ.[17] ಒಂದು ಕಂಪಣದ ಮುಖ್ಯ ಗ್ರಾಮವಾಗಿದ್ದ ಕೋಡವಳ್ಳಿ ಟೀಕಾಕಾರ ನೇಮಿನಾಥನ ಸ್ಥಳವಾಗಿದ್ದಿರಬಹುದು. ಈ ಕೋಡವಳ್ಳಿಯ ಈಗಿನ ಹೆಸರು ಕೋಡೋಲಿ, ಇದು ಕೊಲ್ಲಾಪುರದ ಪೂರ್ವಕ್ಕೆ ಏಳು ಮೈಲಿಗಳ ಅಂತರದಲ್ಲಿದೆ. ಇದು ಆಗಿನ ರಾಜಧಾನಿ ಕೊಲ್ಲಾಪುರದ ಒಂದು ಉಪನಗರವಾಗಿದ್ದಿರಬೇಕು. ಹನ್ನೆರಡನೆಯ ಶತಾಬ್ದದ ಆದಿ ಭಾಗದಲ್ಲಿ ಕೊಲ್ಲಾಪುರದಲ್ಲಿ ಶಿಲಾಹಾರ ಅರಸು ಗಂಡರಾದಿತ್ಯನು ಆಳುತ್ತಿದ್ದನು. ಇವನ ಒಬ್ಬ ಸಾಮಂತನು ನಿಂಬರಸ. ಇವರಿಬ್ಬರೂ ಪ್ರಸಿದ್ಧ ಜೈನ ಮುನಿಯಾದ ಮಾಘಣಂದಿಯ ಶಿಷ್ಯರು. ಈ ಮೂವರು ಕೊಲ್ಲಾಪುರದ ಪರಿಸರದಲ್ಲಿ ಜೈನ ಬಸದಿಗಳನ್ನು ಕಟ್ಟಿಸಿ ಕೊಲ್ಲಾಪುರವನ್ನು ಒಂದು ದೊಡ್ಡ ಜೈನ ಕ್ಷೇತ್ರವನ್ನಾಗಿ ಮಾಡಿದರು. ಈ ಮಾಘಣಂದಿಯ ಶಿಷ್ಯ ಮೇಘಚಂದ್ರತ್ರೈವಿದ್ಯ ಮತ್ತು ಪ್ರಶಿಷ್ಯ ವೀರಣಂದಿ ಸೈದ್ಧಾಂತಿಕ. ಇವನ ಶಿಷ್ಯನೇ ನೇಮಿನಾಥ ಮಾಘಣಂದಿ ಮತ್ತು ಅವನ ಶಿಷ್ಯರು ಶ್ರೀಮೂಲ ಸಂಘ ಕೊಂಡಕುಂದಾನ್ವಯ, ದೇಸಿಗಣ, ಪುಸ್ತಕ ಗಚ್ಛಕ್ಕೆ ಸೇರಿದವರು.[18]

ಹನ್ನೆರಡನೆಯ ಶತಮಾನದಲ್ಲಿ ಕೊಲ್ಲಾಪುರದ ಶಿಲಾಹಾರರು ಜೈನ ಮತಕ್ಕೂ ಕನ್ನಡ ಸಾಹಿತ್ಯಕ್ಕೂ ಉದಾರವಾಗಿ ಪ್ರೋತ್ಸಾಹವನ್ನು ನೀಡಿದರು. ಅವರು ಕನ್ನಡಗರಾಗಿದ್ದುದೂ ಅವರ ಮಾತೃ ಭಾಷೆ ಕನ್ನಡವಾಗಿದ್ದು ದೂ ಅವರು ಕನ್ನಡಕ್ಕೆ ಪ್ರೋತ್ಸಾಹವಿತ್ತುದಕ್ಕೆ ಕಾರಣವೆನ್ನಬಹುದು. ಅವರ ಬಿರುದುಗಳು ಕನ್ನಡದಲ್ಲಿವೆ. ಅವರ ಶಾಸನಗಳೂ ಕನ್ನಡದಲ್ಲಿವೆ. ಕೊಲ್ಲಾಪುರದಲ್ಲಿ ಆಗಿನ ದಿನಗಳಲ್ಲಿ ಕನ್ನಡವು ಜನರ ಭಾಷೆಯಾಗಿತ್ತು. ಈ ಮಾಹಿತಿ ಎಲ್ಲವನ್ನೂ ಪ್ರೊ. ವಿ.ವಿ. ಮಿರಾಶಿಯವರು ಸಂಪಾದಿಸಿರುವ ಶಿಲಾಹಾರರ ಶಾಸನ ಸಂಪುಟದ ಮುನ್ನುಡಿಯ ಹಲವೆಡೆಗಳಲ್ಲಿ ಸ್ಪಷ್ಟಪಡಿಸಿದ್ದಾರೆ.[19] ಇದರಿಂದ ಜೈನ ನೇಮಿನಾಥನು ಸಂಸ್ಕೃತ ರಾಜನೀತಿ ಗ್ರಂಥವೊಂದರ ಕನ್ನಡ ಟೀಕೆಯನ್ನು ಬರೆಯುವುದಕ್ಕೆ ಪ್ರೇರಕವಾದ ವಾತಾವರಣವು ಆಗ ಕೊಲ್ಲಾಪುರದಲ್ಲಿ ಇತ್ತು ಎನ್ನುವುದು ಸ್ಪಷ್ಟವಾಗುತ್ತದೆ.

ಇನ್ನು ನೇಮಿನಾಥನು ಯಾರಲ್ಲಿ ಯಾವಾಗ ಸಂಧಿವಿಗ್ರಹಿಯಾಗಿದ್ದನೆನ್ನುವುದನ್ನು ನೋಡೋಣ. ಇದಕ್ಕೆ ಪೂರ್ವಭಾವಿಯಾಗಿ ಕೊಲ್ಲಾಪುರ ಮತ್ತು ವಿಜಯಾಪುರ (ಬಿಜಾಪುರ) ಗಳ ನಡುವಿನ ಸಂಬಂಧವನ್ನು ತಿಳಿಯಬೇಕಾದ್ದು ಅವಶ್ಯಕ. ಶಿಲಾಹಾರರೂ ಮತ್ತು ಮಾಘಣಂದಿಯ ಶಿಷ್ಯ ಪರಂಪರೆಯವರೂ ಈಗಾಗಲೇ ಹೇಳಿರುವಂತೆ ಜೈನ ಧರ್ಮಕ್ಕೂ ಕನ್ನಡ ಸಾಹಿತ್ಯಕ್ಕೂ ಕೊಲ್ಲಾಪುರದಲ್ಲಿ ಪ್ರೋತ್ಸಾಹ ಕೊಡುತ್ತಿದ್ದಂತೆ ಬಿಜಾಪುರದಲ್ಲಿ ನಾಗಚಂದ್ರನು (ಅಭಿನವಪಂಪನು) ಸಲ್ಲಿಸಿದ ಅಪಾರವಾದ ಸೇವೆಯು ಕನ್ನಡ ಸಾಹಿತಿಗಳಿಗೆ ತಿಳಿದಿರುವ ವಿಷಯ. ಆದರೆ ಕೊಲ್ಲಾಪುರಕ್ಕೂ ಅವನಿಗೂ ಇದ್ದ ಸಂಬಂಧವು ಅಷ್ಟಾಗಿ ತಿಳಿದಿಲ್ಲ. ನಾಗಚಂದ್ರನು “ಜನಪತಿಸಭೆಯೊಳ್ ಪೂಜ್ಯ” ನೆಂದು ಹೇಳಿಕೊಂಡಿರುವ ರಾಜಧಾನಿ ಸಭೆಯು ಕೊಲ್ಲಾಪುರದ ಶಿಲಾಹಾರರ ರಾಜಸಭೆಯಾಗಿರಬಹುದು.[20] ಅವನ ಮಗ ಸಿಂಗಿರಾಜನ ಸಲುವಾಗಿಯೇ ಮಾಘಣಂದಿಯ ಶಿಷ್ಯ ಮೇಘಚಂದ್ರತ್ರೈವಿದ್ಯನು ಪೂಜ್ಯಪಾದ ಕೃತ ಸಮಾಧಿಶತಕಕ್ಕೆ ಕ್ರಿ.ಶ. ೧೧೪೮ ರಲ್ಲಿ ಕನ್ನಡ ವ್ಯಾಖ್ಯಾನವನ್ನು ಬರೆದನೆನ್ನುವುದನ್ನು ಈ ಮೊದಲೇ ಹೇಳಿದೆ. ನಾಗಚಂದ್ರನ ಮೊಮ್ಮಗ (ಮಗನ ಮಗ) ಕೂಚಿರಾಜಯ್ಯನು ಶಿಲಾಹಾರ ಗಂಡರಾದಿತ್ಯನ ಮಂತ್ರಿ ಮತ್ತು ಸಂಧಿವಿಗ್ರಹಿಯಾಗಿದ್ದವನು. ಅವನ ಮಗ (ನಾಗಚಂದ್ರನ ಮರಿ ಮಗ) ಕಪ್ಪದೇವನು (ಕಪ್ಪಣಯ್ಯನು) ಗಂಡರಾದಿತ್ಯನ ನಂತರ ಆಳಿದ ವಿಜಯಾದಿತ್ಯನ ಸಂಧಿವಿಗ್ರಹಿಯಾಗಿದ್ದನು. ಈ ಸಂಧಿವಿಗ್ರಹಿಗಳ ಬಗೆಗೆ ಮಾಹಿತಿಯನ್ನು ಒದಗಿಸುವ ಕೊಲ್ಲಾಪುರದ ತಾಮ್ರ ಶಾಸನದ ಕಾಲ ಕ್ರಿ.ಶ.೧೧೫೪.[21] ಇವರಾದ ಮೇಲೆ ಶಿಲಾಹಾರರ ಆಸ್ಥಾನದಲ್ಲಿ ಯಾರು ಸಂಧಿವಿಗ್ರಹಿಯಾಗಿದ್ದರೆನ್ನುವುದು ತಿಳಿದುಬಂದಿಲ್ಲ.

ಟೀಕಾಕಾರ ನೇಮಿನಾಥನು ಕೊಲ್ಲಾಪುರದವನು. ಅವನೇ ಹೇಳಿಕೊಂಡಿರುವಂತೆ ಸಂಧಿವಿಗ್ರಹಿಯಾಗಿದ್ದವನು. ಅಲ್ಲಿಯ ಜನರೂ ಈ ವಿಷಯವನ್ನು ತಿಳಿದಿದ್ದರು. ನೀತಿವಾಕ್ಯಾಮೃತಾದಿ ರಾಜನೀತಿಶಾಸ್ತ್ರ ಗ್ರಂಥಗಳಲ್ಲಿ ತೀವ್ರವಾದ ಆಸಕ್ತಿಯುಳ್ಳವನಾಗಿದ್ದ. ಕೊಲ್ಲಾಪುರದ ನಿವಾಸಿಯೊಬ್ಬನು ಅಲ್ಲಿಯ ರಾಜಾಸ್ಥಾನದಲ್ಲಿ ಸಂಧಿವಿಗ್ರಹಿ ಯಾಗಿದ್ದನೆನ್ನುವುದರಲ್ಲಿ ಆಶ್ಚರ್ಯವೇನಿಲ್ಲ. ಕ್ರಿ.ಶ. ೧೧೫೪ರ ವರೆಗೆ ಸಂಧಿವಿಗ್ರಹಿಯಾಗಿದ್ದವರ ವಿವರವನ್ನು ಈಗಾಗಲೇ ತಿಳಿದಿದ್ದೇವೆ. ಅವರಾದ ಮೇಲೆ ನೇಮಿನಾಥನು ಆ ಶತಮಾನದ ಕೊನೆಯವರೆಗಿನ ಅವಧಿಯಲ್ಲಿ ಎಂದರೆ ವಿಜಯಾದಿತ್ಯ ಮತ್ತು ಎರಡನೆಯ ಭೋಜನ ಕಾಲದಲ್ಲಿ (ಕ್ರಿ. ಶ. ೧೧೫೪ ರಿಂದ ೧೨೧೨) ಕೆಲವು ವರ್ಷಗಳು ಸಂಧೀವಿಗ್ರಹಿಯಾಗಿದ್ದನೆಂದು ಊಹಿಸುವುದಕ್ಕೆ ಅವಕಾಶವಿದೆ. ಎರಡನೆಯ ಭೋಜನನ್ನು ಸೇವುಣ ಸಿಂಘಣನು ಗೆದ್ದು ಅವನ ರಾಜ್ಯವನ್ನು ಕ್ರಿ.ಶ. ೧೨೧೨ ರಲ್ಲಿ ತನ್ನ ರಾಜ್ಯಕ್ಕೆ ಸೇರಿಸಿಕೊಂಡನು. ಅದಕ್ಕೂ ಸ್ವಲ್ಪ ಮುಂಚೆ ಸು. ಕ್ರಿ.ಶ. ೧೨೦೦ ರಲ್ಲಿ ಕಲ್ಯಾಣದಲ್ಲಿ ಚಾಳುಕ್ಯರ ಆಳಿಕೆಯನ್ನು ಸೇವುಣರೇ ಕೊನೆಗಾಣಿಸಿದರು. ಇದರ ಪರಿಣಾಮವಾಗಿ ಕೊಲ್ಲಾಪುರ ಮತ್ತು ಚಾಳುಕ್ಯ ರಾಜ್ಯಗಳಿಂದ ಸಾಹಿತಿಗಳು, ಕಲಾವಿದರು ಮತ್ತು ಯೋಧರು ರಾಜಾಶ್ರಯವನ್ನು ಬಯಸಿ ಹೊಯ್ಸಳರ ಆಸ್ಥಾನಕ್ಕೆ ವಲಸೆ ಹೋಗಲಾರಂಭಿಸಿದರು. ಹಂಪೆಯ ಹರಿಹರ, ಬಳ್ಳಿಗಾವೆಯ ದಾಸೋಜ ಮತ್ತು ಗದುಗಿನ ಪ್ರದೇಶದ ಅಮಿತ ದಂಡನಾಯಕ ಇವರು ಇಂಥವರಲ್ಲಿ ಪ್ರಮುಖರು. ಇಂಥವರ ಹಾಗೆ ನೇಮಿನಾಥನೂ ಕೊಲ್ಲಾಪುರದಿಂದ ಹಳೇಬೀಡಿಗೆ ವಲಸೆ ಹೋಗಿರಬೇಕು. ಹಳೇಬೀಡಿನಲ್ಲಿ ಇವನು ಇದ್ದನೆನ್ನುವುದಕ್ಕೆ ಮೇಲೆ ಸೂಚಿಸಿರುವಂತೆ ಈತನು ಅಲ್ಲಿಯ ರಾಮಚಂದ್ರಮುನಿಯನ್ನು ಸ್ತುತಿಸಿರುವದೇ ಸಾಕ್ಷಿ. ಹಳೇಬೀಡಿಗೆ ಹೊಸಬನಾದ ನೇಮಿನಾಥನಿಗೆ ಅಲ್ಲಿಯ ಪ್ರತಿಷ್ಠಿತರ ನೆರವೂ ಅಗತ್ಯವಾಗಿ ಬೇಕಾಗುತ್ತಿತ್ತು. ಮಹಾಕವಿ ಜನ್ನನ ಗುರುವೂ ಪ್ರತಿಷ್ಠಿತ ವ್ಯಕ್ತಿಯೂ ಆಗಿದ್ದ ರಾಮಚಂದ್ರಮುನಿಯ ನೆರವು ವಿದ್ವಾಂಸನೂ ಸಂಧಿವಿಗ್ರಹಿಯಾಗಿದ್ದವನೂ ಆದ ನೇಮಿನಾಥನಿಗೆ ದೊರಕಿದುದರಲ್ಲಿ ಆಶ್ಚರ್ಯವೇನಿಲ್ಲ. ನೇಮಿನಾಥನು ಹನ್ನೆರಡನೆಯ ಶತಮಾನದ ಕೊನೆಯ ದಶಕದಲ್ಲಿಯೂ ಮತ್ತು ಹದಿಮೂರನೆಯ ಶತಮಾನದ ಮೊದಲ ದಶಕದಲ್ಲಿಯೂ ಪ್ರಭಾವಶಾಲಿಯಾಗಿದ್ದ ರಾಮಚಂದ್ರಮುನಿಯ ಸಮಕಾಲೀನನಾಗಿದ್ದನೆನ್ನುವದನ್ನು ಹಿಂದೆ ನೋಡಿದ್ದೇವೆ. ನೇಮಿನಾಥನು ಕೊಲ್ಲಾಪುರದಲ್ಲಿ ಸಂಧಿವಿಗ್ರಹಿಯಾಗಿದ್ದು ನಿವೃತ್ತನಾದ ಮೇಲೆ ಅಲ್ಲಿಂದ ಹಳೇಬೀಡಿಗೆ ವಲಸೆ ಹೋಗಿ ಅಲ್ಲಿ ನೆಲೆಯಾಗಿ ನಿಂತ ಮೇಲೆ ನೀತಿವಾಕ್ಯಾಮೃತದ ಕನ್ನಡ ಟೀಕೆಯನ್ನು ಸು. ಕ್ರಿ.ಶ. ೧೨೦೦ ರಲ್ಲಿ ರಚಿಸಿರಬೇಕೆಂದು ಹೇಳಬಹುದು.

೪. ಗ್ರಂಥಪಾಠ

ಮೂಡಬಿದರೆ ಜೈನಮಠ ಭಂಡಾರದ ಲಿಪಿಯ ತಾಳೆಯೋಲೆಯ ಪ್ರತಿಯ ಪಾಠವನ್ನು ಮೂಲಪಾಠವಾಗಿಟ್ಟುಕೊಂಡು, ಮೈಸೂರು, ವಾರಣಾಸಿ, ಜಯಪುರ ಮತ್ತು ಮುಂಬಯಿ ನಾಗರಿಲಿಪಿಯ ಮತ್ತು ಹೈದರಾಬಾದಿನ ತೆಲುಗು ಲಿಪಿಯ ಪ್ರತಿಗಳನ್ನು ಮೂಲ ಸಂಸ್ಕೃತ ವಾಕ್ಯಗಳ ಪಾಠವನ್ನು ನಿಷ್ಕರ್ಷಿಸುವ ಸಂದರ್ಭದಲ್ಲಿ ಉಪಯೋಗಿಸಿಕೊಳ್ಳಲಾಗಿದೆ. ಭಾವಾನುವಾದವನ್ನು ಬರೆಯುವಲ್ಲಿಯೂ ಇವುಗಳಿಂದ ಸಹಾಯವಾಗಿದೆ. ಕನ್ನಡ ಟೀಕೆಯಿರುವುದು ಒಂದೇ ಪ್ರತಿಯಾದ್ದರಿಂದ ಲಿಪಿ ದೋಷಗಳನ್ನು ಮಾತ್ರ ತಿದ್ದಿ ಟೀಕೆಯ ಪಾಠವನ್ನು ಕೊಡಲಾಗಿದೆ.

ಪ್ರತಿಗಳ ವಿವರಗಳು

೧. ತಾಳೆಯೋಲೆಯ ಪ್ರತಿ : ಮೂಡಬಿದರೆಯ ಜೈನ ಮಠ ಭಂಡಾರದ ೪೫ ನೆಯ ಕ್ರಮಾಂಕದ ಓಲೆ ಪ್ರತಿ. ಇದರಲ್ಲಿ ೮೯ ಪತ್ರಗಳಿವೆ ಪತ್ರದ ಎರಡು ಕಡೆಗಳಲ್ಲಿಯೂ ಒಟ್ಟು ೨೦ ಪಂಕ್ತಿಗಳಿವೆ. ಪ್ರತಿ ಪಂಕ್ತಿಯಲ್ಲಿಯೂ ೧೨೯ ಅಕ್ಷರಗಳಿವೆ. ಬರವಣಿಗೆ ಶುದ್ಧವಾಗಿದೆ. ಗ್ರಂಥವು ಪೂರ್ಣವಾಗಿದೆ. ಕೆಲವು ಬರವಣಿಗೆಯ ತಪ್ಪುಗಳಿವೆ. ಲಿಪಿಕಾರನು ಕೆಲವೆಡೆಗಳಲ್ಲಿ ಅರ್ಥಸ್ಪಷ್ಟನೆಗಾಗಿ ಕನ್ನಡ ಟೀಕೆಗೂ ಟಿಪ್ಪಣಿಯನ್ನು ಬರೆದಿದ್ದಾನೆ. ಮೂಲದಲ್ಲಿ ಸಂಸ್ಕೃತ ವಾಕ್ಯವನ್ನು ಟೀಕೆಯನ್ನೂ ಒಟ್ಟಾಗಿ ಬರೆಯಲಾಗಿದೆ. ಅರ್ಥ ಬರೆಯುವಾಗ ಸಮಸ್ತಪದಗಳನ್ನು ಬಿಡಿಸಿ ಶಬ್ದಶಃ ಅರ್ಥವನ್ನು ಬರೆದಿದ್ದಾನೆ. ಇದು ಓಲೆಯ ಪ್ರತಿಯನ್ನು ಬರೆದು ಕಳುಹಿಸಿದ ಪಂಡಿತ ಶ್ರೀ ಬಿ.ದೇವಕುಮಾರಶಾಸ್ತ್ರಿ ಅವರು ತಾಳೆಯೋಲೆಯ ಪ್ರತಿಯ ಬಗ್ಗೆ ತಿಳಿಸಿರುವ ವಿವರಗಳು.

೪೫ ನೆಯ ಕ್ರಮಾಂಕದ ಓಲೆಯ ಪ್ರತಿಯ ೬೬ನೆಯ ಓಲೆಯ ಮುಂಭಾಗದ ೧೫ನೆಯ ವಾಕ್ಯದ ವೃತ್ತಿಯ ಕೆಲವು ಪಂಕ್ತಿಗಳಾದ ಮೇಲೆ ೨೦ನೆಯ ವಾಕ್ಯದ ವೃತ್ತಿಯ ಪ್ರಾರಂಭದ ಕೆಲವು ವಾಕ್ಯಗಳವರೆಗಿನ ಪಾಠವು ಲುಪ್ತವಾಗಿದ್ದುದರಿಂದ ೬೯೩ ನೆಯ ಓಲೆಯ ಪ್ರತಿಯ ೧೨೬ ಮತ್ತು ೧೨೭ನೆಯ ಪತ್ರಗಳಲ್ಲಿರುವ ಪಾಠವನ್ನು ಪಂಡಿತ ಶ್ರೀ ಬಿ. ದೇವೇಂದ್ರಕುಮಾರ ಶಾಸ್ತ್ರಿ ಅವರು ಬರೆದು ಕಳುಹಿಸಿದ್ದಾರೆ. ಇದರಿಂದ ಗ್ರಂಥದ ಪಾಠವು ಪೂರ್ಣವಾದಂತಾಗಿದೆ. ಆದರೆ ೬೯೩ನೆಯ ಓಲೆಯ ಪ್ರತಿಯಲ್ಲಿರುವುದು ಮೂಲದ ವಾಕ್ಯಗಳು ಮತ್ತು ವಾಕ್ಯಗಳ ಸಂಸ್ಕೃತ ಟೀಕೆ. ಆದ್ದರಿಂದ ಈ ಭಾಗದ ಕನ್ನಡ ವೃತ್ತಿ ಇಲ್ಲವಾಗಿದೆಯಾಗಿ ಈ ಭಾಗದ ಭಾವಾರ್ಥವನ್ನು ಮಾತ್ರ ಕೊಡಲಾಗಿದೆ.

೨. ಮುದ್ರಿತ ಪ್ರತಿಕೆಗಳು :

೧. ಕೌಟಲೀಯಾರ್ಥಶಾಸ್ತ್ರ ಸಂಗ್ರಹ : ಬೃಹಸ್ಪತಿ ಚಾಣಕ್ಯ ಸೋಮದೇವಾನಾಂ ನೀತಿಸೂತ್ರಾಣಿ ಚ. ಸಂಪಾದಕ : ವಿದ್ವಾನ್ ಎನ್.ಎಸ್. ವೆಂಕಟನಾಥಾಚಾರ್ಯ, ಪ್ರಾಚ್ಯ ಸಂಶೋಧನ ಸಂಸ್ಥೆ ಮೈಸೂರು ೧೯೫೭, (ನಾಗರಿ ಅಕ್ಷರ ಪ್ರತಿ) (ಮೈಸೂರು ಪ್ರತಿ) ಸಂಕೇತಾಕ್ಷರ ‘ಮೈ’

೨. Nitivakyamritam of Somadeva Suri with extensive Hindi commentary by Ramachandra Malaviya- published by Choukhamba Vidya Bhavan, Varanasi, 1972. (ನಾಗರಿ ಅಕ್ಷರ ಪ್ರತಿ) (ಚೌಖಂಬಾ ಪ್ರತಿ) ಸಂಕೇತಾಕ್ಷರ ‘ಚೌ’.

೩. Somadeva Suri’s Nitivakyamritam (10th century Sanskrit Treatise on Statecraft), Original text with Hindi and English Translations. Translated by Dr. Sudhirkumar Gupta-Publishers : Prakrita Bharati Academy, Jaipur. Modi Foundation Calcutta, 1987 (ನಾಗರಿ ಅಕ್ಷರ ಪ್ರತಿ) (ಜಯಪುರ ಪ್ರತಿ) ಸಂಕೇತಾಕ್ಷರ ‘ಜ’

೪. ನೀತಿವಾಕ್ಯಾಮೃತಂ (ಸೋಮದೇವಸೂರಿ ನೀತಿಸೂತ್ರಾಲು) ಆಂಧ್ರ ವಾಖ್ಯಾ- ಡಾ.ಪುಲ್ಲೆಲ ಶ್ರೀ ರಾಮಚಂದ್ರುಡು. ಪ್ರಚುರಣ-ಸಂಸ್ಕೃತ ಭಾಷಾ ಪ್ರಚಾರ ಸಮಿತಿ (ಜಿ.ಪುಲ್ಲಾರೆಡ್ಡಿ ಚಾರಿಟೀಸ್ ಟ್ರಸ್ಟ್ ಅನುಬಂಧ ಸಂಸ್ಥೆ); ಹೈದರಾಬಾದು, ೧೯೯೫ (ತೆಲುಗು ಪ್ರತಿ). ಈ ಗ್ರಂಥವನ್ನು ಒದಗಿಸಿಕೊಟ್ಟವರು. ಚಿ. ರಾ. ಆರ್. ನಾಗರಾಜ ದೀಕ್ಷಿತ್, ಹೈದರಾಬಾದು (ಹೈದರಾಬಾದು ಪ್ರತಿ).

೫. ಶ್ರೀಮತ್ಸೋಮದೇವಸೂರಿ ವಿರಚಿತಮ್ ನೀತಿವಾಕ್ಯಾಮೃತಮ್ ಕಶ್ಚಿದತಜ್ಞಾ ಪಂಡಿತ ಪ್ರಣೀತ ಟೀಕೋಪೇತಮ್, ಸಂಶೋಧಕ- ಶ್ರೀಮತ್ಪಂಡಿತ ಪನ್ನಾಲಾಲ ಸೋನಿ. ಪ್ರಕಾಶಿಕಾ- ಮಾಣಿಕ ಚಂದ್ರ ದಿಗಂಬರ ಜೈನ ಗ್ರಂಥಮಾಲಾ ಸಮಿತಿ. ಗ್ರಂಥಸಂಖ್ಯಾ ೨೨. ಬೊಂಬಾಯಿ, ವಿಕ್ರಮ ಶಕೆ ೧೯೭೯ (ನಾಗರಿ ಲಿಪಿ)

ಈ ಎಲ್ಲ ಪ್ರತಿಗಳಿಂದಲೂ ವಾಕ್ಯಗಳ ಪಾಠ ಪರಿಷ್ಕರದಲ್ಲಿಯೂ ಭಾವಾನುವಾದವನ್ನು ಸಿದ್ಧಪಡಿಸುವುದರಲ್ಲಿಯೂ ಸಹಾಯ ದೊರಕಿದೆ.

 

ಆಚಾರ್ಯ ಶ್ರೀಸೋಮದೇವ ವಿರಚಿತಂ
ನೀತಿವಾಕ್ಯಾಮೃತಂ
(ಶ್ರೀ ನೇಮಿನಾಥ ವಿರಚಿತಂ ಕರ್ಣಾಟಕ ವ್ಯಾಖ್ಯಾನ ಸಹಿತಂ || )

|| ಮಂಗಲಾಚರಣಂ ||

[1]ಸೋಮಂ ಸೋಮಸಮಾಕಾರಂ ಸೋಮಾಭಂ ಸೋಮಸುಂದರಂ[2] ||
ಸೋಮದೇವಂ ಮುನಿಂ ನತ್ವಾ ನೀತಿವಾಕ್ಯಾಮೃತಂ ಬ್ರುವೇ
||

ಅರ್ಥ : ಸೋಮಾಭಂ = ಚಂದ್ರಭಸ್ವಾಮಿಯಂ, ಸೋಮಂ = ಕೀರ್ತಿಯೊಳ್ ಕೂಡಿದವನಂ, ಸೋಮಸಮಾಕಾರಂ = ಚಂದ್ರನಂ ಪೋಲ್ವಾಕಾರಮುಳ್ಳನಂ, ಸೋಮಸಂಭವಂ = ಸೋಮವಂಶದೊಳ್ ಪುಟ್ಟಿದನಂ, ಸೋಮದೇವಂ = ಚಂದ್ರಲಾಂಛನದೊಳ್ ಕೂಡಿದನಂ, ಮುನಿಂ = ಪ್ರತ್ಯಕ್ಷ ಜ್ಞಾನಿಯಂ, ನತ್ವಾ = ಸ್ತುತಿಯಿಸಿ, ನೀತಿವಾಕ್ಯಾಮೃತಂ = ನೀತಿವಾಕ್ಯಾಮೃತಮೆಂಬ ನೀತಿಶಾಸ್ತ್ರಮಂ, ಬ್ರುವೇ = ಪೇಳ್ವೆಂ ||

 

[1]ಈ ಶ್ಲೋಕದಲ್ಲಿ ಗೃಂಥಕರ್ತನು ಅಂದರೆ ಸೋಮದೇವನು ತನ್ನ ಗುರುವಾದ ಸೋಮದೇವಮುನಿಯನ್ನು ಸ್ತುತಿಸಿದಂತೆ ತೋರುತ್ತದೆ. ಅವನು ಚಂದ್ರನೆಂದೂ, ಚಂದ್ರನಂತೆ ಆಕಾರವುಳ್ಳವನೆಂದೂ, ಪ್ರಕಾಶವುಳ್ಳವನೆಂದೂ, ಸುಂದರನೆಂದೂ, ಬಣ್ಣಿಸಿ ಇಂಥ ಸೋಮದೇವಮುನಿಯನ್ನು ನಮಿಸಿ ನೀತಿವಾಕ್ಯಾಮೃತವನ್ನು ಬರೆಯುತ್ತಿದ್ದೇನೆಂದು ಹೇಳಿದ್ದಾನೆ.

ವ್ಯಾಖ್ಯಾನಕಾರನಾದ ನೇಮಿನಾಥನು ಸೋಮಾಭಂ ಎಂಬ ಶಬ್ದಕ್ಕೆ ಚಂದ್ರಪ್ರಭಸ್ವಾಮಿ ಎಂದು ಅರ್ಥ ಮಾಡಿ ಗ್ರಂಥಕರ್ತನು ೮ನೇ ತೀರ್ಥಂಕರನಾದ ಚಂದ್ರಪ್ರಭಸ್ವಾಮಿಯನ್ನು ಸ್ತುತಿಸಿದ್ದಾನೆಂದು ಸೂಚಿಸಿದ್ದಾನೆ. .

[2]ಸೋಮಸುಂದರಂ ಎಂಬದನ್ನು ವ್ಯಾಖ್ಯಾನಕಾರನು ವ್ಯಾಖ್ಯಾನದಲ್ಲಿ ಸೋಮಸಂಭವಂ ಎಂದು ಹೇಳಿ ಸೋಮವಂಶದಲ್ಲಿ ಹುಟ್ಟಿದವನು ಎಂದು ಅರ್ಥಮಾಡಿದ್ದಾನೆ. ಇದು ಸರಿ ಎನಿಸುವುದಿಲ್ಲ. ಇದೇ ರೀತಿಯಾಗಿ ಸೋಮದೇವಂ ಎಂಬ ಪದಕ್ಕೆ ಚಂದ್ರಲಾಂಛನದೊಳ್ ಕೂಡಿದನಂ ಅಂದರೆ ಚಂದ್ರಲಾಛನವುಳ್ಳವನು ಎಂದು ಅರ್ಥ ಮಾಡಿದ್ದಾನೆ. ಆದರೆ ಇದು ಮುನಿಯ ಹೆಸರು ಎಂಬುದು ಸ್ಪಷ್ಟವಿದೆ. ಹಾಗೆಯೇ ಶ್ಲೋಕದ ಮೊದಲ ಶಬ್ದವಾದ ಸೋಮಂ ಎಂಬ ಪದಕ್ಕೆ ಕೀರ್ತಿಯೊಳ್ ಕೂಡಿದವನಂ ಎಂದು ಅರ್ಥ ಕೊಟ್ಟಿದ್ದಾನೆ. ಇದು ಅನವಶ್ಯಕ. ಈ ಶ್ಲೋಕವು ಮೈಸೂರು (ಮೈ) ಮತ್ತು ಚೌಖಂಬಾ (ಚೌ) ಪ್ರತಿಗಳಲ್ಲಿ ಇಲ್ಲ

 

[1]Srikantha Shastri S., Sources of karnatak History pp 94-95

[2]ಜಿನವಲ್ಲಭನ ಗಂಗಾಧರಂ ಶಾಸನ, ಭಾರತಿ, (ತೆಲುಗು) ಮಾರ್ಚ ೧೯೬೭, ಪು. ೧೦-೨೩

[3]ಪರಭಣಿ ತಾಮ್ರಶಾಸನ (ಲೇಂ) ಬುಲಪಾಟಕನಾಮಧೇಯನಿಜರಾಜಧಾನ್ಯಾಂ ನಿಜಪಿತುಃ ಶ್ರೀಮದ್ವದ್ಯಗಸ್ಯ ಶುಭಧಾಮಜಿನಾಲಯಾಖ್ಯಬಸ (ತೇಃ) ಖಂಡಸ್ಫುಟಿತನವಸುಧಾಕರ್ಮಬಲಿನಿವೇದ್ಯಾರ್ಥಂ ಶಕಾಬ್ದೇಶ್ವಷ್ಟಾಶೀತ್ಯಧಿ ಕೇಶ್ವಷ್ಟತೇಷುಗತೇಷು…. ತೇನ ಶ್ರೀಮದರಿಕೇಸರಿನಾ…. ಶ್ರೀಮತ್ಸೋ ಮದೇವಸೂರಯೇ ವನಿಕಟಪುಳು ನಾಮಾ ಗ್ರಾಮಃ …. ದತ್ತ (Handiqui k. k. Yasastilaka and Indian Culture 4-5).

[4]ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ. ೨: ಕೊಪ್ಪಳ ಜಿಲ್ಲೆ, ಸಂಖ್ಯೆ ೯೫.

[5]Winternitz, M., History of Indian Literature (HIL), Vol. III p. 634.

[6]ವೆಂಕಟನಾಥಾಚಾರ್ಯ ಎನ್. ಎಸ್., ಸಂ. ಕೌಟಿಲೀಯಂ ಅರ್ಥಶಾಸ್ತ್ರಂ, ಪು. ೧೦.

[7]HIL. Vol. III, p. 638

[8]ಅನಂತ ರಂಗಾಚಾರ್ ಎನ್. (ಸಂ. ) ದುರ್ಗಸಿಂಹನ ಕರ್ನಾಟಕ ಪಂಚತಂತ್ರ, (ದು. ಪಂ. ), ಪೀಠಿಕೆ ಪು. ೨೬, ಪೀಠಿಕಾ ಪ್ರಕರಣ ವ, ೮. ೪೧. ಆಶ್ವಾಸಾಂತ್ಯ ಗದ್ಯಗಳು ಪು. ೧೩೪, ೧೪೭, ೨೦೨, ೨೧೦, ೨೩೯.

[9]ಅದೇ, ಪೀಠಿಕಾ ಪ್ರಕರಣ ಪದ್ಯ ೬೨.

[10]ಅದೇ ಸಮುದ್ದೇಶ ೨೩. ವಾಕ್ಯ ೧೧ ಪು. ೮೩-೮೭, ೧೦೭,
ಸಮುದ್ದೇಶ ೨೮, ವಾಕ್ಯ ೮ ಪು. ೧೧೦-೧೧೧,
ಸಮುದ್ದೇಶ ೨೯, ವಾಕ್ಯ ೩೩ ಪು. ೬೭-೭೦.

[11]ಭುಜಬಲ ಶಾಸ್ತಿ, ಕೆ., ನೀತಿವಾಕ್ಯಾಮೃತ ಔರ್ ಕನ್ನಡ ಕವಿ ನೇಮಿನಾಥ

[12]ಕರ್ನಾಟಕ ಕವಿಚರಿತೆ (ಕ. ಚ. ) ಸಂ. ೧, ಪು. ೧೮೪

[13]ಅದೇ, ಪು. ೧೨೭

[14]ಅದೇ, ಪು. ೩೨೬.

[15]Epigraphia Carnatica, Vol. V (New Edn. ) BI 129.

[16]Ibid., Vol. 10. CN. 28 : ಕೃತ್ವಾ ಶ್ರೀರಂಗಪೂರ್ವಂ…. . ಪಟ್ಟಣಂ

[17]Mirashi V. V. Inscriptions of the Silaharas, No. 48

[18]Ibid., p. li.

[19]Ibid., p. vi and lxxix

[20]ಕಲಬುರ್ಗಿ ಎಂ. ಎಂ., ಗೋವಿಂದ ಪೈ ಸಂಶೋಧನಾ ಸಂಪುಟ ಪು. ೪೭೬.

[21]Katti Madhav N., Journal of the Epigraphical Society of India, Vol. 4, 1987 (Copper plate inscription of Silahara Vijayaditya)