ನದೀರಯಸ್ತರೂಣಾಮಂಘ್ರೀನ್ ಕ್ಷಾಲಯನ್ನಪ್ಯುನ್ಕ್ರೂಲಯತಿ || ೧೪೭ || ೪೨೨ ||

ಅರ್ಥ : ನದೀಯರಯಃ = ತೊಱೆವೊನಲ್, ತರೂಣಾಂ = ಮರಗಳ, ಅಂಘ್ರೀನ್ = ಬೇರ್ಗಳಂ, ಕ್ಷಾಲಯನ್ನಪಿ = ತೊಳೆಯುತ್ತಿರ್ದುದಾಗಿಯುಂ, ಉನ್ಮೂಲಯತಿ = ಬೇರಿಂದಂ ಕಿಳ್ತು ಕೆಡಪುವುದು || ಇಂತಪ್ಪಂಗೆ ಕಾರ್ಯಮಾಗದೆಂಬುದುತ್ತರವಾಕ್ಯಂ :

ಉತ್ಸುಕೋ[1]ಹಸ್ತಗತಮಪಿ ಕಾರ್ಯಂ ವಿನಾಶಯತಿ || ೧೪೮ || ೪೨೩ ||

ಅರ್ಥ : ಉತ್ಸುಕಃ = ವೇಗಿಯಪ್ಪಂ (ತವಕವುಳ್ಳವನು) ಕಾರ್ಯಂ = ಪ್ರಯೋಜನಮಂ, ಹಸ್ತಗತಮಪಿ = ಕೈಗೆವಂದುದುಮಂ, ವಿನಾಶಯತಿ = ಕಿಡಿಸುಗುಂ || ಪದುಳಿದನಾಗವೇಳ್ಕುಮೆಂಬುದು ತಾತ್ಪರ್ಯಂ || ಉಪಾಯಮಂ ಬಲ್ಲನ ಶಕ್ತಿಯಂ ಪೇಳ್ವುದುತ್ತರವಾಕ್ಯಂ :

ನಾಲ್ಪಂ ಮಹದ್ವಾ ಕಾರ್ಯಮುಪಾಯಜ್ಞಸ್ಯ[2]|| ೧೪೯ || ೪೨೪ ||

ಅರ್ಥ : ಕಾರ್ಯಂ = ಕಾರ್ಯವು, ಅಲ್ಪಂ = ಕಿಱಿದು, ಮಹತ್ ವಾ = ಪಿರಿದುಮೆಂದು ಮೇಣ್, ನ = ಇಲ್ಲ, ಉಪಾಯಜ್ಞಸ್ಯ = ಉಪಾಯಮಂ ಬಲ್ಲಂಗೆ || ಕಾರ್ಯಮನೆಂತಪ್ಪುದುಮಂ ಬಲ್ಲನೆಂಬುದು ತಾತ್ಪರ್ಯಂ || ಅದಕ್ಕೆ ದೃಷ್ಟಾಂತ ಪೇಳ್ವುದುತ್ತರವಾಕ್ಯಂ :

ಸರಿತ್ಪೂರಃ ಸಮವೇವೋನ್ಮೂಲಯತಿ ತೀರತೃಣದ್ರುಮಾನ್ || ೧೫೦ || ೪೨೫ ||

ಅರ್ಥ : ಸರಿತ್ಪೂರಃ = ತೊಱೆವೊನಲ್, ತೀರತೃಣದ್ರಮಾನ್ = ತಡಿಯ ಪುಲ್ಲುಂ, ಮರಂಗಳುಮಂ, ಸಮಮೇವ = ಒರ್ಮೆಯೇ, ಉನ್ಮೂಲಯತಿ = ಬೇರಿಂ ಕೀಳ್ಗುಂ || ಇಂತಪ್ಪ ವಚನಮಂ ಕೈಗೊಳ್ವುದೆಂಬುದುತ್ತರವಾಕ್ಯಂ :

ಯುಕ್ತ ಮುಕ್ತಂ ಬಲಾದಪಿ ಗೃಹ್ಣೀಯಾತ್ || ೧೫೧ || ೪೨೬ ||

ಅರ್ಥ : ಯುಕ್ತಂ = ತಕ್ಕ, ಉಕ್ತಂ = ವಚನಮಂ, ಬಾಲಾದಪಿ = ಕಿಱುಗೂಸಿನದತ್ತಣಿಂದಮುಂ, ಗೃಹ್ಣೀಯಾತ್ = ಕೈಕೊಳ್ಗೆ || ಉಚಿತಮನಾರೆಂದೊಡಂ ಕೈಕೊಳ್ವುದೆಂಬುದು ತಾತ್ಪರ್ಯಂ || ಅದಕ್ಕೆ ದೃಷ್ಟಾಂತಮಂ ಪೇಳ್ವುದುತ್ತರವಾಕ್ಯಂ :

—-

೧೪೭. ನದಿಯ ಪ್ರವಾಹವು ದಡದ ಮರಗಳ ಬೇರುಗಳನ್ನು ತೊಳೆಯುತ್ತ ಬೇರು ಸಹಿತ ಕಿತ್ತುಹಾಕುತ್ತದೆ.

೧೪೮. ಆತುರಗಾರನು ಕೈಯಲ್ಲಿಯ ಕಾರ್ಯವನ್ನೂ ನಾಶಗೊಳಿಸುತ್ತಾನೆ.

೧೪೯. ಉಪಾಯವನ್ನು ಬಲ್ಲವನಿಗೆ ಕಾರ್ಯವು ದೊಡ್ಡದು ಸಣ್ಣದು ಎಂಬುದೇನೂ ಇಲ್ಲ.

೧೫೦. ನದಿಯ ಪ್ರವಾಹವು ತೀರದ ಹುಲ್ಲನ್ನೂ ಮರವನ್ನೂ ಒಂದೇ ಸಮನಾಗಿ ಬೇರುಸಹಿತ ಕೀಳುವುದು.

೧೫೧. ಯೋಗ್ಯವಾದ ಮಾತನ್ನು ಕಿರುಗೂಸಿನಿಂದಾದರೂ ಗ್ರಹಿಸಬೇಕು.

—-

ರವೇರವಿಷಯೇ ಕಿಂ ನ ಪ್ರಕಾಶಯತಿ ದೀಪಃ || ೧೫೨ || ೪೨೭ ||

ಅರ್ಥ : ರವೇಃ = ಆದಿತ್ಯಂಗೆ, ಅವಿಷಯೇ = ಪೊಲ್ಲನಲ್ಲದಲ್ಲಿ, ದೀಪಃ = ಸೊಡರ್, ಕಿಂ ನ ಪ್ರಕಾಶಯತಿ = ಏಂ ಬೆಳಗದೇ ||

ಅಲ್ಪಮಪಿ ವಾತಾಯನವಿವರಂ ಬಹೂನುಪಲಂಭಯತಿ || ೧೫೩ || ೪೨೮ ||

ಅರ್ಥ : ಅಲ್ಪಮಪಿ = ಕಿಱಿದಾಗಿಯುಂ, ವಾತಾಯನವಿವರಂ = ಗವಾಕ್ಷಂ, ಬಹೂನ್ = ಪಲವು, ಉಪಲಂಭಯತಿ = ತೋಱುವುದು || ನಿರರ್ಥಕಮಂ ನುಡಿಯಲಾಗದೆಂಬುದಂ ದೃಷ್ಟಾಂತದಿಂ ಪೇಳ್ವುಪರ್ :

ಪತಿಂವರಾ ಇವ ಪರಾರ್ಥಂ ವಾಚಃ ಖಲು ತಾಶ್ಚ ನಿರರ್ಥಕಂ ಪ್ರಕಾಶ್ಯಮಾನಾಃ ಶಪಯಂತ್ಯವಶ್ಯಂ ಜನಯಿತಾರಂ || ೧೫೪ || ೪೨೯ ||

ಅರ್ಥ : ಪತಿಂವರಾ ಇವ = ಕೊಡಗೂಸುಗಳಂತೆ, ವಾಚಃ = ವಚನಂಗಳೂ, ಖಲು = ನೆಟ್ಟನೆ, ಪರಾರ್ಥಂ = ಪೆಱರ್ಗೆ ಪ್ರಯೋಜನಂಗಳು, ತಾಶ್ಚ = ಆವುಂ, ನಿರರ್ತಕಂ = ನಿರರ್ತಕಮಲ್ಲದೆ, ಪ್ರಕಾಶ್ಯಮಾನಾಃ = ಪ್ರಕಟಿಸೆಪಡುತ್ತಿರ್ದವು, ಅವಶ್ಯಂ = ನಿಶ್ಚಯದಿಂದಂ, ಜನಯಿತಾರಃ = ಪುಟ್ಟಿಸು (ತಂದೆತಾಯನು ಕಾರ್ಯಾವ ಹೇಳಿದಾತನನು ಮೇಣ್)ವಾತನಂ ಶಪಯಂತಿ = ಬಯಿಸುವುದು || ಸಾರ್ಥಕವಚನಂಗಳಂ ನುಡಿವುದೆಂಬುದು ತಾತ್ಪರ್ಯಂ || ಇಂತಪ್ಪನಲ್ಲಿ ವಚನಮಂ ಪ್ರಯೋಗಿಸಲಾಗದೆಂಬುದುತ್ತರವಾಕ್ಯಂ :

[3]ತತ್ರ ಯುಕ್ತಮಪ್ಪಯುಕ್ತಮನುಕ್ತಸಮಂ ಯೋ ನ ವಿಶೇಷಜ್ಞಃ || ೧೫೫ || ೪೩೦ ||

ಅರ್ಥ : ತತ್ರ = ಆತನೊಳ್, ಯುಕ್ತಮಪಿ = ಉಚಿತಮಪ್ಪುದುಂ, ಉಕ್ತಂ = ನುಡಿ, ಅನುಕ್ತಂ = ನುಡಿಯಲ್ಲದುದಱೊಡನೆ, ಸಮಂ = ಸಮಾನಂ, ಯಃ = ಆವನೋರ್ವಂ, ನ ವಿಶೇಷಜ್ಞಃ = ವಿಶೇಷಮನಱಿಯಂ || ಅಱೀಯದನೊಳ್ ನುಡಿಯಲಾಗದೆಂಬುದು ತಾತ್ಪರ್ಯಂ || ಇಂತಪ್ಪಂಗೆ ಕಾರ್ಯಮನಱಿಪಲಾಗದೆಂಬುದುತ್ತರವಾಕ್ಯಂ :

—-

೧೫೨. ಸೂರ್ಯನಿಗೆ ಕಾಣದ ವಸ್ತುವನ್ನು ದೀಪವು ಪ್ರಕಾಶಪಡಿಸುವುದಿಲ್ಲವೆ?

೧೫೩. ಕಿಟಕಿಯ ಸಣ್ಣದಾದರೂ ಅನೇಕ ವಸ್ತುಗಳನ್ನು ಕಾಣುವಂತೆ ಮಾಡುತ್ತದೆ.

೧೫೪. ಕನ್ಯೆಯರಂತೆ ಮಾತುಗಳು ಸಹ ಇತರರಿಗಾಗಿಯೇ ಇರತಕ್ಕವು. ಅವುಗಳನ್ನು ವ್ಯರ್ಥವಾಗಿ ಪ್ರಕಟಪಡಿಸಿದರೆ ತಂದೆ ತಾಯಿಗಳು ಶಾಪಕ್ಕೆ ಗುರಿಯಾಗುತ್ತಾರೆ.

೧೫೫. ಹೇಳಿದ್ದರಲ್ಲಿರುವ ವಿಶೇಷಾರ್ಥವನ್ನು ಗ್ರಹಿಸಲಾರದವನಿಗೆ, ಏನು ಹೇಳಿದರೂ ಹೇಳದಿದ್ದ ಹಾಗೆಯೇ.

—-

ಸ ಖಲು ಪಿಶಾಚಕೀ ವಾತಕೀ[4]ವಾ ಯಃ ಪರೇsನರ್ಥಿನಿ ವಾಚಮುದೀರಯತಿ || ೧೫೬ || ೪೩೧ ||

ಅರ್ಥ : ಸ ಖಲು = ಆತನೇ, ಪಿಶಾಚಕೀ = ಮರುಳ್, ವಾತಕೀ ವಾ = ವಾತಕಂ ಮೇಣ್ (ವಾತರೋಗವನುಳ್ಳವಂ) ಯಃ = ಆವನೋರ್ವಂ, ಪರಃ = ಪೆಱಂ, ಅನರ್ಥಿನಿ = ಅರ್ಥಿಯಿಲ್ಲದನಲ್ಲಿ (ಪ್ರಯೋಜನನಲ್ಲದ) ವಾಚಂ = ವಚನಮಂ | ಉದೀರಯತಿ = ನುಡಿಗುಂ | ಇಷ್ಟಮಿಲ್ಲದಂ ಕಾರ್ಯಮಂ ಮಾಡನೆಂಬುದು ತಾತ್ಪರ್ಯಂ || ನಯಹೀನನ ನೆಗಳ್ತೆಯಂ ದೃಷ್ಟಾಂತದಿಂ ಪೇಳ್ವುದುತ್ತರವಾಕ್ಯಂ :

ವಿಧ್ಯಾಯತಃ ಪ್ರದೀಪಸ್ಯೇವ ನಯಹೀನಸ್ಯ ವೃದ್ಧಿಃ || ೧೫೭ || ೪೩೨ ||

ಅರ್ಥ : ವಿಧ್ಯಾಯತಃ = ನಂದುತ್ತಿರ್ದ, ಪ್ರದೀಪಸ್ಯೇವ = ಸೊಡರ ಪೆರ್ಚೆಂತಂತೆ | ನಯಹೀನಸ್ಯ = ನೀತಿಯಲ್ಲದನ, ವೃದ್ಧಿಃ = ಪೆರ್ಚು || ನೀತಿಯಿಂ ನಡೆಯವೇಳ್ಕುಮೆಂಬುದು ತಾತ್ಪರ್ಯಂ || ಇಂತಪ್ಪಂ ಚಿರಂಜೀವಿಯಲ್ಲೆಂಬುದುತ್ತರವಾಕ್ಯಂ :

ಜೀವೋತ್ಸರ್ಗಃ ಸ್ವಾಮಿಪದಮಭಿಲಷತಾಮೇವ || ೧೫೮ || ೪೩೩ ||

ಅರ್ಥ : ಜೀವೋತ್ಸರ್ಗಃ ಪ್ರಾಣಮಂ ಬಿಡುವುದಕ್ಕುಂ, ಸ್ವಾಮಿಪದಂ = ಆಳ್ದನ ಪದವಿಯಂ, ಅಭಿಲಷತಾಮೇವ = ಬಯಸುವವರ್ಗಳ್ಗೆ || ಆಳ್ದನ ಪದವಿಯಂ ಬಯಸುವಂ ಬರ್ದುಂಕನೆಂಬುದು ತಾತ್ಪರ್ಯಂ || ಇಂತಪ್ಪನಂ ಕಿಱೀದು ಪೊತ್ತು ನೋಯಿಸಲಾಗದೆಂದುತ್ತರವಾಕ್ಯಂ :

ಬಹುದೋಷೇಷು ಕ್ಷಣದುಃಖಪ್ರದೋsಪಾಯೋsನುಗ್ರಹ ಏವ || ೧೫೯ || ೪೩೪ ||

ಅರ್ಥ : ಬಹುದೋಷೇಷು = ಪಿರಾಪ್ಪಪರಾಧಮಂ ಮಾಡಿದರೊಳ್, ಕ್ಷಣದುಃಖಪ್ರದಃ = ಕಿಱಿದು ದುಃಖಮಂ ಮಾಳ್ವ, ಅಪಾಯಃ = ಕೇಡು, ಅನುಗ್ರಹ ಏವ = ಕಾರುಣ್ಯಮೇ || ಕರಂ ದೋಷಿಯಂ ಪಿರಿದು ಕಾಲಂ ದಂಡಿಸುವುದೆಂಬುದು ತಾತ್ಪರ್ಯಂ || ಕೃತ್ಯಲಕ್ಷಣಮಂ ಪೇಳ್ವುದುತ್ತರವಾಕ್ಯಂ :

—-

೧೫೬. ಪ್ರಯೋಜನವಿಲ್ಲದವನಲ್ಲಿ ಮಾತನಾಡಬಯಸುವವನು ಪಿಶಾಚಗ್ರಸ್ತನಾಗಿರಬೇಕು. ಇಲ್ಲವೆ ರೋಗಗ್ರಸ್ತನಾಗಿರಬೇಕು.

೧೫೭. ನೀತಿಯಿಲ್ಲದವನ ಹಿರಿಮೆಯು ನಂದುತ್ತಿರುವ ದೀಪದಂತೆ.

೧೫೮. ಸ್ವಾಮಿಯ ಪದವಿಯನ್ನು ಅಪೇಕ್ಷಿಸುವವರು ಸತ್ತಂತೆಯೇ.

೧೫೯. ಹೆಚ್ಚು ಅಪರಾಧ ಮಾಡಿದನಿಗೆ ಕಡಿಮೆ ಶಿಕ್ಷೆಯಿಂದಾಗುವ ಅಪಾಯವು ಅನುಗ್ರಹವೇ ಸರಿ.

—-

ಸ್ವಾಮಿದೋಷಸ್ವದೋಷಾಭ್ಯಾಮಪಹತವೃತ್ತಯಃ ಕ್ರುದ್ಧಭೀತಲುಬ್ಧಾಪಮಾನಿನಃ[5] ಕೃತ್ಯಾಃ || ೧೬೦ || ೪೩೫ ||

ಅರ್ಥ : ಸ್ವಾಮಿದೋಷ = ಆಳ್ದನ ದೋಷಮುಂ, ಸ್ವದೋಷಾಭ್ಯಾಂ = ತನ್ನ ದೋಷಮುಮೆಂಬಿವಱಿಂ, ಅಪಹತವೃತ್ತಯಃ = ಕೆಡಿಸೆಪಟಟ್ ಪದವಿಯನುಳ್ಳವರ್ಗಳ್, ಕ್ರುದ್ಧ = ಮುಳಿದನುಂ, ಭೀತಃ = ಅಂಜಿದನುಂ, ಲುಬ್ಧ = ಲೋಭಿಯುಂ, ಅಪಮಾನಿನಃ = ಮನ್ನಣೆಗೆಟ್ಟರುಮೆಂದಿವರ್ಗಳ್, ಕೃತ್ಯಾಃ = ಕೃತ್ಯರೆಂಬರು || ಅವರ ವಶಂ ಮಾಳ್ಪುಪಾಯಮಂ ಪೇಳ್ವುದುತ್ತರವಾಕ್ಯಂ :

ಅನುವೃತ್ತಿರಭಯಂ ತ್ಯಾಗಃ ಸತ್ಕೃತಿಶ್ಚ ಕೃತ್ಯಾನಾಂ ವಶೋಪಾಯಾಃ || ೧೬೧ || ೪೩೬ ||

ಅರ್ಥ : ಅನುವೃತ್ತಿಃ = ಇಚ್ಛೆಯಂ ನೆಗಳ್ವುದುಂ, ಅಭಯಂ = ಅಂಜದಿರೆಂಬುದಂ, ತ್ಯಾಗಃ = ಕುಡುವುದಂ, ಸತ್ಕೃತಿಶ್ಚ = ಮನ್ನಣೆಯುಂ, ಕೃತ್ಯಾನಾಂ = ತನಗೆ ಮಾಡುತ್ತಿರ್ದವರ್ಗಳ, ವಶೋಪಾಯಾಃ = ಕ್ರಮದಿಂ ವಶಂ ಮಾಳ್ಪುಪಾಯಂಗಳು || ಬೆದರಿದರಂ ತನಗೆ ಮಾಳ್ಪುದೆಂಬುದಭಿಪ್ರಾಯಂ || ಪ್ರಜೆಗಳ್ಗಿಂತಪ್ಪುದಂ ಮಾಡಲಾಗದೆಂಬುದುತ್ತರವಾಕ್ಯಂ :

ಕ್ಷಯಲೋಭವಿರಾಗಕಾರಣಾನಿ ಪ್ರಕೃತೀನಾಂ ನ ಕುರ್ಯಾತ್ || ೧೬೨ || ೪೩೭ ||

ಅರ್ಥ : ಪ್ರಕೃತೀನಾಂ = ಪ್ರಜೆಗಳ್ಗೆ, ಕ್ಷಯಃ = ಕೇಡು, ಲೋಭ = ಲೋಭಮುಂ, ವಿರಾಗ = ಮೋಹಂಗಿಡುಗುಮೆಂಬಿವಕ್ಕೆ, ಕಾರಣಾನಿ = ಕಾರಣಂಗಳಪ್ಪುವಂ, ನ ಕುರ್ಯಾತ್ = ಮಾಡದಿರ್ಕೆ || ತನ್ನ ಮೇಲೆ ಮೋಹಂ ಮಾಡಿಸಿಕೊಳ್ವುದೆಂಬುದು ತಾತ್ಪರ್ಯಂ || ಅದಕಕೆ ಕಾರಣಂ ಪೇಳ್ವುದುತ್ತರವಾಕ್ಯಂ :

ಸರ್ವಕೋಪೇಭ್ಯಃ ಪ್ರಕೃತಿಕೋಪೋ ಗರೀಯಾನ್ || ೧೬೩ || ೪೩೮ ||

ಅರ್ಥ : ಸರ್ವಕೋಪೇಭ್ಯಃ = ಎಲ್ಲಾ ಕೋಪಂಗಳತ್ತಣಿಂ, ಪ್ರಕೃತಿಕೋಪಃ = ಪ್ರಜೆಗಳ ಮುಳಿಸು, ಗರೀಯಾನ್ = ಪಿರಿದು || ಪ್ರಜೆಯ ಮುಳಿಸು ಕರಮರಿದೆಂಬುದು ತಾತ್ಪರ್ಯಂ || ಇಂತಪ್ಪರನೀ ವ್ಯಾಪಾರದೊಳ್ ತೊಡರ್ಚುವುದೆಂಬುದುತ್ತರವಾಕ್ಯಂ :

—-

೧೬೦. ಅರಸನ ದೋಷದಿಂದಾಗಲಿ, ತಮ್ಮ ತಪ್ಪಿನಿಂದಾಗಲಿ ಜೀವನೋಪಾಯವನ್ನು ಕಳೆದುಕೊಂಡವರು ಅರಸನ ವಿಷಯದಲ್ಲಿ ಕೋಪವಿರುವವರು, ಭಯವುಳ್ಳವರೂ. ಲುಬ್ಧರು. ಅವಮಾನಿತರಾದವರು ಕೃತ್ಯರೆಂಬವರು.

೧೬೧. ಅವರ ಇಚ್ಛೆಯಂತೆ ಮಾಡುವುದು. ಅಭಯಪ್ರದಾನ. ತ್ಯಾಗ, ಸತ್ಕರಿಸುವುದು ಇವು ಕೃತ್ಯರನ್ನು ವಶಪಡಿಸಿಕೊಳ್ಳುವ ಉಪಾಯಗಳು.

೧೬೨. ಪ್ರಜೆಗಳಿಗೆ ಕೇಡು, ಲೋಭ, ವಿಕಾರಗಳಾಗುವಂಥದೇನನ್ನೂ ಮಾಡಬಾರದು.

೧೬೩. ಎಲ್ಲ ಕೋಪಗಳಿಗಿಂತಲೂ ಪ್ರಜೆಗಳ ಕೋಪವು ಹೆಚ್ಚಿನದು.

—-

ಅಚಿಕಿತ್ಸ್ಯ ದೋಷದುಷ್ಟಾನ್ ಖನಿದುರ್ಗಸೇತುಬಂಧಾಕರ ಕರ್ಮಾಂತರೇಷು[6]|| ೧೬೪ || ೪೩೯ ||

ಅರ್ಥ : ಅಚಿಕಿತ್ಸ್ಯ ದೋಷದುಷ್ಟಾನ್ = ನಿಯಾಮಿಸಲ್ ಬಾರದ (ದಂಡವನೆಯ್ದಿಸಿದಱೂ ಹೋಗದ ಬಹಳವಾದ ದೋಷದಿಂದ ದೂಷಿತರಾದವರನೂ) ಖನಿ = ಕಣಿಯು (ಅಗೆವ), ದುರ್ಗ = ದುರ್ಗಂಗಳ ಮಾಡುವಂ, ಸೇತುಬಂಧ = ಕಟ್ಟೆಗಟ್ಟುವುದಂ, ಆಕರ = ಆಗರಮಮೆಂದಿವಱಂ, (ಕೆಱೆ ಬಾವಿ ಮೊದಲಾದವುಮಂ) ಕರ್ಮಾಂತರೇಷು = ಕೆಲಸಂಗಳೊಳ್, ಕ್ಲೇಶಯೇತ್ = ದುಃಖಂ ಬಡಿಸುಗೆ || ಪಲಕಾಲಂ ದಂಡಿಸೆ ದುಃಖಭೀರುಗಳಕ್ಕುಮೆಂಬುದು ತಾತ್ಪರ್ಯಂ || ಇಂತಪ್ಪನೊಡನಿರಲಾಗದೆಂಬು ದುತ್ತರವಾಕ್ಯಂ :

ಅಪರಾದ್ಧೈರಪರಾಧಕೈಶ್ಚ ಸಹ ಸಹವಾ ಸಂ ನ ಕುರ್ವೀತ || ೧೬೫ || ೪೪೦ ||

ಅರ್ಥ : ಅಪರಾಧ್ಧೈಃ = ತನ್ನಿಂದಪರಾಧಮಂ ಮಾಡಿಸಿಕೊಳ್ಳಲ್ವೇಡಿರ್ದವರ್ಗಳೊಡನೆಯುಂ | ಅಪರಾಧಕೈಶ್ಚ ಸಹ = ತನಗಪಾರಾಧಮಂ ಮಾಡಲ್ವೇಡಿರ್ದವರ್ಗಳೊಡನೆಯುಂ, ಸಹವಾಸಂ = ಇರವಂ, ನ ಕುರ್ವೀತ = ಮಾಡದಿರ್ಕ್ಕೆ || ಅದಕ್ಕೆ ಕಾರಣಮಂ ಪೇಳ್ವುದುತ್ತರವಾಕ್ಯಂ :

ತೇ[7]ಹಿ ಗೃಹಪ್ರವಿಷ್ಟಸರ್ಪವತ್ ಸರ್ವವ್ಯಸನಾನಾಮಾಗದು ನದ್ವಾರಂ || ೧೬೬ || ೪೪೧ ||

ಅರ್ಥ : ತೇ = ಅವರ್ಗಳು, ಹಿ = ಅವುದೊಂದು ಕಾರಣದಿಂ, ಗೃಹಪ್ರವಿಷ್ಟಸರ್ಪವತ್ = ಮನೆಯೊಳ್ ಪೊಕ್ಕ ಪಾವಿನಂತೆ, ಸರ್ವವ್ಯಸನಾನಾಂ = ಎಲ್ಲಾ ಕೇಡುಗಳ್ಗಂ ಆಗಮನದ್ವಾರಂ = ಬರ್ಪ ಬಾಗಿಲ್ || ಒಡನಿರಲಪಕಾರಿಗಳ್ ಮಱವಿಯಂ ಪಾರ್ದು ಕಿಡಿಸುವರೆಂಬುದೀ ಎಱಡಱ ತಾತ್ಪರ್ಯಂ || ಇಂತಪ್ಪನ ಮುಂದೆ ನಿಂದಿರಲಾಗದೆಂಬುದುತ್ತರವಾಕ್ಯದ್ವಯಂ :

—-

೧೬೪. ದಂಡವನ್ನು ವಿಧಿಸಿದರೂ ದೂಷಿತವಾದವರನ್ನು ಗಣಿಯ ಕೆಲಸ, ದುರ್ಗನಿರ್ಮಾಣದ ಕೆಲಸ, ಸೇತುಬಂಧ, ಅಣೆಕಟ್ಟುಗಳನ್ನು ಕಟ್ಟುವುದು ಮುಂತಾದ ಕೆಲಸಗಳಲ್ಲಿ ದುಡಿಸಬೇಕು.

೧೬೫. ಅಪರಾಧಗಳನ್ನು ಮಾಡಿದವರೊಂದಿಗೂ ತನ್ನಿಂದ ಅಪರಾಧವನ್ನು ಮಾಡಿಸುವವರೊಂದಿಗೂ ಸಹವಾಸವನ್ನು ಇಟ್ಟುಕೊಳ್ಳಕೂಡದು.

೧೬೬. ಏಕೆಂದರೆ ಅವರು ಮನೆಯನ್ನು ಹೊಕ್ಕ ಹಾವಿನಂತೆ ಎಲ್ಲಾ ಕೇಡುಗಳಿಗೂ ಕಾರಣರಾಗುತ್ತಾರೆ.

—-

ನ ಕಸ್ಯಾಪಿ ಕ್ರುದ್ಧಸ್ಯ ಪುರಸ್ತಿಷ್ಠೇತ್[8]|| ೧೬೭ || ೪೪೨ ||

ಅರ್ಥ : ಕ್ರುದ್ಧಸ್ಯ = ಮುಳಿದನ, ಕಸ್ಯಾಪಿ ಪುರತಃ = ಅವನ ಮುಂದೆಯುಂ, ನ ತಿಷ್ಠೇತ್ = ಇರದಿರ್ಕೆ ||

ಕ್ರುದ್ಧೋ ಹಿ ಸರ್ಪ ಇವ ಯಮೇವಾಗ್ರೇ ಪಶ್ಯತಿ ತತ್ರೈವ ರೋಷ ವಿಷಮುತ್ಸ್ಯಜತಿ || ೧೬೮ || ೪೪೩ ||

ಅರ್ಥ : ಕ್ರುದ್ಧಃ = ಮುಳಿದಂ, ಹಿ = ಆವುದೊಂದು ಕಾರಣದಿಂ, ಸರ್ಪ ಇವ = ಪಾವಿನಂತೆ, ಯಮೇವ = ಆವನೋರ್ವನಂ, ಅಗ್ರೇ = ಇದಿರೊಳ್, ಪಶ್ಯತಿ = ಕಾಣ್ಗುಂ, ತತ್ತೈವ = ಆತನೊಳೇ, ರೋಷವಿಷಂ = ಮುಳಿಸೆಂಬ ನಂಜಂ = ಉತ್ಸೃಜತಿ = ಉಗುಳ್ಗುಂ || ಕೋಪದಿಂ ಮುಂದುಗಾಣದವನವರಿವರೆನ್ನಮೆಂಬುದಿ, ಎಱಡರ ತಾತ್ಪರ್ಯಂ || ಇಂತಪ್ಪನ ಬರವು ಪೊಲ್ಲೆಂಬುದುತ್ತರವಾಕ್ಯಂ :

ಅಪ್ರತಿವಿಧಾತುರಾಗಮನಾದ್ವರಮನಾಗಮನಂ || ೧೬೯ || ೪೪೪ ||

ಅರ್ಥ : ಅಪ್ರತಿವಿಧಾತುಃ = ಹಿತನಂ ಮಾಡದನ, ಆಗಮನಾತ್ = ಬರವಿನತ್ತಣಿಂದಮುಂ | ಅನಾಗಮನಂ = ಬಾರದಿರ್ಪುದು, ವರಂ = ಒಳ್ಳಿತ್ತು || ಹಿತಮಂ ಮಾಡದನಿರವು ಪೊಱೆಯೆಂಬುದು ತಾತ್ಪರ್ಯಂ ||

ಇತಿ ಮಂತ್ರಸಮುದ್ದೇಶಃ || ||[9]

[10]ನೆಯ ಸಮುದ್ದೇಶವಾಕ್ಯಂ || ೧೬೯ || ಒಟ್ಟು || ೪೪೩ ||

—-

೧೬೭. ಕೋಪಗೊಂಡವನ ಎದುರಿಗೆ ನಿಲ್ಲಬಾರದು.

೧೬೮. ಕೋಪಗೊಂಡವನು ಸರ್ಪದಂತೆ ಎದುರಿನಲ್ಲಿ ಕಂಡುಬಂದವನ ಮೇಲೆ ರೋಷವೆಂಬ ವಿಷವನ್ನು ಕಾರುವನು.

೧೬೯. ಹಿತವನ್ನುಂಟುಮಾಡದವನ ಬರುವಿಕೆಗಿಂತ ಬರದಿರುವುದೇ ಲೇಸು.

—-

 

[1]ಮೈ. ಚೌ: ಉತ್ಸೇಕಃ (ಕೋ).

[2]ಚೌ. ಮಹದ್ವಾಪಕ್ಷೇಪೋಪಾಯಜ್ಞಸ್ಯ.

[3]ಚೌ. ಯತ್ರ.

[4]ಮೈ. ಪಾತಕೀ.

[5]ಚೌ. ಲುಬ್ಧಭೀತಾವಮಾನಿನಃ.

[6]ಮೈ., ಚೌ. ಕರ್ಮಾಂತರೇಷು ಕ್ಲೇಶಯೇತ್.

[7]ಮೈ. ಈ ವಾಕ್ಯವು ಹಿಂದಿನ ವಾಕ್ಯದ ಭಾಗವಾಗಿದೆ.

[8]ಮೈ. ಪುರತಃ ತಿಷ್ಠೇತ್.

[9]ಇದು ೧೦ ಎಂದಿರಬೇಕು.

[10]೧೦ನೆಯ ಎಂದು ಓದಬೇಕು.