ಸಃ ದೈವಸ್ಯಾಪರಾಧೋ ನ ಮಂತ್ರಿಣಾಂ ಯತ್ಸುಘಟಿತಮಪಿ ಕಾರ್ಯಂ ವಿಘಟತೇ || ೫೬ || ೩೩೧ ||

ಅರ್ಥ : ಸಃ = ಅದು, ದೈವಸ್ಯ = ದೈವದ, ಅಪರಾಧಃ = ದೋಷಂ, ನ ಮಂತ್ರಿಣಾಂ = ಮಂತ್ರಿಗಳ ದೋಷಮಲ್ಲ, ಯತ್ = ಆವುದೊಂದು, ಸುಘಟಿತಂ = ಲೇಸಾದ, ಕಾರ್ಯಮಪಿ = ಕಾರ್ಯಮುಂ, ವಿಘಟತೇ = ಕಿಡಿಗುಂ || ದೈವಮಂತರಂಗಮೆಂಬುದು ತಾತ್ಪರ್ಯಂ || ಅರಸಲ್ಲವನಂ ಪೇಳ್ವುದುತ್ತರವಾಕ್ಯಂ :

ನ ಖಲ್ವಸೌ ರಾಜಾ ಯೋ ಮಂತ್ರಿಣೋSತಿಕ್ರಮ್ಯ ವರ್ತತೇ || ೫೭ || ೩೩೨ ||

ಅರ್ಥ : ಅಸೌ = ಆತಂ, ರಾಜಾ = ಅರಸಂ, ನ ಖಲು = ಅಲ್ಲ, ಯಃ = ಆವನೋರ್ವಂ, ಮಂತ್ರಿಣಃ = ಮಂತ್ರಿಗಳಂ, ಅತಿಕ್ರಮ್ಯ = ಮೀಱಿ, ವರ್ತತೇ = ನೆಗಳ್ಗುಂ || ಮಂತ್ರಿಗಳಂ ಮೀಱಲರಸನಲ್ಲೆಂಬುದು ತಾತ್ಪರ್ಯ || ಸನ್ಮಂತ್ರದಿಂದಮೆ ಕಾರ್ಯಮಕ್ಕುಮೆಂಬುದುತ್ತರವಾಕ್ಯಂ :

ಸುವಿವೇಚಿತಾನ್ಮಂತ್ರಾತ್ಕಾರ್ಯಸಿದ್ಧಿ ರ್ಭವತ್ಯೇವ ಯದಿ ಸ್ವಾಮಿನೋ ನ ದುರಾಗ್ರಹಃ ಸ್ಯಾತ್ || ೫೮ || ೩೩೩ ||

ಅರ್ಥ : ಸುವಿವೇಚಿತಾತ್ = ನಿಶ್ಚೈಸಿದ, ಮಂತ್ರಾತ್ = ಮಂತ್ರದತ್ತಣಿಂ, ಕಾರ್ಯಸಿದ್ಧಿಃ = ಕಾರ್ಯದ ನೆಱವಿ, ಭವತ್ಯೇವ = ಅಕ್ಕುಮೇ, ಸ್ವಾಮಿನಃ = ಆಳ್ದಂಗೆ; ದುರಾಗ್ರಹಃ = ಪೊಲ್ಲದಪ್ಪ ಆಗ್ರಹಂ, ಯದಿ ನ ಸ್ಯಾತ್ = ಆಗದಿರ್ದುದಪ್ಪೊಡೆ || ದುರಾಗ್ರಹಂ ಪೊಲ್ಲೆಂಬುದು ತಾತ್ಪರ್ಯಂ || ಬಱಿ ನೀತಿಯಿಂ ಕಾರ್ಯಮಿಲ್ಲೆಂಬುದುತ್ತರವಾಕ್ಯಂ :

ಅವಿಕ್ರಾಮತೋ ನೀತಿರ್ವಣಿಕ್ ಖಡ್ಗಯಷ್ಟಿರಿವ ನ ಕಿಂಚಿತ್ ಸಾಧಯತಿ || ೫೯ || ೩೩೪ ||

ಅರ್ಥ : ಅವಿಕ್ರಾಮತಃ = ಪೊಡರ್ಪುಗೈಯದನ (ಪರಾಕ್ರಮವಿಲ್ಲದವನ) ನೀತಿಃ = ಮಂತ್ರಂ, ವಣಿಕ್‌ಖಡ್ಗಯಷ್ಟಿರಿವ = ಪರದನ ಕೈಯ್ಯಡ್ಡಾಯುಧದಂತೆ, ನ ಕಿಂಚತ್ ಸಾಧಯತಿ = ಏನುಮಂ ಸಾಧಿಸಲಾರದು || ನೀತಿ ವಿಕ್ರಮಂಗಳಾಗವೇಳ್ಕುಮೆಂಬುದು ತಾತ್ಪರ್ಯಂ || ನೀತಿಯ ಶೌರ್ಯಮಂ ಪೇಳ್ವುದುತ್ತರವಾಕ್ಯಂ :

—-

೫೬. ಸುವ್ಯವಸ್ಥಿತವಾದ ಕಾರ್ಯವು ಅವ್ಯವಸ್ಥಿತವಾಗುವುದು ದೈವಾಪರಾಧವೇ ವಿನಃ ಮಂತ್ರಿಯ ತಪ್ಪಲ್ಲ.

೫೭. ಮಂತ್ರಿಯ ಸಲಹೆಯನ್ನು ಮೀರಿ ವರ್ತಿಸುವ ರಾಜನು ರಾಜನಲ್ಲ.

೫೮. ಒಳ್ಳೆಯ ವಿವೇಚನೆಯಿಂದ ಮಾಡಿದ ಕಾರ್ಯವು ಸ್ವಾಮಿಯ ಕೆಟ್ಟ ಹಟವಿಲ್ಲದೆ ಇದ್ದರೆ, ಸಿದ್ಧಿಸುತ್ತದೆ.

೫೯. ಪರಾಕ್ರಮವಿಲ್ಲದವನ ರಾಜನೀತಿಯು ವೈಶ್ಯನ ಕೈಯ್ಯಲ್ಲಿಯ ಕತ್ತಿಯಂತೆ ಏನನ್ನೂ ಸಾಧಿಸಲಾರದು.

—-

ದಷ್ಟಿರಿವ[1] ನೀತಿರ್ಯಥಾವಸ್ಥಿ ತಮರ್ಥಮುಪಲಂಭಯತಿ || ೬೦ || ೩೩೫ ||

ಅರ್ಥ : ದೃಷ್ಟಿರಿವ = ಕಣ್ಣಿನಂತೆ, ನೀತಿಃ = ನೀತಿಯು, ಯಥಾವಸ್ಥಿತಂ = ಎಂತಿರ್ದುದಂತಪ್ಪ, ಅರ್ಥಂ = ಅರ್ಥಮಂ, ಉಪಲಂಭಯತಿ = ತೋಱುಗುಂ || ನೀತಿಯಿಂ ಕಾರ್ಯಮಂ ಕಾಣಲಕ್ಕುಮೆಂಬುದು ತಾತ್ಪರ್ಯಂ || ಪರಾಕ್ರಮದ ಕಾರ್ಯಾಮಂ ಪೇಳ್ವುದುತ್ತರವಾಕ್ಯಂ :

ಹಿತಾಹಿತಪ್ರಾಪ್ತಿಪರಿಹಾರೌ ತು ಪುರುಷಕಾರಾಯತ್ತೌ || ೬೧ || ೩೩೬ ||

ಅರ್ಥ : ಹಿತಾಹಿತಪ್ರಾಪ್ತಿ = ಹಿತದೆಯ್ದುಗೆಯುಂ, ಅಹಿತಪರಿಹಾರೌ = ಹಿತಮಲ್ಲದುದಱರಲ್ಕೆಯೆಂಬಿವೆಱಡುಂ, ತು = ಮತ್ತೆ ವಿಶೇಷದಿಂ, ಪುರುಷಕಾರಾಯತ್ತೌ = ಪರಾಕ್ರಮದೊಳ್ ನೆಲಸಿದವು || ಪುರುಷಕಾರಮಿಲ್ಲ ಹಿತ ಕೆಡುಂ, ಸುಖಮಿಲ್ಲೆಂಬುದು ತಾತ್ಪರ್ಯಂ || ಸಚಾವಕತನಮಿಂತಪ್ಪಲ್ಲಿಯಾಗಲಾಗದೆಂಬುದುತ್ತರವಾಕ್ಯಂ :

ಅಕಾಲಸಹಂ ಕಾರ್ಯಮದ್ಯಸ್ವಿನಂ ನ ಕುರ್ಯಾತ್ || ೬೨ || ೩೩೭ ||

ಅರ್ಥ : ಅಕಾಲಸಹಂ = ತಡವಂ ಸೈರಿಸದ, ಕಾರ್ಯಂ = ಕಾರ್ಯಮುಂ, ಅದ್ಯಸ್ವಿನಂ = ಇಂದು ನಾಳೆಯಪ್ಪದೆಂದು, ನ ಕುರ್ಯಾತ್ = ಮಾಡದಿರ್ಕೆ || ತಡೆಯೆ ಕಾರ್ಯಂ ಕಿಡುಗುಮೆಂಬುದು ತಾತ್ಪರ್ಯಂ || ತಡೆದೊಡೆ ದೋಷಮಂ ಪೇಳ್ವುದುತ್ತರವಾಕ್ಯ :

ಕಾಲಾತಿಕ್ರಮಾನ್ನಖಚ್ಛೇದ್ಯಮಪಿ ಕಾರ್ಯಂ ಭವತಿ ಕುಠಾರಚ್ಛೇದ್ಯಮಚ್ಛೇದ್ಯಂ ವಾ[2]|| ೬೩ || ೩೩೮ ||

ಅರ್ಥ : ಕಾಲಾತಿಕ್ರಮಾತ್ = ಹದಂ ತಪ್ಪುವುದಱಿಂ, ಕಾರ್ಯಂ = ಕಾರ್ಯವು, ನಖಚ್ಛೇದ್ಯಮಪಿ = ಉಗುರಿಂ ಕಡಿಯಲ್ಪಪ್ಪುದಾದೊಡಂ, ಕುಠಾರಚ್ಛೇದ್ಯಂ = ಕೊಡಲಿಯಂ ಕಡಿಯಲ್ಪರ್ಪುದು | ಅಚ್ಛೇದ್ಯಂ ವಾ = ಕಡಿಯಲ್ಪಡದುದು ಮೇಣ್, ಭವತಿ = ಅಕ್ಕುಂ ||

—-

೬೦. ಕಣ್ಣಿನ ದೃಷ್ಟಿಯಂತೆ ನೀತಿಯು ಇದ್ದುದನ್ನಿದ್ದಂತೆ ತೋರಿಸುತ್ತದೆ.

೬೧. ಹಿತವಾದುದನ್ನು ಹೊಂದುವುದೂ ಅಹಿತವಾದುದನ್ನು ತೊಲಗಿಸುವುದೂ ಪುರುಷ ಪ್ರಯತ್ನವನ್ನು ಅವಲಂಬಿಸಿರುತ್ತದೆ.

೬೨. ತಡಮಾಡಬಾರದ ಕಾರ್ಯವನ್ನು ಇಂದು ನಾಳೆ ಎಂದು ಮಾಡಬಾರದು.

೬೩. ಕಾಲಮೀರುವುದರಿಂದ, ಉಗುರಿನಿಂದ ಚಿವುಟಿ ಹಾಕಬಹುದಾದುದನ್ನು ಕೊಡಲಿಯಿಂದ ಕಡಿದುಹಾಕಬೇಕಾಗಿ ಬರುತ್ತದೆ. ಅಥವಾ ಕಡಿದುಹಾಕಲು ಬುರುವುದೇ ಇಲ್ಲ.

—-

ಕೋ ನಾಮ ಸುಚೇತನಃ[3] ಸುಖಸಾಧ್ಯಂ ಕಾರ್ಯಂ ಕೃಚ್ಛ್ರಸಾಧ್ಯಮಸಾಧ್ಯಂ ವಾ ಕುರ್ಯಾತ್ || ೬೪ || ೩೩೯ ||

ಅರ್ಥ : ಕೋ ನಾಮ = ಆವಂ, ಸುಚೇತನಃ = ಬುದ್ಧಿವಂತಂ, ಸುಖಸಾಧ್ಯಂ = ಸುಖದಿಂ ತೀಱುವ ಕಾರ್ಯಂ = ಕಾರ್ಯಮಂ, ಕೃಚ್ಛ್ರಸಾಧ್ಯಂ = ಕ್ಲೇಶದಿಂ ತೀಱುವಂ, ಅಸಾಧ್ಯಂ ವಾ = ಸಾಧಿಸಲ್ಪರದುದಾಗಿ ಮೇಣ್, ಕುರ್ಯಾತ್ = ಮಾಳ್ಕುಂ || ತಡೆಯದೇ ಮಾಳ್ಕುಮೆಂಬುದು ತಾತ್ಪರ್ಯ || ಮಂತ್ರಿಗಳ ಸಭೆಯಲ್ಲಿ ಗುಣದೋಷಮಂ ಪೇಳ್ವುದುತ್ತರವಾಕ್ಯಂ :

ಏಕಂ ಮಂತ್ರಿಣಂ ನ ಕುರ್ವೀತ || ೬೫ || ೩೪೦ ||

ಅರ್ಥ : ಏಕಂ = ಓರ್ವನಂ, ಮಂತ್ರಿಣಂ = ಮಂತ್ರಿಯಂ, ನ ಕುರ್ವೀತ = ಮಾಡದಿರ್ಕೆ ||

ಏಕೋ ಮಂತ್ರೀ ನಿರವಗ್ರಹಶ್ಚರತಿ ಮುಹ್ಯತಿ ಚ ಕಾರ್ಯಕೃಚ್ಛ್ರೇಷು || ೬೬ || ೩೪೧ ||

ಅರ್ಥ : ಏಕಃ = ಓರ್ವಂ, ಮಂತ್ರೀ = ಮಂತ್ರಿಯು, ಹಿ = ಅವುದೊಂದು ಕಾರಣದಿಂ, ನಿರವಗ್ರಹಃ = ಆಗ್ರಹಮಿಲ್ಲದನಾಗಿ, ಚರತಿ = ನೆಗಳ್ಗುಂ, ಕಾರ್ಯಕೃಚ್ಛ್ರೇಷು = ಅರಿಯವಪ್ಪ ಕಾರ್ಯಂಗಳೊಳು, ಮುಹ್ಯತಿ ಚ = ಪೊಲಂಗಿಡುಗುಂ ಮೇಣ್ ||

ದ್ವಾವಪಿ ಮಂತ್ರಿಣೌ ನ ಕರ್ತವ್ಯೌ || ೬೭ || ೩೪೨ ||

ಅರ್ಥ : ದ್ವಾವಪಿ = ಈರ್ವರುಂ, ಮಂತ್ರಿಣೌ = ಮಂತ್ರಿಗಳು, ನ ಕರ್ತವ್ಯೌ = ಮಾಡಲ್ಪಡದವರು ||

—-

೬೪. ತಿಳುವಳಿಕೆಯುಳ್ಳ ಯಾರು ತಾನೆ ಸುಲಭಸಾಧ್ಯವಾದ ಕೆಲಸವನ್ನು ಕಷ್ಟಸಾಧ್ಯವಾದುದನ್ನಾಗಿ, ಕೊನೆಗೆ ಅಸಾಧ್ಯವಾದುದನ್ನಾಗಿ ಮಾಡಿಕೊಳ್ಳುತ್ತಾನೆ?

೬೫. ಒಬ್ಬನನ್ನೇ ಮಂತ್ರಿಯನ್ನಾಗಿ ಮಾಡಿಕೊಳ್ಳಬಾರದು.

೬೬. ಮಂತ್ರಿ ಒಬ್ಬನೇ ಆದರೆ ಹತೋಟಿಯಿಲ್ಲದೆ ವ್ಯವಹರಿಸುತ್ತಾನೆ. ಕಷ್ಟವಾದ ಕಾರ್ಯಾಚರಣೆಯಲ್ಲಿ ದಿಕ್ಕು ತೋರದೆ ತೊಳಲುತ್ತಾನೆ.

೬೭. ಇಬ್ಬರು ಮಂತ್ರಿಗಳನ್ನು ನಿಯಮಿಸಿಕೊಳ್ಳಬಾರದು.

—-

ದ್ವಾವಪಿ ಮಂತ್ರಿಣೌ ಸಂಹತೌ[4]ಭಕ್ಷಯತಃ ವಿಗೃಹಿತೌ ಚ ವಿನಾಶಯತಃ || ೬೮ || ೩೪೩ ||

ಅರ್ಥ : ದ್ವೌ ಮಂತ್ರಿಣೌ = ಈರ್ವರ್ಮಂತ್ರಿಗಳು, ಸಂಹತೌ = ಕೂಡಿದರಾಗಿ, ಭಕ್ಷಯತಃ = ಕೂಡಿ ತಿಂಬರ್, ವಿಗೃಹಿತೌ = ವಿರುದ್ಧರಾಗಿ, ವಿನಾಶಯತಃ = ಕಿಡಿಸುವರು ||

ತ್ರಯಃ ಪಂಚ ಸಪ್ತ ವಾ ಮಂತ್ರಿಣಃ ಕಾರ್ಯಾಃ || ೬೯ || ೩೪೪ ||

ಅರ್ಥ : ತ್ರಯಃ = ಮೂವರುಂ, ಪಂಚ = ಐವರುಂ, ಸಪ್ತ ವಾ = ಎಣ್ಬರುಂ[5]| ಮೇಣ್, ಮಂತ್ರಿಣಃ = ಮಂತ್ರಿಗಳು, ಕಾರ್ಯಾಃ = ಮಾಡಲ್ಪಡುವರು ||

ವಿಷಮಪುರುಷಸಂಘೇಷು ದುರ್ಲಭಮೈಕಮತ್ಯಂ || ೭೦ || ೩೪೫ ||

ಅರ್ಥ : ವಿಷಮಪುರುಷಸಂಘೇಷು = ಸಮಾನಮಲ್ಲದ ಪುರುಷರ ನೆಱವಿಯೊಳು, ಐಕಮತ್ಯಂ = ಒಂದೇ ಮನಮನುಳ್ಳ ಸ್ವರೂಪಂ | ದುರ್ಲಭಂ = ಪಡೆಯಲರಿದು ||

ಬಹವೋ ಮಂತ್ರಿಣಃ ಪರಸ್ಪರಂ ಮತೀರುತ್ಕರ್ಷಯಂತಿ ಸ್ವಚ್ಛಂದಾಶ್ಚ ನ ವಿಜೃಂಭಂತೇ[6]|| ೭೧ || ೩೪೬ ||

ಅರ್ಥ : ಬಹವಃ = ಪಲಂಬರುಮಂ, ಮಂತ್ರಿಣಃ = ಮಂತ್ರಿಗಳು, ಪರಸ್ಪರಂ = ಓರ್ವೋರಂ, ಮತೀಃ = ಬುದ್ಧಿಗಳು, ಉತ್ಕರ್ಷಯಂತಿ = ಪೆರ್ಚಿಸುವರು, ಸ್ವಚ್ಛಂದಾಶ್ಚ = ತಮ್ಮಿಚ್ಛೆಕಾರರಾಗಿ, ನ ವಿಜೃಂಭಂತೇ = ಉಬ್ಬುವರಲ್ಲರು || ಮಂತ್ರಿಗಳ್ ಪಲರಾಗವೇಳ್ಕುಮೆಂಬುದು ತಾತ್ಪರ್ಯಂ || ಇಂತಪ್ಪ ಕಾರ್ಯಮಂ ನೆಗಳ್ವುದೆಂಬುದುತ್ತರವಾಕ್ಯಂ :

—-

೬೮. ಮಂತ್ರಿಗಳಿಬ್ಬರೇ ಆದರೆ ಇಬ್ಬರೂ ಕೂಡಿದರೆ ರಾಜ್ಯವನ್ನೇ ನುಂಗುತ್ತಾರೆ. ಪರಸ್ಪರ ವಿರೋಧಿಗಳಾದರೆ ಕಾರ್ಯನಾಶಕ್ಕೆ ಕಾರಣರಾಗುತ್ತಾರೆ.

೬೯. ಮೂರು, ಐದು ಅಥವಾ ಏಳು (ಮಂದಿ) ಮಂತ್ರಿಗಳಿರಬೇಕು.

೭೦. ಬೆಸಸಂಖ್ಯೆಯ ಪುರುಷರು ಒಟ್ಟಾಗಿರುವಲ್ಲಿ ಒಮ್ಮತವೇರ್ಪಡುವುದು ಕಠಿಣ.

೭೧. ಬಹುಮಂದಿ ಮಂತ್ರಿಗಳಿರುವಲ್ಲಿ ಒಬ್ಬರೊಡನೊಬ್ಬರು ಸ್ಫರ್ಧಿಸುತ್ತ ತಮ್ಮ ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ. ತಮ್ಮ ತಮ್ಮ ಇಚ್ಛೆಯಂತೆ ವರ್ತಿಸುವುದಿಲ್ಲ.

—-

ಯದ್ಬಹುಗುಣಮನಪಾಯಾಯಾಸ[7]ಬಹುಲಂ ಚ ಭವತಿ ತತ್ಕಾರ್ಯಮನುಷ್ಠೇಯಂ || ೭೨ || ೩೪೭ ||

ಅರ್ಥ : ಯತ್ = ಆವುದೊಂದು, ಬಹುಗುಣಂ = ಪಲವು ಗುಣಂಗಳನುಳ್ಳುದು, ಅನಪಾಯಾಯಾಸಬಹುಲಂ ಚ = ಪಲವು ಕೇಡುಗಳಿಲ್ಲದದು, ಭವತಿ = ಅಕ್ಕುಂ, ತತ್ = ಅಂತಪ್ಪ, ಕಾರ್ಯಂ = ಕಾರ್ಯಮುಂ, ಅನುಷ್ಠೇಯಂ = ನೆಗಳಲ್ಪಡುವುದು || ಸುಖದಿಂದಪ್ಪ ಕಾರ್ಯಮಂ ಮಾಳ್ಪುದೆಂಬುದು ತಾತ್ಪರ್ಯಂ | | ಅದಕ್ಕೆ ದೃಷ್ಟಾಂತದಿಂ ಪೇಳ್ವುದುತ್ತರವಾಕ್ಯಂ :

ತದೇವ ಭೋಜ್ಯಂ ಯದೇವ ಪರಿಣಮತಿ || ೭೩ || ೩೪೮ ||

ಅರ್ಥ : ಯದೇವ = ಆವುದೊಂದು, ಪರಿಣಮತಿ = ಆಕ್ಕುವುದು, ತದೇವ = ಅದೇ, ಭೋಜ್ಯಂ = ಉಣಲ್ಪಡುವುದು || ಮಂತ್ರಿಗಳೋರ್ವರಾದೊಡಂ ದೋಷಮಿಲ್ಲೆಂಬುದುತ್ತರವಾಕ್ಯಂ :

ಯಥೋಕ್ತಗುಣಸಮವಾಯಿನ್ಯೇಕಸ್ಮಿನ್ ಯುಗಲೇ ವಾ ಮಂತ್ರಿಣಿ ನ ಕೋSಪಿ ದೋಷ[8]|| ೭೪ || ೩೪೯ ||

ಅರ್ಥ : ಯಥೋಕ್ತಗುಣಸಮವಾಯಿನಿ = ಇಂತು ಪೇಳ್ದಗುಣಂಗಳಂತಪ್ಪುವನುಳ್ಳ (ಶಾಸ್ತ್ರದಲ್ಲಿ ಹೇಳಿದಂಥಾ ಗುಣದ ಕೂಟಮನುಳ್ಳ) ಏಕಸ್ಮಿನ್ = ಓರ್ವಂ ಮೇಣ್, ಯುಗಲೇ ವಾ = ಈರ್ವರು ಮೇಣ್, ಮಂತ್ರಿಣಿ = ಮಂತ್ರಿಯಾಗುತ್ತಂವಿರಲು, ಕೋsಪಿ = ಆವುದುಂ | ನ ದೋಷಃ = ದೋಷಮಿಲ್ಲ || ಮಂತ್ರಿ ಗುಣಾಧಿಕನಾದೊಡೆ ಸಾಲ್ಗುಮೆಂಬುದು ತಾತ್ಪರ್ಯಂ || ಗುಣಮಿಲ್ಲದರ್ಪಲಂಬರ್ ಮಂತ್ರಿಗಳಾಗೆ ದೋಷಮಂ ಪೇಳ್ವುದುತ್ತರವಾಕ್ಯಂ :

ನ ಹಿ ಮಹಾನಪ್ಯಂಧಸಮುದಾಯೋ ರೂಪಮುಪಲಭತೇ || ೭೫ || ೩೫೦ ||

ಅರ್ಥ : ಅಂಧಸಮುದಾಯಃ = ಕುಱುಡರ ನೆರವಿ, ಮಹಾನಪಿ = ಪಿರಿದಾದೊಡಂ, ರೂಪಂ = ರೂಪಮಂ, ನ ಹಿ ಉಪಲಭತೇ = ಕಾಣ್ಬುದಲ್ಲದುದು || ಗುಣಮುಳ್ಳುರ್ ಕೆಲಂಬರ್ ಲೇಸೆಂಬುದು ತಾತ್ಪರ್ಯಂ || ಈಯುರ್ಥಮಂ ದೃಷ್ಟಾಂತದಿಂ ಪೇಳ್ವುದುತ್ತರವಾಕ್ಯಂ :

—-

೭೨. ಯಾವ ಕೆಲಸದಲ್ಲಿ ಗುಣದ ಹೆಚ್ಚಳವುಂಟೋ ಮತ್ತು ಆಯಾಸವೂ ಅಪಾಯವೂ ಇಲ್ಲವೋ ಅಂತಹ ಕೆಲಸವನ್ನು ಮಾಡಬೇಕು.

೭೩. ಜೀರ್ಣವಾಗುವಂಥದನ್ನೇ ತಿನ್ನಬೇಕು.

೭೪. ಇದುವರೆಗೆ ಹೇಳಿದ ಎಲ್ಲ ಗುಣಗಳನ್ನೂ ಉಳ್ಳ ಒಬ್ಬ ಅಥವಾ ಇಬ್ಬರು ಮಂತ್ರಿಗಳಿರುವುದರಿಂದ ಯಾವದೇ ದೋಷವಿಲ್ಲ.

೭೫. ಕುರುಡರ ಗುಂಪು ಎಷ್ಟು ದೊಡ್ಡದಾದರೂ ರೂಪ (ನೋಡಬೇಕಾದ್ದನ್ನು) ಗಳನ್ನು ನೋಡಲಾಗುವುದಿಲ್ಲ.

—-

ಅವಾರ್ಯವೀರ್ಯೌ ದ್ವೌ ಧುರ್ಯೌ ಕಿಂ ಮಹತಿ ಭಾರೇ ನ ನಿಯುಜ್ಯೇತೆ || ೭೬ || ೩೫೧ ||

ಅರ್ಥ : ಅವಾರ್ಯವೀರ್ಯೌ = ಪಿರಿದಪ್ಪ ಶಕ್ತಿಯನುಳ್ಳ, ದ್ವೌ = ಎರಡು, ಧುರ್ಯೌ = ಮೊದಲೊಳ್ ಪೂಡುವೆತ್ತುಗಳು (ಕಾರ್ಯಾಧುರಂಧರರಾದ) ಮಹತಿ = ಪಿರಿದಪ್ಪ, ಭಾರೇ = ಪೊಱೆಯೊಳ್, ಕಿಂ = ಏಂ, ನ ನಿಯುಜ್ಯೇತೇ = ಪೂಡಲ್ಕೆಪಡವೇ || ಪಲಂಬರಿಂದಪ್ಪ ಕಾರ್ಯಮಂ ಪೇಳ್ವುದುತ್ತರವಾಕ್ಯಂ :

ಬಹುಸಹಾಯೇ ರಾಜ್ಞಿ ಪ್ರಸೀದಂತಿ ಸರ್ವೇ ಮನೋರಥಾಃ || ೭೭ || ೩೫೨ ||

ಅರ್ಥ : ಬಹುಸಹಾಯೇ = ಪಲಂಬರ್ ಸಹಾಯಮನುಳ್ಳ, ರಾಜ್ಞಿ = ಅರಸನೊಳು, ಸರ್ವೇ = ಎಲ್ಲಾ, ಮನೋರಥಾಃ = ಬಯಕೆಗಳ್, ಪ್ರಸೀದಂತಿ = ಒಸೆವುದು || ಪಲರಿಂ ತೀರದ ಕಾರ್ಯಮಿಲ್ಲೆಂಬುದು ತಾತ್ಪರ್ಯಂ || ಓರ್ವನಾದೊಡಾಯಾಸಮಂ ಪೇಳ್ವುದುತ್ತಾರವಾಕ್ಯ :

ಏಕೋ ಪುರುಷಃ ಕೇಷು ನಾಮ ಕಾರ್ಯೇಸ್ವಾತ್ಮಾನಂ ವಿಭಜೇತ || ೭೮ || ೩೫೩ ||

ಅರ್ಥ : ಏಕಃ = ಓರ್ವ, ಪುರುಷಃ = ಪುರುಷಂ, ಹಿ = ನೆಟ್ಟನೆ, ಕೇಷು ನಾಮ = ಆವ, ಕಾರ್ಯೇಷು = ಕಾರ್ಯಂಗಳೊಳು, ಆತ್ಮಾನಂ = ತನ್ನ, ವಿಭಜೇತ = ಪಚ್ಚುಕೊಳ್ವಂ || ಪಲವು ಕಾರ್ಯಂಗಳೋರ್ವಂ ನೆಱೆಯನೆಂಬುದು ತಾತ್ಪರ್ಯಂ || ಈಯರ್ಥಮನೆ ದೃಷ್ಟಾಂತದಿಂ ಪೇಳ್ವುದುತ್ತರವಾಕ್ಯಂ :

ಕಿಮೇಕಶಾಖಾಚ್ಛಾಖಿನೋ ಮಹತೋSಪಿ ಭವತಿ ಛಾಯಾ || ೭೯ || ೩೫೪ ||

ಅರ್ಥ : ಏಕಶಾಖಾತ್ = ಒಂದು ಕೊಂಬನುಳ್ಳ, ಮಹತೋsಪಿ = ಪಿರಿದಪ್ಪ, ಶಾಖಿನಃ = ಮರನತ್ತಣಿಂ, ಛಾಯಾ = ನೆಳಲ್, ಕಿಂ ಭವತಿ = ಏನಕ್ಕುಮೇ || ಕಾರ್ಯಮಾದಾಗಳ್ ಪುರುಷರಂ ನೆರಪಲ್ಪಾರದೆಂಬುದುತ್ತವಾಕ್ಯಂ :

—-

೭೬. ಹೆಚ್ಚು, ಶಕ್ತಿಯುಳ್ಳ ಎರಡು ಎತ್ತುಗಳನ್ನು ಹೆಚ್ಚು ಭಾರವನ್ನು ಎಳೆಯುವುದಕ್ಕೆ ಹೂಡುವುದಿಲ್ಲವೇ?

೭೭. ಹಲವರ ಸಹಾಯವುಳ್ಳ ರಾಜನ ಎಲ್ಲ ಅಪೇಕ್ಷೆಗಳೂ ಸಿದ್ಧಿಸುತ್ತವೆ.

೭೮. ಒಬ್ಬನೇ ಮನುಷ್ಯನು ಎಷ್ಟು ಕೆಲಸಗಳಲ್ಲಿ ತೊಡಗಬಹುದು?

೭೯. ಒಂದೇ ರೆಂಬೆಯುಳ್ಳ ಮರವು ಎಷ್ಟು ದೊಡ್ಡದಾದರೂ ಬಹಳ ರೆಂಬೆಯುಳ್ಳ ಮರದಷ್ಟು ನೆರಳು ಕೊಟ್ಟೀತೆ?

—-

ಕಾರ್ಯಕಾಲೇ ದುರ್ಲಭಃ ಪುರುಷಸಮವಾಯಃ || ೮೧ || ೩೫೫ ||

ಅರ್ಥ : ಕಾರ್ಯಕಾಲೇ = ಕಾರ್ಯ ಪುಟ್ಟಿದಾಗಳು, ಪುರುಷಸಮಾವಾಯಃ = ಪುರಷರ ನೆಱವಿ, ದುರ್ಲಭಃ = ದುರ್ಲಭಂ || ಪುರುಷಸಂಗ್ರಹಂ ಮುನ್ನಿಲ್ಲದಿರೆ ಕಾರ್ಯಮಾಗದೆಂಬುದು ತಾತ್ಪರ್ಯಂ || ಈಯರ್ತಮಂ ದೃಷ್ಟಾಂತದಿಂ ಪೇಳ್ವುದುತ್ತರವಾಕ್ಯಂ :

ದೀಪ್ತೇ ಗೃಹೇ ಕೀದೃಶಂ ಕೂಪಖನನಂ || ೮೧ || ೩೫೬ ||

ಅರ್ಥ : ದೀಪ್ತೇ ಗೃಹೇ = ಮನೆ ಬೇವು(ಉರಿ)ತ್ತಿರಲು, ಕೂಪಖನನಂ = ಬಾವಿಯನಗುಳ್ವುದು, ಕೀದೃಶಂ = ಎಂತುಟು || ಧನಸಂಗ್ರಹಂ ಸಾಲ್ವುದೆಂಬುದಕ್ಕೆ ದೋಷಮಂ ಪೇಳ್ವುದುತ್ತರವಾಕ್ಯಂ :

ನ ಧನಂ ಪುರುಷಸಂಗ್ರಹಾತ್ ಬಹುಮಂತವ್ಯಂ || ೮೨ || ೩೫೭ ||

ಅರ್ಥ : ಪುರುಷಸಂಗ್ರಹಾತ್ = ಪುರುಷಸಂಗ್ರಹದತ್ತಣಿಂ | ಧನಂ = ಅರ್ಥಂ, ನ ಬಹುಮಂತವ್ಯಂ = ಪಿರಿದೆಂದು ಬಗೆಯಲ್ಪಡದು || ಅರ್ಥಮಂ ಕೊಟ್ಟು ಪುರುಷಸಂಗ್ರಹಂ ಮಾಳ್ಕೆಂಬುದು ತಾತ್ಪರ್ಯಂ || ಕಾರ್ಯಪುರುಷರ್ಗರ್ಥಮಂ ಕೊಟ್ಟಲ್ಲಿ ಫಲಮಂ ಪೇಳ್ವುದುತ್ತರವಾಕ್ಯಂ :

ಸುಕ್ಷೇತ್ರೇಷೂಪ್ತಬೀಜಮಿವ[9] ಕಾರ್ಯಪುರುಷೇಷು ದತ್ತಂ ಧನಂ ಶತಶಃ ಫಲತಿ || ೮೩ || ೩೫೮ ||

ಅರ್ಥ : ಸುಕ್ಷೇತ್ರೇಷು = ಸುಭೂಮಿಗಳೊಳ್ | ಉಪ್ತಂ = ಬಿತ್ತೆಪಟ್ಟ, ಬೀಜಂ ಇವ = ಬೀಜದಂತೆ, ಕಾರ್ಯಪುರುಷೇಷು = ಕಾರ್ಯಪುರುಷರೊಳ್, ದತ್ತಂ = ಕುಡೆಪಟ್ಟ, ಧನಂ = ಅರ್ಥಂ, ಶತಶಃ = ನೊಱು ತೆಱದಿಂ, ಫಲತಿ = ಫಲಿಯಿಸುಗುಂ || ಪುರುಷಸಂಗ್ರಹವಾಗಲ್ವೇಳ್ಕುಮೆಂಬುದು ತಾತ್ಪರ್ಯಂ || ಕಾರ್ಯಪುರುಷರಂ ಪೇಳ್ವುದುತ್ತರವಾಕ್ಯಂ :

—-

೮೦. ಕಾರ್ಯಗಳಾಗಬೇಕಾದಾಗ ಜನಗಳು ಒಟ್ಟಿಗೆ ಸೇರುವುದು ಕಠಿಣ.

೮೧. ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಲಾದೀತೆ?

೮೨. ಜನ ಸಹಾಯವನ್ನು ಸಂಗ್ರಹಿಸಿಕೊಳ್ಳುವದಕ್ಕಿಂತ ಧನವೇ ಹೆಚ್ಚಿನದೆಂದು ತಿಳಿದುಕೊಳ್ಳಬಾರದು.

೮೩. ಒಳ್ಳೆಯ ಹೊಲದಲ್ಲಿ ಬಿತ್ತಿದ ಬೀಜದಂತೆ ಕಾರ್ಯಶೀಲರಿಗೆ ಕೊಟ್ಟ ಧನವು ನೂರು ಪಟ್ಟು ಹೆಚ್ಚು ಫಲಕಾರಿಯಾಗುತ್ತದೆ.

—-

ಬುದ್ಧಾವರ್ಥೇ ಯುದ್ಧೇ ಚ ಯೇ ಸಹಾಯಾಸ್ತೇ ಕಾರ್ಯಪುರುಷಾಃ || ೮೪ || ೩೫೯ ||

ಅರ್ಥ : ಬುದ್ಧೌ = ಬುದ್ಧಿಯೊಳಂ, ಅರ್ಥೇ = ಅರ್ಥದೊಳಂ, ಯುದ್ಧೇ ಚ = ಕಾಳೆಗದೊಳಂ, ಯೇ = ಆರ್, ಸಹಾಯಾಃ = ಸಹಾಯರುಂ, ತೇ = ಆವರ್, ಕಾರ್ಯಪುರುಷಾಃ = ಕಾರ್ಯಪುರುಷರೆಂಬರ್ || ಕಾರ್ಯಪುರುಷರೇ ಬಾರ್ತೆ ಎಂಬುದು ತಾತ್ಪರ್ಯಂ || ಭೋಜನಸಹಾಯರ್ ಪಲರೆಂಬುದುತ್ತರವಾಕ್ಯಂ :

ಖಾದಾಚಾಮಯೋಸ್ತು [10]ಕಸ್ಯ ಕೋ ನಾಮ ನ ಸಹಾಯಃ || ೮೫ || ೩೬೦ ||

ಅರ್ಥ : ಖಾದಾಚಾಮಯೋಸ್ತು = ಖಚ್ಜಾಯದಲ್ಲಿಯು, ಭೋಜನದಲ್ಲಿಯುಂ, ಕೋ ನಾಮ = ಆವಂ, ಕಸ್ಯ = ಆವಂಗೆ, ನ ಸಹಾಯಃ = ಸಹಾಯನಲ್ಲ || ಕಾರ್ಯಮಂ ಮಾಳ್ವರಿಲ್ಲೆಂಬುದು ತಾತ್ಪರ್ಯಂ || ಮೂರ್ಖ ಮಂತ್ರಿಯಲ್ಲೆಂಬುದುತ್ತರವಾಕ್ಯಂ :

ಆಶ್ರೋತ್ರಿಯಸ್ಯ ಶ್ರಾದ್ಧ ಇವ ನ ಮಂತ್ರೇ ಮೂರ್ಖಸ್ಯಾಧಿಕಾರೋSಸ್ತಿ || ೮೬ || ೩೬೧ ||

ಅರ್ಥ : ಅಶ್ರೋತ್ರಿಯಸ್ಯ = ಶ್ರೋತ್ರಿಯ(ವೇದವಿಲ್ಲದವಂಗೆ) ನಲ್ಲದಂಗೆ, ಶ್ರಾದ್ಧ ಇವ = ಶ್ರಾದ್ಧದೊಳೆಂತಂತೆ, ಮೂರ್ಖಸ್ಯ = ಮೂರ್ಖಂಗೆ, ಮಂತ್ರೇ = ಆಳೋಚನೆಯೊಳು, ಅಧಿಕಾರಃ = ಅಧಿಕಾರಂ, ನಾಸ್ತಿ = ಇಲ್ಲ || ಅಱಿಯದರೊಳಾಲೋಚಿಸಲಾಗದೆಂಬುದು ತಾತ್ಪರ್ಯಂ || ಅದಕ್ಕೆ ದೃಷ್ಟಾಂತಮಂ ಪೇಳ್ವುದುತ್ತರವಾಕ್ಯಂ :

ಕಿಂ ನಾಮಾಂಧಃ ಪಶ್ಯೇತ್ || ೮೭ || ೩೬೨ ||

ಅರ್ಥ : ಅಂಧಃ = ಕಣ್ಣಿಲ್ಲದಂ, ಕಿಂ ನಾಮ ಪಶ್ಯೇತ್ = ಏಂ ಕಾಣ್ಗುಮೆ

—-

೮೪. ಬುದ್ಧಿಯಲ್ಲಿ, ಅರ್ಥದಲ್ಲಿ, ಯುದ್ಧದಲ್ಲಿ ಸಹಾಯಕರಾಗಿ ನಿಲ್ಲುವವರೇ ಕಾರ್ಯಪುರುಷರು.

೮೫. ಭೋಜನಸಮಯದಲ್ಲಿ ಸೇರುವುದಕ್ಕೆ ಯಾರು ತಾನೆ ಸಿದ್ಧರಾಗರು?

೮೬. ಶೋತ್ರಿಯನಲ್ಲದವನಿಗೆ ಶ್ರಾದ್ಧಕ್ಕೆ ಹೇಗೆ ಅಧಿಕಾರವಿಲ್ಲವೋ ಹಾಗೆ ಮೂರ್ಖನಿಗೆ ಮಂತ್ರಾಲೋಚನೆಯಲ್ಲಿ ಅಧಿಕಾರವಿಲ್ಲ.

೮೭. ಕುರುಡನು ನೋಡಬಲ್ಲನೇ?

—-

 

[1]ಚೌ ದಲ್ಲಿ ದೃಷ್ಟಿರಿವ ಎಂಬ ಪದಗಳಿಲ್ಲ.

[2]ಚೌ ದಲ್ಲಿ ಅಚ್ಛೇದ್ಯಂ ವಾ ಎಂಬ ಪದಗಳಿಲ್ಲ.

[3]ಮೈ. ಚೌ. ಸಚೇತನಃ.

[4]ಚೌ. ಸಂಹತೌ ರಾಜ್ಯಂ ವಿನಾಶಯತಃ.

[5]ಎಣ್ಬರುಂ ಎಂಬುದರ ಬದಲಿಗೆ ಏಳು ಎಂದಿರಬೇಕು.

[6]ಚೌದಲ್ಲಿ ಇದು ಎರಡು ವಾಕ್ಯಗಳಾಗಿ ವಿಭಜಿಲಸ್ಪಟ್ಟಿದೆ.

[7]ಮೈ., ಚೌ. ಅನಪಾಯಬಹುಲಂ

[8]ಒಬ್ಬನೇ ಅಥವಾ ಇಬ್ಬರೇ ಮಂತ್ರಿಗಳಿರಬಾರದು ಎಂಬ ಮೇಲಿನ ವಾಕ್ಯಗಳಿಗೆ ಇದು ವಿರುದ್ಧವಾಗಿದೆ. ಆದರೆ, ಯೋಗ್ಯತೆ ಮತ್ತು ಗುಣಗಳಿದ್ದರೆ ಅಡ್ಡಿ ಇಲ್ಲ ಎಂಬ ಅಪವಾದವನ್ನು ಹೇಳಿದಂತಿದೆ.

[9]ಚೌ. ಸುಕ್ಷೇತ್ರೇ ಬೀಜಮಿವ ಪುರುಷೇಷೂಪ್ತಂ ಕಾರ್ಯಂ ಶತಶಃ ಫಲತಿ.

[10]ಮೈ., ಚೌ. ಖಾದನವೇಲಾಯಾಂ.