ಆಕಾಶೇ ಪ್ರತಿಶಬ್ದವತಿ ಚಾಲಯೇ ನ[1] ಮಂತ್ರಯೇತ್ || ೨೬ || ೩೦೧ ||

ಅರ್ಥ : ಆಕಾಶೇ = ಬಯಲೊಳಂ, ಪ್ರತಿಶಬ್ದವತಿ = ಮಾರ್ದನಿಯನುಳ್ಳ, ಆಲಯೇ ಚ = ಠಾವಿನೊಳುಂ, ನ ಮಂತ್ರಯೇತ್ = ಆಲೋಚಿಸದಿರ್ಕ್ಕೆ || ಇಂತಪ್ಪಲ್ಲಿ ಮಂತ್ರಭೇದಮಕ್ಕುಮೆಂಬುದು ತಾತ್ಪರ್ಯಂ ||

ಮುಖವಿಕಾರಕರಾಭಿನಯಾಭ್ಯಾಂ ಪ್ರತಿಧ್ವಾನೇನ ವಾ ಮನಸ್ಥ ಮಪೃರ್ಥಮ
ಭ್ಯೂಹಂತಿ ವಿಚಕ್ಷಣಾಃ
|| ೨೭ || ೩೦೨ ||

ಅರ್ಥ : ಮುಖವಿಕಾರಕರಾಭಿನಯಾಭ್ಯಾಂ = ಮುಖವಿಕಾರ-ಹಸ್ತದಿಂದ ಅನುಕರಿಸುಹ ಯೆಂಬಿವಱಿಂದ, ಪ್ರತಿಧ್ವಾನೇನ ವಾ = ಪ್ರತಿಧ್ವನಿಯಿಂ ಮೇಣ್, ಪರಮನಸ್ಥಮಪಿ = ಪರಮನೋಗತಮಪ್ಪ, ಅರ್ಥಂ = ಕಾರ್ಯವನು, ವಿಚಕ್ಷಣಾಃ = ಪ್ರೌಢರು, ಅಭ್ಯೂಹಂತಿ = ಊಹಿಸುವರು || ಗೂಢಮಂತ್ರನಾಗಲ್ವೇಳ್ಕುಮೆಂಬುದು ತಾತ್ಪರ್ಯಂ ||

ಆಕಾರ್ಯಸಿದ್ಧೇಃ ರಕ್ಷಿತವ್ಯೋ ಮಂತ್ರಃ || ೨೮ || ೩೦೩ ||

ಅರ್ಥ : ಆಕಾರ್ಯಸಿದ್ಧೇಃ = ಕಾರ್ಯಸಿದ್ಧಿಯಹನ್ನಬರಂ, ಮಂತ್ರ = ಮಂತ್ರವು, ರಕ್ಷಿತವ್ಯಃ = ರಕ್ಷಿಸಲ್ಬೇಕಾದುದು ||

ದಿವಾ ನಕ್ತಂ ವಾsಪರೀಕ್ಷ್ಯ ಮಂತ್ರಯಮಾಣಸ್ಯ ಪ್ರಚ್ಛನ್ನೋsವಮತೋ ವಾ[2]
ಭಿನತ್ತಿ ಮಂತ್ರಂ
|| ೨೯ || ೩೦೪ ||

ಅರ್ಥ : ದಿವಾ ನಕ್ರಂ ವಾ = ಹಗಲಾಗಲಿ, ಇರುಳಾಗಲಿ, ಅಪರೀಕ್ಷ್ಯ = ಪರೀಕ್ಷಿಸದೆ, ಮಂತ್ರಯಮಾಣಸ್ಯ = ಮಂತ್ರಾಳೋಚನಮಮಾಡುವ, ಮಂತ್ರಂ = ಮಂತ್ರವನು, ಪ್ರಚ್ಛನ್ನಃ = ಮಱೆಯಲ್ಲಿಯಿದ್ದವನು | ಅವಮತೋ ವಾ = ಹೊಱವಡುವನತ್ತಣಿಂ ಮೇಣ್, ಭಿನತ್ತಿ = ಭೇದಿಸುವನು || ಅದಕ್ಕೆ ದೃಷ್ಟಾಂತಮಂ ಪೇಳ್ವುದುತ್ತರವಾಕ್ಯಂ :

—-

೨೬. ಬಯಲಿನಲ್ಲಿಯೂ, ಪ್ರತಿಧ್ವನಿಸುವ ಕಟ್ಟಡಗಳಲ್ಲೂ ಮಂತ್ರಾಲೋಚನೆ ಮಾಡಬಾರದು.

೨೭. ಮುಖ ವಿಕಾರ, ಕೈಯಾಡಿಸುವುದು (ಹಸ್ತಾಭಿನಯ) ಇವುಗಳಿಂದಲೂ, ಪ್ರತಿಧ್ವನಿಯಿಂದಲೂ ಪರರ ಮನಸ್ಸಿನಲ್ಲಿರುವ ಅಭಿಪ್ರಾಯಗಳನ್ನು ಬುದ್ಧಿವಂತರು ಊಹಿಸಿಕೊಳ್ಳುತ್ತಾರೆ.

೨೮. ಕಾರ್ಯಸಿದ್ಧಿಯಾಗುವವರೆಗೂ ಆಲೋಚನೆಯನ್ನು ರಹಸ್ಯವಾಗಿಟ್ಟಿರಬೇಕು.

೨೯. ಹಗಲು ಇರುಳುಗಳನ್ನು ಪರೀಕ್ಷಿಸದೆ ಮಂತ್ರಾಲೋಚನೆ ಮಾಡುವ ವಿಷಯಗಳನ್ನು ಮರೆಯಲ್ಲಿದದ್ವನು ಬಹಿರಂಗಪಡಿಸುವನು.

—-

ಶ್ರೂಯತೇ ಹಿ ಕಿಂ ರಜನ್ಯಾಂ ವಟವೃಕ್ಷೇ ಪ್ರಚ್ಛನ್ನೋ ವರರುಚಿರ[3]ಪ್ರಶಿಖೇತ್ಯಸ್ಯ
ಪ್ರಶ್ನಸ್ಯ ಪಿಶಾಚೇಭ್ಯೋ ವೃತ್ತಾಂತಮುಪಶ್ರುತ್ಯ ತಚ್ಚತುರಕ್ಷರಾದ್ಯೈಃ ಪಾದೈಃ
ಶ್ಲೋಕಂ ಚಕಾರೇತಿ
|| ೩೦ || ೩೦೫ ||

ಅರ್ಥ : ಶ್ರೂಯತೇ ಹಿ = ಕೇಳಲ್ಪಟ್ಟುದಲ್ತೆ, ರಜನ್ಯಾಂ = ರಾತ್ರಿಯೊಳು | ವಟವೃಕ್ಷೇ = ಆಲದ ಮರನೊಳ್, ಪ್ರಚ್ಛನ್ನಃ = ಅಡಂಗಿರ್ದ, ವರರುಚಿಃ = ವರರುಚಿಭಟ್ಟಂ, ಅಪ್ರಶಿಖೇತ್ಯಸ್ಯ = ಅಪ್ರಶಿಖಮೆಂಬೀ, ಪ್ರಶ್ನಸ್ಯ = ಪ್ರಶ್ನದ, ವೃತ್ತಾಂತಂ = ನೆಗಳ್ತೆಯಂ, ಪಿಶಾಚೇಭ್ಯಃ = ಪಿಶಾಚಂಗಳತ್ತಣಿಂ, ಉಪಶ್ರುತ್ಯ = ಕೇಳಿ, ತಚ್ಚತುರಕ್ಷರಾದ್ಯೈಃ = ಆ ನಾಲ್ಕನೆಯಕ್ಷರಂಗಳ ಮೊದಲಾಗೊಡೆಯ, ಪಾದೈಃ = ಪಾದಂಗಳಿಂ, ಶ್ಲೋಕಂ = ಶ್ಲೋಕಮಂ, ಚಕಾರ ಇತಿ = ಮಾಡಿದನೆಂದಿಂತು || ಇಂತಪ್ಪಲ್ಲಿ ಆಳೋಚಿಸಲಾಗದೆಂಬುದು ತಾತ್ಪರ್ಯಂ ||

ನ ತೈಃ ಸಹ ಮಂತ್ರಯೇದ್ಯೇಷಾಂ ಪಕ್ಷಿಯೇಷ್ವಪಕುರ್ಯಾತ್ || ೩೧ || ೩೦೬ ||

ಅರ್ಥ : ತೈಃ ಸಹ = ಅವರ್ಗಳೊಡನೆ, ನ ಮಂತ್ರಯೇತ್ = ಆಲೋಚಿಸದಿರ್ಕೆ, ಏಷಾಂ = ಆರ್ಕೆಲಂಬಱ, ಪಕ್ಷಿಯೇಷು = ಸಂಬಂಧಿಗಳಪ್ಪವರ್ಗಳೊಳ್, ಅಪಕುರ್ಯಾತ್ = ಅಪಕಾರಮಂ ಮಾಳ್ಕುಂ || ಶತ್ರುಗಳೊಡನಾಲೋಚಿಸಿದೊಡೆ ನಿಷ್ಫಲಮಕ್ಕುಮೆಂಬುದು ತಾತ್ಪರ್ಯಂ || ಆಳೋಚನೆಯಿಂ ಇಂತಪ್ಪನಿರಲಾಗದೆಂಬುದುತ್ತರವಾಕ್ಯಂ :

—-

೩೦. ರಾತ್ರಿಯಲ್ಲಿ ಆಲದಮರದ ಮೇಲೆ ಅಡಗಿಕೊಂಡಿದ್ದ ವರರುಚಿಯು ಅಲ್ಲಿ ಮಾತಾಡಿಕೊಳ್ಳುತ್ತಿದ್ದ ಪಿಶಾಚಿಗಳಿಂದ ಅಪ್ರಶಿಖ ಎಂಬ ಅಕ್ಷರಗಳಿಗೆ ಸಂಬಂಧಿಸಿದ ವೃತ್ತಾಂತವನ್ನು ತಿಳಿದುಕೊಂಡು ಆ ನಾಲ್ಕು ಅಕ್ಷರಗಳನ್ನು ನಾಲ್ಕು ಪಾದಗಳ ಪ್ರಾರಂಭದಲ್ಲಿ ಉಳ್ಳ ಶ್ಲೋಕವನ್ನು ರಚಿಸಿದನೆಂಬುದನ್ನು ಕೇಳಿದ್ದೇವೆ.

೩೧. ಯಾರ ಪಕ್ಷದ ಅನುಯಾಯಿಗಳಿಗೆ ಅಪಕಾರವಾಗುವುದೋ ಅವರೊಂದಿಗೆ ಮಂತ್ರಾಲೋಚನೆ ಮಾಡಬಾರದು.

—-

ಅನಿಯುಕ್ತೋ[4] ಮಂತ್ರಕಾಲೇನ ತಿಷ್ಠೇತ್ || ೩೨ || ೩೦೭ ||

ಅರ್ಥ : ಅನಿಯುಕ್ತಃ = ಮಂತ್ರಕ್ಕುಪಯೋಗಿಯಲ್ಲದಂ, ಮಂತ್ರಕಾಲೇ = ಆಳೋಚಿಪವಸರದಲ್ಲಿ, ನ ತಿಷ್ಠೇತ್ = ನಿಲದಿರ್ಕ್ಕೆ || ಆಳೋಚನೆಯೊಳಗೆ ಮಧ್ಯಸ್ಥರಲ್ಲದಿರಲಾಗದೆಂಬುದು ತಾತ್ಪರ್ಯಂ || ಮಂತ್ರಿಭೇದದಿಂದಾದ ದೋಷಮಂ ಪೇಳ್ವುದುತ್ತರವಾಕ್ಯಂ :

ಮಂತ್ರಭೇದಾದುತ್ಪನ್ನಂ[5] ವ್ಯಸನಂ ದುಃಪ್ರತಿವಿಧೇಯಮಪ್ರತಿವಿಧೇಯಂ[6] ವಾ || ೩೩ || ೩೦೮ ||

ಅರ್ಥ : ಮಂತ್ರಭೇದಾತ್ = ಮಂತ್ರಭೇದದತ್ತಣಿಂ, ಉತ್ಪನ್ನಂ = ಪುಟ್ಟಿದ, ವ್ಯಸನಂ = ದುಃಖಂ, ದುಃಪ್ರತಿವಿಧೇಯಂ = ದುಃಖದಿಂ ಮಾಣಿಸಲ್ಪಡುವ, ಅಪ್ರತಿವಿಧೇಯಂ ವಾ = ಮಾಣಿಸಲಱಿದು ಮೇಣ್ || ಮಂತ್ರಭೇದಮನಾಗಲೀಯದಿರ್ಪುದೆಂಬುದು ತಾತ್ಪರ್ಯಂ || ಪೆಱವು ಮಂತ್ರಭೇದಕಾರಣಮಂ ಪೇಳ್ವುದುತ್ತರವಾಕ್ಯಂ :

ಇಂಗಿತಮಾಕಾರೋ ಮದಪ್ರಮಾದೋ ನಿದ್ರಾ ಚ ಮಂತ್ರಭೇದ ಕಾರಣಾನಿ || ೩೪ || ೩೦೯ ||

ಅರ್ಥ : ಇಂಗಿತಂ = ಇಂಗಿತಮುಂ, ಆಕಾರಃ = ಆಕಾರಮುಂ, ಮದ = ಮದಮುಂ, ಪ್ರಮಾದಃ = ಪ್ರಮಾದಮುಂ, ನಿದ್ರಾ ಚ = ನಿದ್ರೆಯುಮೆಂಬಿವು, ಮಂತ್ರಭೇದಕಾರಣಾನಿ = ಮಂತ್ರಭೇದಕ್ಕೆ ಕಾರಣಂಗಳು || ಅವಱ ಸ್ವರೂಪಮಂ ಪೇಳ್ವುದುತ್ತರವಾಕ್ಯಂ :

—-

೩೨. ಮಂತ್ರಾಲೋಚನೆಗೆ ಸಂಬಂಧಿಸಿಲ್ಲದವನು ಆ ಕಾಲದಲ್ಲಿ ಇರಕೂಡದು.

೩೩. ಮಂತ್ರಾಲೋಚನೆಯ ವಿಷಯವು ಹೊರಬೀಳುವುದರಿಂದ ಆಗುವ ತೊಂದರೆಯನ್ನು ತಪ್ಪಿಸುವುದು ಕಷ್ಟ.

೩೪. ಇಂಗಿತ. ಆಕಾರ, ಮದ, ಪ್ರಮಾದ, ನಿದ್ರೆ ಇವು ಮಂತ್ರಭೇದಕ್ಕೆ ಕಾರಣಗಳು.

—-

ಇಂಗಿತಮನ್ಯಥಾಪ್ರವೃತ್ತಿಃ || ೩೫ || ೩೧೦ ||

ಅರ್ಥ : ಇಂಗಿತಂ = ಇಂಗಿತಮೆಂಬುದು, ಅನ್ಯಥಾಪ್ರವೃತ್ತಿಃ = ಮುನ್ನಿನಂದಮುಂ ನೋಡಲ್ಕೊಂದು ತೆಱದ ಮನೋವಚನಕಾಯಕದ ಸೂಕ್ಷ್ಮ ಚೇಷ್ಚೆ ||

ಕೋಪಪ್ರಸಾದಜನಿತಾ ಶಾರೀರೀ[7] ವಿಕೃತಿರಾಕಾರಃ || ೩೬ || ೩೧೧ ||

ಅರ್ಥ : ಕೋಪಪ್ರಸಾದಜನಿತಾ = ಮುನಿಸುಮೊಸಗೆಯುಮೆಂಬಿವಱಿಂದಾದ, ಶಾರೀರೀ = ಶರೀರದೊಳಾದ, ವಿಕೃತಿಃ = ವಿಕಾರಂ, ಆಕಾರಃ = ಆಕಾರಮೆಂಬುದು ||

ಪಾನಸ್ತ್ರೀಸಂಗಾದಿಜನಿತೋ ಹರ್ಷೋ ಮದಃ || ೩೭ || ೩೧೨ ||

ಅರ್ಥ : ಪಾನ = ಮದ್ಯಮುಂ, ಸ್ತ್ರೀಸಂಗಾದಿ = ಸ್ತ್ರೀಯರ ಕೊಟಮುಂ ಮೊದಲಾಗೊಡೆಯವಱಿಂ, ಜನಿತಃ = ಪುಟ್ಟಿದ, ಹರ್ಷಃ = ಸಂತೋಷಂ, ಮದಃ = ಮದಮೆಂಬುದು |

ಪ್ರಮಾದೋ ಗೋತ್ರಸ್ಖಲನಾದಿಹೇತುಃ || ೩೮ || ೩೧೩ ||

ಅರ್ಥ : ಪ್ರಮಾದಃ = ಪ್ರಮಾದಮೆಂಬುದು, ಗೋತ್ರಸ್ಖಲನಾದಿಹೇತುಃ = ಮತ್ತೊಂದು ಪೆಸರ್ಗೊಳ್ಪುದು ಮೊದಲಾಗೊಡೆಯುವಱಿಂದಾದುದು ||

ಅನ್ಯಚ್ಚಿ [8]ಕೀರ್ಷತೋSನ್ಯಥಾ ಪ್ರವೃತ್ತಿರ್ವಾ ಪ್ರಮಾದಃ || ೩೯ || ೩೧೪ ||

ಅರ್ಥ : ಅನ್ಯಚ್ಚಿಕೀರ್ಷತಃ = ಒಂದಂ ಮಾಡಲಿರ್ಚ್ಛಿಸುತ್ತಿರ್ದನ, ಅನ್ಯಥಾ ಪ್ರವೃತ್ತಿರ್ವಾ = ಮತ್ತೊಂದು ತೆಱದ ನೆಗಳ್ತೆ ಮೇಣ್, ಪ್ರಮಾದಃ = ಪ್ರಮಾದಮೆಂಬುದು ||

—-

೩೫. ನೋಡುವುದಕ್ಕೆ ಸಾಮಾನ್ಯವಾಗಿರದ ಚೇಷ್ಟೆಯು ಇಂಗಿತ ಎಂಬುದು.

೩೬. ಕೋಪ, ಸಂತೋಷಗಳಿಂದ ಉಂಟಾಗುವ ಶರೀರದ ವಿಕಾರವು ಆಕಾರ ಎಂಬುದು.

೩೭. ಮದ್ಯ, ಸ್ತ್ರೀಸಹವಾಸ ಮೊದಲಾದವುಗಳಿಂದ ಉಂಟಾದ ಸಂತೋಷವು ಮದವು.

೩೮. ಒಂದು ಹೆಸರಿಗೆ ಪ್ರತಿಯಾಗಿ ಮತ್ತೊಂದು ಹೆಸರಿಟ್ಟು ಕರೆಯುವುದು ಮೊದಲಾದವುಗಳಿಂದಾದದ್ದು ಪ್ರಮಾದ.

೩೯. ಒಂದು ಮಾಡಲಿಚ್ಛಿಸಿದವನು ಮತ್ತೊಂದು ರೀತಿಯಲ್ಲಿ ಮಾಡಲು ಇಚ್ಛಿಸುವುದು ಅಥವಾ ಬೇರೆ ರೀತಿಯ ನಡುವಳಿಕೆಯು ಪ್ರಮಾದ.

—-

ಜಲ್ಪಾಂಗವಿಕಾರಹೇತು[9]ರ್ನಿದ್ರಾ || ೪೦ || ೩೧೫ ||

ಅರ್ಥ : ಜಲ್ಪ = ಕನವರಿಪುದುಂ, ಅಂಗವಿಕಾರಹೇತುಃ = ಕಾರ್ಯಕ್ಕನುರೂಪಮಪ್ಪ ಶರೀರದ ವಿಕಾರಮೆಂದಿವಕ್ಕೆ ಕಾರಣಮಪ್ಪುದು, ನಿದ್ರಾ = ನಿದ್ರೆಯೆಂಬುದು || ಇನಿತುಮಾದೊಡೆ ಕಾರ್ಯಹಾನಿಯಕ್ಕುಮೆಂಬುದು ತಾತ್ಪರ್ಯಂ || ಕಾರ್ಯಮಂ ತಡೆಯದೆ ಮಾಳ್ಕುಮೆಂಬು ದುತ್ತರವಾಕ್ಯಂ :

ಉದ್ಧೃತಮಂತ್ರೋ ನ ದೀರ್ಘಸೂತ್ರಃ ಸ್ಯಾತ್ || ೪೧ || ೩೧೬ ||

ಅರ್ಥ : ಉದ್ಧೃತಮಂತ್ರಃ = ಆಳೋಚನೆಯಂ ಮಾಡಿದಂ, ನ ದೀರ್ಘ ಸೂತ್ರಃ ಸ್ಯಾತ್ = ತಡೆಯದಿರ್ಕ್ಕೆ || ತಡೆಯೆ ವಿಘ್ನಮಕ್ಕುಮೆಂಬುದು ತಾತ್ಪರ್ಯಂ || ಬಱಿಯಾಳೋಚನೆಯಿಂ ಕಾರ್ಯಸಿದ್ಧಿಯಿಲ್ಲೆಂಬುದುತ್ತರ ವಾಕ್ಯಂ :

ಅನನುಷ್ಠಾನೇ ಛಾತ್ರವತ್[10] ಕಿಂ ಮಂತ್ರೇಣ || ೪೨ || ೩೧೭ ||

ಅರ್ಥ : ಅನನುಷ್ಠಾನೇ = ನೆಗಳದಿರ್ದೊಡೆ, ಛಾತ್ರವತ್ = ಓದಿ ಅನುಷ್ಠಾನವಂ ಮಾಡದ ಛಾತ್ರನ ಹಾಂಗೆ, ಕಿಂ = ಏಂ, ಮಂತ್ರೇಣ = ಮಂತ್ರದಿಂ || ಈ ಯರ್ಥಮನೆ ದೃಷ್ಟಾಂತದಿಂ ಪೇಳ್ವುದುತ್ತರವಾಕ್ಯಂ :

ನಹ್ಯೌಷಧಪರಿಜ್ಞಾನಾದೇವ ವ್ಯಾಧಿಪ್ರಶಮಃ || ೪೩ || ೩೧೮ ||

ಅರ್ಥ : ಔಷಧಪರಿಜ್ಞಾನಾದೇವ = ಮದ್ದಿನಱಿತದಿಂದಮೆ, ವ್ಯಾಧಿಪ್ರಶಮಃ = ಕುತ್ತದ ಮದ್ದುಗೆ[11], ನ ಹಿ = ಇಲ್ಲ ||

—-

೪೦. ಕನವರಿಸುವುದು, ಅವ್ಯವಹಾರಗಳ ವಿಕಾರಕ್ಕೆ ಕಾರಣವಾದುದು, ನಿದ್ರೆ.

೪೧. ಆಲೋಚನೆ ಮಾಡಿ ನಿರ್ಧರಿಸಿದ ಕೆಲಸವನ್ನು ಜರುಗಿಸುವುದರಲ್ಲಿ ತಡವಾಗಬಾರದು.

೪೨. ಓದಿ ಅನುಷ್ಠಾನ ಮಾಡದ ವಿದ್ಯಾರ್ಥಿಯ ಹಾಗೆ ಕೇವಲ ಮಂತ್ರಾಲೋಚನೆಯಿಂದ ಏನು ಪ್ರಯೋಜನ?

೪೩. ಔಷಧಿಯ ಬಗ್ಗೆ ತಿಳಿದ ಮಾತ್ರದಿಂದ ವ್ಯಾಧಿ ನಿವಾರಣೆಯಾಗದು.

—-

ನಾಸ್ತ್ಯವಿವೇಕಾತ್ಪರಃ ಪ್ರಾಣಿನಾಂ ಶತ್ರುಃ || ೪೪ || ೩೧೯ ||

ಅರ್ಥ : ಪ್ರಾಣಿನಾಂ = ಪ್ರಾಣಿಗಳ್ಗೆ, ಅವಿವೇಕಾತ್ ಪರಃ = ಅವಿವೇಕದತ್ತಣಿಂ ಬಿಟ್ಟು ಮತ್ತೊಂದು, ಶತ್ರುಃ = ಹಗೆ, ನಾಸ್ತಿ = ಇಲ್ಲ || ನೆಗಳಲ್ವೇಳ್ಕುಮೆಂಬುದು ತಾತ್ಪರ್ಯಂ || ತನ್ನಿಂ ತೀರ್ವುದಕ್ಕೆ ಪೆಱರ್ವೇಡೆಂಬುದುತ್ತರವಾಕ್ಯಂ :

ಆತ್ಮಸಾಧ್ಯಮನ್ಯೇನ ಕಾರಯನ್ನೌಷಧ ಮೂಲ್ಯಾದಿವ ವ್ಯಾಧಿಂ ಚಿಕಿತ್ಸತಿ || ೪೫ || ೩೨೦ ||

ಅರ್ಥ : ಆತ್ಮಸಾಧ್ಯಂ = ತನ್ನಿಂ ತೀರ್ವುದಂ, ಅನ್ಯೇನ = ಪೆಱನಿಂ, ಕಾರಯನ್ = ಮಾಡುತ್ತಿರ್ದಂ, ಔಷಧ ಮೂಲ್ಯಾತ್ = ಔಷಧದ ಬೆಲೆಯಿಂ, ವ್ಯಾಧಿಂ = ವ್ಯಾಧಿಯುಂ, ಚಿಕಿತ್ಸತೀವ = ಕಳೆವನಂ ಪೋಲ್ಕುಂ || ತನ್ನಿಂ ತೀರದಲ್ಲಿ ಪೆಱರೊಳಾಲೋಚಿಸದೆಂಬುದು[12] ತಾತ್ಪರ್ಯಂ || ತನ್ನೊಡನಾಗುವ ಕೇಡುನುಳ್ಳನೊಳಾಲೋಚಿಸುವುದೆಂಬುದುತ್ತರವಾಕ್ಯಂ :

ಯೋ ಯತ್ಪ್ರತಿಬದ್ಧಃ ಸ ತೇನ ಸಹೋದಯವ್ಯಯೀ || ೪೬ || ೩೨೧ ||

ಅರ್ಥ : ಯಃ = ಆವನೋರ್ವಂ, ಯತ್ ಪ್ರತಿಬದ್ಧಃ = ಆವನೋರ್ವನ ಸಂಬಂಧಿಯಪ್ಪಂ, ಸಃ = ಆತಂ, ತೇನ ಸಹ = ಆತನೊಡನೆ, ಉದಯವ್ಯಯೀ = ಹಾನಿವೃದ್ಧಿಯನುಳ್ಳಂ || ತನ್ನವಱೊಳಲ್ಲದಾಳೋಚಿ ಸಲಾಗದೆಂಬುದು ತಾತ್ಪರ್ಯಂ || ಮತಿಯುಳ್ಳನನಲ್ಪನೆನಲ್ವೇಡೆಂಬು ದುತ್ತರವಾಕ್ಯ :

ಸ್ವಾಮಿನಾಧಿಷ್ಠಿತೋ ಮೇರ್ಷೋsಪಿ ಸಿಂಹಾಯತೇ || ೪೭ || ೩೨೨ ||

ಅರ್ಥ : ಸ್ವಾಮಿನಾ = ಅರಸನಿಂ, ಅಧಿಷ್ಠಿತಃ = ಪದವಿಯೊಳ್ ನಿಲಿಸಲ್ಪಟ್ಟ, ಮೇಷೋsಪಿ = ಕುಱಿಯುಂ (ತಗಱುಂ) ಸಿಂಹಾಯತೇ = ಸಿಂಹದಂತಕ್ಕುಂ || ಒಡೆಯರ್ಮಾಡೆ ಪೆರ್ಮೆವಡೆಗುಮೆಂಬುದು ತಾತ್ಪರ್ಯಂ || ಮಂತ್ರಕಾಲದೊಳಿಂತಪ್ಪುವಾಗದೆಂಬುದುತ್ತರವಾಕ್ಯಂ :

—-

೪೪. ಮನುಷ್ಯನಿಗೆ ಅವಿವೇಕಕ್ಕಿಂತ ಹೆಚ್ಚಿನ ಶತ್ರುವಿಲ್ಲ.

೪೫. ತಾನೆ ಸಾಧಿಸಬಹುದಾದ ಕೆಲಸವನ್ನು ಇತರರಿಂದ ಮಾಡಿಸುವೆನೆಂದುಕೊಳ್ಳುವುದು. ಕೇವಲ ಔಷಧಿಯನ್ನು ಕೊಂಡು ತಂದಿಟ್ಟು ವ್ಯಾಧಿಯನ್ನು ಹೋಗಲಾಡಿಸಿಕೊಳ್ಳಲು ಯತ್ನಿಸಿದಂತೆ.

೪೬. ಯಾರು ಯಾರೊಂದಿಗೆ ಸಂಬಂಧವನ್ನು ಹೊಂದಿರುತ್ತಾನೋ ಅವನು ಆತನ ಅಭಿವೃದ್ಧಿ, ವಿನಾಶಗಳಲ್ಲಿ ಪಾಲ್ಗೊಳ್ಳುತ್ತಾನೆ.

೪೭. ಒಡೆಯನಿಂದ ಮೇಲೇರಿಸಲ್ಪಟ್ಟ, ಕುರಿಯೂ ಸಹ ಸಿಂಹದಂತಾಗುತ್ತದೆ.

—-

ಮಂತ್ರಕಾಲೇ ವಿಗೃಹ್ಯವಾದಃ[13] ಸ್ವೈರಾಲಾಪಶ್ಚ ನ ಕರ್ತವ್ಯಃ || ೪೮ || ೩೨೩ ||

ಅರ್ಥ : ಮಂತ್ರಕಾಲೇ = ಆಳೋಚನೆಯೆಳ್, ವಿಗ್ರಹ್ಯವಾದಃ = ಬಕ್ಕುಡಿ ಮಾತುಂ, ಸ್ವೈರಾಲಾಪಶ್ವ = ಸ್ವೇಚ್ಛೆಯ ನುಡಿಯುಂ, ನ ಕರ್ತವ್ಯಃ = ಮಾಡಲ್ಪಡದು = ಕಾರ್ಯಮಂ ಕಂಡು ನೆಗಳ್ವುದೆಂಬುದು ತಾತ್ಪರ್ಯಂ || ಮಂತ್ರದಿಂದಿಂತಪ್ಪುದೆಂಬುದುತ್ತರವಾಕ್ಯದ್ವಯಂ :

[14]ಲಘುನೋಪಾಯೇನ ಮಹತಃ ಕಾರ್ಯಸ್ಯ ಸಿದ್ಧಿರ್ಮಂತ್ರಫಲಂ || ೪೯ || ೩೨೪ ||

ಅರ್ಥ : ಲಘುನಾ = ಕಿಱಿದಪ್ಪ, ಉಪಾಯೇನ = ಉಪಾಯದಿಂ, ಮಹತಃ = ಹಿರಿದಪ್ಪ, ಕಾರ್ಯಸ್ಯ = ಕಾರ್ಯದ, ಸಿದ್ಧಿಃ = ನಿಱುಗೆ, ಮಂತ್ರಫಲಂ = ಮಂತ್ರಫಲವು ||

ನ ಖಲು ತಥಾ ಹಸ್ತೇನೋತ್ಥಾಪ್ಯತೇ ಗ್ರಾವಾ ಯಥಾ ದಾರುಣಾ || ೫೦ || ೩೨೫ ||

ಅರ್ಥ : ಯಥಾ = ಎಂತು, ದಾರುಣಾ = ಮರನಿಂ, ಉತ್ಥಾಪ್ಯತೇ = ಎತ್ತಲ್ಪಡುವುದು, ಗ್ರಾವಾ = ಕಲ್, ತಥಾ = ಅಂತೆಯೇ, ಹಸ್ತೇನ = ಕೈಯಿಂದ, ನ ಖಲು (ಉತ್ಥಾಪ್ಯತೇ) = ಎತ್ತಲ್ಪಡದು || ಕಿಱಿದಾಯಾಸದಿಂ ಪಿರಿದಪ್ಪ ಕಾರ್ಯಸಿದ್ಧಿ ಮಂತ್ರಫಲಮೆಂಬುದು ತಾತ್ಪರ್ಯಂ ||

ಸ ಮಂತ್ರೀ ಶತ್ರುರ್ಯೋ ನೃಪೇಚ್ಛಯಾಕಾರ್ಯಮಪಿ ಕಾರ್ಯತ ಯಾನುಶಾಸ್ತಿ || ೫೧ || ೩೨೬ ||

ಅರ್ಥ : ಸಃ = ಆ, ಮಂತ್ರೀ = ಮಂತ್ರಿಯು, ಶತ್ರುಃ = ಪಗೆವಂ, ಯಃ = ಆವನೋರ್ವಂ, ನೃಪೇಚ್ಛಯಾ = ಅರಸನಿಚ್ಛೆಯಿಂ, ಅಕಾರ್ಯಮಪಿ = ಕಾರ್ಯಮಲ್ಲದುದಂ, ಕಾರ್ಯತಯಾ = ಕಾರ್ಯಸ್ವರೂಪದಿಂ, ಅನುಶಾಸ್ತಿ = ಪೇಳ್ಗುಂ || ಹಿತಮನುಸುರ್ವಂ ಮಂತ್ರಿಯೆಂಬುದು ತಾತ್ಪರ್ಯಂ || ಈಯರ್ಥಮಂ ವಿಶೇಷಿಸಿ ಪೇಳ್ವುದುತ್ತರವಾಕ್ಯಂ :

—-

೪೮. ಮಂತ್ರಾಲೋಚನೆಯ ಕಾಲದಲ್ಲಿ ವಿತಂಡವಾದ, ಸ್ವೇಚ್ಛಾ ಸಂಭಾಷಣೆ ಇವುಗಳನ್ನು ಮಾಡಕೂಡದು.

೪೯. ಅಲ್ಪೋಪಾಯದಿಂದ ಮಹತ್ತಾದ ಕಾರ್ಯವನ್ನು ಸಾಧಿಸುವುದೇ ಮಂತ್ರಾಲೋಚನೆಯ ಫಲ.

೫೦. ದೊಡ್ಡ ಬಂಡೆಯನ್ನು ಮೀಟುಗೋಲಿನಿಂದ ಸುಲಭವಾಗಿ ಎತ್ತುವುದಕ್ಕೆ ಸಾಧ್ಯವಿರುವಂತೆ ಕೈಯಿಂದ ಆಗುವುದಿಲ್ಲ.

೫೧. ಅರಸನ ಇಚ್ಛೆಯಂತೆ ಮಾಡಬಾರದ್ದನ್ನು ಮಾಡಬಹುದಾದುದೆಂದು ಹೆಳುವ ಮಂತ್ರಿಯು ಶತ್ರುವೇ.

—-

ವರಂ ಸ್ವಾಮಿನೋ ಮನೋದುಃಖಂ ನ ಪುನರಕಾರ್ಯೊಪದೇಶೇನ ತದ್ವಿನಾಶಃ || ೫೨ || ೩೨೭ ||

ಅರ್ಥ : ವರಂ = ಒಳ್ಳಿತ್ತು, ಸ್ವಾಮಿನಃ = ಆಳ್ದನ, ಮನೋದುಃಖಂ = ಮನದ ನೋವು, ಪುನಃ = ಮತ್ತೆ, ಆಕಾರ್ಯೋಪದೇಶೇನ = ಕಾರ್ಯಮಲ್ಲದುದಂ ಪೇಳ್ವುದಱಿಂ, ತದ್ವಿನಾಶಃ = ಆತನ ಕೇಡು, ನ = ಒಳ್ಳಿತ್ತಲ್ಲ ||

ಕ್ಷೀರ[15]ಮಪಿಬತೋ ಬಾಲಸ್ಯ ಕಿಂ ನ ಕ್ರಿಯತೇ ಕಪೋಲಹನನಂ || ೫೩ || ೩೨೮ ||

ಅರ್ಥ : ಕ್ಷೀರಂ = ಹಾಲುಂ, ಅಪಿಬತೋ = ಕುಡಿಯದ, ಬಾಲಸ್ಯ = ಕೂಸಿನ, ಕಪೋಲಹನನಂ = ಗಲ್ಲದ ಮಿಡಿಹಂ, ಕಿಂ ನ ಕ್ರಿಯತೇ = ಏಂ ಮಾಡಲ್ಪಡದೇ || ಹಿತಮನೆ ಪೇಳ್ವುದೆಂಬುದು ತಾತ್ಪರ್ಯಂ || ಮಂತ್ರಿಗಾರೊಳಮೆರ್ದೆವತ್ತುಗೆಯಾಗಲಾಗದೆಂಬುದುತ್ತರವಾಕ್ಯಂ :

ಮಂತ್ರಿಣೋ ರಾಜಹೃದಯತ್ವಾನ್ನ[16] ಕೇನಚಿತ್ ಸಹ ಸಂಸರ್ಗಂ ಕುರ್ಯುಃ || ೫೪ || ೩೨೯ ||

ಅರ್ಥ : ಮಂತ್ರಿಣಃ = ಮಂತ್ರಿಗಳು, ರಾಜಹೃದಯತ್ವಾತ್ = ಅರಸನ ಮನದನ್ನರಪ್ಪುದಱಿಂ | ಕೇನಚಿತ್ಸಹ = ಆವನೊಡನೆಯುಂ | ಸಂಸರ್ಗಂ = ಪತ್ತುಗೆಯುಂ, ನ ಕುರ್ಯುಃ = ಮಾಡರು || ಸಂಸರ್ಗದಿಂ ಮಂತ್ರಭೇದಮಕ್ಕುಮೆಂಬುದು ತಾತ್ಪರ್ಯಂ || ಮಂತ್ರಿಗೆ ಮುನಿಸೊಸಗೆ ಬೇಱಾಗಲಾಗದೆಂಬುದುತ್ತರಸೂತ್ರಂ :

ರಾಜ್ಞೋsನುಗ್ರಹಹನಿಗ್ರಹಾವೇವ ಮಂತ್ರಿಣೋsನುಗ್ರಹನಿಗ್ರಹೌ || ೫೫ || ೩೩೦ ||

ಅರ್ಥ : ರಾಜ್ಞಃ = ಅರಸನ, ಅನುಗ್ರಹನಿಗ್ರಹೌ ಏವ = ಕೋಪ-ಪ್ರಸಾದಂಗಳೇ, ಮಂತ್ರಿಣಃ = ಮಂತ್ರಿಯ, ಅನುಗ್ರಹನಿಗ್ರಹೌ = ಕೋಪ ಪ್ರಸಾದಂಗಳು || ಸ್ವಾಮಿತೇಜಮೆಂತೆಂತೆ ಮಂತ್ರಿತೇಜಮೆಂಬುದು ತಾತ್ಪರ್ಯಂ || ಮಂತ್ರದಿಂ ಕಾರ್ಯಸಿದ್ಧಿಯಿಲ್ಲದುದಕ್ಕೆ ಕಾರಣಮಂ ಪೇಳ್ವುದುತ್ತರವಾಕ್ಯಂ :

—-

೫೨. ಮಾಡಬಾರದ್ದನ್ನು ಮಾಡಬಹುದೆಂದು ಉಪದೇಶಿಸಿ ಸ್ವಾಮಿಯ ವಿನಾಶಕ್ಕೆ ಕಾರಣನಾಗುವುದಕ್ಕಿಂತ ಅವನ ಮಾನಸಿಕ ದುಃಖಕ್ಕೆ ಕಾರಣನಾಗುವುದು ಲೇಸು.

೫೩. ಹಾಲನ್ನು ಕುಡಿಯದ ಮಗುವಿನ ಕೆನ್ನೆಗೆ ಹೊಡೆಯುವುದೂ ಉಂಟಲ್ಲವೆ?

೫೪. ಮಂತ್ರಿಗಳು ರಾಜನ ಹೃದಯದಂತಿರುವರಾದ್ದರಿಂದ ಅವರು ಬೇರೆ ಯಾರೊಡನೆಯೂ ಸಂಬಂಧವನ್ನಿಟ್ಟುಕೊಳ್ಳಬಾರದು.

೫೫. ರಾಜರ ಅನುಗ್ರಹ. ನಿಗ್ರಹಗಳೇ ಮಂತ್ರಿಗಳ ಅನುಗ್ರಹ. ನಿಗ್ರಹಗಳು.

—-

 

[1]ಮೈ., ಚೌ. ಚಾಶ್ರಯೇ.

[2]ಮೈ., ಚೌ. ಮಂತ್ರಯಮಾಣಸ್ಯ ಅಭಿಮತಃ ಪ್ರಚ್ಛನ್ನೋ ವಾ.

[3]ಶ್ರೂಯತೇ ಹಿ ಕಿಲ ಎಂದಿರಬೇಕು. ವರರುಚಿ ಒಬ್ಬ ಪ್ರಸಿದ್ಧ ಸಂಸ್ಕೃತ ಕವಿಯಾಗಿದ್ದರೂ ಅವನ ದೇಶ ಕಾಲಗಳ ಬಗ್ಗೆ ನಿಶ್ಚಿತ ಮಾಹಿತಿ ಇಲ್ಲ. ಇವನು ಕೌಶಾಂಬಿಯಲ್ಲಿ ಹುಟ್ಟಿದನೆಂದೂ ಪಾಣಿನಿಯ ಸಹಪಾಠಿಯಾಗಿದ್ದನೆಂದೂ ಹೇಳಲಾಗುತ್ತದೆ. ಪಾಣಿನಿಯ ಸೂತ್ರಗಳ ಮೇಲೆ ಮಾರ್ತಿಕವನ್ನು ಬರೆದಿದ್ದಾನೆ. ಪ್ರಸ್ತುತ ವಾಕ್ಯದಲ್ಲಿ ಅವನು ಪಿಶಾಚಿಗಳು ಆಡಿದ ಮಾತಿನ ಆಧಾರದ ಮೇಲಿಂದ ಒಂದು ಪದ್ಯವನ್ನು ರಚಿಸಿದ ಉಲ್ಲೇಖವಿದೆ. ಆ ಕತೆ ಹೀಗಿದೆ : ನಂದರಾಜನ ಮಗನಾದ ಹಿರಣ್ಯಗುಪ್ತನೆಂಬವನು ಬೇಟೆಗೆ ಹೋದಾಗ ತನ್ನ ಮಿತ್ತನೊಬ್ಬನನ್ನು ಖಡ್ಗದಿಂದ ಹೊಡೆದು ಕೊಂದನಂತೆ. ಆ ಮಿತ್ರನು ಸಾಯುವಾಗ ಅಪ್ರಶಿಖ ಎಂಬ ನಾಲ್ಕು ಅಕ್ಷರಗಳನ್ನು ಉಚ್ಚರಿಸಿದನಂತೆ. ಅರಸನ ಮಗನಿಗೆ ತಾನು ಮಾಡಿದ ಈ ಕತ್ಯದಿಂದಾಗಿ ಹುಚ್ಚು ಹಿಡಿದು ಆತನು ಯಾವಾಗಲೂ ಈ ನಾಲ್ಕು ಅಕ್ಷರಗಳನ್ನು ಉಚ್ಚರಿಸುತ್ತಿದ್ದನಂತೆ. ಅರಸನ ಮಂತ್ರಿಯಾದ ವರರುಚಿಯು ರಹಸ್ಯವನ್ನು ಭೇದಿಸಲು ಅಡವಿಗೆ ಹೋಗಿ ಅಲ್ಲಿ ಒಂದು ವಟುವೃಕ್ಷದಲ್ಲಿದ್ದ ಪಿಶಾಚಿಗಳು ಈ ಘಟನೆಯ ಬಗ್ಗೆ ಮಾತನಾಡುತ್ತಿರುವುದನ್ನು ಕೇಳಿ, ಆ ನಾಲ್ಕು ಅಕ್ಷರಗಳನ್ನು ಬಳಸಿ ಒಂದು ಶ್ಲೋಕವನ್ನು ರಚಿಸಿ ಆ ರಹಸ್ಯವನ್ನು ಬಯಲಿಗೆಳೆದನಂತೆ. ಈ ಕತೆ ಚೌ. ಪ್ರತಿಯಲ್ಲಿ ಈ ವಾಕ್ಯದ ಕೆಳಗೆ ಉಕ್ತವಾಗಿದೆ. ಇದು ಜ. ಪ್ರತಿಯಲ್ಲಿಯೂ ಇದೆ. ಈ ಶ್ಲೋಕ ಮಾತ್ರ ಮೈ. ಪ್ರತಿಯಲ್ಲಿದೆ. ಅದರ ಸಂಪಾದಕರು ಇದನ್ನು ಸಂಸ್ಕೃತವ್ಯಾಖ್ಯಾನವಿರುವ ಪ್ರತಿಯಿಂದ ಉದ್ಧರಿಸಿರಬಹುದು.

[4]ಮೈ., ಚೌ. ಅನಾಯುಕ್ತೋ.

[5]ಮೈ., ಚೌ. ಗಳಲ್ಲಿ ಈ ಹೆಚ್ಚಿನ ವಾಕ್ಯವಿದೆ. ಶ್ರೂಯತೇ ಹಿ ಶುಕಸಾರಿಕಾಭಿರನ್ನೈಶ್ಚ ತಿರ್ಯಗ್ಭಿಃ ಮಂತ್ರಭೇದಃ ಕೃತಃ ಇತಿ.

[6]ಮೈ., ಚೌ. ದುಷ್ಟತಿವಿಧೇಯಂ ಸ್ಯಾತ್.

[7]ಮೈ. ಶರೀರವೃತ್ತಿಃ,

[8]ಚೌ. ಅನ್ಯಥಾ.

[9]ಚೌ. ನಿದ್ರಾಂತರಿತೋ ನಿದ್ರಿತಃ.

[10]ಮೈ. ಕೇವಲೇನ ಕಿಂ ಮಂತ್ರೇಣ. ಚೌ. ಅನುಷ್ಠಾನೇಚ್ಛಾಂ ವಿನಾ ಕೇವಲೇನ.

[11]‘ಮಗ್ಗುಗೆ’ ಎಂದು ಇರಬೇಕು.

[12]ಆಲೋಚಿಸುವುದು ಎಂದಿರಬೇಕು.

[13]ಮೈ. ಮಂತ್ರಿಭಿರ್ವಿವಾದಃ. ಚೌ: ವಿಗ್ರಹ್ಯವಿವಾದಃ.

[14]ಚೌ. ಅವಿರುದ್ದೈರಸ್ವೈರೈರ್ವಿಹಿತೋ ಮಂತ್ರೋ.

[15]ಚೌ. ಪೀಯೂಪಂ.

[16]ಚೌ. ರಾಜದ್ವತೀಯಹೃದಯತ್ವಾತ್.