ನ ಚಾಂಧೇನಾಕೃಷ್ಯಮಾಣೋs೦ಧಸಮಂ ಪಂಥಾನಂ ಪ್ರತಿಪದ್ಯತೇ || ೮೮ || ೩೬೩ ||

ಅರ್ಥ : ಅಂಧೇನ = ಕಾಣದನಿಂ, ಆಕೃಷ್ಯಮಾಣಃ = ತೆಗೆಯಲ್ಪಡುತ್ತಿರ್ದ (ಕಱೆಯಲ್ಪಟ್ಟ) ಅಂಧಃ = ಕಾಣದವೊಂ, ಸಮಂ = ಲೇಸಾಗಿ, ಪಂಥಾನಂ = ಬಟ್ಟೆಯಂ | ನ ಚ ಪ್ರತಿಪದ್ಯತೇ = ಎಯ್ದನು || ಮೂರ್ಖ ಮಂತ್ರಿ ಕಾರ್ಯಮಂ ಕಾಣ್ಬುದಕ್ಕೆ ದೃಷ್ಟಾಂತಮಂ ಪೇಳ್ವದುತ್ತರವಾಕ್ಯಂ ||

ತದಂಧಕವತ್ ತರ್ಕೀಯಂ[1] ಕಾಕತಾಳೀಯಂ ವಾ ಯನ್ಮೂರ್ಖಮಂತ್ರಾತ್ ಕ್ಚಚಿತ್ಕಾರ್ಯಸಿದ್ಧಿಃ || ೮೯ || ೩೬೪ ||

ಅರ್ಥ : ತತ್ = ಅದು, ಅಂಧಕವತ್ ತರ್ಕೀಯಂ = ಕುರುಡಂ ಲಾವಗೆ ಹಕ್ಕಿಯಂ ಮೆಟ್ಟಿದಂತೆ, ಕಾಕತಾಳೀಯಂ ವಾ = ಕಾಗೆ ಮೇಲೆ ತಾಳಫಲಂ[2] ಬೀಳ್ವಂತೆ, ಮೇಣ್, ಯತ್ = ಆವುದೊಂದು, ಮೂರ್ಖಮಂತ್ರಾತ್ = ಮೂರ್ಖರೊಳಾಲೋಚನೆಯಿಂ, ಕ್ಚಚಿತ್ = ಎಲ್ಲಿಯಾನುಂ = ಕಾರ್ಯಸಿದ್ಧಿಃ = ಕಾರ್ಯದ ನೆಱವಿ || ಮೂರ್ಖನಿಂ ಕಾರ್ಯಸಿದ್ಧಿಯಲ್ಲೆಂಬುದು ತಾತ್ಪರ್ಯಂ || ಮೂರ್ಖಂ ಕಾರ್ಯಮಂ ಕಾಣದಿರ್ದೊಡೆ ದೃಷಾಂತಮಂ ಪೇಳ್ವುದುತ್ತರವಾಕ್ಯಂ :

ಸ ಘುಣಾಕ್ಷರನ್ಯಾಯೋ ಯನ್ಮೂ ರ್ಖೇಷು ಕಾರ್ಯಪರಿಜ್ಞಾನಂ || ೯೦ || ೩೬೫ ||

ಅರ್ಥ : ಸಃ = ಅದು, ಘುಣಾಕ್ಷರನ್ಯಾಯಃ = ಪುಳುಗಳಕ್ಕರಮಂ ತೋಡಿದಂತೆ[3], ಮೂರ್ಖೇಷು = ಮೂರ್ಖರೊಳ್, ಯತ್ = ಆವುದೊಂದು ಕಾರ್ಯಪರಿಜ್ಞಾನಂ = ಕಾರ್ಯದಱಿತಂ || ಮೂರ್ಖಂ ಕಾರ್ಯಮಂ ಕಾಣನೆಂಬುದು ತಾತ್ಪರ್ಯಂ || ಅದಕ್ಕೆ ದೃಷ್ಟಾಂತಮಂ ಪೇಳ್ವುದುತ್ತರವಾಕ್ಯಂ :

—-

೮೮. ಕುರುಡನನ್ನು ಕರೆದುಕೊಂಡು ಹೋಗುತ್ತಿರುವ ಕುರುಡನು ಸರಿಯಾದ ದಾರಿಯಲ್ಲಿ ಹೋಗಲಾರನು.

೮೯. ಮೂರ್ಖನ ಮಂತ್ರಾಲೋಚನೆಯಿಂದ ಅಂಧವರ್ತಕ್ರೀಯ ಅಥವಾ ಕಾಕತಾಳೀಯದಂತೆ ಕ್ವಚಿತ್ ಕಾರ್ಯಸಿದ್ಧಿಯಾಗುವುದು.

೯೦. ಮೂರ್ಖನು ಮಂತ್ರಾಲೋಚನೆಯ ಕಾರ್ಯವನ್ನರಿಯುವುದು ಘುಣಾಕ್ಷರನ್ಯಾಯದಂತೆ.

—-

ಅನಾಲೋಕಂ ಲೋಚನಮಿವ ಅಶಾಸ್ತ್ರಂ ಮನಃ ಕಿಯದ್ಧಾವೇತ್[4]|| ೯೧ || ೩೬೬ ||

ಅರ್ಥ : ಅನಾಲೋಕಂ = ಬೆಳಗಿಲ್ಲದ, ಲೋಚನಮಿವ = ಕಣ್ಣಿನಂತೆ, ಅಶಾಸ್ತ್ರಂ = ಶಾಸ್ತ್ರಮಿಲ್ಲದ, ಮನಃ = ಬುದ್ಧಿ, ಕಿಯತ್ = ಎನಿತುಂ, ಧಾವೇತ್ = ಪರಿಗುಂ || ಶಾಸ್ತ್ರಮಿಲ್ಲದೆ ಕಾಣಲ್ಬಾರದೆಂಬುದು ತಾತ್ಪರ್ಯಂ || ಅರಸನ ಕಾರುಣ್ಯದಿಂ ಮಂತ್ರಿಯಾಗನೆಂಬುದುತ್ತರವಾಕ್ಯಂ :

ಸ್ವಾಮಿನಃ ಪ್ರಸಾದಃ ಸಂಪದಂ ಕರೋತಿ ನ ಪುನರಾಭಿಜಾತ್ಯಂ ಪಾಂಡಿತ್ಯಂ ವಾ || ೯೨ || ೩೬೭ ||

ಅರ್ಥ : ಸ್ವಾಮಿನಃ ಪ್ರಸಾದಃ = ಆಳ್ವನ ಪ್ರಸಾದಂ, ಸಂಪದಂ = ಶ್ರಿಯಂ, ಕರೋತಿ = ಮಾಳ್ಕುಂ, ಆಭಿಜಾತ್ಯಂ = ಕುಲಮಂ (ಕುಲದ ಸಂಪತ್ತನು) ಪಾಂಡಿತ್ಯಂ ವಾ = ಅಱಿತಮುಮಂ ಮೇಣ್ (ವಿದ್ಯಸಂಪತ್ತನ್ನಾಗಲಿ) ನ ಪುನಃ = ಮಾಳ್ಪುದಲ್ಲ || ಕುಲಜಂ ಶಾಸ್ತ್ರಜ್ಞನೆ ಮಂತ್ರಿಯಕ್ಕುಮೆಂಬುದು ತಾತ್ಪರ್ಯಂ || ಆದನೆ ದೃಷ್ಟಾಂತದಿಂ ಪೇಳ್ವುದುತ್ತರವಾಕ್ಯಂ :

ಹರಕಂಠಲಗ್ನೋSಪಿ ಕಾಲಕೂಟಃ ಕಾಲಕೂಟ[5] ಏವ || ೯೩ || ೩೬೮ ||

ಅರ್ಥ : ಹರಕಂಠಲಗ್ನಃ ಅಪಿ = ಈಶ್ವರನ ಕೊರಲ್ಪತ್ತಿರ್ದುಂ, ಕಾಲಕೂಟಃ = ಕಾಲಕೊಟಮೆಂಬ ವಿಷಂ, ಕಾಲಕೂಟ ಏವ = ಕಾಲಕೂಟಮೆಂತಂತೆ || ಅಮೃತವಾಯ್ತಿಲ್ಲೆಂಬುದು ತಾತ್ಪರ್ಯಂ || ಮೂರ್ಖನಂ ಮಂತ್ರಿ ಮಾಡಿದೊಡೆ ದೋಷಮಂ ಪೇಳ್ವುದುತ್ತರವಾಕ್ಯಂ :

ಸ್ವವಧಾಯ ಕೃತ್ಯೋತ್ಥಾಪನಮಿವ ಮೂರ್ಖೇಷು ರಾಜ್ಯಭಾರಾರೋಪಣಂ || ೯೪ || ೩೬೯ ||

ಅರ್ಥ : ಸ್ವವಧಾಯ = ತನ್ನ ಕೊಲೆಗೆ, ಕೃತ್ಯೋತ್ಥಾಪನಮಿವ = ಕೃತಿಯೆಂಬ ದೇವತೆಯನ್ನೆಬ್ಬಿಸುವಂತೆ,[6] ಮೂರ್ಖೇಷು = ಮುರ್ಖರೊಳು, ರಾಜ್ಯಭಾರಾರೋಪಣಂ = ರಾಜ್ಯಭಾರಮನಿಱಿಸುವುದು || ಮೂರ್ಖಮಂತ್ರಿಯಿಂ ಕಾರ್ಯಸಿದ್ಧಿಯಲ್ಲೆಂಬುದು ತಾತ್ಪರ್ಯಂ ||

—-

೯೧. ನೋಡಲಾರದ ಕಣ್ಣಿನಂತೆ ಶಾಸ್ತ್ರವಿಲ್ಲದ ಬುದ್ಧಿಯು ಏನನ್ನು ತಾನೆ ಗ್ರಹಿಸೀತು?

೯೨. ರಾಜನ ಅನುಗ್ರಹದಿಂದ ಹಣ ದೊರೆತೀತೆ ಹೊರತು ಉತ್ತಮ ಕುಲವಾಗಲಿ ಅಥವಾ ವಿದ್ಯಾಸಂಪತ್ತಾಗಲಿ ದೊರೆಯಲಾರವು.

೯೩. ಈಶ್ವರನ ಕೊರಳಿನಲ್ಲಿ ಸೇರಿದ್ದರೂ, ವಿಷವು ವಿಷವೇ

೯೪. ಮೂರ್ಖರಿಗೆ ರಾಜ್ಯಭಾರವನ್ನು ವಹಿಸಿಕೊಡುವುದು ತನ್ನ ಕೊಲೆಗೆ ತಾನೇ ಕಾರಣನಾದಂತೆ

—-

ಆಕಾರ್ಯವೇದಿನಃ ಕಿಂ ಬಹುನಾ ಶಾಸ್ತ್ರೇಣ || ೯೫ || ೩೭೦ ||

ಅರ್ಥ : ಆಕಾರ್ಯವೇದಿನಃ = ಕಾರ್ಯಮನಱಿಯದನ, ಬಹುನಾ ಶಾಸ್ತ್ರೇಣ = ಪಿರಿದಷಪ ಶಾಸ್ತ್ರದಿಂ, ಕಿಂ = ಏನು || ಕಾರ್ಯಮಿಲ್ಲದನ ಶಾಸ್ತ್ರಂ ಬಾರ್ತೆಯಿಲ್ಲೆಂಬುದು ತಾತ್ಪರ್ಯಂ || ಅದನೇ ದೃಷ್ಟಾಂತದಿಂ ಪೇಳ್ವುದುತ್ತರವಾಕ್ಯಂ :

ಗುಣರಹಿತಂ ಧನುಃ ಪಿಂಜನಾದಪಿ ನಿಕೃಷ್ಟಂ[7]|| ೯೬ || ೩೭೧ ||

ಅರ್ಥ : ಗುಣರಹಿತಂ = ತಿರುವಿಲ್ಲದ, ಧನುಃ = ಬಿಲ್ಲು, ಪಿಂಜನಾದಪಿ = ಬೆಸಕೋಲಿನಿಂದೆಯುಂ,[8] ನಿಕೃಷ್ಟಂ = ಪೊಲ್ಲದೆಂತಂತೆ || ಕಾರ್ಯಮಂ ಕಾಣ್ಬುದಱ ಫಲಮಂ ದೃಷ್ಟಾಂತದಿಂ ಪೇಳ್ವುದುತ್ತರವಾಕ್ಯಂ :

ಚಕ್ಷುಷ[9] ಇವ ಮಂತ್ರಿಣೋsಪಿ ಯಥಾರ್ಥದರ್ಶನಮೇವಾತ್ಮ ಗೌರವಹೇತುಃ || ೯೭ || ೩೭೨ ||

ಅರ್ಥ : ಚಕ್ಷುಷಃ = ಕಣ್ಗೆ, ಯಥಾರ್ಥದರ್ಶನಂ = ವಸ್ತುವೆಂತಿರ್ದುದಂತೆ, ಕಾಣ್ಬುದು, ಆತ್ಮಗೌರವಹೇತುಃ = ತನ್ನ ಪೆರ್ಮೆಗೆ ಕಾರಣಂ, ಇವ = ಎಂತು, ಮಂತ್ರಿಣೋsಪಿ = ಮಂತ್ರಿಗೆಯುಮಂತೆ || ಕಾರ್ಯಮಂ ಕಾಣವೇಳ್ಕುಮೆಂಬುದು ತಾತ್ಪರ್ಯಂ || ಇಂತಪ್ಪ ಮಂತ್ರಿಯಾಗಲಾಗದೆಂಬುದುತ್ತರವಾಕ್ಯಂ :

—-

೯೫. ಸರಿಯಾದ ಕಾರ್ಯವೇನೆಂಬುದನ್ನು ಅರಿಯದವನಿಗೆ ಹೆಚ್ಚಿನ ಶಾಸ್ತ್ರಜ್ಞಾನದಿಂದ ಪ್ರಯೋಜನವೇನು?

೯೬. ಹೆದೆಯಿಲ್ಲದ ಧನಸ್ಸು ಹತ್ತಿಯನ್ನು ಹಿಂಜುವ ಪಿಂಜನಕ್ಕಿಂತ ಕಡೆ.

೯೭. ಕಣ್ಣುಗಳಂತೆ ಮಂತ್ರಿಗಳೂ ಇದ್ದುದನ್ನು ಇದ್ದಂತೆ ತೋರಿಸಿದರೆ ಆತ್ಮಗೌರವುಳ್ಳವರಾಗುತ್ತಾರೆ.

—-

ಶಸ್ತ್ರಾಧಿಕಾರಿಣೋ ನ ಮಂತ್ರಾಧಿಕಾರಿಣಃ ಸ್ಯುಃ || ೯೮ || ೩೭೩ ||

ಅರ್ಥ : ಶಸ್ತ್ರಾಧಿಕಾರಿಣಃ = ಶಸ್ತ್ರಾಧಿಕಾರಿಗಳು, ಮಂತ್ರಾಧಿಕಾರಿಣಃ = ಮಂತ್ರಾಧಿಕಾರಿಗಳು ಆಗಿ, ನ ಸ್ಯುಃ = ಆಗರು || ಶಸ್ತ್ರಾಧಿಕಾರಿ ದಂಡನೀತಿಯಂ ಕಾಣ್ಗುಮೆಂಬುದು ತಾತ್ಪರ್ಯಂ || ಅರಸಂ ಶಸ್ತ್ರಾಧಿಕಾರಿಯೆಂಬುದಂ ಪೇಳ್ವುದುತ್ತರವಾಕ್ಯಂ :

ಕ್ಷತ್ರಪುತ್ರಸ್ಯ[10] ಪರಿಹರತೋSಪ್ಯಾಯಾತ್ಯವಶ್ಯಮುಪರಿಭಂಡನಂ || ೯೯ || ೩೭೪ ||

ಅರ್ಥ : ಕ್ಷತ್ರಪುತ್ರಸ್ಯ = ಅರಸುಮಗಂಗೆ, ಪರಿಹರತೋsಪಿ = ಒಲ್ಲದಂ, ಉಪರಿ = ಮೇಗೆ, ಆಯಾತಿ = ಬಕ್ಕುಂ, ಭಂಡನಂ = ಕಾಳೆಗಂ, ಅವಶ್ಯಂ = ನೆಟ್ಟನೆ || ಕಾಳೆಗಮಿಲ್ಲದರಸಿಲ್ಲೆಂಬುದು ತಾತ್ಪರ್ಯಂ || ಶಸ್ತ್ರಾಧಿಕಾರಿಗಳ ಸ್ವಭಾವಮಂ ಪೇಳ್ವುದುತ್ತರವಾಕ್ಯಂ :

ಶಸ್ತ್ರೋಪಜೀವಿನಾಂ ಪ್ರಾಯಃ ಕಲಹಮಂತರೇಣ ಭಕ್ತಂ ಭುಕ್ತಂ ನ ಜೀರ್ಯತಿ || ೧೦೦ || ೩೭೫ ||

ಅರ್ಥ : ಶಸ್ತ್ರೋಪಜೀವಿನಾಂ = ಶಸ್ತ್ರದಿಂ ಬರ್ದುಂಕುವರ್ಗೆ, ಕಲಹಮಂತರೇಣ = ತೋಟಿಯಲ್ಲದೆ, ಭುಕ್ತಂ = ಉಂಡ, ಭಕ್ತಂ = ಕೂಳ್, ಪ್ರಾಯಃ = ಪ್ರಚುರದಿಂ, ನ ಜೀರ್ಯತಿ = ಅಕ್ಕದು || ಶಸ್ತ್ರೋಪಜೀವಿ ಮಂತ್ರಿಯಾಗದೆಂಬುದಂ ವಿಶೇಷಿಸಿ ಪೇಳ್ವುದುತ್ತರವಾಕ್ಯಂ :

ಮಂತ್ರಾಧಿಕಾರಃ ಸ್ವಾಮಿಪ್ರಸಾದಃ ಶಸ್ತ್ರೋಪಜೀವಿನಂ ಚೇತ್ಯೇಕೈಕಮಪಿ ಪುರುಷಮುತ್ಸೇಕಯತಿ ಕಿಂ ಪುನರ್ನ ಸಮವಾಯಃ || ೧೦೧ || ೩೭೬ ||

ಅರ್ಥ : ಮಂತ್ರಾಧಿಕಾರಃ = ಮಂತ್ರಾಧಿಕಾರಮುಂ, ಸ್ವಾಮಿಪ್ರಸಾದಃ = ಆಳ್ದನ ಕಾರುಣ್ಯಮುಂ, ಶಸ್ತ್ರೋಪಜೀವಿನಂ ಚೇತಿ = ಶಸ್ತ್ರಾಧಿಕಾರಮುಮೆಂದಿಂತು, ಏಕೈಕಮಪಿ = ಒಂದೊಂದುಂ, ಪುರುಷಂ = ಪುರುಷನಂ, ಉತ್ಸೇಕಯತಿ = ಸೊರ್ಕಿಸುಗುಂ, ಸಮವಾಯಃ = ಅನಿತರ ಕೂಟಂ, ಪುನಃ = ಮತ್ತೆ, ಕಿಂ ನ = ಏಂ ಸೊಕ್ಕಿಸದೇ || ಮಂತ್ರಿಗರ್ಥಾಧಿಕಾರಮಂ ಪೇಳ್ವುದುತ್ತರವಾಕ್ಯಂ :

—-

೯೮. ಶಸ್ತ್ರಾಧಿಕಾರಿಗಳು ಮಂತ್ರಾಧಿಕಾರಿಗಳಾಗಿರಕೂಡದು.

೯೯. ಎಷ್ಟು ತಪ್ಪಿಸಿಕೊಂಡರೂ ಕ್ಷತ್ರಿಯನ ಮೇಲೆ ಯುದ್ಧವು ಬಂದು ಬೀಳುತ್ತದೆ.

೧೦೦. ಶಸ್ತ್ರಧಾರಣೆಯೇ ಜೀವನೋಪಾಯವುಳ್ಳವರಿಗೆ ಯುದ್ಧವಿಲ್ಲದಿದ್ದರೆ ಉಂಡ ಅನ್ನವು ಜೀರ್ಣವಾಗಲಾರದು.

೧೦೧. ಮಂತ್ರಾಧಿಕಾರ, ಅರಸನ ಕಾರುಣ್ಯ ಇವು ಶಸ್ತ್ರೋಪಜೀವಿ ಮನುಷ್ಯನನ್ನು ಒಂದೊಂದೂ ಸೊಕ್ಕಿಹೋಗುವಂತೆ ಮಾಡುತ್ತವೆ. ಹೀಗಿರುವಲ್ಲಿ ಎಲ್ಲವೂ ಸೇರಿದರೆ ಸೊಕ್ಕಿಸದೇ?

—-

ನಾಲಂಪಟಾ[11]ಧಿಕಾರೀತಿ ಮಂತ್ರಿಣೋsರ್ಥಗ್ರಸನಲಾಲಸಾಯಾಂ ಮತೌ
ಸತ್ಯಾಂ ನ ರಾಜ್ಞಃ ಕಾರ್ಯಮರ್ಥಂ ವಾ ಸಾಧಯತಿ
|| ೧೦೨ || ೩೭೭ ||

ಅರ್ಥ : ಅಧಿಕಾರೀ = ಅಧಿಕಾರಿಯು, ಅಲಂಪಟ = ಅಳಿಪಲ್ಲದ, ನೇತಿ = ಇಲ್ಲಪ್ಪುದು ಕಾರಣದಿಂ, ಮಂತ್ರಿಣಃ = ಮಂತ್ರಿಯ, ಮತೌ = ಮನದೊಳ್, ಅರ್ಥಗ್ರಸನಲಾಲಸಾಯಾಂ = ಅರ್ಥಮಂ ನುಂಗುವ ತವಕ ಪಿರಿದಾಗಲ್, ರಾಜ್ಞಃ = ಅರಸನ, ಕಾರ್ಯಂ = ಕಾರ್ಯಪ್ರಯೋಜನಮಂ, ಅರ್ಥಂ ವಾ = ಅರ್ಥಮುಮಂ ಮೇಣ್, ನ ಸಾಧಯತಿ = ಸಾಧಿಸುವನಲ್ಲಂ ||

ಮಂತ್ರಿಣೋsರ್ಥಗ್ರಸನಲಾಲಸಾಯಾಂ ಮತೌ ನ ರಾಜ್ಞಃ ಕಾರ್ಯಮರ್ಥಂ
ವಾ ಸಾಧಯತಿ
|| ೧೦೩ || ೩೭೮ ||

ಅರ್ಥ : ಮಂತ್ರಿಣಃ = ಮಂತ್ರಿಯ, ಮತೌ = ಚಿತ್ತವು, ಅರ್ಥಗ್ರಸನಲಾಲಸಾಯಾಂ = ಅರ್ಥಮನು ನುಂಗುವಲ್ಲಿ ಲಂಪಟರಾಗುತ್ತಿರಲು, ರಾಜ್ಞಃ = ಅರಸನ, ಕಾರ್ಯಂ = ಕಾರ್ಯವನು, ಅರ್ಥಂ ವಾ = ಅರ್ಥವನಾಗಲಿ, ನ ಸಾಧಯತಿ = ಸಾಧಿಸಲರಿಯದು || ಅರ್ಥಾಧಿಕಾರಿಯಂ ಮಂತ್ರಿಯಂ ಮಾಡಲಾಗದೆಂಬುದು ತಾತ್ಪರ್ಯಂ || ಈ ಈಯರ್ಥಮಂ ದೃಷ್ಟಾಂತದಿಂ ಪೇಳ್ವುದುತ್ತರವಾಕ್ಯಂ :

ವರಣಾರ್ಥಂ ಪ್ರೇಷಿತ ಏವ ಯದಿ ಕನ್ಯಾಂ ಪರಿಣಯತಿ ವರಯತುಸ್ತಪ ಏವ ಶರಣಂ || ೧೦೪ || ೩೭೯ ||

ಅರ್ಥ : ವರಣಾರ್ಥಂ = ಕೂಸಂ ನೋಡಲ್ವೇಡಿ, ಪ್ರೇಷಿತ ಏವ = ಅಟ್ಟಿದಾತನೆ, ಕನ್ಯಾಂ = ಕನ್ನೆಯಂ, ಯದಿ ಪರಿಣಯತಿ = ಮದುವೆನಿಲ್ವನಪ್ಪೊಡೆ, ವರಯಿತುಃ = ಮದವನಿಗಂಗೆ, ತಪ ಏವ = ತಪಮೇ, ಶರಣಂ = ಶರಣು ||

—-

೧೦೨. ಲಂಪಟನಲ್ಲದ ಅಧಿಕಾರಿ ಇಲ್ಲದಿದ್ದರೆ, ಹಣವನ್ನು ನುಂಗುವ ಆಸೆಯುಳ್ಳವನಾದುದರಿಂದ, ಅರಸನ ಯಾವ ಕೆಲಸವನ್ನೂ ಸಾಧಿಸುವುದಿಲ್ಲ. (ಟಿಪ್ಪಣಿ ೫ ನ್ನು ನೋಡಿರಿ)

೧೦೩. ಮಂತ್ರಿಗಳ ಮನಸ್ಸಿನಲ್ಲಿ ಹಣವನ್ನು ನುಂಗಿಹಾಕುವ ಅತಿಯಾಸೆ ಇದ್ದರೆ ರಾಜಕಾರ್ಯಸಿದ್ಧಿಯೂ ಆಗದು, ಅರ್ಥಸಿದ್ಧಿಯೂ ಆಗದು.

೧೦೪. ಇನ್ನೊಬ್ಬನಿಗಾಗಿ ಕನ್ಯೆಯನ್ನು ನೋಡುವುದಕ್ಕಾಗಿ ಹೋದವನೇ ಕನ್ಯೆಯನ್ನು ವರಿಸಿದರೆ ವರನಿಗೆ ತಪಸ್ಸೇ ಗತಿ.

—-

ಸ್ಥಾಲ್ಯೇವ ಚೇದ್ ಭಕ್ತಮಶ್ನಾತಿ ಕುತೋ ಭೋಕ್ತುರ್ಭುಕ್ತಿಃ[12]|| ೧೦೫ || ೩೮೦ ||

ಅರ್ಥ : ಸ್ಥಾಲೇವ = ಹರಿವಾಣವೇ, ಭಕ್ತಂ = ಕೂಳಂ, ಅಶ್ನಾತಿ ಚೇತ್ = ಉಣುಮಕ್ಕುಮಪ್ಪೊಡೆ, ಭೋಕ್ತುಃ = ಉಣ್ಬಂಗೆ, ಭುಕ್ತಿಃ = ಊಟಂ, ಕುತಃ = ಎತ್ತಣ್ತು || ಮಂತ್ರಿಗಳ ಅರ್ಥಾಭಿಲಾಷೆಯಾಗದಿರದೆಂಬುದುತ್ತರವಾಕ್ಯಂ :

ತಾವತ್ಸರ್ವೋsಪಿ ಶುಚಿರ್ನಿಸ್ಪೃಹೋ ಯಾವತ್ಪರಸ್ತ್ರೀ[13]ದರ್ಶನಂ ಅರ್ಥಾಗಮೋ ವಾ || ೧೦೬ || ೩೮೧ ||

ಅರ್ಥ : ತಾವತ್ = ಅನ್ನೆವರಂ, ಸರ್ವೋಪಿ = ಆವನಾದೊಡಂ, ಶುಚಿಃ = ಶುಚಿಯೂ, ನಿಃ ಸ್ಪೃಹೋ ವಾ = ಕಾಂಕ್ಷೆಯಿಲ್ಲದವಂ ಮೇಣ್ || ಯಾವತ್ = ಎನ್ನೆವರಂ, ಪರಸ್ತ್ರೀದರ್ಶನಂ = ಪೆಱರೊಳ್‌ಪಿಂಡಿರ ಕಾಣ್ಕೆಯುಂ (ಉತ್ತಮವಹಂಥಾ ಪರಸ್ತ್ರೀಯ ನೋಟವು) ಅರ್ಥಾಗಮೋ ವಾ = ಅರ್ಥದ ಬಱವು ಮೇಣ್ | ನ = ಇಲ್ಲ || ಎಂತಪ್ಪವಗಮರ್ಥಾಭಿಲಾಷೆಯಕ್ಕುಮೆಂಬುದು ತಾತ್ಪರ್ಯಂ || ಪರಸ್ತ್ರೀದರ್ಶನಕ್ಕೆ ದೋಷಮಂ ದೃಷ್ಟಾಂತದಿಂ ಪೇಳ್ವುದುತ್ತರವಾಕ್ಯದ್ವಯಂ :

[14]ಅತಿಪ್ರವೃದ್ಧಕಾಮಸ್ತಂ ನಾಸ್ತಿ ಯನ್ನ ಕರೋತಿ || ೧೦೭ || ೩೮೨ ||

ಅರ್ಥ : ಅತಿಪ್ರವೃದ್ಧಕಾಮಃ = ಕರಂ ಪೆರ್ಚಿದ ಕಾಮಮನುಳ್ಳಂ, ಯನ್ನ ಕರೋತಿ = ಆವುದೊಂದಂ ಮಾಡಂ, ತನ್ನಾಸ್ತಿ = ಅಂತಪ್ಪುದಿಲ್ಲ || ಏನುಮನಾದೊಡಂ ಮಾಳ್ಪನೆಂಬುದು ತಾತ್ಪರ್ಯಂ ||

ಶ್ರೂಯತೇ ಹಿ ಕಿಲ ಕಾಮಪರವಶಃ ಪ್ರಜಾಪತಿರಾತ್ಮದುಹಿತರಿ
ಹರಿರ್ಗೋಪವಧೂಷು ಹರಃ ಶಂತನುಕಲತ್ರೇಷು ಸುರಪತಿರ್ಗೌತಮಭಾ
ರ್ಯಾಯಾಂ ಚಂದ್ರಶ್ಚ ಬೃಹಸ್ಪತಿಪತ್ನ್ಯಾಂ ಮನಶ್ಚಕಾರೇತಿ
|| ೧೦೮ || ೩೮೩ ||

ಅರ್ಥ : ಕಾಮಪರವಶಃ = ಕಾಮಪರವಶನಪ್ಪ, ಪ್ರಜಾಪತಿಃ = ಬ್ರಹ್ಮಂ, ಆತ್ಮದುಹಿತರಿ = ತನ್ನ ಮಗಳೊಳ್, ಹರಿಃ = ನಾರಾಯಣಂ, ಗೋಪವಧೂಷು = ತುಱುಕಾಱರ ಸ್ತ್ರೀಯರೊಳ್, ಹರಃ = ಈಶ್ವರಂ, ಶಂತನುಕುಲತ್ರೇಷು = ಶಂತನುವಿನ ಪೆಂಡಿರೊಳ್, ಪುರಪತಿಃ = ಇಂದ್ರಂ, ಗೌತಮಭಾರ್ಯಾಯಾಂ = ಗೌತಮನ ಸ್ತ್ರೀಯರೊಳ್, ಚಂದ್ರಶ್ಚ = ಚಂದ್ರನುಂ, ಬೃಹಸ್ಪತಿಪತ್ನ್ಯಾಂ = ಗುರುಸ್ತ್ರೀಯರೊಳ್, ಮನಶ್ಚಕಾರೇತಿ = ಕೂಡಿದನೆಂದಿಂತು, ಶ್ರೂಯತೇ ಹಿ ಕಿಲ = ಕೇಳಲ್ಪಟ್ಟುದಲ್ತೆ || ಅರ್ತಾಕಾಂಕ್ಷೆಯಂ ವಿಶೇಷಿಸಿ ಪೇಳ್ವುದುತ್ತರವಾಕ್ಯಂ :

—-

೧೦೫. ತಪ್ಪಲೆಯೇ ಅನ್ನವನ್ನು ತಿಂದುಬಿಟ್ಟರೆ ಉಣ್ಣುವವನಿಗೆ ಅನ್ನವೆಲ್ಲಿಯದು?

೧೦೬. (ಸುಂದರಿಯಾದ) ಸ್ತ್ರೀ ಕಣ್ಣಿಗೆ ಬೀಳುವವರೆಗೂ, ಹಣವಂತನಾಗದಿರುವವರೆಗೂ ಎಲ್ಲರೂ ಶುದ್ಧರೇ.

೧೦೭. ಅತಿಕಾಮಿಯ ಮಾಡದಿರುವ ಕೆಲಸವಿಲ್ಲ.

೧೦೮. ಕಾಮಪರವಶನಾದ ಬ್ರಹ್ಮನು ತನ್ನ ಮಗಳಲ್ಲಿ, ಹರಿಯು ಗೋಪಿಕಾಸ್ತ್ರೀಯರಲ್ಲಿ. ಹರನು ಶಂತನುವಿನ ಹೆಂಡತಿಯಲ್ಲಿ, ಇಂದ್ರನು ಗೌತಮನ ಭಾರ್ಯೆಯಲ್ಲಿ, ಚಂದ್ರನು ಬೃಹಸ್ಪತಿಯ ಪತ್ನಿಯಲ್ಲಿ ಮನಸ್ಸಿಟ್ಟರೆಂದು ಕೇಳಲ್ಪಡುತ್ತದೆ.

—-

ಅರ್ಥೇಷೂಪಭೋಗರಹಿತಾಸ್ತರವೋsಪಿ ಸಾಭಿಲಾಷಾ ಕಿಂ ಪುನರ್ನ ಮನುಷ್ಯಾಃ || ೧೦೯ || ೩೮೪ ||

ಅರ್ಥ : ಅರ್ಥೇಷು = ಅರ್ಥಂಗಳೊಳ್, ಉಪಭೋಗರಹಿತಾಃ = ಉಪಭೋಗಮಿಲ್ಲದ (ಭೋಗಿಸಲಱಿಯದಂಥಾ) ತರವೋsಪಿ = ಮರಂಗಳುಂ, ಸಾಭಿಲಾಷಾಃ = ಅಭಿಲಾಷೆಯನುಳ್ಳವು, ಪುನಃ = ಮತ್ತೆ, ಮನುಷ್ಯಾಃ = ಮನುಷ್ಯರು, ಕಿಂ ನ = ಏಂ ಕಾಂಕ್ಷೆಗೆಯ್ಯರೇ ||

ಕಸ್ಯ ನಾಮ ಧನಲಾಭಾಲ್ಲೋಭೋ ನ ಪ್ರವರ್ತತೇ || ೧೧೦ || ೩೮೫ ||

ಅರ್ಥ : ಕಸ್ಯ ನಾಮ = ಆವಂಗೆ, ಧನಲಾಭಾತ್ = ಧನಲಾಭದಿಂದ, ಲೋಭಃ = ಲೋಭಂ, ನ ಪ್ರವರ್ತತೇ = ಪ್ರವರ್ತಿಸದು || ಅರ್ಥಮಂ ಕಾಣಲಾವಗಂ ಕಾಂಕ್ಷೆಯಕ್ಕುಮೆಂಬುದು ತಾತ್ಪರ್ಯಂ || ಪರಸ್ತ್ರೀಧನಂಗಳೊಳೆಱಕಮಿಲ್ಲದವನೊಳ್ಳಿದನೆಂಬುದುತ್ತರವಾಕ್ಯಂ :

ಸ ಖಲು ಪುರುಷಃ ಪ್ರತ್ಯಕ್ಷಂ ದೈವಂ ಯಸ್ಯ ಪರಸ್ವೇಷು ಪರಸ್ತ್ರೀಷು ಚ ನಿಃ ಸ್ವೃಹಂ ಚೇತಃ || ೧೧೧ || ೩೮೬ ||

ಅರ್ಥ : ಸಃ ಪುರುಷಃ ಖಲು = ಆ ಪುರುಷನೇ, ಪ್ರತ್ಯಕ್ಷಂ ದೈವಂ = ಕಾಣಲ್ಪರ್ಪ ದೈವಂ, ಯಸ್ಯ = ಆವಂಗೆ, ಪರಸ್ಟೇಷು = ಪರದ್ರವ್ಯಂಗಳೊಳಂ, ಪರಸ್ತ್ರೀಷು ಚ = ಪರಸ್ತ್ರೀಯರೊಳಂ, ನಿಃಸ್ವೃಹಂ = ಎಱಕಮಿಲ್ಲದುದು ಚೇತಃ = ಮನಂ || ಪರಸ್ತ್ರೀ – ಧನಗಳೊಳೆಱಕಮುಳ್ಳಂ ಕಷ್ಟನೆಂಬುದು ತಾತ್ಪರ್ಯಂ || ಒಳ್ಳಿದರಂ ಪಳಿಯಲಾಗದೆಂಬುದುತ್ತರವಾಕ್ಯಂ :

ಅದುಷ್ಟಸ್ಯ ದೂಷಣಂ ಸುಪ್ತವ್ಯಾಲಪ್ರಚೋದನಮಿವ || ೧೧೨ || ೩೮೭ ||

ಅರ್ಥ : ಅದುಷ್ಟಸ್ಯ ದೂಷಣಂ = ಒಳ್ಳಿದನಂ ಪಳಿವುದು, ಸುಪ್ತವ್ಯಾಲಪ್ರಚೋದನಮಿವ = ಕೋಳ್ಮೃಗಂಗಳ (ಹಾವ)ನೆಬ್ಬಿಪನಂತೆ || ಅದಕ್ಕೆ ಕಾರಣಮಂ ಪೇಳ್ವುದುತ್ತರವಾಕ್ಯಂ :

—-

೧೦೯. ಅರ್ಥವನ್ನು ಭೋಗಿಸಲರಿಯದ ಮರಗಳಿಗೂ ಅಪೇಕ್ಷೆಗಳಿರುವಾಗ, ಮನುಷ್ಯರ ವಿಷಯದಲ್ಲಿ ಹೇಳುವುದೇನಿದೆ?

೧೧೦. ಧನಲಾಭದಿಂದ ಯಾರಲ್ಲಿ ತಾನೆ ಲೋಭವು ಹೆಚ್ಚದು?

೧೧೧. ಪರದ್ರವ್ಯಗಳಲ್ಲಿ ಪರಸ್ತ್ರೀಯರಲ್ಲಿ ಲಾಲಸೆ ಇಲ್ಲದ ಮನಸ್ಸುಳ್ಳವನೇ ಪ್ರತ್ಯಕ್ಷ ದೈವವು.

೧೧೨. ದುಷ್ಟನಲ್ಲದವನನ್ನು ದೂಷಿಸುವುದು ಮಲಗಿದ ಹಾವನ್ನು ಎಬ್ಬಿಸಿದಂತೆ.

—-

ಸಕೃದ್ವಿಘಟಿತಂ ಚೇತಃ ಸ್ಫುಟಿತಸ್ಫಟಿಕವಲಯಮಿವ ಕಃ ಸಂಧಾತುಮೀಶ್ವರಃ || ೧೧೩ || ೩೮೮ ||

ಅರ್ಥ : ಸಕೃತ್ = ಒಮ್ಮೆ, ವಿಘಟಿತಂ = ಬೇಜಾದ, ಚೇತಃ = ಮನಂ, ಸ್ಫುಟಿತ = ಒಡೆದ, ಸ್ಫಟಿಕವಲಯಮಿವ = ಪಳುಕಿನ ಬಳೆಯೆಂತಂತೆ | ಸಂಧಾತುಂ = ಸಂಧಿಸಲ್ಕೆ | ಈಶ್ವರಃ = ಆರ್ಪೊಂ, ಕಃ = ಆವಂ || ಮುಱಿದ ಮನಮಂ ಸಂಧಿಸಲ್ಭಾರದೆಂಬುದು ತಾತ್ಪರ್ಯಂ || ಈಯರ್ಥಮನೆ ವಿಶೇಷಿಸಿ ಪೇಳ್ವುದುತ್ತರವಾಕ್ಯಂ :

ನ ಮಹತಾಪ್ಯುಪಕಾರೇಣ ತಥಾಚಿತ್ತಸ್ಯಾನುರಾಗೋ ಯಥಾ ವಿರಾಗೋ
ಭವತ್ಯಲ್ಪೇನಾಪ್ಯುಪಕಾರೇಣ
|| ೧೧೪ || ೩೮೯ ||

ಅರ್ಥ : ಮಹತಾಪಿ = ಪಿರಿದಪ್ಪ, ಉಪಕಾರೇಣ = ಉಪಕಾರದಿಂ, ತಥಾವಿಧ = ಅಂತಪ್ಪ, ಚಿತ್ತಸ್ಯ = ಮನದ, ಅನುರಾಗಃ = ಅರ್ತಿ, ನ = ಆಗದು, ಯಥಾ = ಎಂತು, ವಿರಾಗಃ = ದ್ವೇಷಂ, ಭವತಿ = ಅಕ್ಕುಂ, ಅಪಕಾರೇಣ = ಅಪಕಾರದಿಂ, ಅಲ್ಪೇನಾಪಿ = ಕಿಱಿದಱಿಂದಮುಂ || ಮುಳಿಸಂ ಮಾರ್ಪುದಂ ಪೇಳ್ವುದುತ್ತರವಾಕ್ಯಂ :

ಸೂಚೀಮುಖಸರ್ಪವನ್ನಾನಪಕೃತ್ಯ ವಿರಮಂತ್ಯಪರಾದ್ಧಾಃ || ೧೧೫ || ೩೯೦ ||

ಅರ್ಥ : ಸೂಚೀಮುಖಸರ್ಪವತ್ = ಸೂಚಿಮೊಗಂಗೊಂಡ ಪಾವಿನಂತೆ, ಅನಪಕೃತ್ಯ = ಅಪಕಾರಮಂ ಮಾಡದೆ, ನ ವಿರಮಂತಿ = ಮಾಣರ್, ಅಪರಾದ್ಧಾಃ = ಅವಮಾನಿಸೆಪಟ್ಟವರು || ಅಮನ್ನಣೆಯಿಂ ಕೇಡಕ್ಕುಮೆಂಬುದು ತಾತ್ಪರ್ಯಂ || ಇಂತಪ್ಪ ಕಾರ್ಯಮಂ ಮಾಡಲಾಗದೆಂಬುದುತ್ತರವಾಕ್ಯಂ :

ಸಮಾಯವ್ಯಯಃ ಕಾರ್ಯಾರಂಭೋ ರಾಭಸಿಕಾನಾಂ
ಸಮಾಯವ್ಯಯಃ
[15]|| ೧೧೬ || ೩೯೧ ||

ಅರ್ಥ : ಸಮಾಯ-ವ್ಯಯಃ = ಸಮಾನಮಪ್ಪ ಆಯಮುಂ-ಬೀಯಮನುಳ್ಳ, ಕಾರ್ಯಾರಂಭಃ = ಕಾರ್ಯದ ಪ್ರಾರಂಭಂ, ರಾಭಸಿಕಾನಾಂ = ತುರಿಪಕಾರರ್ಗೆ (ಉತ್ಸಂಕರ್ಗೆ) || ಸಮಾಯವ್ಯಯಃ = ಸಮ ಆಯ-ಭೀಯಮುಂ ||

—-

೧೧೩. ಒಡೆದ ಸ್ಫಟಿಕದ ಬಳೆಯಂತೆ ಒಮ್ಮೆ ಬೇರೆಯಾದ ಮನಸ್ಸನ್ನು ಸೇರಿಸುವುದಕ್ಕೆ ಯಾರು ಸಮರ್ಥರು?

೧೧೪. ಸಣ್ಣ ಅಪಕಾರದಿಂದ ಮನಸ್ಸಿನಲ್ಲಿ ಎಷ್ಟರಮಟ್ಟಿನ ಅಸಮಾಧಾನವುಂಟಾಗುವುದೋ ಅಷ್ಟರಮಟ್ಟಿನ ಅನುರಾಗವು ಎಷ್ಟು ಹೆಚ್ಚು ಉಪಕಾರದಿಂದಲೂ ಆಗದು.

೧೧೫. ಅವಮಾನಿತರಾದವರು ಯಾರ ವಿಷಯದಲ್ಲಿ ಅಪರಾಧ ಜರುಗಿದೆಯೋ ಅವರು ದೃಷ್ಟಿಯಲ್ಲಿ ವಿಷವಿರುವ ಹಾವಿನಂತೆ ಅಪಕಾರಮಾಡದೇ ಇರುವುದಿಲ್ಲ.

೧೧೬. ಆತುರಗಾರರ ಕಾರ್ಯಾರಂಭವು ಆಯವ್ಯಯಗಳ ಸಮಾನತೆಯುಳ್ಳದ್ದು.

—-

 

[1]ಮೈ., ಚೌ: ತದಂಧವರ್ತಕೀಯುಂ;  ತದಂಧಕವರ್ತಕೀಯಂ ಎಂದಿರಬೇಕು. ಇದೊಂದು ನ್ಯಾಯ. ಚಪ್ಪಾಳೆ ತಟ್ಟುತ್ತ ಕುಳಿತ ಕುರುಡನ ಕೈಗಳ ನಡುವೆ ಒಂದು ಹಕ್ಕಿ ಸಿಕ್ಕಿ ಬೀಳುತ್ತದೆ. ಇದು ಆಕಸ್ಮಿಕ.

[2]ಕಾಕತಾಳೀಯದ ಅರ್ಥವನ್ನು ಟೀಕಾಕಾರನು ‘ಕಾಗೆಯ ಮೇಲೆ ತಾಳಫಲಂ ಬೀಳ್ವಂತೆ’ ಎಂದು ವಿವರಿಸಿದ್ದಾನೆ. ಈ ನ್ಯಾಯದ ಬಗ್ಗೆ ಹಲವಾರು ವಿವರಣೆಗಳಿದ್ದು, ಟೀಕಾಕಾರನ ಪ್ರಕಾರ ಕಾಗೆ ತಳವೃಕ್ಷದ ಮೇಲೆ ಕೂತೊಡನೆಯೇ ಆಕಸ್ಮಿಕವಾಗಿ ಅದರ ತಲೆಯ ಮೇಲೆ ತಾಳಫಲಂ ಬಿದ್ದಿತು. ಹಾಗೆ ಈ ನ್ಯಾಯ ಕಾರ್ಯಕಾರಣ ಸಂಬಂಧವಿಲ್ಲದೆ ಆಕಸ್ಮಿಕವನ್ನು ವಿವರಿಸುತ್ತದೆ. (ಅಪ್ಟೆ: ಸಂಸ್ಕೃತ-ಇಂಗ್ಲೀಷ್ ನಿಘಂಟು, ಅಪೆಂಡಿಕ್ಸ್‌ಇ).

[3]ಘಣಾಕ್ಷರ ನ್ಯಾಯವನ್ನು ಟೀಕಾಕಾರನು ‘ಪುಳುಗಳಕ್ಕರಮಂ ತೋಡಿದಂತೆ’ ಎಂದು ವಿವರಿಸಿದ್ದಾನೆ. ಹುಳುಗಳು ಕಟ್ಟಿಗೆಯನ್ನು ಕೊರೆಯುತ್ತವೆ. ಆಗ ಕೊರೆದ ಗೆರೆಗಳು ಅಕ್ಷರಗಳಂತೆ ತೋರುತ್ತವೆ. ಘುಣ ಅಂದರೆ ಹುಳು, ಹುಳುಗಳು ಬುದ್ಧಿಪೂರ್ವಕವಾಗಿ ಅಕ್ಷರಗಳನ್ನು ಬರೆಯುವುದಿಲ್ಲ. ಆ ಗೆರೆಗಳು ಆಕಸ್ಮಿಕವಾಗಿ ಅಕ್ಷರಗಳನ್ನು ಹೋಲುತ್ತವೆ.

ಹಾಗೆಯೇ ಮೂರ್ಖರಿಂದ ಒಂದು ಒಳ್ಳೆಯ ಕೆಲಸವಾದರೆ ಅದು ಆಕಸ್ಮಿಕವೇ ಹೊರತಾಗಿ ಬುದ್ಧಿಪೂರ್ವಕವಾಗಿ ಮಾಡಿದುದಲ್ಲ. ಕಾಕತಾಳೀಯ ಎಂಬ ನ್ಯಾಯವು ಹಾಗೆಯೇ. ‘ಕಾಗೆ ಕೂಡುವುದಕ್ಕೂ ಟೊಂಗೆ ಮುರಿಯುವುದಕ್ಕೂ ಸಾಟಿ’ಎನ್ನುವುದಿಲ್ಲವೇ?.

[4]ಮೈ., ಚೌ. ಕಿಯತ್ ಪಶ್ಯೇತ್

[5]ಮೈ., ಚೌ. ಕಾಲ ಏವ.

[6]ಕೃತ್ಯೋತ್ಥಾಪನ = ಕೃತಿಯೆಂಬ ದೇವತೆಯನ್ನೆಬ್ಬಿಸುವಂತೆ;  ಕೃತಿ ಅಥವಾ ಕೃತ್ಯಾ ಎಂದರೆ ಶತ್ರುನಾಶಕ್ಕಾಗಿ ಯಜ್ಞ ಮಾಡಿ ಆಹ್ವಾನಿಸುವ ದೇವತೆ ಅಥವಾ ವಿಧ್ವಂಸಕ ಶಕ್ತಿ ಎಂದು ಹೇಳುತ್ತಾರೆ.

[7]ಮೈ. ಗುಣಹೀನಂ, ಚೌ. ಕಷ್ಟಂ.

[8]ಪಿಂಜನ ಅಂದರೆ ಕೋಲಿನಿಂದ ಅರಳೆಯನ್ನು ಸ್ವಚ್ಛಮಾಡುವುದು. ಈ ಕೋಲಿಗೆ ಬೆಸಗೋಲು ಎಂದು ಹೆಸರು. ಈ ಕೆಲಸ ಮಾಡುವವನಿಗೆ ಪಿಂಜಾರ ಎಂಬ ಹೆಸರಿರುವುದನ್ನು ಗಮನಿಸಬಹುದು.

[9]ಮೈ. ಚಕ್ಷುಪ್ಮತ ಇವ.

[10]ಮೈ. ಚೌ. ಕ್ಷತ್ರಿಯಸ್ಯ.

[11]ಟೀಕಾಕಾರನಿಗೆ ದೊರೆತ ಹಸ್ತಪ್ರತಿಯಲ್ಲಿಯೇ ದೋಷವಿದ್ದಿತೆಂದು ತೋರುತ್ತದೆ. ಮೈ. ಚೌ ಗಳಲ್ಲಿ ನ ಲಂಪಟೋಧಿಕಾರಿ ಎಂಬ ಒಂದು ವಾಕ್ಯವಿದ್ದು, ಮುಂದಿನ ಮಂತ್ರಣೋರ್ಥಗ್ರಸನ ಇತ್ಯಾದಿ ಭಾಗವು ಮುಂದಿನ ವಾಕ್ಯವಾಗಿದೆ. ಅದಲ್ಲದೆ ನಮ್ಮ ಪ್ರತಿಯಲ್ಲಿ ಮಂತ್ರಿಣೋರ್ಥಗ್ರಸನ ಇತ್ಯಾದಿ ಇನ್ನೊಂದು ವಾಕ್ಯವಾಗಿ ಪುನರುಕ್ತವಾಗಿದೆ. ಟೀಕಾಕಾರನು ಎರಡೂ ಸಲವೂ ಇದಕ್ಕೆ ಅರ್ಥ ಕೊಟ್ಟಿದ್ದಾನೆ.

ವಾಕ್ಯದ ಮೊದಲ ಭಾಗದ ಪಾಠ ಮತ್ತು ಅರ್ಥಗಳಲ್ಲಿ ವ್ಯತ್ಯಾಸವಿದೆ. ಮೈ. ಚೌ: ಗಳಲ್ಲಿ ಲಂಪಟನಾದ ಮನುಷ್ಯನು ಅಧಿಕಾರಯೋಗ್ಯನಲ್ಲ ಎಂಬರ್ಥವಿದ್ದರೆ ನಮ್ಮ ಪ್ರತಿಯಲ್ಲಿ ಲಂಪಟನಲ್ಲದ ಅಧಿಕಾರಿಯು ಇಲ್ಲದಿರುವುದರಿಂದ ಎಂಬರ್ಥದ ವಾಕ್ಯವಿದೆ. ಟೀಕಾಕಾರನು ಇದನ್ನೇ ಅವಲಂಬಿಸಿ ಅರ್ಥವನ್ನು ವಿವರಿಸಿದ್ದಾನೆ.

[12]ಬೇಲಿಯೇ ಎದ್ದು ಹೊಲ ಮೇಯ್ದಂತೆ, ಎಂಬ ಗಾದೆ ಮಾತನ್ನು ನೆನಪಿಸಿಕೊಳ್ಳಬಹುದು.

[13]ಮೈ., ಚೌ. ಯಾವನ್ನ ಪರಸ್ತ್ರೀ, ಇದೇ ಸರಿಯಾದ ಪಾಠ.

[14]ಇಲ್ಲಿಂದ ಮುಂದೆ ಮೂರು ಪ್ರತಿಗಳಲ್ಲಿ ವಾಕ್ಯಗಳ ಸ್ಥಾನಗಳಲ್ಲಿ ಹೆಚ್ಚು ಕಡಿಮೆಯಿದೆ.

[15]ಈ ಕೊನೆಯ ಪದ ಪುನರುಕ್ತವಾದಂತಿದೆ. ಮೈ., ಚೌ. ಗಳಲ್ಲಿಲ್ಲ.