ಪುರೋಹಿತಲಕ್ಷಣಮಂ ಪೇಳ್ವುದುತ್ತರವಾಕ್ಯಂ :

ಪುರೋಹಿತಮುದಿತೋದಿತಕುಲಶೀಲಂ ಷಡಂಗೇ ವೇದೇ ದೈವೇ ನಿಮಿತ್ತೇ
ದಂಡನೀತ್ಯಾಂ[1] ಚಾಭಿವಿನೀತಂ ದೈವೀನಾಂ ಮಾನುಷೀಣಾಂ ಚ ಆಪದಾಂ
ಪ್ರತಿಕರ್ತಾರಂ ಕುರ್ವೀತ
|| || ೪೪೫ ||

ಅರ್ಥ : ಉದಿತೋದಿತ = ಕರಮಗ್ಗಳನಪ್ಪ, ಕುಲಶೀಲಂ = ಕುಲಮಂ, ಶೀಲಮನುಳ್ಳನು, ಷಡಂಗೇ = ಅಱಂಗದೊಳಂ, ವೇದೇ = ವೇದದೊಳಂ, ದೈವೇ = ದೈವದೊಳಂ, ನಿಮಿತ್ತೇ = ನಿಮಿತ್ತದೊಳಂ, ದಂಡನೀತ್ಯಾಂ ಚ = ದಂಡನೀತಿಯೊಳಂ, ಆಭಿವಿನೀತಂ = ಕುಶಲನಪ್ಪನಂ, ದೈವೀನಾಂ = ದೈವದೊಳಾದ, ಮಾನುಷೀಣಾಂ ಚ = ಮನುಷ್ಯರೊಳಾದ, ಆಪದಾಂ = ಆಪತ್ತುಗಳ್ಗೆ, ಪ್ರತಿಕರ್ತಾರಂ = ಪ್ರತೀಕಾರಮಂ ಮಾಳ್ಪನಂ, ಪುರೋಹಿತಂ = ಪುರೋಹಿತನಂ, ಕುರ್ವೀತ = ಮಾಳ್ಪುದು || ಕುಲವಿಜ್ಞಾನಮಿಲ್ಲದಂ ಪುರೋಹಿತನಲ್ಲೆಂಬುದು ತಾತ್ಪರ್ಯಂ || ಅರಸನಿಂತಪ್ಪನೊಳಂ ಅಹಿತಂ ನೆಗಳಲಾಗದೆಂಬುದುತ್ತರವಾಕ್ಯಂ :

ರಾಜ್ಞೋ ಹಿ ಮಂತ್ರಿಪುರೋಹಿತೌ ಮಾತಾಪಿತರಾವತಃ ತೌ ನ ಕೇಷುಚಿತ್
ವಾಂಛೀತೇಷು ವಿದೂರಯೇತ್
, ನ ದುಃಖಯೇತ್, ನ ದುರ್ವಿನಯೇತ್ ವಾ || || ೪೪೬ ||

ಅರ್ಥ : ರಾಜ್ಞಃ = ಅರಸಂಗೆ, ಹಿ = ಆವುದೊಂದು ಕಾರಣಮಾಗಿ, ಮಂತ್ರಿಪುರೋಹಿತೌ = ಮಂತ್ರಿಯುಂ ಪುರೋಹಿತನುಮೆಂದೀರ್ವರುಂ, ಮಾತಾಪಿತರೌ = ತಾಯುಂ-ತಂದೆವಿರುಂ, ಆತಃ = ಅದು ಕಾರಣದಿಂ, ತೌ = ಈರ್ವರುಂ, ಕೇಷುಚಿತ್ = ಆವುವೋ ಕೆಲವು, ವಾಂಭಿತೇಷು = ಇಷ್ಟಕಾರ್ಯಂಗಳೊಳು (ಮನೋರಥಂಗಳಲ್ಲಿಯು) ನ ವಿದೂರಯೇತ್ = ದೂರಂ ಮಾಡದಿರ್ಕ್ಕೆ ನ ದುಃಖಯೇತ್ = ದುಃಖಿಸಲಾಗದು, ನ ದುರ್ವಿನಯೇತ್ = ಅವಿನಯಮಂ ಮಾಡದಿರ್ಕ್ಕೆ, ವಾ = ಮೇಣ್ || ಮಂತ್ರಿ-ಪುರೋಹಿತರ್ಗೆ ಹಿತಮಂ ಮಾಳ್ವುದೆಂಬುದು ತಾತ್ಪರ್ಯಂ || ಮುಂಪೇಳ್ದ ದೈವದಿಂದಪ್ಟಾಪತ್ತುಗಳಂ ಪೇಳ್ವುದುತ್ತರವಾಕ್ಯಂ :

—-

೧. ಅತ್ಯಂತ ಶ್ರೇಷ್ಠ ಕುಲವುಳ್ಳವನು, ಷಡಂಗಗಳು, ವೇದಗಳು, ಜೋತಿಷ್ಯ, ಶಕುನಶಾಸ್ತ್ರ, ದಂಡನೀತಿ ಇವುಗಳಲ್ಲಿ ಪರಿಣತನು, ದೈವ, ಮಾನುಷಗಳಾದ ಆಪತ್ತುಗಳಿಗೆ ಪ್ರತೀಕಾರ ಮಾಡಬಲ್ಲವನು ಆದವನನ್ನು ಪೂರೋಹಿತನನ್ನಾಗಿ ಮಾಡಿಕೊಳ್ಳಬೇಕು.

೨. ಅರಸನಿಗೆ ಮಂತ್ರಿ ಪುರೋಹಿತರು ಮಾತಾಪಿತೃಗಳಿದ್ದಂತೆ ಆದುದರಿಂದ ಇಷ್ಟವಾದ ವಿಷಯಗಳಿಂದ ಅವರನ್ನು ದೂರಮಾಡಿಕೊಳ್ಳಬಾರದು. ಅವರನ್ನು ದುಃಖಿಸಬಾರದು ಅಥವಾ ಅಲಕ್ಷಿಸಬಾರದು.

—-

ಅಮಾನುಷಾಗ್ನಿ ರವರ್ಷಮತಿವರ್ಷಂ ಮರಕೋ ದುರ್ಭಿಕ್ಷಂ ಸಸ್ಯೋ
ಪಘಾತಿರ್ಜಂತೂತ್ಸರ್ಗೋ ವ್ಯಾಧಿಭೂತಪಿಶಾಚಶಾಕಿನೀಸರ್ಪವ್ಯಾಳ
ಮೂಷಿಕಕ್ಷೋಭಶ್ಚೇತ್ಯಾಪದಃ
|| || ೪೪೭ ||

ಅರ್ಥ : ಅಮಾನುಷಾಗ್ನಿ = ದೈವಗಿಚ್ಚಂ, ಅವರ್ಷಂ = ಮಳೆಯಿಲ್ಲಮೆಯುಂ, ಅತಿವರ್ಷಂ = ಭೂರಿಮಳೆಯುಂ, ಮರಕಃ = ಸಿವಳಿಗೆಗುತ್ತಮುಂ (ಮಾಱಿ), ದುರ್ಭಿಕ್ಷಂ = ಪಸವುಂ (ಬಱ), ಸಸ್ಯೋಪಘಾತಿಜಂತೂತ್ಸರ್ಗಃ = ಸಸಿಗಳಂ ಕೆಡಿಸುವ ಅದ್ಭುತಪ್ರಾಣಿಗಳ ಪೆರ್ಚುಂ, ವ್ಯಾಧಿ = ವ್ಯಾಧಿಗಳು, ಭೂತ = ಭೂತಂಗಳುಂ, ಪಿಶಾಚ = ಪಿಶಾಚಂಗಳುಂ, ಶಾಕಿನೀ = ಶಾಕಿನಿಯರುಂ, ಸರ್ಪ = ಸರ್ಪಂಗಳುಂ, ವ್ಯಾಲ = ಕ್ರೂರಮೃಗಂಗಳು, ಮೂಷಿಕಕ್ಷೋಭಶ್ಚ = ಇಲಿಗಳ ಬಾಧೆಯುಮೆಂಬಿವು, ಅಮಾನುಷಾಃ = ದೈವದಿಂದಾದ ಆಪದಃ = ಆಪತ್ತುಗಳು || ಅರಸುಮಗಂಗಿಂತಪ್ಪವಂ ಕಲಿಸದಿರಲಾಗದೆಂಬುದುತ್ತರವಾಕ್ಯಂ :

ಶಿಕ್ಷಾಲಾಪಕ್ರಿಯಾಕ್ಷಮೋ ರಾಜಪುತ್ರಃ ಸರ್ವಾಸು ಲಿಪಿಷು[2] ಪ್ರಸಂಖ್ಯಾನೇ
ಪದಪ್ರಮಾಣಪ್ರಯೋಗಕರ್ಮಣಿ ನೀತ್ಯಾಗಮೇಷು ರತ್ನ ಪರೀಕ್ಷಾಯಾಂ
ಸಂಭೋಗಪ್ರಹರಣೋಪವಾಹ್ಯವಿದ್ಯಾಸು ಚ ಸಾಧು ವಿನೇತವ್ಯಃ
|| | ೪೪೮ ||

ಅರ್ಥ : ಶಿಕ್ಷಾ = ಶಿಕ್ಷೆಯು, ಆಲಾಪಃ = ಆಲಾಪಮುಂ, ಕ್ರಿಯಾ = ಕ್ರಿಯೆಯುಮೆಂದಿವರೊಳ್, ಕ್ಷಮಃ = ಆರ್ಪಮನುಳ್ಳ (ಶಕ್ತಿಯನುಳ್ಳ) ರಾಜಪುತ್ರಃ = ಅರಸುಮಗಂ, ಸರ್ವಾಸು ಲಿಪಿಷು = ಎಲ್ಲಾ ಲಿಪಿಗಳೊಳಂ, ಪ್ರಸಂಖ್ಯಾನೇ = ಗಣಿತದೊಳ್, ಪದಪ್ರಮಾಣಪ್ರಯೋಗಕರ್ಮಣಿ = ವ್ಯಾಕರಣದೊಳಂ, ಪ್ರಮಾಣ ಪ್ರಯೋಗಕರ್ಮಣಿ = ತರ್ಕ ಕಾವ್ಯಶಾಸ್ತ್ರದೊಳಂ, ನೀತ್ಯಾಗಮೇಷು = ನೀತಿಶಾಸ್ತ್ರದೊಳ, ರತ್ನಪರೀಕ್ಷಾಯಾಂ = ರತ್ನ ಪರೀಕ್ಷೆಯೊಳಂ | ಸಂಭೋಗ = ವಾತ್ಸ್ಯಾಯನಮುಂ (ಕಾಮಶಾಸ್ತ್ರ) ಪ್ರಹರಣ = ಶಸ್ತ್ರವಿದ್ಯೆಯುಂ, ಉಪವಾಹ್ಯ = ವಾಹನಶಾಸ್ತ್ರಮೆಂಬೀ,[3] ವಿದ್ಯಾಸು ಚ = ವಿದ್ಯೆಗಳೊಳಂ, ಸಾಧು = ಒಳ್ಳಿತ್ತಾಗಿ, ವಿನೇತವ್ಯಃ = ಶಿಕ್ಷಿಸಲ್ಪಡುವಂ || ಅರಸುಮಗನಿನಿತಂ ಕಲಿಯದಂದು ರಾಜ್ಯಕ್ಕುಪಯೋಗನಲ್ಲೆಂಬುದು ತಾತ್ಪರ್ಯಂ || ಗುರುಪ್ರಸಾದಮಂ ಪಡೆವುದಕ್ಕೆ ಕಾರಣಮಂ ಪೇಳ್ವುದುತ್ತರವಾಕ್ಯಂ :

—-

೩. ಮನುಷ್ಯರಿಂದಲ್ಲದ ಇತರ ಕಾರಣಗಳಿಂದ ಉಂಟಾಗುವ ಅಗ್ನಿಪ್ರಮಾದ, ಮಳೆಯಾಗದಿರುವದು, ಅತಿ ವರ್ಷ, ಮಾರಿಬೇನೆ, ಬರ, ಸಸ್ಯಗಳ ನಾಶ, ದುಷ್ಟ ಜಂತುಗಳ ವೃದ್ಧಿ, ವ್ಯಾಧಿಗಳು, ಭೂತ, ಪಿಶಾಚ ಶಾಕಿನೀ, ಸರ್ಪ, ದುಷ್ಟಗಜ, ಮೂಷಕಗಳ ಹಾವಳಿ ಇವುಗಳು (ರಾಜ್ಯದಲ್ಲಿ ಸಂಭವಿಸುವ) ಆಪತ್ತುಗಳು.

೪. ವಿದ್ಯೆ, ಮಾತುಗಾರಿಕೆ ಮತ್ತು (ರಾಜ) ಕಾರ್ಯಗಳಲ್ಲಿ ಸಾಮರ್ಥ್ಯವನ್ನು ಹೊಂದಬಹುದಾದ ರಾಜಪುತ್ರನಿಗೆ ಎಲ್ಲ ಲಿಪಿಗಳು, ಗಣಿತ, ವ್ಯಾಕರಣ, ನ್ಯಾಯಶಾಸ್ತ್ರ, ತರ್ಕಶಾಸ್ತ್ರ ಪ್ರಯೋಗ, ನೀತಿಶಾಸ್ತ್ರ, ರತ್ನಪರೀಕ್ಷೆ, ಕಾಮಶಾಸ್ತ್ರ, ಶಸ್ತ್ರವಿದ್ಯೆ, ವಾಹನಶಾಸ್ತ್ರ ಈ ವಿದ್ಯೆಗಳನ್ನು ಚನ್ನಾಗಿ ಕಲಿಸಬೇಕು.

—-

ಆಸ್ವಾತಂತ್ರ್ಯಮುಕ್ತಕಾರಿತ್ವಂ ನಿಯಮೋ ವಿನೀತತಾ ಚ ಗುರೂಪಾಸನ ಕಾರಣಾನಿ || || ೪೪೯ ||

ಅರ್ಥ : ಅಸ್ವಾತತ್ರ್ಯಂ = ತನ್ನಿಚ್ಛೆಯಂ ನೆಗಳದುದಂ, ಉಕ್ತಕಾರಿತ್ವಂ = ಪೇಳ್ದುದುದಂ ಗ್ಯೆಯ್ವುದುಂ, ನಿಯಮಃ = ನಿಯಮಮುಂ, ವಿನೀತತಾ ಚ = ವಿನಯಮುಂ, ಗುರೂಪಾಸನಕಾರಣಾನಿ = ಗುರುಗಳನಾರಾಧಿಸುವುದಕ್ಕೆ ಕಾರಣಂಗಳ್ || ವಿನಯಾದಿಗಳಿಲ್ಲದೆ ಗುರುಪ್ರಸಾದಮಂ ಪಡೆಯಲ್ ಬಾರದೆಂಬುದು ತಾತ್ಪರ್ಯಂ || ವಿನಯಂ ಪೇಳ್ವುದುತ್ತರವಾಕ್ಯಂ :

ವೃತವಿದ್ಯಾವಯೋಧಿಕೇಷು ನೀ ಚೈರಾಚರಣಂ ವಿನಯಃ || || ೪೫೦ ||

ಅರ್ಥ : ವ್ರತವಿದ್ಯಾವಯೋಧಿಕೇಷು = ವ್ರತಮುಂ, ವಿದ್ಯೆಯುಂ, ಪ್ರಾಯಮುಮೆಂಬಿವ ರೊಳಧಿಕರಪ್ಪರೊಳ್, ನೀಚೈರಾಚರಣಂ = ತುಳಿಲ್ಗೆಯ್ಪುದುಂ (ನೀಚವೃತ್ತಿಯಿಂದಾಚರಿಸುಹವು) ವಿನಯಃ = ವಿನಯಮುಮೆಂಬುದು || ವಿನಯದ ಫಲಮಂ ಪೇಳ್ವುದುತ್ತರವಾಕ್ಯಂ :

ಪುಣ್ಯಾವಾಪ್ತಿಃ ಶಾಸ್ತ್ರರಹಸ್ಯಪರಿಜ್ಞಾನಂ ಸತ್ಪುರುಷಾಭಿಗಮ್ಯತ್ವಂ ಚ ವಿನಯಫಲಂ || || ೪೫೧ ||

ಅರ್ಥ : ಪುಣ್ಯಾವಾಪ್ತಿಃ = ಪುಣ್ಯದೆಯ್ದುಗೆಯುಂ, ಶಾಸ್ತ್ರರಹಸ್ಯಪರಿಜ್ಞಾನಂ = ಶಾಸ್ತ್ರದ ಒಳಗನಱಿವುದುಂ, ಸತ್ಪುರುಷಾಭಿಗಮ್ಯತ್ವಂ ಚ = ಸತ್ಪುರುಷರಿಂ ಪೊರ್ದೆಪಡುವುದುಮೆಂಬಿವು, ವಿನಯಫಲಂ = ವಿನಯಫಲವು || ಅಭ್ಯಾಸಮಿಂತು ಫಲಮಂ ಕೊಡುವುದೆಂಬುದುತ್ತರವಾಕ್ಯಂ :

—-

೫. ಸ್ವೇಚ್ಛಾಪ್ರವರ್ತನೆಯಿಲ್ಲದಿರುವದು. ಹೇಳಿದ್ದನ್ನು ಮಾಡುವದು, ನಿಯಮಾನುಸರಣೆ, ವಿನಯಪ್ರವರ್ತನೆ, ಇವು ಗುರುಶುಶ್ರೂಷಣೆಗೆ ಅವಶ್ಯಕ.

೬. ನಿಯಮಾಚರಣೆ, ವಿದ್ಯೆ, ವಯಸ್ಸು, ಇವುಗಳಲ್ಲಿ ಹಿರಿಯರಾದವರಲ್ಲಿ ವಿನೀತನಾಗಿ ನಡೆದು ಕೊಳ್ಳುವದು ವಿನಯ.

೭. ಪುಣ್ಯಪ್ರಾಪ್ತಿ, ಶಾಸ್ತ್ರ ರಹಸ್ಯದ ಪರಿಜ್ಞಾನ, ಸತ್ಪುರುಷ ಸಹವಾಸ ಇವು ವಿನಯದ ಫಲಗಳು.

—-

ಅಭ್ಯಾಸಃ ಕರ್ಮಸು ಕೌಶಲಮುತ್ಪಾದಯತ್ಯೇವ, ಯದ್ಯಸ್ತಿ ತಜ್ಜ್ಞೇಭ್ಯಃ ಸಂಪ್ರದಾಯಃ || || ೪೫೨ ||

ಅರ್ಥ : ಅಭ್ಯಾಸಃ = ಅಭ್ಯಾಸಮುಂ, ಕರ್ಮಸು ಕೌಶಲಂ = ಕ್ರಿಯಾಕುಶಲತೆಯಂ, ಉತ್ಪಾದಯತ್ಯೇವ = ಪುಟ್ಟಿಸುವುದೇ, ತಜ್ಜ್ಞೇಭ್ಯಃ = ಆ ವಿದ್ಯೆಯಂ ಬಲ್ಲವರ್ಗಳತ್ತಣಿಂ, ಸಂಪ್ರದಾಯಃ = ಪರಮೋಪದೇಶಂ (ಸಂಪ್ರದಾಯಮನುಳ್ಳುದು), ಯದ್ಯಸ್ತಿ – ಉಂಟಕ್ಕುಮಪ್ಪೊಡೆ || ಅಭ್ಯಾಸಮುಮುಪದೇಶಮುಮಾಗಲೆವೇಳ್ಕುಮೆಂಬುದು ತಾತ್ಪರ್ಯಂ || ಗುರುಗಳ್ವೇಳ್ವವನಿಂತಪ್ಪುವಂ ಪೊಱಗಾಗಿ ಮಾಳ್ಪುದೆಂಬುದುತ್ತರವಾಕ್ಯಂ :

ಗುರುವಚನಮನುಲ್ಲಂಘನೀಯಮನ್ಯತ್ರಾಧರ್ಮಾನುಚಿತಾಚಾರಾತ್ಮ ಪ್ರತ್ಯವಾಯೇಭ್ಯಃ || || ೪೫೩ ||

ಅರ್ಥ : ಯುಕ್ತಂ = ತಗದುದು, ಆಯುಕ್ತಂ ವಾ = ತಗದದು ಮೇಣ್, ಗುರುರೇವ = ಗುರುವೇ, ಜಾನಾತಿ = ಅಱಿವಂ, ಶಿಷ್ಯಃ = ಶಿಷ್ಯಂ, ಪ್ರತ್ಯರ್ಥವಾದೀ = ಪ್ರತಿಕೂಲವ ನುಡಿವನು, ಯದಿ ನ = ಆಗನಕ್ಕುಮಪ್ಪೊಡೆ || ವಿನೀತರಪ್ಪವರ್ಗೆ ಹಿತಮಂ ಪೇಳ್ವುದೆಂಬುದು ತಾತ್ಪರ್ಯಂ || ಗುರುಗಳ ಮಾಣಿಸುವುಪಾಯಮಂ ಪೇಳ್ವುದುತ್ತರವಾಕ್ಯಂ :

ಯುಕ್ತಮಯುಕ್ತಂ ವಾ ಗುರುರೇವ ಜಾನಾತಿ ಯದಿನ ನ ಶಿಷ್ಯ: ಪ್ರತ್ಯರ್ಥವಾದೀ[4] || ೧೦ || ೪೫೪ ||

ಅರ್ಥ: ಯುಕ್ತಂ = ತಗದುದು, ಅಯುಕ್ತಂ ವಾ = ತಗದದು ಮೇಣ್, ಗುರುರೇವ = ಗುರುವೇ, ಜಾನಾತಿ = ಅಱಿವಂ, ಶಿಷ್ಯಃ = ಶಿಷ್ಯಂ, ಪ್ರತ್ಯರ್ಥವಾದೀ = ಪ್ರತಿಕೂಲವ ನುಡಿವನು, ಯದಿ ನ = ಆಗನಕ್ಕುಮಪ್ಪೊಡೆ || ವಿನೀತರಪ್ಪವರ್ಗೆ ಹಿತಮಂ ಪೇಳ್ವುದೆಂಬುದು ತಾತ್ಪರ್ಯಂ || ಗುರುಗಳ ಮಾನಿಸುವುಪಾಯಮಂ ಪೇಳ್ವುದುತ್ತರವಾಕ್ಯಂ:

ಗುರುಜನೇ ರೋಷೇsನುತ್ತರದಾನಮಭ್ಯುಪಪತ್ತಿಶ್ಚೌಷಧಂ || ೧೧ || ೪೫೫ ||

ಅರ್ಥ : ಗುರುಜನೇ ರೋಷೇ = ಗುರುಗಳ ಮುಳಿಸಿನೊಳ್ | ಅನುತ್ತರದಾನಂ = ಉತ್ತರಂಗುಡದಿರ್ಪುದುಂ, ಅಭ್ಯುಪಪತ್ತಿಶ್ಚ = ಅವರ ಪೇಳ್ಕೆಯನೊಡಂಬಡುವುದುಂ, ಔಷಧಂ = ಔಷಧಂ || ಗುರುಗಳಿಚ್ಛೆಯುಂ ನೆಗಳ್ವುದೆಂಬುದು ತಾತ್ಪರ್ಯಂ || ಈಯರ್ಥಮನೆ ವಿಶೇಷಿಸಿ ಪೇಳ್ವುದುತ್ತರವಾಕ್ಯಂ :

—-

೮. ತಜ್ಞರಿಂದ (ಜ್ಞಾನದಾನವು) ಸಂಪ್ರದಾಯವಿರುವದಾದರೆ ನಿರಂತರ ಅಭ್ಯಾಸವು ಕೆಲಸಗಳಲ್ಲಿ ಕುಶಲತೆಯನ್ನುಂಟುಮಾಡುವದು.

೯. ಅಧರ್ಮ, ಅನುಚಿತಾಚಾರ, ತನಗೆ ಕೇಡುಂಟಾಗುವ ಸಂಭವ ಇವುಗಳಿಲ್ಲದಿದ್ದಲ್ಲಿ ಗುರುಗಳ ಆಜ್ಞೆಯನ್ನು ಮೀರಕೂಡದು.

೧೦. ಶಿಷ್ಯನು ಪ್ರತಿಕೂಲನಿರದಿದ್ದರೆ (ಅವನಿಗೆ) ಯೋಗ್ಯವಾದುದು ಆವುದು, ಅಯೋಗ್ಯವಾದುದು ಆವುದು, ಎಂಬುದು ಗುರುವಿಗೆ ತಿಳಿಯುತ್ತದೆ.

೧೧. ಗುರುಗಳು ಕೋಪಿಸಿಕೊಂಡಲ್ಲಿ ಪ್ರತ್ಯುತ್ತರ ಕೊಡದಿರುವದು, ಅವರು ಹೇಳಿದ್ದನ್ನು ಒಪ್ಪುವುದು, ಅವರ ಕೋಪ ನಿವಾರಣೆಗೆ ಉಪಾಯಗಳು.

—-

ಶತ್ರೂಣಾಮಭಿಮುಖಃ ಪುರುಷಃ ಶ್ಲಾಘ್ಯೋನ ಪುನರ್ಗುರೂಣಾಂ || ೧೨ || ೪೫೬ ||

ಅರ್ಥ : ಶತ್ರೂಣಾಂ = ಪಗೆವರ್ಗೆ, ಅಭಿಮುಖಃ = ಇದಿರಪ್ಪ, ಪುರುಷಃ = ಪುರುಷಂ, ಶ್ಲಾಘ್ಯಃ = ಮನ್ನಿಸಲ್ಪಡುವಂ, ಗುರೂಣಾಂ = ಗುರುಗಳ್ಗೆ, ಪುನಃ = ಮತ್ತೆ ಅಭಿಮುಖನಪ್ಪ ಪುರುಷಂ, ನ = ಶ್ಲಾಘ್ಯನಲ್ಲಂ ||

ಆರಾಧ್ಯಂ ನ ಪ್ರಕೋಪಯೇತ್ ಯದ್ಯಸೌ ವಾಶ್ರಿತೇಷು ಕಲ್ಯಾಣಾಶಂಸೀ || ೧೩ || ೪೫೭ ||

ಅರ್ಥ : ಆರಾಧ್ಯಂ = ಆರಾಧ್ಯನಂ, ನ ಪ್ರಕೋಪಯೇತ್ = ಮುಳಿಸದಿರ್ಕೆ, ಅಸೌ = ಆತಂ, ಆಶ್ರಿತೇಷು = ಪೊರ್ದಿದರೊಳ್, ಕಲ್ಯಾಣಾಶಂಸೀ ಯದಿ = ಒಳ್ಪಂ ಬಯಸುವನಪ್ಪೊಡೆ || ಇಂತಪ್ಪ ವಚನಮನತಿಕ್ರಮಿಸಲ್ವೇಡೆಂಬುದುತ್ತರವಾಕ್ಯಂ :

ಬಹುಭಿರುಕ್ತಂ ನಾತಿಕ್ರಮಿತವ್ಯಂ, ಯದಿ ನ ಐಹಿಕಾಮುತ್ರಿಕ ಫಲವಿಲೋಪಃ || ೧೪ || ೪೫೮ ||

ಅರ್ಥ : ಬಹುಭಿಃ = ಪಲಂಬಱಿಂ ಉಕ್ತಂ ಪೇಳಲ್ಪಟ್ಟುದಂ, ನಾತಿಕ್ರಮಿತವ್ಯಂ = ಮೀಱಲ್ಪಡದು, ಐಹಿಕಫಲ = ಈ ಭವದ ಫಲಮುಂ, ಆಮುತ್ರಿಕಫಲ = ಮಱುಭವದ ಫಲಮುಮೆಂದಿವಱ | ವಿಲೋಪಃ = ಕೇಡು ಯದಿ, ನ = ಇಲ್ಲಕ್ಕುಮಪ್ಪೊಡೆ || ಉಭಯಭಯಮಂ ಕಿಡಿಸದ ವಚನಮಂ ಕೈಕೊಳ್ವುದೆಂಬುದು ತಾತ್ಪರ್ಯಂ || ಗುರುಗಳನಿಂತು ಬೆಸಗೊಳ್ಪುದೆಂಬುದುತ್ತರವಾಕ್ಯಂ :

—-

೧೨. ಶತ್ರುಗಳನ್ನು ಎದುರಿಸಿ ನಿಂತವನು ಶ್ಲಾಘ್ಯನು, ಆದರೆ ಗುರುಗಳನ್ನು ಎದುರಿಸಿ ನಿಂತವನು ಶ್ಲಾಘ್ಯನಲ್ಲ.

೧೩. ಆಶ್ರಯಿಸಿದವರಿಗೆ ಒಳ್ಳೆಯದನ್ನು ಕೋರುವ ಪೂಜನೀಯನಿಗೆ ಕೋಪ ಬರುವಂತೆ ಮಾಡಬಾರದು.

೧೪. ಐಹಿಕ ಪಾರಲೌಕಿಕ ಫಲಗಳಿಗೆ ಕೇಡುಂಟಾಗದಿದ್ದಲ್ಲಿ ಬಹುಜನಗಳ ಮಾತನ್ನು ಮೀರಬಾರದು.

—-

ಸಂದೇಹಾನೋ[5] ಗುರುಮಕೋಪಯನ್ನಾಪೃಚ್ಛೇತ್ || ೧೫ || ೪೫೯ ||

ಅರ್ಥ : ಸಂದೇಹಾನಃ = ಸಂಶಯಂ ಬಡುತ್ತಿರ್ದಂ, ಗುರುಂ = ಗುರುವಂ, ಅಕೋಪಯನ್ = ಮುಳಿಸದೆ (ಕೋಪಹುಟ್ಟದ ಹಾಂಗೆ) ಆಪೃಚ್ಛೇತ್ = ಬೆಸಗೊಳ್ಗೆ || ಗುರುಗಳ ಮುಂದಿಂತಿರಲ್ಪೇಳ್ಕುಮೆಂಬದುತ್ತರವಾಕ್ಯಂ :

ಗುರೂಣಾಂ ಪುರತೋ ನ ಯಥೇಷ್ಟಮಾಸೀತವ್ಯಂ || ೧೬ || ೪೬೦ ||

ಗುರೂಣಾಂ ಪುರತೋ ನ ಯಥೇಷ್ಟಂ = ತನ್ನಿಚ್ಛೆಯಿಂ, ನಾಸೀತವ್ಯಂ = ಇರಲ್ಪಡದು || ವಿನಯದಿಂ ನಡೆವುದೆಂಬುದು ತಾತ್ಪರ್ಯಂ || ವಿದ್ಯೆಯಂ ಕಲ್ಪನಿಂತು ಮಾಳ್ಕೆಂಬುದುತ್ತರವಾಕ್ಯಂ :

ನಾನಭಿವಾದ್ಯೋಪಾಧ್ಯಾಯಾದ್ ವಿದ್ಯಾಮಾದಧೀತ[6]|| ೧೭ || ೪೬೧ ||

ಅರ್ಥ : ಅನಭಿವ್ಯಾದ್ಯ = ಪೊಡವಡದೆ, ಉಪಾಧ್ಯಾಯತ್ = ಉಪಾಧ್ಯಾಯನತ್ತಣಿಂ, ವಿದ್ಯಾಂ = ವಿದ್ಯೆಯಂ, ನಾದಧೀತ = ಕೈಕೊಳದಿರ್ಕೆ ||

ಯದ್ಯಸ್ತಿ ಜಾತಿವಯೋಭ್ಯಾಮಾಧಿಕ್ಯಂ ಸಮಾನತ್ವಂ ವಾ[7]|| ೧೮ || ೪೬೨ ||

ಅರ್ಥ : ಜಾತಿ = ಕುಲಮುಂ, ವಯೋಭ್ಯಾಂ = ಪ್ರಾಯಮುಮೆಂಬಿವಱ, ಆಧಿಕ್ಯಂ = ಅಗ್ಗಳಿಕೆ, ಸಮಾನತ್ವಂ ವಾ = ಸಮಾನಮಪ್ಪ ಸ್ವರೂಪಮಂ ಮೇಣ್, ಅಸ್ತಿ ಯದಿ = ಉಂಟಕ್ಕುಮಪ್ಪೊಡೆ || ಮನ್ನಿಸೆ ವಿದ್ಯೆಯಂ ಕಲ್ಪುದೆಂಬುದು ತಾತ್ಪರ್ಯಂ || ಓದುವವಸರದೊಳಿಂ ತಪ್ಪುವೇಡೆಂಬುದುತ್ತರವಾಕ್ಯಂ :

ಅಧ್ಯಯನಕಾಲೇ ವ್ಯಾಸಂಗಂ ಪಾರಿಪ್ಲವಮನ್ಯಮನಸ್ಯತಾಂ ಚ ನ ಭಜೇತ್ || ೧೯ || ೪೬೩ ||

ಅರ್ಥ : ಅಧ್ಯಯನಕಾಲೇ = ಓದುವವಸರದೊಳ್, ವ್ಯಾಸಂಗಂ = ವ್ಯಾಪಾರಮುಂ (ಮತ್ತೊಂದು ಪ್ರಸಂಗವನು) ಪಾರಿಪ್ಲವಂ = ಮನಂಕದಡುವುದಂ (ಚಪಲತ್ವಮುಂ) ಅನ್ಯಮನಸ್ಕತಾಂ ಚ = ಮತ್ತೊಂದುಂ ನೆನೆವುದುಮಂ, ನ ಭಜೇಕ್ = ಮಾಡದಿರ್ಕೆ || ಅಧ್ಯಯನದಲ್ಲಿ ಮನಮಂ ನಿಲಿಸುವುದೆಂಬುದು ತಾತ್ಪರ್ಯಂ || ಒಡನೋದುವರೊಳಿಂತಪ್ಪನಾಗಲಾಗದೆಂಬುದುತ್ರರವಾಕ್ಯಂ :

—-

೧೫. ಸಂದೇಹವುಂಟಾದಲ್ಲಿ ಗುರುವಿಗೆ ಕೋಪ ಬರದಂತೆ ಪ್ರಶ್ನೆಯನ್ನು ಕೇಳಬೇಕು.

೧೬. ಗುರುಗಳ ಎದುರಿಗೆ ಇಷ್ಟ ಬಂದಂತೆ ಕುಳಿತುಕೊಳ್ಳಕೂಡದು.

೧೭-೧೮. ಜಾತಿ, ವಯಸ್ಸುಗಳಲ್ಲಿ ಅಧಿಕ್ಯ ಅಥವಾ ಸಮಾನತ್ವವಿದ್ದರೂ ನಮಸ್ಕರಿಸದೆ ಉಪಾಧ್ಯಾಯನಿಂದ ವಿದ್ಯೆಯನ್ನು ಕಲಿಯಬಾರದು.

೧೯. ಅಧ್ಯಯನ ಕಾಲದಲ್ಲಿ ಮತ್ತೇನನ್ನಾದರೂ ಮಾಡುವದು, ಮನಸ್ಸಿನ ಚಂಚಲತೆಯು, ಅನ್ಯಮನಸ್ಕತೆಯು ಇರಕೂಡದು.

—-

ಸಹಾಧ್ಯಾಯಿಷು ಬುದ್ಧ್ಯತಿಯೇ ನಾಭ್ಯಸೂಯೇತ[8]|| ೨೦ || ೪೬೪ ||

ಅರ್ಥ : ಸಹಾಧ್ಯಾಇಷು = ಒಡನೋದುವರೊಳ್, ಬುದ್ಧ್ಯತಿಶಯೇ = ಬುದ್ಧಿ ಪಿರಿದಾಗುತ್ತಿರಲು, ನಾಭ್ಯಸೂಯೇತ = ಪುರುಡಿಸದಿರ್ಕ್ಕೆ || ಮನಮೊಲದವರೊಳ್ ವಿಚಾರಿಸುವುದೆಂಬುದು ತಾತ್ಪರ್ಯಂ || ಶಿಷ್ಯಂಗೆ ಪ್ರಜ್ಞಾತಿಶಯಮುಳ್ಳೊಡಮಿಂತು ನೆಗಳಲಾಗದೆಂಬುದುತ್ತರವಾಕ್ಯಂ :

ಪ್ರಜ್ಞಾತಿಶಯಾನೋ ನ ಗುರುಮವಾಹ್ಲಾದಯೇತ್[9]|| ೨೧ || ೪೬೫ ||

ಅರ್ಥ : ಪ್ರಜ್ಞಯಾ = ಬುದ್ಧಯಿಂ, ಅತಿಶಯಾನಃ ಮಿಗುತ್ತಿರ್ದಂ, ಗುರುಂ = ಗುರುವಂ, ನಾವಾಹ್ಲಾದಯೇತ್ = ಅವಮನ್ನಿಸದಿರ್ಕೆ || ವಿನಯದಿಂದವರ ಬಲ್ಪುದಂ ಕಲ್ಪುದೆಂಬದು ತಾತ್ಪರ್ಯಂ || ಈಯರ್ಥಮಂ ಪೇಳ್ವುದುತ್ತರವಾಕ್ಯಂ :

ಸ ಕಿಮಭಿಜಾತೋ ಯೋ ಮಾತರಿ ಪುರುಷಃ ಪಿತರಿ ಶೂರೋ ವಾ || ೨೨ || ೪೬೬ ||

ಅರ್ಥ : ಸಃ = ಆತಂ, ಕಿಮಭಿಜಾತಃ = ಏನೆಂಬ ಕುಲಜಂ, ಯಃ = ಅವನೋರ್ವಂ, ಮಾತರಿ = ತಾಯೊಳ್, ಪರುಷಃ = ಪರುಷಂ, ಪಿತರಿ = ತಂದೆಯೊಳ್, ಶೂರೋ ವಾ = ಕಲಿಯು ಮೇಣ್ || ಒಡಂಬಡಿಸದೆ ಇಂತಪ್ಪವಂ ಮಾಡಲಾದೆಂಬುದುತ್ತರವಾಕ್ಯಂ :

ಅನನುಜ್ಞಾತೋ[10]sನಾಪೃಚ್ಛ್ಯ ನ ಕ್ಚಚಿತ್ ವ್ರಜೇತ್ || ೨೩ || ೪೬೭ ||

ಅರ್ಥ : ಅನನುಜ್ಞಾತಃ = ಇಷ್ಟರಿಂದೊಂಡಬಡಲ್ಪಡದಂ, ಅನಾಪೃಚ್ಛ್ಯ = ಬೆಸಗೊಳದೆ, ಕ್ಚಚಿತ್ = ಎಲ್ಲಿಗಂ, ನ ವ್ರಜೇತ್ = ಹೋಗದಿರ್ಕೆ || ಇಷ್ಟರೊಡಂಬಡೆ ಪೋಪುದೆಂಬುದು ತಾತ್ಪರ್ಯಂ || ಓರ್ವನಿಂತಪ್ಪುದಂ ಮಾಡಲಾಗದೆಂಬುದುತ್ತರವಾಕ್ಯಂ :

—-

೨೦. ಸಹಾಧ್ಯಾಯಿಗಳಲ್ಲಿಯ ಹೆಚ್ಚು ಬುದ್ಧಿವಂತಿಕೆಗೆ ಅಸೂಯೆ ಪಡಬಾರದು.

೨೧. ಹೆಚ್ಚು, ಬುದ್ಧಿವಂತನಾದ ಶಿಷ್ಯನು ಗುರುವನ್ನು ಅವಮಾನಿಸಕೂಡದು.

೨೨. ತಾಯಿಯಲ್ಲಿ ಒರಟಾಗಿಯೂ ತಂದೆಯಲ್ಲಿ ಶೂರನಂತೆಯೂ ವರ್ತಿಸುವವನು ಉತ್ತಮ ಕುಲಜನೆ?

೨೩. (ಗುರುಗಳನ್ನು) ಕೇಳದೆ (ಅವರ) ಆಜ್ಞೆಯನ್ನು ಪಡೆಯದೆ ಎಲ್ಲಿಗೂ ಹೋಗಕೂಡದು.

—-

ಮಾರ್ಗಮಚಲಂ ಜಲಾಶಯಂ ಚ ನೈಕೋsವಗಾಹೇತ || ೨೪ || ೪೬೮ ||

ಅರ್ಥ : ಅಚಲಂ = ನಡೆಯದ (ಪರ್ವತವನು) ಮಾರ್ಗಂ = ಬಟ್ಟೆಯನುಮಂ, ಜಲಾಶಯಂ ಚ = ಕೆಱೆ ಮೊದಲಾಗೊಡೆಯುವುಮಂ, ಏಕಃ = ಒರ್ವಂ, ನಾವಗಾಹೇತ = ಪುಗದಿರ್ಕೆ || ಓರ್ವಂ ಪೊಗೆಪುಗೆ ಕಿಡುಗುಮೆಂಬುದು ತಾತ್ಪರ್ಯಂ || ಗುರುವನಿಂತು ಕಾಣ್ಗುಮೆಂಬುದುತ್ತರವಾಕ್ಯಂ :

ಪಿತರಮಿವ ಗುರುಮುಪಚರೇತ್ || ೨೫ || ೪೬೯ ||

ಅರ್ಥ : ಪಿತರಮಿವ = ತಂದೆಯನೆಂತಂತೆ, ಗುರುಂ = ಗುರುವಂ, ಉಪಚರೇತ್ = ಪೂರ್ದಿ ನೆಗಳ್ಗೆ || ಗುರುವಿನ ಸ್ತ್ರೀಯನಿಂತು ಕಾಣ್ಗೆಂಬುದುತ್ತರವಾಕ್ಯಂ :

ಗುರುಪತ್ನೀಂ ಜನನೀಮಿವ ಪಶ್ಯೇತ್ || ೨೬ || ೪೭೦ ||

ಅರ್ಥ : ಗುರುಪತ್ನೀಂ = ಗುರುವಿನ ಸ್ತ್ರೀಯಂ, ಜನನೀಮಿವ = ತಾಯನೆಂತಂತೆ, ಪಶ್ಯೇತ್ = ಕಾಣ್ಗೆ || ಗುರುಪುತ್ರನನಿಂತು ಕಾಣ್ಗೆಂಬುದುತ್ತರವಾಕ್ಯಂ :

ಅರ್ಥ : ಗುರುಪತ್ನೀಂ = ಗುರುವಿನ ಸ್ತ್ರೀಯಂ, ಜನನೀಮಿವ = ತಾಯನೆಂತಂತೆ, ಪಶ್ಯೇತ್ = ಕಾಣ್ಗೆ || ಗುರುಪುತ್ರನನಿಂತು ಕಾಣ್ಗೆಂಬುದುತ್ತರವಾಕ್ಯಂ :

ಗುರುವತ್ ಗುರುಪುತ್ರಂ ಪಶ್ಯೇತ್ || ೨೭ || ೪೭೧ ||

ಅರ್ಥ : ಗುರುವತ್ = ಗುರುವಿನಂತೆ, ಗುರುಪುತ್ರಂ = ಗುರುವಿನ ಮಗನಂ, ಪಶ್ಯೇತ್ = ಕಾಣ್ಗೆ || ಸಧರ್ಮರೊಳಿಂತು ನೆಗಳ್ಪುದೆಂಬುದುತ್ತರವಾಕ್ಯಂ :

ಸಬ್ರಹ್ಮಚಾರಿಣಿ ಬಾಂಧವ ಇವ ಸ್ನಿಹ್ಯೇತ್ || ೨೮ || ೪೭೨ ||

ಅರ್ಥ : ಸಬ್ರಹ್ಮಚಾರಿಣಿ = ಸಮಾನನಪ್ಪ ಆಚಾರಮನುಳ್ಳನೊಳ್ (ಸಹಾಧ್ಯಾಯಿಗಳೊಳ್), ಬಾಂಧವ ಇವ = ನಂಟರೊಳೆಂತಂತೆ | ಸ್ನಿಹ್ಯೇತ್ = ನೇಹಂ ಮಾಳ್ಕೆ || ಇಂತಿನಿಬರೊಳುದಾಸೀನವೃತ್ತಿಯಾಗಲಾಗ ದೆಂಬುದುತ್ತರವಾಕ್ಯಂ :

—-

೨೪. ಒಂಟಿಯಾಗಿ ಬೆಟ್ಟವನ್ನು ಹತ್ತಬಾರದು. (ಧೀರ್ಘ) ಪ್ರಯಾಣ ಮಾಡಬಾರದು. ಕೆರೆ ಮೊದಲಾದ ಜಲಾಶಯಗಳನ್ನು ಪ್ರವೇಶಿಸಬಾರದು.

೨೫. ಗುರುವನ್ನು ತಂದೆಯಂತೆ ಉಪಚರಿಸಬೇಕು.

೨೬. ಗುರುಪತ್ನಿಯನ್ನು ತಾಯಿಯಂತೆ ಕಾಣಬೇಕು.

೨೭. ಗುರುಪುತ್ರನನ್ನು ಗುರುವಿನಂತೆಯೇ ಕಾಣಬೇಕು.

೨೮. ಸಹಾಧ್ಯಾಯಿಗಳಲ್ಲಿ ನೆಂಟರಂತೆ ಸ್ನೇಹದಿಂದಿರಬೇಕು.

—-

 

[1]ಚೌ. ಚ ಪ್ರವೀಣಮಥರ್ವಜ್ಞಮತಿವಿನೀತಮಭಿನೀತಂ.

[2]ಅರಸನು ಎಲ್ಲ ಲಿಪಿಗಳನ್ನು ಬಲ್ಲವನಾಗಿರಬೇಕೆಂಬುದು ಗಮನಾರ್ಹವಾಗಿದೆ.

[3]ವಾಹನಶಾಸ್ತ್ರ = ಅಶ್ವ, ಹಸ್ತಿ, ರಥ ಇತ್ಯಾದಿಗಳ ಪೂರ್ಣ ಪರಿಚಯ.

[4]ಪ್ರತ್ಯರ್ಥೀವಾದೀ ವಾ ಸ್ಯಾತ್.

[5]ಮೈ. ಚೌ. ಸಂದಿಹಾನೋ

[6]ಮೈ. ಇದು ಮತ್ತು ಮುಂದಿನ ವಾಕ್ಯವು ಕೂಡಿ ಒಂದೇ ಆಗಿವೆ.

[7]ಚೌ. ಈ ವಾಕ್ಯವಿಲ್ಲ.

[8]ಚೌ. ನಾಭಿಭೂಯೇತ.

[9]ಮೈ., ಚೌ. ನ ಗುರುಮವಜ್ಞಾಯೇತ್.

[10]ಮೈ., ಚೌ. ಅನನುಜ್ಞಾತೋ ನ ಕ್ಚಚಿತ್.