ಬ್ರಹ್ಮಚರ್ಯಮಾಷೋಡಶವರ್ಷಾತ್ ತತೋ ಗೋದಾನಪೂರ್ವಕಂ ದಾರಕರ್ಮ ಚಾಸ್ಯ || ೨೯ || ೪೭೩ ||

ಅರ್ಥ : ಬ್ರಹ್ಮಚರ್ಯಂ = ಬ್ರಹ್ಮಚರ್ಯಮಕ್ಕುಂ, ಆಷೋಡಶವರ್ಷಾತ್ = ಪದಿನಾಱಂ ಬರಿಸಂಬರೆಗಂ | ತತಃ = ಆ ಬಳಿಕ್ಕಂ, ಗೋದಾನಪೂರ್ವಕಂ = ಶರೀರದೊಳು ಮಱೆಯೆಡೆಯ ಶುದ್ಧಿಯಂ ಮಾಡಿ, ದಾಕರ್ಮಂ ಚ = ಮದುವೆ ನಿಲ್ವುದು, ಅಸ್ಯ = ಈತಂಗೆ || ಪದಿನಾಱುವರ್ಷದಿಂ ಮೇಲೆ ವಿವಾಹಮಂ ಮಾಳ್ಪುದೆಂಬುದು ತಾತ್ಪರ್ಯಂ || ಅಧ್ಯಯನಮಂ ಮಾಡಿದಿಂ ಬಳಿಕ್ಕೆ ಮಾಳ್ಪ ಪ್ರಯೋಜನಂ ಮಾಳ್ಪುದುತ್ತರವಾಕ್ಯಂ[1] :

ಸಮವಿದ್ಯೈಃ ಸಹಾಧೀತಂ ಸರ್ವದಾಭ್ಯಸೇತ್ || ೩೦ || ೪೭೪ ||

ಅರ್ಥ : ಆಧೀತಂ = ಓದಿದುದಂ | ಸಮವಿದ್ಯೈಃ ಸಹ = ಸಮಾನವಿದ್ಯೆಯನುಳ್ಳರೊಡನೆ, ಸರ್ವದಾ = ಎಲ್ಲಾ ಕಾಲಂ | ಅಭ್ಯಸೇತ್ = ಅಭ್ಯಾಸಂ ಗೆಯ್ಗೆ || ವಿದ್ಯಾಭ್ಯಾಸಮಂ ಮಱೆಯಲಾಗದೆಂಬುದು ತಾತ್ಪರ್ಯಂ || ಪೋಪರ್ಗಿಂತಪ್ಪುದಂ ನುಡಿಯಲಾಗದೆಂಬುದುತ್ತರವಾಕ್ಯಂ :

ಗೃಹದೌಸ್ಥಿತ್ಯಮಾಗಂತುಕಾನಾಂ ಪುರತೋ ನ ಪ್ರಕಾಶಯೇತ್ || ೩೧ || ೪೭೫ ||

ಅರ್ಥ : ಆಗಂತುಕಾನಾಂ = ಬಿದ್ದಿನರ, ಪುರತಃ = ಮುಂದೆ, ಗೃಹದೌಸ್ಥಿತ್ಯಂ = ಮನೆಯ ಬಡತನಮಂ, ನ ಪ್ರಕಾಶಯೇತ್ = ಪ್ರಕಟಿಸದಿರ್ಕ್ಕೆ || ಅದಂ ಪ್ರಕಟಿಸಲಭಿಮಾನಹಾನಿಯುಕ್ಕುಮೆಂಬುದು ತಾತ್ಪರ್ಯಂ || ಪರಗೃಹದೊಳ್ ಬೀಯಮಂ ಮಾಳ್ಪನ ನೆಗಳ್ತೆಯಂ ಪೇಳ್ವುದುತ್ತರವಾಕ್ಯಂ :

ಪರಗೃಹೇಷು ಸರ್ವೇSಪಿ ವಿಕ್ರಮಾದಿತ್ಯಾಯತೇ[2]|| ೩೨ || ೪೭೬ ||

ಅರ್ಥ : ಪರಗೃಹೇಷು = ಪೆಱರ ಮನೆಗಳೊಳು, ಸರ್ವೇSಪಿ = ಆವನುಂ, ವಿಕ್ರಮಾದಿತ್ಯಯತೇ = ವಿಕ್ರಮಾದಿತ್ಯನಂತೆ ನೆಗಳ್ಗುಂ || ಪೆಱಮನೆಯೊಳಾವನುಂ ಲೋಭಮಿಲ್ಲದೆ ಬೀಯಂ ಗೈಯ್ವನೆಂಬುದು ತಾತ್ಪರ್ಯಂ || ಇಂತಪ್ಪಂ ಪಿಱಿಯನೆಂಬುದುತ್ತರವಾಕ್ಯಂ :

—-

೨೯. ಹದಿನಾರು ವರ್ಷಗಳವರೆಗೆ ಬ್ರಹ್ಮಚರ್ಯ ವೃತವನ್ನಾಚರಿಸಿ ಅನಂತರ ಗೋದಾನಪೂರ್ವಕವಾಗಿ ವಿವಾಹಿತನಾಗಬೇಕು.

೩೦. ಓದಿಕೊಂಡದ್ದನ್ನು ಸಹಾಧ್ಯಾಯಿಗಳೊಂದಿಗೆ ಎಲ್ಲ ಕಾಲವೂ ಅಭ್ಯಸಿಸುತ್ತಿರಬೇಕು.

೩೧. ಮನೆಯ ದುಃಸ್ಥಿತಿಯನ್ನು ಬಂದವರ ಮುಂದೆ ಪ್ರಕಟಿಸಬಾರದು.

೩೨. ಇತರರ ಮನೆಗಳಲ್ಲಿ ಪ್ರತಿಯೊಬ್ಬನು ವಿಕ್ರಮಾದಿತ್ಯನಂತೆ ವರ್ತಿಸುತ್ತಾನೆ.

—-

ಸ ಖಲು ಮಹಾನ್ಯಃ ಸ್ವಕಾರ್ಯೇಷ್ಟಿವ ಪರಕಾರ್ಯೇಷೂತ್ಸಹತೇ || ೩೩ || ೪೭೭ ||

ಅರ್ಥ : ಯಃ = ಆವನೋರ್ವಂ, ಸ್ವಕಾರ್ಯೇಷ್ವಿವ = ತನ್ನ ಕಾರ್ಯದೊಳೆಂತಂತೆ, ಪರಕಾರ್ಯೇಷು = ಪೆಱರ ಕಾರ್ಯಂಗಳೊಳ್, ಉತ್ಸಹತೇ = ಉತ್ಸಾಹಂ ಮಾಳ್ಪಂ, ಸ ಖಲು = ಆತನೇ, ಮಹಾನ್ ಪಿರಿಯಂ || ಪರಪ್ರಯೋಜನಮಂ ಮಾಳ್ಪರಂ ಪಡೆಯಲ್ಪಾರದೆಂಬುದು[3] ತಾತ್ಪರ್ಯಂ || ಈಯರ್ಥಮಂ ವಿಶೇಷಿಸಿ ಪೇಳ್ವುದುತ್ತರವಾಕ್ಯಂ :

ಪರಕಾರ್ಯೇಷು ಕೋ ನಾಮ ನ ಶೀತಲಃ || ೩೪ || ೪೭೮ ||

ಅರ್ಥ : ಪರಕಾರ್ಯೇಷು = ಪೆಱರ ಕಾರ್ಯಂಗಳೊಳ್, ಕೋ ನಾಮ = ಆವನುಂ, ನ ಶೀತಲಃ = ತಣ್ಣಿಗನಲ್ಲದೊಂ (ಆಲಸ್ಯನು) ||

ರಾಜಾಸನ್ನಃ[4] ಕೋ ನಾಮ ಸಾಧುಃ || ೩೫ || ೪೭೯ ||

ಅರ್ಥ : ರಾಜಾಸನ್ನಃ = ಅರಸನ ಸಮೀಪದಲ್ಲಿದ್ದವನು, ಕಃ = ಆವನು, ನಾಮ = ನಿಶ್ಚಯದಿಂದ, ಸಾಧುಃ = ಒಳ್ಳಿದನು || ಅರಸು ಒಳ್ಳಿದನೆಳ್ಳಿದನೆಂಬುದು ತಾತ್ಪರ್ಯಂ || ಅರ್ಥಮಂ ಬೇಳ್ಪಂಗೆ ವಿನಯಂದೋಱದೆಂಬುದುತ್ತರವಾಕ್ಯಂ :

ಅರ್ಥಪರೇಷ್ವನುನಯಃ ಕೇವಲಂ ದೈನ್ಯಾಯ || ೩೬ || ೪೮೦ ||

ಅರ್ಥ : ಅರ್ಥಪರೇಷು = ಅರ್ಥಮಂ ಬೇಳ್ವರೊಳ್, ಅನುನಯಃ = ವಿನಯಂ, ಕೇವಲಂ = ಬಱೆದೆ, ದೈನ್ಯಾಯ = ದೈನ್ಯಕ್ಕೆ ಕಾರಣಂ || ಅರ್ಥಾರ್ಥಿಗೆ ವಿನಯಂ ಗೈಯಬೇಡೆಂಬುದು ತಾತ್ಪರ್ಯಂ || ಈಯರ್ಥಮನೆ ವಿಷೇಶಿಸಿ ಪೇಳ್ವುದುತ್ತರವಾಕ್ಯಂ :

—-

೩೩. ಯಾರು ತನ್ನ ಕಾರ್ಯಗಳಲ್ಲಿಯಂತೆ ಇತರರ ಕಾರ್ಯಗಳಲ್ಲಿಯೂ ಹಾಗೇ ಉತ್ಸಾಹಿತನಾಗುತ್ತಾನೋ ಅವನೇ ಮಹಾಪುರುಷ.

೩೪. ಇತರರ ಕಾರ್ಯಗಳಲ್ಲಿ ಯಾರಿಗೆ ತಾನೇ ಉತ್ಸಾಹವಿರುತ್ತದೆ?

೩೫. ರಾಜನ ಸಮೀಪದಲ್ಲಿರುವವನು ಯಾರು ತಾನೆ ಸಾಧುವಾಗಿದ್ದಾನು?

೩೬. ಬೇಡುವವರಲ್ಲಿ ವಿನಯದಿಂದ ವರ್ತಿಸುವದು ಕೇವಲ ದೈನ್ಯವೇ.

—-

ಕೋ ನಾಮಾರ್ಥಾರ್ಥೀ ಪ್ರಣಾಮೇನ ತುಷ್ಯತಿ || ೩೭ || ೪೮೧ ||

ಅರ್ಥ : ಕೋ ನಾಮ = ಆವೊಂ, ಅರ್ಥಾರ್ಥೀ = ಅರ್ಥಮಂಮಂ ಬೇಳ್ವಂ, ಪ್ರಣಾಮೇನ = ಪೊಡವಡಿಕೆಯಿಂ, ತುಷ್ಯತಿ = ಸಂತಸಂ ಬಡುಗುಂ || ಪರಿಗ್ರಹಮಂ ಪೆರ್ಚಿಸುವನಿಂತು ಮಾಳ್ಕೆಂಬುದುತ್ತರವಾಕ್ಯಂ :

ಆಶ್ರಿತೇಷು ಕಾರ್ಯತೋ ವಿಶೇಷಕರಣೇSಪಿ ಪ್ರಿಯದರ್ಶನಾಲಾಪಾಭ್ಯಾಂ
ಸರ್ವತ್ರ ಸಮವೃತ್ತಿಸ್ತಂತ್ರಂ ವರ್ಧಯತ್ಯನುರಂಜಯತಿ
[5]|| ೩೮ || ೪೮೨ ||

ಅರ್ಥ : ಆಶ್ರಿತೇಷು = ಪೊರ್ದಿದರೊಳ್, ಕಾರ್ಯತಃ = ಕಾರ್ಯವಶದಿಂ, ವಿಶೇಷಕರಣೇsಪಿ = ಅಧಿಕಂ ಮಾಳ್ಪುದಂ (ವಿಶೇಷಂ ಮಾಡಿದರೂ) ಸರ್ವತ್ರ = ಎಲ್ಲರೊಳ್, ಪ್ರಿಯದರ್ಶನ = ಕೂರ್ಮೆಯಿಂ ನೋಳ್ಪುದುಂ, ಆಲಾಪಾಭ್ಯಾಂ = ಪ್ರಿಯವಚನಮುಮೆಂಬಿಱಿಂ, ಸಮವೃತ್ತಿಃ = ಸಮಾನಮಪ್ಪ ನೆಗಳ್ತೆಯನುಳ್ಳಂ, ತಂತ್ರಂ = ಪರಿಗ್ರಹಮುಂ (ಪರಿವಾರವನು), ವರ್ಧಯತಿ = ಪೆರ್ಚಿಸುಗುಂ, ಅನುರಂಜಯತಿ ಚ = ಅವರ ಮನಕ್ಕೆ ಅನುರಾಗಮಂ ಪುಟ್ಟಿಸುಗುಂ || ಉಚಿತಮಪ್ಪಲ್ಲಿ ಕುಡದಂಗಂ ಪ್ರಿಯವಚನಮ ನುಡಿಯದಂಗಂ ಪರಿಗ್ರಹಮಂ ಪಡೆಯಲಾಗದೆಂಬುದು ತಾತ್ಪರ್ಯಂ || ಇಂತಪ್ಪನಲ್ಲಿ ಧನಮಂ ಕೊಳಲಾಗದೆಂಬುದುತ್ತರವಾಕ್ಯಂ :

ತನುಧನಾದರ್ಥಗ್ರಹಣಂ ಮೃತಕಮಾರಣಮಿವ || ೩೯ || ೪೮೩ ||

ಅರ್ಥ : ತನುಧನಾತ್ = ಕಿಱಿದರ್ಥಮನುಳ್ಳನತ್ತಣಿಂ | ಅರ್ಥಗ್ರಹಣಂ = ಧನಮಂ ಕೊಳ್ಪುದು, ಮೃತಕಮಾರಣಮಿವ = ಸತ್ತನಂ (ಪೆಣನಂ) ಕೊಲ್ವಂತೆ || ಬಡಮನೊಡಮೆಯಂ ಕೊಳಲಾಗದೆಂಬುದು ತಾತ್ಪರ್ಯಂ || ಇಂತಪ್ಪಂಗೆ ಕಾರ್ಯಮನಱಿಪಲಾಗದೆಂಬುದುತ್ತರವಾಕ್ಯಂ :

ಅಪ್ರತಿವಿಧಾತರಿ ಕಾರ್ಯನಿವೇದನಮರಣ್ಯರುದಿತಮಿವ || ೪೦ || ೪೮೪ ||

ಅರ್ಥ : ಅಪ್ರತಿವಿಧಾತರಿ = ಪ್ರತೀಕಾರವ ಮಾಡದವನಲ್ಲಿ, ಕಾರ್ಯನಿವೇದನಂ = ಕಾರ್ಯವ ಹೇಳುಹವೆಂಬುದು, ಅರಣ್ಯರುದಿತಮಿವ = ಅಡವಿಯಲ್ಲಿ ಆಳುವ ಹಾಂಗೆ ||

—-

೩೭. ಹಣವನ್ನು ಬೇಡುವವನು ಯಾರು ತಾನೆ ಕೇವಲ ಪ್ರಣಾಮದಿಂದ ಸಂತೋಷಿಸುತ್ತಾನೆ?

೩೮. (ಪ್ರಭುವು) ತನ್ನನ್ನು ಆಶ್ರಯಿಸಿದವರಿಗೆ ಕಾರ್ಯತಃ ಸ್ವಲ್ಪ ಹೆಚ್ಚಾಗಿ ಸಹಾಯಮಾಡಿದರೂ ಇತರರಿಗೆ ಕೂಡ ಸ್ನೇಹ ಪೂರ್ವಕವಾಗಿ ದರ್ಶನವನ್ನೀಯುತ್ತ ವಿಶ್ವಾಸಪೂರ್ವಕವಾಗಿ ಮಾತಾಡುತ್ತ. ಎಲ್ಲರ ವಿಷಯದಲ್ಲಿಯೂ ನಿಷ್ಪಕ್ಷಪಾತವಾಗಿ ನಡೆದುಕೊಂಡರೆ ಪರಿಪಾಲನತಂತ್ರವನ್ನು ವೃದ್ಧಿಪಡಿಸುತ್ತಾನೆ. ಪ್ರಜೆಗಳನ್ನೂ ಸಂತೋಷಗೊಳಿಸುತ್ತಾನೆ.

೩೯. ದರಿದ್ರನಿಂದ ಧನವನ್ನು ತೆಗೆದುಕೊಳ್ಳುವದು ಸತ್ತವನನ್ನು ಕೊಲ್ಲುವಂತೆ.

೪೦. ತಕ್ಕ ಪ್ರತಿಕ್ರಿಯೆಯನ್ನು ತೋರದವನಲ್ಲಿ ತನ್ನ ಕಷ್ಟಗಳನ್ನು ಹೇಳಿಕೊಳ್ಳುವದು ಅರಣ್ಯ ರೋದನದಂತೆ.

—-

ದುರಾಗ್ರಹಸ್ಯ ಹಿತೋಪದೇಶೋ ಬಧಿರಸ್ಯಾಗ್ರತೋ ಗಾನಮಿನ || ೪೧ || ೪೮೫ ||

ಅರ್ಥ : ದುರಾಗ್ರಹಸ್ಯ = ದುರಾಗ್ರಹಿಯಪ್ಪಂಗೆ, ಹಿತೋಪದೇಶಃ = ಹಿತಮಂ ಪೇಳ್ವುದು, ಬಧಿರಸ್ಯ = ಕಿವುಡನ, ಅಗ್ರತಃ = ಮುಂದೆ, ಗಾನಮಿವ = ಹಾಡುವಂತೆ || ಮನಮಂ ಮಾಡದಂಗಱಿಪಲ್ ದೈನ್ಯಮೆಯಕ್ಕುಮೆಂಬುದು ತಾತ್ಪರ್ಯಂ || ಇಂತಪ್ಪವಂಗೆ ಬುದ್ಧಿವೇಳವೇಡೆಂಬುದುತ್ತರವಾಕ್ಯಂ :

ಆಕಾರ್ಯಜ್ಞಸ್ಯ ಶಿಕ್ಷಣಮಂಧಸ್ಯ ಪುರತೋ ನರ್ತನಮಿವ || ೪೨ || ೪೮೬ ||

ಅರ್ಥ : ಅಕಾರ್ಯಜ್ಞಸ್ಯ = ಕಾರ್ಯಮನಱಿಯದಂಗೆ, ಶಿಕ್ಷಣಂ = ಶಿಕ್ಷೆ, ಅಂಧಸ್ಯ = ಕುರುಡನ, ಪುರತಃ = ಮುಂದೆ, ನರ್ತನಮಿವ = ಆಡುವಂತೆ || ವಿಚಾರಮಿಲ್ಲದಂಗೆ ಪೇಳವೇಡೆಂಬುದುತ್ತರವಾಕ್ಯಂ :

ಅವಿಚಾರಕಸ್ಯ ಯುಕ್ತಿಕಥನಂ ತುಷಖಂಡನಮಿವ || ೪೩ || ೪೮೭ ||

ಅರ್ಥ : ಅವಿಚಾರಕಸ್ಯ = ವಿಚಾರಮಿಲ್ಲದಂಗೆ, ಯುಕ್ತಿಕಥನಂ = ಯುಕ್ತಿಯಂ ಪೇಳ್ಪುದು, ತುಷಖಂಡನಮಿವ = ಉಯ್ಗುಟ್ಟುವಂತೆ || ಹಿತಮಱಿಯದಂಗೆ ಪೇಳೆ ಕೇಳರೆಂಬುದಿದಱ ತಾತ್ಪರ್ಯಂ || ಇಂತಪ್ಪಂಗೆ ಹಿತಮಂ ಮಾಡೆ ನಿರರ್ಥಕಮೆಂಬುದಂ ದೃಷ್ಟಾಂತದಿಂ ಪೇಳ್ವುದುತ್ತರವಾಕ್ಯಂ :

ನೀಚೇಷೂಪಕೃತಮುದಕೇ ವಿಕೀರ್ಣಮಿವ[6]|| ೪೪ || ೪೮೮ ||

ಅರ್ಥ : ನೀಚೇಷು = ನೀಚರೊಳ್, ಉಪಕೃತಂ = ಉಪಕರಿಸಲ್ಪಟ್ಟುದು, ಉದಕೇ = ಉದಕಂಗಳೊಳ್, ವಿಕೀರ್ಣಮಿವ = ರೇಖೆದೆಗೆದಂತೆ ||

ಅವಿಶೇಷಜ್ಞೇ ಪ್ರಯಾಸಃ ಶುಷ್ಕನದೀತರಣಮಿವ || ೪೫ || ೪೮೯ ||

ಅರ್ಥ : ಅವಿಶೇಷಜ್ಞೇ = ವಿಶೇಷಮನಱಿಯದನೊಳ್, ಪ್ರಯಾಸಃ = ಕ್ಲೇಶಂ, ಶುಷ್ಕನದೀತರಣಮಿವ = ಬಱುದೊಱೆಯನೀಸುವಂತೆ ||

—-

೪೧. ಹಟಮಾರಿಗೆ ಹಿತೋಪದೇಶ ಮಾಡುವದು ಕಿವುಡನ ಎದುರಿಗೆ ಹಾಡಿದಂತೆ.

೪೨. ಕಾರ್ಯಜ್ಞಾನವಿಲ್ಲದವನಿಗೆ ಬೋಧಿಸುವದು ಕುರುಡನ ಎದುರಿಗೆ ಕುಣಿದಂತೆ.

೪೩. ಅವಿಚಾರಿಗೆ ಯುಕ್ತಿಯನ್ನು ಹೇಳುವದು ಹೊಟ್ಟು ಕುಟ್ಟಿದಂತೆ.

೪೪. ನೀಚರಿಗೆ ಉಪಕಾರ ಮಾಡುವದು ನೀರಿನ ಮೇಲೆ ಗೆರೆ ಎಳದಂತೆ.

೪೫. ವಿಶೇಷವನ್ನರಿಯದವನಿಗೆ ತಿಳಿ ಹೇಳುವದು ನೀರಿಲ್ಲದ ಹೊಳೆಯಲ್ಲಿ ಈಜಿದಂತೆ.

—-

ಪರೋಕ್ಷೇ ಕ್ಲಿಷ್ಟಂ[7] ಸುಪ್ತಸಂವಾಹನಮಿವ || ೪೬ || ೪೯೦ ||

ಅರ್ಥ : ಪರೋಕ್ಷೇ = ಪಿಂದೆ, ಕ್ಲಿಷ್ಟಂ = ಆಯಾಸಂ, ಸುಪ್ತಸಂವಾಹನಮಿವ = ಮಱೆದುಪಟ್ಟರ ತೊಡೆಯಂ ತೀವಿದಂತೆ || ಹಿತಮನಱಿಯೆ ಮಾಳ್ಪುದುಮೆಂಬುದೀ ಮೂಱು ವಾಕ್ಯದ ತಾತ್ಪರ್ಯಂ || ಅವಸರಮನಱಿಯದೆ ಅಱಿಪಲ್ವೇಡೆಂಬುದುತ್ತರವಾಕ್ಯಂ :

ಅಕಾಲೇ ವಿಜ್ಞಪ್ತಮೂಷರೇ ಕೃಷ್ಟಮಿವ || ೪೭ || ೪೯೧ ||

ಅರ್ಥ : ಅಕಾಲೇ = ಅಪ್ರಸ್ತಾವದೊಳು, ವಿಜ್ಞಪ್ತಂ = ಬಿನ್ನವಿಸ್ಲಪಡುವುದು, ಊಷರೇ = ಸೌಳ್ ನೆಲದೊಳ್ | ಕೃಷ್ಟಮಿವ = ಉಳ್ವಂತೆ || ಅವಸರಮನಱಿದು ಬಿನ್ನವಿಸುವುದೆಂಬುದು ತಾತ್ಪರ್ಯಂ || ಉಪಕರಿಸಿ ಮೂದಲಿಸಲ್ವೇಡೆಂಬುದುತ್ತರವಾಕ್ಯಂ :

ಉಪಕೃತ್ಯೋದ್ಘಟ್ಟನಂ[8] ವೈರಕರಣಮಿವ || ೪೮ || ೪೯೨ ||

ಅರ್ಥ : ಉಪಕೃತ್ಯ = ಉಪಕರಿಸಿ, ಉದ್ಘಟ್ಟನಂ = ಹಂಗಿಸುವುದು, ವೈರಕರಣಮಿವ = ಪಗೆಮಾಳ್ಪಂತೆ || ಮೂದಲಿಸೆ ಮಾಡಿದುಪಕಾರಂ ಕಿಡುಗುಮೆಂಬುದು ತಾತ್ಪರ್ಯಂ || ಇಂತಪ್ಪನ ಕಾರುಣ್ಯಂ ಬಱಿದೆಯೆಂಬುದಂ ದೃಷ್ಟಾಂತದಿಂ ಪೇಳ್ವುದುತ್ತರವಾಕ್ಯಂ :

ಅಫಲವತಃ ಪ್ರಸಾದಃ ಕಾಸಕುಸುಮಸ್ಯೇವ || ೪೯ || ೪೯೩ ||

ಅರ್ಥ : ಅಫಲವತಃ = ಕುಡದನ, ಪ್ರಸಾದಃ = ಕಾರುಣ್ಯಂ, ಕಾಸಕುಸುಮಸ್ಯ ಇವ = ಕಾಗಬ್ಬಿನ ಹೂವಿನ ಪ್ರಸನ್ನತೆಯೆಂತಂತೆ, ಕಾರುಣ್ಯಂ ಸಫಲವಾಗಲೆವೇಳ್ಕುಮೆಂಬುದು ತಾತ್ಪರ್ಯಂ || ವಿಚಾರಿಸದೆ ಮುಳಿಸೊಸಗೆಯಾಗಲಾಗದೆಂಬುದುತ್ತರವಾಕ್ಯಂ :

—-

೪೬. ಪರೋಕ್ಷದಲ್ಲಿ ಉಪಕಾರ ಮಾಡುವದು ಮಲಗಿದವನ ಮೈ ನೀವಿದಂತೆ.

೪೭. ಅಕಾಲದಲ್ಲಿ ಬೇಡಿಕೆಯನ್ನು ಮುಂದಿಡುವದು ಸವುಳು ಭೂಮಿಯಲ್ಲಿ ಸಾಗುವಳಿಮಾಡಿದಂತೆ.

೪೮. ಉಪಕಾರಮಾಡಿ ಅದನ್ನು ಪ್ರಚಾರ ಪಡಿಸುವದು ಅವನೊಡನೆ ವಿರೋಧವನ್ನು ಕಟ್ಟಿಕೊಂಡಂತೆ.

೪೯. ಕೊಡದವನ ಕಾರುಣ್ಯವು ಕಾಚೀ ಹುಲ್ಲಿನ ಹೂವಿನಂತೆ (ಪ್ರಯೋಜನವಿಲ್ಲದ್ದು).

—-

ಗುಣದೋಷಾವನಿಶ್ಚಿತ್ಯಾನುಗ್ರಹನಿಗ್ರಹವಿಧಾನಂ ಗ್ರಹಾಭಿನಿವೇಶ ಇವ || ೫೦ || ೪೯೪ ||

ಅರ್ಥ : ಗುಣದೋಷೌ = ಗುಣದೋಷಂಗಳಂ, ಅನಿಶ್ಚಿತ್ಯ = ನಿಶ್ಚೈಸದೆ, ಅನುಗ್ರಹ – ನಿಗ್ರಹವಿಧಾನಂ = ಕೋಪ – ಪ್ರಸಾದಮಂ ಮಾಳ್ಪುದೆಂಬುದು, ಗ್ರಹಾಭಿನಿವೇಶ ಇವ = ಗ್ರಹ ಹೊಡದವನಂತೆ[9] || ವಿಚಾರಿಸಿ ಗುಣದೋಷಂಗಳಂ ಮಾಳ್ಪುದೆಂಬುದು ತಾತ್ಪರ್ಯಂ || ಏನುಮಂ ಮಾಡಲಾಱದಂಗೆ ಮುಳಿಸೊಸಗೆವೇಡೆಂಬುದುತ್ತರವಾಕ್ಯಂ :

ಉಪಕಾರಾಪಕಾರಾಸಮರ್ಥಸ್ಯ ತೋಷ-ರೋಷಕರಣಮಾತ್ಮ ವಿಡಂಬನಮಿವ || ೫೧ || ೪೯೫ ||

ಅರ್ಥ : ಉಪಕಾರಾಪಕಾರಾಸಮರ್ಥಸ್ಯ = ಹಿತಮನಹಿತಮಂ ಮಾಡಲಾಱದನ | ತೋಷರೋಷಕರಣಂ = ಮುಳಿಸೊಸಗೆಗಳಂ ಮಾಳ್ಪುದು, ಆತ್ಮವಿಡಂಬನಮಿವ = ತನ್ನಂ ಚುನ್ನವಾಡಿಸುವಂತೆ (ತನ್ನ ತಾನೆ ಮಱುಳಾಡಿದ ಹಾಂಗೆ) || ಶಕ್ತಿಗೆ ತಕ್ಕಂತೆ ಕೋಪ-ಪ್ರಸಾದಂಗಳಂ ಮಾಳ್ಪುದೆಂಬುದು ತಾತ್ಪರ್ಯಂ || ಇಂತಪ್ಪ ಮಾತು ಪಂಗಕ್ಕುಮೆಂಬುದುತ್ತರವಾಕ್ಯಂ :

ಶೂದ್ರಸ್ತ್ರೀವಿದ್ರಾವಣಕಾರಿ ಗಲಗರ್ಜಿತಂ ಗ್ರಾಮ[10]ಶೂರಾಣಾಂ ಏವ ನ ರಣಶೂರಾಣಾಂ[11]|| ೫೨ || ೪೯೬ ||

ಅರ್ಥ : ಶೂದ್ರಸ್ತ್ರೀವಿದ್ರಾವಣಕಾರಿ = ಶೂದ್ರರುಮಂ, ಸ್ತ್ರೀಯರುಮನೋಡಿಸುವ, ಗಲಗರ್ಜಿತಂ = ಕೊರಲಿಂ ಮೇಗಣ ಗರ್ಜನೆ, ಗ್ರಾಮ ಶೂರಾಣಾಂ ಏವ = ಶೂರಾಣಾಂ ಏವ = ಉರ್ಗಲಿಗಳ್ಗೆ ಮಾತ್ರ, ರಣಶೂರಾಣಾಂ = ಸಂಗ್ರಾಮಶೂರರ್ಗ್ಗೆ, ನ = ಇಲ್ಲ || ಕಲಿ ಗಳಪುವನಲ್ಲೆಂಬುದು ತಾತ್ಪರ್ಯಂ || ಇಂತಪ್ಪುದು ವಿಭವಮೆಂಬುದುತ್ತರವಾಕ್ಯಂ :

ಸ ವಿಭವೋ ಮನುಷ್ಯಾಣಾಂ ಯಃ ಪರೋಪಭೋಗ್ಯಃ || ೫೩ || ೪೯೭ ||

ಅರ್ಥ : ಯಃ = ಆವುದೊಂದು, ಪರೋಪಭೋಗ್ಯ = ಪೆಱರ್ಗುಪಭೋಸಿಸಲಪ್ಪುದು, ಸಃ = ಅದು, ಮನುಷ್ಯಾಣಾಂ = ಮನುಷ್ಯರ್ಗೆ, ವಿಭವಃ = ಶ್ರೀ || ಪೆಱರಂ ತಣಿಪದುದು ಸಿರಿಯಲ್ಲೆಂಬುದು ತಾತ್ಪರ್ಯಂ || ಪರೋಪಭೋಗಮಿಲ್ಲದ ಸಿರಿಗೆ ದೂಷಣಮಂ ಪೇಳ್ವುದುತ್ತರವಾಕ್ಯಂ :

—-

೫೦. ಇನ್ನೊಬ್ಬರ ಗುಣದೋಷಗಳನ್ನು ಅರಿಯದೆ ಅವರಿಗೆ ಉಪಕಾರ ಅಥವಾ ಅಪಕಾರ ಮಾಡುವದು ದುಪ್ಪಗ್ರಹ ಹಿಡಿದಂತೆ.

೫೧. ಹಿತವನ್ನಾಗಲಿ ಅಹಿತವನ್ನಾಗಲಿ ಮಾಡಲಾರದವನು ಸಂತೋಷನ್ನಾಗಲಿ ರೋಷವನ್ನಾಗಲಿ ಪ್ರಕಟಿಸುವುದು ತನ್ನನ್ನು ತಾನೇ ಅಪಹಾಸ್ಯಕ್ಕೆ ಗುರಿಮಾಡಿಕೊಂಡಂತೆ.

೫೨. ಶೂದ್ರರು ಮತ್ತು ಹೆಂಗಸರನ್ನು ಭಯ ಪಡಿಸುವದು ನಾಯಿಗಳ ಕೆಲಸವೇ ಹೊರತು ಯುದ್ಧ ವೀರರದಲ್ಲ.

೫೩. ಇತರರಿಗೆ ಉಪಯುಕ್ತವಾಗುವ ಐಶ್ವರ್ಯವೇ ಮಾನವರ ನಿಜವಾದ ಐಶ್ವರ್ಯ.

—-

ಸ ನನು ವ್ಯಾಧಿರ್ಯಃ ಸ್ವಸ್ಯೈವೋಪಭೋಗ್ಯಃ || ೫೪ || ೪೯೮ ||

ಅರ್ಥ : ಸಃ = ಆವುದೊಂದು ವಿಭವಂ, ಸ್ವಸ್ಯೈವ = ತನಗೇ, ಉಪಭೋಗ್ಯಃ = ಉಪಭೋಗಿಸಲ್ಪಡುವುದು, ಸಃ = ಅದು, ವ್ಯಾಧಿರ್ನನು = ವ್ಯಾಧಿಯಲ್ಲವೇ || ಸಿರಿಯುಳ್ಳಂ ತಣಿಪಲೆವೇಳ್ಕುಮೆಂಬುದು ತಾತ್ಪರ್ಯಂ || ಇಂತು ಶಿಕ್ಷಿಸಲಾಗದೆಂಬುದುತ್ತರವಾಕ್ಯಂ :

ಸ ಕಿಂ ಗುರುಃ ಪಿತಾ ಸುಹೃದ್ವಾ ಯೋsಭ್ಯಸೂಯಗರ್ಭಂ ಬಹುಷು ದೋಷಂ
ಪ್ರಕಾಶಯನ್ ವಾ ಶಿಕ್ಷಯತಿ
|| ೫೫ || ೪೯೯ ||

ಅರ್ಥ : ಸಃ = ಆತಂ, ಕಿಂ ಗುರುಃ = ಏನಂಬ ಗುರು, ಕಿಂ ಪಿತಾ = ಏನೆಂಬ ತಂದೆ, ಕಿಂ ಸುಹೃದ್ವಾ = ಏನೆಂಬ ನಂಟಂ ಮೇಣ್, ಯಃ = ಆವನೋರ್ವಂ, ಅಭ್ಯಸೂಯಗರ್ಭಂ = ಪುರುಡನೊಳಕೊಂಡು (ಅಸಹ್ಯವನು ಮನದಲ್ಲಿಟ್ಟುಕೊಂಡಾಗ) ಬಹುಷು = ಪಲಂಬರೊಳ್, ದೋಷಂ = ದೋಷಮಂ, ಪ್ರಕಾಶಯಾನ್ ವಾ = ಪ್ರಕಟಿಸುತ್ತಂ ಮೇಣ್, ಶಿಕ್ಷಯತಿ = ಶಿಕ್ಷಿಸುಗುಂ || ಸ್ನೇಹದಿಂ ಶಿಕ್ಷಿಸಲ್ವೇಳ್ಕುಮೆಂಬುದು ತಾತ್ಪರ್ಯಂ || ಹಳೆಯದೋಷಮಂ ಮಾಡೆ ಸೈರಿಸುವುದೆಂಬುದುತ್ತರವಾಕ್ಯಂ :

ಸ ಕಿಂ ಪ್ರಭುರ್ಯಶ್ಚಿರಸೇವಕೇಷ್ವೇಕಮಪ್ಯಪರಾಧಂ ನ ಸಹತೇ || ೫೬ || ೫೦೦ ||

ಅರ್ಥ : ಯಃ ಆವನೋರ್ವಂ, ಚಿರಸೇವಕೇಷು = ಪಳೆಯರೊಳ್, ಏಕಮಪಿ = ಒಂದುಮಂ, ಅಪರಾಧಂ = ದೋಷಮಂ, ನ ಸಹತೇ = ಸೈರಿಸಂ, ಸಃ = ಆತಂ, ಕಿಂ ಪ್ರಭುಃ = ಏನೆಂಬಾಳ್ದಂ || ಪಗೆಯಲ್ಲದುಳಿದರೊಳ್ ವೈರಿಸವೇಡೆಂಬುದು ತಾತ್ಪರ್ಯಂ ||

ಇತಿ ಪುರೋಹಿತ ಸಮುದ್ದೇಶೋ ದಶಮಃ[12]
ಒಟ್ಟು ವಾಕ್ಯ
|| ೫೬ || ೫೦೦ ||

—-

೫೪. ಯಾವ ಐಶ್ವರ್ಯವು ತಾನು ಮಾತ್ರ ಭೋಗಿಸಬಹುದಾದದ್ದೋ ಅದು ವ್ಯಾಧಿಯೇ ಸರಿ.

೫೫. ಹೃದಯದಲ್ಲಿ ಅಸೂಯೆಯನ್ನು ಇಟ್ಟುಕೊಂಡು ಲೋಪದೋಷಗಳನ್ನು ಎಲ್ಲರಿಗೂ ಪ್ರಕಾಶಪಡಿಸುತ್ತ ಕಲಿಸುವವನು ಗುರುವೇ. ತಂದೆಯೇ. ಮಿತ್ರನೆ?

೫೬. ಚಿರಕಾಲ ಸೇವೆಯಲ್ಲಿರುವ ಸೇವಕರ ಒಂದು ಅಪರಾಧವನ್ನು ಕೂಡ ಸಹಿಸದವನು ಅರಸನೆ?

—-

 

[1]ಪಳ್ವುದುತ್ತರವಾಕ್ಯಂ ಎಂದು ಓದಬೇಕು.

[2]ಇಲ್ಲಿ ವಿಕ್ರಮಾದಿತ್ಯನ ಹೋಲಿಕೆ ಗಮನಾರ್ಹ. ಯಾವ ವಿಕ್ರಮಾದಿತ್ಯ ಎಂಬುದು ಸ್ಪಷ್ಟವಿಲ್ಲ. ದಂತಕಥೆಗಳಲ್ಲಿ ಬರುವ ವಿಕ್ರಮಾದಿತ್ಯನು ಶೂರನೂ, ಉದಾರಿಯೂ, ಆಗಿದ್ದನೆಂದು ಪ್ರತೀತಿಯಿದೆ. ಚೌ. ದಲ್ಲಿ ಶೌರ್ಯವನ್ನು ಪರಿಗಣಿಸಲಾಗಿದೆ. ಟೀಕಾಕಾರನು ‘ಲೋಭವಿಲ್ಲದೆ ಬೀಯಂಗೈಯ್ವ’ನೆಂದು ಹೇಳಿ ಅವನ ಔದಾರ್ಯವನ್ನು ಸೂಚಿಸುವಂತಿದೆ. ಪರರ ಮನೆಗಳಲ್ಲಿ ಎಲ್ಲರೂ ಉದಾರರಂತೆ ವರ್ತಿಸುತ್ತಾರೆ ಎಂಬುದು ಇವನ ಪ್ರಕಾರ ಈ ವಾಕ್ಯದ ಅರ್ಥ.

[3]ಟೀಕೆಯ ಅರ್ಥಕ್ಕೂ ತಾತ್ಪರ್ಯಕ್ಕೂ ಹೊಂದಾಣಿಕೆಯಿಲ್ಲ.

[4]ಮೈ., ಚೌ. ಗಳಲ್ಲಿ ‘ನ ಸಾಧು’ ಎಂದಿದ್ದು ವಿರುದ್ಧ ಅರ್ಥವನ್ನು ಸೂಚಿಸುತ್ತದೆ.

[5]ಮೈ. ಚ ಪ್ರಜಾಃ

[6]ಮೈ., ಚೌ. ವಿಶೀರ್ಣಂ ಲವಣಮಿವ, ನಮ್ಮ ಪ್ರತಿಯಲ್ಲಿ ಲವಣ ಎಂಬ ಪದವು ಕಣ್ಣುತಪ್ಪಿ ಬಿಟ್ಟು ಹೋಗಿದೆಯೆಂದೆನಿಸುತ್ತದೆ. ಟೀಕಾಕಾರನಿಗೆ ಇದು ತಿಳಿದಂತಿಲ್ಲ. ಅಲ್ಲದೆ ‘ವಿಶೀರ್ಣ’ದ ಬದಲು ‘ವಿಕೀರ್ಣ’ ಎಂದಿದೆ. ಟೀಕಾಕಾರನು ಅದನ್ನು ನೀರಿನ ಬರೆದಂತೆ ಎಂದು ಅರ್ಥ ಮಾಡಿದ್ದಾನೆ. ವ್ಯರ್ಥ ಎಂಬರ್ಥದಲ್ಲಿ.

[7]೧೭. ಮೈ., ಚೌ. ಕಿಲೋಪಕೃತಂ;  ಟೀಕಾಕಾರನ ಅರ್ಥ ಸ್ಪಷ್ಟವಿಲ್ಲ ಕ್ಲಿಷ್ಟಂ ಎಂಬುದಕ್ಕೆ ಆಯಾಸ ಎಂದು ಅರ್ಥ ಕೊಟ್ಟಿದ್ದಾನೆ. ಇದರಿಂದ ವಿವರಣೆ ಸಂದಿಗ್ಧವಾಗುತ್ತದೆ. ‘ಉಪಕೃತ’ ಎಂಬ ಪಾಠದಿಂದ ವಿವರಣೆ ಸುಲಭವಾಗುತ್ತದೆ. ಪರೋಕ್ಷವಾಗಿ ಉಪಕೃತನಿಗೆ ತಿಳಿಯದೆ ಉಪಕಾರ ಮಾಡುವುದು ಮಲಗಿದವನ ಕಾಲು ಒತ್ತಿದಂತೆ ಎಂದು ವಾಕ್ಯದ ಅರ್ಥ. ಅದು ವ್ಯರ್ಥ ಎಂಬ ಸೂಚನೆ.

[8]ಮೈ., ಚೌ. ಉದ್ಘಾಟನಂ.

[9]ಗ್ರಹ ಹೊಡೆದವನಂತೆ ಅಂದರೆ ಗ್ರಹ ವಕ್ರಿಸುವುದು ಎಂದರ್ಥ.

[10]ಮೈ: ಗ್ರಾಮ್ಯ.

[11]ಚೌ. ದಲ್ಲಿ ‘ಏವ ನ ರಣಶೂರಾಣಾಂ’ ಎಂಬುದು ಇಲ್ಲ.

[12]ಏಕಾದಶಃ || ೧೧ || ಎಂದು ಓದಬೇಕು.