ಸೇನಾಪತಿಯ ಲಕ್ಷಣಮಂ ಪೇಳ್ವುದುತ್ತರವಾಕ್ಯಂ :

ಅಭಿಜನಾಚಾರಪ್ರಜಾನುರಾಗಸ್ಯ[1] ಸತ್ಯಶೌಚಶೌರ್ಯಸಂಪನ್ನಃ ಪ್ರಭಾವದಾನ್ ಬಹುಬಾಂಧವಪರಿವಾರೋ ನಿಖಿಲನಯೋಪಾಯಪ್ರಯೋಗನಿಪುಣ ಸಮಭ್ಯಸ್ತ ಸಮಸ್ತವಾಹನಾಯುಧಯುದ್ಧ ಲಿಪಿ[2]ಭಾಷಾತ್ಮಪರಸ್ಥಿತಿಃ[3] ಸಕಲತಂತ್ರ ಸಾಮಂತಾಭಿಮತಃ ಸಾಂಗ್ರಾಮಿಕಾಭಿರಾಮಿಕಾಕಾರಶರೀರಃ ಭರ್ತುರಭ್ಯುದಯಮಾ ದೇಶಮಹಿತವೃತ್ತಿಷು[4] ವ್ಯಾಪಾರೇಷು ನಿರ್ವಿಕಲ್ಪಃ ಸ್ವಾಮಿನಾ ಆತ್ಮವನ್ಮಾನಾರ್ಥಪ್ರತಿಪತ್ತಿಚಿಹ್ನೈಃ ಸರ್ವಕ್ಲೇಶಾಯಾಸನಹಃ[5] ಇತಿ ಸೇನಾಪತಿಗುಣಾಃ || ೫೦೧ ||

ಅರ್ಥ : ಅಭಿಜನಃ = ಪರಿವಾರಜನಮುಂ, ಆಚಾರ = ಆಚಾರಮುಂ ಪ್ರಜಾನುರಾಗ = ಪ್ರಜೆಗಳಲ್ಲಿ ಅನುರಾಗಮುಂ, ಸತ್ಯ = ಸತ್ಯಮು, ಶೌಚ = ಶುಚಿತ್ವಮುಂ, ಶೌರ್ಯ = ವಿಕ್ರಮಮೆಂಬಿವಱಿಂ, ಸಂಪನ್ನಃ = ನೆಱೆದಂ, ಪ್ರಭಾವವಾನ್ = ಪ್ರಸಿದ್ಧೀಯನುಳ್ಳಂ (ಸಾಮರ್ಥ್ಯ), ಬಹುಬಾಂಧವಪರಿವಾರಃ = ಪಲರ್ನಂಟರ್ಪರಿವಾರಮನುಳ್ಳಂ, ನಿಖಿಲನಯೋಪಾಯಪ್ರಯೋಗನಿಪುಣಃ = ಎಲ್ಲಾ ನೀತಿಗಳು ಮಮುಪಾಯಂಗಳುಮಂ ಪ್ರಯೋಗಿಪಲ್ಲಿ ಕುಶಲನಪ್ಪಂ, ಸಮಭ್ಯಸ್ತ = ಅಭ್ಯಾಸಿಸಲ್ಪಟ್ಟ, ಸಮಸ್ತಂ = ಎಲ್ಲಾ, ವಾಹನ = ವಾಹನಂಗಳುಮಂ, ಆಯುಧ = ಶಸ್ತ್ರಂಗಳುಂ, ಯುದ್ಧ = ಯುದ್ಧಂಗಳುಂ, ಲಿಪಿ = ಲಿಪಿಗಳುಂ, ಭಾಷೆ = ಭಾಷೆಗಳುಂ, ಆತ್ಮಪರಸ್ಥಿತಿಃ = ತನ್ನ-ಪೆಱರ ಸ್ವರೂಪಮುಮೆಂಬಿವನುಳ್ಳುಂ, ಸಕಲತಂತ್ರಸಾಮಂತಾಭಿಮತಃ = ಎಲ್ಲಾ ಪರಿಗ್ರಹ (ಪರಿವಾರ) ಸಾಮಂತರುಮೆಂದಿವಱಿಂಗೊಡಂಬಡಲ್ಪಟ್ಟಂ, ಸಾಂಗ್ರಾಮಿಕಾಕಾರ = ಸಂಗ್ರಾಮಕ್ಕೆ ತಕ್ಕಾಕಾರಮು, ಅಭಿರಾಮಿಕಾಕಾರ = ಒಪ್ಪಕ್ಕೆ ತಕ್ಕಾಕಾರಮುಮೆಂಬಿವಱೊಳ್ ಕೂಡಿದ, ಶರೀರ = ಶರೀರಮನುಳ್ಳಂ, ಭರ್ತುಃ = ಆಳ್ದನ, ಅಭ್ಯುದಯ = ಅಭ್ಯುದಯಕ್ಕೆ ಕಾರಣಮಪ್ಪ, ಆದೇಶ = ಬೆಸನುಂ (ಆಜ್ಞೆ) ಹಿತವೃತ್ತಿಷು = ಹಿತಮಪ್ಪ, ನೆಗಳ್ತೆಯುಮೆಂಬಿವಱೊಳ್, ನಿರ್ವಿಕಲ್ಪ = ಭೇದಮಿಲ್ಲದಂ, ಸ್ವಾಮಿನಾ = ಆಳ್ದನಿಂ, ಆತ್ಮವತ್ = ತನ್ನಂತೆ, ಮಾನ = ಅಭಿಮಾನಮುಂ, ಅರ್ಥ = ಅರ್ಥಮುಂ, ಪ್ರತಿಪತ್ತಿ = ಪ್ರತಿಪತ್ತಿಯುಂ (ಅಱಿವನುಳ್ಳವನು) ರಾಜಚಿಹ್ನೈಃ = ರಾಜಚಿಹ್ನೆಯುಮೆಂಬಿವಱಿಂ, ಸಂಭಾವಿತ = ಮನ್ನಿಸಲ್ಕೆಪಟ್ಟಂ, ಸರ್ವ = ಎಲ್ಲಾ, ಕ್ಲೇಶ = ಬಿಸಿಲ್ಗಾಳಿ ಮೊದಲಾಗೊಡೆಯ ದುಃಖಮಂ, ಅಯಾಸಂ = ಶರೀರಾಯಾಸಮುಮೆಂಬಿವಂ, ಸಹ ಇತಿ = ಸೈವನೆಂದಿತು, ಸೇನಾಪತಿಗುಣಾಃ = ಸೇನಾಪತಿಯ ಗುಣಂಗಳ್ || ಇನಿತು ಗುಣಮಿಲ್ಲದನಂ ಸೇನಾಪತಿಯಂ ಮಾಡವೇಡೆಂಬುದು ತಾತ್ಪರ್ಯಂ || ಸೇನಾಪತಿಯ ದೋಷಮಂ ಪೇಳ್ವುದುತ್ತರವಾಕ್ಯಂ :

—-

೧. ಉತ್ತಮ ಕುಲ, ಸದಾಚಾರ, ಪ್ರಜಾನುರಾಗ, ಸತ್ಯ, ಶೌಚ, ಶೌರ್ಯಸಂಪನ್ನತೆ, ಸಾಮರ್ಥ್ಯ ಹಲವು ಮಂದಿ ನೆಂಟರ ಪರಿವಾರ, ಎಲ್ಲ ನೀತಿಗಳ ಉಪಾಯಗಳ ಪ್ರಯೋಗದಲ್ಲಿ ನೈಪುಣ್ಯ. ಎಲ್ಲ ರೀತಿಯ ವಾಹನಗಳನ್ನು ನಡೆಸುವ, ಆಯುಧಗಳನ್ನು ಉಪಯೋಗಿಸುವ ಅಭ್ಯಾಸ, ಯುದ್ಧನೈಪುಣ್ಯ, ಹಲವು ಲಿಪಿಗಳ, ಭಾಷೆಗಳ ಪರಿಚಯ, ಆತ್ಮಸ್ವರೂಪಸ್ಥಿತಿಯ ಅರಿವು, ಸಕಲ ಸೈನ್ಯಕ್ಕೂ ಸಾಮಂತರಿಗೂ ಒಪ್ಪಿಗೆಯಾಗುವುದು, ಸಂಗ್ರಾಮಕ್ಕೆ, ತಕ್ಕ ಮನೋಹರವಾದ ಶರೀರ, ಆಳ್ದನ ಅಭ್ಯುದಯ, ಆತನಿಗೆ ಹಿತಕರವಾದ ವ್ಯವಹಾರಗಳಲ್ಲಿ ನಿರ್ವಿಕಲ್ಪನಾಗಿರುವುದು, ಸ್ವಾಮಿಯಿಂದ ತನಗೆ ಸಮನೆಂದು ಪರಿಗಣಿತನಾಗಿ, ಧನ ಸಮೃದ್ಧಿ, ರಾಜ ಚಿನ್ಹೆಗಳನ್ನು ಹೊಂದಿ ಒಡೆಯನ ಅದರಾಭಿಮಾನಗಳಿಗೆ ಪಾತ್ರನಾಗಿರುವುದು, ಎಲ್ಲ ಕ್ಲೇಶಗಳನ್ನು ಆಯಾಸವನ್ನು ಸಹಿಸುವುದು, ಇವು ಸೇನಾಪತಿಯ ಲಕ್ಷಣಗಳು.

—-

[6]ಸ್ಪೈಃ ಪರೈಶ್ಚ ಪ್ರಧೃಶ್ಯಪ್ರಕತೃತಿಃ ಅಪ್ರಭಾವವಾನ್ ಸ್ತ್ರೀಜಿತತ್ವಮೌದ್ಧತ್ಯಂ ವ್ಯಸನಿತಾ ಕ್ಷಯ[7]ಪ್ರವಾಸೋಪಹತತಂತ್ರಾಪ್ರತೀಕಾರಃ ಸರ್ವೈಃ ಸಹ ವಿರೋಧಪರಪರಿವಾದಃ ಪರುಷವಾದಿತ್ವಮನುಚಿತಜ್ಞತಾಸಂಭಾವಿತತ್ವಂ[8] ಸ್ವಾತಂತ್ರ್ಯಾತ್ಮಸಂಭಾವನೋಪಹತತ್ವಂ ಸ್ವಾಮಿಕಾರ್ಯವ್ಯಸನೋಪೇಕ್ಷಾ[9] ಸಹಕಾರೀಕೃತಕಾರ್ಯವಿನಾಶೋ ರಾಜಹಿತವೃತ್ತಿಷು ಚೇರ್ಷ್ಯಾ ಲುಬ್ಧತ್ವಮಿತಿ ಸೇನಾಪತಿದೋಷಾಃ || || ೫೦೨ ||

ಅರ್ಥ : ಸ್ಪೈಃ = ತನ್ನವಱಿಂದಮುಂ, ಪರೈಶ್ಚ = ಪೆಱರಿಂದಮುಂ, ಪ್ರಧೃಶ್ಯಪ್ರಕೃತಿಃ = ತಿರಸ್ಕರಿಪ, ಅಪ್ರಭಾವವಾನ್ = ಪೆಸರಿಲ್ಲದಂ (ಸಾಮರ್ಥ್ಯವಿಲ್ಲದಿಹುದು) ಸ್ತ್ರೀಜಿತತ್ವಂ = ಸ್ತ್ರೀಯರ್ಗಂಜುವುದುಂ, ಔದ್ಧತ್ಯಂ = ಗರ್ವಮುಂ, ವ್ಯಸನಿತಾ = ಎಸನಿತನಮುಂ, ಕ್ಷಯ = ಕೇಡುಂ, ಪರಪರಿವಾದಃ = ಪೆಱರ ದೂರುವುದುಂ, ಪರುಷವಾದಿತ್ವಂ = ಬೆಟ್ಟಿತ್ತ ನುಡಿಸವು, ಅನುಚಿತಜ್ಞತಾ = ಉಚಿತಮಱಿಯದುದುಂ | ಅಸಂಭಾವಿತತ್ವಂ = ಪಚ್ಚುಕೊಂಡುಣದುದುಂ (ತಕ್ಕೆಡೆಗೆ ಕುಡದಿಹುದು) ಸ್ವಾತಂತ್ರ್ಯಾತ್ಮಸಂಭಾವನ = ತಾನೇ ಮುಖ್ಯನೆಂಬ ಭಾವನೆಯುಂ (ತನ್ನ ಅಧೀನ ತನ್ನ ತಾನೆ ಎಣಿಸಿ ಕೊಂಬವಱಿಂದ ಕೇಡಹವು), ಉಪಹತತ್ವಂ = ಕೆಸಿಸಲ್ಪಟ್ಟ ಸ್ವರೂಪಮುಂ, ಸ್ವಾಮಿಕಾರ್ಯ = ಆಳ್ದನ ಕಾರ್ಯಮುಂ, ವ್ಯಸನ = ಕ್ಲೇಶಮುಮೆಂಬಿವು, ಉಪೇಕ್ಷಾ = ಉಪೇಕ್ಷಿಸುವುದುಂ ಸಹಕಾರಿಕೃತ = ಸಹಕಾರಿಗಳಿಂ ಮಾಡಲ್ಪಟ್ಟ, ಕಾರ್ಯವಿನಾಶಃ = ಕಾರ್ಯಮಂ ಕೆಡಿಸುವುದು, ರಾಜಹಿತವೃತ್ತಿಷು = ಅರಸಂಗೊಳ್ಳಿತಪ್ಪುದಂ ನೆಗಳ್ವರೊಳ್, ಈರ್ಷ್ಯಾ ಚ = ಪುರುಡುಂ, ಲುಬ್ಧತ್ವಮಿತಿ = ಲೋಭಿಮೆಂಬಿವು, ಸೇನಾಪತಿದೋಷಾಃ = ಸೇನಾಪತಿಯ ದೋಷಂಗಳು || ಈ ಪೇಳ್ದ ದೋಷಮಿಲ್ದಂ ಮುಂಪೇಳ್ದ ಗುಣಂಗಳ್ ಕೂಡಿದಂ ಸೇನಾಪತಿಯಕ್ಕುಮೆಂಬುದು ತಾತ್ಪರ್ಯಂ || ಪಲಕಾಲಮಿಂತಪ್ಪವಂ ಜೀವಿಸುವನೆಂಬು ದುತ್ತರವಾಕ್ಯಂ :

—-

೨. ತನ್ನವರಿಂದಲೂ ಇತರರಿಂದಲೂ ತಿರಸ್ಕಾರಕ್ಕೆ ಗುರಿಯಾಗುವಿಕೆ. ಪ್ರಭಾವಶಾಲಿಯಲ್ಲದಿರುವುದು. ಸ್ತ್ರೀಯರಿಗೆ ಹೆದರುವ ಸ್ಥಿತಿಯಲ್ಲಿರುವದು. ಗರ್ವ, ವ್ಯಸನಿಯಾಗಿರುವದು. ಕಷ್ಟ, ಅಪವಾದ, ಖರ್ಚು, ಪ್ರವಾಸ, ಇವುಗಳಿಂದ ಭಯಭ್ರಾಂತನಾಗುವದು. ಸೈನ್ಯಾಡಳಿತದಲ್ಲಿ ಸರಿಯಾದ ಪ್ರತಿಕ್ರೆಯೆಗಳಿಲ್ಲದಿರುವದು. ಎಲ್ಲರಲ್ಲಿಯೂ ವಿರೋಧವನ್ನು ಕಟ್ಟಿಕೊಳ್ಳುವದು, ಇತರರನ್ನು ನಿಂದಿಸುತ್ತಿರುವದು, ಕಠಿಣ ಮಾತು ಭಾಷಣ, ಔಚಿತ್ಯವಿವೇಚನೆ ಇಲ್ಲದಿರುವದು. ಮರ್ಯಾದೆಯನ್ನು ಕಳೆದುಕೊಳ್ಳುವದು. ತಾನೇ ಶ್ರೇಷ್ಠನೆಂಬ ಅಹಂಕಾರದಿಂದ ದುರ್ಬಲಗೊಳ್ಳುವುದು, ಒಡೆಯನ ಕಾರ್ಯಕಲಾಪಗಳಲ್ಲಿ, ಕ್ಲೇಶಗಳಲ್ಲಿ ಉಪೇಕ್ಷೆ, ಸಹೋದ್ಯೋಗಿಗಳ ಕಾರ್ಯಾಚರಣೆಯನ್ನು ಕೆಡಿಸುವದು. ರಾಜನ ಹಿತೈಷಿಗಳಲ್ಲಿ ಅಸೂಯೆ ಅಥವಾ ವೈರ, ದುರಾಶೆ ಇವು ಸೇನಾಪತಿಯಲ್ಲಿರುವ ದೋಷಗಳು.

—-

ಸ ಚಿರಂಜೀವಿ ರಾಜಪುರಷೋ ಯೋ ನಗರನಾಪಿತ ಇವ ಅನುವೃತ್ತಿಪರಃ ಸರ್ವಾಸು ಪ್ರಕೃತಿಷು || || ೫೦೩ ||

ಅರ್ಥ : ಸಃ = ಆತಂ, ಚಿರಂಜೀವಿ = ಪಲಕಾಲಂ ಬಾಳ್ವುಂ, ರಾಜಪುರುಷಃ = ಅಧಿಖಾರಿಯು, ಯಃ = ಆವನೋರ್ವಂ, ನಗರನಾಪಿತ ಇವ = ಪೊಳಲ ನಾವಿದನಂತೆ, ಸರ್ವಾಸು ಪ್ರಕೃತಿಷು = ಎಲ್ಲಾ ಪ್ರಧಾನರೊಳ್ (ಪ್ರಕೃತಿಗಳಲ್ಲಿ) ಅನುವೃತಿಪರಃ = ಇಚ್ಛೆಯ ನೆಗಳ್ವಂ || ಆರೊಡನೆಯುಂ ವಿರುದ್ಧಂ ಬೇಡೆಂಬುದು ತಾತ್ಪರ್ಯಂ ||

ಇತಿ ಸೇನಾಪತಿ ಸಮುದ್ದೇಶಃ || ೧೧ ||[10]
ವಾಕ್ಯ
|| || ಒಟ್ಟು ವಾಕ್ಯ || ೫೦೩ ||

—-

೩. ನಗರದ ಕ್ಷೌರಿಕನಂತೆ ಎಲ್ಲರ ಮನೋಭಾವಗಳನ್ನು ಅನುಸರಿಸುವ ರಾಜಸೇವಕನು ಚಿರಕಾಲ ಬಾಳುವನು.

—-

 

[1]ಸ್ಯ ಅನವಶ್ಯಕವಿದೆ.

[2]ಅರಸನಂತೆ ಸೇನಾಪತಿಯೂ ಎಲ್ಲ ಲಿಪಿ, ಭಾಷೆಗಳನ್ನು ಬಲ್ಲವನಾಗಿರಬೇಕೆಂಬುದು ಗಮನಾರ್ಹವಾಗಿದೆ.

[3]ಮೈ. ಭಾಷಾತ್ಮಸ್ವರೂಪಸ್ಥಿತಿಃ.

[4]ಮೈ. ಅಭ್ಯುದಯದೇಶಹಿತ.

[5]ಮೈ. ಸ್ಟೈಃ ಪರೈಶ್ಚಾಪ್ರಧೃಪ್ಯಪ್ರಕತಿಃ.

[6]ಮೈ. ಚೌ. ಗಳಲ್ಲಿ ಅಪ್ರಭಾವವಾನ್ ಎಂಬ ಪದಗಳಿಲ್ಲ.

[7]ಮೈ., ಚೌ. ಕ್ಷಯವ್ಯಯ.

[8]ಮೈ., ಚೌ. ಅಸಂವಿಭಾಗಿತ್ವಂ.

[9]ಮೈ., ಚೌ. ವ್ಯಸನಾಪೇಕ್ಷಾ.

[10]೧೨ ಎಂದು ಓದಬೇಕು.